ಮೊನ್ನೆ ವಾಟ್ಸಾಪು, ಫೇಸ್ಬುಕ್ಕುಗಳಲ್ಲಿ ನಾಗರಪಂಚಮಿ ಶುಭಾಶಯಗಳು ಅಂತ ನೋಡಿದ್ಮೇಲೇ ಇವತ್ತು ನಾಗರಪಂಚಮಿ ಅಂತ ನೆನಪಾಗಿದ್ದು. ಊರಲ್ಲಿದ್ದಾಗ ನಾಗರಪಂಚಮಿಯೆಂದ್ರೆ ಅದೆಷ್ಟು ಖುಷಿ. ಅಮ್ಮ ಮಾಡೋ ಮಂಡಕ್ಕಿ ಉಂಡೆಯ ರುಚಿಗಾಗಿ ಕಾಯೋದೇನು, ಪೂಜೆಗಾಗಿ ಹಿಂದಿನ ದಿನವೇ ನಾಗರಬನವನ್ನೆಲ್ಲಾ ಚೊಕ್ಕ ಮಾಡಿ, ಅದಕ್ಕೆ ಹೋಗೋ ದಾರಿಯಲ್ಲಿದ್ದ ಹುಲ್ಲನ್ನೆಲ್ಲಾ ಒಂದಿಷ್ಟು ಸವರಿ ಇಡೋ ಉಮೇದೇನು, ಶಾಲೆಗೊಂದಿನ ರಜೆಯೆಂಬ ಖುಷಿಯೇನು. ಇದರೊಂದಿಗೇ ಹಬ್ಬಗಳ ಸಾಲು ಶುರುವಾಗುತ್ತೆಂಬ ನಿರೀಕ್ಷೆಯೇನು. ಆಹಾ. ಒಂದು ಕಿರುಬೆರಳ ಉಗುರಿಗಾದ್ರೂ ಮದರಂಗಿ ಹಚ್ಚಿಕೊಳ್ಳಬೇಕೆಂಬ ಅಲಿಖಿತ ನಿಯಮದಿಂದಾಗಿ ಹುಡುಗರಾದ ನಮ್ಮ ಬೆರಳುಗಳೂ ಮದರಂಗಿಯ ರಂಗು ಪಡೆಯುತ್ತಿದ್ದ ದಿನಗಳು ಪದವಿಯ ಕಾಲದಲ್ಲೂ ಮುಂದುವರಿದದ್ದು ಇನ್ನೊಂದು ಕತೆ. ಕಾಲೇಜಿನಲ್ಲಿದ್ದ ಉತ್ತರದ ಹುಡುಗರದೆಲ್ಲಾ ನಾಗರಪಂಚಮಿಯ ನಂತರ ಕಾಲೇಜಿಗೆ ಮರಳಿದಾಗ ಒಂದೇ ಪ್ರಶ್ನೆ. ಏನಿದು, ಹುಡುಗನಾಗಿ ನಿನ್ನ ಬೆರಳಲ್ಲಿ ಮದರಂಗಿಯ ರಂಗು ಅನ್ನೋದೇ ಅವರ ಕುತೂಹಲ. ನಾಗರಪಂಚಮಿ ಹಬ್ಬದ ಬಗ್ಗೆ, ಅದರಲ್ಲಿ ಮನೆಯ ಎಲ್ಲರಿಗೂ ಮದರಂಗಿ ಹಚ್ಚೋ ಸಂಪ್ರದಾಯದ ಬಗ್ಗೆ, ಮದರಂಗಿಯ ಕ್ರಿಮಿನಾಶಕ ಗುಣಗಳ ಬಗ್ಗೆ ನನಗೆ ತಿಳಿದದ್ದನ್ನು ಹೇಳ್ತಾ ಇದ್ರೆ ಅವರ ಮುಖದಲ್ಲಿ ಹೀಗೂ ಉಂಟೆ ಎಂಬ ಭಾವ !ನಾಗನ ಮೇಲೆ ಪಂಚಮಿಯ ದಿನದಂದು ಎರೆದ ಹಾಲ ಬಿಂದುಗಳು ನಿಧಾನವಾಗಿ ಧರೆಗಿಳಿದು ಇಂಗಿಹೋಗುವಂತೆ ಕರಗಿಹೋದ ಕಾಲದೊಂದಿಗೆ ಹಬ್ಬದ ನಗುವೂ ಮಾಸುತ್ತಾ ಬಂದಿತ್ತು. ಓದುವಾಗ ಹೊರಗಡೆ ಇರೋದಕ್ಕೂ, ಪದವಿ ಮುಗಿಸಿ ಹೊಟ್ಟೆಪಾಡಿಗೆ ಅಂತ ಹೊರಗಡೆ ಇರೋದಕ್ಕೂ ವ್ಯತ್ಯಾಸ, ಅವರ ಮನದ ತಲ್ಲಣಗಳ ಅನುಭವ ನಿಧಾನವಾಗಿ ಆಗತೊಡಗಿತ್ತು.
