ಹಿಮಾಲಯವೆಂಬ ಸ್ವರ್ಗ (ಭಾಗ 6): ವೃಂದಾ ಸಂಗಮ್

vranda-sangam

ಇಲ್ಲಿಯವರೆಗೆ 

ಸಾಯಂಕಾಲ ಹೃಷಿಕೇಶಕ್ಕೆ. ಇದು ಭಾರತದ ಉತ್ತರಾಖಂಡ ರಾಜ್ಯದ ಡೆಹ್ರಾಡೂನ್ ಜಿಲ್ಲೆಯಲ್ಲಿರುವ ಒಂದು ಪಟ್ಟಣ. ಹಿಮಾಲಯಕ್ಕೆ ಹೆಬ್ಬಾಗಿಲೆನಿಸಿಕೊಳ್ಳುತ್ತದೆ ಹೃಷಿಕೇಶ ವಿಷ್ಣುವಿನ ಒಂದು ಹೆಸರು. ಇದರ ಅರ್ಥ ಇಂದ್ರಿಯಗಳ ಒಡೆಯ ಎಂಬುದಾಗಿದೆ. ಈ ಸ್ಥಳದಲ್ಲಿ ರೈಭ್ಯ ಋಷಿಯ ತಪಸ್ಸಿಗೆ ಒಲಿದು ವಿಷ್ಣು ಹೃಷಿಕೇಶನಾಗಿ ಪ್ರತ್ಯಕ್ಷನಾದನೆಂದು ಒಂದು ಕಥೆಯಿದೆ.  ಸ್ಕಂದ ಪುರಾಣದಲ್ಲಿ ಈ ಸೀಮೆಯು ಕುಬ್ಜಾಮ್ರಕ ಎಂದು ಹೆಸರಿಸಲ್ಪಟ್ಟಿದೆ. ಐತಿಹಾಸಿಕವಾಗಿ ಹೃಷಿಕೇಶ ಕೇದಾರ ಖಂಡದ ಭಾಗ. ಇಂದಿನ ಗಢ್ವಾಲ್ ಪ್ರದೇಶವು ಹಿಂದೆ ಕೇದಾರ ಖಂಡ ವೆಂದು ಕರೆಯಲ್ಪಡುತ್ತಿತ್ತು. 
      
ರಾಮನು ಲಂಕೆಯ ಅರಸ ರಾವಣನನ್ನು ಯುದ್ಧದಲ್ಲಿ ಸಂಹರಿಸಿದ ಬಳಿಕ ಇಲ್ಲಿ ತಪವನ್ನೈದಿದನೆಂದೂ ಹೇಳಲಾಗಿದೆ. ಲಕ್ಷ್ಮಣ ಜೂಲ್ಹಾ (ಜೂಲ್ಹ ಎಂದರೆ ಉಯ್ಯಾಲೆ) ಲೋಹದ ಹಗ್ಗಗಳಿಂದ ಮಾಡಿದ ಒಂದು ಸೇತುವೆ. ಇದನ್ನು ಎತ್ತಿ ಹಿಡಿಯಲು ನದಿಯೊಳಗಿಂದ ಕಂಬಗಳಿಲ್ಲ. ಎರಡೂ ತೀರಗಳಲ್ಲಿರುವ ಕಂಬಗಳಿಂದ ನೇತುಹಾಕಿದ ಹಗ್ಗಗಳ ಮೇಲೆ ಒಂದು ಪುಟ್ಟ ರಸ್ತೆ ಇದೆ. ಅದರ ಮೇಲೆ ನಡೆದು ಹೋಗಬಹುದು. ನಡೆದು ಹೋಗುವಾಗ ಉಯ್ಯಾಲೆ ತೂಗಿದ ಭಾವ. ಈ ಸೇತುವೆ ಸುಮಾರು 45೦ ಅಡಿ ಉದ್ದವಿದ್ದು 1939 ಇಸವಿಯಲ್ಲಿ ಕಟ್ಟಲ್ಪಟ್ಟಿತಂತೆ. ಈ ಸೇತುವೆ ರಾಮಾಯಣದ ಲಕ್ಷ್ಮಣನ ನೆನಪಿಗೆ ಸಮರ್ಪಿತವಂತೆ. ಲಕ್ಷ್ಮಣನು ಇದೇ ಜಾಗದಲ್ಲಿ ಒಂದು ಗೋಣೀ ಹಗ್ಗದ ಸೇತುವೆಯ ಮೇಲೆ ಗಂಗಾನದಿಯನ್ನು ದಾಟಿದ್ದನಂತೆ. ಇದಕ್ಕೆ ರುಜುವಾತಾಗಿ ಈ ಸ್ಥಳದಲ್ಲಿ ಒಂದು ಲಕ್ಷ್ಮಣನ ಗುಡಿಯೂ ಇದೆ. ಗಂಗಾ ನದಿಯು ಹೃಷಿಕೇಶ ಪಟ್ಟಣದ ಮೂಲಕ ಹಾದುಹೋಗುತ್ತದೆ. ಹೃಷಿಕೇಶದಲ್ಲಿ ಗಂಗಾ ನದಿಯು ಶಿವಾಲಿಕ ಪರ್ವತಗಳಿಂದ ಇಳಿದು ಉತ್ತರ ಭಾರತದ ಬಯಲುಸೀಮೆಯನ್ನು ಸೇರುವುದು. ನದಿಯ ದಂಡೆಗುಂಟ ಹಲವು ದೇವಾಲಯಗಳು, ಆಶ್ರಮಗಳಿವೆ. ನಗರದ ತ್ರಿವೇಣಿ ಘಾಟ್ನಲ್ಲಿ ಪ್ರತಿದಿನ ಸಂಜೆ ನಡೆಯುವ ಗಂಗಾ ಆರತಿ ಬಲು ಪ್ರಸಿದ್ಧ. ನೀಲಕಂಠ ಮಹಾದೇವ ಮಂದಿರ, ರಾಮ ಝೂಲಾ, ವಸಿಷ್ಠ ಗುಹೆ ಮುಂತಾದವುಗಳಿವೆ. ವಸ್ತುತಃ ಇದನ್ನು ಪ್ರಪಂಚದ ಯೋಗಾ ರಾಜಧಾನಿಯೆಂದು ಕರೆಯಲಾಗುತ್ತದೆ. ಇತ್ತೀಚೆಗೆ ಇದು ರಭಸ ನದಿ ಉಡುಪಾಟಕ್ಕೂ (ವೈಟ್ ವಾಟರ್ ರಾಫ಼್ಟಿಂಗ್) ಪ್ರಸಿದ್ಧವಾಗಿದೆ. ಹೃಷೀಕೇಶದಲ್ಲಿ ನಾವು ಹಲವಾರು ವಿದೇಶಿಯರನ್ನೂ ಕಂಡೆವು. ಅವರುಗಳೂ ಇಲ್ಲಿಗೆ ಆಕರ್ಷಿತವಾಗಿ ಬರುತ್ತಾರಂತೆ. 

ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ
ಗಿರಿಯನರಸಿ ಬಂದಳೋ, ಅಲ್ಲೇ ಆ ಕಡೆ ನೋಡೆಲ,
ಅದುವೇ ಹರನ, ನರನ, ಹರಿಯ ಬೀಡೆಲ.
ಅನಂತದಿಂದ, ದಿಗಂತದಿಂದ ಪ್ರತ್ಯಕ್ಷ ವಾಗುತ್ತಿರುವ 
ಸಾಲು ಸಾಲು ಪರ್ವತಗಳು, ವಸುಂಧರೆಯ ಹಸಿ ಹಸಿರ ವನರಾಶಿ. ಇದು ಪಂಜೆ ಮಂಗೇಶರಾಯರು ಮಲೆನಾಡ ಬಗ್ಗೆ ಬರೆದ ಕವನ. ನನಗೆ ಹೃಷಿಕೇಶ ನೋಡಿದಾಗ ಇದು ನಿಜವೆನಿಸಿತು.

ರಾಜೇಂದ್ರ ಕೃಷ್ಣರ ‘ಖುದಾ ಭೀ ಆಸಮಾಂ ಸೆ ಜಬ್ ಜಮೀಂ ಪರ್ ದೇಖತಾ ಹೋಗಾ ಮೇರೇ ಮೆಹಬೂಬ್ ಕೊ ಕಿಸನೇ ಬನಾಯಾ ಸೋಚತಾ ಹೋಗಾ’ ನೆನಪಾಗುತ್ತದೆ.ಇಲ್ಲಿ ಗಂಗಾ ನೀರಿನ ಹರವಿಗೆ ಇಲ್ಲಿ ರಭಸವಿಲ್ಲ. ಶುಭ್ರ ಬಿಳಿ ಬಣ್ಣದ ಗಂಗೆ. ನಮ್ಮೊಂದಿಗೆ ನಮ್ಮ ಫಣಿಕ್ಕರ್ ಟ್ರಾವೆಲ್ಸನ ಟೂರ್ ಎಜೆಂಟ್ ನಮ್ಮನ್ನು ದೋಣಿಯಲ್ಲಿ ಗಂಗಾನದಿಯ ಆ ದಡಕ್ಕೆ ಕರೆದೊಯ್ದರು. ಅಲ್ಲಿ ಗೀತ ಭವನವೆಂಬ ಆಧುನಿಕ ಕಟ್ಟಡ ವೊಂದಕ್ಕೆ ಹೋದೆವು. ಇಲ್ಲಿ ಸುಂದರ ಪ್ರತಿಮೆಗಳು ಹಾಗು ವರ್ಣಚಿತ್ರಗಳೂ ಇವೆ. ಮುಂದೆ ಉತ್ತರ ಪ್ರದೇಶ ಸರಕಾರದ ರತ್ನ-ಕಲ್ಲು-ಮಣಿಗಳು ಮಾರುವ ಒಂದು ಅಂಗಡಿಗೆ ಹೋದೆವು. ನಮ್ಮ ಗುಂಪಿನವರು ಯಾರೂ ಅಲ್ಲಿ ಸ್ಪಟೀಕಾ ಮಾಲೆ, ರುದ್ರಾಕ್ಷಿ ಮಾಲೆ, ನವರತ್ನ ಮಾಲೆ, ಸ್ಪಟಿಕಾ ಶಿವಲಿಂಗ, ಇತ್ಯಾದಿಗಳನ್ನು ಕೊಳ್ಳಲಿಲ್ಲ. ಇಲ್ಲಿ ಒಂದು "ಕಾಲಿ ಕಮ್ಲಿ ಬಾಬಾ" ಆಶ್ರಮವೆಂಬ ಒಂದು ಆಶ್ರಮವನ್ನು ನೋಡಿದೆವು. 
      
ನಾನು ಓದಿದ ಒಂದು ಪುಸ್ತಕದ ಕುರಿತು ಹೇಳಲೇಬೇಕು. ‘ಲಿವಿಂಗ್ ವಿಥ್ ದಿ ಹಿಮಾಲಯನ್ ಮಾಸ್ಟರ್ಸ’ ಹಿಮಾಲಯದ ಸನ್ಯಾಸಿ, ಸ್ವಾಮಿ ರಾಮರು ಬರೆದ ಹಿಮಾಲಯ ಮಹಾತ್ಮರೊಂದಿಗೆ ಒಡನಾಡಿದ, ಸ್ವಾನುಭವದ ಪುಸ್ತಕದಲ್ಲಿ ಅತೀಂದ್ರಿಯ ಶಕ್ತಿಯ ಬಾಬಾಗಳ ಪವಾಡಗಳನ್ನು ನೂರಾರು ಸಂಖ್ಯೆಯಲ್ಲಿ ಅದರಲ್ಲಿ ಪ್ರಸ್ತುತ ಪಡಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಈ ಕ್ಷಣಕ್ಕೆ ನೆನಪಿಗೆ ಬರುತ್ತಿರುವುದು ಯಾವುದೆಂದರೆ, ಸ್ವಾಮಿ ರಾಮ ಹಾಗೂ ಇನ್ನಿತರ ಶಿಷ್ಯರನ್ನು ಪುಷ್ಪ ಕಣಿವೆಯೊಂದರಲ್ಲಿ ಕಂಬಲ್ ಬಾಬಾ ಎಂಬ ಸಾಧು ಕರೆದುಕೊಂಡು ಹೋಗುತ್ತಿದ್ದಾಗ, ಜಪಾನೀ ಶಿಷ್ಯನೊಬ್ಬನು ಮನದಲ್ಲಿ ಅಲೋಚಿಸುತ್ತ, ‘ಇವನೆಂತಹ ಹುಚ್ಚನಂತಿರುವ ಈ ಸಾಧುವನ್ನು ನಾವೊಳೆ ಬೆನ್ನು ಹತ್ತಿರುವೆವಲ್ಲ, ಇವನೆಂಥ ಸಾಧು.’ ಎಂಬಿತ್ಯಾದಿ ಸಂಶಯ ಪಟ್ಟು ಯೋಚಿಸುತ್ತಿದ್ದುದು, ಬಾಬಾಗೆ ಗೊತ್ತಾಗಿ ನೀನು ಹೀಗೆ ಯೋಚಿಸುತ್ತಿರುವೆ, ಎಂದು ಹೇಳಿ, ನಿನಗೆ ಈ ಕಂಬಳಿ ನಡುಗುವಂತಹ ಚಳಿ ಬರಲಿ ಎಂದು ತನ್ನ ಕಂಬಳಿಯನ್ನು ಮೇಲೆ ಎಸೆಯುತ್ತಲೇ ಕಂಬಳಿ ಮೇಲೆಯೇ ನಿಂತು ನಡುಗತೊಡಗುತ್ತದೆ, ಅದು ನಡುಗಿದಂತೆ ಜಪಾನೀ ಶಿಷ್ಯನಿಗೆ ವಿಪರೀತ ನಡುಕ ಶುರುವಾಗಿ ಒದ್ದಾಡತೊಡಗುತ್ತಾನೆ ಮುಟ್ಟಿ ನೋಡಿದರೆ ಅವನ ಮೈ ಬೆಂಕಿಯಂತೆ ಸುಡಲಾರಂಭಿಸಿತಂತೆ, ಮತ್ತೆ ಗುರುಗಳನ್ನು ಪರಿಪರಿಯಾಗಿ ಅವನ ಪರವಾಗಿ ಪ್ರಾರ್ಥಿಸಿಕೊಂಡ ನಂತರ ಅವರು ಕಂಬಳಿಯನ್ನು ಹಿಂತೆಗೆದುಕೊಂಡರಂತೆ! ….’ವಕ್ತ್ ಕೆ ಸಿತಮ್ ಕಮ್ ಹಸೀಂ ನಹೀಂ’ ….ಕಾಲರೌದ್ರದೊಳು ಇನ್ನೂ ಏನೇನು ಹುದುಗಿದೆಯೋ…….ಅಲ್ಲವೇ?.  ಈ ಕಂಬಲ್ ಬಾಬಾನ ಆಶ್ರಮವೇ ಹೃಷಿಕೇಶದಲ್ಲಿರುವುದು. 
     
