ಅವಳು ಮೆಲ್ಲನೆ ತನ್ನ ಕಣ್ಣುಗಳನ್ನು ತೆರೆಯಲು ಪ್ರಯತ್ನಿಸಿದಳು. ಕಣ್ಣೆಲ್ಲಾ ಮಂಜು. ಎದ್ದೇಳಲು ಎಷ್ಟು ಪ್ರಯತ್ನಿಸಿದರೂ ಶಕ್ತಿಯೇ ಸಾಲುತ್ತಿಲ್ಲ. ಒದ್ದೆ ನೆಲವು ತನ್ನ ದೇಹದ ಶಕ್ತಿಯನ್ನೆಲ್ಲಾ ಹೀರಿ ಕಚ್ಚಿ ಹಿಡಿದಿರುವಂತೆ.
ಹೀಗೆ ಅದೆಷ್ಟು ಬಾರಿ ಪ್ರಯತ್ನಿಸಿದಳೋ ಏನೋ ಆ ಹುಡುಗಿ. ಕೊನೆಗೂ ಹಲವು ಘಂಟೆಗಳ ನಂತರ ಪ್ರಜ್ಞೆಯು ಮರಳಿ ಬಂದಾಗ ತಾನು ದಪ್ಪನೆಯ ಕುಚರ್ಿಯಂತಿರುವ ಆಕೃತಿಯ ಕೆಳಗೆ ಮುದುಡಿ ಮಲಗಿರುವುದು ಅವಳಿಗೆ ಗೊತ್ತಾಗಿದೆ. ಮಲಗಿದ ಭಂಗಿಯಲ್ಲೇ ಪ್ರಯಾಸದಿಂದ ಕಣ್ಣನ್ನಾಡಿಸಿದರೆ ಸುತ್ತಲೂ ಕಾಡೇ ಕಾಡು. ಪ್ರಯಾಸದಿಂದ ತಲೆಯೆತ್ತಿ ನೋಡಿದರೆ ತಲೆಯ ಮೇಲಿರುವ ಆಕಾಶವನ್ನೇ ಒಂದು ಮಟ್ಟಿಗೆ ಮುಚ್ಚಿಹಾಕಿದೆ ಎನ್ನುವಷ್ಟರ ಮಟ್ಟಿಗಿನ ದಟ್ಟ ಅರಣ್ಯ ಮತ್ತು ಅವುಗಳನ್ನು ಸೀಳಿಕೊಂಡು ಕೋಲ್ಮಿಂಚಿನಂತೆ ಇಣುಕುತ್ತಿರುವ ಸೂರ್ಯರಶ್ಮಿ.
ಮೆಲ್ಲನೆ ಎಲ್ಲಾ ನೆನಪುಗಳೂ ಒಂದೊಂದಾಗಿ ಸುರುಳಿ ಬಿಚ್ಚಲಾರಂಭಿಸಿದ್ದವು. ತಾನು ಏಕಾಂಗಿಯಾಗಿ ಈ ದಟ್ಟ ಕಾನನದ ಮಧ್ಯೆ ಏಕೆ ಮಲಗಿದ್ದೇನೆ ಎಂಬ ಪ್ರಶ್ನೆಗೆ ಉತ್ತರವೂ ಕೂಡ. ಹದಿನೇಳರ ಹರೆಯದ ಆ ತರುಣಿಯ ಹೆಸರು ಜೂಲಿಯಾನ್ ಕೆಪ್ಕೆ.
**********
1971 ರ ಕ್ರಿಸ್ಮಸ್ ಋತುವಾಗಿತ್ತದು.
