ಅವತ್ತ ನನ್ ಕಣ್ ನನಗ ನಂಬದಷ್ಟು ಆಶ್ಚರ್ಯ ಆತು. ಎರಡೂ ಕಣ್ಣಾಗ ದಳ ದಳ ನೀರು ಹರಿಲಿಕತ್ತಾವು. ತಡಕೊಳ್ಳಲಿಕ್ಕೆ ಆಗದಷ್ಟು. ಹಿಂಗ್ ಕಣ್ಣೀರ್ ಹಾಕಿ ಎಷ್ಟೋ ವರ್ಷ ಆಗಿದ್ವು!
… ನನಗ ನೆನಪಿದ್ದಂಗ ಹತ್ತು ವರ್ಷದ ಹಿಂದ ಇರ್ಬೇಕು ನನ್ನ ಹೆಂಡತಿ ನನ್ನ ಬಿಟ್ಟು ತಾ ಒಬ್ಬಾಕಿನ ತೌರ ಮನೀಗೆ ಹೋಗಿದ್ದು. ಅದನ್ನ ಬಿಟ್ರ ಅಕಿ ಒಬ್ಬಾಕಿನ ಎಂದೂ ಹೋಗೇ ಇಲ್ಲ. ಪ್ರತಿ ಸಲ ಊರಿಗೆ ಹೋಗುಮುಂದ ಜೊತಿಗೆ ನಾನೂ ಇದ್ದ ಇರ್ತಿದ್ದೆ. ಅಥವಾ ತನ್ನ ಜೋಡಿ ನನ್ನ ಕಟಗೊಂಡs ಹೋಗಾಕಿ. ಆದ್ರ ಅದಕ್ಕ ನನ್ನ ಕಣ್ಣೀರಿಗೆ ಏನ್ ಸಂಬಂಧ ಅಂತ ತಲಿ ಕೆಡಿಸ್ಕೊಂಡ್ ನೀವ್ ಕಣ್ಣೀರ್ ಹಾಕಬ್ಯಾಡ್ರಿ! ಅದೇನು ಕಣ್ಣೀರೋ ಅಥ್ವಾ ಪಣ್ಣೀರೋ ಅಂತನೂ ತಪ್ಪನೂ ತಿಳ್ಕೊಬ್ಯಾಡ್ರಿ. ಹೆಳತೀನಿ ತಡ್ಕೋರಿ!
… ಮತ್ತ ನನ್ನ ಹೆಂಡತಿ ನನ್ನ ಒಬ್ಬಂವನ್ನ ಬಿಟ್ ಊರಿಗೆ ಯಾಕ ಹೋಗಂಗಿಲ್ಲ ಅನ್ನಲಿಕ್ಕೆ ಒಂದೆರಡು ಕಾರಣ ಆವ. ಛೆ ಛೆ … ನನ್ನ ಮ್ಯಾಲೆ ಸಂಶಯ ಅಂತ ಅಲ್ಲರೀಪಾ … ನಾ ಶ್ರೀರಾಮಚಂದ್ರ ಮತ್ತ ಹರಿಶ್ಚಂದ್ರ ಇಂಥ ಮಹಾಪುರುಷರ ಒಂದೊಂದಿಷ್ಟು ಗುಣ ಪಡಕೊಂಡವ. ನನ್ನ ಒಬ್ಬನ್ನ ಮನ್ಯಾಗ ಬಿಟ್ರ ನಾ ಅಡಿಗಿ ಮಾಡಕೊಂಡ್ರ ಅಂತ ಅಕಿಗೆ ಚಿಂತಿ! ಅದರಾಗ ಏನ್ ದೊಡ್ಡ ವಿಷಯ ಅಂತ ನೀವು ಕೇಳಬಹುದು. ಅಲ್ಲೇ ಇರೋದು ಸ್ವಾರಸ್ಯ! ಇನ್ನೊಂದು ಹೇಳೋದು ಮರ್ತೆ… ಆ ನಳಮಹಾರಾಜನ ಒಂದಿಷ್ಟು ಅಂಶನೂ ನನಗ ಬಂದಾವು. ಅದೇನಂದ್ರ ಅಡಿಗಿ ಭಾರಿ ಮಾಡ್ತೀನಿ… ಭಾರಿ ಯಾಕ ಆಗ್ತದ ಅಂದ್ರ ಬೊರೊಬ್ಬರಿ ಎಣ್ಣಿ, ಖೊಬ್ರಿ ಎಲ್ಲಾ ಹಾಕ್ತೆನಿ. ಅದಕ್ಕ ಅಡಿಗಿ ಭಾರಿ ರುಚಿ ಆಗ್ತದ. ಅದ ನೋಡ್ರಿ ಅಕಿಗೆ ತಲಿ ಕೆಡ್ಸೋ ವಿಚಾರ! ಆ ಪರಿ ಎಣ್ಣಿ ಹಾಕ್ಕೊಂಡು ತಿಂದ್ರ ಆರೋಗ್ಯಾ ಏನ್ ಆಗಬ್ಯಾಡ ಅಂತ! ಅದು ಒಂದು ಕಾರಣ. ಇನ್ನೊಂದೆನಪ ನೆಪ ಅಂದ್ರ, ಅಡಗಿ ಮಾಡಿದ ಮ್ಯಾಲೆ ಸಿಪ್ಪಿ, ಹೆರದ ಕೊಬ್ಬರಿ ಬಟ್ಲಾ, ಎಣ್ಣಿ ಡಬ್ಬಿ ಎಲ್ಲೆ ಅಂದ್ರ ಅಲ್ಲೇ ಇಟ್ಟಿರ್ತೀನಿ. ಅವು ತಂತಮ್ಮ ಸ್ವ ಸ್ಥಾನಕ್ಕ ಎಂದೂ ತಿರಗಿ ಹೋಗಂಗಿಲ್ಲ. ಆಮೇಲೆ ಸಿಕ್ಕಾಪಟ್ಟೆ ಕಸಾ ಚೆಲ್ಲಿ ಅಡಗಿ ಮನ್ಯಾಗ ಒಂದ್ ಸಣ್ಣ ತಿಪ್ಪಿ ತಯಾರ್ ಮಾಡಿರ್ತಿನಿ… ಅದನ್ನ ಸ್ವಚ್ಚ ಮಾಡಲಿಕ್ಕೆ ಅಕಿಗೆ ಒಂದ್ ತಿಂಗಳ ಹಿಡಿತದಂತ. ಯಾರರೆ ನಂಬು ಮಾತ ಇದು? … ಹಿಂಗೆನೇನೋ ನನ್ನ ಮ್ಯಾಲೆ ದೋಷಾರೋಪ ಮಾಡಿ ಒಟ್ಟ ಅಕಿ ನನ್ನ ಬಿಟ್ಟು ಹೊಗಂಗೆ ಇಲ್ಲ ನೋಡ್ರಿ. ಆದ್ರ ಅವತ್ತ ಮಾತ್ರ ಅಕಿ ಹೋಗs ಬೇಕು ಅನ್ನೋ ಸಂದರ್ಭ ಬಂತು. ಬ್ಯಾರೆ ಏನೂ ಉಪಾಯ ಇಲ್ದ ಪಾಪ ನನ್ನ ಬಿಟ್ಟು ಹೋದ್ಲು. ಅಳಕೋತನ ಹೋದ್ಲು. ನನ್ನ ಬಿಟ್ಟು ಹೊಂಟೀನಿ ಅಂತ ಅಲ್ಲ. ಬರೋದರಾಗ ಏನೇನ್ ರಾದ್ಧಾಂತ ಮಾಡಿರ್ತಾನೋ ಅಂತ!
ನಾನೂ ಸಿಕ್ಕಿದ್ದ ಚಾನ್ಸ್ ಅಂತ್ಹೇಳಿ ಮರದಿವ್ಸ ಮದ್ಯಾಹ್ನ ಮಸ್ತ್ ಪೈಕಿ ಹುಳಿ (ಬೆಂಗಳೂರಾಗ ಸಾಂಬಾರ್ ಅಂತಾರಲ್ಲ ಅದು) ಮಾಡೋಣ ಅಂತ ಎಲ್ಲಾ ತಯ್ಯಾರಿ ಸುರು ಮಾಡಿದೆ. ಅದಕ ಮೊಟ್ಟ ಮೊದ್ಲು ಬೇಕಾಗೋದs ಉಳ್ಳಾಗಡ್ಡಿ. ಅದನ್ನ ಹೆಚ್ಚಲಿಕ್ಕೆ ಸುರು ಮಾಡಿದೆ ನೋಡ್ರಿ, ಅವಾಗ ಕಣ್ಣಾಗ ದಳ ದಳ ನೀರು ಬಂದಿದ್ದು! ಈಗ ಗೊತ್ತಾತಲ್ಲ, ನಾ ಅತ್ತಿದ್ದು ಯಾಕ ಅಂತ? ಇರ್ಲಿ…
