ಹಿಮಾಲಯವೆಂಬ ಸ್ವರ್ಗ (ಭಾಗ 7): ವೃಂದಾ ಸಂಗಮ್

vranda-sangamಇಲ್ಲಿಯವರೆಗೆ 

ಬದರೀಕ್ಷೇತ್ರವು ಉತ್ತರ ಪ್ರದೇಶದ (ಈಗ ಉತ್ತರಾಂಚಲ್) ಚಮೋಲಿ ಜಿಲ್ಲೆಯ ಗಡ್‌ವಾಲ್ ಪ್ರದೇಶದಲ್ಲಿ ಅಲಕ್‌ನಂದಾ ನದಿಯ ತೀರದಲ್ಲಿದೆ. ಈ ಕ್ಷೇತ್ರವು ಸಮುದ್ರ ಮಟ್ಟಕ್ಕಿಂತ ಸುಮಾರು 103೦೦ ಅಡಿ ಎತ್ತರದಲ್ಲಿದ್ದು, ಊರು ಹಾಗೂ ದೇವಾಲಯದವರೆಗೂ ವಾಹನ ಚಲಿಸುವ ರಸ್ತೆಯಿದೆ. ನರ ಮತ್ತು ನಾರಾಯಣ ಎಂಬ ಎರಡು ಪರ್ವತಗಳು ಈ ಕಣಿವೆ ಪ್ರದೇಶದ ಕಾವಲುಗಾರರಂತೆ ನಿಂತಿವೆ. ಹಿನ್ನೆಲೆಯಲ್ಲಿ 215೦೦ ಅಡಿ ಎತ್ತರದ ಘನ ಗಾಂಭೀರ್ಯ ನೀಲಕಂಠ ಪರ್ವತ ತನ್ನ ತಲೆ ಮೋಡಗಳಲ್ಲಿ ಮುಚ್ಚಿಕೊಂಡು ನಿಂತಿದೆ. ದೇವಾಲಯದ ಮುಂದೆ ಕೊರೆಯುವ ಅಲಕ್‌ನಂದ ಹರಿಯುತ್ತಿದ್ದರೆ ಪಕ್ಕದಲ್ಲೆ ಬಿಸಿನೀರಿನ ಕುಂಡಗಳಿವೆ. ಇವುಗಳಲ್ಲಿ ಒಂದಾದ ತಪ್ತ ಕುಂಡಕ್ಕೆ ರೋಗ ನಿರ್ಮೂಲನಾ ಶಕ್ತಿಯಿರುವುದೆಂದು ಹೇಳಲಾಗುತ್ತದೆ. ಇದು ಅಗ್ನಿದೇವನ ನೆಲೆಯಂತೆ. ಮೊದಲೇ ಹೇಳಿದಂತೆ ಈ ಕುಂಡದ ನೀರಿನ ತಾಪಮಾನ ಸುಮಾರು 55 ಡಿಗ್ರೀ. ಸೂರ್ಯ ಕುಂಡ ಹಾಗು ನಾರದ ಕುಂಡ ಇಲ್ಲಿಯ ಉಳಿದ ಬಿಸಿನೀರಿನ ಕುಂಡಗಳು.
    
ಬದರೀನಾಥ ದೇವಾಲಯವು ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿದ್ದರೂ ಅದನ್ನು ಹಲವಾರು ಬಾರಿ ನವೀಕರಣಗೊಳಿಸಲಾಗಿದೆ. ಬೌದ್ಧರು ಪ್ರಬಲವಾಗಿದ್ದ ಕಾಲದಲ್ಲಿ ಬೌದ್ಧ ಭಿಕ್ಕುಗಳು ಬದರೀನಾರಾಯಣನ ಪ್ರತಿಮೆಯನ್ನು ಅಲಕ್‌ನಂದಾ ನದಿಯೊಳಗೆ ಒಗೆದಿದ್ದರಂತೆ (ನಾರದ ಕುಂಡದೊಳಗೆಸೆದಿದ್ದರೆಂದು ಇನ್ನು ಹಲವು ದಂತಕತೆಗಳು ಹೇಳುತ್ತವೆ). ಆದಿಶಂಕರಾಚಾರ್ಯರು ಈ ತೀರ್ಥವನ್ನು ಸಂದರ್ಶಿಸಿದಾಗ ದೇವರ ಪ್ರತಿಮಯನ್ನು ಹುಡುಕಿ ತೆಗೆದು ಪುನಃ ಪ್ರತಿಷ್ಠಾಪಿಸಿದರಂತೆ. ಕ್ರಮವಾಗಿ ರಾಮಾನುಜಾಚಾರ್ಯರು, ಹಾಗು ಮಧ್ವಾಚಾರ್ಯರು ಈ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದರಂತೆ. 
    
