“ಅಪ್ಪಾಜಿ ನನ್ನ ಹಾಸ್ಟೆಲ್ ಗೆ ಸೇರ್ಸು. ನನ್ನ ಗೆಳೆಯರು ಬಹಳಾ ಮಂದಿ ಹಾಸ್ಟೆಲ್ ನಿಂದ ಶಾಲೆಗೆ ಬರ್ತಾರಾ..“ ಇದು ಎರಡು ವರ್ಷದಿಂದ ನನ್ನ ಮಗನ ಗೋಳು. ಹಾಗಂತ ಆತನೇನು ದೊಡ್ಡ ತರಗತಿಯಲ್ಲಿ ಓದುತ್ತಿಲ್ಲ. ಈ ಸಾರಿ ನಾಲ್ಕನೇ ತರಗತಿ. ಅಜ್ಜಿಯ ಊರಿಗೆ ಹೋದಾಗಲೆಲ್ಲ ಅವಳ ಸಂದಕವನ್ನು ತೆಗೆದು “ಅಜ್ಜಿ ನಾ ಮುಂದಿನ ವರ್ಷ ಹಾಸ್ಟೆಲ್ ಹೋಗ್ತೇನಿ. ನೀ ನನಗ ಈ ಸಂದಕ ಕೊಡಬೇಕು ನೋಡು. ಕಿಲಿ ಹಾಕಾಕ ಬರ್ತೇತಿ ಹೌದಿಲ್ಲ. ನಾ ಕಿಲಿಹಾಕಿ ನನ್ನ ಉಡದಾರಕ್ಕ ಹಾಕ್ಕೊಂತೆನಿ. “ ಎಂದು ನನ್ನ ಅವ್ವನ ತಲೆನೂ ತಿಂತಾನೆ. ಮಾತೆತ್ತಿದರೆ ಹಾಸ್ಟೆಲ್ ಎನ್ನುವ ಮಗನ ಮಾತಿಗೆ ಬೇಸತ್ತ ನನ್ನ ಪತಿ ತಮ್ಮ ಸಿಟ್ಟನ್ನು ನನ್ನ ಮೇಲೇ ಹಾಕೋದು. “ನೀ ಆ ಹುಡಗಗ ಅದು ಮಾಡು, ಇದು ಮಾಡು ಅಂತ ಮನಿ ಕೆಲಸಕ್ಕ ಹಚ್ಚೋದು, ಅಲ್ಲೆ ಹೋಗಬ್ಯಾಡಾ- ಇಲ್ಲೆ ಹೋಗಬ್ಯಾಡಾ ಅನ್ನೋದು, ಓದು ಬರಿ ಅನ್ನೋದು ಮಾಡಿ ಮಾಡಿ ಸಣ್ಣ ವಯಸ್ನಾಗ ಮನಿ ಬ್ಯಾಸರಾ ಆಗೋವಂಗ ಮಾಡಿ ಬಿಟ್ಟಿ. ಅದಕ ಅವಾ ಮಾತೆತ್ತಿದರ ಹಾಸ್ಟೆಲ್ ಅನ್ನಾಕತ್ತಾನಾ..” ಅನ್ನಬೇಕೇ..! ನನಗಂತೂ ನಾ ನಿಂತ ಜಾಗೆಯೂ ಕುಸಿದು, ಸೀತೆಯ ಹಾಗೇ ನಾನೂ ಭೂ ಮಾತೆಯ ಒಡಲು ಸೇರಿಬಿಡಬಾರದೇ ಎನ್ನಿಸಿ ಬಿಟ್ಟಿತು ಆಕ್ಷಣ. ಮದುವೆಯ ಹೊಸತರಲ್ಲಿ ನಮ್ಮಿಬ್ಬರಲ್ಲಿ ನಮ್ಮ ನಮ್ಮ ಒಣ ಜಂಭಗಳ ಕಾರಣ ಆಗಾಗ ಜಗಳ ವಾಗುತ್ತಿದ್ದುದೇನೋ ಸರಿ.. ಈಗ ಮಕ್ಕಳಿಂದ ಮತ್ತೆ ಹೊಸ ರಾಗದ ಜಗಳಗಳು.. ! ಮೊದ ಮೊದಲೆಲ್ಲ ನಾ ಮುಸಿ ಮುಸಿ ಅಳುವುದು. ಅವರು ನನ್ನ ರಮಿಸುವುದು.. ನನಗೆ ಮತ್ತೆ ಮತ್ತೆ ಇಂಥ ಜಗಳಮಾಡಲು-ಅಳಲು ಪ್ರೇರೇಪಿಸುತ್ತಿದ್ದವು.
ಕಾಲ ಕ್ರಮೇಣ ಇವರಿಗೇನಾಯಿತೋ. ನನ್ನ ರಮಿಸುವ ಸಾಹಸವನ್ನು ನಿಲ್ಲಿಸಿ ಬಿಡಬೇಕೆ. ! ಬಹುಶಃ ನನಗೂ ಜೀವನದ ಜವಾಬ್ದಾರಿಯನ್ನ ನಿಭಾಯಿಸಲು, ಪ್ರಜ್ಞಳಾಗಲು, ನನ್ನಲ್ಲಿರುವ ಮೋಹವನ್ನು ದೂರಮಾಡಲು .. ಹೀಗೆ ಮಾಡುತ್ತಿರಬೇಕು ಎಂದುಕೊಂಡು ಇತ್ತಿತ್ತಲಾಗಿ ನಾನೂ ಅವರೆದರು ಪ್ರೌಢಳಂತೆ ವರ್ತಿಸಲು ಪ್ರಯತ್ನಿಸುತ್ತಿರುತ್ತೇನೆ. ಅದಕ್ಕಾಗೇ ಅವರೇನೆಂದರೂ ಮೊದಲಿನಂತೆ ರಂಪ ಮಾಡುವುದು ಬಿಟ್ಟು ಅದರಲ್ಲಿ ಧನಾತ್ಮಕ ಅಂಶಗಳನ್ನೇ ಗುರುತಿಸಲು ಪ್ರಯತ್ನಿಸುತ್ತಿರುತ್ತೇನೆ. ಹೀಗಾಗಿ ಹಾಸ್ಟೆಲ್ ವಿಷಯವನ್ನೂ ಮತ್ತೆ ನಾನೇ ಲಘುವಾಗಿ ತೆಗೆದುಕೊಂಡು ಸಮಾಧಾನ ಮಾಡಿಕೊಂಡೆ. ಆತನಿಗೆ ಶಾಲೆಗೆ ನಾ ಏನೇ ವಿಶೇಷ ಮಾಡಿ ಕಟ್ಟಿದರೂ, ಸಂಜೆ ಮನೆಗೆ ಬಂದಾಗ ಆತನ ಡಬ್ಬಿಯಲ್ಲಿಅನ್ನ ಸಾರಿನ ಕುರುಹೇ ಇರುತ್ತಿತ್ತು. ಈತ ನನಗೆ ಇರೋ ವಿಷಯ ಬಾಯಿ ಬಿಡುವುದಿಲ್ಲ ಎಂದುಕೊಂಡು, ನನ್ನ ಪತಿಗೆ ವಿಷಯ ತಿಳಿಸಿದೆ. ಅವರು ಆತನನ್ನು ಉಬ್ಬಿಸಿ ಮಧ್ಯಾನ್ಹದ ಶಾಲೆಯ ಊಟದ ವಿಷಯದ ಬಗ್ಗೆ ಕೇಳಿದರು. ಆತ ಹುರುಪಿನಲ್ಲಿ ಇರೋ ವಿಷಯವನ್ನು ಬಹಳ ಹಿಗ್ಗಿನಿಂದ ಹೇಳಿ ಬಿಟ್ಟ. “ಅಪ್ಪಾಜಿ ಹಾಸ್ಟೆಲ್ ನ್ಯಾಗ ಅನ್ನ- ಸಾರು ಭರ್ಜರಿ ಮಾಡಿರ್ತಾರಾ. ಅವ್ವಗ ಅವರಂಗ ಮಾಡಾಕ ಬರಂಗೇ ಇಲ್ಲ. ಅದಕ್ಕ ನಾ ಡಬ್ಬಿ ಊಟ ಅವರಿಗೆ ಹಾಕತೇನಿ. ಅವರ ಅನ್ನಾ-ಸಾರು ನಾ ಉಣತೇನಿ. ನಿನಗೊಂದ ಡಬ್ಬಿ ತುಗೊಂಡ ಬಾ ಅಂತ ಹೇಳಲೆನ ನನ್ನ ಗೆಳೆಯಾಗ. ಭರ್ಜರಿ ಇರ್ತೇತಿ” ಎನ್ನುತ್ತಿದ್ದಂತೆ ನನ್ನ ಮುಖ ಇಂಗು ತಿಂದ ಮಂಗನಂತಾಗಿದ್ದರೆ, ನನ್ನ ಪತಿ ಊರಿಗೇ ಕೇಳುವಂತೆ ಗಹಗಹಿಸಿ ನಗುತ್ತಿದ್ದರು..!
