ಹಸಿರು ಸೀರೆ ಉಟ್ಟು ನೆರಿಗೆ ಒದೆಯುತ್ತಾ ನಡೆದ ಹುಡುಗಿಯರು: ಅಮರದೀಪ್

ಇದು ಮಳೆಗಾಲವಾ? ಅನುಮಾನವಾಯಿತು. ಕಡು ಬೇಸಿಗೆಗಿಂತ ಧಗೆಯಾದ ವಾತಾವರಣ. ಮಳೆಗಾಲವೇ ಹೀಗೇ… ಇನ್ನು ಬೇಸಿಗೆ ಹೇಗೆ? ಎನ್ನುವ ಆತಂಕ ಬೇರೆ. ಆಗಾಗ ಆಯಾಸ, ಸುಸ್ತು, ಚೂರು ರೆಸ್ಟ್ ಬೇಕು ಎನ್ನುವ ವಯಸ್ಸು ನಾವು ಹರೆಯದಿಂದ ಇಪ್ಪತ್ತು ಇಪ್ಪತ್ತೈದು ವರ್ಷಗಳನ್ನು ದಾಟಿ ಮುಂದೆ ಬಂದಿದ್ದೇವೆನ್ನುವುದಕ್ಕೆ ಮತ್ತು ಗಂಭೀರತೆ, ತಿಳುವಳಿಕೆಯಿಂದ, ಘನತೆಯಿಂದ ಇರಲೇಬೇಕಾದ ಅನಿವಾರ್ಯತೆಗೆ ಕಾರಣವಾಗುತ್ತದೆ. ಯಾವಾಗ ಮಳೆ ಬರುತ್ತದೋ, ಮತ್ತೆ ಬಿಸಿಲು ಸುರಿಯುತ್ತದೋ ತಿಳಿಯುವುದಿಲ್ಲ.

ಪ್ರತಿ ದಿನ ಆಫೀಸ್, ಮನೆ, ಮಾರ್ಕೆಟ್ಟು, ಕೊನೆಗೆ ತಲೆಕೆಟ್ಟು ಹೋದರೆ ಒಂದು ಸಿನಿಮಾ, ಎರಡು ಜುರುಕಿ ಸಿಗರೇಟು, ಅಪರೂಪಕ್ಕೆ ಅಥವಾ ಸಿಟ್ಟಿಗೆದ್ದು ಮದ್ಯಪ್ರದೇಶ ಪ್ರವೇಶ. ಅದು ಬಿಟ್ಬರೆ ಖುಷಿಯಿಂದ ಕೊರಳಿಗೆ ಕ್ಯಾಮೆರಾ ನೇತಾಕಿಕೊಂಡು ಒಬ್ಬನೇ ಅಥವಾ ಜೊತೆಗೊಬ್ಬರು ಸಿಕ್ಕರೆ ತಿಳಿದಲ್ಲಿಗೆ ಹೊರಡುವುದು, ಇವೇ ಆದುವು. ಇಂದು ಸಂಜೆ ಬೇಗ ಬಂದು ಮನೆ ಸೇರಿದ್ದೇ ಸರಿಯಾಯ್ತು. ನೋಡಿದರೆ ತುಂಬಿದ ಮೋಡ, ಆಗಾಗ ಗುಡುಗು, ಅಚಾನಕ್ಕಾಗಿ ಸಿಡಿಲ ಸದ್ದು. ಎಲ್ಲಿ ಯಾರಿಗೆ, ಯಾವ ಪ್ರಾಣಿಗೆ ಏನಾಯ್ತೋ ಎಂಬ ದುಗುಡವಾಗುವುದು ನನಗೆ ತೀರ ಸಹಜವಾಗಿದೆ. ಮಂಜುಳಾ, “ ನಾಳೆ ಆಯುಧ ಪೂಜೆ, ನಾಡಿದ್ದು, ವಿಜಯದಶಮಿ” ಎಂದಳು. ಪೂಜೆಗೆ ಒಂದಿಷ್ಟು ಹೂವು, ಮತ್ತೊಂದು ಏನೋ ಹೇಳಿದ್ದಳು ತರುವುದಕ್ಕೆ. ಮರೆತು ಸೀದಾ ಮನೆಗೆ ಬಂದಿದ್ದೆ. ಸ್ವಲ್ಪ ಮಳೆ ತಗ್ಗಿದ ಸಮಯ ನೋಡಿಕೊಂಡು ಮಾರ್ಕೆಟ್ ಗೆ ಹೋಗಿ ಬಂದೆವು. ಮಂಜುಳಾ ಕೈಯಲ್ಲಿದ್ದ ಹೊಸ ಹಸಿರು ಬಣ್ಣದ ಕುಪ್ಪಸದ ಕಣ ಇಂಥದ್ದೇ ಆಯುಧ ಪೂಜೆ ದಿನವೊಂದಕ್ಕೆ ಎಳೆದೊಯ್ಯಿತು……