ದೇವಾಲಯವು ಸುಮಾರು 4೦೦ ವರ್ಷ ಹಳೆಯದೆಂದು ಹೇಳಲಾಗುತ್ತದೆ. ಇದನ್ನು ಗಡ್‌ವಾಲ್ ರಾಜರು ಕಟ್ಟಿಸಿದರಂತೆ. ದೇವಾಲಯಕ್ಕೆ ಮೂರು ಭಾಗಗಳಿವೆ – ಸಭಾ ಮಂಟಪ, ದರ್ಶನ ಮಂಟಪ ಹಾಗೂ ಗರ್ಭ ಗೃಹ. ಸಭಾ ಮಂಟಪ ಜನರು ಸೇರಲು ಜಾಗ, ದರ್ಶನ ಮಂಟಪಕ್ಕೆ ಹೋಗಿ ದರ್ಶನ ಮಾಡಿಕೊಳ್ಳಬಹುದು. ಗರ್ಭಗುಡಿಯು ಬದರೀನಾರಾಯಣ ಸ್ವಾಮಿ, ಕುಬೇರ, ಉದ್ಧವ ಗರುಡ, ನಾರದ ಮುನಿಗಳು, ನರ-ನಾರಾಯಣರ ಪ್ರತಿಮೆಗಳಿವೆ. ಈ ದೇವಾಲಯದಲ್ಲಿ ಮಹಾಲಕ್ಷ್ಮಿ, ಶಂಕರಾಚಾರ್ಯರು, ರಾಮಾನುಜಾಚಾರ್ಯರು, ಹಾಗೂ ದೇಶಿಕಾಚಾರ್ಯರ ಪ್ರತಿಮೆಗಳೂ ಇವೆ.ಸುಮಾರು 2 ಅಡಿ ಎತ್ತರವಿರುವ ಸಾಲಿಗ್ರಾಮ ಶಿಲೆಯ ಬದರೀನಾರಾಯಣನ ಮೂರ್ತಿಯು ಉದ್ಭವ ಮೂರ್ತಿಯಂತೆ. ಸ್ವಾಮಿಯು ಪದ್ಮಾಸನದಲ್ಲಿ ಕುಳಿತು ಎರಡು ಕೈಗಳಲ್ಲಿ ಶಂಖ ಚಕ್ರಗಳನ್ನು ಹಿಡಿದಿದ್ದಾನೆ. ಇನ್ನೆರಡು ಕೈಗಳು ಯೋಗಮುದ್ರೆಯಲ್ಲಿವೆ. ಸ್ವಾಮಿಯ ಬಲಭಾಗದಲ್ಲಿ ಉದ್ಧವನ ಮೂರ್ತಿ ಇದೆ. ಉದ್ಧವನ ಬಲಭಾಗದಲ್ಲಿ ನರ-ನಾರಾಯಣರ ಪ್ರತಿಮೆಗಳಿವೆ. ಬಲಭಾಗದಲ್ಲಿಯೇ ಮುಂದೆ ನಾರದ ಮುನಿಗಳು ನಮಿಸಿ ಕುಳಿತಿದ್ದಾರೆ. ಎಡ ಭಾಗದಲ್ಲಿ ಕುಬೇರ, ಹಾಗು ಬೆಳ್ಳಿಯ ಗಣೇಶನ ಪ್ರತಿಮೆಗಳಿವೆ. ಎಡಭಾಗದಲ್ಲಿ ಮುಂದೆ ಗರುಡ ನಮಿಸಿ ಕುಳಿತಿದ್ದಾನೆ. ದೇವತೆಗಳ ಮೇಲೆ ಒಂದು ಅಪ್ಪಟ ಚಿನ್ನದ ಛಾವಣಿ ಇದೆ. ಕೇದಾರದಂತೆ ಭಕ್ತರಿಗೆ ಗರ್ಭ ಗುಡಿಯೊಳಗೆ ಹೋಗುವ ಅವಕಾಶವಿಲ್ಲ. ದೇವಾಲಯದ ಹಿಂಭಾಗದಲ್ಲಿ ಲಕ್ಷ್ಮೀನೃಸಿಂಹ, ರಾಮಾನುಜಾಚಾರ್ಯ ಹಾಗು ದೇಶಿಕಾಚಾರ್ಯರ ಗುಡಿಗಳಿವೆ. ದೇವಾಲಯದ ಅಂಗಳದಲ್ಲಿಯೇ ಗರ್ಭಗೃಹದ ಎಡಭಾಗಕ್ಕೆ ಲಕ್ಷ್ಮೀದೇವಿಯ ಗುಡಿಯಿದೆ. ಈ ಗುಡಿಯ ಹೊರಗೆ ಆದಿಶಂಕರಾಚಾರ್ಯರ ಗದ್ದಿ (ಕೂರುವ ಸ್ಥಳ) ಇದೆ. ಇದು ಅವರು ಬದರೀ ಕ್ಷೇತ್ರದಲ್ಲಿದ್ದಾಗ ಕೂರುತ್ತಿದ್ದ ಆಸನವಂತೆ. ಇಂದಿಗೂ, ಆದಿಶಂಕರಾಚಾರ್ಯರ ಪಂಥದವರೇ ಆದ ಕೇರಳದ ನಂಬೂದರೀ ಬ್ರಾಹ್ಮಣರೇ ಈ ದೇವಾಲಯದ ಅರ್ಚಕರು. 
    