ನಾನು ಮಗನ ಆರೋಗ್ಯ ಮೆಂಟೇನ್ ಮಾಡಲು ಮಾಡುತ್ತಿದ್ದ ಪಾಲಕ್ ಚಪಾತಿ, ಮೇಥಿ ಪರೋಟಾ, ರಾಗಿ ದೋಸೆ, ಬಿಸಿ ಬಿಸಿ ರೊಟ್ಟಿ, ಸೊಪ್ಪಿನ ಪಲ್ಯ, ಬೀಟ್ ರೂಟ್ ಚಪಾತಿ. ಒಂದೇ ಎರಡೇ .. ನೆಟ್ ನಲ್ಲಿ ಹುಡಕಾಡಿ ಮಾಡಿದ ರುಚಿ ರುಚಿಯಾದ ಆರೋಗ್ಯಕರವಾದ ಅಡುಗೆಗಳೆಲ್ಲ ನೀರಿನಲ್ಲಿ ಹೋಮ ಮಾಡಿದ ಭಾವ ಕಾಡತೊಡಗಿತು. ಮೇಲಾಗಿ ಇಷ್ಟು ದೊಡ್ಡಅಪಮಾನ.. “ ಹೌದಪ್ಪ ಕೆಲವರು ಖರೇ ಹೇಳೋರನ್ನ ಕಂಡರ ಕೆಂಡದಂಗ ಆಡತಾರ. ಅದಕ ನಾನೂ ಸುಮ್ನಾಗಿ ಬಿಟ್ಟೇನಿ ನೋಡು.” ಅಂದು ಮತ್ತೆ ನನ್ನನ್ನು ಕಿಚಾಯಿಸಿದರು. ಈ ಬಾರಿ ನನ್ನ ಸ್ವಾಭಿಮಾನಕ್ಕೆ ತೀವ್ರ ಪೆಟ್ಟಾಗಿತ್ತು. ನನ್ನ ಮಾನಸಿಕ ಸ್ಥಿಮಿತ ಕಳೆದೇ ಹೋಗಿತ್ತು. ತವರಿನಲ್ಲಿ ನನ್ನ ಆಪ್ತರೆಲ್ಲ ಒಬ್ಬೊಬ್ಬರಾಗಿ ನೆನಪಾಗಿ ಕಾಡತೊಡಗಿದರು. “ಎಷ್ಟೊಂದು ಪ್ರೀತಿಯಿಂದ ಬೆಳೆಸಿ ನನ್ನನ್ನು ಮದುವೆ ಮಾಡಿಕೊಟ್ಟರು. ಯಾಕಾದರೂ ಮಾಡಿದರೋ. ನನಗೆ ಈ ಪರಿಸ್ಥಿತಿ ಬಂತು” ಎಂದುಕೊಂಡು ಹೇಳದೇ ಕೇಳದೇ ತವರಿಗೆ ಹೋಗಿ ಬಿಟ್ಟೆ. ಚಂಡಿ ಚಾಮುಂಡಿ ಯಂತಾಗಿದ್ದ ನನ್ನ ಅವತಾರವನ್ನು ಕಂಡ ನನ್ನ ತಾಯಿ ಗಾಬರಿಯಾದಳು. ನನ್ನ ಅಳು, ಸಂಕಟ, ತಾಪತ್ರಯಗಳೆಲ್ಲ ತಾಯಿಯ ಮಡಿಲಲ್ಲಿ ಗಂಗೆಯಂತೆ ಹರಿದವು. ಮೊದಲೆಲ್ಲ ಅತ್ಯಂತ ಕಾಳಜಿಯಿಂದ ರಮಿಸಲು ಪ್ರಾರಂಭಿಸಿದ್ದ ಅವಳ ಮುಖ ಕಾರಣ ತಿಳಿದ ನಂತರ ಬಿಳುಚಿತು. “ ಇಷ್ಟು ಸಣ್ಣ ವಿಷಯಕ್ಕ ಯಾರು ಏನು ಮಾಡ್ಯಾರೋ ಅನ್ನೋವಂಗ ಹೇಳದ ಕೇಳದ ತವರಿಗೆ ಓಡಿ ಬಂದಿಯಾ. ಅಳಿಯಂದ್ರು ಏನಂದಾರು.. ನಿನ್ನ ಮಗಾ. ಅದೂ ಕೂಸು. ಏನಾತು ಅಂದರ. ನಡಿ ನಾನ ಬಿಟ್ಟ ಬರ್ತೇನಿ .” ಎಂದು ಹಿಂದು ಮುಂದು ನೋಡದೇ ಯುಧ್ಧ ಕೈದಿಯನ್ನು ಕಮಾಂಡರ ಗೆ ಒಪ್ಪಿಸುವಂತೆ ನನ್ನನ್ನು ಗಂಡ- ಮಗನ ವಶಕ್ಕೆ ಒಪ್ಪಿಸಿ ಬಿಡುವುದೇ..! ಆ ಸಂಧರ್ಭ ಎಲ್ಲರ ಎದುರು ನನ್ನನ್ನು ಬಹಳ ಚಿಕ್ಕವಳನ್ನಾಗಿ ಮಾಡಿಬಿಟ್ಟಿತ್ತು. ಆದರೆ ಏನೂ ತಿಳಿಯದ ನನ್ನ ಮಗನಿಗೆ ಮಾತ್ರ ನನಗೆ ತನ್ನಿಂದ ದುಃಖವಾಗಿದೆ ಎಂಬುದು ತಿಳಿದು ಅಂದಿನಿಂದ ಹಾಸ್ಟೆಲ್ ಸುದ್ದಿಯನ್ನೇ ಬಿಟ್ಟು ಬಿಟ್ಟ.
