ಹಸುರು ಮುಕ್ತ ಭಾರತ!?: ಅಖಿಲೇಶ್ ಚಿಪ್ಪಳಿ


ಕುವೆಂಪುರವರ ನಾಡಗೀತೆಯಲ್ಲಿ ಕರ್ನಾಟಕದ ನಿಸರ್ಗ ಸಂಪತ್ತಿನ ಕುರಿತಾದ ಮನದಣಿಸುವ ಸಾಲುಗಳಿವೆ ಹಾಗೆಯೇ  ರಾಷ್ಟ್ರಗೀತೆಯಲ್ಲಿಯೂ ವಿಂಧ್ಯ-ಹಿಮಾಚಲ ಯಮುನಾ-ಗಂಗಾ. . . ಇಡೀ ಭಾರತದ ಎಲ್ಲೆಗಳಲ್ಲಿ ಹಬ್ಬಿರುವ ಹಸುರು ಕಾಡುಗಳ, ನದಿ, ಝರಿಗಳ ವರ್ಣನೆಯಿದೆ. ಇರಲಿ, ಈಗ ಹೇಳ ಹೊರಟಿರುವುದಕ್ಕೂ ಈ ಮೇಲೆ ಹೇಳಿದ್ದಕ್ಕೂ ಸಂಬಂಧವಿರುವುದರಿಂದ ಇಲ್ಲಿ ಉದ್ಧರಿಸಬೇಕಾಯಿತು. ಸಂಸತ್ತಿನ ಹೆಬ್ಬಾಗಿಲಿಗೆ ಹಣೆಯಿಟ್ಟು ನಮಸ್ಕರಿಸಿ ಪ್ರವೇಶ ಮಾಡಿ ವಿಶಿಷ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ ದೇಶದ ಪ್ರಧಾನಿ ಮೋದಿ ಮೊದಲು ಮಾಡಿದ ಕೆಲಸವೆಂದರೆ, ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸದಸ್ಯರ ಸಂಖ್ಯೆಯನ್ನು 15 ರಿಂದ ಮೂರಕ್ಕಿಳಿಸಿದ್ದು, ಆ ಮೂವರು ಗುಜರಾತಿಗಳೇ ಎಂಬುದು ಹೆಚ್ಚುವರಿ ವಿಶೇಷ. ಬ್ರಿಟೀಷರಿಂದ ಪಾರಾಗಿ ಸ್ವತಂತ್ರ ರಾಷ್ಟ್ರವೆಂದು ಕರೆಯಿಸಿಕೊಂಡು ಸುಮಾರು 70 ವರ್ಷಗಳೇ ಕಳೆದವು. ಆಹಾರದ ಅಭಾವದಿಂದ ರಾಷ್ಟ್ರ ನಲುಗುತ್ತಿದೆಯೆಂದು ಹಸಿರು ಕ್ರಾಂತಿಯಾಯಿತು. ಕ್ಷೀರ ಕ್ರಾಂತಿಯನ್ನು ದೇಶದ ಜನತೆ ಕಂಡರು. ಈಗ ನೀಲಿ ಕ್ರಾಂತಿ ಪ್ರಾರಂಭಿಸಬೇಕೆಂದು ಪ್ರಧಾನಿಗಳು ಅಪ್ಪಣೆ ಹೊರಡಿಸಿದ್ದಾರೆ. ನೀಲಿ ಕ್ರಾಂತಿಯೆಂದರೆ, ಆಳ ಸಮುದ್ರದ ಮೀನುಗಾರಿಕೆ, ಮತ್ಸ್ಯಸಂಪತ್ತಿನ ಲೂಟಿ! ದೇಶದ ಒಟ್ಟೂ ಪ್ರದೇಶದ ಶೇ.33 ಭಾಗದಲ್ಲಿ ಅರಣ್ಯವಿದ್ದರೆ ಎಲ್ಲರಿಗೂ ಶಾಂತಿ ನೆಮ್ಮದಿಯೆಂಬುದು ಒಂದು ಸಾಧಾರಣ ಸೂತ್ರ. ಯಾವುದೇ ಸರ್ಕಾರಗಳಿಗೆ ಒಂದು ಸುಪ್ತವಾದ ಸೂತ್ರವಿರುತ್ತದೆ. ಇದಕ್ಕೆ ತ್ರೀಡಿ ಸೂತ್ರವೆಂದು ಕರೆಯಬಹುದು. ಡೆವಲಪ್‍ಮೆಂಟ್ (ಅಭಿವೃದ್ದಿ), ಡೀಫಾರೆಸ್ಟೇಶನ್ (ಅರಣ್ಯನಾಶ), ಡೈಲೂಷನ್ (ದುರ್ಭಲಗೊಳಿಸುವಿಕೆ) ಎಂಬುದೇ ಸೂತ್ರದ ತತ್ವ. ಮಾತೆತ್ತಿದರೆ ಅಭಿವೃದ್ದಿಯ ಮಂತ್ರ ಪಠಿಸುವವರಿಗೆ ಈ ತ್ರೀಡಿ ಸೂತ್ರವೇ ದೇವರು. ಅಭಿವೃದ್ದಿಗಾಗಿ ಅರಣ್ಯಕ್ಕೆ ಸಂಬಂಧಿಸಿದ ಬಿಗಿ ಕಾನೂನುಗಳನ್ನು ದುರ್ಭಲಗೊಳಿಸುವುದೇ ಅತಿಮುಖ್ಯವಾದ ಕಾರ್ಯಸೂಚಿಯಾಗಿದೆ. ನ್ಯೂಜಿಲೆಂಡ್ ದೇಶದಲ್ಲಿ ಹಾವುಗಳು ಮತ್ತು ಸೊಳ್ಳೆಗಳು ಇಲ್ಲ. ಅದು ಅಲ್ಲಿನ ನೈಸರ್ಗಿಕವಾದ ವಾತಾವರಣದ ಕಾರಣಕ್ಕೆ. ಇಂಡಿಯಾದಲ್ಲಿ ವನ್ಯಪ್ರಾಣಿಗಳೇ ಇಲ್ಲವಂತೆ ಎಂದು ಹೇಳುವ ಪರಿಸ್ಥಿತಿ ಬರಲು ಹೆಚ್ಚು ಸಮಯ ಬೇಕಾಗಿಲ್ಲ. 

ಆ ರಾಮ ತಂದೆಯ ಆದೇಶದಂತೆ 14 ವರ್ಷ ಕಾಡಿನಲ್ಲಿ ಸಂಸಾರ ಸಮೇತ ವನವಾಸ ಮಾಡಿದ. ಅಂದರೆ ಆಗ ಅಷ್ಟು ಕಾಡಿತ್ತು. ಈಗಾದರೆ ಪಾಂಡವರಿಗೆ ಅಜ್ಞಾತವಾಸ ಮಾಡಲು ಸಾಧ್ಯವೇ ಆಗುತ್ತಿರಲಿಲ್ಲ. ಹಿಂದೆ ಬೇರೆ ಸರ್ಕಾರಗಳಿದ್ದಾಗ, ಇವರೇ ಪರಿಸರ ಸಂರಕ್ಷಣೆಗಾಗಿ ಹೋರಾಟ ಮಾಡುತ್ತಿದ್ದರು. ಈಗ ಇವರದೇ ಸರಕಾರವಿದೆ ಅದೂ ಬಹುಮತದಲ್ಲಿ, ನ್ಯಾಯವಾಗಿ ಅರಣ್ಯ ಸಂರಕ್ಷಣೆ ಇವರ ಮುಖ್ಯ ಕಾರ್ಯಸೂಚಿಯಾಗಬೇಕಿತ್ತು. ವಿಪರ್ಯಾಸವೆಂದರೆ, ಕೋಟಿಪತಿಗಳ ಕ್ಷಣಿಕ ಸಂಪತ್ತಿನ ಕ್ರೂಡಿಕರಣಕ್ಕಾಗಿ ಪರಿಸರ ನಾಶ ಏರುಗತಿಯಲ್ಲಿ ಸಾಗಿದೆ. ಒಂದು ದೇಶ ಅಭಿವೃದ್ದಿಹೊಂದಬೇಕಾದರೆ, ವಿದ್ಯುತ್ ಶಕ್ತಿ ಬೇಕು, ವಿದ್ಯುತ್ ಉತ್ಪಾದಿಸಲು ಆಣೆಕಟ್ಟು ಕಟ್ಟಬೇಕು. ಆಣೆಕಟ್ಟು ಕಟ್ಟಿದಾಗ ಅರಣ್ಯ ಮುಳುಗುವುದನ್ನು ತಪ್ಪಿಸಲು ನಮ್ಮಲ್ಲಿ ಯಾವುದೇ ತಂತ್ರವಿಲ್ಲ. ಹಾಗಾಗಿ ದೇಶದ ಹಿತದೃಷ್ಟಿಯಿಂದ ಆಣೆಕಟ್ಟುಗಳನ್ನು ಕಟ್ಟಲು ಯಾವುದೇ ಅಡ್ಡಿಯಿಲ್ಲ. 

ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆಯವರು ಭಾರತದ ರಾಜಧಾನಿ ದೆಹಲಿಯು ಪ್ರಪಂಚದಲ್ಲೇ ಅತ್ಯಂತ ಮಾಲಿನ್ಯಗೊಂಡ ನಗರವೆಂದು ಘೋಷಿಸಿದ ಬೆನ್ನಲ್ಲೇ  ಮೊನ್ನೆ ದೆಹಲಿಯಲ್ಲಿ ‘ರಾಷ್ಟ್ರೀಯ ವಾಯು ಗುಣಮಟ್ಟ ಸೂಚ್ಯಂಕ’ ಸಮಾವೇಶವನ್ನು ಮಾನ್ಯ ಪ್ರಧಾನಿಯವರೇ ಉದ್ಘಾಟಿಸಿದರು. ಲೋಕೋಪಯೋಗಿ ಇಲಾಖೆಯ ವಿವಿಧ ಕಾಮಗಾರಿಗಳಿಗಾಗಿ ಇದುವರೆಗೂ ದೆಹಲಿಯಲ್ಲಿ 1 ಲಕ್ಷ ಮರಗಳನ್ನು ಕಡಿಯಲಾಗಿದೆ. ಇನ್ನೂ 55 ಸಾವಿರ ಮರಗಳನ್ನು ಕಡಿಯಲು ಪರವಾನಿಗೆ ಸಿಕ್ಕಿದೆ. ತೀವ್ರವಾದ ವಾಯುಮಾಲಿನ್ಯದಿಂದಾಗಿ ದೆಹಲಿಗರ ಸರಾಸರಿ ಆಯುಸ್ಸು 3 ವರ್ಷ ಕಡಿಮೆಯಾಗಿದೆ. ಖುದ್ದು ಅಲ್ಲಿನ ಮುಖ್ಯಮಂತ್ರಿಗಳೇ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದಾರೆ. ಪಿಎಂ ಅಥವಾ ಸಿಎಂ ಇವರುಗಳಿಗೆ ಏಸಿ ಮನೆ ಕಾರುಗಳ ಸೌಲಭ್ಯಗಳಿರುತ್ತದೆ. ಅದ್ದರಿಂದ ಮಾಲಿನ್ಯದಿಂದ ಅವರಿಗೇನು ಹೆಚ್ಚು ತೊಂದರೆಯಾಗಲಿಕ್ಕಿಲ್ಲ. ಸಾಮಾನ್ಯರ ಪರಿಸ್ಥಿತಿ? ಒಂದು ಅಧ್ಯಯನದ ಪ್ರಕಾರ ಶ್ವಾಸಕೋಶದ ಕಾಯಿಲೆಗಳಿಂದಲೇ ದೆಹಲಿಯಲ್ಲಿ ಪ್ರತಿವರ್ಷ ಸಾಯುವವರ ಸಂಖ್ಯೆ 10500 ಮುಟ್ಟಿದೆ. ಆರೋಗ್ಯವಾಗಿರಬೇಕೆಂದರೆ ದೆಹಲಿಯನ್ನು ಬಿಡಿ ಎಂದು ಅಲ್ಲಿನ ವೈದ್ಯರೇ ಸಾಮಾನ್ಯರಿಗೆ ಶಿಫಾರಸ್ಸು ಮಾಡುತ್ತಿದ್ದಾರೆ. ಇಂತ ಪರಿಸ್ಥಿತಿಯಲ್ಲಿ ಈ ಸಮಾವೇಶವನ್ನು ಉದ್ಘಾಟಿಸಿದ ಪ್ರಧಾನಿಯವರು ಏನೆಂದು ಹೇಳಿದರು ಎಂಬುದನ್ನು ಕೊಂಚ ನೋಡಿ. 

