ಹಿಮಾಲಯವೆಂಬ ಸ್ವರ್ಗ (ಭಾಗ 1): ವೃಂದಾ ಸಂಗಮ್

ದೇಶ ನೋಡು ಅಥವಾ ಕೋಶ ಓದು ಅಂತಾರೆ. ಈಗೆಲ್ಲ ವರ್ಷಕ್ಕೊಂದು ಫಾರಿನ್ ಟ್ರಿಪ್ ಜಸ್ಟ ಕಾಮನ್ ಆಗಿದೆ. ಊರು ಸುತ್ತೋದು ಅಥವಾ ದೇಶ ಸುತ್ತೋದು ತುಂಬಾ ಅನುಭವಗಳನ್ನ ನೀಡುತ್ತವೆ ಅಂತನೇ ಈ ಮಾತು ಹಿರಿಯರು ಹೇಳುವುದು. ಈ ಅನುಭವಗಳನ್ನು ಪಡೆಯುವುದಕ್ಕಾಗಿಯೇ ಈಗಿನ ಕಾಲದವರಿಗಾಗಿ ಟ್ರೆಕ್ಕಿಂಗ್ ರಾಫ್ಟಿಂಗ ಎಲ್ಲಾ ಇವೆ. ಆದರೂ ಕೂಡಾ ಹಿಂದಿನ ಕಾಲದ ಪವಿತ್ರ ಯಾತ್ರೆಗಳೂ ಇನ್ನೂ ಚಾಲ್ತಿಯಲ್ಲಿವೆ. ಅಮರನಾಥ ಯಾತ್ರೆ ಮುಂತಾದವುಗಳಿಗೆ ಎಷ್ಠೋ ದಿನ ಕಾಯಬೇಕಾಗುತ್ತದೆ.  ಕಾಶೀಯಾತ್ರೆ ಎಂದರೆ ನೆನಪಾಗುವುದು, ತ್ರಿವೇಣಿಯವರು ತಮ್ಮ ಕಾಶೀಯಾತ್ರೆ ಕಾದಂಬರಿಯಲ್ಲಿ ಕಾಶೀಯಾತ್ರೆ ಮಾಡುವುಕ್ಕಾಗಿಯೇ ಅಜ್ಜಿ ಜೀವನವನ್ನು ಮುಡಿಪಾಗಿಟ್ಟಿದ್ದನ್ನೂ ಓದಿದ್ದು. ಇನ್ನು ಮದುವೆಯ ಸಂದರ್ಭದಲ್ಲಿ ನಡೆಯುವ ‘ಕಾಶೀಯಾತ್ರೆ’ ಶಾಸ್ತ್ರದ ಬಗ್ಗೆ ನಿಮಗೆಲ್ಲ ಗೊತ್ತೇ ಇರಬೇಕು. ಕಾಶೀಯಾತ್ರೆಗೆ ಹೊರಟ ವರನನ್ನು ತಡೆದು ನಿಲ್ಲಿಸಿ, ಉಪಚರಿಸಿ, ಒಲಿಸಿ ಮದುವೆ ಮಂಟಪಕ್ಕೆ ಕರೆತರುವುದು ವಾಡಿಕೆ. ಈ ಶಾಸ್ತ್ರದ ನಂತರವೇ ಕನ್ಯಾಪಿತೃ ತನ್ನ ಮಗಳನ್ನು ಆ ವರನಿಗೆ ಧಾರೆ ಎರೆದುಕೊಡುವುದು. 
    
ಹಿಮಾಲಯವು ತಂದೆ, ಗಂಗಾ ಮಾತೆ ತಾಯಿ ಎಂಬುದಾಗಿ ಭಾರತೀಯರೆಲ್ಲರಿಗೂ ಒಂದು ಪವಿತ್ರ ಭಾವನೆ ಇರುತ್ತದೆ. ಅಲ್ಲದೇ ಕಾಶೀ ಗಯಾ ಮುಂತಾದ ಕಡೆ ಮಾತಾ ಪಿತೃ ಶ್ರಾದ್ಧ ಕರ್ಮಾದಿಗಳನ್ನು ಮಾಡದೇ ಪಿತೃಗಳೆಲ್ಲ ಸ್ವರ್ಗಕ್ಕೆ ಹೋಗುವುದಿಲ್ಲ ಎಂಬ ನಂಬಿಕೆಯೂ ಎಲ್ಲರಿಗೂ ಈ ಪ್ರವಾಸಕ್ಕೆ ಪ್ರೇರೇಪಿಸುತ್ತದೆ. ಆದಾಗ್ಯೂ ನನಗೇನೂ ಈ ಬಗ್ಗೆ ಅಷ್ಟೊಂದು ವಿಶೇಷ ಆಸಕ್ತಿಯಿರಲಿಲ್ಲ. ಮಗಳ ಮದುವೆ ಮಾಡಿದ ಸ್ವಲ್ಪ ದಿನಗಳಲ್ಲಿಯೇ ಒಂದು ದಿನ ನನ್ನ ಸಹೋದ್ಯೋಗಿ ಕೃಷ್ಣರವರು ಫೋನು ಮಾಡಿ ನಾವೆಲ್ಲ ಕಾಶಿ ಬದರಿ ಮುಂತಾಗಿ ಉತ್ತರ ಭಾರತ ಪ್ರವಾಸ ಹೋಗುತ್ತಿದ್ದೇವೆ. ಆ ಗುಂಪಿನಲ್ಲಿ ನಿಮ್ಮ ಹೆಸರನ್ನೂ ಸೇರಿಸಿದ್ದೇವೆ. ನೀವೂ ಬರಲೇ ಬೇಕು ಎಂದು ಆದರ ಪೂರ್ವಕ ಒತ್ತಾಯದ ಇಂಡೆಂಟ್ ಹಾಕಿದರು. ಮುಂದೆ ಸ್ವಲ್ಪ ಹೊತ್ತಿನಲ್ಲೆ ಮಗಳು ಕೂಡಾ ಫೋನು ಮಾಡಿ “ಫೂಲೋಂಕಾ ತಾರೋಂಕಾ ಸಬಕಾ ಕೆಹನಾ ಹೈ ಏಕ ಹಜಾರೋಂಮೆ ಮೇರೆ ಮಮ್ಮಾ ಹೈ” ಎಂದೇನೂ ಹೇಳದೇ, ಡೈರೆಕ್ಟಾಗಿ, ನೀನೂ ಪ್ರವಾಸ ಹೋಗಿ ಬಾ ಎಂದು ಆರ್ಡರ್ ಮಾಡಿ ಬಿಟ್ಟಳು. ನಮ್ಮ ಬೀಗರು ಕಾಶಿಯಲ್ಲಿಯೇ ಅನೇಕ ವರ್ಷ ಬ್ಯಾಂಕಿನಲ್ಲಿ ಕೆಲಸ ಮಾಡಿದ್ದರಿಂದ, ಬೀಗಿತ್ತಿಗೆ ಉತ್ತರ ಭಾರತದ ಬಗ್ಗೆ ವಿವರ ತಿಳಿದಿತ್ತು. 

ನನಗೂ ಭಾರತದ ಈ ಪ್ರಕೃತಿಯ ತಾರತಮ್ಯದಿಂದಾದ ಸುಂದರಾತಿ ಸುಂದರ ಹಿಮಾಲಯ, ಇನ್ನೂ ಪೂರ್ತಿಯಾಗಿ ಕರಪ್ಟ ಆಗದೇ ಉಳಿದ ಹಿಮ, ಪಾಕಿಸ್ಥಾನೀಯರೆಷ್ಟೇ ಹೋರಾಡಿದರೂ ನಮ್ಮಲ್ಲಿಯೇ ಈಗಂತೂ ಸೇಫ್ ಆಗಿ ಇರುವ ಹಿಮಾಲಯದ ಭಾಗ, ಗಂಗೆಯನ್ನು ನೋಡಬೇಕೆಂಬ ಹುಕಿ ಹೊರಟಿತು. ಅಂತಹ ಅಗಾಧ ಹಿಮಾಲಯದ ಗ್ರಾಹ್ಯವೂ ಕೂಡ ಊಹಿಸಲು ಆಗದಷ್ಟು ಸಂಕುಚಿತವಾಗಿ ಇಲ್ಲಿಯ ಬದುಕಿನಲ್ಲಿ ಕಳೆದು ಹೋಗಿದ್ದೇವೆ, ಒಗ್ಗಿ ಹೋಗಿದ್ದೇವೆ, ಕುಬ್ಜರಾಗಿ ಅಲ್ಲವೇ? ಹಿಂದೆಂದೋ ಒಮ್ಮೆ, ಅಂದರೆ ಹಿಂ…ದೆಂ…..ದೋ ಒ….ಮ್ಮೆ, ಬಿಲಿಯನ್ ಟ್ರಿಲಿಯನ್ ವರ್ಷಗಳಾಯುವಿನ ಹಿಂದೆ, ಭೂ ತಾಯಿ ಕೋಪಗೊಂಡು ನಡುಗಿ, ಆಯಾಸ ಪರಿಹಾರವಾಗಿ, ನೆಲದಿಂದೆದ್ದು, ಮೇಲೆ ಬಂದು, ಇಲ್ಲಿಯೇ ಭೂಮಿಯ ಮೇಲೆ ಉಳಿದುಬಿಟ್ಟು ಸುತ್ತಲೂ ಮೈಚಾಚಿಕೊಂಡಿರುವ ಅಗಾಧ ಗಗನವನ್ನು ದಾಟಿ ಬೆಳೆದ ಮುಗಿಲ ಬಾನು ಇರಬಹುದೇನೋ ಅದು, ಕಂಡರಿಯದಷ್ಟು ವಿಶಾಲತೆಯನ್ನೇ ಚಾಚಿ, ಅದನ್ನೇ ಹೊದ್ದುಕೊಂಡಿದೆ. ಸರಹದ್ದುಗಳ ಪರಿವೆಯಿಲ್ಲ ಅದಕ್ಕೆ!. 

1

ತನ್ನ ಮೈಮೇಲೆ ಪ್ರತಿಕ್ಷಣ ಅವಿರತ ರಂಗೋಲಿ ಮೂಡಿಸುತ್ತಲೇ ಅಳಿಸಿಬಿಡುವುದನ್ನು, ಹಸಿ ಹಸಿ ಹಚ್ಚೆ ಹಾಕಿಕೊಳ್ಳುತ್ತ ಮತ್ತೊಂದಕ್ಕೆ ಮುನ್ನುಡಿಯನ್ನು ಆಗಲೇ ಬರೆದುಕೊಳ್ಳುವ ಹಿಮದ ಭಾಗವನ್ನು ಕಣ್ಣಾರೆ ಕಾಣಬೇಕಿತ್ತು. ಇಂತಹ ಬಿಸಿ ಭುಸುಗುಡುವ ದಿನಗಳಲ್ಲಿಯೇ, ಕೊರೆವ ಚಳಿಯಿರುವದನ್ನು ಪಾಪ ಅದೇಗೆ ಇರುವೆಯೋ ‘ಒಂಟಿ’ಯಾಗಿ ಎಂದು ಕೇಳಬೇಕಿತ್ತು ‘ಲೈವ್’ ಅದನ್ನೇ. ಅದರ ವಿಶಾಲತೆಯನ್ನು ಕಣ್ಣಾರೆ ಕಾಣುವ, ಅದರಲ್ಲೇಳುವ ಆ ಭೋರ್ಗರೆವ ಅಲಕನಂದಾ ಮತ್ತು ಗಂಗೆಯರ ಒಡಲಲ್ಲಿ ಓಲಾಡುವ ತೆರೆಗಳನ್ನು ಒಮ್ಮೆ ನೋಡುವ ಕಾತರ ಮೂಡಿತು ನನಗೆ, ಸರಿ. ಅವರ ಗುಂಪಿನೊಂದಿಗೆ ನಾನೂ ಗೋವಿಂದ ಎಂದೇ ಬಿಟ್ಟೆ. ಈ ಬಗ್ಗೆ ವಿಶೇಷ ತಯಾರಿ ಏನೂ ಮಾಡಿರಲಿಲ್ಲ. ಕೊನೆಗೆ ನಮ್ಮ ಈ ನಿರ್ಲಿಪ್ತತನ ನೋಡಿ, ನಮ್ಮ ಟೀಂ ಲೀಡರ್ ಆದ ಶ್ರೀ ಗುರುರಾಜ ಅವರು ಒಂದು ರವಿವಾರ ಯಾತ್ರಾರ್ಥಿಗಳನ್ನೆಲ್ಲ ತಮ್ಮ ಮನೆಗೆ ಮಧ್ಯಾನ್ಹ ಊಟಕ್ಕೆ ಕರೆದರು. ಭರ್ಜರಿ ಊಟದ ನಂತರ ಎಲ್ಲಾ 11 ಜನ ಯಾತ್ರಾರ್ಥಿಗಳ ಸಂಗಮದಲ್ಲೇ ನಾವು ಕೈಗೊಳ್ಳಬೇಕಾದ ಪ್ರವಾಸದ ವಿವರಗಳನ್ನು ವಿವರಿಸಿದರು. ಈಗ ಲಭ್ಯವಿರುವ ಇಂಟರ್ನೆಟ್ ಗಳಿಂದ ನಮ್ಮ ಪ್ರವಾಸ ಸುಲಭವಾಗಿತ್ತು. ಶ್ರೀ ಗುರುರಾಜ ಅವರು ಇಲ್ಲಿಂದಲೇ ನಾವು ಹೋಗಬೇಕಾಗಿರುವ ಊರು, ಅಲ್ಲಿಗಿರುವ ಟ್ರೇನ್ ಸೌಲಭ್ಯ, ಅಲ್ಲಿಗೆ ಟಿಕೇಟುಗಳು, ನಿಲ್ದಾಣದಿಂದ ನಾವು ತಂಗಬೇಕಿರುವ ಮಠ, ಅಲ್ಲಿಂದ ಮುಖ್ಯ ದೇವಸ್ಥಾನಕ್ಕಿರುವ ದೂರ, ಆ ಊರಿನಲ್ಲಿ ನಡೆಸಬೇಕಾದ ಧಾರ್ಮಿಕ ಕಾರ್ಯಗಳು, ಅಲ್ಲದೇ ಇವುಗಳನ್ನು ನಡೆಸುವ ಆಚಾರ್ಯರು ಎಲ್ಲಾ ವ್ಯವಸ್ಥೆ ಮಾಡಿದ್ದರು. ಶ್ರೀ ಗುರುರಾಜ ಅವರಿಗೆ ಯಾತ್ರಾರ್ಥಿಗಳೆಲ್ಲ ಅಣ್ಣನ ಮಕ್ಕಳು ಹಾಗೂ ಹೆಂಡತಿಯ ಅಣ್ಣ ತಂಗಿಯರು. ಎರಡೂ ಬಾಂಧ್ಯದವರೇ. ಇಬ್ಬರನ್ನೂ ಎಲ್ಲೂ ತೊಂದರೆಯಾಗದಂತೆ ತುಂಬಾ ಚನ್ನಾಗಿ ವ್ಯವಸ್ಥೆ ಮಾಡಿದ್ದರು. ಇದರಿಂದಾಗಿ ಸಮಯ ಹಾಗೂ ದುಡ್ಡು ಎರಡೂ ಉಳಿತಾಯವಾಗಿತ್ತು. ಅವರು ತಮ್ಮ ಪರಿಚಯವನ್ನು ಉಪಯೋಗಿಸಿ, ಪ್ರವಾಸದುದ್ದಕ್ಕೂ ಉಡುಪಿಯ ಮಠಗಳಲ್ಲಿ ವಾಸ್ಥವ್ಯಕ್ಕೆ ಅನುಕೂಲ ಮಾಡಿದ್ದು ನಮ್ಮ ಯಾತ್ರೆಯಲ್ಲಿ ಪುಣ್ಯ ಸಂಪಾದನೆಯನ್ನು ಹೆಚ್ಚಿಸಿತು. ಈ ಪ್ರವಾಸದ ಮುಂಚಿನ ಭೇಟಿ ನನಗೆ ಎಲ್ಲರ ಪರಿಚಯಕ್ಕೂ, ಪ್ರವಾಸದ ತಯಾರಿಗೂ ಅನುಕೂಲ ಒದಗಿಸಿತು. ಉಳಿದವರೆಲ್ಲ ಈಗಾಗಲೇ ಗಂಗೆ ಪೂಜೆಯ ಸಾಮಗ್ರಿ, ಮರದ ಬಾಗಿನ ಮುಂತಾದವುಗಳನ್ನು ಪ್ಯಾಕ್ ಕೂಡಾ ಮಾಡಿ ಇಟ್ಟಿರುವುದನ್ನು ಕೇಳಿ, ನನ್ನ ಆಲಸ್ಯತನ ಹಾಗೂ ನಿರ್ಲಕ್ಷತನದಿಂದ ನಾಚಿಕೆಯಾಯಿತು. ಅಜ್ಞಾನಂ ಪರಮ ಸುಖಂ ಎಂಬಂತೆ ನಾನಂತೂ ಸುಖವಾಗಿಯೇ ಇದ್ದೆ. ಅದೇ ದಿನ ನಮ್ಮ ಬೀಗರಾದ ಶ್ರೀಮತಿ ಶಶಿಕಲಾರವರು, ತಾಳ್ಮೆಯಿಂದ, ನಾವು ಹೋಗಲಿರುವ ಪ್ರತಿಯೊಂದು ಊರಿನಲ್ಲಿಯ ದೇವಸ್ಥಾನಗಳು, ಅಲ್ಲಿಗೆ ಬೇಕಾಗಬಹುದಾದ ಪೂಜೆ ಸಾಮಗ್ರಿಗಳನ್ನು ಪಟ್ಟಿ ಮಾಡಿ ಹೇಳಿದರು. ಪುಟ್ಟ ಮೊರಗಳು, ಅವುಗಳಲ್ಲಿನ ಸಾಮಗ್ರಿ, ಅಲ್ಲಿ ಪೂಜೆ ಪ್ರಸಾದಕ್ಕೆ ಎನೇನು ತೆಗೆದುಕೊಳ್ಳಬೇಕು, ಅವೆಲ್ಲ ಎಲ್ಲಿ ಸಿಗುತ್ತವೆ ಮುಂತಾಗಿ ರೆಡಿ ಫುಡ್ ಒದಗಿಸಿ, ನನ್ನ ಕಾರ್ಯ ಕಡಿಮೆಗೊಳಿಸಿದರು. ಹಾಗೂ ತಮ್ಮ ಮೆಟ್ರೊ ಕಾರ್ಡಿನಲ್ಲಿ, ಎಲ್ಲರಿಗೂ ಪ್ರವಾಸಕ್ಕೆ ಅವಶ್ಯವಿರುವ ಬ್ಯಾಗ್ ಗಳನ್ನು ಕೊಂಡುಕೊಳ್ಳಲು ಅನುಕೂಲ ಮಾಡಿದರು. ಮಗಳು ಅಳಿಯ ಪ್ರವಾಸಕ್ಕೆ ಸೂಕ್ತ ವ್ಯವಸ್ಥೆ ಮಾಡಿದರು.  