ಆಗ ಜೂಲಿಯಾನ್ ಕೆಪ್ಕೆ ಹದಿನೇಳರ ಹರೆಯದ ಪ್ರತಿಭಾವಂತ ಹುಡುಗಿ. ಪೆರುವಿನ ಲಿಮಾ ನಗರದಲ್ಲಿ ತನ್ನ ತಾಯಿಯಾದ ಮರಿಯಾ ಕೆಪ್ಕೆಯೊಂದಿಗೆ ಅವಳ ವಾಸ. ಇನ್ನು ಮರಿಯಾ ಕೆಪ್ಕೆ ಪಕ್ಷಿ ಶಾಸ್ತ್ರಜ್ಞೆಯಾದರೆ ಜೂಲಿಯಾನಳ ತಂದೆ ಹಾನ್ಸ್ ವಿಲ್ಹೆಲ್ಮ್ ಕೆಪ್ಕೆ ಖ್ಯಾತ ಪ್ರಾಣಿಶಾಸ್ತ್ರಜ್ಞ. ಹೀಗೆ ವಿಜ್ಞಾನಿಗಳ ಮಗಳಾಗಿ ಹುಟ್ಟಿದ ಜೂಲಿಯಾನಳ ಬಾಲ್ಯದ ಲೋಕವೂ ಕಾಡು, ಪ್ರಾಣಿ, ಪಕ್ಷಿಗಳಿಂದಲೇ ತುಂಬಿಹೋಗಿತ್ತು. ಪುಕಾಲ್ಪಾ ನಗರದಲ್ಲಿ ಸಂಶೋಧನೆಯಲ್ಲಿ ನಿರತನಾಗಿದ್ದ ಹಾನ್ಸ್ ತನ್ನ ಮುದ್ದುಮಗಳು ಪುಕಾಲ್ಪಾದ ನಿವಾಸಕ್ಕೆ ಬಂದಾಗಲೆಲ್ಲಾ ಕಾಡುಗಳ, ವಿವಿಧ ಜೀವಜಂತುಗಳ ಕೌತುಕಗಳನ್ನು ಹೇಳುವವರು. ಅವಳ ಪುಟ್ಟ ಕಲ್ಪನಾಲೋಕವನ್ನು ಜೀವಶಾಸ್ತ್ರದ ಅದ್ಭುತ ಸತ್ಯಗಳಿಂದ ಮತ್ತಷ್ಟು ವಿಸ್ತರಿಸುವವರು.
ಕ್ರಿಸ್ಮಸ್ ಈವ್ ಅನ್ನುವುದೊಂದನ್ನು ಬಿಟ್ಟರೆ ಅಂಥಾ ವಿಶೇಷ ದಿನವೇನೂ ಅದಾಗಿರಲಿಲ್ಲ. ಇನ್ನು ಪೆರುವಿನ ಲಿಮಾದಿಂದ ಪುಕಾಲ್ಪಾಗೆ ವಿಮಾನದಲ್ಲಿ ಹೋಗುವುದಾದರೆ ಹೆಚ್ಚೆಂದರೆ ಒಂದು ಗಂಟೆಯ ಪ್ರಯಾಣ. ಕ್ರಿಸ್ಮಸ್ ಈವ್ ನ ಆ ದಿನವೇ ಲಿಮಾದಿಂದ ವಾಯುಮಾರ್ಗವಾಗಿ ಪುಕಾಲ್ಪಾಗೆ ತೆರಳಿ ಹಾನ್ಸ್ ನನ್ನು ಭೇಟಿಯಾಗುವುದೆಂದು ಅಮ್ಮ-ಮಗಳು ಇಬ್ಬರೂ ನಿರ್ಧರಿಸಿಯೇ ಹೊರಟಿದ್ದರು. ಜೂಲಿಯಾನ್ ಎಂದಿನಂತೆ ತನ್ನ ಇಷ್ಟದ ಕಿಟಕಿಯ ಬದಿಯ ಆಸನದಲ್ಲಿ ಕುಳಿತರೆ ಮರಿಯಾ ಪಕ್ಕದ ಆಸನದಲ್ಲಿ ಕುಳಿತಳು. ಮೂರು ಸೀಟುಗಳಿದ್ದ ಆ ಸಾಲಿನ ಮತ್ತೊಂದು ತುದಿಯಲ್ಲಿ ಗಂಡಸೊಬ್ಬ ಕುಳಿತುಕೊಂಡ. ಅಂತೂ ತೊಂಭತ್ತೆರಡು ಪ್ರಯಾಣಿಕರಿದ್ದ ಆ ವಿಮಾನವು ಧರೆಯನ್ನು ಬಿಟ್ಟು ಮೇಲಕ್ಕೆ ಚಿಮ್ಮಿದೊಡನೆಯೇ ಎಂದಿನಂತೆ ವಿಮಾನದ ಸಿಬ್ಬಂದಿವರ್ಗದವರಿಂದ ಅವಶ್ಯ ಸೂಚನೆಗಳು ಮತ್ತು ಉಪಾಹಾರದ ಸೇವೆಗಳು ಆರಂಭವಾಗಿದ್ದವು.