ಹೊಟ್ಟೆಪಾಡಿಗೆ ಪೇಟೆಗೆ ಬಂದು ಏನೋ ಒಂದು ಕೆಲಸ ಹಿಡಿದ ಹುಡುಗನಿಗೆ ಮೊದಮೊದಲು ಹಬ್ಬ ಬಂದಾಗೆಲ್ಲಾ ಸಖತ್ ಖುಷಿ. ಹಬ್ಬ ಯಾವಾಗ ಬರುತ್ತೋ, ಯಾವಾಗ ಊರಿಗೆ ಹೋಗ್ತೀನೋ ಅನ್ನೋ ನಿರೀಕ್ಷೆ. ಆದ್ರೆ ಭಾರತೀಯ ಹಬ್ಬಗಳ್ಯಾವುದಕ್ಕೂ ತಾ ಕೆಲಸ ಮಾಡೋ ಆಫೀಸಿನಲ್ಲಿ ರಜೆ ಸಿಗೋಲ್ಲ. ಅದಕ್ಕೆ ರಜೆ ಬೇಕೂಂದ್ರೆ ತಿಂಗಳ ಮೊದಲೇ, ರಜೆ ಕೇಳಿರಬೇಕು.ಎಲ್ಲಾ ಹಬ್ಬಕ್ಕೆ ಹೋಗ್ತಾರೆ ಅಂತ ಕಂಪೆನಿ ಮುಚ್ಚೋಕೆ ಸಾಧ್ಯವಾಗದ ಕಾರಣ ತನ್ನಂತಾ ಬಕರಾಗಳು ಹಬ್ಬದ ದಿನವೂ ಆಫೀಸಿಗೆ ಬರಬೇಕಾಗುತ್ತೆ ಅನ್ನೋ ಕಹಿಯಾದ ಸತ್ಯ ಅರಿವಾಗೋದ್ರಲ್ಲಿ ಮೊದಲ ಹಬ್ಬ ಕಳೆದೇಹೋಗಿತ್ತು ! ಮುಂದಿನ ಹಬ್ಬಕ್ಕೆ ರಜೆ ಕೇಳೋಕೆ ಹೋದ್ರೂ ಅವತ್ತೇ ತನ್ನ ಬಾಸು, ಹಿರಿಯ ಸಹೋದ್ಯೋಗಿಗಳೆಲ್ಲಾ ರಜೆ ಹಾಕ್ತಿದಾರೆ ಹಂಗಾಗಿ ಆಫೀಸಲ್ಲಿರೋ ಕೆಲಸ ಮಾಡೋಕೆ ತಾನೇ ಬೇಕು ಅನ್ನೋ ಸತ್ಯದ ದರ್ಶನವಾಗಿ ಮತ್ತೊಮ್ಮೆ ಮೊಗದ ಕಳೆಗುಂದಿತ್ತು. ಪಂಚಮಿಗೂ ಹೋಗಲಾಗಲಿಲ್ಲ, ಗಣೇಶ ಚತುರ್ಥಿಗೂ ಹೋಗಲಾಗಲಿಲ್ಲವೆಂಬ ಬೇಸರದಲ್ಲಿ ತಾನಿದ್ರೆ ಆ ಹಬ್ಬದ ಸಂಭ್ರಮಗಳ ಬಗ್ಗೆ ಮತ್ತೆ ಮತ್ತೆ ತೋರಿಸಿ ಹೊಟ್ಟೆಯುರಿಸೋ ಟೀವಿಯವ್ರ ಮೇಲೆ ಸಖತ್ ಸಿಟ್ಟು ಬಂದಿತ್ತು ! ಜೊತೆಗೆ ಗೌರಿ ಹಬ್ಬಕ್ಕೆ ಹುಡುಗಿಯರಿಗಾದ್ರೆ ಕೆಲಸ ಇರುತ್ತೆ. ನಿನಗೇನು ಕೆಲಸವೋ ? ಬಾ ಆಫೀಸಿಗೆ ಅಂದ ಬಾಸಿಣಿಯ ಮಾತುಗಳಿಂದ ವಿಪರೀತ ಬೇಜಾರಾಗಿದ್ರೂ ಹೇಳಿಕೊಳ್ಳೋ ಪರಿಸ್ಥಿತಿಯಿರಲಿಲ್ಲ. ಹುಡುಗಿಯರಿಗೆ ಮಾತ್ರ ಎಲ್ಲಾ ಹಬ್ಬಕ್ಕೂ ರಜೆ ಸಿಗುತ್ತೆ. ಹುಡುಗರ್ಯಾಕೆ ಯಾವಾಗ್ಲೂ ಗೋಗರೆಯಬೇಕು ರಜೆಗೆ ಅನ್ನೋ ಪ್ರಶ್ನೆ ಬಾಯಿತುದಿವರೆಗೆ ಬಂದಿದ್ರೂ ಈಗಷ್ಟೇ ಕೆಲಸಕ್ಕೆ ಸೇರಿರೋ ತನ್ನಂತವನ ಬಾಯಲ್ಲದು