ಪಂಚ್ ಕಜ್ಜಾಯ

ಹಲ್ಲು ಕೆಟ್ಟ ಕಥೆ!: ಗುರುಪ್ರಸಾದ್ ಕುರ್ತಕೋಟಿ

ಎಲ್ಲ ತೊಂದರೆಗಳು ಶುರುವಾಗುವುದು ರಾತ್ರಿನೇ! ಅಥವಾ ಹಾಗೆ ರಾತ್ರಿ ಶುರುವಾದ ತೊಂದರೆಗಳು ಮಾತ್ರ ನೆನಪಿನಲ್ಲಿ ಉಳಿಯುವುದಕ್ಕೆ ಹಾಗೆ ಅನ್ನಿಸುತ್ತದೆಯೋ? ಎಂದು ಪುಟ್ಯಾ ತಲೆಕೆರೆಯುತ್ತ ಯೋಚಿಸುತ್ತಿದ್ದ. ಅವನ ಮಕ್ಕಳ ಜ್ವರವೇ ಇರಲಿ, ತನ್ನ ಹೊಟ್ಟೆ ನೋವಿರಲಿ ಅಥವಾ ತಲೀನ ಇಲ್ಲ ನೋಡ್ ಲೇ ನಿನಗ ಅಂತ ಬೈಸಿಕೊಳ್ಳುವ ಅವನ ಹೆಂಡತಿ ಪಾರಿಯ ತಲೆ ನೋವಿರಲಿ… ಇವೆಲ್ಲ ಉದ್ಭವಿಸುವುದು ರಾತ್ರಿಯೇ. ಇನ್ನೇನು ಮಲಕೊಬೇಕು ಅನ್ನುತ್ತಿರುವಾಗಲೇ ಇಂಥದ್ದೇನೋ ಬಂದು ನಿದ್ದೆ ಕೆಡಿಸಿ ಕಂಗಾಲು ಮಾಡುತ್ತದೆ. 

ಇಂತಹದೇ ಒಂದು ಕರಾಳ ರಾತ್ರಿ ಇವನ ಹಲ್ಲು ವಿಚಿತ್ರ ರೀತಿಯಲ್ಲಿ ನೋಯತೊಡಗಿತು. ನೋವಿನಲ್ಲೂ ವಿವಿಧ ರೀತಿಗಳಿರುತ್ತವೆ. ಎಲ್ಲ ನೋವುಗಳೂ ಒಂದೇ ಬಗೆಯವಾಗಿದ್ದರೆ ಅವಕ್ಕೆ ಬೇರೆ ಬೇರೆ ಹೆಸರು ಯಾಕಿರುತ್ತಿತ್ತು? ತಲೆ ಶೂಲೆಯ ಅನುಭವ ಹೊಟ್ಟೆ ನೋವಿಗಿಂತ ಭಿನ್ನ. ಹೊಟ್ಟೆಯಲ್ಲೂ ಕೂಡ ಕರುಳು ಹಿಂಡಿದಂತಾದರೆ ಆಗುವ ನೋವಿಗಿಂತ ಕಿಬ್ಬೂಟ್ಟೆ ಕಚ್ಚಿದಂತಾದಾಗ ಆಗುವ ಸಡಗರವೇ ಬೇರೆ! ಕಣ್ಣು ಮತ್ತು ಕಾಲುಗಳು ನೋಯುವ ಪರಿಯೇ ಬೇರೆ. ಇವನಿಗೆ ಬಂದಿದ್ದ ನೋವು ಹಲ್ಲುಗಳಲ್ಲೇ ವಿಶಿಷ್ಟವಾದ ಬುದ್ಧಿ ಹಲ್ಲಿನಿಂದಾಗಿ. ಅದಕ್ಕ್ಯಾಕೆ ಬುದ್ಧಿ ಹಲ್ಲು ಅಂತಾರೋ ಬುದ್ಧಿವಂತರನ್ನೇ ಕೇಳಿ ತಿಳಿಯಬೇಕು. ಆದರೆ ಆ ನೋವಿಗೆ ಇವನ ಬುದ್ಧಿ ಭ್ರಮಣೆ ಆಗತೊಡಗಿತು. ಜೀವನದಲ್ಲಿ ಪ್ರಥಮ ಬಾರಿ ಹಲ್ಲು ನೋವು ಇಷ್ಟು ಜೋರಾಗಿ ಬಂದಿತ್ತು. ಹಲ್ಲು ನೋವನ್ನು ಹೆರಿಗೆ ನೋವಿಗೆ ಹೋಲಿಸುತ್ತಾರಂತೆ. ಅದು ನಿಜ ಅನ್ನಿಸಿತು ಅವನಿಗೆ. ಹೆರಿಗೆ ನೋವು ಖುದ್ದು ಅನುಭವಿಸಿದ್ದಿಲ್ಲವಾದರೂ, ಅನುಭವಿಸುವವರ ಗೋಳು ನೋಡಿದ್ದನಲ್ಲ! 

