ಪಂಚ್ ಕಜ್ಜಾಯ

ಹಿಮಪಾತ: ಗುರುಪ್ರಸಾದ್ ಕುರ್ತಕೋಟಿ

ಇಲ್ಲಿಯವರೆಗೆ

ಇವತ್ಯಾಕೆ ಇಷ್ಟೊಂದು ಬೇಗ ಎಚ್ಚರ ಆಯ್ತು ಅಂತ ಗೊತ್ತಾಗಲಿಲ್ಲ ವೆಂಕಟ್ ಗೆ. ಬೇಗ ಎದ್ದು ಏನು ಮಾಡುವುದೆಂದು ಒಂದು ಕ್ಷಣ ಅವನಿಗೆ ಹೊಳೆಯಲಿಲ್ಲ. ಬೆಂಗಳೂರಿನಲ್ಲಾಗಿದ್ದರೆ ಎದ್ದ ಕೂಡಲೇ ಬಾಗಿಲಿಗೆ ಸಿಗಿಸಿರುತ್ತಿದ್ದ ಪೇಪರ್ ಎತ್ತಿಕೊಂಡು ಓದಬಹುದಿತ್ತು.  ಈ ಪರದೇಶದಲ್ಲಿ ಹಾಗಿಲ್ಲವಲ್ಲ. ಸುದ್ದಿ ತಿಳಿಯಬೇಕೆಂದರೆ  ಒಂದೋ ಟೀವಿ, ಸ್ಮಾರ್ಟ್ ಫೋನ್, ಇಲ್ಲವೇ ಟಚಿಠಿಣoಠಿ ನಲ್ಲೆ ನೋಡಿ ತಿಳಿಯಬೇಕು. ಅವನಿಗೆ ಅಲ್ಲಿಯ ಸ್ಥಳೀಯ ಸುದ್ದಿಯ ತಿಳಿದುಕೊಳ್ಳುವ ಬಗ್ಗೆ ಉತ್ಸಾಹವೇನಿರಲಿಲ್ಲ. ಇಲ್ಲಿನ ಸುದ್ದಿಗಳೂ ಸುದ್ದಿಗಳೇ? ಒಂದು ಸಣ್ಣ ಬಿರುಗಾಳಿ ಬಂದರೇನೇ ಇಡೀ  ದಿನ ಅಲರ್ಟ್ ಅಲರ್ಟ್ ಅಂತ ಬೊಬ್ಬೆ ಹೊಡಿತಿರ್ತಾರೆ. ಇಂತಹ ಸಣ್ಣ ಪುಟ್ಟ ಬಿರುಗಾಳಿಗಳೆಲ್ಲ ನಮ್ಮ ದೇಶದಲ್ಲಿ ಲೆಕ್ಕಕ್ಕೇ ಇಲ್ಲ. ಆದರೂ ಕೆಲವೊಮ್ಮೆ ಬಂತೆಂದರೆ ಎಲ್ಲವನ್ನೂ ನುಂಗಿ ಹಾಕುವ ಗಾಳಿಯೇ ಇಲ್ಲಿ ಬೀಸುತ್ತೆ. ಅದಕ್ಕೆ ಇರಬೇಕು ಇಲ್ಲಿನ ಹವಾಮಾನ  ಮುನ್ಸೂಚನೆಗಳು ಸಣ್ಣ ಸಣ್ಣ ವಿಷಯಗಳನ್ನೂ ದೊಡ್ಡದಾಗೆ ಹೆಳುತ್ತವೆ. 

