ಅಮರ್ ದೀಪ್ ಅಂಕಣ

ಹಬ್ಬ ಯಾವುದಾದರೇನು ಮುಬಾರಕ್ ಒಂದೇ: ಅಮರ್ ದೀಪ್ ಪಿ.ಎಸ್.

ಫೆಬ್ರವರಿ 16, 27, ಏಪ್ರಿಲ್ 24, ಡಿಸೆಂಬರ್ 25, ಆಗಸ್ಟ್ 15, ಜನವರಿ 26, ಹೀಗೆ ಸುಮಾರು ದಿನಗಳು ಒಬ್ಬೊಬ್ಬರಿಗೆ ಒಂದೊಂದು ಮರೆಯಲಾರದ ದಿನವಾಗಿರುತ್ತೆ.  ಮದುವೆಯದೋ.  ಹುಟ್ಟುಹಬ್ಬದ್ದೋ… ರಾಷ್ಟ್ರೀಯ ಹಬ್ಬ ಅದು ಬಿಡಿ ಎಲ್ಲರಿಗೂ ಹಬ್ಬವೇ. ಒಮ್ಮೊಮ್ಮೆ ಆ ದಿನಗಳಿಗೆ ಅಂಟಿಕೊಂಡು ಒಂದೊಂದು ಹಬ್ಬ, ಹುಣ್ಣಿಮೆ, ಅಮಾವಾಸ್ಯೆ, ಘಟನೆಗಳು  ಸೇರಿರುತ್ತವೆ. ಹೆಚ್ಚು ಓದಿರದ ನಮ್ಮವ್ವನ ವಯಸ್ಸಿನವರಿಗೆ  "ನನ್ನ  ಹುಟ್ಟಿದ ದಿನಾಂಕ ಯಾವ್ದವ್ವ?" ಅಂತೇನಾದ್ರೂ ಕೇಳಿದ್ರೆ, ಗೊತ್ತಿಲ್ಲೆಪ್ಪಾ, ಆದ್ರ ನೀ ಹುಟ್ಟಿದ್ ಎಲ್ಡು ದಿನಕ್ಕೆ ಕಾರ ಹುಣ್ಣಿವಿ ಇತ್ನೋಡೆಪ್ಪ.  ಅದಾ ವರ್ಸಾ ಇಂದ್ರಮ್ಮ ಅದೆಂತದೋ ಹೇರಿದ್ರಂತ.. ಭಾಳ ಮಂದಿ ಜೈಲಿಗೆ ಹೋಗಿದ್ರು. ಅದಾ ಗದ್ಲಾಗ ನಿಮ್ತಾತ ಪೋಲಿಸ್ರ ಲಾಠಿ ಏಟ್ ತಿಂದ ಕಾಲ್ ಮುರ್ಕೊಂಡಿದ್ದ". ಇಂಥ ಲಗತ್ತು ಗಳೊಂದಿಗೆ ಜನ್ಮ ದಿನವನ್ನು ಜ್ಞಾಪಿಸಿಕೊಂಡು ಹೇಳುತ್ತಾರೆ. ಹೀಗೆ  ಹಬ್ಬಗಳ ಹಿಂದೂ ಮುಂದು ಬರುವ ದಿನಗಳ ಅಂದಾಜಿನ ಮೇಲೆ ಹುಟ್ಟಿದ ದಿನಾಂಕ ಪತ್ತೆಯಾಗುತ್ತಿತ್ತು. ಓಹೋ ಅದು ಜೂನ್ ತಿಂಗಳು. ಇಂದಿರಾಗಾಂಧಿಯವರು ಹೇರಿದ್ದು; ಎಮರ್ಜೆನ್ಸಿ, ಅದಾಗಿದ್ದು 1976.  ಹೀಗೆ  ನಮ್ಮ ಜನ್ಮ ದಿನಾಂಕ ಗೊತ್ತು ಮಾಡಿಕೊಳ್ಳಬಹುದಾಗಿತ್ತು. ಈಗ ಅಂಥ ಕಷ್ಟವೇನಿಲ್ಲ, ಬಿಡಿ. 

