ಹರಕೆ ಸಂದಾಯ: ಕೃಷ್ಣವೇಣಿ ಕಿದೂರು

ನಮ್ಮ ತುಳು ಭಾಷೆಯಲ್ಲಿ ಒಂದು ಮಾತಿದೆ. ಯಾರಿಗಾದರೂ ಒಂದು ಕೆಲಸ ಒಪ್ಪಿಸಿದಾಗ ಅಸಡ್ಡೆಯಿಂದ ಅಥವಾ ಉಡಾಫೆಯಿಂದ ಅರೆಬರೆ ಮಾಡಿದ್ದು ಕಂಡಾಗ ’ ಉಂದ್ ಎಂಚಿನ? ಪರಕೆ ಸಂದಾಯನಾ” (ಏನಿದು ? ಹರಕೆ ಸಂದಾಯವಾ ಅಂತ ಕೇಳುವುದು. ಕನ್ನಡದಲ್ಲಿಯೂ ಅದೇ ಅರ್ಥದ ಮಾತು ಉಂಟು. ಮಾಡುವ ಕಾರ್ಯವನ್ನು ಔದಾಸಿನ್ಯದಿಂದ ಅರ್ಧಮರ್ಧ ಮಾಡಿದಾಗ ಅದಕ್ಕೆ ಹೆಸರೇ’’ ಹರಕೆ ಸಂದಾಯವಾ” ಅಂತ ಸಣ್ಣಕ್ಕೆ ಗದರಿಸುವುದು. ಒಪ್ಪಿಸಿದ ಕೆಲಸ ಒಪ್ಪವಾಗಿ ಮಾಡಿದಾಗ ಅಂಥ ಮಾತಿಗಲ್ಲಿ ಎಡೆಯಿಲ್ಲ. ಬದಲಿಗೆ ಮೆಚ್ಚುಗೆ, ಪ್ರಶಂಸೆ , ಅಭಿಮಾನ ತುಂಬಿಕೊಳ್ಳುತ್ತದೆ. ಹರಕೆ ಅಂದರೆ ಸಾಧಾರಣವಾಗಿ ಆಪತ್ತಿನ ಹೊತ್ತಿನಲ್ಲಿ ಕಾಯುವಂತೆ ಬೇಡಿ ದೈವ, ದೇವರುಗಳಿಗೆ ಪ್ರಾರ್ಥಿಸುವುದು. ಆರ್ತವಾಗಿ ಬೇಡಿದರೆ ಅದನ್ನು ನೆರವೇರಿಸಿಕೊಡದ ದೈವಗಳಿಲ್ಲ; ಹಾಗೆ ದೇವರೂ ಕೂಡಾ. ತನ್ನ ಶಕ್ತಿ, ಸಾಮರ್ಥ್ಯಗಳಿಗೆ ಅನುಗುಣವಾಗಿ ಮೇಲಿರುವ ಅಗೋಚರ ಶಕ್ತಿಗೆ ಒಪ್ಪಿಸುವ ಕಾಣಿಕೆ ಹರಕೆ. ಕಾಯಿಲೆಯ ಸಂದರ್ಭದಲ್ಲಿ, ಜೀವಾಪಾಯದ ಹೊತ್ತಿಗೆ, ಸೊತ್ತು ನಾಶ, ನಷ್ಟದ ಕಷ್ಟಕಾಲದಲ್ಲಿ. ವೈವಾಹಿಕ ಸಂಬಂಧಗಳನ್ನು ಹೊಂದಿಸುವಾಗ ಸಹಜವಾಗಿ ಅತೀತ ಶಕ್ತಿಗೆ ಮೊರೆ ಹೋಗುವುದು ಎಲ್ಲ ಧರ್ಮಗಳಲ್ಲಿ ಸಹಜ ಕ್ರಿಯೆ. ಕೈಹಿಡಿದು ಮೇಲೆತ್ತುವ ಶಕ್ತಿಗೆ ಶರಣಾಗುವಿಕೆ ಅನ್ನಬಹುದು. ಹರಕೆ ಹೇಳಿಕೊಳ್ಳುವಾಗಿನ ದೈನ್ಯಾತಿದೈನ್ಯದ ಮೊರೆ ಹೃದಯ ಕರಗಿಸುತ್ತದೆ. ಸಂದಾಯವಾಗಬೇಕಾದರೆ ಅದಕ್ಕೆ ಕಾಲಮಿತಿ ಇದೆ. ನಿಂತ ಮೆಟ್ಟಿಗೇ ಒಪ್ಪಿಸು ಅಂತ ಕರುಣಾಮಯಿ ಭಗವಂತ ಕೇಳುವುದಿಲ್ಲ. ಸಾಮಾನ್ಯವಾಗಿ ಹನ್ನೆರಡು ವರ್ಷದ ಮೊದಲೇ ಹರಕೆ ಪೂರೈಸಿಕೊಡುವುದು ವಾಡಿಕೆ. ಮನೆ ಯಜಮಾನ ಮರೆತರೂ ಮನೆಯೊಡತಿ ನೆನಪಿಸಿ ಎಚ್ಚರಿಸಿ ಮುಗಿಸಿಕೊಡುವುದು ಪದ್ಧತಿ.

