ಸಮುದ್ರದ ನೀರು ಆವಿಯಾಗಿ ಮೋಡಗಟ್ಟಿ, ಗಾಳಿಯ ಸಹಾಯದಿಂದ ಭೂಪ್ರದೇಶದ ಮೇಲೆ ಹಾರುತ್ತಾ, ಕಾಲ-ಕಾಲಕ್ಕೆ ಮಳೆ ಸುರಿಸುತ್ತಾ, ಜೀವಜಲವಾಗಿ ಸಕಲವನ್ನು ಪೊರೆಯುತ್ತಾ ಸಾಗುತ್ತದೆ. ಮತ್ತದೇ ನೀರು ಹಳ್ಳ-ಕೊಳ್ಳಗಳ, ನದಿ-ತೊರೆಗಳ ಮೂಲಕ ಹರಿಯುತ್ತಾ ತನ್ನೊಂದಿಗೆ ನೆಲದ ಸಾವಯವ ತ್ಯಾಜ್ಯಗಳನ್ನು ಸೇರಿಸಿಕೊಂಡು ಸಮುದ್ರದ ಜೀವಿಗಳಿಗೆ ಆಹಾರವನ್ನು ಒಯ್ಯುತ್ತದೆ. ಉಪ್ಪುನೀರಿನ ಜೀವಿಗಳಿಗೂ ನೆಲದ ಸಾವಯವ ಸುರಿಗಳೇ ಆಹಾರವಾಗುತ್ತವೆ. ಈ ಜಲಚಕ್ರ ಏರುಪೇರಾದರೆ, ಎಲ್ಲೋ ಯಾವುದೋ ಜೀವಿ ಸಂಕಷ್ಟಕ್ಕೆ ಸಿಲುಕುತ್ತದೆ. ನಮ್ಮಲ್ಲಂತೂ ಮೋಡಗಳನ್ನು ಸೆಳೆಯುವ ಕಾಡುಗಳೇ ಮಾಯವಾಗುತ್ತಿವೆ. ದಕ್ಷಿಣದ ಚಿರಾಪುಂಜಿಯೆಂಬ ಖ್ಯಾತಿ ಹೊಂದಿದ ಆಗುಂಬೆಯಲ್ಲೂ ಮಳೆಯಿಲ್ಲ. ಅಲ್ಲಿನ ಅಕೇಶಿಯಾ ಕಾಡಿಗೆ ಮೋಡಗಳನ್ನು ಸೆಳೆಯುವ ಶಕ್ತಿಯಿಲ್ಲ. ಅತ್ತ ಮುಂಬಯಿ ಇತ್ತ ದಕ್ಷಿಣ ಕನ್ನಡ ಹಾಗೂ ಹೊನ್ನಾವರ-ಕಾರವಾರ-ಗೋವಾದಲ್ಲಿ ಮಳೆ ಹನಿಯುತ್ತಾ ಸೀದಾ ಸಮುದ್ರಕ್ಕೆ ಸೇರುತ್ತದೆ. ಸಮುದ್ರದಿಂದಲೇ ಆವಿಯಾಗಿ ಮತ್ತಲ್ಲೇ ಹನಿಸಿದರೆ ಜಲಚಕ್ರ ಅಪೂರ್ಣವಾಗುತ್ತದೆ. ಅಗಾಧ ಉಪ್ಪುನೀರಿಗೆ ಸ್ವಲ್ಪ ಸಿಹಿನೀರು ಸೇರಿ ಮತ್ತೆ ಉಪ್ಪಾಗುತ್ತದೆ ಹೊರತು, ಸಮುದ್ರದ ಜೀವಿಗಳಿಗೆ ಆಹಾರವೊದಗಿಸುವ ಮೂಲವಾಗುವುದಿಲ್ಲ. ಇಂತಿಪ್ಪ ಸನ್ನಿವೇಶದಲ್ಲಿ ಪ್ರಪಂಚದ ಬೇರೆ ಬೇರೆ ಭಾಗದ ನೀರಿನ ಆರೋಗ್ಯ ಹೇಗಿದೆ ಎಂದು ನೋಡೋಣ.