ಪ್ರಮುಖ ಅರ್ಚಕರಿಗೆ 'ರಾವಲ್' ಎಂದು ಹೆಸರು. ವರ್ಷಕ್ಕೆ ಸುಮಾರು 2,5೦,೦೦೦ ಜನರು ಬದರೀನಾರಾಯಣನ ದರ್ಶನ ಪಡೆಯಲು ಬರುತ್ತಾರಂತೆ. "ಬೋಲೋ ಬದರಿ ವಿಶಾಲ್ ಕೀ ಜೈ, ಬೊಲೊ ಬದ್ರಿ ನಾರಾಯಣ್ ಕೀ ಜೈ" ಎಂಬ ಕೂಗಿನೊಡನೆ ಭಕ್ತರು ಬದರೀಕ್ಷೇತ್ರಕ್ಕೆ ಹೋಗುತ್ತಾರೆ. ಸಾಯಂಕಾಲವೇ ಬದರೀನಾಥನ ದರ್ಶನ ಪಡೆದೆವು. ರಾತ್ರಿ ವಿಶ್ವ ರೂಪ ದರ್ಶನದ ವಿಚಾರವಿತ್ತು. ಚಳಿ ಹಾಗೂ ಸುಸ್ತಿನ ಕಾರಣದಿಂದ ಯಾರೂ ಆಸಕ್ತಿ ತೋರಲಿಲ್ಲ. ಬೆಳಿಗ್ಗೆ ಇನ್ನೂ ಎರಡು ಬಸ್ಸಿನ ಜನ (ಬಡೇ ಹನುಮಾನ ಮಂದಿರದ ನೆಂಟರು. ಕೊಚ ಕೊಚ ಕೊಯಾಂ ಕೊಯಾಂ). ಇವರಿಂದ ಎಲ್ಲರಿಗೂ ಬಿಸಿ ನೀರು ಸಿಗದೇ, ರೂಂ ನಲ್ಲಿ ಹೀಟರ್ ಸರಿ ಇರದೇ ತೊಂದರೆಯಾಯ್ತು. ಬದರಿ ದೇವಸ್ಥಾನದ ಕೆಳಗೇ ಅಲಕನಂದಾ ಹರಿಯುತ್ತಿದ್ದಾಳೆ. ಆಗ ತಾನೆ ಹಿಮ ಕರಗಿದ ನೀರು. ಸ್ನಾನ ಮಾಡಬಹುದಾಗಿತ್ತು. ಎಲ್ಲರ ಎಚ್ಚರಿಕೆಯಿಂದ ಸುಮ್ಮನಿದ್ದೆ. ಆದರೆ ತಪ್ತ ಕುಂಡದಲ್ಲಿ ಗಂಧಕದ ನೀರಿನ ಸ್ನಾನವೂ ಬೆಡವೆನಿಸಿತ್ತು.  ಬರಿ ಹೆಂಗಸರಿದ್ದುದನ್ನು ನೋಡಿ, ಶಶಿಕಲ ಇವರೊಂದಿಗೆ ನಾನೂ ಸ್ನಾನ ಮಾಡಿದೆ.    

1  
ದೇವಸ್ಥಾನದ ಕಟ್ಟೆಯ ಮೇಲೆ, ಅಲಕನಂದಾ ದಂಡೆಯ ಮೇಲೆ ಧಾರ್ಮಿಕ ಕಾರ್ಯ ನಡೆದಿತ್ತು. ಪಕ್ಕದಲ್ಲಿಯೇ ಮೇಲೆ ಬ್ರಹ್ಮ ಕಪಾಲ. ನನಗೆ ಬೆಟ್ಟಗಳ ಹಿಂದೆ ರವಿ ಉದಯದ ಫೋಟೋಗಳನ್ನು ತೆಗೆಯಲು ಸಾಧ್ಯವಾಯ್ತು. ದೇವಸ್ಥಾನದಲ್ಲಿ ಅಷ್ಟೊಂದು ಜನರಿರಲಿಲ್ಲ. ಅರಾಮಾಗಿ ಎಲ್ಲಾ ದೇವರ ದರ್ಶವವಾಯ್ತು. ಕಣ್ತುಂಬಿಕೊಂಡೆವು. ಅಲ್ಲಿ ನಮ್ಮ ದೊಡ್ಡಮ್ಮನಿಗಾಗಿ ಪುಟ್ಟ ಕೃಷ್ಣನ ವಿಗ್ರಹ ತೆಗೆದುಕೊಳ್ಳೋಣವೆಂದು, ದೇವರ ವಿಗ್ರಹ ಮುಷ್ಟಿಯೊಳಗೆ ಮುಚ್ಚುವಂತಿರಬೇಕು. ದೇವರ ಪೂಜೆಗೆ ಶ್ರೇಷ್ಠ ಎಂದು ಹುಡುಕುತ್ತಿದ್ದೆ. ಅದನ್ನು ನೋಡಿದ ಸೇತುರವರು ತಮಗೂ ಒಂದು ಗರುಡ ದೇವರ ಮೂರ್ತಿ ಬೇಕೆಂದು ಹುಡುಕತೊಡಗಿದರು. ಎಲ್ಲಾ ಅಂಗಡಿಗಳಲ್ಲೂ ಗರಡನ ಮೂರ್ತಿ ಕೇಳುವುದು. ಅದು ಮುಷ್ಟಿಯಲ್ಲಿ ಮುಚ್ಚುವಂತಿರಬೇಕೆಂದು ವಿವರಿಸುವುದು ಅದೂ ಹಿಂದಿಯಲ್ಲಿ, ಅವರಿಗೆ ತುಂಬಾ ಕಷ್ಟವೆನಿಸಿತು. ಸರಿ ಯಾವದೇ ಅಂಗಡಿಗೆ ಹೋದರೂ ತಮ್ಮ ಬಲಗೈ ಮುಷ್ಟಿಯನ್ನು ತೋರಿಸುವುದು, ಗರುಡ ದೇವ್ ಹೈ ಕ್ಯಾ ಎನ್ನುವುದು. ಅವರ ದೃಷ್ಟಿಯಲ್ಲಿ ಅದು ಮುಷ್ಟಿಯಲ್ಲಿ ಹಿಡಿಯಬಹುದಾದ ಗರುಡನ ಮೂರ್ತಿಯ ವಿಚಾರಣೆ. ನಮಗೆಲ್ಲ ನಗುವೋ ನಗು. 
      
