ಹಾದಿ ದೂರವಿದೆ ಇನ್ನೂ, ಭವ್ಯ ಭಾರತಕ್ಕೆ: ಪ್ರಶಸ್ತಿ ಪಿ.

ಮುಂದುವರೆಯೋ ಮುನ್ನವೇ ಹೇಳಿಬಿಡುತ್ತೇನೆ. ಇದು ಬರಹಕ್ಕೆ ಕೇಸರಿ, ಹಸಿರು ಅಥವಾ ಇನ್ಯಾವುದೇ ಬಣ್ಣ ಬಳಿಯೋ ಪ್ರಯತ್ನವಲ್ಲ. ಕಮಲ, ಹಸ್ತ, ಆನೆ, ಕತ್ತಿ, ಪೊರಕೆ ಅಥವಾ ಇನ್ಯಾವುದೇ ಚಿನ್ನೆ ತೊಡಿಸೋ ಪ್ರಯತ್ನವಲ್ಲ.  ಧರ್ಮ, ರಾಜ್ಯ, ಪಕ್ಷಗಳೆಂಬ ಬೇಧಗಳ ಹೊರಬಂದು ವಾಸ್ತವದ ಅನಿವಾರ್ಯತೆಗಳೇನಿದೆಯೆಂಬುದನ್ನು ಬಿಂಬಿಸೋ ಅಗತ್ಯವಷ್ಟೇ .ಮೂವತ್ತು ವರ್ಷಗಳ ಕಿಚಡಿ ಸರ್ಕಾರಗಳ ನಂತರ ಕೊನೆಗೂ ಭಾರತಕ್ಕೊಂದು ಸುಭದ್ರ ಸರ್ಕಾರ ಸಿಕ್ಕಿದೆ. ಕಾಂಗ್ರೆಸ್ಸಾಗಲಿ, ಭಾಜಪಾವೇ ಆಗಲಿ. ಆದ್ರೆ  ಸದಾ ಸ್ಟ್ರೈಕೇ ಮಾಡೋ ಕಮ್ಯೂನಿಸ್ಟು, ಮಾರ್ಕಿಸ್ಟು, ಲೆಫ್ಟಿಸ್ಟುಗಳ ಕಾಲು ಹಿಡಿಯೋ ಕರ್ಮದ ಚಿತ್ರಾನ್ನ ಸರ್ಕಾರ ಬರದಿರಲಪ್ಪಾ ಅನ್ನೋ ಹಿಂದಿನ ಸರ್ಕಾರಗಳ ಕಂಡು ರೋಸಿ ಹೋಗಿದ್ದ ಸಾಮಾನ್ಯ ಮತದಾರನ ಬೇಡಿಕೆ ಕೊನೆಗೂ ಈಡೇರಿದಂತಾಗಿದೆ. ಕಾವೇರಿ ನೀರು ಬಿಡು, ಇಲ್ಲಾಂದ್ರೆ ಬೆಂಬಲ ವಾಪಾಸ್ಸೆನ್ನುತ್ತಾ ಪ್ರತಿನಿತ್ಯ ಗೋಳು ಕೊಡುತ್ತಿದ್ದ ಅಮ್ಮಾಳಿಂದ ಅಟಲ್ಜೀ  ಎಷ್ಟು ನೊಂದಿದ್ರೋ, ಸರ್ಕಾರದೊಳಗಿದ್ದೂ ಪ್ರತಿಪಕ್ಷದಂತೆ ವರ್ತಿಸುತ್ತಿದ್ದ ಲೆಫ್ಟಿಸುಗಳ ಕಾಟದಿಂದ ಮನಮೋಹನರು ಹತ್ತು ವರ್ಷದಲ್ಲಿ ಎಷ್ಟು ರೋಸಿಹೋಗಿದ್ದರೋ ಅವರೇ ಹೇಳಬಲ್ಲರು. ಕೊನೆಗೂ ಈ ಸಮ್ಮಿಶ್ರರ ಕಾಟವಿಲ್ಲದೇ ಸ್ವತಂತ್ರವಾಗಿ ತನ್ನ ಕಾನೂನುಗಳ ತರಬಲ್ಲ ಸರ್ಕಾರವೊಂದು ಬಂದಿದೆ. ೨ಜೀ, ೩ಜೀ, ಆದರ್ಶ ಮನೆ, ಕಾಮನ್ ವೆಲ್ತು ಹೀಗೆ ಹಲತರದ ಹಗರಣಗಳಿಂದ ಬೇಸತ್ತ ಮತದಾರ ಬದಲಾವಣೆಯತ್ತ ಮುಖ ಮಾಡಿದ್ದಾನೆ. 

