ಹಸ್ತ ಬಲಿ: ಚೀಮನಹಳ್ಳಿ ರಮೇಶಬಾಬು


ಹಸ್ತ ಮಳೆ ಕಾಲಿಟ್ಟಾಗಿನಿಂದ ಒಂದು ದಿನವೂ ಮಳೆ ತಪ್ಪಿದ್ದಲ್ಲ. ಮುಂಜಾನೆ ಚಿಕ್ಕ ಚಿಕ್ಕ ಹತ್ತಿಯ ತುಂಡುಗಳಂತೆ ಗಾಳಿಯಲ್ಲಿ ತೇಲುತ್ತಾ ಸಾಗುವ ಮೋಡಗಳು ಬಿಸಿಲು ಏರಿದಂತೆಲ್ಲಾ ಸಾಂದ್ರವಾಗುತಾ, ಸೂರ್ಯ ಪಶ್ಚಿಮದ ಕಡೆ ಜಾರಿದಂತೆಲ್ಲಾ ಹಿಮಾಲಯದ ಬೆಟ್ಟಗಳ ರೀತಿ ಬೃಹದಾಕಾರ ತಳೆದು, ಪಡುವಣದ ಕೆನ್ನೆ ಕೆಂಪಾಗಾಗುತ್ತಿದ್ದಂತೆ ಕನಿಷ್ಠವೆಂದರೆ ಒಂದು ಹದ ಮಳೆಯಾಗುವುದು ಹಸ್ತ ಮಳೆ ಕಾಲಿಟ್ಟ ಗಳಿಗೆಯಿಂದ ನಡೆದು ಬಂದ ಮಾಮೂಲಿ ಕ್ರಿಯೆ. ಇನ್ನು ಅದರ ಸಮಯಪಾಲನೆಯೋ ಖಚಿತವಾಗಿ ಹೆಚ್ಚು ಕಮ್ಮಿ ಅದೇ ವೇಳೆಗೆ ಸುರಿಯುವ ಅದೂ ಕೂಡ ಒಂದು ನೈಸರ್ಗಿಕ ಗಡಿಯಾರವೆ. ಪ್ರತಿ ವರ್ಷವೂ ತಪ್ಪದೆ ಐದಾರು ಹದವಾದರೂ ಸುರಿಸುವ ಹಸ್ತ ರೈತರ ಬಾಯಲ್ಲಿ ಹಸ್ತವೆಂದರೆ ಅಭಯ ಹಸ್ತ ಎನ್ನುವಷ್ಟರ ಭರವಸೆಯ ಪ್ರತೀಕ.

ಬಯಲು ಸೀಮೆಯ ಮರಳುಗಾಡು ಎಂದೇ ಖ್ಯಾತಿ ಪಡೆದ ಆ ಜಿಲ್ಲೆಯ ಒಂದು ಮೂಲೆಗಿರುವ ಆನೂರಿನ ಜನಗಳು ಈ ವರ್ಷ ಅತಿ ಸಂಭ್ರಮದಿಂದ ಓಡಾಡುತ್ತಿದ್ದಾರೆ. ಉತ್ತರಿ ಮಳೆ ಸ್ವಲ್ಪ ಕೈಕೊಟ್ಟರೂ ಬೆಳೆಗಳಿಗೆ ಅಂತಹ ಕಷ್ಟವೇನೂ ಸಂಭವಿಸಲಿಲ್ಲ. ಉತ್ತರಿ ಮಳೆಯಲ್ಲಿ ಸ್ವಲ್ಪ ಕುಂಟಿತವಾಗಿದ್ದ ಬೆಳವಣಿಗೆ ಹಸ್ತ ಬರುತ್ತಿದ್ದಂತೆ ಯೂರಿಯಾ ಚೆಲ್ಲಿದ್ದರಿಂದ ಅದರ ಎರಡು ಪಟ್ಟು ಬೆಳೆದು ನಳ ನಳಿಸಿ ರೈತರ ಕಂಗಳಲ್ಲಿ ಕಾಮನ ಬಿಲ್ಲು ಬಿತ್ತಿದ್ದವು. ಕಡು ಹಸಿರು ಹೊಲಗಳ ಹಾಸಿ ಹೊದ್ದ ಭೂಮಿಯನ್ನು ಗಾಳಿ ಚುಂಬಿಸಿ ಸಾಗುವ ಪರಿಯೆ ಸೊಗಸು. ಹಿತಕರ ಗಾಳಿಯ ಸ್ಪರ್ಶಕ್ಕೆ ತಲೆಬಾಗಿ ಹರ್ಷಿಸುವ ಹೊಲಗಳ ಸೊಗಸು ನೋಡುತ್ತಿದ್ದರೆ ಯಾವುದೋ ದೇವಲೋಕದ ಸುಂದರಿಯೊಬ್ಬಳು ಆಗತಾನೆ ಧರೆಗಿಳಿದು ಮಲಗುವಂತೆ ಭಾಸವಾಗುತ್ತದೆ. ಬೆಳೆದು ನಿಂತ ಗರಿಗರಿ ರಾಗಿ ಪೈರು, ಮೋಹಕವಾಗಿ ಸಾಲುಗಳಲ್ಲಿ ಬೆಳೆದುನಿಂತ ಜೋಳ, ಸಜ್ಜೆ, ಹುಚ್ಚೆಳ್ಳು ಅಲ್ಲಲ್ಲಿ ಪುಟ್ಟ ಪುಟ್ಟ ಹಳದಿ ಹೂಗಳ ಹೊತ್ತ ಸಾಸುವೆ, ಎಲ್ಲವೂ ಅಲಂಕಾರವಾಗಿ ಗಾಳಿಯ ಸ್ಪರ್ಶಕ್ಕೆ ಹೊಲ ಬಾಗಿದಾಗ ಸುಂದರಿಯೊಬ್ಬಳು ನಾಚಿ ತಲೆತಗ್ಗಿಸುವಂತೆ ಕಾಣುವ ನೋಟ ಮೋಹಕ. ಕಳೆ ಕೀಳುವ ಕೆಲಸವೂ ಮುಗಿದಿರುವುದರಿಂದ ರೈತಾಪಿ ಜನ ಆದಷ್ಟು ಆರಾಮವಾಗಿಯೇ ಇದ್ದಾರೆ. ಬೆಳಿಗ್ಗೆ ಮತ್ತು ಸಂಜೆಯ ಹೊತ್ತು ಒಲೆ ಉರಿಸಲಿಕ್ಕೆ ಸೌದೆಪುಳ್ಳೆ, ಹಸು-ಎಮ್ಮೆಗಳಿಗೆ ಹುಲ್ಲು ಹೊಂದಿಸಿದರೆ ಬಹುಪಾಲು ಹೊರಗಿನ ಕೆಲಸ ಮುಗಿದಂತೆ. ಮಿಕ್ಕಂತೆ ನೆರೆಹೊರೆ ಹೆಂಗಸರೆಲ್ಲಾ ಒಂದು ಮನೆಯಲ್ಲಿ ಕೂತು ಹರಟುತ್ತಾ, ಗಂಡಸರೆಲ್ಲಾ ಊರ ರಾಮದೇವರ ಗುಡಿಯ ಮುಂದಿರುವ ಅರಳಿಕಟ್ಟೆಯ ಮೇಲೆ ಕುಳಿತು ಹರಟುತ್ತಾ ಕಾಲ ಕಳೆಯುವುದು ಅವರಿಗೆ ಪ್ರಿಯವಾದ ಕೆಲಸ.

ಆನೂರಿನಿಂದ ಗುಡ್ಡದ ಹಳ್ಳಿಗೆ ಸಂಪರ್ಕ ಮಾರ್ಗವಾಗಿ ಸರಳರೇಖೆಯಂತೆ ಮೈಹಾಸಿ ಮಲಗಿಕೊಂಡಿರುವ ರಸ್ತೆಯ ಒಂದು ಬದಿಗಿರುವ ತನ್ನ ಹೊಲದ ಬದುವಿನಲ್ಲಿ ಮೊನ್ನೆ ತಾನೆ ಮಳೆಯಲ್ಲಿ ನೆನೆದದ್ದರಿಂದ ನೆಗಡಿ ಹಿಡಿದು, ಮೂಗನ್ನು ಸೊರ್ ಸೊರ್ ಎಂದು ಎಳೆಯುತ್ತಾ ಕುಡುಗೋಲಿನಿಂದ ಹುಲುಸಾಗಿ ಬೆಳೆದಿರುವ ಹುಲ್ಲನ್ನು ಕಟಾವು ಮಾಡುತ್ತಿದ್ದಾಳೆ ನಾಗಿ. ಐದು ಗಂಟೆಯ ವೇಳೆಗೆ ಮಳೆ ಬರುವ ನಿರೀಕ್ಷೆ ಇರುವುದರಿಂದ ಆದಷ್ಟು ಬೇಗನೆ ಮನೆ ಸೇರಿಕೊಳ್ಳಬೇಕೆಂಬ ತವಕದಲ್ಲಿ ಬಿರಬಿರನೆ ಹುಲ್ಲು ಕೊಯ್ಯುವ ಕೆಲಸದಲ್ಲಿ ಮಗ್ನಳಾದಳು. ‘ಲೇ ನಾಗಿ…… ಆಗ್ಲೆ ಬೆಟ್ಟದ ಮ್ಯಾಕೆ ಮಳೆ ಇಳ್ದಿರೋದು ಕಾಣಕಿಲ್ಲೇನೆ. ಲಗೂನ ಎದ್ದು ಬಾ… ಊರು ಸೇರ್ಕಳುವಾ’ ಪಕ್ಕದ ಹೊಲದ ಲಕ್ಷ್ಮವ್ವ ಆಗಲೆ ಹುಲ್ಲು ಕೊಯ್ದು ಮನೆಯಿಂದ ತಂದಿದ್ದ ಹಗ್ಗದಲ್ಲಿ ಹುಲ್ಲನ್ನು ಕಟ್ಟುಮಾಡುತ್ತಾ ನಾಗಿಯನ್ನುದ್ದೇಶಿಸಿ ನುಡಿದಳು. ಕೊಯ್ಯುವುದರಲ್ಲೇ ಮಗ್ನಳಾಗಿದ್ದ ನಾಗಿ ಒಮ್ಮೆ ಎದ್ದು ನಿಂತು ದೂರದ ಬೆಟ್ಟದ ಕಡೆ ದಿಟ್ಟಿಸಿದಳು. ಆಗಲೆ ಬೆಟ್ಟದ ಮೇಲೆ ಮಳೆ ಹಿಡಿದು ಬೆಟ್ಟ ಮಸುಕು ಮಸುಕಾಗಿ ಕಾಣತೊಡಗಿತು. ಮಳೆ ಬರಲು ಇನ್ನೂ ಹತ್ತಿಪ್ಪತ್ತು ನಿಮಿಷವಾದರೂ ಹಿಡಿಯಬಹುದು, ಅಷ್ಟರೊಳಗೆ ಮತ್ತಷ್ಟು ಹುಲ್ಲು ಕೊಯ್ದು ಸೇರಿಸದರಾಯ್ತು ಎಂದುಕೊಂಡು ಮತ್ತೆ ಕುಳಿತಳು. ‘ಲೇ ನಾಗಿ ಬರಾಕಿಲ್ವೇನೆ… ದಿನಾ ನೆನ್ಕಂಡೆ ಬರ್ತಿ’ ಲಕ್ಷ್ಮವ್ವ ಮತ್ತೊಮ್ಮೆ ಕೂಗಿದಾಗ ‘ಇನ್ನೇನ್ ಆತು ಲಚುಮವ್ವ… ನೀ ವಲ್ಡು ನಾ ಬಂದೆ’ ಎಂದುತ್ತರಿಸಿ ‘ಥೂ ದಿನಾಲೂ ನೆನ್ಯೋದೆ ಆತು ನನ್ನ ನಸಿಬ್ದಾಗ… ಇವತ್ತಾದ್ರೂ ಲಗೂನ ವೋಗುವ’ ಎಂದೊದರಿಕೊಳ್ಳುತ್ತಾ ಕೊಯ್ಲು ಮಾಡಿದ್ದ ಹುಲ್ಲಿನ ರಾಶಿಯನ್ನು ಕಟ್ಟು ಮಾಡಲು ಎದ್ದು ನಿಂತಳು. ಅಷ್ಟರಲ್ಲಿ ಹುಲ್ಲಿನ ಹೊರೆಯನ್ನು ಒಬ್ಬಳೆ ಎತ್ತಿ ತಲೆ ಮೇಲೆ ಇಟ್ಟುಕೊಳ್ಳಲು ಸಾಧ್ಯವಾಗದಾಗಿ ಲಕ್ಷ್ಮವ್ವ ನಾಗಿಯನ್ನು ಕೂಗಿದಳು. ನಾಗಿ ಲಕ್ಷ್ಮವ್ವನ ಬಳಿ ಹೋಗಿ ಹೊರೆಯನ್ನು ಎತ್ತುತ್ತಾ ‘ನಂಗಾರವ್ವ ಎತ್ತೋರು?’ ಎಂದುಸುರಿದಳು. ‘ಏ… ನಿಂಗ್ಯಾತರದು ಬಿಡೆ ರಟ್ಟೆ ಗಟ್ಯಾಗದೆ. ಎರಡಾಳು ಎತ್ತೊವರೇನ ಒಬ್ಳೆ ಎತ್ತಿ ತಲೆ ಮ್ಯಾಕ ಮಕೊಂಬಿಡ್ತಿಂiÀi’ ಎಂದ ಲಕ್ಷ್ಮವ್ವ ಮುಸಿನಗುತ್ತಾ ತನ್ನ ದಾರಿ ಹಿಡಿದಳು. ಮತ್ತೆ ತನ್ನ ಜಾಗಕ್ಕೆ ಹಿಂದಿರುಗಿದ ನಾಗಿ ಮನೆಯಿಂದ ತಂದಿದ್ದ ಹುರಿಯಲ್ಲಿ ಹುಲ್ಲನ್ನು ಕಟ್ಟುಮಾಡಿಕೊಂಡು ಕುಡುಗೋಲನ್ನು ಹೊರೆಯ ಮೇಲೆ ಹಿಡಿ ಮಾತ್ರ ಕಾಣಿಸುವಂತೆ ಹುಲ್ಲಿನೊಳಗೆ ತುರುಕಿದಳು. ಅದರ ಮೇಲೆ ಮಂಕರಿಯನ್ನು ಬೋರಲು ಹಾಕಿ, ಸೀರೆಯ ಸೆರಗಿನ ತುದಿಯನ್ನು ಸಿಂಬೆಯನ್ನಾಗಿಸಿ ಹೊರೆಯನ್ನು ‘ಅವ್ವಯ್ಯಾ’ ಎನ್ನತ್ತಾ ಎತ್ತಿ ತಲೆಯ ಮೇಲೆ ಕೂರಿಸಿ ಹೊರಟಳು.