ಹಾಂಗ್‍ಕಾಂಗ್ ಮಹಾನಗರದ ಹೆಸರನ್ನು ಕೇಳಿದಾಗ ಒಂದೊಮ್ಮೆ ನೋಡಬೇಕು ಎಂದೆನಿಸುವುದು ಸಹಜ. ಕಮ್ಯೂನಿಷ್ಟ್ ಚೀನಾದ ಆಗ್ನೇಯ ಭಾಗದಲ್ಲಿ ಸ್ವತಂತ್ರ ಆಡಳಿತ ಹೊಂದಿದ ಹೆಗ್ಗಳಿಕೆಗೆ ಪಾತ್ರವಾದ ತಾಣವಿದು. ಜಗತ್ತಿನ ಅತ್ಯಂತ ಆಕರ್ಷಕ ಪ್ರವಾಸಿತಾಣವೆಂಬ ಹೆಗ್ಗಳಿಕೆಯು ಇದಕ್ಕಿದೆ. ಮಾನವ ಮಸ್ತಿಷ್ಕದ ಎಲ್ಲಾ ತರಹದ ಆವಿಷ್ಕಾರದ ಅತ್ಯುನ್ನತ ಮಾದರಿಗಳನ್ನು ಇಲ್ಲಿ ಕಾಣಬಹುದು. ಭೂಮಿಯ ಸ್ವರ್ಗದಂತೆ ತೋರುವ ಗಗನಚುಂಬಿ ಕಟ್ಟಡಗಳು ಬಣ್ಣ-ಬಣ್ಣದ ದೀಪಗಳನ್ನು ಪಿಳುಕಿಸುತ್ತಾ ನಿಶೆಯನ್ನೇ ದೂರ ಸರಿಸುವ ಹೊತ್ತು. ಇಲ್ಲಿನ ಬಹುತೇಕ ಚಟುವಟಿಕೆಗಳು ಪ್ರಾರಂಭವಾಗುವುದೇ ಸಂಜೆಯ ವೇಳೆ. ಹಣ ಚೆಲ್ಲುತ್ತಾ ಹೋದಂತೆ ಎಲ್ಲಾ ವಾಂಛೆಗಳನ್ನು ಪೂರೈಸುವ ತಾಕತ್ತಿರುವ ಸ್ವರ್ಗಸದೃಶ ಹೋಟೆಲ್‍ಗಳು, ಮಸಾಜ್ ಪಾರ್ಲರ್‍ಗಳು, ಬಾರ್-ಪಬ್‍ಗಳು, ಮುಂತಾದ ದುಡ್ಡು ತುಂಬಿದ ಪಾಕೀಟು ಸೋರಿ ಹೋಗುವುದೇ ತಿಳಿಯದಂತಹ ಮಾಯಾಜಾಲಗಳು ಇಲ್ಲಿವೆ. ಸದಾ ಗಿಜಿಗುಡುವ ಈ ಷಹರ ಪ್ರಪಂಚದ ಎಲ್ಲಾ ದೇಶಗಳ ಪ್ರವಾಸಿಗರನ್ನು ಸೆಳೆಯುತ್ತಾ, ಮತ್ತೊಂದು ಮಿನಿ ಪ್ರಪಂಚವನ್ನು ತೆರೆದಿಡುವ ಸ್ಥಳವೂ ಹೌದು. ಜಗತ್ತಿನ ಎಲ್ಲಾ ದೇಶದ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಶಕ್ತಿ ಹೊಂದಿರುವ ಹಾಂಗ್‍ಕಾಂಗ್‍ನ ದಕ್ಷಿಣ ಭಾಗದ ಸಮುದ್ರ ತೀರವೀಗ ಪ್ಲಾಸ್ಟಿಕ್ ವಸ್ತುಗಳಿಂದ ಮುಚ್ಚಿಹೋಗಿದೆ. ನೆಲದಿಂದ 10 ಕಿ.ಮಿ. ಎತ್ತರದಿಂದ ನೋಡಿದರೂ ಕಣ್ಣಿಗೆ ರಾಚುವ ಪ್ಲಾಸ್ಟಿಕ್ ತ್ಯಾಜ್ಯಗಳ ಹಾವಳಿಯಿಂದಾಗಿ ಹಾಂಗ್‍ಕಾಂಗ್ ಆಡಳಿತ ತತ್ತರಿಸಿದೆ. ಜುಲೈ ಕೊನೆಯ ವಾರದಲ್ಲಿ ಅಲ್ಲಿನ ಆಡಳಿತ 78 ಸಾವಿರ ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ತೀರದಿಂದ ತೆಗೆದು ಹಾಕಿದೆ ಎಂದು ದಕ್ಷಿಣ ಚೀನಾ ಮಾರ್ನಿಂಗ್ ಪೋಸ್ಟ್ ಪತ್ರಿಕೆ ವರದಿ ಮಾಡಿದೆ.