ಈ ಹಬ್ಬಗಳದ್ದು ಒಂದು ಸಡಗರವೇ.  ವರ್ಷದಲ್ಲಿ ಮೊದಲು ಶುರುವಾಗುವುದೇ ಸಂಕ್ರಾಂತಿಯಿಂದ. ಶಿವರಾತ್ರಿ, ಕಾಮನ ಹಬ್ಬ, ಉಗಾದಿ, ಒಂದೆರಡು ತಿಂಗಳು ಉಸಿರಾಡಲು ಪುರುಸೊತ್ತು ನೀಡಿ  ಮತ್ತೆ ಶುರುವಾಗುವ ನಾಗರಪಂಚಮಿಯಿಂದ ತಿಂಗಳಿಗೊಂದರಂತೆ  ಗಣೇಶ ಹಬ್ಬ, ದಸರಾ, ದೀಪಾವಳಿ, ಗೌರಿ ಹುಣ್ಣಿಮೆ ಬರುತ್ತವೆ. ಇವು ಮುಖ್ಯವಾದುವು.  ಇನ್ನು ಸಣ್ಣ ಸಣ್ಣವು ಪಟ್ಟಿ ಮಾಡಿದರೆ ಇನ್ನು ಹೆಚ್ಹಾದಾವು.  ಇವು ಹಿಂದುಗಳಲ್ಲಿ ಕಂಡಂತೆ.  ಮುಸ್ಲಿಂ ಸಮುದಾಯಕ್ಕೆ ಸೇರಿದ ಈದ್- ಮಿಲಾದ್, ಬಕ್ರೀದ್, ರಂಜಾನ್, ಕ್ರಿಶ್ಚಿಯನ್ ರಲ್ಲಿ ಗುಡ್ ಫ್ರೈಡೆ, ಕ್ರಿಸ್ಮಸ್, ಹೊಸ ವರ್ಷಾಚರಣೆ. ಇವೆಲ್ಲ ಹಬ್ಬಗಳ ವಿವರ ಎಲ್ಲರಿಗೂ ಗೊತ್ತಿರುವಂಥದ್ದೇ. ಅದರಲ್ಲಿ ವಿಶೇಷವಿಲ್ಲ.   

ನಮ್ಮ  ಎಲ್ಲಾ  ವರ್ಗದ ಜನರು ಇವೇ ಹಬ್ಬಗಳನ್ನು ಅದೆಷ್ಟು ಸಂಪ್ರದಾಯ ಬದ್ಧವಾಗಿ ಆಚರಿಸುತ್ತಾ ಬಂದಿದ್ದಾರೆ. ಆದರೆ, ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದವರಲ್ಲಿ ಹಬ್ಬದ ಸಮಯಕ್ಕೆ ಅವರ ಹತ್ತಿರ ದುಡ್ಡು ಇರುತ್ತೋ ಇಲ್ಲವೋ.  ಇದ್ದರೂ ಹೆಚ್ಚು ಸಂಭ್ರಮದಿಂದ ಆಚರಿಸುವುದು. ಇಲ್ಲದಿದ್ದರೂ ಸಾಲ ಮಾಡಿ ಹೊಂದಿಸಿಕೊಂಡು ಆಚರಿಸುತ್ತಾರೆ.  ಹಿಂದೂಗಳಾದರೆ  ಸಿಹಿ ಊಟ, ಮುಸ್ಲಿಂ, ಕ್ರಿಶ್ಚಿಯನ್ ಬಾಂಧವರಾದರೆ ನಾನ್ ವೆಜ್ ಮಾಡಿಯೋ ಉಂಡು ಖುಷಿಯಾಗಿರುತ್ತಾರೆ.  ಹಬ್ಬಕ್ಕೆ ಮಾಡಿದ ಸಾಲಕ್ಕೆ ಯಾರೂ ಎಂದೂ ಬೇಸರವಿಟ್ಟುಕೊಳ್ಳು ವುದಿಲ್ಲ. ಯಾಕೆಂದರೆ ಸಾಲ ಮಾಡುತ್ತಿರುವುದು ಹಬ್ಬಕ್ಕೆ ಎನ್ನುವ ಸಂತಸವಿರುತ್ತದೆ. 
 
