ಮಳೆಗಾಲ ಬಂತೆಂದರೆ ಹಳ್ಳಿಯವರಾದ ನಮಗೆ ಸ್ವಲ್ಪ ಬಿಡುವು ಸಿಕ್ಕಿದ ಹಾಗೆ. ಬೇಸಿಗೆಯಿಡೀ ತೋಟಕ್ಕೆ ನೀರು ಹನಿಸುವ ಕೆಲಸ, ಆ ನೀರಿನ ಪೈಪುಗಳು ತುಂಡಾದರೆ ಜೋಡಿಸುವ ಕೆಲಸ, ಅದಕ್ಕೆ ಬೇಕಾದ ಸಲಕರಣೆಗಳು ಇಲ್ಲದಿದ್ದರೆ ಪೇಟೆಗೆ ಓಡುವ ಕೆಲಸ ಹೀಗೆ ಒಂದರ ಹಿಂದೊಂದು ಅಂತ ಪುರುಸೊತ್ತೇ ಇರೋಲ್ಲ, ಜಿಟಿ ಪಿಟಿ ಮಳೆ ಬೀಳಲು ಸುರುವಾಯ್ತೆಂದರೆ ಈ ಕೆಲಸಗಳಿಗೆಲ್ಲ ಮುಕ್ತಿ ಸಿಕ್ಕಿದಂತಾಗುತ್ತದೆ. ಮೊದಲಿಗೆ ಸುಮ್ಮನೇ ಕುಳಿತು ದಿನ ದೂಡುವುದರಲ್ಲೇ ಸುಖ ಅನುಭವಿಸಿದರೂ ಮತ್ತೆ ನಿಧಾನಕ್ಕೆ ಹೊತ್ತು ಕಳೆಯುವುದು ಹೇಗಪ್ಪಾ ಅನ್ನುವ ಚಿಂತೆ ತೊಡಗುತ್ತದೆ. ಹಾಗಾದಾಗೆಲ್ಲಾ ನಾನು ಏನಾದರೊಂದು ಹೊಸ ಹವ್ಯಾಸವೆಂಬ ಹುಚ್ಚನ್ನು ತಗುಲಿ ಹಾಕಿಕೊಳ್ಳುತ್ತೇನೆ. ನನಗೆ ಹೀಗನಿಸಿದಾಗಲೆಲ್ಲ ತಲೆಯಲ್ಲಿ ಪಕ್ಕನೆ ಹೊಳೆಯುವುದೆಂದರೆ ಕಸದಿಂದ ರಸ ತೆಗೆಯುವುದು. ಚಿಕ್ಕವಳಿದ್ದಾಗ ಕೇಳಿದ್ದ ಒಂದು ಕಥೆಯೇ ಇದಕ್ಕೆ ಪ್ರೇರಣೆಯೆನ್ನಿ. ಅದೇನಪ್ಪಾ ಅಂದರೆ ಒಂದು ಸಲ ನಮ್ಮ ರೈಲು ಬಂಡಿಯಲ್ಲಿ ಅದೆಷ್ಟೊ ಮಂದಿ ಪ್ರಯಾಣಿಕರ ನಡುವೆ ಒಬ್ಬ ಜಪಾನೀಯನೂ ಪಯಣಿಸುತ್ತಿದ್ದನಂತೆ. ಯಾವುದೋ ಒಂದು ಸ್ಟೇಶನ್ನಿನಲ್ಲಿ ರೈಲು ನಿಂತಾಗ ಒಬ್ಬ ಕಬ್ಬಿನ ತುಂಡುಗಳನ್ನು ಮಾರಿಕೊಂಡು ಬಂದನಂತೆ. ಕೆಲವರು ಅದನ್ನು ಕೊಂಡು ತಿನ್ನ ತೊಡಗಿದ್ದೇ ಸರಿ ರೈಲೆಲ್ಲಾ ಕಸದ ಡಬ್ಬಿಯಂತಾಯಿತು. ಇವರೊಂದಿಗೆ ಜಪಾನೀಯನೂ ಕಬ್ಬನ್ನು ಕೊಂಡಿದ್ದನಂತೆ. ಆದರೆ ಅವನ ತಿನ್ನುವ ರೀತಿ ಮಾತ್ರ ಇತರರಿಗಿಂತ ಭಿನ್ನ. ಕಬ್ಬಿನ ಸಿಪ್ಪೆ ತುಂಡಾಗದಂತೆ ಎಚ್ಚರದಿಂದ ಕಚ್ಚಿ ಎಳೆದು ಬದಿಗಿಟ್ಟು ಕಬ್ಬನ್ನು ತಿಂದು ಚರಟನ್ನು ಕೆಳಗೆ ಉಗಿಯದೇ ಒಂದು ಲಕೋಟೆಯಲ್ಲಿ ಹಾಕಿದನಂತೆ. ಮತ್ತೆ ಮೊದಲೇ ತೆಗೆದಿಟ್ಟ ಕಬ್ಬಿನ ಸಿಪ್ಪೆಯಲ್ಲಿ ಹಲ್ಲಿನಿಂದಲೇ ಗುರುತು ಮಾಡಿ ಕಚ್ಚಿ ಒಂದೆರಡು ಸುಂದರ ಬಾಚಣಿಗಳನ್ನು ಮಾಡಿದನಂತೆ. ಮತ್ತೆ ಆ ಬಾಚಣಿಕೆಗಳನ್ನು ತನ್ನ ಸಹ ಪ್ರಯಾಣಿಕರಿಗೆ ಮಾರಿ ಒಂದಷ್ಟು ಚಿಲ್ಲರೆ ಕಾಸನ್ನು ಜೇಬಿಗಿಳಿಸಿಕೊಂಡನಂತೆ.
