ಹಿಮಾಲಯವೆಂಬ ಸ್ವರ್ಗ (ಕೊನೆಯ ಭಾಗ): ವೃಂದಾ ಸಂಗಮ್

vranda-sangam

ಇಲ್ಲಿಯವರೆಗೆ

ಮುಂದೆ ರಾಜಘಾಟ್ ಗೆ ತೆರಳಿದೆವು.  ದೆಹಲಿಯ ಸುಡು ಬಿಸಿಲಿಗೆ ನಾವಾಗಲೇ ಸುಸ್ತು ಹೊಡೆದಿದ್ದೆವು. ಹೆಚ್ಚಿನವರು ಗಾಡಿಯಲ್ಲಿಯೇ ಕುಳಿತಿದ್ದರು. ಮಹಾತ್ಮ ಗಾಂಧಿಯವರ ಸಮಾಧಿಯ ಮುಂದೆ ನಿಂತಾಗ ನನಗರಿವಿಲ್ಲದೆಯೇ ತ್ಯಾಗ, ಬಲಿದಾನಗಳ ನಮ್ಮ ಸ್ವಾತಂತ್ರ್ಯ ಚಳುವಳಿಯ ಹರಿಕಾರ ಗಾಂಧೀಜಿ. ಅಹಿಂಸೆ, ಸತ್ಯ ಎಂಬ ಎರಡು ಪ್ರಬಲವಾದ  ಅಸ್ತ್ರಗಳಿಂದ   ಬ್ರಿಟಿಷ್ ಸಾಮ್ರಾಜ್ಯವನ್ನು ಬಗ್ಗಿಸಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟ ಮಹಾಚೇತನ. ಅಲ್ಲಿ ನಿಂತಾಗ ಮೂಡಿದ್ದು ಧನ್ಯತೆಯ ಕುಸುಮಗಳು – ಕಣ್ಣಲ್ಲಿ ಎರಡು ಹನಿಗಳು. ಹಿಂದಿರುಗುವಾಗ, ದಾರಿಯಲ್ಲಿ ಕಂಡು ಬಂದದ್ದು ಕಿಸಾನ್ ಘಾಟ್, (ಚರಣ ಸಿಂಹರ ಸಮಾಧಿ), ಶಕ್ತಿ ಸ್ಥಳ (ಇಂದಿರ ಗಾಂಧಿಯವರ ಸಮಾಧಿ) , ವೀರ್ ಭೂಮಿ (ಶಾಂತಿ ವನ), ತೀನ್ ಮೂರ್ತಿ ಭವನದಿಂದ ಮುಂದೆ ದಾರಿಯಲ್ಲಿಯೇ ಇಂಡಿಯ ಗೇಟ್, ಸಂಸತ್ ಭವನ್, ರಾಷ್ಟ್ರಪತಿ ಭವನ್ ನೋಡಿದೆವು. ನಮ್ಮ ಊಟದ ಹೋಟೇಲಿಗೆ ಹಿಂದಿನ ದಾರಿಯಲ್ಲಿ ಹೋಗಿದ್ದೆವು ಎಂದೆನಲ್ಲ, ಮುಖ್ಯ ದಾರಿಯಂದರೆ ಎಲ್ಲಾ ರಾಜ್ಯಗಳ ಭವನಗಳಿರುವ ರಸ್ತೆ. ಲೋಟಸ್ ಟೆಂಪಲ್ (ಬಹಾಯ್ ಪಂಥದವರ ದೇವಸ್ಥಾನ)ನ್ನು ಹಿಂದಿನ ದಿನ ಆಗ್ರಾಗೆ ಹೋಗುವ ದಾರಿಯಲ್ಲಿ ನೋಡಿದ್ದೆವು. 
      
