ಸೃಷ್ಟಿ ಸೌಂದರ್ಯದ ತವರೂರಾದ ಮಲೆನಾಡಿನ ಜಿಲ್ಲೆಯಾದ್ಯಂತ ನೂರಾರು ಹವ್ಯಕ ಕುಟುಂಬಗಳು ಅಲ್ಲಲ್ಲಿ ನಾಲ್ಕು ಐದು ಮನೆಗಳಿಂದ ಸಣ್ಣ ಸಣ್ಣ ಹಳ್ಳಿಗಳಾಗಿ ಪುರಾತನ ಕಾಲದಿಂದಲೂ ನೆಲೆ ನಿಂತಿವೆ. ಒಂದೊಂದು ಹಳ್ಳಿಗೂ ಒಂದೊಂದು ಹೆಸರು.
ಹಾಗೆ ಅಲ್ಲಿ ಆಚರಿಸುವ ಹಬ್ಬಗಳಲ್ಲೂ ವಿಶೇಷತೆಯಿದೆ. ಅವುಗಳಲ್ಲಿ “ಗಣೇಶ ಹಬ್ಬ”ವೂ ಒಂದು.
ಹವ್ಯಕರಲ್ಲಿ ಈ ಗಣೇಶ ಹಬ್ಬಕ್ಕೆ ಚೌತಿ ಹಬ್ಬವೆಂದು ಹೇಳುವ ವಾಡಿಕೆ. ತಲೆ ತಲಾಂತರದಿಂದ ಮನೆತನದಲ್ಲಿ ನಡೆದುಕೊಂಡು ಬಂದ ಹಲವು ಪದ್ಧತಿಗಳಿದ್ದು ಅದು ಈಗಲೂ ಮುಂದುವರೆದಿದೆ. ಹಬ್ಬಕ್ಕೆ ಹದಿನೈದು ದಿನಗಳಿರುವಾಗಲೆ ಹಬ್ಬದ ತಯಾರಿ ಶುರುವಾಗುತ್ತದೆ.
ಭಾದ್ರಪದ ಶುಕ್ಲ ತೃತೀಯ ದಿನ ಸ್ವರ್ಣ ಗೌರಿ ವೃತವಾದರೆ ಮಾರನೆ ದಿನ ಚತುರ್ಥಿ ಚೌತಿಯ ದಿನ ಈ ಹಬ್ಬ ಆಚರಿಸುವ ಪದ್ಧತಿ. ಮಳೆಗಾಲ ಅಲ್ಪ ಸ್ವಲ್ಪ ಇರುತ್ತದೆ. ಅಡಿಕೆ ತೋಟದ ಕೆಲಸ ಹಬ್ಬದ ತಯಾರಿಗೆ ಅಡ್ಡಿ ಆಗದಂತೆ ಪೂರೈಸಿಕೊಳ್ಳುವ ಜವಾಬ್ದಾರಿ ಬೇರೆ.
ಹಬ್ಬಕ್ಕೆ ಆಹ್ವಾನಿಸುವ ಪದ್ಧತಿ :
ಹಳ್ಳಿ ಕಡೆ ಹಬ್ಬಕ್ಕೆ ಒಬ್ಬರನ್ನೊಬ್ಬರು ಕರೆಯುವ ರೂಢಿ ” ಹ್ವಾ ಯಮ್ಮನಿಗೆ ಹಬ್ಬಕ್ಕೆ ಬರವು”. ಇನ್ನು ಮನೆ ಮಕ್ಕಳು ಕೆಲಸದ ನಿಮಿತ್ತ ಊರಿಂದ ಹೊರಗೆ ಎಲ್ಲೇ ಇರಲಿ ಸಂಸಾರ ಸಮೇತ ಹುಟ್ಟಿದೂರಿಗೆ ಬಂದು ಹಿರಿಯರೊಂದಿಗೆ ಹಬ್ಬ ಆಚರಿಸಬೇಕು. ಇದು ಎಲ್ಲರಲ್ಲೂ ಸ್ನೇಹ ಸೌಹಾರ್ದ ಬೆಳೆಸಿ ಹಬ್ಬಕ್ಕೆ ಮೆರುಗು ತರುತ್ತದೆ.
ಮದುವೆಯಾದ ಮನೆಯ ಹೆಣ್ಣು ಮಕ್ಕಳನ್ನು ನೆಂಟರಿಷ್ಟರನ್ನು ಖುದ್ದಾಗಿ ಹೋಗಿ ಕರೆಯಬೇಕು. ಕರೆಯದಿದ್ದರೆ ಆಡಿಕೊಳ್ಳುತ್ತಾರೆ. ಹಳ್ಳಿಯ ಜನರಲ್ಲಿ ಮರ್ಯಾದೆಗೆ ಹೆಚ್ಚು ಪ್ರಾಶಸ್ತ್ಯ. ಯಾವುದೆ ಹಬ್ಬ ವಿಶೇಷ ದಿನಗಳಿಗೆ ಖುದ್ದಾಗಿ ಹೋಗಿ ಕರೆಯಲೇ ಬೇಕು. ಅವರುಗಳು ಹಬ್ಬದ ಮಾರನೆ ದಿನ ಬಂದು ಹೋಗುವ ವಾಡಿಕೆ.
ಹಬ್ಬದ ತಯಾರಿ :
ಈ ಹಬ್ಬಕ್ಕೆ ಚಕ್ಕುಲಿ ವಿಶೇಷ ತಿಂಡಿ. ನಾಲ್ಕಾರು ದಿನ ಮೊದಲೇ ಚಕ್ಕುಲಿ ಮಾಡಿಟ್ಟುಕೊಳ್ಳುವ ರೂಢಿ. ಹಳೆ ಅಕ್ಕಿಯನ್ನು ನೀರಿನಲ್ಲಿ ತೊಳೆದು ನೆರಳಲ್ಲಿ ಒಣಗಿಸಿ ಹುರಿದು ಅಳತೆಗೆ ತಕ್ಕಂತೆ ಉದ್ದಿನ ಬೇಳೆ ಅದೂ ಕೂಡಾ ಹುರಿದು ಓಂ ಕಾಳು ಹಾಕಿ ಮನೆಯಲ್ಲೆ ಬೀಸುವ ಕಲ್ಲಿನಲ್ಲಿ ನುಣ್ಣಗೆ ಹಿಟ್ಟು ಮಾಡಿ ಜರಡಿ ಹಿಡಿದು ಎಳ್ಳು, ಉಪ್ಪು ಬೆರೆಸಿ ಹದವಾದ ಹಿಟ್ಟು ರೆಡಿ ಮಾಡುವುದು ಹೆಂಗಸರ ಕೆಲಸ ; ಕಲೆಸುವಾಗ ಗಂಡಸರ ಕೈ ಜೋಡಣೆಯೊಂದಿಗೆ ; ಮನಸಲ್ಲಿ “ನಿಮ್ಮನೆ ಚಕ್ಲಿ ಭರ್ತಿ ಚೋಲೊ ಆಜೆ” ಎಂದು ಎಲ್ಲರ ಬಾಯಲ್ಲಿ ಹೊಗಳಿಕೆಯ ನಿರೀಕ್ಷೆಯಲ್ಲಿ.
ಈ ಹಿಟ್ಟಿನಲ್ಲಿ ಮಾಡುವ ಕೈ ಸುತ್ತಿನ ಚಕ್ಕುಲಿ ವಿಶೇಷ. ಊರಲ್ಲಿ ಇರುವ ಐದಾರು ಮನೆಗಳಲ್ಲಿ ಒಬ್ಬೊಬ್ಬರ ಮನೆಯಲ್ಲಿ ನಡೆಯುವ ಚಕ್ಕುಲಿ ಸಂಭ್ರಮಕ್ಕೆ “ಚಕ್ಕಲಿ ಕಂಬಳಾ” ಎಂದು ಹೆಸರು. ಹತ್ತಿರದ ನೆಂಟರು,ಅಕ್ಕಪಕ್ಕದ ಮನೆಯವರು ಒಬ್ಬರಿಗೊಬ್ಬರು ನೇರವಾಗಿ, ಸಾಲಾಗಿ ಕುಳಿತು ಚಕ್ಕುಲಿ ಸುತ್ತುವ ಕೆಲಸ ಗಂಡಸರು ಮಾತ್ರ ಮಾಡುತ್ತಾರೆ. ದೊಡ್ಡ ಬಾಣಲೆಯಲ್ಲಿ ಕೊಬ್ಬರಿ ಎಣ್ಣೆ ಹಾಕಿ ಕಟ್ಟಿಗೆ ಒಲೆ ಉರಿಯಲ್ಲಿ ರಾತ್ರಿ ಹನ್ನೆರಡು ಒಂದು ಗಂಟೆಯವರೆಗೂ ಸುತ್ತಿದ ಚಕ್ಕುಲಿ ಬೇಯಿಸುತ್ತಾರೆ. ಇನ್ನು ಚಕ್ಕುಲಿ ಸುತ್ತುವ ಕೈಗಳು ಎಷ್ಟು ಪಳಗಿರುತ್ತಿದ್ದವೆಂದರೆ ಒಮ್ಮೆ ಎಣ್ಣೆ ಹಚ್ಚಿದ ಹಿಟ್ಟು ನಾದಿ ಅಂಗೈಯಲ್ಲಿ ಹಿಡಿದು ಹೆಬ್ಬೆರಳು ಹಾಗೂ ತೋರು ಬೆರಳಲ್ಲಿ ರಿಂಗ್ ರಿಂಗ್ ಡಿಸೈನ್ ನಲ್ಲಿ ಮರದ ಮಣೆಯ ಮೇಲೆ ಸುತ್ತಲು ಪ್ರಾರಂಭಿಸಿದರೆಂದರೆ ಕಣ್ಣು ಮಿಟುಕಿಸದೆ ನೋಡುವಂತಿರುತ್ತದೆ. ಇನ್ನು ಚಕ್ಕುಲಿ ತುಂಬಿಡಲು ದೊಡ್ಡ ದೊಡ್ಡ ಎಣ್ಣೆಯ ಟಿನ್ ಡಬ್ಬ ಮೇಲ್ಭಾಗ ಕೊರೆಸಿ ಮುಚ್ಚಳವಿರುವ ಡಬ್ಬವಾಗಿ ಪರಿವರ್ತಿಸಿಕೊಂಡಿರುತ್ತಾರೆ. ಏಕೆಂದರೆ ಇದರಲ್ಲಿ ಚಕ್ಕುಲಿಗಳನ್ನು ತುಂಬಿಟ್ಟರೆ ಆರು ತಿಂಗಳಾದರೂ ಗರಿಮುರಿಯಾಗಿ ಇರುತ್ತದೆ.
