ಹಾರಲಾರದ ಹಾಡುವ ಹಕ್ಕಿ: ಗುಂಡೇನಟ್ಟಿ ಮಧುಕರ


ಮನುಷ್ಯನಿಗೆ  ಯಾವುದಾದರೊಂದು ಅವಯವಗಳಿಲ್ಲದಿದ್ದರೂ ನಡೆಯುವುದಿಲ್ಲ. ಕಣ್ಣು, ಕಿವಿ, ಮೂಗು, ಕಾಲು, ಕೈ ಹೀಗೆ ಎಲ್ಲ ಅವಯವಗಳೂ ಬೇಕೇ ಬೇಕು ಆದರೆ ಯಾವುದೋ ಒಂದು ಕಾರಣದಿಂದ ಇವುಗಳಲ್ಲಿಯವುಗಳಿಂದ ವಂಚಿತನಾದ ವ್ಯಕ್ತಿ ಜೀವನದಲ್ಲಿ ಉತ್ಸಾಹವನ್ನು ಕಳೆದುಕೊಳ್ಳುತ್ತಾನೆ. ಸಮಾಜದಲ್ಲಿ ಕೀಳರಿಮೆ ಮನೋಭಾವವನ್ನು ಬೆಳೆಸಿಕೊಳ್ಳುವವರೇ ಹೆಚ್ಚು. ಆದರೆ ಎರಡೂ ಕಾಲಿಲ್ಲದೆಯೇ ಸುಮಾರು ನಾಲ್ಕು ದಶಕಗಳನ್ನು ಕಳೆದಿರುವ ವಿನಾಯಕ ಮುತಾಲಿಕ ದೇಸಾಯಿಯವರು ಇಂಥವರಿಗೆ ಹೇಳುವ ಕಿವಿಮಾತೇನೆಂದರೆ. ಜೀವನದಲ್ಲಿ ಉತ್ಸಾಹವೆನ್ನುವುದು ಅತಿ ಮಹತ್ವದ ವಸ್ತು. ಜೀವನೋತ್ಸಾಹವನ್ನು  ಕಳೆದುಕೊಂಡಿರುವವ  ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಹುಟ್ಟಿದ ತಪ್ಪಿಗೆ ಬದುಕಿ ಒಂದು ದಿನ ತನ್ನ ಜೀವನಕ್ಕೆ ಪೂರ್ಣವಿರಾಮ ಕೊಡುತ್ತಾನೆ ಅಷ್ಟೆ. ನಮ್ಮಲ್ಲಿರುವ ವಿಕಲತೆಯನ್ನೇ ನೆನೆದುಕೊಂಡು ಬಳಲುವುದಕ್ಕಿಂತ ಇದ್ದ ಬದುಕಿನಲ್ಲಿಯೇ ಏನನ್ನಾದರೂ ಸಾಧಿಸಿ ತೋರಿಸುತ್ತೇನೆಂಬ ಛಲವನ್ನು ನೀವು ಹೊಂದಿದಲ್ಲಿ ನಿಮ್ಮ ವೈಕಲ್ಯತೆಯನ್ನು ಮರೆತು ಏನನ್ನಾದರೂ ಸಾಧಿಸಲು ಸಾಧ್ಯ. ನೀವು ಯಾವುದಾದರೂ ಹವ್ಯಾಸವನ್ನು ಬೆಳೆಸಿಕೊಳ್ಳುವುದರಿಂದ ನಮ್ಮ ಜೀವನದಲ್ಲಿರುವ ನೋವುಗಳನ್ನು ಮರೆಯುವುದರೊಂದಿಗೆ ನಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿಕೊಂಡು ಅದಕ್ಕೊಂದು ರೂಪ ಕೊಟ್ಟಂತಾಗುತ್ತದೆ. 

