ಅನಿ ಹನಿ

ಹಸಿವು ಮತ್ತು ಊಟ: ಅನಿತಾ ನರೇಶ್ ಮಂಚಿ.

            
‘ಒಂದು ಎರಡು 
ಬಾಳೆಲೆ ಹರಡು     
ಮೂರು ನಾಲ್ಕು 
ಅನ್ನ ಹಾಕು 
ಐದು ಆರು 
ಬೇಳೆ ಸಾರು 
ಏಳು ಎಂಟು 
ಪಲ್ಯಕೆ ದಂಟು 
ಒಂಬತ್ತು ಹತ್ತು 
ಎಲೆ ಮುದುರೆತ್ತು
ಒಂದರಿಂದ ಹತ್ತು ಹೀಗಿತ್ತು 
ಊಟದ ಆಟವು ಮುಗಿದಿತ್ತು ..’

ಈ ಪದ್ಯವನ್ನು ಚಿಕ್ಕಂದಿನಲ್ಲಿ ನಾವೆಲ್ಲಾ ಕಂಠಪಾಠ ಮಾಡಿದವರೇ .. ಆಗೇನೋ ಇದು ಲೆಕ್ಕ ಕಲಿಸುವ ಹಾಡು ಅನ್ನಿಸುತ್ತಾ ಇದ್ದರೆ ಈಗ ಈ ಹಾಡಿಗೆ ಬೇರೆ0iÉುೀ ಅರ್ಥ ಕಟ್ಟುವ ಮನಸ್ಸಾಗುತ್ತಿದೆ. ಸುಮ್ಮನೆ ಇನ್ನೊಮ್ಮೆ ಓದಿ ನೋಡಿ.. ಎಷ್ಟು ಸರಳ ಊಟ.. ಅನ್ನ ಸಾರು ಪಲ್ಯ ಇಷ್ಟೇ.. ಆದರೆ ಇದು ಒಂದು ಸಂಪೂರ್ಣ ಊಟ.. ಬಾಳೆ0iÉುಲೆಯಲ್ಲಿ ಯಾವುದನ್ನೂ ಬಿಟ್ಟೇಳುವ ಪ್ರಶ್ನೆಯ್ತೇ ಇಲ್ಲ.. ಸಿಂಪಲ್ ಲಿವಿಂಗ್ ಅನ್ನೋದು ಇದನ್ನೇ ಏನೋ..
ಆದರೆ ನಮ್ಮ ಬದುಕಿನಲ್ಲಿ ನಾವು ಕಾಣುವ ಚಿತ್ರ ವಿಚಿತ್ರ ಭಕ್ಷ್ಯಗಳು, ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಬದಲಾಗುವ ತರಹೇವಾರಿ ತರಕಾರಿಗಳ ರುಚಿ ರುಚಿ ಅಡುಗೆಗಳು ನಮ್ಮ ಜಿಹ್ವಾ ಚಾಪಲ್ಯ ಹೆಚ್ಚಿಸಿದಷ್ಟೇ ನಮ್ಮನ್ನು ಪೇಚಿಗೂ ಸಿಕ್ಕಿಸುತ್ತವೆ. 
ಕಾಲೇಜಿನ ದಿನಗಳದು.