ಅವಳು ಮನೆ ಸೇರುವ ಹೊತ್ತಿಗೆ ಗಂಡನೆಂಬೊ ಗಂಡ ವೆಂಕಟ್ರಾಮ ಇನ್ನೂ ಬಂದಿರಲಿಲ್ಲ. ದಿನಾ ಮುಂಜಾನೆ ಎದ್ದು ಮೋಟು ಬೀಡಿ ಸೇದುತ್ತಾ ಪಟ್ಟಣಕ್ಕೆ ಹೊರಟರೆ ಮತ್ತೆ ರಸ್ತೆಯುದ್ದಗಲಕ್ಕೂ ತೂರಾಡುತ್ತಾ ಹಿಂದಿರುಗುವುದು ಕತ್ತಾಲಾದ ಮೇಲೆ. ಪಟ್ಟಣದಲ್ಲಿ ಹಗಲಿಡಿ ಟೀ, ಕಾಫಿ, ಮಸಾಲೆ ದೋಸೆ, ಸಿನಿಮಾ ಎಂದು ಸುತ್ತಾಡಿ ಸಂಜೆಯಾಗುತ್ತಿದ್ದಂತೆ ರಾಮಕೃಷ್ಣ ಬಾರ್‍ಗೆ ನುಗ್ಗಿ ‘ಹಳ್ಳಿ ಸಾರಾಯಿ ಯಾಕೋ ನನ್ನ ಮೈಗೆ ವಗ್ಗೋಲ್ಲ ಕಣಣ್ಣೊ… ಕಲಬೆರ್ಕೆ ಮುಂಡೇವು. ಅದ್ಕೆ ಬಾರ್ದು ಸಾರಾಯೆ ನಾ ಕುಡಿಯೋದು’ ಎಂದು ಕ್ಯಾಷಿಯರ್‍ಗೆ ಒಂದಷ್ಟು ತಲೆ ತಿಂದು ಹೊಟ್ಟೆ ತುಂಬಾ ಕುಡಿದು ವೆಂಕಟೇಶ್ವರ ಬಸ್ಸು ಹಿಡಿದು ಊರು ತಲುಪುತ್ತಿದ್ದ. ಮನೆ ಸೇರಿ ಊಟದಲ್ಲಿ ವಿನಾ ಕಾರಣ ತಪ್ಪು ಹಿಡಿದೊ ಅಥವಾ ಮತ್ತ್ಯಾವುದೊ ವಿಷಯದ ತಗಾದೆ ತೆಗೆದು ನಾಗಿಗೆ ದನಕ್ಕೆ ಬಡಿದ ಹಾಗೆ ಬಡಿದು ‘ಬೊಸ್ಡಿ… ಏನಂತಿಕಂಬಿಟ್ಟಿದೀಯ ನನ್ನ… ಊರಾಗ ನಾ ಒಬ್ಬೇಯ ಗಂಡ್ಸು ಅಂದ್ರ… ಬೋಸ್ಡಿ’ ಎನ್ನುತ್ತಾ ಒಂದು ಮೂಲೆಗೆ ನೆಲಕ್ಕುರುಳಿ ಬೀಳುತ್ತಿದ್ದ.

ವೆಂಕಟ್ರಾಮನೆಂದರೆ ಬಂಡಳ್ಳಿ ವೆಂಕಟ್ರಾಮನೆಂದೆ ಪ್ರಸಿದ್ಧಿ. ಬಂಡಳ್ಳಿ ವೆಂಕಟ್ರಾಮನ ಮೂಲದವರ ಊರಿನ ಹೆಸರು. ಆದ್ದರಿಂದಲೇ ಅವರ ನಾಲ್ಕೈದು ಮನೆಗಳಿಗೂ ಬಂಡಳ್ಯೋರ ಮನೆಗಳು ಅಂತಲೆ ಹೆಸರು. ವೆಂಕಟ್ರಾಮನ ಸಂಬಂಧಿಕರ ನಾಲ್ಕೈದು ಮನೆಗಳೂ ಒಂದಕ್ಕೊಂದು ಹೊಂದಿಕೊಂಡು ಒಟ್ಟಿಗೆ ಒಂದೆ ಜಾಗದಲ್ಲಿದ್ದು ನಡುವೆ ಅಷ್ಟಗಲದ ಚೌಕಾಕಾರದ ಜಾಗವನ್ನು ಬಿಟ್ಟಿದ್ದವು. ಅವರೆಲ್ಲಾ ಒಟ್ಟಿಗೆ ಕೂತು ಹರಟೆ ಹೊಡೆಯಲು ಪ್ರಶಸ್ತವಾದ ಜಾಗವಾಗಿತ್ತು ಆ ಚೌಕ. ಆದ್ದರಿಂದಲೇ ಊರಿನವರ ಬಾಯಲ್ಲಿ ಬಂಡಳ್ಯೋರ ಚೌಕ ಎನ್ನುವಷ್ಟರ ಮಟ್ಟಿಗೆ ಪ್ರಸಿದ್ಧಿಯಾಗಿತ್ತು. ಬಂಡಳ್ಯೋರ ಚೌಕದಲ್ಲಿ ವೆಂಕಟ್ರಾಮನನ್ನು ಬಿಟ್ಟರೆ ಮತ್ತ್ಯಾರೂ ಕುಡಿತದ ಚಟಕ್ಕೆ ಅಂಟಿಕೊಂಡವರಲ್ಲ. ಅಥವಾ ಅವನ ರೀತಿ ರೋಷವನ್ನು ಮೈಗೂಡಿಸಿಕೊಂಡವರಲ್ಲ. ತಮ್ಮ ಪಾಡಿಗೆ ಇದ್ದ ಬದ್ದ ಅಲ್ಪ ಸ್ವಲ್ಪ ಜಮೀನಿನಲ್ಲಿ ರಾಗಿ, ನೆಲಗಡಲೆ ಮುಂತಾದಾಗಿ ಬೆಳೆದುಕೊಂಡು ಒಂದೆರಡು ಹಸು ಕಟ್ಟಿಕೊಂಡು ಅವು ಕೊಡುವ ಹಾಲನ್ನು ಡೈರಿಗೆ ಹಾಕಿ ಬಂದದ್ದರಲ್ಲಿ ಸುಖವಾಗಿರುವ ಜಾಯಮಾನದವರು. ವೆಂಕಟ್ರಾಮನಿಗೆ ಆ ರೋಷದ ಕಿಚ್ಚು, ಆ ಚಾಳಿಗಳು ಹೇಗೆ ಬಂದವೆಂಬುದು ಅವರಿಗೆ ಸೋಜಿಗದ ವಿಷಯವೇ. ಅವನೋ ಅವನ ರೋಷವೋ ಅದಕ್ಕೆ ತಕ್ಕಂತೆ ನಿಮಿರಿ ನಿಂತಿರುವ ರಟ್ಟೆ ಗಾತ್ರದ ಗಿರಿಜಾ ಮೀಸೆಯೋ… ನಾಗಿಯ ಪ್ರಕಾರ ಹೇಳಬೇಕೆಂದರೆ ಅವನೊಬ್ಬ ಯಮಧೂತ: ಕಟುಕ ಅವನು ಊರ ಬೀದಿಯಲ್ಲಿ ಓಡಾಡುತ್ತಿದ್ದರೆ ಹಸುಳೆಗಳು ಹೆದರಿ ಉಚ್ಚೆಬಿಟ್ಟುಕೊಂಡು ತಾಯಂದಿರ ಮಡಿಲ ಸೇರಿಕೊಳ್ಳುತ್ತಿದ್ದವು. ನಾಯಿಗಳು ಅವನ ಕಡೆ ಮುಖ ಮಾಡಿ ಬೊಗಳುತ್ತಾ ಅನತಿ ದೂರದಿಂದ ಹಿಂಬಾಲಿಸಿಕೊಂಡು ಬರುವುದುಂಟು. ಅವನು ಅಲ್ಲೆ ಅಕ್ಕಪಕ್ಕದಲ್ಲಿ ಕಲ್ಲಿಗೆ ಹುಡುಕಾಡಿ ತೆಗೆದು ಅವುಗಳ ಕಡೆಗೆ ಬೀಸುತ್ತಿದ್ದ. ಅವು ಕುಂಯ್ಯೋ… ಮರ್ರೊ ಎನ್ನತ್ತಾ ಮತ್ತೊಂದು ಬೀದಿಯಲ್ಲಿ ಮರೆಯಾಗುತ್ತಿದ್ದವು.