ಈ ಕಾಲಿಲ್ಲದ ಹಾಡು ಹಕ್ಕಿಯ ಪರಿಚಯ ನನಗಾದದ್ದು,  ಬೆಳಗಾವಿಯ ಎಲ್ಲ ಭಜನಾ ಮಂಡಳದವರು ಸೇರಿಕೊಂಡು ಉತ್ತರಪ್ರದೇಶ  ಲಖನೌದಿಂದ ಸುಮಾರು ನೂರು ಕಿ. ಮಿ. ಅಂತರದಲ್ಲಿರುವ ನೈಮಿಷಾರಣ್ಯಕ್ಕೆ ಹೋಗುವ ಸಂದರ್ಭದಲ್ಲಿ. ಪೋಲಿಯೋದಿಂದ ಎರಡೂ ಕಾಲುಗಳನ್ನು ಕಳೆದುಕೊಂಡಿರುವ ಈ ವ್ಯಕ್ತಿ ಅಷ್ಟು ದೂರದ ಪ್ರವಾಸಕ್ಕೆ ಬರಲು ಅದು ಹೇಗೆ ಮನಸ್ಸು ಮಾಡಿದರು ಎಂದು ನನ್ನ ಮನಸ್ಸು ಯೋಚಿಸುತ್ತಿತ್ತು. ಆದರೆ ಬೆಳಗಾವಿಯಿಂದ ಹೊರಟಿದ್ದ ಸುಮಾರು ನೂರ ಜನರಲ್ಲಿ ಅತ್ಯಂತ ಹುರುಪು, ಹಮ್ಮಸ್ಸುಗಳಿಂದ ಎಲ್ಲರನ್ನು ನಗಿಸುತ್ತ, ನಗುತ್ತ ಬಂದವರೆಂದರೆ ವಿನಾಯಕ ಅವರು. ಇವರು ಪ್ರವಾಸಕ್ಕೆ ಹೊರಟ ದಿನ  ಯಾವ ಲವಲವಿಕೆಯನ್ನು ಹೊಂದಿದ್ದರೋ, ಬೆಳಗಾವಿಗೆ ಮರಳಿದ ದಿನ ಕೂಡ ಅದೇ ಉತ್ಸಾಹದಿಂದ  ರೈಲನ್ನೀಳಿದು ನಮ್ಮೆಲ್ಲರಿಗೂ ಟಾ…… ಟಾ…. ಮಾಡಿ ಮನಗೆ ಮರಳಿದ್ದರು.  

ಎರಡು ದಿನಗಳ ಕಾಲದ ರೈಲ ಪ್ರವಾಸದಲ್ಲಿ ನಮ್ಮೆಲ್ಲರೊಂದಿಗೆ ವಿನಾಯಕ ನಮ್ಮೊಂದಿಗಿದ್ದರು. ಆವಾಗ್ಯೆ ಅವರು ನಮ್ಮೆಲ್ಲರಿಗೂ ಎರಡು ದಿನಗಳು ಕಳೆದುದೇ ತಿಳಿಯದಂತೆ ಮಾಡಿದ್ದರು. ಒಂದು ಎಲ್ಲ ದಾಸರ ಹಾಡುಗಳನ್ನು ನಮ್ಮ ಮುಂದೆ ಹಾಡಿ ತೋರಿಸಿ ಎಲ್ಲರೂ ಮೈಮರೆಯುವಂತೆ ಮಾಡಿದ್ದರು.  ಎರಡನೇಯದಾಗಿ ರೈಲಿನಲ್ಲಿ ಬರುವ ಬಿಸ್ಕೀಟ್, ಹಣ್ಣು, ಬಿಸ್ಲರಿ ಮಾರುವವರ ಧ್ವನಿಯನ್ನು ಅನುಕರಣೆಯನ್ನು ಮಾಡಿ ಕೂಗಿದಾಗ ನಾವೆಲ್ಲ ನಿಜವಾಗಲೂ ಮಾರುವ ಹುಟುಗರೇ ಬಂದಿದ್ದಾರೆಂದು ಮೋಸ ಹೋಗುವಂತೆ ಮಾಡಿ ಎಲ್ಲರನ್ನು ನಗಿಸುತ್ತಿದ್ದರು. ಹೀಗಾಗಿ ಆವಾಗಲೇ ನನಗೆ ಅವರಲ್ಲಿರುವ ಸಂಗೀತ ಹಾಗೂ ಅಭಿನಯ ಕಲೆ ಕುರಿತು ಕಂಡುಕೊಂಡಿದ್ದೆ ಮುಂದೆ ಅವರೊಂದಿಗೆ ಮಾತನಾಡುತ್ತ ಹೋದಂತೆ ಬೆಂಕಿಯಲ್ಲಿ ಬೆಂದು ಚೊಕ್ಕ ಚಿನ್ನವಾದ ಅವರ ಜೀವನ ಪರಿಯನ್ನು ತಿಳಿದುಕೊಂಡೆ.

