ಹಾಗೇ ಸುಮ್ಮನೆ ಅವನಿಗೊಂದಷ್ಟು ಅವಳ ಮಾತುಗಳು: ಅನುರಾಧ ಪಿ. ಸಾಮಗ

anuradha p samaga

ಬಿರುಸಾದ ಗಾಳಿ. ಹಿತವೂ ಅಲ್ಲದ ಅಹಿತವೂ ಅಲ್ಲದ ಶೈತ್ಯ. ಬಿಸಿಲ ಸುಳಿವೇ ಇಲ್ಲದೊಂದು ಹಗಲು. ಸುತ್ತಲಿನ ಸಂಬಂಧಗಳ ಸಂತೆಯಲ್ಲಿ ನನ್ನ ಇರುವಿಕೆ ಮತ್ತದರ ಮೌನ, ಆಪ್ತತೆಯೆಡೆ ನನದೊಂದು ವಿಚಿತ್ರ ಉದಾಸೀನ ಇವೆಲ್ಲವೂ ನಿಜವಾಗಲೂ ಜಾಡ್ಯಕ್ಕೋ, ಮಂಪರಿಗೋ ಎಡೆ ಮಾಡಿಕೊಡಬೇಕಾಗಿತ್ತು. ಆದರೆ ಇಂದು ಮನದಲ್ಲಿ ಹುಡುಕಿದರೂ ಅಸಹನೀಯವಾದದ್ದಕ್ಕೆ ಒಂದಿಷ್ಟೂ ಜಾಗವಿಲ್ಲ. ಯಾಕಿರಬಹುದು?! ಕ್ಷಣಕ್ಕೊಂದಷ್ಟರಂತೆ ಹಲವು ವಿಷಯಗಳು ಮನಃಪಟಲದಲ್ಲಿ ಹಾದುಹೋದವು. ಆದರೆ ಮುಚ್ಚಿದ ಕಣ್ಣ ಮುಂದಿದ್ದುದೊಂದೇ ಅಸ್ಪಷ್ಟ ಬಿಂಬ, ಅದು ನಿನ್ನದು. ಸುಂದರಸ್ವಪ್ನವಾಗಬಹುದಾದದ್ದು ಎಷ್ಟು ಹೊತ್ತಿಗೆ ಮುಗಿದೀತೋ ಅನ್ನುವ ಭಯಂಕರ ಭಯವೆನಿಸಿದ್ದು ನಿನ್ನ ದೆಸೆಯಿಂದ ಅಂತ ನಿನ್ನೆಯಷ್ಟೇ ನಿನ್ನ ದೂರಿದವಳೇನಾ ನಾನು, ಅನ್ನುವುದು ನನದೇ ಆಶ್ಚರ್ಯ. 
    
ಇರಲಿ ಬಿಡು, ನಿನ್ನ ಬಗೆಗೆ ಯೋಚಿಸಿದಾಗಲೆಲ್ಲಾ ನನಗೆ ಹೊಳೆಯುವುದು ಕವನ. ಅದೆಷ್ಟು ಬರೆದೆನೋ, ಅದೆಷ್ಟು ಅಳಿಸಿದೆನೋ, ಅದೆಷ್ಟು ಅರ್ಪಿಸಿದೆನೋ, ಅದೆಷ್ಟು ಅಡಗಿಸಿದೆನೋ ನನಗೇ ಲೆಕ್ಕ ಇಲ್ಲ. ಆದರೆ ಒಂದಂತೂ ನಿಜ, ನಾನೆಂದರೆ ಅದಷ್ಟೇ ಅಲ್ಲ, ಇದೂ ಹೌದು ಎಂದು ನನ್ನ ವ್ಯಕ್ತಿತ್ವದ ಅಡಗಿ ಕೂತಿದ್ದೊಂದು ಮಗ್ಗುಲನ್ನು ನನಗೆ ಪರಿಚಯಿಸಿಕೊಟ್ಟದ್ದು ನೀನು. ನಿನ್ನೆಯೂ ನಿದ್ದೆ ದೂರ ಹೋದಾಗ, ಹಿಡಿಯ ಬಯಸಿ ನಾನೂ ಓಡಿಓಡಿ ಸಾಕಾಗುತ್ತಿದ್ದಾಗ ಹೊಳೆದದ್ದು ಮತ್ತೆ ಒಂದಷ್ಟು ಸಾಲುಗಳು. ಆ ಸೋತುಹೋದ ಗಳಿಗೆಯ ಮಾತುಗಳನ್ನೇನು ಕೇಳುತ್ತೀಯ ಬಿಡು. ಹೇಳುವುದೇನು ಬಂತು, ನಾನವನ್ನು ಹಾಳೆಯ ಮೇಲುದುರಲೂ ಬಿಡದೆ, ಹೊಸಕಿಹಾಕಿದೆ.     