ದಿನಾಂಕ:07.05.2015 ರಂದು ಬೆಂಗಳೂರು ಸಿಟಿ ರೈಲು ನಿಲ್ದಾಣಕ್ಕೆ, ನನ್ನ ಲಗೇಜ್ ಗಳ ಜೊತೆ ಮಮ್ಮಿ ಡ್ಯಾಡಿ ಹಾಗೂ ನನ್ನನ್ನು ತಮ್ಮ ಸತೀಶ ತನ್ನ ಕಾರಿನಲ್ಲಿ ರೈಲು ನಿಲ್ದಾಣಕ್ಕೆ ನಿಗದಿತ ವೇಳೆಗೆ ಮೊದಲೇ ತಲುಪಿಸಿದ. ತನಗೆ ಆಫೀಸಿಗೆ ಸಮಯವಾಗಿದ್ದರೂ ಸಹ ನಮ್ಮೊಂದಿಗೆ ತುಸು ಹೊತ್ತು ಇದ್ದು, ಎಲ್ಲರಿಗೂ ಶುಭ ಪ್ರಯಾಣವನ್ನು ಹೇಳಿದ ನಂತರವೇ ಹೊರಟ. ಅದೇ ರೀತಿ ಮಗಳು ಅಳಿಯ ಕೂಡಾ ತಮ್ಮ ಕಛೇರಿ ವೇಳೆಯಾಗಿದ್ದರೂ ನಿಂತು ನಮಗೆಲ್ಲ ಶುಭ ಹಾರೈಸಿ, ಪ್ರವಾಸದ ಖುಷಿಯನ್ನು ಹೆಚ್ಚಿಸಿದರು. ಅಲ್ಲಿ ನೋಡಿದರೆ ಲಗೇಜ್ ಗಳ ಜಾತ್ರೆಯೇ ಇದೆ. ಇದೊಂದು ಪ್ರವಾಸದುದ್ದಕ್ಕೂ ದೊಡ್ಡ ಸಮಸ್ಯೆಯಾಗುತ್ತದೆ ಎಂಬ ಮುನ್ಸೂಚನೆಯನ್ನು ಅಲ್ಲೇ ನೀಡಿತು. ಸರಿಯಾದ ಸಮಯಕ್ಕೆ ರೈಲು ಬಂತು. ಒಂದು ವಿಶೇಷವೇನೆಂದರೆ.  ಪೂರ್ತಿ ಉತ್ತರ ಭಾರತದ ಪ್ರವಾಸದಲ್ಲಿ, ಹೆಚ್ಚಿನ ರೈಲುಗಳು ಸ್ಟಾರ್ಟಿಂಗ್ ಪಾಯಿಂಟ್ ಇದ್ದುದು ಹಾಗೂ ಒಂದನೆ ನಂಬರ ಪ್ಲಾಟ್ ಫಾರ್ಮ ನಲ್ಲಿದ್ದುದು. ಅದರಂತೆ ನಮ್ಮ ಪ್ರಯಾಣದ ಆರಂಭ ಸಂಘಮಿತ್ರ ಎಕ್ಸಪ್ರೆಸ್ ಟ್ರೇನ್ ನಂ. – 12295  ನ ಎಸ್  8 ಕೋಚ್ ನೊಂದಿಗೆ ಬೆಳಿಗ್ಗೆ ಸರಿಯಾಗಿ 9 ಗಂಟೆಗೆ ಆರಂಭವಾಯಿತು. ಗಂಡಸರೆಲ್ಲ ನಿಧಾನವಾಗಿ ಎಲ್ಲರ ಲಗ್ಗೇಜಗಳನ್ನೂ ರೈಲಿನಲ್ಲಿ ಜೋಡಿಸಿದ ಮೇಲೆ, ಹೆಂಗಸರೆಲ್ಲ ನಾವೇ ಕಷ್ಟಪಟ್ಟವರಂತೆ, ಉಶ್ ಎಂದು ಸೀಟ್ ಮೇಲೆ ಪವಡಿಸಿದೆವು. ಎಲ್ಲಾ ಬಂಧು ಮಿತ್ರರ ಶುಭ ಹಾರೈಕೆಗಳೊಡನೆ ಶುಭ ಮುಹೂರ್ತದಲ್ಲಿ ನಮ್ಮ ಕಾಶೀಯಾತ್ರೆ ಮೊದಲಿಟ್ಟಿತು.
     
