ವಿಜ್ಞಾನ-ಪರಿಸರ

ಹಮ್ಮಿಂಗ್ ಎಂಬ ನ್ಯಾನೋ ಹಕ್ಕಿ!!!: ಅಖಿಲೇಶ್ ಚಿಪ್ಪಳಿ


ಹೃದಯದ ಬಡಿತ ನಿಮಿಷಕ್ಕೆ ಸರಾಸರಿ 1200 ಇರುವ ಜೀವಿ ಯಾವುದು? ಸೆಕೆಂಡಿಗೆ 80 ರಿಂದ 250 ಬಾರಿ ರೆಕ್ಕೆ ಬಡಿಯುವ ಪಕ್ಷಿ ಯಾವುದು? ತನ್ನ ತೂಕಕ್ಕಿಂತ ಒಂದುವರೆ ಪಟ್ಟು ಆಹಾರ ಸೇವಿಸುವ ಜೀವಿ ಯಾವುದು? ಬರೀ 300 ಮಿಲಿಗ್ರಾಂ ತೂಕದ ಮೊಟ್ಟೆಯಿಡುವ ಹಕ್ಕಿ ಬಗ್ಗೆ ಗೊತ್ತ? ಹೀಗೆ ಮುಗಿಯದ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಒಂದೇ. ಅದು ಹಮ್ಮಿಂಗ್ ಬರ್ಡ್ ಆಲಿಯಾಸ್ ಝೇಂಕಾರದ ಹಕ್ಕಿ!! ನಮಗೆ ಇದನ್ನು ನೋಡುವ ಭಾಗ್ಯ ಇಲ್ಲ. ಏಕೆಂದರೆ ಭಾರತದಲ್ಲಿ ಇವು ಇಲ್ಲ. ಸಂತೋಷದ ವಿಚಾರವೆಂದರೆ ಇದನ್ನೇ ಹೋಲುವ ಹಕ್ಕಿಗಳನೇಕ ನಮ್ಮಲ್ಲಿವೆ. ಹಮ್ಮಿಂಗ್ ಹಕ್ಕಿಯ ಜಾತಿಯದೇ ಅಲ್ಲದ, ಆದರೆ ಅದರಂತೇ ಕಾಣುವ, ವರ್ತಿಸುವ ಹಕ್ಕಿ ನಮ್ಮಲ್ಲೂ ಇದೆ. ಮನೆಯ ಕೈತೋಟದಲ್ಲಿ ಹೆಚ್ಚು ಮಕರಂದ ನೀಡುವ ಹೂವಿನ ಗಿಡಗಳಿದ್ದರೆ, ಹಮ್ಮಿಂಗ್ ಹಕ್ಕಿಯ ತರಹದ ಹೂವಿನ ಹಕ್ಕಿಗಳನ್ನು ಕಾಣುವ ಭಾಗ್ಯ ನಮ್ಮದಾದೀತು. ಸಾವಿರ ಗ್ರಾಂಗಳಿಗೆ ಒಂದು ಕೆ.ಜಿ. ಸಾವಿರ ಮಿಲಿಗ್ರಾಂಗಳಿಗೆ ಒಂದು ಗ್ರಾಂ. ಅದೇ ಒಂದು ಕೆ.ಜಿ.ಗೆಷ್ಟು ಗ್ರಾಂಗಳು? 10 ಲಕ್ಷ ಮಿಲಿಗ್ರಾಂಗಳು. ಈಗ ನಮಗೊಂದು ಹೋಲಿಕೆ ಸಿಗಬಹುದು. ಬರೀ 300 ಮಿಲಿಗ್ರಾಂ ತೂಗುವ ಮೊಟ್ಟೆಯಷ್ಟು ದೊಡ್ಡದಿದ್ದೀತು? ಮೊಟ್ಟೆಯಿಡುವ ಪಕ್ಷಿಯ ತೂಕವೆಷ್ಟು? 320 ಜಾತಿಯ ಹಮ್ಮಿಂಗ್ ಹಕ್ಕಿಗಳ ಜಾತಿಗಳಲ್ಲಿ ಅತಿ ಹೆಚ್ಚು ತೂಕದ ಹಕ್ಕಿಯ ಹೆಸರು ಜೈಂಟ್ ಹಮ್ಮಿಂಗ್, ಇದರ ತೂಕ 20 ಗ್ರಾಂ. 

