ನಾಗರಾಜ ಗದಗ್‍ಗೆ ಸ್ಥಳಾಂತರವಾದ ಮೇಲೆ ಮೊದಲ ದಿನಗಳಲ್ಲಿ ಮಂಕು ಬಡಿದವನಂತೆ ಕುಳಿತಿರುತ್ತಿದ್ದ. ಕ್ರಮೇಣ ಅವನು ಗೆಲುವಾಗತೊಡಗಿದ. ಮಕ್ಕಳೊಂದಿಗೆ ಬ್ಯಾಂಕ್ ರೋಡ್‍ನಲ್ಲಿರುವ ವಾಸು ಸ್ಟೋರ್‍ನಿಂದ ದೀಪಿಕಾಳಿಗೆ ಬೇಕಾಗುವ ಹೊಲಿಗೆ ಪರಿಕರಗಳನ್ನು ತರುವುದು, ಮಾರ್ಕೆಟ್‍ನಿಂದ ತರಕಾರಿ ತರುವುದು, ಸಾಯಂಕಾಲ ಹೆಂಡತಿ-ಮಕ್ಕಳೊಂದಿಗೆ ಪಂಚಾಕ್ಷರಿ ಗವಾಯಿಗಳ ಮಠಕ್ಕೆ ಹೋಗಿ ಅಜ್ಜನವರ ದರ್ಶನ ಪಡೆಯುವುದು… ಹೀಗೆ ಹೊಸ ದಿನಚರಿಯೊಂದಿಗೆ ಅವನು ಹೊಂದಾಣಿಕೆಯನ್ನು ಸಾಧಿಸತೊಡಗಿದ್ದ.
ದೀಪಿಕಾಳ ಹೊಲಿಗೆ ವಿದ್ಯೆ ತನ್ನ ನಿಜವಾದ ವಿಸ್ತಾರವನ್ನು ವ್ಯಕ್ತಪಡಿಸುವ ಕಾಲ ಅದಾಗಿತ್ತು. ಆಕೆ ಮನೆಯ ಹತ್ತಿರದಲ್ಲೇ ಇರುವ ಪಠೇಲ್ ರೋಡ್‍ನಲ್ಲಿ, ‘ವೈಷ್ಣವಿ ಮತ್ತು ಭೈರವಿ-ಲೇಡೀಸ್ ಟೈಲರ್’ ಎಂಬ ಬೋರ್ಡಿನಿಂದ ಹೊಲಿಗೆ ಕೆಲಸವನ್ನು ಶುರುಮಾಡಿಯೇ ಬಿಟ್ಟಿದ್ದಳು. ಅಚ್ಚುಕಟ್ಟಾಗಿದ್ದ ಆ ಸಣ್ಣ ಅಂಗಡಿಗೆ ಆ ರೀತಿ ಹೆಸರು ವಿಶಿಷ್ಟ ಆಕರ್ಷಣೆಯಾಗಿತ್ತು. ಬೋರ್ಡಿನ ಮೇಲೆ ದಪ್ಪಕ್ಷರದಲ್ಲಿ ‘ವೈಷ್ಣವಿ ಮತ್ತು ಭೈರವಿ’ ಅಂತ ಬರೆಸಿದ್ದಳು. ಕೆಳಗೆ ಸಣ್ಣ ಅಕ್ಷರದಲ್ಲಿ ಲೇಡೀಸ್ ಟೈಲರ್ ಎಂದು ಬರೆಯಲಾಗಿತ್ತು.
ಆ ದಿನ ಮದ್ಯಾಹ್ನ ಸಂತೆಗೆ ಹೋಗಿದ್ದ ನಾಗರಾಜನು ಸಾಯಂಕಾಲವಾದರೂ ಹಿಂತಿರುಗಿ ಬಂದಿರಲಿಲ್ಲ. ಶಾಲೆಯಿಂದ ಬಂದ ಮಕ್ಕಳಿಗೆ ಅವಲಕ್ಕಿ ಮೊಸರು ಹಾಕಿ ತಿನ್ನಲು ಕೊಟ್ಟಳು. ಕೈಕಾಲು ಮುಖವನ್ನು ತೊಳೆದುಕೊಂಡು ದೇವರ ಜಗಲಿಯಲ್ಲಿ ದೀಪವನ್ನು ಹಚ್ಚಿದಳು. ಅವಳ ನಿತ್ಯದ ಪ್ರಾರ್ಥನೆಗೆ ಭೈರವಿಯ ಗದ್ದಲದಿಂದ ಸ್ವಲ್ಪ ತೊಂದರೆಯಾಯಿತು. ಪತಿಯು ಬಂದುದು ಮಗಳ ಕೇಕೆಯಿಂದಲೇ ಗೊತ್ತಾಯಿತು. ಪ್ರಾರ್ಥನೆಯನ್ನು ಅಲ್ಲಿಗೇ ನಿಲ್ಲಿಸಿ, ಕೈ ಮುಗಿದು ಹೊರಬಂದಳು. ಅಷ್ಟೊತ್ತಿಗೆ ಒಳಬಂದ ನಾಗರಾಜನಿಗೂ ತಿನಿಸನ್ನು ಹಾಕಿ ಕೊಟ್ಟಳು. ಅವಲಕ್ಕಿಯ ಮೇಲೆ ಕರಿದ ಸೇಂಗಾ ಕಾಳುಗಳನ್ನು ಹಾಕಿದಳು. ಎಲ್ಲರೂ ಬಾಯಿ ಚಪ್ಪರಿಸುತ್ತಾ ತಿನ್ನತೊಡಗಿದರು. ಗಂಡ -ಮಕ್ಕಳ ತಾಟಿನಲ್ಲಿಯೇ ದೀಪಿಕಾ ತುತ್ತು ತುತ್ತೇ ಎತ್ತಿಕೊಂಡು ಸಾಯಂಕಾಲದ ತಿನಿಸನ್ನು ಪೂರೈಸಿಕೊಂಡಳು.