ನಾಗಿ ಮನೆ ಸೇರಿದ ಸ್ವಲ್ಪ ಹೊತ್ತಿಗೆ ಮಳೆ ಹನಿಸಲಾರಂಭಿಸಿತು. ಅಂದು ಹೇಳಿಕೊಳ್ಳುವಂತಹ ಮಳೆಯಾಗಲಿಲ್ಲವಾದರೂ ಒಂದು ಗಂಟೆಯವರೆಗೆ ಜಿಟಿಜಿಟಿ ಬಿಡದೆ ಸಣ್ಣಗೆ ಹೊಡೆಯಿತು. ಮಳೆ ನಿಲ್ಲುತ್ತಿದ್ದಂತೆಯೆ ಹಾಲಿನ ಪಾತ್ರೆ ಹಿಡಿದು ಹಾಲು ಕರೆಯಲು ಹೊರಟಳು. ಏಳು ಗಂಟೆಗೆ ಸರಿಯಾಗಿ ಹಾಲಿನ ಲಾರಿ ಬರುವುದರಿಂದ ಅಷ್ಟರೊಳಗೆ ಹಾಲನ್ನು ಡೈರಿಯಲ್ಲಿ ಅಳತೆ ಮಾಡಿಸಿ ಬಿಡಬೇಕು. ಹಸುವಿನ ಕೆಚ್ಚಲಿಗೆ ಪಾತ್ರೆಯಲ್ಲಿದ್ದ ನೀರನ್ನು ಚೆಲ್ಲಿ ತೊಳೆದು, ತೊಟ್ಟುಗಳನ್ನು ತೀಡಲಾರಂಭಿಸಿದಳು. ಸ್ವಲ್ಪ ಸಮಯದ ನಂತರ ತೊಟ್ಟುಗಳು ತುಂಬಿಕೊಂಡು ಗಟ್ಟಿಯಾಗಿ ನಿಮಿರಿ ನಿಂತವು. ಪಾತ್ರೆಯನ್ನು ಕೆಚ್ಚಲ ಕೆಳಗೆ ತಳದಲ್ಲಿ ಇಟ್ಟು ಎರಡೂ ಕೈಯಲ್ಲಿ ಕರೆಯಲಾರಂಭಿಸಿದಳು. ಖಾಲಿ ಪಾತ್ರೆಗೆ ಬೀಳಲಾರಂಭಿಸಿದ ಹಾಲು ಸರ್ರರ್ರ… ಸರರ್ರರ್ ಎಂದು ಸದ್ದು ಮಾಡುತ್ತಾ ಪಾತ್ರೆ ತುಂಬ ತೊಡಗಿತು. ಪಾತ್ರೆ ತುಂಬುತ್ತಿದ್ದಂತೆ ಮನೆಗೆ ತಂದು, ಮನೆಯ ಖರ್ಚಿಗೆಂದು ಒಂದು ಚಂಬಿಗೆ ಒಂದಷ್ಟು ಹಾಲು ಸುರಿದು ಮಗನಿಗೆ ‘ಮನೆ ಕಡೆ ಉಷಾರ್ಲ’ ಎನ್ನುತ್ತಾ ಹೊಸಲು ದಾಟುತ್ತಿದ್ದಂತೆ ವೆಂಕಟ್ರಾಮನ ಆಗಮನವಾಯಿತು. ‘ಈ ಸಲೀಕ ಹಸ್ತ ಬಲಿ ಹ್ಯಾಂಗ ಕತ್ತರಿಸ್ಬೇಕೂಂದ್ರ ಅದರವ್ವನ್… ಒಂದು ಏಟಿಗ ಕತ್ತರಿಸಾಕ್ತಿನಿ… ಗಂಡ್ಸು ಅಂದ್ರೆ ನಾನೇಯ… ಎನ್ನತ್ತಾ ಬಂದವನಿಗೆ ನಾಗಿ ಎದುರಾದಾಗ ‘ಬೋಸ್ಡಿ… ಎಲ್ಲೇ ವಂಟೆ’ ಎಂದ. ನಾಗಿಗೆ ಸಿಟ್ಟು ನೆತ್ತೀಗೇರಿ ‘ಆ… ಕುಡುಕಂಬಾರಾಕೊಯ್ತಿದೀನಿ… ಬಿಡ್ಲ ದಾರಿ’ ಎಂದು ಗಟ್ಟಿಯಾಗಿ ಅವನನ್ನು ಪಕ್ಕಕ್ಕೆ ತಳ್ಳಿ ಮುಂದೆ ನಡೆದಳು.

ವಾಲಿ ಬೀಳಲಿದ್ದ ಅವನು ಸಾವರಿಸಿಕೊಂಡು ಸಾಧ್ಯವಾದಷ್ಟು ನೆಟ್ಟಗೆ ನಿಂತು, ಏನೋ ಅಸಾಧ್ಯ ಅವಮಾನವಾದಂತಾಗಿ ನಾಗಿಯ ಹಿಂದೆ ಓಡಿ ಅವಳ ಬೆನ್ನಿಗೆ ತನ್ನ ಕಾಲಿನಿಂದ ಬಲವಾಗಿ ಒದ್ದ. ಅದರ ರಭಸಕ್ಕೆ ನಾಗಿ ಹಾಲಿನ ಪಾತ್ರೆಯ ಸಮೇತ ನೆಲಕ್ಕುರುಳಿದಳು. ಬಿದ್ದವಳು ಎದ್ದು ನಿಂತು ಚೆಲ್ಲಿದ್ದ ಹಾಲನ್ನು ಕಂಡು ತನ್ನ ರಕ್ತವೇ ಚೆಲ್ಲಿದೆಯೇನೋ ಎನ್ನುವಂತೆ ಎದೆಯ ಮೇಲೆ ಕೈಯಿಟ್ಟು ಉಸಿರು ಬಿಗಿ ಹಿಡಿದು ನಿಂತಳು. ಕನಿಷ್ಠವೆಂದರೆ ನಾಲ್ಕೈದು ಲೀಟರಿನಷ್ಟು ಹಾಲು. ಹಾಲಿನ ದುಡ್ಡು ಅವಳ ಕೈ ಸೇರುವುದಿಲ್ಲವಾದರೂ, ಅದು ಏನಿದ್ದರೂ ವೆಂಕಟ್ರಾಮನ ಕೈಯಿಂದ ರಾಮಕೃಷ್ಣ ಬಾರ್ ಸೇರುವುದು ಅವಳಿಗೆ ಗೊತ್ತಿದ್ದರೂ ತನ್ನ ಕರುಳೆ ಕಡಿದಂತಾಗಿ ಕಣ್ಣಂಚಿಗೆ ನೀರು ಜಿನುಗಿತು. ನೋವನ್ನು ತಡೆಯಲಾಗದೆ ಎದುರಿಗೆ ಏನೂ ಆಗಿಲ್ಲವೆಂಬಂತೆ ನಿಂತಿದ್ದ ಗಂಡನ ಕಡೆ ಕೆಂಗಣ್ಣು ಬಿಟ್ಟು ‘ನಿನ್ನ ಜಲ್ಮನಾಸ್ನಗ… ನಮ್ಮುನ ಸಾಯ್ಸಬೇಕುಂತಲೇ ವುಟ್ಟಿ ಬಂದ್ಯೇನೋ’ ಎಂದು ಶಾಪ ಹಾಕಿದಳು. ಚೌಕದ ಜನಗಳ ಜೊತೆಗೆ ಒಂದಿಬ್ಬರು ಆಗಲೇ ಜಮಾಯಿಸಿ ಬೀದಿ ನಾಟಕವನ್ನು ನೋಡುವ ಹಾಗೆ ನೋಡತೊಡಗಿದರು. ಎಲ್ಲರೆದುರಿಗೆ ತನ್ನನ್ನು ಏಕವಚನದಲ್ಲಿ ಬೈದದ್ದರಿಂದ ಅವನಿಗೆ ಮತ್ತಷ್ಟು ಅವಮಾನವಾದಂತಾಗಿ ‘ಬೋಸ್ಡಿ… ಗಂಡ ಅಂದ್ರೆ ಮರ್ವಾದೆನೇ ಇಲ್ವಾ ನಿಂಗೆ ಇರು ಈವತ್ತು ನಿನ್ನ ಚಮ್ಡ ಸುಲಿದಾಕ್ತಿನಿ’ ಎನ್ನತ್ತಾ ಮುನ್ನುಗ್ಗಿದ. ಅವನನ್ನು ಒಂದಿಬ್ಬರು ಮುಂದೆ ಬಂದು ಬಿಗಿಯಾಗಿ ಹಿಡಿದುಕೊಂಡು ‘ನೀ ಸುಮ್ನಿರ್ಲ… ನಾಗಿ ನೀ ಒಳಗೋಗವ್ವ’ ಎಂದರು. ನಾಗಿ ನೆಲದ ಮೇಲೆ ಬೋರಲು ಬಿದ್ದಿದ್ದ ಪಾತ್ರೆಯನ್ನು ಎತ್ತಿಕೊಂಡು ಮನೆಯೊಳಗೆ ನಡೆದು ಬಾಗಿಲು ಮುಚ್ಚಿ ಒಳಗಿನಿಂದ ಅಗಳಿ ಹಾಕಿದಳು. ಹೊರಗೆ ವೆಂಕಟ್ರಾಮ ‘ಬಾಗ್ಲ ತೆಗೆಯೆ’ ಎಂದು ಕೂಗಾಡುತ್ತಲೇ ಇದ್ದ. ಒಳಗೆ ನಾಗಿ ತನ್ನ ಮಗನನ್ನು ಎದೆಗಪ್ಪಿಕೊಂಡು ಕಣ್ಣೀರು ಹಾಕತೊಡಗಿದಳು.

