ಹೀಗೊಂದು ಕಥೆ: ಸುನಿಲ್ ಗೌಡ

  "ಎಲ್ಲಾ ಕೆಲ್ಸ ಮುಗ್ಸಿ ತಿಂಡಿ ಮಾಡಿದ್ರು ಇನ್ನೂ ಬಿದ್ದಿದ್ದೀಯಲ್ಲಾ, ಚಿಂತೆ ಇಲ್ದೋನ್ಗೆ ಚಿತೆ ಮೇಲೆ ಮಲ್ಗಿಸಿದ್ರು ನಿದ್ದೆ ಬರ್ತವಂತೆ. ಎದ್ದು ತೋಟ ನೋಡೋಗೊ ಸೋಮಾರಿ, ಈಗೀನ್ ಕಾಲದ್ ಹುಡುಗ್ರು ಮಲ್ಗದು ಏಳದು ಯಾವ್ದು ಸರಿ ಮಾಡಲ್ಲ". ಅಡುಗೆಯ ಮನೆಯಿಂದ ವಗ್ಗರಣೆಯ ತುಪ್ಪದ ವಾಸನೆ ಜೊತೆ ಸರ್ರನೆ ಬಂದ ಅಮ್ಮನ ಧ್ವನಿಗೆ ಕಿವಿ ಮುಚ್ಚಿ ವಗ್ಗರಣೆಯ ವಾಸನೆಯನ್ನು ಆಸ್ವಾದಿಸಲು ಮುಂದಾದೆ, "ಏಳ್ತೇನೆ ತಡಿಯಮ್ಮ, ಯಾಕೆ ಈ ತರಹಾ ಕಿರುಚ್ತೀಯ, ಆ ವಾಯ್ಸ್ ನನ್ ಕಿವೀಲಿ ಕೇಳೋಕೆ ಆಗಲ್ಲಾ.." ಎಂದು ರಗ್ಗು ಹರಿದು ಹೋಗುವಷ್ಟರ ಮಟ್ಟಿಗೆ ಸುತ್ತಿ ಮಲಗಲು ಯತ್ನಿಸಿದೆ. ಇತ್ತೀಚೆಗಷ್ಟೇ ನನ್ನ ಹುಡುಗಿಯ ಬಗ್ಗೆ ಅಮ್ಮನ ಹತ್ತಿರ ಮಾತನಾಡುವಾಗ "ಅವಳ ದನಿ ಕೂಡ ನಿನ್ ತರಹಾನೆ ಇದೆ ಕಣಮ್ಮ, ಸಕ್ಕತ್ತಾಗೆ ಹಾಡ್ತಾಳೆ ಮಾತ್ರ.." ಅಂತ ಹೇಳಿದ ಬಯ್ಯಿಸಿಕೊಂಡಿದ್ದೆ, ಅದನ್ನು ನೆನೆದು ಮತ್ತೆ ಮತ್ತೆ ನಕ್ಕು ಸುಮ್ಮನಾದೆ. ರಾತ್ರಿಯ ಗೂಡು ಸೇರಿದ ಕನಸುಗಳೆಲ್ಲಾ ಒಮ್ಮೆಲೆ ಕಣ್ಮುಂದೆ ಬರತೊಡಗಿದವು. ಅದೇಕೋ ಗೊತ್ತಿಲ್ಲ, ಯಾವಾಗಲೂ ಅವಳು ಬಯ್ಯುವ ಕನಸಷ್ಟೆ ಕಣ್ಮುಂದೆ ಬಿಡದೇ ಬರುತ್ತಿತ್ತು. ನನ್ನಾಕೆ ಬಯ್ಯುವಾಗ ಅವಳ ಕಡು ಕೆಂಪು ತುಟಿ ನೋಡುವ ಹಾಗು ಅವಳ ಇಂಪಾದ ಧ್ವನಿಯನ್ನು ಹೈ ಪಿಚ್^ನಲ್ಲಿ ಕೇಳುವಾಗ ಸಿಗುತ್ತಿದ್ದ ಮಜ ಅವಳಿಗೆ ಮುತ್ತಿಡುವಾಗಲೂ ಸಿಗುತ್ತಿರಲಿಲ್ಲ. ಅದಲ್ಲದೇ ಅವಳು ಬಯ್ಯಲು ಶುರು ಮಾಡಿದಾಗಲೆಲ್ಲಾ ನಾನು ಮಗುವಾಗಿ ಹೋಗುತ್ತಿದ್ದೆ. ಅಥವಾ ನನ್ನನ್ನು ಮಗು ಎಂದೇ ಭಾವಿಸಿ ಬಯ್ಯುತ್ತಿದ್ದಳೋ ತಿಳಿಯದು.