ಮೊದಲಾದರೆ ಎಲ್ಲ ನೋವುಗಳಿಗೂ ಒಂದೇ ವೈದ್ಯರ ಕಡೆಗೆ ಹೋಗಬಹುದಿತ್ತು. ಈಗ ಹಂಗಿಲ್ಲವಲ್ಲ! ಪ್ರತಿ  ನೋವುಗಳಿಗೂ ಅದರದೇ ಆದ ನಿಪುಣ ತಜ್ಞ ವೈದ್ಯರಿದ್ದಾರೆ. ಕಣ್ಣಿಗೆ, ಹೊಟ್ಟೆಗೆ, ಹಲ್ಲಿಗೆ, ತಲೆಗೊಬ್ಬೊಬ್ಬರು ವೈದ್ಯರು!  ಅದೇನೇ ಇದ್ದರೂ, ರಾತ್ರಿ ೧೨ ಗಂಟೆಗೆ ಈ ತರಹ ನೋವು ಬಂದರೆ ಏನು ಮಾಡೋದು? ದಂತ ವೈದ್ಯರುಗಳಾರೂ ಈ ಸರಿ ರಾತ್ರಿಯಲ್ಲಿ ಇರುವುದಿಲ್ಲ. ಇನ್ನು ಹೋದರೆ ಯಾವುದಾದರೂ ಆಸ್ಪತ್ರೆಗೆ ಹೋಗಬೇಕು, ಅದು ಇವನಿಗೆ ಇಷ್ಟವಿರಲಿಲ್ಲ. ಯಾಕೆಂದರೆ ಒಂದು ಸರ್ತಿ ಸರಿ ರಾತ್ರಿ ಆಸ್ಪತ್ರೆಯೊಂದಕ್ಕೆ ಹೋಗಿ ಅನುಭವಿಸಿದ್ದ. ಯಾವುದೊ ಒಂದು ಸಣ್ಣ ತೊಂದರೆ ಅಂತ ಹೋಗಿದ್ದವನನ್ನು, ಸಿಗಲಾರದೇ ಸಿಕ್ಕ ಪೇಶಂಟ್ ಅಂತ ಹೆಚ್ಚು ಕಡಿಮೆ ವಾರ್ಡ್ ನಲ್ಲಿ ಮಲಗಿಸಿಯೇ ಬಿಟ್ಟಿದ್ದರು! ಅವರಿಂದ ತಪ್ಪಿಸಿಕೊಂಡು ಬರುವುದೇ ದೊಡ್ಡ ಸಾಹಸವಾಗಿ ಹೋಗಿತ್ತು!

