ಸೀರೆಯ ನಿರಿಗೆಗಳನ್ನು ಜೋಡಿಸುತ್ತಾ ಹಾಸಿಗೆಯಲ್ಲಿ ಮಲಗಿದ್ದ ಪುಟ್ಟ ಮಗುವನ್ನಾಕೆ ನೋಡಿದಳು. ಮಗುವಿನ ಮುಖ ಬಾಡಿದ ಹೂವಿನಂತೆ ಸೊರಗಿತ್ತು. ಕಣ್ಣುಗಳು ಜ್ವರದ ತಾಪದಿಂದ ಬಸವಳಿದು ಒಣಗಿದ ಗುಲಾಬಿ ದಳದಂತಾಗಿದ್ದವು. ಜ್ವರ ಬಿಟ್ಟ ಸೂಚನೆಯಾಗಿ ಹಣೆಯ ಮೇಲೆ ಮೂಡಿದ್ದ ಬೆವರ ಹನಿಗೆ ಹಣೆಯಂಚಿನ ಗುಂಗುರು ಕೂದಲು ತೊಯ್ದು ಅಂಟಿಕೊಂಡಿತ್ತು. ಅವಳು ಸೆರಗಿನಿಂದ ಬೆವರನ್ನು ಹಗುರವಾಗಿ ಮಗುವಿಗೆ ಎಚ್ಚರವಾಗದಂತೆ ಒರೆಸಿದಳು. ರಾತ್ರಿಯಿಡೀ ಮಗು ಮಲಗಿರಲಿಲ್ಲ. ಜ್ವರದಿಂದ ಚಡಪಡಿಸುತ್ತಿತ್ತು. ಹನ್ನೊಂದು ಘಂಟೆಯವರೆಗೆ ಹೇಗೋ ಕುಳಿತಿದ್ದ ಅವಳ ಪತಿ "ಇನ್ನು ನಂಗಾಗೋಲ್ಲ, ನಿದ್ರೆ ಕೆಟ್ರೆ ಬೆಳಿಗ್ಗೆ ಆಫೀಸಿನಲ್ಲಿ ಕೆಲಸ ಮಾಡೋಕ್ಕಾಗಲ್ಲ" ಎನ್ನುತ್ತಾ ತನ್ನ ಹಾಸಿಗೆ ಸುರುಳಿ ಮಾಡಿ ಎತ್ತಿಕೊಂಡು ಹೋಗಿ ತನ್ನ ತಾಯಿಯ ಕೋಣೆಯಲ್ಲಿ ಹಾಸಿಗೆ ಬಿಡಿಸಿ ಮಲಗಿಬಿಟ್ಟಿದ್ದ. ಅವಳೂ ಬೆಳಿಗ್ಗೆ ಅವನಂತೆಯೇ ಕಛೇರಿಗೆ ಕೆಲಸಕ್ಕೆ ಹೋಗುವವಳು ಎಂಬುದನ್ನಾತ ಮರೆತಂತೆಯೇ ವರ್ತಿಸಿದ್ದ. ಅವನೇನೋ ಕೋಣೆಬಿಟ್ಟು ಹೋಗಿ ಇನ್ನೊಂದರಲ್ಲಿ ಮಲಗಿ ನಿದ್ರಿಸಿಬಿಡಬಹುದು. ಆದರೆ ಅವಳು ಹಾಗೆ ಮಾಡಲಾದೀತೇ? ರಾತ್ರಿ ಮೂರು ಘಂಟೆಯವರೆಗೆ ನರಳುತ್ತಿದ್ದ ಮಗುವಿನ ಕುದಿವ ಹಣೆಯ ಮೇಲೆ ತಣ್ಣೀರುಪಟ್ಟಿ ಹಾಕುತ್ತಾ, ಮಗುವಿನ ತಲೆ, ಕಾಲುಗಳನ್ನು ಒತ್ತುತ್ತಾ ಕುಳಿತೇ ಇದ್ದಳು. ಮೂರು ಘಂಟೆಯ ಮೇಲೆಯೇ ಮಗುವಿಗೆ ಜ್ವರದ ತಾಪ ಕಡಿಮೆಯಾಗಿ ನಿದ್ರೆ ಹತ್ತಿತ್ತು. ಸೋತು ಒರಗಿ ಇವಳಿಗೆ ಮಂಪರು ಹತ್ತುವುದರಲ್ಲೇ ಕಾಗೆಗಳು ಕೂಗತೊಡಗಿ, ಹಾಲಿನವನ ಬೆಲ್ ಆಗಿ, "ನೀರು ಹಿಡಿಯುವವರಿಲ್ಲ, ನಲ್ಲಿಯಲ್ಲಿ ನೀರು ಸೋರಿ ಹೋಗುತ್ತಿದೆಯಲ್ಲ" ಎಂಬ ಅತ್ತೆಯ ಗೊಣಗಾಟ ಅವಳನ್ನು ಎಚ್ಚರಿಸಿಬಿಟ್ಟಿದ್ದವು. ನೀರು, ತಿಂಡಿ, ಅಡಿಗೆ, ಸ್ನಾನ, ಮನೆ ಸ್ವಚ್ಚತೆ ಎಲ್ಲಾ ಮುಗಿಸಿ ಕಛೇರಿಗೆ ಹೊರಡಲು ಸಿದ್ದವಾಗುತ್ತಿದ್ದವಳು. ತಿಂಡಿಯ ಟೇಬಲ್ ಹತ್ತಿರ ಕುಳಿತಿದ್ದ ಆಗಷ್ಟೇ ಎದ್ದಿದ್ದ ಅವಳ ಪತಿ "ಇವತ್ತೂ ಉಪ್ಪಿಟ್ಟು ಕೆದಕಿಟ್ಟಿದ್ದಾಳೆ, ಯಾರು ತಿಂತಾರದ್ನ?" ಎಂದು ಸಿಡುಕುತ್ತಿದ್ದುದ್ದೂ, "ಇವಳು ಆಫೀಸ್‍ಗೆ ಯಾಕೆ ಹೋಗಬೇಕು, ಸಿ.ಎಲ್. ಹಾಕಿ ಮಗು ನೋಡ್ಕೊಳ್ಳೋಕಾಗಲ್ವಾ" ಎಂದು ಗೊಣಗಾಡುತ್ತಿದ್ದುದ್ದೂ ಅವಳಿಗೆ ಕೇಳುತ್ತಲೇ ಇತ್ತು.
ಅವಳ ರಜೆಗಳೆಲ್ಲ ಹೀಗೆ ಮನೆಗೆ ನೆಂಟರು ಬಂದರೆ ಅವರ ಉಪಚಾರಗಳಿಗೆ, ಮಗು, ಅತ್ತೆ, ಗಂಡ ಇವರಿಗೇನಾದರೂ ಅನಾರಾಗ್ಯದವಾದರೂ ಹೀಗೇ ಕಳೆದು ಹೋಗುತ್ತಿತ್ತು. ಸ್ವತಃ ಅವಳಿಗೇ ಸೋತು ಒರಗೋಣ ಎಂಬಂತೆ ಅನಾರೋಗ್ಯ ಕಾಡಿದರೂ ಹಾಕಿಕೊಳ್ಳಲು ಒಂದು ಸಿ.ಎಲ್. ಉಳಿಯುತ್ತಿರಲಿಲ್ಲ. ಅವನು ಮಾತ್ರ ಇಂಥ ಸಂದರ್ಭಗಳಲ್ಲಿ ರಜೆ ಮಾಡುವುದೇ ಇಲ್ಲ. ತನಗೆ ಅನಾರೋಗ್ಯವಾದಾಗ ಮಾತ್ರ ರಜೆ ಮಾಡುತ್ತಾನೆ. ಅತ್ತೆ ಸಹ ಬಂದು ಇಣುಕಿ "ರಜಾ ಹಾಕ್ಬಾರ್ದಾಮ್ಮಾ, ಮಗೂನ ನೋಡ್ಕೊಳ್ಳೋಕೆ ನಂಗಾಗೋಲ್ಲ. ಬೆನ್ನು ನೋವು