ಹಿರೋಶಿಮಾ ನಾಗಸಾಕಿಯ ದುರಂತ ಭಾರತದಲ್ಲಿ ಮರುಕಳಿಸದಿರಲಿ: ಮಂಜುಳ ಎಸ್.


ಬಂಡಾವಾಳವನ್ನು ಮಾತ್ರ ಕೇಂದ್ರವಾಗಿಟ್ಟುಕೊಂಡು ಜಾಗತಿಕ ಮಟ್ಟದಲ್ಲಿ ಅರ್ಥವ್ಯವಸ್ಥೆಯನ್ನು, ನಿಯಂತ್ರಣದಲ್ಲಿಟ್ಟುಕೊಳ್ಳಲು ಆರಂಭಿಸಿದಾಗಿನಿಂದ ಪರಿಸರ ಮತ್ತು ಪರಿಸರಕ್ಕೆ ಸೇರಿದ ಕೆಲವು ಜನಸಮುದಾಯಗಳು ಜಾಗತಿಕ ಮಟ್ಟದಲ್ಲಿ ಚರ್ಚೆಯ ವಸ್ತುವಾಗಿವೆ. ಪರಿಸರಕ್ಕೆ ನಾವು ಸೇರಿದವರಲ್ಲ, ಪರಿಸರ ನಮಗೆ ಸೇರಿದ್ದು ಎಂದು ಅಲ್ಪಸಂಖ್ಯಾತರಾದ ಬಂಡವಾಳಶಾಹಿಗಳು ಪರಿಸರವನ್ನು ಮತ್ತು ಪರಿಸಕ್ಕೆ ಸೇರಿದ ಕೆಲವು ಜನ ಸಮುದಾಯಗಳನ್ನು ವಿಕೃತವಾಗಿ ಮನಬಂದಂತೆ ದುಡಿಸಿಕೊಳ್ಳುತ್ತಲೇ ಬಂದಿದ್ದಾರೆ. ಈ ದುಡಿಸಿಕೊಳ್ಳುವ ಪ್ರಕ್ರಿಯೆಯ ಪರಿಣಾಮವನ್ನು ಯಾಕೆ ಪರಿಸರವನ್ನೇ ನಂಬಿ, ಪರಿಸರದ ಜೊತೆಯಲ್ಲಿಯೇ ಬದುಕುತ್ತಿರುವವರು ಮತ್ತು ಬಹು ಸಂಖ್ಯಾತರಾದ ಜನ ಸಾಮಾನ್ಯರೇ ಅನುಭವಿಸುತ್ತಿರುವುದು…? ಇದು ಬಹಳ ಆತಂಕ ಮತ್ತು ವಿಷಾಧಕರವಾದ ಪ್ರಕ್ರಿಯೆಯಾಗಿದೆ. 
    