ಇದರಲ್ಲಿ ಕಸದಿಂದ ರಸ ತೆಗೆದ ಜಪಾನೀಯನ ನಿಪುಣತೆಗಿಂತ ಅವನ ಎಂಜಲು ಕಬ್ಬಿನ ಬಾಚಣಿಗೆಯನ್ನು ನಮ್ಮವರು ಕೊಂಡರು ಅಂತ ಕಥೆಯಲ್ಲಿ ಹೇಳಿದ್ದು ದೇಶ ಭಕ್ತೆಯಾದ ನನಗೆ ಯಾವತ್ತೂ ಸರಿ ಕಂಡಿರಲಿಲ್ಲ. ಆದಾರೂ ಸುಮ್ಮನೆ ಬಿಸುಡುವ ವಸ್ತುಗಳಿಂದ ಏನಾದರೂ ಉಪಯುಕ್ತ ವಸ್ತುಗಳನ್ನು ತಯಾರಿಸಿ ಭೇಶ್ ಹೇಳಿಸಿಕೊಳ್ಳ ಬೇಕೆಂಬ ಆಸೆ ನನ್ನ ಮನದಲ್ಲಿ ಆಗಲೇ ಚಿಗುರಿತ್ತು. ಹೀಗಿಪ್ಪ ಮನಸ್ಥಿತಿಯಲ್ಲಿರುವ ನಾನು ಮಳೆಗಾಲ ಬಂತೆಂದರೆ ಮನೆಯ ಅಟ್ಟ ಸೇರಿದ ಗುಜರಿ ವಸ್ತುಗಳನ್ನು ಮೆಲ್ಲನೆ ಕೆಳಗಿಳಿಸಿ ಹರವಿಟ್ಟುಕೊಂಡು ಕುಳಿತು ಬಿಡುತ್ತೇನೆ. ಈ ಸಲ ಮಾತ್ರ ಅವುಗಳಲ್ಲಿ ಏನನ್ನು ಹೆಕ್ಕಿಕೊಳ್ಳುವುದು ಏನನ್ನು ತಯಾರಿಸುವುದು ಎಂದು ನಿರ್ಧರಿಸಾಲಾಗದೆ ಗೊಂದಲದಿಂದ ಮತ್ತೆ ಆ ಕಸವನ್ನೆಲ್ಲಾ ಗೋಣಿಯಲ್ಲಿ ತುಂಬಿ ಯಥಾ ಸ್ಥಾನಮ್ ಉದ್ವಾಸಯಾಮಿ ಅನ್ನುತ್ತಾ ಮತ್ತೆ ಅಟ್ಟಕ್ಕೆ ಸೇರಿಸಿದೆ. ಆಗ ನೋಡಿ ನನ್ನ ಮೊಬೈಲಿನಲ್ಲಿ ಟನ್ ಎಂದು ಮೆಸ್ಸೇಜ್ ಅಲರ್ಟ್ ಟೋನ್ ಕೇಳಿಸಿದ್ದು. ಏನಪ್ಪಾ ಅಂತ ತೆರೆದು ನೋಡಿದರೆ ನನ್ನ ಸಣ್ಣತ್ತೆ ಮಗಳು ಒಂದು ಸುಂದರ ಬಟ್ಟೆಯ ಪರ್ಸಿನ ಫೋಟೊವನ್ನು ವಾಟ್ಸಪ್ ನಲ್ಲಿ ಕಳಿಸಿದ್ದಳು. ವಾವ್! ಆವ್ಸಮ್ ! ಎಂದು ಟೈಪಿಸಿ ಎಲ್ಲೇ ತಗೊಂಡೆ ಇದನ್ನು ಅಂದರೆ ಅವಳು ತಗೊಂಡಿದ್ದಲ್ಲ.. ಹಳೇ ಬಟ್ಟೆಯಲ್ಲಿ ಮಾಡಿದ್ದು.. ನನ್ನ ಅಮ್ಮನ ಕೈಚಳಕ ಅಂದಳು. ನನಗಂತೂ ಇದನ್ನು ಕೇಳಿ ಹುಡುಕುತ್ತಿದ್ದ ಬಳ್ಳಿ ಕಾಲಿಗೆ ತೊಡರಿದಷ್ಟು ಖುಶಿಯಾಯ್ತು. ಇದಕ್ಕಿಂತ ಒಳ್ಳೆ ಹವ್ಯಾಸ ಇನ್ನೊಂದುಂಟೆ ! ಚಿಂದಿ ಬಟ್ಟೆಗಳನ್ನು ಮಿರಿ ಮಿರಿ ಮಿಂಚುವ ಪರ್ಸುಗಳನ್ನಾಗಿಸುವ ಹಂಬಲ ನನ್ನಲ್ಲಿ ಹೆಚ್ಚಾಗ ತೊಡಗಿತು.
ಅದನ್ನು ಮಾಡೋದು ಹೇಗೆ ಮಾರಾಯ್ತಿ ಅಂತ ಅತ್ತೆ ಮಗಳಿಗೆ ವಾಟ್ಸಪ್ಪಿಸಿದರೆ ‘ ನಂಗೆ ಸೂಜಿಗೆ ನೂಲು ಹಾಕ್ಲಿಕ್ಕೆ ಬರೋದೇ ಕಷ್ಟ. ಅದೇನಿದ್ರೂ ಅಮ್ಮನ ಡಿಪಾಟ್ರ್ಮೆಂಟು. ಅವಳನ್ನೇ ಕೇಳು’ ಎಂದು ಕೈ ತೊಳೆದುಕೊಂಡಳು. ಹೇಗೂ ಫೋನಿನಲ್ಲಿ ಆನ್ ಲೈನ್ ಪಾಠ ಮಾಡಿಸಿಕೊಂದರಾಯ್ತು ಅಂತ ಅತ್ತೆಯನ್ನು ಸಂಪರ್ಕಿಸಿದೆ. ಸ್ವಲ್ಪ ಸ್ವಲ್ಪ ವಿಷಯ ಅರ್ಥವಾದರೂ ಅದರ ಸೂಕ್ಷ್ಮ ವಿಷಯಗಗಳು ಅರ್ಥ ಆಗ್ಲಿಲ್ಲ. ಅವರು ಮಾಡಿಟ್ಟ ಪರ್ಸನ್ನು ಕಣ್ಣಾರೆ ನೋಡಿದರೆ ಅದು ಅರ್ಥ ಆಗಬಹುದು ಎಂದುಕೊಂಡು ಇವರನ್ನು ಕೂತಲ್ಲಿ ನಿಂತಲ್ಲಿ ಅವರ ಮನೆಗೆ ಕರೆದುಕೊಂಡು ಹೋಗಿರೆಂದು ಪೀಡಿಸಿದೆ. ನನ್ನ ಉಪಟಳ ತಡೆಯದೇ ಹೊರಟರು.
