ಹಿಮಾಚಲ ಪ್ರದೇಶದ ಮನಾಲಿಯಿಂದ ಜಮ್ಮು ಕಾಶ್ಮೀರದ ಲೇಹ್, ಲಡಾಖ್‍ಗೆ ಸೈಕಲ್ ಪಯಣ ಮಾಡುವುದು, ವಿಶ್ವದ ಅತ್ಯಂತ ಕಠಿಣ ಮತ್ತು ಸಾಹಸದ ಪಯಣಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ.
ಹಿಮಾಲಯದ ಸೌಂದರ್ಯ ಸವಿಯುತ್ತ ಸಾಗುವ ಪಯಣ ಸಂತೋಷ ನೀಡುವುದು ನಿಜ, ಆದರೆ ಸೈಕಲ್ ಸವಾರನ ಕೌಶಲ್ಯ, ತಾಳ್ಮೆ ಮತ್ತು ಧೈರ್ಯವನ್ನು ಪರೀಕ್ಷಿಸುವಲ್ಲಿ ರಸ್ತೆಗಳು ಮೊದಲು. ಕೆಲವಡೆ ಚೆನ್ನಾಗಿರುವ ರಸ್ತೆಗಳಿದ್ದರೆ, ಅನೇಕ ಕಡೆ ಕಚ್ಚಾ ರಸ್ತೆಗಳಲ್ಲಿ ಪ್ರಯಾಣ ಮಾಡಬೇಕು. ಸಮತಟ್ಟಾಗಿದೆ ಎನ್ನುವ ರಸ್ತೆಯಲ್ಲಿ ಇದ್ದಕ್ಕಿದಂತೆ ಕಡಿದಾದ ಏರುಗಳು ಅಥವಾ ಎತ್ತರದಿಂದ ಪ್ರಪಾತಕ್ಕೆ ಇಳಿಯುವಂತಿರುವ ಇಳಿಜಾರುಗಳು ಮತ್ತು ಹೇರ್ ಪಿನ್ ತಿರುವುಗಳು ಎದುರಾಗುತ್ತವೆ. ಬೀಸುವ ಗಾಳಿ, ಚಳಿ, ಮಂಜು ಜೊತೆಗೆ ಎತ್ತರದ ಪ್ರದೇಶಗಳಲ್ಲಿ ಗಾಳಿಯಲ್ಲಿ ಕಡಿಮೆಯಾಗುವ ಆಮ್ಲಜನಕ ವಾತಾವರಣದಲ್ಲಿ ಸೈಕಲ್ ಸವಾರಿ ಮಾಡುವುದು ಕೆಲವೊಮ್ಮೆ ತುಂಬಾ ಕಷ್ಟವಾಗುತ್ತದೆ. ಸ್ನೇಹಿತರ ಜೊತೆಯಲ್ಲಿ ಮಾಡಿದ ಈ ಸೈಕಲ್ ಪಯಣದ 11 ದಿನಗಳ ಅನುಭವನ್ನು ಈ ಲೇಖನದಲ್ಲಿ ಹಂಚಿಕೊಳ್ಳುವ ಪ್ರಯತ್ನ ಮಾಡಿದ್ದೇನೆ.
ಮೊದಲ ದಿನ ಮನಾಲಿಯಲ್ಲಿ
ಅಲ್ಲಿನ ಹವಾಮಾನಕ್ಕೆ ಹೊಂದಿಕೊಳ್ಳಲು ನಗ್ಗರ್ ಮತ್ತು ವಿಶ್ವವಿಖ್ಯಾತ ಕಲಾವಿದರಾದ ರೋರಿಚ್‍ರವರ ಕಲಾ ಗ್ಯಾಲರಿಯವರೆಗೆ, ಸುಮಾರು 19 ಕಿ.ಮಿ ದೂರ ಸೈಕಲ್ ಪಯಣ ಮಾಡಿದ್ದಾಯಿತು. ಅಲ್ಲಿಂದ ಸುತ್ತಮುತ್ತ ಇರುವ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿ, ಮನಾಲಿಯಲ್ಲಿದ್ದ ಹೋಟಲ್‍ಗೆ ಹಿಂತಿರುಗಿದಾಗ ರಾತ್ರಿಯಾಗಿತ್ತು.
ಎರಡನೆಯ ದಿನ ಮನಾಲಿಯಿಂದ ಕೋಥಿ ಮತ್ತು ಕೋಥಿಯಿಂದ ಮಾರ್ಹಿ ಪಯಣ
ಬೆಳಗಿನ ಉಪಹಾರದ ನಂತರ ಮನಾಲಿಯಿಂದ ಶುರುವಾದ ಪಯಣ, ಹೂವಿನ ಕಣಿವೆಗಳು, ಕಾಡುಗಳು ಮತ್ತು ಅನೇಕ ಹಳ್ಳಿಗಳ ನಡುವೆ ಸಾಗಿತ್ತು. ಇದು ವಿಶ್ವದ ಸುಂದರ ಪಯಣಗಳಲ್ಲಿ ಒಂದು ಎನ್ನಲಾಗುತ್ತದೆ. ಕೋಥಿಯೆಂಬ ಊರಿನಲ್ಲಿ ಊಟ ಮಾಡಿ, ಖ್ಯಾತ ರೋಹಲ್ಲಾ ಜಲಪಾತದ ಕಡೆಗೆ ಪಯಾಣ ಮುಂದುವರೆಸಿದೆವು.
ಮಾರ್ಹಿ ರೋಡ್
ಅನೇಕ ಹೇರ್ ಪಿನ್ ತಿರುವುಗಳಿರುವ ಈ ಮಾರ್ಗದಲ್ಲಿ ಸೈಕಲ್ ಸವಾರಿ ಮಾಡುವುದು ಅದ್ಭುತ ಅನುಭವ. ರೋಹಲ್ಲಾ ಜಲಪಾತ ನೋಡಿ, ಅಲ್ಲಿಂದ ಪಯಣ ಮುಂದೆವರೆಸಿದ್ದು ಮಾರ್ಹಿಯ ಕಡೆಗೆ. ಸಂಜೆ ಮಾರ್ಹಿ ತಲುಪಿದಾಗ ಅರಿವಾಗಿದ್ದು ಅಂದು ಸುಮಾರು 45ಕಿ.ಮಿ ಪಯಾಣ ಮಾಡಿದ್ದು, ಮನಾಲಿಗಿಂತ 1250 ಮೀಟರ್ ಎತ್ತರದ ಸ್ಥಳವನ್ನು ತಲುಪಿದ್ದೇವೆ ಎಂದು.
ಮೂರನೆಯ ದಿನ ಮಾರ್ಹಿಯಿಂದ ಸಿಸ್ಸುಗೆ ಪಯಣ
ಮಾರ್ಹಿಯಿಂದ ವಿಶ್ವವಿಖ್ಯಾತ ರೋಹಟಾಂಗ್ ಲಾ ಪಾಸ್ ಗೆ ಪಯಾಣವಾರಂಭಿಸಿದೆವು. ಜೋರಾಗಿ ಬೀಸುತ್ತಿದ್ದ ಗಾಳಿಯಲ್ಲಿ, ಅನೇಕ ಹೇರ್ ಪಿನ್ ತಿರುವುಗಳಲ್ಲಿ ಸವಾರಿ ಮಾಡುತ್ತಾ ಏರು ದಾರಿಯಲ್ಲಿ ಪಯಾಣ ಮಾಡಿ, ಅಂತೂ ರೋಹಟಾಂಗ್ ಪಾಸ್ ಲಾ ತಲುಪಿದಾಗ, ಅದುವರೆಗೂ ಪಟ್ಟ ಶ್ರಮ ಸಾರ್ಥಕವೆನಿಸಿತ್ತು. ಸಮುದ್ರಮಟ್ಟದಿಂದ ಸುಮಾರು 3980 ಮೀಟರ್ ಎತ್ತರದಲ್ಲಿರುವ ಈ ಸ್ಥಳದಲ್ಲಿ ವರ್ಷದ ಅನೇಕ ತಿಂಗಳು ಹಿಮವಿರುತ್ತದೆ. ಹಿಮ ಕರಗಿ, ರಸ್ತೆಯನ್ನು ಸಂಚಾರ ಮುಕ್ತಗೊಳಿಸಲು ಕೆಲಸ ಮಾಡುವುದು ನಮ್ಮ ಭಾರತೀಯ ಸೈನಿಕರು. ಅಷ್ಟು ಎತ್ತರದ ಪ್ರದೇಶದಲ್ಲಿ ಈ ಶ್ರಮದಾಯಕ ಕೆಲಸವನ್ನು ಮಾಡುವ ಅವರಿಗೆ ನಮನಗಳು. ರೋಹಟಾಂಗ್ ಲಾ ಪಾಸ್ ನಿಂದ ಪಯಣ ಮುಂದುವರೆಸಿ, ಕೆಳಗಿಯುವ ರಸ್ತೆಯಲ್ಲಿ ಸುಮಾರು 22 ಕಿ.ಮಿ ಪಯಣ ಮಾಡಿದಾಗ ಸಿಕ್ಕಿದ್ದು ಕೋಕ್‍ಸರ್ ಎಂಬ ಊರು. ಅಲ್ಲಿಂದ ಏರುಮುಖವಾಗಿ ಹುಲ್ಲುಗಾವಲು ಮತ್ತು ಪುಟ್ಟ ಹಳ್ಳಿಗಳ ನಡುವೆ ಸಾಗುವ ರಸ್ತೆಯಲ್ಲಿ ಪಯಣ ಮಾಡಿ, ಸಿಸ್ಸು ತಲುಪಿದಾಗ ಸಂಜೆಯಾಗಿತ್ತು. ಇಂದು ಪಯಣಿಸಿದ ದೂರ 53 ಕಿ.ಮಿ ಮತ್ತು ಏರಿದ ಎತ್ತರ 1600 ಮೀಟರ್ !!!
