ಅದು ಥಮ್ಸಾ ನದಿಯಂದು ಹೇಳಿದರು. ಲಂಡನ್ ನಗರದ ಥೇಮ್ಸ ನದಿಯನ್ನು ನೆನಪಿಸಿಕೊಂಡು ಥಮ್ಸಾ ನದಿಯನ್ನು ನೋಡಿದೆವು. ಭಾರತದಲ್ಲಿಲ್ಲದ್ದು ಲಂಡನ್ ನಲ್ಲೇನಿದೆ. ದೇವಸ್ಥಾನದ ಸುತ್ತಲು ಹುಲ್ಲು ಚಿಕ್ಕ ಚಿಕ್ಕ ಗುಡ್ಡೆಯಾಗಿ ಬೆಳೆದಿತ್ತು. ಸೀತೆ ಭೂಮಿಯ ಒಳಗೆ ಸೇರುವ ಸಮಯದಲ್ಲಿ, ಸೀತೆಯನ್ನು ಮೇಲೆತ್ತಲು ಆಕೆಯ ಕೂದಲನ್ನು ಹಿಡಿದು ಎಳೆದರಂತೆ ರಾಮ ಲಕ್ಷ್ಮಣರು. ಅದು ಹಿಡಿ ಹಿಡಿಯಾಗಿ ಅವರ ಕೈಲ್ಲಿಯೇ ಉಳಿಯಿತಂತೆ. ಅದೇ ಈ ಹುಲ್ಲು. ಅದನ್ನು ಈಗ ದನ ಕರುಗಳೂ ತಿನ್ನಲಾರವು ಎಂದರು. ಈಗ ಕೆಲ ದಿನಗಳ ಹಿಂದೆ ಕಟ್ಟಿದ ದೇವಾಲಯವಂತೆ. ಋಷಿಯೊಬ್ಬನಿಗೆ ಕನಸಿನಲ್ಲಿ ಈ ದೇವಸ್ಥಾನದ ಬಗ್ಗೆ ತಿಳಿಯಿತಂತೆ. ಆದರೆ ಆ ಜಾಗದ ಮಾಲೀಕ ಇದನ್ನು ಒಪ್ಪದೇ, ಭೂಮಿಯನ್ನು ಕೊಡಲು ಹಿಂಜರಿದನಂತೆ, ಆದರೆ ಸುಪ್ರೀಂ ಕೋರ್ಟನಲ್ಲಿ, ಪುರಾತತ್ವ ಇಲಾಖೆಯಿಂದ ಮಾಹಿತಿ ಪಡೆದು ದೇವಸ್ಥಾನ ಕಟ್ಟಲು ಅನುಮತಿ ನೀಡಿದರಂತೆ. ಅಲ್ಲಿಯೇ ಇದ್ದ ದೊಡ್ಡ ಹನುಮಂತನ ಮೂರ್ತಿ, ಗುಹೆ ಎಲ್ಲ ನೋಡಿದೆವು. ಮೆಟ್ಟಲಿಳಿದು ಆಳದಲ್ಲಿರುವ ಗಂಗಾನದಿ ಪೂಜೆ ಮಾಡಿದೆವು. ಅಲ್ಲಿ ಪಕ್ಕದಲ್ಲೇ
ಇದ್ದ ವಾಲ್ಮೀಕಿ ಆಶ್ರಮ, ಲವ ಕುಶರ ಮೈದಾನ, ಸೀತೆ ನೆಟ್ಟ ಆಲದ ಮರ ನೋಡಿದೆವು. ಅಲ್ಲಿ ಪಕ್ಕದ ಗವಿಯಲ್ಲಿ 124 ವರ್ಷದ ಬೈರಾಗಿ ಬಾಬಾ ಇರುವುದಾಗಿ ಹೇಳಿದರು. ಅಲ್ಲೇನೂ ಹೋಗಲಿಲ್ಲ. ಇಲ್ಲಿನ ಗಂಗಾ ನದಿ ನನಗೆ ವರದಾ ನದಿಗಿಂತ ಭಿನ್ನವಾಗೇನೂ ಕಾಣಲಿಲ್ಲ. ಆದರೆ ನದೀ ಪೂಜೆ ತೃಪ್ತಿಯಾಯಿತು. ಏನೋ ಒಂದು ಉತ್ತಮ ದೇವಸ್ಥಾನ ನೋಡಿದಂತೆನಿಸಿತು.
