ಹಬೆಯಾಡುವ ಇಡ್ಲಿ!: ದಿನೇಶ್‌ ಉಡಪಿ


ಎರಡು ದಿನಗಳಿಂದ ಬಿಟ್ಟು ಬಿಟ್ಟು ಮಳೆ ಸುರಿಯುತ್ತಾ ಇತ್ತು. ಇಂದು ಸಂಜೆಯಂತೂ ಅದರ ಆರ್ಭಟ ಜೋರಾಗಿ ಸುಮಾರು ಹೊತ್ತು ಮಳೆ ಬಂದಿತ್ತು. ಕಾಲೇಜಿನಿಂದ ಬಂದವನು ಮನೆ ಸೇರುವಷ್ಟರಲ್ಲಿ ತೋಯ್ದು ತೊಪ್ಪೆಯಾಗಿದ್ದೆ. ಒಂದು ಬಿಸಿ ನೀರಿನ ಸ್ನಾನ ಮುಗಿಸಿ, ಬಟ್ಟೆ ಬದಲಿಸಿ, ಮಳೆಯ ಸೊಬಗನ್ನು ಸವಿಯುತ್ತಾ ಕಿಟಕಿಯ ಮುಂದೆ ಕೂತಿದ್ದೆ. ಸ್ವಲ್ಪ ಹೊತ್ತಿನಲ್ಲಿ ಬಿಸಿ ಚಹಾದ ಕಪ್‌ ಮತ್ತು ಪ್ಲೇಟಿನಲ್ಲಿ ಕಾಯಿ ಚಟ್ನಿಯೊಂದಿಗೆ ಹಬೆಯಾಡುವ ಇಡ್ಲಿ ಮುಂದೆ ಬಂದು ಕೂತಿತ್ತು!. ಇಳಿ ಸಂಜೆಯ ಮಬ್ಬು-ಮಳೆ,-ಚಳಿ, ಮತ್ತು ಹಬೆಯಾಡುವ ಇಡ್ಲಿ, ಸುಮಾರು ಇಪ್ಪತ್ತೈದು ವರ್ಷಗಳಷ್ಟು ಹಿಂದಿನ ನೆನಪಿಗೆ ನನ್ನನ್ನು ಕೊಂಡೊಯ್ದಿತ್ತು.