ಈ ಸ್ಥಳದಲ್ಲಿ ಕೇದಾರಕ್ಕೆ ಹೊರಟ ಪಾಂಡವರು ವಿಶ್ರಮಿಸಿಕೊಂಡಿದ್ದರಂತೆ. ಹೃಷೀಕೇಶದಲ್ಲಿ ದಿನನಿತ್ಯವೂ ಸುಮಾರು ನಾಲ್ಕು ಸಾವಿರ ಸಾಧು ಸನ್ಯಾಸಿಗಳಿಗೆ ಇಲ್ಲಿಯ ಅನೇಕ ಧರ್ಮಶಾಲೆಗಳಲ್ಲಿ ಉಚಿತವಾಗಿ ಊಟ ಹಾಕುತ್ತಾರಂತೆ. ಎಲ್ಲ ವಿವರಿಸಿ ವಾಪಸು ಒಂದು ಗಂಟೆಯಲ್ಲಿ ವಾಹನದ ಬಳಿ ಬಿಟ್ಟರು. ನಮ್ಮ ಸಾರಥಿ ಬರುವವರೆಗೂ ಕಾದು ಹರಿದ್ವಾರಕ್ಕೆ ಬಂದೆವು. ಅಲ್ಲಿ ಬೇರೆ ಎರಡು ಬಸ್ ಜನ. ಕೊಚ ಕೊಚ ಕುಂಯಿ ಕುಂಯಿ.
    
ಹರಿದ್ವಾರದಲ್ಲಿ ಪಾವನ ಧಾಮ ನೋಡಿದೆವು. ಸಂಪೂರ್ಣವಾಗಿ ಗಾಜಿನಿಂದಲೇ ನಿರ್ಮಿಸಲಾಗಿರುವ ಪಾವನ ಧಾಮ ಒಂದು ಆಧುನಿಕ ದೇವಾಲಯವಾಗಿದ್ದು ತನ್ನ ಅದ್ಭುತ ದೃಶ್ಯಗಳಿಂದಾಗಿ ಆಕರ್ಷಿಸುತ್ತಿದೆ. ಎಲ್ಲಾ ಉತ್ತರ ಭಾರತದ ರೀತಿಯ ಮೂರ್ತಿಗಳು ಗಣೇಶ, ಕೃಷ್ಣ, ರಾಧಾ, ದುರ್ಗಾ, ಎಲ್ಲಾ ಅಲಂಕೃತ ಮೂರ್ತಿಗಳನ್ನು ಗಾಜಿನ ದೊಡ್ಡ ದೊಡ್ಡ ಮಂಟಪಗಗಳಲ್ಲಿ ಜೋಡಿಸಿದ್ದಾರೆ. ಗಾಜಿನಲ್ಲಿ ಸಾಲಾಗಿ ಅವುಗಳ ಪ್ರತಿಬಿಂಬ ಕಾಣುತ್ತವೆ. ಅದನ್ನು ನೋಡಲು ಎರಡು ಕಣ್ಣು ಸಾಲದು. ಮಾಯಾ ದೇವಿ ಮಂದಿರ, ದಕ್ಷ ಮಹಾದೇವ ಮಂದಿರ, ನೀಲ ಧಾರಾ ಪಕ್ಷಿ ವಿಹಾರ, ಭೀಮ್ಗೋಡಾ ಕೆರೆ, ಜೈರಾಮ್ ಆಶ್ರಮ, ಸಪ್ತರ್ಷಿ ಆಶ್ರಮ ಮತ್ತು ಸಪ್ತ ಸರೋವರ, ಪರಡ್ ಶಿವಲಿಂಗ, ಸುರೇಶ್ವರಿ ದೇವಿ ಮಂದಿರ ಭಾರತ ಮಾತಾ ಮಂದಿರಗಳನ್ನು ಹೊರಗಿನಿಂದಲೇ ನೋಡಿದ್ದು. ಮತ್ತೊಮ್ಮೆ ಹರ ಕೀ ಪೌಡಿಯ ಆರತಿ ಹಾಗೂ ಹೆಚ್ಚಿನ ಖರೀದಿಗಳಾಯ್ತು. ಬೆಂಗಳೂರಿನ ನಮ್ಮ ಅರಮನೆ ಬಿಟ್ಟು, ಹರಿದ್ವಾರದ ಬಡೇ ಹನುಮಾನ ಮಂದಿರದಲ್ಲಿ, ಒಂದು ಅರೆ ಮನೆ ಮಾಡಿ ಹೆಚ್ಚಿನ ಲಗೇಜಗಳನ್ನು ಅಲ್ಲಿಯೇ ಇಟ್ಟು ಬದರಿಗೆ ಹೊರಟೆವು. ಅದು ಹೋಂ ಅವೇ ಫ್ರಂ ಹೋಂ.
    