ಇಪ್ಪತ್ತೈದು ವರ್ಷಗಳ ಹಿಂದೆಯೂ ಇದೇ ಮಳೆಗಾಲವಿತ್ತು. ನಾವೂ ಆಗತಾನೇ ಚಿಗುರಾಗುತ್ತಿದ್ದ ಮೀಸೆಯನ್ನು ಹಾಗೆ ಒಮ್ಮೆ ಬೆರಳಿಗೆ ಸೋಕಿಸಿ ಒಮ್ಮೆ ಜೇಬು, ಮೈಮೇಲಿನ ಬಟ್ಟೆ, ಮತ್ತೊಮ್ಮೆ ಕಾಲಲ್ಲಿದ್ದ ದುಬಾರಿಯಲ್ಲದ ಚಪ್ಪಲಿ ಕಡೆಗೆ ಒಮ್ಮೆ ನೋಡುತ್ತಿದ್ದೆವು. ಎದೆಗೆ ಪುಸ್ತಕ ಅಂಟಿಸಿಕೊಂಡು ಗುಸುಗುಸು ಪಿಸುಪಿಸು ಅನ್ನುತ್ತಾ ನಕ್ಕಾಗೊಮ್ಮೆ ಮುಖದ ಮೇಲೆ ಎಡಗೈ ಅಡ್ಡವಿಕ್ಕಿಕೊಂಡು ಗುಲ್ ಮೊಹರು ಹೂವಿನ ಸಾಲು ಮರದ ನೆರಳಲ್ಲಿ ಕ್ಯಾಟ್ ವಾಕ್ ಮಾಡುತ್ತಿದ್ದ ಬಣ್ಣ ಬಣ್ಣದ ಉಡುಪುಗಳ ಚೆಂದನೆ ನಾಲ್ಕೇ ಸಂಖ್ಯೆಯಲ್ಲಿ ಹುಡುಗಿಯರು. ಆ ಕಾಲೇಜಿನ ಮೊದಲ ವರ್ಷದ ಸುಳಿಗಾಳಿಯೇ ಹಾಗೆ. ವರ್ಷಾನುಗಟ್ಟಲೇ ಯೂನಿಫಾರ್ಮ್ ನಲ್ಲೇ ಶಾಲಾ ದಿನಗಳನ್ನು ಕಳೆದ ನಮಗೆ ಯೂನಿಫಾರ್ಮ್ ಇಲ್ಲದೇ ಇಷ್ಟಪಟ್ಟ ಬಟ್ಟೆಗಳನ್ನು ಹಾಕಿಕೊಂಡು ಕೈ ಬೀಸಿ ನಡೆಯುವಾಗಿನ ಸಂತಸವೇ ಬದಲಿ. ನಮ್ಮ ಓದಿನ ನಂತರದ ದಿನಗಳಲ್ಲಿ ಕಾಲೇಜನಲ್ಲೂ ಸಮವಸ್ತ್ರ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆಯಷ್ಟೇ.

