ಶತ್ರು ಎಂದರೆ ಒಬ್ಬ ವ್ಯಕ್ತಿ ನಮ್ಮ ಯಶಸ್ಸನ್ನು ನೋಡಿ ಸಹಿಸದೆ ಇರುವವನು. ಸದಾ ನಮ್ಮ ಮೇಲೆ ದ್ವೇಷ ಕಾರುವವನು. ಆತ ಎಚ್ಚರಿಕೆ ಕರೆಗಂಟೆಯಂತಿದ್ದು ನಾವೂ ಸದಾ ಜಾಗೃತ ರಾಗಿರುವಂತೆ ಮಾಡುವವನು. ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ಗುಣಮಟ್ಟ ಅವನ ಶತ್ರುವಿನ ಗುಣಮಟ್ಟದ ಮೇಲೆ ಅವಲಂಬಿತವಾಗಿರುತ್ತದೆ.
ಹಿತೈಷಿ ಎಂದರೆ ಸದಾ ಇನ್ನೊಬ್ಬರ ಒಳಿತನ್ನು, ಯಶಸ್ಸನ್ನು ಬಯಸುವವನು.
"ಹಿತ ಶತ್ರು" ಎಂದರೆ ನಮ್ಮೊಳಗಿದ್ದು ನಮ್ಮವನಲ್ಲದವರು. ಜೊತೆಯಲ್ಲಿಯೇ ಇದ್ದು ಮುಂದೆ ಬೆಣ್ಣೆಯಂತಹ ಮಾತುಗಳನ್ನಾಡಿ ಹಿಂದೆ ಬೆನ್ನಿಗೆ ಚೂರಿ ಹಾಕುವವರು. ನಮಗೆ ಗೊತ್ತಿಲ್ಲದೇ ನಮ್ಮ ಯಶಸ್ಸಿನ ಪ್ರಗತಿಯನ್ನಾಗಲಿ, ಒಳ್ಳೆಯದನ್ನಾಗಲಿ ಸಹಿಸದೆ ಕೆಟ್ಟದ್ದನ್ನು ಮಾಡುವವರು.
ನಾವು ಹಿಂದಿನ ಪುರಾಣದಿಂದಲೂ ಹಿತ ಶತ್ರುಗಳನ್ನು ನೋಡಬಹುದು. ಉದಾಹರಣೆಗೆ ರಾಮಾಯಣದಲ್ಲಿ ಶ್ರೀ. ರಾಮಚಂದ್ರ ವನವಾಸ ಅನುಭವಿಸಿದ್ದು ಕೈಕೆಯಿಂದ, ಮಹಾಭಾರತದಲ್ಲಿ ಶಕುನಿಯ ಕುತಂತ್ರ ಅಣ್ಣ – ತಮ್ಮಂದಿರಾದ ಕೌರವರು -ಪಾಂಡವರಲ್ಲಿ ವಿರೋದವಾಗಿ ಯುದ್ದಕ್ಕೆ ನಾಂದಿಯಾಯಿತು.
ಇತಿಹಾಸದಲ್ಲಿ ಬ್ರಿಟಿಷರು ಭಾರತೀಯ ರಾಜರುಗಳಲ್ಲಿ ಪರಸ್ಪರ ವೈಮನಸ್ಯ ಉಂಟು ಮಾಡಿ ಭಾರತ ದೇಶವನ್ನು ಸುಮಾರು ೪೦೦ ವರ್ಷಗಳು ವಸಾಹತು ಶಾಯಿ ರಾಜ್ಯಭಾರ ನಡೆಸಿದ್ದನು ಕಾಣಬಹುದು. ಸಹಚರರಿಂದಲೇ ಮಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಸಹ ಕಾಣಬಹುದು.
ಇಂದಿನ ವೈಜ್ಞಾನಿಕ ಮತ್ತು ಮಾದ್ಯಮ ಯುಗದಲ್ಲಿ ನಾವು ಬಳಸುವ ಕಂಪ್ಯೂಟರ್, ಮೊಬೈಲ್, ದೂರದರ್ಶನ ದಿಂದ ಎಷ್ಟು ಸದುಪಯೋಗವಿದೆಯೋ ಅಷ್ಟೇ ದುರುಪಯೋಗ ವಾಗಿ ಸಮಸ್ಯೆ ಉಂಟುಮಾಡುತ್ತಿದೆ.
