ಅಂದೊಂದು ಸುಡುಬಿಸಿಲಿನ ಮಧ್ಯಾಹ್ನ, ಭಾರವಾದ ಹೆಜ್ಜೆ ಹಾಕುತ್ತಾ, ಹೆಗಲಲ್ಲೊಂದು ಬ್ಯಾಗು, ಮೈತುಂಬಾ ಬೆವರು, ಸುಸ್ತೊ ಸುಸ್ತು. ಸಾಕು ಸಾಕಾಗಿ ಹೋಗಿತ್ತು.
ಫುಟ್ ಪಾತ್ ಮೇಲೂ ಮೈಮೆಲೇ ಬೀಳುವ ದ್ವಿಚಕ್ರ ವಾಹನಗಳಿಂದ ಹೇಗೊ ತಪ್ಪಿಸಿಕೊಂಡು, ಅವರಿಗೊಂದಿಷ್ಟು ಹಿಡಿ ಶಾಪ ಹಾಕಿ ಅಂತು ಬಂದು ಸೇರಿದೆ ಬಿಎಂಟಿಸಿ ಬಸ್ ಸ್ಟಾಪು.
ಆಗೊಮ್ಮೆ ಈಗೊಮ್ಮೆ ಬರುವ ಬಸ್, ಬಂದರೂ ಜನ್ನರನ್ನು ಹೊತ್ತಿ ತುಂಬಿ ತುಳುಕುತ್ತಿತ್ತು. ಕಾದು ಕಾದು ಕೈಗೆತ್ತಿಕೊಂಡೆ ಒಂದು ಸಿಗರೇಟು.
ನೆತ್ತಿಯ ಮೇಲಿಂದ ಜಾರಿ ಮೈಯಲ್ಲೆಲ್ಲಾ ಕಚಗುಳಿ ಇಡುತ್ತಾ ತುಟುಕಿತು ಒಂದು ಬೆವರಿನಾ ಹನಿ, ಅಗೋ ಬಂತು ಬಸ್ ಕೆಂಬನಿ (ಕೆಂಪೇಗೌಡ ಬಸ್ ನಿಲ್ದಾಣ)
ಆ ದೇವರೇ ನನ್ನ ಕಷ್ಟ ನೋಡಲಾರದೆ ಕಳಿಸಿದ ಧೂಮ್ರಶಕಟ (ಬಸ್), ನನಗಾಗಿಯೇ ಮೀಸಲಿಟ್ಟ ಖಾಲಿ ಸೀಟು. ಒಡೋಡಿ ಹೋಗಿ ಥಟ್ಟನೆ ಕೂತೆ, ಅಲ್ಲಿಂದ ಹೊರಟಿತು ಬಸ್.
ಮುಂದಿನ ಸ್ಟಾಪ್ ನಲ್ಲಿ ಒಬ್ಬ ಮಹಿಳೆ ಬಸ್ ಏರಿದಳು, ಮುಸಲ್ಮಾನಿ ಹೆಂಗಸು, ಕಂಕುಳಲ್ಲಿ ಒಂದು ಪುಟ್ಟ ಮಗು ಇತ್ತು. ನಾನು ನನ್ನ ಸೀಟನ್ನು ಬಿಟ್ಟುಕೊಡುವ ಪರಿಸ್ಥಿತಿಯಲ್ಲಿರಲಿಲ್ಲ, ಆದರೆ ಆ ಮಗುವನ್ನು ಕೊಡಿ ಎಂದು, ನನ್ನ ಬಳಿ ಕೂರಿಸಿಕೊಂಡೆ. ಆ ಮಹಿಳೆ ತುಟಿ ಅಗಲಿಸುತ್ತ ಥ್ಯಾಂಕ್ಸ್ ಎಂದಳು.
ಸರಿ ಹೀಗೇ ಹೋಗ್ತಾ ಇದ್ವಿ, ಆ ಮಹಿಳೆಯು ಇಳಿಯುವ ಸ್ಟಾಪ್ ಬಂದಿರಬಹುದು, ಇಳಿಯಲು ರೆಡಿ ಆದಳು, ಇಳದೇ ಬಿಟ್ಟಳು.
ಅರ್ರೆ, ಮಗು!!!!!
ಹೆಲ್ಲೊ ಮ್ಯಾಡಮ್, ಮಗು ಇಲ್ಲೇ ಬಿಟ್ಟಿ ಹೋದ್ರಲ್ಲ ಎಂದು ಕೂಗಿದೆ. ನಾನು ಬೆಚ್ಚಿ ಬಿದ್ದದ್ದೇ ಅವಾಗ. ಮಗು ನನ್ನದಲ್ಲ ಎಂದುಬಿಟ್ಟಳು!!!
