ಹರಟೆ ಕಟ್ಟೆಯ ಪದ್ಮಜಾ: ನಾಗರತ್ನಾ ಗೋವಿಂದನ್ನವರ


ಸುಮಾ : ಏನ್ರಿ ಆಶಾ ಇಷ್ಟೊತ್ತಾಯಿತು ಇನ್ನು ಪದ್ಮಜಾರ ಸುದ್ದಿನೇ ಇಲ್ಲಾ.  
ಆಶಾ : ಹೌದು ಯಾಕೊ ಏನೋ ಇಷ್ಟೊತ್ತಾಯಿತು ಇನ್ನು ಬಂದಿಲ್ಲ ಅವರಿಲ್ಲ ಅಂದ್ರ ನಮ್ಮ ಹರಟೆ ಕಟ್ಟೆಗೆ ಕಳಾನ ಇರುದುಲ್ಲ ನೋಡ್ರಿ.
ಸುಮಾ : ನೀವು ಹೇಳುವುದು ಖರೇ ಅದ ಏನರ ಹೊಸ ಸುದ್ದಿ ಚರ್ಚಾ ಮಾಡಾಕ ಸಿಗ್ತದ ಅಂದ್ರ ಅದು ಅವರಿಂದಾನ ಸಿಗೋದು ಅದಕ ಮತ್ತ ನಾವೆಲ್ಲ ಅವರನ್ನ ಹರಟೆ ಕಟ್ಟೆ ಪದ್ಮಜಾ ಅಂತ ಕರೆಯುದು…. ಹಾ ಹಾ ಹಾ!  ಅಲ್ಲಿ ನೋಡರಿ ಪದ್ಮಜಾ ಬಂದೇ ಬಿಟ್ಟರು.
ಆಶಾ : ನೆನೆದವರ ಮನದಾಗ ಅಂತ ನಿಮ್ಮನ ನೆನಸ್ಕೊತಾ ಇದ್ವಿ ನೀವು ಬಂದರಿ ನೀಮಗ ನೂರು ವರುಷ ಆಯಸ್ಸು…
ಪದ್ಮಜಾ : ಅಯ್ಯೋ ಬೇಡಾಪ್ಪ ನಂಗ ಅಷ್ಟೊಂದು ವಯಸ್ಸಾಗುತನಕಾ ಬದುಕುವುದು. ನಕ್ಕೊತ     ನಕ್ಕೊತಾ ನಲವತ್ತ ವರುಷ ಬದುಕಿದರ ಸಾಕ ಇರುತನಕ ಯಾರಿಗು ತೊಂದರೆ ಆಗಲ್ದಂಗ ಚೆಂದಂಗ ಇದ್ದು ನಿದ್ದೆ ಮಾಡುವಾಗನ ಯಾವ ತೊಂದರೆ ಇಲ್ಲದ ಶಿವನ ಪಾದ ಸೇರಿದರ ಸಾಕಪ್ಪ
ಸುಮಾ : ಪದ್ಮಜಾ ನೀವು ಹೇಳುದು ಖರೇನ ಅದ ಈಗೀನ ಕಾಲಕ್ಕ ಎಲ್ಲಾ ಹೈಬ್ರೀಡ ಆಹಾರ, ಕಲಬೆರಕೆ ಪದಾರ್ಥ ಮತ್ತು ಅದೆಂತದೊ ಫಾಸ್ಟ್ ಪುಡ್ ಅಂತ ಬಣ್ಣಾ ಹಾಕಿ ಅಗ್ದಿ ಚೆಂದ ಕಾಣಿಸುವಂಗ ಮಾಡಿರ್‍ತಾರ ಅದು ನಮ್ಮ ಆರೋಗ್ಯಕ್ಕ ಚಲೊ ಅಲ್ಲಾ ಅಂತ ಗೊತ್ತಿದ್ದರೂ ನಾಲಿಗೆ ರುಚಿಗೆ ಎಲ್ಲಾ ತಿನ್ನತೀವಿ ಇಂತಾದ್ರಾಗ ನೂರು ವರುಷ ಬದುಕಾಕ ಹೆಂಗ ಸಾಧ್ಯ ಅಯಿತಿ. 
ಆಶಾ : ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ ಅಂತ ಗಾದೆ ಮಾತ ಅಯಿತಿ ಅದರ ಮರ್ಮ ಅರ್ಥ ಮಾಡಕೊಂಡರ ಇರುವಷ್ಟ ದಿನ ಗಟ್ಟಿಮುಟ್ಟಾಗಿ ಇರತೀವಿ. 
ಪದ್ಮಜಾ : ಅಂದಂಗ ನಿನ್ನೆ ನಾನು ಮಾರ್ಕೆಟಿಗೆ ಹೋಗಕ ಸಿಟಿಬಸ್ ಗೆ ಕಾಯಾಕತ್ತಿದ್ದೆ ಅಲ್ಲಿ ಒಂದು ತಮಾಷೆ ನಡಿತು. 
ಆಶಾ : ಏನು ನಡೀತು ಹೆಳ್ರೆಲ್ಲಾ ನಾವು ಕೇಳತೀವಿ. 