ವರ್ಷಂಪ್ರತಿಯಂತೆ, ಹಿರಿಯ ವಿದ್ಯಾರ್ಥಿಗಳು ಹಾಕಿಕೊಟ್ಟ ಮಾರ್ಗದರ್ಶನದಂತೆ  ಕಾಲೇಜಿನಲ್ಲಿ ಓದಿಗಿಂತಲೂ ಮಾಡಲೇಬೇಕಾದ ಅತಿ ಮುಖ್ಯ ಕಾರ್ಯವೊಂದಿತ್ತು. ಅದುವೇ ವಾರ್ಷಿಕ ಪಿಕ್ನಿಕ್. ಕೇವಲ ಒಂದು ದಿನಕ್ಕಷ್ಟೇ ಮೀಸಲಾದ ಈ ಪಿಕ್ನಿಕ್ ಎಂದುದು ನೂರಕ್ಕೆ ನೂರರಷ್ಟು ವಿದ್ಯಾರ್ಥಿಗಳ ಹಾಜರಾತಿಯಿಂದ ಕೂಡಿರುತ್ತಿತ್ತು. 
ಆ ಸಲ ನಮ್ಮ ಪ್ರಯಾಣವಿದ್ದುದು  ಮಂಗಳೂರಿಗೆ. 
ನನ್ನ ಗೆಳತಿ ತಂಪಿನ ತಾಣಗಳಾದ ಚಿಕ್ಕಮಗಳೂರು ಹಾಸನಗಳ  ನಡುವಿನ ಊರಿನವಳು.  ಕಾಫಿ ಏಲಕ್ಕಿಗಳ ಕಂಪಿನಲ್ಲಿ ಬೆಳೆದ ಅವಳಿಗೆ ಕಡಲತಡಿಯ ಈ ಊರಿನ ಊಟದ ಕ್ರಮಗಳ ಬಗ್ಗೆ ಅಷ್ಟಾಗಿ ಗೊತ್ತಿರಲಿಲ್ಲ. ಬೆಳಗ್ಗಿನಿಂದ ತಿರುಗಿ ತಿರುಗಿ ಹಸಿವೇರಿದ್ದ ನಾವುಗಳು  ಹೋಟೆಲ್ಲಿಗೆ ನುಗ್ಗಿ  ಮಂಗಳೂರಿನ ಸ್ಪೆಷಲ್ ಮೀಲ್ಸ್ ಗೆ ಆರ್ಡರ್ ಮಾಡಿದೆವು. ದೊಡ್ಡ ಬಟ್ಟಲಿನ ನಡುವಿನಲ್ಲಿ ಹತ್ತಾರು ಪುಟ್ಟ ಪುಟ್ಟ ಗಿಣ್ಣಾಲುಗಳಲ್ಲಿ ಪಲ್ಯ ಸಾರು ಪಾಯಸ ಸಾಂಬಾರು ಮಜ್ಜಿಗೆ ಹುಳಿಯಂತಹ ಅಡುಗೆಗಳ ಬೆಚ್ಚಗೆ ಕುಳಿತ್ತಿತ್ತು.  ಬಟ್ಟಲ ನಡುವಿನ ಜಾಗದಲ್ಲಿ ಹಬೆಯಾಡುತ್ತಿರುವ ಕೆಂಪಕ್ಕಿ ಅನ್ನ. 

ಬೇಗ ಊಟ ಮುಗಿಸಿ ಸೋಮೇಶ್ವರ ಬೀಚಿನ ಕಡೆಗೆ ಹೋಗಬೇಕಾದುದರಿಂದ ನಾವೆಲ್ಲ ಅತ್ತಿತ್ತ ಕಣ್ಣು ಹಾಯಿಸದೆ  ಕೈ ಬಾಯಿಗೆ ಕೆಲಸ ಕೊಟ್ಟೆವು. 
ಪುಷ್ಕಳ ಬೋಜನದ ನಂತರ ಬಸ್ಸೇರಿದಾಗ ಹತ್ತಿರ ಕುಳೀತ ಗೆಳತಿ ‘ ಇದೆಂತಾ ಊಟ? ಮಂಗಳೂರಿನವರು ಹೀಗಾ ಅಡುಗೆ ಮಾಡೋದು? ಅಂದಳು. 
ಯಾಕೇ ಏನಾಯ್ತು? ಅಷ್ಟೊಂದು ಚೆನ್ನಾಗಿತ್ತಲ್ಲ ಊಟ.. ನೋಡಿಲ್ಲಿ ಇನ್ನೂ ನನ್ನ ಕೈಯಲ್ಲಿ  ಬೇಳೆ ತೊವ್ವೆಯ ಪರಿಮಳ  ಇನ್ನೂ ಹೋಗಿಲ್ಲ ಅಂದೆ.
ಅದೆಂತಾ ತೊವ್ವೆ? ಅದಕ್ಯಾಕೆ ಅಷ್ಟೊಂದು ಬೆಲ್ಲ ಹಾಕಿದ್ರು? 