ದೊಡ್ಡ ಮಾತಾಗುತ್ತದೆಯೆಂದು ತಡೆದ ವಿವೇಕದಿಂದ ಅವನವತ್ತು ಸುಮ್ಮನಾಗಿದ್ದ. ಉಳಿದುಕೊಂಡಿರೋ ಬೀದಿಯ ಚಿಳ್ಳೆಪಿಳ್ಳೆ ಹುಡುಗರೆಲ್ಲಾ ಹೊಸಬಟ್ಟೆ ತೊಟ್ಟು ಕುಣಿದಾಡ್ತಿರೋ ಸಂದರ್ಭದಲ್ಲಿ ತಾ ಮಾತ್ರ ಆಫೀಸಿಗೆ ತೆರಳಬೇಕಾದ ಬೇಸರದ ಬಗ್ಗೆ ಊರಲ್ಲಾದರೂ ಹೇಗೆ ಹೇಳೋದು ? ಆ ಕೆಲಸವೂ ಬೇಡ, ಏನೂ ಬೇಡ, ಬಂದುಬಿಡು ಊರಿಗೆ, ಆರಾಮಾಗಿದ್ದುಬಿಡು ಅನ್ನುತ್ತಾರೇನೋ ನನ್ನ ಹೆತ್ತವರು. ಆದರೆ ಇಷ್ಟು ವರ್ಷ ಓದಿ, ಅದೆಷ್ಟೋ ಕಷ್ಟಪಟ್ಟು ಪಡೆದ ಈ ಕೆಲಸವನ್ನ ಅದೇಗೆ ತಾನೇ ಬಿಡೋಕಾಗುತ್ತೆ ಅಂತ ಸಮಾಧಾನ ಮಾಡ್ಕೊಳ್ಳೋ ಹೊತ್ತಿಗೆ ಹಬ್ಬ ಕಳೆದೇ ಹೋಗಿತ್ತು.
ಎದ್ದೂ ಬಿದ್ದೂ ರಜೆಗಿಟ್ಟಿಸಿದ ಮೂರನೇ ಹಬ್ಬದ್ದು ಮತ್ತೊಂದು ಕತೆ. ರೈಲಿನ ವಿಷಯ ಬಿಡಿ, ಕೊನೆ ಗಳಿಗೆಯಲ್ಲಿ ರಜೆ ಮಂಜೂರಾದ್ದರಿಂದ ಬುಕ್ ಮಾಡೋಕೆ ಒಂದು ಬಸ್ಸೂ ಖಾಲಿಯಿರಲಿಲ್ಲ ! ಊರಿಗೆ ತೆರಳೋಕೆ ಬಸ್ಸೇ ಸಿಗದೆ ರಾತ್ರಿಯೆಲ್ಲಾ ಕಾದು, ಕೊನೆಗೆ ಸಿಕ್ಕ ಒಂದು ಕೆಂಪು ಬಸ್ಸಲ್ಲಿ ಅದೆಷ್ಟೋ ಹೆಚ್ಚು ದುಡ್ಡು ಕೊಟ್ಟರೂ ಕೂರಲು ಕಾಗವಿಲ್ಲದೆ ಎಂಟು ಘಂಟೆ ನೇತಾಡುತ್ತಲೇ ಊರು ತಲುಪಿದ ಸುಸ್ತಿನ ಜೊತೆಗೆ, ಆ ಹಬ್ಬದಲ್ಲಿ ಪ್ರಯಾಣಕ್ಕೆ, ಅದಕ್ಕೆ ಇದಕ್ಕೆ ಅಂತ ಖಾಲಿಯಾದ ಜೇಬು ಯಾಕಾದ್ರೂ ಊರಿಗೆ ಹೋದೆನೋ ಅನಿಸಿಬಿಟ್ಟಿತ್ತು ! ಅದರ ಮುಂದಿನ ಸಲ ಹಬ್ಬಕ್ಕೆ ಬಸ್ ಬುಕ್ ಮಾಡಿದ್ದು ಹೌದಾದ್ರೂ ಅವತ್ತಿನ ದಿನ ವಿಪರೀತ ಟ್ರಾಫಿಕ್ಕು. ಹತ್ತರ ಬಸ್ಸು ಹಿಡಿಯೋಕೆ ಆರೂವರೆಗೇ ಬಿಟ್ಟು ಮೂರೂವರೆ ತಾಸು ಟ್ರಾಫಿಕ್ಕಲ್ಲಿ ಸಿಕ್ಕ ದಿನ ಇಷ್ಟೆಲ್ಲಾ ಕಷ್ಟಪಟ್ಟು ತಾ ಊರಿಗೆ ಹೋಗ್ಲೇಬೇಕಾ ? ಹಬ್ಬವೂ ಸಾಕು, ಈ ಪಯಣದ ಜಂಜಾಟವೂ ಸಾಕು ಅನಿಸಿಬಿಟ್ಟಿತ್ತು !