ಚಕ್ಕುಲಿ ಕಂಬಳ ಮುಗಿದ ಮೇಲೆ ಕೊನೆಯ ದಿನ ಗಂಡಸರ ಪೊಗದಸ್ತ ಆಟ ಅಂದರೆ ಇಸ್ಪೀಟ್ ಆಟ. ಸುಮಾರು ಎಂಟು ಹತ್ತು ಜನ ಕಂಬಳಿಯ ನೆಲ ಹಾಸಿನ ಮೇಲೆ ರೌಂಡಾಗಿ ಕೂತು ಮಂತ್ರ ಮುಗ್ದರಾಗಿ ಬೀಡಿ, ಸಿಗರೇಟು,ಕವಳ, ಚಾ ಸೇವನೆಯೊಂದಿಗೆ ಅಹೋ ರಾತ್ರಿ ಇಸ್ಪೀಟ್ ಆಟ. ಮಾತು, ಹಾಸ್ಯ ಚಟಾಕಿ ಗೆದ್ದವರ ಅಟ್ಟಹಾಸದ ನಗೆಯ ವೈಖರಿಯೊಂದಿಗೆ ನಡೆಯುತ್ತದೆ. ಮನೆಯ ಹೆಂಗಸರು ಮಾತಾಡುವಂತಿಲ್ಲ. ಊಟ ತಿಂಡಿ ವ್ಯವಸ್ಥೆ ಮಾಡುವುದಷ್ಟೆ ಅವರ ಕೆಲಸ.
ಭಾದ್ರಪದ ಮಾಸದ ಪಾಡ್ಯದಿಂದಲೆ ಹಬ್ಬ ಬಂತೆಂದು ಲೆಕ್ಕ.
ಹಿಂದೆಲ್ಲ ಚೌತಿ ಹಬ್ಬ ಬಂತೆಂದರೆ ಹೆಂಗಸರು ತಲೆಗೊಂದು ಬಟ್ಟೆ ಸುತ್ತಿಕೊಂಡು ದೊಡ್ಡ ಮನೆಯ ಬಲೆ ಧೂಳು ತೆಂಗಿನ ಪೊರಕೆಯಲ್ಲಿ ಜಾಡಿಸಿ ಅಲ್ಲಲ್ಲಿ ಹರಡಿದ ತೋಟದ ಪರಿಕರ ಅದೂ ಇದೂ ಎಲ್ಲ ಜೋಡಿಸಿ ಗುಡಿಸಿ ಮೊದಲಿನ ದಿನ ತಯಾರಿಸಿಟ್ಟುಕೊಂಡ ಅಣಲೆ ಕಾಯಿ ಕಪ್ಪು ನೀರು ಸಗಣಿಯಲ್ಲಿ ಬೆರೆಸಿ ಅಡಿಕೆಯ ಹಾಳೆಯಲ್ಲಿ ತಯಾರಿಸಿದ್ದ ವಿಶಿಷ್ಟ ಪರಿಕರದಲ್ಲಿ ಸಾರಿಸಬೇಕಿತ್ತು. ಮನೆ ಮುಂದಿನ ಅಂಗಳಕ್ಕೂ ಸಗಣಿ ನೀರು ಹಾಕಿ ತೆಂಗಿನ ಪೊರಕೆಯಲ್ಲಿ ತೊಡೆಯಬೇಕಿತ್ತು. ಎಷ್ಟೋ ಮನೆಗಳು ಅಡಿಕೆಯ ಸೋಗೆ (ಅಡಿಕೆ ಗರಿ)ಯಿಂದ ಮೇಲ್ಚಾವಣಿ ಮುಚ್ಚಿದ ಮನೆಗಳಾಗಿದ್ದವು. ಸೋಗೆಯನ್ನು ಪ್ರತೀ ವರ್ಷ ಬದಲಾಯಿಸಲಾಗುತ್ತಿತ್ತು. ಇಂಥಾ ಮನೆಯಲ್ಲಿ ಸ್ವಚ್ಛತೆ ಇನ್ನೂ ಕಷ್ಟ. ಆದರೆ ಈಗ ಹಳ್ಳಿಗಳಲ್ಲೂ ಷಹರದಂತೆ ಸಾಕಷ್ಟು ಸುಧಾರಣೆ ಅಳವಡಿಸಿಕೊಂಡಿದ್ದಾರೆ.
ಹಳೆಯ ಕಾಲದ ದೊಡ್ಡ ದೊಡ್ಡ ಹೆಂಚಿನ ಮನೆ ಅಡಿಕೆಯ ಗರಿಯ ಸೋಗೆ ಮನೆಗಳೆ ಹೆಚ್ಚು. ಮರದ ರೀಪು,ಪಕಾಸು,ಕೆತ್ತನೆಯ ಉದ್ದ ಕಂಬ,ಮರದ ಸೀಲಿಂಗ್ ಹೆಂಚಿನ ಕೆಳಗೆ, ನಾಗವಂದಿಗೆ, ಮೇಲೇರುವ ಏಣಿ ಮಾಳಿಗೆಗೆ ಇತ್ಯಾದಿ ಹೀಗೆ ಪ್ರತಿಯೊಂದೂ ಮರದ ಕೆತ್ತನೆಯಿಂದಲೆ ಕೂಡಿರುತ್ತಿತ್ತು. ಇದನ್ನು ಈಗಲೂ ಹಳ್ಳಿಗಳಲ್ಲಿ ಕಾಣಬಹುದು. ಗೋಡೆಗಳನ್ನು ಮಣ್ಣಿನಿಂದ ನಿರ್ಮಿಸಲಾಗುತ್ತಿತ್ತು. ಮನೆಗೆ ಎಲ್ಲ ಬಾಗಿಲಿಗೂ ಹೊಸಿಲು ಇದ್ದು ಜಗುಲಿಯಿಂದ ಒಳ ಹೋಗುವ ಬಾಗಿಲು ಪ್ರಧಾನ ಬಾಗಿಲೆಂದು ಕರೆಸಿಕೊಳ್ಳುತ್ತದೆ. ಬಾಗಿಲ ಹೊಸಿಲಿಗೆ ಕೆಮ್ಮಣ್ಣು ನೀರಲ್ಲಿ ನೆನೆಸಿ ಬಟ್ಟೆಯ ಜುಂಜಿನಿಂದ ಕೆಂಪನೆಯ ಬಣ್ಣ ಹಚ್ಚಿ ಒಣಗಿದ ಮೇಲೆ ಬಿಳಿ ಮಣ್ಣು ಶೇಡಿ ಎಂದು ಕರೆಯುವ ಇದನ್ನು ಕೂಡಾ ಸ್ವಲ್ಪ ನೀರಲ್ಲಿ ಪೇಸ್ಟ್ ಮಾಡಿಕೊಂಡು ಹತ್ತಿಯ ಬತ್ತಿಯಲ್ಲಿ ಸೂಕ್ಷ್ಮ ಎಳೆಗಳಲ್ಲಿ ಚಿತ್ತಾರ ಬಿಡಿಸುವುದು ದೇವರ ಹಾಡೇಳಿಕೊಂಡು. ಬಹುಶಃ ಕೆಲವರ ಬಾಯಲ್ಲಿ ಹಳೆಯ ಹಾಡುಗಳ ಪಟ್ಟಿಯೆ ತುಂಬಿರುತ್ತದೆ. ಇದೇ ರೀತಿ ನಿತ್ಯ ಪೂಜೆಯ ದೇವತೆ ತುಳಸಿ ಕಟ್ಟೆಗೂ ಚಿತ್ತಾರ ಬಿಡಿಸುತ್ತಾರೆ. ಇದು ಮಧ್ಯಾಹ್ನ ಊಟವಾದ ನಂತರದ ಬಿಡುವಿನ ವೇಳೆಯಲ್ಲಿ ಕತ್ತಲಾಗುವುದರೊಳಗೆ ಮುಗಿಸುವ ಕಾಯಕ.