    
ಅಂದೊಮ್ಮೆ ಕೈಗೂಡಿದ ನನ್ನ ಭ್ರಮೆ ಕಳಚಿಕೊಳ್ಳುವ ಹೊತ್ತು.. ನೀನು ಕೈಗೂಡಿದ್ದುದೊಂದು ಕೈಜಾರಿ ಹೋಗುತ್ತಿದೆ ಎಂಬ ದುಃಖದಲ್ಲಿದ್ದೆ.
 
ನೀನಾದರೋ ಕೈಜಾರಿ ಹೋದುದರ ಅಳಲನ್ನು ಸಾಲುಗಳಾಗಿಸಿ ನನಗೆ ಒಪ್ಪಿಸುತ್ತಿದ್ದೆ. ಸಮಾನದುಃಖಿಗಳಲ್ಲದಿದ್ದರೂ, ದುಃಖ ಇಬ್ಬರನ್ನೂ ಬಾಧಿಸುತ್ತಿದೆ ಎಂಬೊಂದೇ ಸಮಾನತೆಯಿಂದ ಪರಿಚಯದ ಪರಿಧಿಯೊಳಬಂದೆವು. ಅದು ಇಂದಿನ ಈ ಹಂತಕ್ಕೆ ನಾನು ಬರಲು ವಿಧಿಸಲ್ಪಟ್ಟ ವಿಧಿವಿಧಾನ ಅಂತನೇ ಹೇಳಬಹುದು. ಇನ್ಯಾವ ಕಾರಣವನ್ನೂ ಆರೋಪಿಸಲಾರೆ. ಎದುರಾದುದು ಹೂವೋ ಹಾವೋ ಆಮೆಯಂತೆ ಚಿಪ್ಪಿನೊಳ ಸೇರಿಹೋಗುತಿದ್ದ ನನ್ನತನ ಅಂದಿನ ದಿನಗಳಲ್ಲಿ ಎಗ್ಗಿಲ್ಲದೇ ನಿನ್ನ ಕಡೆ ವಾಲತೊಡಗಿ, ಪ್ರಕಟವಾಗಿ, ತೆರೆದುಕೊಂಡು, ಮುಂದೊಂದು ಹಂತದಲ್ಲಿ ಸಮರ್ಪಿತವಾದದ್ದರಲ್ಲಿ ಯಾವುದೇ ಅದೃಶ್ಯ ಶಕ್ತಿಯ ಕೈ ಇಲ್ಲವೆಂದು ಅದು ಹೇಗೆ ಭಾವಿಸಲಿ ಹೇಳು! ಚೆಲುವಿಗಿಂತ, ಬೌದ್ಧಿಕತೆಗಿಂತ, ಪಾಂಡಿತ್ಯಕ್ಕಿಂತ, ವ್ಯಕ್ತಿತ್ವದ ಇನ್ನ್ಯಾವುದೇ ಅಂಗಕ್ಕಿಂತ ಅದರೊಳಗೆ ಅಡಕ ಅಥವಾ ಅಭಿವ್ಯಕ್ತ ನೋವು, ಸತ್ಯ ಮೆಚ್ಚುವವರನ್ನು ತುಂಬಾ ಆಕರ್ಷಿಸುತ್ತದೆ- ಇದು ನಾನು ನನ್ನ ಅನುಭವದ ಮೂಲಕ ಕಂಡುಕೊಂಡದ್ದು. ಯಾಕೆಂದರೆ ನೋವಿನಲ್ಲಿರುವಷ್ಟು ಸತ್ಯ ಮತ್ತು ಅದರ ಅಭಿವ್ಯಕ್ತಿಯಲ್ಲಿ ಶಕ್ತಿಯುತವಾಗಿ ಅದು ಹೊರಹೊಮ್ಮುವಲ್ಲಿನ ನೈಜತೆ, ಸಹಜತೆ ಇನ್ನೆಲ್ಲೂ ಕಂಡುಬರಲಾರದು- ಇದು ನನ್ನ ತೀರಾ ವೈಯುಕ್ತಿಕ ಅನುಭವ. ಯಾಕೆ ತೀರಾ ಅಂತ ಒತ್ತು ಅಂದರೆ ಎಂದಿನಂತೆ ಇಂದೂ ಪುನಃ "ಹಾಗೇನೂ ಇರಬೇಕಾಗಿಲ್ಲ" ಅಂತನೋ ಅಥವಾ "ಅದು ಹಾಗಲ್ಲ" ಅಂತನೋ ಅನ್ನುತ್ತೀಯ, ನನಗೆ ಗೊತ್ತು. 
    
ಸಂಪರ್ಕಗಳೆಲ್ಲ  ಸಂಬಂಧಗಳಾಗವೆಂಬುದು ನನ್ನ ಅನುಭವ. ಕೆಲವೊಂದು ಪರಿಚಯಗಳು ಆಪ್ತತೆಯ ಕಡೆ ಮುಖ ಹಾಕಿಯೂ ನೋಡುವುದಿಲ್ಲ, ಹೊರಳಿಕೊಂಡು, ತೆವಳಿಕೊಂಡು ಜೀವನದುದ್ದಕ್ಕೂ ಜೊತೆಗಿರುತ್ತವೆ, ಕೆಲವು ಆಪ್ತತೆಯತ್ತ ಮುಖ ಮಾಡಿ ದಯನೀಯವಾಗಿ ಯಾಚಿಸುತ್ತಲೇ ಸಾಗಿ ಬರುತ್ತವೆ, ಇನ್ನು ಕೆಲವು ಆಪ್ತತೆಯ ಆಸುಪಾಸಿನ ಇನ್ಯಾವುದೋ ಒಂದು ಘಟ್ಟ ತಲುಪಿ ಅಲ್ಲೇ ಸಂತೃಪ್ತಿ ಹೊಂದಿ ನಿಲ್ಲುತ್ತವೆ. ಕೆಲವೊಂದು ಅನೈಚ್ಛಿಕ ಕ್ಷಣವೊಂದರ ಹಿಡಿಗೆ ಸಿಕ್ಕಿ ಅಪ್ಪಚ್ಚಿಯೇ ಆಗಿ ಹೋಗುತ್ತವೆ. ಆದರೆ ಎಲ್ಲೋ ಕೆಲವು ಅಪ್ರಯತ್ನ ಆಪ್ತತೆಯನ್ನು ಬಳಿಸಾರಿ, ಹಠಾತ್ತನೆ ಅಪ್ಪುತ್ತವೆ, ಮೆಲುವಾಗಿ ಹಣೆ ಚುಂಬಿಸಿ ನಿನ್ನ ನೋವಿಗೆಂದೇ ನಾನು ಬಂದೆ ಅನ್ನುತ್ತಾ, ನೋವಿಂದ ಕುಗ್ಗಿದಾಗಲೆಲ್ಲ ಹೆಗಲಾಗಿಯೋ, ಕಣ್ಣೀರಿಗೊಂದು ಕರವಸ್ತ್ರವಾಗಿಯೋ ಒದಗುತ್ತವೆ. ಇವಿಷ್ಟರ ಬಗ್ಗೆ ಗೊತ್ತಿತ್ತು ಇತ್ತೀಚೆಗೆ ಇನ್ನೂ ಒಂದರ ಪರಿಚಯವಾಯಿತು. ಅದೇನೆಂದರೆ ನೋವಿನ ಮೂಲಕ ಬಳಿಬಂದು ನೋವನ್ನೇ ಸೇತುವೆಯಾಗಿಸಿ ಆಪ್ತತೆಯನ್ನು ತಲುಪಿ, ಬಿಡಿಸಲಾಗದ ಬಂಧಗಳು ಅನ್ನುವುದಕ್ಕಿಂತಲೂ ಗಂಟುಗಳಾಗುತ್ತವೆ, ಬೇಕೆಂದರೂ ಬಿಡಿಸಿಕೊಳ್ಳಲಾಗದ ಕಗ್ಗಂಟುಗಳು, ಮತ್ತು ನೋವನ್ನೇ ಕೊಡುತ್ತಾ ಆಪ್ತತೆಯ ತೀವ್ರತೆ ಹೆಚ್ಚಿಸಿಕೊಳ್ಳುತ್ತವೆ. ಕಣ್ಣೀರನ್ನೀಯುತ್ತಾ ಹಣೆ ಚುಂಬಿಸುತ್ತವೆ. 
     
ಬಳಿಸಾರಿದ ನಿನ್ನ ನೋವನ್ನು ನಾ ಬರಸೆಳೆದಪ್ಪಿ ಮುದ್ದಿಸಿದೆ,ಎದೆಯೊಳಗೆ ಭರಪೂರ ಬೆಚ್ಚನೆಯ ಆಶ್ರಯವಿತ್ತೆ, ಮತ್ತೆ ಅಂದಿನಿಂದ ಇಂದಿನವರೆಗೆ ಅಸಾಧ್ಯ ಗೌರವದಿಂದ ನಿನ್ನನ್ನು ಪ್ರೀತಿಸುತ್ತಲೇ ಬಂದೆ. ಯಾಕೆ …ಅನ್ನುವುದು ನನಗೇ ಗೊತ್ತಿಲ್ಲ, ಗೊತ್ತಾಗಬೇಕಿಲ್ಲ. ನನ್ನಲ್ಲಿ ಪ್ರಶ್ನೆಗಳು ಬಹುಪಾಲು ಹುಟ್ಟುವುದೇ ಇಲ್ಲ, ಹುಟ್ಟಿದರೂ ಗಲಾಟೆ ಮಾಡುವುದಿಲ್ಲ, ಉತ್ತರಕಾಗಿ ಪೀಡಿಸುವುದಿಲ್ಲ, ಕಾಯುತ್ತವೆ, ಬಲು ಸಂಯಮದಿಂದ ಕಾಯುವ ಪ್ರಶ್ನೆಗಳು ನನ್ನವು. ಒಂದುವೇಳೆ ಉತ್ತರವೇ ಸಿಗಲಿಲ್ಲ ಅಂತಿಟ್ಟುಕೋ, ಅಂಥದ್ದೇ ಒಂದೇನಾದರೂ ಕೈಗಿತ್ತರೂ ಆಟಿಕೆಯ ಮೂಲಕ ಹಳೆಯ ಹಠ ಮರೆಯುವ ಕಂದನಂತೆ. ಅದಿರಲಿ, ಆ ದಿನಗಳಲ್ಲೇ ಒಂದು ತಪ್ಪು ಮಾಡಿದೆ, ನನ್ನಮ್ಮ ಯಾವಾಗಲೂ ಹೇಳುತ್ತಿದ್ದುದನ್ನು