ಮಕ್ಕಳು ಎಂದಿನಂತೆ ಟ್ಯೂಶನ್‍ಗೆ ಹೋದರು. ದೀಪಿಕಾ ನಾಗರಾಜ ದಿನದ ಎಲ್ಲಾ ಕೆಲಸಗಳೂ ಮುಗಿದ ಮೇಲೆ ಸಾಯಂಕಾಲ ಆರರಿಂದ ರಾತ್ರಿ ಎಂಟು ಗಂಟೆಯವರೆಗೆ ತಮ್ಮ ಮಾತು, ಅಭಿಪ್ರಾಯ, ಸಂತೋಷಗಳನ್ನು ಹಂಚಿಕೊಳ್ಳುವರು. “ಏನಿವತ್ತ ಸಾವ್ಕಾರು ಸಂತ್ಯಾಗೇನು ಮಾಡಿದಿರಿ?” ದೀಪಿಕಾ ಗಂಡನ ತಲೆಗೂದಲಿನಲ್ಲಿ ಬೆರಳಾಡಿಸುತ್ತ ಅಕ್ಕರೆಯಿಂದ ಕೇಳಿದಳು. “ಹೂ, ಅದನಾ ಹೇಳ್ತೀನಿ ತಡೀ. ನೀನು ಬ್ಯಾಡ ಅನ್ನಬಾರ್ದಾ ಮತ್ತ. ನಾನೊಂದು ಇಚಾರ ಮಾಡೀನಿ” ಎಂದು ಪತ್ನಿಯ ಮುಖವನ್ನು ನೋಡಿದನು. ಅವನ ಕಣ್ಣುಗಳಲ್ಲಿ ಲವಲವಿಕೆ ತುಂಬಿತ್ತು. ಉತ್ಸಾಹದ ಬುಗ್ಗೆಯಂತೆ ಕಾಣತೊಡಗಿದ್ದ. ನಿಧಾನವಾಗಿ ತನ್ನ ಗಂಡ ನಗರದ ಜೀವನಕ್ಕೆ ಹೊಂದಿಕೊಳ್ಳುತ್ತಿದ್ದಾನೆಂದುಕೊಂಡಳು. ಏನು ಯೋಚನೆ ಮಾಡಿದೆ ಎಂಬಂತೆ ಆತನ ಗಲ್ಲವನ್ನು ಮೃದುವಾಗಿ ಹಿಂಡಿ ಕಂಗಳಲ್ಲೇ ಪ್ರಶ್ನಿಸಿದಳು. “ನಾನೂ… ನಾನು ಒಂದು ಅಂಗಡಿ ಮಾಡ್ಬೇಕಂತ ಯೋಚ್ಸೀನಿ” “ಯಾವ್ದು, ಎಂಥಾ ಅಂಗಡಿ?”
“ಸಣ್ಣದು ಒಂದು ಡಬ್ಬಿ ಅಂಗಡಿ ಮಾಡೂನು” “ ಇಲ್ಲೇನು ಸಾಕಷ್ಟು ಜಾಗ ಐತಿ ಬಿಡು. ನೀನು ನಡಿಸ್ಕೊಂಡು ಹೊಕ್ಕಿನಂದ್ರ ನಂದೇನೂ ತಕರಾರಿಲ್ಲ”. “ಆಚೆಕಡೆ ನೆಹ್ರೂ ಕ್ರಾಸ್‍ನ್ಯಾಗದಾರಲ್ಲ ಶಿವಣ್ಣ, ಅವರ್ದೊಂದು ಕಟ್ಟಿಗಿ ಡಬ್ಬಿ ಐತಿ. ಇಂತಿಷ್ಟು ಅಂತ ಬಾಡಿಗೀನ ಶಿವಣ್ಣಾರ ಕೈಗೆ ಕೊಟ್ರ ಮುಗೀತು” ಎಂದು “ನಿಂಗೇನ್ ಅನ್ಸುತ್ತಾ” ಎಂದನು. ದೀಪಿಕಾ, “ಮಾಡಿದರೆ ಚೊಲೊ ಆಗುತ್ತಾಳು, ಮಾಡುವಂತೆ” ಎಂದಳು. ಅಂತೂ ನಾಗರಾಜ ನಗರದ ಜೀವನವನ್ನು ಸಹನೀಯವಾಗಿಸಿಕೊಳ್ಳಲು ದುಡಿಮೆಯೊಂದನ್ನು ಶುರುಮಾಡಲು ಪ್ರಯತ್ನಿಸುತ್ತಿದ್ದುದನ್ನು ಕಂಡು ದೀಪಿಕಾಳಿಗೆ ಬಹಳ ಖುಷಿಯಾಯಿತು.