ಅದೇ ಕಾರಣಕ್ಕೆ ಈಗ ಬಂದಿದ್ದ ತನ್ನ ಹಲ್ಲು ನೋವಿಗೆ ರಾತ್ರಿ ಯಾವುದೇ ಆಸ್ಪತ್ರೆಗೆ ಹೋಗದೆ ಬೆಳಗಿನವರೆಗೂ ನೋವು ಸಹಿಸಿಕೊಂಡ, ಅದೂ ಹಲ್ಲು ಕಚ್ಚಿಯೇ! ಬೆಳಿಗ್ಗೆ ಹತ್ತಾಗುವದನ್ನೇ ಕಾಯುತ್ತಿದ್ದವನಂತೆ, ಹಲ್ಲನ್ನೂ ತಿಕ್ಕದೆ ಹತ್ತಿರದ “ನಸು ನಗು” ಅನ್ನುವ ಹೆಸರಿದ್ದ ಹಲ್ಲಿನ ಡಾಕ್ಟರ್ ಬಳಿ ಹೋದ. ಹಲ್ಲು ನೋವಿದ್ದವರು ನಸು ನಗಲು ಹೇಗೆ ಸಾಧ್ಯ ಅಂತ ಯೋಚಿಸುತ್ತಲೇ ಒಳಗೆ ಹೋದರೆ, ಯಾರೂ ಇದ್ದ ಲಕ್ಷಣ ತೋರಲಿಲ್ಲ. ಇನ್ನೂ ಒಳಗಿನ ರೂಮಿಗೆ ಧೈರ್ಯದಿಂದ ನುಗ್ಗಿದಾಗ ಡಾಕ್ಟರು ಟೇಬಲ್ ಮೇಲೆ ತಲೆಯಿಟ್ಟು ಮಲಗಿದ್ದರು, ನೊಣ ಹೊಡೆದು ಸುಸ್ತಾಗಿದ್ದರೇನೋ! ಇವನು ಅವರ ನಿದ್ರಾ ಭಂಗ ಮಾಡಿದ ಪರಿಣಾಮ ಅನಿವಾರ್ಯವಾಗಿ ಎದ್ದು ಕೂತರು. ಇವನ ಕಂಡ ಅವರ ಮುಖದಲ್ಲಿ ಮಾತ್ರ ನಸು ನಗು ಇತ್ತು! ತಾನೇ ಪ್ರಥಮ ಬೋಣಿ ಎಂದು ಇವನಿಗೆ ಖಚಿತವಾಯ್ತು. ಅಷ್ಟರಲ್ಲೇ ಎಲ್ಲಿದ್ದಳೋ, ಶ್ವೇತ ವಸ್ತ್ರಧಾರಿ ಯುವತಿ ಪ್ರತ್ಯಕ್ಷಳಾದಳು. ಅವಳು ಡಾಕ್ಟರಿಗೆ ಸಹಾಯಕಿ ಇರಬಹುದು ಅಂತ ಇವನು ಅಂದಾಜಿಸಿದ. ಅವಳನ್ನು ನೋಡಿ ನೋವು ಸ್ವಲ್ಪ ಮಟ್ಟಿಗೆ ಕಡಿಮೆಯಾಯಿತಾದರೂ, ಅದನ್ನು ತೋರಗೊಡದೆ ತುಂಬಾ ನೋವಾದವನಂತೆ ಮುಖ ಮಾಡಿದ್ದ. ಅವರಿಬ್ಬರೂ ತಮ್ಮ ನಡುವೆ ತೆಲುಗಿನಲ್ಲೇ ಮಾತಾಡುತ್ತಿದ್ದರು, ಆದರೆ ಇವನ ಜೊತೆ ಕನ್ನಡ ಮಾತಾಡಿದರು. ತೆಲುಗು ಭಾಷಿಕರಾಗಿ ಕನ್ನಡ ಕಲಿತಿದ್ದಕ್ಕೆ ಅವರಿಗೆ ಅಭಿನಂದಿಸಿದ. ಆದರೆ ಅವರಿಬ್ಬರೂ ತಮ್ಮಲ್ಲಿಯೇ ಒಬ್ಬರನ್ನೊಬ್ಬರು ನೋಡಿ ನಸು ನಕ್ಕು, ತಾವೂ ಕನ್ನಡದವರೇ ಎಂದೂ, ತೆಲುಗು ಸಿನಿಮಾ ನೋಡಿ ನೋಡಿ ತೆಲುಗು ಕಲಿತಿದ್ದೆವೆಂದೂ ಹೆಮ್ಮೆಯಿಂದ ಹೇಳಿದ್ದು ಕೇಳಿ ಇಂತಹ ಅದ್ಭುತ ಕಾಣುವುದು ಕನ್ನಡನಾಡಿನಲ್ಲಿ ಮಾತ್ರ ಸಾಧ್ಯವೆಂದು ಮನಗಂಡು ಬಾಯಿ ಮುಚ್ಚಿಕೊಂಡ! 
 