ಮರುದಿನ ಬೆಳಿಗ್ಗೆ 5 ಗಂಟೆಗೆ ಸರಿಯಾಗಿ ಬದರಿಗೆ ಹೊರಡುವುದೆಂದರೂ, ಗಾಡಿ ಹೊರಟಾಗ 6 ಗಂಟೆ.  ನಮಗಿಂತ ಮೊದಲೇ ಬಡೇ ಹನುಮಾನ ಮಂದಿರದಲ್ಲಿದ್ದ ಆ ಎರಡೂ ಬಸ್ ನವರೂ ಕೊಚ ಕೊಚ ಕುಂಯಿ ಕುಂಯಿ ಹೊರಟಾಗಿತ್ತು. ಬಹಳ ಕಿರಿದಾದ ರಸ್ತೆ. ಒಂದೆಡೆ ಆಕಾಶದೆತ್ತರ ಪರ್ವತ ಶ್ರೇಣಿಗಳು. ಇನ್ನೊಂದೆಡೆ ಪಾತಾಳಕ್ಕೆ ಕರೆದೊಯ್ಯುವಂತಹ ಭೂತಲ. ಇದೊಂದು ರುದ್ರರಮಣೀಯ ಪ್ರಕೃತಿ ದರ್ಶನ. ದಾರಿಯುದ್ದಕ್ಕೂ ಯಾತ್ರಿಕರು "ವಿಶಾಲ ಬದ್ರಿನಾಥ್ ಕಿ ಜೈ" ಎಂದು ಉಧ್ಗಾರ ಮಾಡುತ್ತಿರುತ್ತಾರೆ. ಉಕ್ಕಿ, ಚಿಮ್ಮಿ, ಹರಿದುಹೋಗುವ ಅಲಕ್ನಂದಾ ನದಿ, ಎಲ್ಲೆಡೆ ಗಗನಕ್ಕೇರಿದ ಬೃಹತ್ ಪರ್ವತಗಳು, ಹಾಗು ಮನಮಿಡಿಯುವ ಪ್ರಕೃತಿ ಸೌಂದರ್ಯದ ದೃಶ್ಯಗಳ ಕತೆಯಾಗಿತ್ತು.ಬೆಟ್ಟ ಗುಡ್ಡಗಳು, ತೀಕ್ಷ್ಣ ತಿರುವುಗಳು, ಪಕ್ಕದಲ್ಲಿ ರಭಸದಿಂದ ಹರಿಯುವ ನದಿ. ದೇವ ಪ್ರಯಾಗ ಬ್ಯಾಸಿ ರಸ್ತೆಯುದ್ದಕ್ಕೂ ರಾಕ್ಷಸ ಪರ್ವತಗಳ ಇಡೀ ಖಂಡಗಳೇ ತುಂಬಿ ಹೋಗಿದ್ದವು. ಆದಾಗ್ಯೂ ರಸ್ತೆಯು ಸಂಚಾರ ಯೋಗ್ಯವಾಗಿತ್ತು. 
      
ಬ್ಯಾಸಿಯಲ್ಲಿ ಎಲ್ಲರೂ ಪರಾಠ ಮೊಸರು ಚನ್ನಾ ತಿಂದೆವು. ರಸ್ತೆಯು ಹೆಚ್ಚಾಗಿ ಬೆಟ್ಟಗಳೊಳಗಿಂದ ನದಿಯನ್ನಾಲಿಸಿ ಹೋಗುತ್ತಿದ್ದರೂ ಎಲ್ಲೆಡೆ ಈ ಸೌಲಭ್ಯವಿರಲಿಲ್ಲ. ಹಲವಾರು ಕಡೆ ಅಪಾರ ಪರ್ವತಗಳನ್ನು ಒಂದು ಕಡೆಯಿಂದ ಹತ್ತಿ ಹೋಗಿ ಇನ್ನೊಂದು ಕಡೆಯಿಂದ ಇಳಿಯಬೇಕಾಗಿತ್ತು. ಎಂಥವರಿಗೂ ಆತಂಕ ತರಿಸುವ ಸಾಹಸ  ಅದು. ಪ್ರಪಂಚದ ಕೊನೆಗೆ ಹೋದ ಹಾಗಿತ್ತು – ಮೈಲಿಗಟ್ಟಲೆ ಜನಸಂಚಾರವಿಲ್ಲ, ಬೃಹತ್ ಪರ್ವತಗಳ ಹಾಗೂ ರೌದ್ರ ನದಿಯ ಮಧ್ಯೆ ಸಿಕ್ಕ ಅತೀ ಸಣ್ಣದಾದ ಒಂದು ರಸ್ತೆ, ಆ ರಸ್ತೆಯ ಮೇಲೆ ಒಂದು ಪುಟ್ಟ ಬಸ್. ಬಸ್ ಒಳಗಿನ ಜನ ನಾವು. ಲೋಕದ ಅಪಾರತೆ ತಿಳಿಯಬೇಕಾದರೆ, ಅನುಭವಿಸಬೇಕಾದರೆ ಅಲ್ಲೊಮ್ಮೆ ಹೋಗಬೆಕು. 
    