ರೂಮಿಗೆ ಬಂದೆವು. ನಮ್ಮ ಕೊಚ ಕೊಚ ಕೊಯಾಂ ಕೊಯಾಂ ನೆಂಟರು ಮಠದಲ್ಲಿ, ಅವರ ಜನರಿಗಾಗಿ ಶ್ರಾದ್ಧದೂಟ (ರವೆ ಉಂಡೆ, ವಡೆ) ಹೇಳಿದ್ದರಂತೆ. ಗಲಾಟೆಯೋ ಗಲಾಟೆ. ಶ್ರಾದ್ಧದೂಟ ಝುಮ್ಮನೆ, ನೆನಸಿಕೊಂಡೆ ಸುಮ್ಮನೆ, ನೀರೂರಿ ನಾಲಗೆ ಕುಣಿವುದಯ್ಯ ರುಮ್ಮನೆ ಎನ್ನುವವರ ಊಟದ ಗಲಾಟೆ ಮುಗಿಯುವವರೆಗೆ ಕಾಯ್ದು, ಊಟ ಮುಗಿಸಿ ಮಾನಾಗೆ ಹೊರಟೆವು.  

ಮಾನಾ ಗ್ರಾಮವು ಇಂಡಿಯ – ಟಿಬೆಟ್ ಬಾರ್ಡರ್ ನಲ್ಲಿದೆ. ಭಾರತದ ಕೊನೆಯ ಹಳ್ಳಿ. ಭಾರತದ ಕೊನೆಯ ಟೀ ಸ್ಠಾಲ್ ಎಂದೆಲ್ಲ ಬೋರ್ಡ ಇವೆ. ಈ ಗ್ರಾಮದಲ್ಲಿಯೇ ಪರಮ ಪವಿತ್ರವಾದ ಸರಸ್ವತೀ ನದಿಯ ಉಗಮವಾಗುತ್ತದೆ. ಇಲ್ಲೊಂದೇ ಕಡೆ ನಮಗೆ ಸರಸ್ವತೀ ನದಿಯ ದರ್ಶನ. ಮುಂದೆ ಗುಪ್ತಗಾಮಿನಿಯಾಗಿ ಹರಿಯುವ ಈ ನದಿ ಹಲವು ಸಂಗಮಗಳಾಗಿ ಕಾಣಿಸಿಕೊಂಡು ಮುಂದೆ ಅಲಹಾಬಾದ್ ನಲ್ಲಿ ಗಂಗೆ, ಯಮುನೆಯೊರೊಂದಿಗೆ ಸಂಗಮವಾಗುತ್ತಾಳೆ. ಗಣೇಶ ಗುಹೆ, ಮಹಾಭಾರತ ಇಲ್ಲಿ ರಚಿತವಾಯಿತು. ವೇದವ್ಯಾಸರು ಇಲ್ಲಿಯೇ ಗಣೇಶ ದೇವನಿಂದ ಮಹಾಭಾರತವನ್ನು ರಚನೆ ಮಾಡಿಸಿದರು. ಮೇಲೆಯೇ ವ್ಯಾಸರ ಗುಹೆಯಿದೆ. ಗುಹೆಯ ಕಲ್ಲುಗಳು ಅನೇಕ ಪುಸ್ತಕಗಳನ್ನು ಜೋಡಿಸಿದಂತಿದೆ. ವ್ಯಾಸರು ಅಷ್ಟೆಲ್ಲ ಗ್ರಂಥಗಳನ್ನು ರಚಿಸಿದ್ದು, ಅವುಗಳೀಗ ಕಲ್ಲಾಗಿವೆ ಎನ್ನುತ್ತಾರೆ. ಅವುಗಳಲ್ಲೊಂದು ಋಗ್ವೇದವಿದಯೇ? ಅಥವಾ ಅದರಲ್ಲಿ ವೇದವ್ಯಾಸರೇ ರಚಿಸಿದ ಅರ್ಧವಾದ ಗೃಂಥ ಯಾವುದಾದರೂ ಇದೆಯೇ? ಹುಡುಕುವಷ್ಟು ಅರಿಯುವಷ್ಟು ಅರಿವು, ತಾಳ್ಮೆ ನಮಗಿದೆಯೇ?  
      