ದೈವ, ದೇವರುಗಳಿಗೆ ಹೇಳಿಕೊಳ್ಳುವ ಹರಕೆ ಲಘುವೂ ಇರಬಹುದು; ಅಥವಾ ಬೆಲೆಬಾಳುವಂಥಹುದೂ ಆಗಿರಬಹುದು. ವ್ಯಕ್ತಿ ತನ್ನ ಆಪತ್ತಿನ ಹೊತ್ತಿನಲ್ಲಿ ಕೊನೆಯದಾಗಿ ದೈವದ ಮೊರೆ ಹೋಗುವುದು ಬದುಕಿನಲ್ಲಿ ಸಾಮಾನ್ಯ.ಆ ಹರಕೆ ಅಂದರೆ ತಾನು ಆರ್ತವಾಗಿ ಬೇಡಿದ್ದನ್ನು ಕರುಣಿಸಿದರೆ ಇಂಥ ಸೇವೆಯನ್ನು ಅಥವಾ ವಸ್ತುವನ್ನು ಆ ದೈವಕ್ಕೆ ಅಥವಾ ದೇವರಿಗೆ ಒಪ್ಪಿಸಿಕೊಡುತ್ತೇನೆ ಎಂಬ ಪ್ರಾರ್ಥನೆ. ಅದರಲ್ಲಿ ಹಗುರವಾದ ಹರಕೆ ಅಥವಾ ತೂಕದ ಹರಕೆ ಎರಡೂ ಇರಬಹುದು. ಏನೇ ಆದರೂ ಅವರವರ ಸ್ಥಾನಕ್ಕೆ, ಶಕ್ತಿಗೆ ಹೊಂದಿಕೊಂಡ ಹರಕೆಗಳು. ಕೋರಿಕೆ ಈಡೇರಿದ ಕೂಡಲೇ ನಿಂತ ಕಾಲಿನಲ್ಲಿ ಹರಕೆ ಒಪ್ಪಿಸಿಕೊಡು ಎಂದು ಅದ್ಯಾವ ದೈವ, ದೇವರೂ ಕೇಳುವುದಿಲ್ಲ.

ವಾಡಿಕೆಯಂತೆ ಹರಕೆಗೆ ಹನ್ನೆರಡು ವರ್ಷದ ಅವಧಿ ಇರುತ್ತದೆ.ಅದರ ಮೊದಲು ಸಲ್ಲಿಸಿದರೆ ಅಲ್ಲಿಗೆ ಮುಗಿಯಿತು. ಸಣ್ಣಪುಟ್ಟ ಹರಕೆಗಳಾದ ಬಾಳೆಯ ಹಣ್ಣು, ತೆಂಗಿನಕಾಯಿ ಒಪ್ಪಿಸುವುದು, ಎಳನೀರು ಸಲ್ಲಿಸುವುದು, ಹೂವು ಸಮರ್ಪಣೆ, ವಾರದಲ್ಲೊಂದು ದಿನ ಉಪವಾಸ, ಅಂಥಹುದೆಲ್ಲ ಸಲೀಸಾಗಿ ಸಲ್ಲಿಸಬಹುದು. ಉರುಳುಸೇವೆ, , ಸಾಮಾನ್ಯವಾಗಿ ನಾಗನಿಗೆ( ನಾಗರಹಾವಿಗೆ) ಸಂಬಂಧಿಸಿದ ಹರಕೆಗಳು, ಚರ್ಮರೋಗವಿದ್ದರೆ ನಾಗನ ಕ್ಷೇತ್ರಕ್ಕೆ ಹೋಗಿ ಅಲ್ಲಿ ಉರುಳುಸೇವೆಮಾಡುವುದು ಆದಿಯಿಂದ ಬಂದ ಹರಕೆ ಸಲ್ಲಿಕೆ. ಕೆಂಡಸೇವೆ ವಿಷ್ಣುಮೂರ್ತಿ ದೈವಕ್ಕೆ ಹೇಳಿಕೊಳ್ಳುತ್ತಾರೆ ಒತ್ತೆಕೋಲವೆಂಬ ವಿಶಿಷ್ಟ ಧಾರ್ಮಿಕ ಕಾರ್ಯದಲ್ಲಿ ಕೆಂಡದ ರಾಶಿಯಲ್ಲಿ ದೈವ ಮೊದಲು ನಡೆದ ಮೇಲೆ ಹರಕೆ ಹೇಳಿದವರು ನಡೆಯುತ್ತಾರೆ. ಎಳೆ ಮಕ್ಕಳಿಗಾಗಿ ಹೇಳಿದ ಹರಕೆಯಾದರೆ ತಾಯಂದಿರು ಅಥವಾ ತಂದೆ ಅವರನ್ನು ಎತ್ತಿಕೊಂಡು ಕೆಂಡದ ಮೇಲೆ ನಡೆಯುತ್ತಾರೆ , ಜೊತೆಗೆ ಇತರ ರು ಹಾಗೆ ನಡೆದು ತಮ್ಮ ಹರಕೆ ತೀರಿಸುತ್ತಾರೆ.

