ಅಮರ್ ದೀಪ್ ಅಂಕಣ

ಹಾಳು ಕೃಷಿಕನೊಬ್ಬನ ಸ್ವಗತ: ಅಮರ್ ದೀಪ್ ಪಿ.ಎಸ್.

ಅದೊಂದು ಎಂಟು ದೊಡ್ಡ ಅಂಕಣದ ಮನೆ. ನಮ್ಮಪ್ಪ ಆ ಊರಿನ ಆದರ್ಶ ಶಿಕ್ಷಕ. ಆತನ ಶಿಷ್ಯಂದಿರು ರಾಜ್ಯವಲ್ಲದೇ ದೇಶ, ವಿದೇಶಗಳಲ್ಲೂ ಹೆಸರು ಗಳಿಸಿದ ಸುಶಿಕ್ಷಿತರು.  ಅಷ್ಟೇಕೇ, ನಮ್ಮ ಮನೆಯಲ್ಲೇ ನಾಲ್ಕೂ ಜನ ಮಕ್ಕಳಲ್ಲಿ ಮಾಸ್ಟರ್ ಡಿಗ್ರಿ  ಮಾಡಿ ಉಪನ್ಯಾಸಕ, ಎಂಜನೀಯರ್, ಮತ್ತಿತರ ವೃತ್ತಿಗಳಲ್ಲಿದ್ದುಕೊಂಡು ಅಪ್ಪನ ಹೆಸರಿಗೆ ಗರಿ ಮೂಡಿಸಿದವರು.  ನಾನು ಸಿವಿಲ್ ಎಂಜನೀಯರ್ ಪದವೀಧರ. ಈಗ್ಗೆ ಇಪ್ಪತ್ತೈದು ವರ್ಷಗಳ ಹಿಂದೆ ಹಳ್ಳಿಯ ಕನ್ನಡ ಮಾಧ್ಯಮದ ನಾನು ಸಿವಿಲ್ ಎಂಜನೀಯರಿಂಗ್ ಮಾಡಿ ರಾಜ್ಯದ ಪ್ರಮುಖ ನಗರಗಳಲ್ಲಿ ದುಡಿದು, ನನ್ನ ಅರ್ಹತೆಗೆ ವಿದೇಶಕ್ಕೂ ಹೋಗಿ ಮಲ್ಟಿ ನ್ಯಾಷನಲ್ ಕಂಪನಿಯೊಂದರಲ್ಲಿ ಲಕ್ಷಗಟ್ಟಲೇ ದುಡಿವ ಅವಕಾಶ ಸಿಕ್ಕಿತು. ನಗರ ಪ್ರದೇಶಗಳಲ್ಲದೇ ವಿದೇಶಗಳಲ್ಲೂ ದುಡಿದು ಜನಜೀವನದಲ್ಲಿ ಹಾಸುಹೊಕ್ಕಾದ ಬಳಿಕ ನನ್ನೂರಿನ ಬಡ ವಿದ್ಯಾರ್ಥಿಗಳ ಓದಿನ ಸೌಕರ್ಯಕ್ಕೆ ಚೂರು ಸೇವೆ ಮಾಡುವ ಇಚ್ಛೆಯಿಂದ ನಮ್ಮ ಹಳ್ಳಿಯಲ್ಲೊಂದು ಎಜ್ಯುಕೇಷನ್ ಟ್ರಸ್ಟ್ ಸ್ಥಾಪಿಸಿದೆ. ಬಂದಾಗಲೊಮ್ಮೆ ಹಣದ ಸಹಾಯ, ಮೂಲ ಪರಿಕರಗಳ ಪೂರೈಕೆ, ಸ್ವಚ್ಛ  ಪರಿಸರ, ವಾತಾವರಣಕ್ಕೆ ಖುದ್ದು ಶ್ರಮಿಸಿ, ಪ್ರೋತ್ಸಾಹಿಸಲು ಸ್ಥಳೀಯ, ಸುತ್ತಮುತ್ತಲ ಹಳ್ಳಿಗರಿಗೆ ಬೇಡಿಕೊಳ್ಳುತ್ತಿದ್ದೆ. ಇಷ್ಟಾದರೂ ನಮಗೆ ಕುಟುಂಬದ ಹಿರಿಕರಿಂದ ಉಳಿದ ಭೂಮಿಯಿತ್ತು. ಮೊದಲು ಮನೆಯವರೇ ಉಳುತ್ತಿದ್ದರು.  ನಂತರ ಉದ್ಯೋಗದ ಜೋಳಿಗೆಗೆ ಹೆಗಲು ಕೊಟ್ಟು ಭೂಮಿಯತ್ತ ಒಲವು ಕಡಿಮೆಯಾಗಿತ್ತು.  ಆದರೆ, ನನಗೆ ಭೂಮಿಯ ಬಗೆಗಿನ ಸೆಳೆತ ಕಡಿಮೆಯಾಗಿರಲಿಲ್ಲ.

