ವಸಂತ ಬರೆದನು ಒಲವಿನ ಓಲೆ
ಚಿಗುರಿದ ಎಲೆ ಎಲೆ ಮೇಲೆ……
ಸಾಹಿತ್ಯ ಅರ್ಥವಾಗದೇ ಇದ್ದ ವಯಸ್ಸಿನಲ್ಲಿ ಗುನುಗಿಕೊಳ್ಳುತ್ತಿದ್ದ ಹಾಡು.ವಸಂತ ಒಬ್ಬ ವ್ಯಕ್ತಿ, ಆತ ಎಲೆ ಮೇಲೆ ಲೆಟರ್ ಬರೆದ ಅಂತಾನೆ ಅರ್ಥೈಸಿಕೊಂಡಿದ್ದು!
ವಸಂತ ಬಂದ ಚೈತ್ರಾಳ ಜೊತೆ….ವಾವ್ ಏನು ಖುಷಿ ಅಲ್ವಾ?ಮರ-ಗಿಡ-ಬಳ್ಳಿಗಳೆಲ್ಲವೂ ಮೈ ಚಕ್ಳ ಬಿಟ್ಕಂಡು ಬಕ್ಕಬರ್ಲಾಗಿ ಬಾಳೋ ಅಥವಾ ಸಾಯೋ ಟೈಮಿಗೆ ಈ ಜೋಡೀನ್ ನೋಡಿ ಮತ್ತೆ ಮೈಕೈ ತುಂಬ್ಕಂಡ್ ಮೊದಲ್ನೇ ಸರ್ತೀ ಮದ್ವೆಯಾಗೋ ಹುಡುಗ್ನಂಗೆ ಸಿಂಗಾರಗೊಳ್ತವೆ ಅಂದ್ರೆ ಅದಕ್ಕೆ ಚೈತ್ರ ಕಾರಣನೋ,ವಸಂತನೋ ಗೊತ್ತಿಲ್ಲ!
ಎದೆಯ ದುಗುಡವನೆಲ್ಲಾ
ಬಗ್ಗಡ ಮಾಡಿ ಚರಂಡಿಗೆ ಹರಿದು ಬಿಡು
ಬಂದ ಚಿಗುರಿಗೆ ಮೈಯೊಡ್ಡಿ
ಹಳೆಯ ಹಾಡೊಂದ ಹಾಗೇ ಹಾಡಿಬಿಡು!
ನಾಳೆಗಳ ಬಣ್ಣ ಕಂಡವರಾರು? ನಿನ್ನೆಯ ಸರಿದು ಹೋದ ಗಳಿಗೆಗಳ ಲೆಕ್ಕವಿಡುವವರು ಯಾರು? ಇಂದಿನ ಗಾಳಿಪಟದ ದಾರ ಹಿಡಿದುಕೊಂಡೇ ಹಾರುವ ಮನಸಿನೊಂದಿಗೆ ಪಟವನ್ನೂ ಹಾರಿಸುತ್ತಾ ಸಾಗುವುದು ಚೈತ್ರ!
ಇಡೀ ಪ್ರಕೃತಿಯೇ ಚಿತ್ರವೋ, ಚಿತ್ರದೊಳಗೆ ಪ್ರಕೃತಿಯೋ ಎಂಬ ಭಾವಾನುಮಾನದ ಚೈತ್ರ ಕಣ್ಮುಂದೆ ತಂದರೆ ಅಚ್ಚರಿಯಿಲ್ಲ. ನಮ್ಮ ಈ ಬದುಕೇ ಸಂಕೇತಗಳ ಸಂತೆ; ಅದಕ್ಕೆ ಚೈತ್ರವೂ ಹೊರತಲ್ಲ. ನಿನ್ನೆಯ ಜಗಳ ಮರೆತು ಮತ್ತೆ ಬೆಳಗಾಗುತ್ತಲೇ ನಗ್ತಾ ಕೆಲಸಕ್ಕೆ ಹೋಗೋ ಗಂಡನಿಗೆ ಟಾಟಾ ಮಾಡೋ ಹೆಂಡತಿಯಂತೆ ಬಿದ್ದ ಎಲೆಗಳಿಗಾಗಿ ದುಃಖಿಸದೇ ಮತ್ತೆ ಚಿಗುರ ಮೈದುಂಬಿಕೊಂಡು ಭೂರಮೆಗೆ ಶರಣಾಗೋ ಪರಿಯಿದೆಯಲ್ಲಾ…. ವಾವ್ ಮಾನವ ಕಲಿಯಬೇಕಾದ್ದು ಇದನ್ನೆ!
ಮಾಮರವೆಲ್ಲೋ
ಕೋಗಿಲೆಯೆಲ್ಲೋ
ಏನೀ ಸ್ನೇಹ ಸಂಬಂಧ….