ಸಲೂನಿನಲ್ಲಿದ್ದುದಕ್ಕಿಂತ ಆರಾಮದಾಯಕವಾದ ಆಸನದಲ್ಲಿ ಅವನನ್ನು ಕುಳ್ಳಿರಿಸಿದಳು ಅಥವಾ ಮಲಗಿಸಿದಳು ಆ ಸಹಾಯಕಿ. ಡಾಕ್ಟರು ಆ ಅಂತ ಬಾಯಿ ತೆಗೆ ಅಂತ ಹೇಳುತ್ತಲೇ ತಾವೇ ದೊಡ್ಡದಾಗಿ ಆಕಳಿಸಿದರು. ಮೇಲೊಂದು ದೊಡ್ಡ ಟಾರ್ಚ್ ಲೈಟ್ ಬಿಟ್ಟು ಇವನ ಬಾಯನ್ನು ತೆರೆದ ಬಾವಿಯೋ ಎಂಬಂತೆ ಕೂಲಂಕುಶವಾಗಿ ನೋಡತೊಡಗಿದರು. ಒಂದು ಲೋಹದ ಕಡ್ಡಿ ತೆಗೆದುಕೊಂಡು ಅಲ್ಲಿ ಇಲ್ಲಿ ಚುಚ್ಚಿ, ಕಟ ಕಟ ಕುಟ್ಟಿ ಇವನು ಆ ಅಂತ ಕೂಗಿದಾಗಲೇ ನಿಟ್ಟುಸಿರು ಬಿಟ್ಟರು. ಸಮಸ್ಯೆ ಎಲ್ಲಿದೆ ಅಂತ ಅವರಿಗೆ ಗೊತ್ತಾಗಿತ್ತು. ಆದರೆ ಅದರ ಆಳ ತಿಳಿಯಬೇಕಲ್ಲ? ಅದಕ್ಕೆ ಅಂತ ಹಲ್ಲಿನ ನಡುವೆ ಒಂದು ಫಿಲ್ಮ್ ತರಹದ ಹಾಳೆಯನ್ನು ಕಚ್ಚಿ ಹಿಡಿಯಲು ಹೇಳಿ ಹಲ್ಲಿನ selfie ತೆಗೆದರು.              

ನಿಮ್ಮ wisdom tooth ಹಾಳಾಗಿದೆ ಅದನ್ನು ಕಿತ್ತಲೇಬೇಕು. ಅದರ ಪಕ್ಕದ ಹಲ್ಲೂ ಸ್ವಲ್ಪ ಮಟ್ಟಿಗೆ ಹುಳುಕಾಗಿದೆ, ಅದಕ್ಕೆ ರೂಟ್ ಕ್ಯಾನಲ್ ಮಾಡಬೇಕು ಅಂತ ತಮ್ಮ ತೀರ್ಪು ನೀಡಿದರು. ಹಲ್ಲು ಕಿತ್ತದೆ ಬೇರೆ ಉಪಾಯವಿಲ್ಲ ಎಂದಾದಾಗ ಆಯ್ತು ಯಾವಾಗ ಕಿತ್ತುವಿರಿ ಅಂತ ಕೇಳಿದನವನು.