ಅದು ನನ್ನ ಕಾಲೇಜಿನ ದಿನಗಳ ಜೀವನ. ನಮ್ಮ ಹಳ್ಳಿಯಿಂದ ವಿದ್ಯಾರ್ಥಿ ಪಾಸ್‌ ಇಟ್ಟುಕೊಂಡು, 25 ಕಿಲೋಮೀಟರ್‌ ದೂರದ ತಾಲೂಕು ಕೇಂದ್ರದ ಕಾಲೇಜಿಗೆ ಬಸ್ಸಿನಲ್ಲಿ ಪ್ರತಿದಿನ ಪಯಣ. ಆಗ ನಮ್ಮೂರಿನಿಂದ ಓಡಾಡುತ್ತಿದ್ದ ಬಸ್ ಗಳ ಸಂಖ್ಯೆ ಬಹಳ ಕಡಿಮೆ, ಗುಂಡಿ ತುಂಬಿದ ರಸ್ತೆಗಳ ಕಾರಣವಾಗಿ, ಆ 25 ಕಿ.ಮೀ. ಪ್ರಯಾಣ ಸುಮಾರು ಒಂದೂವರೆ ಗಂಟೆಯದಾಗಿರುತ್ತಿತ್ತು. ಬೆಳಿಗ್ಗೆ ಊಟದಷ್ಟು ಉಪಹಾರ ತಿಂದುಕೊಂಡು ಮನೆ ಬಿಡುತ್ತಿದ್ದೆ, ಸಂಜೆಯ 5.30 ಅಥವಾ 6.30 ರ ಬಸ್ ಹಿಡಿದು ಸಂಜೆ ಮನೆ ಸೇರಿದ ಮೇಲೆಯೇ ಮತ್ತೆ ಊಟ. ಅಂದಿನ ದಿನಗಳಲ್ಲಿ ನಮಗೆ ಊಟದ ಡಬ್ಬಿ ಕಟ್ಟಿಕೊಂಡು ಹೋಗುವ ಪರಿಪಾಠ ಮತ್ತು ಪುರುಸೊತ್ತು ಎರಡೂ ಇರಲಿಲ್ಲ. ಮಧ್ಯಾಹ್ನ ಹಸಿವಾದರೆ ಕಾಲೇಜಿನ ಕ್ಯಾಂಟೀನನಲ್ಲಿ ಸಿಗುತ್ತಿದ್ದ 5 ರೂಪಾಯಿಗೆ ಒಂದು ಪ್ಲೇಟ ತೋಯಿಸಿದ ಅವಲಕ್ಕಿ ಅಥವಾ ಮಂಡಕ್ಕಿಯೇ ಮೃಷ್ಟಾನ್ನ ಭೋಜನ. ಸಾಮಾನ್ಯವಾಗಿ ನನ್ನ ಪಾಕೆಟನಲ್ಲಿ ಇರುತ್ತಿದ್ದ ಮನಿ 10 ರೂಪಾಯಿಗಳು ಮಾತ್ರ! ತಿಂಡಿಯನ್ನು ತಿನ್ನದೇ ಇದ್ದರೆ ಅಪರೂಪಕ್ಕೆ 20 ರೂಪಾಯಿಗಳನ್ನು ನೋಡುವ ಭಾಗ್ಯ ನನ್ನ ಪಾಕೆಟ್‌ ಗೆ ದೊರಕುತ್ತಿತ್ತು!. ನಮ್ಮ ಊರಿಗೆ ಸರ್ಕಾರಿ ಬಸ್ಸುಗಳ ಜೊತೆಗೆ, ಖಾಸಗಿ ವ್ಯಾನಗಳೂ ಇರುತ್ತಿದ್ದವು. ವಿದ್ಯಾರ್ಥಿ ಪಾಸ್‌ ಇಟ್ಟುಕೊಂಡ ನಾವು ಬಸ್ಸುಗಳ ಸಲುವಾಗಿಯೇ ಕಾಯಬೇಕಿತ್ತು. ಏನಾದರೂ ಕಾರಣಕ್ಕೆ ಬಸ್ಸುಗಳು ಕೈಕೊಟ್ಟರೆ ನಮಗೆ ಖಾಸಗಿ ವ್ಯಾನಗಳೇ ಗತಿ, ಅದರ ಚಾರ್ಜ 10 ರೂಪಾಯಿ. ಅಂತಹ ಎಮರ್ಜೆನ್ಸಿ ಕಾರಣಗಳಿಗಾಗಿಯೇ ಪಾಕೇಟಿನಲ್ಲಿ 10 ರೂಪಾಯಿಯ ಆಪದ್ಧನ ಇರುತ್ತಿದ್ದುದು.