ನಾಗಿಗೆ ಇದು ಪ್ರತಿದಿನವೂ ಮಾಮೂಲಿ. ಸರೀಕರೆದುರಿಗೆ ಮಾನ ಕಳೆಯುವ ಗಂಡನೆಂದರೆ ಅವಳಿಗೂ ಅಸಹ್ಯ. ಎಷ್ಟೋ ಸಲ ಅವನು ಕೊಡುವ ಹಿಂಸೆಗಿಂತ ಆಗುವ ಅವಮಾನ ತಡೆಯಲಾಗದೆ ಆತ್ಮಹತ್ಯೆಯ ಬಗ್ಗೆ ಯೋಚಿಸಿದ್ದೂ ಉಂಟು. ಆಗೆಲ್ಲಾ ಮಗನ ಚಿತ್ರ ಕಣ್ಣ ಮುಂದೆ ಬಂದು ನೋವನ್ನು ನುಂಗಿಕೊಂಡು, ಅವಮಾನವನ್ನು ಸಹಿಸಿಕೊಂಡು ಬಾಳುವುದನ್ನು ಕಲಿತಳು. ಮತ್ತೆಷ್ಟೋ ಸಲ ಕುಡಿದು ಬಸ್ಸೋ ಇಲ್ಲಾ ಲಾರಿಯ ಕೆಳಗೋ ಸಿಕ್ಕಿ ಸಾಯಬಾರದ: ಆಮೇಲಾದರೂ ತಾನು ತನ್ನ ಮಗ ನೆಮ್ಮದಿಯಿಂದ ಸರೀಕರೆದುರಲ್ಲಿ ಸರಿಸಮಾನವಾಗಿ ತಲೆ ಎತ್ತಿ ಬದುಕಬಹುದು ಎಂದುಕೊಂಡದ್ದು ಉಂಟು.

* * *

ಇತ್ತ ಊರ ರಾಮದೇವರ ಗುಡಿಯ ಮುಂದಿರುವ ಅರಳೀಕಟ್ಟೆಯ ಮೇಲೆ ಊರಿನ ಮುಖ್ಯವ್ಯಕ್ತಿಗಳು ಹಾಗೂ ಹಿರಿಯರು ಜಮಾಯಿಸಿದ್ದರು. ಪ್ರತಿವರ್ಷವೂ ಮಾಡುವಂತೆ ಈ ವರ್ಷವೂ ಹಸ್ತ ಮಳೆಗೆ ಬಲಿ ನೀಡುವ ದಿನವನ್ನು ಗೊತ್ತುಪಡಿಸಲು ಅವರೆಲ್ಲಾ ಸೇರಿದ್ದರು. ಎಲ್ಲರೂ ಪ್ರತಿವರ್ಷವೂ ಕೈಕೊಡದ ಹಸ್ತ ಮಳೆಯ ಗುಣಗಾನ ಮಾಡಿದರು. ಈ ವರ್ಷವಂತೂ ಒಳ್ಳೆಯ ಫಸಲು ಖಚಿತವೆಂ¨ಂತೆ ಮಾತನಾಡಿಕೊಂಡರು. ಊರ ಹಿರಿಯ ರಾಮೇಗೌಡ ಮಾತ್ರ ‘ಈಗ್ಲೇನೊ ಬೇಸ್ ಮಳೆ ಬತ್ತಿದೆ. ಅದ್ಕೆ ಬೆಳೆ ಚಂದಾಕೈತೆ. ಮುಂದ ಹ್ಯಾಂಗೊ ಕಂಡವರಾರು… ಮೊದ್ಲೆ ಚಿತ್ತ ಮಳೆ, ಅದ್ಕೊ ಕುಲ್ಡು. ಒಂದೇ ಕಡಿಕೆ ಸುರಿಯಾಕೆ ಸುರುವಿಟ್ರೆ ನಮ್ಮ ವಲ ಕೆರೆಯಾದ್ರು ಪಕ್ಕದ ನಿಮ್ಮ ವಲ್ದಾಗ ಒಂದು ಹನಿ ಬೀಳಾಕಿಲ್ಲ ಅದ್ಕೆ ಅಲ್ವಾ ಹಿರ್ಯೋರು ಕುಲ್ಡು ಚಿತ್ತ ಅಂತ ಕರೆದಿರೋದು’ ಎಂದ. ಮಿಕ್ಕವರೆಲ್ಲಾ ಹೌದೆನ್ನುವಂತೆ ಸಮ್ಮತಿ ಸೂಚಿಸಿದರು. ಅಷ್ಟರಲ್ಲಿ ರಾಮಯ್ಯ ‘ಅದು ಅತ್ಲಾಗ ಇರ್ಲಿ ಮುಕ್‍ವಿಸ್ಯಕ್ಕೆ ಬನ್ರಪ್ಪೊ’ ಎಂದಾಗ ಎಲ್ಲರಿಗೂ ತಾವು ಸೇರಿರುವ ಉದ್ದೇಶದ ಅರಿವಾಗಿ, ತಮ್ಮನೆಲ್ಲ ತೃಪ್ತಿಪಡಿಸುವ ಹಸ್ತ ಮಳೆಗೆ  ತಾವು ತೃಪ್ತಿಪಡಿಸದಿದ್ದರೆ ಮುಂದಿನ ವರ್ಷ ಮುನಿಸಿಕೊಂಡೀತು ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಒಬ್ಬೊಬ್ಬರು ಒಂದೊಂದು ದಿನವನ್ನು ಸೂಚಿಸತೊಡಗಿದರು. ಆಗ ರಾಮೇಗೌಡರು ಎಲ್ಲರನ್ನೂ ಸುಮ್ಮನಿರುವಂತೆ ಕೈಸನ್ನೆ ಮಾಡಿ ‘ನೋಡ್ರಪ್ಪ ನಾಡೆದ್ದು ಬ್ರೇಸ್ತವಾರ ಮಾಡ್ದ್ರೆ ಹೆಂಗೆ. ಹತ್ತು ಗಂಟೆಗೆ ಒಳ್ಳೆ ಕಾಲ… ಏನ್ರಪ್ಪ ಏನಂತೀರಿ?’ ಎಂದು ಕೇಳಿದಾಗ ಎಲ್ಲರೂ ಅದಕ್ಕೆ ಸಮ್ಮತಿಸಿದರು. ಬಲಿಗೆ ಒಳ್ಳೆಯ ಟಗರು ಯಾವುದಿದೆ ಎಂದು ಯಾರೊ ಪ್ರಸ್ತಾಪಿಸಿದಾಗ ಅಲ್ಲೆ ಇದ್ದ ಕ್ರಿಷ್ಣಪ್ಪ ‘ನಂದೆ ಐತಲ್ರಣ್ಣ. ಒಳ್ಳೆ ವೈನಾಗಿದೆ: ಕಮ್ಮಿ ಅಂದ್ರು ಮೂವತ್ತು ಕೆ.ಜಿ.ಗೆ ಮೋಸವಿಲ್ಲ’ ಎಂದಾಗ ಎಲ್ಲರೂ ಅದಕ್ಕೊಪ್ಪಿದರು. ಮತ್ತೆ ಒಂದಿಬ್ಬರು ಆ ಟಗರು ಎಷ್ಟು ಬೆಲೆ ಬಾಳುತ್ತೆ: ಮನೆಗೊಂದು ಭಾಗ ಎಂದಾದರೂ ನೂರು ಮನೆಗಳಿಗೆ ಭಾಗ ಮಾಡಿದಾಗ ಪ್ರತಿಮನೆಯವರು ಎಷ್ಟೆಷ್ಟು ಕೊಡಬೇಕಾಗುತ್ತದೆ ಎಂಬುದನ್ನು ಲೆಕ್ಕ ಹಾಕಿ ಹಣ ವಸೂಲಿ ಮಾಡಿ ಕ್ರಿಷ್ಣಪ್ಪನಿಗೆ ತಲುಪಿಸುವ ಜವಾಬ್ದಾರಿಯನ್ನು ರಾಮಯ್ಯ ಹಾಗೂ ಬಚ್ಚರೆಡ್ಡಿಗೆ ಒಪ್ಪಿಸಿದರು. ಹಾಗೆಯೇ ಮರುದಿನ ಬೆಳಿಗ್ಗೆಗೆಲ್ಲ ಊರಿನಲ್ಲಿ ಕೇಳಿ ಹೊಡೆಯಬೇಕೆಂದು ಅಲ್ಲಿ ಒಂದು ಮೂಲೆಗೆ ಕುಳಿತ್ತಿದ್ದ ತಿಮ್ಮನಿಗೆ ಸೂಚಿಸಿ ತಮ್ಮ ತಮ್ಮ ಮನೆಗಳಿಗೆ ಹೊರಡಲು ಅನುವಾದರು.

ಮರುದಿನ ಬೆಳಗಿನ ಜಾವ ತಿಮ್ಮ ತನ್ನ ತಮಟೆಯನ್ನು ಡಂಕಣಕಣಣಕ್ಕಣಕಣ ಎಂದು ಹೊಡೆಯುತ್ತಾ ‘ಕೇಳ್ರಪ್ಪೊ ಕೇಳಿ… ನಾಳೆ  ಬ್ರೇಸ್ತವಾರ  ನಮ್ಮೂರ್ನಾಗ ಹಸ್ತ ಬಲಿ ಮಾಡಬೇಕೆಂದು ಊರ್ನ ಇರ್ಯೋರು ತೀರ್ಮಾನಿಸಿದಾರಪ್ಪೋ… ಕೇಳ್ರಪ್ಪೋ ಕೇಳಿ… ಎಂದು ಕೇಳಿ ಹೊಡೆಯ ತೊಡಗಿದ. ಆ ಸುದ್ದಿ ವೆಂಟ್ರಾಮನ ಕಿವಿಗೆ ಬೀಳುತ್ತಿದ್ದಂತೆ ಅವನ ಕಣ್ಣುಗಳು ಅರಳ ತೊಡಗಿದವು. ಅದೇ ವೇಳೆಗೆ ಸ್ವತಃ ರಾಮೇಗೌಡರೇ ಅವನ ಬಳಿಗೆ ಬಂದು ಬಲಿಗೆ ತಯಾರಾಗು ಎಂದು ಹೇಳಿದ್ದು ಅವನನ್ನು ಆಕಾಶದಲ್ಲಿ ತೇಲಿಸಿತ್ತು. ತನ್ನ ಗಿರಿಜಾ ಮೀಸೆಯನ್ನೊಮ್ಮೆ ನಾಲಿಗೆಯಿಂದ ಎರಡು ಕಡೆ ಸವರಿ, ತನ್ನ ಎಡಗೈಯಿಂದ ತೀಡತೊಡಗಿದ. ಅತ್ತ ಕೇಳಿ ಹೊಡೆದದ್ದು ನಾಗಿಯ ಕಿವಿಗೆ ಬೀಳುತ್ತಿದ್ದಂತೆ ಅವಳ ಎದೆಗೆ ಸುತ್ತಿಗೆಯಿಂದ ಬಡಿದ ಹಾಗಾಯಿತು. ಕಟುಕನಂತೆ ಕುರಿ ಮುಂದೆ ಮಚ್ಚು ಹಿಡಿದು ನಿಂತ ಗಂಡನ ಕಲ್ಪಿಸಿಕೊಂಡರೂ, ಅವಳಿಗೆ ಅಸಾಧಾರಣ ಅಸಹ್ಯವೆನಿಸಿ ಬಿಡುತ್ತದೆ. ಆದರೂ ಅವಳಿಗಿರುವ ಸಮಾಧಾನವೆಂದರೆ ಅವನು ಆ ಎರಡು ದಿನ ಪೇಟೆಗೆ ಹೋಗುವುದಿಲ್ಲ ಎಂಬುದು. ಬಲಿಯ ಮುಂದಿನ ದಿನವೆಲ್ಲಾ ಮಚ್ಚು ಹರಿತ ಮಾಡುವುದರಲ್ಲೇ ಮಗ್ನನಾದರೆ, ಬಲಿಯ ದಿನ ಬಲಿ ಮಾಡಿ: ಬಲಿಯಾದ ಕುರಿಯ ಚರ್ಮ ಸುಲಿಯುವುದರಿಂದ ಹಿಡಿದು ಭಾಗ ಮಾಡುವವರೆಗೂ ಅವನದೆ ಒಂದು ಕೈ ಮುಂದು. ಇನ್ನು ಬಲಿಯ ದಿನದ ರಾತ್ರಿಯನ್ನು ಕಲ್ಪಿಸಿಕೊಂಡರೆ ಅವಳಿಗೆ ಚಳಿ ಹಿಡಿದ ಹಾಗಾಗಿ ಮೈಪೂರ ನಡುಕ ಹತ್ತುತ್ತದೆ. ಘರ್ಜಿಸುತ್ತಾ ಒಳಗೆ ಬರುವ ಅವನ ಹೊಡೆತ-ಒದೆತ ಮತ್ತು ನಾನಾ ತರದ ಹಿಂಸೆಗಳ ಸಹಿಸುವುದು ಅಸಾಧ್ಯದ ಮಾತೇ ಸರಿ.