ಇದು ಹೆಂಗಸರ ಸಡಗರವಾದರೆ ಇನ್ನು ಗಂಡಸರು ಬಾಳೆ ಎಲೆ, ಅಡಿಕೆ ಶೃಂಗಾರ(ಹೂ) ಬಿಲ್ವ ಪತ್ರೆ, ಶಮಿ ಪತ್ರೆ, ಕರವೀರ ಪತ್ರೆ,ಗರಿಕೆ,ಇತ್ಯಾದಿ ಪತ್ರೆಗಳು ವಿಧ ವಿಧವಾದ ಹೂವುಗಳು ಎಲ್ಲೆಲ್ಲಿ ಸಿಗುತ್ತದೆಂದು ಮೊದಲೆ ಗುರುತಿಸಿಕೊಂಡು ಗೌರಿ ಹಬ್ಬದ ಮೊದಲ ದಿನದಂದೇ ಸಂಗ್ರಹಿಸಿಟ್ಟುಕೊಳ್ಳತ್ತಾರೆ.
ಮುಂದಿನ ತಯಾರಿ ಗಣೇಶ ಮತ್ತು ಗೌರಿ ಕೂಡಿಸಲು ಮಂಟಪ ಕಟ್ಟೋದು. ಅದೂ ಬಾಳೆ ಕಂಬ, ಮಾವಿನ ಎಲೆಯ ಮಾಲೆ, ಅಡಿಕೆ ಹೂವಿನ ಶೃಂಗಾರ, ಬಣ್ಣದ ಪೇಪರನಲ್ಲಿ ಡಿಸೈನ್ ಕಟಿಂಗ್ ಕೂಡಾ ಮಾಡುವ ಕಲೆ ಅರಿತಿರುತ್ತಾರೆ ಅನೇಕರು.
ಬಗೆ ಬಗೆಯ ತರಕಾರಿ, ಹಣ್ಣುಗಳನ್ನು ಬಳ್ಳಿಯಲ್ಲಿ ಬೇರೆ ಬೇರೆಯಾಗಿ ಕಟ್ಟಿ ಮನೆ ಕಟ್ಟುವಾಗಲೆ ದೇವರ ಮನೆಯಲ್ಲಿ ನಿರ್ಮಿತಗೊಂಡ ಮೇಲ್ಭಾಗದ ಅಟ್ಟಣೆಗಳಿಗೆ ಸಾಲಾಗಿ ಕಟ್ಟಲಾಗುತ್ತದೆ. ಗೌರಿ ಹೂವು ಇರಲೆ ಬೇಕು ಈ ಹಬ್ಬಕ್ಕೆ. ಇದನ್ನು ಇವುಗಳ ಮಧ್ಯೆ ಮಧ್ಯೆ ಚಂದವಾಗಿ ನೇತಾಡುವಂತೆ ಕಟ್ಟುತ್ತಾರೆ ಇದಕ್ಕೆ “ಪಲವಳಿಗೆ ಕಟ್ಟೋದು” ಎಂದು ಹೇಳುತ್ತಾರೆ.
ಗೋಧೂಳಿ ಮುಹೂರ್ತದಲ್ಲಿ ಗಣೇಶನನ್ನು ತರುವ ಸಂಭ್ರಮ. ಜಾಗಟೆ ಬಾರಿಸಿ ಹಾನ ಸುಳಿದು ಮನೆ ಪ್ರವೇಶಿಸಿದ ಪೇಪರ್ ಹಾಳೆಯಿಂದ ಮುಖ ಮುಚ್ಚಿಕೊಂಡ ಗಣಪ ಜಗುಲಿಯ ನಾಗಂದಿಗೆಯ ಮೇಲೆ ವಿರಾಜಮಾನನಾಗಿರುತ್ತಾನೆ. ಯಾರ ದೃಷ್ಟಿಯೂ ಬೀಳದಿರಲೆಂದು ಈ ಪದ್ಧತಿ. ಹಾಗೆ ಗಣೇಶನನ್ನು ತರುವಾಗ ಬಣ್ಣ ಹಾಗೂ ಬಲ ಮುರಿ ಎಡ ಮುರಿ ಗಣಪ ಎಂದು ನೋಡಿ ತರುತ್ತಾರೆ. ಅವರವರ ಮನೆಯಲ್ಲಿ ಮೊದಲಿಂದಲೂ ಬಂದ ಅನುಕರಣೆಗೆ ಒಳಪಟ್ಟು ಆರಿಸಿ ತರುತ್ತಾರೆ.
ಇಲ್ಲಿಂದಲೆ ಶುರು ಊರವರು ತಮ್ಮ ಮನೆಯದೆ ಹಬ್ಬ ಎನ್ನುವಂತೆ ಒಂದಾಗಿ ಹಬ್ಬ ಮಾಡುವ ರೀತಿ. ಹಬ್ಬದ ಸಡಗರಕೆ ಏನೇನೆಲ್ಲಾ ಬೇಕೊ ಎಲ್ಲವನ್ನು ಒಬ್ಬರಿಗೊಬ್ಬರು ಸಹಾಯದೊಂದಿಗೆ ಹಂಚಿಕೊಂಡು ಮಾಡುತ್ತಾರೆ.
ಹೆಂಗಳೆಯರು ಹಾಡು ಹಸೆ ರಂಗೋಲಿ ಹೊಸದಾಗಿ ಕಲಿತು ಪೂರ್ವ ತಯಾರಿ ಮಾಡಿಕೊಂಡಿದ್ದರೆ, ವಿಜೃಂಭಣೆಯ ಮಂಗಳಾರತಿಗೆ ಆರತಿ ತಟ್ಟೆ ರೆಡಿ ಮಾಡಲು ಊರ ಹೆಣ್ಣು ಮಕ್ಕಳು ಒಂದೆಡೆ ಸೇರಿ, ಹೂವಿನ ಆರತಿ, ಕುಂಕುಮದ ಆರತಿ, ಅರಿಶಿನದ ಆರತಿ, ರಂಗೋಲಿ ಆರತಿ, ಧಾನ್ಯದ ಆರತಿ ಹೀಗೆ ಹಲವಾರು ಬಗೆಗಳಿವೆ.
ಒಂದು ತಿಳುವಾದ ಸಣ್ಣ ಕಡ್ಡಿಗೆ ಹತ್ತಿ ಗಟ್ಟಿಯಾಗಿ ಸುತ್ತಿಕೊಂಡು ತಿಳು ಬೆಲ್ಲದಲ್ಲಿ ತಾಮ್ರ ಅಥವಾ ಹಿತ್ತಾಳೆಯ ತಟ್ಟೆಯ ಮೇಲೆ ಹುಂಡಿಟ್ಟು ಬಿಡಿಸುತ್ತಾರೆ. ಅದರ ಮೇಲೆ ಬೇಕಾದ ಪುಡಿ ಉದುರಿಸಿದರೆ ಎಲ್ಲ ಅಂಟಿಕೊಳ್ಳುತ್ದೆ. ತಟ್ಟೆ ಡಬ್ಬಾಕಿ ಎತ್ತಿದರೆ ಚಿತ್ರ ಎದ್ದು ಕಾಣುತ್ತದೆ. ಹಿತ್ತಾಳೆ ದೀಪಗಳ ಆರತಿನೂ ಜೊತೆಗಿಟ್ಟು ಎಣ್ಣೆ ಬತ್ತಿ ಹಾಕಿ ಆರತಿಗೆ ಅಣಿ ಮಾಡುತ್ತಾರೆ. ಹೆಣ್ಣು ಮಕ್ಕಳ ಕೌಶಲ್ಯ ಊರವರೆಲ್ಲರ ಬಾಯಲ್ಲಿ ಹೊಗಳಿಕೆ. ಹೊಸ ಬಟ್ಟೆ, ಕೈ ಕಾಲುಗಳಿಗೆ ಹಚ್ಚಿಕೊಂಡ ಮದರಂಗಿ ರಂಗು , ಉದ್ದದ ಜಡೆಗೆ ಹೂವಿನ ದಂಡೆ, ಆಭರಣ ತೊಟ್ಟು ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತ ಮನೆಗೆ ಹಬ್ಬದ ಕಳೆ ಕಟ್ಟುವುದು ಹೆಣ್ಣು ಮಕ್ಕಳಿಂದ. ಹೆಣ್ಣಿದ್ದರೇನೆ ಹಬ್ಬ ಚಂದ ಹಿರಿಯರ ಮಾತು.