ಮನಾಲಿಯಿಂದ ಲೇಹ್ ಲಡಾಖ್ ಪಯಣದಲ್ಲಿ ಸಿಗುವ ಮೊದಲ ಪಾಸ್, ರೋಹಟಾಂಗ್ ಲಾ ಪಾಸ್ ಮತ್ತು ಪೀರ್ ಪಿಂಜಲ್ ಪರ್ವತ ಶ್ರೇಣಿಯ ಸೌಂದರ್ಯ ನೋಡಿದ ಸಂತೋಷ, ಅಂದಿನ ಮೈಕೈ ನೋವು, ಆಯಾಸವನ್ನು ಮರೆಸಿತ್ತು.
ನಾಲ್ಕನೆಯ ದಿನ ಸಿಸ್ಸುವಿನಿಂದ ಜಿಸ್ಫಾಗೆ ಪಯಣ
ಸಿಸ್ಸುವಿನಿಂದ ಪಯಾಣ ಮುಂದುವರೆಸಿದಾಗ, ರಸ್ತೆ ಹೆಚ್ಚು ಕಡಿಮೆ ಒಂದೇ ಮಟ್ಟದಲ್ಲಿದ್ದ ಕಾರಣ, ಸೈಕಲ್ ಸವಾರಿ ಸುಲಭವಾಗಿತ್ತು. ಚಂದ್ರ ಮತ್ತು ಭಾಗಾ ನದಿಗಳ ಸಂಗಮವಾಗಿ ಚಂದ್ರಭಾಗಾ ಅಥವಾ ಚೇನಾಬ್ ನದಿಯಾಗುವ ತಾಂಡಿಗೆ ಬಂದು ತಲುಪಿದೆವು. ತಾಂಡಿಯಿಂದ ಕೇಲಾಂಗ್ ತಲುಪಿ, ಅಲ್ಲಿಂದ ಜಿಸ್ಫಾಗೆ ಹೋಗಿ ಸೇರಿದಾಗ ಸಂಜೆಯಾಗಿತ್ತು. ಇಂದು ಪಯಣಿಸಿದ ದೂರ 64 ಕಿ.ಮಿ ಮತ್ತು ಏರಿದ ಎತ್ತರ 600 ಮೀಟರ್.
ಐದನೆಯ ದಿನ ಜಿಸ್ಫಾದಿಂದ ಪಾಟ್‍ಸಿಯೋಗೆ ಪಯಣ
ಜಿಸ್ಫಾದಿಂದ ಹೊರಟು ಸಮುದ್ರ ಮಟ್ಟದಿಂದ ಸುಮಾರು 3235 ಮೀಟರ ಎತ್ತರದಲ್ಲಿರುವ ದಾರ್ಚಾ ತಲುಪಿದೆವು. ದಾರ್ಚಾದಲ್ಲಿ ಕೆಲಕಾಲ ವಿಶ್ರಮಸಿ ಪಯಾಣ ಮುಂದುವರೆಸಿ ಸಮುದ್ರ ಮಟ್ಟದಿಂದ ಸುಮಾಉ 3650 ಮೀಟರ್ ಎತ್ತರದಲ್ಲಿರುವ ಪಾಟ್‍ಸಿಯೋ ತಲುಪಿದಾಗ ಸಂಜೆಯಾಗಿತ್ತು. ಹಿಮಾಲಯ ಪರ್ವತಗಳಲ್ಲಿ ಇರುವ ಹವಾಮಾನಕ್ಕೆ ಹೊಂದಿಕೊಳ್ಳಲು ಈ ದಿನದ ಪಯಣ ಮುಖ್ಯವಾಗಿತ್ತು. ಇಂದು ಪಯಣಿಸಿದ ದೂರ ಸುಮಾರು 50 ಕಿ.ಮಿ. ಆದರೆ ಇಲ್ಲಿನ ಹವಾಮಾ£ಕ್ಕೆ ಹೊಂದಿಕೊಳ್ಳಲು ಮತ್ತು ಸೈಕಲ್ ಸವಾರಿ ಮಾಡಲು ಹೆಚ್ಚು ಸಮಯ ಬಳಸಿದೆವು.