ಮರೆತುಬಿಟ್ಟು ನಡೆದುಕೊಂಡೆ. ಅದೇನಂದರೆ, ಸಂಕಟದಲ್ಲಿರುವವರನ್ನು ನೋಡಿ ಅಯ್ಯೋ ಪಾಪ ಅನ್ನುವುದು, ಅವರ ಕಷ್ಟವನ್ನು ನಾನೇ ಹೇಗಾದರೂ ಮಾಡಿ ಕಡಿಮೆ ಮಾಡುವೆ ಎಂದು ಹೊರಡುವುದೂ ಮಾಡಿದರೆ ಆ ಕಷ್ಟ ಬಂದು ನಮ್ಮನಂಟಿಕೊಳ್ಳುತ್ತದೆಯಂತೆ. ಹುರುಳಿಲ್ಲದ ಮಾತೆನಿಸಿದರೂ ಅರಿವಿಗೆ ಬರಲಾರದೊಂದು ಸಾಕ್ಷಿಪೂರ್ಣ ಸತ್ಯವದರಲ್ಲಿದೆ. ಇದು ನನ್ನ ಅನುಭವಕ್ಕೂ ಬಂದಿದೆ. ಈಗ ನೋಡು, ನಿನ್ನ ನೋವು ನಿನ್ನ ಕಾಡುತ್ತಿದೆ, ಲೋಕದ ಅದೆಷ್ಟೋ ನಿನ್ನವರು, ನಿನಗೆ ಬೇಕಾದವರು ಮಾಡುತ್ತಿರಬಹುದಾದ ನಿನ್ನ ನೋವಿನ ಕಣ್ಣೀರನ್ನು ಸಂತೋಷದ ನಗುವಾಗಿಸುವ ಯತ್ನದಲ್ಲಿ ನನದೊಂದು ಅಳಿಲ ಸೇವೆಯಿರಲಿ ಅಂದುಕೊಂಡೆ. ನೀನೆಸೆದ ಹಲ ಬಾಣಗಳನ್ನು ನನ್ನ ಪ್ರೀತಿಯ ಮೂಸೆಯಲ್ಲಿಳಿಸಿ ಪ್ರೀತಿಯದೇ ನಮೂನೆಗಳನ್ನಾಗಿಸಿದೆ. ನೀನೆಸೆದ ಹಲ ಕಲ್ಲುಗಳಲ್ಲಿ ನನ್ನ ನಿನ್ನ ಸಂಬಂಧದ ಶಿಲ್ಪಗಳನ್ನು ಕಡೆದು ಮನಸನ್ನು ಸಿಂಗರಿಸಿದೆ. ಅಂತೂ ನಾ ಹೇಗೆ ಬಯಸಿದ್ದೆನೋ ಹಾಗೆ ನಿನಗೊದಗತೊಡಗಿದೆ. ನಿನಗದು ಬಲವಂತದ ಮಾಘಸ್ನಾನದಂಥದ್ದೇನೋ ಆಗಿದ್ದಿರಬಹುದು. ನನ್ನೊದಗುವಿಕೆ ನಿನ್ನ ಎದೆಯನ್ನು ಬಿಡು, ಆಸುಪಾಸಿನವರೆಗೂ ತಲುಪಲಿಲ್ಲ ಅನ್ನುವುದೇ ನನ್ನ ದೊಡ್ಡ ನೋವಿಗೆ ಕಾರಣವಾದದ್ದು ಆಮೇಲಿನ ಮಾತು ಬಿಡು. 