ವಿಶಿಷ್ಟವಾದ ಹರಕೆ ತುಲಾಭಾರ ಸೇವೆಯದು. ಪ್ರಾಣಾಪಾಯದ ಕಠಿಣಾವಸ್ಥೆಯಲ್ಲಿ ದೇವರಿಗೆ ಆ ವ್ಯಕ್ತಿಯ ತೂಕದ ವಸ್ತುವನ್ನು ತೂಗಿ ಒಪ್ಪಿಸುವ ಹರಕೆ. ವಸ್ತು ಅವರವರಿಗೆ ಐಚ್ಚಿಕದ್ದು, ಸಕ್ಕರೆ, ಕದಳಿಫಲ, ಬೆಲ್ಲ, ಅಕ್ಕಿ, ತೆಂಗಿನಕಾಯಿ. ಏನೂ ಆಗಬಹುದು. ಭಗವಂತನ ಸನ್ನಿಧಿಯಲ್ಲಿ ತುಲಾಭಾರ ಸೇವೆ ಸಲ್ಲಿಸಿ ಆ ವಸ್ತುವನ್ನು ಆತನಿಗೆ ಒಪ್ಪಿಸುವ ಹರಕೆ. ನವಜಾತ ಶಿಶುವಿಗೆ ಕಠಿಣದ ಜೀವಾಪಾಯವಿದ್ದಲ್ಲಿ ಹಸುವಿನ ಒಡಲಿನಡಿಯಲ್ಲಿ ಮಲಗಿಸಿ ಮತ್ತೊಂದು ಬದಿಯಿಂದ ಎತ್ತಿಕೊಳ್ಳುವುದಿದೆ. ಹಸು ತಪ್ಪಿಯೂ ನೋಯಿಸುವುದಿಲ್ಲ ಶಿಶುವನ್ನು. ಇದು ಅವಿಭಜಿತ ದಕ್ಷಿಣ ಕನ್ನಡದಲ್ಲಿ ಹೆಚ್ಚಾಗಿ ನಡೆಯುವ ಹರಕೆ ಸಲ್ಲಿಕೆ. ದೇವಸ್ಥಾನಗಳಿಗೆ ಸಲ್ಲಿಸುವ ಹರಕೆಯಲ್ಲಿ ಒಂದು ಚಿಪ್ಪು ಕದಳಿ ಬಾಳೆಯಹಣ್ಣು,ಎರಡು ಎಳನೀರು ಕೊಟ್ಟರೂ ಭಗವಂತ ತೃಪ್ತ. ಕಾಯಿಲೆ ಬಿದ್ದ ಕರುವಿಗೆ ಗುಣವಾಗಲು ಹರಕೆ ಹೇಳಿ ನಂತರ ಆರೋಗ್ಯವಾದ ಮೇಲೆ ಅದೇ ಕರುವನ್ನು ಶಿವದೇಗುಲಕ್ಕೆ ಅರ್ಪಿಸುವುದಿದೆ.ಇದೂ ಹರಕೆ. ಹಲವಾರು ಬಾರಿ ಆ ಕರುವಿಗೊಂದು ಬೆಲೆ ಕಟ್ಟಿ ಆ ಮೊತ್ತವನ್ನು ಅರ್ಪಿಸುವುದೂ ಉಂಟು. ನಾಗನ ಕಲ್ಲಿಗೆ ಹಾಲು ಎರೆಯುವುದು ಸಾಮಾನ್ಯವಾಗಿ ಕಾಣಬಹುದು.

ದೇವರಿಗೆ ಇಂಥಹ ಹರಕೆ ಸಲ್ಲಿಕೆಯಾದರೆ ದೈವಗಳಿಗೆ ಸಾತ್ವಿಕ ಆಹಾರದ ಬದಲಾಗಿ ಕೋಳಿ ಕೊಡುವುದಿದೆ. ಆಡು, ಕುರಿ ಕಡಿದು ಅರ್ಪಿಸುವ ರಕ್ತದೋಕುಳಿ ಹರಿಸುವ ಹರಕೆಗಳು ನಮ್ಮ ಕಡೆ ಕಡಿಮೆ. ಮಹಾಶಿವರಾತ್ರಿ, ಷಷ್ಟಿಯ , ಗಣೇಶ ಚೌತಿಯ , ಅಷ್ಟಮಿಯದಿನಕ್ಕೆ ದೇವರಿಗೆ ಹೂವು ಹಣ್ಣು ಒಪ್ಪಿಸುವ ಹರಕೆಗಳಿವೆ. ಗೋಪಾಲಕೃಷ್ಣನಿಗೆ ಬಾಳೆಗೊನೆ , ಹಸುವಿನ ಮೊದಲ ಹಾಲು ಅರ್ಪಿಸುವ ಹರಕೆ ವಿಶಿಷ್ಟ. ಎಲ್ಲವೂ ಸರಳವಾದ ತೀರಿಕೆಗೆ ಸುಲಭವಾದ ಹರಕೆಗಳು.
.
ಹರಕೆ ಹೇಳಿಕೊಳ್ಳುವಾಗಿದ್ದ ಉತ್ಕಟತೆ ತೀರಿಸುವಾಗ ತಗ್ಗುತ್ತದೆ. ಇದು ಮಾನವ ಸಹಜ ಪ್ರಕ್ರಿಯೆ ಎನ್ನಬಹುದು. ದೊಡ್ಡದಾದ ಬಾಳೆಯ ಗೊನೆಯನ್ನು ಬದಿಗಿರಿಸಿ ಪುಟ್ಟ ಗೊನೆ ಭಗವಂತನಿಗೆ ಸಲ್ಲಿಸುವವರಿದ್ದಾರೆ.ಪೂಜೆಗೆ ಖರೀದಿಸುವಾಗ ದಾನಕ್ಕಾಗಿರುವ ಪಂಚೆ ,ಸೀರೆ, ಕಣ ಕೊಡಿ ಅಂತ ಮಳಿಗೆಗಳಲ್ಲಿ ಕೇಳಿ ಖರೀದಿ ಮಾಡುವವರಿದ್ದಾರೆ. ದಾನ ಪಡೆಯುವ ಜನರು ಪಡೆದು ಹೆಚ್ಚಾದ ಬಟ್ಟೆಗಳನ್ನು ಶಾಪ್ ಗೆ ಮಾರಾಟ ಮಾಡಿ ಬಿಡುತ್ತಾರೆ.ಅದೇ ರಿ ಸೇಲ್ ಆಗಿ ಹಿಂದಕ್ಕೆ ಬರುತ್ತದೆ. ಸತ್ಯನಾರಾಯಣ ಪೂಜೆಗೆ ಇರಿಸುವ ಕಣಕ್ಕೆ ಉತ್ತಮ ಗುಣಮಟ್ಟ ಬೇಕಾಗಿಲ್ಲ. ಹೇಗಿದ್ದರೂ ದಾನಕ್ಕೆ ಅಲ್ವಾ . ಗೋದಾನ ಮಾಡುವಾಗ ಉತ್ತಮ ಹಸುವನ್ನು ದಾನ ಮಾಡುವವರು ಬೆರೆಳೆಣಿಕೆಯಲ್ಲಿ. ಎಲುಬು, ಚರ್ಮ ಕಾಣುವ , ಬಡಕಲು ಹಸುವನ್ನು ಅಣಿಗೊಳಿಸುತ್ತಾರೆ ಕೆಲವಾರು ಕಡೆ.

