ದೀಪಿಕಾ ಮೇಲೆದ್ದು ಕುಳಿತಳು. ಎಷ್ಟೊ ಹೊತ್ತು ನಿದ್ರೆ ಬಾರದೆ ಸೆಖೆ ಸೆಖೆ ಎಂದು ಒದ್ದಾಡುತ್ತಲೆ ಇದ್ದ ಪತಿ ನಾಗರಾಜ ಅದೇ ದನೇ ನಿದ್ರೆ ಹೋಗಿದ್ದ. ಗಡಿಯಾರದ ಕಡೆ ನೋಡಿದಳು. ಆಗಲೆ ಮಧ್ಯರಾತ್ರಿ. ಪಕ್ಕದಲ್ಲಿ ಮಕ್ಕಳು ಲೋಕದ ಯಾವ ಚಿಂತೆಯ ಸೋಂಕೂ ಇಲ್ಲದೆ ಶಾಂತವಾಗಿ ನಿದ್ರಿಸುತ್ತಿದ್ದಾರೆ. ಅವಳಿಗೆ ಮಾತ್ರ ನಿದ್ರೆ ಸನಿಹವೂ ಸುಳಿಯುತ್ತಿಲ್ಲ. ಅವಳ ಒಡಲು ಬೆಂಕಿಗೆ ಆಹುತಿಯಾಗಿ ದಗದಗಿಸುತ್ತಿದೆ. ಕಟು ಸತ್ಯ ಸಂಗತಿಯನ್ನು ತಿಳಿದುಕೊಂಡಾಗಲೆ ಎದೆ ಬಿರಿದು ಎರೆಭೂಮಿ ಬಾಯಿ ಬಿಟ್ಟಂತಾಗಿದೆ. ಕಣ್ಣುಗಳಲ್ಲಿ ಆ ಮದ್ಯಾಹ್ನದವರೆಗೂ ನಳನಳಿಸುತ್ತಿದ್ದ ಕನಸುಗಳು, ಆಸೆಗಳು ಕಂಬನಿಯಾಗಿ ತೊಟ್ಟಿಕ್ಕುತ್ತಾ ಇನ್ನಿಲ್ಲದಂತಾಗುತ್ತಿವೆ. ಮದ್ಯಾಹ್ನದಿಂದಲೂ ತಡೆ ಹಿಡಿದಿದ್ದ ಕಂಬನಿ ಸದ್ದಿಲ್ಲದೆ ಕೆನ್ನೆಯ ಮೇಲೆ ಜಾರಿ ಕುತ್ತಿಗೆಯಿಂದ ಕೆಳಗಿಳಿದು ರವಿಕೆಯನ್ನೆಲ್ಲಾ ಒದ್ದೆಮಾಡಿದೆ.
“ದೇವ್ರ ನಾ ನಿನಗ ಏನನ್ಯಾಯ ಮಾಡಿದೆನೊ ನನ್ನಪ್ಪ, ನನ್ನ ನೆಳ್ಳಿಗೆ ನಾನ ಹೆದರಿ ಬದುಕಾಕಿ ನಾನು. ನನಗ್ಯಾಕ ಈ ಶಿಕ್ಷೆ ಕೊಟ್ಯೊ ತಂದೆ?! ನನ್ನ ಗಂಡ ಕುರಿ ಮೇಯಿಸ್ಕೊಂತ ಕುರಿಯಂತಾಗ ಬದುಕಿದ ಮನುಷ್ಯ. ಹ್ಯಾಂಗರ ಈ ಏಡ್ಸ್ ಬಂತು ನಮಗ? ನಂಗಂತೂ ಏನೂ ತಿಳೀವಲ್ದು. ನಮ್ಗಿಬ್ರಿಗೂ ಈ ಜಡ್ಡು ಬಂದೈತಂತ ಗೊತ್ತಾದ್ರ ಮಂದಿ ಬಳಗದಾಗ ನಾವು ಬದುಕೂದು ಹ್ಯಾಗಂತೀನಿ… ಇಲ್ಲ ಯಾರ್ಗೂ ಇದು ಗೊತ್ತಾಗ್ಬಾರ್ದು. ನನ್ನ ದೇವರಾಗಿರೊ ಗಂಡಗೂ ಗೊತ್ತಾಗಬಾರ್ದು. ನೂವು ನನಗಷ್ಟ ಇರಲಿ. ಆದ್ರ ಅವನ ದೇಹಕ ಬಂದಿದ್ ನೂವ್ನ ಅವ್ನ, ನನ್ನ ದೇಹಕ್ಕ ಬಂದಿರೂದ್ನ ನಾನ ಅನುಭೋಗಿಸ್ಬೇಕು ಖರೆ. ಆದ್ರೂ ಅವನ ಮನಸಿಗೆ ಜಾಸ್ತಿ ದುಃಖ ಕೊಡೂದು ಬ್ಯಾಡ. ಅವಗ ನಮ್ಮಿಬ್ರಿಗೂ ಸುಡುಗಾಡು ಜಡ್ಡು ಬಂದೈತಂತ ತಿಳೀಬಾರ್ದು… ಬದುಕಿರೊ ತನಕ ಅವನ್ ಜೊತೀಗೆ ಮೊದ್ಲಿನಂತಾಗಾ ನಕ್ಕೊಂತಾನಾ ಇರ್ತೀನಿ. ಸಾವು ನಮ್ಮಿಬ್ರೊಳಗ ಯಾರನ್ನ ಮೊದ್ಲ ಕರ್ಕೊಳ್ಳುತ್ತಂತ ಗೊತ್ತಿಲ್ಲ. ಅಷ್ಟರಾಗ ನನ್ನ ಎರಡೂ ಹೆಣ್ಣುಮಕ್ಳಿಗೆ ದಾರಿ ತೋರಿಸಾಕ ಶಕ್ತಿ ಕೊಡು ಪರಮಾತ್ಮ…” ಎಂದು ಅವಳು ಸೆರಗಿನಿಂದ ಕಣ್ಣೊರೆಸಿಕೊಳ್ಳುತ್ತಲೇ ಎಲೈಸಾ ಟೆಸ್ಟ್ ರಿಪೋರ್ಟ್‍ಗಳನ್ನು ಒಲೆಯ ಬಾಯಿಗೆ ತುರುಕಿ ಕಡ್ಡಿ ಗೀಚಿ ಇಕ್ಕಿದಳು. ಅವು ಕ್ಷಣದಲ್ಲೇ ದಗದಗ ಉರಿದತೊಡಗಿದಾಗ, ಅವಳ ಎದೆ ಭಗ ಭಗ ಅಂತ ಮತ್ತಷ್ಟು ಉರಿಯಿತು.