ಮೈ ತುಂಬಾ ಹರಳೆಣ್ಣೆ ಮೆತ್ತಿ ಸುದೀರ್ಘ ಮಾಘ ಮಜ್ಜನ ಮಾಡುತ್ತೇವಲ್ಲಾ, ನಂತರ ಹಳೆಯದನ್ನು ಸರಿಸಿ ಹೊಸದನ್ನ ಧರಿಸುತ್ತೇವಲ್ಲ ಹಾಗೆ ಈ ಚೈತ್ರ! ಹೊಸ ವರುಷ, ಹೊಸ ಚಿಗುರು, ಹೊಸ ಹಸಿರು, ಹೊಸ ಹೂವು, ಹೊಸ ಫಸಲು, ಹೊಸ ನೇಗಿಲು, ಹೊಸ ಉಳುಮೆ….ಗಳನ್ನೆಲ್ಲಾ ಚೈತ್ರ ತಂದಿರುವಾಗ, ತರುವಾಗ ಹಳೆಯ ಮನಸುಗಳೊಂದಿಗೆ, ಅವೇ ಮಾತುಗಳೊಂದಿಗೆ, ಅವೇ ಮುನಿಸುಗಳೊಂದಿಗೆ…ಮತ್ತೆ ಮತ್ತೆ ಹಳೆಯದರತ್ತ ಸಾಗುವುದೆಂದರೆ ಪ್ರಕೃತಿಗೆ ಧಿಕ್ಕರಿಸಿದಂತೆ! ಸಹಬಾಳ್ವೆಗೆ ಅಸಹನೆಯಂತೆ! ಗುರುವಾದ ಪರಿಸರಕ್ಕೆ ದ್ರೋಹವೆಸಗಿದಂತೆ!
ಹರಿವ ಹೊಳೆಗೆ ಹಾಡು ಕಲಿಸಿದ
ಗಿಡ ಈಗ ಒಂಟಿಯಲ್ಲ;
ಮೈ ತುಂಬಿದ ಚೈತ್ರದ ಚಿಗುರು
ಹೊಸ ಭಾವಗೀತೆಗೆ ಸಜ್ಜಾಗುತಿದೆಯಲ್ಲಾ!
ಯಾವ ಧರ್ಮದ ಅಡೆತಡೆಯು ಚೈತ್ರಕಿಲ್ಲ ಕಾಣುವ ಚಂದಿರ….ಯುಗಾದಿಗೂ, ರಂಝಾನ್ ಗೂ ಸಮ ಸಮ! ಹಿಗ್ಗಿನ ಸುಗ್ಗಿಯ ಹೊತ್ತು ತರುವ ಚೈತ್ರ ಸರ್ವರೆದೆಯ ಅಂಗಳಕೆ ಕನಸುಗಳ ಚಿತ್ತಾರ ತರುವುದು ಸುಳ್ಳಲ್ಲ! ಋತುಗಳು ಮಾನವನ ಹಿಡಿತದಲ್ಲಿಲ್ಲ,ಸೆಳೆತಕೂ ಸಿಗುವುದಲ್ಲ.ಬಂದ ಭಾಗ್ಯವ ಬಂದಂತೆ ಅನುಭವಿಸಿದ ಹಾಗೆ ಋತುಗಳ ಚಕ್ರವೂ ಅಂತೆಯೆ! ಹೊಸತನದ ಸಂಕೇತ,ನಾಳಿನ ಕನಸಿಗೆ ಹೆಗ್ಗುರುತು, ಹೊಸದನ್ನು ಸಾಧಿಸುವ ಮುಂಬೆಳಕಿನ ಲಾಂಛನ!
ಬರೆದ ಪದಗಳೆಲ್ಲಾ ನನ್ನೊಡಲ
ನೋವ ದನಿಯ ಹಾಡಾಗುವಂತಿದ್ದರೆ
ಅಗಲಿದ ಮರಿಯ ಹುಡುಕುವ ಕೋಗಿಲೆಯ
ಆರ್ತನಾದ ಕಾಗೆಯ ಅಂತರಾಳ ಹೊಕ್ಕಿದ್ದರೆ
ಹಸಿರು ಹುಟ್ಟಿದೆಡೆಯೆಲ್ಲಾ ಸುಮ್ಮನೆ
ಚೈತ್ರ ಗೆಜ್ಜೆ ಝಾಡಿಸಿ ನಡೆದು ಬರುತ್ತಿದ್ದರೆ……
———ಹೀಗೇ ಕನಸುಗಳ ಹೊತ್ತು, ಬದಲಾವಣೆಯ ಗಾಳಿ ಸೂಸಿ, ಮಾನವನ ಜಂಭಕ್ಕೊಂದು ಪೆಟ್ಟು ಕೊಟ್ಟು,ನಗುವುದನ್ನ ಸಕಲ ಜೀವರಾಶಿಗೂ ಕಲಿಸಿ ಬದುಕಿನ ಅರ್ಥವಂತಿಕೆಯ ಪಾಠ ಹೇಳಿಕೊಡುವ ಚೈತ್ರವೇ ನಿನಗೆ ನನ್ನ ನೂರು ಸಲಾಂ!
****
ಕೋಮಲ ಕಂಠದ
ನೆನಪು ತರಿಸಿತು.
ಚೆನ್ನಾಗಿದೆ ಸರ್.