ಬೇಗ ಎದ್ದಿದ್ದಕ್ಕೋ ಅಥವಾ ಅಮೆರಿಕಕ್ಕೆ ಬಂದು ತುಂಬಾ ದಿನಾ ಆಗಿದ್ದಕ್ಕೋ, ವೆಂಕಣ್ಣನಿಗೆ ಯಾಕೋ ಬೆಂಗಳೂರು ನೆನಪಾಗಿ  ಹೃದಯ ಭಾರವಾಗಿತ್ತು. ಊರಲ್ಲಿದ್ದ ಅಪ್ಪ, ಅಮ್ಮ, ತನ್ನ ಮನೆ,  ಗೆಳೆಯನೊಬ್ಬನ ಜೊತೆಗೆ ಕ್ಷುಲ್ಲಕ ಕಾರಣಕ್ಕೆ ಮಾಡಿಕೊಂಡ ಜಗಳ ಹೀಗೆ ಏನೇನೋ ನೆನಪಾಗತೊಡಗಿದವು. ಏನೋ ಕಳೆದುಕೊಂಡಂತೆ ಅನಿಸತೊಡಗಿತ್ತು. ಎಲ್ಲರಿಂದ ಇಷ್ಟು ದೂರದಲ್ಲಿ ತಾನಿದ್ದೇನೆ ಎಂಬ ಭಾವನೆ ಮೂಡತೊಡಗಿತ್ತು. ಸಧ್ಯಕ್ಕೆ ಜೊತೆಗೆ ತನ್ನ ಪುಟ್ಟ ಸಂಸಾರವಾದರೂ ಇದೆಯಲ್ಲ;  ಇನ್ನು ಕೆಲವೇ ದಿನಗಳು, ಆಮೇಲೆ ವಾಪಸ್ಸು ತನ್ನ ದೇಶಕ್ಕೆ ಹೋಗುವೆನಲ್ಲ ಎಂದು ತನ್ನೊಳಗೆ ಸಮಾಧಾನ ಮಾಡಿಕೊಂಡ. 

ಆದರೂ ಬೆಳಿಗ್ಗೆ ಬೇಗ ಎದ್ದ ತಪ್ಪಿಗೆ ಹೊರಗಿನ ಬೆಳಗನ್ನಾದರೂ ಸವಿಯುವ ನಿರ್ಧಾರ ಮಾಡಿ ವಿಶಾಲವಾದ ಕಿಟಕಿಯ ಪರದೆ ಸರಿಸಿದವನಿಗೆ ಮೈ ಝುಂ ಅಂದಿತ್ತು! ಕೂಡಲೇ ಒಳಗೆ ಓಡಿ ಹೋದವನೇ ನಿದ್ದೆಯಲ್ಲಿದ್ದ ಖುಷಿಯನ್ನೂ, ಜಾನುನನ್ನೂ ಎಬ್ಬಿಸಿದ. ಮೈ ಮುರಿಯುತ್ತಲೇ, ಸಕ್ಕರೆ ನಿದ್ದೆಯನ್ನು  ತುಂಡರಿಸಿದ ಅಪ್ಪನನ್ನು ಕೆಂಗಣ್ಣಿನಲ್ಲೆ ಕೆಕ್ಕರಿಸುತ್ತ ಎದ್ದಳವಳು.

"ಲೇ ಪುಟ್ಟಿ ಒಂದ್ ಭಾರಿ ಮಜಾ ತೋರಸ್ತೀನಿ ಬಾ… ಲೇ ಜಾನು ನೀನು ಬಾ…. ಲೋಗೂನ … " ಅಂದ ಅಪ್ಪನಿಗೆ ಹುಚ್ಚು ಹಿಡಿದಿಲ್ಲವಷ್ಟೇ ಎಂದು ಅವ್ವ ಮಗಳು ಒಬ್ಬರನ್ನೊಬ್ಬರು ನೋಡತೊಡಗಿದರು. 
"ಲೇ ಬರ್ರಿಲೆ … ದೊಡ್ಡ ನಖರಾ ನೋಡು ಇಬ್ಬರದೂ…!" ಅಂದವನೇ ತನ್ನ ಎರಡೂ ಕೈಗಳಿಂದ ಖುಷಿಯ ಕಣ್ಣು ಮುಚ್ಚಿಕೊಂಡು ಹೊರಗಡೆ ಹಾಲ್ ಗೆ ಕರೆದೊಯ್ದ. ಅದೇ ಕಿಟಕಿಯ ಮುಂದೆ ನಿಂತು ಮಗಳ ಕಣ್ಣು ಬಿಡಿಸಿ "ಟನ್ ಟನಾ …." ಅಂತ ಒಳ್ಳೆ ಸಿನಿಮಾ ತೋರ್ಸೋರಂತೆ ನಿಂತ.