    
ನಾನು ನಿನ್ನ ಹಚ್ಚಿಕೊಳ್ಳುತ್ತ ನಡೆದೆ, ನೀ ಒಂದು ಕೈ ನೋಡಿ ಕಳಚಿಕೊಳುವ ಹಂತದಲ್ಲಿದ್ದೆ. ನನಗಿದು ಅರಗಲಾಗದಾಯಿತು. ದಕ್ಕುವ, ದಕ್ಕದೇ ಉಳಿಯುವ ಮಾತೆಲ್ಲಿ ಬಂತು, ನಮ್ಮ ಕೈಯ್ಯಡುಗೆಯೇ ಹೊಟ್ಟೆಗೊಮ್ಮೊಮ್ಮೆ ದಕ್ಕದೇ ಹೋಗುವುದುಂಟು, ಅಂಥದ್ದರಲ್ಲಿ ಇನ್ನೊಂದು ಜೀವ ನಮಗೆ ದಕ್ಕುವ ಮಾತೆಲ್ಲಿಯದು? ಬಹುಶಃ ನಿನ್ನರ್ಥದಲ್ಲಿ ದಕ್ಕದುಳಿದುದಕ್ಕೆ ಕಾರಣ ನಾನಿದ್ದಲ್ಲಿಂದ ಹಠಾತ್ತನೆ ಎದ್ದು ನೀ ಕರೆದ ಜಾಗಕ್ಕೆ ನಾನು ಬಾರದೆ ಉಳಿದದ್ದು.  ನಿನ್ನ ಅಪೇಕ್ಷೆಯನ್ನು ನೀನು ವ್ಯಕ್ತ ಮಾಡುತ್ತಾ ನಡೆದೆ, ನಾನು ನನ್ನಿಂದ ಅದಾಗದು ಎಂದು ನಿನ್ನ ಮುಂದೆ ನನ್ನನುಳಿಸಿಕೊಳ್ಳಲು ಗೋಗರೆಯುತ್ತಲೇ ನಡೆದೆ. ಎಷ್ಟು ಮೂರ್ಖಳಾಗಿದ್ದೆ ನಾನು!!
     
ಬರಬೇಕಲ್ಲಪ್ಪಾ…. ಎಂದು ಬರುವದ್ದು ನನ್ನುಸಿರೇ ಆಗಿದ್ದರೂ ಅದು ಬಾರದುಳಿಯಲಿ ಎಂದು ಬಯಸುತ್ತಿದ್ದ ನಾನು ಬಲವಂತವಾಗಿ ನನ್ನುಸಿರಲ್ಲಿ ನಿನ್ನ ಆವಾಹಿಸಿಕೊಳ್ಳಲು, ನಿನ್ನ ಕುತ್ತಿಗೆಗೆ ಹಗ್ಗ ಹಾಕಿ ಎಳೆದಾದರೂ ಕರೆತಂದು ನನ್ನೆದೆಯಲ್ಲಿ ಬಂಧಿಸಿಟ್ಟುಕೊಳ್ಳಲು, ಎಲ್ಲದಕ್ಕಿಂತ ಹೆಚ್ಚಾಗಿ ನಿನ್ನ ನೋವಿಂದ ಪಾರಾಗುವಲ್ಲಿ ನಾನು ಉಪಯೋಗಕ್ಕೆ ಬರಬಲ್ಲೆನೇ ಎಂದಷ್ಟೇ ಯೋಚಿಸುತ್ತಿದ್ದ ನಿನ್ನ ನೇರ ಮನಸನ್ನು ನನ್ನ ವಕ್ರ ಸಾಲುಗಳೊಳಗೆ ಪ್ರತಿಷ್ಠಾಪಿಸಿ ಅತಿ ಆದರ್ಶದ ವೇಷ ಮೆತ್ತಬಯಸಲು, ನನ್ನ ಕವನಗಳನ್ನು ಉಪಯೋಗಿಸಿಕೊಂಡು ಬಿಟ್ಟೆ.. ಶತಾಯಗತಾಯ ನನಗೆ ನೀನೇನೋ, ಅದೇ ನಿನಗೆ ನಾನೆಂದು ಸಾಧಿಸಹೊರಟು ನನ್ನನ್ನೇ ನನಗೆ ಅಪರಿಚಿತ ಸ್ಥಾನದಲ್ಲಿ ನಿಲ್ಲಿಸಿ, ಮತ್ತೆ ನನ್ನ ಆ ಅಸಹಾಯಕತೆಗೆ ಯಾರನ್ನು ದೂರಲಿ ಎಂದು ಯೋಚಿಸುತ್ತಿದ್ದೆ. ಎಂಥಾ ಮೂಢತನವಲ್ಲವೇ?