ಬೆಳಿಗ್ಗೆ ಬೇಗನೇ ಹೊರಟಿರುವುದರಿಂದ ಮುಂಜಾನೆಯ ಉಪಹಾರವನ್ನು ಬಂಗಾರಪೇಟೆಯಲ್ಲಿ ಮಾಡುವುದಾಗಿ ಹೇಳಿದ್ದರು. ಬಂಗಾರಪೇಟೆ ನನ್ನ ಸಹೋದ್ಯೋಗಿ ಕೃಷ್ಣ ಇವರ ಧರ್ಮಪತ್ನಿಯಾದ ಶ್ರೀಮತಿ ಮಂಜುಳ ಇವರ ಊರು. ಅಳಿಯ-ಮಗಳು ಯಾತ್ರೆ ಹೊರಟಿರುವಾಗ ಅವರ ತಂದೆ ತಾಯಿ ಅತ್ಯಂತ ಸಂತೋಷದಿಂದ ಅಳಿಯನ ಜೊತೆ ಗೆಳೆಯ ಎಂಬಂತೆ ಅವರ ಎಲ್ಲಾ ಯಾತ್ರಾರ್ಥಿಗಳ ಉಪಹಾರದ ಹೊಣೆ ಹೊತ್ತಿದ್ದರು. ಅವರು ಎಷ್ಟು ಉಮ್ಮೇದಿನಿಂದ ಉಪಹಾರ ತಯಾರಿಸಿದ್ದರೆಂದರೆ, ನಾವು ರೈಲು ಬೆಂಗಳೂರಿನಿಂದ ಹೊರಟಿತು ಎಂದು ತಿಳಿಸಿದ ತಕ್ಷಣವೇ ಅಲ್ಲಿ ಬಂಗಾರಪೇಟೆ ನಿಲ್ದಾಣಕ್ಕೆ ಉಪಹಾರದೊಂದಿಗೆ ಬಂದು ನಿಂತಿದ್ದರು. ಆದರೆ ಪ್ರಾರಂಭದಲ್ಲೇ ದೇವನಗುಂದಿಯಲ್ಲಿ ವಿಳಂಬವಾಗಿ ರೈಲು ಒಂದು ಗಂಟೆ ನಿಧಾನವಾಗಿ ಬಂಗಾರಪೇಟೆ ತಲುಪಿದೆವು. ಪಾಪ ! ಹಿರಿಯರು ಅಷ್ಟು ದೂರದಿಂದ ನಿಲ್ದಾಣದಲ್ಲಿ ಓಡಿಬಂದು ನಮ್ಮ ಬೆಳಗಿನ ಉಪಹಾರವನ್ನು ತಲುಪಿಸಿದರು. ಹಾಗೆಯೇ ಕಾಶಿ ಬದರಿ ಯಾತ್ರೆಯ ಯತ್ರಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟು ತಾವೂ ಯಾತ್ರೆಯ ಕಿಂಚಿತ್ ಪುಣ್ಯ ಸಂಪಾದನೆ ಮಾಡಿದರು. ಎಲ್ಲರಿಗೂ ಹೊಟ್ಟೆ ಭರ್ತಿಯಾಗುವಷ್ಟು ಇಡ್ಲಿ ಚಟ್ಣಿ ಜೊತೆಗೆ ಮೈಸೂರುಪಾಕು ಹಾಗೂ ಬಾಳೆಹಣ್ಣು. ಮಧ್ಯಾಹ್ನ 3 ಗಂಟೆಯಾದರೂ ಅಭಿಮಾನದ ಫಲಾಹಾರ ಹೊಟ್ಟೆಯಲ್ಲಿಯೇ ಆಕ್ರಮಿಸಿ, ಯಾರಿಗೂ ಊಟ ಮಾಡುವ ಯೋಚನೆಯೂ ಬಂದಿರಲಿಲ್ಲ. ಆದರೆ ಶ್ರೀಮತಿ ಸರಸ್ವತಿಯವರು ತಂದ ಮಸಾಲೆ ಚಿತ್ರಾನ್ನ ಮತ್ತು ಮೊಸರನ್ನ ಹಾಗೂ ವೀಣ ರವರ ಪುದಿನ ಭಾತ್ ಹಾಳಾಗಲು ಬಿಡಬಾರದೆಂದು ಒದ್ದಾಡತೊಡಗಿದರು. 
    