ಆದರೂ ನನ್ನನ್ನು ಬಯ್ಯುವಾಗ ಅವಳಲ್ಲಿ ಏನೋ ಒಂದು ತೆರನಾದ ಆತ್ಮವಿಶ್ವಾಸ ಮೂಡಿ, ಪ್ರೀತಿ ಹೆಚ್ದಾಗಿ ಅವಳ ಕೆಂಪು ಮೂತಿ ನನ್ನ ಮೇಲೆ ಕೆಂಡ ಕಾರುತ್ತಿತ್ತು. ಸುಮ್ಮನೇ ನಮ್ಮ ಅಪ್ಪನ ತರಹಾ ನೂರೆಂಟು ಪೀಟೀಲು ಮಾತುಗಳು, ಆಫೀಸಿನಲ್ಲಿ ಹುಡುಗಿಯರ ಜೊತೆ ಜಾಸ್ತಿ ಮಾತಾಡಬೇಡ (Actually ನಾನು ನನ್ನ ಹುಡುಗಿಯ ಬಿಟ್ಟು ಬೇರೆ ಹುಡುಗಿಯರ ಹತ್ತಿರ, ಹುಡುಗಿಯರ ಬಗೆಗೆ ಜಾಸ್ತಿ ಮಾತಾಡುವವನೇ ಅಲ್ಲ), ಬೈಕ್ ಸ್ಪೀಡಾಗಿ ಓಡಿಸಬೇಡ, ನನ್ ಬಗ್ಗೆ ಸ್ವಲ್ಪನೂ ಕನ್ಸರ್ನ್ ಇಲ್ಲ ನಿಂಗೆ, ವಾರ ಆದ್ರೂ ನೋಡೊಕೆ ಬರಲ್ಲಾ ಅಂಗೆ ಇಂಗೆ ನೂರೆಂಟು ಬಾಣಗಳ ಮಳೆಯನ್ನೇ ಬಿಟ್ಟರೂ ನಾ ಯಾವುದಕ್ಕೂ ಗಮನ ಕೊಡದೆ ಅವಳ ಗಲ್ಲ, ತುಟಿ, ಕಣ್ಣುಗಳ ಆರ್ಭಟವನ್ನು ಸುಮ್ಮನೆ ನೋಡುತ್ತಾ ದೆವ್ವದಂತೆ ನಿಂತಿರುತ್ತಿದ್ದೆ. ಎಲ್ಲಾ ಬೈಗುಳಗಳು ಮುಗಿದು ಸುಸ್ತಾದ ಮೇಲೆ ಅವಳನ್ನು ಅಪ್ಪಿ ತುಟಿ ಕಚ್ಚಿದರೇ ಸಾಕಿತ್ತು, ನನ್ನ ಮೇಲಿದ್ದಷ್ಟು ಕೋಪವನ್ನು ಮರೆತು ಮತ್ತೆ ಹೊಸದಾಗಿ ಬೈಯಲು ಶುರು ಮಾಡುತ್ತಿದ್ದಳು, ನಾ ಮತ್ತೆ ಮಗುವಾಗುತ್ತಿದ್ದೆ. "ಆ ಗಂಗಮ್ಮ-ಚಲುವಣ್ಣರ ಮಗ ದಿವಾಕರ ಮನೆ ಕೆಲಸ, ಗದ್ದೆ ಕೆಲಸ ಎಲ್ಲಾ ಮಾಡಿ ಆಫೀಸಿಗೆ ಹೋಗ್ತಾನೆ, ಇವನಿಗಿಂತ ಜಾಸ್ತಿ ಸಂಬಳ ತಗೋತಾನೆ, ನಿನ್ ಮಗನೂ ಅವ್ನೆ ನೋಡು, ಅದೇನ್ ಬುದ್ಧಿ ಕಲ್ಸಿದೀಯೇ , ಒಂದ್ ದಿನನಾದ್ರು ತೋಟ, ಗದ್ದೆ, ಮನೆ ಕಡೆ ಜವಾಬುದಾರಿ ತಗಂಡಿದನಾ ನಿನ್ನ ಮಗಾ" ದಿನಾ ಸುಪ್ರಭಾತ ಕ್ಯಾಸೆಟ್ ನ ಮಗುಚಿ ಹಾಕಿದ ಹಾಗೆ ಒಂದೇ ತರಹಾ ಬೈಯುವ ಅಪ್ಪನ ಬೈಗುಳಗಳಿಗೆ ಕಿವಿ ಕೊಡುವ ಗೋಜಿಗೆ ಹೋಗದೆ, ಆ ಬೈಗುಳಗಳು ಕಿವಿ ತಾಗಬಾರದೆಂದು ರಗ್ಗನ್ನು ಇನ್ನೂ ಭದ್ರವಾಗಿ ಒದ್ದು ಮಲಗುವಲ್ಲಿ ಸಫಲನಾದೆ. ಮತ್ತೆ ಮೊಬೈಲ್ ನೆನಪಾದವನಂತೆ, ಹುಡುಕಲೋ ಬೇಡವೋ ಎಂಬಂತೇ ಹುಡುಕಿ ಸೋತು ಮಗ್ಗಲು ಬದಲಾಯಿಸಿದೆ.