ಹಮ್ಮಿಂಗ್ ಹಕ್ಕಿಗಳು ಆ ಭಗವಂತನ ಸೃಷ್ಟಿಯಲ್ಲಿನ ಒಂದು ಪವಾಡವೇ ಸರಿ. ಒಂದೊಮ್ಮೆ ನಾವು ಹಮ್ಮಿಂಗ್ ಹಕ್ಕಿಗಳಂತೆ ಚಟುವಟಿಕೆಯಿಂದಿರಬೇಕಾದಲ್ಲಿ ದಿನಕ್ಕೆ 2000 ಇಡ್ಲಿಗಳನ್ನು ತಿಂದು, 60 ಲೀಟರ್ ನೀರು ಕುಡಿಯಬೇಕಾಗುತ್ತದೆ, ಇಷ್ಟು ತಿಂದು-ಕುಡಿದು ಕೈಗಳನ್ನು ಸೆಕೆಂಡಿಗೆ 50 ಬಾರಿ ಆಡಿಸಿದರೆ ನಮ್ಮ ದೇಹದ ಉಷ್ಣಾಂಶ 385 ಸೆಂಟಿಗ್ರೇಡ್ ತಲುಪಿ ನಮ್ಮ ದೇಹ ಬೆಂಕಿಯ ಜ್ವಾಲೆಯಾಗಿ ಬಿಡುತ್ತದೆ. ಸುಟ್ಟು ಸತ್ತೇ ಹೋಗುತ್ತೇವೆ. ಮುಂದೆ-ಹಿಂದೆ, ಎಡಕ್ಕೆ-ಬಲಕ್ಕೆ ಹಾರಬಲ್ಲ ಶಕ್ತಿಯಿರುವುದು ಈ ಪುಟ್ಟ ಹಕ್ಕಿಗೆ ಮಾತ್ರ. ಇಷ್ಟು ಪುಟ್ಟದಾದರೂ ಇದರ ವೇಗವೇನು ಕಡಿಮೆಯಿಲ್ಲ, ಗಂಟೆಗೆ 90 ಕಿ.ಮಿ. ವೇಗವಾಗಿ ಇದು ಹಾರಬಲ್ಲದು. ಇದರದ್ದೇ ಜಾತಿಯ ಇನ್ನೊಂದು ಹಕ್ಕಿಯ ಹೆಸರು ಸ್ವಿಫ್ಟ್ (ಆಕಾಶಗುಬ್ಬಿ) ಇದರ ವೇಗ ಗಂಟೆಗೆ 120 ಕಿ.ಮಿ. ಅಮೇರಿಕದ ಮಿಲಿಟರಿ ತಂತ್ರಜ್ಞರು ಒಂದು ಪುಟ್ಟ ಅಂದರೆ ಹಮ್ಮಿಂಗ್ ಹಕ್ಕಿಯಷ್ಟು ಪುಟ್ಟದಾದ ಹೆಲಿಕಾಪ್ಟರ್‍ನ್ನು ತಯಾರು ಮಾಡಿ ಆಫ್ಗಾನಿಸ್ಥಾನದ ಮಿಲಿಟರಿ ಆಪರೇಷನ್ ಸಮಯದಲ್ಲಿ ಬಳಸಿದ್ದರು. ಬ್ಲಾಕ್ ಹಾರ್ನೆಟ್ ಎಂಬ ಹೆಸರಿನ ಈ ಹೆಲಿಕಾಪ್ಟರ್ ಹಮ್ಮಿಂಗ್ ಹಕ್ಕಿಯ ಮುಂದೆ ಏನೇನೂ ಅಲ್ಲ ಎಂದು ವಿಜ್ಞಾನಿಗಳ ಅಭಿಮತ.