ನಾಗರಾಜ ತನ್ನ ಯೋಚನೆಯಂತೆ ಆ ಸಣ್ಣ ಗೂಡಂಗಡಿಯ ವ್ಯಾಪಾರವನ್ನು ಬಹಳ ಉತ್ಸಾಹದಿಂದಲೇ ಆರಂಭಿಸಿದನು. ಅವನು ನಾಲ್ಕಾರು ತಿಂಗಳಲ್ಲಿ ಮಾತು, ವ್ಯವಹಾರಗಳಲ್ಲಿ ಬಹಳಷ್ಟು ಸುಧಾರಿಸಿದ್ದನು. ಜೊತೆಗೆ ದೀಪಿಕಾಳ ಶಿಸ್ತು, ಆರೋಗ್ಯ ಸಂಬಂಧದ ಕಾಳಜಿ, ಪೋಷಣೆಯಲ್ಲಿ ನಾಗರಾಜನ ಆರೋಗ್ಯ ಸ್ಥಿಮಿತದಲ್ಲಿ ಇತ್ತೆಂದೇ ಹೇಳಬೇಕು. ಆಕೆ ಮಕ್ಕಳ ಭವಿಷ್ಯತ್ತಿನ ಸಲುವಾಗಿ ಎಷ್ಟು ಶ್ರಮಪಡುತ್ತಿದ್ದಳೋ, ಅಷ್ಟೆ ತನ್ನ ಗಂಡನ ಹಾಗೂ ಸ್ವತಃ ತನ್ನ ಆರೋಗ್ಯದ ಕುರಿತು ಜಾಗ್ರತೆವಹಿಸಿದ್ದಳು. ಅಷ್ಟಾದರೂ ದೈಹಿಕ ವೇದನೆ ಅವರಿಬ್ಬರಿಗೂ ಒಂದಲ್ಲ ಒಂದು ರೀತಿಯಲ್ಲಿ ತೊಂದರೆ ಕೊಡುತ್ತಿತ್ತು. ನಾಗರಾಜನಿಗಂತೂ ಆ ರೋಗದ ಬಗ್ಗೆ ಅರಿವೇ ಇಲ್ಲ, ಅವನು ಹೆಂಡತಿ ತಪಾಸಣೆಗೆ ಕರೆದುಕೊಂಡು ಹೋದಾಗ ಹೋಗುವುದು, ಆಕೆ ಕೊಡುವ ಗುಳಿಗೆ-ಮಾತ್ರೆಗಳನ್ನು ನುಂಗುತ್ತಾ, ಔಷಧಿ ಒಂದು ದಿನಚರಿ ಎಂಬಂತೆ ಇದ್ದುಬಿಟ್ಟಿದ್ದ. ದೀಪಿಕಾ ನಿರ್ಧರಿಸಿಬಿಟ್ಟಿದ್ದಳು ಬದುಕಿನ ರಹಷ್ಯ ಮಕ್ಕಳ ನೆಪದಲ್ಲಿ ರಹಷ್ಯವಾಗಿಯೇ ಉಳಿಯಬೇಕು ಮತ್ತು ರಹಷ್ಯವಾಗಿಯೇ ಕೊನೆಗಾಣಬೇಕು ಎಂದು. ಹಾಗಂತಲೇ ಅವಳು ಇತ್ತೀಚೆಗೆ ತನ್ನ ಕರ್ತವ್ಯ, ತಮ್ಮೆಲ್ಲರ ಆಹಾರ-ಪೋಷಣೆಗೆ ಹೆಚ್ಚು ಗಮನ ಕೊಡುತ್ತಿದ್ದಳು. ಕೈಯಲ್ಲಿ ಸಂಪಾದನೆಯ ಹಣ ಸಂಗ್ರಹವಾಗುತ್ತಾ ನಡೆದಾಗ ಅವಳು ಮೊದಲಿಗಿಂತ ಸ್ವಲ್ಪ ದುಂಡಗೆ ಕಾಣತೊಡಗಿದ್ದಳು.
ನಾಗರಾಜನೂ ಸಹ ಮೊದಲಿಗಿಂತಲೂ ಲವಲವಿಕೆಯಿಂದ ಓಡಾಡಿಕೊಂಡಿದ್ದ. ಯಾರಾದರೂ ಲಕ್ಕುಂಡಿಯ ಸ್ನೇಹಿತರು, ಪರಿಚಯದವರು ಮಾರ್ಕೆಟ್‍ನಲ್ಲಿ ಸಿಕ್ಕಾಗ ಅವರು ನಾಗರಾಜ ಎಷ್ಟು ಪುಣ್ಯವಂತನಪ್ಪಾ ಎಂದು ಅನ್ನದೇ ಇರುತ್ತಿರಲಿಲ್ಲ. ಆಡಿಕೊಳ್ಳುತ್ತಿದ್ದವರೆಲ್ಲ ಬಾಯಿ ಮುಚ್ಚಿಕೊಂಡು, ದೀಪಿಕಾಳ ಪ್ರಗತಿಯನ್ನು ಕಂಡು ಒಳಗೊಳಗೆ ಕರುಬಿದ್ದೂ, ಹೊಟ್ಟೆಯಲ್ಲಿ ಕಿಚ್ಚು ಹಾಕಿಕೊಂಡಿದ್ದೂ ಖರೆ. ಆದರೆ ದೀಪಿಕಾ ಅದ್ಯಾವುದರ ಕಡೆಗೆ ಗಮನ ಕೊಡದೆ ಇಡೀ ದಿನವನ್ನು ಪ್ರಾರ್ಥನೆ ಎಂಬಂತೆ ತಲ್ಲೀನಳಾಗಿ ಕರ್ತವ್ಯಪರಳಾಗಿ ಕಳೆದುಬಿಡುತ್ತಿದ್ದಳು.