ಆದರೆ ವಿಮಾನದೊಳಗಿನ ಚಿತ್ರಣವೇ ಬದಲಾಗಿದ್ದು ಮೊದಲರ್ಧದ ಪ್ರಯಾಣವು ಮುಗಿದ ನಂತರ. ಸುತ್ತಲೂ ಗುಂಪುಗಟ್ಟಿದ್ದ ಕಪ್ಪುಮೋಡಗಳನ್ನು ಸೀಳುತ್ತಾ ಮುಂದೆ ಸಾಗುತ್ತಿದ್ದ ವಿಮಾನಕ್ಕೆ ಅಪಾಯವಾದರೂ ಎಲ್ಲಿ ಕಾಣುತ್ತಿತ್ತು? ದಟ್ಟವಾಗಿದ್ದ ಕಪ್ಪು ಮೋಡಗಳ ಗರ್ಜನೆ ಮತ್ತು ಸಿಡಿಲಿನ ಅಬ್ಬರಕ್ಕೆ ವಿಮಾನವು ಜೋರಾಗಿ ಅಲುಗಾಡತೊಡಗಿದಾಗ ತಲೆಯ ಮೇಲಿದ್ದ ಬ್ಯಾಗೇಜ್ ಕ್ಯಾಬಿನ್ನಿನಲ್ಲಿ ಇಟ್ಟಿದ್ದ ಸಾಮಾನುಗಳು ಪ್ರಯಾಣಿಕರ ತಲೆಯ ಮೇಲೆ ಬೀಳಲಾರಂಭಿಸಿದ್ದವು. ಕ್ಷಣಗಳು ಕಳೆದಂತೆ ವಿಮಾನದ ಅಲುಗಾಟವು ತೀವ್ರವಾಯಿತೇ ಹೊರತು ಕಮ್ಮಿಯಾಗುವಂತೆ ಕಾಣಲಿಲ್ಲ. ಜೀವಭಯದಿಂದ ಆತಂಕಕ್ಕೊಳಗಾಗಿದ್ದ ಪ್ರಯಾಣಿಕರ ಕಿರುಚಾಟವೂ ಕೂಡ ಮುಗಿಲುಮುಟ್ಟಿತ್ತು. ಜೂಲಿಯಾನಳಿಗೆ ಮಿಂಚೊಂದು ವಿಮಾನದ ರೆಕ್ಕೆಗೆ ಬಂದು ಬಡಿದಂತೆ ತನ್ನ ಕಿಟಕಿಯಿಂದ ಕಂಡಿದ್ದು ಈ ಹೊತ್ತಿನಲ್ಲೇ. ಮಹಾಸ್ಫೋಟವಾದಂತೆ ಕಣ್ಣು ಕುರುಡಾಗಿಸುವಂಥಾ ಬೆಳಕು ಮತ್ತು ಕಿವಿತಮಟೆಯನ್ನು ಹರಿದೇ ಹಾಕುವಷ್ಟು ಶಕ್ತಿಯ ಒಂದು ಸದ್ದು. ಅಷ್ಟೇ!