ನೋಡನೋಡುತ್ತಲೇ ನನ್ನ ಪದವಿ, ವಿದೇಶಿ ಉದ್ಯೋಗ, ಗಳಿಕೆ, ಸಾಮಾಜಿಕ ಕಳಕಳಿ ಕಂಡು ಹೆಣ್ಣು ಕೊಡಲು ತಾ ಮುಂದು ನಾ ಮುಂದು ಎಂದರು.  ಅಂತೆಯೇ ನನ್ನ ಆದರ್ಶಗಳ ಮೀರದೇ ಹಿರಿಯರೊಪ್ಪಿದ ಹುಡುಗಿಯನ್ನು ಸರಳವಾಗಿ ಮದುವೆಯಾದದ್ದೂ ಆಯಿತು.  ವಿದೇಶದ ನೌಕರಿ, ಗಳಿಕೆ ಉಳಿದವರಿಗೆ ನನ್ನ ಹೆಸರು ನೆಪ ಮತ್ತು ಬಳಕೆಯಾಗಷ್ಟೇ ಬೇಕಾಗಿದ್ದ ವಾಸ್ತವ ಸಂಗತಿ ತಿಳಿಯಿತು.  ಕೂಡು ಸಂಸಾರಕ್ಕೆ ಅಪ್ಪನಾಗುವ ಸಂತಸ ಒಲಿದರೂ ಗರ್ಭದ ಸುದ್ದಿಯನ್ನೂ ಕೇಳದ, ಮಗುವಾದರೂ ಸುದ್ದಿ ತಿಳಿಯದ ಅಪ್ಪನಾಗಿಯೇ ಉಳಿದೆ.  ಇಲ್ಲಿನ ಟ್ರಸ್ಟ್ ನೆಪದಲ್ಲಿ, ವಿದೇಶಿ ಗಂಡನ ಹೆಸರಲ್ಲಿ, ಹೆಂಡತಿ, ಒಡಹುಟ್ಟಿದವರಾದಿಯಾಗಿ ಸ್ಥಳೀಯವಾಗಿ, ರಾಜಕೀಯ ಬಳಕೆಗಾಗಿ ಒಳಗಾದೆ. 