ಹವಾಮಾನ ವೈಪರೀತ್ಯ ಹಾಗೂ ವಾಯುಮಾಲಿನ್ಯವನ್ನು ನಿಯಂತ್ರಿಸುವ ಕಾರ್ಯದಲ್ಲಿ ನಮಗೆ ಬೇರೆಯವರ ಉಪದೇಶ ಬೇಕಾಗಿಲ್ಲ. ಜಗತ್ತಿನ ಇತರ ರಾಷ್ಟ್ರಗಳ ಸಲಹೆಗಳನ್ನು ನಾವು ಪಾಲಿಸಬೇಕಾಗಿಲ್ಲ. ಈ ಕೆಲಸವನ್ನು ಮಾಡಲು ನಮಗೇ ನಮ್ಮದೇ ಆದ ವಿಧಾನಗಳಿವೆ. ನಮ್ಮ ಮೇಲೆ ಮಿಥ್ಯಾರೋಪಗಳಿವೆ, ಭಾರತವು ಪರಿಸರ ಸಂರಕ್ಷಣೆಯ ವಿಚಾರವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬುದಾಗಿ. ನಮ್ಮದು ಪ್ರಕೃತಿಯನ್ನು ದೇವರೆಂದು ಪೂಜಿಸುವ ದೇಶವಾಗಿದೆ. ಪ್ರಕೃತಿಯನ್ನು ಆರಾಧಿಸುವ ನಾವು ನಮ್ಮ ಅರಣ್ಯಗಳನ್ನು ಸೃಷ್ಟಿಸಿಕೊಳ್ಳಬಲ್ಲೆವು, ನಮ್ಮ ಪುರಾತನ ಸಂಪ್ರದಾಯದಲ್ಲಿ ದೇಶವನ್ನು ಹಸುರುಗೊಳಿಸುವ ಹಸುರು ಪರಿಹಾರಗಳು ಇದ್ದರೂ ಇರಬಹುದು. ಕೆಲವರು ಹೇಳುವ ಪ್ರಕಾರ, ಅಭಿವೃದ್ದಿ ಮತ್ತು ಪರಿಸರ ಸಂರಕ್ಷಣೆ ವಿರುದ್ದವಾದವು. ಅದು ಹಾಗಲ್ಲ, ಅಭಿವೃದ್ದಿ ಮತ್ತು ಪರಿಸರ ಎರಡೂ ಒಟ್ಟಾಗಿ ಸಾಗಬೇಕು. ಎಲ್ಲಾ ರಾಜ್ಯಗಳ ಅರಣ್ಯ ಮಂತ್ರಿಗಳು ಭಾಗವಹಿಸಿದ ಈ ಸಮಾವೇಶದಲ್ಲಿ ಹೂಡಿಕೆದಾರರಿಗೆ ಒಂದಿಷ್ಟೂ ಅಡಚಣೆಯಾಗದಂತೆ, ಕಿರಿಕಿರಿಯಾಗದಂತೆ, ತೊಂದರೆಯಾಗದಂತೆ,  ಅಭಿವೃದ್ದಿಗೆ ಅಡ್ಡಗಾಲಾಗಿರುವ 6 ಪರಿಸರ ನಿಯಮಗಳ ತಿದ್ದುಪಡಿಯ ಅಂತಿಮ ಕರಡಿನ ಕುರಿತು ಚರ್ಚಿಸಲಾಯಿತು. ಈ ಸಮಾವೇಶದಲ್ಲಿ ಹಾಜರಿದ್ದ ಕೇಂದ್ರ ಅರಣ್ಯ ಸಚಿವರೂ ಕೂಡ ಥೇಟ್ ವಾಣಿಜ್ಯ ಸಚಿವರಂತೆ ಮಾತನಾಡಿದರು. ಈಗಿರುವ ಬಿಗಿ ಅರಣ್ಯ ಕಾನೂನುಗಳು ಅಭಿವೃದ್ದಿಗೆ ಅಡ್ಡಿಯಾಗಿವೆ, ಈ ಕಾನೂನುಗಳಲ್ಲಿರುವ ಬಿಗಿ ಅಂಶಗಳನ್ನು ಕಿತ್ತು ಕಾನೂನನ್ನು ಡೈಲ್ಯೂಟ್ ಮಾಡುವ ಉತ್ಸಾಹದಲ್ಲಿದ್ದಾರೆ. ಅದೂ ಎಲ್ಲಾ ಪ್ರಕ್ರಿಯೆಗಳು ಏಕಗವಾಕ್ಷಿ ಪದ್ದತಿಯಲ್ಲಿ ನಡೆದು ಬಿಡಬೇಕು. ಈಗಿರುವ ಪರಿಸರ ಕಾನೂನುಗಳನ್ನು ಪರಿಷ್ಕರಿಸಿ, ತಿದ್ದುಪಡಿ ಮಾಡಲು ಟಿ.ಎಸ್.ಆರ್.ಸುಬ್ರಮಣಿಯಮ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯೊಂದನ್ನು ಕೇಂದ್ರ ಸರಕಾರ ರಚಿಸಿದ್ದು, ಸಮಿತಿಯ ವರದಿಯ ಬಗ್ಗೆಯೂ ಈ ಸಮಾವೇಶದಲ್ಲಿ ಚರ್ಚೆ ನಡೆಯಿತು. 

ಮಾನವನ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವುದು ಪ್ರಕೃತಿ, ಪ್ರಕೃತಿಯನ್ನು ಅವಲಂಬಿಸಿಯೇ ನಾವು ಬದುಕಿರುವುದು. ಆದರೆ ಮಾನವ ತಾನೇ ಸರ್ವಶಕ್ತ, ಸಾರ್ವಭೌಮ ಎಂದು ತಿಳಿದಿದ್ದಾನೆ ಎಂದು ಉಪನಿಷತ್ತಿನ ವಾಕ್ಯವನ್ನು ಪ್ರಾರಂಭದಲ್ಲಿ ಉದ್ಧರಿಸಿ ಟಿ.ಎಸ್.ಆರ್. ಸಮಿತಿ ವರದಿಯನ್ನು ನೀಡಿದೆ. ಶೇ.70ರಷ್ಟು ಹಸಿರು ಚಾವಣಿಯಿರುವ ಅರಣ್ಯ ಪ್ರದೇಶಗಳನ್ನು ಯಾವುದೇ ಕಾರಣಕ್ಕೂ ಉಪಯೋಗಿಸಬಾರದು ಎಂದು ಬಲವಾಗಿ ಪ್ರತಿಪಾದಿಸಲಾಗಿದೆ. ಅಂದರೆ, ಹಾಲಿ ಇರುವ ಘೋಷಿತ ಅಭಯಾರಣ್ಯಗಳು, ರಾಮ್‍ಸಾರ್ ಪ್ರದೇಶಗಳು, ರಕ್ಷಿತಾರಣ್ಯಗಳನ್ನು ಅರಣ್ಯವೆಂದೇ ಪರಿಗಣಿಸಬೇಕು ಎಂದು ವರದಿಯಲ್ಲಿ ಶಿಪಾರಸ್ಸು ಮಾಡಲಾಗಿದೆ. ಹೀಗೆ ಶೇ.69ರಷ್ಟು ಹಸುರು ಛಾವಣಿಯಿರುವ ಅರಣ್ಯಪ್ರದೇಶವನ್ನು ಬೇಕಾದರೆ ಬೇರೆ ಉದ್ಧೇಶಕ್ಕೆ ಬಳಸಿಕೊಳ್ಳಲು ಅಡ್ಡಿಯಿಲ್ಲ. ರಾಷ್ಟ್ರೀಯ ಪರಿಸರ ನಿರ್ವಹಣಾ ಪ್ರಾಧಿಕಾರ ಮತ್ತು