ವಿನಾಯಕ ಮುತಾಲಿಕದೇಸಾಯಿಯವರಿಗೆ ಹುಟ್ಟಿನಿಂದಲೂ ಬರದ ಈ ವೈಕಲ್ಯ ಇವರು ಮೂರನೇ ತರಗತಿಯಲ್ಲಿ ಓದುತ್ತಿರುವಾಗೊಮ್ಮೆ ಜ್ವರ ಬಂದವು. ಯಾವುದೋ ಸಾಮಾನ್ಯ ಜ್ವರವೆಂದು ತಿಳಿದುಕೊಂಡಿದ್ದ ಇವರ ತಂದೆತಾಯಿ ಕುಟುಂಬದ ವೈದ್ಯರಲ್ಲಿ ತೋರಿಸಲು ಹೋದಾಗ ಅವರು- ’ನಿಮ್ಮ ಮಗನಿಗೆ ಪೋಲಿಯೋದಿಂದಾಗಿ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾನೆ. ಏನೂ ಮಾಡಲು ಸಾಧ್ಯವಿಲ್ಲ’ ಎಂದು ಕೈ ಚಲ್ಲಿದಾಗ ಹಡೆದ ತಂದೆ ತಾಯಿಯ ಕರುಳು ಚುರುಗುಟ್ಟಿತು. ಹೇಗಾದರೂ ಮಗ ಓಡಾಡುವಂತಾಗಲೆಂದು ಕಂಡು ಕೇಳಿದ ಎಲ್ಲ ವೈದ್ಯರ ಹತ್ತಿರವೆಲ್ಲ ಆಸೆಯ ಕಂಗಳಿಂದ  ನೋಡಿದರು. ದೇವರಲ್ಲಿ ಮೊರೆ ಇಟ್ಟರು. ಯಾವುದೂ ಸಹಾಯಕ್ಕೆ ಬರಲಿಲ್ಲ. ವಿನಾಯಕ ಓಡಾಡುವಂತಾಗಲಿಲ್ಲ.

ಬಾಲಕ ವಿನಾಯಕ ಮಾತ್ರ ಧೈರ್ಯ ಕಳೆದುಕೊಳ್ಳಲಿಲ್ಲ ಬದಲಾಗಿ ನನ್ನ ಎರಡು ಕಾಲುಗಳನ್ನಷ್ಟು ಬಿಟ್ಟರೆ ಉಳಿದೆಲ್ಲ ಅವಯವಗಳನ್ನು ದೇವರು ಸರಿಯಾಗಿ ಇಟ್ಟಿದ್ದನಲ್ಲ ಎಂದು ಸಮಾಧಾನ ಪಟ್ಟರು.  ಇವರು ಸ್ನೇಹಜೀವಿ. ಇವರ ಸುತ್ತಲೂ ಹತ್ತಾರು ಜನ ಸ್ನೇಹಿತರು ಇದ್ದೇ ಇರುತ್ತಾರೆ. ಬರಿ ಇರುತ್ತಾರೆ ಅಷ್ಟೆ ಅಲ, ಇವರ ಸೇವೆಗೆ ಸಿದ್ಧರಾಗಿರುತ್ತಾರೆ. ಶಾಲೆಯಲ್ಲಿ  ಓದುತ್ತಿರುವಾಗಲೂ ಕೂಡ ಇವರು ಎಲ್ಲ ಆಟಗಳನ್ನು ಆಡುವವರೇ. ಇವರದೊಂದು ದೊಡ್ಡ ಸ್ನೇಹ ಸಮೂಹವೇ ಇತ್ತು. ಎಷ್ಟೋ ಬಾರಿ ’ಕುಕುಮರಿ’ ಎಂದರೆ ಕುರಿಮರಿಯನ್ನು ಬೆನ್ನಮೇಲೆ ಕೂಡಿಸಿಕೊಂಡು ಹೋಗುವಂತೆ ಇವರನ್ನು ಕೂಡಿಸಿಕೊಂಡು ಶಾಲೆಯವರೆಗೆ ಬಿಟ್ಟು ಮತ್ತೆ ಮನೆಯವರೆಗೆ ತಂದು ಬಿಡುತ್ತಿದ್ದ ಸ್ನೇಹಿತ ವೃಂದವನ್ನು ಹೃದಯತುಂಬಿ ಈಗಲೂ ನೆನೆದುಕೊಳ್ಳುತ್ತಾರೆ.