ನನ್ನ ಗ್ರಾಮೀಣ ಬದುಕಿನ ಮಕ್ಕಳ ಶೈಕ್ಷಣಿಕ ಬೆಳವಣಿಗೆಯ ಕನಸಿಗೆ ಬೆನ್ನೆಲುಬಾಗದೇ, ಸರ್ಕಾರದ, ದೇಣಿಗೆ ಎತ್ತುವ ಕೈಗಳ ಅಸಹಕಾರದಿಂದ ಬೇಸತ್ತಿದ್ದು ಮಾತ್ರವಲ್ಲ, ಸ್ವತ: ಪತ್ನಿಯಾದವಳು “ನಾನು ನಿನ್ನ ಮದುವೆಯಾದದ್ದು, ನಿನಗಿದ್ದ ವಿದೇಶಿ ನೌಕರಿ, ದುಡಿಮೆ,  ಎಂಜನೀಯರ್ ಎನ್ನುವ ಹೆಸರು ನೋಡಿ ಮಾತ್ರ” ಅಂದಾಗ ನಾನು ಅಂತರ್ಗತನಾಗಿ ಸ್ಪಷ್ಟವಾಗಿ ಹೇಳಿದೆ;  “ನಾನು ಈ ವಿದೇಶಿ ನೌಕರಿ, ದುಡಿಮೆ, ಆದಾಯ, ಹೆಸರು ಎಲ್ಲವನ್ನೂ ತ್ಯಜಿಸುತ್ತೇನೆ, ನನಗೆ ಈ ಯಾವ ಪದವಿ ಬೇಡ.  ನಮ್ಮ ಸ್ವಂತ ಬುದ್ಧಿವಂತಿಕೆ ಖರ್ಚು ಮಾಡಿ ದುಡಿದ ಫಲದಲ್ಲೇ ಶ್ರೀಮಂತವಾಗುವ ವಿದೇಶಿ ಕಂಪನಿಗಳು, ಅದರಲ್ಲೇ ನಮಗೆ ಪುಡಿಗಾಸು ನೀಡಿ ದುಡಿಸಿಕೊಳ್ಳುವ ದರ್ದಿಗೆ ಅಲ್ಲಿರದಿದ್ದರೂ ಆದೀತು, ನಮ್ಮದೇ ಬರಡಾದ ಭೂಮಿಯನ್ನು ಹದ ಮಾಡಿ ಫಸಲು ತೆಗೆಯತ್ತೇನೆ. ಆಗ ನಿನ್ನ ಗಂಡ ಕೇವಲ ಒಬ್ಬ ರೈತ. ಜೊತೆಗಿರುವುದಾದರೆ ಇರು, ಇಲ್ಲವಾದರೆ ನಿನ್ನಿಷ್ಟ….”   ಆಗಲೂ ಅಷ್ಟೇ. ಪತ್ನಿ ಸಮಚಿತ್ತವಾಗಿ ಹೇಳಿದಳು; “ನೋ ಛಾನ್ಸ್,  ನಿನ್ನ ಜೊತೆ ಬಾಳಲಾರೆ…..“.   ಅಲ್ಲಿಗೆ ಭ್ರಮೆ ಬದುಕಿನ ಪರದೆಯೊಂದು ಕಳಚಿತು.