ಇದನ್ನೋದ್ತಿರೋ ನಿಮ್ಮಲ್ಲನೇಕರಿಗೆ ಮೇಲಿನನುಭವಗಳು ನಿಮ್ಮವೇ ಅನಿಸಿದರೆ ಅಚ್ಚರಿಯಿಲ್ಲ. ಹಳ್ಳಿಗಳಲ್ಲಿರೋ ಜನಕ್ಕೆ ಹಳ್ಳಿಗಳಲ್ಯಾರಿದ್ದಾರೆ ಈಗ ಹಬ್ಬ ಮಾಡೋಕೆ ? ಮನೆಮಕ್ಕಳೆಲ್ಲಾ ಪಟ್ಟಣ ಸೇರಿರೋ ಸಂದರ್ಭದಲ್ಲಿ ಊರಿಗೆ ಊರುಗಳೇ ಬಣಬಣವೆನ್ನುತ್ತಿರೋ ಬೇಸರದಲ್ಲಿ ಯಾವ ಹಬ್ಬ ತಾನೇ ಕಳೆಗಟ್ಟೀತು ಎಂಬ ಪ್ರಶ್ನೆಯೂ ಮೂಡಿರಬಹುದು. ಟೀವಿಯಲ್ಲಿ ತೋರಿಸುವಂತೆ ಪೇಟೆಯ ಹಬ್ಬಗಳಂದ್ರೆ ಝಣ ಝಣ.ಹೊಸ ಹೊಸಾ ಬಟ್ಟೆ ತೊಟ್ಟ, ಮುಡಿತುಂಬಾ ಹೂಗಳ ಮುಡಿದ ಹುಡುಗಿಯರು, ಅವರ ಅಮ್ಮಂದಿರು ದೇಗುಲಗಳ ಪ್ರವೇಶಿಸುತ್ತಿರೋ ದೃಶ್ಯಗಳ ನೋಡುತ್ತಾ, ಈ ಹಬ್ಬಕ್ಕೂ ಬಾರದ ಮನೆಮಕ್ಕಳ ನೆನೆದು ಪೇಟೆಯ ಹಬ್ಬಗಳೇ ಹಬ್ಬಗಳು. ಆ ಖುಷಿಯೇ ಸೌಭಾಗ್ಯ, ಇಲ್ಲೇನಿದೆ ಬದನೆಕಾಯಿ ಅಂದುಕೊಳ್ಳುತ್ತಿರುವವರೂ ಇರಬಹುದು. ಅದೇ ತರ ಟ್ರೆಕ್ಕಿಂಗಿಗೆ ಹೋಗುವಾಗ ಕಂಡ ನಾಗರಬನವೊಂದಕ್ಕೆ ನಾಗರಪಂಚಮಿಯ ದಿನ ಅಲಂಕಾರ ಮಾಡೂತ್ತಾರಂತೆ, ಭೂಮಿ ಹುಣ್ಣಿಮೆಯ ದಿನ ತಾ ಹಾದುಹೋದು ತೋಟಗಳ ಪೂಜೆ ಮಾಡುತ್ತಾರಂತೆ, ಕಡುಬು, ಮೊಸರನ್ನ ಮಾಡಿ ಭೂಮಿಯಲ್ಲಿ ಹುಗಿಯುತ್ತಾರಂತೆ ಎಂದೆಲ್ಲಾ ಕೇಳೋ ಪಟ್ಟಣಿಗನಿಗೆ ಹಳ್ಳಿಗಳ ಹಬ್ಬವೇ ಅದ್ಭುತವೆನಿಸಬಹುದು. ಹಬ್ಬವೆಂದರೆ ಇಲ್ಲೇನಿದೆ ಮಣ್ಣು ? ನಾಗರಪಂಚಮಿಯೋ, ದೀಪಾವಳಿಯೋ, ಕಾರ್ತೀಕವೋ.. ಯಾವುದಾದ್ರೂ ಪಕ್ಕದಲ್ಲಿರೋ ದೇವಸ್ಥಾನದಲ್ಲೊಂದು ಪೂಜೆ ನಡೆಯುತ್ತೆ. ಬೆಳಗ್ಗಿನಿಂದ ಸಂಜೆಯವರೆಗೆ ಮೈಕ್ ಹಾಕಿ ಅದೊಂದಿಷ್ಟು ಹಾಡು ಹಾಕುತ್ತಾರೆ. ರಾತ್ರಿಗೆ ಒಂದಿಷ್ಟು ಪಟಾಕಿ ಹೊಡೆದುಬಿಟ್ರೆ ಮುಗೀತು ಹಬ್ಬ. ವಾಟ್ಸಾಪಲ್ಲಿ, ಫೇಸ್ಬುಕಲ್ಲಾದ್ರೂ ಮುಂಚೆಯೆಲ್ಲಾ ಹಬ್ಬದ ಶುಭಾಶಯ ಹೇಳೋ ಖುಷಿಯಿರ್ತಿತ್ತು. ಆದ್ರೆ ಈಗ ಅದೂ ಇಲ್ಲ. ಥಾಂಕ್ಯೂ, ವಿಷ್ ಯು ದ ಸೇಮ್ ಅನ್ನೋ ಅದೇ ಉತ್ತರಗಳು, ಒಂದು ಚಿತ್ರಕ್ಕೆ ಮತ್ತೊಂದು ಚಿತ್ರ ಎಂಬ ಲಾಜಿಕ್ಕಿನಲ್ಲಿ ಅದೇ ನಾಲ್ಕೈದು ಚಿತ್ರಗಳನ್ನು ಎಲ್ಲರಿಗೂ ಕಳಿಸೋ ಥ್ರಿಲ್ಲೂ ಈಗ ಉಳಿದಿಲ್ಲ. ಮುಂಚೆಯೆಲ್ಲಾ ಹಬ್ಬದ ಶುಭಾಶಯಗಳು ಅಂತ ಅಂಚೆಯಲ್ಲಿ ಕಾರ್ಡುಗಳನ್ನು ಕಳಿಸೋ, ಮಿಂಚಂಚೆ ಮಾಡೋ ಪದ್ದತಿಯಾದ್ರೂ ಇತ್ತು. ಆದ್ರೆ ಈಗ ಯಾವುದಕ್ಕೂ ಸಮಯವಿಲ್ಲದ ಜನಕ್ಕೆ ಇದಕ್ಕೂ ಸಮಯವಿಲ್ಲ. ಹಬ್ಬವೆಂದ್ರೆ ಏನಾದ್ರೂ ಸಿಹಿತಿಂಡಿಗಳಾದ್ರೂ ಇರ್ತಿತ್ತು ಮುಂಚೆ. ಈಗ ಅಪ್ಪಾ, ಇದರಲ್ಲಿ ಶುಗರ್ರು, ಇದರಲ್ಲಿ ಕೊಲೆಸ್ಟರಾಲು . ಹಂಗಾಗಿ ನಾನು ತಿನ್ನೋಲ್ಲ ಅನ್ನೋ ಮಕ್ಕಳು, ನಮ್ಮಿಬ್ಬರಿಗೆ ಅಂತ ಇಡೀ ದಿನ ಒದ್ದಾಡಿಕೊಂಡು ಹೋಳಿಗೆ ಮಾಡಬೇಕೇನ್ರಿ, ಪಕ್ಕದ ಬೇಕರಿಯಿಂದ ತಂದುಬಿಡೋಣ್ವಾ ಅನ್ನೋ ಮಡದಿಯ ಮುಂದೆ ನಿರುತ್ತರ ನಾನು. ಎಲ್ಲಾ ಅವರವರ ಲೈಫಲ್ಲಿ ಬಿಸಿಯಾಗಿರೋ ಸಂದರ್ಭದಲ್ಲಿ ಅಣ್ಣ-ತಮ್ಮಂದಿರೆಲ್ಲಾ ಒಟ್ಟಿಗೇ ಕೂತು ಊಟಮಾಡೋ, ಆ ಸಮಯದಲ್ಲಾದ್ರೂ ಜೊತೆಯಾಗೋ ಖುಷಿಯ ಹಬ್ಬಗಳ ಸವಿ ಇಲ್ಲೆಲ್ಲಿದೆ ? ಹಬ್ಬವೆಂದ್ರೆ ಹಳ್ಳಿಗಳಲ್ಲೇ ಅಂತ ಪಟ್ಟಣಿಗನೊಬ್ಬನಿಗೆ ಅನಿಸಬಹುದು !