    
ಪ್ರತಿದಿನ ಮುಂಜಾನೆ ಧ್ಯಾನದ ಹೊತ್ತು ಮನಸನ್ನು ತೀರಾ ಕಟ್ಟುಪಾಡಿಗೊಳಪಡಿಸಿ ಬಲುನಿಯಂತ್ರಿತ ಅನಿಸುವ ಬದಲು ಆಚೀಚೆ ಓಡಾಡ ಬಿಟ್ಟು, ತೀರಾ ಅಪಾಯದ ಮಗ್ಗುಲಲ್ಲಿ ಪುಟ್ಟ ಕಂದನಂತೆ ಪುಸಲಾಯಿಸಿ ಅದನ್ನು ಹಿಡಿದೆಳೆದು ಇತ್ತ ತರಲು ಯತ್ನಿಸುತ್ತಿದ್ದೆ. ಯಾಕೆಂದರೆ ನನ್ನ ಮನಸನ್ನು ನಾನು ತುಂಬಾ ಪ್ರೀತಿಸುತ್ತೇನೆ ಮತ್ತು ನಂಬುತ್ತೇನೆ. ಜಗತ್ತಿನ ನಾ ಕಂಡ ಅತಿ ಸುಂದರ ವಿಷಯಗಳ ಪೈಕಿ ಅದೂ ಒಂದು. ಜೊತೆಗೆ ತಾ ನೊಂದಾದರೂ ಇತರರನ್ನು ನೋಯಿಸುವುದಿಲ್ಲ ಅಂತ ಅತಿ ಪ್ರಾಮಾಣಿಕವಾಗಿ ಪ್ರಯತ್ನಿಸುವ ಸೂಕ್ಷ್ಮಪ್ರಕೃತಿಯದ್ದದು. ನನ್ನ ಆದೇಶವು ಕೈಗೂಡಿದ್ದು ನಿನ್ನೆ ನನ್ನ ಅನುಭವಕ್ಕೆ ಬಂತು ನೋಡು. 
    
ರಾತ್ರಿ ನಿದ್ದೆ ಬರದ ಕಾರಣ,  ನನ್ನ ನಿನ್ನ ನಡುವಿನ ಗೋಡೆಯೊಂದರ ಮೇಲೆ ಇಂದಿನ ನನ್ನ ನೋವಿನ ಕಾರಣವನ್ನಾರೋಪಿಸಿ ಕವನ ರಚಿಸತೊಡಗಿದೆ ನೋಡು. ಹಠಾತ್ತನೆ ಅವರಿವರಲ್ಲಿ, ಅದರಿದರಲ್ಲಿ ನನ್ನ ಇಂದುಗಳ ಕುರೂಪಕ್ಕೆ ಕಾರಣ ಹುಡುಕುವ ಬಗ್ಗೆ ನನಗೆ ಅಸಹ್ಯವೆನಿಸಿತು. ಅಂದಗೆಡಿಸಿಕೊಂಡ ವರ್ತಮಾನ ನನ್ನದು, ಅಂದಗೆಡಿಸಿದ್ದು ನಾನು, ಮತ್ತೊಮ್ಮೆ ಅಂದವಾಗಿಸಲು ಸಾಧ್ಯವಿರುವುದಾದರೆ ಅದೂ ನನಗಷ್ಟೇ ಅನಿಸಿತು. ಅಷ್ಟೇ…ಏನೋ ಅದಮ್ಯ ಚೈತನ್ಯ ಒಳಹೊಕ್ಕಂತಾಯಿತು. ಇದು ಈ ಗಳಿಗೆಗೆ ಅಗತ್ಯವೂ ಹೌದು ಮತ್ತು ಪ್ರಶಸ್ತವೂ ಹೌದು. ಮತ್ತೇನೂ ಯೋಚಿಸುವುದಿರಲಿಲ್ಲ, ನಾನು ಯೋಚಿಸಲೂ ಇಲ್ಲ.  