ಹೀಗೆಯೇ ಒಂದು ಮಳೆಗಾಲದಲ್ಲಿ, ತಡ ಮಧ್ಯಾಹ್ನದ ಹೊತ್ತಿಗೆ ಶುರುವಾದ ಮಳೆ,ಸಂಜೆಯ ಹೊತ್ತಿಗೆ ಸುಮಾರು ಎರಡು ಗಂಟೆಗಳ ಕಾಲ ಧಾರಾಕಾರವಾಗಿ ಸುರಿದಿತ್ತು. ನಮ್ಮ ಉತ್ತರ ಕರ್ನಾಟಕದಲ್ಲಿ ಒಂದೆರಡು ಗಂಟೆಗಳ ಕಾಲ ಧಾರಾಕಾರ ಮಳೆ ಸುರಿದರೆ, ಯಾವ ರಸ್ತೆಯ ಸಂಚಾರ ಬಂದ ಆಗಿ, ಯಾವ ಬಸ್ಸುಗಳ ಸಂಚಾರ ನಿಂತು ಹೋಗುತ್ತದೆ ಅಂತ ಊಹೆ ಮಾಡುವುದು ಬಹಳ ಕಷ್ಟ. ನಮ್ಮ ಊರಿಗೆ ಹೋಗುವ ರಸ್ತೆಯ ಪರಿಸ್ಥಿತಿಯೂ ಹೀಗೆಯೇ ಇತ್ತು ಮಳೆ ನಿಂತು ಸುಮಾರು ಮೂರು ನಾಲ್ಕು ಗಂಟೆಗಳ ನಂತರವೇ ಬಸ್‌ ಸಂಚಾರ ಸಾಧ್ಯವಾಗುತ್ತಿತ್ತು.
ಆ ಕಾಲಕ್ಕೆ ಕೊಡೆ ಎನ್ನುವುದು ನಮಗೆ ಒಂದು ಲಕ್ಷುರಿ ವಸ್ತು, ಹಾಗಾಗಿ ಅದು ನಮ್ಮ ಬಳಿ ಇರುತ್ತಿರಲಿಲ್ಲ! ಸುಮಾರು ಎರಡು ಕಿಲೋ ಮೀಟರ್‌ ದೂರದ ಕಾಲೇಜಿನಿಂದ ನಡೆದು ಬರುತ್ತಿರುವಾಗ, ಆ ಜಡಿ ಮಳೆಯಲ್ಲಿ ಸಿಲುಕಿ ಒಂದು ಅಂಗಡಿಯ ಮುಂದೆ ಆಶ್ರಯ ಪಡೆಯುವಷ್ಟರಲ್ಲಿ ಅರ್ಧ ತೋಯಿಸಿಕೊಂಡಾಗಿತ್ತು. ಸುಮಾರು ಎರಡು ಗಂಟೆಗಳ ಕಾಲ ಅಲ್ಲಿಯೇ ನಿಂತಿದ್ದಾಯ್ತು. ಸಂಜೆ 5.30ರ ಬಸ್ಸು ತಪ್ಪಿದ್ದಾಯ್ತು, ಇನ್ನು ಇದ್ದದ್ದೇ 6.30, 8.30 ಮತ್ತು 9 ಗಂಟೆಯ ಕೊನೆಯ ಬಸ್ಸು. 6.30ರ ಬಸ್ಸನ್ನಾದರೂ ಹಿಡಿಯೋಣ ಅಂತ ಸ್ವಲ್ಪ ಕಡಿಮೆಯಾಗಿದ್ದ ಮಳೆಯಲ್ಲಿಯೇ ಬಸ್‌ ಸ್ಟಾಂಡ ಕಡೆಗೆ ದಾಪುಗಾಲಿನಲ್ಲಿ ಬರುವಷ್ಟರಲ್ಲಿ ಪೂರ್ತಿ ತೋಯಿಸಿಕೊಂಡಾಗಿತ್ತು. ಅಲ್ಲಿ ಬಂದು ನೋಡಿದರೆ 6.30ರ ಬಸ್‌ ಮಳೆಯ ಕಾರಣ ಕ್ಯಾನ್ಸಲ್!, ಮುಂದಿನ 8.30ರ ಬಸ್ಸು ಹೊರಡುತ್ತದಾ? ಗ್ಯಾರಂಟಿ ಇಲ್ಲ, ಹೊರಟರೂ ಎಷ್ಟು ಹೊತ್ತಿಗೆ? ಗೊತ್ತಿಲ್ಲ. ನಮ್ಮ ಊರಿನವರೆಗೂ ಹೋಗಲು ಸಮಸ್ಯೆಯಿಲ್ಲ, ಆದರೆ ಅಲ್ಲಿಂದ ಮುಂದಿನ ದಾರಿಯ ಸಮಸ್ಯೆಯಿಂದಾಗಿ ಬಸ್ಸುಗಳು ತಡ. ಆದರೆ, ವ್ಯಾನಗಳಿಗೆ ಸಮಸ್ಯೆಯಿಲ್ಲ, ಅವುಗಳು ನಮ್ಮ ಊರಿನವರೆಗೆ ಮಾತ್ರ ಹೊರಡುವುದು.

ಬಸ್‌ ಸ್ಟಾಂಡ್‌ ಪಕ್ಕದ ಮೈದಾನದಲ್ಲಿ ವ್ಯಾನ ನಿಲ್ಲುವ ಜಾಗಕ್ಕೆ ಬಂದು ನೋಡಿದರೆ, ಮುಂದಿನ ವ್ಯಾನ ಹೊರಡುವುದು 8.15ರ ನಂತರ! ಇನ್ನೂ ಒಂದು ಗಂಟೆ ಕಾಯಬೇಕು. ಮಳೆಯಲ್ಲಿ ತೋಯ್ದು ತೊಪ್ಪೆಯಾದವನಿಗೆ ಚಳಿಯಿಂದ ನಡುಕ ಶುರು ಆಗಿತ್ತು. ಮಧ್ಯಾಹ್ನದಿಂದ ಖಾಲಿ ಇದ್ದ ಹೊಟ್ಟೆ, ಚಳಿಯ ಹೊಡೆತಕ್ಕೆ ಚುರ್ ಗುಟ್ಟತೊಡಗಿತ್ತು.