ದೇಶದ ಉನ್ನತಿಗೆ ದುಡಿಯಬೇಕಾದ ಎಂಪಿಯಾಗಬೇಕಂದ್ರೆ ಕನಿಷ್ಟಪಕ್ಷ ಡಿಗ್ರಿಯಾದ್ರೂ ಆಗಿರಬೇಕು. ಅದಿಲ್ಲದವರೆಲ್ಲಾ ಹೋದ್ರೆ ಬರೀ ಹಗರಣ ಮಾಡೋದೇ ಆಗತ್ತೆ ಅನ್ನೋದು ಕೆಲವರ ಹೇಳಿಕೆಯಾದ್ರೆ ಹೆಚ್ಗೆ ಓದಿದವರೆಲ್ಲಾ ರಾಜಕೀಯಕ್ಯಾಕೆ ಬರ್ತಾರ್ರಿ ? ತಮ್ಮ ಹೊಟ್ಟೆಪಾಡು ನೋಡ್ಕೊಂಡು ಆರಾಮಾಗಿರ್ತಾರೆ. ಬೆಂಗಳೂರಲ್ಲಿ ಐಟಿಯವ್ರು ಓಟಾಕಿದ್ದು ನೋಡಲಿಲ್ವಾ ? ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ರಾಜಕೀಯಕ್ಕೆ ನಿಂತ್ರೂ ಸೋಲಲಿಲ್ವಾ ಅನ್ನೋದು ಉಳಿದವರ ಅಣಕು. ಆದ್ರೆ ಈ ಬಾರಿ ವೃತ್ತಿಯಿಂದ ಡಾಕ್ಟರಾದವ್ರು, ಓದಿ ಡಾಕ್ಟರೇಟ್ ಪಡೆದವ್ರು ಸ್ಪರ್ಧಿಸಿದ್ದು, ಗೆದ್ದು ಬಂದಿದ್ದು ಕಮ್ಮಿಯೇನಲ್ಲ. ಉದಾಹರಣೆಗೆ: ಆಂಧ್ರದಿಂದ ಡಾಃ ಪಾಂಡುಲ ರವೀಂದ್ರ ಬಾಬು,ತೆಲಂಗಾಣದಿಂದ ಡಾಃ ಬೂರಾ ನರಸಿಯ್ಯ ಗೌಡ, ಪ್ರೊ: ಅಜ್ಮೀರ ಸೀತಾರಾಂ ನಾಯಕ್, ಬಿಹಾರದಿಂದ ಡಾಃ  ಸಂಜಯ ಜಯಸ್ವಾಲ್, ಬಿಹಾರದಿಂದ ಡಾಃ ಅರುಣ್ ಕುಮಾರ್, ಚತ್ತೀಸ್ ಘರದಿಂದ ಡಾಃ ಬಂಶೀಲಾಲ್ ಮಹ್ತೋ , ದೆಲ್ಲಿಯಿಂದ ಡಾ: ಉದಿತ್ ರಾಜ್ ಗೆದ್ದಿದ್ದಾರೆ. ರಾಜ್ಯದಲ್ಲಿ ಬರೀ ಒಬ್ಬೊಬ್ಬರು ಗೆದ್ದರೆ ಅದು ದೊಡ್ಡ ಸಾಧನೆಯಾ ಎಂದು ಕೇಳ್ತಿದ್ದೀರಾ ? ಸ್ವಲ್ಪ ತಡೀರಿ.