ಮೈ ಮತ್ತೊಮ್ಮೆ ಬೆವರತೊಡಗಿತು, ಮಗು ಎತ್ತಿಕೊಂಡ ಕೈ ಭಾರವಾಯಿತು, ಡ್ರೈವರ್ ಗೆ ಹೇಳಿ ಬಸ್ ನಿಲ್ಲಿಸಿದೆ. ರೀ ಮ್ಯಾಡಮ್, ಮಗು ಇಲ್ಲೆ ಬಿಟ್ಟಿ ಹೋದ್ರಲ್ಲಾ ಎಂದು ಮತ್ತೊಮ್ಮೆ ಹೇಳಿದೆ. ನನಗೆ ಸಿಕ್ಕ ಉತ್ತರ ಮಾತ್ರ ಅದೆ, ನನ್ನದಲ್ಲ. ಇದೊಳ್ಳೇ ಪಜೀತಿ ಆಯ್ತಲ್ಲಾ. ಅವರಿಗೆ ಎಲ್ಲಾ ವಿವರಿಸತೊಡಗಿದೆ. ನೀವು ಬಂದಿದ್ದು, ನಾನು ನಿಮ್ಮಿಂದ ಮಗು ಇಳಿಸಿಕೊಂಡು ನನ್ನ ಜೊತೆ ಕೂರಿಸಿಕೊಂಡಿದ್ದು.
ಹೂನ್ ಹೂನ್, ಕೇಳಿಯೂ ಕೇಳದ ಹಾಗೆ ಮುಖ ತಿರುಗಿಸಿಕೊಂಡು ಹೊರಟಳು. ನಾನು ಬಸ್ಸಿಂದ ಕೆಳಗಿಳಿದೆ. ಬಸ್ ಕೂಡ ಹೋಗದ ಹಾಗೆ ತಡೆದೆ. ಮತ್ತೆ ಮತ್ತೆ ಅದನ್ನೇ ಹೇಳತೊಡಗಿದೆ. ತಾಳ್ಮೆ ಕಳೆದುಕೊಂಡು ಈ ಬಾರಿ ಸ್ವಲ್ಪ ಜೊರು ಧನಿಯಲ್ಲೇ ಹೇಳಿದೆ. ನನ್ನ ಜೊತೆ ಬಸ್ ನ ಕಂಡಕ್ಟರ್ ಕೂಡ ಧನಿ ಸೇರಿಸಿದ. ಆದರೂ ಆ ಮಹಿಳೆ ಮಾತ್ರ ಯಾರ ಮಾತು ಕೇಳದೆ ಒಂದೇ ಹಠ, ಮಗು ನನ್ನದಲ್ಲ.
ನೆತ್ತಿಯ ಮೇಲಿನ ಸೂರ್ಯ ಇನ್ನೂ ಕೆಂಪಗಾದ, ಮೈಮೇಲಿನ ಬಟ್ಟೆ ಬೆವರಿಂದ ತೊಯ್ಯತೊಡಗಿತು. ಈ ಬಾರಿಯೂ ಕೂಡ ನನಗೆ ನೆರವಾದದ್ದು ಅದೇ ದೇವರು, ಪೋಲಿಸ್ ನ ರೂಪದಲ್ಲಿ. ಅಲ್ಲೆ ಒಬ್ಬ ಪೋಲಿಸ್ ಕಾಂಸ್ಟಬ್ಲ್ ಡ್ಯೂಟಿ ಮೇಲಿದ್ದ. ಅವನನ್ನು ಬಸ್ ಬಳಿ ಕರೆದೆ, ಸ್ವಲ್ಪ ಬನ್ನಿ ಸಾರ್. ಕೈಯಲ್ಲಿ ಸ್ಟಿಕ್ ತಿರುಗಿಸುತ್ತಾ ಟೋಪಿ ಸರಿ ಮಾಡಿಕೊಂಡು ನಮ್ಮ ಬಳಿ ನಡೆದು ಬಂದ. ಅದಾಗಲೆ, ಬಸ್ ನಿಂತಿದ್ದ ಪರಿಣಾಮ ಟ್ರಾಫಿಕ್ ಬೆಳೆಯತೊಡಗಿತು. ಪೋಲೀಸ್ ಧ್ವನಿಯಲ್ಲಿ, ಏನ್ರೀ ನಿಮ್ದು…., ಏನ್ ಗಲಾಟೆ…. ಎಂದ. ನಾನು ಮತ್ತೆ ಶುರುಮಾಡಿದೆ ಮೊದಲಿನಿಂದ. ಪ್ರತಿಯೊಂದನ್ನು ವಿವರಿಸತೊಡಗಿದೆ. ಆ ಮಹಿಳೆ ಮಾತ್ರ ಹಾಗೆ ಕಲ್ಲುಗಂಬದ ಹಾಗೆ ನಿಂತಿದ್ದಳು. ಸರಿ, ಪೋಲೀಸ್ ವಿಚಾರಣೆ ಶುರು ಮಾಡಿದ.
ಮೊದಲ ಪ್ರಶ್ನೆ ನನಗೆ.
ಏನಪ್ಪ… ಮಗು ನಿಂದಾ? ನಿಂದಲ್ಲಾ ಅಂದ್ರೆ ನಿನ್ನ ಬಳಿ ಯಾಕೆ ಇದೆ? ನಾನು ಮತ್ತೆ ನಡೆದದ್ದೆಲ್ಲ ಒದರಿದೆ.
ನಂತರದ ಪ್ರಶ್ನೆ ಆ ಮಹಿಳೆಗೆ.