ಕಾಶೀಯಾತ್ರೆಗೆ ಹೋಗುವವರು ಜೀವನದ ವಾರ್ಧಕ್ಯದಲ್ಲಿ ಅಥವಾ ವಾನಪ್ರಸ್ಥ, ಸನ್ಯಾಸಾಶ್ರಮದಲ್ಲಿ. ಸಂಸಾರದಲ್ಲಿ ವಿರಕ್ತಿ ಹೊಂದಿ ಹೋಗುವ ಯಾತ್ರೆ. ಅಲ್ಲಿ ಯಾರ್ತಾರ್ಥಿಗಳಿಗೆ ಊಟ ವಿಹಾರಗಳ ಅನುಕೂಲವಿರುವುದಿಲ್ಲ, ಸಾಮಾನ್ಯವಾಗಿ ಕಾಶೀಯಾತ್ರೆಗೆ ಹೋದವರು ಹಿಂದಿರುಗಿ ಬರುವುದು ಕಡಿಮೆ. ಯಾತ್ರೆ ಮುಗಿಸಿ ಮರಳಿ ಬಂದವರಿಗೆ ಹಾರ ಹಾಕಿ ಮೆರವಣಿಗೆಯಲ್ಲಿ ಮನೆಗೆ ಕರೆದೊಯ್ಯುವ ಪದ್ಧತಿ ಇದೆ. ಆದರೆ, ನಮ್ಮ ಯಾತ್ರೆಯ ಆರಂಭದಿಂದಲೂ ನಾವು ನಮ್ಮ ಹೊಟ್ಟೆ, ಹೃದಯ, ಮನಸ್ಸಿನ ಎಚ್ಚರಿಕೆಯನ್ನೂ ಮರೆತು ಬರೀ ನಾಲಿಗೆಯ ಮಾತು ಕೇಳುವಂತೆ ಹಾಗೂ ಮಾಡಿ ತೆಗೆದುಕೊಂಡ ಹೋದ ರುಚಿಯಾದ ಊಟ ತಿಂಡಿಗಳು ಹಾಳಾಗದಂತೆ ಎಚ್ಚರಿಕೆ ಹೊಂದಿದ್ದೆವು. ಆದರೆ ಕಾಶೀ ವಿಶ್ವನಾಥನ ದಯೆ ಯಾರಿಗೂ ಆರೋಗ್ಯದ ತೊಂದರೆ ಹಾಗೂ ಹವಾಮಾನದ ಅತಿರೇಕದ ತೊಂದರೆ ಪ್ರವಾಸದುದ್ದಕ್ಕೂ ಬಾರದೇ ನಮ್ಮನ್ನು ಅದೃಷ್ಟವಂತರನ್ನಾಗಿ ಮಾಡಿದ್ದವು ಅಲ್ಲದೇ ಪ್ರವಾಸವನ್ನು ವಿಹಾರವನ್ನಾಗಿಯೂ ಮಾಡಿದ್ದವು. ನಾವೂ ಭಂಡರು. ತಂದ ಯಾವ ತಿಂಡಿಯನ್ನೂ ಕೆಡಿಸಲಿಲ್ಲ. ಅದರಲ್ಲೂ ಪ್ರಾರಂಭದ ಎರಡು ದಿನ ಕೇವಲ ರೈಲಿನಲ್ಲಿ ಕುಳಿತಿರುವುದರಿಂದ ಹೊಟ್ಟೆಗೆ ಯಾವ ರೀತಿಯ ವಿರಾಮವನ್ನೂ ನೀಡಿರಲಿಲ್ಲ. ಸರಿ ಮಧ್ಯಾನ್ಹ ಮಸಾಲೆ ಚಿತ್ರಾನ್ನ, ಪುದೀನಾ ಭಾತ್ ಮತ್ತು ಮೊಸರನ್ನದ ರುಚಿ ನೋಡಿದೆವು. ರಾತ್ರಿ ವಿವಿಧ ಗೊಜ್ಜು ಪಲ್ಯಗಳ ಸಮೇತ ಚಪಾತಿ ಸೇವನೆಯಾಯಿತು.

ಇದೇನು ಸಮಾರಾದನೆಯೋ ಎಂದುಕೊಂಡಿರಾ? ಇಲ್ಲವಪ್ಪ, ಇದು ನಿಜವಾಗಲೂ ಯಾತ್ರೆಯೇ. ಯಾಕೆಂದರೆ, ಪ್ರತಿ ದಿನ ಬೆಳಿಗ್ಗೆ ಶ್ರೀ ವೆಂಕಟೇಶ್ವರ ಸುಪ್ರಭಾತ, ವಿಷ್ಣು ಸಹಸ್ರನಾಮ, ಮಧ್ವನಾಮ, ಕೇಶವ ನಾಮ, ಗೋವಿಂದ ನಾಮಾವಳಿ, ವಿಜಯರಾಯರ ಕವಚ ಮುಂತಾದವನ್ನು ಪಠನೆ ಮಾಡುತ್ತಿದ್ದೆವು. ಅಲ್ಲದೇ ಮಂಜುಳ ತಂದಿದ್ದ ಶ್ರೀ ವಾದಿರಾಜ ಗುರುಗಳು ರಚಿಸಿದ ತೀರ್ಥ ಪ್ರಬಂಧ ಕೃತಿಯಲ್ಲಿ, ನಾವು ಆ ದಿನ ಹಾಗೂ ಮರುದಿನ ಸಂದರ್ಶಿಸಲಿರುವ ಯಾತ್ರಾಸ್ಥಳದ ಮಹಾತ್ಮೆ ಮತ್ತು ಅಲ್ಲಿಯ ಸ್ಥಳ ಪುರಾಣ ಹಾಗೂ ಕ್ರೇತ್ರ ವಿಧಿಗಳ ವಿವರಣೆಯನ್ನು ಓದುತ್ತಿದ್ದೆವು. ನಾನು ವೈಯಕ್ತಿಕವಾಗಿ, ಶ್ರೀ ಗುರುರಾಯರ ಜಪ ಮಾಡುವುದಕ್ಕೆ ಸಂಕಲ್ಪಿಸಿದ್ದು, 108 ಮಣಿಗಳ ಜಪಮಾಲೆಯನ್ನು ಪ್ರತಿ ದಿನ ಕನಿಷ್ಟ 100 ಬಾರಿಯಾದರೂ ತಿರುಗಿಸುತ್ತಿದ್ದೆ. ಇದಕ್ಕಿಂತ ಇನ್ನೇನು ಬೇಕು? ಕೆಲವರು ಕಮಲದ ಬತ್ತಿ ಮಾಡಿ ಇಹಕ್ಕೂ ಪರಕ್ಕೂ ಪುಣ್ಯ ಸಂಪಾದಿಸಿಕೊಂಡರು.

ಮೊದಲ ಎರಡೂ ದಿನ ಕೇವಲ ರೈಲು ಪ್ರಯಾಣವೇ. ನಮ್ಮ ಮೊದಲ ಭೇಟಿ ವಾರಣಾಸಿಯಾಗಿದ್ದರೂ, ನಾವೆಲ್ಲ ಕಾಶೀ ವಿಶ್ವೇಶ್ವರನ ದರ್ಶನಕ್ಕೆ ಕಾತರರಾಗಿದ್ದರೂ, ನಮ್ಮ ರೈಲು ಮಾತ್ರ ದಕ್ಷಿಣದ ಕಡೆಗೆ ಹೊರಟು ಮಧ್ಯಾನ್ಹಕ್ಕೆ ಚನ್ನೈ ತಲುಪಿತು. ನಂತರ ಆಂಧ್ರದ ಮುಖಾಂತರ ಉತ್ತರ ಭಾರತದ ಕಡೆಗೆ ಹೊರಟಿತ್ತು. ಮಹಾರಾಷ್ಟ್ರ, ಮಧ್ಯ ಪ್ರದೇಶ ಉತ್ತರ ಪ್ರದೇಶ ಮುಂತಾದ ರಾಜ್ಯಗಳಲ್ಲಿ ಹೊರಟು ಬೆಳಿಗ್ಗೆ 5-30ಕ್ಕೆ ಸರಿಯಾಗಿ ಮೊಘಲ್ ಸರಾಯ್ ತಲುಪಿತು.  ಬೆಂಗಳೂರಿನಿಂದ ನೇರವಾಗಿ ಮೊಘಲ್ ಸರಾಯ್ ವರೆಗೆ ರೈಲು ಮಾರ್ಗವಿದೆ. ನಾಗಪುರ, ಅಲಹಾಬಾದ್ ಮೂಲಕ ತಲುಪಬಹುದು. ದಾರಿಯುದ್ದಕ್ಕೂ ನಮಗೆ ರೌರವ ಬಿಸಿಲಿನ ನರಕ ಒಂದನ್ನು ಬಿಟ್ಟರೆ ವಿಶೇಷವೇನೂ ಇರಲಿಲ್ಲ. ದಾರಿಯಲ್ಲಿ ಅನೇಕ ಸೇತುವೆಗಳೂ, ಬೆಟ್ಟವನ್ನಗಿದು ಮಾಡಿದ ಫೊಗದಾಗಳೂ ಬಂದವು. ದೊಡ್ಡವರಾದ ನಾವು ಕತ್ತಲೆಯಲ್ಲೂ ಗಂಭೀರವಾಗಿ ಕೂತಿದ್ದವು. ಮಕ್ಕಳಿದ್ದಿದ್ದರೆ ಕೂಗಿ ಕಣಿದು ಸಂತೋಷಪಡುತ್ತಿದ್ದರು, ಎಂದು ಮಕ್ಕಳನ್ನು ನೆನಪಿಸಿಕಂಡೆವು. ಮಧ್ಯದಲ್ಲಿ, ಜಾಲಿ ಮರಗಳ ಗುಂಪು, ಅಲ್ಲೊಂದು ಪುಟ್ಟ ಸೇತುವೆ. ಇದೇ ಛಂಬಲ್ ಕಣಿವೆ ಎಂದರು ಸಹ ಪ್ರಯಾಣಿಕರು. ಆಗ ಸಮಯ ಮಧ್ಯಾಹ್ನ 12 ಗಂಟೆಯಾಗಿತ್ತು. ಛಂಬಲ್ ರಾಣಿ ಫೂಲನ್ ದೇವಿಯನ್ನು ಮನ ನೆನಪಿಸಿಕೊಂಡಿತು.