ಮತ್ತೆ ನನ್ನ ಇವತ್ತಿನ ದಿನವನ್ನು ಸಿಂಗರಿಸುವ ನಿರ್ಧಾರ ತಳೆದೆ ಮತ್ತು ಮನಸಾರೆ ಅದೇ ಕಾಯಕದಲ್ಲಿ ತೊಡಗಿಕೊಂಡೆ. ಪ್ರಯತ್ನಿಸುತ್ತೇನೆ, ಚುರುಕು ಕಳಕೊಂಡಿರುವ ಕೈ, ಮಂದವಾಗಿರುವ ಸೌಂದರ್ಯದ ಪ್ರಜ್ಞೆ ಮಂಕಾಗಿರುವ ಮನಸುಗಳ ಜೊತೆ ಕ್ರಮಿಸಬೇಕಾದ ಹಾದಿ ತುಂಬಾ ಉದ್ದವಿದೆ, ದುರ್ಗಮವಾಗಿರುವಂತೆಯೂ ಇದೆ. ಆದರೆ ನಿಷ್ಠಾವಂತ ಪ್ರಯತ್ನ  ಮತ್ತು ನನ್ನ ಇಂದು ನನ್ನ ಕೈಯ್ಯಲ್ಲೇ ಇದೆ. ಅಲಂಕರಿಸಲು ಬೇಕಾದ ಆಸಕ್ತಿಯೂ ತಾಜಾಸ್ಥಿತಿಯಲ್ಲಿದೆ. ಈಗ ಮತ್ತು ಇನ್ನು ಮುಂದೆ ಅನ್ಯರ ನೋವು ಸಂಕಟಗಳಿಗೆ ಒದಗುವ ಮಹಾನತೆಯನ್ನು ಕಳಚಿಕೊಂಡು ಆ ಜಾಗದಲ್ಲಿ ನನ್ನ ಉದ್ಧಾರಕ್ಕೆ ಬೇಕಾಗುವ ಪುಟ್ಟಪುಟ್ಟ ಹೆಜ್ಜೆಯಿಡಲು ಬಯಸುತ್ತೇನೆ. 
    
ಹಾಗಾಗಿ ನಿನ್ನ ಮೇಲಿನ ನನ್ನ ಪ್ರೀತಿಯನ್ನು ಇಷ್ಟು ಹೊತ್ತೂ ಬಗೆಬಗೆಯ ರೂಪಗಳೊಳಗೆ ಹೊಗಿಸಿ, ನನ್ನ ಹಲವು ನಿರೀಕ್ಷೆಗಳ ಮಟ್ಟಕ್ಕದನ್ನೇರಿಸಲು ಒತ್ತಾಯಿಸಿ ಸತಾಯಿಸಿದ್ದು ಸಾಕು, ಇನ್ನು ಕೆಲ ಹೊತ್ತು ಅಲ್ಲೇ ನನ್ನೆದೆಯ ತೊಟ್ಟಿಲಲ್ಲಿ ಲಾಲಿ ಹಾಡಿ ಮಲಗಿಸುತ್ತೇನೆ. ಅದು ವಿಶ್ರಾಂತಿಯಿಂದೇಳುವಾಗ ನನ್ನ ಇಂದು ಸುಂದರವಾಗಿ ಅಲಂಕರಿಸಲ್ಪಟ್ಟಿರುತ್ತದೆ, ಆ ಅಂದದಲ್ಲಿ ಅದು ಮುಕ್ತವಾಗಿ ಬಾಳಲಿ.
 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Triveni
Triveni
6 years ago

tumbha adbhudatavigide sadyakke manssige hidida kannadiyagittu 

1
0
Would love your thoughts, please comment.x
()
x