ಆರನೆಯ ದಿನ ಪಾಟ್‍ಸಿಯೋದಿಂದ ಸರ್ಚುಗೆ ಪಯಣ
3650 ಮೀಟರ್ ಎತ್ತರದಲ್ಲಿರುವ ಪಾಟ್‍ಸಿಯೋದಿಂದ ಸುಮಾರು 4892 ಮೀಟರ್ ಎತ್ತರದಲ್ಲಿರುವ ಬಾರಾಲಚಾ ಲಾ ಪಾಸ್ ತಲುಪುವುದು ಇಂದಿನ ಕಠಿಣ ಮತ್ತು ಸವಾಲಿನ ಪಯಣವಾಗಿತ್ತು. ಲಡಾಖ್, ಸ್ಪಿತಿ, ಲಾಹೋಲಿ ಮತ್ತು ಜೆನ್ಸಾರ್‍ಗಳಿಂದ ಬರುವ ದಾರಿಗಳು ಕೂಡುವ ಪ್ರದೇಶ ಬಾರಾಲಚಾ ಲಾ ಪಾಸ್. ಇನ್ನೂ ಎಷ್ಟು ದೂರ ಪಯಾಣ ಮಾಡಬೇಕು ಎಂದು ಸೈಕಲ್ ಸವಾರನ ತಾಳ್ಮೆ ಪರೀಕ್ಷಿಸುವಂತೆ ಇದೆ ಬಾರಾಲಚಾ ಲಾ ಪಾಸ್‍ವರೆಗಿನ ದೂರದ ದಾರಿ. ಕಷ್ಟಪಟ್ಟು ಬಾರಾಲಚಾ ಲಾ ಪಾಸ್ ತಲುಪಿದಾಗ, ಹಿಮಾಲಯ ಪರ್ವತ ಶ್ರೇಣಿಯ ಸೌಂದರ್ಯ ನೋಡುವ ಅವಕಾಶ ದೊರೆಯಿತು. ಚಂದ್ರಭಾಗಾ ಪರ್ವತ ಮತ್ತು ಇತರೆ ಹಿಮದಿಂದ ಆವೃತವಾದ ಪರ್ವತಗಳನ್ನು ನೋಡಿದಾಗ ಅದುವರೆಗಿನ ಆಯಾಸ ದೂರವಾಯಿತು.
ಬಾರಾಲಚಾ ಲಾ ಪಾಸ್
ಬಾರಾಲಚಾ ಲಾ ಪಾಸ್ ನಿಂದ ಕೆಳಗಿಳಿಯುತ್ತ ಕ್ರಮಿಸಿದ ದಾರಿ, ಕಿಲ್ಲಿಂಗ್ ಸೇರಾಯಿ ಮಾರ್ಗವಾಗಿ ಸರ್ಚು ತಲುಪಿತು. ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ, ಲಡಾಖ್ ನ ಗಡಿಯಲ್ಲಿದೆ ಸರ್ಚು. ಮನಾಲಿಯಿಂದ ಹೊರಟು ಇಷ್ಟು ದೂರ ಬಂದಿದ್ದೇವೆ ಎನ್ನುವ ತೃಪ್ತಿ ಮತ್ತು ಲೇಹ್ ಲಡಾಖ್ ತಲುಪ ಬೇಕು ಎನ್ನುವ ಆಸೆಯೊಂದಿಗೆ ಸರ್ಚುವಿನಲ್ಲಿ ರಾತ್ರಿ ಕಳೆದೆವು.
ಇಂದು ಪಯಣಿಸಿದ ದೂರ 60 ಕಿ,ಮಿ ಮತ್ತು ಏರಿದ ಎತ್ತರ 1400 ಮೀಟರ್ !!. ಮನಾಲಿಯಿಂದ ಲೇಹ್ ಲಡಾಖ್ ಪಯಣದಲ್ಲಿ ಸಿಗುವ ಎರಡನೆಯ ಪಾಸ್, ಬಾರಾಲಚಾ ಲಾ ಪಾಸ್ ಇಂದು ನೋಡಿದ್ದು ಮರೆಯಲಾಗದ ಅನುಭವವಾಗಿತ್ತು.