ಕೆಲ ದಿನಗಳ ತರುವಾಯ ಇದೇ ಸಂಧರ್ಭವನ್ನು ಮೆಲಕು ಹಾಕುತ್ತಿರುವಾಗ ನನ್ನ ಬಾಲ್ಯದ ದಿನಗಳು ನೆನಪಾದವು. ನಾನೂ ಹೈಸ್ಕೂಲು ಓದುತ್ತಿರುವಾಗ ಹೀಗೇ ಯಾವಾಗ ದೊಡ್ಡ ದೊಡ್ಡ ಶಹರಗಳಲ್ಲಿ ಹಾಸ್ಟೆಲ್ ನಲ್ಲಿ ಇದ್ದು ಓದುತ್ತೇನೋ ಎಂದು ಕನಸು ಕಾಣುತ್ತಿದ್ದೆ. ಅಂತೂ ಇಂತೂ ಹತ್ತನೇ ತರಗತಿ ಒಳ್ಳೆಯ ಫಲಿತಾಂಶ ತೆಗೆದ ನಾನು ಶಹರ ಸೇರುವುದೆಂದು ನಿರ್ಧಾರವಾಯಿತು. ಹಾಸ್ಟೆಲ್ ಸೇರಿದ್ದೂ ಆಯ್ತು. ಒಂದು ರೂಮಿಗೆ ಮೂರು ಜನ ಹುಡುಗಿಯರು. ನನಗಾಗಿ ಹೊಸ ಬಕೆಟ್ಟು, ಬೆಡ್ಡು, ಸಣ್ಣ ಬತ್ತಿ ಸ್ಟೋ, ಸೋಪ್ ಕೇಸ್, ಎಣ್ಣೆ, ಕನ್ನಡಿ. ಹೊಸ ಸೂಟ್ ಕೇಸ್..ಹೀಗೆ ಎಲ್ಲ ಮೂಲಭೂತ ವಸ್ತುಗಳ ಖರೀದಿ ಜೋರಾಗಿತ್ತು. ನನಗಂತೂ ತುಂಬಾ ಖುಶಿ.. ಅಪ್ಪನದು ಪುಟ್ಟ ಪಗಾರವಾದರೂ ನನ್ನ ಜಾಣತನದ ಬಗ್ಗೆ ತುಂಬಾ ಹೆಮ್ಮೆ. ಅವ್ವನಿಗೋ ನಾವು ಓದಿ ಏನಾದರೂ ಮಹತ್ತರವಾದದ್ದನ್ನು ಸಾಧಿಸುವುದನ್ನು ನೋಡಲು ಕಾತರಿಸುತ್ತಿದ್ದಳು. ನನಗೋ ಹೊಸ ಹೊಸ ಗೆಳೆತಿಯರು. ಕಳಿಸಲು ಬಂದ ಅಪ್ಪಅವ್ವ ಹೊರಟು ನಿಂತರು. ನಾನೋ ನಗು ನಗುತ್ತಲೇ ಅವರನ್ನು ಬೀಳ್ಕೊಟ್ಟೆ. ಅಂದು ರಾತ್ರಿ ಹೊಸ ಗೆಳತಿಯರೊಟ್ಟಿಗೆ ರಾತ್ರಿ ಊಟ ಜೋರಾಯಿತು. ಮಂಚದಲ್ಲಿ ಹಾಸಿಗೆ ಗೆ ಒರಗಿದಾಗ ಸಣ್ಣದಾಗಿ ಆತಂಕ ಶುರುವಾಗಿತ್ತು. ಮರುದಿನ ಕಾಲೇಜಿಗೆ ಹೋಗ ಬೇಕು. ಸಂಪೂರ್ಣ ಹೊಸ ವಾತಾವರಣ. ಇಂಗ್ಲೀಷ್ ಮೀಡಿಯಮ್ ಬೇರೆ. ಸಿಕ್ಕಾಪಟ್ಟೆ ದೊಡ್ಡ ಕಾಲೇಜು, ಪರಿಚಯದವರು ಅಂತ ಯಾರೂ ಇಲ್ಲ. ಹಾಗೇ ನಿದ್ದೆಗೆ ಜಾರಿದ್ದೆ.
ಮರುದಿನ ಬೆಳಿಗ್ಗೆ ಬಕೆಟ್ ಹಿಡಿದು ಬಾತ್ರೂಮ್ ಕಡೆಗೆ ನಡೆದರೆ ಎಲ್ಲದಕ್ಕೂ ಇಷ್ಟುದ್ದದ ಕ್ಯೂ.. ನನಗೆ ಬಾತ್ ರೂಮ್ ಸಿಗುವ ವೇಳೆಗೆ ಬಿಸಿನೀರೆಲ್ಲ ಖಾಲಿ. ಮಳೆಗಾಲದ ತಂಡಿಯ ದಿನಗಳಲ್ಲಿ ತಣ್ಣಿರನ್ನು ಹಾಕಿಕೊಳ್ಳುವಾಗ.. ನಾನು ಊರಲ್ಲಿ ಬಾಗಿಲು ತೊಳೆಯಲೂ ಅಪ್ಪ ಕಾಸಿದ ಬಿಸಿ ಬಿಸಿ ನೀರನ್ನು ತೆಗೆದು ಕೊಳ್ಳುತ್ತಿದ್ದುದು ನೆನಪಾಗಿ. ಅಪ್ಪಾ ಎಂದು ಅಳಲು ಪ್ರಾರಂಭಿಸಿದೆ. ಜೋರಾಗಿ ಅಳುವಂತಿಲ್ಲ. ಮರ್ಯಾದೆಯ ಪ್ರಶ್ನೆ. ತಣ್ಣೀರಲ್ಲೇ ಬಾತರೂಮಿನಲ್ಲಿ ಕುಣಿದಾಡಿ ಸ್ನಾನ ಮುಗಿಸುವಂತಾಯಿತು. ಬೇಗ ಎದ್ದು ಸರತಿಯಲ್ಲಿ ಗುದ್ದಾಡಲು ಸೋಲುತ್ತಿದ್ದ ನನಗೆ ಪ್ರತಿನಿತ್ಯ ತಣ್ಣೀರೇ ಗತಿಯಾಗುತ್ತಿತ್ತು. ಇನ್ನು ಮೆಸ್ ನಲ್ಲಿ ತಿಂಡಿ ತಿಂದರೆ ಮತ್ತೆ ಕಾಸು ಖರ್ಚಾಗುತ್ತೆ ಅಂತ ಅವ್ವಕಟ್ಟಿದ ಅವಲಕ್ಕಿಯನ್ನೇ ತಿಂದು,ಅಮೂಲ್ಯ ಹಾಲಿನ ಪುಡಿಯ ಚಹ ಕುಡಿದು ಕಾಲೇಜಿಗೆ ಹೋದರೆ , ಲೆಕ್ಚರರ್ ಹೇಳಿದ್ದೆಲ್ಲ ಕಿವಿಯಿಂದ ತಲೆಗೆ ಹೋಗದೇ ತಲೆ ಮೇಲೆ ಹಾಸಿ ಹೋಗುವುದೇ..! ಇಂಗ್ಲೀಷ್ ಮೀಡಿಯಂ ನಲ್ಲಿ ಸಾಯಿನ್ಸ.. ಗಣಿತ ಬಿಟ್ರೆ ಬೇರೇ ವಿಷಯ ತಲೆಯೊಳಗೆ ಹೋಗದೇ ಮುಷ್ಕರ ಹೂಡಿದಂತಿತ್ತು. ಮತ್ತೆ ಅಪ್ಪ ಅವ್ವನ ತ್ಯಾಗ , ಕಷ್ಟಗಳು ನನ್ನಿಂದಾಗಿ ಎಲ್ಲಿ ವ್ಯರ್ಥವಾಗುವವೋ ಎಂಬ ಆತಂಕದಲ್ಲಿ ಕಣ್ಣಾಲಿಗಳು ತುಂಬಿಕೊಳ್ಳುತ್ತಿದ್ದವು. ರೂಮಿನಲ್ಲಿ ನನ್ನ ಶಾಂಪೂ , ಸೋಪು, ಟಾವೆಲ್ ಮತ್ಯಾರೋ ಉಪಯೋಗಿಸಿದರು ಎಂತಲೋ, ಊರಿನಿಂದ ತಂದಿದ್ದ ತಿಂಡಿ ಖಾಲಿ ಮಾಡಿದರೆಂತಲೋ ಚಿಕ್ಕ ಚಿಕ್ಕ ವಿಷಯಗಳಿಗೆ ಗೆಳತಿಯರೊಟ್ಟಿಗೆ ಜಗಳವಾಡಿದಾಗ ಮತ್ತೆ ಮನೆಯವರೆಲ್ಲ ನೆನಪಾಗಿ ದುಃಖ ಒತ್ತರಿಸಿ ಬರುತ್ತಿತ್ತು. ಪ್ರತಿ ದಿನ ಕಾಲೇಜಿನಿಂದ ಹಿಂದಿರುಗಿದಾಗ ನೋಟೀಸ್ ಬೋರ್ಡಗೆ ಹಾಕಿದ ಪತ್ರಗಳ ವಿಳಾಸಗಳಲ್ಲಿ “ಶೀಲಾ. ರಿತ್ತಿ”ಯನ್ನೇ ಕಣ್ಣು ಅರಸುತ್ತಿತ್ತು. ಪತ್ರ ಮೊದಲ ಸಲ ಕಣ್ಣಿಗೆ ಬಿದ್ದಾಗ ,ಅದನ್ನು ಎದೆಗವಚಿಕೊಂಡು ರೂಮಿಗೆ ಓಡಿ ಹಾಸಿಗೆಗೆ ಬೋರಲು ಬಿದ್ದು ಅಳ ತೊಡಗಿದರೆ , ನನ್ನ ವಿಂಗ್ನ ಎಲ್ಲ ಹುಡುಗಿಯರು ನನ್ನನ್ನು ರಮಿಸಲು ಬಂದಿದ್ದರು. ತಾವೂ ಜೊತೆ ಅತ್ತಿದ್ದರು. ನನ್ನ ತಾಯಿಯ ಪತ್ರಅದಾಗಿತ್ತು. ವಿಳಾಸ ತಂದೆಯ ಹಸ್ತಾಕ್ಷರದಲ್ಲಿತ್ತು. ಪ್ರತಿ ಸಾಲು ಓದುತ್ತ ಓದುತ್ತ ನನ್ನ ಕಣ್ಣುಗಳಲ್ಲಿ ಅಶ್ರು ಧಾರೆ ಕುಂಭದ್ರೋಣ ಮಳೆಯಂತೆ ಸುರಿಯುತ್ತಿತ್ತು. ಅದೆಷ್ಟು ಬಾರಿ ಆಪತ್ರಕ್ಕೆ ಮುತ್ತೊತ್ತಿದ್ದೆನೋ..! ಆ ಪತ್ರಗಳೇ ನನಗೆ ಹಾಸ್ಟೆಲ್ ನಲ್ಲಿ ಇದ್ದು ಓದು ಪೂರ್ತಿಗೊಳಿಸಲು ಸ್ಫೂರ್ಥಿಯಾಗಿದ್ದವು. ಆಗಿನ್ನೂ ನಮ್ಮ ಮನೆಯಲ್ಲಿ ಲ್ಯಾಂಡ್ ಫೋನ್ ಇರಲಿಲ್ಲ.
ಹಾಗೇ ದಿನಕಳೆದಂತೆ ಒಂದೇ ಬಣ್ಣದ ರೆಕ್ಕೆಗಳ ಹಕ್ಕಿಗಳು ಒಂದಾಗಿ , ತಮಗೆ ಬೇಕಾದ ಗೂಡಲ್ಲಿ ಬೇಕಾದ ಹಕ್ಕಿಗಳೊಟ್ಟಿಗೆ ಇರಲು ಪ್ರಾರಂಭಿಸಿದೆವು. ಆಗ ಹಾಸ್ಟೆಲ್ ಸುಂದರ ವೆನಿಸತೊಡಗಿತು. ಹಾಸ್ಟೆಲ್ ನಲ್ಲಿ ರವಿವಾರವೆಂದರೆ ನಮಗದು ದೊಡ್ಡ ಹಬ್ಬ. ಶನಿವಾರ ರಾತ್ರಿಯೇ ತಲೆಗೆ ಎಣ್ಣೆ ಮಸಾಜ್, ಮೆಹಂದಿಯ ಸಡಗರ. ಒಬ್ಬರ ತಲಿಯಲ್ಲೊಬ್ಬರು ಕೈಯಾಡಿಸುತ್ತಿದ್ದರೆ ಸ್ವರ್ಗ ಸುಖ. ಇಷ್ಟು ತಾಳ್ಮೆ ಮನೆಯವರಿಗೆಲ್ಲಿ? ರವಿವಾರ ತಲೆಸ್ನಾನ ವೆಂದರೆ ಸುಮ್ನೇನಾ. ಅಭ್ಯಂಜನಕ್ಕೆ ಬಿಸಿನೀರಿಗಾಗಿ ಎಲ್ಲರೂ ಎರೆಡೆರಡು ಬಕೆಟ್ಟು ನಾಕು ಗಂಟೆಯಿಂದಲೇ ಪಾಳೆ.. ನಿದ್ದೆಗಣ್ಣಲ್ಲಿ ಬ್ರಶ್ ಮಾಡುತ್ತ.. ಸ್ನಾನ ಮಾಡಿ ರೂಮಿನಲ್ಲಿ ಮತ್ತೊಬ್ಬರನ್ನು ಎಬ್ಬಿಸಿ ಮೊದಲಿನವರು ಮಲಗುವುದು. ತಲೆಸ್ನಾನವೆಂದರೆ .. ಪ್ರತಿ ರವಿವಾರ ಅಲ್ಲಿ ದೀಪಾವಳಿಯೇ ನೆನಪಾಗುತ್ತಿತ್ತು. ಹಾಸ್ಟೆಲ್ ಸೇರಿದಾಗಿನಿಂದ ಬೆಳಗಿನ ತಿಂಡಿಯನ್ನೇ ಮರೆತಿದ್ದ ನಾವು, ಹನ್ನೆರಡಕ್ಕೆ ರವಿವಾರದ ವಿಶೇಷ ಊಟ ಮಾಡಲು, ಅಲ್ಲಿಯವರೆಗೆ ಹಸಿ ಕೂದಲು ಬಿಸಿಲಿಗೆ ಹರಡಿಕೊಂಡು, ಹಾಸ್ಟೆಲ್ ನ ಪ್ರೀತಿಯ ಹಕ್ಕಿಗಳನ್ನು ಕಿಚಾಯಿಸುತ್ತ, ಹೋಗಿ ಬರುವ ಅತಿಥಿಗಳನ್ನು ನೋಡುತ್ತ ಮಜ ಮಾಡುತ್ತಿದ್ದೆವು. ರವಿವಾರ ಅತಿಥಿಗಳ ಆಗಮನಕ್ಕೆ ನಿಬಂಧನೆ ಇರುತ್ತಿರಲಿಲ್ಲ. ಹನ್ನೆರಡಕ್ಕೆ ಪೂರಿ, ಪಲಾವ್, ಸ್ವೀಟು ಊಟ ಮಾಡಿದರೆ ಸಂಜೆವರಗೂ ಎಲ್ಲರದೂ ಗಡದ್ದ್ ನಿದ್ದೆ. ಎಲ್ಲ ವಿಂಗ್ಗಳಲ್ಲೂ ಅಘೋಷಿತ ಬಂಧ. ಸಂಜೆ ಒಂದು ರೌಂಡ್ ವಾಕ್, ಇಲ್ಲವೇ ಶಾಪಿಂಗ್ ಮುಗಿಸಿ ಕಡ್ಡಾಯವಾಗಿ ಏಳು ಗಂಟೆಗೆ ಹಾಸ್ಟೆಲ್ ಅಸೆಂಬ್ಲಿ ಯ ಪ್ರಾರ್ಥನೆಗೆ ಹಾಜರಿರಬೇಕು. ಅಲ್ಲಿ ಅಟೆಂಡೆನ್ಸ ಕೊಡಬೇಕು. ಸರಿಯಾಗಿ ಸಂಜೆ ಏಳು ಗಂಟೆಗೆ ಗೇಟ್ ಹಾಕುತಿತ್ತು.