ಬೆಳಿಗ್ಗೆ ಮನೆ ಬಿಡುವಾಗ ತಿಂಡಿ ತಿಂದಿದ್ದು. ಮಳೆ, ಚಳಿಯ ಮಧ್ಯ ತಾಳ ಹಾಕುತ್ತಿದ್ದ ಹೊಟ್ಟೆಯ ಕಾರಣಕ್ಕೆ, ಬಸ್ ನಿಲ್ದಾಣದ ಎದುರಿನ ಮಾರ್ಕೆಟ್ ಕಡೆ ಹೋಗುವ ರಸ್ತೆಯ ಬದಿಯ, ಗೋಪಿ ಇಡ್ಲಿ ಸೆಂಟರ್ ನೆನಪಾಯಿತು. ಈ ಗೋಪಿ ಇಡ್ಲಿ ಸೆಂಟರ್ ನಮ್ಮ ಊರಿನ ಬಹಳ ಫೇಮಸ್ ತಿಂಡಿ ಕೇಂದ್ರ, ಅವನ ಅಂಗಡಿ ಶುರುವಾಗುತ್ತಿದ್ದುದೆ ಸಂಜೆಯ ನಂತರ. ಎರಡು ತಳ್ಳು ಗಾಡಿಯಲ್ಲಿ ಬಂದು ರಸ್ತೆ ಬದಿಯ ಬ್ಯಾಂಕ ಮುಂಭಾಗದ ಜಾಗದಲ್ಲಿ ಸೆಟಲ್ ಆಗುತ್ತಿದ್ದ. ನಂತರ ಸರಿರಾತ್ರಿಯವರೆಗೂ ಯಾವಾಗಲೂ ಜನಜಂಗುಳಿ. ಇಡ್ಲಿಗಳನ್ನು ತನ್ನ ಗರ್ಭದಲ್ಲಿ ಬೇಯಿಸುತ್ತಾ,ಬಿಸಿ ಹಬೆ ಬಿಡುತ್ತಾ ಭುಸುಗುಡುತ್ತಿದ್ದ ಇಡ್ಲಿ ಪಾತ್ರೆಗಳನ್ನೇ ಸುತ್ತಲೂ ನಿಂತ ಜನರು ನೋಡುತ್ತಾ ಕಾಯುತ್ತಿದ್ದರು. ಹದವಾಗಿ ಬೆಂದ ಆ ಹಬೆಯಾಡುವ ಇಡ್ಲಿಗಳನ್ನ ಆತ, ಹೊರಗೆಳೆದು, ಅಂಟಿಕೊಂಡ ಬಟ್ಟೆಯಿಂದ ಒಂದೊಂದೇ ಬಿಡಿಸಿ, ತಟ್ಟೆಗೆ ಎಸೆಯುತ್ತಾ, ನಡುವೆ ಬಿಸಿ ಹೆಚ್ಚಾದಾಗ ಬೆರಳುಗಳನ್ನ ನೀರಲ್ಲಿ ಅದ್ದುತ್ತಾ ತಟ್ಟೆಗಳಿಗೆ ಇಡ್ಲಿ ಡೆಲಿವರಿ ಮಾಡುತ್ತಿದ್ದರೆ,ನೋಡುತ್ತ ನಿಂತವರ ಕಣ್ಣು ಮೂಗುಗಳ ಮೂಲಕ ಸಂದೇಶ ಪಡೆದ ನಾಲಿಗೆ ಮತ್ತು ಜಠರಗಳು, ಮೃದುವಾದ ಇಡ್ಲಿ ಗಳು ಚಟ್ನಿಯೊಂದಿಗೆ ಬರುವದನ್ನು ಕಾಯುತ್ತಾ ತಯಾರಾಗಿಯೇ ನಿಂತಿರುತ್ತಿದ್ದವು. ಮೂರು ಇಡ್ಲಿಗಳ ಒಂದು ಪ್ಪ್ಲೇಟಗೆ 8 ರೂಪಾಯಿ, 2 ರೂಪಾಯಿಗೆ ಅದ್ಭುತ ಸ್ವಾದವುಳ್ಳ ಒಂದು ಲೋಟ ಚಹ. ಒಟ್ಟು ಹತ್ತು ರೂಪಾಯಿ ಬಿಲ್.