ಏಳನೆಯ ದಿನ ಸರ್ಚುವಿನಿಂದ ವಿಸ್ಕಿ ನಲ್ಹಾಗೆ ಪಯಣ
ಸರ್ಚುವಿನಿಂದ ಪಯಾಣ ಮುಂದುವರೆಸಿ ಜೋರಾಗಿ ಬೀಸುವ ಗಾಳಿಯ ನಡುವೆ ಸರ್ಚು ಬಯಲು ಪ್ರದೇಶದಿಂದ ಬ್ರಾಂದಿ ನಲ್ಹಾ ಮಾರ್ಗವಾಗಿ ವಿಸ್ಕಿ ನಲ್ಹಾ ತಲುಪುವಷ್ಟರಲ್ಲಿ ಸಾಕು ಸಾಕಾಯಿತು. ಅಲ್ಲಿಂದ ಮುಂದುವರೆದು ಗಟಾ ಲೂಪ್ ತಲುಪಿದಾಗ ಎದುರಾಗಿದ್ದು ಹೊಸ ಸವಾಲು. ಇಲ್ಲಿಂದ ಸುಮಾರು 22 ಹೇರ್ ಪಿನ್ ತಿರುವುಗಳಲ್ಲಿ ಏರುಮುಖವಾಗಿ ಸೈಕಲ್ ಸವಾರಿ ಮಾಡಿ ನಕಲಿ ಲಾ ತಲುಪ ಬೇಕಾಗಿತ್ತು. ಕಷ್ಟಪಟ್ಟು ಸಮುದ್ರಮಟ್ಟದಿಂದ ಸುಮಾರು 4800 ಮೀಟರ್ ಎತ್ತರವಿರುವ ನಕಲಿ ಲಾ ತಲುಪಿದೆವು.
ನಕಲಿ ಲಾ
ಅಲ್ಲಿಂದ ಸ್ವಲ್ಪ ದೂರ ಇಳಿಮುಖವಾಗಿ ಸಾಗುವ ದಾರಿ, ಮತ್ತೆ ಏರುಮುಖವಾಗಿ ಸಾಗಿ ಸುಮಾರು 5100 ಮೀಟರ್ ಎತ್ತರವಿರುವ ಲಚಾಲುಂಗ್ ಪಾ ಪಾಸ್ ತಲುಪುತ್ತದೆ. ಬರಿ ಕಲ್ಲುಗಳು ತುಂಬಿರುವ ಇಷ್ಟು ಕಚ್ಚಾ ರಸ್ತೆಯಲ್ಲಿ ಸೈಕಲ್ ಸವಾರಿ ಮಾಡುವುದು ಕಷ್ಟದ ಕೆಲಸ. ಅನೇಕ ಕಡೆ ಸೈಕಲ್ ತಳ್ಳಿಕೊಂಡು ಮುಂದುವರೆಯುವಷ್ಟು ರಸ್ತೆ ಹದೆಗೆಟ್ಟಿದೆ ಕೂಡಾ. ಅಂತೂ ಲಚಾಲಾಂಗ್ ಪಾ ಪಾಸ್ ತಲುಪಿದೆವು. ಇಲ್ಲಿಂದ ಭಾರಿ ಗಾತ್ರದ ಬಂಡೆಗಲ್ಲುಗಳ ಹಿನ್ನಲೆಯಲ್ಲಿ ಸೈಕಲ್ ಪಯಣ ಮುಂದುವರೆಸಿ ಪಾಂಗ್ ತಲುಪಿದೆವು.
ಇಂದು ಕ್ರಮಿಸಿದ ದೂರ 84 ಕಿ.ಮಿ ಮತ್ತು ಏರಿದ ಎತ್ತರ 1200 ಮೀಟರ್ !!!
ಹೇರ್ ಪಿನ್ ತಿರುವುಗಳಲ್ಲಿ ಪಯಣಿಸುವಾಗ ಸೈಕಲ್ ಜಾರಿ ಬಿದ್ದು ಸಣ್ಣಪುಟ್ಟ ತರಚು ಗಾಯಗಳಾದವು. ಒಂದೇ ದಿನ ಇಷ್ಟು ದೂರ ಸೈಕಲ್ ಸವಾರಿ ಮಾಡಿದ ಕಾರಣ, ಮೈಕೈ ನೋವು ಹೆಚ್ಚಾಗಿತ್ತು ಕೂಡಾ.
