ಹಬ್ಬಕ್ಕೆ ಬತ್ತಿಲ್ಯ? ಬಾರೇ.. ಎರಡು ದಿನಾ ಆದ್ರೂ ಬಂದು ಹೋಗು ಎಂದು ಅಮ್ಮ ಫೋನ್ ಮಾಡಿ ಹೇಳಿದಾಗ, ಇಲ್ಲವೆನ್ನಲು ಮನಸ್ಸು ಒಪ್ಪದಿದ್ದರೂ, ಅನಿವಾರ್‍ಯವಾಗಿ ಮನಸ್ಸನ್ನು ಒಪ್ಪಿಸಲೇಬೇಕಾಗಿತ್ತು.. ಇಲ್ಯೆ.. ಈಗ ಬತ್ನಿಲ್ಲೆ, ಮುಂದಿನ ತಿಂಗಳು ಬತ್ತೆ .. ಎಂದು ಹೇಳಿ ಫೋನ್ ಇಟ್ಟಿದ್ದೆ.. ಹಬ್ಬಕ್ಕೂ ಊರಿಗೂ ಅದ್ಯಾವ ನಂಟೋ ಕಾಣೆ.. ಹಬ್ಬದ ದಿನ ಊರನ್ನು ಬಿಟ್ಟು ಬೇರೆಲ್ಲಿಯೇ ಇದ್ದರೂ, ಪರಿಪೂರ್ಣವೆಂದೆನಿಸುವುದೇ ಇಲ್ಲ..ಏನಾದರೂ ಪುಸ್ತಕ ಓದೋಣವೆಂದು ಕುಳಿತೆನಾದರೂ, ಅಕ್ಷರಗಳೆಲ್ಲಾ ಊರಿನ ಹಬ್ಬವನ್ನು ಮಿಸ್ ಮಾಡ್ಕೊಳ್ತಾ ಇದ್ದೀಯಾ ಅಂತ ಹೇಳಿದಂತೆ ಅನ್ನಿಸುತ್ತಿತ್ತು..ಕಷ್ಟಪಟ್ಟು ಏಕಾಗ್ರತೆಯಿಂದ ಇನ್ನೊಂದು ಪುಸ್ತಕ ತೆಗೆದು ಕುಳಿತೆ.. ಪುಟವನ್ನೇನೋ ತಿರುಗಿಸಿ ಹಾಕುತ್ತಿದ್ದೆ ಎನ್ನುವುದನ್ನು ಬಿಟ್ಟರೆ, ಅರ್ಥವೇನೂ ಆಗುತ್ತಿರಲಿಲ್ಲ..
ಒಂದು ಬಾರಿ ಊರಿನ ಪೂರ್ತಿ ಚಿತ್ರಣ ಕಣ್ಮುಂದೆ ಬಂದು ಕುಣಿಯಲು ಶುರು ಮಾಡಿತ್ತು. ಮನೆಯ ಹತ್ತಿರದ ದೇವಸ್ಥಾನದ ಪೂಜೆಗಳು, ಮಾವಿನ ತೋರಣದ ಸಿಂಗಾರ, ಬೇಡವೆಂದು ಎಷ್ಟೇ ಹೇಳಿದರೂ ಅಮ್ಮ ಕುಡಿಸುತ್ತಿದ್ದ ಕಹಿ ಬೇವಿನ ಕಷಾಯ, ಬಿಸಿಬಿಸಿ ಹೋಳಿಗೆ, ಹೊಸ ಸಂವತ್ಸರದ ಪಂಜಾಗದಲ್ಲಿ ನನ್ನ ರಾಶಿ ಫಲವನ್ನು ನೋಡಿ, ಖುಷಿಪಡೋ ಘಳಿಗೆ..ಹಬ್ಬಕ್ಕೆಂದು ಬಂದ ಅತ್ತೆ ಮಾವನ ಬಳಿ ಹರಟುತ್ತಿದ್ದ ವಿಚಾರಗಳು, ಟಿ.ವಿ ಯ ಮುಂದೆ ಕೂತು ನೋಡುತ್ತಿದ್ದ ಯುಗಾದಿಯ ವಿಶೇಷ ಕಾರ್ಯಕ್ರಮಗಳು.. ಮನೆಯಲ್ಲಿ ಇರುವ ಖುಷಿಯನ್ನು ವರ್ಣಿಸಲು ಎಷ್ಟೋ ಸಲ ಪದಗಳನ್ನು ಹುಡುಕಬೇಕಾಗುತ್ತದೆ.. ಮನಸ್ಸಿನಾಳದಲ್ಲಿ ಈ ಬಾರಿಯ ಯುಗಾದಿಯನ್ನು ಮಿಸ್ ಮಾಡಿಕೊಂಡ ದಿನಕ್ಕೆ, ಬೇವು ಬೇರೆ ಬೇಕೆಂದಿರಲಿಲ್ಲ. .