ನಿನ್ನೆ ರಾತ್ರಿಯಿಂದಾನೇ" ಎಂದು ಗೊಣಗುಟ್ಟಿದರು. "ಎರೆಡೇ ದಿನ ರಜೆ ಉಳಿದಿರೋದತ್ತೆ. ಇನ್ನೂ ಐದು ತಿಂಗಳು ಕಳೀಬೇಕಲ್ಲ, ಅವರೇ ಹಾಕಬಹುದಲ್ವ, ಎಂಟು-ಹತ್ತು ರಜೆ ಇವೆ" ಎಂದಳು. ಹೊರಗೆ ಅವನು ಬೂಟ್ಸ್ ಕಾಲು ಅಪ್ಪಳಿಸುತ್ತಾ ಸಿಡುಕುತ್ತಾ ಹೋದ ಶಬ್ದ ಕೇಳಿಸಿತು. ಮಗುವಿನ ಹಾಲು, ಔಷಧಿಗಳ ಬಗ್ಗೆ ಆಸ್ಪತ್ರೆಗೆ ಮಾಹಿತಿ ನೀಡಿ, ಚಪ್ಪಲಿ ಮೆಟ್ಟಿ ಗಡಬಡಿಸಿ ಬೀದಿಗಿಳಿದವಳಿಗೆ ಬಸ್ ಹಿಡಿಯುವ ಕಾತುರ. ನೂಕು ನುಗ್ಗಲಿನ ಬಸ್ಸಿನಲ್ಲಿ ಲೇಡೀಸ್ ಸೀಟುಗಳಲ್ಲಿ ಆರಾಮವಾಗಿ ವಿರಾಜಮಾನರಾಗಿದ್ದ ಪುರುಷರತ್ತ ಶಾಪದ ನೋಟ ಬೀರಿ ಕಂಬಿ ಹಿಡಿದು ಬ್ಯಾಲೆನ್ಸ್ ಮಾಡುತ್ತಲೇ ಸ್ಟಾಪ್‍ವರೆಗೆ ಬಂದು ಏದುಸಿರು ಬಿಡುತ್ತಾ ಅಲ್ಲಿಂದ ನಡೆದು ಕಛೇರಿಗೆ ಬಂದರೆ ಇನ್ನೂ ಯಾರೂ ಬಂದೇ ಇಲ್ಲ. ಪ್ಯೂನ್ ಬೀಡಿ ಸೇದುತ್ತಾ ಕಾಂಪೌಂಡಿಗೊರಗಿ ನಿಂತಿದ್ದಾನೆ. ಸದ್ಯ ತಡವಾಗಲಿಲ್ಲ ಎನ್ನುತ್ತಾ ಹಾಜರಿ ಪುಸ್ತಕದಲ್ಲಿ ಸಹಿ ಮಾಡಲು ಪುಟ ತಿರುಗಿಸಿದರೆ ಹಿರಿಯ ಸಹೋದ್ಯೋಗಿಗಳಿಬ್ಬರು ನಿನ್ನೆ ಮೊನ್ನೆ ಬಂದಿಲ್ಲ. ಆ ಸಹಿಯ ಜಾಗ ಖಾಲಿ ಬಿಟ್ಟಿದೆ. ಇವತ್ತೋ ನಾಳೆಯೋ ಬಂದು, ಬಾರದ ದಿನಕ್ಕೆಲ್ಲಾ ಸಹಿ ಮಾಡಿಬಿಡುತ್ತಾರವರು. ಮತ್ತೆ ಏನೂ ಆಗಿಲ್ಲವೆಂಬಂತೆ ಆರಾಮವಾಗಿರುತ್ತಾರೆ. ದೂರೋಣವೆಂದರೆ ಈ ಮೇಲಧಿಕಾರಿ ತಾನೆ ಇನ್ನೇನು ಸ್ವತಃ ಆರೇಳು ದಿವಸ ಬಾರದೇ ಇದ್ದರೂ ಬಂದ ನಂತರ ಎಲ್ಲಾ ದಿನಗಳಿಗೂ ಸಹಿ ಮಾಡುತ್ತಾನಾತ.