ಎಂಟನೆಯ ದಿನ ಪಾಂಗ್ ನಿಂದ ಥಸೋ-ಕಾರ್ ಸರೋವರಕ್ಕೆ ಪಯಣ
ಇಷ್ಟು ದೂರ ಬಂದಿದ್ದೇವೆ, ಲೇಹ ಲಡಾಖ್ ತಲುಪಲೇ ಬೇಕು ಎಂದು ಮೈಕೈನೋವು ಲೆಕ್ಕಿಸದೆ ಪಯಾಣ ಮುಂದುವರೆಸಿದೆವು. ಪಾಂಗ್ ನಿಂದ ಪಯಣ ಮುಂದುವರೆಸಿ ಸುಮಾರು 4700 ಮೀಟರ್ ಎತ್ತರದಲ್ಲಿರುವ ಮೋರಿ ಬಯಲು ಪ್ರದೇಶ ತಲುಪಿದೆವು. ಹಿಮಾಲಯದಲ್ಲಿ ಮರುಭೂಮಿ ಇದೆ ಎಂದು ಗೊತ್ತಾಗುವುದು ಇಲ್ಲಿನ ರೂಪಶೂ ನೋಡಿದಾಗ. ಸುಮಾರು 4500 ಮೀಟರ್ ಎತ್ತರದಲ್ಲಿರುವ ಈ ಮರುಭೂಮಿಯಲ್ಲಿ ಎಲ್ಲಿ ನೋಡಿದರೂ ಹಸಿರು ಕಾಣದಷ್ಟು ಬರಡಾಗಿ ಕಾಣುತ್ತದೆ. ಇಂತಹ ದುರ್ಗಮ ಪ್ರದೇಶದಲ್ಲಿ ಚಾಂಗ್ ಪಾ ಸಮುದಾಯದ ಜನರು ವಾಸವಾಗಿದ್ದಾರೆ. ಅವರಿಗೊಂದು ಸಲಾಂ ಎಂದು, ಮರಳಿನ ದಾರಿಯಲ್ಲಿ ಸಾಗಿ ಥಸೋ-ಕಾರ್ ಸರೋವರ ತಲುಪಿದೆವು.
ಈ ಸರೋವರದ ಸುತ್ತಲು ಬಿಳಿಯ ಉಪ್ಪಿನ ರಾಶಿ ಇರುವುದರಿಂದ ಇದನ್ನು ಬಿಳಿಯ ಸರೋವರವೆಂದೂ ಕರೆಯುತ್ತಾರೆ. ಪಕ್ಷಿ ವೀಕ್ಷಣೆಗೆ ಈ ಸರೋವರಕ್ಕೆ ಕೆಲವರು ಬರುತ್ತಾರೆ. ಕಾಡು ಕತ್ತೆಗಳು ಹಿಂಡು ಹಿಂಡಾಗಿ ಇಲ್ಲಿ ತಿರುಗಾಡಿ ಕೊಂಡು ಇರುತ್ತವೆ ಕೂಡಾ. ಸರೋವರದಿಂದ ಕೆಲವು ಕಿ.ಮಿ ದೂರದಲ್ಲಿ ಟೆಂಟುಗಳಲ್ಲಿ ಇಂದು ರಾತ್ರಿ ಕಳೆದೆವು.
ಇಂದು ಪಯಣಿಸಿದ ದೂರ 57 ಕಿ.ಮಿ ಮತ್ತು ಏರಿದ ಎತ್ತರ 400 ಮೀಟರ್.
ಒಂಬತ್ತೆನಯ ದಿನ ಧೆಸೋ-ಕಾರ್ ಸರೋವರದಿಂದ ರುಂಪ್‍ಸೇಗೆ ಪಯಣ
ನಾಲ್ಕನೆಯ ದಿನ ಸಿಸ್ಸುವಿನಿಂದ ಹೊರಟ ನಂತರ ನಮಗೆ ಸಿಗುವ ಮೊದಲ ಊರು ರುಂಪ್‍ಸೇ !! ಇಷ್ಟು ದಿನ ನಾವು ಪಯಣಿಸಿದ್ದು ಹಿಮಾಲಯದ ರುದ್ರ ರಮಣೀಯ ನಿಸರ್ಗದ ನಡುವೆ ಎನ್ನುವುದು ಮರೆಯಲಾಗದ ಅನುಭವ.
ಸರೋವರದಿಂದ ನಮ್ಮ ಪಯಣ ಮುಂದುವರೆಸಿ ಥಾಗಲಾಂಗ್ ಲಾ ಪಾಸ್ ತಲುಪುವ ದಾರಿ ನಿಧಾನವಾಗಿ ಏರುಮುಖವಾಗಿ, ಕಠಿಣವಾಗುತ್ತದೆ. 5350 ಮೀಟರ್ ಎತ್ತರದಲ್ಲಿರುವ ಥಾಗಲಾಂಗ್ ಪಾ ಪಾಸ್, ಭಾರತದಲ್ಲಿರುವ ರಸ್ತೆ ಸಂಚಾರ ಸಾಧ್ಯವಿರುವ ಎರಡನೆಯ ಅತ್ಯಂತ ಎತ್ತರದ ಪಾಸ್ ಆಗಿದೆ. ಕಷ್ಟಪಟ್ಟು ಈ ಪಾಸ್ ತಲುಪಿದ ನಮಗೆ, ಹಿಮಾಲಯ ಮತ್ತು ಕಾರಾಕೋರಮ್ ಪರ್ವತ ಶ್ರೇಣಿಯ ಸುಂದರ ದೃಶ್ಯ ನೋಡಲು ಸಾಧ್ಯವಾಯಿತು.