ಮಳೆಯಲ್ಲೇ ತೊಯ್ದು ಓಡಾಡುವಂಥ ಜಾಗಗಳಲ್ಲಿ ಪಾಚಿಗಟ್ಟಿದ ಹಸಿರು, ತೊಟ್ಟಿಕ್ಕುತ್ತಿರುವ ಮರ ಗಿಡಗಳ ಸಾಲುಗಳಿದ್ದವು. ನಾವು ರಸ್ತೆಯ ಇಕ್ಕೆಲಗಳಲ್ಲಿ, ಮಧ್ಯೆ ಗುಂಡಿಗಳಲ್ಲಿ ತುಂಬಿದ ಮಳೆ ನೀರು ಎಲ್ಲಿ ದಾರಿಹೋಕ ಗಾಡಿಗಳ ಭರಾಟೆಗೆ ಮೈಮೇಲಿನ ಬಟ್ಟೆಗಳೊಂದಿಗೆ ತಬ್ಬುತ್ತದೋ ಏನೋ!.. ಅದೇ ಎಚ್ಚರಿಕೆಯಲ್ಲಿ ದಾರಿ ಕಳೆದು ಕಾಲೇಜು ಸೇರಿದರೆ ಸೌಖ್ಯ. ನಾನು ಕಾಲೇಜು ಓದಿದ್ದು, ದಾವಣಗೆರೆಯಲ್ಲಿ. ಓದಿನ ಮಧ್ಯೆ ಕೆಮ್ಮಣ್ಣುಗುಂಡಿ, ಕಲ್ಲೆತ್ತಗಿರಿ ಫಾಲ್ಸ್, ಬಾಬಾಬುಡೇನ್ ಗಿರಿ, ನೋಡಿದ್ದೆ. ಮಲೆನಾಡ ಸೀಮೆಯ ದಟ್ಟ ಹಸಿರ ನಡುವೆ ತಿರುಗಾಡುವ ಮಜವೇ ಬೇರೆ. ಆಗಿನಿಂದಲೂ ಈ ಹಸಿರು ಬಣ್ಣದ ಕಡೆ ನನಗೆ ಚೂರು ಒಲವು.

ಕೋ ಎಜ್ಯುಕೇಷನ್ ಇದ್ದ ನಮ್ಮ ಡಿಪ್ಲೋಮಾ ಕಾಲೇಜ್ ನಲ್ಲಿ ನಮ್ಮದೇ ಕಮರ್ಷಿಯಲ್ ಪ್ರಾಕ್ಟೀಸ್ ವಿಭಾಗದಲ್ಲಿ ಅತಿ ಹೆಚ್ಚು ಹುಡುಗಿಯರ ದಂಡು. ಯಾವ ಟೆಕ್ನಿಕಲ್ ಕೋರ್ಸಿನ ಅಡ್ಮಿಷನ್ ಸಿಕ್ಕಲ್ಲ ಅನ್ನೋದಿದ್ದರೆ ಈ ವಿಭಾಗಕ್ಕೆ ಕೊನೆ ಆಯ್ಕೆ ಮಾಡಿಕೊಂಡು ಬರುತ್ತಾರೆನ್ನುವ ಮಾತಿತ್ತು,ಇರಲಿ. ಆ ವರ್ಷದ ಆಯುಧ ಪೂಜೆ ವಿಶೇಷವೆನಿಸಿತ್ತು. ನಮ್ಮ ವಿಭಾಗದ ಹುಡುಗಿಯರೆಲ್ಲಾ ಒಟ್ಟಾಗಿ ಮಾತಾಡಿಕೊಂಡು ಆಯುಧ ಪೂಜೆ ದಿನದಂದು ಸಾಲು ಸಾಲಾಗಿ ಹಸಿರು ರೇಷಿಮೆ ಸೀರೆ ಉಟ್ಟು ನೆರಿಗೆ ಒದೆಯುತ್ತಾ ಬರುತ್ತಿದ್ದರೆ ಇಡೀ ಕಾಲೇಜಿನ ಹುಡುಗರೆಲ್ಲರ ಕಣ್ಣಲ್ಲಿ ಮಿಂಚು.

ನಿನ್ನೆ ದಸರಾ ಗೊಂಬೆಗಳ ಪ್ರದರ್ಶನ, ದೇವಿ ಪೂಜೆ ಅಂಗವಾಗಿ ಕಿಟಿ ಪಾರ್ಟಿ ಪ್ರೆಂಡ್ಸ್, ಅಕ್ಕಪಕ್ಕದ ಹೆಂಗಸರು, ಪಿಂಕ್ ರೆವಿಲ್ಯೂಷನ್, ಕೆಂಪು ಸೀರೆ ಪಡೆ, ಹೀಗೆ ಒಂದೇ ಬಣ್ಣದ ಸೀರೆಯುಟ್ಟು ಸೆಲ್ಫಿ ತೆಗೆದು ವಾಟ್ಸಪ್ ಡಿ.ಪಿ. ಗೋ ಎಫ್.ಬಿ. ಸ್ಟೇಟಸ್ ಗೋ ಹಾಕಿ, ಅಥವಾ ದಿನಪತ್ರಿಕೆಗೆ ಕಳಿಸಿ ಇಡೀ ಪುಟದಲ್ಲಿ ಆವರಿಸಿದ್ದನ್ನು ನೋಡಿದ್ದೆ. ಮೊಬೈಲ್, ಎಫ್. ಬಿ. ವಾಟ್ಸಪ್ಪು ಗಳೇ ಇಲ್ಲದ ಕಾಲದ ಹಸಿರು ನೆರಿಗೆ ಒದೆವ ಸುಂದರಿಯರ ಗುಂಪನ್ನು ನೋಡಿ, ರೇಗಿಸಿ, ಪಟ್ಟ ಖುಷಿಯಂತೂ ಇಂದಿನ ಯಾವ ಸೆಲ್ಫಿಯೂ ನೀಡುವುದಿಲ್ಲ ಆ ಮಾತು ಬೇರೆ. ಸರಿ, ಹಿಂದಿನ ದಿನ ಯಾರದೋ ಒಂದು ಕ್ಯಾಮೆರಾ ಪಡೆದು ರೀಲ್ ತುಂಬಿಸಿ, ಈ ಹಸಿರು ತಂಪಿನ ಹುಡುಗಿಯರು ಮತ್ತು ಮತ್ತವರ ಜೊತೆ ನಮ್ಮದೂ ಫೋಟೋಗಳನ್ನು ರೀಲ್ ಖಾಲಿಯಾಗುವವರೆಗೂ ತೆಗೆದದ್ದೇ ತೆಗೆದದ್ದು.