ಇದರ ಮಾರನೇ ದಿನವೇ ಅಲ್ಲಿನ ನಗರಸಭೆಯ ಆಯುಕ್ತ ಲುಂಗ್ ಚುನ್ ಯಿಂಗ್ ಹಾಗೂ ಅವರ 60 ಸಿಬ್ಬಂದಿಗಳು ಬರೀ ಅರ್ಧ ಗಂಟೆಯ ಅವಧಿಯಲ್ಲಿ 1350 ಕೇಜಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎತ್ತಿದ್ದಾರೆ. ಜೋರಾಗಿ ಸುರಿದ ಮಳೆಯಿಂದಾಗಿ ಈ ಪಾಠೀ ಪ್ಲಾಸ್ಟಿಕ್ ತ್ಯಾಜ್ಯಗಳು ತೀರಕ್ಕೆ ಅಪ್ಪಳಿಸಿವೆ ಎಂದು ಮಳೆಯನ್ನು ದೂರಿದ್ದಾರೆ. ಪರ್ಲ್ ನದಿಯ ಮೂಲಕ ಮುಖ್ಯ ಚೀನಾದ ತ್ಯಾಜ್ಯಗಳು ಹರಿದು ಬಂದು ಹಾಂಗ್‍ಕಾಂಗ್ ತೀರ ಪ್ರದೇಶವನ್ನು ಗಬ್ಬೆಬ್ಬಿಸಿವೆ ಎಂದು ಹಾಂಕಿಗರೂ, ಇಲ್ಲ ಅತೀವ ಜನದಟ್ಟಣೆಯಿಂದ ಉದ್ಭವಿಸಿದ ಹಾಂಗ್‍ಕಾಂಗ್ ತ್ಯಾಜ್ಯಗಳೇ ಅಲ್ಲಿನ ತೀರವನ್ನು ಗಬ್ಬುಗೊಳಿಸಿವೆ ಎಂದು ಚೀನಿಗರೂ ಪರಸ್ಪರ ಕೆಸೆರೆರೆಚಿಕೊಳ್ಳುವಲ್ಲಿ ತೊಡಗಿದ್ದಾರೆ. ಹೀಗೆ ಸಮುದ್ರದ ನೀರಿನಲ್ಲಿ ತೇಲುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯಗಳು ಉಪ್ಪುನೀರಿನ ಪ್ಲಾಂಕ್ಟಾನ್ ಸೂಕ್ಷ್ಮಾಣುಗಳಿಗೆ ಕಂಟಕಪ್ರಾಯವಾಗಿದೆ. ಇದೇ ಹೊತ್ತಿನಲ್ಲಿ ಹಾಂಗ್‍ಕಾಂಗ್‍ನ ಶಾಮ್ ವಾನ್ ಬೀಚಿಗೆ ಮೊಟ್ಟೆಯಿಡಲು ಬರುವ ಹಸಿರಾಮೆಗಳೂ ತ್ಯಾಜ್ಯವನ್ನು ನೋಡಿ ಮೊಟ್ಟೆಯಿಡದೇ ವಾಪಾಸು ಹೋಗುವ ಭೀತಿಯೂ ಕಾಡುತ್ತಿದೆ ಎಂದು ಅಲ್ಲಿನ ಪತ್ರಿಕೆ ವರದಿ ಮಾಡಿದೆ.