ನಿಮ್ಮ ಬುದ್ಧಿ ಹಲ್ಲಿನ ಬೇರು ಸ್ವಲ್ಪ ಸೋಟ್ಟಗಿದೆ ಅಂತ ದಿಟ್ಟ ಮುಖದೊಂದಿಗೆ ಡಾಕ್ಟರು ಹೇಳಿದರು. ಅವನಿಗೆ ಪಾರಿ, ನಿಮ್ಮದು ವಕ್ರಬುದ್ಧಿ ಅಂತ ಯಾವಾಗಲೂ ಹೇಳುತ್ತಿದ್ದುದು ನೆನಪಾಗಿ, ಇವರು ಎಕ್ಸ್-ರೇ ನೋಡಿ ಹೇಳಿದ್ದನ್ನು ತನ್ನ ಹೆಂಡತಿ ಹಾಗೆ ಗುರುತಿಸಿದಳಲ್ಲ ಅಂತ ಅವಳ ಅಂತರ್ ದೃಷ್ಟಿಯ ಬಗ್ಗೆ ಹೆಮ್ಮೆಯಾಯ್ತು! ಅವರು ಮುಂದುವರಿಸಿ…. ಅದಕ್ಕೆ ಅಂತ ಇನ್ನೊಬ್ಬ ವಿಶೇಷ ತಜ್ಞರು ಇದ್ದಾರೆ, ಅವರೇ ಬಂದು ಅದನ್ನು ಕಿತ್ತುತ್ತಾರೆ. ನೋವು ಕಡಿಮೆಯಾದ ಮೇಲೆ ಬನ್ನಿ… ಎಂದರು. ಅದಕ್ಕೆ ಅಂತ ಕೆಲವು ಔಷಧೋಪಚಾರ ಹೇಳಿದರು. ಪುಟ್ಯಾನಿಗೆ ಸಿಕ್ಕಾಪಟ್ಟೆ ಆಶ್ಚರ್ಯವಾಯ್ತು. ಹಲ್ಲಿಗೆ ಅಂತಲೇ ಇರುವ ತಜ್ಞರು ಅಂತ ಇವರ ಬಳಿ ಬಂದರೆ, ಒಂದೊಂದು ಹಲ್ಲಿಗೆ ಒಬ್ಬೊಬ್ಬ ವಿಶೇಷಜ್ಞ ಇರುವರೇ ಅಂತ ಅವನು ಹಲ್ಲಿನ ಮೇಲೆ ಬೆರಳಿಟ್ಟುಕೊಂಡ!  

ಅಂತೂ ಇವನ ಬುದ್ಧಿ ಹಲ್ಲು ಕಿತ್ತಿಸುವ ದಿನ ಬಂತು. ಅವನಿಗೊಂದು ಅರವಳಿಕೆಯ ಚುಚ್ಚುಮದ್ದು ಕೊಟ್ಟು ತುಟಿಯನ್ನು ದಪ್ಪ ಮಾಡಿದರು. ಅರ್ಧ ಗಂಟೆ ಕಸರತ್ತು ಮಾಡಿ, ಆ ಹಲ್ಲನ್ನು ಕಿತ್ತು, ನೋಡಿ ಇಷ್ಟೇ ನಿಮ್ಮ ಬುದ್ಧಿ ಅನ್ನುವಂತೆ ಆ ಹಲ್ಲನ್ನು ಅವನ ಕೈಗೆ ಕೊಟ್ಟರು! ಇವನಿಗೆ ಇದ್ದ ಅಲ್ಪ ಬುದ್ಧಿಯನ್ನೇ ಕಳೆದುಕೊಂಡಷ್ಟು ದುಃಖವಾಯ್ತು. ಆ ದುಃಖ ತೋರ್ಪಡಿಸಲು ಅವನಿಗೆ ಮಾತೆ ಹೊರಡಲಿಲ್ಲ. ಯಾಕೆಂದರೆ ಒಳಗೆಲ್ಲ ಕೆತ್ತಿ, ಹೊಲಿಗೆ ಹಾಕಿದ್ದರಲ್ಲ. ಅದೂ ಅಲ್ಲದೆ ಅರವಳಿಕೆಯಿಂದಾಗಿ ನಾಲಿಗೆಯೂ ದಪ್ಪಗಾಗಿ ಹೊರಳಾಡದೆ ಬಿದ್ದುಕೊಂಡಿತ್ತು. ಅಥವಾ ಅದು ಹೊರಳಾಡುತ್ತಿರುವುದು ಕೂಡ ಇವನಿಗೆ ಗೊತ್ತಾಗದಾಗಿತ್ತು! 