ನಾಗರಾಜನು ಹೆಂಡತಿಯ ದುಡಿಮೆಗೆ ನೆರವಾಗುತ್ತಲೆ ತನ್ನ ಡಬ್ಬಿ ಅಂಗಡಿಯನ್ನೂ ಪಸಂದಾಗೇ ನಡೆಸಿಕೊಂಡಿದ್ದನು. ಆತನು ಅಂಗಡಿಯಲ್ಲಿ ಸೋಪುಗಳು, ಶಾಂಪೂ, ಟೀಪುಡಿ, ಕುರುಕಲು ತಿನಿಸುಗಳು, ಬಾಳೇಹಣ್ಣುಗಳು, ಎಳೆನೀರು, ತಾಜಾ ತರಕಾರಿ, ಮತ್ತಿತರೆ ದಿನ ಬಳಕೆಯ ಎಲ್ಲ ಸಾಮಗ್ರಿಗಳನ್ನೂ ಮಾರುತ್ತಿದ್ದನು. ಇಡೀ ಓಣಿಯಲ್ಲಿ ತಾಜಾ ಕಾಯಿಪಲ್ಯಗಳು ಬೇಕಾದರೆ ನಾಗಣ್ಣನ ಅಂಗಡಿಗೆ ಓಡುವುದು ಜನರಿಗೆ ಸುಲಭವಾಗಿತ್ತು. ಹೀಗೆ ಅವನ ವ್ಯಾಪಾರ ದಿನದಿಂದ ಚೆನ್ನಾಗಿ ಸಾಗಿತ್ತು. ಆಗಲೇ ನಾಲ್ಕಾರು ಸ್ನೇಹಿತರನ್ನು ಸಂಪಾದಿಸಿದ್ದ ನಾಗರಾಜನು ತಾನು ಕಳೆದುಕೊಂಡಿದ್ದ ಕುರಿಗಳ ಪ್ರೀತಿಯನ್ನು ಜನರ ಮದ್ಯದಲ್ಲಿ ಕಾಣತೊಡಗಿದ್ದ. ಎಲ್ಲರನ್ನೂ ನಿಷ್ಕಲ್ಮಶವಾಗಿ ಆತ್ಮೀಯತೆಯಿಂದ ಮಾತನಾಡಿಸುತ್ತಿದ್ದ. ಅವನ ರೂಪು, ಸರಳತೆ, ಸೌಜನ್ಯ, ಸೇವಾ ಮನೋಭಾವದ ಪರಿಚಯವಾದಂತೆಲ್ಲ ಅವನ ಸ್ನೇಹಿತರ ಗುಂಪು ದೊಡ್ಡದಾಗತೊಡಗಿತು. ಬಲಗೈ ಕೊಟ್ಟಿದ್ದು ಎಡಗೈಗೆ ತಿಳಿಯಬಾರದು ಎಂಬಂತೆ ನಾಗರಾಜ ನಿರಾಡಂಬರವಾಗಿ ಪ್ರತಿದಿನವೂ ಯಾರಿಗೋ, ಏನಾದರೂ ಸಹಾಯ ಮಾಡಿರುತ್ತಿದ್ದ. ಆದರೆ ಸಹಾಯವನ್ನು ಪಡೆದಿರುತ್ತಿದ್ದ ಅನಾಥ ವೃದ್ಧೆಯರಾದ ಕಲ್ಲಮ್ಮ, ಹಂಸಮ್ಮನಂಥವರು, ರಾಮಣ್ಣನಂಥವರು ಎದುರಿಗೆ ಸಿಕ್ಕಾಗ ದೀಪಿಕಾಳ ಮುಂದೆ ಹೇಳಿ ನಾಗರಾಜನನ್ನು ಸ್ಮರಿಸುತ್ತಿದ್ದರು. ಇದರಿಂದ ದೀಪಿಕಾಳಿಗೆ ತನ್ನ ಪತಿಯು ಅನಕ್ಷರಸ್ಥನಾದರೂ ಆತನು ಮಾನವೀಯ ಕಾಳಜಿಯನ್ನು ಹೊಂದಿದ್ದಾನಲ್ಲ ಎಂದು ಬಹಳ ಖುಷಿಯಾಗಹತ್ತಿತು. ಅಷ್ಟೆಲ್ಲಾ ಕಾಳಜಿಯನ್ನು, ಮಾನವ ಪ್ರೀತಿಯನ್ನು ಆತ ಯಾವಾಗ ಕಲಿತನು? ಬಹುಶಃ ಕುರಿಗಳನ್ನು ಮೇಯಿಸುತ್ತಿಲೇ, ಅವುಗಳ ಹಿತಚಿಂತನೆ, ಪಾಲನೆ-ಪೋಷಣೆ ಮಾಡುತ್ತಲೇ ಅವನ ಅಂತರಾಳ ವಾತ್ಸಲ್ಯಮಯವಾಗಿಬಿಟ್ಟಿತ್ತೇನೋ ಎಂದುಕೊಂಡಾಗ ಅವಳ ಮೈಪುಳಕಗೊಂಡಿತು. ಕೆನ್ನೆ ಥರಗುಟ್ಟಿತು. “ಹೌದು, ಪ್ರಾಣಿ, ಪಕ್ಷಿ ಮತ್ತಿತರ ಜೀವಿಗಳನ್ನು ಸಹೃದಯದಿಂದ ಕಾಣುವ ವ್ಯಕ್ತಿ ತನ್ನ ಸಹಚರರನ್ನೂ ವಾತ್ಸಲ್ಯ, ಕಾಳಜಿಯಿಂದಲೇ ಕಾಣುತ್ತಾನೆ” ಎಂದುಕೊಂಡಳು.
ದೀಪಿಕಾ ಸಹ ಸಾಮಾಜಿಕ ಕಾಳಜಿಯ ಹೆಣ್ಣುಮಗಳು. ಆಕೆ ಎಷ್ಟೊ ಕೂಲಿ ಕಾರ್ಮಿಕರಿಗೆ, ಹೂವಾಡಗಿತ್ತಿ ಹೆಂಗಳೆಯರಿಗೆ, ಕಡಿಮೆ ದರದಲ್ಲಿ ರವಿಕೆ, ಲಂಗಗಳನ್ನು ಹೊಲಿದು ಕೊಡುತ್ತಿದ್ದಳು. ಬಡ ಮಕ್ಕಳ ಶಾಲಾ ಸಮವಸ್ತ್ರಗಳನ್ನು ತೀರ ರಿಯಾಯಿತಿ ದರದಲ್ಲಿ ಹೊಲಿಯುತ್ತಿದ್ದಳು. ನೊಂದ ಹೆಣ್ಣುಮಕ್ಕಳಿಗೆ ತನ್ನ ಕೈಲಾದ ಸಹಾಯವನ್ನು ನೀಡುತ್ತ ಆನಂದ ಪಡೆಯುತ್ತಿದ್ದಳು. ದೇವರು ಒಂದೇನನ್ನೊ ಕಸಿದುಕೊಂಡಂತೆ ನಟಿಸಿ, ಮತ್ತೆ ಅದೆಷ್ಟನ್ನೊ ಧಾರಾಳವಾಗಿ ಕೊಡುತ್ತಾನಲ್ಲವೇ ಎಂದುಕೊಳ್ಳುತ್ತಿದ್ದಳು.