ನಮ್ಮ ಪಕ್ಕದ ಚೀನಾದ ಕತೆ ಹೀಗಾದರೆ, ದೂರದ ಅಮೇರಿಕೆಯಲ್ಲೂ ಮಾನವ ನಿರ್ಮಿತ ಉತ್ಪಾತಗಳು ಸಂಭವಿಸುತ್ತಿವೆ. ಕುಪ್ರಸಿದ್ಧ ಮಾನ್ಸಾಂಟೋ ಕುಲಾಂತರಿ ತಳಿಯ ಉತ್ಪಾದಕ ಕಂಪನಿಯು ತನ್ನ ಕುಲಾಂತರಿ ತಳಿಗಳಿಗೆ ಸಿಂಪಡಿಸಲು ಬಳಸುವ ಹಲವು ರಾಸಾಯನಿಕಗಳು ಅಮೇರಿಕಾದ ಎರ್ರೀಸ್ ಸರೋವರವನ್ನು ಹಾಳುಗೆಡವಿದೆ. ಈ ಕಂಪನಿಯು ತನ್ನ ಕುಲಾಂತರಿ ಬೆಳೆಗಳಿಗೆ ರೋಗ ಬಾರದಂತೆ ಮಾಡಲು ಹಲವು ರಾಸಾಯನಿಕಗಳನ್ನು ಉಪಯೋಗಿಸಲು ಸಲಹೆ ನೀಡುತ್ತದೆ. ಇದರಲ್ಲಿ ಮುಖ್ಯವಾಗಿ ರೌಂಡ್‍ಅಪ್ ಎಂಬ ಕಳೆನಾಶಕದ ಮುಖ್ಯ ಕಚ್ಚಾವಸ್ತುವಾದ ಗ್ಲೈಪೋಸೇಟ್ ಎಂಬ ಅಂಶ. ಈ ಅಂಶದ ಜೊತೆ ರಂಜಕವೂ ಸೇರಿಕೊಂಡಿದ್ದು, ಸಿಂಪಡಿಸಿದ ನಂತರದಲ್ಲಿ ನೀರಿನ ಮೂಲಕ ಸೇರುವ ಈ ಅಂಶಗಳು ಮೇಲೆ ಹೇಳಿದ ಎರ್ರಿ ಸರೋವರವನ್ನು ವಿಶಕಾರಿ ಪಾಚಿಯಿಂದ ಮುಚ್ಚಿಹಾಕುವಲ್ಲಿ ಮುಖ್ಯ ಕಾರಣವಾಗಿದೆ. ಇಡೀ ಸರೋವರ ಮೇಲ್ಬಾಗ ದಟ್ಟ ಹಸುರಿನ ಪಾಚಿಯಿಂದ ಮುಚ್ಚಿಹೋಗಿದ್ದು, ಸರೋವರದ ಎಲ್ಲಾ ಜಲಚರಗಳೂ ನಾಶದ ಭೀತಿಯನ್ನು ಎದುರಿಸುತ್ತಿವೆ. ವಾತಾವರಣದ ಗಾಳಿಯಾಗಲಿ ಅಥವಾ ಬಿಸಿಲಿನ ಕಿರಣಗಳಾಗಲಿ ಸರೋವರಕ್ಕೆ ಲಭ್ಯವಿಲ್ಲವಾಗಿದೆ. ಒಂದು ಎಕರೆ ಕುಲಾಂತರಿ ಸೋಯಾ ಅಥವಾ ಜೋಳದ ಹೊಲಕ್ಕೆ ಸಿಂಪಡಿಸಿದ ರೌಂಡ್‍ಅಪ್ ರಾಸಾಯನಿಕದ ಮೂರನೇ ಒಂದು ಅಂಶ (ಕರಗಿದ ನಂತರವೂ ಶೇಷವನ್ನು ಉಳಿಸಿಕೊಂಡ ರಂಜಕದ ಅಂಶ) ನೇರವಾಗಿ ಈ ಸರೋವರಕ್ಕೆ ಸೇರುತ್ತಿದೆ ಎಂದು ರಾಸಾಯನಿಕ ತಜ್ಞ ಪ್ರೋಫೆಸರ್ ಕ್ರಿಸ್ಟೋಫರ್ ಹೇಳಿದ್ದಾರೆ. ಪ್ರತಿವರ್ಷ ಸುಮಾರು 1 ಸಾವಿರ ಮೆಟ್ರಿಕ್ ಟನ್‍ಗಳಷ್ಟು ರೌಂಡ್‍ಅಪ್ ರಾಸಾಯನಿಕವನ್ನು ಎರ್ರಿ ಸರೋವರದ ಮೇಲ್ಬಾಗದಲ್ಲಿ ಬಳಸಲಾಗುತ್ತಿದೆ.