ಹಿಂಗ ಅಳಕೊತ ಉಳ್ಳಾಗಡ್ಡಿ ಹೆಚ್ಚಿ ಆತು. ಎಣ್ಣಿ ಕಾಸಲಿಕ್ಕೆ ಇಟ್ಟೆ. ಮತ್ತ ಒಗ್ಗರಣಿ ಮಾಡಬೇಕಲ್ಲ. ಆದ್ರ… ಅರಶಿಣ ಪುಡಿ ಡಬ್ಬಿ ಎಲ್ಲ್ಯದ ಅಂತ ಹುಡುಕಿ ಹುಡುಕಿ ಸಾಕಾತು. ಮದ್ಲಿನ ಕಾಲದಾಗ ಆಗಿದ್ರ ಡಬ್ಬಿ ನೋಡಿದ್ರನs ಗೊತ್ತಾಗ್ತಿತ್ತು ಇದು ಯಾತರ ಡಬ್ಬಿ ಅಂತ. ಅರಷಣ ಇಡೋ ಡಬ್ಬಿ ಹಳದಿ ಆಗಿರ್ತಿತ್ತು, ಖಾರಪುಡಿ ಡಬ್ಬಿ ಕೆಂಪ, ಸಕ್ಕರಿ ಡಬ್ಬಿಗೆ ಇರವಿ ಮುಕರಿರ್ತಿದ್ವು … ಹಿಂಗ ಕಲರ್ ಫುಲ್ ಮತ್ತ ಡಿಸೈನ್ ಡಿಸೈನ್ ಇತ್ರಿ ಜೀವನ ಅವಾಗ. ಈಗ ಸ್ವಚ್ಚನ್ವು ಪ್ಲಾಸ್ಟಿಕ್ ಡಬ್ಬಿ. ಅದ್ರಾಗ ಇಕಿ ಅಂತೂ ಭಾಳ ಸ್ವಚ್ಚ ಇಟ್ಟಿರ್ತಾಳ. ಅದಕ್ಕ ಗೊತ್ತ ಆಗುದಿಲ್ಲ ಯಾವ ಡಬ್ಬ್ಯಾಗ ಏನ್ ಅದ ಅಂತ! ಫೋನ್ ಮಾಡಿ ಕೆಳೋಣಂದ್ರ ಬೈಸಿಕೊಬೇಕು. ಆದ್ರ ಹಂಗಂಥೇಳಿ ಅಂಗಡಿಗೆ ಹೋಗಿ ಇನ್ನೊಂದು ಅರಿಶಿನ ಪ್ಯಾಕೆಟ್ ತಂದ್ರ ಅದಕ್ಕೂ ಬೈಸಿಗೊಬೇಕು! ಗಂಡಸಿನ ಜೀವನ ಯಾರಿಗೂ ಬ್ಯಾಡ ನೋಡ್ರಿ. ಸಣ್ಣವರಿದ್ದಾಗ ಅಮ್ಮನ ಕಡೆ, ಮದುವಿ ಅದ್ಮ್ಯಾಲೆ ಹೆಂಡ್ತಿ ಕಡೆ, ಆಫೀಸ್ ನ್ಯಾಗ ಬಾಸ್ ಕಡೆ ಬೈಸಿಕೊಂಡಿಲ್ಲಂದ್ರ ಅಂತೂ ಅವತ್ತ ಉಂಡಿದ್ದು ಕರಗಂಗೆ ಇಲ್ಲ! ಜೀವನ ಪೂರ್ತಿ ಬೈಸಿಕೊಳ್ಳೋದ! ಆದ್ರೂ ಧೈರ್ಯ ಮಾಡಿ ಅಕಿಗೆ ಫೋನ್ ಮಾಡಿದೆ. ತೌರ ಮನಿಗೆ ಹೋದ್ರ ಅಕಿನಾಗೆ ಫೋನ್ ಮಾಡೋದಂತೂ ದೂರ … ನಾನಾಗೆ ಮಾಡಿದ್ರ ಅದನ್ನ ಎತ್ತೋದು ಇಲ್ಲ.. ಎರಡು ಮೂರ ಸಲಾ ಪ್ರಯತ್ನ ಮಾಡಿದ ಮ್ಯಾಲೆ ಅಂತೂ ಎತ್ತಿದ್ಲು.
“ಏನ್ ಹೇಳು…” ಸಿಟ್ಟಿಲೇನ ಕೇಳಿದಳು. ಅಂಥಾ ಪರಿ ಏನ್ ಅರ್ಜೆಂಟ್ ಕೆಲಸ ಬಂತೋ ಮಗನs ಅನ್ನೋ ಹಂಗ ಇತ್ತು ಅಕಿ ಧಾಟಿ!