ನಮ್ಮ ಮುಂದಿನ ಗುರಿ ಕೆಂಪು ಕೋಟೆ. ದೆಹಲಿಯ ಜನಪ್ರಿಯ ಕಿಲ್ಲಾ- ಇ- ಮೊಲ್ಹಾ ಇದರ ಹೊಸ ಹೆಸರೇ ಈಗಿನ ಕೆಂಪು ಕೋಟೆ. ದೇಶಕ್ಕೆ ಸ್ವಾತಂತ್ರ್ಯ ದೊರೆತ ದಿನಾವಾದ 1947ರ ಆಗಸ್ಟ್ 15 ರಂದು ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಕೆಂಪು ಕೋಟೆಯ ಲಾಹೋರ್ ಗೇಟಿನ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದ್ದರು. ಇದರ ಧ್ಯೋತಕವಾಗಿ ಪ್ರತಿ ವರ್ಷ ಆಗಸ್ಟ್- 15 ರಂದು ಭಾರತದ ಪ್ರಧಾನ ಮಂತ್ರಿಗಳು ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿ ಸ್ವಾತಂತ್ರ್ಯೋತ್ಸವ ಭಾಷಣ ಮಾಡುತ್ತಾರೆ. ಸ್ವಾತಂತ್ರ್ಯ ದೊರೆತ ಬಳಿಕ ಕೆಂಪುಕೋಟೆಯಲ್ಲಿ ಕೆಲವೊಂದು ಮಾರ್ಪಾಟುಗಳನ್ನು ಮಾಡಲಾಗಿದೆ. ಇಂದು ಇದು ಪ್ರಸಿದ್ಧ ಪ್ರವಾಸಿತಾಣವಾಗಿ ಮಾರ್ಪಟ್ಟಿದೆ. ಕೆಂಪು ಕೋಟೆಯನ್ನು ಕೆಂಪು ಕಲ್ಲಿನಲ್ಲಿ ನಿರ್ಮಿಸಲಾಗಿದ್ದು, ವಿಶ್ವದಲ್ಲೇ ಅದ್ಭುತವಾದ ಅರಮನೆಯೊಂದು ಇದರಲ್ಲಿದೆ. 254.67 ಎಕರೆಯಷ್ಟು ವಿಶಾಲವಾದ ಜಾಗವನ್ನು ಕೆಂಪು ಕೋಟೆ ಆವರಿಸಿಕೊಂಡಿದೆ. ಈ ಕೋಟೆಯು ಸುಮಾರು 2.41 ಕಿ.ಮೀ. ವಿಸ್ತೀರ್ಣ ಹೊಂದಿದೆ. ಇದರ ಎರಡು ಪ್ರಮುಖ ದ್ವಾರಗಳನ್ನು ಲಾಹೋರ್ ಹಾಗೂ ದೆಹಲಿ ಗೇಟ್ ಎಂದು ಹೆಸರಿಸಲಾಗಿದೆ. ಲಾಹೋರ್ ದ್ವಾರವು ಚಚ್ಛಾ ಚೌಕ ಮಾರುಕಟ್ಟೆಗೆ ಕೊಂಡೊಯ್ಯುತ್ತದೆ. ಇಲ್ಲಿ ರೇಷ್ಮೆ ಒಡವೆಗಳು ಹಾಗೂ ಇತರೇ ಬೆಲೆಬಾಳುವ ವಸ್ತುಗಳನ್ನು ರಾಜವಂಶಸ್ಥರಿಗಾಗಿ ಮಾರಾಟ ಮಾಡಲಾಗುತ್ತಿತ್ತು. ದೆಹಲಿ ಗೇಟ್ ಹೆಚ್ಚು ವೈಭವದಿಂದ ಕೂಡಿದೆ. ಇಂದಿಗೂ ಭಾರತೀಯ ಭೂ ಸೈನ್ಯ (ಮುಖ್ಯವಾಗಿ ರಜಪುಟಾಣಾ ರೈಫಲ್ಸ್ ತುಕಡಿ) ಇಲ್ಲಿ ಬೀಡುಬಿಟ್ಟಿರುತ್ತದೆ.  ಈ ಸುಂದರ ಸ್ಮಾರಕದಲ್ಲಿ ಅನೇಕ ಅದ್ಭುತ ಕಲಾಕೃತಿಗಳಿವೆ. ದಿವಾನ್ ಐ ಆಮ್ ಅವುಗಳಲ್ಲೊಂದು. ಇಲ್ಲೇ ರಾಜನು ಪ್ರಜೆಗಳ ಕಷ್ಟ ಸುಖಗಳನ್ನು ಆಲಿಸುತ್ತಿದ್ದನು. ಕೆಂಪು ಕೋಟೆಯ ಒಳಭಾಗದಲ್ಲಿ ದಿವಾನ್ ಐ ಖಾಸ್ (ಖಾಸ್ ಮಹಲ್) ಇದೆ. ಇಲ್ಲಿ ರಾಜ್ಯದ ಮಂತ್ರಿಮಂಡಲದ ಸದಸ್ಯರು ಮತ್ತು ಅಥಿತಿಗಳೊಂದಿಗೆ ರಾಜರು ಖಾಸಗೀ ಸಭೆಗಳನ್ನು ನಡೆಸುತ್ತಿದ್ದರು. ಇಡೀ ಕೆಂಪುಕೋಟೆ ಅರ್ಧ ಚಂದ್ರಾಕಾರದಲ್ಲಿದ್ದು, ಕೋಟೆಯ ಗೋಡೆಗಳು 21 ಮೀಟರ್ ಎತ್ತರವಾಗಿವೆ. ಕೋಟೆಯ ಸುತ್ತಲೂ ಒಂದು ಕಾಲುವೆ ಹರಿಯುತ್ತದೆ. ಕೆಂಪು ಕೋಟೆಯಲ್ಲಿರುವ ರಾಗ ಮಹಲ್ಲನ್ನು ಬೇಗಂ ಮಹಲ್ ಎಂದೂ ಕರೆಯುತ್ತಾರೆ. ಇಲ್ಲಿ ಷಹಜಾನನ ಪತ್ನಿ ಮತ್ತು ಉಪಪತ್ನಿಯರು ವಾಸವಿದ್ದರು. ಇಲ್ಲಿರುವ ಮುಮ್ತಾಜ್ ಮಹಲ್ ಮಹಿಳೆಯರ ಸಭಾಂಗಣವಾಗಿದ್ದು, ಇಂದು ವಸ್ತು ಸಂಗ್ರಹಾಲಯವಾಗಿದೆ. 5ನೇ ಮುಘಲ್ ದೊರೆ ಷಹಜಹಾನನ ರಾಜಧಾನಿಯಾಗಿ ಕೆಂಪುಕೋಟೆಯನ್ನು 1648ರಲ್ಲಿ ನಿರ್ಮಿಸಲಾಯಿತು. ಷಹಜಹಾನನ ಆಸ್ತಾನದಲ್ಲಿದ್ದ ಉಸ್ತಾದ್ ಅಹಮದ್ ಲಹೌರಿ ಕೆಂಪು ಕೋಟೆಯ ವಾಸ್ತುಶಿಲ್ಪಿ. 1632ರಿಂದ 1648ರ ಅವಧಿಯಲ್ಲಿ ಮುಘಲ್ ವಾಸ್ತುಶಿಲ್ಪದ ಪ್ರಕಾರದಲ್ಲಿ ಕೆಂಪು ಕೋಟೆ ನಿರ್ಮಾಣಗೊಂಡಿದೆ. ತದ ನಂತರ ಮುಘಲರು ನಿರ್ಮಿಸಿದ ಎಲ್ಲ ಕಟ್ಟಡಗಳಿಗೂ ಕೆಂಪು ಕೋಟೆ ಮಾದರಿ ಎನಿಸಿಕೊಂಡಿತು. 

ಕೆಂಪು ಕೋಟೆ ಕೇವಲ ಕೋಟೆಯಾಗಿ ಉಳಿಯದೇ ರಾಜರಾಣಿಯರ ಅರಮನೆ ನಿವಾಸವಾಗಿಯೂ ರೂಪತಳೆಯಿತು.  200 ವರ್ಷಗಳ ಕಾಲ ಕೆಂಪು ಕೋಟೆಯಲ್ಲಿ ಮುಘಲ್ ದೊರೆಗಳು ವಾಸವಿದ್ದರು. ಕೆಂಪು ಕೋಟೆಯನ್ನು ಆಳಿದ ಕೊನೆಯ ಮುಘಲ್ ದೊರೆ 2ನೇ ಬಹದ್ದೂರ್ ಶಾ. 1857ರಲ್ಲಿ ನಡೆದ ಮೊದಲ ಸೇನಾ ದಂಗೆಗೆ ಕೆಂಪು ಕೋಟೆ ಸಾಕ್ಷಿಯಾಯಿತು. ಈ ಸಮಯದಲ್ಲಿ 2ನೇ ಬಹದ್ದೂರ್ ಶಾ ತಾನು ಸಂಪೂರ್ಣ ಭಾರದ ಅರಸ ಎಂದು ಘೋಷಿಸಿಕೊಂಡ. ಯುದ್ಧದಲ್ಲಿ ಸೋತಬಳಿಕ ಕೋಟೆಯಿಂದ ಪಲಾಯನಗೈದ. ಯುದ್ಧದ ಬಳಿಕ ಬ್ರಿಟೀಷರು ಕೆಂಪು ಕೋಟೆಯ ಬಹುಭಾಗವನ್ನು ನಾಶಪಡಿಸಿ ಅಲ್ಲಿ ಮಿಲಿಟರಿ ಬ್ಯಾರಕ್ ಗಳನ್ನು ನಿಮರ್ಮಿಸಿದ್ದಾರೆ. ಕೋಟೆಯ ಒಳಗಿದ್ದ ಮೂರನೇ ಎರಡರಷ್ಟು ರಚನೆಗಳನ್ನು ನಾಶಪಡಿಸಿದ್ದಾರೆ. 1911ರಲ್ಲಿ ಬ್ರಿಟನ್ ರಾಜ ಮತ್ತು ರಾಣಿ ದೆಹಲಿ ದರ್ಭಾರ್ ಗೆ ಭೇಟಿ ನೀಡಿದರು. ಈ ಕಾರಣಕ್ಕಾಗಿ ಕೆಲವೊಂದು ಕಟ್ಟಡಗಳನ್ನು ಪುನರ್ನಿರ್ಮಾಣ ಮಾಡಲಾಗಿದೆ. 2007ರಲ್ಲಿ ದೆಹಲಿಯ ಐತಿಹಾಸಿಕ ಕೆಂಪು ಕೋಟೆಯನ್ನು ಯುನೆಸ್ಕೋ ವಿಶ್ವಪಾರಂಪರಿಕ ಪಟ್ಟಿಗೆ ಸೇರಿಸಿದೆ. ಬಹದ್ದೂರ ಷಾ ಸಫರ್ ಜಂಗ್ ನಮ್ಮದೇ ಕೋಟೆಯ ಮೇಲೆ, ಬ್ರಿಟಿಷರಿಂದ ಮುಕ್ತವಾದೆವೆಂದು, ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಭಾರತೀಯ ಧ್ವಜವನ್ನು ಹಾರಿಸಿದ ಕೋಟೆ, ಸ್ವತಂತ್ರ ಭಾರತದ ಪ್ರತಿಯೊಬ್ಬ ಪ್ರಧಾನಿಯೂ ಗಣರಾಜ್ಯೋತ್ಸವದಲ್ಲಿ ಧ್ವಜ ಹಾರಿಸುವ ಕೆಂಪುಕೋಟೆ, ನಮ್ಮನ್ನೆಲ್ಲ ಹೈರಾಣ ಮಾಡಿದ ಕೆಂಪುಕೋಟೆ ನೋಡಲು ಹೊರಟೆವು. 2000 ರಲ್ಲಿ ಕೆಂಪುಕೋಟೆ ಮೇಲೆ ದಾಳಿ ಮಾಡಿದ್ದ ಲಷ್ಕರ್-ಇ-ತೊಯಿಬಾ ಸಂಘಟನೆಯ ಉಗ್ರ ಮೊಹ್ಮದ್ ಆರಿಫ್ ನ ನೆನಪಾಯಿತು. ಅಂತೂ ಎಲ್ಲರೂ ದೆಹಲಿಯ ಕೆಂಪು ಕೋಟೆ ಬಯಸಿದವರೇ. ನಮ್ಮ ದೇವೇಗೌಡರೂ ಪ್ರಧಾನಿಯಾಗಿ ಇಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸಿಲ್ಲವೇ? ದೆಹಲಿಯಲ್ಲಿಯೂ ಹಾಸನದ ರಾಗಿ ಮುದ್ದೆ ಉಂಡಿಲ್ಲವೇ? 