ತದಿಗೆ ದಿನ ಗೌರಿ ಹಬ್ಬ :
ಗೌರಿ ಬಾಗಿನದಲ್ಲಿ ಎರಡು ಕುಡಿ ಬಾಳೆ, ಅದರಲ್ಲಿ ಅಕ್ಕಿ, ತೆಂಗಿನ ಕಾಯಿ, ಕೆಂಪು ಕೊಳ್ ನೂಲು, ಹಣಿಗೆ, ಕನ್ನಡಿ ಬ್ಲೌಸ್ ಪೀಸ್, ವೀಳ್ಳೆದೆಲೆ ಅಡಿಕೆ,ಹಣ,ಹಸಿರು ಬಳೆ,ಕರಿಮಣಿ,ಬಾಳೆ ಹಣ್ಣು ಮತ್ತು ಹೂವು ಪಕ್ಕದಲ್ಲಿ ಗೌರಿ ತಂಬಿಗೆಯಲ್ಲಿ ನೀರು ತುಂಬಿ ಮೇಲೆ ಐದು ಎಲೆ ಇರುವ ಮಾವಿನ ಎಲೆ ಬೊಂಚು ತೆಂಗಿನಕಾಯಿ ಹೂವು , ಗೆಜ್ಜೆ ವಸ್ತ್ರ ಇಟ್ಟು ಪೂಜೆಗೆ ಅಣಿಗೊಳಿಸುವುದು ಹೆಂಗಸರ ಕೆಲಸ. ಬುಟ್ಟಿ ತುಂಬ ವಿಧವಿಧವಾದ ಪತ್ರೆಗಳು, ಹೂವುಗಳು ಹಣ್ಣು ಕಾಯಿ ಇತ್ಯಾದಿ ಬಣ್ಣದ ರಂಗೋಲಿ, ವಿಧ ವಿಧ ಎಣ್ಣೆಯ ದೀಪ ನೋಡುವ ಕಣ್ಣು, ಮನಸು ಮಂತ್ರ ಮುಗ್ದ.
ಮನೆಯ ಯಜಮಾನನಿಂದ ದೇವಿಯ ಆಹ್ವಾನದ ಮಂತ್ರದೊಂದಿಗೆ ಹೆಂಗಸರ ಹಾಡಿನೊಂದಿಗೆ ಜಾಗಟೆಯ ನಾದದಲ್ಲಿ ಮಂಗಳಾರತಿ ನೆರವೇರುತ್ತದೆ. ಈ ದಿನ ನೈವೇದ್ಯಕ್ಕೆ ಲಡ್ಡಿಗೆ (ಕಡಲೆ ಹಿಟ್ಟು ಹದವಾಗಿ ಕಲೆಸಿ ಎಣ್ಣೆಯಲ್ಲಿ ಜರಡಿ ಮಾಡಿ ಬೇಯಿಸಿ ಬೆಲ್ಲದ ಪಾಕದಲ್ಲಿ ಹಾಕಿ ಮಾಡಿದ ಖಾಧ್ಯ) ಕೂಸುಂಬರಿ, ಪಾಯಸ, ಹಾಲು, ಮೊಸರು ಇಡುತ್ತಾರೆ.
ಮನೆಯಲ್ಲಿಯ ಹೆಂಗಸರು ಅರಿಶಿನ ಕುಂಕುಮ ಹೂ ಅಕ್ಷತ ದೂರದಿಂದ ಹಾಕಿ ನಮಸ್ಕಾರ ಮಾಡುತ್ತಾರೆ. ಹವ್ಯಕರ ಮನೆಗಳಲ್ಲಿ ಅನಾದಿಕಾಲದಿಂದಲೂ ದೇವರ ಪೀಠದಲ್ಲಿ “ಸಾಲಿಗ್ರಾಮ” ಇಟ್ಟು ಪೂಜಿಸುತ್ತಿದ್ದಾರೆ. ಇದು ಮನೆಯಲ್ಲಿ ಇದ್ದರೆ ತುಂಬಾ ಮಡಿಯಿಂದ ದೇವರ ಪೂಜೆ ಮಾಡಬೇಕಾಗುತ್ತದೆ. ಬಹಿಷ್ಟೆಯಾಗುವ ಹೆಂಗಸರು ಹೆಣ್ಣು ಮಕ್ಕಳು ಪೂಜೆ ಮಾಡುವಂತಿಲ್ಲ. ಪ್ರತಿನಿತ್ಯ ಅಭಿಷೇಕ, ನೈವೇದ್ಯ ಗಂಡಸರು ಮಾಡಬೇಕಾಗುತ್ತದೆ. ಆದುದರಿಂದ ಇಲ್ಲಿಯ ಮನೆಗಳಲ್ಲಿ ಹೆಂಗಸರು ದೇವರ ಪೂಜೆ ಮಾಡುವುದಿಲ್ಲ. ಮಂತ್ರ ಹೇಳುವುದಿಲ್ಲ. ದೇವರ ಶ್ಲೋಕಗಳನ್ನು ಹೇಳಿ ನಮಸ್ಕಾರ ಮಾಡುತ್ತಾರೆ. ಬಹಿಷ್ಟೆಯಾದಾಗ ಮನೆಯ ಹೊರಗೆ ಇರುತ್ತಾರೆ.
ಮಾರನೆ ದಿನ ಚೌತಿ ಹಬ್ಬ.
ಈ ದಿನ ಬೆಳಗಿನ ಜಾವವೆ ಮನೆ ಮಂದಿಯೆಲ್ಲ ಎದ್ದು ನಿತ್ಯ ಕರ್ಮ ಮುಗಿಸಿ ಮನೆಯ ಹಿತ್ತಲಿನಲ್ಲಿ ಪ್ರತಿಯೊಬ್ಬರೂ ಗರಿಕೆ ಹುಡುಕಿ ಕನಿಷ್ಟ ಇಪ್ಪತ್ತೊಂದಾದರೂ ಕೊಯ್ದು ದೇವರ ಮುಂದಿಟ್ಟು ನಮಸ್ಕರಿಸಬೇಕು. ನಂತರ ಚಹಾ, ಉಪ್ಪಿಟ್ಟು ಅಥವಾ ಅವಲಕ್ಕಿ ಉಪಹಾರ.
ಗಣೇಶನಿಗೆ ತಿಂಡಿ ನೈವೇದ್ಯಕ್ಕೆ ಕನಿಷ್ಠ ಅಂದರೂ ಇಪ್ಪತ್ತೊಂದು ಬಗೆಯದು ಆಗಲೇ ಬೇಕು. ನಿಖರವಾಗಿ ಮಾಡುವ ತಿಂಡಿ ಅಂದರೆ ಪಂಚಕಜ್ಜಾಯ, ಚಕ್ಕುಲಿ,ಕೋಡುಬಳೆ,ಎಳ್ಳುಂಡೆ,ಮೋದಕ,ಕರ್ಜಿಕಾಯಿ,ಉದ್ದಿನ ಕಡುಬು, ಸೂಳ್ಗಡುಬು,ಲಡ್ಡಿಗೆ, ವಿಧ ವಿಧವಾದ ಲಾಡುಗಳು,ಪಾಯಸ,ಶಂಕರ್ಪೊಳೆ,ಪೂರಿ,ಅತ್ತಿರಸ, ಕಾಯಿ ಹಲವ, ಹೋಳಿಗೆ, ಕಡಲೆ ಬೇಳೆ ಅಂಬೋಡೆ ಇತ್ಯಾದಿ. ಹೀಗೆ ಎಲ್ಲ ತಿಂಡಿಗಳೂ ಅದೆ ದಿನ ಮಾಡಬೇಕು ಮಡಿಯಲ್ಲಿ.
ವಿಶೇಷ ಅಂದರೆ ಚೌತಿ ಹಬ್ಬದ ದಿನ ಪಂಚ ಕಜ್ಜಾಯ ಮಾಡುವ ರೀತಿ ಅಮೋಘ.