ಬದರೀನಾಥವು ಭಾರತ ಮತ್ತು ಚೈನಾ ದೇಶಗಳ ಗಡಿ ಪ್ರದೇಶದಲ್ಲಿರುವುದರಿಂದ ಹಾಗು ಜೋಶೀ ಮಠದಿಂದ ಬದರೀನಾಥದ ರಸ್ತೆ ಅತೀ ಚಿಕ್ಕದಾದ್ದರಿಂದ ಇಲ್ಲಿಯ ವಾಹನಗಳ ಓಡಾಟದ ನಿಯಂತ್ರಣ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ (ಬಿ.ಎಸ್.ಎಫ್) ಕೈಯಲ್ಲಿ ಕೊಡಲಾಗಿದೆ. ಬಿ.ಎಸ್.ಎಫ್ ಒಂದು ಗೇಟ್ ಪದ್ಧತಿಯ ವ್ಯವಸ್ಥೆ ಮಾಡಿದ್ದಾರೆ. ದಿನಕ್ಕೆ ಎರಡು ಬಾರಿ ಸಣ್ಣ ಸಮಯ-ಕಿಟಕಿಯಲ್ಲಿ ಕೆಳಗಿನಿಂದ ಮೇಲಕ್ಕೆ ವಾಹನಗಳನ್ನು ಬಿಡುತ್ತಾರೆ. ವಾಹನಗಳು ಹೋದ ನಂತರ ಗೇಟ್ ಮುಚ್ಚುತ್ತಾರೆ. ಈ ಸಮಯದಲ್ಲಿ ಮೇಲಿನ ಗೇಟ್ ಸಹ ಮುಚ್ಚಲಾಗಿರುತ್ತದೆ, ರಸ್ತೆಯ ಮೇಲೆ ಕೇವಲ ಕೆಳಗಿನಿಂದ ಮೇಲೆ ಹೋಗುವ ವಾಹನಗಳು ಓಡುತ್ತವೆ. ಎಲ್ಲ ವಾಹನಗಳು ಮೇಲೆ ಬದರೀನಾಥವನ್ನು ತಲುಪಿದ ನಂತರ ಮೇಲಿನ ಗೇಟ್ ತೆಗೆಯುತ್ತಾರೆ. ಆಗ ವಾಹನಗಳು ಮೇಲಿನಿಂದ ಕೆಳಕ್ಕೆ ಮಾತ್ರ ಬರುತ್ತವೆ. ಎದುರು ಬರುವ ವಾಹನಗಳೆಲ್ಲ ಕೆಳಗೇ ನಿಂತಿರಬೇಕು. ಒಂದು ಗೇಟ್ ತಪ್ಪಿದರೆ ಮುಂದಿನ ಗೇಟ್ಗೆ ಕಾಯಬೇಕು. ಮೇಲೆ ಹಾಗು ಕೆಳಗೆ ಎರಡೂ ಕಡೆಗಳಿಂದ ದಿನಕ್ಕೆ ಎರಡು ಬಾರಿ ಗೇಟ್ ತೆಗೆಯುತ್ತಾರೆ. ಮಧ್ಯದಲ್ಲಿ ಪೀಪಲ್ ಕೋಟೆ ಎಂಬಲ್ಲಿ ಊಟ ಮಾಢಿದೆವು. ತುಸು ದುಬಾರಿ. ಸಾಮಾನ್ಯ ಊಟ. ಆದರೂ ಹಸಿದ ಹೊಟ್ಟೆಯ ಚಿಂತೆ ತಪ್ಪಿಸಿತು. ನಮ್ಮ ಗುರಿ ಜೋಶೀಮಠವನ್ನು (ಜ್ಯೋತಿರ್ಮಠ) ಕೊನೆಯ ಗೇಟ್ ಮುಚ್ಚುವ ಮುನ್ನ ಸೇರುವುದಾಗಿತ್ತು. ಆದ್ದರಿಂದ ಹರಿದ್ವಾರದಲ್ಲಿಯೇ ಚೆಕ್ ಇನ್ ಮುಗಿಸಿ, ಛಿeಡಿಣiಜಿiಛಿಚಿಣe oಜಿ ಛಿಟeಚಿಡಿಚಿಟಿಛಿe ರೆಡಿ ಮಾಡಿಕೊಂಡಿದ್ದೆವು.  ಮಧ್ಯಾಹ್ನ ಊಟಕ್ಕೊಂದು ಕಡಿಮೆ ಸಮಯದ ನಿಲುವಿನ ನಂತರ ಮತ್ತೆ ಸಾಗಿದೆವು. 
    
ಗೇಟ್ ತೆರೆಯುವ ಸ್ವಲ್ಪ ಮುಂಚೆ ಜೋಶೀಮಠವನ್ನು ಸೇರಿ ಕಾಯ್ದು ಕುಳಿತೆವು. ನಾಲ್ಕು ಘಂಟೆಯ ಗೇಟ್ ಸಿಕ್ಕಿತು. ಇನ್ನು ಬದರೀನಾಥಕ್ಕೆ ಸುಮಾರು 45 ಕಿಲೋಮೀಟರ್ಗಳಿದ್ದವು. ನಾವು ಮುಂದುವರಿದಂತೆ ರಸ್ತೆ ಇನ್ನು ಹೆಚ್ಚು ಅಪಾಯಕಾರಿಯಾಗಿ ಕಾಣಹತ್ತಿತು. ದೊಡ್ಡ ದೊಡ್ಡ ಮಂಜುಗಡ್ಡೆಗಳು ರಸ್ತೆಯ ಪಕ್ಕದಲ್ಲೇ ಬಿದ್ದಿದ್ದವು. ಸಣ್ಣ ತೊರೆಗಳು ರಸ್ತೆಯ ಮೇಲೇ ಹರಿದು ಹೋಗುತ್ತಿದ್ದವು. ಅಲ್ಲಲ್ಲೆ ಅಲಕ್ನಂದಾ ನದಿಯು ಪೂರ್ಣ ಹೆಪ್ಪುಗಟ್ಟಿತ್ತು. ಮೇಲೆ ಮಂಜುಗಡ್ಡೆಗಳಿಂದ ಮುಚ್ಚಿಹೋಗಿದ್ದರೂ, ಅಲ್ಲಲ್ಲೆ ಒಡೆದು/ಕರಗಿ ಹೋದ ಮಂಜಿನ ಮಧ್ಯೆ ನೀರು ಹರಿಯುತ್ತಿರುವುದು ಕಾಣಿಸುತ್ತಿತ್ತು. ನೋಟಗಳು ಒಟ್ಟಿಗೆ ಹೃದಯಸ್ಪರ್ಶಿ ಹಾಗು ಭಯಂಕರವಾಗಿದ್ದವು. ಒಂದು ಬೆಟ್ಟವನ್ನು ಏರುವುದು, ನಂತರ ಇಳಿಯುವುದು, ಅಲ್ಲೊಂದು ಸೇತುವೆ, ಅದು ಇನ್ನೊಂದು ಬೆಟ್ಟಕ್ಕೆ ದಾರಿ. ತುಂಬಾ ಉತ್ಸಾಹದಿಂದ ಹಿಮ ಮುಚ್ಚಿದ ಬೆಟ್ಟಗಳಿಗೆ ಕಾದು ಕಾದು ಕೊನೆಗೆ ಹೊತ್ತು ಕುಂದುತ್ತಿದ್ದ ದಿನದ ಬೆಳಕಲ್ಲಿ ಬದರೀನಾಥ ಊರನ್ನು ತಲುಪಿದೆವು.  ಶ್ರೀ ವಾದಿರಾಜರು ಇಡೀ ಪರ್ವತದ ಹಾದಿಯನ್ನು ಕಾಲ್ನಡಿಗೆಯಿಂದಲೇ ಉಪಕ್ರಮಿಸಿದರು. ವಾದಿರಾಜರು ತಮಗೆ ದಾರಿಯಲ್ಲಿ ಸಿಕ್ಕಿರುವ ಷಟ್ ಪ್ರಯಾಗಗಳನ್ನು ತೀರ್ಥ ಪ್ರಬಂಧದಲ್ಲಿ ಹೀಗೆ ವರ್ಣಿಸಿದ್ದಾರೆ." ಷಟ್ ಪ್ರಯಾಗಃ ಸ್ವವೇಗೇನ ಕಾಮಾದ್ಯರಿಮಹೀರುಹಃ ಉನ್ಮೂಲಯಂತು ಪಾಪಾಖ್ಯಂ ಪಂಕಂ ಪ್ರಕ್ಷಾಲಯಂತು ನಃ ||           
     