ಅವಳ ಮದುವೆ, ಮಕ್ಕಳು ಪ್ರತಿಯೊಂದು ಅದೂವರೆಗೆ ಸಂತೋಷದಾಯಕ ಸಂಗತಿಗಳೇ ಆಗಿದ್ದವು. ಆದರೆ ಕನಸಿನಲ್ಲಿಯೂ ಯೋಚಿಸದಿದ್ದ ಸಂಗತಿ, ಎಲ್ಲವನ್ನೂ ಕಬಳಿಸಲು ಸಜ್ಜಾಗಿ ನಿಂತಿರುವ ಕೆಟ್ಟ ರೀತಿಯ ಸಾವಿನ ಭಯವು ಅವಳ ಜೀವಮಾನದಲ್ಲಿಯೇ ಮೊಟ್ಟ ಮೊದಲ ಪೆಟ್ಟಾಗಿತ್ತು.
ಆ ದಿನ ದಂಪತಿಗಳಿಬ್ಬರೂ ದವಾಖಾನೆಗೆ ಹೋದಾಗ ಹೊರರೋಗಿಗಳ ವಿಭಾಗದ ವೈದ್ಯರು ಅವರಿಬ್ಬರಿಗೂ ಲೈಂಗಿಕ ತಜ್ಞರನ್ನು ಕಾಣಲು ಬರೆದು ಕೊಟ್ಟು ತಿಳಿಸಿದರು. ಆರೋಗ್ಯ ಕೇಂದ್ರದಲ್ಲಿಯೇ ಇರುವ ಆ ತಜ್ಞರನ್ನು ಕಂಡಾಗಲೂ ನಾಗರಾಜ ನಿರುಮ್ಮಳವಾಗಿಯೇ ಇದ್ದ. ದೀಪಿಕಾಳ ಧೈರ್ಯ ಮಾತ್ರ ಒಳಗೇ ಸೋರಿ ಹೋಗತೊಡಗಿತ್ತು. ತಮಗೆ ವೈದ್ಯಕೀಯ ಪರೀಕ್ಷೆಗಳು ಕೆಟ್ಟದ್ದನ್ನೇ ಹೇಳಲಿವೆ ಎಂದು ಅವಳ ಒಳಮನಸ್ಸು ಹೇಳತೊಡಗಿತ್ತು. ಲೈಂಗಿಕ ತಜ್ಞರು ಕೂಡ ವಿವರವಾಗಿ ಸಮಾಲೋಚಿಸಿ, ಎಲೈಸಾ ಟೆಸ್ಟ್ ಮಾಡಿಸಲು ತಿಳಿಸಿದಾಗ, ದೀಪಿಕಾಳ ಬಲಗಣ್ಣಿನ ಕೆಳಗಡೆ ಪಟಪಟನೆ ಅದುರಿತು. ನಾಗರಾಜನಿಗೆ ಎಲೈಸಾ ಪರೀಕ್ಷೆಯಾಗಲಿ, ಮತ್ತೊಂದಾಗಲೀ ಏನೂ ಗೊತ್ತಿರುವುದಿಲ್ಲ. ಅವನಿಗೆ ಇದ್ದಂತಹ ಒಂದೇ ಒಂದು ಕೆಟ್ಟ ಚಟವೆಂದರೆ ಸಣ್ಣ ಪುಟ್ಟ ನೋವು, ನೆಗಡಿ, ಗಾಯಗಳಿಗೆಲ್ಲಾ ಸಿಕ್ಕ ಸಿಕ್ಕ ಡಾಕ್ಟರ ಹತ್ತಿರ ಇಂಜೆಕ್ಷನ್, ಔಷಧಿ ಪಡೆದುಕೊಳ್ಳುವುದು! ಅವನು ಬೆಳಿಗ್ಗೆ ಕುರಿಗಳೊಂದಿಗೆ ಅಡವಿ ಕಂಡರೆ, ಮರಳಿ ಬರುವುದು ದೀಪ ಹೊತ್ತಿದ ನಂತರವೆ. ಅಂತಹ ಕಾಯಕಯೋಗಿಗೆ ಇಂಜೆಕ್ಷನ್, ಅವನ ಪ್ರೀತಿಯ ಚೂಜಿ(ಸೂಜಿ) ಹೆಚ್‍ಐವಿಯನ್ನು ಬಳುವಳಿ ಕೊಟ್ಟಿತ್ತು. ಹೆಂಡತಿ ಎಂದರೆ ಸೌಭಾಗ್ಯದ ಗಣಿ ಎಂದು ಪ್ರೀತಿಸಿದ್ದ ನಾಗರಾಜ ತನಗರಿವಿಲ್ಲದೆ ಅವಳಿಗೆ ಹೆಚ್‍ಐವಿ ಕಾಣಿಕೆ ನೀಡಿದ್ದ! ಅದೃಷ್ಟವೊ ದುರಾದೃಷ್ಟವೊ ಅವನಿಗೆ ಹೆಚ್‍ಐವಿ, ಏಡ್ಸ್, ಎಲೈಸಾ, ಲೈಂಗಿಕ ರೋಗಗಳು ಅಂತ ಯಾವುದೇ ಪರಿಕಲ್ಪನೆಗಳು ಗೊತ್ತಿರಲಿಲ್ಲ. ಐದನೇ ತರಗತಿಯ ಅವನ ಔಪಚಾರಿಕ ಓದು ಸಹಿ ಮಾಡುವುದಕ್ಕಷ್ಟೇ ಸೀಮಿತವಾಗಿತ್ತು. ಹತ್ತನೇ ತರಗತಿಯಲ್ಲಿ ಪ್ರಥಮ ಸ್ಥಾನದೊಂದಿಗೆ ಉತ್ತೀರ್ಣಳಾಗಿದ್ದ, ಚುರುಕು ಬುದ್ಧಿ ಹೊಂದಿದ, ಸುಂದರಿ ದೀಪಿಕಾ ಹೆಂಡತಿಯಾಗಿ ಸಿಕ್ಕಿದ್ದು ಅವನಿಗೆ ಸ್ವರ್ಗವೇ ಸಿಕ್ಕಂತಾಗಿತ್ತು. ಪ್ರಾರಂಭದಿಂದ ಎಲ್ಲಾ ಕಾಗದ-ಪತ್ರಗಳ ವ್ಯವಹಾರವನ್ನು ಹೆಂಡತಿಗೇ ವಹಿಸಿಬಿಟ್ಟಿದ್ದನು. ದೀಪಿಕಾ ಮಾತ್ರ ಎಲ್ಲಾ ಹೊಣೆಗಳನ್ನು ಹಸನ್ಮುಖಳಾಗಿಯೇ ಸ್ವೀಕರಿಸಿದ್ದಳು. ಈಗ ಅವಳು ಎಲೈಸಾ ಟೆಸ್ಟ್ ರಿಪೆÇೀರ್ಟ್‍ಗಳನ್ನು ಸಹ ಒಂದು ರೀತಿಯ ಧೈರ್ಯದಿಂದಲೇ ಸ್ವೀಕರಿಸಲು ಸಿದ್ಧಳಾಗಿ ಕುಳಿತಿದ್ದಳು. ಎಷ್ಟೆ ಧೈರ್ಯ ತಂದುಕೊಂಡರೂ ಅವಳ ಅಂಗೈಗಳು ಬೆವರಿನಿಂದ ಒದ್ದೆಯಾಗಿದ್ದವು. ಅವಳಲ್ಲಿ ಭವಿಷತ್ತಿನ ಬಗ್ಗೆ ಅವ್ಯಕ್ತ ಭಯ ಸಂಚಯವಾಗತೊಡಗಿತ್ತು. ನಾಗರಾಜನು ಮಾತ್ರ ತಾವಿಬ್ಬರೂ ಯಾವ ಟೆಸ್ಟ್‍ಗೆ ಒಳಗಾಗುತ್ತಿರುವುದು, ಅದರ ಫಲಿತಾಂಶವೇನು ಮುಂತಾದ ಯಾವುದೇ ಪ್ರಶ್ನೆಗಳ ಗೋಜಿಗೆ ಹೋಗದೇ ‘ಚೆಕಪ್ ಅಷ್ಟಾ ಹೌದಿಲ್ಲ…’ ಅಂತ ನಿರುಮ್ಮಳವಾಗಿದ್ದು ಬಿಟ್ಟಿದ್ದ. ರಿಪೆÇೀಟ್ರ್ಸ್ ನೋಡಿದ ದೀಪಿಕಾ ಸಣ್ಣಗೆ ಕಂಪಿಸಿದ್ದಳು. ಮತ್ತೆ ಡಾಕ್ಟರಿಗೆ ಮುಖ ಕೂಡ ತೋರಿಸದೇ ಗಂಡನ ಕೈ ಹಿಡಿದುಕೊಂಡು ಬಸ್ ನಿಲ್ದಾಣದತ್ತ ಸಾಗಿದಳು. ‘ಚೈತನ್ ಮೆಡಿಕಲ್ಸ್’ ನಲ್ಲಿ ಜ್ವರ, ಮೈ ಕೈ ನೋವುಗಳಿಗೆಂದು ಹಿಂದೆ ಡಾಕ್ಟರು ಬರೆದುಕೊಟ್ಟಿದ್ದ ಕೆಲವು ಮಾತ್ರೆಗಳನ್ನು ತೆಗೆದುಕೊಂಡು ಕೈಚೀಲದೊಳಗೆ ಹಾಕಿಕೊಂಡಳು. ಬಸಿದು ಹೋಗುತ್ತಿರುವ ಮಧುರ ಭಾವನೆಗಳನ್ನು, ಸುಂದರ ಕನಸುಗಳನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಲು ಮನಸ್ಸನ್ನು ಅಣಿಗೊಳಿಸಿಕೊಳ್ಳಲು ತನ್ನೊಳಗೆ ಹೋರಾಟಕ್ಕೆ ಇಳಿದಿದ್ದಳು. ತಾವಿಬ್ಬರೂ ಕ್ಷಣ ಕ್ಷಣಕ್ಕೂ ಸಾವಿಗೆ ಸಮೀಪವಾಗುತ್ತಿರುವುದು, ಜೊತೆಗೆ ಎರಡು ಚಿಕ್ಕ ಹೆಣ್ಣು ಮಕ್ಕಳ ಭವಿಷತ್ತಿನ ಚಿಂತೆ, ಅವಳ ಹಣೆಯ ಮೇಲೆ ನೆರಿಗೆಗಟ್ಟಿತ್ತು. ಹೆಚ್‍ಐವಿ ಪೆÇಸಿಟಿವ್ ಅಂತ ತಿಳಿದ ಮೇಲೂ ತನ್ನ ನೋವನ್ನು ಲೆಕ್ಕಿಸದೇ ಸಮಾಜಕ್ಕಾಗಿ ಬಾಳಿ ಕಣ್ಮರೆಯಾಗಿರುವ ವೀಣಾ ಧರಿಯು ಅವಳಿಗೆ ನೆನಪಾದಳು. “ತನ್ನನ್ನೇ ನಂಬಿರುವ ಗಂಡ ಹಾಗೂ ಎರಡು ಮುದ್ದು ಮಕ್ಕಳಿಗಾಗಿಯಾದರೂ ತಾನು ಈ ಬದುಕಿನೊಂದಿಗೆ ಹೋರಾಟಕ್ಕಿಳಿಯಬೇಕು” ಎಂದು ಅವಳ ಒಳಮನಸ್ಸು ತೀರ್ಮಾನಿಸಿತ್ತು.
