“ಹಾರುವ ಹಂಸೆ” ಇತ್ತೀಚಿನ ದಿನಗಳಲ್ಲಿ ನಾನು ಓದಿ ಮೆಚ್ಚಿದ, ಇತ್ತೀಚಿನ ತಲೆಮಾರಿನವರು ರಚಿಸಿದ ಕೃತಿಗಳಲ್ಲಿ ಬಹಳ ಉತ್ತಮವಾದ ಕೃತಿ ಎಂದು ನಿಸ್ಸಂಶಯವಾಗಿ ಹೇಳಿಬಿಡಬಹುದು. ಇದು ಚಾಮರಾಜನಗರದ ಆರ್ ದಿಲೀಪ್ ಕುಮಾರ್ ರವರ ಕವಿತೆಗಳ ಸಂಕಲನ.
ಗಂಭೀರವಾದ ಸಾಹಿತ್ಯ ವಿದ್ಯಾರ್ಥಿಯೊಬ್ಬ ತನ್ನ ಅಧ್ಯಯನದ ಆಧಾರದ ಮೇಲೆ, ಉತ್ತಮ ಕಾವ್ಯಗಳಲ್ಲಿ ಇರಬಹುದಾದ ಲಕ್ಷಣಗಳನ್ನು ಗುರುತು ಹಾಕಿಕೊಂಡು, ಅದಕ್ಕೆ ನಿಷ್ಠನಾಗಿ ಕಾವ್ಯ ರಚನೆ ಮಾಡಿದರೆ ಕವಿತೆಗಳು ಹೇಗೆ ಮೂಡಬಹುದೋ, ಕ್ವಚಿತ್ತಾಗಿ ಹಾಗೆಯೇ ಮೂಡಿವೆ ದಿಲೀಪರ ಕವಿತೆಗಳು.
ಕಾವ್ಯದಲ್ಲಿ ಮುಖ್ಯವಾಗಿ ವಸ್ತು ವಿಷಯ, ಭಾಷೆ, ಭಾವಾಭಿವ್ಯಕ್ತಿ, ಅಲಂಕಾರಗಳು, ಧ್ವನಿ, ಸಂಕೇತಗಳು, ಕಿರಿದರಲ್ಲಿ ಹಿರಿದನ್ನು ಹೇಳುವ ರೀತಿ, ಪ್ರತಿ ಸಾಲುಗಳು ಕಟ್ಟಿಕೊಡುವ ಭಾವ, ಒಟ್ಟಾರೆಯಾಗಿ ಒಂದು ಕಾವ್ಯ ಸ್ಫುರಿಸುವ ಅರ್ಥ ಪ್ರಮುಖವೆಂದು ನಾನಾದರೂ ಭಾವಿಸುತ್ತೇನೆ.
ಹಂಸ ಆಧ್ಯಾತ್ಮದ ಸಂಕೇತ. ಜ್ಞಾನದ ಸಂಕೇತ. ಪರಿಶುದ್ಧತೆಯ ಸಂಕೇತ. ವಿದ್ಯಾಧಿದೇವತೆ ಸರಸ್ವತಿಯ ವಾಹನ. ನೀರಿನಲ್ಲಿ ತೇಲುವ, ನೆಲದಲ್ಲಿ ನಡೆಯುವ, ಆಕಾಶದಲ್ಲಿ ಹಾರುವ ಶಕ್ತಿಯನ್ನು ಹೊಂದಿರುವಂಥದು. ಹಾಗೆಂದೇ, ಮೋಕ್ಷದ ಮುಕ್ತಿಯ ಧ್ಯಾನ, ಗಮ್ಯದೆಡೆಗಿನ ಪಯಣ, ಯೋಗ/ತಂತ್ರಸಾಧನೆಯ ಮಾರ್ಗ, ಅದಕ್ಕೆ ಬೇಕಾದ ಮಾನಸಿಕ ತಯಾರಿ, ಸ್ವಚ್ಛ ಹೃದಯ ಮುಂತಾದವುಗಳನ್ನೇ ಹಾಸಿಹೊದ್ದಿರುವ ಈ ಸಂಕಲನದ ಕವಿತೆಗಳಿಗೆ “ಹಾರುವ ಹಂಸೆ” ಯೆಂಬ ಶೀರ್ಷಿಕೆ ಸೂಕ್ತವಾಗಿ ಒದಗಿ ಬಂದಿದೆ.