***
ಹತ್ತು ವರ್ಷಗಳ ನಂತರ
ಭೈರವಿ ಮೊದಲಗಿತ್ತಿಯಾಗಿ ಗಂಡನ ಮನೆಗೆ ಹೋಗುವ ಸಂದರ್ಭ. ಬಿ.ಎಸ್ಸಿ ಪದವೀಧರೆಯಾಗಿರುವ ಅವಳು ಇಂಜಿನಿಯರ್ ಆಗಿರುವ ರಘವನ್ನು ಸ್ವ-ಇಚ್ಛೆಯಿಂದ ವರಿಸಿದ್ದಾಳೆ. ಅವನು ಆಕೆಯ ಸೋದರ ಮಾವನ ಮಗ. ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿರುವ ಹಿರಿಯ ಮಗಳು ವೈಷ್ಣವಿ. ತನ್ನ ಗಂಡ ಹರ್ಷ ಮತ್ತು ಮಗು ಚಿಂತನಾಳ ಜೊತೆ ತವರಿಗೆ ಬಂದಿದ್ದಾಳೆ. ಮನೆ ತುಂಬ ಬಂಧು ಬಳಗದ ಗದ್ದಲ. ಅಲ್ಲಲ್ಲಿ ಹೆಂಗಳೆಯರು ನಾಗರಾಜನ ನೆನಪು ತೆಗೆದು ತುಸು ಅಳುತ್ತ, ಮರುಕ್ಷಣ ಯಾವುದೋ ಕಾರಣಕ್ಕೆ ನಗುತ್ತಾ ತಂತಮ್ಮ ಕಾರ್ಯಗಳಲ್ಲಿ ತೊಡಗಿದ್ದಾರೆ. ನಾಗರಾಜ ಆರು ವರ್ಷಗಳ ಹಿಂದೆಯೇ ರಸ್ತೆ ಅಪಘತವೊಂದರಲ್ಲಿ ವಿಧಿವಶನಾಗಿಬಿಟ್ಟಿದ್ದನು. ಆಗೆಲ್ಲ ದೀಪಿಕಾ ಅಪಾರ ನೋವಿಗೆ ಈಡಾದರೂ, ಮನಸ್ಸಿನಲ್ಲಿಯೇ ದೇವರಿಗೆ ಧನ್ಯವಾದಗಳನ್ನು ಹೇಳಿದ್ದಳು. ಗಂಡ ನವೆನವೆದು ನಿತ್ಯವೂ ಅಷ್ಟಿಷ್ಟೆ ಸತ್ತು ಕೊನೆಗೆ ಶೂನ್ಯವಾಗುವುದಕ್ಕಿಂತ ಒಮ್ಮೆಲೆ ಎದ್ದು ಹೋದಂತೆ ಸಾವಿಗೆ ಈಡಾದುದು ಒಳ್ಳೆಯದೇ ಎಂದುಕೊಂಡಿದ್ದಳು. ಮನೆಗೆ ಬಂದವರೆಲ್ಲರೂ ನಾಗರಾಜನನ್ನು ನೆನೆದು ್ಲ ಎರಡು ಹನಿ ಕಂಬನಿ ಸುರಿಯಲು ಮರೆತಿದ್ದಿಲ್ಲ. ಕಂಬನಿ ಬರದವರು ಸುಳ್ಳು ಸುಳ್ಳೇ ಮೂಗೇರಿಸುತ್ತಾ, ಸೀರೆ ಸೆರಗಿನಿಂದ ಕಣ್ಣು ಮೂಗು ವರೆಸಿಕೊಂಡು ಸಣ್ಣ ಧ್ವನಿಯಲ್ಲಿ ಮಾತಾಡಿ ತಮ್ಮ ದುಃಖವನ್ನು ವ್ಯಕ್ತಪಡಿಸುತ್ತಿದ್ದರು.
ದೀಪಿಕಾ ಹಗಲು-ರಾತ್ರಿ ಅತ್ತು ಅತ್ತು ಹೈರಾಣಾಗಿ ಬಿಟ್ಟಿದ್ದಾಳೆ. ಹತ್ತು ನಿಮಿಷಕ್ಕೊಮ್ಮೆ ಸಂಡಾಸಿಗೆ ಓಡುವ ಅವಳು ತೀರ ಕಡ್ಡಿಯಂತಾಗಿದ್ದಾಳೆ. ನೆರೆದ ಬಳಗವೆಲ್ಲ ಗಂಡನ ಸಾವು, ಮಕ್ಕಳ ಅಗಲಿಕೆಯಿಂದ ಚಿಂತೆಗೆ ಬಿದ್ದು ಸೊರಗಿ ಕಡ್ಡಿಯಾಗಿದ್ದಾಳೆಂದು ಮಾತಾಡಿಕೊಳ್ಳುತ್ತಾರೆ. ಎಲ್ಲರೂ ಆಕೆಗೆ ಸಮಾಧಾನ ಹೇಳುವವರೆ.
“ನಾವೂ ಹೆಣ್ಮಕ್ಳ್ನ ಹಡದೀವಿ ದೀಪಕ್ಕ. ನಿನ್ ಸಂಕ್ಟ ಏನಂತ ನಮ್ಗೂ ಅರ್ಥಾಗೇತಿ, ಏನೂ ಮಾಡ್ಹಂಗಿಲ್ಲಲ್ಲ. ಹುಟ್ಟಿದ ಹೆಣ್ಮಕ್ಳು ತವರ್ಮನಿ ಬಿಟ್ಟು ಹೋಗಾಕ ಬೇಕಲ್ಲ… ಚಿಂತಿ ಮಾಡಬ್ಯಾಡ. ಮಕ್ಕಳು ಮೊಮ್ಮಕ್ಳ್ ಮಾರಿ ನೋಡ್ಕೊಂತಾ ಇರೂದು…” ಎಂದು ಬಂದವರೆಲ್ಲರೂ ತಮಗೆ ತೋಚಿದಂತೆ ಸಮಾಧಾನ ಹೇಳುತ್ತಿದ್ದರು. ಆದರೆ ಸತ್ಯವನ್ನೆಲ್ಲ ಹೊಟ್ಟೆಯಲ್ಲಿರಿಸಿಕೊಂಡಿರುವ ದೀಪಿಕಾಳ ಕಣ್ಣುಗಳು ಹೊಳಪು ಕಳೆದುಕೊಂಡಿವೆ. ಹೃದಯವೆಲ್ಲ ನಿಶ್ಯಕ್ತವಾಗಿದೆ. ಮಕ್ಕಳ ಅಗಲಿಕೆಯ ನೋವು, ಗಂಡನ ಸಾವು, ಈಗ ತನಗೆ ಬರಲಿರುವ ಧಾರುಣ ಅಂತ್ಯ… ಯಾವುದು ತನ್ನನ್ನು ಹೆಚ್ಚು ಬಾಧಿಸುತ್ತಿದೆ ಎಂದು ಯೋಚಿಸಲು ಕೂಡ ಆಕೆಗೆ ಶಕ್ತಿ ಉಳಿದಿಲ್ಲ. ನಿಮಿಷಕ್ಕೊಮ್ಮೆ ನಿಟ್ಟುಸಿರಿಡುತ್ತಾ, ನರಳುತ್ತಾ ಕುಳಿತಿದ್ದಾಳೆ.