ಆ ಹಬ್ಬ, ಈ ಹಬ್ಬ ಅಂತ ವರ್ಷವಿಡೀ ಹಬ್ಬ ಮಾಡ್ತಾ ಇರ್ತೀರ ನೀವು. ವರ್ಷಕ್ಕೆ ಎರಡೋ ಮೂರೋ ಹಬ್ಬ ಮಾಡೋ ನಾವೆಲ್ಲಿ , ಪ್ರತಿಯೊಂದಕ್ಕೂ ರಜ ತಗೊಂಡು ವರ್ಷದಲ್ಲಿ ಕೆಲಸ ಮಾಡೋ ದಿನಕ್ಕಿಂತ ಮಾಡದ ದಿನಗಳೇ ಜಾಸ್ತಿ ಇರೋ ನೀವೆಲ್ಲಿ, ಅದಕ್ಕೆ ಭಾರತ ಹಿಂದುಳಿದಿರೋದು ಅಂತೊಂದು ಲೆಕ್ಕಾಚಾರ ಕೊಡ್ತಿದ್ರು ಬು.ಜೀ ಹಿರಿಯರೊಬ್ಬರು. ವರ್ಷದ ಮುನ್ನೂರೈವತ್ತು ದಿನಗಳಲ್ಲಿ ೫೨ ಭಾನುವಾರ ಮತ್ತು ೨೬ ಶನಿವಾರದ ಅರ್ಧ ದಿನಗಳ ರಜಾ ಅಂದ್ರೆ ೨೮೭ ದಿನ ಉಳಿಯುತ್ತೆ. ಅದರಲ್ಲಿ ದೀಪಾವಳಿ, ಗಣೇಶ ಚತುರ್ಥಿಗಳ ಎರಡೆರಡು ದಿನ, ಶಿವರಾತ್ರಿ, ಹೋಳಿ ಹುಣ್ಣಿಮೆ, ನವರಾತ್ರಿ,ಮಕರ ಸಂಕ್ರಾಂತಿ ಅಂತ ಎಂಟು ದಿನದ ರಜಾ ಸಿಕ್ಕಿದ್ರೆ ಮೊಹರಂ, ಈದ್ ಮಿಲಾದ್, ಬಕ್ರೀದ್ , ಗುಡ್ ಫ್ರೈಡೆ, ಕ್ರಿಸ್ ಮಸ್ ಹೀಗೆ ಒಂದು ಹದಿನೈದು ರಜಾಗಳ ಜೊತೆಗೆ ಗಾಂಧಿಜಯಂತಿ, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಆ ಜಯಂತಿ, ಈ ಜಯಂತಿ ಅಂತ ಎಲ್ಲಾ ಸೇರಿ ಒಂದಿಪ್ಪತ್ತು ದಿನಗಳ ರಜಾ.೨೬೨ ದಿನಗಳ ಕೆಲಸ ಅಂದುಕೊಂಡ್ರೂ ಅದರಲ್ಲಿ ಒಂದಿಷ್ಟು ಸಿ.ಎಲ್ಲು, ಇ.ಎಲ್ಲು, ಆರ್.ಎಚ್ಗಳು ಅಂತ ಎಲ್ಲಾ ಸೇರಿ ಒಂದು ೨೦-೨೨ ರಜಾ. ಅಂದ್ರೆ ೨೪೦ ಆಯ್ತು. ಅದರಲ್ಲೂ ಆ ಸ್ಟ್ರೈಕು, ಈ ಎಲೆಕ್ಷನ್ನು, ಇನ್ನೆಂತದೋ ಅಂತ ಮಧ್ಯ ಮಧ್ಯ ಕೆಲಸ ಕೆಡೋದು, ವಾರ್ಷಿಕೋತ್ಸವದ ತಯಾರಿ ಅಂತ ಒಂದಿಷ್ಟು ದಿನ ಏನೂ ಕೆಲಸ ಮಾಡದೇ ಇರೋದು ಇದ್ದಿದ್ದೇ ! ಅಂದ್ರೆ ವರ್ಷಕ್ಕೆ ೨೩೦ ದಿನ ಕೆಲಸ ಮಾಡಿದ್ರೆ ಹೆಚ್ಚು ಭಾರತದವ್ರು. ಅದಕ್ಕೇ ಹಿಂಗಿರೋದು ಅಂತಿದ್ರು ಅವ್ರು. ಸ್ವಾಮಿ ವಾರಕ್ಕೆ ಐದೇ ದಿನ ಕೆಲಸ ಮಾಡಿ, ಕ್ರಿಸ್ಮಸ್ಸಿಗೆ ಒಂದು ತಿಂಗಳು ರಜಾ ತಗೊಳ್ಳೊ ಜರ್ಮನಿ ಮುಂತಾದ ಪಾಶ್ಚಾತ್ಯ ದೇಶಗಳ ಜನರು ಯಾವ ಸಿ.