ಅವಳು ತಮ್ಮಿಬ್ಬರ ಕಾಯಿಲೆಯನ್ನು ಯಾರಿಗೇ ತಿಳಿಸಿದರೂ ತಾವು ಅವರಿಂದ ದೂರ ತಳ್ಳಲ್ಪಟ್ಟಂತೆಯೇ ಎಂದು ಯೋಚಿಸಿದಳು. ಆರೋಗ್ಯವನ್ನು ಸಾಧ್ಯವಾದಷ್ಟು ಸಮತೋಲನದಲ್ಲಿರಿಸಲು ಮತ್ತು ರೋಗ ನಿರೋಧಕಶಕ್ತಿಯನ್ನು ವೃದ್ಧಿಸಿಕೊಳ್ಳಲು ಏನೇನು ಮಾಡಬೇಕು ಎಂಬುದನ್ನು ಅವಳು ಗುರುತು ಹಾಕಿಕೊಂಡಳು. ತನ್ನ ಅಳು, ಕಣ್ಣೀರು ಈ ರಾತ್ರಿಯೇ ಕೊನೆಯಾಗಬೇಕು. ಅಳುತ್ತಾ ಕುಳಿತರೆ ಯಾವುದೇ ಉಪಯೋಗವಿಲ್ಲವೆಂದು ತನಗೆ ತಾನೇ ಸಮಾಧಾನ ಮಾಡಿಕೊಂಡರೂ ಅವಳ ಕಂಬನಿ ಮಾತ್ರ ಧಾರಾಕಾರವಾಗಿ ಇಳಿಯುತ್ತಲೇ ಇತ್ತು. ಅವಳು ರಾತ್ರಿ ಇಡೀ ಅಳುತ್ತಲೇ ಇದ್ದಳು. ಬೆಳಗಿನ ಜಾವ ಅವಳಿಗೆ ಸಣ್ಣಗೆ ನಿದ್ರೆ ಆವರಸಿತ್ತು.
ದೀಪಿಕಾ ಅಂದು ಬೆಳಿಗ್ಗೆ ಎಂದಿಗಿಂತ ಸ್ವಲ್ಪ ತಡವಾಗಿಯೇ ಎದ್ದಿದ್ದಳು. ಅವಳಿಗಿಂತಲೂ ಮೊದಲೇ ನಾಗರಾಜ ಮತ್ತು ಮಕ್ಕಳು ಎದ್ದು ತಂತಮ್ಮ ಕೆಲಸಗಳಲ್ಲಿ ತೊಡಗಿದ್ದರು. ನಾಗರಾಜನ ಸ್ವಭಾವವೇ ಅಂತಹದು. ಮೈಯಲ್ಲಿ ಸ್ವಸ್ಥವಿಲ್ಲದಿದ್ದರೂ ಸಣ್ಣಗೆ ಏನಾದರೊಂದು ಕೆಲಸ ಮಾಡುತ್ತಲೇ ಇರುತ್ತಾನೆ.
ಅವನು ಕುರಿಗಳನ್ನು ಹೊರಗೆ ಬಿಟ್ಟು, ಹಟ್ಟಿ ಗುಡಿಸಿ ಸ್ವಚ್ಛಗೊಳಿಸಿದ್ದನು. ಅಂಗಳದ ತುಂಬ ಕರ್ರಗಿನ, ಕರಿ-ಬಿಳಿ ಪಟ್ಟೆಯ ಆರೆಂಟು ಕುರಿ ಮರಿಗಳು ಕುಪ್ಪಳಿಸುತ್ತ ಚಿನ್ನಾಟ ಆಡುತ್ತಿದ್ದವು. ಒಳಗೆ ಮಕ್ಕಳಿಬ್ಬರೂ ಬೆಳಗಿನ ಅಭ್ಯಾಸ ಮುಗಿಸಿ, ಹಾಗೆ ಹೀಗೆ ಅಂತ ಕಲರವ ಎಬ್ಬಿಸಿದ್ದರು. ದೀಪಿಕಾ ಎಂದಿನಂತೆ ಮಕ್ಕಳ ಆಟದಲ್ಲಿ ಮಗುವಾಗಲು ಯತ್ನಿಸಿದಳು. “ಏನ್ರೆ ಅದು ಚೀರಾಟ, ಎಷ್ಟು ನಗ್ತೀರಲ್ಲ, ನಂಗೊಂಚೂರು ಹೇಳ್ಬರ್ರೇ..” ಅಂತ ಆಕೆ ಅಡಿಗೆ ಮನೆಯಿಂದಲೇ ಗೆಲುವಾಗಿ ನುಡಿದರೂ, ಧ್ವನಿ ಸಪ್ಪೆಯಾಗಿದೆ ಅಂತ ತನಗೇ ಅನ್ನಿಸಿತ್ತು. “ಇಲ್ಲ ಈ ಮನ್ಯಾಗ ಸಂತೋಷ ಯಾವಾಗ್ಲೂ ಇರ್ಬೇಕು. ನನ್ಮಕ್ಳು ಯಾವಾಗ್ಲೂ ನಕ್ಕೊಂತಾ ಇರ್ಬೇಕು. ನನ್ಧ್ವನಿ ಮೊದಲಿನಂತೆ ಗೆಲುವಾಗೇ ಇರ್ಬೇಕು…” ಎಂದು ತನ್ನಲ್ಲಿಯೇ ಮಾತಾದಳು ಆಕೆ.