ರೌಂಡ್‍ಅಪ್ ರಾಸಾಯನಿಕದ ರಂಜಕದ ಅಂಶವನ್ನು ಹೀರಿಕೊಂಡು ವಿಶಕಾರಿಯಾದ ಪಾಚಿ ಸೃಷ್ಟಿಯಾಗಲು ಸೈನೋಬ್ಯಾಕ್ಟೀರಿಯಾ ಕಾರಣವಾಗಿದೆ ಎಂಬ ಅಂಶವು ಪತ್ತೆಯಾಗಿದೆ. ವಿಶಕಾರಿಯಾದ ಬ್ಯಾಕ್ಟೀರಿಯಾ ಹಾಗೂ ಪಾಚಿಗಳು ಅಲ್ಲಿ ವಾಸಿಸುತ್ತಿರುವ ಜನರಿಗೂ ಅಪಾಯಕಾರಿಯಾಗಿ ಪರಿಣಮಿಸುತ್ತಿವೆ. ಯಾವುದೇ ತರದಲ್ಲಿ ಇವುಗಳ ಅಂಶ ಮನುಷ್ಯನ ದೇಹದಲ್ಲಿ ಸೇರಿದರೆ, ಚರ್ಮರೋಗ, ವಾಂತಿ, ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. 1990ರಲ್ಲೇ ಪ್ರಾರಂಭವಾದ ಈ ಸಮಸ್ಯೆಯೀಗ ಬೃಹದಾಕಾರವಾಗಿ ಬೆಳೆದು ಅಲ್ಲಿನ ಆಡಳಿತಕ್ಕೆ ತಲೆನೋವಾಗಿದೆ. ಬಲಿಷ್ಟವಾದ ಮಾನ್ಸಾಂಟೋ ಕಂಪನಿಯನ್ನು ಎದುರು ಹಾಕಿಕೊಳ್ಳಲಾಗದ ಅಲ್ಲಿನ ಆಡಳಿತ 2025ರ ಹೊತ್ತಿಗೆ ರೌಂಡ್‍ಅಪ್ ಬಳಕೆಯನ್ನು ಶೇ.40ರಷ್ಟು ತಗ್ಗಿಸಬೇಕೆಂದು ಯೋಜನೆ ರೂಪಿಸಿದ್ದಾರೆ.
ಇದೇ ಹೊತ್ತಿನಲ್ಲಿ ಫ್ಲೋರಿಡಾದ ಪಾಮ್ ಬೀಚ್ ಟೌನ್ ಹಾಲ್‍ನಲ್ಲಿ ತುರ್ತು ಸಭೆ ಸೇರಿತ್ತು. ನೋಡಿ ನಮ್ಮ ಕಣ್ಣುಗಳು ಕೆಂಪಾಗಿವೆ, ಗಂಟಲು ಕೆರೆಯುತ್ತಿದೆ, ಮೀನುಗಳು ಸಾಯುತ್ತಿವೆ, ತೀರ ಪ್ರದೇಶಗಳಿಗೆ ಜನಗಳು ಹೋಗುವ ಪರಿಸ್ಥಿತಿಯಿಲ್ಲ, ಎಲ್ಲೆಲ್ಲೂ ದುರ್ನಾತ ಹೀಗೆ ದೂರುಗಳ ಸರಮಾಲೆಯನ್ನು ಅಲ್ಲಿನ ಅಧಿಕಾರಿಗಳಿಗೆ ತೊಡಿಸುತ್ತಿದ್ದವರು ಮೇರಿ ರಾಡ್‍ಬವ್. ನೀರಿನ ಮೂಲಗಳನ್ನೆಲ್ಲಾ ನಾಶ ಮಾಡುತ್ತಾ ಸಾಗುತ್ತಿರುವ ಈ ವಿಷಕಾರಿ ಪಾಚಿಗಳ ಹಾವಳಿಯನ್ನು ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಬೇಕು ಎಂದು ಅವರ ಒತ್ತಾಯವಾಗಿತ್ತು. ಫ್ಲೋರಿಡಾದ ಓಕಿಚುಬೆ ಸರೋವರದಲ್ಲಿ ಮಿಯಾಮಿಗಿಂತ ದೊಡ್ಡದಾಗಿ ಹರಡಿಕೊಂಡ ವಿಷಕಾರಿ ಪಾಚಿಯ ಕುರಿತು ಅವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ಇದನ್ನು ಹೀಗೆ ಬೆಳೆಯಲು ಬಿಟ್ಟರೆ ಅಮೇರಿಕಾದ ಎಲ್ಲಾ ನದಿ-ಸರೋವರ-ಸಮುದ್ರಗಳನ್ನು ನುಂಗಿ ಹಾಕುವ ದಿನ ದೂರವಿಲ್ಲವೆಂದು ದೂರುತ್ತಿದ್ದರು.