ಸರಿ, ಉರಿ ಬಿಸಿಲಲ್ಲಿ, ಹಿಂದಿನ ಬಾಗಿಲ ಮುಂದೆ ನಿಲ್ಲಿಸಿದ ವಾಹನದಿಂದಿಳಿದು ಮುಖ್ಯ ದ್ವಾರದವರೆಗೆ ಬರುವಷ್ಟರಲ್ಲಿ ಎಲ್ಲರಿಗೂ ಸುಸ್ತೋ ಸುಸ್ತು. ಪ್ರವೇಶ ದ್ವಾರದಲ್ಲಿ ಟಿಕೇಟು ಪಡೆದು ಒಳಗೆ ತುಸು ನಡೆದಾಗ ನೆರಳಿರುವ ಪ್ರದೇಶ. ಅದೆಲ್ಲಾ ಈಗ ವ್ಯಾಪಾರೀ ಮಳಿಗೆಗಳಾಗಿ ಮೀಸಲಾಗಿದೆ. ಸುಂದರ ಪರ್ಸಗಳೂ, ಅಲಂಕಾರಿಕ ವಸ್ತುಗಳು ಇವೆ. ಸರಿ ನಮ್ಮ ಖರೀದಿ ಶುರುವಾಯ್ತು. ಮುಂದೆ ಈ ನೆರಳಿನಲ್ಲೇ ಅರ್ಧ ದಾರಿ ಸುತ್ತುವಷ್ಟರಲ್ಲಿ, ನಮಗೆಲ್ಲ ಕಾಲಿಡಲು ಆಗದಷ್ಟು ಸುಸ್ತು. ನೀರಡಿಕೆ ಬೇರೆ. ಎಲ್ಲಿಯೂ ಕುಡಿಯುವ ನೀರಿಲ್ಲ.  ನಲ್ಲಿಯಲ್ಲಿಯ ನೀರು ಕುಡಿಯುವಂತಿಲ್ಲ. ಅಂತೂ ತಂಪನೆಯ ವಾತಾವರಣದಲ್ಲಿ ಶಾಪಿಂಗ್ ಮಾಡಿದೆವೇ ವಿನಃ ದುಡ್ಡು ಕೊಟ್ಟು ಟಿಕೇಟು ಪಡೆದಿದ್ದಕ್ಕೆ ಕೋಟೆಯ ಒಳ ಭಾಗದ ದರ್ಶನ ಮಾಡಿಲ್ಲ. ನಂತರ ದೊಡ್ಡ ಹುಲ್ಲು ಹಾಸಿನ ಅಂಗಳ ದಾಟಿದೊಡನೆಯೇ ಬಿಳಿ ಸಂಗಮವರೀ ಕಲ್ಲಿನಲ್ಲಿ ಚಿನ್ನದ ಚಿತ್ತಾರದ ರಾಣಿ ವಾಸದ ಝನಾನಾ, ಸಭಾಗೃಹ, ರಾಣಿಯರು ಸಭೆಯನ್ನು ವೀಕ್ಷಿಸುವ ಗೃಹ ಇವೆಲ್ಲವನ್ನೂ ನೋಡುವುದಕ್ಕಿತ್ತು. ನಮಗೆಲ್ಲ ಸುಸ್ತಾಗಿತ್ತು. ಸರಿ, ಅದೆಲ್ಲ ನೋಡುವು ದಕ್ಕೇನಿದೆ? ಹೊರಗಿರುವ ಡಿಸೈನೇ ಒಳಗೂ ಇರುವುದು, ಇಲ್ಲೇ ಕಾಣಿಸುತ್ತೆ, ಒಳಗೇನೂ ಸುತ್ತುವುದು ಬೇಡ, ಏಕೆಂದರೆ ನಮ್ಮ ಗಾಡಿ ಆ ದಿಕ್ಕಿನಲ್ಲಿ ನಿಂತಿದೆ. ಅದನ್ನು ಹತ್ತಲು ನಾವು ಮತ್ತೆ ಕೋಟೆಯ ಒಂದು ಸುತ್ತು ಹೋಗಬೇಕು, ಎಂದುಕೊಂಡು ಎಲ್ಲಾ ರಾಣೀವಾಸದವರಿಗೂ ಬಾಗಿಲಿಂದಲೇ ಉಭಯ ಕುಶಲೋಪರಿ ವಿಚಾರಿಸಿ, ಹೊರಬಂದೆವು. ನಮ್ಮ ಕಾಲುಗಳಿಗೆ ಸುಸ್ತಾಗಿದ್ದರೂ ಮನ ಇತಿಹಾಸ ನೆನೆಯುತ್ತಿತ್ತು. ಮೊಘಲ್ ರಾಜರು ಎಷ್ಟು ಕಷ್ಟಪಟ್ಟು ಸಾಮ್ರಾಜ್ಯ ಕಟ್ಟಿದ್ದಾರೆ. ಆದರೂ ಪ್ರತಿ ಕ್ಷಣವೂ ಮುಳ್ಳಿನ ಮೇಲೆ ನಿಂತಂತಹ ಜೀವನ ಅವರದಾಗಿತ್ತು.            