ಮಂಗಳೂರಿನ ಅಡುಗೆಯಲ್ಲಿ ಸ್ವಲ್ಪ ಬೆಲ್ಲ ಹಾಕೋದು ಮಾಮೂಲಿ.. ಆದ್ರೂ ತೊವ್ವೆಗೆಲ್ಲಾ ಬೆಲ್ಲ ಹಾಕೋದಿಲ್ಲ ಆದ್ದರಿಂದ ‘ಅಷ್ಟೆಲ್ಲಾ ಸಿಹಿ ಎಲ್ಲಿತ್ತೇ’ ಅಂದೆ. 
‘ನೋಡೇ ಆ ಬೇಳೆ ಬೇರೆ ಕೆಂಪಗೆ ಹುರ್ದು ಬೇಯಿಸಿದ್ರಲ್ಲಾ .. ಅದು ಸಿಹಿ ಇರ್ಲಿಲ್ವಾ..  ಹಾಗಾ ತೊವ್ವೆ ಮಾಡೋದು? ಅನ್ನಕ್ಕೆ ಹಾಕ್ಕೊಂಡ್ರೆ ಎಲ್ಲಾ ಸಿಹಿ ಆಯ್ತು. ಅದು ಬಿಡು ಇಲ್ಲಿನವ್ರಿಗೆ ಒಂದು ಪಾಯ್ಸ ಕೂಡಾ ಮಾಡಕ್ಕೆ ಬರಲ್ಲ.. ಅಲ್ಲಾ ಸೌತೆಕಾಯಿದು ಯಾರಾದ್ರು ಪಾಯ್ಸ ಮಾಡ್ತಾರಾ? ಅದೂ ತೊಂಡೆಕಾಯಿ ಕೂಡಾ ಸೇರ್ಸಿ..  ಅದ್ರಲ್ಲಿ ಒಗ್ಗರಣೆ ಕೂಡಾ ಕಾಣಿಸ್ತಿತ್ತಪ್ಪಾ..  ಮತ್ತೆ ಅದೇನೇ ಅದು ಕೆಂಪು ಬಣ್ಣದ ಅನ್ನ.. ಅಕ್ಕಿ ಸರಿ ತೊಳ್ದಿಲ್ಲ ಅನ್ಸುತ್ತಲ್ಲಾ, ಅನ್ನ ಕೂಡಾ ಸೇರ್ಲಿಲ್ಲ.. ಇದ್ದಿದ್ದರ್ಲಿ ಸಾಂಬಾರ್ ಒಂದು ಚೆನ್ನಾಗಿತ್ತಷ್ಟೆ. ಅದನ್ನೇ ಸ್ಪೂನಿನಲ್ಲಿ ತಿಂದೆ..’  ಎಂದಳು. 

ಅವಳ ಮಾತು ಕೇಳಿ ನಾನು ನಗಲು ಶುರು ಮಾಡಿದೆ. ಮೊದಲೇ ಊಟ ಸರಿಯಾಗದ ಚಿಂತೆಯಿಂದ ಕಂಗೆಟ್ಟಿದ್ದ ಅವಳು ನನ್ನ ನಗುವಿನಿಂದ ಇನ್ನಷ್ಟು ಸಿಟ್ಟಿಗೆದ್ದಳು. 
‘ಏನಾಯ್ತೇ ನಿಂಗೆ? ನಿನ್ನ ಊಟಕ್ಕೇನಾದ್ರೂ  ನಗುವಂತ ಔಷದಿ ಹಾಕಿದ್ದಾರಾ’ ಅಂದಳು.
‘ಅಯ್ಯೋ ಕರ್ಮ ಕಣೇ.. ನೀನು ತೊವ್ವೆ ಅಂದ್ಕೊಂಡಿದ್ದು ಹೆಸ್ರು ಬೇಳೆ ಪಾಯಸ, ನೀನು ಪಾಯಸ ಅಂದ್ಕೊಂಡಿದ್ದ ಬಿಳಿ ಪದಾರ್ಥ ಮಜ್ಜಿಗೆ ಹುಳಿ ಕಣೇ, ಮತ್ತೆ ಈ ತರದ ಅನ್ನಕ್ಕೆ ಕುಚ್ಚಿಲಕ್ಕಿ ಅಂತಾರೆ’  ಅಂದೆ. 
‘ಅಯ್ಯೋ ಎಂತೆಂತ ಮಾಡ್ತೀರೋ ನೀವು.. ನಮ್ಮೂರಿನ ಊಟನೇ ಚಂದ’ ಅಂದಳು. 
ದಾರಿಯುದ್ದಕ್ಕೂ ಹಸಿವು ಎಂದು ಒದ್ದಾಡುತ್ತಿದ್ದ ಅವಳ ಕಷ್ಟ ಹೊಟ್ಟೆ ತುಂಬಿಸಿಕೊಂಡಿದ್ದ ನಮಗಾಗಲೇ ಇಲ್ಲ.
ಸ್ವಲ್ಪ ದಿನ ಕಳೆದು ಚೌತಿ ಹಬ್ಬ ಬಂದಿತ್ತು. ಆ ಸಲ ಚೌತಿಗೆ ಅವಳೂರಿಗೆ ನನ್ನ ಸವಾರಿ. 