ಈಗಿನ ಯುವ ಜನಾಂಗದ ಮೇಲೆ ದುಷ್ಪರಿಣಾಮ ಬೀರಿ ವಿವೇಚನಾ ಶಕ್ತಿಯನ್ನು ಕುಂದುವಂತೆ ಮಾಡಿವೆ. ನಮ್ಮಲ್ಲಿ ದುರ್ಬಳಕೆ ಶಕ್ತಿಯನ್ನು ಜಾಸ್ತಿ ಮಾಡಿವೆ.
ಇನ್ನು ಆಧುನಿಕತೆ, ಹಣ ನಮ್ಮ ಜೀವನದಲ್ಲಿ ತುಂಬಾ ಅವಶ್ಯಕ. ಆದರೆ ಇದನ್ನು ಹೆಚ್ಚು ಗಳಿಕೆಯಾಗುತ್ತ ಹೋದಲ್ಲಿ ಮನುಷ್ಯನಲ್ಲಿ ಗೊತ್ತಿಲ್ಲದಂತೆಯೇ ದುರಂಕಾರ ಮತ್ತು ಅಹಂಕಾರವನ್ನು ಸೃಷ್ಟಿಸುತ್ತದೆ. ಒಂದು ಸಂಸಾರದಲ್ಲಿ ಬೇಕಾದ ಸಾಮರಸ್ಯ ಕಳೆಯುತ್ತಿದೆ. ಇದರಿಂದ ನಮ್ಮ ಸಂಸ್ಕೃತಿ ಮತ್ತು ಪರಂಪರೆ ನಶಿಸುತ್ತಿದೆ.
ಮನುಷ್ಯನ ಮನಸ್ಸು ಮತ್ತು ನಾಲಿಗೆ ಉಪಯೋಗಕಾರಿಯೇ ಸರಿ, ಆದರೆ ದುರ್ಬಳಕೆ ಮಾಡಿದ್ದಲ್ಲಿ ಇವೆರಡಕ್ಕಿಂತ ದೊಡ್ಡ ಹಿತ ಶತ್ರು ಬೇರೊಂದಿಲ್ಲ. ಮನಸ್ಸು ಒಬ್ಬನ ಆಲೋಚನೆಗೆ ದಿಕ್ಸೂಚಿಯಾಗಿರುತ್ತದೆ. ನಾಲಿಗೆಯಿಂದ ಹೊರಬರುವ ಮಾತುಗಳು ಕತ್ತಿಯ ವರಸೆಗಿಂತ ಹರಿತವಾಗಿರುತ್ತದೆ. ಇವರೆಡರಿಂದ ಆಗುವ ದುರ್ಬಳಕೆಯಿಂದ ಬೇರೆಯವರಿಗಿಂತ ತನಗೆ ಹಾನಿ ಜಾಸ್ತಿ. ಇದಕ್ಕೊಂದು ಉದಾಹರಣೆ : "ನಿಂತು ಹೋದ ಗೆಳತಿಯ ನಿಶ್ಚಿತಾರ್ಥ"…
ಮೊದಲೇ ಹುಡುಗ ಹುಡುಗಿ ಮತ್ತು ೨ ಮನೆಯವರು ಪರಸ್ಪರ ಒಪ್ಪಿ ಮದುವೆ ಮಾತು ಕತೆ ಮುಗಿಸಿನಿಶ್ಚಿತಾರ್ಥದ ದಿನ ಗೊತ್ತು ಮಾಡಿದ್ದರು. ನಿಶ್ಚಿತಾರ್ಥದ ದಿನ ಎಲ್ಲವು ಸಿದ್ದವಾಗುತ್ತಿತ್ತು ಇದ್ದಕ್ಕಿದ್ದಂತೆಯೇ ಹುಡಗನ ಕಡೆಯವ ಹಿರಿಯೊಬ್ಬರು ಬಂದು ನಮಗೆ ಈ ಸಂಬಂಧ ಬೇಡ, ನಮಗಿಷ್ಟವಿಲ್ಲ ಎಂದರು. ಕಾರಣವೇನೆಂದು ವಿಚಾರಿಸಿದಾಗ ಅವರಿಗೆ ಯಾರೋ ಒಬ್ಬರು ದೂರವಾಣಿ ಕರೆ ಮಾಡಿ ಹುಡುಗಿಯ ಗುಣ – ನಡತೆ ಸರಿಯಿಲ್ಲ, ಸಂಸ್ಕಾರವಂತಳಲ್ಲ ಎಂದು ಹೇಳಿದ್ದರಂತೆ. ಇಲ್ಲಸಲ್ಲದ್ದನ್ನು ಹೇಳಿದ ಅವರ ಮಾತುಗಳನ್ನು ನಂಬಿ ನಿಶ್ಚಿತಾರ್ಥವನ್ನು ನಿಲ್ಲಿಸಿದರು. ಆ ದೂರವಾಣಿ ಸಂಖ್ಯೆಯನ್ನು ಪರಿಶೀಲಿಸಿ ಸಂಶೋದಿಸಿದಾಗ ಆ ರೀತಿ ಕರೆ ಮಾಡಿದ್ದು, ಒಂದೇ ಮನೆಯಲ್ಲಿ ಒಟ್ಟಿಗೆ ಜೊತೆಯಲ್ಲಿಯೇ ಇದ್ದ ಗೆಳತಿಯ ಸ್ವಂತ ಚಿಕ್ಕಪ್ಪ -ಚಿಕ್ಕಮ್ಮನೆ ಆಗಿದ್ದರು, ಕಾರಣವಿಷ್ಟೇ ತನ್ನ ಸ್ವಂತ ಅಣ್ಣನ ಸಿರಿವಂತಿಕೆ ಮತ್ತು ಬೆಳೆಸುತ್ತಿದ್ದ ದೊಡ್ಡ ಸಂಬಂಧವನ್ನು ಸಹಿಸಿಕೊಳ್ಳದವರಾಗಿದ್ದರು.. ಜೊತೆಯಲ್ಲಿಯೇ ಇದ್ದು ಮೋಸ ಮಾಡಿದರು. ನಂಬಿದ್ದವರಿಂದಲೇ ಕುತ್ತಿಗೆ ಕುಯ್ಯುವ ಕೆಲಸ ಮಾಡಿದ್ರು. ಕೊನೆಗೆ ಇಬ್ಬರು ನಂಬಿಕೆ ವಂಚಿತರಾಗಿ ಮಾಡಿದ್ದುಣ್ಣೋ ಮಾರಾಯ ಎಂಬಂತೆ ಮನೆ- ಮನಸ್ಸುಗಳಿಂದ ದೂರಾದರು.
ಇನ್ನು ಭಾಷೆ ಗಣನೆಗೆ ತೆಗೆದು ಕೊಂಡರೆ "ನಮ್ಮ ಮಾತೃಭಾಷೆ ಕನ್ನಡ ಕ್ಕೆ ಆಂಗ್ಲಭಾಷೆ ಯೇ ಹಿತಶತ್ರು "
ಆಂಗ್ಲಭಾಷೆ ಇದೊಂದು ಅಂತರ ರಾಷ್ಟ್ರೀಯ, ಮಾಹಿತಿ ತಂತಜ್ಞಾನ ಅನಿವಾರ್ಯ, ಕಾರ್ಪೊರೇಟ್ ಉದ್ಯಮಗಳ ಹಾಗೂ ಬಹು ಪ್ರಚಲಿತ ಭಾಷೆ. ಆದರೆ ಇದು ನಮ್ಮ ಮಾತೃ ಭಾಷೆಯ ಮೇಲಿನ ಸಾಹಿತ್ಯ, ಸಂಸ್ಕೃತಿಯ ಕಾಳಜಿ ಮತ್ತು ಅಸ್ತಿತ್ವವನ್ನು ನಶಿಸುವಂತೆ ಮಾಡಿದೆ. ಕನ್ನಡ ಮಾದ್ಯಮಗಳ ಶಾಲೆಗಳನ್ನು ಮುಚ್ಚಿಸುವಂತೆ ಮಾಡುತ್ತಿದೆ. ಇಂದಿನ ಸಮಾಜದಲ್ಲಿ ಮಾತೃಭಾಷೆಗೆ ಸಿಗಬೇಕಾದ ಸ್ಥಾನ – ಮಾನ ಸಿಗುತ್ತಿಲ್ಲ. ಕೇವಲ ವಾಣಿಜ್ಯ ಉದ್ಯೋಗಕ್ಕಷ್ಟೇ ಸೀಮಿತವಾಗಿ ಬಂದ ಭಾಷೆ ಗೊತ್ತಿಲ್ಲದಂತೆ ಮಾತೃಭಾಷೆ ಕನ್ನಡವನ್ನು ನಾಶಗೊಳಿಸುವಲ್ಲಿ ಮುಂದಾಗುತ್ತಿದೆ.