ಈ ರೈಲು ಪ್ರವಾಸದಲ್ಲಿ ನಾವೊಂದು ಬಡವರ ಏರ್ ಕೂಲರ್ ಕಂಡು ಹಿಡಿದಿದ್ದೆವು.  ಪ್ರತಿ ಗಂಟೆಗೊಮ್ಮೆ ನಮ್ಮ ಚೂಡಿದಾರ್ ವೇಲ್ ನ್ನು ಒದ್ದೆ ಮಾಡಿ ಹಿಂಡಿಕೊಂಡು ಮುಖ ಹಾಗೂ ಕೈಗಳಿಗೆ ಮುಸುಕು ಹಾಕಿಕೊಂಡರೆ ಬೀಸುವ ಬಿಸಿ ಗಾಳಿ ತಂಪಾಗಿ ಹಿತಕರವಾಗಿರುತಿತ್ತು. ಸಾಯಂಕಾಲವಾದ ಮೇಲೆ ತುಸು ತಂಪಾದ ಗಾಳಿ ಬೀಸುತಿತ್ತು. ಸಾಯಂಕಾಲ ಏಳು ಗಂಟೆವರೆಗೂ ಬೆಳಕು ಚನ್ನಾಗಿರುತ್ತಿತ್ತು. ಬೆಳಿಗ್ಗೆ ಮಾತ್ರ 4-30 ಕ್ಕೇ 6 ಗಂಟೆಯಷ್ಟು ಬೆಳ್ಳನೆ ಬೆಳಕಾಯಿತು ಎಂದು ಲತಾ ಮಂಗೇಶ್ಕರ್ ಹಾಡಿದಂತೆ ಬೆಳಕಾಗಿ ಬಿಟ್ಟಿರುತ್ತಿತ್ತು. ನಮ್ಮ ಪಕ್ಕದ ಸೀಟಿನಲ್ಲಿ ಅಹಮ್ಮದಾಬಾದಿನಿಂದ ಬೆಂಗಳೂರಿಗೆ ವ್ಯಾಪಾರಕ್ಕಾಗಿ ಬಂದು ನೆಲೆಸಿದ ಗುಂಪೊಂದು ಇತ್ತು. ಅವರು ನಮಗೆ ಅಹಮ್ಮಾಬಾದನ ಬಳಿ ನೋಡ ಬೇಕಾಗಿರುವ ಕೆಲವೊಂದು ಸ್ಥಳಗಳ ಮಾಹಿತಿ ನೀಡಿದರು. ಬ್ರಹ್ಮ, ವಿಷ್ಣು, ಮಹೇಶ್ವರರು ನೆಲೆಸಿದ, ವಿಷ್ಣುವಿನ ಹತ್ತವತಾರಗಳಿಗೆ ಸಂಬಂಧಿಸಿದಂತೆ ಅನೇಕ ಊರುಗಳು ಉತ್ತರ ಭಾರತದಲ್ಲಿವೆ. ಅಂತೂ ಇಂತೂ ನಾವು ನಮ್ಮ ಯಾತ್ರೆಯ ಮೊದಲ ಗಮ್ಯದ ಹತ್ತಿರ ತಲುಪಿಯೇ ಬಿಟ್ಟೆವು. ಮೊಘಲ್ ಸರಾಯ್ ಸುತ್ತ ಮುತ್ತ ಹೆಚ್ಚಿನವು ಇಟ್ಟಿಗೆ ಗೂಡುಗಳಿವೆ.  ಅಲ್ಲಲ್ಲಿ ಹೆಂಚಿನ ಕಾರ್ಖಾನೆಗಳು. ಅವು ತುಸು ಕಡಿಮೆಯೇ. 