ಅದೊಂದು ದಿನ ಗಂಡನೊಡನೆ ಮಾತಾಡುವಾಗ, ಸೂಕ್ತ ಸಮಯ ನೋಡಿಕೊಂಡು “ರಾಜು ನಾವು ಗದಗ್‍ನ್ಯಾಗ ಮನಿ ಮಾಡೂನಾ?” ಎಂದವಳ ಕಂಠದ ಸಿರಿ ಮಾಯವಾಗಿತ್ತು. “ಯಾಕ್ ದೀಪು, ಈ ಮನಿ, ಈ ಊರು, ಈ ಕುರಿ ಹಿಂಡು ಎಲ್ಲಾ ಬ್ಯಾಡಾತೇನು? ಯಾಕ್ ಹೀಗ್ ಕೇಳ್ತೀ ಅಂತ ನಂಗ ಗೊತ್ತಾಗ್ವಲ್ದು!” ಎಂದು ಅವನು ಸಪ್ಪೆಯಾಗಿದ್ದ. “ ಈ ಮನಿ, ಊರು, ಊರಿನ ಜನ, ಕುರಿ ಹಿಂಡು, ಹೊಲ-ಗಿಲ ಎಲ್ಲಾನೂ ಅಂದ್ರ ನಂಗ ಭಾಳ ಹೆಮ್ಮೆ ಅಂತ ನಿಂಗ ಗೊತ್ತೈತಿ. ನಮ್ಮೂರನ್ನ ಸಾಯೂತನಕ ನೆನಿತೀನಿ. ಆದರೆ ನಾವು ಗದಗ್‍ನ್ಯಾಗ ಮನಿ ಮಾಡೂನು ರಾಜು, ಬ್ಯಾಡ ಅನಬ್ಯಾಡ, ಮಕ್ಳು ಭಾಳ ಶ್ಯಾಣೇವು ಅದಾವು. ಈ ನಮ್ಮೂರಾಗ ಚೊಲೊ ಟ್ಯೂಷನ್ ಹೇಳಾರಿಲ್ಲ. ನಂಗ ಕನ್ನಡ ಬಿಟ್ರ ಬ್ಯಾರೆ ಸಬ್ಜೆಕ್ಟ್ ಹೇಳಾಕ ಬರೂದಿಲ್ಲ. ಗದಗ್‍ನ್ಯಾಗ ಮನಿ ಮಾಡಿ ಮಕ್ಕಳ್ನ ಓದ್ಸೂನು”.
“ಅಲ್ಲ ಹುಡುಗೀ, ನಮ್ಮೂರಾಗಿನ ಜಗ್ಗು(ಬಹಳ) ಹುಡುಗ್ಯಾರು ಗದಗಿನ ಸಾಲೀಗ್ ಹೊಕ್ಕಾರ. ಅವರ ಕೂಟ ಇವರೂ ಹೋಗ್ಲಾಳು. ಅದಕ್ಕಂತ ಮನಿ, ಬಿಟ್ಟು ಹೋದ್ರ ಮಂದಿ ನಕ್ಕಾರು. ಮತ್ತ ಈ ಕುರಿ ಹಿಂಡು ಯಾರ್ ಮೇಸ್ತಾರ? ಹೊಲ ಯಾರ್ ನೋಡ್ಕೊಂತಾರ”
“ರಾಜು ನನ್ನ ಮಾತ್ ಕೇಳು, ಹಟ ಮಾಡಬ್ಯಾಡ. ಕುರಿನೆಲ್ಲ ಮಾರಿ ಬಿಡೂನು. ಹೊಲಾನ ಯಾರಿಗಾರ ಕೋರ್ ಕೋಡೂನು, ಈ ಮನಿ ಬಾಡಿಗಿ ಕೊಡೂನು”
“ಅಲ್ಲಾ ನಿಂಗ್ಯಾಕ ಈ ಹಟ? ಕೋರ್ ಕೊಟ್ರ ಮೂರ್ಭಾಗ ಕದ್ದು ಮುಚ್ಚಿ ತಾವ ತಿಂದು, ಇನ್ನೊಂದು ಭಾಗದಾಗ ಸಮಪಾಲು ಮಾಡ್ತಾರ. ನಮಗೇನ್ ದಕ್ಕುತ್ತ ಹೇಳು? ಮತ್ತೆ ಕುರಿ ಮಾರಿದರ ನಾನು ಹ್ಯಾಂಗ ದಿನ ಕಳೀಬೇಕು? ಅನಗಾಲನಾ ಕುರಿ ಕೂಡ ಬದುಕೀನಿ. ಪ್ಯಾಟಿ ಮನ್ಯಾಗ ಹೋಗಿ ಕುಂತೇನ್ಮಾಡ್ಲಿ ನೀನಾ ಹೇಳು? “
“ರಾಜು ನೀನು ಹೊರಗ್ಹೋಗಿ ದುಡಿಯಾದೇನೂ ಬ್ಯಾಡ. ನಾನು ರಾಟಿ ಹೊಲಿತೀನಿ. ದಿನಾಲೂ ಬಂದಷ್ಟ್ ಅರಬಿ ಹೊಲದರ ನಮ್ಮ ಖರ್ಚು ನಡ್ದು ಹೋಗುತ್ತ. ನನ್ನ ಹೊಲಿಗಿ ಕೆಲಸಕ್ಕ ನೀನಾ ಸಹಾಯ ಮಾಡುವಂತೆ… ಅದೂನೂ ಕೆಲಸ ಅಲ್ಲೇನು?”
“ಅಲ್ಲಾ ನಂಗ ದಿನಾಲು ಕುರಿ ಹಿಂದ ಓಡಾಡಿ ಮೈ ಮೆತ್ತಗಾಗುವಂತಾಗ್ ದಣವಾದ್ರನಾ ನಿದ್ದಿ ಬರುತ್ತಂತ ನಿಂಗೂ ಗೊತ್ತೈತಿ. ಆ ಪ್ಯಾಟಿ ಮನ್ಯಾಗ ತಿಂದು ತಿಂದು ಸುಮ್ಕ ಕುಂತ್ರ ಭೇಷ್ ಅನ್ಸೂದಿಲ್ಲ ಬಿಡು. ಉಂಡಿದ್ದರಾ ಕರಗಬೇಕಾ ಬ್ಯಾಡ?”