ಹಬ್ಬದ ದಿನ ಮಾಡಬೇಕಾದ ಪಂಚಕಜ್ಜಾಯಕ್ಕೆ ಬೇಕಾದ ಇಡಿ ಕಡಲೆ ಮೊದಲ ದಿನವೆ ತಲೆ ತಲಾಂತರದಿಂದ ಇಂತಿಷ್ಟೆ ಪಾವು ಮಾಡಬೇಕೆಂದಿರುವುದನ್ನು ನೆನಪಿಸಿಕೊಂಡು ಅಳೆದು ಒಂದು ದೊಡ್ಡ ಪಾತ್ರೆಗೆ ಹಾಕಿ ಸ್ನಾನ ಮಾಡಿ ಮಡಿ ಬಟ್ಟೆ ಉಟ್ಟು ಕಡಲೆ ತೊಳೆದು ಬೆತ್ತದ ಬುಟ್ಟಿಗೆ ಸುರಿದಿಡುತ್ತಾರೆ. ಆರಿದ ನಂತರ ದೊಡ್ಡ ಬಾಣಲೆಯಲ್ಲಿ ಹುರಿಯುತ್ತಾರೆ. ಎಲ್ಲವೂ ಮಡಿ ಬೇರೆ ಯಾರೂ ಮುಟ್ಟುವಂತಿಲ್ಲ. ಪ್ರತಿ ಮನೆಯಲ್ಲಿ ಆಗಿನ ಕಾಲದ ಸೇರು, ಪಾವು ಅಳತೆಯ ಸಾಮಾನು. ತೂಕ ಇಲ್ಲ. ನಂತರ ಹತ್ತಿರದಲ್ಲಿರುವ ಮಿಲ್ಲಿಗೆ ಹೋಗಿ ನುಣ್ಣಗೆ ಪುಡಿ ಮಾಡಿಸಿಕೊಂಡು ಬರುತ್ತಾರೆ. ಅಲ್ಲೂ ಕೂಡ ಮೊದಲಿನ ದಿನವೇ ಮಿಲ್ ಸ್ವಚ್ಛಗೊಳಿಸಿ ಮಿಂದು ಮಡಿಯುಟ್ಟು ಹವ್ಯಕ ಜನಾಂಗದವರೇ ಪಂಚಕಜ್ಜಾಯದ ಹಿಟ್ಟು ಮಾತ್ರ ಆ ದಿನ ಮಾಡುತ್ತಾರೆ
ಪಂಚಕಜ್ಜಾಯಕ್ಕೆ ಹೊಸ ಬೆಲ್ಲ ಬಿಳಿ ಗಟ್ಟಿ ಬೆಲ್ಲವೇ ಆಗಬೇಕು. ಈ ಬೆಲ್ಲವನ್ನು ಅಳತೆಗೆ ತಕ್ಕಂತೆ ದೊಡ್ಡ ತಾಮ್ರದ ಪಾತ್ರೆಯಲ್ಲಿ ಕುದಿಯಲು ಇಟ್ಟು , ಚಿಕ್ಕ ತಟ್ಟೆಯ ನೀರಲ್ಲಿ ಸ್ವಲ್ಪ ಕುದಿಯುವ ಬೆಲ್ಲ ಹಾಕಿ ಟಣ್ ಎಂದು ಶಬ್ದ ಬರುವ ಹದ ನೋಡಿ ಒಂದು ಹದಕ್ಕೆ ಬಂದ ನಂತರ ಕುದಿಯುವ ಬೆಲ್ಲ ಪಂಚಕಜ್ಜಾಯ ಮಾಡಲೆಂದೇ ಮರದಲ್ಲಿ ಮಾಡಿದ ದೋಣಿಯಾಕಾರದ ಮರಿಗೆಗೆ ಹಾಕಿಟ್ಟ ಕಡಲೆ ಪುಡಿಗೆ ನಿಧಾನವಾಗಿ ಒಬ್ಬರು ಹಾಕಿದಂತೆ ಇನ್ನೊಬ್ಬರು ಮರದ ಸೌಟಲ್ಲಿ ಸೇರಿಸುತ್ತ ಬರುತ್ತಾರೆ ಇದಕ್ಕೆ ಯಳ್ಳು ಏಲಕ್ಕಿ, ಕೊಬ್ಬರಿ ತುರಿಯನ್ನೂ ಮೊದಲೆ ಕಲೆಸಲಾಗಿದ್ದು ತಕ್ಷಣ ಬಿಸಿ ಇರುವಾಗಲೆ ದೊಡ್ಡ ಸುಲಿದ ತೆಂಗಿನ ಕಾಯಿಯಲ್ಲಿ ಒಂದು ಕಡೆಯಿಂದ ಗಂಟಾಗದಂತೆ ಆಡಿಸುತ್ತಾರೆ. ಪಂಚಕಜ್ಜಾಯ ಹುಡಿ ಆಯಿತೆಂದರೆ ಗಣೇಶ ಪ್ರಸನ್ನನಾಗಿದ್ದಾನೆ ಅನ್ನುವ ನಂಬಿಕೆ. ಎಲ್ಲರ ಮೊಗದಲ್ಲಿ ಖುಷಿ. ಉಂಡೆ ಉಂಡೆ ಪಂಚಕಜ್ಜಾಯವಾದರೆ ಗಣಪನಿಗೆ ನಾವು ಮಾಡಿದ ಹಬ್ಬ ಯಾಕೊ ಸರಿ ಬರಲಿಲ್ಲ ಈ ಸಾರಿ. ಹೀಗೆ ಬಲವಾದ ನಂಬಿಕೆ ಹಳ್ಳಿಯ ಪ್ರತಿಯೊಬ್ಬರ ಮನೆಯಲ್ಲಿ. ಇದಕ್ಕಾಗಿ ಗಣೇಶನಿಗೆ ಕಪ್ಪ ಕಾಣಿಕೆಯಾಗಿ ಮೊದಲೆ ದೇವರ ಮುಂದೆ “ಮಹಾ ಗಣಪತಿ ಪಂಚಕಜ್ಜಾಯ ಹುಡಿಯಾಗುವಂತೆ ಮಾಡು” ಎಂದು ಬೇಡಿಕೊಂಡು ತೆಂಗಿನ ಕಾಯಿ ತೆಗೆದಿಡುತ್ತಾರೆ.
ಇತ್ತ ಮನೆಯ ಯಜಮಾನ ಸ್ನಾನ ಸಂಧ್ಯಾವಂದನೆಗಳನ್ನು ಮಾಡಿ ಮೊದಲೇ ತಂದಿರಿಸಿದ ಗಣಪನ ಮೂರ್ತಿಯನ್ನು ಮನೆಯ ಪ್ರಧಾನ ಬಾಗಿಲಲ್ಲಿಟ್ಟು ತುಳಸಿ ಪ್ರೊಕ್ಷಣೆ ಮಂತ್ರಗಳೊಂದಿಗೆ ಶುದ್ದಿ ಮಾಡಿ ಗಣೇಶನನ್ನು ದೇವರ ಮನೆಗೆ ತಂದು ಮೊದಲೆ ಅಣಿಗೊಳಿಸಿದ ಪೀಠದಲ್ಲಿ ಕೂಡಿಸಿ ಗಂಟೆ ಜಾಗಟೆಯ ನಾದದೊಂದಿಗೆ ಅಕ್ಷತವನ್ನು ಹಾಕಿ ಗಣೇಶನ ಆಹ್ವಾನದ ಪೂಜೆ ಮಾಡಲಾಗುತ್ತದೆ. ನಂತರ ಜನಿವಾರ, ಬೆರಳಿಗೆ ಉಂಗುರ, ಗೆಜ್ಜೆ ವಸ್ತ್ರ, ಹಾರಗಳಿಂದ ಶೃಂಗರಿಸಿ ಅರ್ಚನೆ ಅಷ್ಟೋತ್ತರ ಸಹಸ್ರನಾಮದೊಂದಿಗೆ ನಾನಾ ವಿದಧ ಪತ್ರೆಗಳು ಹೂವಿನಿಂದ ಪೂಜೆ ನಡೆಸುತ್ತಿದ್ದರೆ ನೈವೇಧ್ಯಕ್ಕೆ ಎಲ್ಲ ತಿಂಡಿಗಳು ಅಣಿಯಾಗುವುದು ಮಧ್ಯಾಹ್ನ ಮೂರು ಗಂಟೆ ದಾಟುತ್ತದೆ.
ಪೂಜೆಯ ಹಂತ ಹಂತದಲ್ಲೂ ಒಂದೊಂದಕ್ಕೆ ಒಂದೊಂದು ಹಳೆಯ ಕಾಲದ ಹಾಡುಗಳನ್ನು ಹೆಂಗಳೆಯರು ಹೇಳುತ್ತಿದ್ದರೆ ಮಹಾ ಮಂಗಳಾರತಿ ಶುರುವಾದಂತೆ ಶಂಖ ಊದುವುದರಲ್ಲಿ, ಜಾಗಟೆ ಭಾರಿಸುವುದರಲ್ಲೂ ಗಂಡು ಮಕ್ಕಳ ಕೈ ಚಳಕದಲ್ಲಿ ಅನೇಕ ವೈವಿಧ್ಯತೆಯಿರುತ್ತದೆ. ಭಾರಿಸುವಾಗ ಹೊರಡುವ ಶಂಖ, ಜಾಗಟೆಗಳ ನಿನಾದ ತಾರಕಕ್ಕೇರುತ್ತಿದ್ದಂತೆ ಆ ಧೂಪ ದೀಪಗಳ ಬೆಳಕಲ್ಲಿ ಬಾಲ ಗಣೇಶ ಎದ್ದು ಕುಣಿದು ಬಿಟ್ಟಾನೆ!! ಅನ್ನುವಷ್ಟು ಮನ ಮುದಗೊಳ್ಳುವುದು ಶತಃಸ್ಸಿದ್ಧ.
ಮಂಗಳಾರತಿ ಸಮಯದ ಆಹ್ವಾನದ ಮೇರೆಗೆ ಊರವರೆಲ್ಲ ಒಬ್ಬರ ಮನೆಗೊಬ್ಬರು ಹೋಗಿ ಪೂಜೆ ಮುಗಿಸಿ ಹೂವು, ತೀರ್ಥ, ದಕ್ಷಿಣೆ, ಪಂಚಕಜ್ಜಾಯ ಪ್ರಸಾದ ಪಡೆದು ಪಟಾಕಿ ಹೊಡೆಯುವ ಸಂಭ್ರಮದಲ್ಲಿ ಪಾಲ್ಗೊಂಡು ತಮ್ಮ ತಮ್ಮ ಮನೆಗಳಲ್ಲಿ ಊಟ ಅಂದರೆ ಪಳಹಾರ ಮಾಡುವುದು ಐದು ಗಂಟೆಯಾಗುತ್ತದೆ. ಈ ನಿಯಮ ಇವತ್ತಿಗೂ ಮಲೆನಾಡಿನ ಹವ್ಯಕರ ಹಳ್ಳಿಗಳಲ್ಲಿ ಕಾಣಬಹುದು. ಕೆಲವರ ಮನೆಯಲ್ಲಿ ಗಣಹೋಮ, ಸತ್ಯ ಗಣಪತಿ ಕಥೆ ಮಾಡುವುದಿದ್ದರೆ ಪುರೋಹಿತರನ್ನು ಕರೆದು ಪೂಜೆ ಮಾಡಿಸುತ್ತಾರೆ.
ಗೌರಿ ಗಣೇಶ ಹಬ್ಬ ಮುಗಿದ ಮೇಲೆ ಪೂಜೆಗೆ ಇಟ್ಟ ಬಾಗಿನವನ್ನು ತಾಯಿಗೆ ಗೌರಿ ಬಾಗಿನ ಅಂತ ಮನೆಯ ಹೆಂಗಸು ಎತ್ತಿಡಬೇಕು. ತವರಿಗೆ ಹೋದಾಗ ತಾಯಿಗೆ ಕೊಡಬೇಕು. ಒಟ್ಟು ಕುಟುಂಬದಲ್ಲಿ ಹೆಚ್ಚಿನ ಹೆಂಗಸರಿದ್ದರೆ ಅಷ್ಟೂ ಹೆಂಗಸರು ತಮ್ಮ ತಮ್ಮ ತವರಿಗೆ ತಾಯಿ ಬಾಗಿನವೆಂದು ಪೂಜೆಯ ಮೊದಲೆ ಅಣಿಗೊಳಿಸಿಕೊಂಡಿರುತ್ತಾರೆ. ಊರ ಹೆಂಗಸರನ್ನು ಕರೆದು ಬಾಗಿನ ಕೊಡುತ್ತಾರೆ. ಹೆಣ್ಣು ಮಕ್ಕಳಿಗೆ ಕುಂಕುಮ ಹಚ್ಚಿ ದುಡ್ಡು ಕೊಡುತ್ತಾರೆ.
ಸಾಯಂಕಾಲ ದೀಪ ಹಚ್ಚಿ ಮನೆ ಮಂದಿಯೆಲ್ಲ ಕೂತು ಪೀಯಾನೊ, ತಾಳ ಭಾರಿಸುತ್ತ ಗಣೇಶನ ಭಜನೆಗಳನ್ನು ಮಾಡುತ್ತಾರೆ. ಆ ದಿನ ಚಂದ್ರನನ್ನು ನೋಡಬಾರದು ಅಪವಾದ ಬರುತ್ತದೆ ಎಂದು ಮಕ್ಕಳಿಗೆ ಹೊರಗೆ ಹೋಗಲು ಬಿಡುವುದಿಲ್ಲ. ರಾತ್ರಿ ಮತ್ತೆ ತುಪ್ಪದ ದೀಪ, ಮಂಗಳಾರತಿಯೊಂದಿಗೆ ಇಪ್ಪತ್ತೊಂದು ನಮಸ್ಕಾರ ಶಕ್ತಿಯಿರುವ ಮನೆ ಮಂದಿಯೆಲ್ಲ ಮಾಡುತ್ತಾರೆ. ಇದು ಕೂಡಾ ಮೊದಲಿಂದ ಬಂದ ನಿಯಮ.
ಇನ್ನು ಮಾರನೆಯ ದಿನ ಇಲಿ ಪಂಚಮಿ.
ಆ ದಿನ ಕೂಡ ಗಣೇಶನ ನೈವೇಧ್ಯಕ್ಕೆ ಪಂಚ ಭಕ್ಷ ಆಗಬೇಕು. ಇದಲ್ಲದೆ ಅನ್ನ, ಚಿತ್ರಾನ್ನ, ಹಾಲು ಮೊಸರು ಹೀಗೆ ಮಾಡಿದ ಭಕ್ಷಗಳ ನೈವೇದ್ಯಕ್ಕೆ ಅಣಿಗೊಳಿಸಬೇಕು. ನಂತರ ಪೂಜೆ ಮಂಗಳಾರತಿ ಮುಗಿದ ಮೇಲೆ ಆ ದಿನ ಅಡಿಗೆಯ ಊಟ ಮಾಡುತ್ತಾರೆ.
ಅಂದರೆ ಹವ್ಯಕರಲ್ಲಿ ಅನ್ನ ಮುಸುರೆ ಅನ್ನುವ ಸಂಪ್ರದಾಯವಿದೆ. ಯಾವುದೆ ಉಪವಾಸದ ದಿನ ಅಥವಾ ದಿನ ನಿತ್ಯ ಪೂಜೆಗಿಂತ ಮೊದಲು ಅನ್ನವನ್ನು ತಿನ್ನುವುದಿಲ್ಲ. ಚೌತಿ ಹಬ್ಬದ ದಿನ ಅನ್ನವನ್ನು ನೈವೇದ್ಯಕ್ಕೆಂದು ಮಾಡುತ್ತಾರೆ. ಆದರೆ ಹಿರಿಯರು ಅದರಲ್ಲೂ ಗಣೇಶ ಸಹಸ್ರನಾಮ ಓದಿದವರು ಆ ದಿನ ಅನ್ನವನ್ನು ಊಟ ಮಾಡುವುದಿಲ್ಲ. ಅನ್ನವನ್ನು ಮುಟ್ಟಿದರೆ ಕೈ ತೊಳೆದುಕೊಳ್ಳಬೇಕು. ಇನ್ನು ದೇವರಿಗೆ ಅನ್ನವನ್ನು ನೈವೇದ್ಯಕ್ಕೆ ಇಡುವ ಜಾಗಕ್ಕೆ ನೀರು ಪ್ರೋಕ್ಷಿಸಿ ಬೆರಳಲ್ಲಿ ಸ್ವಸ್ತಿಕ್ ಚಿನ್ನೆ ಬರೆದು ಅಲ್ಲಿ ಅನ್ನದ ಪಾತ್ರೆಯನ್ನು ಬಾಳೆ ಎಲೆಯನ್ನು ಮುಚ್ಚಿ ಇಡಬೇಕು. ನೈವೇದ್ಯಕ್ಕೆ ಇಟ್ಟ ಪ್ರತಿಯೊಂದು ಭಕ್ಷಗಳಿಗೂ ತುಪ್ಪವನ್ನು ಅಬ್ಬಿಗೆರೆ (ಸ್ವಲ್ಪ ಸ್ವಲ್ಪ ಹಾಕುವುದಕ್ಕೆ ಹೀಗೆ ಹೇಳುತ್ತಾರೆ) ಮಾಡಬೇಕು. ಪ್ರತಿಯೊಂದು ನೈವೇದ್ಯ ಭಕ್ಷಗಳಿಗೆ ತುಳಸಿ ನೀರು ಪ್ರೋಕ್ಷಣೆ ಮಾಡಿ ಶುದ್ದ ಮಾಡಿ ಮಂತ್ರ ಹೇಳಿ ನೈವೇದ್ಯ ಮಾಡುತ್ತಾರೆ. ಆ ನಂತರ ದೇವರ ಪ್ರಸಾದವೆಂದು ಪರಿಗಣಿಸಲಾಗುತ್ತದೆ. ಅನ್ನ ಇಟ್ಟ ಜಾಗ ನಂತರ ನೀರಿನಿಂದ ಒರೆಸಬೇಕು. ಅಂದರೆ ಇಲ್ಲಿ ಅನ್ನ ಅತ್ಯಂತ ಪವಿತ್ರ. ಅನ್ನಪೂರ್ಣೆ, ಆದಿ ಶಕ್ತಿ, ನಮ್ಮ ಬದುಕಿನ ಒಂದು ಅಂಗ. ಊಟಕ್ಕೆ ಅನ್ನ ಬಡಿಸಿದಾಗ ತಿನ್ನುವ ಮೊದಲು “ಅನ್ನ ಪೂರ್ಣೆ ಸದಾ ಪೂರ್ಣೆ ಪ್ರಾಣವಲ್ಲಭೆ………..” ಈ ಶ್ಲೋಕ ಹೇಳಿ ಮನದಲ್ಲೆ ನಮಸ್ಕರಿಸಿ ಊಟ ಮುಂದುವರಿಸುತ್ತಾರೆ.
ಇನ್ನು ಉಪನಯನವಾದ ಗಂಡಸರು, ಗಂಡು ಮಕ್ಕಳು ಪ್ರತಿನಿತ್ಯ ಊಟದೆಲೆಯ ಸುತ್ತ ನೀರನ್ನು ಸ್ವಲ್ಪ ಬೆರಳಿನಿಂದ ಹಾಕಿ ಮಂತ್ರ ಹೇಳಿ ದರಿಸುವ ಕ್ರಮ ಮಾಡಬೇಕು. ಎಡಗೈಯ್ಯ ಪವಿತ್ರ ಬೆರಳು ಎಲೆಯ ಮೇಲೆ ನೇರವಾಗಿ ಇಟ್ಟು ಬಲಗೈಯ್ಯಿಂದ ಒಂದೊಂದೇ ಅನ್ನದ ಅಗುಳನ್ನು ಎಲೆಯ ಬಲಗಡೆ ಪಕ್ಕದ ನೆಲದ ಮೇಲೆ ಸಾಲಾಗಿ ಮೇಲಿಂದ ಕೆಳಗೆ ನಾಲ್ಕು ಅಗುಳು ಇಡುತ್ತಾರೆ. “ಯಮಾಯಸ್ವಾಹಾ, ಯಮಧರ್ಮಾಯಸ್ವಾಹಾ……” ಹೀಗೆ ಮಂತ್ರ ಹೇಳುತ್ತ ಅಗುಳನ್ನು ನಾಲ್ಕು ಬಾರಿ ಬಾಯಿಗೆ ಹಾಕುತ್ತಾರೆ. ಇದಕ್ಕೆ ದರಿಸುವುದು ಎಂದು ಹೇಳುವುದು.
ಹಬ್ಬದಲ್ಲಿ ಎರಡೂ ದಿನ ಗೋವಿಗೆ ಗೋಗ್ರಾಸ ಅಂದರೆ ದೇವರಿಗೆ ನೈವೇದ್ಯ ಆಗುವ ಮೊದಲೆ ಮಾಡಿದ ಅಡಿಗೆ ತಿಂಡಿ ಏನೆ ಇರಲಿ ಮೊದಲೆ ಜೋಡಿಸಿದ ಎರಡು ಕುಡಿಬಾಳೆ ಎಲೆಯನ್ನು ಒಂದು ತಟ್ಟೆಯಲ್ಲಿಟ್ಟುಕೊಂಡು ಅದರಲ್ಲಿ ಎಲ್ಲವನ್ನೂ ಸ್ವಲ್ಪ ಸ್ವಲ್ಪ ಹಾಕಿ ತೆಗೆದಿಡಬೇಕು. ತೀರ್ಥ ಪ್ರೋಕ್ಷಣೆ ಆದ ಇದನ್ನು ಸಂಜೆ ಗೋವುಗಳಿಗೆ ತಿನ್ನಲು ಕೊಡಬೇಕು. ಗೋವುಗಳಿಗೆ ಕುಂಕುಮ ಹೂ ಅಕ್ಷತೆ ಹಾಕಿ ಪಾದಕ್ಕೆ ನೀರು ಹಾಕಿ ನಮಸ್ಕಾರ ಮಾಡುತ್ತಾರೆ.
ಇನ್ನು ಪ್ರತಿ ಅಮವಾಸ್ಯೆ, ಹುಣ್ಣಿಮೆ, ಹಸು ಕರು ಹಾಕಿದಾಗ, ಮೇಯಲು ಕಳಿಸಿದ ಹಸು ಕಳೆದು.ಹೋದಾಗ, ಎಲ್ಲ ಹಬ್ಬಗಳಲ್ಲಿ, ಮುದುವೆ ಹೀಗೆ ಪ್ರತಿಯೊಂದು ಸಂದರ್ಭದಲ್ಲಿ ಊರವರೆಲ್ಲ ನಂಬಿರುವ ಚೌಡಿಗೆ ಪೂಜೆ ಸಲ್ಲಿಸುವ ಪದ್ದತಿ ಇಂದಿಗೂ ರೂಢಿಯಲ್ಲಿದೆ. ಪ್ರತಿ ಹಳ್ಳಿಯಲ್ಲಿ ಚೌಡಿ ಕಟ್ಟೆಯೆಂದು ಇರುತ್ತದೆ. ಊರ ಕಾಯುವ ದೇವತೆ ಅವಳು ಎಂಬ ನಂಬಿಕೆ. ಆದುದರಿಂದ ಈ ಹಬ್ಬದಲ್ಲೂ ಚೌಡಿಗೆ ಪೂಜೆ ನೈವೇದ್ಯ ಮಾಡುತ್ತಾರೆ.
ಗಣೇಶನನ್ನು ಕೆಲವರ ಮನೆಯಲ್ಲಿ ಎರಡು ದಿನ, ಇನ್ನು ಕೆಲವರು ನಾಲ್ಕು ದಿನ ಮತ್ತೆ ಕೆಲವರು ಅನಂತ ಚತುರ್ಧಶಿಯವರೆಗೂ ಗಣೇಶನನ್ನು ಇಟ್ಟು ಪೂಜಿಸುತ್ತಾರೆ. ಅಲ್ಲೊಂದು ಇಲ್ಲೊಂದು ಮನೆಗಳಲ್ಲಿ ಈ ವರ್ಷ ತಂದ ಗಣಪನನ್ನು ಹಾಗೆ ಇಟ್ಟು ಹಿಂದಿನ ವರ್ಷ ತಂದ ಗಣಪನನ್ನು ನೀರಲ್ಲಿ ಬಿಡುವ ಪದ್ಧತಿ ಕೂಡಾ ಈಗಲೂ ಇದೆ.
ಸಾಮಾನ್ಯವಾಗಿ ಹಳ್ಳಿಯಲ್ಲಿ ಎಲ್ಲರ ಮನೆಯಲ್ಲೂ ಇಲಿ ಪಂಚಮಿಯ ದಿನ ಸಾಯಂಕಾಲವೆ ಗಣೇಶನನ್ನು ನೀರಿಗೆ ಬಿಡುತ್ತಾರೆ. ಕಾರಣ ನಮಗೆ ಮನಸಿಗೆ ಬಂದ ವರ್ಷ ಗಣೇಶನನ್ನು ಇಟ್ಟು ಪೂಜಿಸುವಂತಿಲ್ಲ. ಅಥವಾ ಒಂದು ವರ್ಷ ತಂದು ಪೂಜೆ ಮಾಡಿದರೆ ಮತ್ತೆ ಮುಂದಿನ ವರ್ಷ ಗಣೇಶನನ್ನು ತಂದು ಪೂಜೆ ಮಾಡುವುದು ಬಿಡುವಂತಿಲ್ಲ. ಯಾರ ಮನೆಯಲ್ಲಿ ಅನಾದಿ ಕಾಲದಿಂದ ಗಣೇಶನನ್ನು ತಂದು ಪೂಜಿಸುತ್ತಿದ್ದರೊ ಅವರ ಮನೆಗಳಲ್ಲಿ ಮಾತ್ರ ಗಣೇಶನನ್ನಿಟ್ಟು ಪೂಜಿಸುತ್ತಾರೆ. ಹಾಗೆ ಗಣೇಶನನ್ನು ನೀರಿಗೆ ಬಿಡುವ ಪದ್ದತಿ ಕೂಡಾ ಹಿಂದಿನಿಂದ ನಡೆದುಕೊಂಡು ಬಂದಂತೆ ಅನುಸರಿಸಬೇಕು. ವಿಘ್ನ ನಿವಾರಕ, ಶಿಷ್ಟರ ರಕ್ಷಕ, ಸಕಲಕೂ ಅವನೆ ಕಾರಣ, ಸರ್ವ ಕಾರ್ಯಕೂ ಅವನಿಗೆ ಮೊದಲ ಪೂಜೆ ಇದು ಹವ್ಯಕ ಸಮುದಾಯದಲ್ಲಿ ಪ್ರತಿಯೊಬ್ಬರೂ ನಂಬಿಕೊಂಡಿರುವ ದೈವ ಭಕ್ತಿ. ಇಂದಿಗೂ ದೇವರ ಪೀಠದಲ್ಲಿ ಗಣೇಶನ ಮೂರ್ತಿ ಇಲ್ಲದ ಮನೆಗಳಿಲ್ಲ. ನಂದಾ ದೀಪ, ನಿತ್ಯ ಪೂಜೆ, ನೈವೇದ್ಯ ಆಗಲೇ ಬೇಕು. ಪೂಜೆ ಮಾಡದೆ ಯಾರೂ ಮಧ್ಯಾಹ್ನ ಊಟ ಮಾಡುವುದಿಲ್ಲ.
ಪುನಃ ಸಾಯಂಕಾಲ ಐದು ಗಂಟೆಯ ನಂತರ ಮನೆಯ ಯಜಮಾನ ಸ್ನಾನ ಮಾಡಿ ಮಡಿಯುಟ್ಟು ದೀಪ ಹಚ್ಚಿ ಮಂತ್ರ ಹೇಳುತ್ತ ಗೌರಿ ಕಲಶದ ನೀರಿನಿಂದ ದೇವರಿಗೆ ಅಭಿಶೇಕ ಮಾಡಿ ಪೂಜೆ ಮಾಡುತ್ತಾರೆ. ಆಗಷ್ಟೆ ಕರೆದ ಹಾಲು ನೈವೇದ್ಯ ಮಾಡಿ ಮಂಗಳಾರತಿ ಬೆಳಗಿ ಗಣೇಶನನ್ನು ವಿಸರ್ಜಿಸಲಾಗುತ್ತದೆ. ಮತ್ತು ಅದೇ ಪವಿತ್ರ ನೀರನ್ನು ಇಡೀ ಮನೆಗೆ, ಮನೆಯ ಜನರಿಗೂ ಪ್ರೋಕ್ಷಿಸುತ್ತಾರೆ ಇರುವ ಪಟಾಕಿಯೆಲ್ಲ ಹೊಡೆದು ಕುಣಿದು ಕುಪ್ಪಳಿಸುವ ಗಲಾಟೆ ದೊಡ್ಡವರೂ ಮಕ್ಕಳಂತಾಗಿ!
ಗಣೇಶ ಮತ್ತು ಗೌರಿಯನ್ನು ಕಳಿಸುವ ತಯಾರಿ :
ಒಂದು ಬುಟ್ಞಿಯಲ್ಲಿ ಕಟ್ಟಿದ ಪಲವಳಿಗೆಯಲ್ಲಿನ ಒಂದೆರಡು ಗೌರಿ ಹೂವು,ತರಕಾರಿ, ಹಣ್ಣು, ಮಾವಿನ ಎಲೆ ಇವುಗಳನ್ನು ಇಟ್ಟುಕೊಂಡು ಮೊದಲು ಈ ಬುಟ್ಟಿ ಹೊತ್ತ ಹಿರಿಯ ಮುತ್ತೈದೆ ಹೆಂಗಸು ಮುಂದೆ ನಡೆದರೆ ಅವಳ ಹಿಂದೆ ಗಣೇಶನನ್ನು ಹೊತ್ತ ಯಜಮಾನ ಅವರ ಹಿಂದೆ ಮನೆ ಮಂದಿ ಹೀಗೆ ಜಾಗಟೆ ಭಾರಿಸುತ್ತ ಹಾಡು ಹೇಳುತ್ತ ಊರಿನ ಎಲ್ಲರ ಮನೆಯವರೂ ಒಟ್ಟಿಗೆ ಗಣೇಶನನ್ನು ನೀರಿಗೆ ಬಿಡಲು ಊರ ಮುಂದಿನ ಕೆರೆಗೆ ಸಾಗುತ್ತಾರೆ.
ಮೊದಲೆ ಸ್ವಚ್ಛಗೊಳಿಸಿದ ಕೆರೆಯ ಕಟ್ಟೆಯ ಮೇಲೆ ಎಲ್ಲರ ಮನೆಯ ಮೂರ್ತಿಗಳನ್ನು ಸಾಲಾಗಿ ಇಟ್ಟು ಮತ್ತೊಮ್ಮೆ ಹೂ ಅಕ್ಷತೆ ಎಲ್ಲರೂ ಹಾಕಿ ನಮಸ್ಕರಿಸಿ ಒಂದೊಂದಾಗಿ ಗಣೇಶನನ್ನು ನೀರಿಗೆ ಬಿಡುತ್ತಾರೆ. ಎಲ್ಲ ಗಣೇಶನ ಮೂರ್ತಿ ಬಿಡುವಾಗ ” ಮೋರೆಯಾ ಮೋರೆಯಾ ಮಂಗಳ ಮೂರ್ತಿ ಮೋರೆಯಾ, ಗಣಪತಿ ಬಪ್ಪ ಮೋರೆಯಾ ” ಎಂದು ಏರು ಧ್ವನಿಯಲ್ಲಿ ಹೇಳಿದರೆ ಹೆಂಗಸರ ಬಾಯಲ್ಲಂತೂ ಹಾಡು ಕೊನೆಗೊಳ್ಳುವುದಿಲ್ಲ. ಎಲ್ಲರ ಮುಖದಲ್ಲಿ ದುಃಖದ ಛಾಯೆ. ಮುದ್ದಾದ ಗೌರಿ ಮನೆ ಮಗಳು. ಚಂದದ ಗಣೇಶ ಎಲ್ಲರ ಅಚ್ಚು ಮೆಚ್ಚು. ಹಬ್ಬದ ಉತ್ಸಾಹ ಇಳಿದು ಮನಸು ಭಣ ಭಣ. ಇದಕ್ಕೆ ಸರಿಯಾಗಿ ಹೆಂಗಸರ ಹಾಡು ” ಗೌರಿ ನಡೆದಳಲ್ಲಾ ಮುದ್ದು ಬಾಲನೊಳಗೊಂಡು……….” ಈ ಹಾಡು ಕೇಳುತ್ತಿದ್ದರೆ ಕಣ್ಣು ಹನಿಯಾಗದಿರದು!!
ಮನೆಯೊಳಗೆ ಕಾಲಿಟ್ಟಾಗ ಏನೊ ಕಳೆದುಕೊಂಡ ಭಾವ. ಸುಸ್ತಾದ ದೇಹ ಆ ದಿನ ರಾತ್ರಿ ಬೇಗ ಊಟ ಮುಗಿಸಿ ಮಲಗುವುದು.
ಸುತ್ತಮುತ್ತಲ ಹಳ್ಳಿಗಳಿಗೆ ಹೋಗಿ ಗಣೇಶನಿಗೆ ಅಕ್ಷತ ಹಾಕಿ 101 ಗಣೇಶನ ದರ್ಶನ ಮಾಡುವ ಪದ್ದತಿ ಅನಾದಿ ಕಾಲದಿಂದ ನಡೆದುಕೊಂಡು ಬಂದಿದೆ. ಇದು ಪುಣ್ಯದ ಕೆಲಸವೆಂದು ಹಿರಿಯರು ಹೇಳುತ್ತಿದ್ದರು. ಹೋದಲ್ಲೆಲ್ಲ ಗಣೇಶನಿಗೆ ಅಕ್ಷತ ಹಾಕಿ ನಮಸ್ಕಾರ ಮಾಡಬೇಕು. ಹಬ್ಬದ ಮಾರನೆ ದಿನದಿಂದ ಯಾರೆ ಮನೆಗೆ ಬರಲಿ ಚಕ್ಕುಲಿ, ಪಂಚಕಜ್ಜಾಯಕ್ಕೆ ಸ್ವಲ್ಪ ತುಪ್ಪ ಹಾಕಿ ತಿನ್ನಲು ಕೊಡುತ್ತಾರೆ. ಇನ್ನು ಪರಿಚಯದವರ ಮನೆಗೆ, ನೆಂಟರಮನೆಗೆ ಹೋಗುವಾಗ ಈ ಎರಡೂ ಭಕ್ಷಗಳನ್ನು ಜೊತೆಗೆ ಒಯ್ಯಬೇಕು.
ಯಾರ ಮನೆಯಲ್ಲಿ ಜಾಸ್ತಿ ದಿನ ಗಣೇಶನನ್ನು ಇಡುತ್ತಾರೊ ಅವರ ಮನೆಗಳಲ್ಲಿ ಅತ್ಯಂತ ವಿಜೃಂಭಣೆಯ ಮಂಟಪ ಕಟ್ಟುತ್ತಾರೆ. ಇದಕ್ಕೂ ಹಳ್ಳಿಗಳಲ್ಲಿ ಕಾಂಪಿಟೇಷನ್. ಚಕ್ರ, ಕಾರಂಜಿ, ಬೊಂಬೆಗಳು ಇತ್ಯಾದಿ ಹೀಗೆ ಎಲ್ಲ ಬ್ಯಾಟರಿ ಶೆಲ್ಲಿನಿಂದ ಅಥವಾ ಕರೆಂಟಿಂದ ಅವುಗಳು ಚಲಿಸುವಂತೆ ಮಾಡುತ್ತಾರೆ. ರಾತ್ರಿ ಭಜನೆ, ಭಾಗವತರಿಂದ ಅಹೋರಾತ್ರಿ ಹರಿಕಥೆ, ಯಕ್ಷಗಾನ, ನೃತ್ಯ ಕಾರ್ಯ ಕ್ರಮ ನಡೆಯುತ್ತದೆ.
ಇನ್ನು ಕೆಲವರ ಮನೆಗಳಲ್ಲಿ ಹಿಂದಿನಂತೆ ಗಣಪತಿ ತಂದು ವಿಜೃಂಭಣೆಯ ಪೂಜೆ ಮಾಡಲಾಗದಿದ್ದವರು ಉಧ್ಯಾಪನೆಯ ಪೂಜೆ ಮಾಡಿ ದಾನ ಕೊಟ್ಟು ಗಣೇಶನನ್ನು ತರುವ ರೂಢಿಯನ್ನು ನಿಲ್ಲಿಸುತ್ತಿದ್ದಾರೆ. ಆದರೆ ಹಬ್ಬದ ದಿನ ಮಣ್ಣಿನಲ್ಲಿ ಮೃತ್ಯುಕೆ ಮಾಡಿ ಪೂಜೆ ಆದ ನಂತರ ಅದೇ ದಿನ ನೀರಿನಲ್ಲಿ ಬಿಡುತ್ತಾರೆ.
ಕಾಲ ಸರಿದಂತೆ ಕೆಲವು ಶಾಸ್ತ್ರಗಳು ಬದಲಾಗುತ್ತಿದ್ದರೂ ಪೂಜೆ ಮಾಡುವ ಆಚರಣೆ ಇಂದಿಗೂ ಬಿಟ್ಟಿಲ್ಲ.
–ಗೀತಾ ಜಿ.ಹೆಗಡೆ,ಕಲ್ಮನೆ.
[…] Source: ಹವ್ಯಕರಲ್ಲಿ ಗಣೇಶ ಹಬ್ಬದ ಆಚರಣೆ: ಗೀತಾ ಜಿ.ಹ… […]
very nice madam
Thank you so much