ಮೊದಲೇ ಅವರ ಮನೆಗೆ ಬರುವುದಾಗಿ ತಿಳಿಸಿ ಹೊರಟಿದ್ದರಿಂದ ಬಗೆ ಬಗೆಯ ತಿಂಡಿ ತಿನಿಸು ಮಾಡಿಟ್ಟಿದ್ದರು. ಅದರ ರುಚಿ ನೋಡುವಾಗ ಪರ್ಸಿನ ಸುದ್ದಿಯೇ ಮರೆತುಹೋಗಿತ್ತು. ಇನ್ನೇನು ಹೊರಡಬೇಕೆಂದು ಚಪ್ಪಲಿ ಮೆಟ್ಟುವಾಗ ಇವರು ‘ಪರ್ಸ್ ಮಾಡೋದು ಹೇಗೆ ಅಂತ ಸರೀ ನೋಡಿಕೊಂಡ್ಯಾ.. ಮನೆಗೆ ತಲ್ಪಿದ ಕೂಡಲೇ ಮತ್ತೆ ಶುರು ಮಾಡ್ಬೇಡಾ’ ಎಂದು ಎಚ್ಚರಿಸಿದರು. ಹೊಟ್ಟೆಗೆ ಮುದ್ದೆ ಇಳಿಸುವ ಬರದಲ್ಲಿ ಎಲ್ಲಾ ಮರೆತಿದ್ದ ನನಗೆ ಆಗಲೇ ನಾನು ಬಂದ ಮೈನ್ ಮುದ್ದಾ ನೆನಪಾಗಿದ್ದು. ಮತ್ತೆ ಚಪ್ಪಲಿ ಬಿಚ್ಚಿಟ್ಟು ಒಳ ಹೋಗಿ ಕಲಿತು ಬಂದೆ.
ಮನೆಗೆ ಬಂದು ನುಗ್ಗುವಾಗಲೇ ನನ್ನ ತಲೆಯಲ್ಲಿ ನಾನು ಮಾಡಲಿಕ್ಕಿರುವ ಪರ್ಸಿನ ಡಿಸೈನು ತಿರುಗುತ್ತಿದ್ದ ಕಾರಣ ಬೇರೇನೂ ಕೆಲಸ ಕಾರ್ಯಗಳಿಗೆ ಮನ ಮಾಡದೇ ಪರ್ಸಿನ ತಯಾರಿಗೆ ಹೊರಟೆ. ಮೊದಲಿನ ಅವಶ್ಯಕತೆ ಬಟ್ಟೆಯಾಗಿತ್ತು. ಅದೂ ಹೊಸ ಬಟ್ಟೆ ಅಲ್ಲ.. ಹಳೇದು.. ಆದ್ರೆ ಗಟ್ಟಿ ಇರ್ಬೇಕು..ಇಲ್ಲಾಂದ್ರೆ ಹೊಲಿಯೋ ಮೊದಲೇ ಹರಿದು ಹೋಗುವ ಸಾಧ್ಯತೆಗಳು ಹೆಚ್ಚಲ್ವಾ.. ಹಾಗೇ ಹಳೇದು ಅಂತ ನೆಲ ಒರೆಸೋ ಬಟ್ಟೆ ತರ ಬಣ್ಣ ಮಾಸಿರಬಾರದು. ಇಂತಹ ಎಲ್ಲಾ ಗುಣಲಕ್ಷಣಗಳು ನನಗೆ ಮೊದಲಿಗೆ ಕಂಡದ್ದು ಇವರ ಶರ್ಟ್ ಪ್ಯಾಂಟುಗಳಲ್ಲಿಯೇ.. ಹಾಗಾಗಿ ಅದನ್ನು ಹರಿಯೋ ಮೊದಲೊಮ್ಮೆ ಫಾರ್ಮಾಲಿಟಿಗಾಗಿ ಕೇಳುವ ಶಾಸ್ತ್ರ ಮಾಡ್ಬೇಕಲ್ವಾ..
‘ರೀ..’ ಎಂದೆ..
ಇನ್ನೇನು ಗ್ರಾಚಾರ ಕಾದಿದೆ ಎನ್ನುವಂತಾ ನೋಟದೊಡನೆ ತಲೆ ಎತ್ತಿದರು.
‘ಏನಿಲ್ಲಾ.. ನೀವು ಆ ಕಾಫೀ ಕಲರ್ ನ ಪ್ಯಾಂಟ್ ಹಳೇದಾಗಿದೆ.. ಅಂತ ಅಂದಿದ್ರಲ್ವಾ..
‘ಹೌದಾ.. ನಾನ್ಯಾವಾಗ ಹಾಗೆ ಹೇಳಿದ್ದೆ..? ನಿನ್ನೆ ಹಾಕಿದ್ದು ಅದನ್ನೇ ಅಲ್ವಾ..’
‘ಹುಂ.. ಅದೇ.. ನಿನ್ನೆ ಹಾಕುವಾಗಲೇ ಹೇಳಿದ್ದು ನೀವು.. ಇನ್ನು ಹಾಕೋದಿಲ್ಲ ಅಂತ..
ಹೊರಗೆ ಹೋಗುವಾಗ ಹಾಕೋದಿಲ್ಲ ಅಂದಿದ್ದು.. ಆದ್ರೆ ತೋಟಕ್ಕೆ ಹೋಗುವಾಗ ಹಾಕದೆ ಏನು.. ಅದೇನೂ ಹಾಳಾಗಿಲ್ಲ. ಅದರ ಬಕಲ್ ಗಳು ಸ್ವಲ್ಪ ಕಿತ್ತು ಹೋಗಿದೆ ಅಷ್ಟೇ.. ನೀನೊಂದೆರಡು ಹೊಲಿಗೆ ಹಾಕಿದ್ರೆ ಇನ್ನು ನಾಲ್ಕು ವರ್ಷ ಹಾಕ್ಬೋದು ಅದನ್ನು.. ಪರ್ಸ್ ಹೊಲೀಲಿಕ್ಕೆ ಹೇಗೂ ಸೂಜಿಗೆ ನೂಲು ಹಾಕ್ತೀಯಲ್ವಾ.. ಆಗ ಮೊದಲು ಇದನ್ನಿಷ್ಟು ಹೊಲಿದಿಟ್ಟುಬಿಡು’ ಎಂದು ಆರ್ಡರ್ ಪಾಸ್ ಮಾಡಿದರು.
ಸರಿ ಬಿಡಿ.. ‘ ನಿಮ್ಮ ಶರ್ಟ್ ಇದೆಯಲ್ಲಾ.. ಅದೇ ಸ್ವಲ್ಪ ದಪ್ಪ ದಪ್ಪ ಬಟ್ಟೆ.. ಸೆಕೆಗೆ ಹಾಕಿದ್ರೆ ಸತ್ತೇ ಹೋದೇನು ಅಂತ ಪಿರಿ ಪಿರಿ ಮಾಡ್ತಿದ್ರಲ್ಲ.. ಅದನ್ನಂತೂ ಇನ್ನು ಹಾಕೋದಿಲ್ಲ ಅಲ್ವಾ..’
‘ಅಯ್ಯೋ.. ನೀನು ನೆನಪು ಮಾಡಿದ್ದು ಒಳ್ಳೇದಾಯ್ತು ನೋಡು.. ಈಗ ಮಳೆಗಾಲ ಅಲ್ವಾ.. ಸ್ವಲ್ಪ ಚಳಿಯೂ ಇದೆ. ಈಗ ಹಾಕಲು ಆ ಅಂಗಿಯೇ ಬೆಸ್ಟ್.. ಸ್ವಲ್ಪ ಹೊರಗೆ ತೆಗೆದಿಡು’ ಎಂದರು.
ಇದ್ಯಾಕೋ ಆಗುವ ಹೋಗುವ ಕೆಲಸವಲ್ಲ ಎನ್ನಿಸಿ ಮಗನ ಅಂಗಿ ಪ್ಯಾಂಟುಗಳತ್ತ ಕಣ್ಣು ಹಾಕಿದೆ. ಹೇಗೂ ಅವನಿಗೆ ಗಿಡ್ಡ ಆಗಿ ಹಾಕದೆ ಉಳಿದ ಬಟ್ಟೆಗಳ ರಾಶಿಯೇ ಇತ್ತು. ನನಗೆ ಬೇಕೆನಿಸಿದ್ದನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವೂ ಇತ್ತಲ್ಲಾ.. ಹಾಗೆ ಗೋಣಿ ಕಟ್ಟಿನಲ್ಲಿ ತುಂಬಿಟ್ಟಿದ್ದ ಬಟ್ಟೆ ತಂದು ಹಾಲಿನಲ್ಲಿ ಹರವಿದೆ.
ನನ್ನ ಹಿಂದಿನಿಂದಲೇ ಬಂದ ಮಗ ‘ ಇದ್ಯಾರದ್ದು ಬಟ್ಟೆಗಳು’ ಅಂದ.
‘ಇದು ನಿನ್ನದೇ ಮಾರಾಯ.. ಎಲ್ಲಾ ನಿನ್ನ ಸಣ್ಣ ಕ್ಲಾಸಿನ ಬಟ್ಟೆಗಳು.. ಐದಾರು ತಿಂಗಳಿಗೇ ಬಟ್ಟೆ ಸಣ್ಣದಾಗುತ್ತಿದ್ದ ಕಾರಣ ಹರಿಯದೇ ಇನ್ನೂ ಹೊಸದರಂತೆ ಇದ್ದ ಅದನ್ನೆಲ್ಲಾ ತುಂಬಿಟ್ಟಿದ್ದೆ’ ಎಂದೆ.