೧- ಖ್ಯಾತ ಚಲನಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಾಲರಿಂದ ತಲೆಯ ಮೇಲೆ ಕೈಯಿಟ್ಟು ಆಶಿರ್ವದಿಸುತ್ತಿರುವುದು.

೨. ಖ್ಯಾತ ಗಾಯಕ ಪುತ್ತೂರು ನರಸಿಂಹ ನಾಯಕ ಅವರೊಂದಿಗೆ

೩. ಗಾಯನ ಕಾರ್‍ಯಕ್ರಮವೊಂದನ್ನು ನೀಡುವುದರಲ್ಲಿ ತಲ್ಲಿಣನಾಗಿರುವ ವಿನಾಯಕ ಮುತಾಲಿಕ ದೇಸಾಯಿ.

ಶಾಲೆಯಲ್ಲಿಯ ಸಾಂಸ್ಕೃತಿಕ ಸಮಾರಂಭವೊಂದರಲ್ಲಿ ಇವರು ತಮ್ಮ ಅಂಗವೈಕಲ್ಯವನ್ನೇ ವಸ್ತುವಾಗಿಟ್ಟುಕೊಂಡು ಹಾಡೊಂದರ ಅಭಿನಯ ಮಾಡಿ ತೋರಿಸಿದರು. ಅದು ಅಮಿತಾಬ ಬಚ್ಚನ್ ಅಭಿನಯಿಸಿರುವ ’ಶಾನ್’ ಚಿತ್ರದಲ್ಲಿ ಕಾಲಿಲ್ಲದ ವ್ಯಕ್ತಿಯೊಬ್ಬ ಚಕ್ರಕುರ್ಚಿಯಲ್ಲಿ ಕುಳಿತು ’ಆತೆ ಜಾತೆ ಹುಯೆ ಸಬಸೇ ನಜರ ರಖತಾ ಹು, ನಾಮ ಹೈ ಅಬ್ದುಲ್ ಮೇರಾ’ ಹಾಡಿನ ದೃಶ್ಯವನ್ನೇ ಅದರಂತೇ ಅನುಕರಣೆ ಮಾಡಿ ಅಭಿನಯಿಸಿ ತೋರಿಸಿದರು. ಅಭಿನಯ ಕುರಿತು ಜನರಿಂದ ಮೆಚ್ಚುಗೆಯನ್ನು ಪಡೆದರು.  ಇದೇ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಖ್ಯಾತ ನಿರ್ದೇಶಕ ದಿ. ಪುಟ್ಟಣ್ಣ ಕಣಗಾಲ ಇವರ ಅಭಿನಯವನ್ನು ಕಂಡು ಮೆಚ್ಚುಗೆ ವ್ಯಕ್ತ ಪಡಿಸಿ, ತಲೆಮೇಲೆ ಕೈಯ್ಯಾಡಿಸಿ ಆಶಿರ್ವದಿಸಿದ್ದರು. 