ಇಲ್ಲಿ ಪ್ರಯಾಗಗಳು ಎಂದರೆ ಎರಡು ನದಿಗಳು ಸೇರುವ ಸ್ಥಳ. ಈ ಆರು ಪ್ರಯಾಗಗಳು ತಮ್ಮದೇ ವೇಗದಿಂದ ಪ್ರವಹಿಸುತ್ತ ದಾರಿಯಲ್ಲಿರುವ ವೃಕ್ಷಗಳನ್ನು ಹೇಗೆ ಉರುಳಿಸಿಕೊಂಡು ಹರಿಯುತ್ತಿರವೆಯೋ ಹಾಗೆಯೇ ಈ ಆರು ಪ್ರಯಾಗಗಳ ಅಭಿಮಾನಿ ದೇವತೆಗಳು ಕಾಮಾದಿ ಷಡ್ವೈರಿಗಳನ್ನು ನಿಗ್ರಹಿಸಿ ನಮ್ಮ ಪಾಪದ ಕೆಸರನ್ನು ತೊಳೆಯಲಿ.

1. ದೇವಪ್ರಯಾಗ:- ಬದರಿಗೆ ಹೋಗುವ ಮಾರ್ಗದಲ್ಲಿ ಹೃಷೀಕೇಶದಿಂದ ಸುಮಾರು 7೦ ಕಿ.ಮೀ ದೂರದಲ್ಲಿದೆ.ಇಲ್ಲಿ   ಭಾಗೀರಥಿ ಮತ್ತು ಅಲಕನಂದಾ ನದಿಗಳ ಸಂಗಮ ಇದೆ.      
2. ರುದ್ರಪ್ರಯಾಗ:- ದೇವಪ್ರಯಾಗದಿಂದ ಕಾಲ್ನಡಿಗೆಯಿಂದ ಸುಮಾರು 8೦ ಕಿ.ಮೀ ದೂರದಲ್ಲಿದೆ. ಇಲ್ಲಿ ಅಲಕನಂದಾ ಮತ್ತು ಮಂದಾಕಿನೀ ನದಿಗಳ ಸಂಗಮ ಇದೆ.
3. ಸ್ಕಂದಪ್ರಯಾಗ:- ರುದ್ರಪ್ರಯಾಗದಿಂದ ಕಾಲ್ನಡಿಗೆಯಿಂದ ಸುಮಾರು 30 ಕಿ.ಮೀ ದೂರದಲ್ಲಿದೆ.ಇಲ್ಲಿ ಪಿಂಡರಗಂಗಾ ಮತ್ತು ಅಲಕನಂದಾ ನದಿಗಳ ಸಂಗಮ ಇದೆ. ಕರ್ಣನು ತಪಸ್ಸು ಮಾಡಿದ ಸ್ಥಳ.
4. ನಂದಪ್ರಯಾಗ:- ಸ್ಕಂದ ಪ್ರಯಾಗದಿಂದ ಕಾಲ್ನಡಿಗೆಯಿಂದ ಸುಮಾರು 25 ಕಿ.ಮೀ ದೂರದಲ್ಲಿದೆ.ಇಲ್ಲಿ ನಂದಾ ಮತ್ತು ಅಲಕನಂದಾ ನದಿಗಳ ಸಂಗಮ ಇದೆ.
5. ವಿಷ್ಣು ಪ್ರಯಾಗ:- ಇದು ಜೋಶೀಮಠದಿಂದ ಸುಮಾರು 3 ಕಿ.ಮೀ ದೂರದಲ್ಲಿದೇ. ಇಲ್ಲಿ ಅಲಕನಂದಾ ಮತ್ತು ವಿಷ್ಣುಗಂಗಾ ನದಿಗಳ ಸಂಗಮ ಇದೆ.
6. ಕೇಶವ ಪ್ರಯಾಗ:- ನಂದ ಪ್ರಯಾಗದಿಂದ ಸುಮಾರು 65 ಕಿ.ಮೀ ದೂರದಲ್ಲಿದೆ.ಇದು ಬದರೀ ಕ್ಷೇತ್ರದ ಹತ್ತಿರ ಇದೆ. ಇಲ್ಲಿ ಅಲಕನಂದಾ ಮತ್ತು ಸರಸ್ವತೀ ನದಿಗಳ ಸಂಗಮ ಇದೆ. 
ಪಾಂಡುಕೇಶ್ವರ – ಪಾಂಡವರು ಇಲ್ಲಿ ಹುಟ್ಟಿದ್ದಂತೆ, ಹನುಮಂತ ಹಾಗೂ ಭೀಮ ಭೆಟ್ಟಿಯಾದ ಸ್ಥಳ, 
ಶೇಷನೇತ್ರ (ಆದಿಶೇಷನ ಅಚ್ಚುಳ್ಳ ಬಂಡೆ), ಚರಣ ಪಾದುಕ (ಮಹಾವಿಷ್ಣುವಿನ ಪಾದದಚ್ಚು),  
ಪಂಚ ಕೇದಾರಗಳ ಹಾಗೆ ಪಂಚ ಬದರಿಗಳೂ ಇವೆ. ಅವು ಬದರೀ ಕ್ಷೇತ್ರ, ಆದಿ ಬದರಿ (ಕರ್ಣಪ್ರಯಾಗದ ಬಳಿ), ಭವಿಷ್ಯ ಬದರಿ, ಬೃಧ ಬದರಿ (ಎರಡೂ ಜೋಶೀಮಠದ ಬಳಿ) ಹಾಗು ಯೋಗೋಧ್ಯಾನ ಬದರಿ (ಪಾಂಡುಕೇಶ್ವರದ ಹತ್ತಿರ).
    