                                                                1

2                                                                                                                                                         

ದಾಸರು ಹಾಡಿಲ್ಲವೇ, ಯಾರು ಹಿತವರು ನಿನಗೆ ಈ ಮೂವರೊಳಗೆ, ನಾರಿಯೋ ಧಾರುಣೀಯೋ ಬಲು ಧನದ ಸಿರಿಯೋ, ಮುನ್ನ ಶತ ಕೋಟಿ ರಾಜರುಗಳಾಳಿದ ನೆಲವ ತನ್ನದೆಂದೆನುತ ಶಾಸನವ ಬರೆಸಿ, ಬಿನ್ನಣದ ಮನೆ ಕಟ್ಟಿ ಕೋಟೆ ಕೊತ್ತಳವಿತ್ತ, ಚನ್ನಿಗನು ಅಸುವಳಿಯೆ ಹೊರಗೆ ಹಾಕುವರು ದೆಹಲಿಯ ಕೋಟೆ ಅಲ್ಲಿಯೇ ಉಳಿಯಿತು. ನಾವೆಲ್ಲ ಕೇವಲ ನೆನಪುಗಳೊಂದಿಗೆ ನಮ್ಮ ವಾಹನವನ್ನೇರಿದೆವು.ಮುಂದಿನ ನಮ್ಮ ಗುರಿ ಇಂಡಿಯಾ ಗೇಟ್. ಸಂಸತ್ ಭವನ್ ಸುಪ್ರೀಂ ಕೋರ್ಟ, ರಾಷ್ಟ್ರಪತಿ ಭವನ್ ಮುಂತಾದವು.  ಅವೆಲ್ಲ ಬಸ್ಸಿನಲ್ಲೇ ಕುಳಿತು ಒಂದು ಸುತ್ತು ಸುತ್ತಿದ್ದು. ಬಿರ್ಲಾ ಮಂದಿರವನ್ನೂ ಕೋಟೆಯ ದಾರಿಯಲ್ಲಿಯೇ ನೋಡಿದ್ದು. ಬಿಡಿ. ಬಿಡಿ. ಶಿಖರ ದರ್ಶನಂ….. ಎಂದು ಆದೇನೋ ಹಾಡಿದ್ದಾರಲ್ಲ, ಹಾಗೂ ನಮ್ಮ ನಮ್ಮ ಭಾಗ್ಯ ನಮಗೆ.  ದೆಹಲಿಯೇನು ನಮ್ಮ ತಾತನ ಮನೆಯ ಗಂಟೆ?  ಹೋದೊಡನೆಯೇ ನಮಗೆ ತೆಕ್ಕೆ ಹಾಕಿ ಸೋದರ ಮಾವನ ತರಹ ಆಥಿತ್ಯ ನೀಡುವುದಕ್ಕೆ. ಅದನ್ನು ಪಳಗಿಸುವುದಕ್ಕಾಗೇ ಎಲ್ಲಾ ರಾಜ ಮಹಾರಾಜರೂ ಕನಸು ಮನಸಿನಲ್ಲಿಯೂ ಕನಸು ಕಂಡವರು. ನಮ್ಮ ಕ್ಷಣದ ಹವಣಿಕೆಗೆ ಅದು ಅಷ್ಟು ತೆರೆದು ಕೊಂಡಿದ್ದೇ ಭಾಗ್ಯ. 