ಅಲ್ಲಿಗೆ ಹೋಗುವಾಗ ಮತ್ತು ಬರುವಾಗ ಉತ್ತರ ಭಾರತದ ಹಳ್ಳಿಗಳ ದರ್ಶನವಾಯಿತು. ದಾರಿಯಲ್ಲಿ ರಸ್ತೆ ಬದಿ ಬಣ್ಣ ಬಣ್ಣದ ಪೇಟಾಗಳನ್ನು, ರಂಗು ರಂಗಿನ ಘೂಂಘಟ್ ಹೊದ್ದ ಮಹಿಳೆಯರು ಅಲ್ಲಲ್ಲಿ ಬರುವ ಹಳ್ಳಿಗಳಲ್ಲಿ ಗೊಂಬೆಗಳಂತೆ ಕಾಣುತ್ತಿದ್ದರು. ಒಂದು ಹತ್ತು ಇಪ್ಪತ್ತು ಕಿ ಮೀಗಳಷ್ಟು ಕ್ರಮಿಸಿರಬಹುದು, ಬರಬರುತ್ತ ಹಸಿರು ಮಾಯವಾಗತೊಡಗಿ, ಅಲ್ಲಲ್ಲಿ ಜಾಲಿ ಮರಗಳಷ್ಟೆ ಹೊಲಗಳಲ್ಲಿ ಕಾಣತೊಡಗಿದವು, ಹಾಗೆಯೇ ಮುಂದುವರೆದಂತೆ, ಬಿಸಿಲಿನಿಂದ ಒಣಗಿದ ಹುಲ್ಲಿನಂತಹ ನೆಲದಲ್ಲಿ ಅಲ್ಲಲ್ಲಿ ಜಾಲಿಗಳ ಮರಗಳಷ್ಟೆ ನಮ್ಮ ಎಡಬಲದಲ್ಲಿ, ಜೊತೆಯಲ್ಲಿ ಬರತೊಡಗಿದ್ದು. ಸ್ಥಬ್ಧ ಚಿತ್ರವೊಂದರಲ್ಲಿ ನಾವಷ್ಟೆ ಚಲಿಸುತ್ತಿರುವಂತೆ ಉದ್ದಕ್ಕೂ ಒಂದೇ ಚಿತ್ರ. ಅಲ್ಲಲ್ಲಿ ಕೆಲ ನೀರು ಇರುವ ಜಾಗದಲ್ಲಿ ಮಾತ್ರ ಸಾಸಿವೆ ಬೆಳೆಯು ತನ್ನ ಹಳದಿ ಬಣ್ಣದಿಂದ ತನ್ನ ಇರುವನ್ನು ತೋರಿಸುತ್ತಿತ್ತು. ಸುತ್ತ ಎಲ್ಲಿ ನೋಡಿದರೂ ಕರೀ ನೆಲ. ಮೈಲಿಗಟ್ಟಲೆ ಹಸಿರೇ ಕಾಣಿಸುತ್ತಿರಲಿಲ್ಲ. ಅಲ್ಲೊಬ್ಬ ಇಲ್ಲೊಬ್ಬ ರೈತರುಗಳು ಕಾಣಿಸುತ್ತಿದ್ದರು – ಮಳೆಯ ಮುನ್ನ ನೆಲ ಊಳುತ್ತ. ಅಲ್ಲೊಂದು ಇಲ್ಲೊಂದು ಪ್ರಾಣಿಗಳು ಮೇಯುತ್ತಿದ್ದವು. ಏನನ್ನು ಮೇಯುತ್ತಿರಬಹುದೆಂದು ಅಚ್ಚರಿ ಪಟ್ಟೆ – ಹುಲ್ಲಿನ ಒಂದು ದಳವೂ ಕಾಣಿಸುತ್ತಿರಲಿಲ್ಲ. ಬಡತನ ಹಾಸು ಹೊಕ್ಕಾಗಿದೆ. ಜನ ದುಡಿಮೆವಂತರು, ಧೈರ್ಯವಂತರು. ಬಹುಶಃ ಹಿಂದೆ ಪರಾಕ್ರಮಿಗಳಾದ ಅರಸರ ಆಳ್ವಿಕೆ, ನಂತರ ಅನೇಕ ಕ್ರೂರ ಠಾಕೂರರಿಗೆ ಹೆದರಿ ದೈನೇಶಿಗಳಾಗಿದ್ದಾರೆ, ಸಿಹಿ ಎಲ್ಲ ಅವರಿಗೆ ಕೊಟ್ಟು, ಕಹಿ ಪಾಲು ಮಾತ್ರವೇ ತಾವುಂಡಿದ್ದಾರೇನೋ ತಲೆತಲಾಂತರದಿಂದ. ಬಲ್ಲಿದರಿಗೂ ಬಡವರಿಗೂ ಅಂತರ ತುಂಬಾ ಇದೆ.