"ಈ ನನ್ಮಗುಂಗೆ ಎಷ್ಟು ಹೇಳಿದ್ರು ಕಲಿಯಲ್ಲಾ, ಅವ್ರ ಅಪ್ಪುನ್ ಕೈಲಿ ನನ್ನ ಬೈಯಿಸದೇ ಇದ್ರೆ ತಿಂದನ್ನ ಅರಗಲ್ಲ, ಇವಾಗ ಮೇಲೆ ಏಳ್ತಿಯೋ ಇಲ್ಲಾ ಕರಿಲೊ ನಿಮ್ ಅಪ್ಪುನ್ನ?? ರೀ…………" "ಅಪ್ಪನನ್ನೆ Ak47 ತರಹಾ ಬಳಸ್ತಾ ಇರೋ ಅಮ್ಮನ ಮೇಲೆ ಕರುಣೆ ಉಕ್ಕಿ"ಎದ್ದೆಳ್ತೇನೆ ತಡೀ ತಾಯಿ, ಆ ಹಳೆ ಕ್ಯಾಸೆಟ್ ನ ಕೇಳೊ ತಾಕತ್ತು ನಮ್ ಕಿವಿಗೆ ಇಲ್ಲ" ಎಂದು ಬಚ್ಚಲ ಕಡೆ ಕಣ್ಮುಚ್ಚಿ ಗೋಡೆ ಹುಡುಕುತ್ತಾ ಹೊರಟೆ. ಕಣ್ಮುಚ್ಚಿದೊಡನೆ ನನ್ನುಡುಗಿಯ ಕನಸುಗಳು ಕಣ್ಮುಂದೆ ಬಂದಂತೇ ಭಾಸವಾಗತೊಡಗಿದವು. ನಾನು ನಿಜಕ್ಕೂ ಹುಚ್ಚನೆಂದೇ ಒಂದು ಕ್ಷಣ ಅನಿಸಿ, ಕರ್ನಾಟಕದ ಅಷ್ಟೂ ಹುಚ್ಚಾಸ್ಟತ್ರೆಗಳು, ಹುಚ್ಚರ ಸಿನಿಮಾಗಳು ಒಮ್ಮೆಲೇ ಕಣ್ಮುಂದೆ ಹಾದು ಹೋದವು. ಬಿಸಿ ನೀರನ್ನು ತಣ್ಣೀರಂತೆ ಕಾಣುತ್ತಾ ಗಿಂಜಿದ ಟೂತ್ ಬ್ರಶ್ ಗೆ ಹಲ್ಲು ಗಿಂಜುವ ಪ್ರಯತ್ನ ಮಾಡಿದೆ. ಬಾರದ ಹಾಗು ಭಾರವಾದ ಮನಸ್ಸಿಂದ ತಿಂಡಿ ತಿಂದು ಹಗುರವಾದ ಹಾಗೂ ಕೊಳೆಯಿಂದ ಭಾರವಾದ ಜೀನ್ಸ್ ಧರಿಸಿ ಕೀ ಗಾಗಿ ಹುಡುಕಾಡಿ, ಸಮುದ್ರದಲ್ಲಿ ಬರಿಗೈಲಿ ಮೀನು ಹಿಡಿದವನಂತೆ ಖುಷಿಯಿಂದ ಜೇಬಿಗಿರಿಸಿ ಹೊರ ನೆಡೆದೆ. ಶೂ ಹಾಕುವಾಗ ಪಕ್ಕದ ಮನೆ ನಾಯಿ ಟೈಗರ್ (ಡಬ್ಬ ನನ್ಮಕ್ಳು, ಕಡೇ ಪಕ್ಷ ನಾಯಿ ತರನೂ ಇಲ್ಲದ ನಾಯಿಗೆ ಟೈಗರ್) ಕೂಡ ನನ್ನನ್ನು ನೋಡಿ ಬೊಗಳುವಷ್ಟು ಮಟ್ಟಿಗೆ ಕೊಬ್ಬಿತ್ತು. ಮನದಲ್ಲೇ ಆ ನಾಯಿ ಒಂಟಿ ಸಿಕ್ಕಾಗ ಬೈಕ್ ಹತ್ತಿಸಿ ಸಾಯಿಸುವ ಹಗಲು ಕನಸು ಕಂಡು ನಕ್ಕು ಬೈಕ್ ನ ಕೀಲಿ ತಿರುಗಿಸಿದೆ, ಅಣಕಿಸುವ Blinking Fuel indicator ಕೂಡ ತಿಂಗಳ ಕೊನೆ ಎನ್ನುವದರ ಬಗ್ಗೆ ಖಾತರಿ ಮಾಡಿತ್ತು. ಅಷ್ಟು ಭಯಂಕರ ಟ್ರಾಫಿಕ್ಕಿನ ಮಧ್ಯೆ ನನ್ನುಡುಗಿಯ ಕನಸು ಕಾಣುತ್ತಾ ಜೀವದ ಹಂಗು ತೊರೆದವನಂತೆ ಬೈಕ್ ಓಡಿಸುತ್ತಿದ್ದೆ. ತಟ್ಟನೆ ಇದು ತಿಂಗಳ ಕೊನೆ ಮತ್ತು ಕೆಲಸಕ್ಕೆ 3 ತಿಂಗಳಾಯ್ತು ಎನ್ನವುದರ ಬಗೆಗೆ ಯೋಚನೆ ಮನಸ್ಸಿನಲ್ಲಿ ಬಂದು, Maths ನಲ್ಲಿ 35 ತೆಗೆದು ಪಾಸಾದುದನ್ನೂ ಕೂಡ ನೆನೆಯದೇ ಲೆಕ್ಕ, ತಾಳೆ ಹಾಕುತ್ತಾ ಆಫೀಸ್ ತಲುಪಿದೆ.