ರಾಜ್ಯ ಪರಿಸರ ನಿರ್ವಹಣಾ ಪ್ರಾಧಿಕಾರ ರಚಿಸಲು ಸಮಿತಿ ಸಲಹೆ ನೀಡಿದೆ. ಒಂದೊಮ್ಮೆ ರಾಷ್ಟ್ರೀಯ ಹಿತಾಸಕ್ತಿಯ ಪ್ರಶ್ನೆ ಬಂದಾಗ ಈ ಅರಣ್ಯಗಳನ್ನೂ ಕೂಡ ಬಳಸಿಕೊಳ್ಳುವ ಅಧಿಕಾರ ಸಂಸತ್ತಿಗೆ ಇದೆ ಎಂದು ಹೇಳಲಾಗಿದೆ. ಹೀಗೆ ಹಸುರು ಮುಕ್ತ ಭಾರತ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿದೆ. ಪರಿಸರವಾದವನ್ನು ಸಂಪೂರ್ಣವಾಗಿ ತಿರಸ್ಕರಿಸಲಾಗಿದೆ. ಪರಿಸರವಾದಿಗಳನ್ನು ನಿಕೃಷ್ಟವಾಗಿ ಕಾಣಲಾಗುತ್ತಿದೆ. ಗ್ರೀನ್‍ಪೀಸ್ ಸಂಸ್ಥೆಯ ಎಲ್ಲಾ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡು ಪ್ರಜಾವಿರೋಧಿತನವನ್ನು ಮೆರೆಯಲಾಗಿದೆ. ಅಂದರೆ, ಮಾಧವ ಗಾಡ್ಗಿಳ್ ಮತ್ತು ಕಸ್ತೂರಿ ರಂಗನ್ ವರದಿಯಲ್ಲಿನ ಎಲ್ಲಾ ಪರಿಸರಪೂರಕ ಅಂಶಗಳನ್ನು ಬದಿಗಿಟ್ಟು, ಬರೀ ಅಭಿವೃದ್ದಿಯನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಹೂಡಿಕೆದಾರರಿಗಾಗಿ ತಯಾರಿಸಿದ ಅಪ್ಪಟ ಪರಿಸರ ವಿರೋಧಿ ವರದಿಯಿದು. ಪ್ರಪಂಚದ ಎಲ್ಲಾ ದೇಶಗಳಲ್ಲಿನ ಶ್ರೀಮಂತ ಹೂಡಿಕೆದಾರರನ್ನು ನಮ್ಮಲ್ಲಿಗೆ ಬನ್ನಿ, ಹೂಡಿಕೆ ಮಾಡಿ ಎಂದು ಕೈಬೀಸಿ ಕರೆಯುತ್ತಾ ಅಭಿವೃದ್ದಿಯ ವಿಮಾನವೇರಿ ಕುಳಿತವರಿಗೆ ಈ ವರದಿ ಅಪ್ಯಾಯಮಾನವಾಗಿದ್ದರೆ ಏನೂ ಆಶ್ಚರ್ಯವಿಲ್ಲ. ಹಿಂದೆ ಬಡತನ ನಿವಾರಿಸಲು ‘ಗರೀಬಿ ಹಠಾವೋ’ ಘೋಷಣೆಯನ್ನು ಜನಪ್ರಿಯ ಮಾಡಿದ್ದರು. ಈಗ ‘ಮೇಕ್ ಇನ್ ಇಂಡಿಯಾ’ ಕಥೆಯ ಮೂಲಕ ‘ಹರಿಯಾಲಿ ಹಠಾವೋ’ ಕಾರ್ಯಕ್ರಮ ಶುರುವಾಗಿದೆ. ಗರೀಬಿ ಹಠಾವೊದಿಂದ ಬಡತನವೇನೂ ತೊಲಗಿಹೋಗಲಿಲ್ಲ. ಈ ಹರಿಯಾಲಿ ಹಠಾವೋದಿಂದ ಅಭಿವೃದ್ದಿಯೂ ಆಗುವುದಿಲ್ಲ. ಇದೇ ಹೊತ್ತಿನಲ್ಲಿ ಅಮೆರಿಕದ ಸಂಶೋಧನಾ ಸಂಸ್ಥೆ ವಾತಾವರಣದಲ್ಲಿ ಇಂಗಾಲದ ಪ್ರಮಾಣ 400 ಪಿಪಿಎಮ್ ದಾಟಿದೆ ಎಂದು ಎಚ್ಚರಿಕೆ ನೀಡಿದೆ. ವಾತಾವರಣದಲ್ಲಿ ಇಂಗಾಲದ ಪ್ರಮಾಣ 350 ಪಿಪಿಎಮ್‍ಕ್ಕಿಂತ ಹೆಚ್ಚಿದ್ದರೆ ಸುರಕ್ಷಿತವಲ್ಲ. 1988ರಿಂದಲೂ ಈ ಪ್ರಮಾಣ 350ಕ್ಕಿಂತ ಹೆಚ್ಚೇ ಇದೆ ಎಂದು ಡೌನ್ ಟು ಅರ್ಥ್ ಪತ್ರಿಕೆ ವರದಿ ಮಾಡಿದೆ. ವಾತಾವರಣದಿಂದ ಇಂಗಾಲವನ್ನು ಹೀರಿ ಆಮ್ಲಜನಕವನ್ನು ನೀಡುವ ಅರಣ್ಯಗಳನ್ನೇ ಅಭಿವೃದ್ದಿಯ ನೆಪದಲ್ಲಿ ನಾಶ ಮಾಡುತ್ತಾ ಹೋದರೆ ಏನಾದೀತು?  56 ಇಂಚಿನ ಎದೆಯ ಗೂಡಿನೊಳಗಿನ ಶ್ವಾಸಕೋಶಕ್ಕೂ ಶುದ್ಧ ಆಮ್ಲಜನಕವೇ ಬೇಕು ಮತ್ತು ಇದಕ್ಕಾಗಿಯಾದರೂ ಕಾಡು-ಮರ-ವನ್ಯಜೀವಿಗಳಿರಲೇಬೇಕು ಎಂಬುದನ್ನು ಅರಿತರೆ ಎಲ್ಲರಿಗೂ ಒಳ್ಳೆಯದು. 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
prashasti.p
9 years ago

ಮಾನವ ಬದುಕಲು ಬೇಕಾದಷ್ಟನ್ನು ಪ್ರಕೃತಿ ಕೊಟ್ಟೀತು, ದುರಾಸೆಗೆ ಬೇಕಾಗುವಷ್ಟಲ್ಲ ಎಂಬರ್ಥದ ಗಾಂಧೀಜಿಯವರ ಮಾತುಗಳನ್ನು ಓದಿದ ನೆನಪಾಯಿತು. ನಮ್ಮ ಸ್ವಾರ್ಥಕ್ಕಾಗಿ ದಿನೇ ದಿನೇ ಪ್ರಕೃತಿಗೆ ಕೊಡಲಿಯೇಟು ಹಾಕುತ್ತಿರೋ ನಾವು ನಮ್ಮ ಬುಡಕ್ಕೇ ಕೊಡಲಿಯೇಟು ಹಾಕಿಕೊಳ್ಳುತ್ತಿದ್ದೇವೆಂಬ ಸತ್ಯದ ಅರಿವು ಇನ್ನೂ ಆಗದಿರುವುದು ದುರಂತ 🙁

1
0
Would love your thoughts, please comment.x
()
x