ಹಾಸ್ಟಲ್ ಲೈಫ್ ನ ಡಿವೈಡಿಂಗ್ ಸಿಸ್ಟಮ್ ನಲ್ಲಿ ಊಟದ ಖರ್ಚಿಗೆ ಮನಿ ಆರ್ಡರ್ ಬರುತ್ತಿತ್ತು. ಅದೇ ದುಡ್ಡಲ್ಲಿ ಚೂರು ಪಾರು ಉಳಿಸಿ ಪ್ರಿಂಟ್ ಹಾಕಿಸಿದ ಫೋಟೋಗಳು ಒಬ್ಬರಿಂದೊಬ್ಬರಿಗೆ ನೋಡುವ ದಾರಿಯಲ್ಲೇ ಗಾಯಬ್ ಆದವು. ಹೋಗಲಿ ಬಿಡು, ನೆಗೆಟೀವ್ಸ್ ಇವೆ, ದುಡ್ಡಿದ್ದಾಗ ಪ್ರಿಂಟ್ ಹಾಕಿಸಿದರಾಯಿತು ಅಂದುಕೊಂಡದ್ದಷ್ಟೇ ಬಂತು. ಜೊತೆಗಿರುವ ಖತರ್ನಾಕ್ ಗೆಳೆಯರು ಆ ನೆಗೆಟಿವ್ಸ್ ಗಳನ್ನೂ ಕದ್ದು ಬಿಟ್ಟರು.

ಪ್ರತಿ ಮಳೆಗಾಲ ಕೊನೆಗೆ ಹವಾಯಿ ಚಪ್ಪಲಿ ಎತ್ತಿಟ್ಟ ನಂತರ ಹಿಂಭಾಗ ಚಿತ್ತಾರವಾದ ಪ್ಯಾಂಟು, ಈ ಆಯುಧ ಪೂಜೆಯ ಸರದಿ, ಮಳೆ ಹನಿಯ ತಂಪು, ಕಾಲೇಜ್ ಸನಿಹದ ಗಿಡ ಮರಗಳ ಹಸಿರೆಲೆ ತೊಟ್ಟಿಕ್ಕುವ ಹನಿಗಳು ನೆನಪಾಗುತ್ತವೆ. ಮುಖ್ಯವಾಗಿ ಹಸಿರು ಸೀರೆ ಉಟ್ಟು ನೆರಿಗೆ ಒದೆಯುತ್ತಾ ಮೆಟ್ಟಿಲು ಹತ್ತುತ್ತಾ ಬಿಚ್ಚುಗೂದಲನ್ನು ಪದೇ ಪದೇ ಕೆನ್ನೆಯಿಂದ ಕಿವಿ ಹಿಂದಕ್ಕೆ ಎಳೆಯುತ್ತಿದ್ದ ನುಣುಪು ಕೈಗಳ ಹುಡುಗಿಯರು…… ಈಗಿನಂತೆ ಸೆಲ್ಫಿ ತೆಗೆದು ಎಫ್. ಬಿ. ಯಲ್ಲಿ ಪೋಸ್ಟ್ ಮಾಡುವವರಿಗಿಂತ ಚೂರು ಹೆಚ್ಚೇ ನೆನಪಾಗುತ್ತಾರೆ.
-ಅಮರದೀಪ್


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x