“ಅರಶಿಣ ಪುಡಿ ಡಬ್ಬಿ ಎಲ್ಲಿಟ್ಟಿಲೆ… “ ಅನ್ನೊದ ತಡ ಆ ಕಡೆಯಿಂದ ಸ್ವಲ್ಪ ಹೊತ್ತು ಮಾತ ಇಲ್ಲ. ಒಂದೆರಡ್ ಸಲಾ ಹಲೋ ಹಲೋ ಅಂದ ಮ್ಯಾಲೆ ಸುರು ಆತು ಏನಕ್ವಾಯ್ರಿ!
“ಅರಶಿಣ ಯಾಕ ಬೇಕು?” ಕೇಳೋ ಪ್ರಶ್ನೆ ಏನ್ರಿ ಇದು? ಅದ್ನೇನ್ ತಲಿಗೆ ಹಚ್ಗೋತಾರ? ಅಷ್ಟೂ ಕಾಮನ್ ಸೆನ್ಸ್ ಇಲ್ಲ.
“ಹುಳಿ ಮಾಡ್ಬೇಕು ಅದಕ್ಕ”
“ಯಾಕ? ಬೆಂಗಳೂರಿನ್ಯಾಗ ಎಲ್ಲಾ ಹೋಟೆಲ್ ಬಂದ ಅಗ್ಯಾವೇನು? ಒಟ್ಟ ಅಡಿಗಿ ಮನಿ ಸ್ವಚ್ಚ ಇದ್ರ ನೋಡಲಿಕ್ಕಾಗುದಿಲ್ಲ ಅಲ್ಲ?” ಇದೊಳ್ಳೆ ಕತಿ ಆತಲ್ಲ. ನಾನ ಅಡಿಗಿ ಮಾಡ್ಲಿಕತ್ತಿನಿ ಗೊಬ್ಬರ ಅಲ್ಲ!
“ಹೋಟೆಲ್ ನ್ಯಾಗ ಊಟ ಮಾಡಿದರ ಅರೋಗ್ಯ ಏನ್ ಆಗಬ್ಯಾಡ ಅಂತ ನೀನs ಹೇಳಿದ್ಯಲ್ಲಲೇ?!”
“ಅದು ನಾ ಅಲ್ಲೇ ಇದ್ದಾಗ ಅಷ್ಟ ಲಾಗು. ಈಗ ಸುಮ್ನ ಹೋಟೆಲ್ ಗೆ ಹೋಗಿ ತಿಂದ್ಕೊಂಡ್ ಬಾ. ಒಬ್ಬನ್ ಸಲವಾಗಿ ಯಾಕ ಮಾಡ್ಕೋತಿ?” ನನಗ ಒಬ್ಬಂವ್ಗ ಅಲ್ದ ಮತ್ತೇನ್ ಓಣಿ ಮಂದೀನ್ ಎಲ್ಲ ಕರ್ಕೊಂಡ್ ಬರ್ಲೇನ್!
…. ಹಿಂಗ್ ಸ್ವಲ್ಪ ಹೊತ್ತು ಕೆಟ್ ತಲಿ ತಿಂದ್ಲು.
ಅಂತೂ ಕಾಡಿ ಬೇಡಿ ಅರಶಿಣ, ಖಾರಪುಡಿ, ಉಪ್ಪು ಇತ್ಯಾದಿ ಡಬ್ಬಿ ಹುಡಕಿ ಆತು. ಹುಳಿ ಅನ್ನ ತಯ್ಯಾರಾತು. ಅಂಥಾ ಕೆಟ್ ಸೂಪರ್ ಹುಳಿ ತಿಂದು ಎಷ್ಟು ವರ್ಷ ಆಗಿದ್ವೋ ಏನೋ!
ಆದ್ರ ಅಡಿಗಿ ಮನಿ ಪರಿಸ್ಥಿತಿ ಮಾತ್ರ ಚಿಂತಾಜನಕ ಆಗಿತ್ತು. ಅದನ್ನ ನನ್ನ ಹೆಂಡ್ತಿ ನೋಡಿದ್ರ ಅವತ್ತs ವಾಪಸ್ಸ ಬಂದ ಬಿಡ್ತಾಳ ಅಂತ ಹೆದರಿ ನಾ ಸೆಲ್ಫಿ ತೊಗೊಳಿಲ್ಲ. ಯಾಂವ್ ಹೇಳ್ಯಾನು … ಅಪ್ಪಿ ತಪ್ಪಿ ಅಂತ ಫೋಟೋ ಫೇಸ್ಬುಕ್ ನ್ಯಾಗ ಹಾಕಿ ಬ್ಯಾರೆಯವ್ರು ಅದನ್ನ ಲೈಕ್ ಮಾಡೋದಿರ್ಲಿ ಇದ್ದ ಏಕೈಕ ಹೆಂಡ್ತಿ ಕಡೆ dislike ಮಡ್ಸ್ಕೊಳ್ಳೋ ಸೌಭಾಗ್ಯ ಬ್ಯಾಡ ಅಂತ ಸುಮ್ನ ಬಿಟ್ಟೆ.