ವೆಂಕಟ್ರಾಮ ತನ್ನ ಮಚ್ಚು, ಜೊತೆಗೆ ಒಂದಿಷ್ಟು ಬೆಣಚು ಕಲ್ಲಿನ ಪುಡಿಯನ್ನು ತೆಗೆದುಕೊಂಡು ರಾಮದೇವರ ಗುಡಿಯ ಬಳಿ ನಡೆದ. ಅಲ್ಲೇ ಗುಡಿಯ ಪಕ್ಕದಲ್ಲಿ ಬಿದ್ದುಕೊಂಡಿದ್ದ ಒಂದು ಗುಂಡು ಕಲ್ಲಿನ ಮೇಲೆ ಒಂದಷ್ಟು ಬೆಣಚುಕಲ್ಲಿನ ಪುಡಿಯನ್ನು ಹಾಕಿ ಮಚ್ಚನ್ನು ಹರಿತ ಮಾಡಲು ಉಜ್ಜತೊಡಗಿದ. ಸಮಯದ ಅರಿವು ಇಲ್ಲದೆ ದಿನವೆಲ್ಲಾ ಉಜ್ಜತೊಡಗಿದ. ಮಚ್ಚಿನ ಅಲಗು ಬಿಸಿಲಿಗೆ ಹೊಳೆಹೊಳೆದಂತೆಲ್ಲಾ ಅವನ  ಗಿರಿಜಾ ಮೀಸೆಯಡಿಯ ತುಟಿಗಳು ಮೆಲ್ಲಗೆ ಅರಳಿ ತನ್ನ ಎಡಗೈಯಿಂದ ಮೀಸೆಯ ತುದಿಯನ್ನು ತಿರುವುತ್ತಿದ್ದ. ಹೀಗೆ ಹರಿತ ಮಾಡುತ್ತಿರುವಾಗಲೇ ಅವನಿಗೆ ಕೇಳಿಯಲ್ಲಿ ತನ್ನ ಹೆಸರೇ ಪ್ರಸ್ತಾಪವಾಗುತ್ತಿಲ್ಲವಲ್ಲ ಎಂದು ಮಿಂಚು ಹೊಳೆದಂತಾಗಿ ಹರಿತ ಮಾಡುವುದನ್ನು ನಿಲ್ಲಿಸಿದ. ಏನಾದರಾಗಲಿ ಮುಂದಿನ ವರ್ಷ ಕೇಳಿಯಲ್ಲಿ “ಬಂಡಳ್ಳಿ ವೆಂಕಟ್ರಾಮ ಬಲಿಗೆ ತಯಾರಾಗಬೇಕೂಂತ ಊರ ಇರ್ಯೋರು ಹೇಳಿದಾರಪ್ಪೋ” ಎಂಬ ಸಾಲನ್ನು ಸೇರಿಸಲು ರಾಮೇಗೌಡರನ್ನು ಪುಸಲಾಯಿಸಬೇಕೆಂದುಕೊಂಡು ಮತ್ತೆ ಹರಿತ ಮಾಡತೊಡಗಿದ. ಸಂಜೆಯಾಗುತ್ತಿದ್ದಂತೆ ಒಂದು ಮೂಟೆ ಇದ್ದಿಲು, ಅರ್ಧದಷ್ಟು ಮೂಟೆ ಬೂದಿಯನ್ನು ಹೊತ್ತುಕೊಂಡು ಬಂದ ತಿಮ್ಮ ಅರಳಿಕಟ್ಟೆಯ ಮೇಲಿಟ್ಟು, ವೆಂಕಟ್ರಾಮ ಮಚ್ಚು ಹರಿತ ಮಾಡುತ್ತಿರುವುದನ್ನು ಗಮನಿಸಿದ. ನಾಳೆ ಬಲಿಯಲ್ಲಿ ತಲೆಯ ಜೊತೆ ಕತ್ತಿನ ಭಾಗದ ಮಾಂಸ ಸ್ವಲ್ಪ ಜಾಸ್ತಿ ಬರುವ ಹಾಗೆ ಮಾಡಲು ವೆಂಕಟ್ರಾಮನನ್ನು ಯಾವ ರೀತಿ ಪುಸಲಾಯಿಸಿದರೆ ಸರಿಹೋದೀತು ಎಂದು ಯೋಚನೆ ಮಾಡುತ್ತಾ ವೆಂಕಟ್ರಾಮನ ಬಳಿ ನಡೆದ. ಯಾಕೆಂದರೆ ಆ ಊರಿನ ನಿಯಮದ ಪ್ರಕಾರ ಬಲಿಯ ತಲೆ ತಿಮ್ಮನಿಗೆ ಸೇರಬೇಕು. ಅದು ಆ ಊರ ಇತಿಹಾಸದಿಂದಲೂ ಅಷ್ಟೆ, ತಿಮ್ಮನ ವಂಶಜರಿಗೆ ಸೇರುತ್ತಾ ಬಂದಿರುವಂತದ್ದು. ವೆಂಕಟ್ರಾಮ ತಿಮ್ಮನನ್ನು ಗಮನಿಸದೇ ತನ್ನ ಕಾರ್ಯದಲ್ಲಿ ಮಗ್ನನಾಗಿದ್ದುದ್ದನ್ನು ಗಮನಿಸಿ “ವೆಂಕಟ್ರಾಮಣ್ಣೊ… ಮಚ್ಚು ಒಳ್ಳೆ ಫಳಫಳ ಅಂತ ಮಿಂಚ್‍ತಿದೆಯಲ್ಲ. ರಾಜನ ಕತ್ತಿ ಇದ್ದಾಂಗ ಐತಿ ನೋಡು” ಎಂದ. ಮೂರಂತಸ್ತಿನಷ್ಟು ಮೇಲಕ್ಕೆ ನೆಗೆದ ವೆಂಕಟ್ರಾಮ “ಮತ್ತೇನಂದ್ಕಂಡ್ಲ ನನ್ನ” ಎಂದ. ಅದಕ್ಕೆ ತಿಮ್ಮ “ನೀಯಂದ್ರ ನೀಯೇ ಬಿಡಣ್ಣ” ಎನ್ನುತ್ತಾ ತಲೆ ಕೆರೆದುಕೊಳ್ಳುತ್ತಾ ಇನ್ನೂ ಹತ್ತಿರವಾಗಿ ಮೆಲು ದನಿಯಲ್ಲಿ “ಅಣ್ಣೋ ನಾಳೆ ಬಲೀಲಿ ತಲೆ ಜೊತೆ ಕತ್ತಿನ ಮಾಂಸ ವಸಿ ಜಾಸ್ತಿ ಬರೋಂಗ್ ಕತ್ತರಿಸಣ್ಣ” ಎಂದ. ವೆಂಕಟ್ರಾಮ ಎಲಾ ಇವನಾ ಎನ್ನುವಂತೆ ತಿಮ್ಮನ ಮುಖವನ್ನೇ ದಿಟ್ಟಿಸಿದ. ಅವನ ಕಂಗಳಲ್ಲಿದ್ದ ಯಾಚನೆಗೆ ಕರಗಿ “ಆತು ಬಿಡ್ಲ ಕಮ್ಮಿ ಅಂದ್ರೂಯಾ ಅರ್ದ ಕೇಜಿ ಜಾಸ್ತಿ ಬರೋಹಾಂಗ ಕತ್ತರಿಸ್ತೀನಿ” ಎನ್ನುತ್ತಾ ಮತ್ತೆ ಹರಿತ ಮಾಡತೊಡಗಿದ.

ಮಾರನೇ ದಿನ ಬೆಳಿಗ್ಗೆ ಎಂಟು ಗಂಟೆಗೆಲ್ಲಾ ಸ್ನಾನ ಮುಗಿಸಿದ ವೆಂಕಟ್ರಾಮ ಮಚ್ಚು ಹಿಡಿದು ಹೊರ ನಡೆದ. ಆಗ ತಾನೆ ಹಸುವನ್ನು ತೊಳೆದು ಬಂದ ನಾಗಿ ಹೊರಡುತ್ತಿರುವ ವೆಂಕಟ್ರಾಮನನ್ನು ನೋಡಿ “ವಂಟ ಮಾರಾಜ ಕಟ್ಟಿ ಕಡಿದಾಕಕ್ಕೆ… ಕಟುಕರ ಜಾತೀಲಿ ವುಟ್ಟ ಬೇಕಿತ್ತು. ಅಪ್ಪಿ ತಪ್ಪಿ ನಮ್ಮ ಜಾತೀಲಿ ವುಟ್‍ಬಿಟ್ಟೌವ್ನೆ” ಎಂದು ಗೊಣಗಿದಳು. ಇದನ್ನು ಕೇಳಿಸಿಕೊಂಡ ವೆಂಕಟ್ರಾಮ “ಏನಂದ್ಲೇ ಬೋಸ್ಡಿ” ಎನ್ನುತ್ತಾ ಹೆಂಡತಿಯ ಕಡೆ ಮಚ್ಚು ಹಿಡಿದು ಮುನ್ನುಗ್ಗಿದ. ಹೆದರಿದ ನಾಗಿ ಮಿಂಚಿನಂತೆ ಮನೆಯೊಳಗೆ ನಡೆದು ದಢಾರ್ ಎಂದು ಒಳಗಿನಿಂದ ಬಾಗಿಲನ್ನು ಮುಚ್ಚಿ ಅಗಳಿ ಹಾಕಿದಳು. ಹೊರಗೆ ವೆಂಕಟ್ರಾಮ “ಮುಂಡೆ… ಈವತ್ ನಿನ್ನ ಕೊಚ್ಚಾಕ್‍ಬಿಡ್ತೀನಿ” ಎಂದು ಊರಿಗೆಲ್ಲಾ ಕೇಳಿಸುವಂತೆ ಕೂಗು ಹಾಕತೊಡಗಿದ. ಅಷ್ಟರಲ್ಲಿ ವೆಂಕಟ್ರಾಮನ ಅಣ್ಣಂದಿರಿಬ್ಬರು ಬಂದು ಅವನನ್ನು ಸಮಾಧಾನಗೊಳಿಸಿ ಹೊರಡಿಸಿದರು.