ಥಾಗಲಾಂಗ್ ಲಾ ಪಾಸನಿಂದ ಇಳಿಮುಖವಾಗಿ ಪಯಣಿಸಿ ರುಂಪ್ ಸೇ ತಲುಪಿದಾಗ ಸಂಜೆಯಾಗಿತ್ತು. ಇಲ್ಲಿ ಹೆಚ್ಚಾಗಿ ಬಾರ್ಲಿ ಮತ್ತು ಆಲೂಗಡ್ಡೆ ಬೆಳಯುತ್ತಾರೆ. ಇಂದು ಪಯಣಿಸಿದ ದೂರ 82 ಕಿ.ಮಿ ಮತ್ತು ಏರಿದ ಎತ್ತರ 900 ಮೀಟರ್.
ಹತ್ತನೆಯ ದಿನ ರುಂಪ್‍ಸೇನಿಂದ ಲೇಹ್ ಗೆ ಪಯಣ
ರುಂಪ್‍ಸೇನಿಂದ ಲೇಹ್‍ಗೆ ಹೋಗುವ ದಾರಿಯಲ್ಲಿ ಲಡಾಖ್‍ನ ಅತ್ಯಂತ ¨sವ್ಯ ಮತ್ತು ಪ್ರಮುಖ ಭೌದ್ಧವಿಹಾರಗಳಲ್ಲಿ ಒಂದಾದ ಹೇಮಸೇ ಭೌದ್ಧವಿಹಾರಕ್ಕೆ ಹೋಗಿ ಬಂದೆವು. ಅಲ್ಲಿಂದ ಇಂಡಸ್ ನದಿಯನ್ನು ಅನುಸರಿಸಿ ಸಾಗಿದರೆ ಕಾರು ಎಂಬ ಸ್ಥಳ ಸಿಗುತ್ತದೆ. ಕಾರುವಿನಿಂದ ತಿಕ್ಷೇ ಗೆ ಪ್ರಯಾಣ ಮಾಡಿ, ಮುಂದೆ ಟಿಬೇಟಿಯನ್ ನಿರಾಶ್ರಿತರು ಇರುವ ಚೋಗ್ಲಾಮ್‍ಸರ್ vಲುಪಿದೆವು. ಇಲ್ಲಿಂದ ಮುಂದೆ ಪ್ರಯಾಣ ಮಾಡಿ ಲೇಹ್ ತಲುಪಿದೆವು.
ಇಂದು ಪ್ರಯಾಣ ಮಾಡಿದ ದೂರ 82 ಕಿ.ಮಿ ಮತ್ತು ಏರಿದ ಎತ್ತರ 450 ಮೀಟರ್.
ಹನ್ನೊಂದನೆಯ ದಿನ ಲೇಹ್‍ನಿಂದ ಕಾರ್ಡುಂಗ್ ಲಾ ಪಾಸ್ ಮತ್ತು ಲೇಹ್ ಗೆ ಹಿಂತಿರುಗಿದ್ದು
ಲೇಹ್‍ನ ಕಾರಾಕೋರಮ್ ಪರ್ವತ ಶ್ರೇಣಿಯಲ್ಲಿರುವುದು ಕಾರ್ಡುಂಗ್ ಲಾ ಪಾಸ್ ಲೇಹ್ ನಿಂದ ಸುಮಾರು 40 ಕಿ.ಮಿ ದೂರದಲ್ಲಿರುವ ಈ ಸ್ಥಳವನ್ನು ವಿಶ್ವದ ಅತ್ಯಂತ ಎತ್ತರದ ರಸ್ತೆ ಸಂಚಾರ ಸಾಧ್ಯವಿರುವ ಪಾಸ್ ಎನ್ನಲಾಗಿದೆ. ಲೇಹ್‍ನಿಂದ 24 ಕಿ.ಮಿವರೆಗೆ ರಸ್ತೆಯಲ್ಲಿ ಸೈಕಲ್ ಪಯಣ ಸಾಧ್ಯವಾಯಿತು. ಸೌತ್ ಪುಲ್ಲು ಚೆಕ್ ಪಾಯಿಂಟ್ ತಲುಪಿದ ನಂತರ ಮುಂದೆ ರಸ್ತೆ ತುಂಬಾ ಕಚ್ಚಾ ಆಗಿದ್ದರಿಂದ ಸೈಕಲ್ ಬಿಟ್ಟು ಮಿಲಿಟರಿಯವರ ವಾಹನದಲ್ಲಿ ಪಾಸ್ ಗೆ ಹೋಗಿ ಬಂದೆವು. 18,379 ಅಡಿ ಎತ್ತರದಲ್ಲಿರುವ ಈ ಪಾಸ್ ನಿಂದ ಲಡಾಖ್, ಕಾರಾಕೋರಮ್ ಪರ್ವತ ಶ್ರೇಣಿಯನ್ನು ನೋಡಿದ್ದು ಎಂದೂ ಮರೆಯಲಾಗದ ಅನುಭವ.