ಕೆಳಗೆ ಒಂದು ಭೀಮ ಪುಲ್, ಭೀಮನ ಬಂಡೆ, ಜಲಪಾತ, ಸೇತುವೆ ಇದೆ. ಸ್ವರ್ಗಾರೋಹಣ ಪರ್ವತ.  ಮಹಾಭಾರತದಲ್ಲಿ ಪಾಂಡವರು ಈ ಪರ್ವತಮಾರ್ಗವಾಗಿಯೇ ಸ್ವರ್ಗಕ್ಕೆ ಪ್ರಯಾಣ ಮಾಡಿದರು. ಧರ್ಮರಾಯ ಕೇವಲ ಒಬ್ಬಂಟಿಯಾಗಿ ಅರ್ಜುನ, ಭೀಮ ನಕುಲ ಸಹದೇವರಾದಿಯಾದ ಎಲ್ಲಾ ಅಣ್ಣ ತಮ್ಮಂದಿರನ್ನು,, ಸೈನ್ಯಬಲವನ್ನು, ಸಂಪತ್ತನ್ನು ಸಕಲ ಬದುಕಿನ ಮಹಾಭಾರತ ಜಾತ್ರೆಯನ್ನು ಈ ಧರೆಯಿಂದ ಒಂದೊಂದಾಗಿ, ಒಬ್ಬೊಬ್ಬರನ್ನಾಗಿ ಹಿಂಬಿಡುತ್ತ, ಸ್ವರ್ಗಕ್ಕೆ ನಡೆದಿದ್ದನಲ್ಲವೇ ಏಕಾಂತವಾಗಿ, ಒಬ್ಬಂಟಿಯಾಗಿ, ಒಂದೊಂದೇ ಹೆಜ್ಜೆಗಳನ್ನು ಊರುತ್ತ ಸ್ವರ್ಗದ ದಾರಿಯಲ್ಲಿ ಏರಿದ್ದನಲ್ಲವೇ….. ಹರಿದ್ವಾರ ಋಷಿಕೇಶಗಳ ಮೂಲಕ ಸ್ವರ್ಗಾರೋಹಣದ ದಾರಿಯಲ್ಲಿ.  ಒಬ್ಬರೆಂದರೆ ಒಬ್ಬ ಮನುಷ್ಯನೂ ಅವನ ಜೊತೆಯಾಗಲಿಲ್ಲವಲ್ಲ, ಆ ಪಯಣದಲ್ಲಿ, ಕೇವಲ ಒಂದೇ ಒಂದು ನಾಯಿ ಮಾತ್ರ ಅವನ ಜೊತೆಯ ಪಥಿಕ. ‘ಚಲ್ ಅಕೇಲಾ ಚಲ್ ಅಕೇಲಾ ಚಲ್ ಅಕೇಲಾ, ತೇರಾ ಮೇಲಾ ಪೀಛೇ ಛೂಟಾ ರಾಹೀ ಚಲ್ ಅಕೇಲಾ’…..ಕೆಲವೊಂದು ಸಂದರ್ಭದಲ್ಲಿ ಮನುಷ್ಯ ಒಂಟಿಯಾಗಲೇ ಬೇಕಲ್ಲವೇ! ನಾನೇನೂ ಒಬ್ಬಳೇ ಒಬ್ಬಂಟಿಯಲ್ಲ. ಇಡೀ ಜಗತ್ತೇ ಒಂಟಿ.  ಈ ದಟ್ಟ ಹಿಮದ ಬೆಟ್ಟದಲ್ಲಿ ಅದೇ ಧರ್ಮರಾಯನ ಒಂದಲ್ಲ ಅನೇಕ ಆಕಾರಗಳು, ಹೆಜ್ಜೆ ಗುರುತುಗಳು ಕಂಡಂತಾಗುತ್ತಿದ್ದವು. ಅದೇ ನಾಯಿಯನ್ನು ಹುಡುಕಿದ್ದೆ ನಾನೂ ಕೂಡ.
      