ಒಬ್ಬ ಆದರ್ಶ ಶಿಕ್ಷಕನಾಗಿ ಅಪ್ಪನಾದವನು ಮಗನಿಗೆ ಮಾದರಿಯಾಗಿರದೇ ಅನುಕೂಲಸಿಂಧುವಾದಿಯಾಗಿರಲು, ಹೆಂಗ್ ಬಂತ್ ಹಂಗೆ ಇರೋದ್ ಕಲಿ ಅನ್ನುವುದಾದರೆ, ಆತನ ಶಿಕ್ಷಣ ನೀತಿಗೆ ನಾನು ಧಿಕ್ಕಾರವೆಂದಿದ್ದೆ.  ನಾನು ಅಷ್ಟೆಲ್ಲಾ ಓದಿ ದುಡಿದು, ಗ್ರಾಮೀಣ ಬದುಕಿನ ಮಕ್ಕಳ ಓದಿಗೆ, ಇರುವ ಭೂಮಿಯಲ್ಲಿ ಕೃಷಿ ಮಾಡಿದರೆ ನಿಕೃಷ್ಟವೆಂಬಂತೆ ಕಾಣುವ ಜಗತ್ತಿನಿಂದ ದೂರವಾಗಲು ಎಲ್ಲಾ ಬಿಟ್ಟು ಕಾಶಿ, ಕೇದಾರ, ಮಥುರಾದಲ್ಲಿ ಒಬ್ಬಂಟಿಯಾಗಿ ಅಲೆದೆ. ಧ್ಯಾನವೆಂದರೂ ದೇವರೆಂದರೂ ಇದ್ದ ಜಾಗದಲ್ಲೇ ಮನುಕುಲದ ಸಹಜ ಗುಣವೆಂಬಂತೆ ದುಡಿವವರ ಹೆಗಲಾಗಿ, ಬಳಲಿದವರಿಗ ಬೆನ್ನಾಗಿ ಚೂರು ಹೊಟ್ಟೆಗೆ ತಿಂದು ವರ್ಷಾನುಗಟ್ಟಲೇ ತಿರುಗಿದೆ. ಅಂಥಾ ಸಮಯದಲ್ಲೇ ಒಬ್ಬ ಹೆಂಗಸು ಇಲ್ಲಿದ್ದ ಯಾರೊಬ್ಬರೂ ಹೌದೆನ್ನದ ನನ್ನನ್ನು ಒಪ್ಪಿ ಸರಳುಗಳ ಗೋಡೆಯೊಳಗೆ ಜನಿಸಿದ ಕೃಷ್ಣನ ಸನ್ನಿಧಿಯಲ್ಲಿ ಕೈ ಹಿಡಿದಳು. ಆಗ ನನ್ನವರ್ಯಾರೂ ನೆನಪಾಗದಿದ್ದರೂ ಇದ್ದ ನನ್ನ ಹಳ್ಳಿ ಭೂಮಿ ಕೈ ಬೀಸಿ ಕರೆದಂತಾಯಿತು.  ನೇರ ಬಂದವನೇ ಅಪ್ಪನಿಗೆ ನನ್ನ ಪಾಲಿನ ಭೂಮಿ ನೀಡಲು ಕೇಳಿದೆ.  ಪಾಲಿಗೆ ಬಂದ ಪಂಚಾಮೃತದಂತೆ ಬರಡಾಗಿದ್ದ ಎಕರೆಗಳ ಭೂಮಿಯಲ್ಲಿ ಬರಿಗಾಲಲ್ಲಿ ನಡೆದೆ. ಸುತ್ತ ಮಳೆ ಸುರಿದು ಪೋಲಾಗುತ್ತಿದ್ದ ನೀರನ್ನು ಅಂತರ್ಜಲದ ಒರೆತವನ್ನು ಹೆಚ್ಚಿಸುವಂತೆ ಅದಕ್ಕೊಂದು ದಾರಿ ಮಾಡಿ ಶೇಖರಿಸಿಟ್ಟೆ. ಅನಾದಿ ಕಾಲದಿಂದಲೂ ಬಂದ ರೂಢಿಯಂತೆ ಪ್ರತಿಯೊಬ್ಬ ರೈತ ತಾನು ಬೆಳೆದು ತನ್ನ ಕುಟುಂಬಕ್ಕೆ ಮಿಕ್ಕಿದ ಫಸಲನ್ನು ಇತರರಿಗೆ ನೀಡಿ ತನಗೆ ಬೇಕಾದ ಕಾಳು ಕಡಿಯನ್ನು ಪಡೆಯುತ್ತಿದ್ದ ಕ್ರಮವನ್ನು ನಾವು ಎಂದೋ ದಾಟಿಯಾಗಿದೆ.  ಈಗೇನಿದ್ದರೂ ರೈತನಿಗೆ ಇರುವ ತಟುಗು ಭೂಮಿಯಲ್ಲೇ ಹೆಚ್ಚು ಇಳುವರಿ ನಿರೀಕ್ಷಿಸಬೇಕು, ಅದರ ಮಾರಾಟದಲ್ಲೇ ದುಡ್ಡು ಕಾಣಬೇಕು.  ಆಸೆ ಹುಟ್ಟಿಸುವ ಬೇಕಾದಷ್ಟು ರಾಸಾಯನಿಕ, ಗೊಬ್ಬರದ, ವ್ಯಾಪಾರಿಗಳಿದ್ದಾರೆ. ಅದನ್ನೇ ನಂಬಿಕೊಂಡು ಭೂಮಿಗೆ ಸುರಿದು ಅದರ ಫಲವತ್ತತೆ ಕ್ರಮೇಣ ನಾಶವಾಗುವುದನ್ನು ಮನಗಾಣದೇ, ಬೆಳೆ ಕೈಗೆಟುಕದೇ ಸಾಲದ ಬಾಧೆಗೆ ಆತ್ಮಹತ್ಯೆ ದಾರಿ ಹಿಡಿವ ಸಂಧಿಗ್ಧತೆಗೊಳಗಾಗುತ್ತಿದ್ದಾರೆ. 