ಹಿಂದಿನ ದಿನ ನೋಡಲು ಆಗದಿದ್ದ ನೆಹರು ಅವರ ಭವ್ಯವಾದ ನಿವಾಸವಾದ ಆನಂದ ಭವನವನ್ನು ನೋಡಿದೆವು. ನಮ್ಮ ಸಹ ಯಾತ್ರಾರ್ಥಿಗಳಲ್ಲಿ ಕೆಲವರು ಅಲ್ಲೊಂದು ಮರದ ಕೆಳಗೆ ವಿಶ್ರಾಂತಿ ಪಡೆದರು. ಆನಂದ ಭವನದ ಎಲ್ಲಾ ಕೊಠಡಿಗಳಲ್ಲೂ ಸಂಗ್ರಹಿತ ವಸ್ತುಗಳ ಫೋಟೋ ತೆಗೆದೆವು. ಅದರ ಇತಿಹಾಸ ನೆನಪಿಸಿ ಕೊಂಡಾಗ ಅಲ್ಲಿನ ಒಂದು ಕೊನೆಯಲ್ಲಿ ಭಾರತದ, ಇತಿಹಾಸದ ಹಲವು ಮಹತ್ತರ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ಇಂದಿರಾ ಗಾಂಧಿಯವರ ವಿವಾಹ ನಡೆದ ಜಾಗ. ಅದು ನಡೆದ ಸರಳ ರೀತಿ ಎಲ್ಲವು ಓದಿದ್ದು ನೆನಪಿಗೆ ಬಂದಿತು. (ಈ ಎಲ್ಲಾ ಫೋಟೋಗಳೂ ಅಲ್ಲಿವೆ.) ಈ ನಿವಾಸವನ್ನು ದೇಶಕ್ಕೆ ಸಮರ್ಪಿಸಿಕೊಟ್ಟ ಇಂದಿರಾ ಗಾಂಧಿಯವರ ಪತ್ರ- ಎಲ್ಲವು ಮನಮಿಡಿಯುವಂತಿತ್ತು. (ತ್ಯಾಗದ ಮಹತ್ವವನ್ನು ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಂದ ಮಾತ್ರ ಅರಿಯಲು ಸಾಧ್ಯ.) ಮಂಜುಳ ಒಬ್ಬ ಅತ್ಯುತ್ತಮ ಟೀಚರಾದ್ದರಿಂದ, ತಮ್ಮ ಶಾಲೆಯ ಮಕ್ಕಳಿಗೆ ವಿವರಣೆ ಹೇಳಲು, ನಾವು ಹೋದ ಪ್ರತಿಯೊಂದೆಡೆ ಫೋಟೋಗಳನ್ನು ಕೊಂಡುಕೊಳ್ಳುತ್ತಿದ್ದರು. ಇಲ್ಲಿ ಕೂಡಾ ಅಲಹಾಬಾದ್ ನ ವಿವರಣೆಯ ಎರಡು ಸೆಟ್ ಫೋಟೋ ಖರೀದಿಸಬಯಸಿದರು. ಅದೇಕೋ ಮನಸ್ಸು ಬದಲಾಯಿಸಿ, ಒಂದೇ ಸೆಟ್ ಪೋಟೋ ಖರೀದಿಸಿದರು. ಮುಂದೆ ಬಸ್ ನಲ್ಲಿ ನೋಡಿದರೆ ಅದು ಇಂಡಿಯನ್ ಪೀನಲ್ ಕೋಡ್ ನ ಮಾಹಿತಿಯಾಗಿತ್ತು. ಎಲ್ಲರೂ ಅವರನ್ನು ರೇಗಿಸಿದೆವು.
ಅಂದು ಏಕಾದಶಿಯಾಗಿದ್ದರಿಂದ, ಫಲಾಹಾರವನ್ನು ಮುಗಿಸಿ, ಸಾಯಂಕಾಲ 5 ಗಂಟೆಯ ಟ್ರೇನ್, ಸಂಗಮ್ ಎಕ್ಸಪ್ರೆಸ್ ನಲ್ಲಿ ಹರಿದ್ವಾರದ ಕಡೆ ಹೊರಟೆವು. ಸಂಗಮ್ ಎಕ್ಸಪ್ರೆಸ್ ನಮ್ಮ ಎಕ್ಸಪ್ರೆಸ್, ಅದರ ಬೋರ್ಡ ಮುಂದೆ ನಿಂತೊಂದು ಫೋಟೋ ಬೇಕಾಗಿತ್ತು. ರೈಲು ನಿಲ್ದಾಣದಲ್ಲಿ, ಹಮಾಲಿಗೆ ಬರೀ ಲಗೇಜುಗಳನ್ನು ನಿಲ್ದಾಣದೊಳಗಿರಿಸಲು ಮಾತ್ರ ಹೇಳಿದ್ದೆವು.
ಆತ ರೈಲು ಬರುವವರೆಗೂ (ಸುಮಾರು 1 ಗಂಟೆ) ಕಾಯ್ದು, ಎಲ್ಲಾ ಲಗೇಜನ್ನೂ ಒಳಗಿರಿಸಿದ ಮೇಲೆಯೇ ತನ್ನ ಹಣ ಪಡೆದ. ಅಲ್ಲಿ ನಾವು ತಮಾಷೆಗಾಗಿ ಕೃಷ್ಣರವರ ತಲೆ ಮೇಲೆ ಸಾಧ್ಯವಾದಷ್ಟೂ ಲಗೇಜು ಇಟ್ಟು, ಅದರ ಫೋಟೋ ತೆಗೆದು ಮೋಜು ಮಾಡಿದೆವು. ನಾನೂ ಸ್ಟೈಲಾಗಿ ಲಗೇಜು ಎಳೆಯುತ್ತಾ ಒಂದು ಫೋಟೋ ತೆಗೆಸಿಕೊಂಡೆ.