ಏನಮ್ಮಾ ಮಗು ನಿಮ್ಮದಾ? ತಲೆ ಅಲ್ಲಾಡಿಸುತ್ತಾ ಅಲ್ಲ ಎಂದಳು.
ನಂತರದ ಪ್ರಶ್ನೆ ಆ ಬಸ್ ಕಂಡಕ್ಟರ್ ಗೆ.
ಏನ್ ಸಾರ್, ಮಗು ಯಾರದ್ದು ಅಂತ ಗೊತ್ತಾ? ಆ ಕಂಡಕ್ಟರ್ ಈ ಬಾರಿ ಉಲ್ಟಾ ಹೊಡೆದ. ನಂಗೆ ಗೊತಿಲ್ಲಾ ಸಾರ್, ಇವರಿಬ್ಬರ ನಡುವೆ ಏನ್ ಇದೆ ಅಂತ ನಂಗೆ ಗೊತಿಲ್ಲ ಅಂತ ಹೇಳಿ ನುಣುಚಿಕೊಂಡ.
ಸರಿ ಪೋಲೀಸ್ ಗು ತಲೆ ಕೆಡ್ತು.
ಈ ಬಾರಿ ಪ್ರಶ್ನೆ ಯಾರಿಗೆ? ಕೈಗೆತ್ತಿಕೊಂಡ ಮಗು……!!!!!
ಏ ಪುಟ್ಟ, ಇವರು ನಿನ್ನ ಅಮ್ಮಾನಾ??
ಮಗು ಇಲ್ಲಾ ಎಂದು ತಲೆ ಅಲ್ಲಾಡಿಸಿತು.
ನನ್ನ ಕಣ್ಣುಗಳು ಬೆಂಕಿ ಕಾರಿತು. ಬಸ್ ನಲ್ಲಿ ಇದ್ದ ಎಲ್ಲರ ತಲೆಯು ಕಿಟಕಿಯಿಂದ ಆಚೆ.
ಪುಟ್ಟ, ಇವರು ನಿನ್ನ ಅಪ್ಪಾನಾ?? ನನ್ನ ಕೈ ಬ್ಯಾಗು ಸರಿಮಾಡಿಕೊಳ್ಳುತ್ತಾ, ಕಾಲುಗಳು ಚಪ್ಪಲಿ ಸರಿಮಾಡಿಕೊಳ್ಳುತ್ತಾ ಓಡಲು ಸಿದ್ದವಾದವು.
ಮಗು ಇಲ್ಲಾ ಎಂದು ಮತ್ತೆ ತಲೆ ಅಲ್ಲಾಡಿಸಿತು.
ಒಂದು ದೊಡ್ಡ ಉಸಿರು ಎಳೆದು ಹೊರಬಿಟ್ಟೆ. ಹುಹ್.
ಹುಂ ಅಂತ ಮಗು ತಲೆ ಉದ್ದುದ್ದಾ ಅಲ್ಲಾಡಿಸಿದ್ದರೆ ನನ್ನ ಗತಿ????
ತಕ್ಷಣ ನಾನು ಬಸ್ ಹತ್ತಿದೆ, ಕಂಡಕ್ಟರ್ ರೈಟ್ ರೈಟ್ ಅಂದ. ಮಹಿಳೆ ಬುರ್ಖ ಎಳೆಡುಕೊಳ್ಳುತ್ತಾ ತನ್ನ ಪಾಡಿಗೆ ತಾನು ನಡೆದು ಹೊದಳು.
ಬಸ್ ನಲ್ಲೇ ಕೂತ್ಕೊಂಡು ಒಂದು ನಿರ್ಧಾರಕ್ಕೆ ಬಂದೆ. ಮಹಿಳೆಗೆ ಸೀಟು ಬಿಟ್ಕೊಡ್ಬೇಕು. ಅದರಲ್ಲು ಮಗು ಹೊತ್ತುಕೊಂಡ ಮಹಿಳೆಗೆ ಸೀಟು ಬಿಡಲೇ ಬೇಕು.
ಅರ್ರೇ ಮಗು ಕಥೆ ಏನಾಯ್ತು?????
ಯಾರೋ ನನ್ನ ಬೆಡ್ ಶೀಟ್ ಎಳೆಯುತ್ತಿದ್ದಾರೆ ಅಂತ ಭಾಸವಾಯಿತು.
ಲೋ ಮಗನೆ, ಮಲಗಿದ್ದು ಸಾಕು, ಗಂಟೆ 9 ಆಯಿತು, ಎದ್ದೇಳ್ತಿಯೋ ಇಲ್ವೊ. ಅಮ್ಮನ ಧ್ವನಿ.
ಅಯ್ಯೋ ಕಂಡದ್ದೆಲ್ಲಾ ಕನಸು!!!!!
-ಶ್ರೀಧರ
ಕನಸುಗಳು ಇರೋದೆ ಹಾಗೆ !
nice dream
odisikondu hoyitu
dhanyavadagalu
ಸಖತ್ತಾಗಿದೆ ಕನಸು ಶ್ರೀಧರರೇ 🙂
🙂