ಸಾಯಂಕಾಲ ಇಲ್ಲಿಯೂ ವಿಷ್ಣು ಸಹಸ್ರ ನಾಮದ ಸೇವೆ ಮಾಡಿಸಿದ್ದೆವು. ದೇವರ ಮುಂದೆಯೇ ಕುಳಿತು ಪಾರಾಯಣವಾಯಿತು. ಹರಿದ್ವಾರದಿಂದ ಒಯ್ದ ಕಡಲೇ ಬೇಳೆ, ತುಪ್ಪ ಸಕ್ಕರೆ ಕಾಳುಗಳ ನೈವೇದ್ಯ ಮಾಡಿಸಿದೆವು. ಈಗಿನ ರಾವಲ್ ರನ್ನು ಭೇಟಿಯಾಗಲು ಹೋದೆವು. ಹಿಂದಿದ್ದ ರಾವಲ್ ರು ಬೆಂಗಳೂರಿನ ಶಂಕರ ಮಠದಲ್ಲಿ ಅನೇಕ ವರ್ಷಗಳಿದ್ದು ಓದಿದವರಂತೆ. ಬೆಂಗಳೂರಿನಿಂದ ಬದರಿಗೆ ಹೋದವರನ್ನು ವಿಶೇಷ ಆದರದಿಂದ ಕನ್ನಡದಲ್ಲಿಯೇ ಮಾತನಾಡಿಸುತ್ತಿದ್ದರಂತೆ. ಈಗಿನವರಿಗೆ ಕನ್ನಡ ಗೊತ್ತಿಲ್ಲ. ಆದರೆ ಅವರೂ ಕೂಡಾ ದಕ್ಷಿಣ ಭಾರತದವರು. ನಮ್ಮನ್ನೆಲ್ಲ ಪ್ರೀತಿಯಿಂದ ಮಾತನಾಡಿಸಿದರು. ಎಲ್ಲರಿಗೂ ಕೆಂಪು ಜರಿಯ ಬಟ್ಟೆಯಲ್ಲಿ ತುಳಸಿ ಹಾಗೂ ಗಂಧದ ಪ್ರಸಾದ ನೀಡಿದರು. ನಂತರ ಸಣ್ಣ ಪುಟ್ಟ ಖರೀದಿ, ವಿಶೇಷವೆಂದರೆ ಧಾಬಳಿಯ ಖರೀದಿ ಮಾಡುವ ಹೊತ್ತಿಗೆ ಎಲ್ಲರೂ ರೂಂ ಸೇರಿದ್ದರು. ಪಾಪ, ಪ್ರತಿ ಬಾರಿಯಂತೆಯೇ, ಈಗಲೂ ಕೃಷ್ಣರವರು ನಮಗಾಗಿ ಕಾಯತ್ತಿದ್ದರು. ನನ್ನ ಕುತೂಹಲಕ್ಕೆ ಸರಿಯಾದ ಜೊತೆ ಶಶಿಕಲಾರವರು. ನಮ್ಮಿಬ್ಬರನ್ನು ಎಲ್ಲರೊಂದಿಗೆ ಸೇರಿಸುವ ಜವಾಬ್ದಾರಿ ಕೃಷ್ಣರವರಿಗೆ. ಅಂತೂ ನನಗೂ ಬದರೀನಾಥನ ದರ್ಶನ ಮಾಡಿಸಿದ ಪುಣ್ಯ ಆ ದಂಪತಿಗಳಿಗೆ, ಅವರೊಂದಿಗೆ, ಶಶಿಕಲಾ ಅವರಿಗೂ ಹಾಗೂ ಕುಮಾರ ದಂಪತಿಗಳಿಗೂ ಧನ್ಯವಾದಗಳು. 