ಅದಕ್ಕ ನೋಡ್ರಿ.. ಹಿಂಗ್ ಆಗಬಾರ್ದಂದ್ರ ಹೆಂಡ್ತ್ಯಾರು ಅವಾಗವಾಗ ಎಲ್ಲಾ ಕೆಲ್ಸಾ ನಮ್ಮ ತಲಿ ಮ್ಯಾಲೆ ಹಾಕಿ ತೌರ ಮನಿಗೆ ಹೋಗಬೇಕು. ನಮಗೂ ಯಾವ್ಯಾವ್ ಡಬ್ಬಿ ಎಲ್ಲೆಲ್ಲ್ಯವ ಅಂತ ಗೊತ್ತಾಗ್ತದ. ಸ್ವಲ್ಪ ಜವಾಬ್ದಾರಿ ಬರ್ತದ. ಈ ಸೂಕ್ಷ್ಮ ಅರ್ಥ ಆಗುದಿಲ್ರಿ ಅವ್ರಿಗೆ.
ಹಂಗೂ ಹಿಂಗೂ ಎಲ್ಲಾ ಸಾರಿಸಿ ಸ್ವಚ್ಚ ಮಾಡೂದ್ರಾಗs ನನ್ನ ಬೆನ್ನು ಮಾತಡ್ಲಿಕತ್ತಿತ್ತು. ಇನ್ನೂ ಕೆಲ್ಸಾ ಬಾಕಿ ಇದ್ವು. ಅರವಿ ಒಗ್ಯೋದು ಮುಂದಿನ ಕಾರ್ಯಕ್ರಮ. ಅದೇನ್ ದೊಡ್ಡ ಕೆಲಸ ಅಲ್ಲ. ವಾಶಿಂಗ್ ಮಷಿನ್ ನ್ಯಾಗ ಎಲ್ಲಾ ಅರಿವಿ ಹಾಕಿ ಬಟನ್ ಆನ್ ಮಾಡಿದ್ರ ಆತು. ಅದನ್ನೊಂದು ಸುರು ಮಾಡೋಣ ಅಂತ ಹೋದೆ. ಎಲ್ಲಾ ಅರಿವಿ ಹಾಕಿದೆ. ಆದ್ರ ಈ ವಾಶಿಂಗ್ ಮಷೀನ್ ಹೆಂಗ್ ಸುರು ಮಾಡ್ಬೇಕು ಅಂತಾ ಗೂತ್ತ ಆಗವಲ್ದು. ಇಷ್ಟ್ಯಾಕ ಕಾಂಪ್ಲಿಕೇಟೆಡ್ ಡಿಸೈನ್ ಮಾಡ್ಯಾರ ಅಂತ ಆ ಕಂಪೆನಿಯವರ ಮ್ಯಾಲೆ ಭಾಳ ಸಿಟ್ ಬಂತು. ಕಷ್ಟ ಪಟ್ಟು ಹೆಂಗೋ ಗುದ್ಯಾಡಿ ಸುರು ಮಾಡಿದೆ. ಆದ್ರ ಎಷ್ಟೊತ್ತಾದ್ರೂ ಅದು ನಿಂದ್ರವಲ್ದು. ಗರ ಗರ ಗುಡು ಗುಡು ಅಂತ ಸಪ್ಪಳಾ ಮಾಡ್ಕೊತ, ಅತ್ಲಾಗ ಇತ್ಲಾಗ ಅಳಗ್ಯಾಡ್ಕೊತ ಇನ್ನೂ ಅರಿವಿ ಒಗಿಲಿಕತ್ತಿತ್ತು. ಹಿಂಗs ಇದು ಒಕ್ಕೊತ ಇದ್ರ ನಮ್ಮ ಅರಿವಿ ಬಣ್ಣ ಬಿಡೋದು ನಿಕ್ಕಿ, ಅದಕ್ಕ ಮತ್ತ ಬೈಸಿಕೊಬೇಕು ಅಂತ ಹೆದರಿ ಮಷೀನ್ ಆಫ್ ಮಾಡಿದ್ರ ಒಳಗಿನ್ ನೀರು ಹೊರಗs ಬರವಲ್ದು. ಇದs ಸಂಭ್ರಮಕ್ಕ ೨ ತಾಸು ಹಿಡಿತು. ತಿಂದಿದ್ದು ಕರಗಿ ಹೋತು. ಸುಮ್ನ ಇದ್ದದ್ ಒಂದ್ ನಾಲ್ಕ್ ಅರಿವಿನ್ನ ಕೈಯ್ಯಾಗ ಒಕ್ಕೊಂಡಿದ್ರ ಶ್ಯಾಣ್ಯಾ ಆಗ್ತಿದ್ದೆ ಅನಿಸ್ತು.