ಅನೇಕರು ಈ ಪ್ರತಿಯೊಂದು ಪ್ರಯಾಗದಲ್ಲಿಳಿದು ಸ್ನಾನ ಮಾಡಿಕೊಂಡು ಬದರಿನಾಥನ ದರ್ಶನ ಮಾಡುತ್ತಾರೆ. ಕೆಲವರು ಪಂಚ ಪ್ರಯಾಗ ಎನ್ನುತ್ತಾರೆ. ಬದರೀ ಕ್ಷೇತ್ರ ಎಲ್ಲ ತೀರ್ಥಕ್ಷೇತ್ರಗಳಿಗಿಂತ ಎತ್ತರದಲ್ಲಿದೆ. ಇದು ಅತ್ಯಂತ ಮನೋಹರವಾದ ಕ್ಷೇತ್ರ.  ಕ್ಷೇತ್ರ ವಿವರ. ಉತ್ತರ ದಿಕ್ಕಿನಲ್ಲಿ ಮಹಾ ಪುಣ್ಯವತಿಯಾದ ಅನೇಕ ತೀರ್ಥಕ್ಷೇತ್ರಗಳನ್ನೊಂಡಿರುವ ಸರಸ್ವತಿಯು ಪ್ರವಹಿಸುತ್ತಾಳೆ. ಇದೇ ದಿಕ್ಕಿನಲ್ಲಿ ಯಮುನೆಯೂ ಪ್ರವಹಿಸುತ್ತಾಳೆ. ಯಮುನಾ ನದಿಯ ತೀರದಲ್ಲಿ ಪ್ರಕ್ಷಾವತರಣವೆಂಬ ತೀರ್ಥ ಇದೆ. ಈ ತೀರ್ಥದಲ್ಲಿಯೇ ಬ್ರಾಹ್ಮಣರು ಸಾರಸ್ವತವೆಂಬ ಯಾಗ ಮಾಡಿ ಅವಭೃತ ಸ್ನಾನ ಮಾಡುತ್ತಾರೆ. ಇಲ್ಲಿ ಸಹದೇವನು ಒಂದು ಯಜ್ಞ ವೇದಿಕೆ ಯನ್ನು ನಿರ್ಮಿಸಿ ಅದ್ಭುತ ಯಾಗವನ್ನು ಮಾಡಿ ಇಂದ್ರನಿಂದಲೇ ಪ್ರಶಂಸೆ ಗಳಿಸುತ್ತಾನೆ. ಇಂದ್ರನ ಈ ಪ್ರಶಂಸಾ ವಚನವನ್ನು ಬ್ರಾಹ್ಮಣರು ಈಗಲೂ ಸ್ಮರಿಸುತ್ತಾರೆ. 
    
ದಕ್ಷಿಣಾಗ್ನಿ, ಗಾರ್ಹಪತ್ಯ ಮತ್ತು ಅಹವನೀಯಗಳೆಂಬ ಅಗ್ನಿತ್ರಯಗಳು ಯಮುನಾ ನದಿಯ ತೀರದಲ್ಲಿ ಸಹದೇವನಿಂದ ಲಕ್ಷೋಪಲಕ್ಷ ದಕ್ಷಿಣೆಯುಳ್ಳ ಯಾಗದ ಮೂಲಕ ಸೇವಿಸಲ್ಪಟ್ಟವು. ಈ ಯಮುನಾ ನದಿಯ ತೀರದಲ್ಲಿಯೇ ಭರತ ಚಕ್ರವರ್ತಿಯು 35 ಅಶ್ವಮೇಧ ಯಾಗಗಳನ್ನು ಮಾಡಿದನು. ಶರಭಂಗ ಮಹರ್ಷಿಯ ಆಶ್ರಮವು ಅಲ್ಲಿಯೇ ಇದೆ. ಈ ಪ್ರದೇಶದಲ್ಲಿಯೇ ಸರಸ್ವತೀ ನದಿಯು ಹರಿಯುತ್ತಿರುವುದು. ಇದರ ಸಮೀಪದಲ್ಲಿಯೇ ವೇದ- ವೇದಾಂಗ ಪಾರಂಗತರಾದ ನರ- ನಾರಾಯಣರೆಂಬ ಇಬ್ಬರು ಮಹರ್ಷಿಗಳು ಯಜ್ಞ-ಯಾಗಾದಿಗಳನ್ನು ಮಾಡಿದರು. ಜಮದಗ್ನಿ ಮಹರ್ಷಿಯು ಯಜ್ಞ ಮಾಡಿದ ಸ್ಥಳ ಇದು. ಈ ಪವಿತ್ರ ಶಿಖರಗಳಲ್ಲಿಯೇ ಗಂಗೆಯು ಕೈಲಾಸ ಶಿಖರವನ್ನು ಭೇದಿಸಿಕೊಂಡು ಭೂಲೋಕವನ್ನು ಪ್ರವೇಶಿಸುತ್ತಾಳೆ. ಭೃಗು ಋಷಿಯು ಅನೇಕ ವರ್ಷಗಳ ಕಾಲ ತಪಸ್ಸು ಮಾಡಿ ಸಿದ್ಧಿ ಹೊಂದಿದ ಜಾಗವಿದು. ಇಲ್ಲಿಯೇ ತ್ರಿಕಾಲಗಳಿಗೂ ಒಡೆಯನಾದ, ಶಾಶ್ವತನೂ, ಸರ್ವೋತ್ತಮನೂ ಆದ ಶ್ರೀಮನ್ನಾರಾಯಣನ ತ್ರಿಲೋಕ ಪ್ರಸಿದ್ದವಾದ ಪುಣ್ಯ ಪ್ರದವಾದ ಬದರಿಕಾಶ್ರಮವು ಇರುವುದು. ಇಲ್ಲಿ ಗಂಗೆಯು ಕೆಲವೆಡೆ ಉಷ್ಣೋದಕವಾಗಿಯೂ, ಕೆಲವೆಡೆ ಶೀತೋದಕವಾಗಿಯೂ ಪ್ರವಹಿಸುತ್ತಿದ್ದಾಳೆ. ಮಹರ್ಷಿಗಳು, ದೇವತೆಗಳು, ಋಷಿಮುನಿಗಳು ಈ ಪವಿತ್ರ ಕ್ಷೇತ್ರಕ್ಕೆ ಬಂದು ಶ್ರೀಮನ್ನಾರಾಯಣನನ್ನು ಆರಾಧಿಸುತ್ತಾರೆ. 
      