ಉತ್ತರಪ್ರದೇಶಕ್ಕೆ ಈ ಬಾರಿ ಅತೀ ಹೆಚ್ಚು ಡಾಕ್ಟರನ್ನು ಕೊಟ್ಟ ಶ್ರೇಯ. ಅಲ್ಲಿ ಡಾಃ ಸಂಜೀವ್ ಕುಮಾರ್ ಬಲ್ಯಾನ್, ಡಾಃ ನೇಪಾಲ್ ಸಿಂಗ್, ಡಾಃ ಯಶವಂತ್ ಸಿಂಗ್, ಡಾಃ ಮಹೇಶ್ ಶರ್ಮಾ, ಡಾಃ ರಾಂ ಶಂಕರ್ ಕಟಾರಿಯಾ, ಡಾಃ ಸತ್ಯಪಾಲ್ ಸಿಂಗ್ ಡಾಃ ಮಹೇಂದ್ರ ನಾಥ ಪಾಂಡೆ, ಗೆದ್ದಿದ್ದಾರೆ. ಅದೇ ತರ ಗುಜರಾತಿನಿಂದ  ಡಾ: ಕೀರ್ತಿ ಸೋಲಂಕಿ,ಡಾ: ಭಾರ್ತಿ ಬೇನ್ ಶಿಯಾಲ್, ಡಾ: ಕೆ.ಸಿ, ಪಟೇಲ್ ಗೆದ್ದಿದ್ದಾರೆ. ಗುಜರಾತೇನೋ ಮೋದಿ ಮೋಡಿ. ಉಳಿದಲ್ಲಿ ಅಂದ್ರಾ ? ಜಮ್ಮು ಕಾಶ್ಮೀರದಲ್ಲಿ ಡಾಃ ಜಿತೇಂದ್ರ ಸಿಂಗ್ ಕೇರಳದಲ್ಲಿ  ಡಾಃ ಎ, ಸಂಪತ್, ಮಧ್ಯಪ್ರದೇಶದಲ್ಲಿ ಡಾಃ ಭಗೀರತ್ ಪ್ರಸಾದ್ ಪ್ರೊಃ ಚಿಂತಾಮಣಿ ಮಾಲ್ವಿಯ, ಡಾಃ ವೀರೇಂದ್ರ ಕುಮಾರ್ ಗೆದ್ದಿದ್ದಾರೆ. ಇಷ್ಟೇ ಅಲ್ಲ.ಮಹಾರಾಷ್ಟ್ರದಿಂದ ಡಾಃ ಭಾಮ್ರೆ ರಾಮರಾವ್, ಡಾಃ ಶ್ರೀಕಾಂತ್ ಶಿಂಧೆ, ಪ್ರೊಃ ಗಾಯ್ಕವಾಡ್ ರವೀಂದ್ರ ವಿಶ್ವನಾಥ, ಡಾಃ ಸುನೀಲ್ ಗಾಯಕ್ವಾಡ್ ಗೆದ್ದಿದ್ದಾರೆ. ದೂರದ ಮಣಿಪುರದಿಂದ ಡಾಃ ತೋಕ್ಚೋಮ್ ಮೈನಾ, ಒರಿಸ್ಸಾದಿಂದ ಡಾಃ ಪ್ರಭಾಸ್ ಸಿಂಗ್, ಪಂಜಾಬಿಂದ ಡಾಃ ಧರಂ ವೀರ್ ಗಾಂಧಿ, ಪ್ರೊಃ ಸಾಧು ಸಿಂಗ್,ಪಶ್ಚಿಮ ಬಂಗಾಳದಿಂದ  ಡಾಃ ಕಕಲಿ ಘೋಷ್ ದೋಸ್ತಿದಾರ್, ಡಾಃ ರತ್ನ ಡೇ , ಡಾಃ ಮಮ್ತಾಜ್ ಸಂಘಮಿತ ಹೀಗೆ ರಾಜ್ಯ, ಪಕ್ಷ, ಧರ್ಮಾತೀತವಾಗಿ ಗೆದ್ದಿದ್ದಾರೆ. ಉಫ್ ಸುಸ್ತಾಯ್ತಾ ? ಇದು ಗೆದ್ದವರ ಹೆಸರಷ್ಟೆ. ಚುನಾವಣೆಗೆ ಸ್ಪರ್ಧಿಸಿದವರ ಬಗ್ಗೆಯೆಲ್ಲಾ ಬರೆಯಹೊರಟರೆ ಈ ಇಡೀ ಲೇಖನವೂ ಸಾಲೋಲ್ಲ.

ಅಂದ ಮಾತ್ರಕ್ಕೆ ಗೆದ್ದವರೆಲ್ಲಾ ಸುಭದ್ರರೆಂದಲ್ಲ.  ಗಲಭೆಗಳ, ಹಗರಣಗಳ ಹಣೆಪಟ್ಟಿ ಹೊತ್ತವರನ್ನೂ ಗೆಲ್ಲಿಸಿದ್ದಾರೆ ಜನ. ಆದರದು ಮತ್ತೊಮ್ಮೆ ಅದೇ ತಪ್ಪನ್ನು ಪುನರಾವರ್ತಿಸಲೆಂದಲ್ಲ. ಈ ಬಾರಿಯಾದರೂ ಆ ತಪ್ಪು ತಿದ್ದಿಕೊಂಡು ದೇಶೋದ್ದಾರ ಮಾಡಲೆಂದು.ಅಂದ ಹಾಗೆ ಈ ಬಾರಿ ಗೆದ್ದವರೆಲ್ಲಾ ಹಳೇ ತಲೆಗಳು ಎಂದೂ ಅಲ್ಲ. ಒಂಭತ್ತು ಬಾರಿ ಎಂಪಿ ಆಗಿ ಹತ್ತನೇ ಬಾರಿ ಗೆದ್ದು ದಾಖಲೆ ಬರೆಯಲು ಹೊರಟಿದ್ದ ಮಾಣಿಕ್ ರಾವ್ ಗವಿತ್ತನ್ನ ಸೋಲಿಸಿದ ಹೀನಾ ಗವಿತ್, ಮೊದಲ ಬಾರಿ ಗೆದ್ದಂತಹ ಪ್ರತಾಪ್ ಸಿಂಹ, ಕಿರಣ್ ಕೇರರಂತಹ ಹಲವು ಹೊಸ ಮುಖಗಳು ಜನರ ಮನದಾಳದಲ್ಲಿದ್ದ ಬದಲಾವಣೆಯ ಅನಿವಾರ್ಯತೆಯನ್ನು ತೆರೆದಿಟ್ಟಿದೆ. ವ್ಯಕ್ತಿಪೂಜೆ ಅಥವಾ ಟೀಕೆಗಳಿಗೆ ಈ ಲೇಖನವನ್ನು ಮೀಸಲೀಡದೆ ಬರಲಿರುವ ಸರ್ಕಾರದ ಮುಂದಿರೋ ಸವಾಲುಗಳತ್ತಲೂ ಕೊಂಚ ಗಮನಹರಿಸೋಣ.

ಬೆಲೆಯೇರಿಕೆ, ಜಿ.ಡಿ.ಪಿ, ರುಪಾಯಿಯ ಮೌಲ್ಯಾವಗಣನೆ ಮತ್ತು ದೇಶದ ಸುರಕ್ಷತೆ ಸದ್ಯಕ್ಕಿರುವ ಸವಾಲುಗಳೆನಿಸುತ್ತೆ. ಒಂದು ಕಡೆ ನಾಗಾಲ್ಯಾಂಡ್, ಅಸ್ಸಾಂ, ಮಣಿಪುರ ನಮ್ಮದು ಎನ್ನುತ್ತಲೇ ಶಾಂತಿ ಮಾತುಕತೆಗೆ ಬರುವ ಚೀನಾ ಮತ್ತೊಂದೆಡೆ ಭಾರತದ ಗಡಿವರೆಗೂ ಯಾವುದೇ ಕ್ಷಣದಲ್ಲಿ ಧಾವಿಸಲು ಸಹಕರಿಸುವಷ್ಟು ಸುಸಜ್ಜಿತ ಹೆದ್ದಾರಿ ನಿರ್ಮಿಸಿದ. ಕಾಶ್ಮೀರವನ್ನು ನಮಗೆ ಬಿಟ್ಟುಕೊಡದಿರುವುದೇ ನಮ್ಮ ನಿಮ್ಮ ನಡುವಿನ ಅಶಾಂತಿಯ ಮೂಲ. ಅದೊಂದು ಅಸಮಧಾನ ಬಿಟ್ಟರೆ ನಾವು ಶಾಂತಿ ಪ್ರಿಯರಪ್ಪಾ ಅಂತ ಒಂದೆಡೆ ಬಿಳಿಬಾವುಟ ಹಾರಿಸುತ್ತಲೇ ಮತ್ತೊಂದು ಬದಿಯಿಂದ ನಮ್ಮ ಯೋಧರ ಮೇಲೆ ಅಪ್ರಚೋದಿತವಾಗಿ ಗುಂಡು ಹಾರಿಸೋ ಪಾಕಿಗಳು. ಒಂದೆಡೆ ಪಾಕಿ ಸೈನಿಕರ ಗುಂಡು, ಹೋಗಲಿ ಬಿಡಿ ಅವರಿಗಾದ್ರೂ ಹೊಟ್ಟೆಪಾಡು, ಆದ್ರೆ ಈ ಭಯೋತ್ಪಾದಕರು ? ಮುಗ್ದ ಮಕ್ಕಳ ಮನಸ್ಸು ಕೆಡಿಸಿ ಅವರನ್ನು ಅಲ್ಕೈದಾ, ಹಿಜ್ಬುಲ್ ಮುಜಾಹಿದ್ದೀನ್ ಅಥವಾ ಮತ್ತೊಂದೇನೋ ಹೊಸ ಹೊಸರ ಸಂಘಟನೆ ಕಟ್ಟಿ ಅದರ ದಂಡನಾಯಕನನ್ನಾಗಿಸಿ ಭಾರತದ ಗಡಿಯೊಳಗೆ ನುಸುಳಿಸುವುದರಲ್ಲೇನಿದೆ ಹೊಟ್ಟೆಪಾಡು ? !! ಆ ಉಗ್ರರ ಸಂಘಟನೆ ಕಟ್ಟೋದಕ್ಕೆ, ಅವರ ಮದ್ದುಗುಂಡುಗಳಿಗೆ ಅಂಥ ಸುರಿಯೋ ದುಡ್ಡನ್ನೇ ಪಾಕಿಸ್ತಾನ ಅದರ ಉದ್ದಾರಕ್ಕೆ ತೊಡಗಿಸಿದ್ದರೆ ಅದರ ಬಡತನವೂ ನಿರ್ಮೂಲನೆಯಾಗುತ್ತಿತ್ತು. ಆ ಉಗ್ರರ ಸದೆಬಡೆಯಲೆಂದೇ ಕಮ್ಯಾಂಡೋಗಳ ಪಡೆಕಟ್ಟಿ, ದೇಶದ ಪ್ರತೀ ರಾಜಕಾರಣಿಗಿಗೂ ಗುಂಪುಗಟ್ಟಲೇ ಸೆಕ್ಯೂರಿಟಿ ಕೊಡಲು ತೊಡಗಿಸುವ ಭಾರತದ ದುಡ್ಡೂ ಉಳಿಯುತ್ತಿತ್ತು. ಆದ್ರೆ ಇದನ್ನ ಒಳ್ಳೇ ಮಾತಲ್ಲಿ ಹೇಳಿದ್ರೆ ಪಾಕಿಗಳಿಗೆ ಅರ್ಥ ಆಗಲ್ವೇ ? ಇನ್ನು ಬಾಂಗ್ಲಾ ಗಡಿ, ಕೆಳಗಿನ ಶ್ರೀಲಂಕಾದ ಜಲಗಡಿಯಲ್ಲಿ ನಿತ್ಯದ ತಮಿಳರ ಮತ್ತು ಶ್ರೀಲಂಕಾ ಮೀನುಗಾರರ ಜಗಳ. ಇಷ್ಟೇ ಸಾಲದೆಂಬಂತೆ ದೇಶದಲ್ಲಲ್ಲಿ ಉಲ್ಪಾ ಉಗ್ರಗಾಮಿಗಳು, ನಾಗಾ ಬಂಡುಕೋರರು, ನಕ್ಸಲೈಟರು, ಬಿಹಾರದ ದಂಗೆಕೋರರು. .. ಒಂದೇ ಎರಡೇ ? ಹೊರಗಿನವರು ಒಳನುಸುಳಿ ಬಾಂಬಿಡುತ್ತಿದ್ದಾರೆಂದರೆ ಹೊಟ್ಟೆಕಿಚ್ಚೆನ್ನಬಹುದು. ಆದರೆ ಇವರಿಗೇನನ್ನೋಣ ? ಇವರೆಲ್ಲರ ಹುಟ್ಟಿಗೆ ಒಂದಲ್ಲೊಂದು