ಸ್ವಲ್ಪ ದಿನಗಳ ಬಳಿಕ, ಗಾಯವೆಲ್ಲ ಮಾಯ್ದು ಇನ್ನೊಂದು ಹಲ್ಲಿನ ರೂಟ್ ಕ್ಯಾನಲ್ ಮಾಡಿಸಲು ಮತ್ತೆ ನಸುನಗುತ್ತ ಹೋದ. ಆ ಇನ್ನೊಂದು ಹಲ್ಲಿಗೊಂದು ರಂದ್ರ ಕೊರೆದು ಅದನ್ನು ಕತ್ತರಿಸಿದರು. ಮೇಲೊಂದು ಕ್ಯಾಪ್ ಹಾಕಬೇಕೆಂದೂ, ಮೂರು ನಮೂನೆಯ ಕ್ಯಾಪ್ ಇರುವುದೆಂದೂ ಡಾಕ್ಟರು ಹೇಳಿದರು. ಅದರಲ್ಲೇ ಬಂಗಾರದ ಹಲ್ಲಿನ ಕ್ಯಾಪು ಇತ್ತು. ಹೇಗಾದರೂ ಕ್ಯಾಪ್ ಹಾಕಿಸಿಕೊಳ್ಳುತ್ತಿದ್ದನಾದ್ದರಿಂದ ಬಂಗಾರದ ಕ್ಯಾಪೇ ಇರಲಿ ಅಂತ ಹೊಳೆಯುವ ಕ್ಯಾಪನ್ನೇ ಹಾಕಿಸಿಕೊಂಡ. ಅದಕ್ಕೆ ಐವತ್ತು ಸಾವಿರ ತೆರಬೇಕಾಯ್ತು. ಎಷ್ಟೆಂದರೂ ಬಂಗಾರದ್ದಲ್ಲವೇ? ಅದಕ್ಕೆ ಐದು ವರ್ಷದ ಗ್ಯಾರಂಟಿ ಬೇರೆ ಇತ್ತು.       

