ಹುದುಗಲಾರದ ದುಃಖ ಹುದುಗಿರಿಸಿ ನಗೆಯಲ್ಲಿ
ನಸು ನಗುತ ಬಂದೆ ಇದಿರೋ..
ಇನಿತು ತಿಳಿಯದ ಮೂಢನೆಂದು ಬಗೆದೆಯೋ ನನ್ನ.
ಹೀಗೆ ಕಿವಿ ಮೇಲೆ ಬೀಳುತ್ತಿರುವ ಹಾಡನ್ನು ಕೇಳುತ್ತಾ ..ನಮಗೆ ನಾಳೆ ಪರೀಕ್ಷೆ ಎನ್ನೋದನ್ನೇ ಮರೆತು ಬಿಟ್ಟಿದ್ದೆ..ಪುಸ್ತಕವನ್ನು ಮಡಚಿ ಬದಿಗಿಟ್ಟು ಕೇಳುತ್ತ ಕೂರುವುದೊಂದೇ ಕೆಲಸ..ಈ ಹಾಡುಗಳು ಎಂತಹ ವಿಚಿತ್ರ ಅಲ್ವಾ? ಮನಸಿನ ಒಂದಷ್ಟು ದುಃಖವನ್ನು ನೋವನ್ನು ಮರೆಯಿಸುವ ಶಕ್ತಿಯಿದೆ. ಭಾವಗೀತೆಗಳನ್ನು ಕೇಳುವಾಗ ನನ್ನ ಬಗ್ಗೆಯೇ ಬರೆದಿದ್ದಾರೆಯೋ ಎನ್ನಸುವಷ್ಟು ಹತ್ತಿರದಿಂದ ಅನುಭವಿಸಿದ್ದುಂಟು.. ಅದೇ ಆ ಒಂಟಿ ರೂಂನಲ್ಲಿ ಹಾಡಿನ ನೆನಪುಗಳ ಕಲರವಗಳಿವೆ.. ನಾನು ಒಂಟಿಯೆಂದೆನಿಸಿದಾಗಲೆಲ್ಲಾ ಈ ಪದ್ಯಗಳು, ಕಿವಿಯಲ್ಲಿ ಬಂದು ಸಣ್ಣಗೆ ಹೇಳುತ್ತವೆ.. ನೀ ಒಂಟಿಯಲ್ಲ ನಿನ್ನ ಜೊತೆಗೆ ನಾನಿರುವೆ ಎಂದಿಗೂ ಎಂದು..ಮೊದಲ ಮುಂಗಾರು ಮಳೆಯಲ್ಲಿ ಹನಿಗಳ ಜೊತೆಗೂಡಿದ ನನ್ನದೇ ಧ್ವನಿಯ ಸಾಲುಗಳು. ಬ್ಯಾಟರಿ ಲೋ ಎಂದು ಬರುವವರೆಗೂ ಇಯರ್ ಫೋನ್ ಸಿಗಿಸಿಕೊಂಡು ಆಚೆ ಈಚೆ ತಿರುಗುವುದು ಒಂದು ದಿನಚರಿಯೇ ಆಗಿಬಿಟ್ಟಿದೆ.
ಬೆಳಗ್ಗೆ ಎದ್ದ ಕೂಡಲೇ ಮೂಡಲ ಮನೆಯಾ ಮುತ್ತಿನ ನೀರಿನ ಎರಕ್ಕವಾ ಹೋಯ್ದ ದ.ರಾ ಬೇಂದ್ರೆಯವರ ಸಾಲುಗಳು ನಗುವಿನೊಂದಿಗೇ ದಿನವನ್ನು ಆರಂಭ ಮಾಡಿಬಿಡುತ್ತದೆ..ಏನೋ ಯೋಚಿಸುತ್ತ ಇರುವ ಕಂಗಳಲ್ಲಿ ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದಂತೆ ನನ್ನೆದೆಯ ಕಡಲೇಕೇ ಬೀಗುತಿಹುದು ಎಂಬ ಭಾವಪರವಶ ಸಾಲುಗಳು.. ಏನೋ ತೋಚದೇ ಇದ್ದಾಗ, ಜಗತ್ತಿನ ಎಲ್ಲರಿಗೂ ಸುಳ್ಳು ಹೇಳಿದರೂ ನಮ್ಮದೇ ಮನಸ್ಸಿಗೆ ಸುಳ್ಳು ಹೇಳಲು ಅಸಾಧ್ಯವೇ ಸರಿ. ಮುಚ್ಚುಮರೆಯಿಲ್ಲದೆಯೆ ನಿನ್ನ ಮುಂದೆಲ್ಲವನೂ ಬಿಚ್ಚಿಡುವೆ ಓ ಗುರುವೇ ಅಂತರಾತ್ಮ ಪಾಪವಿದೆ ಪುಣ್ಯವಿದೆ ನರಕವಿದೆ ನಾಕವಿದೆ ಎಂಬಂತಹ ಸಾಲುಗಳು ಒಂದರೆಕ್ಷಣ ಮನಸ್ಸಿಗೆ ಮೇಟದ ಅಂಟನ್ನು ಒರೆಯಿಸಿಬಿಡುತ್ತದೆ.. ಮನಸ್ಸಿನ ಮುಂದೆ ಸತ್ಯವನ್ನೇ ಹೇಳಬೇಕೆಂಬ ಆಶಯದಲ್ಲಿ..
ಪ್ರೀತಿ ಪ್ರೇಮಗಳ ಕನಸು ಕಾಣುವಾಗ ನಿನ್ನ ಮುಖ ನೋಡೀ ಸುಪ್ರಭಾತ ಹಾಡಿ ಮುಂಜಾನೆಯನ್ನು ಸ್ವಾಗತಿಸುವಾಸೆ ಇಷ್ಟೇ ಸಾಕು.. ಅರ್ಧದಿನಗಳು ಹೃದಯದ ಗೀತೆಗಳಲ್ಲಿ ಮುಳುಗಿ ಹೋಗಲು.. ನನ್ನ ಮುಖವನ್ನೇ ನೋಡಿ ನನ್ನವನು ಮುಂಜಾನೆಯನ್ನು ಸ್ವಾಗತಿಸಬೇಕೆಂಬ ದುರಾಸೆಯವಳು ನಾನು..ಒಂದೊಂದು ಶಬ್ದಗಳಲ್ಲಿಯೂ ನನ್ನನ್ನೇ ನಾ ಮತ್ತಷ್ಟು ಪ್ರೀತಿಸಿಕೊಂಡಿದ್ದೇನೆಜೀ॒ವನದಲ್ಲಿ ಏನೋ ಕಳೆದುಕೊಂಡಾಗ ಏನಾಗಲೀ ಮುಂದೆ ಸಾಗು ನೀ ಬಯಸಿದ್ದೆಲ್ಲಾ ಸಿಗದು ಬಾಳಲಿ ಎಂಬ ಹಾಡಿನ ಸಾಲುಗಳಿಗೆ ಜೀವನಪ್ರೀತಿಯನ್ನು ಹೆಚ್ಚಿಸಿಕೊಂಡಿದ್ದೇನೆ.. ಜೊತೆಗೇ ಇದ್ದ ಗೆಳತಿಯನ್ನು ಬೀಳ್ಕೊಡುವಾಗ ಮತ್ತೆ ಮತ್ತೆ ಕಣ್ಣೀರಾಗುವ ಇಷ್ಟು ಕಾಲ ಒಟ್ಟಿಗಿದ್ದು, ಎಷ್ಟು ಬೆರೆತರೂ ಅರಿತೆವೇನು ನಾವು ನಮ್ಮ ಅಂತರಾಳವ ಎಂದೇ ಗುನುಗುನುಗಿಸಿಕೊಂಡಿರುವೆ..ಬೇಸರವಾದಾಗ, ಖುಷಿಯಾದಾಗ, ಎಲ್ಲ ಭಾವನೆಗಳು ಏದುಸಿರು ಬಿಡುತ್ತಿರುವಾಗ ಮೈಸೂರು ಅನಂತಸ್ವಾಮಿಯವರ ಹಾಡಿನಲ್ಲಿ ಕಳೆದುಹೋಗಿದ್ದೇನೆ..