ಇದನ್ನೇ ನಾನು ಆಕ್ಷೇಪಿಸಿ ರಾಸಾಯನಿಕಗಳನ್ನು ಬಳಸದೇ ಸಗಣಿ ಗೊಬ್ಬರ ಬಳಸಿದೆ.  ಜೊತೆಗೆ ಅದರಿಂದ ತಯಾರಾದ ಗ್ಯಾಸ್ ಬಳಸಿದೆ.  ಸಿಗುವ ರಾಸಾಯನಿಕ ಮುಕ್ತ ಬೀಜಗಳನ್ನು ಅಲ್ಲಲ್ಲಿ ಸುರಿದೆ. ಬೇವು, ಮಾವು, ಬಾಳೆ, ಪಪ್ಪಾಯಿ, ತೊಗರಿ, ಹುಣಸೆ, ಪೇರಲಹಣ್ಣು, ಬಾರೆ ಹಣ್ಣು, ಸೊಪ್ಪು,  ಎಲ್ಲವೂ ಬೆಳೆದೆ. ಇನ್ನುಳಿದ ಎರೆ ಭೂಮಿಯಲ್ಲಿ ಜೋಳ, ಮುಂತಾದ ಕಾಳು ಹರಡಿ ಮಳೆ ಸುರಿದ ನೀರಲ್ಲೇ ಬೆಳೆದು ಮನೆಗೆ ಬೇಕಾದ ದವಸ ಸಂಗ್ರಹಿಸಿದೆ. ಬರ ಬಿದ್ದು ಜೋತು ಮುಖ ಹೊತ್ತ ರೈತರ ಮಧ್ಯೆದಲ್ಲೇ ವರ್ಷಕ್ಕಾಗುವಷ್ಟು ಮಿಕ್ಕಿದ ದವಸಗಳನ್ನು ಕೈ ಎತ್ತಿ ನೀಡುವಷ್ಟರ ಮಟ್ಟಿಗೆ ಕೃಷಿ ಮಾಡಿದೆ.   ಈ ಮಧ್ಯೆ ಮಥುರಾದ ಹೆಂಡತಿ ಕನ್ನಡ ಕಲಿತಳು. ಇಬ್ಬರೂ ಮಕ್ಕಳು, ಚಿಕ್ಕ ಮನೆ, ಸರಳ ಜೀವನ.  ಪ್ಲಾಸ್ಟಿಕ್ ಬಳಸದ, ಪಾಲಿಸ್ಟರ್ ಬಟ್ಟೆ ತೊಡದ, ಹೊರ ತಿನಿಸುಗಳಾದ ಮ್ಯಾಗಿ ಮತ್ತೊಂದಕ್ಕೆ ಮಕ್ಕಳು ಮೂಸೂ ನೋಡದಂತೆ ಬದುಕುತ್ತಿದ್ದೇನೆ.  ಜಗತ್ತಿನ ಕಣ್ಣಿಗೆ ನಾನೊಬ್ಬ ಅನಾದಿ ಕಾಲದ ವಾಸಿಯಂತೆ, ಹುಚ್ಚನಂತೆ ಕಾಣುತ್ತಿರಬಹುದು. ಮುಂದುವರೆದ ತಾಂತ್ರಿಕತೆ, ವಿದ್ಯೆ, ಜೀವನ ಎಲ್ಲದರಲ್ಲೂ ಪರಿಸರ ನಾಶ, ಭೂಮಿ ಸತ್ವ ಕಣಗಳು ಮತ್ತು ಮನುಷ್ಯ ಸಹಜ ಗುಣಗಳ ನಾಶವನ್ನೇ ಕಾಣುತ್ತಿರುವ ನಾವು ನಮ್ಮದೇ ನೆಲದಲ್ಲಿ, ಮನೆಯಲ್ಲಿ ದೇಸಿ ಗುಣದ ಬದುಕು, ಗೇಯ್ಮೆ, ಸರಳತೆ ಕಳೆದುಕೊಳ್ಳುತ್ತಿದ್ದೇವೆ. ನಿತ್ಯ ವಿಷವುಂಡು ವಿಷವನ್ನೇ ಕಕ್ಕುವವರ ನಡುವೆ ಸಹಜ ಕೃಷಿ,, ಪರಿಸರ ಬೆಳವಣಿಗೆಗೆ ಮತ್ತು ಉಳಿವಿಗೆ ಪೂರಕವಾಗಿ ಸಹಜ ನಡೆ, ಸರಳ ಜೀವನವೆಂದು ಮೆತ್ತಾಗಾಗಿ ತೂತು ಬಿದ್ದ ಹತ್ತಿ ಬಟ್ಟೆಯನ್ನು ಸುತ್ತಿ ನಡೆವ ನನ್ನ [ಒಂದು ಕಾಲದ ಫಾರಿನ್ ರಿಟರ್ನಡ್ ಎಂಜನೀಯರ್ನ] ದೇಸೀತನವನ್ನು ಒಪ್ಪಿಕೊಳ್ಳಲು ವರ್ಷಗಳ ಕಾಲ ಹಿಡಿದೀತು……….ಇಲ್ಲವೇ ಅಜ್ಞಾತವಾಗಿ ನಾನು ಕಾಲವಾದರೂ ಆಶ್ಚರ್ಯವಿಲ್ಲ.

ಈಗಿನ ಓಡುವ ಜಗತ್ತಿಗೆ ಬಿಸಿಯಾದ್ದು ಸುದ್ದಿಯೊಂದೇ ಬೇಕು. ಸುದ್ದಿ ಅಚ್ಚರಿಯಾಗಬೇಕು, ಅದರಿಂದ ದೇಶಾದ್ಯಂತ ಸಂಚಲನವಾಗಬೇಕು.   ಅದರಲ್ಲೇ ಸಾವಿರಾರು ಮಂದಿಯ ಅನ್ನವಿದೆ.   ಆದರೆ, ಅನ್ನ ಬೆಳೆಯುವವನ ಕೈಗೆ ವಿಷದ ಬಾಟಲಿ ಸಿಗುತ್ತೆ. ಒಂದೋ ಅದನ್ನು ಭೂಮಿಗೆ ಸುರಿದು ಫಸಲು ನಿರೀಕ್ಷಿಸಬೇಕು. ಅದಿಲ್ಲದಿದ್ದರೆ ಅದೇ ವಿಷದ ಗುಕ್ಕೊಂದನ್ನು ಗುಟುಕರಿಸಿ ಪ್ರಾಣ ಬಿಡಬೇಕು. ದುರಾದೃಷ್ಟವಶಾತ್ ಅಂಥ ಸಾವುಗಳು ಕೇವಲ ಸುದ್ದಿಗಳಾಗುತ್ತವೆ. ಅವನ ರಕ್ಷಣೆಗೆ ನಾಂದಿಯಾಗುವಂಥ ಯಾವುದೇ ಸಂಚಲನವಾಗುವುದಿಲ್ಲ. ಕೃಷಿ ಭೂಮಿಯ ಫಲವತ್ತತೆ ನಾಶವಾಗದಂಥ, ವಿಷಯುಕ್ತ, ಕ್ರಿಮಿನಾಶಕಗಳ ಬಳಕೆಯಿಂದಾಗುವ ಪರಿಣಾಮ, ದೇಸೀ ಗೊಬ್ಬರದ ಸತ್ವದ ಬಗ್ಗೆ ತಿಳುವಳಿಕೆ ನೀಡುವ ಪ್ರಕ್ರಿಯೆಗಳಾಗುತ್ತಿಲ್ಲ.  ಕೃಷಿ, ರೈತ, ಬಡವ, ಬಡತನ, ಅಭಿವೃದ್ಧಿ, ಭರವಸೆ ಇವೆಲ್ಲಾ ನಾವು ಕೇಳಿದ ನಿಘಂಟಿನ ಗೂಡಿಂದ ಕೊಡವಿ ನಾಲಗೆ ಮೇಲೆ ಹರವಿಕೊಂಡು ಬಡಬಡಿಸುವ ಶಬ್ದಗಳಷ್ಟೇ. ಮತ್ತೊಂದು ಬದಿಯಲ್ಲಿ ಸರಣಿ ಆತ್ಮಹತ್ಯೆಗಳ ತರುವಾಯ ಸಿಗುವ ಸರ್ಕಾರದ ಪರಿಹಾರದ ಮೊತ್ತಕ್ಕೆ ರೈತರ ಕುಟುಂಬಗಳ ಸಂಕಷ್ಟ ತೀರದು.  ಆರೋಗ್ಯ ನೆಟ್ಟಗಿದ್ದೇ ಸಾಲಕ್ಕೆ ಹೆದರಿ ಸಾಯುವ ರೈತರ ಮಧ್ಯೆ ದೈಹಿಕವಾಗಿ  ಕಾಡುತ್ತಿರುವ ಮೆದುಳಲ್ಲಿನ ಗಡ್ಡೆ ನನ್ನನ್ನು ಎಂದೋ ಬಲಿ ಪಡೆಯಬೇಕಿತ್ತು. ರಾಜಧಾನಿಯಂಥ ಊರಲ್ಲಿ ಪರಿಣಿತ ವೈದ್ಯರು ಇದನ್ನು ಶಸ್ತ್ರ ಚಿಕಿತ್ಸೆ ಮಾಡಿಯೇ ತೆಗೆಯಬೇಕೆಂದರು. “ನಂತರ ನಾನು ಬದುಕುವ ಸಾಧ್ಯತೆಗಳೆಷ್ಟು?”  ಕೇಳಿದೆ.  ಅವರು ಹೇಳಿದ್ದು, “ಇಪ್ಪತ್ತೈದು ಪರ್ಸೆಂಟ್, ಅದೂ ಉಳಿದರೂ ವರ್ಷೊಪ್ಪತ್ತಿನವರೆಗೆ….”. 

ನಿಜ ಹೇಳುತ್ತೇನೆ ಕೇಳಿ; ಆ ವೈದ್ಯರಿಗೆ ದುಡ್ಡು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಇಪ್ಪತ್ತೈದು ಪರ್ಸೆಂಟ್ ಬದುಕುವುದಕ್ಕಿಂತ ಅದಿಲ್ಲದೇನೇ ಇರುವಷ್ಟು ದಿನ ಗುಣಮುಖವಾಗುವ ದಾರಿ ಹುಡುಕಿ ನೆಮ್ಮದಿಯಾಗಿದ್ದರಾಯಿತೆಂದು ಬದುಕುತ್ತಿದ್ದೇನೆ.  ಆ ಖಾಯಿಲೆಗೀಗ ಬರೋಬ್ಬರಿ ಏಳು ವರ್ಷ.   ಗಡ್ಡೆ ಸರಾಸರಿಯ ಪ್ರಮಾಣವೂ ಕುಸಿದಿದೆ.

ಆಶಾವಾದದೊಂದಿಗೆ ನನ್ನ ಗೆಳೆತನ.  ಜಗತ್ತು ನೋಡುವ ಮಟ್ಟಿಗೆ ನನ್ನ ಆದರ್ಶವೇ ನನಗೆ  ಮುಳ್ಳು…..ಬದುಕೆಂದರೆ ಹೀಗೇ……


 

ಕನ್ನಡದ ಬರಹಗಳನ್ನು ಹಂಚಿ ಹರಡಿ

8 thoughts on “ಹಾಳು ಕೃಷಿಕನೊಬ್ಬನ ಸ್ವಗತ: ಅಮರ್ ದೀಪ್ ಪಿ.ಎಸ್.

  1. ಮನಮುಟ್ಟುವಂತಿದೆ. ಅದು ಆತ್ಮವಿಶ್ವಾಸ. ಮೆದುಳಿನ ಗಡ್ಡೆಯನ್ನೇ ಕರಗಿಸಬಲ್ಲ ಗಟ್ಟಿತನ ರೈತರಿಗಲ್ಲದೆ ಮತ್ತಾರಿಗೆ ಬರಬೇಕು?

  2. ತುಂಬಾ ಚೆನ್ನಾಗಿ ಬಂದಿದೆ ಮಿತ್ರ. ಅಭಿನಂದನೆಗಳು

  3. ಚನ್ನಾಗಿದೆ. ರೈತರ ಸ್ಥಿತಿ ಚನ್ನಾಗಿ ಅರಿತಿದ್ದೀರಿ ನಿಜಕ್ಕು ಅವರ ಆತ್ಮಹತ್ಯೆ ರಾಜ್ಯಕ್ಕೆ ದುರ್ದೈವ. ರೈತರಿಗೆ ದೇಸಿಯ ಗೊಬ್ಬರದ ಅರಿವು ಹಾಗೂ ಕೆಲವು ಧಾನ್ಯಗಳಿಗೆ ಬೆಂಬಲ ಬೆಲೆ ನೀಡಿ ಸರಕಾರ ರೈತರಿಗೆ ನಿಜಕ್ಕೂ ಬೆನ್ನಲಬಾಗಿ ನಿಲ್ಲಬೇಕು. ಆಧುನಿಕ ಪ್ರಪಂಚದಲ್ಲಿ ಆದರ್ಶಗಳು, ಸರಳಬದುಕು ಎಲ್ಲವೂ ಗೌಣ. ಇಂಜೀನಿಯರನಿಂದ-ಕೃಷಿಕನಾಗಿ ,ಆತ್ಮವಿಶ್ವಾಸದಿಂದ ಏನಾದರೂ ಸಾಧಿಸಬಹುದೆಂದು ವೈಜ್ಞಾನಿಕವಾಗಿಯೂ ಧೃಡಪಟ್ಟಿದ್ದು ಮತ್ತೊಮ್ಮೆ ಲೇಖನದ ಮೂಲಕ ನಿರೂಪಿಸುತ್ತದೆ.

  4. ಒಂದು ಒಳ್ಳೆಯ ಲೇಖನ. ಶ್ರೀಮಂತ ಬದುಕಿನೊಳಗಿನ ಒಂಟಿತನ, ರೈತರ ಸಾವು ಎಂಬ ಸುದ್ದಿ ಮಾರುಕಟ್ಟೆ, ನೋವನ್ನೂ ಮೀರಿ ನಿಲ್ಲುವ ಆಶಾವಾದಿತನ ಎಲ್ಲವನ್ನೂ ಚೆನ್ನಾಗಿ ಕಟ್ಟಿಕೊಟ್ಟಿದ್ದೀರಿ. ಅಮರದೀಪ್‌ ಸರ್‌ ಅಭಿನಂದನೆಗಳು.
    –ಶರತ್‌ ಹೆಗ್ಡೆ

  5. ಆರಂಭ/ವ್ಯವಸಾಯ ಇಂದಿನ ಜನಕ್ಕೆ ಒಗ್ಗದ ಕಸುಬು.  ಸೋಮಾರಿತನಕ್ಕೆ ಶರಣಾಗಿ, ದುಡಿಮೆಯಲ್ಲಿ ನಂಬಿಕೆಯಿಲ್ಲದ ತಾಳ್ಮೆ ರಹಿತ ಜೀವನ. ಇಂತಹ ಜನರ ನಡುವೆ ಸಾಧಿಸಿದ ವ್ಯಕ್ತಿಗೆ ನನ್ನ ಕಡೆಯಿಂದ ಅನಂತ ವಂದನೆ.  ಪ್ರೀತಿಯಿಂದ ಯಾವುದೇ ಕಾರ್ಯ ಮಾಡಿದರೆ ಯಶಸ್ಸು ನಿಶ್ಚಯೆಂಬುದು ನಿಮ್ಮ ಲೇಖನದಿಂದ ಕಂಡು ಬಂದಿತು. ಆಡಂಭರದ ಜೀವನ ಕ್ಷಣಿಕ ಎಂಬುದು ಸ್ವಷ್ಟವಾಯಿತು. ಭೂ ತಾಯಿಯ ಸೇವೆ ನಿರಂತರವಾಗಿರಬೇಕು.  ಇಲ್ಲದಿದ್ದರೆ ನಮಗೆಲ್ಲಾ ಅನ್ನನೂ ಇಲ್ಲ ಮಣ್ಣು ಇಲ್ಲ.

  6. ಅಪರೂಪದ ಅನುಭವ ಹಂಚಿಕೊಂಡಿದ್ದೀರಿ. ನಿಮ್ಮ ಗಟ್ಟಿತನಕ್ಕೆ ಅಭಿಮಾನಿ.ಅಭಿನಂದನೆಗಳು. ಆಗಾಗ ಸುದ್ದಿಮಾಡುವ ರೈತ ಸಂಘಟನೆಗಳಲ್ಲಿ ಅವನಲ್ಲಿ ಆದರ್ಶ ಕೃಷಿಕತನ ತುಂಬುವ ಪಾತ್ರವೂ ಇದೆ. ಅಂಥ ಚಳವಳಿ ನಡೆಯಲಿ.

Leave a Reply

Your email address will not be published. Required fields are marked *