ಮೊಘಲ್ ಸರಾಯ್ ನಲ್ಲಿ ಕಾಲಿಟ್ಟ ತಕ್ಷಣವೇ ನನಗೆ ನೆನಪಾಗಿದ್ದು ಪ್ರಾಥಮಿಕ ಶಾಲೆಯಲ್ಲಿ ಓದಿದ್ದ ಇತಿಹಾಸ.  ಮನಸ್ಸು ಮೊಘಲ್ ಸರಾಯ್ ಎಂಬಲ್ಲಿ….. ಎಂಬ ವಾಕ್ಯವನ್ನು ಮನಸ್ಸಿನಲ್ಲಿ ಸರ್ಚಗೆ ಹಾಕಿದಾಗ ಬಂದ ರಿಸಲ್ಟ…..ನಮ್ಮ ಭವ್ಯ ಭಾರತವು ಲಕ್ಷಾಂತರ ದೇಶ ಭಕ್ತರನ್ನು ನೀಡಿದ ಪುಣ್ಯ ಭೂಮಿ. ದೇಶಕ್ಕಾಗಿ ಹಗಲಿರುಳು ಪ್ರಾಮಾಣಿಕವಾಗಿ ಶ್ರಮಿಸಿದವರಲ್ಲಿ ಒಬ್ಬರು ಭಾರತ ದೇಶದ ದ್ವಿತೀಯ ಪ್ರಧಾನಿ, ಸ್ವಾರ್ಥ ರಹಿತ ರಾಷ್ಟ್ರ ಸೇವಕ, ಸರಳ ಸಜ್ಜನಿಕೆಯ ಮೂರ್ತ ಸ್ವರೂಪ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರು. ಲಾಲ್ ಬಹದ್ದೂರ್ ಶಾಸ್ತ್ರೀಜಿಯವರು 1904 ರ ಅಕ್ಟೋಬರ -2 ರಂದು ಉತ್ತರ ಪ್ರದೇಶದ ವಾರಣಾಸಿಯ ಸಮೀಪದ ಮೊಘಲ್ ಸರಾಯ್ ಎಂಬಲ್ಲಿ ಜನಿಸಿದರು. ತಂದೆ ಶಾರದಾ ಪ್ರಸಾದ್ ತಾಯಿ ರಾಮ ದುಲಾರಿ ದೇವಿ. ಅವರು 1915 ರಲ್ಲಿ ಗಾಂಧೀಜಿಯವರ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದರು. ನೆಹರೂ ಮಂತ್ರಿಮಂಡಲದಲ್ಲಿ ರೈಲ್ವೆ ಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ ದಿನಾಂಕ 07.09.1956 ರಲ್ಲಿ ಮೊಘಲ್ ಸರಾಯ್ ನಲ್ಲಿ ನಡೆದ ರೈಲ್ವೆ ಅಪಘಾತದಲ್ಲಿ 117 ಜನ ಮೃತಪಟ್ಟ ಘಟನೆಯಿಂದ ಮನನೊಂದು ನೈತಿಕ ಹೊಣೆ ಹೊತ್ತು ರೈಲ್ವೆ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಭಾರತದ ಎರಡನೇ ಪ್ರಧಾನಿಯಾಗಿದ್ದವರು. ಜೈ ಜವಾನ್ ಜೈ ಕಿಸಾನ್ ಎಂದು ಘೋಷಿಸಿದವರು. ಮತ್ತು ಮೊಘಲ್ ಸರಾಯ್ ರೈಲು ನಿಲ್ದಾಣದಲ್ಲಿ ಜನಸಂಘದ ಮುಂದಾಳಾದ ಪಂಡಿತ ದೀನದಯಾಳರು ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದು ಪತ್ತೆಯಾಗಿತ್ತು.  ಇವೆರಡು ನೆನಪಿಗೆ ಬಂದಿದ್ದವು. ಮೊಘಲ್ ಸರಾಯ್ ಒಂದು ದೊಡ್ಡ ರೇಲ್ವೇ ಜಂಕ್ಷನ್. ಅಲ್ಲಿಂದ ವಾರಣಾಸಿಗೆ ತಲುಪಲು ಮೊದಲೇ ಬೆಂಗಳೂರಿನಿಂದಲೇ ಕಾಯ್ದಿರಿಸಿದ ಉಡುಪಿ ಮಠದವರು ಕಳಿಸಿದ ರಾಜು ಎಂಬ ಚಾಲಕನ ವಾಹನ ನಮ್ಮನ್ನು ಕಾಯುತ್ತಿತ್ತು. ಆದರೆ ನಮ್ಮ ಜೊತೆಗೆ ಯಾತ್ರಾರ್ಥಿಯಾಗಿ ಕರೆದೊಯ್ದ ಸಹಚಾರಿಗಳಾದ ಲಗೇಜ್ ಗಳದ್ದೇ ದೊಡ್ಡ ಸಮಸ್ಯೆಯಾಯಿತು. ಯಾತ್ರೆಗೆ ಹೋಗುವ ಮೊದಲೇ ಉತ್ತರ ಭಾರತದಲ್ಲಿ ಕಳ್ಳತನದ ಬಗ್ಗೆ ಎಲ್ಲರೂ ನಮ್ಮನ್ನು ಹೆದರಿಸಿದ್ದರು. ನಾವೆಲ್ಲ ಮುಂದಾಲೋಚನೆಯಿಂದ ಒಂದೊಂದೇ ಇಳಿಸಿದ ಲಗೇಜ್ ನ್ನು ಮಧ್ಯದಲ್ಲಿರಿಸಿ, ಸುತ್ತಲೂ ಅದರ ಕಾವಲುಗಾರರಾಗಿ ನಿಂತಿದ್ದೆವು. ಆಗ ನೀವೇನಾದರೂ ನಮ್ಮನ್ನು ನೋಡಿದರೆ, ನಾವು ಥೇಟ್ ಒನ್ ಡೇ ಕ್ರಿಕೆಟ್ ಮ್ಯಾಚ್ ಪ್ರಾರಂಭದಲ್ಲಿ ಇಂಡಿಯನ್ ಕ್ರಿಕೇಟ್ ಟೀಂ ಕೈ ಹಿಡಿದುಕೊಂಡು ಗುಂಪಾಗಿ ಚೀರ್ ಅಪ್ ಆಗಲು ನಿಂತಿದ್ದೇವೆ ಎಂದು ಕೊಳ್ಳುತ್ತಿದ್ದಿರಿ. ನಮ್ಮ ಅವತಾರ ನೋಡಿದೊಡನೆಯೇ ಕೂಲಿಯವರ ಗುಂಪೇ ನೆರೆದು ಬಂತು. ಸರಿ 600/- ಕ್ಕೆ ಎಲ್ಲಾ ಲಗೇಜು ತರಲು ಗೊತ್ತು ಮಾಡಲಾಯಿತು. ಇದೊಂದು ಖಾಯಂ ಮೊತ್ತ ಪ್ರತಿ ರೈಲು ನಿಲ್ದಾಣದಲ್ಲಿಯೂ ಲಗೇಜುಗಳನ್ನು ಹೊರಗೆ ತರಲು ಹಾಗೂ ಒಳಗಿಡಿಸಲು.
    
ರಾಜುವಿನ ರಥವನ್ನೇರಿ ಮುಂದುವರಿಯಿತು ಕಾಶೀಯಾತ್ರೆ. NH 17 ನ ಮೇಲೆ. 18 ಕಿಮೀ ಚಲಿಸಲು ಸುಮಾರು 40 ನಿಮಿಷ ಬೇಕು. ಈ ಬೆಳಗಿನ ಅವಧಿಯಲ್ಲಿ ಉತ್ತರ ಪ್ರದೇಶ ರಾಜ್ಯದ ವಾರಣಾಸಿಯ ಸುತ್ತಮುತ್ತಲ ಊರುಗಳನ್ನು ನೋಡಿದಲ್ಲಿ  ಜನ ಒರಟರು. ದೈನೇಸಿಗಳು. ನಮ್ಮ ರಾಜು ಬಾಯಿ ತುಂಬಾ ಗುಟುಕಾ ತುಂಬಿ ಕೊಂಡಿದ್ದ. ಅಲ್ಲಿ ಯಾವ ಗಾಡಿಗಳಿಗೂ ಹಾರ್ನ ಇರಲಿಲ್ಲ. ‘ಒಹೋಯ್‘’ ಎಂದು ಕೆಟ್ಟ ಧ್ವನಿಯಲ್ಲಿ ಕಿರುಚುವುದೇ ಹಾರ್ನ. ಗಂಗೆಯ ಮೊದಲ ದರ್ಶನ ಈ ರಸ್ತೆಯಲ್ಲಿಯೇ ಆಯಿತು. ಗಂಗಾ ಮಾತೆ ತನ್ನ ದರ್ಶನದಿಂದಲೇ ನಮ್ಮ ಮೈ ಮನವನ್ನು ಪಾವನವನ್ನಾಗಿ ಮಾಡಿದಳು. ನಾವೆಲ್ಲ ಗಂಗಾ ಸ್ನಾನ, ಕಾಶೀನಾಥನ ದರ್ಶನಕ್ಕಾಗಿ ಕಾತರಿಸಿದ್ದೆವು. ವಿಶ್ವನಾಥ ಮಂದಿರದ ಒಂದೇ ಸೀದಾ ರಸ್ತೆಯ ಅಕ್ಕ ಪಕ್ಕಕ್ಕೆ ಬೆಳೆದ ಊರು ಕಾಶಿಯ ಗೊದೂಲಿಯಾ. ರಸ್ತೆಯ ಪಕ್ಕದಲ್ಲಿ ಬುಟ್ಟಿಗಳಲ್ಲಿ ತಾಜಾ ತರಕಾರಿಗಳು, ಲಸ್ಸಿ ಅಂಗಡಿಗಳು, ಸಿಹಿ ತಿಂಡಿಗಳ ಅಂಗಡಿಗಳು ಹಾಗೂ ಬಟ್ಟೆಗಳಿಗೆ ಬಣ್ಣ ತುಂಬಿ ಹೊರಗೆ ಒಣಗಿಸುತ್ತಿರುವ ಉದ್ಯಮಗಳ ಗೂಡು ಕಂಡವು. ಧಾರವಾಡದ ಎಳೇ ಸೌತೆಕಾಯಿಯಂತಹ ಹೀರೆಕಾಯಿಗಳು, ಪುಟ್ಟ ಪುಟ್ಟ ಬಿಳಿ ಬದನೆ ಕಾಯಿಯನ್ನು ಹೋಲುವಂತಹ ಪಡುವಲಕಾಯಿಗಳು ಎಲ್ಲಾ ತರಕಾರಿ ಅಂಗಡಿಗಳಲ್ಲಿ ಕಂಡವು.  ಅಸ್ಸಿ ಘಾಟ್ ಎಂಬಲ್ಲಿ, ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ನಮ್ಮ ಬಿಡಾರದ ಬುಕಿಂಗ್ ಆಗಿತ್ತು. ಆದರೆ ಧಾರವಾಡದ ಮೂರು ಬಸ್ಸುಗಳ ಭರ್ತಿ ಜನ ಬಂದಿದ್ದರಿಂದ ನಮ್ಮ ಉಳಿದುಕೊಳ್ಳುವ ವ್ಯವಸ್ಥೆಯನ್ನು ಮಾರವಾಡಿ ಮಂದಿರದಲ್ಲಿ ಮಾಡಲಾಗಿತ್ತು. 