ಈ ಹಾಡುಗಳೇ ಹೀಗೆ.. ಮಣಿಕಾಂತ್ ಅವರ ಹಾಡುಹುಟ್ಟಿದ ಸಮಯ ಪುಸ್ತಕವನ್ನು ಓದುವಾಗ ಅಚ್ಚರಿಯಾಗಿರದೇ ಇಲ್ಲ.. ಒಂದೊಂದು ಹಾಡುಗಳನ್ನು ರಚಿಸುವಾಗ ಎಂತಹ ಅದ್ಭುತ ಅನುಭವಗಳೋ, ಹಾಡಿನ ಬಗೆಗಿನ ಪ್ರೀತಿಯೋ ಎಂದು ಅರಿಯದೇ ನವಿರಾದ ಸಾಲುಗಳನ್ನು ಮತ್ತೆ ಮತ್ತೆ ಓದಿದ್ದುಂಟು..ನನ್ನ ಧ್ವನಿಯು ಹಾಡನ್ನು ಪ್ರೀತಿಸಿಬಿಡುತ್ತದೆ..ನಾಲ್ಕು ಜನರ ಮುಂದೆ ಹಾಡನ್ನು ಹಾಡುವಾಗ ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ ಎಂಬ ಅದೇ ಸುಂದರ ಎದೆ ತುಂಬಿ ಹಾಡುವೆನು ಹಾಡಿನ ಸಾಲನ್ನು ನೆನಪಿಸಿಯೇ ಹೇಳುವುದು.. ವಿಚಿತ್ರವೆಂದರೆ ದಿನದ ಮೂಡ್‌ಗಳೆಲ್ಲಾ ಹಾಡಿನ ಸಾಲಿನ ಮೇಲೆಯೇ ಅವಲಂಬಿತವಾಗಿರುತ್ತದೆಯೆಂದರೆ ತಪ್ಪಾಗಲಾರದು..ಇಷ್ಟದ ಹಾಡನ್ನು ಕೇಳಿದಾಗ ಗೊತ್ತಿಲ್ಲದೇ ತುಟಿಯು ಪಿಟಿಪಿಟಿಸುವುದುಂಟು..
ಮತ್ತೆ ಮತ್ತೆ ಕೇಳಿದ ಹಾಡನ್ನು ಹತ್ತು ಬಾರಿ ಕೇಳಿದರೂ ಬೇಸರ ಬರಲಾರದಷ್ಟು ಖುಷಿಯನ್ನು ನೀಡುತ್ತದೆ ಹಾಡುಗಳು… ಅಮ್ಮನ ಜೋಗುಳದಿಂದ ಹಿಡಿದು, ರತ್ತೋ ರತ್ತೋ ರಾಯನ ಮಗಳೇ ಬಿತ್ತೋ ಬಿತ್ತೋ ಭೀಮನ ಮಗಳೇ ಹಾಡಿನವರೆಗೂ ನೆನಪುಗಳಿವೆ.. ಒಂಡು ಎರಡು ಬಾಳೆಲೆ ಹರಡು, ಮೂರು ನಾಲ್ಕು ಅನ್ನವ ಹಾಕು ಎಂದು ಒಂದನೇ ಕ್ಲಾಸಿನಲ್ಲಿ ಟೀಚರ್ ಎದ್ದು ನಿಲ್ಲಿಸಿ ಬಾಯಿಪಾಠ ಮಾಡಿಸಿದ ಹಾಡನ್ನು ಮತ್ತೆ ಬಾಲ್ಯದ ಕಡೆಗೆ ತಿರುಗಿ ಹೇಳಬೇಕೆಂಬ ಭಾವ ಮರಳಿ ಮರೆಯಾಗಿ ತೆರಳಿ ತೆರೆಯಾಗಿ ಮನದ ದಡಕ್ಕೆ ಏನೇನೋ ನೆನಪುಗಳೂ ಈ ಹಾಡಿನಿಂದ.. ಹಾಡಿನ ಭಾವನೆಗಳಿಂದ..ಹೇಳದೆಯೇ ಕೇಳದೆಯೇ ಬಹುದೂರ ಸಾಗಿಬಿಡತ್ತದೆ ಮನಸಿನಾಳದ ಯೋಚನೆಗಳು..