ಈ ಘನಂದಾರಿ ಕೆಲಸ ಸುರು ಮಾಡುಕಿಂತ ಮೊದ್ಲ ದೊಡ್ಡ ಶ್ಯಾಣ್ಯಾ ನಂಗ ನೀರಿನ ಫಿಲ್ಟರ್ ಒಂದ್ ಸುರು ಮಾಡಿದ್ದೆ. ಮದ್ಲೆಲ್ಲ ನಳದಾಗಿನ್ ನೀರು ಹಿಡ್ಕೊಂಡ್ ಕುಡಿತಿದ್ವಿ. ಈಗ ಅದಕ್ಕಂತ ದೊಡ್ಡ ಮಷೀನ್ ಬ್ಯಾರೆ ಮಾಡ್ಯಾರ. ಅದು ಫಿಲ್ಟರ್ ಮಾಡೋದು ಒಂದ್s ಕೊಡಾ ಆದ್ರ ಎರಡು ಬಕೀಟು ನೀರು ಹೊರಗ ಬಿಡ್ತದ! ಅದೆಂಥಾ ತಂತ್ರಜ್ನ್ಯಾನ ನೋ ಏನ್ ಕತಿಯೋ. ಆ ಹೊರಗ ಬರೋ ನೀರು ಪೋಲಾಗಬಾರ್ದಂತ ಅದನ್ನ ಬಕೀಟ್ನ್ಯಾಗ ಬಿಟ್ಟು ಆಮ್ಯಾಲೆ ಬಚ್ಚಲಾ ತೊಳಿಲಿಕ್ಕೆ ಉಪಯೋಗಸ್ತೀವಿ. ಆದ್ರ ಈ ಅರಿವಿ ಒಗ್ಯೋ ಸಂಭ್ರಮದಾಗ ಆ ಫಿಲ್ಟರ್ ಮಾಡೋ ಮಷೀನ್ ಬಂದ್ ಮಾಡ್ಲಿಕ್ಕೆ ನೆನಪs ಆಗಿಲ್ಲ. ಬಕಿಟು ತುಂಬಿ ನೀರು ಹೊರಗ ಸೋರಿ ಅಡಿಗಿ ಮನ್ಯಾಗ ಒಂದು ಸಣ್ಣ ಕೆರಿನs ನಿರ್ಮಾಣ ಆಗಿತ್ತು… ಮೊದ್ಲs ಮಂದಿ ನೀರಿಲ್ಲ ಅಂತ ಕಷ್ಟ ಪಡಲಿಕತ್ತಾರ, ನಾ ಎಂಥಾ ಕೆಲಸ ಮಾಡಿಬಿಟ್ಟೆ ಅಂತ ಅವತ್ತ ಇಡೀ ದಿವ್ಸ ನೀರ ಕುಡದಿಲ್ಲ ಹೋಗ್ರಿ!
ಆದ್ರ ಬರ್ತಾ ಬರ್ತಾ ಹಿಂಗ ಒಂದರ ಹಿಂದ ಒಂದು ಅಂತ ಕೆಲಸ ಭಾಳ ಆದವು. ಇಕಿ ದಿವ್ಸ ಎಲ್ಲಾ ಹೆಂಗ ಮ್ಯಾನೆಜ್ ಮಾಡ್ತಾಳೋ ಅಂತ ಆಶ್ಚರ್ಯ ಆತು. ಒಂದ್ ಸಲಾನೂ ನನಗ ಅತ್ಲಾಗಿನ್ ಕಡ್ಡಿ ಇತ್ಲಾಗ ಇಡಲಿಕ್ಕೆ ಕೊಡಂಗಿಲ್ಲ. ವ್ಯಾಳ್ಯಾಕ ಸರಿಯಾಗಿ ಎಲ್ಲಾ ಮಾಡಿಟ್ಟಿರ್ತಾಳ. ನಾವು ಬರೆ ಸ್ನಾನ, ಊಟ ಮಾಡಿ ಡರಕಿ ಹೊಡದು ಅಡ್ಡ್ಯಾಡ್ತೀವಿ.