2ನೇ ಜಾಗತಿಕ ಸಮರದ ಅಂತಿಮ ಹಂತಗಳ ಅವಧಿಯಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನವು 1945 ಆಗಸ್ಟ್ 6ನೇ ಸೋಮವಾರದಂದು ‘ಲಿಟ್ಲ್‍ಬಾಯ್’ ಎಂಬ ಹೆಸರಿನ ಪರಮಾಣು ಶಸ್ತ್ರಾಸ್ತ್ರವನ್ನು ಹಿರೋಶಿಮಾ ನಗರ ಮೇಲೆ ಮತ್ತು ಆಗಸ್ಟ್ 9 ರಂದು ನಾಗಸಾಕಿಯ ಮೇಲೆ ‘ಫ್ಯಾಟ್ ಮ್ಯಾನ್’ನ ಆಸ್ಪೋಟವನ್ನು ನೆಡೆಸಿತ್ತು. ಈ ಬಾಂಬುಗಳು ಎರಡು-ನಾಲ್ಕು ತಿಂಗಳೊಳಗೆ ಹಿರೋಶಿಮಾದಲ್ಲಿ 90,000-1,66,000 ಜನರನ್ನು ಮತ್ತು ನಾಗಸಾಕಿಯಲ್ಲಿ 60,000 ದಿಂದ 80,000 ಜನರನ್ನು ಬಲಿತೆಗೆದುಕೊಂಡಿತ್ತು. ಹಿರೋಶಿಮಾದ ಪ್ರಫೆಕ್ಟಿನ್ ಆಡಳಿತ ಪ್ರಾಂತಕ್ಕೆ ಸಂಬಂಧಿಸಿದ ಆರೋಗ್ಯ ಇಲಾಖೆಯು ಅಂದಾಜು ಮಾಡಿರುವ ಪ್ರಕಾರ ಸ್ಪೋಟದ ದಿನದಂದು ಶೇ 6 ರಷ್ಟು ಜನರು ಜ್ವಾಲೆಯ ಸುಟ್ಟಗಾಯಗಳಿಂದ ಸತ್ತರೆ, ಶೇ 30 ರಷ್ಟು ಜನರು ಬೀಳುತ್ತಿರುವ ಭಗ್ನಾವಶೇಷಗಳಿಂದ, ಶೇ 10 ರಷ್ಟು ಜನರು ಇತರ ಕಾರಣಗಳಿಂದ ಸತ್ತಿದ್ದಾರೆ ಎಂದು ಹೇಳುತ್ತದೆ. ಈ ಎರಡೂ ನಗರಗಳಲ್ಲಿ ಸತ್ತವರು ಬಹುತೇಕರು ಜನ ಸಾಮಾನ್ಯರೇ ಆಗಿದ್ದಾರೆ. 

1986ರ 26 ರಂದು ಚರ್ನೋಬಿಲ್ ಅಣು ಸ್ಥಾವರದಲ್ಲಿ ಅನಿಲ ಸೋರಿಕೆಯಿಂದಾದ ಸ್ಪೋಟಕ್ಕೆ 47 ಜನರು ಬಲಿಯಾಗಿದ್ದರು. ಅಲ್ಲಿನ ವಾತಾವರಣದ ಜೊತೆ ಮಿಲನವಾದ ವಿಕಿರಣದಿಂದಾಗಿ ಇಂದಿಗೂ ಜನರು ಅಡ್ಡಪರಿಣಾಮಗಳನ್ನು ಅನುಭವಿಸುತ್ತಿದ್ದಾರೆ. ಅಮೇರಿಕಾದ ಪೆನ್ಸಿಲ್ಟೇನಿಯಾದ ತ್ರೀ ಮೇಲ್ ದ್ವೀಪದಲ್ಲಿನ ಅಣುಸ್ಥಾವರ, ಪುಕೋಶಿಮಾದ ಅಣುಸ್ಥಾವರದಿಂದಾಗಿ ಜನರು ಕ್ಯಾನ್ಸರ್‍ನಂತಹ ರೋಗಗಳಿಗೆ ಬಲಿಯಾಗಿದ್ದಾರೆ ಮತ್ತು ಇಂದಿಗೂ ಆಗುತ್ತಲೇ ಇದ್ದಾರೆ. 
    