ಹರಿದ್ವಾರವು ಹಿಮಾಲಯ ಪರ್ವತಗಳ ಶಿವಾಲಿಕ ಪರ್ವತ ಶ್ರೇಣಿಯ ಬುಡದಲ್ಲಿದೆ. ಪುರಾಣಗಳಲ್ಲಿ ಹರಿದ್ವಾರ ಕಪಿಲಸ್ಥಾನ, ಗಂಗಾದ್ವಾರ ಮತ್ತು ಮಾಯಾಪುರಿ ಎಂದು ಹೆಸರಿಸಲ್ಪಟ್ಟಿದೆ. ಹರ್-ಕಿ-ಪೌಡಿಯ ಶಿಲೆಯೊಂದರ ಮೇಲೆ ವಿಷ್ಣುವಿನ ಪಾದದ ಗುರುತು ಇದ್ದು ಈ ಶಿಲೆಯನ್ನು ಗಂಗಾನದಿಯು ಸದಾಕಾಲ ಸ್ಪರ್ಶಿಸುತ್ತದೆ. ಹರಿದ್ವಾರದ ಕಂಖಾಲ್ ಪ್ರದೇಶವು ಶಿವನ ಹಿಮಾಲಯದ ಕೆಳಗಿನ ವಾಸಸ್ಥಾನವೆಂದು ನಂಬಲಾಗಿದೆ. ಈ ಜಾಗವು ಗಂಗಾನದಿಯು ಗುಡ್ಡಗಾಡಿನ ಪ್ರದೇಶ ಬಿಟ್ಟು ಬಯಲು ಸೀಮೆ ಪ್ರದೇಶ ಸೇರುವ ಸ್ಥಳ. ಈ ಪವಿತ್ರ ತೀರ್ಥವನ್ನು ಯುಗ ಯುಗಾಂತರಗಳಿಂದ ನಮ್ಮ ಜನ ಆದರಣೀಯವೆಂದು ಎಣಿಸಿದ್ದಾರೆ. ಮೊದಲ ಶತಮಾನದಲ್ಲಿ ಬಂದ ಚೀನೀ ಪ್ರವಾಸಿ ಹ್ಯೂ ಯೆನ್ ತ್ಸಾಂಗ್ (ಇವನಂತೂ ಉತ್ತರ ಭಾರತದ ಎಲ್ಲಾ ಕಡೆ ಪ್ರವಾಸ ಮಾಡಿದ್ದಾನೆ. ಅದಕ್ಕಿಂತ ಹೆಚ್ಚಾಗಿ ಪ್ರವಾಸಿತ ಸ್ಥಳಗಳ ನಿಖರ ಮಾಹಿತಿಯನ್ನು ಬರೆದಿಟ್ಟಿದ್ದಾನೆ.) ಕೂಡ ಈ ತೀರ್ಥವನ್ನು ಮಾಯಾ ಪುರಿಯೆಂಬ ಇದರ ಪ್ರಾಚೀನ ಹೆಸರಿನಿಂದ ವರ್ಣಿಸಿದ್ದಾನೆ. ಭಗೀರಥನು ತನ್ನ ಪೂರ್ವಿಕರ ಶಾಪ ವಿಮೋಚನೆಗೊಳಿಸಲು ಕರೆತಂದ ಗಂಗೆಯು, ಅವರುಗಳ ಅಸ್ಥಿಗಳ ಮೇಲೆ ಹರಿದದ್ದು ಇಲ್ಲೇಯಂತೆ. ಊರ ತುಂಬ ಹಲವಾರು ಆಶ್ರಮಗಳು, ದೇವಾಲಯಗಳು ಹಾಗು ಇತರ ಪವಿತ್ರ ಸ್ಥಳಗಳಿವೆ. ಹರಿದ್ವಾರವನ್ನು ಹಿಂದೂಗಳು ಹಾಗು ಸಿಖ್ಖರು ಸಮಾನವಾಗಿ ಆದರಿಸುತ್ತಾರೆ. ಇದನ್ನು ಹಲವರು ಹರಿದ್ವಾರವೆಂದು ಕರೆದರೆ ಇನ್ನು ಹಲವರು ಹರ್ದ್ವಾರವೆಂದು ಕೂಗುತ್ತಾರೆ. ಹರಿದ್ವಾರವು ಬದರೀನಾಥ ಹಾಗೂ ಕೇದಾರನಾಥ ಎರಡು ತೀರ್ಥಗಳಿಗೂ ಹೆಬ್ಬಾಗಿಲು. ಬದರೀನಾಥ ವಿಷ್ಣುವಿನ (ಹರಿಯ) ಸ್ಥಳವಾದರೆ, ಕೇದಾರನಾಥ ಶಿವನ (ಹರನ) ಸ್ಥಾನ. ಹಾಗಾಗಿ ಈ ಎರಡು ಹೆಸರುಗಳು. ನಾನು ಸರಳತೆಗಾಗಿ ಎಲ್ಲೆಡೆ ಹರಿದ್ವಾರವೆಂದಿದ್ದೇನೆ. ಗಂಗಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಎರಡು ದೊಡ್ಡ ಆಣೆಕಟ್ಟುಗಳ ಪೈಕಿ ಭೀಮ್ಗೋಡಾ ಆಣೆಕಟ್ಟು ಹರಿದ್ವಾರದಲ್ಲಿದೆ. ಈಸ್ಟ್ ಇಂಡಿಯಾ ಕಂಪೆನಿಯ ಕಾಲದಲ್ಲಿ ಹಡಗುಗಳು ಗಂಗಾನದಿಯ ಮೂಲಕ ಹರಿದ್ವಾರವನ್ನು ತಲುಪಿ ಇನ್ನೂ ಮುಂದೆ ಟಿಹ್ರಿ ಪಟ್ಟಣದವರೆಗೆ ಸಾಗುತ್ತಿದ್ದವು. ಹರಿದ್ವಾರ ಅಂದಿನ ದಿನಗಳಲ್ಲಿ ಒಂದು ರೇವು ಪಟ್ಟಣವಾಗಿ ಪರಿಗಣಿಸಲ್ಪಡುತ್ತಿತ್ತು. ಸಮುದ್ರಮಟ್ಟದಿಂದ 249.7 ಮೀಟರ್ ಎತ್ತರದಲ್ಲಿರುವ ಹರಿದ್ವಾರದ ಉತ್ತರ ಮತ್ತು ಈಶಾನ್ಯದಲ್ಲಿ ಶಿವಾಲಿಕ ಪರ್ವತಗಳಿದ್ದರೆ ದಕ್ಷಿಣದಲ್ಲಿ ಗಂಗಾ ನದಿಯಿದೆ. ಹರಿದ್ವಾರದಲ್ಲಿ ಗಂಗೆಯ ನೀರು ಸಾಮಾನ್ಯವಾಗಿ ತಿಳಿಯಾಗಿದ್ದು ಶೀತಲವಾಗಿರುತ್ತದೆ. ಮಳೆಗಾಲದಲ್ಲಿ ಮಾತ್ರ ಪರ್ವತಗಳಿಂದ ಸಾಗಿಬರುವ ಮಣ್ಣಿನಿಂದಾಗಿ ನದಿಯ ನೀರು ರಾಡಿಯ ಬಣ್ಣಕ್ಕಿರುತ್ತದೆ. ಹಿಂದೂ ಸಂಪ್ರದಾಯದ ಪ್ರಕಾರ ಹರಿದ್ವಾರದಲ್ಲಿ ಪಂಚತೀರ್ಥಗಳಿವೆ ಅವೆಂದರೆ – ಗಂಗಾದ್ವಾರ (ಹರ್-ಕಿ-ಪೌಡಿ), ಕುಶಾವರ್ತ (ಘಾಟ್), ಕಂಖಾಲ್, ಬಿಲ್ವ ತೀರ್ಥ (ಮಾನ್ಸಾ ದೇವಿ) ಮತ್ತು ನೀಲ ಪರ್ವತ (ಚಂಡಿ ದೇವಿ).