ನನಗೆ ಕೊಟ್ಟ Induction PPT ನೋಡುತ್ತಾ ಮುಖ ಸಿಂಡರಿಸಿದೆ. ನನ್ನುಡುಗಿ ಈ ಓದುವ ವಿಚಾರಗಳಲ್ಲಿ ತುಂಬಾ ಮುಂದು, ತುಂಬಾ ವಿಚಾರಗಳನ್ನು ಲೀಲಾಜಾಲವಾಗ ಅರುಳು ಹುರಿದಂತೆ ಮಾತನಾಡುತ್ತಿದ್ದಳು. ಆದರೂ ಜೀವನದ ಬಗೆಗಿನ ವಿಚಾರಗಳಲ್ಲಿ ನನ್ನಷ್ಟು ತಿಳಿದಿರಲಿಲ್ಲ ಎನ್ನುವುದನ್ನು ಮನಗಂಡು ನನ್ನ ಮೇಲಿನ ಕೀಳು ಭಾವನೆಯನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಲು ಯತ್ನಿಸಿದೆ. ಅಂತೂ ಇಂತೂ ಹೊಗಳುವ-ತೆಗಳುವ ನಿರ್ಜೀವಿಗಳ ಮಧ್ಯ ಆ ದಿನದ ಕೆಲಸ ಮುಗಿಸಿ, ನಾಳೆಯಿಂದ ಕೆಲಸಕ್ಕೆ ಬರುವುದಿಲ್ಲವೆಂದು ಮನಸ್ಸಲ್ಲೇ ಖಾತ್ರಿ ಮಾಡಿಕೊಂಡು, Salary Credited ಎಂಬ ಎಸ್ಸೆಮ್ಮೆಸ್ ಓದುತ್ತಾ ಬೈಕ್ ಹತ್ತಿ ಮಾರ್ಕೆಟ್ ಕಡೆಗೆ ಹೋದೆ. ಹೂಗುಚ್ಚವೊಂದನ್ನು ಕಂಡು ನಿಜಕ್ಕೂ ಕಣ್ಣುಗಳು ಮರುಮಾತನಾಡದೇ ತುಂಬಿ ಬಂದವು. ಆ ಗುಚ್ಚದ ತುಂಬಾ ನನ್ನುಡುಗಿ ಇಷ್ಟ ಪಡುವ ಕೆಂಪು ಗುಲಾಬಿಗಳಿದ್ದವು, ಅದನ್ನು ಖರೀದಿಸಿ ಎದೆಗವಚಿ ಇಡಿದು, ನನ್ನುಡುಗಿಯ ಕಡೆಗೆ ಹೊರಟೆ. ಸುಮಾರು 7-8 ವರ್ಷದ ಪ್ರೇಮ, ಪ್ರತೀ ಬಾರಿ ಅವಳ ಬೇಟಿಯಾಗಲು ಹೊರಟಾಗಲೂ, ನನ್ನ ಎದೆ ಮೊದಲಿನಷ್ಟೇ ಡವಗುಡುತ್ತಿತ್ತು. ನಡುಗುವ ಎದೆ, ಕೈಗಳಿಂದಲೇ ಗಾಡಿ ಮುಂದೆ ಓಡಿಸಿದೆ. ಜೀವನದಲ್ಲಿ ರಾಜಕೀಯ ಎಂಬ ಮುಖವಾಡದಿಂದ ಜನರ ರಕ್ತ ಹೀರಿದ್ದ ಜನನಾಯಕನೊಬ್ಬನ ಅಂತ್ಯಕ್ರಿಯೆ ಬಲು ಅದ್ದೂರಿಯಿಂದ ರಸ್ತೆಗಳನ್ನು ಬಂದ್ ಮಾಡಿ ನೆರವೇರಿಸಲಾಗುತ್ತಿತ್ತು. ಕೋಪ ತುಂಬಿ ಬಂದು ಸತ್ತವನ ಬರಿಗೈ ನೋಡಿ ಮನಸ್ಸು ಮರುಗಿ ಬೈಕನ್ನು ಅಲ್ಲೇ ಪಾರ್ಕ್ ಮಾಡಿ ನನ್ನುಡುಗಿಯ ಬಳಿ ನಡೆದು, ಹೂಗುಚ್ಚ ಹಿಡಿದು ಮಂಡಿಯೂರಿ, ಅವಳು 1 ವರ್ಷದಿಂದ ನಾ ಎಷ್ಟು ಬೈದರೂ ಎಚ್ಚರವಾಗದಂತೆ ಮಲಗಿದ್ದ ಗೋರಿಯ ಮುಂದೆ ಹೂ ಇರಿಸುವಾಗ ತಡೆಯಲಾಗದೆ ಗೋರಿಯನ್ನು ಬಾಚಿ ತಬ್ಬಿ ಬಿಕ್ಕಿ ಬಿಕ್ಕಿ ಅತ್ತೆ. ನನ್ನುಡುಗಿ ನನಗೆ ಕನಸಾಗೇ ಉಳಿದಿದ್ದಳು, ಅವಳ ಸಮಾಧಿಯ ಮೇಲಿನ ಧೂಳನ್ನು ಸ್ವಚ್ಚ ಮಾಡಿ, ಸಮಾಧಿಯ ಪಕ್ಕದ ಜಾಗವನನ್ನು ನೋಡಿ ನಾ ಇರುವ ತನಕ ಖಾಲಿ ಇರಲೆಂದು ಆಶಿಸುತ್ತಾ ಮನೆ ಕಡೆ ಹೊರಟೆ. ಅಮ್ಮನ ಅಳುವ ಟೀವಿ ಸೀರಿಯಲ್ ನನ್ನನ್ನು ವಿಚಿತ್ರವಾಗೇ ಸ್ವಾಗತ ಮಾಡಿತ್ತು….  

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

6 Comments
Oldest
Newest Most Voted
Inline Feedbacks
View all comments
Ganesh Khare
Ganesh Khare
11 years ago

ಥೂ.. ಏನ್ರೀ ನೀವು.. ಒಳ್ಳೆ ಮೂಡಲ್ಲಿ ಸ್ಟೋರಿ ಓದ್ತಾ ಇದ್ದೆ ಕೊನೆಯಲ್ಲಿ ಹುಡುಗಿದೆ ಗೋರಿ ಕಟ್ಟಿಸಿಬಿಟ್ರಲ್ರಿ.
ಏನಪ್ಪಾ ಅಂದ್ರೆ ಟೋಟಲ್ಲಾಗಿ ಮುಕ್ಕಾಲು ಭಾಗ ಲವ್ ಸ್ಟೋರಿ ಗಳಲ್ಲೆಲ್ಲ ಹೀಗೆ ಏನಾದರೂ ದುಃಖ ಇರುತ್ತೆ ಕಣ್ರೀ ಅಲ್ವಾ ??
ಏನೇ ಆಗ್ಲಿ ಕಥೆ ತುಂಬಾ ಚೆನ್ನಾಗಿದೆ ಕಣ್ರೀ.
ನೆಕ್ಸ್ಟ್ ಟೈಮ್ ಹ್ಯಾಪಿ ಎಂಡಿಂಗ್ ಇರೋ ಸ್ಟೋರಿ ಬರೀರಿ. ಶುಭವಾಗಲಿ. 🙂

Adesh Kumar C T
11 years ago

Che.. Ee love story galige adyavag Happy ending sigutto aa devrige gottu. Ashtu chennagiro kathena kushi inda odta idda manassige climax alli feeling ge hogotara madbitralri. Che..

ಹರಳಹಳ್ಳಿಪುಟ್ಟರಾಜು ಪಾಂಡವಪುರ.
ಹರಳಹಳ್ಳಿಪುಟ್ಟರಾಜು ಪಾಂಡವಪುರ.
11 years ago

ಕಥೆ ತುಂಬಾ ಚೆನ್ನಾಗಿದೆ..

Rukmini Nagannavar
11 years ago

ಕಥೆಯೋ ವಾಸ್ತವವೋ ತಿಳಿಯಲಿಲ್ಲ.. Mixed emotions ಮಾತ್ರ ನನ್ನಲ್ಲಿದೇ..
any way ಚಂದದ ಲೇಖನ… ಹೆಚ್ಛೆಚ್ಚು ಓದುವಾಸೆ ನಮಗೆ ಸೋ ಹೀಗೆ ಬರೆಯುತ್ತಿರಿ..

Santhoshkumar LM
11 years ago

ಸುನಿಲ್ ಗೌಡ್ರೇ,
ನಿಮ್ಮೊಳಗೊಬ್ಬ ಬರಹಗಾರ ಎದ್ದು ಭುಜತಟ್ಟಿ ನಿಂತಿದ್ದಾನೆ.
ಅವನಿಗೆ ಒಳ್ಳೇ ಮುದ್ದೆ ಊಟ ಹಾಕಿ ಚೆನ್ನಾಗಿ ತಯಾರಿ ಮಾಡಿ.
ಖಂಡಿತ ಸಾಹಿತ್ಯವೆಂಬ ಅಖಾಡದಲ್ಲಿ ಗೆಲ್ಲಬಲ್ಲ ಶಕ್ತಿ ಅವನಿಗಿದೆ!!

ನಿರೂಪಣೆ, ಭಾಷೆಯ ಮತ್ತು ಭಾವನೆಯ ಮೇಲಿನ ಹಿಡಿತ ಎಲ್ಲಕ್ಕೂ ಫುಲ್ ಮಾರ್ಕ್ಸ್!!
ಬರೆಯುತ್ತಲಿರಿ…ಶುಭವಾಗಲಿ

ಮೀನು
11 years ago

  ಟೈಗರ್ ಸಾಯಿಸೋಕು ನಿಮ್ಮಗೆ ಅದು ಒಂಟಿಯಾಗಿ ಸಿಗಬೇಕಾ? ದಿನಾ ಮರೆಯದೆ ಕೆಂಪು ಗುಲಾಬಿ ಇಡಿ!!
   

6
0
Would love your thoughts, please comment.x
()
x