ಸಹಜವಾಗಿಯೇ ನನ್ನ ಕಾಲುಗಳು ಗೋಪಿ ಇಡ್ಲಿ ಸೆಂಟರ್ ಕಡೆಗೆ ಎಳೆದೊಯ್ದು ನಿಲ್ಲಿಸಿದ್ದವು. ನನ್ನ ಜೇಬಿನಲ್ಲಿ ಹೇಗಿದ್ದರೂ ಹತ್ತು ರೂಪಾಯಿಗಳಿತ್ತಲ್ಲ!. ಈ ಮಳೆಯ ಚಳಿ ಯಲ್ಲಿ, ಮೂರು ಹಬೆಯಾಡುವ ಇಡ್ಲಿ ತಿಂದು ಒಂದು ಕಪ್ ಬಿಸಿ ಚಹಾ ಗಂಟಲಲ್ಲಿ ಇಳಿಸಿಕೊಂಡು, ಪರಮಾನಂದಗೊಂಡು 8.30 ರ ಬಸ್ಸಿನಲ್ಲಿ ಊರು‌ ಸೇರಿದರೆ, ಹೇಗೂ ಮನೆಯಲ್ಲಿ ಬಿಸಿ ಊಟ ರೆಡಿ ಇರುತ್ತೆ, ಅಂದುಕೊಂಡು ಆರ್ಡರ್ ಮಾಡಲು ಕೈಯೆತ್ತಬೇಕು, ಅಷ್ಟರಲ್ಲಿ ಮತ್ತೆ ಯೋಚನೆ ಶುರುವಾಯಿತು. “ಈ ಪರಿ ಸ್ಥಿತಿಯಲ್ಲಿ ಆ ಬಸ್ಸು ಸರಿಯಾದ ಸಮಯಕ್ಕೆ ಹೊರಡುವ ಸಾಧ್ಯತೆಯೇ ಇಲ್ಲ! ಹಾಗಾದರೆ ಬದಲೀ ವ್ಯವಸ್ಥೆಯಾಗಿ ಊರು ಸೇರಲು ವ್ಯಾನ್ ಹತ್ತಲು ಹತ್ತು ರೂಪಾಯಿ ಬೇಕು!”, ಧರ್ಮ ಸಂಕಟ ಶುರುವಾಗಿತ್ತು! “ಇಡ್ಲಿ ತಿಂದರೆ ಬಸ್ಸ ಬಿಡುವವರೆಗೆ ಕಾಯಬೇಕು. ವ್ಯಾನ್ ಹತ್ತಿದರೆ ಮನೆ ಸೇರುವವರೆಗೂ ಹೊಟ್ಟೆಯ ತಾಳವನ್ನ ಸಹಿಸಿಕೊಳ್ಳಬೇಕು”.

8.30ರ ಬಸ್ಸು ತನ್ನ ಸ್ಥಳಕ್ಕೆ ಸಾಮಾನ್ಯವಾಗಿ 8 ಗಂಟೆಗೇ ಬಂದು ನಿಲ್ಲುತ್ತಿತ್ತು. ಹಾಗಾಗಿದ್ದರೆ ನನಗೆ ಅರ್ಧ ಗಂಟೆಯ ಸಮಯ, ಇಡ್ಲಿ ಮತ್ತು ಬಸ್ಸು ಎರಡೂ ನನ್ನ ಭಾಗ್ಯದಲ್ಲಿ ಬರೆದಂತೆ. ಸರಿ, ಮತ್ತೆ ಬಸ್ ನಿಲ್ದಾಣಕ್ಕೆ ಬಂದು ನಿಂತೆ. ಎಂಟು ಗಂಟೆ ಆಗ್ತಾ ಬಂದಿತ್ತು, ಹದಿನೈದು ನಿಮಿಷಗಳಾದರೂ ಬಸ್ಸು ತನ್ನ ಜಾಗಕ್ಕೆ ಬಂದು ನಿಲ್ಲುವ ಲಕ್ಷಣಗಳೇ ಕಾಣಲಿಲ್ಲ. ಹೊಟ್ಟೆ ಚುರುಗುಟ್ಟುತ್ತಿತ್ತು “ಏನು, ಒಂದರ್ಧ ಗಂಟೆ ತಡವಾಗಿ ಬರಬಹುದು, ಏನಾದರಾಗಲಿ, ತಿಂಡಿ ತಿಂದೇ ಬರೋಣ”. ಅಂದುಕೊಂಡು ಮತ್ತೆ ರಸ್ತೆ ದಾಟಿ, ಹಬೆಯ ಸುತ್ತ ನೆರೆದ ಜನರ‌ ಸ್ಥಳಕ್ಕೆ ಬಂದೆ. ಮತ್ತೆ ಅರೆ ಮನಸ್ಸು, “ಬಸ್ಸು ತಡವಾದರೆ ಸರಿ, ಬಹಳ ತಡವಾದರೆ? ಅಥವಾ ಕ್ಯಾನ್ಸಲ್ ಆಗಿಬಿಟ್ಟರೆ?’ ಈ ವ್ಯಾನಿನ ಕಥೆ ಏನಿದೆಯೋ? ನೋಡೋಣ”, ಅಂತ ಅಲ್ಲಿಗೆ ಬಂದೆ. ನಮ್ಮೂರಿನ ವ್ಯಾನಿನಲ್ಲಿ ಒಬ್ಬೊಬ್ಬರೆ ಹತ್ತಿ ಕೂರುತ್ತಿದ್ದರು, ಸೀಟ್ ಫುಲ್ ಆದರೆ ಕಷ್ಟ, ನನ್ನನ್ನು ಹತ್ತಿಸುವುದಿಲ್ಲ ಮತ್ತು, ನಮ್ಮೂರಿಗೆ ಬಹುಷಃ‌ ಇದೇ ಕಡೆಯ ಟ್ರಿಪ್.