ಬಸ್ಸಿನಲ್ಲಿ ಒಬ್ಬಂಟಿಯಾಗಿ ಹೋಗುವಾಗ ಒಬ್ಬನೇ ನಕ್ಕಿದ್ದನ್ನು ನೋಡಿ ಜನ ಏನು ಅಂದುಕೊಂಡರೋ.. ಹಾಡನ್ನು ಕೇಳುತ್ತ ಕೇಳುತ್ತ ನಕ್ಕುಬಿಟ್ಟೆ.. ಸ್ನೇಹಿತರೆಲ್ಲಾ ಬಿಟ್ಟು ಹೋಗುವಾಗ ವಿ.ಮಿಸ್ ಆಲ್ ದಿ ಫನ್ ಎಂದು ನನ್ನೊಳಗಿನ ಪ್ರತಿಧ್ವನಿಗಳು ಆಲಾಪಿಸಿದ್ದುಂಟು..
ಹಾಡಿನ ಲೋಕವು ಎಂತಹ ಅದ್ಭುತ ಅಲ್ವಾ? ಸೋತ ಮನಸ್ಸಿಗೆ ಸ್ಫೂರ್ತಿಯನ್ನು ನೀಡುವ ಶಕ್ತಿಯಿದೆ. ಗೆದ್ದ ಮನಸುಗಳಿಗೆ ಖುಷಿಪಡಿಸುವ ತಾಕತ್ತಿವೆ.. ಜೀವನವೇ ಬೇಡವೆಂಬ ನಿರಾಶಾವಾದಿಗಳಿಗೆ, ಆಶಾವಾದಗಳತ್ತ ಕೊಂಡೊಯ್ಯುವ ಅಮೂರ್ತತೆಯಿದೆ. . ಬಾಲ್ಯದ ನೆನಪುಗಳನ್ನು ಅರಳಿಸುವ, ಕೆಟ್ಟ ನೆನಪುಗಳನ್ನು ಕೆರಳಿಸುವ, ಪ್ರೀತಿಯನ್ನು ಹುಟ್ಟಿಸುವ ಎಲ್ಲಾ ಅನನ್ಯ ಶಕ್ತಿಗಳಿವೆ ಈ ಭಾವಬರಿತ ಹಾಡಿನಲ್ಲಿ.. ಎಷ್ಟೋ ಬಾರಿ ನಾವು ಕಳೆದು ಹೋಗುವಷ್ಟು ಅದ್ಬುತ ಪ್ರಪಂಚವದು.. ಹಾಡಿನಲ್ಲಿ ಭಾವಗಳ ಗುಚ್ಛಗಳಿವೆ..
*****
ಚೆನ್ನಾಗಿದೆ. ನಿಜಕ್ಕೂ ಹಾಡುಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳಂತೆ ಆಗಿವೆ. ನಾನೂ ಕೂಡ ಅದೆಷ್ಟೋ ಬಾರಿ ಹಾಡಿನ ಗುಂಗಿನಲ್ಲಿ ಮುಳುಗಿರುತ್ತೇನೆ. ತುಂಬಾ ಬೇಸರವಾದಾಗ ಕೇಳೊ ಶಾಸ್ತ್ರೀಯ ಸಂಗೀತ ಕೂಡ ಮನಸ್ಸಿಗೆ ಮುದವನ್ನ ನೀಡುತ್ತದೆ.
ಶುಭವಾಗಲಿ.
ಸಂಗೀತಕ್ಕೆ ಪರಪಂಚವನ್ನೇ ಮರುಳುಮಾಡೋ ಶಕ್ತಿ ಇದೆ .ಸಂಗೀತಕ್ಕೆ ಸೋಲದವರಿಲ್ಲ,ಸಂಗೀತದಿಂದ ಮನಸು ಕೆಡಿಸಿಕೊಂಡವರಿಲ್ಲ.ಯಾಕೆಂದರೆ ಮನಸು ಸೋತಾಗಲೋ,ಬೇಜಾರಿನಲ್ಲಿದ್ದಾಗಲ್ಲೆಲ್ಲಾ ಸಂಗೀತವೇ ನಮ್ಮ ಸಂಗಾತಿಯಾಗಿರುತ್ತದೆ.ಭಾವಗೀತೆಗಳಂತೂ ನಿಜಕ್ಕೂ ಭಾವಪರವಶವಾಗಿಸಿಬಿಡುತ್ತವೆ…
ಶುಭವಾಗಲಿ…….!!