ಅಲ್ಲಿಂದ ಮುಂದೆ ಎಲ್ಲರದೂ ಶಾಪಿಂಗ್ ಸಾಮ್ರಾಜ್ಯ. ಎಲ್ಲರೂ ಹೇಗೆ ತಮ್ಮ ತಮ್ಮ ಲೋಕದಲ್ಲಿದ್ದರೆಂದರೆ, ಈ ತಿರುಗಾಟಕ್ಕೆ ನಮಗಿರುವ ಸಮಯ ತುಂಬಾ ಕಡಿಮೆ. ಆದ್ದರಿಂದ ಕೇವಲ ಒಂದು ಗಂಟೆಯೊಳಗೆ ಎಲ್ಲಾ ಇಲ್ಲಿ ಸೇರಿರಬೇಕು, ಎಂದು ಎಲ್ಲರೂ ಓಡಿದರು. ಪಾಪ! ಭಾಷೆ ಅರಿಯದ ಸೇತು ಹಾಗೂ ಶೋಭ ನಿರಾಸೆಯಿಂದ ಕಣ್ತುಂಬಿ ನಿಂತಿದ್ದರು. ಸರಿ ಅವರನ್ನೂ ನಮ್ಮ ಗುಂಪಿಗೆ ಸೇರಿಸಿಕೊಂಡು ನಾವೂ ಒಂದರ್ಥದಲ್ಲಿ ಓಡಿದೆವು. ಕೈಗೆ ಸಿಕ್ಕದ ವಸ್ತು, ಕಣ್ಣಿಗೆ ಕಂಡ ವಸ್ತುವನ್ನು ಕೊಳ್ಳಬಯಸಿದ್ದು ಮಾತ್ರ ದಡ್ಡತನ. 

ಆದರೂ ಆ ಗಡಿಬಿಡಿಯಲ್ಲಿಯೂ ನಮ್ಮ ಪ್ರೀತಿ ಪಾತ್ರರು ಬಯಸಿದ ಆರಿಸಿದ ವಸ್ತುವಿಗೆ ನಾವೇ ದುಡ್ಡು ಕೊಟ್ಟು, ನಿಮಗೆ ಇದು ನಮ್ಮ ಕಾಣಿಕೆ, ಇದು ನಿಮ್ಮ ಮಗನಿಗೆ ಎಂದೋ ಕೊಡಿಸಿದೆವು. ಅವರೂ ಸಹ ನಮಗೆ ಇದೇ ರೀತಿ ಇದು ನಿಮ್ಮ ಮಗಳಿಗೆ, ಇದು ನಿಮಗೆ ಎಂದೆಲ್ಲಾ ನಮ್ಮ ಆದರ ಪ್ರೀತಿಯನ್ನು ಹಿಂದಿರುಗಿಸಿದರು. ಅಪ್ಪಟ ಭಾರತೀಯತೆಯ ಅತಿಥಿ ದೇವೋಭವ. ಮಾನ-ಪಾನ. ಕಲ್ಲವ್ವ ಕಡುಬು ಕೊಟ್ಟರೆ ಮಲ್ಲವ್ವ ಹೋಳಿಗೆ ಕೊಟ್ಟಳು ಅಲ್ಲವೇ. 

ಅಂತೂ ಹೊರಲಾರದೇ, ಹೊತ್ತುಕೊಂಡು ಬಂದ ಗಂಟು, ಮೊದಲೇ ಭಾರತದ ಜನಸಂಖ್ಯೆಯಂತಿದ್ದ ನಮ್ಮ ಮೊದಲಿನ ಲಗೇಜನ್ನೂ ಮೀರಿಸಿತ್ತು. ಸಮಯ ಹಾಗೂ ಕೊನೆಯ ದಿನವಾದ್ದರಿಂದ ದುಡ್ಡಿನ ಥೈಲಿಯಂತೆ ಖರೀದಿಸಿದ್ದು. ಮನಸ್ಸಿನ ಆಸೆಯಂತಲ್ಲ. ಎಲ್ಲರೂ ದೊಡ್ಡ ದೊಡ್ಡ ಪ್ಲಾಸ್ಟಿಕ್ ಚೀಲದಲ್ಲಿ ಒಟ್ಟಿಗೇ ಕಟ್ಟಿದ್ದೆವು. ಒಂದಿಬ್ಬರು ಜಾಣರು ಅದಕ್ಕಾಗೇ ಒಂದೊಂದು ಸೂಟಕೇಸ ಖರೀದಿಸಿದ್ದರು. ಅಂತೂ ಈ ಪ್ರವಾಸದ ಅವಧಿಯಲ್ಲಿ ಎಲ್ಲರ ಅನುಭವವೂ ಒಂದಕ್ಕೆ ಎರಡಾಗಿತ್ತೋ ಇಲ್ಲವೋ ಗೊತ್ತಿಲ್ಲ. ಮೊದಲೇ ಹೆಚ್ಚಿದ್ದ ನಮ್ಮ ಲಗೇಜಿನ ಪ್ರಮಾಣ ಮಾತ್ರ ಗಣನೀಯವಾಗಿ ಹೆಚ್ಚಿತ್ತು. ನಮ್ಮ ಪ್ರವಾಸದ ಕೊನೆಯ ಘಟ್ಟಕ್ಕೆ ಬಂದಿದ್ದೆವು. ಎಲ್ಲ ಶುಭ ಕಾರ್ಯಗಳಿಗೂ ಒಂದು ಮುಕ್ತಾಯವಿದೆಯಲ್ಲವೇ? 