ಒಂದು ನಿಮಿಷ ತಡವಾದರೂ ಕೈದಿಗಳಂತೆ ವಾರ್ಡನ್ ಮೇಡಮ್ ರ ಪಾಟಿಸವಾಲಿನ ಪ್ರಶ್ನೆಗಳಿಗೆ ಉತ್ತರಿಸಬೇಕಿತ್ತು. ಯಾವಾಗಲಾದರೂ ಸಿಕ್ಕಿಹಾಕಿ ಕೊಂಡರೆ ಹುಡುಗರ ಹಾಸ್ಟೆಲ್ ನ ನೀತಿ ನಿಯಮಗಳ ಸಡಲಿಕೆಗಳನ್ನು ಚರ್ಚಿಸುತ್ತ, ಸಮಾನತೆಯಅರ್ಥ ಹುಡುಕುತ್ತ, ‘ನಾವೂ ಗಂಡು ಮಕ್ಕಳಾಗಿ ಹುಟ್ಟ ಬಾರದಿತ್ತೇ?’ ಎಂದು ಪರಿತಪಿಸುತ್ತಿದ್ದೆವು. ನನಗಂತೂ ಹದಿನೈದು ದಿನಕ್ಕೊಮ್ಮೆ ಊರಿಗೆಹೋಗದಿದ್ದರೆ ಊಟ ನಿದ್ದೆ ಏನೂ ಸೇರುತ್ತಿರಲಿಲ್ಲ. ಆದರೆ ಊರಿಗೆ ಹೋಗಲು ಸೂಕ್ತ ಕಾರಣ ವಿರಬೇಕಿತ್ತು. ಒಂದು ಬಾರಿ ಸೂಕ್ತ ಕಾರಣ ಸಿಗದೇ ಸತ್ತು ಹೋಗಿದ್ದಅಜ್ಜಿಯನ್ನೇ ಮತ್ತೆ ವಾರ್ಡನ್ ಎದರು ಸಾಯಿಸಿದ್ದೆ. “ ನಮ್ಮ ಅಜ್ಜಿ ತೀರಕೊಂಡಾರಂತ್ರಿ. ನಮ್ಮ ಪರಿಚಯದವರಿಗೆ ಫೋನ್ ಮಾಡ್ಯಾರ್ರಿ ಮೇಡಮ್. ನಾ ಅರ್ಜಂಟ್ ಊರಿಗೆ ಹೋಗಬೇಕ್ರಿ” ಎಂದು ಅಳು ಮುಂಜಿ ಮುಖ ಮಾಡಿ ಹೇಳಿದ್ದೆ. ಈಗ ತಪ್ಪೆನಿಸಿದರೂ ಆಗಿನ ಪರಿಸ್ಥಿತಿಯೇ ಹಾಗಿತ್ತು.. “ ಊರು ದೂರಿರಲೇನು, ಕಾಲು ಕುಂಟಿರಲೇನು,ಊರ ನೆನಪೆ ಬಲವು ಮಂಕುತಿಮ್ಮ” ಎಂಬ ಕಗ್ಗ ಓದಿದಾಗ ನನಗಾದ ಅನುಭವವೇ ಡಿ,ವಿ,ಜಿ ಯವರಿಗೂ ಆಗಿರಬಹುದು ಎಂದುಕೊಂಡು ಬೆನ್ನು ತಟ್ಟಿಕೊಳ್ಳುತ್ತೇನೆ. “ಸರಳತೆಯು ಸಾಲದು ಕಾರ್ಯದ ಸಿಧ್ಧಿಗೆ , ವಕ್ರತೆ ಸಹ ಬೇಕು ನಮಗೆ, ಮಾಡಿದೆವಾದರೆ ಬೆರಳನು ನೆಟ್ಟಗೆ , ಹಿಡಿಯುವುದೇನನು ಹೇಗೆ?” ಎಂಬ ದಿನಕರ ದೇಸಾಯಿಯವರ ವಾಕ್ಯಗಳು ಹಾಸ್ಟೆಲ್ ನ ಚಿಕ್ಕ ಪುಟ್ಟ ಸುಳ್ಳು ಗಳು ಸುಳ್ಳುಗಳಲ್ಲ. ಬದುಕುವ ಕಲೆಗಳು ಎಂಬುದನ್ನು ಎತ್ತಿಹಿಡಿಯುತ್ತವೆ.. !