ನಾವು ತಲುಪುವಾಗ ಸಂಜೆಗತ್ತಲು ಕವಿದಿತ್ತು.ಕರೆಂಟ್ ಹೋಗಿ ಮಬ್ಬು ಬೆಳಕಿನ ದೀಪಗಳು ಸಣ್ಣಗೆ ಬೀಸುತ್ತಿದ್ದ ಗಾಳಿಗೆ ಹೊಯ್ದಾಡುತ್ತಿದ್ದವು. ನನಗೋ ಇದು ಅಪರಿಚಿತ ಜಾಗ. ಗೆಳತಿಯ ಬಾಲದಂತೆ ಅವಳ ಹಿಂದಿನಿಂದಲೇ ನಡೆದಾಡುತ್ತಿದ್ದೆ.  ನಾನು ಸ್ನಾನ ಮುಗಿಸಿ ಬರುವಾಗ ಅವಳ ಮನೆಯವರೆಲ್ಲಾ ಊಟಕ್ಕೆ ಸಿದ್ಧರಾಗಿ ತಟ್ಟೆಯೆದುರು ಕುಳಿತಿದ್ದರು. ನಾನು ಅವರೊಡನೆ ಸೇರಿದೆ. ಅವಳಮ್ಮ ‘ ನಿಂಗೆ ಅಂತ ಇವತ್ತು ಏನೂ ಸ್ಪೆಷಲ್ ಮಾಡ್ಲಿಲ್ಲಮ್ಮಾ.. ನಾಳೆ ಹಬ್ಬ ಅಲ್ವಾ.. ಹಾಗೆ ಇಡೀ ದಿನ ತೊಳಿಯೋದು ಬಳಿಯೋದೇ ಆಯ್ತು. ಇದು ನಮ್ಮ ಮಾಮೂಲಿ ಊಟ ಅಂತ  ಸರಿ ಸುಮಾರು ಕ್ರಿಕೆಟ್ ಬಾಲ್ ನ ಗಾತ್ರದ ಎರಡು ಮುದ್ದೆಗಳನ್ನು ಬಡಿಸಿದರು. ಅದರ ಪಕ್ಕದಲ್ಲಿ ಹಸುರು ಸೊಪ್ಪಿನ ಪಲ್ಯ ಇನ್ನೊಂದು ಕಾಳು ಹಾಕಿದ ನೀರು ಸಾರಿನಂತಹದ್ದು.ನಾನು ಮೊದಲ ಸಲ ಮುದ್ದೆ ನೋಡಿದ್ದು.ಯಾಕೋ ಅದರ ಗಾತ್ರ ನೋಡಿ ಹೆದರಿಕೆಯಾಗಿ  ಅವರಮ್ಮನಿಗೆ ಹೇಳಿ ಒಂದು ಮುದ್ದೆ ತೆಗೆಸಿದೆ. ಮೆಲ್ಲಗೆ ಒತ್ತಿದರೆ ಬೆರಳು ಒಳ ಹೋಯಿತು. ಅಕ್ಕ ಪಕ್ಕ ನೋಡಿದೆ. ಅವರೆಲ್ಲಾ ಅದನ್ನು ಕೈಯಲ್ಲಿ ತುಂಡು ಮಾಡಿ ಸಾರಿಗೆ ಮುಳುಗಿಸಿ ಬಾಯಲ್ಲಿಟ್ಟುಕೊಳ್ಳುತ್ತಿದ್ದರು. ಹಾಗಿದ್ರೆ ತಿನ್ನಲೇನು ಕಷ್ಟ ಇಲ್ಲ ಇದು ಎಂದುಕೊಂಡು ತುಂಡು ಬಾಯೊಳಗಿಟ್ಟು ಜಗಿದೆ. ಹಲ್ಲಿಗೆಲ್ಲಾ ಮೆತ್ತಿಕೊಂಡಿತು.ಒಂದಿಷ್ಟು ನೀರು ಕುಡಿದು ಅದನ್ನು ಹೊಟ್ಟೆಯೊಳಗೆ ತಳ್ಳಿದೆ.ಮತ್ತಿನ ತುಂಡು ಹೀಗೇ.. ಎರಡು  ಲೋಟ ನೀರು ಕಾಲಿ ಆದರೂ ಕಾಲು ಭಾಗದಷ್ಟು ಮುದ್ದೆ ಮುಗಿದಿರಲಿಲ್ಲ. ಮುಸಿ ಮುಸಿ ನಗುತ್ತಿದ್ದ ಅವಳ ಮನೆಯವರ ಜೊತೆ ತಾನೂ ನಗುತ್ತಿದ್ದ ಗೆಳತಿ ‘ ಅದನ್ನು ಜಗೀಬೇಡ್ವೇ.. ಡೈರೆಕ್ಟ್ ನುಂಗೋದೇ.. ನಿಂಗೆ ಸೇರಲ್ಲ ಅನ್ನಿಸಿದ್ರೆ ಬಿಡು, ಅನ್ನ  ಮಾಡಿ ಬಡ್ಸಕ್ಕೆ ಹೇಳ್ತೀನಿ ಅಮ್ಮನ ಹತ್ರ ’ ಅಂದಳು. ಆಯ್ಯಯ್ಯೊ ಬೇಡ..ಇದನ್ನೇ ತಿಂತೀನಿ. ಎಂದು ಅವಳು ಹೇಳಿದಂತೆ ನುಂಗುವ ಪ್ರಯತ್ನ  ಮಾಡಿದರೂ ನೀರು ಮಾತ್ರ ನುಂಗಿ ಹೋಗುತ್ತಿತ್ತೇ ವಿನಃ ಮುದ್ದೆ ಬಾಯೊಳಗೇ ಉಳಿದುಕೊಳ್ಳುತ್ತಿತ್ತು. ಎಲ್ಲರೊಡನೆ ನಾನೂ ಎದ್ದು ಕೈ ತೊಳೆದು ಬಂದರೂ ಹೊಟ್ಟೆ ಶಾಂತವಾಗಿರಲಿಲ್ಲ. ರಾತ್ರೆಯಿಡೀ ನಿದ್ದೆ ಬಾರದೇ  ಅತ್ತಿಂದಿತ್ತ ಹೊರಳಾಡಿದ್ದೆ.
 