ಪದ್ಮಜಾ : ನನ್ನ ಪಕ್ಕದ್ಮನೆ ಹುಡುಗಿ ಶಾಲು (ಶಾಲಿನಿ) ಬಸ್ ಗೆ ಕಾಯಾಕತ್ತಿದ್ದಳು ನಾನು ಅವಳನ್ನ ಮಾತಾಡಿಸಿದೆ. ಏ ಶಾಲು ಏನಿವತ್ತ ಸೀರೆ ಉಟ್ಕೊಂಡ ಸಿಂಗಾರ ಮಾಡಕೊಂಡ ಬಹಳ ಚೆಂದ ಆಗಿ ಎಲ್ಲಿಗೆ ಹೊರಟಿದಿ ಅಂದೆ. ಅದಕ ಶಾಲು ಆಂಟಿ ನಮ್ಮ ಕಾಲೇಜಿನಲ್ಲಿ ಲೇಡಿಸ್ ಡೇ ಅಂತ ಸಿಲೆಬ್ರೇಟ್ ಮಾಡ್ತಾರೆ ಅದಕ್ಕೆ ಇವತ್ತು ಎಲ್ಲಾರಗೂ ಸೀರೆನೆ ಉಟಕೊಂಡು ಬರಬೇಕು ಅಂತ ಆರ್ಡರ ಮಾಡ್ಯಾರ. ಓ ಹೌದನ ಬಹಳ ಚಲೊ ಆಯಿತು ಬಿಡು ನೀವು ಕಾಲೇಜ ಹುಡುಗ್ಯಾರು ಬರೀ ಜಿನ್ಸ್ ಬಟ್ಟೆ ತೊಟಗೊಂಡ ಹೊಗ್ತಿರ್‍ತಿರಿ ವರುಷದಾಗ ಒಂದು ದಿನಾರ ಈ ರೀತಿ ಸೀರೆ ಉಟಗೊಂಡರ ಚೆಂದ ಇರತದ. ನೀನು ಸೀರೆ ಉಟಗೊಂಡರ ಬಹಳ ಚಂದ ಕಾಣಿಸ್ತಿದೆ ಅಂದಾಗ ಥ್ಯಾಂಕು ಆಂಟಿ ಅಂದಳು. ಹಿಂಗ ಇಬ್ಬರು ಮಾತಾಡಕೊಂತ ಇದ್ದಾಗ ನಮ್ಮ ಸಮೀಪ ಒಂದು ಹುಡುಗಿ ಬಂದು ಆಂಟಿ ಹೊಸ ಬಸಸ್ಟಾಂಡ್ಗೆ ಹೋಗುವ ಬಸ್ ಹೋಯಿತಾ ಇದ ಸಮಯಕ್ಕ ಇತ್ತದು ಅಂತ ಶಾಲುಗೆ ಕೇಳಿದಳು. ಇದಕ್ಕ ಇದ್ದಕಿದ್ದಂಗ ಸಿಟ್ಟಿಗೆದ್ದ ಶಾಲು ಆ ಹುಡುಗಿಗೆ ಏನ ನಾನು ನಿನ್ನ ಕಣ್ಣಿಗೆ ಆಂಟಿ ತರಹ ಕಾಣ್ತಿನೇನ ನಾನು ನಿನ್ನಂಗ ಒಬ್ಬ ಕಾಲೇಜ ಹುಡುಗಿ ಅದೇನಿ ಗೊತ್ತಾಯಿತ್ತನ ಅಂದಾಗ ಆ ಹುಡುಗಿ ಒ ಸಾರಿ ರಿ ಗೊತ್ತಾಗಲಿಲ್ಲ ಅಂತ ಬೇರೆ ಕಡೆ ಹೋಗಿ ನಿಂತಳು. ಶಾಲು ನೋಡಕ ಸ್ವಲ್ಪ ದಪ್ಪ ಇದ್ದಳು ವಯಸ್ಸಿಗೆ ಮೀರಿದ ದೈಹಿಕ ಬೆಳವಣಿಗೆ ಇತ್ತು ಆಕಿಗೆ ಅಂತದ್ರಾಗ ಸೀರೆ ಉಟಗೊಂಡರಂತು ದೊಡ್ಡಕಿಗತೆನ ಕಾಣಿಸ್ತಿದ್ಲು ಪಾಪಾ ಆ ಹುಡುಗಿಗೆ ಏನೊ ಗೊಂದಲ ಆಗಿರಬೇಕ ಬಾಯಿತಪ್ಪಿ ಶಾಲುಗೆ ಆಂಟಿ ಅಂದುಬಿಟ್ಟಾಳ. ಆಗ ನನಗ ನಗು ತಡಕೊಳ್ಳೊಕೆ ಆಗಲಿಲ್ಲಾ ಜೋರಾಗಿ ನಗಾಕ ಶುರು ಮಾಡಿದೆ ನಾನು ನಗ್ತಾ ಇರುದು ನೋಡಿ ಶಾಲುಗೆ ಸಿಟ್ಟು ಬಂತು ಅಂತ ಅನಿಸಾಕತ್ತಿತು. ಯಾಕ ಆಂಟಿ ನಗ್ತಾ ಇದ್ದೀರಾ ಅವಳ ನನಗ ಆಂಟಿ ಅಂದಿದ್ದು ನಿಮಗ ಬಹಳ ಖುಷಿಯಾಯಿತಾ?  ಇಲ್ಲಾ ಶಾಲು ಎಲ್ಲಾರಿಗೂ ನೀನು ಆಂಟಿ ಅಂತ ಕರಿತಿದ್ಯಲ್ಲಾ ಇವಾಗ ಆಂಟಿ ಅನಿಸಿಕೊಳ್ಳುವ ಪಾಳಿ ನಿನಗೂ ಬಂದಬಿಡ್ತು ನೋಡು ಅದಕ ನಗು ಬಂತು. ನಾನು ಎಲ್ಲಾರಿಗೂ ಯಾಕ ಆಂಟಿ ಅಂತ ಕರೀಲಿ ಮದುವೆಯಾಗಿರುವ ಹೆಣ್ಣುಮಕ್ಕಳಿಗೆ ಮಾತ್ರ ಹಂಗ ಕರೀತಿನಿ. ಮದುವೆ ಅದವರು ನಿನಗಿಂತ ಚಿಕ್ಕವರಿದ್ರು ಆಂಟಿ ಅಂತ ಕರದ್ರ ಅವರಿಗೆ ಹೆಂಗ ಅನಿಸಬ್ಯಾಡ. ಸೀರೆ ಉಟ್ಟವರನ್ನೆಲ್ಲಾ ಆಂಟಿ ಅಂತಾನ ಕರಿತೀರಿ ನೀವು ಕಾಲೇಜ ಹುಡುಗಿರೆಲ್ಲಾ ಅದಕ ನಿನಗೂ ಒಬ್ಬ ಹುಡುಗಿಯಿಂದ ಆಂಟಿ ಅನಿಸಿಕೊಳ್ಳುವ ಪಾಳಿ ಬಂತು. ಈಗ ನಿನ್ನ ಪ್ರಕಾರನ ಹೋಗುಣಂತ ಮದುವೆ ಅಗಿ ಒಂದು ಮಗು ಇದ್ದರು ಸಾಕ ಆಕಿಗೆ ನೀವು ಆಂಟಿ ಅಂತೀರಿ. ಆಕಿ ನಿಮ್ಮಷ್ಟು ಓದಾಕಗದೆ ಬೇಗ ಮದುವೆ ಮಾಡಕೊಂಡ ನಿಮ್ಮ ವಯಸ್ಸನ್ಯಾಗ ಅಂದ್ರ ಒಂದು ಇಲ್ಲಾ ಎರಡು ಮಕ್ಕಳ ತಾಯಿ ಆಗಿರ್‍ತಾಳ ಆದ್ರು ಆಕಿ ಆಂಟಿನ ಅದ ಒಂದು ಹುಡುಗಿಗೆ ೪೫ ವಯಸ್ಸಾದ್ರು ಮದುವೆನ ಆಗಲಿಲ್ಲಾ ಅಂದ್ರ ಆಕಿಗೆ ಹುಡುಗಿನೆ ಅಂತಿರೇನ ಅಂತ ಕೇಳಿದ್ರ ಶಾಲು ಸ್ವಲ್ಪ ಹೊತ್ತು ವಿಚಾರ ಮಾಡಿ ಅದು ಹೆಂಗ ಆಗ್ತಾದ ಆಕಿಯ ವಯಸ್ಸು ಜಾಸ್ತಿ ಆಗಿರ್‍ತಾವ ಅದಕ ಆಕಿಗೂ ಆಂಟಿ ಅಂತಾನ ಕರಿಯೋದು ಅಂದ್ಲು. ಅಲ್ಲಾ ಶಾಲು ನಿಮಗಿಂತ ನಮ್ಮ ಹಳ್ಳಿಯೋಳಗಿನ ಜನಾನ ಬಹಳ ಚಲೊ ಅನಿಸ್ತಾರ ಯಾಕಂದ್ರ ಅವರ ಅವರ ವಯಸ್ಸಿಗನುಗುಣವಾಗಿ ಅಕ್ಕಾ, ಅವ್ವಾ, ತಂಗಿ, ತಮ್ಮಾ ಅಂತೆಲ್ಲಾ ಕರೀತಿರತಾರ. ಅವರು ಹೆಚ್ಚಿಗೆ ಓದಿಲ್ಲದೆ ಇದ್ದರು ಯಾರ ಯಾರನ್ನ ಯಾವ ರೀತಿ ಕರೀಬೇಕು ಅನ್ನುವ ಪದ್ದತಿ ಚೆನ್ನಾಗಿ ತಿಳಕೊಂಡಿರ್‍ತಾರ ಅಂತ ಹೇಳಿದೆ ಅವಳು ಮುಖಾ ಪೆಚ್ಚಗೆ ಮಾಡಿಕೊಂಡು ನನ್ನ ನೋಡಕಾತ್ತಿದ್ದಳು. ಹೆಣ್ಣು ಮಕ್ಕಳು ಎಷ್ಟ ಜಿನ್ಸ, ಮ್ಯಾಕ್ಸಿ ಅಂತ ಹಾಕೊಂಡ್ರು ಕೂಡ ಮದುವೆ ಮಾಡಿಕೊಳ್ಳುವಾಗ ಸೀರೆಗೆ ನ ಬೆಲೆ ಇರುದು ಅಂದೆ.  ನಾನು ಅವಳ ತಲೆ ತಿಂತಾ ಇದ್ದದು ಆ ದೇವರಿಗೂ ಇಷ್ಟಾ ಆಗಲಿಲ್ಲಾ ಅಂತ ಕಾಣಿಸಿತು ಅಷ್ಟರೊಳಗ ಆಕಿ ಕಾಯಕತ್ತಿದ ಬಸ್ ಬಂತು ಹತ್ತಿ ಹೋದಳು. 

ಆಶಾ ಮತ್ತು ಸುಮಾ : ಹಾಹಾಹಾ!(ನಗು)
ಸುಮಾ : ನೀವು ಬಹಳ ಚಲೋ ಹೇಳಿದ್ರಿ ಆಕಿಗೆ. ಖರೇನ ಇತ್ತಿತ್ತಲಾಗ ಈ  ಆಂಟಿ ಅನ್ನುವುದು ಒಂದು ಫ್ಯಾಶನ್ ಆಗ್ಯದ. ವಯಸ್ಸಿನ್ಯಾಗ ಚಿಕ್ಕವರಿದ್ದರು ಅವರಿಗೇನರ ಮದುವೆಯಾಗಿ ಒಂದು ಮಗು ಇದ್ದು ಬಿಟ್ಟರ ಸಾಕು ಆಂಟಿ ಆಂಟಿ ಅಂತ ಅನ್ನೋಕ ಶುರು ಮಾಡ್ತಾರ. ಅಕ್ಕಾ ತಂಗಿ ಅಂತ ಕರಿಯೋದ ಇಲ್ಲಾ.
ಆಶಾ : ಅಷ್ಟ ಅಲ್ಲಾ ಸುಮಾ ಈ ಆಂಟಿ ಅನ್ನುವುದು ಎಷ್ಟು ಚರ್ಚಾಸ್ಪದ ವಿಷಯ ಆಗೇತಿ ಅಂದ್ರ ಮೊನ್ನೆ ಟಿವಿ ಚಾನಲ್ದಾಗ ಒಂದು ಸೀರಿಯಲ್‌ನಲ್ಲಿ ಸತೇಕ ಇದರ ಬಗ್ಗೆ ಸೀರಿಯಸ್ಸಾಗಿ ಮಾತುಕತೆ ನಡೆದಿತ್ತು. ಒಂದು ಕಡೆ ಬರಿ ಆಂಟಿಗಳೆ ಕೂತಿದ್ದರ ಇನ್ನೊಂದು ಕಡೆ ಬರಿ ಹದಿಹರೆಯದ ವಯಸ್ಸಿನ ಕಾಲೇಜ ಹುಡುಗಿಯರ ಗುಂಪು. ಖ್ಯಾತ ತಾರೆ ಲಕ್ಷ್ಮಿಯವರು ನಡೆಸಿಕೊಡ್ತಾ ಇದ್ದರು. ಅದರೊಳಗ ಎಲ್ಲರೂ ಭಾರಿ ಜೋರ ಜೋರಾಗಿ ಚರ್ಚೆ ಮಾಡಕತ್ತಿದ್ದರು ಬಹಳ ಕೂತೂಹಲ ಕೆರಳಸ್ತಾ ಇತ್ತು ಹದಿಹರೆಯದ ಹುಡುಗಿಯರು ಹಾಗು ಆಂಟಿಗಳ ಮಧ್ಯ ಭಾರಿ ಜೋರಾಗಿ ವಾದ ವಿವಾದಗಳು ನಡಿತಾ ಇದ್ದವು. ಅಂತು ಕೊನೆಗೆ ಆಂಟಿ ಅಂತ ಯಾರಿಗೆ ಕರೀತಾರ ಅನ್ನುವುದಕ ಅದರೊಳಗ ವ್ಶೆಜ್ಞಾನಿಕವಾಗಿ ಬಹಳ ಚಂದ ಹೇಳ್ಯಾರ ನೋಡಿರಿನ ನೀವು ಅದನ.
ಪದ್ಮಜಾ : ಓ ನೋಡಿದ್ದೀವಿ ತುಂಬಾ ಚೆಂದದ " ನೀನಾ ನಾನಾ" ಕಾರ್ಯಕ್ರಮ ಅದು. ಅದರೊಳಗಿನ ಪ್ರಕಾರ ವ್ಶೆಜ್ಞಾನಿಕವಾಗಿ ೪೦ ವಯಸ್ಸಾದವರಿಗೆ ಆಂಟಿ ಅಂತಾರ. ಆ ಕಾರ್ಯಕ್ರಮ ನೋಡ್ಯರ ಜನಾ ಸುಧಾರಿಸ್ತಾರೊ ಇಲ್ಲೋ ಗೊತ್ತಿಲ್ಲಾ. ಆದ್ರ ನಮಗ ಇನ್ನು ೪೦ ಅಗಿಲ್ಲವಲ್ಲಾ ನಾವಿನ್ನು ಆಂಟಿ ಆಗಿಲ್ಲ ಅಂತ ಸ್ವಲ್ಪ ಸಮಾಧಾನ ಆಯಿತು. 
 
ಸುಮಾ : ಹೌದು ಇಲ್ಲಾಂದ್ರ ಇಲ್ಲಿ ಜನಾ ತಮ್ಮನ ತಾವು ಎಲ್ಲರಿಗಿಂತ ನಾವು ಚಿಕ್ಕವರದೀವಿ ಅಂತ ತೋರಿಸಿಕೊಳ್ಳಾಕ ಆಂಟಿ ಆಂಟಿ ಶುರು ಮಾಡಿರ್‍ತಾರ. 
ಪದ್ಮಜಾ : ಆಶಾ ಮೊನ್ನೆ ನಿಮ್ಮ ಮಗನ ಸ್ಕೂಲನ್ಯಾಗ ಗ್ಯಾದರಿಂಗ್ ಅದ ಅಂತ ಹೇಳಿದ್ರೆಲ್ಲಾ ಹೋಗಿದ್ರೆನ ಯಾವುದ್ರಾಗ ಭಾಗವಹಿಸಿದ್ದ ನಿಮ್ಮ ಮಗಾ?
ಆಶಾ : ಹೋಗಿದ್ದೆರಿ ನನ್ನ ಮಗಾ ಅದು ಯಾವುದೋ ಹಿಂದಿ ಹಾಡಿನ ಡ್ಯಾನ್ಸ್ ಮಾಡಿದ್ದ. ಒಂದು ಕಡೆ ಖುಷಿನು ಆಯಿತು ಇನ್ನೊಂದು ಕಡೆ ಬೇಜಾರು ಆಯಿತು. 

ಸುಮಾ : ಬೇಜಾರು ಆಗುವಂತದ್ದು ಏನು ನಡಿತು ಅಲ್ಲಿ. 
ಆಶಾ : ಅಲ್ಲಿ ಏನು ನಡಿಲಿಲ್ಲಾ ಆದ್ರ ಅವರ ಮಾಡಿಸಿದ ಎಲ್ಲಾ ಕಾರ್ಯಕ್ರಮಗಳು ಬರೀ ಸಿನೆಮಾ ಹಾಡುಗಳದ್ದೆ ಆಗಿತ್ತು. ನಾವು ಚಿಕ್ಕವರಿದ್ದಾಗ ನಮ್ಮ ಸ್ಕೂಲನ್ಯಾಗ ದೇಶಭಕ್ತಿ ಗೀತೆಗಳನ್ನ ನಮ್ಮ ಕಡೆಯಿಂದನ ಹಾಡಸ್ತಾ ಇದ್ದರು. ಅದರ ಜೊತೆಗೆ ಕೋಲಾಟ, ಜಾನಪದ ನೃತ್ಯಗಳನ್ನ ಮಾಡಿಸ್ತಾ ಇದ್ದರು. ನಮ್ಮ ದೇಶ ಪ್ರೇಮವನ್ನ ಎತ್ತಿ ಹಿಡಿಯುವಂತ ಕಾರ್ಯಕ್ರಮಗಳು ಜಾಸ್ತಿ ಇರತಾ ಇದ್ದವು. ಆದರ ಈಗ ಒಂದು ಸಿನೆಮಾದೊಳಗಿನ ದೊಡ್ಡವರ ಹಾಡು, ಡ್ಯಾನ್ಸಗಳನ್ನ ಚಿಕ್ಕಮಕ್ಕಳ ಕೈಯಲ್ಲಿ ಅದು ಈಗಷ್ಟೆ ಒಂದನೆ ಕ್ಲಾಸಿಗೆ ಹೋಗುವ ಮಕ್ಕಳ ಕಡೆಯಿಂದ ಮಾಡಸ್ತಾರ ಅದು ಬಹಳ ಬೇಜಾರ ಆಗಲಿಕತ್ತದ. 
ಪದ್ಮಜಾ : ಮಕ್ಕಳ ಮನಸ್ಸು ಬಿಳಿ ಹಾಳಿಯಿದ್ದಂಗ ಇರತದ ಅದರ ಮೇಲೆ ನಾವು ಎನ ಬರೀತೀವೊ ಅದೆ ಮೂಡುವುದು ಅಂತದ್ರಾಗ ಇವತ್ತಿನ ಬಹಳಷ್ಟು ಸ್ಕೂಲನ್ಯಾಗೆಲ್ಲಾ ಬರಿ ಪಾಶ್ಚಾತ್ಯರ ಸಂಸ್ಕೃತಿಯ ಅನುಕರಣೆ ಜಾಸ್ತಿ ಆಗ್ಯಾದ ನಮ್ಮ ದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತ ನಾಟಕಗಳನ್ನ, ಜಾನಪದ ನೃತ್ಯಗಳನ್ನ ಶಾಲೆಗಳಲ್ಲಿ ಕಲಿಸಾಕ ಶುರು ಮಾಡಿದ್ರ ನಮ್ಮ ಪರಂಪರೆಗಳು ನಶಿಸದಂಗ ನೋಡಕೊಬಹುದು ಅಂತ ನನಗ ಅನಿಸ್ತದ. ಮನ್ಯಾಗ ಇರುತನಕ ನಮ್ಮ ಮಕ್ಕಳು ಸ್ಕೂಲಿಗೆ ಹೋದ ಮ್ಯಾಗ ಅವರೆಲ್ಲ ಅಲ್ಲಿ ಶಿಕ್ಷಕರ ಮಕ್ಕಳಿದ್ದಂಗ. ಒಂದು ಮಗುವಿನ ಸರ್ವತೋಮುಖ ಬೆಳವಣಿಗೆಯೊಳಗ ಕುಟುಂಬದ ಪಾತ್ರ ಎಷ್ಟ ಇರತದೊ ಅಷ್ಟ ಶಿಕ್ಷಕರ ಪಾತ್ರ ಇರತದ ಯಾಕಂದ್ರ ಮನೆಯೊಳಗಿನಕಿಂತ ದಿನದ ಹೆಚ್ಚಿನ ಸಮಯವನ್ನ ಮಕ್ಕಳು ಶಾಲೆಯೊಳಗ ಕಳಿತಾವು.

ಸುಮಾ : ಪದ್ಮಜಾ ನೀವು ಖರೇನ ಹೇಳಿದ್ರಿ ಇವತ್ತು ನಮ್ಮ ದೇಶದ ಸಂಸ್ಕೃತಿ – ಪರಂಪರೆ ಉಳಿಬೇಕಂದ್ರ ಅದು ಒಬ್ಬ ಇಬ್ಬರಿಂದ ಸಾಧ್ಯ ಇಲ್ಲಾ ಇಡಿ ದೇಶದ ಜನತೆಯ ಮೇಲೆ ನಿಂತಿರತದ. ಇದರೊಳಗ ಸಿನೆಮಾ ತಯಾರು ಮಾಡುವವರ ಪಾತ್ರಾನು ಬಹಳ ಮುಖ್ಯ ಅದ. ಮೊದಲಿನ ಹಂಗ ಒಳ್ಳೊಳ್ಳೆಯ ಕೌಟುಂಬಿಕ ಸಿನೆಮಾಗಳು, ಮಕ್ಕಳ ಸಿನೆಮಾಗಳು ಹಾಗೆ ಪೌರಾಣಿಕ ಸಿನೆಮಾಗಳು ಈಗ ಬರ್‍ತಾ ಇಲ್ಲಾ ಹೆಚ್ಚಾಗಿ ಪ್ರೀತಿ-ಪ್ರೇಮದ ಮತ್ತು ಹೊಡೆದಾಟ ಬಡೆದಾಟ ಇರುವಂತ ಕ್ರೌರ್ಯ ತುಂಬಿದ ಸಿನೆಮಾಗಳೇ ಜಾಸ್ತಿ ಬರಾಕತ್ತಾವು. 