ಬದರೀನಾಥದ ಹತ್ತಿರ ನಮ್ಮ ತೀರ್ಥಗಳಲ್ಲದೆ ಸಿಖ್ಖರ ಒಂದು ಪುಣ್ಯಕ್ಷೇತ್ರವಿದೆ. ಇದು "ಹೇಮ್‌ಕುಂಡ್ ಸಾಹಿಬ್". ಇದರ ದರ್ಶನಕ್ಕೆ ಹಿಂದೂಗಳೂ ಹೋಗುತ್ತಾರಂತೆ. ಸಪ್ತ ಋಷಿ ಶಿಖರಗಳಿಂದ ಹಿಮನದಿಗಳು ಹರಿದುಬಂದು ಸಮುದ್ರ ಮಟ್ಟದಿಂದ 1೦,೦೦೦ ಅಡಿ ಎತ್ತರದಲ್ಲಿ ಒಂದು ದೊಡ್ಡ ಸರೋವರವಾಗಿದೆ. ಇದೇ ಹೇಮಕುಂಡ. ಇದರಿಂದ ಆಚೆ ಹೋಗುವ ನದಿಗೆ ಹಿಮ ಗಂಗೆಯೆಂದು ಹೆಸರು. ಸೀಖ ಗುರು ಗೋಬಿಂದ್ ಸಿಂಗ್ ಇಲ್ಲಿ ತಪಸ್ಸು ಮಾಡಿದ್ದರಂತೆ. ಲಂಕೆಯಲ್ಲಿ ಲಕ್ಷ್ಮಣ ಮೂರ್ಛೆ ಬಿದ್ದಾಗ ಹನುಮಂತ ಇಲ್ಲಿಂದಲೇ ಸಂಜೀವಿನಿ ತೆಗೆದೊಯ್ದದ್ದಂತೆ. ಅದಕ್ಕೆ ಇಲ್ಲಿಯ ಜನ ಹನುಮಂತನನ್ನು ಪೂಜಿಸುವುದಿಲ್ಲವಂತೆ. (ರಾಮಾಯಣದಲ್ಲಿ ಹನುಮಂತ ಸಂಜೀವಿನಿ ಪರ್ವತವನ್ನು ಹಿಮಾಲಯಕ್ಕೆ ಹಿಂತಿರುಗಿಸಲಿಲ್ಲವೆ?). ಈ ಪ್ರದೇಶದ ಇನ್ನೊಂದು ಅನುಪಮ ದೃಶ್ಯವೆಂದರೆ ಹೂಗಳ ಕಣಿವೆ (ವ್ಯಾಲಿ ಆಫ್ ಫ್ಲವರ್ಸ್). ಇಲ್ಲಿಗೆ ಹೋಗಲು ಗೋಬಿಂದ್‌ ಘಾಟ್ ಎಂಬ ರಸ್ತೆಯಿರುವ ಊರಿಂದ ಸುಮಾರು 19 ಕಿಲೋಮೀಟರ್ ನಡೆದು ಹೋಗಬೇಕು. ಸ್ಮಿತ್ ಹಾಗು ಹೋಲ್ಡಸ್ವರ್ತ್ (ಬ್ರಿಟೀಷರು) ಈ ಕಣಿವೆಯನ್ನು 1931 ನೇ ಇಸವಿಯಲ್ಲಿ ಹುಡುಕಿದ್ದರಂತೆ. ಇಲ್ಲಿ ಮೈಲಿಗಟ್ಟಲೆ ತರಾವರಿ ಬಣ್ಣಬಣ್ಣದ ಹೂವುಗಳು ಹಾಗು ಇತರ ಅಪೂರ್ವ ಗಿಡಮೂಲಿಕೆಗಳು ಬೆಳೆಯುತ್ತವಂತೆ. ನೂರಾರು ಮೀಟರ್ ಒಂದೇ ಬಣ್ಣದ ಹೂಗಳು ಬೆಳೆದು ರತ್ನಗಂಬಳಿ ಹಾಸಿದ ಹಾಗೆ ಕಾಣಿಸುತ್ತದೆಯಂತೆ. ಈ ಕಣಿವೆಯ ನೋಟ ಮನಮೋಹಕವೆಂದು ಹೇಳುತ್ತಾರೆ. ದುರದೃಷ್ಟವಶಾತ್ ನಮಗೆ ಈ ಸ್ಥಳಗಳನ್ನು ನೋಡುವ ಅವಕಾಶ ಲಭಿಸಲಿಲ್ಲ. ನಾವು ರಾತ್ರಿ ಮಲಗೆದ್ದು, ಬೆಳಿಗ್ಗೆ ಹರಿದ್ವಾರದ ಕಡೆ ಹೊರಟೆವು. 
      
ಯಥಾ ಪ್ರಯಾಣ. ಮೊದಲು ಸಿಗುವ ಪ್ರಯಾಗದಲ್ಲಿ ಕೆಳಗಿಳಿದು, ಝೂಲಾ, ಪುಟ್ಟ ನರಸಿಂಹ, ಗಣೇಶನ ದೇವಸ್ಥಾನ ನೋಡಿದೆವು. ಚಳಿ ಚಳಿ. ದೂರದ ಮೂಲೆಯಲ್ಲಿನ ಬೆಳ್ಳಿ ಬೆಟ್ಟದ ಶಿಖರಗಳನ್ನು ತೋರಿಸಿ, ಇವು ಕಾಂಚನ ಗಂಗಾ ಹಾಗೂ ನಂದ ಪರ್ವತ ಶಿಖರಗಳು ಎಂದರು ನಮ್ಮ ಸಾರಥಿ ರಾಜೆಂದ್ರ ಸಿಂಗ್. ಅವರು 60 ಬಾರಿ ಬದರಿ ಯಾತ್ರೆ ಮಾಡಿದ್ದಾರಂತೆ. ಅವರು ಹೇಳಿದ ಮೇಲೆ ನಿಜವೇ ಇರಬೇಕು. ಅಲ್ಲಿಯೇ ಪಕ್ಕದಲ್ಲಿ ಶಿವನು ತಪಸ್ಸಿಗೆ ಕುಳಿತಿದ್ದಾನೆ. ಈಗ ಅವನ ವಿಶ್ರಾಂತಿ ಸಮಯ. ನಾವೀಗ ಹೋದರೆ ಅವನೊಂದಿಗೆ ಮಾತನಾಡಬಹುದು. ಎಂದು ಹೇಳಿದ್ದರೂ ನಾವು ನಂಬುವ ಸ್ಥಿತಿಯಲ್ಲಿದ್ದೆವು. ಏನಾದರೇನು. ಶಿವನು ಕಾಣದಿದ್ದರೇನು. ಶಿವನ ವಾಸಸ್ಥಾನವಾದ ಕಾಂಚನಗಂಗಾ ನಂದ ಪರ್ವತಗಳ ಶಿಖರಗಳು ಕಂಡವಲ್ಲ. ಅವಕ್ಕೇ ಕೈ ಮುಗಿದೆ. ವಾಹನ ಸಾಗಲಿ, ಮುಂದೆ ಹೋಗಲಿ, ಜೋಶಿ ಮಠವ ಸೇರಲಿ ಎಂದು ವಾಹನವನ್ನೇರಿ, ನಮ್ಮ ಸಿಂಹಾಸನವನ್ನಲಂಕರಿಸಿದೆವು.
      