ರಾಮದೇವರ ಗುಡಿಗೆ ಅನತಿ ದೂರದಲ್ಲಿರುವ ಮೂರು ರಸ್ತೆಗಳೂ ಕೂಡುವ ಜಾಗದಲ್ಲಿ ರಾಮೇಗೌಡ, ರಾಮಯ್ಯ, ಬಚ್ಚರೆಡ್ಡಿ  ಮುಂತಾದ ಹಿರಿಯರೂ: ಒಂದಷ್ಟು ಯುವಕರೂ ಆಗಲೇ ಸೇರಿದ್ದರು. ಅಲ್ಲೇ ಒಂದು ಬದಿಗೆ ಒಂದಷ್ಟು ಹುಡುಗರು ತಮ್ಮದೇ ಆದ ಆಟದಲ್ಲಿ ತಲ್ಲೀನರಾಗಿದ್ದರು. ವೆಂಕಟ್ರಾಮ ಅಲ್ಲಿಗೆ ಬರುತ್ತಿದ್ದಂತೆ ಅವನಿಗೆ ತಿಮ್ಮನನ್ನು ಕರೆದುಕೊಂಡು ಬೇವಿನ ಸೊಪ್ಪು ಹೊಂದಿಸಲು ಆಜ್ಞಾಪಿಸಿದರು. ಒಂದಷ್ಟು ಯುವಕರಿಗೆ ರಾಗಿ ಮತ್ತು ಜೋಳದ ಗರಿ ಎಲೆಗಳನ್ನು ಒಂದು ಮೂಟೆಯಷ್ಟು ಕತ್ತರಿಸಿಕೊಂಡು ಬರಲು ಆಗಲೇ ಕಳುಹಿಸಿದ್ದರು. ಕ್ರಿಷ್ಣಪ್ಪ ತನ್ನ ಟಗರಿನ ಸಮೇತ  ಹಾಜರಾಗಿ ಅಲ್ಲೆ ಪಕ್ಕದಲ್ಲಿದ್ದ ಸಣ್ಣ ಹುಣಸೆ ಗಿಡಕ್ಕೆ ಕಟ್ಟಿದ. ಅದು ಅಲ್ಲೆ ಹುಲುಸಾಗಿ ಬೆಳೆದಿದ್ದ ಹುಲ್ಲನ್ನು ಮೇಯ ತೊಡಗಿತು. ರಾಮೇಗೌಡರು ಪೂಜೆಗೆ ಬೇಕಾದ ಸಾಮಗ್ರಿಗಳನ್ನೆಲ್ಲಾ ತರಿಸಿಕೊಂಡು ಒಂದು ಕಡೆ ಇಟ್ಟರು. ಅಷ್ಟರಲ್ಲಿ ತಿಮ್ಮ ಒಂದು ಹೊರೆ ಬೇವಿನ ಸೊಪ್ಪನ್ನು ಹೊತ್ತು ತಂದ. ಅವನ ಹಿಂದೆಯೆ ಬಂದ ವೆಂಕಟ್ರಾಮನನ್ನು ಉದ್ದೇಶಿಸಿ ರಾಮೇಗೌಡ “ಮೈಗೆ ನೀರ್ ಹಾಕ್ಕೊಂಡೇನ್ಲಾ?” ಎಂದು ಕೇಳಿದ. ಅದಕ್ಕೆ ಹೌದೆನ್ನುವಂತೆ ತಲೆಯಲ್ಲಾಡಿಸಿದ ವೆಂಕಟ್ರಾಮ. ಅಲ್ಲೆ ಒಂದು ಬದಿಯಲ್ಲಿದ್ದ ಕಲ್ಲು ಚಪ್ಪಡಿಯ ಮೇಲೆ ಕುಳಿತ. ಅಷ್ಟರಲ್ಲಿ ರಾಗಿ ಮತ್ತು ಜೋಳದ ಗರಿ ಎಲೆಯ ಮೂಟೆಯನ್ನು ಹೊತ್ತು ತಂದ ಒಬ್ಬ ಅದನ್ನು ನಿಗದಿತ ಜಾಗದಲ್ಲಿ ಸುರುವಿದ. ಒಂದಿಬ್ಬರು ಅದರ ಜೊತೆಗೆ ಬೇವಿನ ಸೊಪ್ಪನ್ನು ಬೆರೆಸಿದರು. ಅಷ್ಟರಲ್ಲಿ ತಿಮ್ಮ ಬೂದಿ ಮತ್ತು ಇದ್ದಿಲ ಮೂಟೆಯನ್ನು ತಂದು ಗರಿ ಎಲೆ ಮತ್ತು ಬೇವಿನ ಸೊಪ್ಪಿನ ರಾಶಿಯ ಮೇಲೆ ಸುರಿದು ನಂತರ ತನ್ನ ಎರಡೂ ಕೈಗಳನ್ನು ರಾಶಿಯೊಳಗೆ ತುರುಕಿಸಿ ಮಿಶ್ರಮಾಡಿ ಕಾವಲು ರಾಶಿಯನ್ನು ಮಾಡಿದ. ಹತ್ತು ಗಂಟೆ ಸಮೀಪಿಸುತ್ತಿದ್ದಂತೆ ಕ್ರಿಷ್ಣಪ್ಪ ಹುಣಿಸೆ ಗಿಡಕ್ಕೆ ಕಟ್ಟಿ ಹಾಕಿದ್ದ ಟಗರನ್ನು ಬಿಡಿಸಿ ಹಗ್ಗದ ಸಮೇತ ಎಳೆದು ತಂದು ರಾಶಿಯ ಮುಂದೆ ನಿಲ್ಲಿಸಿ ಇನ್ನೊಂದು ಬದಿಗೆ ಹಗ್ಗ ಹಿಡಿದು ಕುಳಿತ. “ಪೂಜೆ ಸುರು ಮಾಡಾನೇನ್ರಪ್ಪಾ” ಎನ್ನುತ್ತಾ ರಾಮೇಗೌಡ ಟಗರಿನ ಹತ್ತಿರ ಬಂದ.

ಒಂದು ಕಾಗದದಲ್ಲಿ ಮಡಚಿಟ್ಟಿದ್ದ ಅರಸಿನ ಕುಂಕುಮ ತೆಗೆದು ಟಗರಿನ ಹಣೆಗೆ ಹಚ್ಚಿದ. ನಂತರ ತೆಂಗಿನಕಾಯಿಗೆ ಸುತ್ತಲೂ ಮೂರು ಕಡೆ ಹಚ್ಚಿ ಮಿಕ್ಕಿದ್ದನ್ನು ಕಾಗದದ ಸಮೇತ ಕಾವಲು ರಾಶಿಗೆ ಹಾಕಿದ. ಅದಾದ ಮೇಲೆ ಎರಡು ಊದುಕಡ್ಡಿ ಹಚ್ಚಿ ಟಗರಿನ ತಲೆಗೆ ಮೂರು ಸುತ್ತು ಸುತ್ತಿಸಿದ. ಅದು ಊದು ಕಡ್ಡಿಯ ಹೊಗೆಯ ವಾಸನೆಗೆ ಒಂದು ಸಲ ಒದರಿತು. ರಾಮೇಗೌಡ ಊದು ಕಡ್ಡಿಗಳನ್ನು ಕಾವಲು ರಾಶಿಗೆ ಮೂರು ಸಲ ಸುತ್ತು ಹಾಕಿಸಿ ಮತ್ತೆ ಅದನ್ನು ರಾಶಿಯ ಒಂದು ಬದಿಗೆ ಸಿಕ್ಕಿಸಿದ. ನಂತರ ತೆಂಗಿನ ಕಾಯಿಯನ್ನು ಕೈಯಲ್ಲಿ ಹಿಡಿದು ಸಿಕ್ಕಿಸಿದ್ದ ಊದು ಕಡ್ಡಿಯ ಹೊಗೆಗೆ ತೋರಿಸಿ ಅಲ್ಲೇ ಇದ್ದ ಕಲ್ಲಿಗೆ ಹೊಡೆದು ಎರಡು ಹೋಳಾಗಿಸಿ, ಎರಡೂ ಹೋಳುಗಳನ್ನು ಕಾವಲು ರಾಶಿಯ ಮುಂದಿಟ್ಟ. ಅಷ್ಟರಲ್ಲಿ ಬಚ್ಚರೆಡ್ಡಿ ಒಂದು ಬಿಂದಿಗೆ ನೀರು ಹಾಗೂ ಒಂದು ಚೊಂಬು ಹಿಡಿದು ಟಗರಿನ ಬಳಿ ಬಂದ. ರಾಮೇಗೌಡ ಟಗರಿನ ತಲೆಯ ಮೇಲೆ ಕೈಯಿಟ್ಟು “ಈ ವರ್ಸ ಮಳೆ ಬೆಳೆ ಚೆಂದಾಕಾಗ್ತೈತೊ ಇಲ್ಲೊ ಅಂತ ವಸಿ ಹೇಳ್‍ಬೇಕು ದೇವ್ರು. ಹೌದು ಅಂದ್ರ ಮೈ ಒದರ್ಬೇಕು, ಇಲ್ಲಾ ಅಂದ್ರ ಸುಮ್ಮನಿರಬೇಕು ದೇವ್ರು” ಎಂದು ನುಡಿದು ಬಚ್ಚರೆಡ್ಡಿಗೆ “ಹಾಕು” ಎಂದು ಆದೇಶಿಸಿದ. ಬಚ್ಚರೆಡ್ಡಿ ಎರಡು ಚಂಬು ನೀರು ಬಗ್ಗಿಸಿಕೊಂಡು ಒಂದರ ನಂತರ ಒಂದರಂತೆ ಟಗರಿನ ಮೇಲೆ ಸುರಿದ. ಎಲ್ಲರೂ ಅದರ ಪ್ರತಿಕ್ರಿಯೆಗೆ ಕಾದರು. ಐದು ನಿಮಿಷಗಳಾದರು ಅದು ಸುಮ್ಮನಿದ್ದದ್ದನ್ನು ನೋಡಿ ಕಳವಳಗೊಂಡ ರಾಮೇಗೌಡ “ಇಸ್ಟೊಂದು ಕಠಿನ ಆಗ್ಬಾರ್ದು ದೇವ್ರು… ದಯಾ ತೋರ್ಬೇಕು” ಎಂದು ನುಡಿದು “ಮತ್ತೆರಡು ಚಂಬು ಹಾಕ್ಲಾ” ಎಂದು ಆದೇಶಿಸಿದ. ಬಚ್ಚರೆಡ್ಡಿ ಮತ್ತೆರಡು ಚಂಬು ನೀರು ಹಾಕುತ್ತಿದ್ದಂತೆ ಬಲವಾಗಿ ಎರಡು ಸಲ ಮೈ ಒದರಿಸಿತು. ಆಗಲೇ ಅಲ್ಲಿಗೆ ಹೆಂಗಸರ ಸಮೇತ ಊರಿನ ಬಹಳಷ್ಟು ಜನ ಸೇರಿದ್ದರು. ಬಹುತೇಕ ಎಲ್ಲಾ ಗಂಡಸರೂ ಬಿದಿರಿನ ಬುಟ್ಟಿ ಅಥವಾ ಅಲ್ಯುಮಿನಿಯಂನ ಪಾತ್ರೆಗಳನ್ನು ಹಿಡಿದಿದ್ದರು. ಹೆಚ್ಚುಕಮ್ಮಿ ಎಲ್ಲರೂ “ಓ ದೇವ್ರು ದಯ ತೋರಿದ್ರಪ್ಪ” ಎನ್ನುತ್ತಾ ತಮ್ಮ ತಮ್ಮ ಕೆನ್ನೆಗಳನ್ನು ಎರಡು ಕೈಗಳಿಂದ ಮೂರು ಸಲ ತಟ್ಟಿಕೊಂಡು ಭಕ್ತಿಯನ್ನು ವ್ಯಕ್ತ ಪಡಿಸಿದರು.