ಭೈರವಿಗೆ ನೆರೆದ ಮುತ್ತೈದೆಯರು ಬಳಗದ ಐದು ಮನೆಗಳಲ್ಲಿ ಉಡಿ ಅಕ್ಕಿ ಹಾಕಿಸಿದರು. ಅರಿಷಿಣ-ಕುಂಕುಮ ಕೊಟ್ಟು, ಪಡೆದು ಹಾರೈಸಿದರು. ನಿಜವಾಗಿಯೂ ಅದು ಎಲ್ಲರೂ ನಗುತ್ತಿರಬೇಕಾದ ಸಮಯ. ಆದರೆ ಅಲ್ಲಿ ಕಡೆಯ ಕ್ಷಣಗಳಲ್ಲಿ ಯಾರ ತುಟಿಯ ಮೇಲೂ ನಗುವಿನ ಸುಳಿವಿರಲಿಲ್ಲ. ಅದಕ್ಕೆ ದೀಪಿಕಾಳ ಸ್ಥಿತಿಯೇ ಕಾರಣ. ಭೈರವಿ ತನ್ನ ತಾಯಿಯನ್ನು ಗಟ್ಟಿಯಾಗಿ ಬಿಗಿದಪ್ಪಿಕೊಂಡು “ಅವ್ವಾ…” ಅಂತ ರೋಧಿಸಲು ಶುರುವಿಟ್ಟಾಗ ಎಲ್ಲರೂ ಬಿಕ್ಕಳಿಸಿ ಅಳತೊಡಗಿದರು. ಹೆಂಗರುಳಿನ ಗಂಡಸರು ಹೆಗಲು ಮೇಲಿನ ವಸ್ತ್ರದಿಂದ ಕಣ್ಣೊರೆಸಿಕೊಂಡರು. ವೈಷ್ಣವಿಗೆ ದಿಕ್ಕು ತೋಚದಂತಾಗಿ ಗರಬಡಿದು ಕಂಬಕ್ಕೊರಗಿ ನಿಂತು ಬಿಟ್ಟಿದ್ದಳು. ಅಳುತ್ತಿದ್ದ ಕೂಸಿನ ಕಡೆಯೂ ಆಕೆಯ ಗಮನವಿರಲಿಲ್ಲ. “ಎಷ್ಟೊಂದು ಚೆಂದದ ತನ್ನ ತವರು ಹೀಗಾಯಿತಲ್ಲ. ಅಪ್ಪ ಅಕಾಲದಾಗ ಎದ್ದು ಹೋದ. ಅವ್ವ ಗುರುತು ಸಿಗದಷ್ಟು ಸೊರಗಿ ಹೋದಳು. ಹೀಂಗ ಊಟ, ತಿಂಡಿ ಎಲ್ಲದರಲ್ಲೂ ನಿರಾಸಕ್ತಳಾಗಿರೊ ತಾಯಿ, ಮತ್ತೆ ಮೊದಲಿನಂತೆ ಆರೋಗ್ಯ ದಿಂದ ಓಡಾಡ್ತಾಳೇನು? ದೇವರೆ ನಮಗೆ ಅವ್ವ ಬೇಕು. ಆಕಿನ್ನಾದರೂ ನಮ್ಮ ಜೊತಗೆ ಇನ್ನಷ್ಟು ವರ್ಷ ಬಿಡೂ…” ಎಂದು ಅವಳು ದುಃಖಿಸಿದಾಗ ಅವಳ ಬಾಯಿಂದ ನಿಯಂತ್ರಣ ಮೀರಿ “ಬಿಡೂ” ಎಂಬ ಶಬ್ದ ಹೊರ ಬಿದ್ದಿತ್ತು. ಅಳುತ್ತಲೇ ಕೆಲವರು ಆಕೆಯ ಕಡೆ ನೋಡಿದರು. ಆದರೆ ಆಕೆಗೆ ಮೈಮೇಲೆ ಪ್ರಜ್ಞೆಯೇ ಇರಲಿಲ್ಲ. ಅವಳು ದೊಪ್ಪನೆ ಕುಸಿದು ಬಿದ್ದಳು. ನೆರೆದವರೆಲ್ಲ ವೈಷ್ಣವಿಯನ್ನು ಸುತ್ತುಗಟ್ಟಿದರು. ಬಸಪ್ಪ ಕಾಕಾ “ಏಯ್ ಹುಚ್ಚವ್ವಾರಾ ಸರ್ದು ನಿಲ್ರೀ. ಗಾಳಿ ಬರಲಿ… ಸುಮ್ಮನಾಗ್ರಿ, ಚೀರಾಡಬ್ಯಾಡ್ರೀ. ಸಮಾಧಾನ ಹೇಳೂದು ಬಿಟ್ಟು ಒಂಯ್ ಅಂತ ಗುಂಪು ಗೂಡಿಕೊಂಡು ಅತ್ತು ಏನಾರ ಎದ್ದಲಗಟ ತರ್ತೀರಿ…” ಎಂದು ಬೈಯ್ಯುತ್ತಲೇ ವೈಷ್ಣವಿಯ ಮುಖಕ್ಕೆ ನೀರು ಸಿಂಪಡಿಸಿದ. ಅಂಗೈ ಅಂಗಾಲುಗಳನ್ನು ಗಸಗಸನೆ ತಿಕ್ಕಿ ಕಾಲಿನ ಹೆಬ್ಬೆರಳನ್ನು ಒತ್ತಿ ಹಿಡಿದ. ವೈಷ್ಣವಿಗೆ ಒತ್ತಿ ಹಿಡಿದ ಬೆರಳು ನೋವಾದಂತಾಗಿ ಎಚ್ಚರವಾಯಿತು. ಭೈರವಿ ಅಕ್ಕನ ತಲೆಯನ್ನು ಕೈಯ್ಯಾಡಿಸುತ್ತ ಮೌನವಾಗಿ ಕಂಬನಿ ಸುರಿಯುತ್ತಿದ್ದಳು. ದುಃಖದಿಂದ ಅವಳ ಮುಖ ಹಿಚುಕಿದ ಗುಲಾಬಿಯಂತೆ ಕಳೆಗುಂದಿತ್ತು.