ಎಲ್ಲರೂ ತಮ್ಮ ತಮ್ಮ ತಂದೆ ತಾಯಿಯರಿಗೆ ‘ರಾಜಕುಮಾರಿ’ಯರೇ..! ಮನೆಯಲ್ಲಿ ನಮ್ಮಆಟ ನಡೆದಂತೆ ಹಾಸ್ಟೆಲ್ನಲ್ಲಿ ನಡೆಯಬೇಕಲ್ಲ.!ಅದಕ್ಕೇ ಎಷ್ಟೋ ಜನರು (ವಿಶೇಷವಾಗಿ ತಾಯಂದಿರು) ಹೊಂದಾಣಿಕೆಯ ಸ್ವಭಾವ ಬೆಳೆಯಲಿ ಎಂದೇ ಮಕ್ಕಳನ್ನು ಹಾಸ್ಟೆಲ್ ಗೆ ಸೇರಿಸುತ್ತಾರೆ. ಆದರೆ ಹಾಸ್ಟೆಲ್ ನಲ್ಲಿ ಇರುವಷ್ಟು ದಿನವೂ ನಾ ಮನೆಯ ಧ್ಯಾನವನ್ನೇ ಮಾಡಿದ್ದೆ. ಅದಕ್ಕಾಗಿಯೇ ಹೆಚ್ಚಿನದನ್ನು ನಾ ಸಾಧಿಸಲು ಸಾಧ್ಯವಾಗಲಿಲ್ಲ ಎಂದುಕೊಂಡು, ನಾ ನನ್ನ ಮಕ್ಕಳನ್ನು ಯಾವುದೇ ಪರಿಸ್ಥಿತಿಯಲ್ಲೂ ಹಾಸ್ಟೆಲ್ ಸೇರಿಸುವುದಿಲ್ಲ ಎಂದು ಯಾವತ್ತೋ ನಿರ್ಧರಿಸಿದ್ದೆ. ಆದರೆ ನನ್ನ ಮಗನೋ.! ಹಾಸ್ಟೆಲ್ ನಲ್ಲಿ ಇರಬೇಕಾದರೆ ಮನೆಯ ವ್ಯಸನ ಮಕ್ಕಳಿಗೆ ಅಷ್ಟಾಗಿ ಇರಬಾರದು. ಮನೆಯವರನ್ನು ಅರೆ ಕ್ಷಣವೂ ಬಿಟ್ಟಿರದ, ಭಾವುಕರು . ಮರಳಿ ಗೂಡು ಸೇರಲು ಬಗೆಬಗೆಯ ಪ್ರಯತ್ನ ಮಾಡಿದ್ದರು. ಯಶಸ್ಸೂ ಹೊಂದಿದ್ದರು. ಅಂಜಲಿ ಎಂಬ ಮಲೆನಾಡ ಹುಡುಗಿ ಶ್ರೀಮಂತ ಕುಟುಂಬದವಳು, ನಮ್ಮ ಹಾಗೇ ಅತೀ ಹುರುಪಿನಿಂದ ಹಾಸ್ಟೆಲ್ ಸೇರಿದ್ದಳು. ಅವಳು ತಡವಾಗಿ ಹಾಸ್ಟೆಲಗೆ ಬಂದಿದ್ದರಿಂದ ವಿಂಗಿನ ಕೊನೆಯ ರೂಮನ್ನು ಕೊಟ್ಟಿದ್ದರು. ಆ ರೂಮು ಮೊದಲೆಲ್ಲ ಕೀಲಿ ಹಾಕಿದ್ದೇ ಇರುತ್ತಿತ್ತು. ಆ ರೂಮಿನಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಇದ್ದ ಹುಡುಗಿಯೊಬ್ಬಳು ಆತ್ಮಹತ್ಯ ಮಾಡಿಕೊಂಡ ಮಾತುಗಳು ನಮ್ಮ ಹಿರಿಯ ಹಾಸ್ಟೆಲ್ ಸಂಗಾತಿಗಳ ಬಾಯಲ್ಲಿ ಕೇಳಿದ್ದೆವು. ಅಂಜಲಿ ಹಾಸ್ಟೆಲ್ ಸೇರಿದ ತಿಂಗಳು ಕಳೆದಿರಲಿಲ್ಲ. ಖಿನ್ನಳಾದಳಿಗದ್ದಳು. ಒಂದು ದಿನವಂತು ನಾವೆಷ್ಟು ಎಬ್ಬಿಸಿದರೂ ಏಳಲೇ ಇಲ್ಲ. ಆದರೆ ದೈಹಿಕವಾಗಿ ಆರೋಗ್ಯವಾಗೇ ಇದ್ದಳು. ! ವಾರ್ಡನ್ ಬಂದರು, ಮನೆಯವರು ಬಂದರು.. ಅವಳಂತು ಗರ ಬಡಿದವಳಂತೆ ಆಡುತ್ತಿದ್ದಳು. ಬೇರೆ ದಾರಿ ಇಲ್ಲದೇ ಮನೆಗೆ ಕರೆದೊಯ್ದರು. ಹೀಗೆ ಹಾಸ್ಟೆಲ್ ಕೆಲವೊಮ್ಮೆ ಮಾನಸಿಕ ಕೂಡ ಮಾಡಿಬಿಡುತ್ತದೆ.
ನಾವು ಮಧ್ಯಮ ವರ್ಗದವರು, ಹಳ್ಳಿಗಳ ಗಲ್ಲಿಗಲ್ಲಿಗಳಲ್ಲಿ ಜಾಣರೆಂದು ಬೀಗುತ್ತ ಅಡ್ಡಾಡಿದವರು ಯಾವುದೇ ನೆಪಹೇಳಿ ಊರಕಡೆ ಮುಖಮಾಡುವಂತಿರಲಿಲ್ಲ. ಅದಕ್ಕಾಗೇ ನಾವೇ ನಮ್ಮ ಮಾನಸಿಕ ಆರೋಗ್ಯ ತಜ್ಞರಾಗಿ, ನಮ್ಮ ಮನಸ್ಸನ್ನು ಉಲ್ಲಸಿತಗೊಳಿಸಲು ತಿಳಿಯಲಾರದ ಅಭ್ಯಾಸದ ಕಡೆ ಹೆಚ್ಚು ಗಮನ ಹರಿಸದೇ ನಮ್ಮ ಪರಿಧಿಯೊಳಗೇ ಮೋಜು ಮಸ್ತಿ ಮಾಡುತ್ತ ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದೆವು. ಹಾಸ್ಟೆಲ್ ನ ಹೋಳಿಯಂತು ನಮ್ಮ ಜೀವನದ ಮರೆಯಲಾಗದ ಅನುಭವದ ಗಂಟು. ಅವತ್ತು ಪರಪ್ಪನ ಅಗ್ರಹಾರದ ಜೈಲಿನಂತಿರುವ ಹಾಸ್ಟೆಲ್ ಗೆ ಬೆಳಿಗ್ಗೆಯಿಂದಲೇ ಬೀಗ. ಒಳಗೆ ನಮ್ಮದೇ ಸಾಮ್ರಾಜ್ಯ. ವಿಂಗಿನಿಂದ ವಿಂಗಿಗೆ ಬಣ್ಣದ ಪಾಕೆಟ್ಗಳನ್ನು ಹಿಡಿದು, ವಿವಿಧ ಸೋಗು ಗಳನ್ನು ಹಾಕಿ, ಕುಣಿಯುತ್ತ ನೆಗೆಯುತ್ತ ಒಬ್ಬರಿಗೊಬ್ಬರು ಬಣ್ಣ ಎರಚುವುದು ನೋಡಿದರೆ , ಬಾಗಲಕೋಟೆಯ ಬಣ್ಣದ ಸಂಭ್ರಮವನ್ನೇ ಮೀರಿಸುತ್ತಿತ್ತು. ನಮ್ಮ ನಮ್ಮ ಅಂತಿಮ ಯಾತ್ರೆಯ ಅಣುಕನ್ನು ಸಂಭ್ರಮಿಸುವ ಸುವರ್ಣಾವಕಾಶ ದೊರೆತದ್ದು ಹಾಸ್ಟೆಲ್ನಲ್ಲೇ.! ಚಟ್ಟವೇರಿದವರ ಗುಣಗಾನ ಮಾಡುತ್ತ, ಹಾಡಾಡಿ ಅಳುವುದೇ ಸಂಭ್ರಮ. ಕಾಲೇಜಿನ ಹೊಸತರಲ್ಲಿ ನಮಗೆ ಕಾಡಿದ ಕುಡಿಮೀಸೆಯ ಪೌರುಷತ್ವವನ್ನೆಲ್ಲ ಅಂದು ಚಟ್ಟಕ್ಕೇರಿಸುತ್ತಿದ್ದೆವು.. ದ್ವೇಷಿಸುತ್ತಿದ್ದವರು ಅಂದು ಬಣ್ಣ ವೆರಚಿ ಒಂದಾಗುತ್ತಿದ್ದೆವು. ನಮ್ಮೆಲ್ಲ ಮಾನಸಿಕ ಉದ್ವೇಗಗಳನ್ನು ಹೊರಹಾಕಿ ಹೊಸ ಮನುಷ್ಯರಾಗುತ್ತೆದ್ದವು.. ಇವೆಲ್ಲ ನಾಲ್ಕು ಗೋಡೆಯ ಮಧ್ಯದ ಲಾನ್ ನಲ್ಲೇ.! ನಮ್ಮ ಮಹಿಳೆಯರ ಪ್ರಪಂಚದಲ್ಲೇ.. ನಾವು ಮನೆಯನ್ನು ಬಿಟ್ಟು ಬರದಿದ್ದರೆ ಇಂದು ಮೆಲಕು ಹಾಕಲು ಇಂತಹ ಸವಿನೆನಪುಗಳಿಲ್ಲದೇ ಜೀವನ ಸಪ್ಪೆಯಾಗುತ್ತಿತ್ತೇನೋ.!