ಅಲ್ಲಿಯವರೆಗೂ ಸುಮ್ಮನೆ ಒಂದು ಕಡೆ ನಿಂತು ನೋಡುತ್ತಿದ್ದ ವೆಂಕಟ್ರಾಮ ಪೂಜಾ ಕಾರ್ಯ ಮುಗಿಯುತ್ತಿದ್ದಂತೆ ತನ್ನ ಮಚ್ಚನ್ನು ಹಿಡಿದು ರಾಜ ಗಾಂಭೀರ್ಯವನ್ನು ಆವಾಹಿಸಿಕೊಂಡು ಕುರಿಯ ಬಳಿ ನಡೆದ. ಅಲ್ಲಿಯೇ ಇದ್ದ ರಾಮಯ್ಯನಿಗೆ ಟಗರಿನ ಕೋಡುಗಳು ಸುರುಳಿ ಸುತ್ತಿಕೊಂಡು ಕೊರಳಿನ ಕಡೆಗೆ ಬಾಗಿದ್ದರಿಂದ ಏನೋ ಹೊಳೆದಂತಾಗಿ ವೆಂಕಟ್ರಾಮನ ಬಳಿಗೆ ಬಂದು ಕಿವಿಯಲ್ಲಿ “ಲೇ ಕೋಡು ಇದೆಂತ ಏಟು ಹಿಂದ ಹಾಕ್ಬೇಡ… ಸರಿಯಾಗಿ ತಲೆ ಅಂಚಿಗೆ ಹಾಕು. ಇಲ್ಲಾಂದ್ರ ಕಮ್ಮಿ ಅಂದ್ರು ಮುಕ್ಕಾಲು ಕೇಜಿ ಮಾಂಸ ತಲೆ ಜತೆಗೆ ತಿಮ್ಮನ ಪಾಲಗ್ತೈತೆ” ಎಂದುಸುರಿದ. ವೆಂಕಟ್ರಾಮನಿಗೂ ತಿಮ್ಮನಿಗೆ ಕೊಟ್ಟಿದ್ದ ಮಾತು ಆ ಕ್ಷಣಕ್ಕೆ ಮರೆತು ಹೋಗಿ ರಾಮಯ್ಯ ಹೇಳಿದ್ದು ಸಮಂಜಸವೆನಿಸತೊಡಗಿತು. ಅದೇ ಮುಕ್ಕಾಲು ಕೇಜಿ ತಲೆಯ ಜೊತೆ ಹೋಗುವ ಬದಲು ಮುಂಡದ ಜೊತೆ ಬಂದರೆ ತಮಗೆ ತಲಾ ಒಂದೊಂದು ತುಂಡು ಜಾಸ್ತಿ ಬರಬಹುದು ಎಂದು ಚಿಂತಿಸಿ ರಾಮಯ್ಯನು ಹೇಳಿದಂತೆ ಮಾಡಲು ನಿರ್ಧರಿಸಿದ. ಅಷ್ಟರಲ್ಲಿ ರಾಮೇಗೌಡ “ಆ್ಞ… ಸುರು ಮಾಡ್ಲಾ” ಎಂದದ್ದೆ ತಡ ವೆಂಕಟ್ರಾಮ ಮಚ್ಚನ್ನು ಟಗರಿನ ಕೊರಳಿಗೆ ತಾಕಿಸಿ “ಅಲಲಲಲಾ…” ಎಂದು ಜೋರಾಗಿ ಕೂಗುತ್ತಾ ಮೇಲೆತ್ತಿದ. ನೆರೆದಿದ್ದವರೆಲ್ಲಾ “ಕಿಲಲಲಲಾ…” ಎಂದು ಪ್ರತಿಸ್ಪಂದಿಸುತ್ತಿದ್ದಂತೆ ಮತ್ತೊಮ್ಮೆ ಅವನು ಕೊರಳಿಗೆ ಮಚ್ಚು ತಾಕಿಸಿ “ಅಲಲಲಲಾ…” ಎಂದ. ಜನ ಮತ್ತೆ “ಕಿಲಲಲಲಾ…” ಎಂದರು. ಮತ್ತೊಮ್ಮೆ ಎರಡನೆಯ ಸಲ ಕೊರಳಿಗೆ ಮಚ್ಚು ತಾಕಿಸಿ “ಅಲಲಲಲಾ…” ಎಂದ. ಜನ ಮತ್ತೆ “ಕಿಲಲಲಲಾ…” ಎಂದರು. ಮತ್ತೊಮ್ಮೆ ಮೂರನೇ ಸಲ ಮಚ್ಚು ತಾಕಿಸಿ “ಅಲಲಲಲಾ…” ಎಂದ. ಜನ ಮತ್ತೆ “ಕಿಲಲಲಲಾ…” ಎನ್ನುತ್ತಿದ್ದಂತೆ ಮಚ್ಚನ್ನು ಬಲವಾಗಿ ಟಗರಿನ ಕೊರಳಿಗೆ ಬೀಸಿದ. ರಾಮಯ್ಯನ ಮಾತಿನಂತೆ ಮಾಡಲು ಹೋಗಿ ಮಚ್ಚಿನ ಅಲಗು ಕೋಡುಗಳನ್ನು ಸವರಿಕೊಂಡು ನಂತರ ಕೊರಳನ್ನು ಮುಟ್ಟಿದ ಕಾರಣ ಪೂರ್ತಿ ಕತ್ತರಿಸಲಾಗದೆ ತಲೆ ಕೋಡಿನ ಸಮೇತ ನೇತಾಡ ತೊಡಗಿತು. ತನ್ನ ಜೀವಿತಾವಧಿಯಲ್ಲೇ ನಡೆದ ಇಂತಹ ಮೊದಲ ಅಚಾತುರ್ಯದಿಂದ ವೆಂಕಟ್ರಾಮ ಕ್ಷಣಕಾಲ ಗರ ಬಡಿದವನಂತೆ ನಿಂತುಬಿಟ್ಟ. ನಂತರ ಮಿಂಚಿನಂತೆ ಮತ್ತೊಂದು ಏಟಿಗೆ ನೇತಾಡುತ್ತಿದ್ದ ರುಂಡವನ್ನು ಕತ್ತರಿಸಿ ಬೇರ್ಪಡಿಸಿದ. ರಾಮೇಗೌಡರ ಸಮೇತ ಒಂದಷ್ಟು ಜನರು “ಅಯ್ಯೋ… ಏನ್ಲಾ ಹಿಂಗ್ ಮಾಡ್ಬಿಟ್ಟೆ!” ಎಂದು ಲೊಚಗುಟ್ಟಿದರು. ಅಷ್ಟರಲ್ಲಿ ಒಂದಿಬ್ಬರು ಒದ್ದಾಡುತ್ತಿದ್ದ ಮುಂಡವನ್ನು ಬಿಗಿಯಾಗಿ ಹಿಡಿದು ಕಾವಲು ರಾಶಿಯ ಬಳಿ ತಂದು ಚಿಮ್ಮುತ್ತಿದ್ದ ರಕ್ತವನ್ನು ಅದರ ಮೇಲೆ ಬಿಳುವಂತೆ ಮಾಡಿದರು. ಅಲ್ಲೇ ಇದ್ದ ರಾಮೇಗೌಡ ಅದನ್ನು ಮಿಶ್ರ ಮಾಡಿ ಮುಗಿಸುತ್ತಿದ್ದಂತೆ ಪಾತ್ರೆ ಮತ್ತು ಬುಟ್ಟಿಗಳನ್ನು ಹಿಡಿದಿದ್ದವರು ರಾಶಿಯ ಬಳಿ ಬಂದು ಒಂದಷ್ಟು ತುಂಬಿಕೊಂಡು ತಮ್ಮ ತಮ್ಮ ಹೊಲಗಳ ಕಡೆಗೆ ಬಿರುಸು ಹೆಜ್ಜೆ ಹಾಕಿದರು. ಹುಲುಸಾದ ಬೆಳೆಗಳನ್ನು ಮೈತುಂಬಿಸಿಕೊಂಡಿದ್ದ ಹೊಲಗಳ ನಾಲ್ಕು ದಿಕ್ಕುಗಳಲ್ಲಿ ರಾಶಿಯ ಮಿಶ್ರಣವನ್ನು ಚೆಲ್ಲುತ್ತಾ ಸುತ್ತಲಿನ ಊರುಗಳಿಗೆ ಕೇಳಿಸುವಷ್ಟು ಜೋರಾಗಿ “ಅಲಲಲಲಾ… ಕಾವ್ಲಾ” ಎಂದು ಕೂಗ ತೊಡಗಿದರು. ಎಲ್ಲಾ ದಿಕ್ಕುಗಳಿಂದಲೂ ಬಂದ ಆ ಕೂಗು ಪ್ರತಿಧ್ವನಿಸಿ ಆಗಸ ಮುಟ್ಟಿತು.