ತಮಿಳು ನಾಡಿನಲ್ಲಿ 17,000 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕೂಡಂ ಕುಳಂ ಅಣುವಿದ್ಯುತ್ ಸ್ಥಾವರ ಭಾರತದ 21ನೇ ಅಣು ವಿದ್ಯುತ್ ಸ್ಥಾವರವಾಗಿದೆ. ಭಾರತದಲ್ಲಿ ಈಗಾಗಲೇ 21 ಅಣು ವಿದ್ಯುತ್ ಸ್ಥಾವರಗಳಿದ್ದು 39ಕ್ಕೆ ಏರಿಸುವ ಉದ್ದೇಶವನ್ನು ನಮ್ಮ ಸರ್ಕಾರಗಳು ಹೊಂದಿವೆ. ಈಗಾಗಲೇ ಇರುವ ಅಣು ವಿದ್ಯುತ್ ಸ್ಥಾವರಗಳ ಅವಘಡಗಳಿಂದಾಗಿ ಇನ್ನೂ ಅಲ್ಲಿನ ಸ್ಥಳೀಯರು ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಹೀಗಿರುವಾಗಲೇ 2008ರ ವರೆಗೂ ಅಣುಸ್ಥಾವರಗಳ ನಿರ್ಮಾಣಕ್ಕೆ ಯೋಗ್ಯವಾಗಿರದ ಚಿತ್ರದುರ್ಗ ಜಿಲ್ಲೆಯ ದೊಡ್ಡ ಉಳ್ಳಾರ್ತಿ ಕೆರೆ ಕಾವಲು ಮತ್ತು ಕದಾಪುರ ಕಾವಲು ಭೂಮಿಯನ್ನು ನಮ್ಮ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಅಧಿಕಾರವಧಿಯಲ್ಲಿ ಇದು ಬಂಜರು ಭೂಮಿಯಾಗಿದ್ದು ಅಣು ಸ್ಥಾವರಗಳ ನಿರ್ಮಾಣಕ್ಕೆ ಬಳಸಿಕೊಳ್ಳಬಹುದು ಎಂದು ಆದೇಶ ನೀಡಲಾಯಿತು. 
    
ಇದರ ಪರಿಣಾಮದಿಂದಾಗಿ ಐ.ಎಸ್.ಆರ್.ಒ ಸ್ಯಾಟಿಲೈಟ್ ರಿಸರ್ಚ್ ಫೆಸಿಲಿಟಿ, ಸಾಜಿಟೋರ್ ಕಂಪನಿ, ಸಿಂಕ್ರೋ ಟಾನ್, ಡ್ರೋನ್ ಟೆಸ್ಟಿಂಗ್ ಫೆಸಿಲಿಟಿ, ಯುರೇನಿಯಂ ಎನ್‍ರಿಚ್‍ಮೆಂಟ್ ಫೆಸಿಲಿಟಿ ಎಂಬ ಐದು ಯೋಜನೆಗಳು ಜಾರಿಯಾಗಿವೆ. ದೊಡ್ಡ ಉಳ್ಳಾರ್ತಿ ಕೆರೆ ಕಾವಲು ಮತ್ತು ಕದಾಪುರ ಕಾವಲು ಒಟ್ಟು 10,500 ಎಕರೆ ವಿಸ್ತೀರ್ಣವನ್ನು ಹೊಂದಿದ್ದು, ಸುತ್ತ ಮುತ್ತಲಿರುವ ಸುಮಾರು 80 ಹಳ್ಳಿಗಳು ಕುರಿ ಮತ್ತು ಹಸು ಸಾಕಾಣಿಕೆಗೆ ಈ ಕಾವಲನ್ನೇ ನಂಬಿದ್ದಾರೆ. 
    
ಮೈಸೂರು ಮಹಾರಾಜರ ಕಾಲದಲ್ಲಿ ಮೈಸೂರು ಒಡೆಯರು ಭಾರತದ ಪೌಷ್ಠಿಕ ಮತ್ತು ಸದೃಢವಾದ ಅಮೃತ್ ಮಹಲ್ ತಳಿಯ ಹಸುಗಳನ್ನು ಸಾಕಲು ಈ ಕಾವಲನ್ನು ನೀಡಿದ್ದರು. ಕ್ರಮೇಣ ಹಸು ಮತ್ತು ಕುರಿಗಳ ಸಾಕಾಣಿಕೆಗಾಗಿ ಅಲ್ಲಿನ ಸ್ಥಳೀಯರು ಬಳಸಿಕೊಳ್ಳುತ್ತಿದ್ದಾರೆ. ಕುರಿ ಹಾಗೂ ಹಸುಗಳ ಸಾಕಾಣಿಕೆಯೇ ಇಲ್ಲಿನ ಮೂಲ ಕಸುಬಾಗಿದ್ದು, ಕಸುಬಿನ ಬೆನ್ನೆಲುಬಾದ ಕಾವಲನ್ನು ನಾಶ ಮಾಡಿದರೆ ನಾವು ಹೇಗೆ? ಎಲ್ಲಿ? ಬದುಕು ನಡೆಸಬೇಕೆಂದು ಸ್ಥಳೀಯರು ಪ್ರತಿ ಕ್ಷಣ ಆತಂಕದಿಂದ ಬದುಕುತ್ತಿದ್ದಾರೆ. 
    