ಇನ್ನು ವೃತ್ತಿರಂಗದಲ್ಲಿ ನಮ್ಮ ಸಹೋದ್ಯೋಗಿಗಳೇ ನಮ್ಮ ಹಿತಶತ್ರುವಾಗಿರುತ್ತಾರೆ. ನಮ್ಮ ಉನ್ನತಿಯನ್ನು, ಒಡನಾಟವನ್ನು, ಕಾರ್ಯ ಯಶಸ್ಸನ್ನು ಮನದಲ್ಲಿ ಸಹಿಸದೆ ಪಕ್ಕದಲ್ಲೇ ನಗುತ್ತ ಚೆನ್ನಾಗಿದ್ದು, ನಮ್ಮ ಮೇಲಿನ ಅಸೂಹೆ ಯಿಂದ ನಮ್ಮ ಕೆಲಸವನ್ನು ಕೆಡಿಸುತ್ತಾರೆ, ನಮ್ಮ ವೃತ್ತಿ ಬದುಕಿಗೆ ತೊಡಕು ಉಂಟು ಮಾಡುತ್ತಾರೆ. ಒಟ್ಟಿನಲ್ಲಿ ಏಣಿ ಹಾಕಿ ಅಟ್ಟ ಹತ್ತಿಸಿ ಕಾಲು ಎಳೆಯೋವಂತವರಾಗಿರುತ್ತಾರೆ. ಹಾಗಂತ ಇಂತವರನ್ನು ನಿಂದನೆ ಮಾಡಬಾರದು ಇವರು ಮಾಡಿದ ಇಂತ ಕೆಡಕಿನಿಂದ ಮುಂದೆ ನಾವು ಜಾಗೃತರಾಗಿ ಎಚ್ಚರಿಕೆ ವಹಿಸುತ್ತೇವೆ.
ಇತ್ತೀಚಿಗೆ ಅನೇಕ ಕಡೆ ಶತ್ರುಗಳಿಗಿಂತ ಹಿತಶತ್ರುಗಳ ಹಾವಳಿಯೇ ಜಾಸ್ತಿ ಯಾಗುತ್ತಿದೆ (ಸಂಸಾರದಲ್ಲಿ, ಗೆಳೆತನದಲ್ಲಿ, ಭಾಷೆಗಳಲ್ಲಿ, ಇಂದಿನ ವೈಜ್ಞಾನಿಕ & ಮಾಧ್ಯಮ ಯುಗದಲ್ಲಿ, ಆಧುನಿಕತೆಯಲ್ಲಿ, ರಾಜಕೀಯದಲ್ಲಿ, ಸಿನೆಮಾರಂಗದಲ್ಲಿ, ವೃತ್ತಿರಂಗದಲ್ಲಿ ಇನ್ನು ಮುಂತಾದವುಗಳು). ಶತ್ರುಗಳನ್ನು ಗುರುತಿಸಬಹುದು ಆದರೆ ನಮ್ಮ ಜೊತೆಯಲ್ಲಿ, ಪಕ್ಕದಲ್ಲಿ, ಬೆನ್ನ ಹಿಂದೆಯಲ್ಲಿ ಇರುವ ಹಿತಶತ್ರುಗಳನ್ನು ಗುರುತಿಸೋದು ಕಷ್ಟ.
ನಾವು ಒಬ್ಬರಿಗೆ ಸಹಾಯ ಮಾಡಕ್ಕಗದಿದ್ದಲ್ಲಿ ಅಥವಾ ಅವರಿಗೆ ಹಿತ ಬಯಸದಿದ್ದಲ್ಲಿ ಪರವಾಗಿಲ್ಲ ಆದರೆ ಯಾವ ಕಾರಣಕ್ಕೂ ಅವರಿಗೆ ತೊಂದರೆ ಅಥವಾ ಕೆಡಕು ಮಾಡಬಾರದು. ಅವರು ನಮ್ಮ ಮೇಲಿಟ್ಟಿರುವ ವಿಶ್ವಾಸ ನಂಬಿಕೆಗೆ ದ್ರೋಹ ಬಗೆದು ವಂಚಿತರಾಗಬಾರದು. ಇನ್ನೊಬ್ಬರ ಏಳಿಗೆ ಯನ್ನು ನೋಡಿ ಹೊಟ್ಟೆಕಿಚ್ಚು, ಅಸೂಯೆ ಪಡದೆ, ಅವರ ಮಾರ್ಗದಲ್ಲೇ, ಆದರ್ಶಗಳಲ್ಲೇ ಒಂದು ಉತ್ತಮ ಕಾರ್ಯ ಯಶಸ್ಸು ಪಡೆಯಬೇಕು. ಹೀಗೆ ಮಾಡಿದ್ದಲ್ಲಿ ನಮ್ಮ ಬದುಕಿಗೊಂದು ಒಳ್ಳೆಯ ಅರ್ಥ & ನಿಲುವು ದೊರೆಯುವುದು.
***
GOOD…..KEEP IT UP…….