ವಿನಾಯಕ ಅವರನ್ನು  ಸೆಳೆದದ್ದು ಅಭಿನಯ ಕಲೆ ಒಂದಾದರೆ ಇನ್ನೊಂದು ಮೆಚ್ಚಿನ ಹವ್ಯಾಸವೆಂದರೆ ಸಂಗೀತ. ಇವರು ಪುತ್ತೂರು ನರಸಿಂಹನಾಯಿಕ, ಅನಂತ ಕುಲಕರ್ಣಿ, ರಾಯಚೂರು ಶೇಷಗಿರಿದಾಸ ಮುಂತಾದವರ  ಹಾಡುಗಳನ್ನು  ಕೇಳಿವುದು ಅವರೆಲ್ಲರ ಹಾಡುಗಳನ್ನು ಕೇಳಿ ಕೇಳಿ ಅವರಂತೆ ಹಾಡಲಾರಂಭಿಸಿದರು. ಕನಕದಾಸರು, ಪುರಂಧರದಾಸರು, ವಿಜಯದಾಸರು, ವಾದಿರಾಜರು ಹೀಗೆ ಎಲ್ಲ ದಾಸರ ಕೃತಿಗಳು ಇವರ ಕಂಚಿನ ಕಂಠದಲ್ಲಿ ಕೇಳುಗರ ಮನಸೂರೆಗೊಳ್ಳುತ್ತವೆ. ಅದ್ಭುತವಾದ ಕಂಠಸಿರಿಯನ್ನು ಹೊಂದಿರುವ ವಿನಾಯಕರ ಸಾರ್ವಜನಿಕ ಕಾರ್‍ಯಕ್ರಮಗಳಿಗೆ ಧ್ವನಿವಧಕ ಅವಶ್ಯಕತೆಯೇ ಇಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಇವರು  ಸ್ಪಷ್ಟ ಹಾಗೂ ಅಗಾಧವಾದ ಧ್ವನಿಸಿರಿಯನ್ನು ಹೊಂದಿದ್ದಾರೆ. ಒಟ್ಟಿನ್ನಲ್ಲಿಕ ದಾಸ ಸಾಹಿತ್ಯವೇ ತಮ್ಮ ಜೀವದುಸಿರು, ದಾಸರದಾಸ ನಾನು ಎಂದು ದಾಸ ಸಾಹಿತ್ಯದ ಬಗ್ಗೆ ಇರುವ ಭಕ್ತಿ ಶೃದ್ಧೆಯನ್ನು ತೋರ್ಪಡಿಸುತ್ತಾರೆ.

ಖ್ಯಾತ ಗಾಯಕರಾದ ಪುತ್ತೂರು ನರಸಿಂಹ ನಾಯಿಕ ಹಾಗೂ ಅನಂತ ಕುಲಕರ್ಣಿಯರು ವಿನಾಯಕ ಅವರ ಹಾಡುಗಳನ್ನು ಕೇಳಿ ಮನಸಾರೆ ಕೊಂಡಾಡಿದ್ದಾರೆ. ಈ ನಿಮ್ಮ ಹವ್ಯಾಸವನ್ನು ಬೆಳಸಿಕೊಳ್ಳಿ ಸಂಗೀತ ಕ್ಷೇತ್ರದಲ್ಲಿ ಒಳ್ಳೆಯ ಭವಿಷ್ಯವಿದೆಯಂದು ಆಶರ್ವದಿಸಿದ್ದಾರೆ.