“ಏಯ್ ಕತ್ತೆ ಅದಕ್ಕ ನೋಡ್ ನಿನಗ ಬೆಪ್ಪ ಅಂತೀನಿ. ಉಂಡಿದ್ದು ಕರಗಾಕ ವ್ಯಾಯಾಮ ಮಾಡಿಸ್ತೀನಾಳು. ಆ ಚಿಂತಿ ಬಿಡು. ನನ್ನ ಮಾತು ಸುಮ್ಕ ಅಂತ ಗಾಳಿಗೆ ತೂರ್ಬ್ಯಾಡ. ನಿಂಗ ಕೈ ಮುಗೀತೀನಿ. ನನ್ನ ಅರ್ಥ ಮಾಡ್ಕೊ. ನಮ್ಮ ಮಕ್ಳು ಆರ್ಡಿನರಿ ಹುಡುಗ್ಯಾರಲ್ಲ. ಅವರ ಶ್ಯಾಣ್ಯಾತನಕ್ಕ ಇನ್ನೂ ಹೆಚ್ಚಿನ ದಾರಿ ತೋರ್ಸೂನು…” ಅವಳ ಕಂಗಳಿಂದ ಧಾರಾಕಾರವಾಗಿ ಕಂಬನಿ ಹರಿಯತೊಡಗಿತು. ಮುಂದಿನ ಮಾತುಗಳು ಹೊರಬರದೆ ಗದ್ಗದಿತಳಾದಳು. ನಾಗರಾಜನಿಗೆ ಹೆಂಡತಿಯ ದುಃಖ, ರೋದನದಿಂದ ಕರುಳು ಚುರುಕ್ ಎಂದಿತು. ತನಗಾದರೂ ಹೆಂಡತಿ, ಮಕ್ಕಳನ್ನು ಬಿಟ್ಟರೆ ಮತ್ತೊಂದು ಹತ್ತಿರದ ಜೀವ ಎಂಬುದಿಲ್ಲ. ತಾಯಿಯ ಹೊಟ್ಟೆಯಲ್ಲಿರುವಾಗಲೇ ತಂದೆಯನ್ನೂ, ಹುಟ್ಟಿದ ಏಳು ದಿನಗಳಲ್ಲಿಯೇ ತಾಯಿಯನ್ನೂ ಕಳೆದುಕೊಂಡು, ಅನಾಥನಾದವನು. ಕಂಡವರ ಕೈ ತುತ್ತು ತಿಂದು ಬೆಳೆದವನು. ಸಮಯ ಸರಿ ಇಲ್ಲದಿದ್ದಾಗ, “ಪಾಪಗೇಡಿ ಬಾಡ್ಯಾ, ಹುಟ್ಟನಾ ತಂದೀ ತಾಯೀ ನುಂಗಿ ನೀರ್ಕುಡಿದೀ…” ಎಂಬಂತಹ ಕೆಲವರ ಚುಚ್ಚು ನುಡಿಗಳನ್ನು ತಾಳಿಕೊಳ್ಳಲಾಗದೆ ಎಷ್ಟೊ ಸಲ ಅಳುವುದಕ್ಕೆಂದೇ ನಿರ್ಜನ ಜಾಗವನ್ನು ಹುಡುಕಿಕೊಂಡು ಹೋಗಿ ಅಳುತ್ತಿದ್ದುದನ್ನು ನೆನಪಿಸಿಕೊಂಡನು.
ಅವನು ಮೌನವಾಗಿ ಕುಳಿತೇ ಇದ್ದುದನ್ನು ಗಮನಿಸಿದ ದೀಪಿಕಾ “ಏನಂತೀ ರಾಜು, ಇಲ್ಲ ಅನಬ್ಯಾಡ ದೇವ್ರ…” ಅವಳು ಅವನ ಎದೆಯಲ್ಲಿ ಮುಖ ಹುದುಗಿಸಿದಳು. ಅವಳ ಕಣ್ಣೀರು ಅವನೆದೆಯ ರೂಮದಲ್ಲಿ ಹನಿಹನಿಯಾಗಿ ಜಾರತೊಡಗಿತು. ಅವನ ಕರುಳು ಚುರುಕ್ಕೆಂದಿತು. “ಅಳಬ್ಯಾಡಪಾ, ಯೋಚ್ನೇ ಮಾಡೂನಾಳು… ಅವ್ವಾರು ಬರೂ ಹೊತ್ತಾತು. ಮಾರಿ ತೊಳ್ಕೊಹೋಗು” ಪತ್ನಿಯನ್ನು ಎಚ್ಚರಿಸಿದನು. “ಬ್ಯಾಡನ್ಬಾರ್ದಾ ಮತ್ತೆ…” ಎಂದು ಅವಳು ಮಗುವಿನಂತೆ ಮತ್ತೆ ಕೇಳಿದಳು. “ಆಯ್ತಪಾ…” ಎಂದು ನಾಗರಾಜ ಆಕೆಯ ಮುಂದೆಲೆ ನೇವರಿಸಿ, ಮುತ್ತಿಕ್ಕಿದ. ಅವಳು ಖುಷಿಯಿಂದ ಅಡುಗೆ ಮನೆಗೆ ಹೋದಳು. ಮಕ್ಕಳು ತಮ್ಮ ಕಲರವದೊಂದಿಗೆ ಒಳಬಂದರು. ಅವರಿಬ್ಬರೂ ತಂದೆಯ ಮುದ್ದಿನ “ಅವ್ವಾರು” ಆಗಿದ್ದರು.