ಇನ್ನೂ ಕೆಲವು ದಿನಗಳು ಕಳೆಯಲಾಗಿ, ಒಂದು ದಿನ ಪಾರಿ ಮಾಡಿದ್ದ ಅನ್ನ ಹುಳಿಯನ್ನು ಸವಿಯುತ್ತಿದ್ದ. ಬಾಯಿಯಲ್ಲಿ ಕಟ ಕಟ ಶಬ್ಧವಾಗಿ ಇಷ್ಟೊಂದು ದೊಡ್ಡ ಕಲ್ಲನ್ನು ಅಕ್ಕಿಯಲ್ಲಿ ಕಲಬೆರಕೆ ಮಾಡಿದ್ದಾರೆಯೇ ಎಂದು ಭಾವಿಸಿ ಪುಟ್ಯಾ ತನ್ನ ಬಾಯೊಳಗೆ ಕೈ ಹಾಕಿ ತೆಗೆದರೆ, ಅದು ಕಲ್ಲಾಗಿರದೆ ಹಲ್ಲುದಿರಿಸಿ ಹಾಕಿಸಿದ್ದ ಬಂಗಾರದ ಹಲ್ಲಾಗಿತ್ತು! ಡಾಕ್ಟರು ಅಂಟು ಹಚ್ಚಿ ಜೋಡಿಸಿದ್ದ ಅದು ಉದುರಿತ್ತು. ಬಹುಶಃ ಆ ಅಂಟಿನಲ್ಲೂ ಕಲಬೆರಕೆಯಾಗಿ ಅದು ತನ್ನ ಮೂಲ ಅಂಟಿಸುವ ಗುಣವನ್ನೇ ಕಳೆದುಕೊಂಡಿತ್ತೇನೋ! ಹೀಗಾಯಿತು ಅಂತ ತಲೆಗೆ ಕೈ ಹಚ್ಚಿ ಕೂತರಾದೀತೆ? ಇನ್ನು ಡಾಕ್ಟರ್ ಬಳಿ ಹೋದರೆ ಹಲ್ಲಿನ ಜೊತೆಗೆ ಮತ್ತೊಂದಿಷ್ಟು ಸಾವಿರಗಳೂ ಉದುರುವುದು ಖಚಿತ ಅನಿಸಿದ್ದರಿಂದ, ಅದಕ್ಕೆ ಮನೆ ಮದ್ದನ್ನು ಉಪಯೋಗಿಸಿದ. ಮಗಳ ಡಬ್ಬಿಯಲ್ಲಿದ್ದ ಫೆವಿಕ್ವಿಕ್ ಹಾಕಿ ಜೋಡಿಸಿಕೊಂಡ. ಅದು ಮತ್ತೆ ಅಂಟಿಕೊಂಡಿತು. ಕೆಲವು ದಿನಗಳಲ್ಲಿ ಮತ್ತೆ ಉದುರಿತು. ಹೀಗೆ ಇದು ಕೆಲವು ಸಲ ಪುನರಾವರ್ತನೆಯಾಗಿ, ಕೊನೆಗೂ ಬೇಸತ್ತು ಅದನ್ನು ತೆಗೆದು ಪಕ್ಕಕ್ಕಿಟ್ಟ. ಬಂಗಾರದ ಹಲ್ಲನ್ನು ಹಾಗೆಲ್ಲ ಮನೆಲಿಟ್ಟುಕೊಳ್ಳಲಾದೀತೇ? ಬಂಗಾರದ ಬೆಲೆ ಜಾಸ್ತಿಯಾದಂತೆ ಆ ಹಲ್ಲಿನ ಬೆಲೆಯೂ ಈಗ ಏರತೊಡಗಿತ್ತು. ಈಗ ಸಧ್ಯಕ್ಕೆ ಅವನ ಉದುರಿದ ಬಂಗಾರದ ಹಲ್ಲಿನ ಕ್ಯಾಪು ಅವನ ಹೆಂಡತಿಯ ಒಡವೆಗಳ ಜೊತೆಗೆ ಲಾಕರ್ ನಲ್ಲಿ ಭದ್ರವಾಗಿ ಕೂತಿದೆ. ಅವನ ಅಳಿದುಳಿದ ಹಲ್ಲುಗಳೂ ಕೆಟ್ಟರೆ ಅವುಗಳಿಗೆಲ್ಲ ಬಂಗಾರದ ಕ್ಯಾಪು ಮಾಡಿಸಿ ಲಾಕರ್ ನಲ್ಲಿಡಬಹುದು ಎಂಬ ಅಂದಾಜು ಪಾರಿಯದು. ಮಗಳ ಮದುವೆಯ ಹೊತ್ತಿಗೆ ಇವನ ಆ ಹಲ್ಲುಗಳನ್ನೆಲ್ಲ ಕರಗಿಸಿ ಒಡವೆ ಮಾಡಿಸಬಹುದು ಎಂಬ ದೂರದೃಷ್ಟಿ ಅವಳದು!  


 

ಕನ್ನಡದ ಬರಹಗಳನ್ನು ಹಂಚಿ ಹರಡಿ

24 thoughts on “ಹಲ್ಲು ಕೆಟ್ಟ ಕಥೆ!: ಗುರುಪ್ರಸಾದ್ ಕುರ್ತಕೋಟಿ

  1. ಕನ್ನಡದಲ್ಲಿ ಹಾಸ್ಯ ಲೇಖನಗಳ ಸರಣಿ ಇನ್ನೂ ನಿಂತುಹೋಗಿಲ್ಲ ಎಂದು ನಿರೂಪಿಸಿದ್ದೀರಿ. ಎಂ.ಎಸ್. ನರಸಿಂಹಮೂರ್ತಿ, ಎಂ.ಪಿ. ಮನೋಹರಚಂದ್ರನ್, ಅನಂತ ಕಲ್ಲೋಳರು ನೆನಪಿಗೆ ಬರುವಂತೆ ಮಾಡಿದಿರಿ. ನಿಜವಾದ ಪಂಚ್ ನ್ನು ಕೊನೆಗಿಟ್ಟು ಲೇಖನದ ಸ್ವಾರಸ್ಯವನ್ನು ಕಾಪಿಟ್ಟುಕೊಂಡಿದ್ದೀರಿ. ತುಂಬ ಸಂತೋಷವೆನಿಸಿತು. ಶುಭವಾಗಲಿ.