ಬಸ್ಸು-ವ್ಯಾನು-ಹೊಟ್ಟೆ-ಇಡ್ಲಿ-10 ರೂಪಾಯಿಗಳ ಕಾರಣವಾಗಿ ಬಸ್‌ ಸ್ಟ್ಯಾಂಡು, ವ್ಯಾನ್‌ ಸ್ಟ್ಯಾಂಡು, ಮತ್ತು ಇಡ್ಲಿ ಸೆಂಟರ್‌ ಗಳ ನಡುವೆ ಎರಡು ಮೂರು ಬಾರಿ ಎಡತಾಕಿದೆ, ದೇಹ ಮತ್ತು ಮನಸ್ಸು ಎರಡೂ ಅನಿಶ್ಚಿತತೆಯಿಂದ ಹೊಯ್ದಾಡುತ್ತಿದ್ದವು.
ಆಮೇಲೆ, ಸುಮ್ಮನೇ ರಸ್ತೆಯ ಅಂಚಿಗೆ ಬಂದು ನಿಂತೆ, ಬಲಭಾಗದಲ್ಲಿ ಹಬೆಯಾಡುವ ಇಡ್ಲಿಗಳ ಘಮದ ಸುತ್ತ ನೆರೆದ ಜನ ಜಂಗುಳಿ, ಎಡಭಾಗದ ಬಸ್ ನಿಲ್ದಾಣದಲ್ಲಿ ಖಾಲಿಯಾಗಿಯೇ ಇದ್ದ ಬಸ್ಸು ಬರಬೇಕಾದ ಸ್ಥಳ,ಮತ್ತು ಹಿಂದೆ ಒಂದೊಂದೇ ಸೀಟುಗಳು ಭರ್ತಿ ಯಾಗುತ್ತಿದ್ದ ನಮ್ಮೂರಿಗೆ ಹೊರಡುವ ಕೊನೆಯ‌ಟ್ರಿಪ್ಪಿ‌ನ ವ್ಯಾನ್. ಒಂದೆರಡು ನಿಮಿಷ ಮನಸ್ಸು ಪೂರ್ತಿಯಾಗಿ ಖಾಲಿ ಖಾಲಿ ಎನಿಸಿ ಸುಮ್ಮನೆ ನಿಂತಿದ್ದೆ. ಆಮೇಲೆ, ಸೀದಾ ಹೋಗಿ ವ್ಯಾನಿನ ಒಂದು ಖಾಲಿ ಸೀಟಿನ ಮೇಲೆ ಕುಳಿತೆ. ಸ್ವಲ್ಪ ಹೊತ್ತಿಗೆ ವ್ಯಾನ ಊರಕಡೆಗೆ ಹೊರಟಿತ್ತು. ಸ್ವಲ್ಪ ದೂರ ಹೋಗುವಷ್ಟರಲ್ಲಿ ಹಾಗೇಯೆ ಒಂದು ಜೋಂಪು ಹತ್ತಿತ್ತು, ಒಂದೂವರೆ ಗಂಟೆಯ ನಂತರ ಊರು ತಲುಪಿದಾಗಲೇ ಎಚ್ಚರವಾಗಿದ್ದು. ಸ್ಟ್ಯಾಂಡನಿಂದ ನಡೆದು ಮನೆ ಸೇರಿದ ಕೂಡಲೇ, ಬಿಸಿ ಬಿಸಿ ಸಾಂಬಾರಿನ ಘಮ ಮೂಗಿಗೆ ಬಡಿದು ಮನಸ್ಸಿಗೆ ಹಾಯೆನಿಸಿತ್ತು, ಅಡಿಗೆ ಮನೆಯಲ್ಲಿ ತಟ್ಟೆ ರೆಡಿಯಾಗಿ ಇತ್ತು. ಎಲ್ಲ ವಸ್ತುಗಳನ್ನೂ ಟೇಬಲ್‌ ಮೇಲೆ ಕುಕ್ಕಿ ಕೈಕಾಲು ತೊಳೆಯಲು ಓಡಿದ್ದೆ………..