ಮುಕ್ಕಾಲು ಅಡಿಯ ಶರ್ಟುಗಳು ಕಾಲು ಅಡಿಗೂ ಸಣ್ಣ ಪೀಚಲು ಚಡ್ಡಿಗಳು, ಈಗ ಅವನ ಕೈಯೂ ತೂರದಂತಹ ಅಳತೆಯ ಪ್ಯಾಂಟುಗಳು, ಎಲ್ಲವನ್ನೂ ಸುಮ್ಮನೆ ಪಕ್ಕದಲ್ಲಿ ಮೌನವಾಗಿ ಕುಳಿತು ನೋಡುತ್ತಲೇ ಇದ್ದ.
‘ಇದು ಈಗಲೂ ಹಾಕುವಷ್ಟು ಗಟ್ಟಿ ಉಂಟಾ’
‘ಇಲ್ಲದೇ ಏನು.. ಇದೆಲ್ಲಾ ಒಳ್ಳೇ ಕ್ವಾಲಿಟಿ ಬಟ್ಟೆ. ಅಷ್ಟು ಬೇಗ ಹಾಳಾಗುವುದಿಲ್ಲ’ ಮತ್ತೆ ನೀನಾದ್ರು ಇದನ್ನು ಎಷ್ಟು ಸಲ ಹಾಕಿದ್ದೀಯಾ? ಕೆಲವು ಅಂಗಿಗಳು ಒಂದೇ ಸಲ ಹಾಕಿದ್ದೂ ಇರಬಹುದು’
ಅವನೂ ಪಕ್ಕದಲ್ಲಿ ಕುಳಿತು ಚೆನ್ನಾಗಿದ್ದ ಬಟ್ಟೆಗಳನ್ನೆಲ್ಲಾ ಆಯ್ಕೆ ಮಾಡಿ ಪಕ್ಕಕ್ಕಿಟ್ಟ. ನಾನು ನನಗೆ ಸಹಾಯ ಮಾಡುತ್ತಿದ್ದಾನೆಂದು ಗ್ರಹಿಸಿ ‘ ಅಷ್ಟು ಬಟ್ಟೆಗಳದ್ದು ಪರ್ಸ್ ಮಾಡಿದರೆ ನಾನು ಅಂಗಡಿ ಇಡ್ಬೇಕಷ್ಟೇ.. ಅದನ್ನು ಮಾರಲು’ ಎಂದೆ.
‘ಇಲ್ಲಾ.. ಇದು ನನ್ನ ಆಫೀಸ್ ಪಕ್ಕದಲ್ಲಿ ರಸ್ತೆ ಬದಿಯ ಪೈಪ್ ಲೈನ್ ಹಾಕುವವರ ಟೆಂಟ್ ಇದೆ. ಅಲ್ಲಿ ಸಣ್ಣಸಣ್ಣ ಮಕ್ಕಳನ್ನು ನೋಡಿದ್ದೆ. ಅವರ ಮೈಮೇಲಿನ ಅಂಗಿ ಚಡ್ಡಿ ಎಲ್ಲಾ ಹರಿದುಕೊಂಡೇ ಇರೋದು.. ಅವರಿಗೆ ಕೊಡ್ತೀನಿ..’ ಎಂದು ದೊಡ್ಡದೊಂದು ಪ್ಲಾಸ್ಟಿಕ್ ಕವರಿಗೆ ತುಂಬಿಸತೊಡಗಿದ.
ನಾನೀಗ ಮತ್ತೆ ಪರ್ಸ್ ಹೊಲಿಯಲು ಬೇಕಾದ ಹಳೇ ಬಟ್ಟೆಯ ಹುಡುಕಾಟದಲ್ಲಿ ನಿರತಳಾಗಿದ್ದೇನೆ.
*****
ಸಣ್ಣದಿರುವಾಗ ಇದೇ ಕೆಲಸ ಮಾಡಲು ಕಸ ಕಡ್ಡಿಗಳನ್ನೆಲ್ಲ ಮನೆಯಲ್ಲಿ ಸೇರಿಸಿ ಸದಾ ಅಮ್ಮನ ಕೈಯಲ್ಲಿ ಬೈಗುಳ ತಿನ್ನುತ್ತಿದ್ದ ನೆನಪಾಗ್ತಾ ಇದೆ…. super …..
ತುಂಬಾ ಚೆನ್ನಾಗಿದೆ ಮೇಡಂ