ಈ ಯೋಜನೆಗಳಿಗೆ ವಾಣಿ ವಿಲಾಸ ಸಾಗರ ಡ್ಯಾಂನ ನೀರನ್ನು ಬಳಸಿಕೊಳ್ಳಲಾಗುತ್ತದೆ. ಇದರಲ್ಲಿ ಈಗಾಗಲೇ ನೀರು ಕಡಿಮೆ ಇದ್ದು, ಇರುವ ನೀರನ್ನು ಈ ಯೋಜನೆಗಳಿಗಾಗಿ ಬಳಸಿಕೊಂಡರೆ, ಈ ನೀರನ್ನೇ ನಂಬಿ ಬದುಕುತ್ತಿರುವ 80 ಹಳ್ಳಿ ಜನರಿಗೆ ನೀರಿನ ಆಧಾರ ಯಾವುದು..? ಈಗಾಗಲೇ 1 ಕಿ.ಮೀ ಮತ್ತು 30 ಕಿ.ಮೀಟರ್ ಉದ್ದದ ಎರಡು ಗೋಡೆಗಳನ್ನು ನಿರ್ಮಾಣ ಮಾಡಿದ್ದು, ನಾವ್ಯಾರೂ ಆ ಜಾಗಕ್ಕೆ ಹೋಗುವ ಹಾಗಿಲ್ಲ…! ಈ ಕಾಮಗಾರಿಗಾಗಿ ಇಲ್ಲಿರುವ ಹೊಸಗುಡ್ಡದ ಕಲ್ಲನ್ನು ಬಳಸಿಕೊಳ್ಳಲಾಗುತ್ತಿದೆ. ಈ ಗುಡ್ಡದಲ್ಲಿ ನಾವು ಪೂಜಿಸುವ ದೇವರುಗಳು ನೆಲೆಸಿದ್ದಾರೆ, ಅಲ್ಲಿನ ಬುಡಕಟ್ಟು ಜನಾಂಗದವರ ದೇವರು, ಸಮಾದಿಗಳೂ ಈ ಕಾವಲಿನಲ್ಲಿವೆ. ನಾವು ಯಾವ ದೇವರುಗಳನ್ನು, ಯಾರ ಸಮಾದಿಗಳನ್ನು ಪೂಜಿಸಬೇಕು…? ಈ ಕಾವಲನ್ನೇ ಆಶ್ರಯ ತಾಣವಾಗಿಸಿಕೊಂಡಿದ್ದ, ಕಾಡು ಹಂದಿ, ಜಿಂಕೆ, ಮೊಲ ಮೊದಲಾದ ಪ್ರಾಣಿಗಳು, ನೂರಾರು ರೀತಿಯ ಪಕ್ಷಿಗಳು ಈಗಾಗಲೇ ಕಾಣೆಯಾಗುತ್ತಿದ್ದಾವೆ. ಈ ಕಾವಲು ಬೇಸಿಗೆಯಲ್ಲಿ ಸುತ್ತ ಮುತ್ತಲಿನ ಉಷ್ಣಾಂಶವನ್ನು ಹೀರಿಕೊಂಡು ವಾತಾವರಣವನ್ನು ತಂಪಾಗಿರಿಸುತ್ತದೆ. ಈ ಯೋಜನೆಗಳು ಪೂರ್ಣಗೊಂಡರೆ ಅವರೇ ಸುಫ್ರೀಂಗಳಾಗುತ್ತಾರೆ, ನಾವು ಯಾರೂ ಅಲ್ಲಿ ನಿರಾಯಾಸವಾಗಿ ಬದುಕುವಂತಿಲ್ಲ, ನಮ್ಮ ಆರೋಗ್ಯಕ್ಕೆ ಮತ್ತು ಪ್ರಾಣಕ್ಕೆ ಯಾರು ಗ್ಯಾರಂಟಿ ಕೊಡುತ್ತಾರೆ, ಎಂದು ಸ್ಥಳೀಯರಾದ ಓಬಣ್ಣನವರು ಕಳವಳ ವ್ಯಕ್ತಪಡಿಸುತ್ತಾರೆ.
    