ಮಾರವಾಡಿ ಮಂದಿರದಲ್ಲಿ, ತುಂಬಾ ದೊಡ್ಡ, ಸುಂದರ ಹಾಗು ಸ್ವಚ್ಛವಾದ ಎಸಿ ಕೋಣೆಗಳು, ಒಂದು ಕೋಣೆಯಲ್ಲಿ ಇಬ್ಬರಿಗೆ ಮಾತ್ರ ಇರಲು ಅವಕಾಶ. ನಾವು 11 ಜನರಿಗೆ 6 ರೂಮು ಪಡೆದು, ನಂತರ ಗಂಗಾ ಸ್ನಾನಕ್ಕೆ ತೆರಳಿದೆವು. ಗಂಗೆಗೆ ಸಮಾನಾಂತರವಾಗಿ ಮುಖ್ಯರಸ್ತೆ. ಅದು ಕಾಶಿಯ ಹೃದಯ ಸ್ಥಾನದಲ್ಲಿರುವ ಗೊದೋಲಿಯಾದ ಮುಖ್ಯ ರಸ್ತೆ. ಜನನಿಬಿಡ ಪ್ರದೇಶ ರಸ್ತೆಯ ಎರಡೂ ಪಕ್ಕದಲ್ಲಿ ಪುಟ್ಟ ಪುಟ್ಟ ಗೂಡಂಗಡಿಗಳು. ಅವುಗಳ ಮಧ್ಯದಲ್ಲಿಯೇ ಕಿರು ಓಣಿಗಳ ಮುಖಾಂತರ ಗಂಗಾ ನದಿಗೆ ದಾರಿ.      
    
ಗಂಗಾ ನದಿಯಲ್ಲಿ ಸ್ನಾನ ಮಾಡುವುದು ಒಂದು ಹಿಂಸೆ. ನದಿ ದಂಡೆಯಲ್ಲಿ ಹೆಣಗಳ ಸಾಲು. ಅಲ್ಲಿಯೇ ಹೆಣಗಳನ್ನು ಸುಡುತ್ತಾರೆ. ಅರ್ಧ ಸುಟ್ಟ ಹೆಣಗಳನ್ನು ಗಂಗೆಗೆ ಎಳೆದು ಬಿಡುತ್ತಾರೆ. ಸುಮಾರು 5 ವರ್ಷದ ಕೆಳಗಿನ ಮಕ್ಕಳು, ಮತ್ತು ಹಾವು ಕಚ್ಚಿದವರು, ಕುಷ್ಟ ರೋಗದವರು ಸತ್ತರೆ ನೇರವಾಗಿ ಬಟ್ಟೆಕಟ್ಟಿ ನದಿಗೆ ಎಸೆಯುತ್ತಾರೆ ಅಂತೆ. ದಡದಲ್ಲಿ ಶವಗಳನ್ನು ದಹನ ಮಾಡುತ್ತಾರೆ, ಹಾಗಾಗಿ ಬಿಹಾರ, ಉತ್ತರಪ್ರದೇಶದ ಎಷ್ಟೋ ಊರುಗಳಲ್ಲಿ ಸ್ಮಶಾನವೇ ಇಲ್ಲವಂತೆ, ಸುತ್ತ ಮುತ್ತಲ ಹಳ್ಳಿಗಳಲ್ಲಿ ಯಾರೇ ಸತ್ತರೂ ಆಟೋಗಳ ಮೇಲೆ ಕಟ್ಟಕೊಂಡು ಬಂದು ಕಾಶಿಯಲ್ಲಿಯೇ ದಹನ ಸಂಸ್ಕಾರ ಮಾಡುತ್ತಾರಂತೆ. ಕಾಶಿಯಲ್ಲಿ ಸತ್ತವರಿಗೆ, ದಹನ ಸಂಸ್ಕಾರ ಹೊಂದಿದವರಿಗೆ ಮೋಕ್ಷ ಎಂಬ ನಂಬಿಕೆ ಇದೆ. ಅಂದರೆ ಮೋಕ್ಷಕ್ಕೆ ಕಾಶಿ ಶಾರ್ಟಕಟ್. ಅಷ್ಟೆಲ್ಲ ಶವಗಳನ್ನು ನದಿಯ ಹರಿಶ್ಚಂದ್ರ ಘಾಟ್ ಹಾಗು ಇನ್ನೊಂದು ಘಾಟ್ ಮಣಿಕರ್ಣಿಕಾ ಘಟ್ಟಗಳಲ್ಲಿ ದಹನ ಮಾಡುವರು, ಆದರೂ ಅಲ್ಲಿ ನೆರೆದ ಯಾತ್ರಿಗಳಿಗೆ ಕೊಂಚವೂ ಭಯವೇ ಇಲ್ಲ, ಮಣಿಕರ್ಣಿಕಾ ಘಾಟ್ ನಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆಯೂ ನಿರಂತರವಾಗಿ ಹೆಣಗಳನ್ನು ಸುಡುತ್ತಲೇ ಇರುತ್ತಾರೆ. ದಿನವೊಂದಕ್ಕೆ ಕನಿಷ್ಠ ನೂರರಿಂದ ನೂರೈವತ್ತು ಶವಗಳ ದಹನ ಕಾರ್ಯ ಇಲ್ಲಿ ನಡೆಯುತ್ತದೆ. ಕೆಲವೊಮ್ಮೆ ಇದು ಇನ್ನೂರು, ಮುನ್ನೂರನ್ನು ದಾಟುವುದೂ ಉಂಟಂತೆ! ಗಂಗೆಯ ದಡದಲ್ಲಿ ಶವಗಳನ್ನು ದಹನ ಮಾಡುತ್ತಾರೆ. ಜೀವನದಲ್ಲಿ ಒಮ್ಮೆಯಾದರೂ ಗಂಗಾ ಸ್ನಾನ ಮಾಡಿದರೆ ಮೋಕ್ಷ ಗ್ಯಾರಂಟಿ ಎಂಬುದು ಪುರಾಣ ಕಾಲದ ಮಾತಾಗಿತ್ತು. ಈಗ ಗಂಗಾ ಸ್ನಾನದಿಂದ ರೋಗ ಗ್ಯಾರಂಟಿ. ಎಂಬೆಲ್ಲ ಅಂಶಗಳು ನನ್ನ ಗಮನದಲ್ಲಿದ್ದವು.
 


ಮುಂದುವರೆಯುವುದು….

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x