ಸಮಸ್ಯೆಗಳೇ ಕಾರಣ. ಜಮೀನಿನ ಒಡೆಯರು ಕೂಲಿಗಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಈ ಅನ್ಯಾಯವನ್ನು ಸರಿಪಡಿಸಲೆಂದೇ ನಾವು ಹುಟ್ಟಿದ್ದೇವನ್ನೋದು ನಕ್ಸಲೈಟರ ಅಂಬೋಣ. ಸಮಸ್ಯೆಗಳನ್ನು ಪರಿಹರಿಸೋದೇ ಸರ್ಕಾರದ ಕೆಲಸ . ಆ ಸರ್ಕಾರವೇ ಮೂಕವಾಗಿ, ಕಿವುಡವಾಗಿ ಮಲಗಿಬಿಟ್ಟರೆ ? ಸರ್ಕಾರದ ಯೋಜನೆಗಳು, ಪ್ಯಾಕೇಜುಗಳು ಹಳ್ಳಿಹಳ್ಳಿಗಳ ಮೂಲೆಗೂ ತಲುಪುವಂತಾಗಬೇಕು. ಓದುವವರ ನಡುವೆ ಗೋಡೆಯೆಬ್ಬಿಸೋ ಮೀಸಲಾತಿಯಿಂದಲೂ ಯಾರಿಗಾದರೂ ಲಾಭವಾಗಬೇಕೆಂದರೆ ಅದು ಈಗಾಗಲೇ ಪಟ್ಟಣಗಳಲ್ಲಿರುವ ಕೆನೆಪದರದವರಿಗಾಗದೇ ಹಳ್ಳಿಮೂಲೆಯಲ್ಲಿರುವ ಪ್ರತಿಭಾವಂತರಿಗಾಗಬೇಕು. ಮಾಡಲು ತಕ್ಕ ಕೆಲಸ, ಆ ಕೆಲಸಕ್ಕೆ ತಕ್ಕ ಪ್ರತಿಪಲ ಸಿಕ್ಕರೆ ಯಾರು ತಾನೆ ಬಂಡೇಳುತ್ತಾರೆ ಸ್ವಾಮಿ ? ಇನ್ನು ದೇಶದ ರಕ್ಷಣಾ ವ್ಯವಸ್ಥೆ. ನಾವು ಯಾರ ಮೇಲೂ ಯುದ್ದ ಸಾರೋಲ್ಲವೆಂದ ಮಾತ್ರಕ್ಕೆ ಉಳಿದವರು ನಮ್ಮ ಮೇಲೆ ಯುದ್ದ ಸಾರಬಾರದು ಎಂದೇನಿಲ್ಲ. ಉದಾಃ ನಾನು ಸಸ್ಯಹಾರಿ ಹುಲಿ ತಿನ್ನೋಲ್ಲ ಅಂದ ಮಾತ್ರಕ್ಕೆ ನಾನು ಹುಲಿಯ ಕೈಗೆ ಸಿಕ್ಕರೂ ಅದು ನನ್ನ ತಿನ್ನೋಲ್ಲ ಎಂದೇನಿಲ್ಲ. ಇಂತಹ ಕಾಡುಹುಲಿಗಳು ನಮ್ಮ ಕೊಟ್ಟಿಗೆಯ ದನ ತಿನ್ನೋಕೆ ಬಂದಾಗ ಹುಲಿ ಸಾಯಿಸಲಿಕ್ಕಲ್ಲದಿದ್ದರೂ ಹೆದರಿ ಓಡಿಸಿ ಜೀವ ಉಳಿಸಿಕೊಳ್ಳಲಿಕ್ಕಾದರೂ ಬಂದೂಕುಗಳು ಬೇಕು. ಅದೇ ಮೀನು ಹಿಡಿಯಲು ಹೋದವರನ್ನು ಇನ್ಯಾವುದೇ ತಿಮಿಂಗಿಲ ಬಂದು ತಿನ್ನದಂತೆ ರಕ್ಷಿಸಲು ಅವರ ಬಳಿಯೂ ಸಲಕರಣೆಗಳು ಬೇಕು. ವಿಪರ್ಯಾಸ ನೋಡಿ. ಹೊಸ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಲಾಗದಿದ್ದರೂ ನಿರ್ವಹಣೆಯ ಕೊರತೆಯಿಂದ 