ಈಗಲೂ ಉತ್ಸಾಹಿತರಾಗಿಯೇ ದೆಹಲಿಯ ರೈಲು ನಿಲ್ದಾಣಕ್ಕೆ ಬಂದೆವು. ನವ ದೆಹಲಿಯ ರೈಲು ನಿಲ್ದಾಣದಲ್ಲಿ ಯಥಾ ಪ್ರಕಾರ ಕೂಲಿಗಳೊಂದಿಗೆ ಲಗೇಜು ಹೇರಿಕೊಂಡು, ಈಗ ಹೆಚ್ಚಿನ ಲಗೇಜುಗಳನ್ನು ನಾವೂ ಹೊತ್ತುಕೊಂಡು ಅಂತೂ ಇಂತೂ ಕರ್ನಾಟಕ ಎಕ್ಸಪ್ರೆಸ್ ಹತ್ತುವುದಕ್ಕೆ ತಯಾರಾದೆವು. ಎಲ್ಲಾ ಲಗೇಜುಗಳನ್ನು ಟ್ರೇನ್ ಒಳಗಡೆ ಸಾಗಿಸಲು ಕೃಷ್ಣರವರು ಮುಂದಾಳತ್ವ ವಹಿಸಿದರು ಪ್ರತಿಸಲದಂತೆ. ಹಾಗೂ ಹೊಟ್ಟೆಗೆ ಹಿಟ್ಟನ್ನು ಹುಡುಕಿಕೊಂಡು ಕುಮಾರ ರವರು ಹೊರಟರು. ಅವರು ಎಲ್ಲಾ ಲಗೇಜನ್ನೂ ಟ್ರೇನ್ ನಲ್ಲಿ ಇರಿಸಿದ ನಂತರ, ನಾವು ರೈಲನ್ನೇರಿ, ಸರಿಯಾಗಿ 9-25ಕ್ಕೆ ರೈಲು ಹೊರಟನಂತರ ಕುಮಾರರವರು ತಂದ ತಿಂಡಿಯನ್ನು ತಿಂದು ಮಲಗಿದೆವು. ನಾನು ಮುಂಬೈಗೆ ಹೋಗಿದ್ದೆ. ಮುಂಬೈ ಪಟ್ಟಣ ನೋಡುದಕೆ. ಎಸ್ ನೋ ಥ್ಯಾಂಕ್ಯು ಇವು ಮೂರು ಬಿಟ್ಟರೆ ಮತ್ತೊಂದು ಗೊತ್ತಿಲ್ಲ ಎಂಬ ಪ್ರಾಥಮಿಕ ಶಾಲೆಯ ಹಾಡು ಯಾಕೆ ನೆನಪಾಯ್ತೊ ಗೊತ್ತಿಲ್ಲ. ನಗು ಬಂತು. ಎಲ್ಲಿಯ ಬೆಂಗಳೂರು ಎಲ್ಲಿಯ ಹಿಮಾಲಯದ ತುದಿ. ಹೋಗಬೇಕೆಂದು ಎಷ್ಟೆಷ್ಟೋ ಅಸೆ ಪಟ್ಟವರಿಗೆ ಆಗಿರಲಿಕ್ಕಿಲ್ಲ. ಇದು ನನಗೆ ಬಯಸದೇ ಬಂದ ಭಾಗ್ಯ. 

3

4
      
ಹಾಗೇಯೇ ಆ ದಿನ ಕಳೆಯಿತು. ಮರುದಿನ ಬೆಳಿಗ್ಗೆ, ಆರು ಗಂಟೆಗೇ ಮಂತ್ರಾಲಯಂ ನಿಲ್ದಾಣ. ಮುಂಜಾವಿನ ಸೂರ್ಯ ದೂರದಲ್ಲಿ ಉದಯಿಸುತ್ತಿದ್ದ. ಇಲ್ಲಿಂದಲೇ ರಾಯರಿಗೊಂದು ಪ್ರಣಾಮ ಹಾಕಿದೆವು. ರೈಲು ಸಮಯಕ್ಕೆ ಸರಿಯಾಗಿ ಚಲಿಸುತ್ತಿತ್ತು. ದೊಡ್ಡ ಬಳ್ಳಾಪುರ ಘಾಟಿ ಸುಬ್ರಹ್ಮಣ್ಯನ ದೇವಸ್ಥಾನಕ್ಕೆ ಕೈ ಮುಗಿದು, ಮಗಳಿಗೂ, ತಂದೆಗೂ ಫೋನು ಮಾಡಿದೆ. ಸತೀಶ ದಂಪತಿಗಳು ಯಾವುದೋ ಟ್ರೀಟ್ ಗೆ ಹೊರಟಿದ್ದರು.  ಬೆಂಗಳೂರು ಬಂದಿತು. ರೈಲು ನಿಗದಿತ ಸಮಯಕ್ಕಿಂತ ಒಂದೂವರೆ ಗಂಟೆ ಲೇಟು ಎಂದು ಯಾರೋ ಇಂಟರ್ ನೆಟ್ ಮಾಹಿತಿ ನೀಡಿದ್ದರಂತೆ.  
    