ದಕ್ಷಿಣ ಫ್ಲೋರಿಡಾವು ಅತಿದೊಡ್ಡ ವಿಪತ್ತನ್ನು ಎದುರಿಸುತ್ತಿದೆ ಎಂದು ಅಲ್ಲಿನ ಸೆನೆಟರ್ ಬಿಲ್ ನೆಲ್ಸನ್ ಜುಲೈ 6ರಂದು ಅಮೆರಕಾದ ಸಂಸದರಿಗೆ ಪತ್ರವನ್ನು ಬರೆದರು. ಆಜನಸಂದಣಿಯಿಂದ ತುಂಬಿರಬೇಕಾದ ಬೀಚುಗಳು ಬಿಕೋ ಎನ್ನುತ್ತಿವೆ. ಹೀಗೆ ತನ್ನ ವ್ಯಾಪ್ತಿಯನ್ನು ದಿನೇ ದಿನೇ ವಿಸ್ತರಿಸಿಕೊಳ್ಳುತ್ತಾ ಸಾಗುತ್ತಿರುವ ವಿಶಕಾರಿ ಪಾಚಿ ನಮಗೆ ಮೂರು ಸಂಗತಿಗಳನ್ನು ಸ್ಪಷ್ಟವಾಗಿ ತಿಳಿಸುತ್ತಿದೆ. ಮೊದಲನೆಯದಾಗಿ, ನಮ್ಮ ಜಲವನ್ನು ಶುದ್ಧವಾಗಿಟ್ಟುಕೊಳ್ಳುವುದು, ಅಂದರೆ ಮಾಲಿನ್ಯರಹಿತವಾಗಿ ಇಟ್ಟುಕೊಳ್ಳುವುದು, ಸಾಮಾನ್ಯವಾಗಿ ಇಂತಹ ಪಾಚಿಗಳು ವೇಗವಾಗಿ ಬೆಳೆಯುವುದಕ್ಕೆ ಹವಾಗುಣ ಬದಲಾವಣೆಯೂ ಒಂದು ಕಾರಣವಾಗಿದೆ. ನಾವು ಈಗಷ್ಟೇ ಕಳೆದ ಜೂನ್ ತಿಂಗಳ ಬೇಗೆಯಿಂದ ಹೊರಬಂದಿದ್ದೇವೆ. ಆಗ 20ನೇ ಶತಮಾನದ ಸರಾಸರಿಗಿಂತ 3.3 ಡಿಗ್ರಿ ಫ್ಯಾರನ್ ಹೀಟ್ ಹೆಚ್ಚಾಗಿತ್ತು. 1880ರಿಂದ ಸಿಗುವ ದಾಖಲೆಗಳ ಪ್ರಕಾರ ಕಳೆದ ಇಪ್ಪತ್ತು ವರ್ಷಗಳು ಅತ್ಯಂತ ಹೆಚ್ಚು ಬಿಸಿಯಾಗಿದೆ ಮತ್ತು ಈ ವರ್ಷದ ಮೊದಲೈದು ತಿಂಗಳ ಸರಾಸರಿ ಉಷ್ಣಾಂಶವೂ ಸರಾಸರಿಯನ್ನು ಮೀರಿಸಿದೆ. ಹೀಗಾಗಿ ಹವಾಮಾನ ವೈಪರೀತ್ಯದ ವೇಗಕ್ಕೆ ತಡೆ ಹಾಕುವುದು ಮತ್ತು ಮೂರನೆಯದಾಗಿ, ನಾವು ಆರಿಸಿ ಕಳುಹಿಸಿದ ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಗಂಭೀರವಾಗಿ ಯೋಚಿಸುವುದು ಹಾಗೂ ಸಮಸ್ಯೆಯ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಪಡುವುದು ಆಗಿದೆ. ಈ ವಿಷಕಾರಿ ಹಸಿರು ಪಾಚಿಗಳು ನಮ್ಮ ಪಳೆಯುಳಕೆ ಇಂಧನಗಳ ಮೇಲಿನ ಅತಿಅವಲಂಬನೆಯ ಕುರಿತಾದ ಎಚ್ಚರಿಕೆ ನೀಡುವ ಮಾಧ್ಯಮವಾಗಿದೆ. ಈಗ ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದಿನ ವರ್ಷಗಳು ಇನ್ನೂ ಭೀಕರವಾಗಲಿವೆ.