ಅಪ್ಪ ಬದುಕಿದ್ದಾಗ  ಆತ ಅಪ್ಪಟ ಸಸ್ಯಾಹಾರಿ ಆಗಿದ್ದ.  ಆದರೆ, ಆತನಿಗೆ ಮುಸ್ಲಿಂ ಗೆಳೆಯರು ಜಾಸ್ತಿ ಇದ್ದರು. ಹಿಂದೂ ಹಬ್ಬಗಳಲ್ಲಿ ಅಪರೂಪಕ್ಕೆ ಆತನ ಸ್ನೇಹಿತರನ್ನು ಊಟಕ್ಕೆ  ಕರೆತಂದಂತೆ ಮುಸ್ಲಿಂ ಗೆಳೆಯರು ತಮ್ಮ ಹಬ್ಬಕ್ಕೆ ದಾವತ್  (ಆಹ್ವಾನ ) ನೀಡುತ್ತಿದ್ದರು. ಸ್ನೇಹಿತರೊಂದಿಗೆ ಸೇರಿ ನಾನ್ ವೆಜ್ ತಿನ್ನುವುದು ನನಗೆ ಹೆಂಗೋ ರೂಢಿ ಆಗಿಬಿಟ್ಟಿತ್ತು.  ರಜೆಯಲ್ಲಿ ಊರಿಗೆ ಹೋದಾಗ ಅದೊಮ್ಮೆ ಮುಸ್ಲಿಂ ಹಬ್ಬ ಬಂದಿತ್ತು. ಮಾಮೂಲಾಗಿ ಅಪ್ಪ ಹೋಗುತ್ತಿರಲಿಲ್ಲ.  ಗೆಳೆಯರ ಮನೆಯಲ್ಲಿ "ನಿಮಗೋಸ್ಕರ ಸಸ್ಯಹಾರವನ್ನೇ ಪ್ರತ್ಯೇಕ ವಾಗಿ ಮಾಡಿಸುತ್ತೇವೆ ಬನ್ನಿ" ಅಂದರೂ ಹೋಗದವ, ನಾನು ಹೋದ ಸಂಧರ್ಭದಲ್ಲಿ ಅಪ್ಪನ ಗೆಳೆಯರು "ನೀವು ನಿಮ್ಮಗ ಒಟ್ಟಿಗೆ ಬನ್ನಿ" ಎಂದರು.  

ಕ್ಯಾಜುಯಲ್ ಆಗಿ  "ಏನಪ್ಪಾ, ನೀನೇನಾದ್ರೂ ನಾನ್ ವೆಜ್ ತಿಂತೀಯಾ?" ಅಪ್ಪ ಕೇಳಿದ.  ಅಪ್ಪನ ಹತ್ತಿರ ನಂದು ನೇರ ವರ್ತನೆ. "ಹ್ಞೂ"ಅಂದೆ.  ಮುಸ್ಲಿಂ ಬಾಂಧವರ ಮನೆಯಲ್ಲಿ  ಅಕ್ಕಪಕ್ಕಾ  ಕುಳಿತೇ ಆತ ಸಸ್ಯಾಹಾರ ಊಟ ಮಾಡಿದ್ದ, ನಾನು ಮಾಂಸಾಹಾರ.  ಸಸ್ಯಾಹಾರಿ ಕುಟುಂಬದವನಾದ ನಾನು ಅಪ್ಪನ ಜೊತೆಗೆ ಹೀಗೆ ಕುಳಿತು ಉಂಡಿದ್ದು ಸರಿಯೋ ತಪ್ಪೋ ಆ ಮಾತು ಬೇರೆ. ಆದರೆ ನನ್ನ ಬಗ್ಗೆ ಇನ್ಯಾರೋ ನನ್ನ ಅಭ್ಯಾಸಗಳ ಬಗ್ಗೆ ಅಪ್ಪನಿಗೆ ಹೇಳಿ ಮುಜುಗರವಾಗುವ ಬದಲು ನಾನೇ ನೇರವಾಗಿ ಹೇಳಿದ್ದು ಮಾತ್ರ ನಿಜ. ಇದೊಂದೇ ಅಲ್ಲ ಕ್ರಿಶ್ಚಿಯನ್ ಆಪ್ತರ ಮನೆಯಲ್ಲೂ ಗುಡ್ ಫ್ರೈಡೆ, ಕ್ರಿಸ್ಮಸ್ ಹಬ್ಬಗಳಂದು ಕೇಕ್ ತಿಂದಿದ್ದೇನೆ. ನಾನ್ ವೆಜ್ ತಿಂದಿದ್ದೇನೆ. ಮತ್ತು ಕೆಲವು ಅಪ್ತರು ನಮ್ಮ ಮನೆಯ ರೊಟ್ಟಿ, ಅವ್ವ ಮಾಡಿದ ಹೋಳಿಗೆಯನ್ನು ಇಷ್ಟಪಟ್ಟು   ಊಟ ಮಾಡಿದವರಿದ್ದಾರೆ. 