ಛೇ..ಈ ಪಿ.ಜಿ ಲಿ ಅದ್ಯಾವುದೇ ಹಬ್ಬ ಬರಲಿ.. ಬಾಯಲ್ಲಿ ಕಷ್ಟಪಟ್ಟು ತುಂಬಬೇಕಾದ ಪಾಯಸ.. ಎಷ್ಟೋ ಸಲ ಇದು ಪಾಯಸ ಅಂತ ಹೇಳಬೇಕಾಗತ್ತೆ.. ಇಲ್ಲಾ ಅಂದ್ರೆ ಎಲ್ಲರಿಗೂ ನೋಡಿದಕೂಡಲೇ ಗೊತ್ತಾಗೋದೂ ಇಲ್ಲ.. ಅಯ್ಯೋ ಪಾಯಸದ ವಿಚಾರ ಹಾಗಿರಲಿ..ಹಬ್ಬದ ವಾತಾವರಣವೇ ಇಲ್ಲ.. ಎಂದಿನ ದಿನದಂತೇ ಯುಗಾದಿಯೂ ಕೂಡ ಒಂದು ದಿನ ಅಷ್ಟೆ..ಊರಿನ ಗೊಡವೆಯನ್ನು ಹೊತ್ತಿರುವ ನನಗೆ ಮಾತ್ರ, ಮನಸ್ಸಿನಾಳದಲ್ಲಿ ಹಬ್ಬಕ್ಕೆ ಹೋಗಿಲ್ಲವಲ್ಲಾ ಎಂಬ ಒಂದು ಸಣ್ಣ ಬೇಸರವಷ್ಟೆ..
ಹೂಂ.. ಪುಸ್ತಕಾ ಅಂತೂ ಓದೋಕೆ ಮನಸ್ಸಾಗುತ್ತಿಲ್ಲ.. ಯಾವುದಾದರೂ ಸಿನೇಮಾ ನೋಡೋಣ ಅಂತ ಅಂದ್ಕೊಂಡು ಹಚ್ಚಿದ್ರೂ, ಹೆಚ್ಚೆಂದರೆ ಹದಿನೈದು ನಿಮಿಷ.. ಬೇಡ ನೋಡೋದು ಎಂದೆನ್ನಿಸಲು ಶುರುವಾಗಿತ್ತು.. ದೇವಸ್ಥಾನಕ್ಕೆ ಹೋಗಿದ್ದ ಕ್ಷಣಗಳು ಮಾತ್ರ ಮನಸ್ಸಿನಲ್ಲಿ ಶಾಂತಿಯಿತ್ತು. ಪಕ್ಕದ ಮನೆಯ ಹುಡುಗಿಯ ಜೊತೆ ನಮ್ಮನೇಯ ಹಬ್ಬವನ್ನು ವರ್ಣಿಸಲು ಶುರುಮಾಡಿದ್ದೆ. ಆಗಾಗ ಮುಖ ಸಣ್ಣದಾಗಿ, ಕಣ್ಣುಗಳೇ ಹೇಳುತ್ತಿದ್ದವು ನಾನೂ ಊರಿಗೆ ಹೋಗಬೇಕಿತ್ತು..ಅಂತ..