ನೋಡಲು ವಯಸ್ಕರ ಕಿರುಬೆರಳು ಗಾತ್ರದ ಹಮ್ಮಿಂಗ್ ಹಕ್ಕಿಗೆ ಪಕ್ಷಿಲೋಕದ ಬಕಾಸುರ ಎನ್ನಬಹುದು. ಪಕ್ಷಿಲೋಕದಲ್ಲೇ ಅತಿ ಹೆಚ್ಚು ಚಟುವಟಿಕೆ ಹೊಂದಿದ ಹಮ್ಮಿಂಗ್ ಹಕ್ಕಿಗೆ ನಿರಂತರವಾಗಿ ಆಹಾರ ಪೂರೈಕೆಯಾಗುತ್ತಿರಲೇ ಬೇಕು. ದಿನದ ಹನ್ನೆರೆಡು ತಾಸು ಇವುಗಳಿಗೆ ಹೂವಿಂದ-ಹೂವಿಗೆ ಹಾರುತ್ತಾ ಮಕರಂದ ಹೀರುವುದೇ ಕಾಯಕ. ಬಹಳಷ್ಟು ಜನ ತಿಳಿದುಕೊಂಡಂತೆ ಇದು ತನ್ನ ಕೊಕ್ಕಿನಿಂದ ಸ್ಟ್ರಾ ತರಹ ರಸ ಹೀರುವುದಿಲ್ಲ. ಒಂದು ತಾಸಿಗೆ 5 ರಿಂದ 6 ಬಾರಿ ಹಮ್ಮಿಂಗ್ ಮಕರಂದ ಹೀರುತ್ತದೆ. ರೆಕ್ಕೆಯನ್ನು ಮೇಲೆ ಕೆಳಗೆ ಬಡಿಯುತ್ತಾ ಹೂವಿನ ಸಮೀಪ ಬರುತ್ತದೆ. ಹೂ ಎಟಕುವಷ್ಟು ಹತ್ತಿರ ಬಂದ ಮೇಲೆ ಇದರ ರೆಕ್ಕೆಯ ಬಡಿತ ಭಿನ್ನವಾಗಿ ಹಿಂದೆ ಮುಂದೆ ಆಡುತ್ತಾ ಹೆಲಿಕಾಪ್ಟರ್‍ನಂತೆ ಅಲ್ಲೇ ನಿಲ್ಲುತ್ತದೆ. ರೆಕ್ಕೆ ಬಡಿಯುತ್ತಲೇ ತನ್ನ ಉದ್ದ ಕೊಕ್ಕನ್ನು ಹೂವಿನ ಮಕರಂದವಿರುವಲ್ಲಿಗೆ ತಲುಪುತ್ತದೆ. ತನ್ನ ವಿಶಿಷ್ಟವಾದ ನಾಲಗೆಯಿಂದ ಸೆಂಕೆಂಡಿಗೆ 12-13 ಬಾರಿ ಮಕರಂದವನ್ನು ಹೀರುತ್ತದೆ. ಪ್ರತಿ ಬಾರಿ ನಾಲಗೆ ಮರರಂದವನ್ನು ಹೀರಿ ನಾಲಗೆಯ ಒಳಗೆ ಸೇರಿದ ತಕ್ಷಣ ಇಂಕ್ ಪಿಲ್ಲರ್‍ನಿಂದ ಇಂಕು ಹೊರಬರುವಂತೆ ಮಕರಂದ ನಾಲಗೆ ತುದಿಯಿಂದ ಹೊರಬಂದು ಗಂಟಲಿಗೆ ಸೇರುತ್ತದೆ. ಇದೀಗ ಮತ್ತೆ ಕೊಕ್ಕನ್ನು ಹೂವಿನಿಂದ ಹೊರತೆಗೆಯಲು ಹಿಮ್ಮುಖ ಚಲಿಸುತ್ತದೆ. ಇಷ್ಟೂ ಕೆಲಸಗಳನ್ನು ಪೂರ್ಣಗೊಳಿಸಲು ಹಮ್ಮಿಂಗ್ ಹಕ್ಕಿಗೆ ಕೆಲವು ಸೆಂಕೆಂಡುಗಳು ಸಾಕು. ಸಂಜೆ ವಿಶ್ರಾಂತಿಗೆ ತೆರಳುವ ಮುನ್ನ ಒಂದಿಷ್ಟು ಮಕರಂದವನ್ನು ಹೀರಿ, ಗಂಟಲಲ್ಲಿ ಶೇಖರಿಸಿಕೊಳ್ಳುತ್ತದೆ. ಮಾರನೇ ದಿನ ಹವಾಮಾನ ಏನಾದರೂ ಹೆಚ್ಚು ಕಡಿಮೆಯಾಗಿ ಹೊರಗೆ ಹೋಗಲು ಆಗದಿದ್ದಾಗ ಗಂಟಲಿನಲ್ಲಿ ಶೇಖರಿಸಿಕೊಂಡ ಮಕರಂದವನ್ನು ನುಂಗಿ, ಮತ್ತೆ ಮಕರಂದ ಹೀರಲು ಸೂಕ್ತ ಸಮಯಕ್ಕಾಗಿ ಕಾಯುತ್ತದೆ. ಹೀಗೆ ಹೆಚ್ಚೆಂದರೆ 2 ದಿನ ಹಕ್ಕಿ ಬದುಕಬಲ್ಲದು. ಹಾಗಂತ ಮಳೆ-ಗಾಳಿಗೆದುರಾಗಿ ಹಾರುವುದು ಈ ಪುಟ್ಟ ಹಕ್ಕಿಗೆ ಗೊತ್ತು. ಜಡಿಮಳೆ ಮತ್ತು ಗಾಳಿಯಲ್ಲೂ ಮಕರಂದ ಸಂಗ್ರಹಿಸಲು ಹಮ್ಮಿಂಗ್ ಹೋಗುತ್ತದೆ. ಈ ಕುರಿತು ಜೀವಶಾಸ್ತ್ರ ವಿಜ್ಞಾನಿಗಳು (University of California-Berkeley's Animal Flight Laboratory). ಒಂದು ಪ್ರಯೋಗವನ್ನೇ ಮಾಡಿದರು. ಕೃತಕವಾದ ಗಾಳಿ-ಮಳೆಯನ್ನು ಸೃಷ್ಟಿಸಿ, ಹಮ್ಮಿಂಗ್ ಹಕ್ಕಿಯನ್ನು ಮಕರಂದ ಹೀರಲು ಬಿಟ್ಟರು. ಜೋರಾದ ಗಾಳಿ-ಮಳೆಗೂ ಬಗ್ಗದ ಹಮ್ಮಿಂಗ್ ಸಮರ್ಥವಾಗಿ ಹೂವಿನಿಂದ ಮಕರಂದ ಹೀರಿದ್ದನ್ನು ಹೈಸ್ಪೀಡ್ ವಿಡಿಯೋ ಕ್ಯಾಮೆರಾದಲ್ಲಿ ಸೆರೆಹಿಡಿದು ಪರೀಕ್ಷಿಸಿದರು. ಅಚ್ಚರಿಯೆಂಬಂತೆ, ವಿಜ್ಞಾನಿಗಳು ಸೃಷ್ಟಿಸಿದ ಕೃತಕ ಗಾಳಿ-ಮಳೆ ಈ ಪುಟ್ಟ ಹಕ್ಕಿಯ ಮೇಲೆ ಯಾವ ಪರಿಣಾಮವನ್ನು ಬೀರಲಿಲ್ಲ. ಮತ್ತೊಂದು ಅಚ್ಚರಿಯನ್ನು ಗಮನಿಸಿದರು. ನಾಯಿಯ ಮೈಮೇಲೆ ನೀರು ಬಿದ್ದಾಗ, ಇಡಿ ಮೈಯನ್ನು ಕೊಡವಿ ಕೊಳ್ಳುವ ರೀತಿಯನ್ನು ಎಲ್ಲರೂ ನೋಡಿರುತ್ತಾರೆ. ಜೋರಾಗಿ ಕೊಡವಿ ಕೊಂಡೆ ನಾಯಿ ತನ್ನ ಮೈಯಲ್ಲಿನ ನೀರನ್ನು ಹೊರಹಾಕುತ್ತದೆ. ಇದೇ ರೀತಿ ಹಮ್ಮಿಂಗ್ ಹಕ್ಕಿ ಕೂಡಾ ವರ್ತಿಸಿತು. ಹಾರುತ್ತಲೇ ನಾಯಿ ಮೈಕೊಡವಿಕೊಳ್ಳುವ ರೀತಿಯಲ್ಲೇ ಮೈಕೊಡವಿಕೊಂಡು ಪುಕ್ಕಗಳಿಂದ ನೀರನ್ನು ಬಸಿದುಕೊಂಡಿತು. 