ಇಷ್ಟೆಲ್ಲಾ  ಹಳೆಯ ಕಥೆ ಹೇಳಿದ್ದ್ಯಾತಕೆ ಅಂದರೆ, ನಮ್ಮ ಈಗಿನ ಕಚೇರಿಯಲ್ಲಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಬಾಂಧವರನ್ನು ಬಿಟ್ಟು ಉಳಿದ ಎಲ್ಲಾ ಜಾತಿಯ ನೌಕರರಿದ್ದೇವೆ. ಅವರಲ್ಲಿ ಕೆಲವರು ಪಕ್ಕಾ ಸಸ್ಯಾಹಾರಿಗಳು. ಉಳಿದವರು ಮಾಂಸಾಹಾರವನ್ನು ಸೇವಿಸುವವರು.  ನೌಕರರು ಎಂದಮೇಲೆ ನಮ್ಮಂಥವರದು ನೀವೊಮ್ಮೆ ಕೇಳಬೇಕು.  ಹಳೆಯ ಕನ್ನಡ ಸಿನೆಮಾವೊಂದರಲ್ಲಿ ದಿ: ನರಸಿಂಹ ರಾಜು ರವರು ನಟಿಸಿದಂಥ  "ಒಂದರಿಂದ ಹತ್ತರವೆರೆಗೆ ಉಂಡಾಟ ಉಂಡಾಟ……. ಇಪ್ಪತ್ತೊಂದ ರಿಂದ ಮೂವತ್ತರವೆರೆಗೆ ಭಂಡಾಟ ಭಂಡಾಟ …… " ಅಂತ   ಒಂದು ಹಾಡಿದೆ. ಅದು ಸರ್ಕಾರಿ ನೌಕರರ ಜೀವನ, ಅವರ ಸಂಬಳ, ಅವಲಂಬನೆ ಕುರಿತು  ತಮಾಷೆ ಯಾಗಿ, ವಾಸ್ತವವಾಗಿ ಇರುವಂಥ ಸಂಗತಿಯನ್ನು ಆ ಹಾಡಿನಲ್ಲಿ ಚೆನ್ನಾಗಿ ಬರೆಯಲಾಗಿದೆ.  

ನೌಕರರಿಗೆ ಸಂಬಳ, ಭತ್ಯೆ ಇತ್ಯಾದಿ ಸೌಲಭ್ಯಗಳ ಜೊತೆ ಈ ಹಬ್ಬಗಳನ್ನು ಆಚರಿಸುವ ಸಲುವಾಗಿ ವರ್ಷ ಕ್ಕೊಮ್ಮೆ  ಐದು ಸಾವಿರ ಮುಂಗಡವನ್ನು ಸರ್ಕಾರದಿಂದ ಪಡೆಯಬಹುದು. ಅದಕ್ಕೆ ಬಡ್ಡಿ ಇಲ್ಲ, ಹತ್ತು ಸಮನಾದ ಕಂತುಗಳಲ್ಲಿ ಸರ್ಕಾರಕ್ಕೆ ನಮ್ಮ ವೇತನದಲ್ಲಿ ಕಟಾವುಗೊಳಿಸಿ ಮರುಪಾವತಿ ಮಾಡಲಾಗುತ್ತದೆ. ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ನೌಕರರು ಯಾವುದೇ ರಾಷ್ಟ್ರೀಯ ಹಬ್ಬ ಅಂದರೆ ಯುಗಾದಿ, ದಸರಾ, ದೀಪಾವಳಿ, ಕ್ರಿಸ್ಮಸ್, ರಂಜಾನ್, ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಹೀಗೆ. ಯಾವುದಾದರೂ ಒಂದು ಹಬ್ಬಕ್ಕೆ ವರ್ಷದಲ್ಲೊಮ್ಮೆ ಮುಂಗಡ ಪಡೆಯಬಹುದು.  

ಕಳೆದ ಬಾರಿ ನಾವು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹಬ್ಬದ ಮುಂಗಡವನ್ನು ಪಡೆದಿದ್ದೆವು.  ಅದು ಕಳೆದ ಜೂನ್ ತಿಂಗಳಿಗೆ ಎಲ್ಲಾ ಕಂತುಗಳು ತೀರಿದವು.   ಮತ್ತೆ ನಾವು ಹಬ್ಬದ ಮುಂಗಡ ಪಡೆಯಬೇಕೆಂದರೆ ಪುನಃ ಸ್ವಾತಂತ್ರ್ಯ ದಿನಾಚರಣೆವರೆಗೆ ಕಾಯಬೇಕಿತ್ತು.  ಆದರೆ ಈ ಬಾರಿ ಜುಲೈನಲ್ಲೇ ರಂಜಾನ್ ಹಬ್ಬ ಬಂದಿತು. ಎಲ್ಲರೂ ಆಗಸ್ಟ್ 15ಕ್ಕೆ ಮುಂಗಡ ಪಡೆವ ಯೋಚನೆಯಲ್ಲಿದ್ದರು.  ನನ್ನದು ಈ ಬಾರಿ ಸಂಬಳಕ್ಕಿಂತ ಖರ್ಚೇ ಜಾಸ್ತಿ ಇತ್ತು.  ಹಂಗಾಗಿ ಹೊರಗೆ ಸಾಲ ಮಾಡಲಾ? ಹೇಗೆ? ಯೋಚಿಸುತ್ತಿದ್ದೆ.  ಕ್ಯಾಲೆಂಡರ್ ನೋಡಿದೆ. 29ಕ್ಕೆ ರಂಜಾನ್ ಹಬ್ಬ. ಅದಾಗಿ ಎರಡೇ ದಿನಕ್ಕೆ ನಾಗರ ಪಂಚಮಿ ಹಬ್ಬ.  ಅಬ್ಬಬ್ಬಾ ಅಂದುಕೊಂಡೆ.  

ಹಬ್ಬಕ್ಕೆ ಮುಂಗಡ ಪಡೆದರೆ ಸಂಬಳ ಬರುವವರೆಗಾದರೂ ಸ್ವಲ್ಪ ಸುಧಾರಿಸಿಕೊಳ್ಳಬಹುದೆಂದು ಸಮಾಧಾನ ವಾಯಿತು. ಒಂದು ಮಧ್ಯಾಹ್ನ ಎಲ್ಲಾ ಸಿಬ್ಬಂದಿಯನ್ನು ಕರೆದು ಕೇಳಿದೆ.  "ಏನ್ರಿ, ಈ ಬಾರಿ ರಂಜಾನ್ ಹಬ್ಬ ಆಚರಿಸಬೇಕೆಂದಿದ್ದೇನೆ, ಮತ್ತೆ ನೀವು? " ಕೇಳಿದೆ.  ಮೊದಲಿಗೆ ಅವರಿಗೆ ಅರ್ಥವಾಗಲಿಲ್ಲ. ನಂತರ ಅವರವರ ತಾಪತ್ರಯಗಳು ಕಣ್ಣ ಮುಂದೆ ಬಂದವೋ ಏನೋ.  "ಸರ್, ನಮಗೂ ಮುಂಗಡ ಬೇಕು"ಎಂದರು.  ನೋಡಿ, ದಿನನಿತ್ಯದ ಕಷ್ಟಗಳು ಮಧ್ಯಮ ಮತ್ತು ಕೆಳ ವರ್ಗದ ಜನರಿಗೆ ಅತ್ಯಾಪ್ತರಿದ್ದಂತೆ.  ಜಾಡಿಸಿ ಒದೆಯುವಂತಿಲ್ಲ, ಬರಸೆಳೆದು ಅಪ್ಪಿಕೊಳ್ಳುವಂತೆಯೂ ಇಲ್ಲ.  ಮನೆಗೆ ಬಂದ ಬೇಡದ ಅಥಿತಿಗಳನ್ನು ಅಂತರ ಕಾದುಕೊಂಡೇ ಸತ್ಕರಿಸಿ ಸಾಗಹಾಕಿದಂತೆಯೇ ಇವುಗಳನ್ನು ಕಳಿಸಬೇಕು.  
 
ಸರಿ, ಬಿಲ್ಲು ಖಜಾನೆಗೆ ಕಳಿಸಿದ ತಕ್ಷಣ ಅಲ್ಲಿನ ಗೆಳೆಯ, "ಗಂಗಾಧರ"  "ಈ ಬಾರಿ ರಂಜಾನ್ ಹಬ್ಬಕ್ಕೆ ನಮ್ಮನ್ನು ಕರೀತೀರಾ ಇಲ್ವಾ?" ಅಂದು ತಮಾಷೆ ಮಾಡಿದ.  ಹಬ್ಬದ ಮುಂಗಡದ ಚೆಕ್ಕೂ ಬಂತು. ಜಮೆಯೂ ಆಯಿತು. ರಂಜಾನ್ ಹಬ್ಬವೂ ಮುಗಿಯಿತು.  ನಾಗರ ಪಂಚಮಿ ಹಬ್ಬದಂದು ಹಾಲೆರೆದದ್ದೂ ಆಯಿತು.  ಎಲ್ಲರ ಮುಖದಲ್ಲಿ ಹಬ್ಬ ಆಚರಿಸಿದ ನಗೆ ಇತ್ತು. ನನಗೆ (ದಿನನಿತ್ಯದ ಕಷ್ಟಗಳು) ಅತ್ಯಾಪ್ತರರನ್ನು ಸತ್ಕರಿಸಿದ ಸಮಾಧಾನ.  ನನಗೆ ಯಾವ ಹಬ್ಬವೂ ಹೆಚ್ಚು ಸಂತೋಷವನ್ನು ಉಳಿಸುವುದಿಲ್ಲ. ಎಲ್ಲರೂ ತಮ್ಮ ತಮ್ಮ ಸಡಗರ ಅನುಭವಿಸಿ ಕೊಳ್ಳಲಿ.  ಅವರ ಕಣ್ಣಿಗೆ ನಾನೂ ಅವರಲ್ಲೊಬ್ಬನಂತೆ ಅವರಿಗೆ ಕಂಡರೂ "ನಾನು" ಮಾತ್ರ ನನ್ನ ಚಿತ್ತದಲ್ಲಿರು ತ್ತೇನೆ. 

ನಾನು ಚಿಕ್ಕವನಿದ್ದಾಗಿನಿಂದ ಗಮನಿಸುತ್ತಾ ಬಂದಿದ್ದೇನೆ.  ಈ ಹಬ್ಬಗಳು, ಸಮಾರಂಭಗಳು, ಕೌಟುಂಬಿಕ ಕಾರ್ಯಕ್ರಮಗಳ ಮತ್ತದರ ಆಚೀಚೆ ದಿನಗಳಲ್ಲಿ ನನಗೆ ಒಂಥರಾ uneasiness ಫೀಲ್ ಆಗುತ್ತೆ.  ಕಾರಣ ಇವತ್ತಿಗೂ ಗೊತ್ತಿಲ್ಲ.  ಮನೆಯಲ್ಲಿ ಎಲ್ಲರೂ ಒಂದು ಗುಂಗಿನಲ್ಲಿದ್ದರೆ,  ನಾನೇ ಇನ್ನೊಂದು ದಂಡೆಯಲ್ಲಿರುತ್ತೇನೆ. ಹಂಗಂತ ನನ್ನಿಂದ ಯಾರಿಗೂ irritate ಆಗುವಂತೆ ಇರುವುದಿಲ್ಲ.  ಆದರೂ ನನ್ನೊಂದಿಗೆ ಎಲ್ಲರಿದ್ದರೂ "ನಾನು" ಮಾತ್ರ ಅವರೊಂದಿಗೆ ಇರುವುದಿಲ್ಲ.  