ನಿನ್ನೆಯೆಲ್ಲಾ ಖಾಲಿಯಿದ್ದ ಮನೆಯ ಅಂಗಳದಲ್ಲೆಲ್ಲ ಶುಬ್ರವಾದ ಹಿಮ ಆವರಿಸಿತ್ತು. ಖುಷಿ ತನ್ನ ಕಣ್ಣುಗಳೆರಡನ್ನೂ ನಿಚ್ಚಳವಾಗಿ ತೆರೆದು ಪ್ರಕೃತಿಯ ಈ ವಿಚಿತ್ರವನ್ನು ಎವೆಯಿಕ್ಕದೆ ನೋಡುತ್ತಿದ್ದಳು. ತನ್ನ ಜೀವಮಾನದಲ್ಲೇ ಹಿಮವನ್ನು ಇಷ್ಟು ಹತ್ತಿರದಿಂದ ನೋಡಿರದಿದ್ದ ಜಾನೂಗೂ ಹಿಮ ಇವರ ಮನೆ ಬಾಗಿಲಿಗೆ ಬಂದು ದರ್ಶನ ಕೊಟ್ಟಿದ್ದು ಸಖೇದಾಶ್ಚರ್ಯವಾಗಿತ್ತು. ಇಲ್ಲಿ ಅಕ್ಟೋಬರ್ ತಿಂಗಳಲ್ಲಿ ಹಿಮ ಬೀಳಬಹುದೆಂಬ ಕಲ್ಪನೆಯೇ ಅವನಿಗಿರಲಿಲ್ಲ. ಬಹುಶಃ ಹಿಂದಿನ ರಾತ್ರಿ ಟೀವಿ ನೋಡಿದ್ದರೆ ಅದು ಮುಂಚೆಯೇ ತಿಳಿದಿರುತ್ತಿತ್ತೇನೊ. ಏನೇ ಆದರೂ ಅದೊಂದು ಅನಿರೀಕ್ಷಿತ ಅಚ್ಚರಿ ಆಗಿತ್ತು. ತಡ ಮಾಡದೆ ಹೊರಗೆ ಹೋಗಿ ಹಿಮದಲ್ಲಿ ಎಲ್ಲರೂ  ಆಟವಾಡಲು ಶುರು ಹಚ್ಚಿಕೊಂಡರು. ಇವರ ಸಂತಸವನ್ನು ನೋಡಿ ಅಮೆರಿಕಾದ ಅಜ್ಜಿಯೊಬ್ಬಳು, ಇವರು ಜೀವನದಲ್ಲಿ ಇದೆ ಮೊದಲ ಸಲ ಇಷ್ಟು ಹಿಮವನ್ನು ಒಟ್ಟಿಗೆ ನೋಡಿರಬಹುದೆಂದು ಅಂದಾಜಿಸಿ ನಸು ನಗುತ್ತ "ಎಂಜಾಯ್…!" ಅಂತ ಉಲಿದು ಅಪಾರ್ಟ್ ಮೆಂಟ್ ನ ಒಳಗೆ ನಡೆದಳು. 

ಅಪಾರ್ಟ್ ಮೆಂಟ್ ನ ಮುಂದಿದ್ದ ಗಿಡಗಳು, ಹುಲ್ಲಿನ ಹಾಸು, ಕಾರುಗಳು ಎಲ್ಲವೂ ಹಿಮಾವರಣಗೊಂಡಿದ್ದವು. ಆ ಹಿಮದಿಂದ ತಮ್ಮ ಕಾರನ್ನು ಮುಕ್ತಗೊಳಿಸುವ ಬಗೆ ಹೇಗೆ ಎಂದು ಖುಷಿ ಆಶ್ಚರ್ಯಪಡುತ್ತಿದ್ದಳು. ಅದಕ್ಕೆ ಬೇಕಾದ ಪರಿಕರಗಳನ್ನು ಇಟ್ಟುಕೊಂಡಿದ್ದ ವೆಂಕಣ್ಣ ಸಲಿಕೆಯಲ್ಲಿ ಮಣ್ಣು ತಗೆದಂತೆ ಕಾರಿನ ಮೇಲಿನಿಂದ ಹಿಮವನ್ನು ಬಗೆದು ತೆಗೆಯುತ್ತಿದ್ದುದನ್ನು ಕಣ್ಣರಳಿಸಿ ನೋಡಿ ಸಂತಸ ಪಟ್ಟಳು. ಕ್ರಮೇಣ ಗಾಳಿಯೂ ಹೆಚ್ಚಿ ಚಳಿ ಜಾಸ್ತಿಯಾಗತೊಡಗಿತ್ತು. ವೆಂಕಣ್ಣನ ಪರಿವಾರ ದಪ್ಪಗಿನ ಉಣ್ಣೆಯ ಉಡುಗೆ ತೊಟ್ಟು ಮನೆಯಲ್ಲೇ ಬೆಚ್ಚಗೆ ಉಳಿದರು. ಅವತ್ತು ಅಪ್ಪ ಆಫೀಸಿಗೆ ಹೋಗದೆ ಮನೆಯಲ್ಲೇ ಉಳಿದದ್ದು ಮಗಳ ಸಂತಸವನ್ನು ಹೆಚ್ಚಿಸಿತ್ತು.