ಎಲ್ಲು, ಇ.ಎಲ್ಲುಗಳ ತಗೊಳ್ಳದೇ ಇದ್ರೂ ಮಾಡೋ ಕೆಲಸ ವರ್ಷಕ್ಕೆ ೨೩೧ ದಿನ ಆಯ್ತು. ಹಾಗಾದ್ರೆ ಅವ್ರೂ ಹಿಂದಿರ್ಬೇಕಲ್ವಾ ಅನ್ನೋ ಮಾತು ಬಾಯ ತುದಿಗೆ ಬಂದ್ರೂ ನುಂಗಿಕೊಂಡೆ ಹಿರಿಯರೆದುರು ಎದುರಾಡೋದು ಒಳ್ಳೆಯದಲ್ಲಾ ಅಂತ. ಆ ಹಬ್ಬ, ಈ ಹಬ್ಬ, ಜಯಂತಿ ಅಂತ ಬೇರ್ಬೇರೆ ಲೆಕ್ಕ ಕೊಟ್ರಲ್ಲಾ, ಅವೆಲ್ಲಾ ಭಾನುವಾರವೇ ಬರೋ ಸಂದರ್ಭಗಳು ಎಷ್ಟಿವೆ ಗೊತ್ತಾ ? ಆ ಡೆಡಲೈನ್ ಈ ಡೆಡ್ಲೈನು ಅಂತ ರಜೆಗಳೇ ಇರದೇ ಕೆಲಸ ಮಾಡೋ ಐಟಿಗರಲ್ಲಿ, ಜಗವೆಲ್ಲಾ ರಜೆಯೆಂತಿರೋ ಖುಷಿಯಲ್ಲೂ ಅಂಗಡಿ ತೆರೆದು ಕೂರೋ ವ್ಯಾಪಾರಿಗಳಲ್ಲಿ ಎಲ್ಲಿಯ ಸೋಂಬೇರಿತನ ಕಾಣುತ್ತೆ ನಿಮಗೆ ? ಕೆಲಸ ಆಗ್ಬೇಕು ಅಂದ್ರೆ ಬಂದಿದ್ದು ಎಂಟಕ್ಕೆ, ಹೋಗಬೇಕಾದ್ದು ಐದಕ್ಕೆ ಅನ್ನೋ ಪ್ರಜ್ಞೆಯೇ ಇಲ್ಲದೆ ಅದೆಷ್ಟು ಹೊತ್ತಾದರೂ ಕೂತು ಮುಗಿಸೋ ಜನರೆಲ್ಲಿ, ಘಂಟೆ ಹೊಡೆದಂತೆ ನಾಲ್ಕೂವರೆಗೇ ಮನೆಗೆ ಹೋಗೋ ಜನರೆಲ್ಲಿ ? ಗಾಣದ ಎತ್ತುಗಳಂತೆ , ಪರಿವಾರದ ಪರಿವೆಯೇ ಇಲ್ಲದೇ ದುಡಿವ ಜನ ಹಬ್ಬ ಅನ್ನೂ ನೆಪಕ್ಕಾದರೂ ಒಂದಿಷ್ಟು ಹೊತ್ತು ಮಡದಿ, ಮಕ್ಕಳೊಂದಿಗೆ ಆರಾಮಾಗಿದ್ದರೆ ಅದೇನು ಕಷ್ಟ ನಿಮಗೆ ಅಂತ ಕೇಳೋ ಮನಸ್ಸೂ ಆಗಿತ್ತು.
ದೂರದ ಬೆಟ್ಟ ಕಣ್ಣಿಗೆ ನುಣ್ಣಗೇ ಅನ್ನುವಂತೆ ಹಳ್ಳಿಯವರಿಗೆ ಪಟ್ಟಣವೂ, ಪಟ್ಟಣಿಗರಿಗೆ ಹಳ್ಳಿಯ ಹಬ್ಬದಾಚರಣೆಯೂ ಸಂತಸದಾಯಕವಾಗಿ ಕಾಣಬಹುದು. ಆದ್ರೆ ನಿಜವಾದ ಹಬ್ಬದ ಖುಷಿಯಿರೋದು ಹಳ್ಳಿಯಲ್ಲೂ ಅಲ್ಲ, ಪಟ್ಟಣಗಳಲ್ಲೂ ಅಲ್ಲ. ಅದನ್ನಾಚರಿಸೋ ಮನಸ್ಸುಗಳಲ್ಲಿ. ದೂರಾದ ಮನಸ್ಸುಗಳ ಬೆಸೆಯೋ ಶುಭದಿನವೇ ಹಬ್ಬ. ನೋವಲ್ಲೇ ಮುಳುಗಿಹೋಗಿರೋ ಮನದಲ್ಲೊಂದು ಮುಗುಳ್ನಗೆ ತರುವ ಕ್ಷಣವೇ ಹಬ್ಬ. ತನ್ನ ಮಕ್ಕಳೆಲ್ಲಾ ಹಬ್ಬದ ಸಂದರ್ಭದಲ್ಲಾದರೂ ಒಟ್ಟಾಗಲಿ ಎಂದು ಆಶಿಸೋ ತಾಯಿಗೆ ಎಲ್ಲರೂ ತನ್ನ ಮನೆಗೆ ಬಂದು ಆಚರಿಸಿದರೆ ಮಾತ್ರ ಹಬ್ಬ ಖುಷಿಯೆನಿಸೋಲ್ಲ. ತಾನೇ ಮಗನೊಬ್ಬನ ಮನೆಗೆ ಹೋಗಿ ಅಲ್ಲೇ ಎಲ್ಲಾ ಸೇರಿ ಆಚರಿಸಿದ ಹಬ್ಬವೂ ಖುಷಿ ಕೊಡುತ್ತೆ. ಮನೆಗೆ ಬರಲಾಗದಿದ್ದರೂ ತನ್ನ ಸಹೋದ್ಯೋಗಿಗಳ ಜೊತೆ ಗಡಿಯಲ್ಲೇ ದೀಪಾವಳಿಯನ್ನಾಚರಿಸೋ ಯೋಧನಿಗೆ ಪಾಪಿ ಪಾಕಿಗಳು ಗುಂಡು ಹಾರಿಸದೇ ಕ್ಷೇಮವಾಗುಳಿದ ತನ್ನ ಸಹೋದ್ಯೋಗಿಗಳ ಮೊಗದಲ್ಲಿನ ನಗು, ಆ ಕ್ಷಣಕ್ಕೆ ತಯಾರಿಸಿದ ಊಟವೇ ಹಬ್ಬದಡಿಗೆಯುಂಡಷ್ಟು ಖುಷಿ ಕೊಡುತ್ತೆ. ಊರಿಗಂತೂ ಹೋಗಿಲ್ಲ, ನಮ್ಮನೆ ಹಬ್ಬದಲ್ಲಾದ್ರೂ ಭಾಗಿಯಾಗು ಬಾ ಅಂತ ಒತ್ತಾಯಪೂರ್ವಕವಾಗಿ ಮನೆಗೆ ಕರೆದುಕೊಂಡು ಹೋದ ಗೆಳೆಯನೊಬ್ಬನಿಂದ ಅನಿರೀಕ್ಷಿತ ಸಂತೋಷ ಸಿಕ್ಕಿರತ್ತೆ. ಹಬ್ಬದಾಚರಣೆ ಅಂತ ಎಲ್ಲರಿಗೂ ಗೋಳುಕೊಟ್ಟು ಧೂಂ ಧಾಂ ಆಗಿ ಆಚರಿಸುವುದಷ್ಟೇ ಹಬ್ಬವಲ್ಲ. ಮನೆ ಮಂದಿಯೆಲ್ಲಾ ಒಟ್ಟಿಗಿದ್ದು ನಗುನಗುತ್ತಾ ಬೆರೆಯೋ ಮಧುರ ಘಳಿಗೆಯೇ ಹಬ್ಬ. ನನ್ನ ತಾಯಿಯವರು ಯಾವಾಗಲೂ ಹೇಳುವಂತೆ ಖುಷಿಯಾಗಿರೋ ಪ್ರತಿದಿನವೂ ಹಬ್ಬವೇ ಅನ್ನುತ್ತಾ ಬರಲಿರೋ ಹಬ್ಬಗಳ ಸಾಲಿಗೆ ಶುಭಕೋರುತ್ತಾ ವಿರಮಿಸುತ್ತಿದ್ದೇನೆ. ಮತ್ತೆ ಭೇಟಿಯಾಗೋಣ ಮುಂದಿನ ವಾರ.. ಮತ್ತೊಂದಿಷ್ಟು ನೆನಪುಗಳ ಬುತ್ತಿಯೊಂದಿಗೆ. ಅಲ್ಲಿಯವರೆಗೆ ಶುಭದಿನ.
******
ಮುಂದಿನ ತಿಂಗಳ ಗಣೇಶ ಚತುರ್ಥಿಗೆ ಈಗಲೇ ಟಿಕೆಟ್ ಬುಕ್ ಮಾಡಿ, ಗುರುವಾರ ರಜೆ, ಶುಕ್ರವಾರ ನಾವೊಂದು ರಜೆ ಹಾಕಿದರೆ ನಾಲ್ಕು ರಜೆ ಎಂದು ಲೆಕ್ಕಾಚಾರದಲ್ಲಿ ಸಮಯ ಕಳೆದಿದೆ. ಮಕ್ಕಳೆಲ್ಲ ಮೊದಲು ದೊಡ್ಡ ರಜೆಗೆಂದು ನಮ್ಮಲ್ಲಿಗೆ ಬಂದಾಗ, "ಈಗಲೇ ನಮ್ಮಲ್ಲಿ ಹಬ್ಬ", ನನ್ನ ಅಮ್ಮನೂ ಹೇಳುವುದಿದೆ. ಶ್ರಾವಣಕ್ಕೊಂದು ಉತ್ತಮ ಬರಹ.
ಧನ್ಯವಾದಗಳು ಚೈತ್ರ ಅವರೇ. ಹಾಕಬೇಕು ಇನ್ನೂ 🙂
ಬರಹ ತುಂಬಾ ಚನ್ನಾಗಿದೆ ಬರಿತಾ ಇರಿ.