ಹರಿದ್ವಾರದ ಮುಖ್ಯ ವೈಶಿಷ್ಟ್ಯವೆಂದರೆ ಹಿಂದೂ ವಂಶಾವಳಿಗಳು. ಇಲ್ಲಿನ ಬ್ರಾಹ್ಮಣ ಪಂಡಿತರು ತಲತಲಾಂತರ ಗಳಿಂದ ಹಿಂದೂ ಕುಟುಂಬಗಳ ವಂಶಾವಳಿಗಳನ್ನು ಕಾಪಾಡಿಕೊಂಡು ಬಂದಿದ್ದಾರೆ. ಪಂಡಾಗಳೆಂದು ಕರೆಯಲ್ಪಡುವ ಇವರು ಕುಟುಂಬಗಳ ವಂಶವೃಕ್ಷವನ್ನು ಕೈಬರಹದ ದಾಖಲೆಗಳ ರೂಪದಲ್ಲಿ ಜತನವಾಗಿಟ್ಟು ತಮ್ಮ ಮುಂದಿನ ಪೀಳಿಗೆಗೆ ವರ್ಗಾಯಿಸುತ್ತಾರೆ. ಸಾಮಾನ್ಯವಾಗಿ ಒಂದು ಜಿಲ್ಲೆಯಲ್ಲಿನ ಕುಟುಂಬಗಳ ವಂಶಾವಳಿ ಗಳನ್ನು ಒಬ್ಬ ಪಂಡಾ ನೋಡಿಕೊಳ್ಳುವರು. ದಕ್ಷಿಣ ಭಾಗವನ್ನು ಹೊರತುಪಡಿಸಿ ಭಾರತದ ಉಳಿದ ಎಲ್ಲಾ ಭಾಗದ ಹಾಗೂ ಇಂದಿನ ಪಾಕಿಸ್ತಾನ, ನೇಪಾಳ ಮತ್ತು ಬಾಂಗ್ಲಾದೇಶಗಳ ಹಿಂದೂ ಕುಟುಂಬಗಳ ವಂಶವೃಕ್ಷಗಳನ್ನು ಹರಿದ್ವಾರದಲ್ಲಿ ನೋಡಬಹುದು. ಒಬ್ಬ ವ್ಯಕ್ತಿಯು ತನ್ನ ಕುಟುಂಬದ ಹಿರಿಯರ ಬಗ್ಗೆ ಏಳು ತಲೆಮಾರುಗಳಷ್ಟು ಹಿಂದಿನ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದಾಗಿದೆ. ಯಾತ್ರಿಗಳು ಹರಿದ್ವಾರಕ್ಕೆ ಬಂದಾಗ ತಮ್ಮ ಕುಟುಂಬದ ಪಂಡಾರನ್ನು ಹುಡುಕಿ ಭೇಟಿಯಾಗಿ ಅವರಲ್ಲಿ ತನ್ನ ಕುಟುಂಬದಲ್ಲಿ ಜರುಗಿದ ವಿವಾಹ, ಜನನ, ಮರಣ ಇತ್ಯಾದಿಗಳ ಬಗ್ಗೆ ತಾಜಾ ಮಾಹಿತಿ ನೀಡಿ ವಂಶವೃಕ್ಷವು ಪರಿಪೂರ್ಣ ಮಾಹಿತಿ ಹೊಂದಿರುವಂತೆ ನೋಡಿಕೊಳ್ಳುತ್ತಾರೆ. ಎನ್ನಲಾಗುತ್ತದೆ. ಎಷ್ಡರ ಮಟ್ಟಿಗೆ ನಿಜವೋ ಗೊತ್ತಿಲ್ಲ. ಆಸಕ್ತರಿಗೆ ಮಾಹಿತಿ ಹುಡುಕಿದಲ್ಲಿ ಸಿಗಬಹುದೇನೋ? ಆದರೆ ನಮ್ಮ ದಕ್ಷಿಣದವರ ಮಾಹಿತಿ ಹುಡುಕಲು ಸಾಧ್ಯವೂ ಇಲ್ಲವಲ್ಲ.