ಈಗೆಲ್ಲ ಮಾತೆತ್ತಿದರೆ ಜಾತಿ ಲೆಕ್ಕಹಾಕುವ ನಮಗೆ ಆ ವಯಸ್ಸಿನಲ್ಲಿ ಜಾತಿಯ ಪರಿಕಲ್ಪನೆಯೇ ಇರಲಿಲ್ಲ. ಬಹಳವೆಂದರೆ ಫೀ ಹಣದ ವಿನಾಯತಿ ಬಂದಾಗ, ಸ್ಕಾಲರ್ಶಿಪ್ ಸಿಗದಿದ್ದಾಗ ವ್ಯವಸ್ಥೆಯನ್ನು ಬಯ್ಯುತ್ತಿದ್ದೆವೇ ಹೊರತು ಸೌಲಭ್ಯಪಡೆದ ಗೆಳತಿಯರನ್ನಲ್ಲ. ಏಕೆಂದರೆ ಹಾಸ್ಟೆಲ್ನಲ್ಲಿ ಹೊಂದಾಣಿಕೆ ಪ್ರಮುಖವೇ ಹೊರತು ಹಣ ಅಥವಾ ಇತರೇ ಅಂಶಗಳಲ್ಲ. ಎಲ್ಲ ಧರ್ಮದವರು ಸೇರಿಯೇ ಎಲ್ಲ ಹಬ್ಬಗಳನ್ನು ಮಾಡುತ್ತಿದೆವು. ಇಂದಿಗೂ ಜಾತಿಯನ್ನು ಮೀರಿದ ಅದೇ ಸ್ನೇಹ ನಮ್ಮ ಉಸಿರಲ್ಲಿ ಹಸಿರಾಗಿದೆ. ಆಗ ನಮಗೆ ಗಂಡು ಹೆಣ್ಣು ಎರಡೇ ಜಾತಿ. ಒಂದು ಬಾರಿ ಪ್ರಿಯಾ ಊಟಕ್ಕೆ ಮೆಸ್ ಗೆ ಹೊರಟಾಗ ಜೊತೆಯಾದಳು. ಶಹರದ ಹುಡುಗಿಯೇ. ಅವಳನ್ನು ಹಿಂಬಾಲಿಸಿ ಬಂದ ನಾಯಿಗೆ “ ಹಚ. ಹಚಾ. ಚನ್ಯಾ.. ನಾ ಎಷ್ಟ ಹೊಡದರೂ ನನ್ನ ಹಿಂದ ಬರ್ತಿಯಲ್ಲ, ನಡಿ.” ಎಂದು ಗದರಿದಳು. ಅವಳ ಮಾತಿಗೆ ಅವಳ ತರಗತಿಯ ಹುಡುಗಿಯರೆಲ್ಲ ಜೋರಾಗಿ ನಕ್ಕರು. ನನಗೆ ಇದರ ಮರ್ಮವೇನೆಂದು ತಿಳಿಯದೇ ‘ಏನಾಯ್ತು’ ಅಂದೆ. “ಅಯ್ಯೋ ಅಷ್ಟು ಗೊತ್ತಾಗ್ಲಿಲ್ಲನ. ಅದ ಅಕಿ ಕ್ಲಾಸಿನ ಚನ್ನಬಸು.. ಕಲಘಟಕಿಯವಾ. ಇಕಿಗೆ ಬರೇ ಕಾಡಸ್ತಾನ. ಅದಕ ಅವನ ಕಾಟ ತಾಳಲಾರದ ಈ ನಾಯಿಗೆ ಅವನ ಹೆಸರ ಇಟ್ಟಾಳ. ಇದೂ ಅಕಿ ಎಷ್ಟ ಹೊಡದರೂ ಹೋಗೋದೇ ಇಲ್ಲ”ಅನ್ನಬೇಕೆ? ನಾ ಮನಸ್ಸಿನಲ್ಲೇ “ ಭೇಷ್ ಕಣೆ. ಭೇಷ್” ಎಂದು ಶಬ್ಬಾಶಗಿರಿಕೊಟ್ಟೆ. ಇಂತಹ ಚಿಕ್ಕ ವಿಷಯಗಳನ್ನು ಹೆಚ್ಚು ತಲೆಗೆ ಹಚ್ಚಿಕೊಂಡು ಹುಚ್ಚರಾಗುವುದಕ್ಕಿಂತ ನಾಯಿಯ ಮೇಲೆ ಸಿಟ್ಟುಹಾಕಿ ಮನಸ್ಸನ್ನು ಸ್ಥಿಮಿತದಲ್ಲಿ ಇಟ್ಟುಕೊಳ್ಳಬಹುದು ಎಂಬುದನ್ನು ಕಲಿಸಿದ ಪ್ರಿಯಾ ಇಂದಿಗೂ ನನಗೆ ಮನಸಿನ ತಜ್ಞಳಾಗಿ ಕಾಣುತ್ತಾಳೆ. ನಕ್ಕು ಬೀಸಾಕಿ , ಜೀವನದ ಗುರಿಯತ್ತ ಲಕ್ಷ್ಯ ಕೊಡಬೇಕಾದ ಇಂದಿನ ಯುವಕ-ಯುವತಿಯರು ಅಪಕ್ವತೆಯಲ್ಲಿ ಪ್ರೀತಿ-ಪ್ರೇಮದ ಹೆಸರಲ್ಲಿ ಅನಾಹುತ ಮಾಡಿಕೊಳ್ಳುವುದು ಎಷ್ಟು ಸರಿ?