ಜೋಶಿ ಮಠದಲ್ಲಿ ಭವಿಷ್ಯ ಬದರಿಯ ದರ್ಶನ ಪಡೆದು, ಶಂಕರ ಮಠದಲ್ಲಿ ಕಾಲಿಟ್ಟು, ಮುನ್ನಡೆದೆವು.  ಪೀಪಲ್ ಕೋಟೆಯಲ್ಲಿ ಅದೇ ಊಟ. ಹೋಗುವಾಗ ಮಾಡಿದ್ದೇ ಅಡುಗೆ ಎಂದುಕೊಳ್ಳ ಬೇಡಿ. ಅದೇ ಪರಾಠ ಮೊಸರು. ಆದರೆ ಈಗ ಬಿಸಿ ಬಿಸಿಯಾಗಿ ಮಾಡಿದ್ದು. ಮುಂದೆ ದಾರಿಯಲ್ಲಿ ನಮ್ಮ ಸಾರಥಿ ಸಾಯಂಕಾಲ ಹೃಷಿಕೇಶಕ್ಕೆ ಹತ್ತಿರದಲ್ಲಿ ಒಂದೆಡೆ ನಿಲ್ಲಿಸಿ, ಗಂಗಾ ದಡದಲ್ಲಿ ವಸಿಷ್ಠರ ಆಶ್ರಮ ತೋರಿಸಿದ. ರಸ್ತೆಯಿಂದ ತುಂಬಾ ಕೆಳಗಿದೆ. ಸುತ್ತಲೂ ಪೇರಲ ಹಣ್ಣಿನ ಮರಗಳು. ಅವುಗಳಿಗೆ ಸಾಥಿಯಾ ಮಂಗಗಳು. ಪುಟ್ಟ ಗುಹೆ. ಬೇಸಿಗೆಯಾದ್ದರಿಂದ ನದೀ ಪಾತ್ರಕ್ಕೆ ತುಸು ದೂರದಲ್ಲಿದೆ ಎನಿಸಿತು. ಯಾವ ಕ್ಷಣದಲ್ಲಿಯಾದರೂ ಐಚಿಟಿಜ Sಟiಜe ಆಗಬಹುದೆಂದು ಬೋರ್ಡ ಹಾಕಿದ್ದಾರೆ. ಕೇರಳದ ಒಬ್ಬ ವ್ಯಕ್ತಿ, ಈಗವರಿಗೆ ಸ್ವಾಮೀಜಿಯನ್ನುತ್ತಾರೆ, ಅವರು ಹುಡುಕಿದ್ದಂತೆ. ಪಕ್ಕದಲ್ಲೇ ಆಧುನಿಕ ಹಾಸ್ಟೆಲ್ ಕಟ್ಟಿದ್ದಾರೆ. ಕೇರಳದ ಟೆಕ್ಕಿಗಳು ಧ್ಯಾನಕ್ಕೆ ಬರುತ್ತಾರಂತೆ. ನಾವು ಹೋದಾಗ ಮಧ್ಯ ವಯಸ್ಸಿನ ವ್ಯಕ್ತಿ, ಮಹಾರಾಷ್ಟ್ರದವರ ತರಹ ಪಾಯಿಜಾಮ ಹಾಗು ಹತ್ತಿ ಬಟ್ಟೆಯ ತೋಳಿನ ಬನಿಯನ್ ಧರಿಸಿ, ಕೂತಿದ್ದರು. ಬೇಕಿದ್ದರೆ ಗುಹೆಯ ಒಳಗೆ ಹೋಗಿ ಎಂದರು. ಒಳಗೆ ಪುಟ್ಟ ದೀಪವಿತ್ತು. ತುಸು ಭಯವಾಗುವಷ್ಟು ಕತ್ತಲೆ. ಗ್ಯಾಂಗಟಿಕ್ ಪ್ಲೇನ್, ಸಮಪಾತಳಿಯ ಭೂಮಿ. ಹೊರಗಡೆ ಬಂದಾಗ ನದಿಯ ಜುಳು ಜುಳು. ಪಕ್ಕಕ್ಕೆ, ಅರುಂಧತಿಯ ಆಶ್ರಮ. ನಿಜವಾಗಲೂ ಚಲನಚಿತ್ರಗಳಲ್ಲಿ ತೋರಿಸುವಂತಹ ಋಷಿ ಮುನಿಗಳ ಆಶ್ರಮದ ಶಾಂತತೆ, ಸ್ವಚ್ಛತೆಯಿತ್ತು. ನದಿಯ ಆ ಕಡೆ ದಡದಲ್ಲಿ ವಾಟರ್ ರಾಫ್ಡಿಂಗ್ ನವರ ಟೆಂಟ್ ಗಳಿದ್ದವು. ನನಗಂತೂ ಆ ಜಾಗ ನೆನಪಿಡುವಂತಿದೆ.
 


ಮುಂದುವರೆಯುವುದು….

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x