ಕೆಲವು ಜಾತಿಯ ಹಮ್ಮಿಂಗ್ ಹಕ್ಕಿಗಳು ಗೂಡು ಕಟ್ಟಿ ಮರಿ ಮಾಡಲು ವಲಸೆ ಹೋಗುತ್ತವೆ. ಗಮ್ಯ ತಲುಪಿದ ತಕ್ಷಣದಲ್ಲಿ ಗೂಡು ಕಟ್ಟಲು ಆರಂಭಿಸುವುದಿಲ್ಲ. ದೂರದಿಂದ ಹಾರಿ ಬಂದಿದ್ದರಿಂದ ಹಮ್ಮಿಂಗ್‍ನ ಶಕ್ತಿ ನಷ್ಟವಾಗಿರುತ್ತದೆ. ಆದ್ದರಿಂದ, ಮೊದಲು ಹೊಟ್ಟೆಯ ಕಡೆ ಗಮನ ನೀಡುತ್ತವೆ. ನಂತರ ಸೂಕ್ತವಾಗ ಸ್ಥಳವನ್ನು ಪತ್ತೆ ಮಾಡುತ್ತವೆ. ಹೆಚ್ಚು ಬಿಸಿಲು ಬೀಳದ, ಮಳೆ-ಗಾಳಿಯಿಂದ ಸುರಕ್ಷಿತವಾದ ಸ್ಥಳವನ್ನು ತಾಯಿಯಾಗಲಿರುವ ಹಕ್ಕಿ ಹುಡುಕುತ್ತದೆ. ನೆಲದಿಂದ ಎತ್ತರಕ್ಕೆ, ಇಂಗ್ಲೀಷ್ ವರ್ಣಮಾಲೆಯ ವೈ ಆಕಾರದ ರೆಂಭೆಗಳ ಬುಡ ಸೂಕ್ತವಾದದು. ಒಮ್ಮೆ ಸ್ಥಳದ ಆಯ್ಕೆ ಅಂತಿಮವಾದ ಮೇಲೆ, ಗೂಡನ್ನು ಬೀಳದ ಹಾಗೆ ಅಂಟಿಸಲು ಜೇಡರ ಬಲೆಗಾಗಿ ಹುಡುಕುತ್ತದೆ. ಮೊದಲಿಗೆ ಜೇಡರ ಬಲೆಯ ಅಂಟಿನ ಫೌಂಡೇಷನ್, ಇದಾದ ಮೇಲೆ ಮೆದುವಾದ ವಸ್ತುಗಳಿಗಾಗಿ ಹುಡುಕಾಟ, ಒಣ ಎಲೆಗಳ ದಾರ ಇತ್ಯಾದಿಗಳು, ಹತ್ತಿ ಸಿಕ್ಕರಂತೂ ಬಹಳ ಒಳ್ಳೆಯದು. ಹೀಗೆ ಗಂಟೆಗೆ 30 ರಿಂದ 34 ಬಾರಿ ಗೂಡಿನ ಸ್ಥಳದಿಂದ ಹೊರಕ್ಕೆ ಹೋಗಿ (ದಿನಕ್ಕೆ 4 ತಾಸಿನಂತೆ) ಕಚ್ಚಾವಸ್ತುಗಳನ್ನು ಹುಡುಕುತ್ತದೆ. ಈಗ ಚಾಲ್ತಿಯಲ್ಲಿರುವ 2 ರೂಪಾಯಿಯ ನಾಣ್ಯಕ್ಕಿಂತ ಕೊಂಚ ದೊಡ್ಡದಾದ ಗೂಡು ಕಟ್ಟಲು ಹಮ್ಮಿಂಗ್ ಹಕ್ಕಿಗೆ ಬರೋಬ್ಬರಿ 5-7 ದಿನ ಬೇಕಾಗುತ್ತದೆ. ಮೊಟ್ಟೆಯಿಟ್ಟು ಮರಿ ಮಾಡಲು 18-20 ದಿನ ಬೇಕು. ಕೆಲವು ಹಮ್ಮಿಂಗ್ ಹಕ್ಕಿಗಳು ಬಳಸಿದ ಗೂಡನ್ನೇ ಮತ್ತೆ ಬಳಸುತ್ತವೆ, ಅವು ಸುಸ್ಥಿತಿಯಲ್ಲಿದ್ದರೆ ಮಾತ್ರ. ಕೆಲವು ಹಮ್ಮಿಂಗ್‍ಗಳು ಬೇರೆ ಹಮ್ಮಿಂಗ್ ಹಕ್ಕಿಯ ಗೂಡಿನಿಂದ ದಾರ ಇಂತವುಗಳನ್ನು ಕದಿಯುವುದೂ ಉಂಟು. ಸಾಧಾರಣವಾಗಿ ಹಮ್ಮಿಂಗ್ ಹಕ್ಕಿಗಳ ಗೂಡನ್ನು ನೋಡಿದರೆ ಅದೊಂದು ಗೂಡು ಎಂದು ಅನಿಸುವುದೇ ಇಲ್ಲ. ಮರದಲ್ಲೊಂದು ಗಂಟು ಆದ ರೀತಿಯಲ್ಲಿ ಗೂಡು ಇರುತ್ತದೆ. ಹಾಗೂ ಅಲ್ಲಿಯ ಪರಿಸರಕ್ಕೆ ಹೊಂದಿಕೊಳ್ಳುವಂತೆ ಗೂಡು ಕಟ್ಟುತ್ತದೆ. ಗಂಡು ಹಮ್ಮಿಂಗ್ ಹಕ್ಕಿ ಹಲವು ಹೆಣ್ಣಿನ ಜೊತೆ ಕೂಡುತ್ತದೆಯಾದರೂ, ಗೂಡು ಕಟ್ಟುವಲ್ಲಿ ಅಥವಾ ಮರಿಯ ಪೋಷಣೆಯಲ್ಲಿ ಯಾವ ಪಾತ್ರವನ್ನು ವಹಿಸುವುದಿಲ್ಲ. ನೋಡಲು ಹಮ್ಮಿಂಗ್ ಹಕ್ಕಿಯನ್ನು ಹೋಲುವ ನಮ್ಮ ನಾಡಿನ ಹೂವಿನ ಹಕ್ಕಿಗಳಲ್ಲಿ ಗಂಡು ಹಕ್ಕಿ ಕೂಡ ಕುಟುಂಬದಲ್ಲಿ ತನ್ನ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸುತ್ತದೆ.

ಸನ್ ಬರ್ಡ್

ಹಮ್ಮಿಂಗ್ ಹಕ್ಕಿ

ಸನ್ ಬರ್ಡ್

ಹಮ್ಮಿಂಗ್ ಹಕ್ಕಿ

ಪಕ್ಷಿಗಳು ಅದ್ಭುತ ಜೀವಿಗಳು ಎಂಬುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ಹಮ್ಮಿಂಗ್ ಹಕ್ಕಿಗಳದ್ದು ಅಸಾಧಾರಣ ಶಕ್ತಿ. ಗಾತ್ರದಿಂದ ಹಿಡಿದು, ಅವುಗಳ ಆವಾಸಸ್ಥಾನ, ಜೀವನ ಪದ್ಧತಿ, ಚುರುಕು ಇವುಗಳಿಂದಾಗಿ 10000 ಪಕ್ಷಿಪ್ರಭೇದಗಳಲ್ಲೆ ಇವುಗಳದು ವಿಶಿಷ್ಟ ಸ್ಥಾನ. ಇವುಗಳ ಕುರಿತು ಕೆಲವು ಕುತೂಹಲಕರ ಮಾಹಿತಿಯನ್ನು ನೋಡೋಣ. ಹಮ್ಮಿಂಗ್ ಹಕ್ಕಿಗಳಲ್ಲಿ ಸುಮಾರು 325 ವಿವಿಧ ಜಾತಿಗಳಿವೆ. ಅವುಗಳ ಅತಿ ಚಿಕ್ಕ ಕಾಲುಗಳಿಂದಾಗಿ ಅವುಗಳಿಗೆ ನಡೆಯಲು ಬರುವುದಿಲ್ಲ. ಬೀ ಹಮ್ಮಿಂಗ್ ಹಕ್ಕಿಯೇ ಪ್ರಪಂಚದ ಅತಿ ಚಿಕ್ಕ ಹಕ್ಕಿ, ಇದರ ತೂಕ ಬರೀ 2.25 ಗ್ರಾಂ. ಹಮ್ಮಿಂಗ್ ಹಕ್ಕಿಗಳಲ್ಲಿ 1000 ದಿಂದ 1500 ಪುಕ್ಕಗಳಿರುತ್ತವೆ. ಬೇರೆ ಹಕ್ಕಿಗಳಿಗೆ ಹೋಲಿಸಿದಲ್ಲಿ ಇದು ತೀರಾ ಕಮ್ಮಿ. ಹಮ್ಮಿಂಗ್ ಹಕ್ಕಿಗಳ ತೂಕದ ಶೇ.30ರಷ್ಟು ಭಾಗ ಅವಕ್ಕೆ ಹಾರಲು ಬೇಕಾದ ಮಾಂಸಖಂಡಗಳದೇ ಆಗಿದೆ. ಇವು ಗಂಟೆಗೆ 30 ಮೈಲಿಯಷ್ಟು ವೇಗವಾಗಿ ಹಾರಬಲ್ಲವು. ಇದರ ಮೊಟ್ಟೆಯು ಕೂಡ ಚಿಕ್ಕದಾದ್ದರಿಂದ ಇದರ ಮೊಟ್ಟೆಯ ಗಾತ್ರವೂ ಚಿಕ್ಕದು, ಅಂದರೆ ಅರ್ಧ ಇಂಚಿಗೂ ಕಡಿಮೆ. ಹಮ್ಮಿಂಗ್ ಹಕ್ಕಿಗಳ 10 ಗೂಡುಗಳನ್ನು ಒಂದರ ಪಕ್ಕ ಒಂದರಂತೆ ವಯಸ್ಕ ಮನುಷ್ಯನ ಅಂಗೈಯಲ್ಲಿಡಬಹುದು. ದಿನದ ಒಟ್ಟು ತಿನ್ನುವ ಆಹಾರದಲ್ಲಿ ತನ್ನ ದೇಹದ ತೂಕದ ಅರ್ಧದಷ್ಟು ತೂಕದ ಸಿಹಿವಸ್ತು ಇವುಗಳಿಗೆ ಬೇಕೇ ಬೇಕು. ಹಮ್ಮಿಂಗ್ ಹಕ್ಕಿಗಳ ರೆಕ್ಕೆಯ ಬಡಿತದ ವೇಗ 50 ರಿಂದ 200 ಬಡಿತ ಸೆಕೆಂಡಿಗೆ. ವಿಶ್ರಾಂತಿಯಲ್ಲಿದ್ದಾಗ ಇವುಗಳು ನಿಮಿಷಕ್ಕೆ 250 ಬಾರಿ ಉಸಿರಾಡುತ್ತವೆ. ರೋಫಸ್ ಹಮ್ಮಿಂಗ್ ಹಕ್ಕಿ 3000 ಸಾವಿರ ಮೈಲು ವಲಸೆ ಹೋಗುತ್ತದೆ. ರೂಬಿ ತ್ರೋಟೆಡ್ ಹಮ್ಮಿಂಗ್ ಹಕ್ಕಿ 500 ಮೈಲಿ ದೂರವನ್ನು ವಿಶ್ರಾಂತಿಯಿಲ್ಲದೆ ಕ್ರಮಿಸಬಲ್ಲದು. ಇವುಗಳ ಆಯುಸ್ಸು 3 ರಿಂದ 12 ವರ್ಷಗಳು. ಹಮ್ಮಿಂಗ್ ಹಕ್ಕಿಗಳಿಗೆ ವಾಸನೆ ಗ್ರಹಿಸುವ ಶಕ್ತಿಯಿಲ್ಲವಾದರೂ ಇದರ ದೃಷ್ಟಿ ತುಂಬಾ ಸೂಕ್ಷ್ಮ. ಇವು ತಿಂದ ಆಹಾರವನ್ನು 20 ನಿಮಿಷಗಳಲ್ಲಿ ಜೀರ್ಣಿಸಿಕೊಳ್ಳುತ್ತವೆ ಅದೂ ಶೇ.97ರಷ್ಟು. ಇವುಗಳ ಅತಿಚಿಕ್ಕ ಗಾತ್ರದ ಹೊರತಾಗಿಯೂ ಇವುಗಳು ಅತ್ಯಂತ ಆಕ್ರಮಣಕಾರಿಗಳು. ಕಾಗೆ-ಗಿಡುಗಗಳಂತಹ ದೈತ್ಯ ಪಕ್ಷಿಗಳನ್ನು ಬೆದರಿಸ ಬಲ್ಲವು. ಇವು ಎಷ್ಟು ಚಿಕ್ಕವೆಂದರೆ, ಕೆಲವು ಹಮ್ಮಿಂಗ್ ಹಕ್ಕಿಗಳನ್ನು ಏರೋಪ್ಲೇನ್ ಚಿಟ್ಟೆಗಳು ಹಿಡಿದು ತಿನ್ನುತ್ತವೆ. ಜೇಡರ ಬಲೆಗೂ ಸಿಕ್ಕಿಬೀಳುತ್ತವೆ, ಕಪ್ಪೆಗಳು ಇವುಗಳನ್ನು ಹಿಡಿದು ತಿಂದ ಉದಾಹರಣೆಗಳಿವೆ.

ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಕ್ಯೂಬಾ, ಮೆಕ್ಸಿಕೋ, ಅಲಾಸ್ಕ ಹೀಗೆ ಸೀಮಿತ ಪ್ರದೇಶಗಳಲ್ಲಿ ಮಾತ್ರ ಹಮ್ಮಿಂಗ್ ಹಕ್ಕಿಗಳು ಕಂಡು ಬರುತ್ತವೆ. ಅಮೆರಿಕದ ಪಕ್ಷಿಪ್ರಿಯರು ಈ ಹಮ್ಮಿಂಗ್ ಹಕ್ಕಿಗಳಿಗೆ ಆಹಾರದ ಕೊರತೆಯಾಗಬಾರದು ಎಂದು ಕೃತಕವಾದ ಮಕರಂದವನ್ನು ತಯಾರಿಸಿ ತಮ್ಮ ತೋಟಗಳಲ್ಲಿ ಇಡುವ ಪರಿಪಾಠವಿಟ್ಟುಕೊಂಡಿದ್ದಾರೆ. ನಾಲ್ಕಂಶ ನೀರಿಗೆ ಒಂದಂಶ ಸಕ್ಕರೆ ಬೆರೆಸಿ ಚಿಕ್ಕ ಪಾತ್ರೆಗಳಲ್ಲಿ ಇಡಲಾಗುತ್ತದೆ. ಅಲ್ಲಿಗೆ ಬರುವ ಹಮ್ಮಿಂಗ್ ಹಕ್ಕಿಗಳು ನಿರಾಂತಕವಾಗಿ ಈ ಕೃತಕ ಮಕರಂದವನ್ನು ಸವಿಯುತ್ತವೆ. ಉದ್ದನೆಯ ಕೊಕ್ಕು, ವಿಭಿನ್ನವಾದ ನಾಲಗೆ, ಅತ್ಯಂತ ಉತ್ಕ್ರಷ್ಟ ಆಹಾರ ಪಡೆಯಲು ಹೊಂದಿರುವ ಅನನ್ಯವಾದ ರೆಕ್ಕೆಗಳ ಬಡಿತ, ವಲಸೆ ಹೋಗುವ ಗುಣ, ಸಹಿಷ್ಣತೆ ಹೀಗೆ ಎಲ್ಲಾ ವಿಶೇಷಗಳು ಸೇರಿ ಹಕ್ಕಿ ಪ್ರಪಂಚದಲ್ಲೇ ಹಮ್ಮಿಂಗ್ ಹಕ್ಕಿಗಳು ವಿಶಿಷ್ಟ ಸ್ಥಾನ ಪಡೆದಿವೆ. ಎಂದಿನಂತೆ ಕಾಡು ನಾಶ, ರಾಸಾಯನಿಕಗಳ ಬಳಕೆ, ಹವಾಮಾನ ವೈಪರೀತ್ಯ ಇತ್ಯಾದಿಗಳಿಂದಾಗಿ ಅಮೆರಿಕ, ಕ್ಯೂಬಾದಲ್ಲಿ ಹಮ್ಮಿಂಗ್‍ಗಳ ಸಂತತಿ ಕ್ಷೀಣಿಸುತ್ತಿದೆ. ನಮ್ಮ ನಾಡಿನ ಹೂವಿನ ಹಕ್ಕಿಗಳು ಇದೇ ಕಾರಣಕ್ಕಾಗಿ ಅಳಿಯುತ್ತಲಿವೆ. 

*****

 

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *