ಹಳ್ಳಿಮೇಷ್ಟ್ರು: ಪತ್ರೇಶ್. ಹಿರೇಮಠ್

ಹಳ್ಳಿಮೇಷ್ಟ್ರು ಎಂದಾಕ್ಷಣ ಖ್ಯಾತ ನಟ ರವಿಚಂದ್ರನ್ ಚಲನಚಿತ್ರ ಕಥೆಯೆಂದು ಭಾವಿಸಿದರೆ ತಪ್ಪಾದೀತು. ಇದು ನಮ್ಮ  ಇಡೀ ಊರಿಗೇ ಊರೇ ಬಾಗಿ ಗೌರವಿಸುತ್ತಿದ್ದ ಹಳೆಯ ಪ್ರೀತಿಯ ಮೇಷ್ಟ್ರುಗಳ ವಿಷಯವಿದು. ಶಿಕ್ಷಕರಿಗೆ ದೇಗುಲ ನಿರ್ಮಿಸಿದ ನಾಡ ವಿದ್ಯಾವಂತರು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಾದ ಹಳ್ಳಿಯ ಹಳೆಯ ಮೇಷ್ಟ್ರುಗಳ ಬದುಕಿನ ಕಥಾ ಸರಮಾಲೆಯಿದು.  

ಈಗ ಶಿಕ್ಷಕ ವೃತ್ತಿಯೆಂದರೆ ಬೆಳಿಗ್ಗೆ ಹತ್ತಕ್ಕೆ ಶಾಲೆಗೆ ಹೊರಡುವುದು, ಪ್ರಾರ್ಥನೆ,ಪಾಠ, ಮಾಡುವುದು ಪುನಃ ಸಂಜೆ ಐದಕ್ಕೆ ಮನೆಗೆ ಮರಳುವುದು. ಇದು ಇಂದಿನ ಬಹುತೇಕ ಶಿಕ್ಷಕರ ದಿನಚರಿ. ಈಗಿನ ಯಾವ ಶಿಕ್ಷಕರು ತಾವು ಸೇವೆ ಸಲ್ಲಿಸುವ ಹಳ್ಳಿಗಳಲ್ಲಿ ಮನೆ ಮಾಡಿಕೊಂಡು ಇರುವುದಿಲ್ಲ. ವಿವಾಹಿತ ಶಿಕ್ಷಕರಿಗೆ ಸಂಸಾರ, ಮಕ್ಕಳ ಉನ್ನತ ಶಿಕ್ಷಣದ ಕಾರಣಕ್ಕಾಗಿ ನಗರ ಪ್ರದೇಶಗಳಲ್ಲಿ ವಾಸಿಸುವುದು ಅನಿವಾರ್ಯ. ಅವಿವಾಹಿತ ಶಿಕ್ಷಕರು ಕೂಡಾ ಹಳ್ಳಿಗಳಲ್ಲಿ ವಾಸಿಸುವುದಿಲ್ಲ. ಶಿಕ್ಷಕಿಯರಿಗೆ ವಾಸಿಸಲು ಅನಾನುಕೂಲ ಇರುವ ಕಾರಣ ಅವರನ್ನು ಇಲ್ಲಿ ಪ್ರಸ್ತಾಪಿಸುವುದು ಅನವಶ್ಯಕ. 

ದಶಕಗಳ ಹಿಂದೆ ಹೆಚ್ಚಿನ ಶಿಕ್ಷಕರು ಹಳ್ಳಿಗಳಲ್ಲಿ ವಾಸಿಸುವ ಮೂಲಕ ಜನರ ಪ್ರೀತಿ, ವಿಶ್ವಾಸ, ನಂಬಿಕೆ ಗಳಿಸುವಲ್ಲಿ ಯಶಸ್ವಿಯಾಗಿದ್ದರು. ಇಡೀ ಹಳ್ಳಿ ಜನರ ಪ್ರೀತಿ ಪಾತ್ರ ಶಿಕ್ಷಕರಾಗಲು ಅವರ ಶ್ರಮ ಶ್ಲಾಘನೀಯ. ಆಗ ಹಳ್ಳಿಗಳಲ್ಲಿ ಉಳಿದುಕೊಳ್ಳುವ ಶಿಕ್ಷಕರು ಮಕ್ಕಳಿಗೆ ಸಂಜೆ ಮನೆಪಾಠ ಹೇಳುತ್ತಿದ್ದರು. ಅವಿದ್ಯಾವಂತ ಜನತೆಯ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು,  ಬಡ ಪ್ರತಿಭಾನ್ವಿತ ಮಕ್ಕಳಿಗೆ ಅತಿ ಕಡಿಮೆ ಸಂಬಳದ ತಮ್ಮ ಕಷ್ಟದ ದಿನಗಳ ನಡುವೆಯೂ ಪುಸ್ತಕ, ಬಟ್ಟೆಗಳ ನೆರವು ನೀಡುತ್ತಿದ್ದರು. ಸರ್ಕಾರಿ ಸೌಲಭ್ಯಗಳ ಮಾಹಿತಿ ನೀಡುವುದು, ಪತ್ರ ಬರೆದುಕೊಡುವುದು ಹೀಗೆ ಹಳ್ಳಿಯ ಬದುಕಿನ ನಡುವೆ ಅನಿವಾರ್ಯ ವ್ಯಕ್ತಿಗಳಾಗಿ ಹೊರಹೊಮ್ಮುತ್ತಿದ್ದರು. ಹಳ್ಳಿಯಲ್ಲಿ ವಾಸಿಸಿದ ಯಾವ ಶಿಕ್ಷಕರು ಹಾಲು, ಮೊಸರು, ಮಜ್ಜಿಗೆಯನ್ನು ಖರೀದಿಸಿರುವುದು ವಿರಳ.  ಹೊಲದಲ್ಲಿ ಬೆಳೆದ ಧವಸ, ಧಾನ್ಯ, ತರಕಾರಿಗಳನ್ನು ಶಿಕ್ಷಕರಿಗೆ ಮನೆ ಬಾಗಿಲಿಗೆಹೋಗಿಕೊಡುತ್ತಿದ್ದರು. ಅವಿವಾಹಿತ ಶಿಕ್ಷಕನಾಗಿದ್ದರಂತೂ ಹಳ್ಳಿಗಳವರ ಮನೆಗಳಿಂದಲೇ ಊಟವೂ ಅವರಿಗೆ ತಲುಪುತಿತ್ತು. ಶಿಕ್ಷಕರು ಬೆಳಿಗ್ಗೆ ಮತ್ತು ಸಂಜೆ ಊರ ಓಣಿಗಳಲ್ಲಿ ಹೊರಟರೆ ಆಟವಾಡುವ ಮಕ್ಕಳಿಂದ ಹಿಡಿದು ಅಂಗಳದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರು ಶಿಕ್ಷಕರಿಗೆ ಗೌರವ ನೀಡಿ ಒಳ ಹೋಗುತ್ತಿದ್ದರು.  ಹಳ್ಳಿಯಲ್ಲಿ ಯಾರ ಮನೆಯಲ್ಲಿ ಸಮಾರಂಭವಿರಲಿ, ಶುಭ ಕಾರ್ಯಕ್ರಮವಿರಲಿ, ಹಳ್ಳಿ ಮೇಷ್ಟ್ರಿಗೆ ಮೊದಲ ಆಮಂತ್ರಣ.  ಗಂಡು ಹೆಣ್ಣುಬೀಗತನ, ಸಂಬಂಧ ಹೀಗೆ ಎಲ್ಲದರಲ್ಲೂ ಮೇಷ್ಟ್ರು ಇರಲೇಬೇಕು. ಹಳ್ಳಿಗಳಲ್ಲಿನ ಪಂಚಾಯಿತಿ, ದೈವದ, ದೇವಸ್ಥಾನದಕಾರ್ಯಗಳು, ದೇವಸ್ಥಾನದ ಲೆಕ್ಕಪತ್ರ ಎಲ್ಲದಕ್ಕು ಮೇಷ್ಟ್ರು ಅತ್ಯವಶ್ಯವಾಗಿದ್ದರು. 

ಮೇಷ್ಟ್ರು ಹೇಳಿದ ಮೇಲೆ ಮುಗೀತು, ಯಾವ ರಾಜಕಾರಿಣಿ ಪ್ರಭಾವಿ ವ್ಯಕ್ತಿಯ ಮಾತನ್ನು ಹಳ್ಳಿಗರೂ ಕೇಳುತ್ತಿರುಲಿಲ್ಲ. ಹಳ್ಳಿಗಳ ಶಕ್ತಿಯಾಗಿದ್ದರು. ಹಾಗೆ ಬದುಕಿದರು, ಹಾಗೆ ನಡೆದುಕೊಂಡರು,  ಅವರೆಂದೂ ಹಳ್ಳಿ ರಾಜಕಾರಣದಲ್ಲಿ ಮೂಗು ತೂರಿಸಲಿಲ್ಲ, ಬೇಧಭಾವ ಮಾಡಲಿಲ್ಲ, ಇದ್ದುದನ್ನೇಇದ್ದ ಹಾಗೆ ಹೇಳುವ ಶಕ್ತಿ ಯುಕ್ತಿ ಹಳ್ಳಿ ಮೇಷ್ಟ್ರಿಗೆ ಇತ್ತು.  ಹಳ್ಳಿಗಳ ಅಭಿವೃಧ್ಧಿಗೆ ಶ್ರಮಿಸುತ್ತಾ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಾ ಶ್ರೀಗಂಧದಂತೆಬದುಕನ್ನೇ ಸವೆಸಿ ಹಳ್ಳಿಗರಿಗೆಹೊಸ ಬದುಕಿನ ಸುವಾಸಿತ ಹಾದಿ ತೋರಿದ ಆ ಹಳ್ಳಿ ಮೇಷ್ಟ್ರು ಈಗೆಲ್ಲಿ? ಈಗಿನ ಶಿಕ್ಷಕರಿಗೇಕೆ ಆ  ಗೌರವದೆತ್ತರಕ್ಕೇರಲು ಸಾಧ್ಯವಾಗುತ್ತಿಲ್ಲ?

ಈಗಲೂ ಅಂತಹ ಅವಕಾಶಗಳು ಇವೆ,  ಆದರೆ ತೊಡಕುಗಳಿವೆ. ಮಾಹಿತಿ ತಂತ್ರಜ್ಞಾನದ ನಾಗಲೋಟದ ಈ ಕಾಲದಲ್ಲಿ ಈಗಿನ ಕೆಲ ಶಿಕ್ಷಕರಿಗೆ ಹಳ್ಳಿಗಳಲ್ಲಿ ಉಳಿದುಕೊಳ್ಳುವ ತಾಳ್ಮೆಯಿಲ್ಲ. ಮೊಬೈಲ್ ಮತ್ತು ದ್ವಿಚಕ್ರ ವಾಹನ ಶಾಲೆ ಮುಗಿದ ಕೂಡಲೇ ನಗರ ಪ್ರದೇಶದೆಡೆ ಸೆಳೆಯುತ್ತವೆ. 

ಇತೀಚೆಗೆ ನೇಮಕಗೊಂಡ ಶಿಕ್ಷಕರಿಗೆ ಆಕರ್ಷಕ ಸಂಬಳ, ಕಂತುಗಳ ಆಧಾರದ ಮೇಲೆ ಸಿಗುವ ಬೈಕು,  ಮೊಬೈಲ್,  ಮೆಸ್ಸೇಜ,  ಹೀಗೆ ಆಧುನಿಕ ತಂತ್ರಜ್ಞಾನದ ಮೋಹ ಶಿಕ್ಷಕ ವೃತ್ತಿಯ ಗಾಂಭೀರ್ಯತೆಯನ್ನು ಹಾಳು ಮಾಡುತ್ತಿದೆ.  ಜೊತೆಗೆ ಶಾಲೆಗಳಲ್ಲಿ ಎಸ್. ಡಿ. ಎಂ. ಸಿ ರಾಜಕಾರಣ ಶಾಲೆಗಳ ಅಭಿವೃದ್ಧಿಗೆ ಮಾರಕವಾಗುತ್ತಿದೆ. ಹಿಂದೆ ಮಕ್ಕಳಿಗೆ ಶಿಕ್ಷೆ ನೀಡಿದಾಗ ಪಾಲಕರು ಹೊಡೆದು ಬುದ್ಧಿ ಕಲಿಸಿ ಎನ್ನುತ್ತಿದ್ದರು ಆದರೆ ಈಗ ಮಕ್ಕಳಿಗೆ ಶಿಕ್ಷೆ ನೀಡಿದರೆ ಪಾಲಕರಿಂದಾಗುವ ಕಿರಿಕಿರಿ ಅಸಹನೀಯ.  ಹಾಗಾಗಿ ಕೆಲ ಶಿಕ್ಷಕರು ಏನು ಮಾಡಿದರು ಕಷ್ಟ, ಹೊಡಿಯೋದು ಬೇಡ ಸುಮ್ಮನೆ ನಮಗೆ ಎಷ್ಟಾಗುತ್ತೊ ಅಷ್ಟು ಕಲಿಸೋಣ ನಮ್ಮ ಸಂಬಳಅಂತೂ ಬರುತ್ತಲ್ಲ ಎನ್ನುವ ಆಲೋಚನೆಯ ಮೊರೆ ಹೋಗಿದ್ದಾರೆ.  ಇನ್ನು ಕೆಲವರಂತೂ ಇದರ ನಡುವೆಯೂ ಪಾಲಕರಿಂದ ಬೈಸಿಕೊಂಡೂ ಕಲಿಸುವ ಸಾಹಸ ಮಾಡುತ್ತಿದ್ದಾರೆ. ಇನ್ನು ಕೆಲ ಶಿಕ್ಷಕರು ತಾವಾಯಿತು ತಮ್ಮ ಮೊಬೈಲ್ ಕರೆ ಇಲ್ಲವೇ ಮೆಸೇಜಗಳಲ್ಲಿ ಮಗ್ನರಾಗಿರುತ್ತಾರೆ. ಅನೇಕ ಶಾಲೆಗಳಲ್ಲಿ ಇತ್ತೀಚೆಗೆ ನೇಮಕಗೊಂಡ ಯುವ ಶಿಕ್ಷಕರಿಗೆ ಶಾಲೆಗಳಲ್ಲಿ ಮೊಬೈಲ್ ನಿಷೇಧ ಸು(ಸ)ತ್ತೋಲೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. 

ಭವಿಷ್ಯದ ಪ್ರಜೆಗಳನ್ನು ಸೃಷ್ಟಿಸುವ ಮಹಾತ್ಕಾರ್ಯದ ಯಜ್ಞಾಧಿಪತಿಗಳು ಶಿಕ್ಷಕರು,  ಶಿಕ್ಷಕ ಮತ್ತು ಶಿಕ್ಷಣ ಒಬ್ಬ ವ್ಯಕ್ತಿಯ ಜೀವನದಲ್ಲಿ ಬಂದು ಹೋಗುವ ಪಾತ್ರ ಮತ್ತು ಪ್ರಕ್ರಿಯೆ. ವ್ಯಕ್ತಿ ವಿಕಸನ ಪ್ರಕ್ರಿಯೆಯಲ್ಲಿ ಇವೆರೆಡೂ ಪ್ರಮುಖ ಅಂಶಗಳು. ಅದು ಇಂದಿನ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸುವವರು ಪ್ರಮುಖವಾಗಿ ತಿಳಿಯಬೇಕಾದ ತಿರುಳು. 

ಈಗಲೂ ಸಮಯವೇನೂ ಮೀರಿಲ್ಲ,  ವಶೀಲಿ ಬಾಜಿ, ರಾಜಕಾರಿಣಿ, ಪುಢಾರಿಗಳ ಕಾಲು ಹಿಡಿದು ಉತ್ತಮ ಶಿಕ್ಷಕ ಪ್ರಶಸ್ತಿ ಗಳಿಸುವುದಕ್ಕಿಂತ ನೀವು ಸೇವೆ ಸಲ್ಲಿಸುವ ಹಳ್ಳಿಗರ ಮನ ಗೆಲ್ಲಿರಿ,  ಹಳ್ಳಿ ಮಕ್ಕಳನ್ನು ನಗರ ಪ್ರದೇಶದ ಮಕ್ಕಳೊಂದಿಗೆ ಸ್ಪರ್ಧಿಸುವ ರೀತಿಯಲ್ಲಿ ಅಣಿಗೊಳಿಸಿ,  ಹಳ್ಳಿಗಳ ಅಭಿವೃಧ್ಧಿ ನಿಮ್ಮ ಮೂಲ ಮಂತ್ರವಾಗಲಿ.  ಹಳ್ಳಿಯಲ್ಲಿರಿ,  ರಾತ್ರಿ ಮಕ್ಕಳಿಗೆ ಮನೆಪಾಠ ಹೇಳಿ ನೋಡಿ,  ನಿಮ್ಮ ಬಗ್ಗೆ ಹಳ್ಳಿಗರಿಗೆ ಯಾವ ಭಾವನೆ ಮೂಡುತ್ತದೋ ನೀವೇ ಕಾದು ನೋಡಿ. ನಿಮ್ಮ ಶ್ರಮ ಎಂದಿದ್ದರೂ ನಿಮಗೆ ಫಲ ನೀಡುತ್ತದೆ. ಮೊಬೈಲ್ ಬಳಕೆ ಅಗತ್ಯಕ್ಕೆ  ತಕ್ಕಂತೆ ಇರಲಿ,  ಹೊಸ ಹೊಸ ಪುಸ್ತಕಗಳ ಅಧ್ಯಯನಗಳ ಮೂಲಕ ಪಠ್ಯಗಳ ಜೊತೆ ಮಕ್ಕಳಿಗೆ ಹೊಸದೇನನ್ನೋ ತಿಳಿಸುತ್ತಾ ನೀವು ಬೆರಗು ಮೂಡಿಸುವ ಶಿಕ್ಷಕರಾಗಿ.  ಬಿ.ಇಡಿ,  ಡಿ.ಇಡಿ,  ಎಂ.ಎ.  ಎಂ.ಇಡಿ ನಿಮ್ಮ ಶಿಕ್ಷಣದ ಅಂತ್ಯವಲ್ಲ.  ನೀವು ಕಲಿತದ್ದು ಕೈಯಗಲ ಕಲಿಯುವುದು ಕಡಲಗಲ.  ನಿಮ್ಮಲ್ಲಿನ ಜ್ಞಾನ ಮತ್ತು ತಾಳ್ಮೆ ನಿಮ್ಮನ್ನು  ಔನ್ನ್ಯತ್ತೇಕ್ಕೇರಿಸುತ್ತದೆ.  ಮಕ್ಕಳಿಗೆ ಕಲಿಸಿದಷ್ಟು ನಿಮ್ಮನ್ನು ಪ್ರೀತಿಸುತ್ತಾರೆ,  ಪಠ್ಯ ಭೋಧನೆಯಷ್ಟೆ ಶಿಕ್ಷಣವಲ್ಲ, ಹೊಸ ಪುಸ್ತಕ,  ಆವಿಷ್ಕಾರ,  ನೃತ್ಯ,  ನಾಟಕ, ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳ ಜ್ಞಾನ ನೀಡುವುದರಿಂದ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡಬಹುದಾಗಿದೆ. 

ಜಗತ್ತಿನಲ್ಲಿ ನಿಮಗೆ ಸಿಕ್ಕ ಅತ್ಯಮೂಲ್ಯ ಜವಾಬ್ದಾರಿಯಿದು. ನಿಮ್ಮ ಶಿಕ್ಷಕ ವೃತ್ತಿಯ ಯಶಸ್ವಿ ಪಾಲಕರು ಮತ್ತು ಮಕ್ಕಳ ಮನ ಗೆದ್ದಾಗ ಮಾತ್ರಸಿಗುತ್ತದೆ. ನೀವು ಗಳಿಸಿದ ಹಣದಿಂದಲ್ಲ, ಪುಢಾರಿಗಳ ಕಾಲು ಹಿಡಿದು ವಶೀಲಿ ಮಾಡಿ ಕಿತ್ತು ತಂದ ಪ್ರಶಸ್ತಿಯಿಂದಲ್ಲ. ಇದು ನೂರಕ್ಕೆ ನೂರರಷ್ಟು ಸತ್ಯ ತಾನೇ? 

*****

ಲೇಖಕರ ಪರಿಚಯ:

ಪತ್ರೇಶ್ ಹಿರೇಮಠ್ : ಹುಟ್ಟೂರು ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಬಸರಕೋಡು ಗ್ರಾಮ. ಓದು, ಕವನ, ಲೇಖನ, ಬರೆಯುವುದು ಇವರ ಹವ್ಯಾಸ. ಸಾಹಿತ್ಯ ಅಕಾಡೆಮಿ ಪ್ರಕಟಿಸಿದ ಯುವ ಕವಿಗಳ ಕವನ ಸಂಕಲನ ಸೇರಿದಂತೆ ಸುಧಾ, ಪ್ರಜಾವಾಣಿ ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ ಇವರ ಲೇಖನ ಕವಿತೆ ಪ್ರಕಟವಾಗಿವೆ. 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
amardeep.ps
amardeep.ps
10 years ago

ಸ್ವಾಮಿಗಳೇ, ನಿಮ್ಮ ನೇರ ಹಾಗೂ ದೂರದೃಷ್ಟಿ ಚೆನ್ನಾಗಿದೆ.  ನಾನು ಮೊದಲೇ ಹೇಳಿದಂತೆ ನೀವು ಬರಹದ ಹವ್ಯಾಸವನ್ನು ಸೀರಿಯಸ್ ಆಗಿ ತೆಗೆದುಕೊಳ್ಳುವ ಬಗ್ಗೆ ಯೋಚಿಸಿ….ನಿಮ್ಮ ಚೆಂದನೆ ಕೈ ಬರಹ ಓದಲು ಇಷೃ ಪಡುವ ಅಭಿಮಾನಿ ನಾನು..ನಿಮ್ಮ ಇತರೇ ಜಂಜಡಗಳ ಜೊತೆ ಇದನ್ನು ನಿಮ್ಮ ಕೊರಳಿಗೆ ತಗುಲಿ ಹಾಕಿಕೊಳ್ಳಿ…. 

Renuka Shilpi
Renuka Shilpi
10 years ago

ತುಂಬಾ ಚೆನ್ನಾಗಿದೆ

Santhosh
10 years ago

ಮುಂದೊಂದು ದಿನ ನಾನೂ ಕೂಡ ಶಿಕ್ಷಕನಾಗಬೇಕೆಂದಿರುವೆ. ತುಂಬಾ ಚೆನ್ನಾಗಿದೆ ನಿಮ್ಮ ಲೇಖನ

ತ. ನಂ. ಜ್ಞಾನೇಶ್ವರ

ಈಗ ಹಳ್ಳಿಗಳಲ್ಲಿ ರಾಜಕೀಯ ಹೆಚ್ಚಾಗಿದೆ. ಅಂದಿನ ಮುಗ್ಧತೆ ಮಾಯವಾಗಿದೆ. ಶೈಕ್ಷಣಿಕ ಪ್ರವಾಸದ ಸಮಯದಲ್ಲಿ ಅವಘಡಗಳು ನಡೆದ ಸಂದರ್ಭದಲ್ಲಿ ಪಂಚಾಯಿತಿ ನ್ಯಾಯ ಮಾಡಿ ಶಿಕ್ಷಕರಿಗೆ ಸಾವಿರಾರು ರೂಪಾಯಿಗಳ ದಂಡ ವಿಧಿಸುವ ಮಟ್ಟಕ್ಕೆ ಜನ ಹೋಗಿದ್ದಾರೆ.

4
0
Would love your thoughts, please comment.x
()
x