ಯಥಾ ರಾಜಾ-ತಥಾ ಪ್ರಜಾ- ವ್ಯವಸ್ಠೆಯೇ ಹೀಗೆ. ಗೊಣಗಿಕೊಳ್ಳುತ್ತಾ ಸಹಿ ಮಾಡಿ ತನ್ನ ಟೇಬಲ್‍ಗೆ ಬಂದು ಫೈಲ್ ಬಿಡಿಸುತ್ತಾಳೆ. ಕಛೇರಿ ಸಮಯವಾಗಿ ಅರ್ಧ, ಒಂದು ಗಂಟೆಯವರೆಗೂ ಒಬ್ಬೊಬ್ಬರಾಗಿ ನಿಧಾನವಾಗಿ ಆಗಮಿಸುತ್ತಾರೆ. ಯಾರಿಗೂ ಯಾವ ಆತುರ ಕಾತುರಗಳಿಲ್ಲ. ಸಹಿ ಮಾಡಿ ಬಂದ ನಂತರ ಒಂದಷ್ಟು ಹರಟೆ, ನಗು, ಬೀಡ ಅಗಿಯುತ್ತಾ ಇರುವುದು ಇತ್ಯಾದಿ. ನಂತರ ನಿಧಾನವಾಗಿ ಫೈಲ್ ಬಿಡಿಸಿದರೂ ಕೆಲಸ ಆಮೆವೇಗದಲ್ಲೇ. ಬಾರದೇ ಇದ್ದ ದಿನಕ್ಕೊ ಸಹಿ ಮಾಡಿ ತನ್ನ ಜಾಗದಲ್ಲಿ ಆರಾಮವಾಗಿ ಕುಳಿತಿರುವ ಈ ಹಿರಿಯ ಸಹೋದ್ಯೋಗಿ ವರ್ಷದ ಕೊನೆಯಲ್ಲೂ ತನ್ನ ಲೆಕ್ಕದಲ್ಲಿ ಹತ್ತು ಸಿ.ಎಲ್.ಗಳನ್ನಾದರೂ ಹೊಂದಿರುತ್ತಾನೆ. ತಾನಾದರೋ ಜ್ವರ ಬಂದಿದ್ದರೂ ರಜೆ ಇಲ್ಲವಲ್ಲ ಎಂದು ಎಳೆದಾಡಿಕೊಂಡೇ ಕಛೇರಿಗೆ ಬರುತ್ತಾಳೆ. ಹನ್ನೊಂದು-ಹನ್ನೊಂದೂವರೆಗೆ ಅವರೆಲ್ಲರಿಗೆ ಕಾಫಿ ಸಿಗರೇಟಿನ ಸಮಯವಾಗಿಬಿಡುತ್ತದೆ. ಒಬ್ಬೊಬ್ಬರಾಗಿ, ಇಬ್ಬಿಬ್ಬರಾಗಿ ಹೊರಹೋಗಿಬಿಡುತ್ತಾರೆ. ಉಳಿಯುವುದು ಇವಳೊಬ್ಬಳೇ. ಹಾಗೆ ಹೀಗೆ ಲಂಚ್ ಟೈಂ ಬಂದಾಗ ಅವರೆಲ್ಲಾ ಹೊರಗೆ ಧಾವಿಸಿದರೆ ಇವಳು ಟಿಫನ್ ಬಾಕ್ಸ್ ನಲ್ಲಿ ಚರ್ಮದ ತುಂಡಿನಂತಾಗಿದ್ದ ಬ್ರೆಡ್ ಪೀಸನ್ನು ತಿನ್ನಲಾಗದೇ ಮಧ್ಯಾಹ್ನವೂ ಇದೇ ಕಥೆ. ನಾಲ್ಕು ಆಗುತ್ತಿದ್ದಂತೆಯೇ ಒಬ್ಬೊಬ್ಬರಾಗಿ ಖಾಲಿಯೇ ಆಗಿಬಿಡುತ್ತಾರೆ. ಇವಳಿಗೆ ಮಾತ್ರ ಆ ಮನಸ್ಸಾಗುವುದಿಲ್ಲ. ಫೈಲಿನಲ್ಲಿ ಮುಖ ಹುದುಗಿಸಿ ಕುಳಿತವಳತ್ತ ವ್ಯಂಗ್ಯ ನಗೆ ಬೀರುತ್ತಾ ಹೊರಸಾಗುತ್ತಾರೆ ಸಹೋದ್ಯೋಗಿಗಳು. ಒಬ್ಬಿಬ್ಬರು ವ್ಯಂಗ್ಯ ಆಡುವುದೂ ಉಂಟು. "ಈ ಆಫೀಸಿನ ರೂಫ್ ನಿಂತಿರೋದೇ ನಿಮ್ಮಿಂದ ಅಂತ ಕಾಣುತ್ತೆ ಮೇಡಂ". ಅವಳೇನೂ ಹೇಳುವುದಿಲ್ಲ. ಐದಾಗುತ್ತಿದ್ದಂತೆ ಫೈಲುಗಳನ್ನು ಹಿಡಿದು ಹೊರಗೆ ಧಾವಿಸುತ್ತಾಳೆ. ಬಸ್ ಹಿಡಿಯಲು ಹೋಗುತ್ತಿರುವಂತೆ ಜ್ವರದಿಂದ ನರಳುತ್ತಿರುವ ಮಗುವಿನ ಕಣ್ಣು, ಉರಿವ ಅತ್ತೆಯ ಮುಖ, ಸಿಡುಕಿ ಹೊರಹೋಗಿದ್ದ ಪತಿ, ಸಂಜೆ-ರಾತ್ರಿ ಕಾದಿರುವ ಹೊರೆ ಹೊರೆ ಮನೆಕೆಲಸ ಎಲ್ಲ ತಲೆಯಲ್ಲಿ ಸುತ್ತಿ ಸುಳಿದು ಅವಳನ್ನು ಕಾಡಿಸತೊಡಗುತ್ತವೆ.
ಉದ್ಯೋಗಸ್ಧ ಮಹಿಳೆಯರ ಅಸಾಹಯಕ ಪರಿಸ್ಥಿತಿಯನ್ನು ಎಳೆ ಎಳೆಯಾಗಿ ಬಿಡಿಸಿ ಬರಿದಿದ್ದೀರಾ ತುಂಬಾ ಇಷ್ಟವಾಯಿತು.
ತುಂಬಾ ಚೆನ್ನಾಗಿ ಮೂಡಿದಂದಿದೆ. ಮಹಿಳೆಯರ ಅಸಾಹಯಕ ಪರಿಸ್ಥಿತಿಯನ್ನು ಯಾರುತಾನೆ ಅಥಱಮಾಡಿಕೊಳ್ಳುತ್ತಾರೆ.?
ಮಗುವನ್ನು ಒಂದು ಬ್ಯಾಗಿಗೆ ಹಾಕಿ ಅದನ್ನ ಎದೆಗೆ ಕಟ್ಟಿಕೊಂಡು ತಿರುಗಾಡುವ ಗಂಡಸರನ್ನೂ ನೋಡಿದ್ದೀನಿ. ಇಂತಹವರೂ ಇರುತ್ತಾರೆ.. ಪ್ರಸ್ತುತ ಪರಿಸ್ಥಿತಿಯ ವಿಡಂಬನೆ ಚೆನ್ನಾಗಿ ಮೂಡಿಬಂದಿದೆ
ಚೆನ್ನಾಗಿದೆ
ಕಟು ವಾಸ್ತವದ ಕಥೆ.