ವಿನಾಯಕ ಅವರಿಗೆ ಹಾಡಲು ದೊಡ್ಡ ಪೆಂಡಾಲ, ದೊಡ್ಡ ದೊಡ್ಡ ವೇದಿಕೆಗಳು ಬೇಕೆಂದೇನೂ ಇಲ್ಲ. ಅವರಿಗೆ ಲವರಿ ಬಂದು ಹಾಡಲು ಪ್ರಾರಂಭಿಸಿದರೆ ಮುಗಿಯಿತು. ಹೀಗೇ ಒಮ್ಮೆ ಯಾವುದೋ ಸಂದರ್ಭದಲ್ಲಿ ಊರೊಂದರಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಹೋಗಿದ್ದಾರೆ. ದರ್ಶನ ತೆಗೆದುಕೊಂಡು ರಾಯರ ವೃಂದಾವನದೆದರು ಕುಳಿತುಕೊಂಡಾಗ ಹಾಡಬೇಕೆಂಬ ತುಡಿತ ಪ್ರಾರಂಭವಾಗಿ ಮನಬಿಚ್ಚಿ ದಾಸರ ಕೃತಿಗಳನ್ನು ಹಾಡಲು ಪ್ರಾರಂಭಿಸಿ ಬಿಟ್ಟಿದ್ದಾರೆ. ಇವರ ಧ್ವನಿಮಾಧುರ್ಯವನ್ನು ಕೇಳಿದ ಜನರೆಲ್ಲ ಬಂದು ಕುಳಿತು ಹಾಡು ಕೇಳಲು ಪ್ರಾರಂಭಿಸಿದ್ದಾರೆ. ಯಾರೋ ಒಬ್ಬರು ಪೇಟಿ ತಂದಿದ್ದಾರೆ, ತಬಲಾ ಸಾಥ ನೀಡವವರು ಬಂದಿದ್ದಾರೆ.  ವಿನಾಯಕ ಅವರ ಸಂಗೀತ ಹಾಗೇ ಮುಂದುವರೆದಿದೆ. ಸುಮಾರು ಒಂಬತ್ತು ಗಂಟೆಗಳ ಕಾಲ ಬಿಟ್ಟು ಬಿಡದೇ ದಾಸರ ಕೃತಿಗಳನ್ನು ಹಾಡಿದ ಘಟನೆಯನ್ನು ಕೇಳಿದಾಗ ನನಗೆ ಕವಿ ಜಿ. ಎಸ್. ಶಿವರುದ್ರಪ್ಪನವರ ’ಎದೆ ತುಂಬಿ ಹಾಡಿದೆನು……’ ಕವಿತೆಯಲ್ಲಿ ಬರುವ ’ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ ಹಾಡುವುದು ಅನಿವಾರ್ಯ ಕರ್ಮ ನನಗೆ, ಕೇಳುವವರಿಹರೆಂದು ನಾ ಬಲ್ಲೆ ಅದರಿಂದ ಹಾಡುವೇನು ಮೈದುಂಬಿ ಎಂದಿನಂತೆ ………..’ ಎಂಬ ಸಾಲು ನೆನಪಾಗದೆ ಇರಲಿಲ್ಲ.  

ವಿನಾಯಕ ಅವರು ಹೇಳುವಂತೆ ಈ ಸಂಗೀತದಿಂದ ನನ್ನನ್ನು ನಾನು ಮರೆತು ಬಿಡುತ್ತೇನೆ. ಇದರಿಂದಲೇ ನಾನು ನನ್ನಲ್ಲಿರುವ ನ್ಯೂನ್ಯತೆಯನ್ನು ಮರೆತು ಎಲ್ಲರೊಡನೆ ಬೆರೆತು ಇದ್ದು ಬಿಡುತ್ತೇನೆ. ಈ ಸಂಗೀತ ಸಾಕಷ್ಟು ಸ್ನೇಹಿತರನ್ನು, ಆಪ್ತರನ್ನು ತಂದು ಕೊಟ್ಟಿದೆ.  ಇಷ್ಟೇ ಅಲ್ಲದೇ ಭಗವಂತನ ನಾಮಸ್ಮರಣೆಯನ್ನು ಸದಾ ನನಗೊದಿಸುತ್ತದೆ. ಅದಕ್ಕಾಗಿಯೇ ನಾನು ದಾಸಸಾಹಿತ್ಯದಿಂದ ಹೆಚ್ಚು ಆಕರ್ಷಿತಗೊಂಡಿರಬಹುದು. ಸತತವಾಗಿ ಹನ್ನೆರಡು ಗಂಟೆಗಳ ವರೆಗೆ  ನಾನು ದಾಸರ ಪದಗಳನ್ನು ಹಾಡುವ ಸಾಮರ್ಥ್ಯ ಹೊಂದಿದ್ದೇನೆ. ಹಾಡಿನಲ್ಲಿ ಭಗವಂತನ ನಾಮಸ್ಮರಣೆ ಮಾಡುವುದೆಂದರೆ ನನಗೆ ಬೇಸರವಿಲ್ಲದ ಕೆಲಸ ಎನ್ನುವ 