ಆದರೆ ಬಂಡವಾಳಿಗರ ದಲ್ಲಾಳಿಗಳಾಗಿರುವ, ಸ್ಥಳೀಯರ ಅಭಿಪ್ರಾಯಗಳನ್ನು, ಆತಂಕಗಳನ್ನು ಲೆಕ್ಕಿಸದ ನಮ್ಮ ಸರ್ಕಾರಗಳಿಗೆ  ಜನರ ಮೇಲೆ ಮತ್ತು ಪರಿಸರದ ಮೇಲೆ ಕಿಂಚಿತ್ತೂ ಕಾಳಜಿ ಇಲ್ಲ ಎಂಬಂತೆ ತೋರುತ್ತಿದೆ. ಕರ್ನಾಟಕದಲ್ಲೇ ಕಂಬಳಿ ವ್ಯಾಪಾರಕ್ಕೆ ನಂ1 ಆಗಿರುವ ಚಳ್ಳಕೆರೆಗೆ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ಒರಿಸ್ಸಾದಿಂದ ಜನರು ಬಂದು ಕಂಬಳಿಗಳನ್ನು ಕೊಳ್ಳುತ್ತಾರೆ. ಕಾವಲೇ ಇಲ್ಲವಾದರೆ ಅಲ್ಲಿರುವ ಜೀವಸಂಕುಲಗಳ ಬದುಕಿಗೆ ಆಧಾರವೇನು…? 
    
ಈ ಯೋಜನೆಗಳು ಜನರ ಹೋರಾಟವನ್ನು, ಆತಂಕವನ್ನು ಲೆಕ್ಕಿಸದೇ, ಜನರ ಆರ್ಥಿಕತೆ, ಧಾರ್ಮಿಕ ನಂಬಿಕೆಯನ್ನು ನಾಶ ಮಾಡುವುದರ ಜೊತೆಗೆ, ಕಾವಲಿನೊಂದಿಗೆ ಹೊಂದಿರುವ ಜನರ ಭಾವನಾತ್ಮಕ ಸಂಬಂಧವನ್ನು ನಾಶ ಮಾಡಲು ಹೊರಟಿದೆ. ಈ ಯೋಜನೆಗಳು ಹೀಗೆಯೇ ಪರಿಸರವನ್ನು ಮತ್ತು ಜನ ಸಾಮಾನ್ಯರನ್ನು ನಿರ್ಲಕ್ಷಿಸಿ ಮುನ್ನೆಡೆದರೆ, ಮುಂದೊಂದು ದಿನ ಜಪಾನಿನಲ್ಲಿ, ಅಮೇರಿಕಾದಲ್ಲಿ ನಡೆದ ದುರಂತಗಳು ಇಲ್ಲಿಯೂ ಸಂಭವಿಸುವಲ್ಲಿ ಅನುಮಾನವಿಲ್ಲ. 
-ಮಂಜುಳ ಎಸ್.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
manjula
manjula
8 years ago

good work manju

1
0
Would love your thoughts, please comment.x
()
x