ತಾಯಿ ದೀಪಿಕಾ ಹೊಟ್ಟೆ ಹಿಡಿದುಕೊಂಡು ಮತ್ತೆ ಸಂಡಾಸ್‍ಗೆ ಹೊರಟಳು. ನಾಗಮ್ಮ ಆಕೆಯ ತೋಳನ್ನು ಹಿಡಿದು ನಡೆಸಿಕೊಂಡು ಹೋದಳು. “ಶುಭ ಮುಹೂರ್ತ ಮೀರ್ತೈತಿ, ಬಡಾನ ಬರ್ರಿ, ಉಡಿಯಕ್ಕಿ ಸಡ್ಲಿಸ್ಬೇಕು…” ಅಂತ ನಿಂಗಪ್ಪಜ್ಜ ಅವಸರಿಸಿದ್ದು, ಹಿತ್ತಲಿನಲ್ಲಿ ಹೊಟ್ಟೆ ಒತ್ತಿಕೊಂಡು ಕುಳಿತ್ತಿದ್ದ ದೀಪಿಕಾಳ ಕಿವಿಗೆ ಬಿದ್ದಿತು. ಅಸಹನೀಯ ನೋವಿನಲ್ಲಿ ಅವಳ ದೇಹ, ಮನಸು ತಲ್ಲಣಿಸಿ ಹೋದವು. ಹೊಟ್ಟೆ ಸರಳವಾಗುತ್ತಿಲ್ಲದ ಕಾರಣ ಎದ್ದು ಬರಲು ಮನಸ್ಸೇ ಆಗುತ್ತಿಲ್ಲ. ಮಗುವಿನಂತೆ ತಿಣುಕುತ್ತ ಕುಳಿತೇ ಇದ್ದಳು. ಆಕೆ ಹಿತ್ತಲಿನಿಂದ ವಾಪಸ್ ಬಂದಾಗ ಮಗಳು ಎಲ್ಲರಿಗೂ ವಂದಿಸಿಯಾಗಿತ್ತು. ತಾಯಿಯ ಕಾಲಿಗೂ ಹಣೆ ಹಚ್ಚಿ ನಮಸ್ಕರಿಸಿದಳು. ಅವಳಿಗೆ ದುಃಖ ಒತ್ತರಿಸಿ ಬಂದು ತಾಯಿಯ ಕಾಲನ್ನು ಬಿಗಿಯಾಗಿ ಹಿಡಿದುಕೊಂಡು, ಕಂಬನಿಯಿಂದ ತೋಯಿಸಿದಳು. “ಏ ಎವ್ವಾ ಭೈರೂ ನಾನು ಒಬ್ಬಾಕೀನ ಹ್ಯಾಂಗಿರ್ಲಿ ತಾಯೀ?…” ಎಂದು ದೀಪಿಕಾ ಕ್ಷೀಣ ಧ್ವನಿಯಲ್ಲಿ ಗೊಣಗಿದ್ದು ಯಾರಿಗೂ ಅರ್ಥವಾಗಲಿಲ್ಲ. ಹೊರಗೆ ಹಿರಿಯರು ಅವಸರ ಮಾಡುತ್ತಿದ್ದುದರಿಂದ ಭೈರವಿಯನ್ನು ಹೊರಡಿಸಿಕೊಂಡು ಎಲ್ಲರೂ ಹೊರ ನಡೆದರು. ದೀಪಿಕಾ ನಾಗಮ್ಮನ ಸಹಾಯದಿಂದ ಹೊಸ್ತಿಲ ದಾಟಿ ಅಂಗಳದವರೆಗೂ ಬಂದು ನಿತ್ರಾಣದಿಂದ ನರಳುತ್ತಾ ಕುಳಿತಳು. ಕೈ ಮೇಲೆತ್ತಿ ಮಗಳಿಗೆ ಸನ್ನೆ ಮಾಡಿ “ ಅಳಬ್ಯಾಡ”ವೆಂಬಂತೆ ಸೂಚಿಸಿ ತಾನು ಮಾತ್ರ ಕಂಬನಿಯ ಮಡುವಿನಲ್ಲಿ ಮುಳುಗಿದಳು. ಕಿರಿ ಮಗಳು ಸಹ ಉಡಿ ಅಕ್ಕಿ ತುಂಬಿಕೊಂಡು ತನ್ನ ಕಣ್ಣು ಮುಂದೆಯೇ ಗೃಹಿಣಿಯಾದಳಲ್ಲವೆಂದು ಸಮಾಧಾನ ಮಾಡಿಕೊಂಡಳು.