ಇಡೀ ಜಗತ್ತೇ ಸೂಕ್ಷ್ಮ ರೂಪದಲ್ಲಿ ದೇವ ದೇವನಾದ ಪರಮಾತ್ಮನಾದ ಶ್ರೀಮನ್ನಾರಾಯಣನ ದಿವ್ಯ ಸಾನ್ನಿಧ್ಯವಿರುವ ಈ ಬದರೀ ಕ್ಷೇತ್ರದಲ್ಲಿದೆ. ಬದರಿಯ ಹತ್ತಿರದಲ್ಲಿರುವ ನರಪರ್ವತದಲ್ಲಿ ಒಂದು ಯಜ್ಞಕುಂಡ ಇದೆ. ಇಲ್ಲಿ ಬ್ರಹ್ಮದೇವನು ಯಾಗ ಮಾಡಿದಾಗ ಹಯಗ್ರೀವ ರೂಪದಿಂದ ನಾರಾಯಣನು ಪ್ರಕಟನಾದನೆಂಬ ಕಥೆಯಿದೆ. ಪರ್ವತದಿಂದ ಐದು ಪ್ರವಾಹಗಳು ಕೆಳಕ್ಕೆ ಬೀಳುತ್ತವೆ. (ಕೆಲವರು ಹೇಳುವಂತೆ ನಾಲ್ಕು ಧಾರೆಗಳು). ಈ ಧಾರೆಗಳಲ್ಲಿ ನಾಲ್ಕು ವೇದಗಳ ಧ್ವನಿಗಳನ್ನು ಈಗಲೂ ಜ್ಞಾನಿಗಳು ಕೇಳುತ್ತಾರೆ. ಬದರೀಕ್ಷೇತ್ರವು ಸನಾತನ ಧರ್ಮಕ್ಕೆ (ಹಿಂದೂ) ಅತ್ಯಂತ ಮಂಗಳ ಹಾಗೂ ಆದರಣೀಯ ತೀರ್ಥಗಳಲ್ಲಿ ಒಂದು. ಇದು ಭೂಮಿಯ ಮೇಲೆ ಶ್ರೀ ಮಹಾವಿಷ್ಣುವಿನ ನಿವಾಸವೆಂದು ಹೇಳಲಾಗುತ್ತದೆ. ಈ ಕ್ಷೇತ್ರವನ್ನು ನಮ್ಮ ಜನ ಪ್ರಾಚೀನ ವೈದಿಕ ಕಾಲದಿಂದಲೂ ಆದರಿಸುತ್ತಾ ಬಂದಿದ್ದಾರೆಂದು ಹೇಳಲಾಗುತ್ತದೆ. ಇದನ್ನು ತಪೋಭೂಮಿಯೆಂದು, ಭೂವೈಕುಂಠವೆಂದೂ ಕರೆಯುತ್ತಾರೆ. ಪೌರಾಣಿಕ ಕಾಲದಲ್ಲಿ ಶ್ರೀ ಮಹಾವಿಷ್ಣುವು ತಪಸ್ಸು ಮಾಡಲು ಭೂಮಿಗಿಳಿದು, ಈ ಪ್ರದೇಶವನ್ನು ಆಯ್ದುಕೊಂಡನೆಂದು ಹೇಳಲಾಗಿದೆ. ಭಗವಂತನನ್ನು ಋತುಮಾನಗಳಿಂದ ಕಾಪಾಡಲು ಮಹಾಲಕ್ಷ್ಮಿಯು ಒಂದು ಬದರೀ ಮರದ ರೂಪ ತಾಳಿ ಸ್ವಾಮಿಗೆ ರಕ್ಷಣೆ ಕೊಟ್ಟಳಂತೆ. ಪ್ರಸನ್ನನಾದ ಸ್ವಾಮಿಯು ಮಹಾಲಕ್ಷ್ಮಿಗೆ ಈ ತೀರ್ಥವನ್ನು ಬದರೀ ತೀರ್ಥವೆಂದು ಕರೆಯಲಾಗುವುದೆಂದು ವರ ಕೊಟ್ಟನಂತೆ. "ಸ್ವರ್ಗ ಪೃಥ್ವಿ ಪಾತಾಳ ಲೋಕಗಳಲ್ಲಿ ನೂರಾರು ತೀರ್ಥಸ್ಥಾನಗಳಿದ್ದರೂ ಬದರೀತೀರ್ಥಕ್ಕೆ ಸಮಾನ ಬೇರಾವುದೂ ಇದ್ದಿಲ್ಲ, ಇಲ್ಲ, ಇರುವುದೂ ಇಲ್ಲ" ಎಂಬ ಪ್ರಸಿದ್ಧ ಸೂಕ್ತಿಯಿಂದ ಬದರೀನಾಥ ತೀರ್ಥದ ಮಹತ್ವವನ್ನು ಅರಿಯಬಹುದು.
    
ಈ ಉತ್ತಮ ತೀರ್ಥಸ್ಥಳದ ಲಾಭ ಪಡೆಯಲು ಮಾನವರು ಹಾಗು ದೇವತೆಗಳೆಲ್ಲರೂ ಬಂದು ನೂಕು ನುಗ್ಗುಲಾಯಿತಂತೆ. ಇದಕ್ಕೆ ಉಪಾಯವಾಗಿ ಈ ತೀರ್ಥವು ಬೇಸಿಗೆಯಲ್ಲಿ ಮಾನವರಿಗೆ ಹಾಗು ಚಳಿಗಾಲದಲ್ಲಿ ದೇವತೆಗಳಿಗೆ ಕಾದಿರಿಸಲಾಗಿದೆಯಂತೆ. ಅಂತೆಯೇ ದೇವಾಲಯವು ವರ್ಷದ ಆರು ತಿಂಗಳು ಮೇ ಇಂದ ಅಕ್ಟೋಬರ್ ವರೆಗೆ ತೆರೆದಿರುತ್ತದೆ. ಚಳಿಗಾಲದ ಉಳಿದಾರು ತಿಂಗಳು ಭಗವಂತನನ್ನು ಜೋಶೀಮಠದಲ್ಲಿ ಪೂಜಿಸಲಾಗುವುದು. ಚಳಿಗಾಲಕ್ಕೆ ದೇವಾಲಯ ಮುಚ್ಚುವ ಮುನ್ನ ತುಪ್ಪದ ದೀಪಗಳನ್ನು ಹತ್ತಿಸುವರಂತೆ. ಈ ದೀಪಗಳು ಆರು ತಿಂಗಳ ನಂತರ ದೇವಾಲಯ ಪುನಃ ತೆರೆದಾಗ ಇನ್ನೂ ಉರಿಯುತ್ತಿರುತ್ತವಂತೆ. ನಾರದ ಮುನಿಯೇ ಚಳಿಗಾಲದಲ್ಲಿ ಬಂದು ಪೂಜಿಸುತ್ತಿದ್ದರೆಂದು ಹೇಳಲಾಗುತ್ತದೆ. ನಾರದ ಮುನಿಗಳು ಈ ಕ್ಷೇತ್ರದಲ್ಲಿ ಕೇವಲ ಐದು ದಿನಗಳಲ್ಲಿ ಮುಕ್ತಿ ಪಡೆದರೆಂದು ಹೇಳಲಾಗುತ್ತದೆ. ಆ ಕಾರಣದಿಂದ ಈ ಸ್ಥಳಕ್ಕೆ ನಾರದ ಕ್ಷೇತ್ರವೆಂದೂ ಕರೆಯುತ್ತಾರೆ. ಗೌತಮ ಕಪಿಲ ಕಾಶ್ಯಪಾದಿ ಮಹಾ ಋಷಿಗಳೂ ಇಲ್ಲಿಗೆ ಬಂದಿದ್ದರೆಂದು ಹೇಳಲಾಗುತ್ತದೆ.
 


ಮುಂದುವರೆಯುವುದು….

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x