“ಇದೇನು ಇಡ್ಲಿ ಆರಿ ಹೋಯಿತಲ್ಲ, ಇನ್ನೂ ತಿಂದೇ ಇಲ್ಲವಾ? ಸರಿ, ಚಹಾವನ್ನಾದರೂ ಮತ್ತೆ ಬಿಸಿ ಮಾಡಿಕೊಂಡು ಬರುತ್ತೇನೆ” ಅಂತ ಇವಳು ಕಪ್‌ ಎತ್ತಿಕೊಂಡು ಹೊರಟಾಗ, ಗತಕಾಲದಿಂದ ವಾಸ್ತವಕ್ಕೆ ಮರಳಿ ಬಂದಿದ್ದೆ. ದೂರದ ಗೋಪಿ ಇಡ್ಲಿ ಸೆಂಟರ್‌ ನ ಹಬೆಯಾಡುವ ಇಡ್ಲಿ ಹಾಗೇಯೆ ಮತ್ತೆ ಕಣ್ಮುಂದೆ ಹಾದು ಮರೆಯಾಯಿತು!

ದಿನೇಶ್‌ ಉಡಪಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
ಹೆಚ್‌ ಎನ್‌ ಮಂಜುರಾಜ್
ಹೆಚ್‌ ಎನ್‌ ಮಂಜುರಾಜ್
3 years ago

ನನ್ನ ಆತ್ಮೀಯ ಸ್ನೇಹಿತರಾದ ದಿನೇಶ್‌ ಅವರ ಕವಿತೆಗಳು ಮತ್ತು ಪ್ರಬಂಧಗಳು ನನಗಿಷ್ಟ. ಏಕೆಂದರೆ ಅವರದು ಅಪ್ಪಟ ಸಾಹಿತ್ಯ. ಯಾವುದೇ ವಾದ-ಸಿದ್ಧಾಂತಗಳ ರಾದ್ಧಾಂತಗಳಿಗೆ ತಲೆ ಕೆಡಿಸಿಕೊಳ್ಳದೆ ಬರೆಯುವರು. ಇವರು ಸಹಜ ಸಾಹಿತಿ. ಪ್ರಾಣಿಶಾಸ್ತ್ರದ ಪ್ರೊಫೆಸರಾದರೂ ಸಾಹಿತ್ಯ-ಕಲೆ-ಸಿನಿಮ-ತಂತ್ರಜ್ಞಾನಗಳಿಗೆ ಧಾರಾಳವಾಗಿ ತೆತ್ತುಕೊಂಡು ಖುಷಿಯಾಗಿರುವವರು ಮತ್ತು ತಮ್ಮ ಆಪ್ತ ವಲಯವನ್ನು ಖುಷಿಯಾಗಿಡುವವರು. ಅಪರೂಪದ ಮತ್ತು ಅಪೂರ್ವದ ಒಳನೋಟಗಳಿಗೆ ಹೆಸರಾದವರು.

ಇವರು ಬರೆದ “ಗಡಿಯಾರದ ಮುಳ್ಳು” ಎಂಬ ಪ್ರಬಂಧ ನನ್ನನ್ನು ಯಾವತ್ತೂ ಕಾಡುತ್ತದೆ. ಹಾಗೆಯೇ ಈಗ ಪಬ್ಲಿಷಾದ ಇಡ್ಲಿಯು ಕೂಡ!

ಏಕೆಂದರೆ ಅದರಲ್ಲಿ ಹಬೆಯಾಡುತ್ತಿರುವುದು ಕೇವಲ ನಾಸ್ಟಾಲ್ಜಿಯ ಮಾತ್ರವಲ್ಲ; ಒಂದು ಕಾಲಮಾನದ ಭಾರತದ ಮನಸು. ನಾವೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಇಂಥ ಹಬೆಗಳಿಗೆ ಪಕ್ಕಾದವರು. ಎಷ್ಟು ಬೇಗ ನಮ್ಮ ಅನುಭವಗಳೆಲ್ಲ ನಮಗೇ ಜಾಣ ಮರೆವಿನಲಿ ಹೂತು ಹೋಗಿದೆ……..!