ದಾರಿಯ ತಿರುವಿನಲ್ಲಿ ಭೈರವಿ ಹಿಂತಿರುಗಿ ನಿಂತು ನೋಡಿದಳು. ಅವಳು ಪಕ್ಕದಲ್ಲಿದ್ದ ಗೆಳತಿಯರ ಕೈ ಕೊಸರಿಕೊಂಡು ಓಡಿ ತಾಯಿಯ ಹತ್ತಿರ ಬಂದು ಆಕೆಯನ್ನು ತಬ್ಬಿಕೊಂಡುಬಿಟ್ಟಳು. ತಾಯಿ ಮಗಳಿಬ್ಬರೂ ಗೊಳ್ಳನೇ ಅತ್ತರು. ತನ್ನ ತಾಯಿ ಮಹಾರಾಣಿಯಂತೆ ಓಡಾಡಿಕೊಂಡಿದ್ದವಳು ಇಷ್ಟು ದುರ್ಬಲವಾಗಿ ಬಿಟ್ಟಳಲ್ಲ ಎಂದು ಇಬ್ಬರೂ ಹೆಣ್ಣು ಮಕ್ಕಳ ಎದೆಯಲ್ಲಿ ತೀರದ ನೋವಾಗಿತ್ತು.
ದೀಪಿಕಾ ತಾನೇ ಚೇತರಿಸಿಕೊಂಡು, “ಅಳಬ್ಯಾಡವ್ವೀ, ನಿಮ್ಮತ್ತೀ ಭಾಳ ಒಳ್ಯಾಕಿ, ಅಲ್ಲಿ ಅಜ್ಜ-ಅಮ್ಮನೂ ಅದಾರಲ್ಲ. ಅಳಬ್ಯಾಡ… ರಘು ಜೊತೆ ಹಟ ಮಾಡಬ್ಯಾಡ. ನಾಲ್ಕು ದಿನ ಬಿಟ್ಟು ಮತ್ತ ಕಳಿಸಿಕೊಡ್ತಾರೇಳು! ನನ್ನ ಬಗ್ಗೆ ಚಿಂತೀ ಮಾಡಬ್ಯಾಡ… ಆರಾಮಾಕ್ಕೀನೇಳು” ಎಂದು ಮಗಳ ತಲೆ ನೇವರಿಸಿದಳು. ಭೈರವಿ ಅಳುತ್ತಲೇ, “ ಮತ್ತ ನೀನು ಸರಿಯಾಗಿ ಉಣ್ಣೂದಿಲ್ಲ, ತಿನ್ನೂದಿಲ್ಲ, ನಿನ್ನ ಒಬ್ಬಾಕೀನ ಬಿಟ್ಟು ನಾನು ಅಲ್ಲಿ ಹ್ಯಾಂಗಿರ್ಲೀ…” ಎಂದು ತಾಯಿಯ ಮುಂಗೈ ಹಿಡಿದು ಕೇಳಿದಳು. “ಇಲ್ಲವ್ವಾ ಉಂತೀನೇಳು, ಸರಿಯಾಗಿ ಊಟ, ನಿದ್ದಿ ಮಾಡಿದರಾ ಆರಾಮಾಗುತ್ತ. ನಾ ಆರಾಮಕ್ಕಿನೇಳು. ನಾ ಆರಾಮಾಗೂತಂಕ ವಿಟ್ಟಿ ಇಲ್ಲೇ ಇರ್ತಾಳ. ಹೋಗು ಹಿರೇರು ಅವಸ್ರ ಮಾಡಕ್ಹತ್ತಾರ” ಎಂದು ಮಗಳ ಕಣ್ಣೊರಸಿ, ಗಲ್ಲ ಹಿಡಿದು ಹೇಳಿದಳು. ಭೈರವಿಯ ಗೆಳತಿಯರು ಆಕೆಯ ಕೈ ಹಿಡಿದು ಎಬ್ಬಿಸಿಕೊಂಡು ನಡೆದರು. ಭೈರವಿ ತಿರುಗಿ ತನ್ನ ಮನೆ, ಅಂಗಳ, ಅಂಗಳದ ರಂಗೋಲಿ, ರಂಗೋಲಿಯ ಹತ್ತಿರ ಅನಾಥಳಂತೆ ಸೋತು ಕುಳಿತಿರುವ ತಾಯಿ, ಮನೆಯ ಮುಂದಿದ್ದ ಸಂಪಿಗೆಯ ಗಿಡ, ಗತಿಸಿ ಹೋಗಿದ್ದ ತಂದೆಯ ಚಿತ್ರ ಎಲ್ಲವನ್ನೂ ಕಣ್ತುಂಬಿಕೊಂಡು, ಕಣ್ಣು ಮುಸುಕಾದಾಗ ಕಾಲೆತ್ತಿಡಲಾಗದೆ ನಿಂತು ಬಿಟ್ಟಳು. ಕಣ್ಣೊರೆಸಿಕೊಂಡು ಮತ್ತೊಮ್ಮೆ ಹಿಂತಿರುಗಿ ನಿಂತು ಕೈ ಎತ್ತಿ ತಾಯಿಗೆ ವಿದಾಯ ಹೇಳಿದಳು. ಮಗಳು ಜನರ ಮದ್ಯೆ ಕಾಣಿಸದಂತಾದಾಗ ಎದ್ದು ನಿಲ್ಲಲು ಪ್ರಯತ್ನಿಸಿದಳು ದೀಪಿಕಾ. ಸಾಧ್ಯವಾಗಲಿಲ್ಲ. ಹಾಗೇ ಕುಸಿದು ಕುಳಿತಳು… .
*****
ವಾಸಿಯಾಗದ ರೋಗದೊಂದಿಗೆ ಹೋರಾಡಿ ಗೆಲ್ಲುವ ಹೆಣ್ಣಿನ ಚಿತ್ರಣ ಬಹಳ ಚೆನ್ನಾಗಿ ಮೂಡಿ ಬಂದಿದೆ. ಆಕೆ ಗೆಲ್ಲುವ ದಾರಿಯ ಪ್ರತೀ ಹೆಜ್ಜೆಯನ್ನೂ ವಿವರಿಸಿದ್ದೀರಿ. ಆದರೆ, ಕೊನೆಯ ಎರಡು ಪಾರಾಗಳಲ್ಲಿ ಭಾವುಕತನ ಹೆಚ್ಚಾಯಿತು ಅನಿಸಿತು.
ಇನ್ನೂ ಅನೇಕ ಕಥೆಗಳು ನಿಮ್ಮಿಂದ ಬರಲಿ, ಶುಭವಾಗಲಿ