ಇರುವ ಜಲಾಂತರ್ಗಾಮಿಗಳನ್ನೂ ಕಳೆದುಕೊಳ್ಳುತ್ತಿದ್ದೇವೆ. ಐ.ಎನ್.ಎಸ್ ವಿಕ್ರಾಂತದ ಸಾಲು ಸಾಲು ದುರಂತಗಳನ್ನು ನೋಡಲಿಲ್ಲವೇ. ಇದನ್ನೆಲ್ಲಾ ತಪ್ಪಿಸಬೇಕೆಂದರೆ ಒಬ್ಬ ದಿಟ್ಟ ನಾಯಕ, ಭದ್ರ ರಕ್ಷಣಾ ಮಂತ್ರಿ ಬೇಕು. ಸುಭದ್ರ ಸರ್ಕಾರ ಇರಬೇಕು.. ಸುಭದ್ರ ಸರ್ಕಾರವೆಂತೂ ಸಿಕ್ಕಿದೆ. ಉಳಿದದ್ದು ಏನಾಗತ್ತೋ ಮುಂದೆ ನೊಡೋಣ.

೨೦೦೯ ರಲ್ಲಿ 8.3 ಹತ್ತರಲ್ಲಿ 10.3 ಮುಟ್ಟಿದ್ದ ಜಿ.ಡಿ.ಪಿ ಆಮೇಲೆ ಇಳಿಯುತ್ತಲೇ ಸಾಗಿದೆ. 2011 ರಲ್ಲಿ ಅಮೇರಿಕಾದ ಮೇಲಿನ ಧಾಳಿಯಿಂದ ಭಾರತದ ಆರ್ಥಿಕತೆಯೂ ಕುಸಿದಿತ್ತು.ಪರಿಣಾಮ ಜಿ.ಡಿ.ಪಿ 6.6, ಆದ್ರೆ  ೨೦೧೨ ವಿಶ್ವದ ಆರ್ಥಿಕ ವ್ಯವಸ್ಥೆಗಳು ಮೇಲೆದ್ದರೂ ಭಾರತವು ಮೇಲೇಳಲೇ ಇಲ್ಲ . ಅದು ಮುಟ್ಟಿದ್ದು ೪.೩. ಅದರಿಂದೀಚೆಗೂ ಜಿ.ಡಿ.ಪಿ ಐದರ ಆಸುಪಾಸಿನಲ್ಲೇ ಇದೆ. ೨೦೧೧-೧೨ರಲ್ಲಿ ಭಾರತದ ವಿದೇಶೀ ವ್ಯಾಪಾರ ೩೦% ಹೆಚ್ಚಿ ೭೯೨ ಬಿಲಿಯನ್ ಮುಟ್ಟಿದ್ರೂ ಅದರಲ್ಲಿದ್ದ ಆಯಾತ ಅರವತ್ತೊಂದು ಪ್ರತಿಶತ.  ನಿರ್ಯಾತ ಮೂವತ್ತೆಂಟು ಪ್ರತಿಶತ . ಪರಿಣಾಮ ದೇಶದ ಜಿ.ಡಿ.ಪಿ ಕುಸಿತ, ರುಪಾಯಿ ಮೌಲ್ಯ ಕುಸಿತ ಮತ್ತು ದೇಶದ ಮೇಲಿನ ಸಾಲದ ಹೆಚ್ಚಳ. ಇವೆಲ್ಲದರ ಪರಿಣಾಮ ಬೆಲೆಯೇರಿಕೆ. ಐವತ್ತರಲ್ಲಿದ್ದ ಪೆಟ್ರೋಲು ಏರಿ ಎಂಭತ್ತು ಮುಟ್ಟಿತು. ಹದಿನೈದರ ಆಸುಪಾಸಿದ್ದ ಅಕ್ಕಿದರ ಮೂವತ್ತು ಮುಟ್ಟಿತು. ಆದ್ರೆ ಇವೆಲ್ಲಕ್ಕೆ ಅನುಗುಣವಾಗಿ ಸಂಬಳ ಜಾಸ್ತಿ ಆಯ್ತೆ ? ಬೆಲೆಯೇರಿಕೆಯ ರೇಟಿಗೆ ಹೋಲಿಸಿದ್ರೆ ಇಲ್ಲವೆಂದೇ ಹೇಳಬೇಕು. ಮೆಜೆಸ್ಟಿಕ್ಕಿಂದ ಮಾರತ್ತಳಿಗೆ ಎರಡು  ವರ್ಷಗಳ ಹಿಂದೆ ಇದ್ದ ಅರವತ್ತು ರೂಪಾಯಿ ಈಗ ತೊಂಭತ್ತಾಗಿದೆಯೆಂದ್ರೆ ಇನ್ನೇನಾದ್ರೂ ಹೆಚ್ಚಿಗೆ ಹೇಳಬೇಕೇ ? ಇವೆಕ್ಕೆಲ್ಲಾ ಕಡಿವಾಣ ಹಾಕಲೇಬೇಕು. ಮತ್ತದು ಶೀರ್ಘವೇ ಆಗಬೇಕು.ಹೀಗೆ ಪಟ್ಟಿ ಮಾಡುತ್ತಾ ಹೋದರೆ ಸಮಸ್ಯೆಗಳು ಒಂದೆರಡಲ್ಲ. ನಿರುದ್ಯೋಗ, ಬಡತನ, ಗ್ರಾಮದಿಂದ ನಗರಗಳತ್ತ ವಲಸೆ ಹೀಗೆ ಹಲವೆಂಟು. ಇವೆಲ್ಲಕ್ಕೂ ಒಂದೆರಡು ದಿನಗಳಲ್ಲಿ ಪರಿಹಾರ ತರಲು ಮೋದಿಯೇನು ಜಾದೂಗಾರನಲ್ಲ. ಅವರು ಮುಂಚೆಯೇ ಹೇಳಿದಂತೆ ಅವರ ಸಹಾಯಕರು, ಅಧಿಕಾರಿಗಳು ಕೆಲಸ ಮಾಡುತ್ತಾ ಹೋಗುತ್ತಾರೆ. ಇವರು ಅದನ್ನೆಲ್ಲಾ ನೊಡಿಕೊಳ್ಳುವ ಉತ್ತಮ ವ್ಯವಸ್ಥಾಪಕರಷ್ಟೇ. ಭಾರತದಲ್ಲೂ ಅಷ್ಟೆ. ಪ್ರತಿಭೆಗಳಿಗೆ ಕೊರತೆಯಿಲ್ಲ. ಆದ್ರೆ ಆ ಪ್ರತಿಭೆಗಳ ಸೂಕ್ತ ದಿಕ್ಕಿನಲ್ಲಿ ಸಂಯೋಜಿಸುವ ನಾಯಕತ್ವದ ಕೊರತೆಯಷ್ಟೆ. ಗುಜರಾತಿನಲ್ಲಿ ಯಶಸ್ವಿಯಾದ ನಾಯಕತ್ವ ದೇಶದ ಮಟ್ಟದಲ್ಲೂ ಯಶಸ್ವಿಯಾಗಲೆಂಬ ನಿರೀಕ್ಷೆಯಲ್ಲಿ ಸದ್ಯಕ್ಕೊಂದು ವಿರಾಮ..

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ವನಸುಮ
10 years ago

ಉತ್ತಮ ಬರಹ. ನಮ್ಮ ದೇಶದಲ್ಲಿ ಅದೆಷ್ಟು ಸಮಸ್ಯೆಗಳಿವೆ ಅಲ್ಲವೇ.? ಬದಲಾವಣೆಯ ಸಮಯ ಬಂದಿದೆ ಅಂತ ಅನಿಸುತ್ತಿದೆ, ಕಾದು ನೋಡೋಣ.

 

1
0
Would love your thoughts, please comment.x
()
x