ಓದಿದವರಿಗೆ ಅಲ್ಲ, ಇಂಥ ಅನು-ಭವ ಆದವರಿಗೆ ಅರ್ಥವಾಗುವಂಥದು.(ಪುತಿನ ಅವರ ಮಸಾಲೆ ದೋಸೆ ಪ್ರಬಂಧ ನೆನಪಾಗುತ್ತದೆ; ಆದರೆ ಅಲ್ಲಿ ಅದು ವಿಚಾರವಂತಿಕೆಯ ಕಡೆ ತಿರುಗಿ ಗಂಭೀರ ಅಯಾಮ ಪಡೆದು ಬಿಡುತ್ತದೆ)

ಇಲ್ಲಿ ಹಾಗಲ್ಲ, ಆದ ಅನುಭವವನ್ನು ಹಾಗೆಯೇ ಯಾವ ಮುಲಾಜು ಮತ್ತು ದಾಕ್ಷಿಣ್ಯಗಳ ಹಂಗಿಲ್ಲದೆ, ಅದು ನಾನಲ್ಲವೆಂಬ ಮಾನಸಿಕ ಅಂತರವನ್ನು ಕಾಯ್ದುಕೊಂಡು ಆಪ್ತವಾಗಿಯೇ ಸುಪ್ತಕಾಮನೆಗಳ ಚದುರಂಗದಾಟದ ಹಲವು ಕೋನಗಳನ್ನು ಚಿತ್ರಿಸಲಾಗಿದೆ. ಒಂದು ರೀತಿಯಲ್ಲಿ ಇದೊಂದು ಸಚಿತ್ರಬಿಂಬ.

ಸಾಹಿತ್ಯ ಎಂಬುದು ತುಂಬ ಸರಳ ಮತ್ತು ಸಹಜವಾದುದು. ಏನೇನೋ ಹಿಡನ್‌ ಅಜೆಂಡಾಗಳನು ತುರುಕಿ ತಲೆ ಕೆಡಿಸುವ ಇಂಥ ಈ ಕಾಲದಲ್ಲಿ ಇಂಥವು ನಮಗೆ ಬೇಕು. “ಮತ್ತೊಂದು ನವೋದಯ” ನಮಗೆ ಬೇಕು. ಇದು ನನ್ನ ಅನ್ನಿಸುವಿಕೆ.

ಈ ಪ್ರಬಂಧ ತನ್ನೊಳಗೆ ಹಲವು ಮಿಡಿತಗಳನು ಹಿಡಿದಿಟ್ಟುಕೊಂಡಿದೆ. ನಿಜಾನುಭವಗಳನು ಹಾಗೆಯೇ ಹಿಡಿದಿಟ್ಟರೆ ಎಷ್ಟು ಸೊಗಸಾಗಿಯೂ ಓದಿದ ತರುವಾಯ ಎಷ್ಟೊಂದು ಮಗ್ಗಲುಗಳು ಬಿರುಸಾಗಿಯೂ ಕಣ್ಣೆದುರು ಬರುತ್ತವೆ ಎಂಬುದಕ್ಕೆ ಈ ಬರೆಹ ಸಾಕ್ಷಿ. ಇಂಥವು ಇನ್ನಷ್ಟು ಬರಲಿ. ಬರೆದ ಲೇಖಕರಿಗೆ ಮತ್ತು ಪ್ರಕಟಿಸಿದ ಪಂಜುವಿಗೆ ಧನ್ಯವಾದ.

– ಹೆಚ್‌ ಎನ್‌ ಮಂಜುರಾಜ್‌, 9900119518

Shivanandbadiger
Shivanandbadiger
3 years ago

Ondu kaladalli gopi edli centre 5 star hotel gintha enu kammi erlilla sir… Hashivina anibhava tumba pata kalsatte sir.. but hashivu yenadru madiaatte sir.. sundara nenapu sir..

Muruli Krishna m b
Muruli Krishna m b
3 years ago

ಹಬೆಯಾಡುವ ಇಡ್ಲಿ ತುಂಬಾ ಚೆನ್ನಾಗಿದೆ ಸರ್ ಧನ್ಯವಾದಗಳು

ಸಂತೋಷ. ಕೆ
ಸಂತೋಷ. ಕೆ
3 years ago

ಹಬೆಯಾಡುವ ಇಡ್ಲಿ.20-25 ವರ್ಷಗಳ ಹಿಂದೆ ನನ್ನಂಥ ಅನೇಕ ಯುವಕರು ಅನುಭವಿಸಿದ ವಾಸ್ತವ.ಯಾವ ಐಷಾರಾಮಿ ಹೋಟೆಲ್ನಲ್ಲೂ ಸಿಗದ ರುಚಿಯಾದ ಇಡ್ಲಿ ಚಟ್ನಿ ನೀಡುವ ಗೋಪಿ ಹೋಟೆಲ್ ನೆನಪಿಸಿದ್ದಕ್ಕೆ ಧನ್ಯವಾದಗಳು ಸರ್

4
0
Would love your thoughts, please comment.x
()
x