ಎಲ್ಲಾ ಬಂಧುಗಳೂ ನಾವೆಲ್ಲ ಲಗೇಜನ್ನು ರೈಲು ನಿಲ್ದಾಣದ ಹೊರಗೆ ತಂದು ನಿಂತಾಗ ಬಂದರು. ಮಮ್ಮಿ ಡ್ಯಾಡಿ ನನಗೂ ಶಶಿಕಲಾ ಇವರಿಗೂ ಒಂದೊಂದು ಹೂವಿನ ಬೊಕೆ ಕೊಟ್ಟು ಸ್ವಾಗತಿಸಿದರು. ನಮ್ಮ ಲಗೇಜುಗಳೊಡನೆ ನಮ್ಮ ನಮ್ಮ ಟ್ಯಾಕ್ಸಿ ಏರಿ ಮನೆಗೆ ಬಂದೆವು. ಬಾಗಿಲಲ್ಲಿ ಮಮ್ಮಿ ಗಂಗೆಗೆ ಆರತಿ ಮಾಡಿ ಮನೆಯೊಳಗೆ ಸ್ವಾಗತಿಸಿದಳು. ನನ್ನ ಸ್ನಾನವಾಗುವುದರೊಳಗೆ ಊಟ ತಯಾರಿತ್ತು.     ಆದರೆ ಮನಸ್ಸಿನ್ನೂ ಮುಕೇಶನ ಹಾಡು, ‘ಫಿರ್ ಜಾವೋ ಕಾಶೀ, ಫಿರ್ ಜಾವೋ ಕಾಬಾ, ಪೆಹಲೇ ಪಡೋಶೀ ಕೊ ಪ್ಯಾರ ಕರೋ ಬಾಬಾ’ ನೆನಪಿಸಿಕೊಳ್ಳುತ್ತಿತ್ತು. ಅಲ್ಲದೇ,
 ‘ಸಜನರೆ ಝೂಟ್ ಮತಬೋಲೋ, ಖುದಾ ಕೆ ಪಾಸ್ ಜಾನಾ ಹೈ,
  ನ ಹಾಥೀ ಹೈ ನ ಘೋಡಾ ಹೈ, ವಹಾಂ ಪೈದಲ್ ಹೀ ಜಾನಾ ಹೈ”

ಎಂತಹ ಹಾಡು, ಹಾಡೆಂದರೆ ಇದು, ಎಲ್ಲಾ ಧರ್ಮಗಳ ಸಾರ ಸಂಗ್ರಹಗಳ ತಿರುಳು ಎಂದಿತು ಮನ. ಧರ್ಮಜನೇ ಹಾಡಿದಂತಿತ್ತು. ಹಿಮಾಲಯವೆಂಬ ಸ್ವರ್ಗದ ತುಣುಕೊಂದನ್ನು ನಾವೆಲ್ಲ ಜೀವಂತವಾಗಿಯೇ ನೋಡಿ ಆನಂದಿಸಿ, ಮರೆಯಲಾರದ ಅನುಭವಗಳನ್ನು ನೀಡಿದ ಆ ನೆಲಕ್ಕೆ, ಆ ಸ್ವರ್ಗಸದೃಶ ಭೂಮಿಗೆ ವಿಶೇಷವಾಗಿ, ಮತ್ತೆ ಮತ್ತೆ ವಂದಿಸಿ.  ಇಷ್ಟೆಲ್ಲ ಕೌತುಕವನು ಒಡಲಲ್ಲಿಟ್ಟು ಕೊಂಡ ಭಾರತಮಾತೆಯೇ ಇದೋ ನಿನಗೊಂದು ನಮನ, ಇದೋ ನಿನಗೊಂದು ಸಲಾಮ್ ಎಂದು ಮತ್ತೆ ಮತ್ತೆ ಹೇಳಿತು ಮನ. ಮತ್ತಿನ್ನು ಈ ಬಗ್ಗೆ ಬರೆಯುವುದು ಬಾಕಿ ಇತ್ತು. ನಾಲ್ಕು ತಿಂಗಳ ನಂತರ ಈ ಪುಟ್ಟ ಪ್ರವಾಸ ಕಥನ ಈಗ ನಿಮ್ಮ ಕೈಯಲ್ಲಿದೆ.


ಮುಗಿಯಿತು..

ಸಂಪಾದಕರ ನುಡಿ: ಶ್ರೀಮತಿ ವೃಂದಾ ಸಂಗಮ್ ರವರು “ಹಿಮಾಲಯವೆಂಬ ಸ್ವರ್ಗ” ಎಂಬ ತಮ್ಮ ಪ್ರವಾಸ ಕಥನವನ್ನು ಪಂಜುವಿಗಾಗಿ ಕಳುಹಿಸಿಕೊಟ್ಟಿದ್ದರು. ಈ ಪ್ರವಾಸ ಕಥನ ಪಂಜುವಿನಲ್ಲಿ ಹತ್ತು ವಾರಗಳ ಕಾಲ ಪ್ರಕಟವಾಯಿತು. ಪಂಜುವಿಗಾಗಿ ತಮ್ಮ ಲೇಖನ ಕಳುಹಿಸಿಕೊಟ್ಟ ಶ್ರೀಮತಿ ವೃಂದಾ ಸಂಗಮ್ ಅವರಿಗೆ ಪಂಜು ಓದುಗರ ಪರವಾಗಿ ಅನಂತ ವಂದನೆಗಳು.

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x