  2. ಪುಟ್ಯಾನ ಹಲ್ಲು ಕೆಟ್ಟ ಕತೆ ಚೆನ್ನಾಗಿದೆ ಗುರು………..

  3. ಛೊಲೊ ಅನಸ್ತು! 
    ಈನ್ನು ನಗಿಸಬೊಹುದಿತ್ತು ಅನಸ್ತು…. 
    ನಿಮ್ಮ JCB ದಾರವಹಿಯನ್ನು ಮುಂದವರಸ್ರಿ…

  4. ಹಾ ಹಾ !! ನನ್ನ ಬಾಯಲ್ಲು ಕೆಟ್ಟ ಹಲ್ಲುಗಳೇ, ಆದರೆ ಗಾಡ್ರೇಜ್ ನಲ್ಲಿ ಇಡುವಂತದ್ದಲ್ಲ ….!!

  5. ಹಲ್ಲಿನ ನಿಮ್ಮ ಪ್ರಭಂಧ ಓದುತ್ತಾ ನನ್ನ ಹಳೇ WISDOM ಹಲ್ಲಿನ ನೆನಪಿಗೆ ಬಂತು . WISDOM ಇಲ್ಲದ ಸಂಧರ್ಭದಲ್ಲಿ ನಿಮ್ಮಬಲ ದವಡೆಯ  WISDOM ಹಲ್ಲಿಗೆ ಹುಳಕ ಆಗಿದೆ ಎಂದು ವೈದ್ಯರು ಎಂದರು .ಅದೇ ನನಗೆ ವರದಾಯಕ ವಾಗಿ ,ಸಮಾಧಾನವಾಯಿತು . ಹುಳಕದಿದಲೇ ಮಾಯವಾದ ನನ್ನWISDOM ಹಲ್ಲು,WISDOM ಉಳಿಸದೇ  ನನಗೇ ನೋವು ಕೊಡದೇ ನಿರ್ಗಮಿಸಿತು . WISDOME ಇಲ್ಲದ ನನ್ನ ಮೇಲೆ ಕೃಪೆ ತೋರಿದೆ . ಈಗ ಹುಡುಕಿದರೂ ಆ ಬಲ ದವಡೆಯ  WISDOM ಹಲ್ಲು ಇಲ್ಲ ,ಬಲ-ಪಂಥೀಯ  WISDOM ಇಲ್ಲಾ . ಎಲ್ಲಾ ನಿಮ್ಮೆಲ್ಲರ ಎಡ-ಪಂಥೀಯWIS DOME . ನಿಮ್ಮ ಲೇಖನ ಚೆನ್ನಾಗಿ ಮೂಡಿಬಂದಿದೆ . 

  6. ಇತ್ತೀಚೆಗೆ ಹಾಸ್ಯ ಕಥೆಗಳು ಬರೆಯುವವರು ಕಮ್ಮಿಯಾಗ್ತಿದಾರೆ….ಹಲ್ಲು ಕಟ್ಟಿಸಿಕೊಳ್ಳುವ ಬಗ್ಗೆ ಗುರು ಪ್ರಸಾದ್ ಕುರ್ತಕೋಟಿಯವರು ಕಥೆ ತುಂಬಾ ಚೆನ್ನಾಗಿದೆ….ತಪ್ಪದೆ ಓದಿ

    1. ಪ್ರಿಯ ನರೇಂದ್ರ, ಹೌದು ನೀವು ಹೇಳಿದ್ದು ಸರಿ. ಆದರೆ ತಮ್ಮಂತಹ ಪ್ರೋತ್ಸಾಹಿಗಳು ಇರುವಾಗ ಹಾಸ್ಯ ಬರಹಗಾರರ ಸಂಖ್ಯೆ ಹೆಚ್ಚುವುದರಲ್ಲಿ ಸಂಶಯವೇ ಇಲ್ಲ! ನಿಮ್ಮ ಅನಿಸಿಕೆ ನೋಡಿ ಖುಷಿ ಆಯ್ತು 🙂

Leave a Reply

Your email address will not be published. Required fields are marked *