"ಅಪ್ಪಾ ದಿನಾಲೂ ಹಿಂಗ ಸ್ನೋ ಬಿದ್ದರ ನೀನು ಮನ್ಯಾಗ ಇರ್ತೀಯಲ್ಲಾ?" ಅಂತ ತನ್ನ ತರ್ಕವನ್ನು ಮಂಡಿಸಿದಳು.

ವೆಂಕಣ್ಣ ನಕ್ಕು ಸುಮ್ಮನಾದ. ಆಫಿಸಿನಲ್ಲಿ ನಡೆಯುತ್ತಿದ್ದ ವಿದ್ಯಮಾನಗಳು ನೆನಪಾದವು. ಬೆಂಗಳೂರಿನಲ್ಲಿ ಜಾನ್ ಏನೇನು ಕರಾಮತ್ತು ನಡೆಸಿದ್ದಾನೋ ಎಂಬ ಚಿಂತೆ ಅವನನ್ನು ಕಾಡಿತು. ತನ್ನನ್ನೂ ಕೆಲಸದಿಂದ ತೆಗೆದುಬಿಟ್ಟರೆ ಮುಂದೇನು ಅನ್ನುವ ಪ್ರಶ್ನೆ ಉದ್ಭವಿಸಿತು. 
  
"… ಅಪ್ಪ ದಿನಾಲೂ ಮನ್ಯಾಗ ನನ್ ಜೊತಿ ಇರಲ್ಲಾ? ಪ್ಲೀಜ್ ನೀ ಆಫಿಸಿಗೆ ಹೋಗಬ್ಯಾಡಾ….." ಅಂದ ಖುಷಿಯ ಗೋಗರೆತಕ್ಕೆ ಇವನು ತನ್ನ ಯೋಚನಾ ಲಹರಿಯಿಂದ ಹೊರಬಂದು ಬೆಚ್ಚಿ ಬಿದ್ದ!

ಜಾನ್ ಇವತ್ತು ಬೆಳಿಗ್ಗೆ ಎಂಟು ಗಂಟೆಗೇ ಆಫಿಸಿಗೆ ಬಂದಿದ್ದನೆಂದೂ, ಕೆಲಸಕ್ಕೆ ಯಾರೂ ಬೇಗ ಬರುವುದಿಲ್ಲವೆಂಬ ಸತ್ಯ ಅವನಿಗೆ ಗೊತ್ತಾಗಿಬಿಟ್ಟಿದೆಯೆಂದೂ ಅಫೀಸಿನಲ್ಲೆಲ್ಲ ಗುಲ್ಲೆದದ್ದು ಅವತ್ತೂ ತಡವಾಗಿ ಬಂದಿದ್ದ ರಘುನ ಕಿವಿಗೂ ಬಿದ್ದಿತ್ತು. ಈ ಕೆಲಸ ಬಿಟ್ಟು  ಹೊಸ ಕಂಪನಿಗೆ ಸಧ್ಯದಲ್ಲೇ ಸೇರಿ ಪ್ಯಾರಿಸ್ ಗೆ ಹೋಗುವ ಕನಸು ಕಾಣುತ್ತಿದ್ದ ರಘುಗೆ ಆ ಜಾನ್  ಏನಾದರೂ ಮಾಡಿಕೊಳ್ಳಲಿ ನನಗೇನು? ಎಂಬ ಉಡಾಫೆ ಇತ್ತು. ಆ ಕನಸಿನ ಕಿಡಿ ಹೊತ್ತಿಸಿದ್ದ ತರಂಗಿಣಿಯ ಫೋನ್ ರಿಂಗಿಸಿ ಅವನ ಉತ್ಸಾಹವನ್ನು ಇನ್ನೂ ಇಮ್ಮಡಿಸಿತು. ತನ್ನ ಜಾಗದಿಂದ ತುಸು ಆಚೆ ಸ್ವಲ್ಪ ಮರೆ ಇದ್ದಲ್ಲಿಗೆ ಹೋಗಿ ಅವಳ ಕರೆಯನ್ನು ಸ್ವೀಕರಿಸಿದನವನು.