ಮನಾಲಿಯಿಂದ ಲೇಹ್‍ವರೆಗಿನ ಸೈಕಲ್ ಪ್ರವಾಸ ಹೀಗೆ ಮಕ್ತಾಯವಾಯಿತು. ಮೌಂಟೆನ್ ಟೆರೇನ್ ಸೈಕಲ್‍ಗಳನ್ನು ಮತ್ತು ಸುರಕ್ಷಿತೆಗೆ ಅಗತ್ಯವಾದ ಹೆಲ್ಮೆಟ್, ಪ್ರಖರವಾದ ಸೂರ್ಯನ ಕಿರಣಗಳಿಂದ ರಕ್ಷಿಸಿಕೊಳ್ಳಲು ಗಾಗಲ್ಸ್, ಚಳಿ ಮತ್ತು ಮಳೆಯಿಂದ ರಕ್ಷಣೆ ಪಡೆಯಲು ಮೇಲುಡುಪುಗಳು, ಹೀಗೆ ಅನೇಕ ರೀತಿಯಲ್ಲಿ ಪೂರ್ವ ತಯಾರಿ ಅಗತ್ಯವಿದೆ. ಉಸಿರಾಟದ ಸಮಸ್ಯೆ, ರಕ್ತದೊತ್ತಡ ಮತ್ತು ಹೃದಯ ಸಮಸ್ಯೆಗಳಿರುವುವರು ಈ ಸೈಕಲ್ ಪ್ರಯಾಣ ಮಾಡದಿರುವುದು ಒಳ್ಳೆಯದು. ನಮ್ಮ ಲಗೇಜ್, ಸೈಕಲ್ ಬಿಡಿಭಾಗಗಳು, ಸೈಕಲ್ ರಿಪೇರಿ ಮಾಡುವ ತಂಡ, ಟೆಂಟ್, ಊಟ, ನೀರು, ಚೌಷಧ ಮೊದಲಾದವುಗಳನ್ನು ವ್ಯಾನ್ ನಲ್ಲಿ ತುಂಬಿಕೊಂಡು, ಇಡೀ ಪ್ರಯಾಣದಲ್ಲಿ ಜೊತೆಗಿದ್ದು ಮಾರ್ಗದರ್ಶನ ಮತ್ತು ರಕ್ಷಣೆ ನೀಡಿದ ಸ್ಥಳೀಯ ಯುವಕರಿಗೆ ಎಷ್ಟು ವಂದಿಸಿದರೂ ಸಾಲದು. ಸ್ಥಳೀಯ ಅಡಳಿತ ಪ್ರವೇಶ ಅನುಮತಿ ಪತ್ರ ಅಗತ್ಯವಿರುವಲ್ಲಿ ಅದನ್ನು ಪಡೆದುಕೊಳ್ಳಬೇಕು ಮತ್ತು ಗುರುತಿನ ಚೀಟಿಯ ಹಲವಾರು ಝೆರಾಕ್ಸ್ ಪ್ರತಿಗಳನ್ನು ಇಟ್ಟುಕೊಂಡಿರುವುದು ಉತ್ತಮ. ಭೌದ್ಧವಿಹಾರಗಳಲ್ಲಿ ಪ್ರವಾಸಿರಿಗಾಗಿ ಇರುವ ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ ಕೂಡಾ.
ಸ್ವಲ್ಪ ವೇಗದ ಹೆಜ್ಜೆಗಳಿಗೇ ಉಸಿರಾಟ ಕಷ್ಟದ ಸ್ಥಳಗಳಲ್ಲಿ ದಿನಕ್ಕೆ ೬೦ ಕಿ.ಮಿ.ದೂರ ಕಠಿಣ ಸೈಕಲ್ ಸವಾರಿ! ಹಿಮಾಲಯದ ಸಾಹಸಿಗರಿಗೆ ಅಭಿನಂದನೆಗಳು. ಪ್ರವಾಸ ಪ್ರಿಯರಿಗೆ ಈ ಲೇಖನ ಉತ್ಸಾಹ ತುಂಬಲಿ.