ನಿನ್ನೆ ಬಂದು ಸಿಬ್ಬಂದಿ ನಾಗರ ಪಂಚಮಿ ಹಬ್ಬದ ವಿಶೇಷ ಬೌನ್ಸರ್ ಉಂಡೆಗಳನ್ನು ಸುರುವುತ್ತಾರೋ ಎಂದು ದಿಗಿಲಾಗಿದ್ದೆ.  ಸದ್ಯ ಅಂತಾದ್ದೇನು ಆಗಲಿಲ್ಲ. ಜಸ್ಟ್ ನಾಗರ ಪಂಚಮಿ ಹಬ್ಬದ ಶುಭಾಶಯಗಳಷ್ಟೇ ಮೆಸ್ಸೇಜ್ ಗಳ ಮೂಲಕ, ಮಾತಿನಲ್ಲಿ ವಿನಿಮಯವಾದವು. ನಾನು ಮನಸಿನಲ್ಲೇ ಅಂದುಕೊಂಡೆ, "ಹ್ಯಾಪಿ ರಂಜಾನ್" .  

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

10 thoughts on “ಹಬ್ಬ ಯಾವುದಾದರೇನು ಮುಬಾರಕ್ ಒಂದೇ: ಅಮರ್ ದೀಪ್ ಪಿ.ಎಸ್.

  1. ಲೇಖನ ಚೆನ್ನಾಗಿದೆ…
    ರ೦ಜಾನ್ ನಾಗರ ಪ೦ಚಮಿ ಸೇರಿದ೦ತೆ ಮು೦ಬರುವ ಎಲ್ಲ ಹಬ್ಬಗಳ ಶುಭಾಷಯಗಳು ನಿಮಗೆ ….

  2. ತುಂಬಾ ಇಷ್ಟವಾಯ್ತು.ಹಬ್ಬದ ಮತ್ತು ಆಚೀಚಿನ ದಿನಗಳಲ್ಲಿ ನನ್ನದೂ ಅದೇ ಭಾವ.ditto.

  3. ಲೇಖನ ಚೆನ್ನಾಗಿದೆ! ಹಬ್ಬಗಳು ಹೆಚ್ಚು ಧಾರ್ಮಿಕವಾಗುವ ಬದಲು ಪ್ರಾದೇಶಿಕವಾದರೇ ಎಷ್ಟು ಚೆನ್ನ ಅಲ್ಲವೆ? ಆಗ ಎಲ್ಲರೂ ಸೇರಿ ಆಚರಿಸಬಹುದು.

  4. ಲೇಖನ ಓದಿ ಅಭಿಪ್ರಾಯ ದಾಖಲಿಸಿದ ಎಲ್ಲಾ ಮಿತ್ರರಿಗೂ ನನ್ನ ಧನ್ಯವಾದಗಳು..

  5. Amar, nimma lekhanagalindaagi sarkaari naukari haagoo praamaanika naukarara jeevanada ola noatagaloo oadugarige sigutthive. Naagara Panchami habbavannu 'Ramzan' habbada mungada padedu aacharisida mele nimage 'Panchami Habbada Mubaarak' endu heluvudu bahala sooktha allave?!

  6. ಎಂಥಾ ಸೋಜಿಗದ ವಿಷಯ ಅಮರ್, ವಾಸ್ತವ ಅಲ್ವಾ? ಗ್ರೇಟ್

Leave a Reply

Your email address will not be published. Required fields are marked *