ಪಡೆದುಕೊಳ್ಳುವಾತ ಮೌಲ್ಯವನ್ನೇ ಕೊಡಿ ಅಂದರೆ ಅಚ್ಚರಿಯೇನಿಲ್ಲ. ಹರಕೆ ತೀರಿಸುವಾಗ ಮೊದಲಿನ ಆತಂಕ, ಉದ್ವೇಗ, ಗಾಬರಿ ಉಳಿದಿರುವುದಿಲ್ಲ. ಅದರಿಂದಾಗಿ ಖರ್ಚು ವೆಚ್ಚ ಎಷ್ಟಾಗುತ್ತದೆ ಅನ್ನುವ ಲೆಕ್ಕಾಚಾರ. ಸುಲಭವಾಗಿ ಸಂದಾಯ ಮಾಡುವ ಹಾದಿಯ ಹುಡುಕಾಟ. ದೇವರು ಕರುಣಾಮಯಿ. ಹೂವಿಲ್ಲವಾದರೆ ಹೂವಿನೆಸಳಿಗೆ ತೃಪ್ತಿ ಪಡುವವನು ಎನ್ನುವುದು ನೆನಪಾಗುತ್ತದೆ .ಸಮಯ ಸಾಕಷ್ಟಿದೆ,ಮುಂದಿನ ವರ್ಷ ನೋಡೋಣ ಎನ್ನುವ ಧೋರಣೆ ಸಹಜ .

ಜೊತೆಗೆ ದೇವರು ನಮಗೆ ಕೊಡುವವನು ; ಅವನಿಗೆ ಕೊಡಲು ನಾವ್ಯಾರು, ಹುಲುಮನುಜರಷ್ಟೇ. ಅದೆಂಥ ತಾತ್ವಿಕ ತಿಳಿವು. ಯಜಮಾನರ ಔದಾಸೀನ್ಯದ ನಡವಳಿಕೆ ಗಮನಿಸಿ ತಾಳ್ಮೆ ಕಳೆದುಕೊಂಡ ಗೃಹಿಣಿ ರಂಪ ಮಾಡಿ, ರಚ್ಚೆ ಹಿಡಿದು ನಿಂತ ಮೆಟ್ಟಿನಲ್ಲಿ ಸಂದಾಯಿಸಲು ಕಿರಿಕಿರಿ ಶುರು ಮಾಡುವಾಗ ಈ ಎಲ್ಲ ಚಿಂತನೆಗಳು ಮೆದುಳಿಗೆ ಲಗ್ಗೆ ಇಡುತ್ತವೆ.

ಹಾಗೆಂದು ಎಲ್ಲರೂ ಹೀಗಾ ಅಂದರೆ ಅದು ಸತ್ಯಕ್ಕೆ ದೂರವಾದ ಮಾತು. ನಿಷ್ಟೆಯಿಂದ ಹರಕೆ ತೀರಿಸಿ ಕಾಣಿಕೆ ಒಪ್ಪಿಸಿ ಧನ್ಯರಾಗುವವರ ಭಕ್ತಿ ಉಳಿದವರಿಗೆ ಮಾದರಿ. ಭಕ್ತಿಪೂರ್ವಕ ಹೇಳಿದ್ದ ಹರಕೆ ಒಪ್ಪಿಸಿ ಕೃತಾರ್ಥರಾಗುವವರ ಬಗ್ಗೆ ಎರಡುಮಾತೇ ಇಲ್ಲ. ಅದೆಂಥಹ ನಾಸ್ತಿಕವಾದಿಯಾದರೂ ಸಂಕಟಬಂದರೆ ವೆಂಕಟರಮಣ ಅನ್ನುವುದು ವಾಸ್ತವ. ಅದು ಮಾನವ ಸಹಜ. ಅತೀತ ಶಕ್ತಿಗೆ ತಲೆಬಾಗಿದಾಗ ಮಾನಸಿಕವಾಗಿ ನೆಮ್ಮದಿ ಸಿಗುತ್ತದೆ. ತಮಗೊದಗಿದ ಸಂಕಟವನ್ನು ಪರಿಹರಿಸುವ ಶಕ್ತಿ ಇರುವುದು ಕೇವಲ ಮೇಲಿನವನಿಗೆ ಎನ್ನುವುದು ಒಪ್ಪಿಕೊಳ್ಳುತ್ತಾರೆ; ಅಥವಾ ಸನ್ನಿವೇಶ ಹಾಗೆ ಒಪ್ಪಿಸುತ್ತದೆ.