ಹರಿದ್ವಾರದ ರೈಲು ನಿಲ್ದಾಣದಲ್ಲೇ ಒಂದು ಶಿವನ ಮೂರ್ತಿ. ಸುಂದರವಾಗಿದೆ. ಅಲ್ಲಿಂದ ಕೃಷ್ಣ ಮಠ, ಬಡೇ ಹನುಮಾನ ಮಂದಿರಕ್ಕೆ. ಅದು ಪವಿತ್ರ ಖಂಕಾಲ್ ಪ್ರದೇಶದಲ್ಲಿದೆ. ಮೊದಲೇ ಬುಕ್ ಮಾಡಿದ ಆಟೋ ಬೇರೆಲ್ಲೋ ಹೋಗಿದ್ದನಂತೆ. ನಿಮಗೆ ಬೇರೆ ಆಟೋ ಸಿಕ್ಕರೆ ಬಂದು ಬಿಡಿ ಎಂದ. ಸರಿ, ಹೇಗೂ ನಾವೆಲ್ಲ ಒಂದು ಆಟೋದಲ್ಲಿ ಆಗಲ್ಲ. ಎಂದು ಇನ್ನೊಂದು ಆಟೋಗಾಗಿ ಹುಡುಕಿದರೆ ಅವರವರಲ್ಲೇ ಜಗಳ. ಕೊನೆಗೆ ಮತ್ತೊಂದು ಆಟೋ ತಯಾರಾಗುವಷ್ಟರಲ್ಲಿ, ಮೊದಲೇ ಬುಕ್ ಮಾಡಿದ ಆಟೋದವನೂ ಬಂದ, ಹೆಚ್ಚಿನ ಎಲ್ಲಾ ಲಗೇಜಗಳೊಡನೆ ಐವರು ಅದರಲ್ಲಿ ಹೊರಟರು. ಕಡಿಮೆ ಲಗೇಜನೊಂದಿಗೆ ನಮ್ಮಲ್ಲಿ ಆರು ಜನ. ಕೃಷ್ಣ ಮಠದ ಬಡೇ ಹನುಮಾನ ಮಂದಿರ ಊರ ಹೊರಗಿದೆ. ಅಲ್ಲಿ ಎರಡು ವರ್ಷ ಹಿಂದಾದ ಮಹಾಪೂರದಿಂದ ರಸ್ತೆಯ ಕುರುಹೇ ಇಲ್ಲದಂತೆ ಮರಳು ತುಂಬಿದೆ. ನಮ್ಮ ಆಟೋ ಮುಂದೆ ಚಲಿಸಲೇ ಆಗಲಿಲ್ಲ. ಮುಂದಿನ ಆಟೋ ಹೋಗಿ ಸಾಮಾನುಗಳನ್ನು ಇಳಿಸಿ ಬಂದು ನಮ್ಮನ್ನು ಕರೆದೊಯ್ದ.
ಬಡೇ ಹನುಮಾನ ಮಂದಿರ ಇರುವ ಜಾಗದಲ್ಲಿ ಕುಂಭ ಮೇಳದಲ್ಲಿ ಅಲ್ಲಿ ಬೈರಾಗಿಗಳು ಇರುತ್ತಾರಂತೆ. ಅದಕ್ಕೆ ಬೈರಾಗಿ ಕ್ಯಾಂಪ್ ಎಂದೇ ಹೆಸರು. ಪಕ್ಕದಲ್ಲಿ ಸ್ಮಶಾನ ವಾಸಿನಿ ದೇವಿಯ ದೊಡ್ಡ ಮಂದಿರ. ಮುಂದೆಯೇ ಸ್ಮಶಾನ. ಬಡೇ ಹನುಮಾನ ಮಂದಿರ ತುಂಬಾ ಸುಂದರವಾಗಿದ್ದು, ಒಂದು ಆಶ್ರಮವಿದ್ದಂತಿದೆ. ಗಂಗಾ ನದಿಯ ಪಕ್ಕದಲ್ಲಿದ್ದು ಮುಂದೆ ಹನುಮಂತನ ದೊಡ್ಡ ಮೂರ್ತಿ ಇದೆ. ಅಲ್ಲಿ ನವಿಲುಗಳು ಎಷ್ಟು ಇವೆಯಂದರೆ ರಾತ್ರಿಯಲ್ಲ ಅವುಗಳ ಕೂಗಿನಿಂದ ಯಾರಿಗೂ ನಿದ್ರೆ ಬರಲಿಲ್ಲ. ನಾವು ಹೋದಾಗ ಮಧ್ಯಾಹ್ನವಾಗಿತ್ತು. ತುಂಬಾ ಸುಸ್ತಾಗಿತ್ತು.
ಈ ಮಂದಿರ ಊರಿಗೆ ತುಂಬಾ ದೂರದಲ್ಲಿರುವುದರಿಂದ ಜನ ಬರುವುದು ತುಸು ಕಡಿಮೆ ಎನ್ನಬೇಕು. ಬಾಥ ರೂಮ್ ಟಾಯ್ಲೆಟ್ಗಳು ಕಸಕಡ್ಡಿಯಿಂದ ತುಂಬಿ ಬ್ಲಾಕ್ ಆಗಿದ್ದವು. ನಾವು ಒದ್ದಾಡುತ್ತ ಸ್ನಾನದ ಶಾಸ್ತ್ರ ಮಾಡುತ್ತಿದ್ದರೆ, ಶಶಿಕಲ ಹಾಗೂ ಕೃಷ್ಣರವರು ಜಾಣರಾಗಿ ಗಂಗಾ ನದಿಯಲ್ಲಿ ಸ್ನಾನ ಮಾಡಿ ನಮಗಿಂತ ಮೊದಲೇ ತಯಾರಾಗಿದ್ದಾರೆ. ಗಂಗಾ ಸ್ನಾನಕ್ಕೆ ಎಂದರೆ ಹುಚ್ಚರಂತೆ ನಾನು ಒಲ್ಲೆ ಎಂದಿದ್ದೆ. ದೂರವಿರಬಹುದೆಂದು ಭಾವಿಸಿ.