"ಹೇಳಿ ತರಂಗಿಣಿ ಏನ್ಸಮಾಚಾರ"
"ಏನ್ ಲಕ್ಕಿ ಕಣ್ರೀ ನೀವು" ಅಂತ ಅವನಲ್ಲಿ ಇನ್ನೂ ಪುಳಕವನ್ನುಂಟು ಮಾಡಿದಳವಳು.
"ಯಾಕ್ರೀ ಏನಾಯ್ತು" ಅಂತ ಒಣಗಿದ ಗಂಟಲಲ್ಲೇ ಕೆಳಿದನವನು.
"ನಿಮ್ಮ ರೆಸುಮೆ ನೋಡಿ ಬ್ಲ್ಯಾಕ್ ಇಯರ್ ಕಂಪನಿಯ ಎಂಡಿ ಸಿಕ್ಕಾಪಟ್ಟೆ ಖುಷ್ ಆಗಿದಾರೆ. ನನಗೆ ಬೇಕಾದಂತಾ ವ್ಯಕ್ತಿನೆ ಆರಿಸಿದ್ದೀರ ಅಂತ ನನಗೆ ತುಂಬಾ ಹೊಗಳ್ತಾ ಇದ್ರು ಕಣ್ರೀ."

"ಒಹ್… ಹೌದಾ! ಹಾಗಾದ್ರೆ ಇಂಟರ್ವ್ಯೂ ಯಾವಾಗಂತೆ?" ಅಂತ ತನ್ನ ಖುಷಿಯನ್ನು ಹತ್ತಿಕ್ಕಲಾರದೆ ಕೇಳಿದ ಅವನ ಕಣ್ಣುಗಳಲ್ಲಿ  ಪ್ಯಾರಿಸ್ ನ ಐ ಫೆಲ್ ಟವರ್ ತಕಾ ತಕಾ ಕುಣಿಯುತ್ತಿತ್ತು!

"ಇಂಟರ್ವ್ಯೂ ಎಲ್ಲಾ ಏನೂ ಇಲ್ಲ ರೀ. ನಾನು ರೆಫರ್ ಮಾಡಿದ ಮೇಲೆ ಮುಗಿತು. ಸುಮ್ನೆ ನಿಮ್ಮ ಜೊತೆ ಒಂದು ಫಾರ್ಮಲ್ ಮೀಟಿಂಗ್ ಇರುತ್ತೆ. ಆ ಕಂಪನಿಯ ಎಹ್ ಆರ್ ಮಾತಾಡ್ತಾರೆ. ಅದೂ ಸಂಬಳದ ಬಗ್ಗೆ ನಿಮ್ಮ ನಿರೀಕ್ಷೆ ತಿಳಿದುಕೊಳ್ಳೋಕೆ ಅಷ್ಟೇ. ಮುಂದಿನ ತಿಂಗಳು ಪ್ಯಾರಿಸ್ ಗೆ ಹೋಗೋಕೆ ತಯಾರಾಗಿ" ಅನ್ನುತ್ತಿದ್ದಂತೆ ಇವನು ನಿಟ್ಟುಸಿರಿಟ್ಟ. ರೆಸುಮೆಯಲ್ಲಿ ಏನೇನೋ ಸುಳ್ಳುಗಳ ಸರಮಾಲೆ ತುರುಕಿ, ಇಂಟರ್ವ್ಯೂನಲ್ಲಿ ಹೆಂಗಪ್ಪಾ ಮಾತಾಡೋದು ಅಂತ ಭಯಪಟ್ಟಿದ್ದವನಿಗೆ, ಆ ಒಂದು ಸಂದರ್ಭವೇ ಇಲ್ಲ ಅಂದಾಗ ಎಷ್ಟು ಖುಷಿಯಾಗಬೇಡ? ಅವಳು ಮುಂದುವರೆಸಿ. 