ಆಶಾ : ಒಬ್ಬ ಸಿನೆಮಾ ನಿರ್ದೇಶಕರ ಇಂಟರವ್ಯೂ ನಡಿದಿತ್ತು. ಆಗ ಅಲ್ಲಿ ಅವರ ಅಭಿಮಾನಿ ಒಬ್ಬವ ಎದ್ದು ನಿಂತು ಸರ್ ನನದೊಂದು ಚಿಕ್ಕ ರಿಕ್ವೆಸ್ಟು ಅಂದ ಅದಕ್ಕ ನಿರ್ದೇಶಕರು ಹೇಳರಿ ಅಂದರು. ಅದಕ್ಕ ಅಭಿಮಾನಿ ಹೇಳ್ತಾನ ಮೊದಲಿನ ಹಂಗ ಮನೆ ಮಂದಿಯೆಲ್ಲಾ ಒಟ್ಟಿಗೆ ಕುಳಿತು ನೋಡುವಂತ ಸಿನೆಮಾ ಯಾಕ ತಗಿತಾ ಇಲ್ಲಾ ನೀವು. ಹಂಗ ನಾವು ನಮ್ಮ ಮಕ್ಕಳಿಗೆ ಸಿನೆಮಾ ತೋರಿಸಬೇಕಂದ್ರ ಮಕ್ಕಳ ಸಿನೆಮಾನ ಬರವಲ್ಲವು……….ಅದಕ ನಿರ್ದೇಶಕರು ಹೇಳ್ತಾರ ಇವತ್ತ ಜನಾ ಏನ ನೋಡಬೇಕು ಅಂತಾರ ಅದನ ನಾವು ತೋರಿಸೊದು ಇವತ್ತಿನ ಜನರ ಅಭಿರುಚಿಗೆ ತಕ್ಕಂತ ಸಿನೆಮಾನ ಮಾಡುದು ಅಂತ. ಆಗ ಅಭಿಮಾನಿ ಕೇಳ್ತಾನ ಅಲ್ಲಾ ನಾಳೆ ನೀವು ನಿಮಗ ಬ್ಯಾಸರ ಆದಾಗ ಸಿನೆಮಾ ನೋಡಬೆಕಂದ್ರ ನಿಮ್ಮ ಕುಟುಂಬದ ಜೊತೆ ಇಂತಹ ಸಿನೆಮಾ ನೋಡ್ತಿರೆನ? ಆಗ ಸಿಟ್ಟಿಗೆದ್ದ ನಿರ್ದೇಶಕರು ನಮ್ಮ ಮಕ್ಕಳು ಕಾರ್ಟೂನ ಸಿನೆಮಾ ನೋಡಕೊಂಡ ಬೆಳಿಲಿ ಬಿಡ್ರಿ ನಾವು ಮಾತ್ರ ಇಂತಹ ಸಿನೆಮಾನ ಮಾಡುದು ಅಂತ ಆಗ ಅಭಿಮಾನಿಗೆ ಬಹಳ ಬೇಸರ ಆಯಿತು. ಸಾರಿ ರಿ ಸರ್ ನಾನು ಕೇಳುವುದು ಇಷ್ಟ ನೀವು ಏನು ತೋರಿಸ್ತಿರೊ ಅದನ್ನ ನಾವು ನೋಡುದು ಅದಕ್ಕ ಮೊದಲಿನ ಹಂಗ ದೇಶ ಪ್ರೇಮ ತುಂಬಿರುವ, ಮಕ್ಕಳ ಸಿನೆಮಾಗಳು, ಕೌಟುಂಬಿಕ ಸಿನೆಮಾಗಳು ಹೀಗೆ ಒಳ್ಳೊಳ್ಳೆಯ ಸಂದೇಶ ಸಮಾಜಕ್ಕ ಕೊಡುವಂತವು ಇದ್ರ ಬಹಳ ಚಲೊ ಇದೆಲ್ಲಾ ಪ್ರೇಕ್ಷಕರ ಆಸೆನು ಇದ ಆಗಿರ್‍ತದ ಯಾಕಂದ್ರ ಪ್ರತಿಯೊಬ್ಬರಿಗೂ ಕುಟುಂಬ ಇದ್ದೆ ಇರ್‍ತದ ಒಬ್ಬ ಮನುಷ್ಯ ತಾನು ನೆಮ್ಮದಿಯಾಗಿ ತನ್ನ ಪರಿವಾರದ ಜೊತೆ ಕುತಕೊಂಡು ಯಾವ ಮುಜುಗರ ಇಲ್ಲದ ಸಿನೆಮಾ ನೋಡಿ ಆನಂದಿಸೊಕ ಇಷ್ಟ ಪಡದೆ ಇರೊಕೆ ಸಾಧ್ಯನೆ ಇಲ್ಲಾ ಅಂತ ಹೇಳಿ ತನ್ನ ಮಾತು ಮುಗಿಸಿದ್ದ. 