ಹಾಸ್ಟೆಲ್ ಎಂಬ ನಮ್ಮ ಮಹಿಳಾ ಪ್ರಪಂಚ ನಮಗೆ ಸ್ಪರ್ಧಾಯುಗದಲ್ಲಿ ನಮಗೆ ಬೆಳೆಯಲು ಅಗಾಧ ಅವಕಾಶಗಳನ್ನು ಒದಗಿಸಿತು. ಕಾಲೇಜಿನಲ್ಲಿ ನಮ್ಮ ಪ್ರತಿಭಾ ಅನಾವರಣಕ್ಕೆ ನಮಗೆ ಎದುರಾಗುತ್ತಿದ್ದ ಮುಜುಗರ, ಹಿಂಜಿರಿಕೆ ಇಲ್ಲಿ ಕಾಲು ಕೀಳುತ್ತಿದ್ದವು. ‘ಹಾಸ್ಟೆಲ್ ಡೇ’ ಒಂದು ಪ್ರಭಲ ವೇದಿಕೆಯಾಗುತ್ತಿತ್ತು. ತಪ್ಪಿರಲಿ-ಒಪ್ಪಿರಲಿ ಮನಸ್ಸಿದ್ದವರೆಲ್ಲ ಒಳ್ಳೊಳ್ಳೆಯ ಹಾಡುಗಳಿಗೆ ಹೆಜ್ಜೆ ಹಾಕುತ್ತಿದ್ದೆವು, ನಾಟಕಗಳ ಪಾತ್ರಗಳಿಗೆ ಜೀವ ತುಂಬುತ್ತಿದ್ದೆವು. ವಿವಿಧ ಜಿಲ್ಲೆಗಳ, ಕನ್ನಡದ ವಿವಿಧ ದಾಟಿಗಳಿಗೆ ದನಿಯಾಗುತ್ತೆದ್ದೆವು, ವಿವಿಧ ಸಂಸ್ಕೃತಿಗಳಿಗೆ ಸಾಕ್ಷಿಯಾಗುತ್ತಿದ್ದೆವು. ಪರಂಪರೆಯ ನೆಪದಿಂದ ಬಲಹೀನಗೊಂಡ ನಮ್ಮ ಭಾವನೆಗಳ ರೆಕ್ಕೆಗಳಿಗೆ ಹಾಸ್ಟೆಲ್ ಶಕ್ತಿಯಾಗಿತ್ತು. ಕುಟುಂಬದ ಒಳತಿಗೆ, ಸಮಾಜದ ಒಳತಿಗೆ ನೀತಿ ನಿಯಮಗಳ ಬಿಗಿಯಾದ ಚೌಕಟ್ಟಿಗೆ ಸಿಗುವ ಸುಂದರ-ಸುಕೋಮಲ ವರ್ಗದ ಜೀವಿಗಳಿಗೆ ಕೆಲ ವರ್ಷಗಳಾದರೂ ತಮ್ಮತನವನ್ನ ಅನುಭವಿಸಲು, ಅನಾವರಣಗೊಳಿಸಲು ಹಾಸ್ಟೆಲ್ ಒಳ್ಳೆಯ ತಾಣ. ಇಷ್ಟೆಲ್ಲ ಒಳ್ಳೆಯ ಅನುಭವಗಳನ್ನು ಅನುಭವಿಸಿ ಈಗ ಮಗನಿಗೆ ಮಾತ್ರ ಹಾಸ್ಟೆಲ್ ಬೇಡ ಎನ್ನುವುದು ಯಾವ ನ್ಯಾಯ.? ಸ್ವಾರ್ಥಿ ಇವಳು ಅಂತೀರಾ? ಪ್ರೌಢ ಶಾಲೆಯ ನಂತರ ಸತತ ಏಳು ವರ್ಷಗಳ ಕಾಲ ಹಾಸ್ಟೆಲ್ ಸೇರಿ, ಕೆಟ್ಟು ಹೋಗಿದ್ದ ನನ್ನ ಜೀರ್ಣಾಂಗ ವ್ಯವಸ್ತೆ ಇಂದಿಗೂ ಸಮಸ್ಯ ಮಾಡುತ್ತದೆ. ಸರಿಯಾದ ಹೊತ್ತಿಗೆ, ಸರಿಯಾದ ಊಟ ಮಾಡದೇ ಎಸಿಡಿಟಿ ಎಂಬ ಬೇತಾಳ ಬೆಂಬಿಡದೇ ಹಲವು ವರ್ಷ ಕಾಡಿದೆ. ಇಂಗ್ಲೀಷ್ ಮೆಡಿಸನ್ ಗಳೆಲ್ಲ ಸೋತು ಸುಣ್ಣವಾದಾಗ ಕೊನೆಯ ಅಸ್ತ್ರವಾಗಿ ಎಂಡೋಸ್ಕೋಪಿ ಮಾಡಿಸಿಕೊಂಡೆ. ಕಿಡ್ನ್ಯಾಪ್ ಮಾಡಿದವರ ಕೈ ಕಾಲು ಕಟ್ಟಿದಂತೆ, ನನ್ನ ಕಟ್ಟಿ ಉದ್ದನೆಯ ಪೈಪಿನ ತುದಿಗೆ ಕ್ಯಾಮರಾ ಸಿಕ್ಕಿಸಿ, ಬಾಯಿ ಮೂಲಕ ಪೈಪನ್ನು ಹೊಟ್ಟೆಒಳಗೆ ತೂರುವಾಗ. ಹಾಸ್ಟೆಲ್ನಲ್ಲಿ ನಾ ಕಳೆದ ಒಂದೊಂದು ದಿನಗಳೂ ಕರಾಳ ವೆನಿಸಿದವು. ಅಬ್ಬಾ.! ಅನ್ನನಾಳ, ಜಠರ.. ಎಲ್ಲಕಡೆಯೂ ಪೈಪನ್ನು ತೂರಿ, ನಾ ಹಿಂಸೆ ಪಡುತ್ತಿದ್ದರೆ ಇನ್ನೂ ಚೋಟುದ್ದ ಮೆಣಸಿನಕಾಯಿ ಯಾಗಿರುವ ಮಗನಿಗೆ ಹಾಸ್ಟೆಲ್ ಸೇರಿಸಿ ಬೇಡಪ್ಪಾ ಅನ್ನಿಸದೇ ಇರದು. ಹೊಂದಾಣಿಕೆಯ ಮತ್ತೊಂದು ಹೆಸರೇ ಹಾಸ್ಟೆಲ್. ಕೆಲವು ಸಲ ನೀರಿಲ್ಲ, ಕರೆಂಟ್ ಇಲ್ಲ,. ಮತ್ತೇನೋ ತೊಂದರೆ. ಅಳುಮುಂಜಿಗಳಿಗೆ ಅಲ್ಲಿ ಜಾಗವಿಲ್ಲ. ಆದಿ ಶಕ್ತಿಯಂತೆ ದಿಟ್ಟೆಯರಿಗೆ, ಜಗನ್ಮಾತೆಯಂತ ತಾಳ್ಮೆಯುಳ್ಳವರಿಗೆ, ಸಾಧಿಸುವ ಛಲಗಾರರಿಗೆ ಹಾಸ್ಟೆಲ್ ಬಾಗಿಲು ಸದಾ ತೆರೆದಿರುತ್ತದೆ.
-ಶೀಲಾ ಗೌಡರ.