"…ನೋಡಿ ಈಗಲೇ ನಿಮ್ಮ ಹೊಸ ಬಾಸ್ ನಿಮಗೆ ಒಂದು ಕೆಲಸ ಕೊಟ್ಟಿದ್ದಾರೆ. ಪ್ಯಾರಿಸ್ ನಲ್ಲಿ ನಿಮ್ಮ ಟೀಮ್ ಗೆ ಇನ್ನೂ ನಾಲ್ಕು  ಜನ ಬೇಕಂತೆ. ಯಾರಾದರೂ ಒಳ್ಳೆ ಪ್ರೋಗ್ರಾಮರ್ ಗಳಿದ್ದರೆ ಅವರನ್ನು ನೀವು ಶಿಫಾರಸ್ಸು ಮಾಡಬಹುದು. ನಾಳೆ ಒಳಗೆ ಕೆಲವು ರೆಸುಮೆ ಕಳಿಸಿ. ನನಗೆ ಈಗ ಅವರ ಜೊತೆ ಮೀಟಿಂಗ್ ಇದೆ, ಮತ್ತೆ ಫೋನ್ ಮಾಡುವೆ…. ಬೈ" ಅಂತ ಕರೆಯನ್ನು ಮುಗಿಸಿದಳು.

ರಘುಗೆ ಸ್ವರ್ಗಕ್ಕೆ ಮೂರೆ ಗೇಣು! ಕೂಡಲೇ ಅಲ್ಲೇ ಇದ್ದ ಪ್ರದೀಪ, ಸೀನುನಂತಹ ತನ್ನ ನಾಲ್ಕು ಚೆಲಾಗಳನ್ನು ಕಣ್ಣ ಸನ್ನೆಯಲ್ಲೇ ಕರೆದು ಕೆಳಗಿನ ಮಹಡಿಯಲ್ಲಿರುವ ಕೆಫೆತೆರಿಯ ಕ್ಕೆ ಕರೆದೊಯ್ದ. ಅವರಲ್ಲಿಯೂ ಪ್ಯಾರಿಸ್ ನ ಕೆಲಸದ ಕನಸನ್ನು ಬಿತ್ತಿ, ಅವರ ರೆಸುಮೆ ಗಳನ್ನೂ ಇವತ್ತೇ ಅಪ್ಡೇಟ್ ಮಾಡಿ ತನ್ನ ವೈಯುಕ್ತಿಕ ಇಮೇಲ್ ಅಡ್ರೆಸ್ ಗೆ ಕಳಿಸಲು ಆಜ್ಞೆ ಹೊರಡಿಸಿದ.

ಜಾನ್ ತನಗೆ ಅಂತಲೇ ಮೀಸಲಾಗಿದ್ದ ಚೇಂಬರ್ ನಲ್ಲಿ ತನ್ನ ಲ್ಯಾಪ್ ಟಾಪ್ ದಿಟ್ಟಿಸುತ್ತ ಕೂತಿದ್ದ. ಅದು ಸುಧೀರ್ ಕಳಿಸಿದ್ದ ಫೈಲ್ ಆಗಿತ್ತು. ಭಾರತದ ಆ ಶಾಖೆಯಲ್ಲಿ ಕೆಲಸ ಮಾಡುತ್ತಿರುವ ಅಷ್ಟೂ ಉದ್ಯೋಗಿಗಳ ಹೆಸರು ಹಾಗೂ ಅವರ ಬಗ್ಗೆ ಎಲ್ಲ ವಿವರಗಳೂ ಅಲ್ಲಿದ್ದವು. ಎಲ್ಲರ ಕೌಶಲಗಳ, ಸಾಮರ್ಥ್ಯಗಳ ಕುರಿತ ಮಾಹಿತಿಯೂ ಅಲ್ಲಿತ್ತು. ಅಂಥದೊಂದು ಪಟ್ಟಿಯನ್ನು ತಯಾರಿಸಿ ಕಳಿಸು ಅಂದಾಗಲೇ, ಸುಧೀರನಿಗೆ ಅವನು ಅಲ್ಲಿಂದ ಎಷ್ಟೋ ಜನರ ಎತ್ತಂಗಡಿ ಮಾಡುವ ಇರಾದೆ ಹೊಂದಿದ್ದಾನೆಂದು  ಅಂದಾಜಿಸಿದ್ದ. ಮೊತ್ತ ಮೊದಲು ತನ್ನನ್ನೇ ಗುರಿ ಮಾಡಿರಬಹುದೆಂಬ ಬಲವಾದ ನಂಬಿಕೆ ಅವನಲ್ಲಿತ್ತು. ಆದರೆ ಜಾನ್ ತಲೆಯಲ್ಲಿ ಓಡುತ್ತಿದ್ದ ಲೆಕ್ಕಾಚಾರವೇನಾಗಿತ್ತು ಎನ್ನುವುದು ಜಾನ್ ನನ್ನು ಬಿಟ್ಟರೆ ಅವನ ಚೇಲಾ ಜೇಕಬ್ ಗೆ ಮಾತ್ರ ಗೊತ್ತಿತ್ತು!                            

(ಮುಂದುವರಿಯುವುದು…)

ಕನ್ನಡದ ಬರಹಗಳನ್ನು ಹಂಚಿ ಹರಡಿ

6 thoughts on “ಹಿಮಪಾತ: ಗುರುಪ್ರಸಾದ್ ಕುರ್ತಕೋಟಿ

  1. ಕುತುಹಲವನ್ನು ಹೆಚ್ಚಿಸಿದೆ ಗುರು! ಚನ್ನಾಗಿದೆ

  2. ಓದಿಸಿಕೊ೦ಡು ಹೋಗುತ್ತಿದೆ…ಹ್ಹ ಹ್ಹ ….ಲೆಕ್ಕಾಚಾರ ಏನು ಎ೦ದು ತಿಳಿಯಲು ಎಷ್ಟು ದಿ ಕಾಯಬೇಕೋ??

  3. ಗುರುಪ್ರಸಾದ್ ಕತೆ ತುಂಬಾ ಸಕತ್ತಾಗಿ ಮೂಡಿ ಬರುತ್ತಿದೆ.  ಪ್ರತಿ ಸಲವೂ ಕುತೂಹಲದ ಹೊಸ ಘಟ್ಟ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದೀರಿ.  ಒಂದೇ  ಕೊರತೆ ಅಂದ್ರೆ .. ವರ ಹದಿನೈದು ದಿನಕ್ಕೊಮ್ಮೆ ತುಂಬಾ ದೊಡ್ಡ ಕಾಯುವಿಕೆ ಅನ್ನ್ಸುತ್ತೆ .. ಹಾಗೆ ಟ್ರ್ಯಾಕ್ ಉಳಿಸಿಕೊಳೋಕೂ ಕಷ್ಟ ..  ಹೆಚ್ಚು ಬರೆಯಲು ಸಾಧ್ಯವೇ ನೋಡಿ 🙂

     

  4. ಗುರುಪ್ರಸಾದ್ ಕತೆ ತುಂಬಾ ಸಕತ್ತಾಗಿ ಮೂಡಿ ಬರುತ್ತಿದೆ.  ಪ್ರತಿ ಸಲವೂ ಕುತೂಹಲದ ಹೊಸ ಘಟ್ಟ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದೀರಿ.  ಒಂದೇ  ಕೊರತೆ ಅಂದ್ರೆ .. ವಾರ ಹದಿನೈದು ದಿನಕ್ಕೊಮ್ಮೆ ತುಂಬಾ ದೊಡ್ಡ ಕಾಯುವಿಕೆ ಅನ್ನ್ಸುತ್ತೆ .. ಹಾಗೆ ಟ್ರ್ಯಾಕ್ ಉಳಿಸಿಕೊಳೋಕೂ ಕಷ್ಟ ..  ಹೆಚ್ಚು ಬರೆಯಲು ಸಾಧ್ಯವೇ ನೋಡಿ 🙂

Leave a Reply

Your email address will not be published. Required fields are marked *