ಜೀವನದಲ್ಲಿ ಅದೇನ್ ಓದ್ತೀವೋ, ಏನ್ ಕೆಲಸ ಅಂತ ಮಾಡ್ತೀವೋ, ಗೊತ್ತಿಲ್ಲ..ಆದರೆ ಈ ಹಬ್ಬ ಹರಿದಿನಗಳು ಅಂತ ಬಂದಾಗ ನಮ್ಮ ಊರಿನಲ್ಲೇ ಇರಬೇಕು ನೋಡಿ.. ಹೋಗದೇ ಇರುವುದಕ್ಕೆ ನೆಪಗಳು ಯಾವಾಗಲೂ ಸುಲಭವಾಗಿ ಸಿಕ್ಕಿಬಿಡುತ್ತದೆ..ಆದರೆ ಹೋಗದ ಒಂದು ದಿನ, ಕ್ಷಣಗಳು, ಸಂಬಂಧಗಳು ಇದೆಲ್ಲವನ್ನೂ ಚೂರು ಪಾರು ಮಿಸ್ ಮಾಡ್ಕೊಳ್ತಾ ಜೀವನವನ್ನೇ ಹೊಂದಾಣಿಕೆ ಮಾಡ್ಕೊಳ್ಳೋದು ಸರಿನಾ? ಪ್ರತೀ ಚಿಕ್ಕ ಪುಟ್ಟ ವಿಷಯಗಳನ್ನು ನಿರ್ಲಕ್ಷಿಸಿದರೆ, ಒಂದಷ್ಟು ಟನ್ ಖುಷಿಗಳನ್ನು ಮಿಸ್ ಮಾಡ್ಕೊಳ್ಳೋದಂತೂ ಸುಳ್ಳಲ್ಲ॒
ಹಬ್ಬದ ಒಂದು ದಿನ ಊರನ್ನು ಬಿಟ್ಟು ಕಳೆದಿದ್ದಕ್ಕೆ, ಆ ಒಂದು ದಿನವೂ ಕಷ್ಟವಾಗಿತ್ತು ಹೇಗೆ ಕಳೆಯಲಿ ದಿನವ ? ಎಂದು. ಯುಗಾದಿಯ ಒಂದು ಸಣ್ಣ ಚಿತ್ರಣವೂ ಮನಸ್ಸನ್ನು ಆಯಸ್ಕಾಂತದಂತೇ ಊರಿನ ಕಡೆಗೆ ಸೆಳೆಯುತ್ತಿದ್ದದ್ದೂ ನಿಜ. ಹೊಸ ಬಟ್ಟೆ ಹಾಕಿಕೊಂಡರೂ ಆ ದಿನ ಮುಖದಲ್ಲಿ ರಂಗಿರಲಿಲ್ಲ.. ಯಾರೋ ಸ್ವೀಟ್ ಕೊಟ್ಟರೂ ಸಿಹಿಯಿರಲಿಲ್ಲ..
ಮೊಬೈಲ್‌ನಲ್ಲಿ, ಫೇಸ್ ಬುಕ್‌ನಲ್ಲಿ ಬರುತ್ತಿದ್ದ ಯುಗಾದಿಯ ಶುಭಾಶಯಗಳನ್ನು ನೋಡಿದಾಗ ಸ್ವಲ್ಪ ಖುಷಿಯಾಗಿತ್ತುಆ॒ದರೂ ನಾ ಹಬ್ಬದ ದಿನ ಊರಿಗೆ ಹೋಗಬೇಕಿತ್ತು ಎಂಬುದನ್ನು ಮನಸ್ಸು ಪದೇ ಪದೇ ನೆನಪಿಸಿ, ಬೇಸರವನ್ನು ಬರಿಸುತ್ತಿತ್ತು.. ಅಪ್ಪನು ಫೋನ್ ನಲ್ಲೇ ಮನಸ್‌ಪೂರ್ತಿಯಾಗಿ ಶುಭಾಶಯ ತಿಳಸಿ, ಹಾರೈಸುವಾಗ ವರುಷವಿಡೀ ಚನ್ನಾಗಿಯೇ ಇರುತ್ತೆ ಎಂಬ ಭಾವನೆಯುಂಟಾಗಿತ್ತು..
*****
Nice Writing padma… its really true…