ಮೂಲಾಧಾರದಿಂದ ಸಹಸ್ರಾರದವರೆಗಿನ ಕುಂಡಲಿನಿ ಶಕ್ತಿಯ ಪ್ರವಹನ, ಸಾಧನೆಯ ಹಾದಿಯ ಜ್ಞಾನ ಈ ಕವಿಗಿದೆ ಎನ್ನುವುದಕ್ಕೆ ಸಾಕಷ್ಟು ನಿದರ್ಶನಗಳು ಸಂಕಲನದ ಹಲವಾರು ಕವಿತೆಗಳಲ್ಲಿ ಕಂಡುಬರುತ್ತದೆ. “ಹಾರುವ ಹಂಸೆ”, “ಗಮ್ಯ”, “ಕೊಡು”, “ಕಣಿವೆಯಂಚಿನ ಹಾದಿ”, “ಸಾಕ್ಷಾತ್ಕಾರದ ಹಾದಿ” “ಹರಿವ ನೀರು” ಈ ಬಗೆಯ ಕವಿತೆಗಳು.
ಇನ್ನು ಎರಡನೆಯ ಬಗೆಯ ಕವಿತೆಗಳು ಕವಿಯ ವಯೋಮಾನಕ್ಕೆ ತಕ್ಕಂತಹ ಪ್ರೇಮ ಕಾಮದ ಕವಿತೆಗಳು. ಆದರೆ ಇವಾವುವೂ ನಮ್ಮನ್ನು ಭಾವೋತ್ಕಟತೆಗೆ ಒಯ್ಯಲಾರವು.
ಮೂರನೆಯ ಬಗೆಯ ಕವಿತೆಗಳು ಅಲ್ಲಮ, ಬಸವಣ್ಣ, ಅಕ್ಕ ಮಹಾದೇವಿ, ಕನಕ, ಪುರಂದರ, ಬುದ್ಧರಂತಹ ನಮ್ಮ ದಾರ್ಶನಿಕರನ್ನು ಸಂಭೋದಿಸಿದವು. ಇವೆಲ್ಲವುಗಳ ಮೂಲಕ ಅವರ ತಾತ್ವಿಕತೆಯನ್ನು ನೆನೆಯುವ ಕ್ರಮ, ಅವರ ಕಾಣ್ಕೆಗಳ ಬಗೆಗಿನ ಸೋಜಿಗ, ಅವರುಗಳು ಹಾಕಿಕೊಟ್ಟ ದಾರಿಯಲ್ಲಿ ನಾವು ನಡೆಯುತ್ತಿಲ್ಲವೆಂಬ ವಿಷಾದ ಕಂಡುಬರುತ್ತದೆ. ಇನ್ನೊಂದೆರಡು ಕವಿತೆಗಳು ತಮ್ಮ ತಂದೆಯನ್ನೂ, ತಮ್ಮ ಪರಿಚಯದ ಮುದ್ದು ಮಗುವೊಂದನ್ನೂ ಸಂಬೋಧಿಸುತ್ತವೆ.
ದಿಲೀಪರು ತಮ್ಮ ಕವಿತೆಗಳಲ್ಲಿ ಭಾಷೆಯನ್ನು ಬಹಳ ಪರಿಣಾಮಕಾರಿ ಬಳಸಿಕೊಂಡಿದ್ದಾರೆ. ಬಹಳಷ್ಟು ಕಡೆ ಗೊತ್ತಿದ್ದೇ ದ್ವಿರುಕ್ತಿಗಳನ್ನು ಬಳಸಿದ್ದಾರೆ. ತಮ್ಮ ಭಾವನೆಯನ್ನು ಪರಿಣಾಮಕಾರಿಯಾಗಿ ದಾಟಿಸಬೇಕೆಂಬ ತವಕ ಇದು. ಉದಾ: ಪದಪದಕು, ಪರಿಪರಿಯ, ಕರಕರನೆ, ತೆರೆತೆರೆದು, ಥಟಥಟ ಇತ್ಯಾದಿ.
ಪರಸ್ಪರ ವೈರುಧ್ಯದ ವಸ್ತುಗಳನ್ನು ಥಟಕ್ಕನೆ ಎದುರು ಬದಿರಾಗಿ ನಿಲ್ಲಿಸಿ ಓದುಗರ ಮನಸ್ಸನ್ನು ಸೆಳೆಯುವಂತಹ ತಂತ್ರ ದಿಲೀಪರ ವೈಶಿಷ್ಟ್ಯ. ಉದಾ: “ಉರಿ ಬಿಸಿಲಿನಲ್ಲಿ ಬೆಳದಿಂಗಳನರಸುವ ಪರಿ”
“ವಿರಸವಿಲ್ಲದ ಸರಸವಿರಲಿ”
“ಕ್ಷಣಿಕವನೂ ಆಗಿಸು ಯುಗ” ಇತ್ಯಾದಿ.
ಇನ್ನು ಆಂತರಿಕ ಪ್ರಾಸಬದ್ಧ ಪದಗಳ ಬಳಕೆ ದಿಲೀಪರಿಗೆ ಅಚ್ಚುಮೆಚ್ಚು. ಮುತ್ತಿನ ಸತ್ತಿಗೆ, ಅಸ್ಥಿ-ಹಸ್ತಿ, ಉರುಳಿದ್ದೋ ಹೊರಳಿದ್ದೋ, ಕುಣಿವ ತಣಿವ ಮಣಿವ, ಸಿಕ್ಕುವ ದಕ್ಕುವ ರೀತಿಯ ಅನೇಕಾನೇಕ ಪದಪ್ರಾಸಗಳು ಸಂಕಲನದ ಉದ್ದಕ್ಕೂ ಬಹುಮಟ್ಟಿಗೆ ಅವರ ಎಲ್ಲ ಕವಿತೆಗಳಲ್ಲೂ ಕಂಡುಬರುತ್ತವೆ.
ಹಂಸ, ಬಸವನ ಹುಳುವಿನಂತಹ ವಿಶಿಷ್ಟ ಸಂಕೇತಗಳು ಬಳಕೆಯಾದರೆ ಕೆಲವು ಪದಗಳು/ಸಾಲುಗಳು ಹಲವು ಕವಿತೆಗಳಲ್ಲಿ ಮತ್ತೆ ಮತ್ತೆ ಪುನರಾವರ್ತಿತವಾಗುತ್ತವೆ. ಉದಾಹರಣೆಗೆ ‘ತೆರೆದಿರಲಿ ಎದೆ’, ‘ಹರಿದಾರಿ-ರಹದಾರಿ’, ‘ಹಣತೆಯ ದೀಪ’, ಪರಂಧಾಮದ ಆಸೆ ಇತ್ಯಾದಿ.
ದಿಲೀಪರ ಕವಿತೆಗಳಲ್ಲಿ ಭಾವ ನಮ್ಮನ್ನು ಕಾಡುವುದಕ್ಕಿಂತ ಬುದ್ಧಿ ಹೆಚ್ಚಾಗಿ ತಾಕುತ್ತದೆ. ತಮ್ಮ ಸ್ವಾನುಭವವನ್ನು ನೆಚ್ಚಿಕೊಳ್ಳದೇ ಇತರರ ದರ್ಶನಗಳ ಮೇಲೆಯೇ ತಮ್ಮ ಕಾವ್ಯದ ಬುನಾದಿಯನ್ನು ಕಟ್ಟಿಕೊಂಡಿದ್ದಾರೆ ಎನಿಸುತ್ತದೆ. ಹಾಗೆಂದೇ, ಓದಿದ ತಕ್ಷಣ “ವಾಹ್ ಅದ್ಭುತ” ಎನ್ನುವಂಥ ನಮ್ಮ ಭಾವವನ್ನು ಉದ್ದೀಪಿಸುವ ಕವಿತೆಗಳಿಗಿಂತ, ನಿಧಾನವಾಗಿ ಕುಳಿತು ಓದಬೇಕಾದ, ನಮ್ಮ ಬುದ್ಧಿಯನ್ನು ತೀಡುವ ಕವಿತೆಗಳೇ ಈ ಸಂಕಲನದಲ್ಲಿ ಹೆಚ್ಚಾಗಿವೆ. ಕವಿತೆಯೊಂದನ್ನು ಓದುವಾಗ ಇದು ನನ್ನದೂ ಕವಿತೆ ಎಂದು ಓದುಗನೊಬ್ಬನಲ್ಲಿ ಆಪ್ತಭಾವ ಮೂಡಿಸದೇ, ಗಂಭೀರವಾದ ಕವಿಯೊಬ್ಬ ಗಹನವಾದ ವಿಚಾರವೊಂದನ್ನೇನೋ ನಮ್ಮ ಮುಂದೆ ಮಂಡಿಸುತ್ತಿದ್ದಾನೆ ಎನ್ನುವ ಭಾವದಿಂದಲೇ ಇಲ್ಲಿನ ಕವಿತೆಗಳನ್ನು ನೋಡಬೇಕೆನಿಸಿ ಬಿಡುತ್ತದೆ. ಓದುಗನ ಮನದಿಂದ ಒಂದಿಷ್ಟು ಅಂತರವನ್ನು ಕಾಯ್ದುಕೊಳ್ಳುತ್ತವೆ. ಇದು ಇಲ್ಲಿನ ಕವಿತೆಗಳ ಶಕ್ತಿಯೋ ಅಥವಾ ಮಿತಿಯೋ ಎನ್ನುವುದನ್ನು ಓದಿದವರೇ ನಿರ್ಧರಿಸಬೇಕಾಗುತ್ತದೆ.
ಇವೆಲ್ಲವುಗಳ ಜೊತೆಗೇ ದಿಲೀಪರು ತಮ್ಮ ಪೀಳಿಗೆಯ ಬಹುತೇಕ ಕವಿಗಳು ಸಾಮಾನ್ಯವಾಗಿ ತುಳಿಯದ ಹಾದಿಯಲ್ಲಿ ಭರವಸೆಯಿಂದ ಹೆಜ್ಜೆಯಿಡುತ್ತಿರುವ ವಿಶಿಷ್ಟ ಕವಿಯಾಗಿ ತಮ್ಮನ್ನು ತಾವು ದಾಖಲಿಸಿಕೊಂಡಿದ್ದಾರೆ. ಪಂಪನ ಕಾವ್ಯ ವ್ಯಾಮೋಹಿಯಾಗಿರುವ ದಿಲೀಪರ ಕಾವ್ಯ ಜಗತ್ತು ಇನ್ನಷ್ಟು ವಿಸ್ತಾರವಾಗಲಿ, ಇನ್ನಷ್ಟು ಎತ್ತರಕ್ಕೆ ಏರಲಿ ಎನ್ನುವ ಶುಭ ಹಾರೈಕೆಗಳು ಈ ಸಂದರ್ಭದಲ್ಲಿ ನಮ್ಮವು.
– ವಿನಯಚಂದ್ರ