ಇತ್ತ ಟಗರಿನ ದೇಹ ತಣ್ಣಗಾಗುತ್ತಿದ್ದಂತೆ ಅದನ್ನು ಒಂದು ಬದಿಗೆ ಒಂದಷ್ಟು ಜನ ಎಳೆದೊಯ್ದು ಚರ್ಮ ಬಿಡಿಸಿ, ಹೊಟ್ಟೆ ಕರಳು ಬೇರ್ಪಡಿಸಿ: ಅಲ್ಲೆ ನೀರಿನಿಂದ ತೊಳೆದಿದ್ದ ಚಪ್ಪಡಿಯ ಮೇಲೆ ಕತ್ತರಿಸುತ್ತಾ ಭಾಗ ಮಾಡ ತೊಡಗಿದರು. ಅವರಲ್ಲಿ ಮನಸ್ಸಿಲ್ಲದ ಮನಸ್ಸಿನಲ್ಲಿ ಬೆರೆತು ಭಾಗ ಮಾಡುವ ಕ್ರಿಯೆಯಲ್ಲಿ ತೊಡಗಿದ್ದ ವೆಂಕಟ್ರಾಮನಿಗೆ ಕೆಲವರು ತನ್ನನ್ನೆ ಕೆಕ್ಕರಿಸಿ ನೋಡುತ್ತಿರುವಂತೆಯೂ, ಮತ್ತೆ ಕೆಲವರು ತನ್ನ ಕಡೆ ಕೈ ತೋರಿಸಿ ಗಹಗಹಿಸಿ ನಗುತ್ತಾ ನಾಲಾಯಕ್ ಎನ್ನುತ್ತಿರುವಂತೆಯೂ ಭಾಸವಾಗಿ ಭರಿಸಲಾಗದ ಅವಮಾನದಿಂದ ಕುದಿಯತೊಡಗಿದ. ಅಷ್ಟರಲ್ಲಿ ಅವನಿಗೆ ಬೆಳಿಗ್ಗೆ ಬರುವಾಗ ನಾಗಿ ಗೊಣಗಿದ ಮಾತು ನೆನಪಿಗೆ ಬಂದು “ಎಲ್ಲಾ ಆ ಬೋಸ್ಡಿಯಿಂದ್ಲೆ ಹೀಗಾಗಿದ್ದು. ಅಪಶಕುನದೋಳು… ಈವತ್ತವಳ್ನ ಸುಮ್ನೆ ಬಿಡಾಕಿಲ್ಲ!” ಎಂದು ಮನಸ್ಸಿನಲ್ಲೆ ಅಂದುಕೊಳ್ಳುತ್ತಾ ಮೇಲೆದ್ದ. ಕ್ರಿಷ್ಣಪ್ಪ “ಯಾಕ್ಲಾ ವಂಟೆ” ಎಂದಾಗ “ಇರಣ್ಣ… ನನ್ನ ಪಾಲಿನ ಗುಡ್ಡೆ ತಗೊಂಡೋಗಕ್ಕೆ ಪಾತ್ರೆ ತತ್ತೀನಿ” ಎನ್ನುತ್ತಾ ಅಲ್ಲೆ ಇಟ್ಟಿದ್ದ ಮಚ್ಚನ್ನು ಬಾಗಿ ಎತ್ತಿಕೊಂಡು ತನ್ನ ಮನೆಯ ಕಡೆಗೆ ಹೊರಟ. ಬೀದಿಯಲ್ಲಿ ಎರಡೂ ಬದಿಗಳಲ್ಲಿದ್ದ ಮನೆಗಳಿಂದ ಹೆಂಗಸರು ಗಹಗಹಿಸಿ ನಗುತ್ತಾ “ಗಂಡ್ಸು ವಂಟ ನೋಡ್ರೆ” ಎನ್ನುತ್ತಿರುವಂತೆ ಅನ್ನಿಸತೊಡಗಿತು. ಅಷ್ಟರಲ್ಲಿ ಒಂದು ನಾಯಿ ಅವನನ್ನೇ ನೋಡಿ ಬೊಗಳಿದಾಗ ಅದೂ ಕೂಡ ತನ್ನನ್ನು ಹೀಯಾಳಿಸಿ ಅವಮಾನ ಮಾಡುತ್ತಿದೆ ಎಂದು ಭಾವಿಸಿ ಮಚ್ಚನ್ನು ಬೀಸಲು ಮೇಲೆತ್ತಿದ. ನಾಯಿ ಹೆದರಿ ಬಾಲ ಮುದುರಿಕೊಂಡು ಓಡಿಹೋಯಿತು. “ಹಲ್ಕಟ್ ಮುಂಡೇದು ನಂಗೇ ಬೊಗಳುತ್ತೆ” ಎನ್ನುತ್ತಾ ಇನ್ನಷ್ಟು ಬಿರುಸಾಗಿ ತನ್ನ ಮನೆಯ ಕಡೆ ನಡೆದ. ನಾಗಿ ಹೊರಗೆ ಚೌಕದಲ್ಲಿ ಕುಳಿತುಕೊಂಡಿದ್ದಳು.

ಮಗನನ್ನು ತನ್ನ ಪಕ್ಕದಲ್ಲಿ ಕೂರಿಸಿಕೊಂಡು ವೆಂಕಟ್ರಾಮನ ಅಣ್ಣ ನಾರಾಯಣ ಮತ್ತು ಅವನ ಹೆಂಡತಿಯ ಜೊತೆ ಏನೊ ಮಾತನಾಡುತ್ತಿದ್ದಳು. ವೆಂಕಟ್ರಾಮ ಚೌಕದೊಳಗೆ ಹೆಜ್ಜೆ ಇಡುತ್ತಿದ್ದಂತೆ “ಬೋಸ್ಡಿ ಮುಂಡೆ ನಿನ್ನಿಂದ ಈವತ್ನನ್ನ ತಲೆ ವೋದಂಗಾತು… ಲೌಡಿ ಮುಂಡೇದೆ” ಎನ್ನತ್ತಾ ನಾಗಿಯ ಹತ್ತಿರ ಬಂದು ಕೂತ್ತಿದ್ದ ಅವಳ ಬಲ ಭುಜಕ್ಕೆ ಬೀಳುವ ಹಾಗೆ ಒದ್ದ. ವೆಂಕಟ್ರಾಮನ ರೋಷ, ಆವೇಶವನ್ನು ಕಂಡು ನಾಗಿ ನಡುಗತೊಡಗಿದರೆ ನಾರಾಯಣ ಇವತ್ತೇನೋ ಕೇಡು ಮಾಡೋಂಗಿದಾನೆ ಇವನು ಎಂದುಕೊಂಡು ಮೇಲೆÀದ್ದು “ಲೆ… ಲೇ… ವೆಂಕಟ್ರಾಮ” ಎನ್ನುತ್ತಾ ಅವನ ಬಳಿ ನಡೆದ. ವೆಂಕಟ್ರಾಮ ನಾಗಿಯ ಜುಟ್ಟು ಹಿಡಿದು ಎಳೆದಾಡಿ ಇನ್ನೇನು ಮಚ್ಚನ್ನು ಅವಳ ಕೊರಳಿಗೆ ಬೀಸುವುದರಲ್ಲಿದ್ದ. ಅಷ್ಟರಲ್ಲಿ ನಾರಾಯಣ ಬಲವಾಗಿ ಹಿಂದಿನಿಂದ ಅವನ ಬೆನ್ನಿಗೆ ಗುದ್ದಿದ. ಆ ಏಟಿನ ರಭಸಕ್ಕೆ ವೆಂಕಟ್ರಾಮನ ಕೈಯಲ್ಲಿದ್ದ ಮಚ್ಚು ಜಾರಿ  ಠಣಾರ್ ಎಂದು ಕೆಳಗೆ ಬಿತ್ತು. ಸಾವರಿಸಿಕೊಂಡು ಮತ್ತೆ ಮಚ್ಚು ತೆಗೆದುಕೊಳ್ಳಲು ತುಸು ಬಾಗುತ್ತಿದ್ದಂತೆ ಹಿಂದಿನಿಂದ ಮತ್ತೊಂದು ಗುದ್ದು ಬಿದ್ದಿತು. ವೆಂಕಟ್ರಾಮ ಅಷ್ಟು ದೂರದಲ್ಲಿ ಉರುಳಿ ಬಿದ್ದು ಮತ್ತೆ ಮೇಲೇಳಲು ಪ್ರಯತ್ನಿಸತೊಡಗಿದ. ಅಲ್ಲಿಯ ತನಕ ಹೆದರಿ ನಡುಗುತ್ತಿದ್ದ ನಾಗಿಯ ದೇಹ ಅದ್ಯಾವ ಶಕ್ತಿಯನ್ನು ಅವಾಹಿಸಿಕೊಂಡಿತೊ ಏನೋ ಪಕ್ಕದಲ್ಲೆ ಬಿದ್ದಿದ್ದ ಮಚ್ಚನ್ನು ತನ್ನ ಕೈಗೆ ತೆಗೆದುಕೊಂಡು ಚಂಡಿಯಂತೆ ನಿಂತಳು. ವೆಂಕಟ್ರಾಮ “ಏನೆ ಆಗ್ತೈತಿ ನಿನ್ನಿಂದ”ಎನ್ನುತ್ತಾ ಮುಂದೆ ಬಂದ. ನಾಗಿ ಕೆಂಡ ಕಾರುತ್ತಾ ಅವನ ಹೊಟ್ಟೆಗೆ ಮಚ್ಚಿನಿಂದ ಕೊಚ್ಚಿದಳು. ಆ ಒಂದು ಏಟಿಗೆ ಅವನು ಮೇಲೆಗಣ್ಣು ಮಾಡಿ ಮುಂದೆ ಹೆಜ್ಜೆ ಇಡಲಾಗದೆ ನಿಂತುಬಿಟ್ಟ. ನಾರಾಯಣ ಏನು ಮಾಡಲೂ ದಿಕ್ಕು ತೋಚದವನಾಗಿ ಮೂಕ ಪ್ರೇಕ್ಷಕನಂತೆ ನಿಂತುಬಿಟ್ಟ. ಅಲ್ಲಿಯ ತನಕ ಅಳುತ್ತಿದ್ದ ನಾಗಿಯ ಮಗ ಏನಾಗುತ್ತಿದೆ ಎಂಬುದರ ಅರಿವೂ ಇಲ್ಲದವನಂತೆ ಚಿತ್ರ ವಿಚಿತ್ರವಾಗಿ ನೋಡತೊಡಗಿದ. ನಾಗಿ ಮಾತ್ರ ತೋಚಿದ ಕಡೆ ವೆಂಕಟ್ರಾಮನನ್ನು ಕೊಚ್ಚತೊಡಗಿದಳು. ಅಲಲಲಲಾ…… ಕಿಲಲಲಲಾ.

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

5 Comments
Oldest
Newest Most Voted
Inline Feedbacks
View all comments
Hipparagi Siddaram
Hipparagi Siddaram
11 years ago

ದುರಂತಮಯ ಕಥೆಯ ಅಂತ್ಯ ಮನಕದಡಿತು….

Hussain
11 years ago

ಮನಮೀಟಿತು … 

Gaviswamy
11 years ago

ಗಾಢ ವಿವರಣೆ… ಮನಸ್ಸಿನೊಳಗೆ ಅಚ್ಚೊತ್ತಿದಂತೆ ಉಳಿದುಬಿಡುವ ವಿಕ್ಷಿಪ್ತ ವೆಂಕಟ್ರಾಮ ..
ಕಷ್ಟಜೀವಿ ನಾಗಿ ಹತಾಶೆ ಮತ್ತು ಆಕ್ರೋಶದ ಕೈಗೆ ಬುದ್ಧಿಕೊಟ್ಟು ತನ್ನ ಗಂಡನ 
ಬಲಿ ತೆಗೆದುಕೊಂಡಾಗ ,ಸತ್ತವನಿಗಿಂತ ಹೆಚ್ಚಾಗಿ ಅವಳ ಬಗ್ಗೆ ಕನಿಕರವುಂಟಾಗುತ್ತದೆ.
ಉತ್ತಮ ಕತೆ.. ಮನಸ್ಸಿನಲ್ಲಿ ಉಳಿಯುತ್ತದೆ .. ಚಿಂತನೆಗ ಹಚ್ಚುತ್ತದೆ. ಧನ್ಯವಾದಗಳು.
 

Santhoshkumar LM
11 years ago

ಕಣ್ಣ ಮುಂದೆಯೇ ನಡೆಯಿತೇನೋ ಅನ್ನುವಷ್ಟು ನಿಜವಾಗಿ ಚಿತ್ರಿಸಿದ್ದೀರ…… ಸೂಪರ್!!

Venkatesh
Venkatesh
11 years ago

Wonderfull narration 

5
0
Would love your thoughts, please comment.x
()
x