ಊಟ ವಿಶ್ರಾಂತಿಯ ನಂತರ ಹರಿದ್ವಾರದ ಊರು ಸುತ್ತಲು ಹೊರಟೆವು. ಮಾನಸಾದೇವಿ ದೇವಾಲಯ ಬಿಲ್ವ ಪರ್ವತವೆಂಬ ಬೆಟ್ಟದ ಮೇಲಿದೆ. ಅಲ್ಲಿಗೆ ಹೋಗಲು ಒಂದು ಹಗ್ಗದಾರಿ (ರೋಪ್ ವೇ) ಇದೆ. ಅಲ್ಲಿ ಮತ್ತೆ ಆಟೋ ಹಿಂದು ಮುಂಧಾಗಿ ಬೆಟ್ಟಕ್ಕೆ ಹೋಗುವ ಸಮಯ ಮುಗಿದಿತ್ತು. ಸರಿ ರೈಲು ನಿಲ್ದಾಣಕ್ಕೆ ಬಂದು ಬದರಿಗೆ ಹೋಗುವ ಚೆಕ್ ಮುಗಿಸಿಕೊಂಡು, 'ಹರ್ ಕೀ ಪೌಡಿ' ಅನ್ನುವ ದೀಪಾರಾಧನೆ ಧರ್ಮಾಚರಣೆ ನೋಡಲು ಹೋದೆವು. ಹರ್ ಕೀ ಪೌಡಿ ಎಂದರೆ 'ಶಿವನ ಪಾದ' ಎಂದು. ಇದನ್ನು ಗಂಗಾ ನದಿ ತೀರದಲ್ಲಿ 'ಬ್ರಹ್ಮ ಕುಂಡ್' ಎನ್ನುವ ಸ್ಥಳದಿಂದ ನೋಡಬಹುದು. ಈ ಪುರಾತನ ಕಾಲದ ದೀಪಾರಾಧನೆಯು ದಿನನಿತ್ಯವೂ ನಡೆಯುತ್ತದೆ. ಜನರು ಪೂಜೆ ಮಾಡಿ ಹೂವು ಹಾಗು ಮಣ್ಣಿನ ದೀಪಗಳನ್ನು ಗಂಗೆಗೆ ಅರ್ಪಿಸುತ್ತಾರೆ (ಹೊತ್ತಿಸಿದ ದೀಪಗಳನ್ನು ಗಂಗೆಯಲ್ಲಿ ತೇಲಿಬಿಡುತ್ತಾರೆ). ವೇದ ಮಂತ್ರ ಗೋಷ್ಠಿ ಗಗನಕ್ಕೇರುತ್ತದೆ. ಹೂವು ಹಾಗು ದೀಪಗಳಿಂದ ಕೂಡಿದ ಈ ನದಿಯ ದೃಶ್ಯ ಅವಿಸ್ಮರಣೀಯ. ಈ ಜಾಗದಲ್ಲಿ ಗಂಗೆಯ ದೇವಸ್ಥಾನವಿದೆ. ಶ್ರೀ ವಿಷ್ಣುವಿನ ಪಾದವನ್ನು ಕೂಡ ಕಾಣಬಹುದು. ಈ ದೀಪಾರಾಧನೆ ಮುಗಿಸಿ ಪೇಟೆ ಬೀದಿಗೆ ಹೋದೆವು. ಶಾಲು, ಸ್ವೆಟರ್ರು, ಕಾಲುಚೀಲ ಇತ್ಯಾದಿಗಳನ್ನು ಕೊಳ್ಳುವುದಿತ್ತು. ಬದರಿ ಪ್ರಯಾಣದ ತಯಾರಿಗಾಗಿ. ಎಲ್ಲರೂ ಮತ್ತೆ ಗುಂಪು ಸೇರಿ, ಕೋಣೆಗೆ ಹಿಂದಿರುಗಿ ಊಟ ಮಾಡಿದೆವು.
ಗಂಗಾ ನದಿಯು ಉತ್ತರ ದಿಕ್ಕಿನಿಂದ ಹರಿದ್ವಾರಕ್ಕೆ ಅನಿಯಮಿತವಾಗಿ ಹರಿದು ಬರುತ್ತದೆ. ಹರಿದ್ವಾರದ ಸ್ವಲ್ಪ ಹಿಂದೆ ಕವಲೊಡೆದು, ಒಂದು ಕವಲು, ಮನುಷ್ಯ ಮಾಡಿದ ಕಾಲುವೆಯಾಗಿ ಊರಿಗೆ ಬರುತ್ತದೆ. ನಾವು ಹೆಚ್ಚಾಗಿ ನೋಡುವುದು ಹಾಗು ಮಧ್ಯಾಹ್ನ ಅವರು ಸ್ನಾನ ಮಾಡಿದ್ದು ಈ ಕಾಲುವೆಯಲ್ಲೇ. ಇನ್ನೊಂದು ಕವಲು ಹಾಗೆಯೇ ಅನಿಯಮಿತವಾಗಿ ಊರಾಚೆ ಮುಂದುವರೆಯುತ್ತದೆ. ಹರಿದ್ವಾರ ಊರು ಮುಗಿದ ನಂತರ ಎರಡೂ ಕವಲುಗಳು ಸೇರಿಕೊಳ್ಳುತ್ತವೆ. ಇಲ್ಲಿಯ ಇನ್ನೊಂದು ವೈಶಿಷ್ಟ್ಯವೆಂದರೆ ಸೇತುವೆಗಳು. ನದಿಯ ಎರಡೂ ಕವಲುಗಳನ್ನು ದಾಟಲು ಅಲ್ಲಲ್ಲೆ ಹತ್ತಾರು ಸೇತುವೆಗಳು ಕಾಣಿಸುತ್ತವೆ. ಭಗೀರಥ ಗಂಗೆಯನ್ನು ಭೂಮಿಗೆ ತಂದರೆ ಹರಿದ್ವಾರದ ಜನ ಕಾಲುವೆಗಳಲ್ಲಿ ಮನೆ ಮನೆಗೆ ತಂದಿದ್ದಾರೆ.