ಇವರು ಗುಳೆದಗುಡ್ಡ, ಬೆಂಗಳೂರು, ತಿರುಪತಿ, ಗೋಕಾಕ, ಬೆಳಗಾವಿ ಹೀಗೆ ಬೇರೆ ಬೇರೆ ಊರುಗಳಲ್ಲಿ ’ದಾಸನಮನ’ ’ಹರಿದಾಸ ಹಬ್ಬ’ ಹೀಗೆ ಬೇರೆ ಬೇರೆ ಹೆಸರಿನಲ್ಲಿ ದಾಸರ ಹಾಡಿನ ಕಾರ್‍ಯಕ್ರಮಗಳನ್ನು ನೀಡಿ ಸಂಗೀತಾಸಕ್ತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ದಾಸನಾಗು ವಿಶೇಷನಾಗು……….., ಬಾರೇ ನಮ್ಮ ಮನೇತನಕ…………, ಹೊಸ ಬೆಣ್ಣೆ ಕೊಡುವೆ………..ಮುಂತಾದ ಹಾಡುಗಳನ್ನು ಇವರ ಬಾಯಿಂದ ಮತ್ತೆ ಮತ್ತೆ ಕೇಳಲು ಇಚ್ಚೆ ಪಡುತ್ತಾರೆ. ಕಾಗದದ ಚೀಟಿಯಲ್ಲಿ ಮತ್ತೆ ಮತ್ತೆ ಹಾಡುವಂತೆ ಬರೆದು ಕಳುಹಿಸಿ ಕೇಳಿ ಆನಂದಿಸುತ್ತಾರ. 

ಸಧ್ಯ ವಿನಾಯಕ ಅವರು ಡಿಫೆನ್ಸ ಇಲಾಖೆಯಲ್ಲಿ ಟೆಲಿಫೋನ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.  ಧರ್ಮಪತ್ನಿ ಶ್ರೀಮತಿ ಪುಷ್ಪಾ ಇವರಿಗೆ ಬರುವಣಿಗೆಯತ್ತ ಹೆಚ್ಚಿನ ಒಲವು ಆದರೂ ಪತಿಯ ಸಂಗೀತ ಕಾರ್‍ಯಕ್ರಮದಲ್ಲಿ ಇವರ ಸಹಕಾರವಿದ್ದೇ ಇದೆ.  ವಿನಾಯಕರ ಸಂಗೀತ ಸೇವೆ ನಿರಂತರವಾಗಿ ಸಾಗಿದೆ. ಇವರ ಸಂಗೀತವನ್ನು ಗುರುತಿಸಿ ಬೇರೆ ಬೇರೆ ಸಂಘ ಸಂಸ್ಥೆಯವರು  ಈ ಹಾಡು ಹಕ್ಕಿಗೆ ಹೆಚ್ಚೆಚ್ಚು ಅವಕಾಶಗಳನ್ನು ನೀಡವಂತಾಗಲಿ.

ವಿನಾಯಕ ಅವರು ಬಾಯಿ ತೆರೆದರೆ ’ಆ ಹರಿಯ ಕೃಪೆ………ಭಗವಂತನ ಆಶಿರ್ವಾದ………….ಎಲ್ಲವೂ ಅವನದೇ …………..’ ಎಂದು ಆಕಾಶದೆಡೆ ಕೈ ಮಾಡುವ ಇವರಿಗೆ ಭಗವಂತ ಆಯುರಾರೋಗ್ಯದೊಂದಿಗೆ, ಸಂಗೀತ ಕ್ಷೇತ್ರದಲ್ಲಿ ಹೆಸರನ್ನು ತಂದುಕೊಡಲೆಂದು ಹಾರೈಸೋಣ. ಮುತಾಲಿಕ ದೇಸಾಯಿಯವರ ವಿಳಾಸ ಈ ಕೆಳಗಿನಂತಿದೆ.

ವಿದ್ಯಾಧರ ಎ. ಮುತಾಲಿಕದೇಸಾಯಿ
(ದಾಸರ ಪದಗಳ ಗಾಯಕರು)
ಮ.ನಂ. ೮೩೪, ಶಂಕರ ಪಾರ್ವತಿ ಅಪಾರ್ಟಮೆಂಟ್,
ಪಂಚಾಮೃತ ಹೊಟೇಲ ಹತ್ತಿರ, ಮರಾಠಾ ಕಾಲೋನಿ, ಬೆಳಗಾವಿ.
ಮೊ: ೯೯೮೦೨೪೩೦೪೪ ದೂ:೦೮೩೧-೨೪೨೩೩೦೧

***** 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Praveen.Kulkarni
Praveen.Kulkarni
9 years ago

Sir. Really  Mr .Vinayak.MD great personallity, god bless you for future

1
0
Would love your thoughts, please comment.x
()
x