ಪವಾಡವೆನ್ನುವಂತೆ ಅದೆಷ್ಟೋ ಬಾರಿ ಸಾವಿನಂಚಿಗೆ ಹೋದ ವ್ಯಕ್ತಿ ಮೇಲೆದ್ದು ಬಂದದ್ದಿದೆ. ಉಸಿರು ನಿಂತೇ ಹೋಯಿತು ಎನ್ನುವ ಹೊತ್ತಿಗೆ ಬದುಕಿದ್ದಿದೆ. ಸಂತಾನವೇ ಆಗದ ದಂಪತಿಗೆ ಮಕ್ಕಳಾಗಿದ್ದಿದೆ. ಅವಘಡಗಳಿಂದ ಸೂಜಿ ಮೊನೆಯ ಅಂತರದಲ್ಲಿ ಪಾರಾಗಿದ್ದಿದೆ. ಅಪಘಾತದಲ್ಲಿ ಬಳಿ ಕುಳಿತವರು ಮರಣಹೊಂದಿ ಪಕ್ಕದಲ್ಲೇ ಇದಾತ ಏನೂ ಆಗದೆ ಬಚಾವಾಗಿದ್ದಿದೆ. ಅರೆಕ್ಷಣದಲ್ಲಿ ಅಪಘಾತ ಆಗೇಬಿಟ್ಟಿತು ಎಂದು ಎನ್ನುವ ಹೊತ್ತಿಗೆ ಅದು ತಪ್ಪಿಹೋಗಬಹುದು. ಅದೆಂಥ ನಾಸ್ತಿಕನೂ ಆಗ ದೇವರಿದ್ದಾನೆ ಎಂದು ಮನದಲ್ಲಿ ಒಪ್ಪಿಕೊಳ್ಳುವ ಸನ್ನಿವೇಶ ಅದು. ಹರಕೆ ಅಂದರೂ ಮತ್ತೇನು? ಮಾಡುವ ಪ್ರಯತ್ನವೆಲ್ಲ ಮಾಡಿ ತಾವಿನ್ನು ನಿಸ್ಸಹಾಯಕರು. ದೇವನೇ ಕಾಯುವವನು ಹೊರತು ನಾವಲ್ಲ ಅನ್ನುವ ದಯನೀಯಾವಸ್ಥೆಯಲ್ಲಿ ಮೇಲಿನ ಅಗೋಚರ ಶಕ್ತಿಗೆ ವಿನೀತವಾಗಿ ತಲೆಬಾಗಿ ಬೇಡುವುದು.

ಕಾಯುವ ಕರಗಳು ಕಾಯಲೇಬೇಕು; ಕಾಯುತ್ತವೆ. ಆಹೊತ್ತಿಗೆ ದೇವರಿಗೆ ನಮ್ಮ ಯಥಾನುಶಕ್ತಿಯಿಂದ ಒಪ್ಪಿಸಲಿರುವ ಸೇವೆಯೇ ಹರಕೆ. ದೇಶ, ಕಾಲ, ಸ್ಥಳ , ವರ್ಗ, ಮತಗಳಲ್ಲಿ ವ್ಯತ್ಯಾಸವಿರಬಹುದು.ಏನೇ ಇದ್ದರೂ ಅದು ಅತೀತ ಶಕ್ತಿಗೆ ಅರ್ಪಣೆ. ಆದರೆ ಬಹಿರಂಗದಲ್ಲಿ, ವಿರೋಧಿಸಿ ಅಂತರಂಗದಲ್ಲಿ ಗುಟ್ಟಾಗಿ ಪ್ರಾರ್ಥಿಸಿ ಬೇಡುವ ಭಕ್ತರು ಈ ವಿಚಾರದಲ್ಲಿ ಅಭಿಪ್ರಾಯಭೇದ ಹೊಂದಿರುವುದಿಲ್ಲ. ಹರಕೆ ಸಂದಾಯವೆನ್ನುವ ಶಬ್ದ ನಿತ್ಯದ ಬದುಕಿನಲ್ಲಿ ಹಾಸುಹೊಕ್ಕಾಗಿರುವುದು ಗಮನಿಸಿದಾಗ ಅದರ ನಿಜಾರ್ಥ ಅರಿವಾಗುತ್ತದೆ.

-ಕೃಷ್ಣವೇಣಿ ಕಿದೂರು


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x