ಮತ್ತೆ ನಮ್ಮ ಕಾಲಬುಡಕ್ಕೆ ಬರೋಣ. ಮೊನ್ನೆ ನಮ್ಮ ಪಕ್ಕದ ಶಿಕಾರಿಪುರ ತಾಲ್ಲೂಕಿನ ಸ್ನೇಹಿತರೊಬ್ಬರ ಭೇಟಿಯಾಗಿತ್ತು. ಮಳೆ-ಬೆಳೆಗಳ ವಿಚಾರ ವಿನಿಮಯವಾಯಿತು. ವಿನಿಮಯವಾಗಲು ಅಲ್ಲೂ ಮಳೆಯಿಲ್ಲ ಸಾಗರದಲ್ಲೂ ಮಳೆಯ ಕೊರತೆ ಎದ್ದು ಕಾಣುತ್ತಿದೆ. ಹೀಗೆ ಮಾತು ಸಾಗಬೇಕಾದಾಗ ಮತ್ತೊಂದು ಆತಂಕಕಾರಿ ವಿಷಯವನ್ನೂ ಸ್ನೇಹಿತರು ಅರುಹಿದರು. ಜೋಳ-ಶುಂಠಿ, ಬತ್ತ, ತರಕಾರಿ ಹೀಗೆ ಎಲ್ಲದಕ್ಕೂ ನಮ್ಮಲ್ಲಿ ಎಲ್ಲೆಮೀರಿ ರಾಸಾಯನಿಕಗಳನ್ನು ಬಳಸುತ್ತಿದ್ದೇವೆ. ಈಗ ಶಿಕಾರಿಪುರವೆಂಬ ಕಪ್ಪುಮಣ್ಣಿನ ಸ್ವರ್ಗ ನಿಧಾನಕ್ಕೆ ತನ್ನ ಸತ್ವವನ್ನು ಕಳೆದುಕೊಳ್ಳುತ್ತಿದೆ. ಎತ್ತುಗಳನ್ನು ಬಳಸಿ ಹೂಟಿ ಮಾಡುವುದು ಸಾಧ್ಯವಾಗುತ್ತಿಲ್ಲ. ಈಗೀಗ ಟಿಲ್ಲರ್ ಹಲ್ಲುಗಳು ಆಳಕ್ಕೆ ಇಳಿಯುತ್ತಿಲ್ಲ. ಟ್ರ್ಯಾಕ್ಟರ್‍ನಿಂದ ಹೂಟಿ ಮಾಡುವ ಪರಿಸ್ಥಿತಿಯಿದೆ. ಅಂದರೆ ಅಲ್ಲಿನ ಮಣ್ಣು ತನ್ನ ಮೃದುತ್ವವನ್ನು ಕಳೆದುಕೊಳ್ಳುತ್ತಿದೆ. ಅಲ್ಲಿನ ಕೃಷಿ ಜಮೀನು ಮುಂದಿನ ದಿನಗಳಲ್ಲಿ ವ್ಯವಸಾಯಕ್ಕೆ ಯೋಗ್ಯವಾಗಿ ಇರುವುದಿಲ್ಲ. ಸಾವಯವ ಕ್ರಾಂತಿಯೊಂದೆ ಇದಕ್ಕೆ ಪರಿಹಾರ. ಜನರಲ್ಲಿ ಜಾಗೃತಿ ಮೂಡಿಸಬೇಕಾದ ಇಲಾಖೆಗಳು ಹಾಗೂ ಜನಪ್ರತಿನಿಧಿಗಳಿಗೆ ಈ ಸಮಸ್ಯೆಯ ಅರಿವೇ ಇಲ್ಲವೆಂದು ನಿಟ್ಟುಸಿರಿಟ್ಟರು.