ಪದ್ಮಜಾ : ಈ ಸಂಸ್ಕೃತಿಯ ಬಗ್ಗೆ ಮಾತಾಡಕ ಹೊಂಟರ ಇಡಿ ದಿನಾ ಆದರೂ ಸಾಲಂಗಿಲ್ಲ ನಡೀರಿ ನಡೀರಿ. ಶಾಲೆಯಿಂದ ನಮ್ಮ ಮಕ್ಕಳೆಲ್ಲ ಬರುವ ಸಮಯಾ ಆಗೇತಿ ಮನೆಗೆ ಹೋಗುಣಂತ ಮತ್ತ ಈ ಹರಟೆ ಕಟ್ಟೆಗೆ ಸೇರುದು ಇದ್ದ ಅದ.
ಆಶಾ : ಹೌದು ಮಾತಾಡ್ತಾ ಮಾತಾಡ್ತಾ ಸಮಯ ಹೋಗಿದ್ದ ಗೊತ್ತಾಗಲಿಲ್ಲ ನಡೀರಿ ಸುಮಾ…….. 

******      

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
Mahesh G M
Mahesh G M
10 years ago

Tumba chennagide ri….

Sunil
Sunil
10 years ago

Very nice article…tumba chenagide .. "Namma tana" naavu bitkodabardu anta torisi kodatte ee article… keep it up

ನಾಗರತ್ನಾ ಗೋವಿಂದನ್ನವರ
ನಾಗರತ್ನಾ ಗೋವಿಂದನ್ನವರ
10 years ago

ಲೇಖನವನ್ನು ಮೇಚ್ಚಿದ ನಿಮಗೆ ಧನ್ಯವಾದಗಳು.

3
0
Would love your thoughts, please comment.x
()
x