ದೀಪಿಕಾ ಗಂಡ-ಮಕ್ಕಳೊಂದಿಗೆ ಗದಗನಲ್ಲಿ ಜೀವನ ಹೂಡಿದಾಗ ಗಂಡಸರು, ಹೆಂಗಸರು ಮಾತಾಡಿದ್ದೇ ಮಾತಾಡಿದ್ದು. ಏನಾದರೂ ಹೊಸ ವಿಷಯ ಮಾತಾಡುವುದಕ್ಕೆ ಸಿಗಬಹುದು ಎಂದು ದಿನವೂ ನಿರೀಕ್ಷಿಸುವ ಸ್ವಭಾವದ ಜನರಿಗೆ ದೀಪಿಕಾಳ ಕುಟುಂಬ ಸುಳಿವು ನೀಡದೆ ಒಮ್ಮೆಲೆ ಗದಗ್ ಸೇರಿದ್ದೇ ಒಂದು ಘನ ವಿಷಯವಾಗಿ ಬಿಟ್ಟಿತು. ವಿಷಯ ದೀಪಿಕಾಳ ತವರಿಗೆ ತಲುಪಿದಾಗ,ಆಕೆಯ ಹೆತ್ತವರಾದ ದೇವಕ್ಕ-ಗಂಗಪ್ಪ ಹೌಹಾರಿ, ಕಾಲಿಗೆ ಚಪ್ಪಲಿಯನ್ನೂ ಮೆಟ್ಟದೆ ಮಗಳಿರುವಲ್ಲಿಗೆ ಧಾವಿಸಿದ್ದರು. ಯಾರು ಏನೇ ಆಕ್ಷೇಪಿಸಿದರೂ, ಕೇಳಿದರೂ, “ನನ್ನ ಮಕ್ಕಳು ಚಂದಗ ಓದ್ಬೇಕು. ಅದಕ ನಾವು ಈ ನಿರ್ಧಾರ ತಗೊಂಡೀವಿ. ನಾವು ಮಾಡಿದರಾಗೇನ್ ತಪ್ಪೈತಿ, ಯಾರಿಗಾರ ಮೋಸ ಮಾಡಿವೇನು” ಎಂಬುದು ದೀಪಿಕಾಳ ಮರುಪ್ರಶ್ನೆಯಾಗಿತ್ತು.
“ಮೋಸದ ಮಾತಲ್ಲಬೇ, ಹಿಂಗ ಏಕಾಏಕಿ ದಡಗ್ಗನಾ ಎದ್ದು ಬಂದ್ರ ಮಾತು ಹೆಂಗ್ಹೆಂಗ ಹುಟ್ತಾವಂತ ಯೋಚ್ನೆ ಮಾಡಂತೀನಿ” ಗಂಗಪ್ಪ ಮಗಳಿಗೆ ಸಮಾಧಾನದಿಂದ ಹೇಳಿದ. “ಅಲ್ಲಪಾ, ಮತ್ತೇನ್ ಡಂಗ್ರಾ ಹಾಕಿಸ್ಬೇಕಾಗಿತ್ತೇನು? ನಾವು ಗಂಡ-ಹೆಣ್ತಿ ಇಬ್ರೂ ನಮಗ ಹೆಂಗ ಸರಿ ಅನ್ನಿಸ್ತೊ ಹಂಗ ಮಾಡೀವಿ”
“ಅಲ್ಲಬೇ ನಮಗಾರ ಒಂದು ಮಾತು ಹೇಳಿಲ್ಲ ನೋಡು ನೀನು. ಮನಸ್ಸಿಗೆ ಹೆಂಗಾಗ್ಬ್ಯಾಡ ಹೇಳು…”ಎಂದು ದೇವಕ್ಕ ಸೆರಗಿನಿಂದ ಕಣ್ಣೊರೆಸಿಕೊಂಡಳು.
“ಯಾಕ್ ಅಳ್ತೀಬೆ ಯವ್ವ? ನಿಮಗ ಹೇಳಿದ್ರ ನೀವು ಇಲ್ಲದ್ದು ಹದ್ನಾರು ಹಾಡು ಹಾಡ್ತೀರಂತ ನಿಮಗ ಹೇಳಿಲ್ಲವ್ವಾ. ನಿಮಗ ನೂವಾಗುತ್ತಂತ ಗೊತ್ತಿತ್ತು. ಏನ್ಮಾಡ್ಲಿ? ಪರಿಸ್ಥಿತಿ!” ಎಂದು ಅಸಹಾಕಳಾಗಿ ಕುಳಿತಳು ದೀಪಿಕಾ.
“ಹೋಗ್ಲಿ ಬಿಡ್ರಿ. ಆಕಿ ತಪ್ಪು ಮಾಡೂದುಲ್ಲಂತ ನಂಗ ನಂಬಿಕೈತಿ. ನೀವ್ಯಾಕ ಮಂದಿ ಮಾತ್ಗೆ ತಲಿ ಕೆಡಿಸ್ಕೊಂತೀರಿ? ಏನೂ ಚಿಂತಿ ಮಾಡಾಕ ಹೋಗ್ಬ್ಯಾಡ್ರಿ…” ಎಂದು ತನ್ನದೇ ಧಾಟಿಯಲ್ಲಿ ವಿನಮ್ರವಾಗಿ ಹೇಳಿದ್ದ ನಾಗರಾಜ. ದೀಪಿಕಾಳ ತಾಯಿ-ತಂದೆ ತಮ್ಮ ದುಗುಡ-ದುಮ್ಮಾನವನ್ನು ಹತ್ತಿಕ್ಕಿಕೊಂಡು, ನಾಲ್ಕು ದಿವಸ ಮಗಳೊಂದಿಗಿದ್ದು, ಧೈರ್ಯ, ಸಾಂತ್ವನ, ತಿಳುವಳಿಕೆಯ ಮಾತು ಹೇಳಿ ತಿಮ್ಮಾಪುರಕ್ಕೆ ತೆರಳಿದರು.