"One cannot think well,  sleep well, if one has not dined well.." ಈ ಮಾತಂತೂ ನನ್ನ ಮಟ್ಟಿಗೆ ನಿಜವೇ ಆಗಿತ್ತು. 
ಬೆಳಗಾದದ್ದೇ ತಡ  ಹಸಿವು ಇನ್ನಷ್ಟು ಹೆಚ್ಚಾಯಿತು.  ಗೆಳತಿಯ ಹತ್ತಿರ ಗುಟ್ಟಾಗಿ ‘ತಿಂಡಿ ಏನೇ’ ಎಂದೆ. ಬೆಳಗ್ಗೆ ಯಾವಾಗ್ಲೂ ನಮ್ಮನೇಲಿ ಮುದ್ದೆ ಕಣೇ ಎಂದಳು. ಅತ್ತಿತ್ತ ನೋಡಿ ಅವರ ಮನೆಯವರಾಗಲೇ ಪೂಜೆ ಮುಗಿಸಿ  ನೈವೇದ್ಯ ಮಾಡಿಟ್ಟಿದ್ದ ಬಾಳೆ ಹಣ್ಣನ್ನು ಗಬ ಗಬನೆ ನುಂಗಿ ಹೊಟ್ಟೆ ತುಂಬಿಸಿಕೊಂಡೆ.
 ಗೆಳತಿಯ ಅಂದಿನ ಕಷ್ಟದರಿವು  ಈಗ ನನಗೂ ಆಯಿತು. ಹಸಿವು ಎಷ್ಟೇ ಇದ್ರೂ ಬಾಯಿಗೆ ಸೇರದ್ದನ್ನು ಹೊಟ್ಟೆಯೂ ಬಯಸುವುದಿಲ್ಲ ಅಲ್ವಾ.. 
-ಅನಿತಾ ನರೇಶ್ ಮಂಚಿ.

ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ಹಸಿವು ಮತ್ತು ಊಟ: ಅನಿತಾ ನರೇಶ್ ಮಂಚಿ.

  1. ಒಂದೊಂದು ಭಾಗದಲ್ಲಿ ಒಂದೊಂದು ಬಗೆಯ ಊಟದ ವಿಶೇಷತೆಗಳಿರುತ್ತವೆ……ಸವಿದಾಗಲೇ ಗೊತ್ತಾಗೋದು. ಅಂಥ ಬಗೆಯ ಅಡುಗೆಯ ಊಟದ ರುಚಿ  …ಚೆನ್ನಾಗಿದೆ ಮೇಡಂ…..

Leave a Reply

Your email address will not be published. Required fields are marked *