ಹರಿದ್ವಾರ ಹಿಮಾಲಯದ ಶ್ರೇಷ್ಠ ಕ್ಷೇತ್ರಗಳಲ್ಲೊಂದು. ಇದನ್ನು ಮಾಯಾಪುರಿ, ಗಂಗಾದ್ವಾರ ಮತ್ತು ಕಂಕಲ ಮೊದಲಾದ ಹೆಸರುಗಳಿಂದ ಕರೆದಿದ್ದಾರೆ. ಗಂಗೆ ತನ್ನ ಪ್ರವಹಿಸುವ ಹಾದಿಯಲ್ಲಿ ಮೊತ್ತ ಮೊದಲು ಬಯಲು ಪ್ರದೇಶ ಕಾಣೋದು ಇಲ್ಲೇ. ಹಾಗಾಗಿಯೇ ಇಡೀ ಮೈದಾನವನ್ನು ಬಳಸಿ ಬಾಚಿ ತಬ್ಬಿ ಹರಿದಿದ್ದಾಳೆ. ಒಂದು ದಡದಲ್ಲಿ ನಿಂತರೆ ಇನ್ನೊಂದು ದಡ ಕಾಣ್ಸೊಲ್ಲ. ಹೀಗಾಗಿಯೆ ಇದು ಗಂಗಾದ್ವಾರ. ಗಂಗೆ ಶಂತನುವನ್ನು ಮೋಹಿಸಿ ದೇವವ್ರತ (ಭೀಷ್ಮ)ನಿಗೆ ಜನ್ಮವಿತ್ತದ್ದು ಇಲ್ಲೇ. ಭರದ್ವಾಜರು ಘೃತಾಚಿ ಎಂಬ ಅಪ್ಸರೆಯನ್ನು ಮೋಹಿಸಿ ದ್ರೋಣಾಚಾರ್ಯರು ಜನಿಸಿದ್ದು ಇಲ್ಲಿಯೇ. ದಕ್ಷಯಜ್ಞ ನಡೆದ ಕ್ಷೇತ್ರ ಇದು. ರಾಮ ಲಕ್ಷ್ಮಣರ ಪಾದ ಸ್ಪರ್ಶ ಆದ ಭೂಮಿ. ಭರ್ತೃಹರಿ ಮುಕ್ತಿ ಕಂಡ ತಾಣ ಇದು.
ಮರುದಿನ ಬೆಳಿಗ್ಗೆ ಸ್ನಾನಕ್ಕೆ ಗಂಗಾ ನದಿಗೆ. ಸ್ನಾನ ಘಟ್ಟಕ್ಕೆ ಹೋಗಿ ನೀರನ್ನು ಮುಟ್ಟಿದೆ. ಕೊರೆಯುವ ನೀರು! ಹಿಮಾಲಯದಿಂದ ಮಂಜು ಕರಗಿ ಹರಿದು ಬರುವ ನೀರು – ಹರಿದ್ವಾರದಲ್ಲಂತೂ ವರ್ಷವಿಡೀ ಕೊರೆಯುತ್ತಿರುತ್ತದೆ. ಇಂದು ಧಾರ್ಮಿಕ ಕಾರ್ಯಕ್ರಮ. ಅದೂ ಕೃಷ್ಣ ಮಠದಲ್ಲಿ. ಗಂಗೆಯ ದಡದಲ್ಲಿ. ಆದರೆ ಬೇರೆ ಮಠ. ಹೋಗಿ ಬಂದೆವು. ಬರುವಾಗಲೇ ನಾವು ಬುಕ್ ಮಾಡಿದ ಫಣಿಕ್ಕರ್ ಟ್ರಾವೆಲ್ಸನ ಗಾಡಿ ನಮಗೆ ಹರಕೀ ಪೌಡಿಯ ಶಿವನ ಮೂರ್ತಿಯ ಹತ್ತಿರವೇ ಸಿಕ್ಕಿತು. ಅದುವರೆಗೂ ನಾವು ಓಡಾಡುತ್ತಿದ್ದ ಬಡೇ ಹನುಮಾನ ಮಂದಿರದವರು ಗೊತ್ತು ಮಾಡಿದ ವಾಹನ ಚಾಲಕ ಕೂಡಾ ರಾಜು. ಅವನು ತನ್ನ ಗಾಡಿಯನ್ನು ಚನ್ನಾಗಿ ಓಡಿಸುತ್ತಿದ್ದ. ಆದರೆ ಅದು ಅವನಿಗೆಲ್ಲಿ ಬೇಕೋ ಅಲ್ಲಿಗೆ ಮಾತ್ರ. ನಾವು ಹೇಳಿದಲ್ಲಿ ಆಲ್ಲ. ನಾವು ಎಲ್ಲಿಗೆ ಹೋಗ ಬೇಕೆಂದರೂ ಅದು ಅವನ ಮರ್ಜಿ, ನಮಗಂತೂ ನಕ್ಕೂ ನಕ್ಕೂ ಸುಸ್ತು.
ಮುಂದುವರೆಯುವುದು….