ಜೂನ್ ತಿಂಗಳು ಹತ್ತಿರವಾಗುತ್ತಿದ್ದಂತೆಯೇ ಮಕ್ಕಳಿಬ್ಬರೂ ಶಾಲೆಗೆ ಹೋಗಲು ತಯಾರಿ ನಡೆಸತೊಡಗಿದರು. ವಿದ್ಯಾದಾನ ಸಮಿತಿ ಶಾಲೆಯಲ್ಲಿ ಇಬ್ಬರಿಗೂ ಪ್ರವೇಶ ಸಿಕ್ಕಿತ್ತು. ಎಸ್‍ಎಸ್‍ಎಲ್‍ಸಿಯ ಬಗ್ಗೆ ಹೊಂಗನಸನ್ನು ಕಟ್ಟಿಕೊಂಡಿದ್ದ ವೈಷ್ಣವಿ ಮಾನಸಿಕವಾಗಿ ಜರ್ಜರಿತವಾಗಿ ಬಿಟ್ಟಿದ್ದಳು. ಮೇಲ್ನೋಟಕ್ಕೆ ಶಾಲೆಗೆ ಹೋಗಲು ತಯಾರಿ ನಡೆಸಿದ್ದರೂ ಹೊಸ ಜಾಗ, ಹೊಸ ಶಾಲೆಗೆ ಹೊಂದಿಕೊಳ್ಳಬೇಕಾದರೆ ಒತ್ತಡಕ್ಕೆ ಸಿಲುಕಿದ್ದಳು. ಭೈರವಿಯೊಂದಿಗೆ ಆಟಕ್ಕೆ ತೊಡಗುತ್ತಿದ್ದರೂ, ಮೊದಲಿನಂತೆ ಆಟದಲ್ಲಿ ಕೇಕೆ ಹಾಕಿ ಕುಣಿದಾಡಲು ಸಾಧ್ಯವಾಗುತ್ತಿರಲಿಲ್ಲ. ಹಾಗಾದಾಗೆಲ್ಲ “ಅವ್ವಗ ಏನರ ಸಹಾಯ ಮಾಡ್ಬೇಕು” ಅಂತ ಅಡಿಗೆ ಮನೆಗೆ ಧಾವಿಸುತ್ತಿದ್ದಳು. ಅವಳು ತಾಯಿಗೆ ನೆರವಾಗಬೇಕೆಂದು ಕೆಲಸದಲ್ಲಿ ತೊಡಗಿದರೂ, ಮನಸು ಅದರಲ್ಲಿತೊಡಗುತ್ತಲೇ ಇರಲಿಲ್ಲ. ಅದು ಬಿಸಿಲು ಕುದುರೆಯನ್ನೇರಿ ತನ್ನ ಹಳ್ಳಿ ಲಕ್ಕುಂಡಿಗೆ ನೆಗೆಯುತ್ತಿತ್ತು. ಅಲ್ಲಿ ಗೆಳತಿ ಅನುಪಮಳೊಂದಿಗೆ ಹಜರತ್ ಜಂದಿಪೀರ್ ದರ್ಗಾದ ಪಯಣಗಳು, ಜೈನ ಬಸದಿ, ಕರಿದೇವರ ಗುಡಿ, ಮುಸುಕಿನಬಾವಿ, ಗದಗ್ ರಸ್ತೆಯ ಹೊಲಗಳಲ್ಲಿ ತಿರುಗಾಟ, ಮತ್ತೆ ತನ್ನ ತರಗತಿಯ ಜಾಣ ಹುಡುಗ, ಆಕರ್ಷಕ ಕಣ್ಣಿನ ಸಹಪಾಠಿ ಶಶಿಧರ, ಅವನ ಮೌನ ನೋಟ, ಹೊಂಬಳ ಗುರುಗಳ ಕನ್ನಡ ಪಾಠ ವಿವರಣೆ, ವ್ಯಾಕರಣ ತರಗತಿ, ಅವರು ಪದ್ಯಗಳನ್ನೂ ಕಲಿಸುವ ಶೈಲಿ, ಅವರ ಹಾಸ್ಯದ ಧಾಟಿ, ಬೆಂತೂರು ಗುರುಗಳ ವಿದ್ಯಾರ್ಥಿಗಳ ಹಿತಚಿಂತನೆಯ ವೈಖರಿ, ಅವರ ಶಿಸ್ತು, ಶ್ರದ್ಧೆ, ಪ್ರಾಮಾಣಿಕತೆ… ಒಂದೇ ಎರಡೇ… ಈ ಎಲ್ಲ ಸಂಗತಿಗಳಿಂದ ಅವಳು ಮಾನಸಿಕವಾಗಿ ಲಕ್ಕುಂಡಿಗೆ ಓಡಿ ಹೋಗಿ ಬಿಡುತ್ತಿದ್ದಳು. ಆದರೆ ಅಲ್ಲಿ ಜಾಸ್ತಿ ಹೊತ್ತು ಇರಲಾಗದೆ ಮತ್ತೆ ತನ್ನ ಹೊಸ ಗೂಡಿಗೆ ಹಿಂತಿರುಗುತ್ತಿದ್ದಳು. ತನ್ನ ತಾಯಿ-ತಂದೆ ಯಾವುದೋ ಒಂದು ಕಷ್ಟಕ್ಕೆ ಈಡಾಗಿರುವುದು ನಿಜವೆಂದೇ ಅವಳ ಅಂತರಂಗ ಹೇಳುತ್ತಿತ್ತು. “ತಾಯಿ-ತಂದೆಗೆ ಯಾವುದೇ ನೋವಾಗದಿರಲಿ ಪರಮಾತ್ಮ” ಎಂದು ಆ ಎಳೆಯ ಹೃದಯ ರೋಧಿಸುತ್ತ ಪ್ರಾರ್ಥಿಸುತ್ತಿದ್ದುದುಂಟು.
*****
ಸಾವಿತ್ರಿಯವರೆ ತುಂಬಾ ಚೆನ್ನಾಗಿ ಬರಿತೀರಿ