ಅಕಿ ಊರಿಗೆ ಹೋಗಿ ಆಗ್ಲೇ ಐದು ದಿವ್ಸ ಆಗಿದ್ವು! ಐದು ವರ್ಷ ಕಳದಂಗ ಅಗ್ಲಿಕತ್ತಿತ್ತು. ಮನಿ ಕೆಲ್ಸದ ವಿಚಾರದಾಗ ಅಲ್ಲ ಬಿಡ್ರಿ. ಅದನ್ನ ಬರ್ತಾ ಬರ್ತಾ ಕಲ್ತೆ. ಆದ್ರ ಅಕಿನ್ನ ಖರೇನ ಮಿಸ್ ಮಾಡ್ಕೊಳ್ಳಿಕತ್ತಿದ್ದೆ. ಇನ್ನೊಮ್ಮೆ ಅಕಿನ್ ಹಿಂಗ್ ಬಿಟ್ಟು ಇರಬಾರದು ಅನಸ್ತು…ಆದ್ರ ಒಂದ್ ಮಾತ್ರ ಖರೆ. ಅವಾಗವಾಗ ಹಿಂಗ ಮಿಸ್ ಮಾಡ್ಕೊಂಡ್ ದೂರ ಹೋದಾಗ ಅಲ್ಲಾ ಪ್ರೀತಿ ಹೆಚ್ಚಾಗೋದು. ಅದಕ್ಕ ಅವಾಗವಾಗ ಈ ತರ ನಳ ಮಹಾರಾಜ ಆಗಬೇಕು… ಕಣ್ಣಾಗ ನೀರು ಹರಿಬೇಕು! ಅಂದ್ರ ಕಣ್ಣು ಸ್ವಚ್ಚ ಆಗಿ ಒಳಗಣ್ಣು ತೆರಿತದ!
ಮತ್ತ ಅಕಿಗೆ ಫೋನ್ ಮಾಡಿದೆ. ಈ ಸಲ ಯಾಕೋ ಮೊದಲ್ನೇ ರಿಂಗ್ ಗೆ ಎತ್ತಿದ್ಲು. ಗಂಡಗ ಬುದ್ಧಿ ಬಂದದ ಅಂತ ಭಾಳ ಲೊಗು ತಿಳ್ಕೊತಾಳ್ರಿ ಅಕಿ.
“ಮತ್ತ ಏನ್ ಬೇಕಾತು ರಾಯರಿಗೆ?”
“ಮತ್ತೇನ್ ಬ್ಯಾಡ ನೀನs ಬೇಕ ನೋಡು… ಜಲ್ದಿ ವಾಪಾಸ್ ಬಾರಲೇ… ನಿನ್ನ ಕೈ ಹುಳಿ ತಿನ್ನೋ ಬಯಕಿ ಆಗ್ಯದ”
“ಹೌದ? … ಬಯಕಿ ಅಂದ್ರ ಗುಡ್ ನ್ಯೂಸ್ ಅಂದಂಗಾತು… ಇನ್ನೊಂದ್ ತಿಂಗಳ ಬರಂಗಿಲ್ಲ ನೀನ ಹುಳಿ – ಅನ್ನಾ ಮಾಡ್ಕೊಂಡ್ ತಿನ್ನು!” ಅಂತ ಮುಸಿ ಮುಸಿ ನಗಬೇಕ ಅಕಿ? ಬಂದರ ಬಾ ನಿನಗದ ಹಬ್ಬ ಅಂದೇ…. ರಾತ್ರೆಲ್ಲ ಅಕಿ ಬಿದ್ದ ಬಿದ್ದ ನಕ್ಕಂಗ ಕನಸು!
-ಗುರುಪ್ರಸಾದ ಕುರ್ತಕೋಟಿ
ಮಸ್ತ ಅನಸ್ತು! ಛೊಲೊ ಅದ. ಭಾಳ ದಿವಸಾ ಆಗಿತ್ತು ನಿಮ್ಮ ಲೇಖನಾ ಓದಿ…
ವಿಠ್ಠಲ, ನಿನಗ ಛೊಲೊ ಅನಿಸಿದ್ದು ಕೇಳಿ ಬಾಳ ಖುಷಿ ಆತು ನೋಡಪಾ!
ಆಕಿ ಬರುದ್ರೊಳಗಾ "ಲಟ್ಟಣಿಗೆ" ಒಂದು ಹುಗ್ಸಿಡ್ರಿ!!! ಬಾಳ ಚೆಂದ ಬರ್ದೀರಿ. ಬಾಳ ಖುಷಿ ಆತು.
ಅಖಿಲೇಶ, ನಿಮ್ಮ ಪ್ರೋತ್ಸಾಹಕ್ಕೆ ನಾನು ಋಣಿ! ಅಂಧಂಗ, ಹೋಗು ಮುಂದ ಲಟ್ಟಣಿಗಿ ತನ್ನ ಜೋಡಿ ತೊಗೊಂಡ ಹೋಗ್ಯಾಳ ಅನಸ್ತದ! ಹುಡಿಕಿ ಹುಡಿಕಿ ಸಾಕಾತು 🙂
Nice one sir????
ಧನ್ಯವಾದಗಳು ಚೇತನ್!
parasu bahala chanda baradile. idu yen self experience?
ಶ್ರೀಶೈಲ್, ನೀ ಓದಿ ಮೆಚಿಗೊಂದಿದ್ದು ಕೇಳಿ ಖುಷಿ ಆತ ನೋಡಪಾ! 🙂
ಬಾಳ ಚುಲೊ ಇತ್ತ ಅಣ್ಣ.. ನಮ್ಮ ಮನೆಯವರು ಊರಿಗೆ ಹೋದಾಗ ನನ್ನ ಸರ್ಕಸ್ ಹಿಂಗ ಇರತ್ತ..
ಧನ್ಯವಾದಗಳು ನಾಗಪ್ಪ! ಒಟ್ಟಿನಲ್ಲಿ ನಾವಿಬ್ರೂ ಸಮ – ದುಃಖಿ ಗಳು ಅಂದಹಾಗಾಯ್ತು 🙂
SIR,
ನಾ ನಕ್ಕು ಬಾಳ ದಿವಸಾ ಆಗಿತ್ತು…
ಅವಾಗವಾಗ ನಾ ಹಿಂಗಾ ನಗಬೇಕು, ನೀವು ಹಂಗಾ ಕಣ್ಣೀರು ಹಾಕಬೇಕು !
ಬಯಕೆಗೆ ಇನ್ನೊಂದು ಸಲಾ ಹುಳಿ ಮಾಡಿ ಊಟಾ ಮಾಡಿ…!
ಹ್ಹಹ್ಹಹ್ಹ
ಸಂಗಮೇಶ್, ಬರಹ ನಿಮಗ ಸೇರಿದ್ದು ಕೇಳಿ ಖುಷಿ ಆತ ನೋಡ್ರಿ! ಒಟ್ಟ ನಿಮಗ ನಾಗಸಾಕ ನಾವ್ ಅಳಬೇಕ್ ನೋಡ್ರಿ 🙂
ಬಹಳ ಖುಶಿಯಾಯಿತು.ಓದುವಾಗ ಈ ಸಿಡುಕು ಮುಖದಲ್ಲೂ ನಗು ಮೂಡಿತು.
ಮುಖ್ಯವಾಗಿ ಇಷ್ಟವಾದದ್ದು ನಿಮ್ಮ ಭಾಷೆ, ಮತ್ತು ಅನುಭವ(?) ಹೇಳುವ ಶೈಲಿ.
ನಿಮ್ಮ ಪೋತ್ಸಾಹಕ್ಕೆ ನಾನು ಋಣಿ! ಇಷ್ಟ ಪಟ್ಟಿದ್ದಕ್ಕೆ ಖುಷಿಯಾಯ್ತು. ಇದು ಮತ್ತೆ ಮತ್ತೆ (ಅನುಭವಿಸಿ!) ಬರೆಯುವುದಕ್ಕೆ ಖಂಡಿತ ಸ್ಫೂರ್ತಿ ನೀಡುತ್ತೆ …. ನಿಮ್ಮನ್ನು ನಗಿಸುವ ಪ್ರಯತ್ನ ಖಂಡಿತ ಮುಂದುವರಿಯುತ್ತೆ 🙂
ಸರ್, ಮಸ್ತ್ ಬರದೀರಿ. ಓದಿ ಖುಷಿ ಆತು. ಹಿಂಗೆ ಬರೀತಾ ಇರಿ. ನಿಮ್ಮ ಮಾತು ಹಸಿ ಗೋಡೆ ಒಳಗಾ ಹಳ್ಳ ಒಗದಂಗ ಭಾಳ ಚೊಲೋ ಅದವ್ರಿ. ಹಸಿ ಮೆಣಸಿನಕಾಯಿ ಜೊತಿ ಮಿರ್ಚಿ ಮಂಡಕ್ಕಿ ತಿಂದು ಕಡಕ್ ಚಾ ಕುಡದಷ್ಟ ಖುಷಿ ಆತು.