ಕೂಡಲೇ ವಿಮಾನವು ಈ ಬಾರಿ ಕೆಳಮುಖವಾಗಿ ಹಾರುತ್ತಿರುವಂತೆ ಪ್ರಯಾಣಿಕರಿಗೆ ಭಾಸವಾಗತೊಡಗಿತ್ತು. ಹಾರುತ್ತಿತ್ತು ಅನ್ನುವುದಕ್ಕಿಂತಲೂ ಯಾವುದೇ ನಿಯಂತ್ರಣವೇ ಇಲ್ಲದಂತೆ ಬೀಳುತ್ತಿತ್ತು ಎಂದೇ ಹೇಳಬೇಕು. ವಿಮಾನವು ಅದ್ಯಾವ ಕೋನದಲ್ಲಿ ಕೆಳಮುಖವಾಗಿ ಸಾಗುತ್ತಿತ್ತೆಂದರೆ ಕೊನೆಯ ಸಾಲಿಗಿಂತ ಎರಡು ಸಾಲು ಮುಂದೆ ಕುಳಿತಿದ್ದ ಜೂಲಿಯಾನಳಿಗೆ ವಿಮಾನದ ಮೂತಿಯ ಕಾಕ್ ಪಿಟ್ ವರೆಗಿನ ದೃಶ್ಯವು ಸ್ಪಷ್ಟವಾಗಿ ಕಾಣುತ್ತಿತ್ತು. ಅಂಥದ್ದೊಂದು ಭಯಾನಕ, ಗೊಂದಲಮಯ ದೃಶ್ಯವನ್ನೂ ಜೂಲಿಯಾನಳಾಗಲೀ ವಿಮಾನದ ಇತರ ಪ್ರಯಾಣಿಕರಾಗಲೀ ಯಾವತ್ತೂ ನೋಡಿರಲಿಕ್ಕಿಲ್ಲವೋ ಏನೋ. ಎಲ್ಲರ ಕಣ್ಣುಗಳಲ್ಲೂ ಮೃತ್ಯುತಾಂಡವ. ವಿಮಾನದೊಳಗೆ ಸೂರು ಕಿತ್ತುಹೋಗುವಂತೆ ಕೇಳುತ್ತಿದ್ದ ಪ್ರಯಾಣಿಕರ ರೋದನೆ. ಈ ಎಲ್ಲಾ ಗಲಾಟೆಗಳ ಮಧ್ಯೆಯೇ ತನ್ನ ತಾಯಿ ಮರಿಯಾಳ ಮಂದದನಿಯು ಜೂಲಿಯಾನಳಿಗೆ ಕೇಳಿತ್ತು. “ಎಲ್ಲಾ ಮುಗಿಯಿತು…'', ಎಂದು ನಿಟ್ಟುಸಿರಿಟ್ಟಿದ್ದಳು ಆ ತಾಯಿ.
ನಂತರದ ಕೆಲಕ್ಷಣಗಳಲ್ಲೇ ಆಗಿದ್ದು ಮಹಾದುರಂತ. ಇನ್ನೇನು ಕಿವುಡಳಾಗಲಿದ್ದೇನೆ ಎಂಬಷ್ಟರ ಮಟ್ಟಿಗೆ ಭಯಹುಟ್ಟಿಸಿದ್ದ ಆ ಸಿಡಿಲಿನ ರಾಕ್ಷಸ ಸದ್ದಿನ ಬೆನ್ನಿಗೇ ಜೂಲಿಯಾನಳ ಕಿವಿಯಲ್ಲಿ ಸ್ಮಶಾನ ಮೌನ. ಅಷ್ಟಕ್ಕೂ ಆಗಿದ್ದೇನೆಂದರೆ ವಿಮಾನವು ಅಕ್ಷರಶಃ ಹೋಳಾಗಿ ಸೊಂಟಪಟ್ಟಿಯೊಂದಿಗೆ ಬಿಗಿದುಕೊಂಡಿದ್ದ ತನ್ನ ಆಸನದೊಂದಿಗೇ ಹತ್ತುಸಾವಿರ ಅಡಿಗಳ ಎತ್ತರದಿಂದ ನೆಲಕ್ಕೆ ಬೀಳುತ್ತಿದ್ದಳು ಜೂಲಿಯಾನ್. ವಿಮಾನ, ಪಕ್ಕದಲ್ಲಿದ್ದ ತಾಯಿ, ಸದ್ದು, ಸಹಪ್ರಯಾಣಿಕರು… ಹೀಗೆ ಏನೇನೂ ಇಲ್ಲದೆ ಅಷ್ಟು ಎತ್ತರದಿಂದ ಜೂಲಿಯಾನ್ ತಲೆಕೆಳಗಾಗಿ ಭೂಮಿಗೆ ಬೀಳುತ್ತಿದ್ದಳು. ಅವಳ ಕಿವಿಯಲ್ಲಿ ಈಗ ಗಾಳಿಯದ್ದೇ ಅಟ್ಟಹಾಸ. ಕುಳಿತಿದ್ದ ಆಸನಕ್ಕೆ ಬಿಗಿಯಾಗಿ ಕಟ್ಟಿದ್ದ ಸೊಂಟಪಟ್ಟಿಯಿಂದ ತೀವ್ರವಾದ ಉಸಿರುಗಟ್ಟುವಿಕೆಯೂ ಕೂಡ. ಭಯವು ತನ್ನ ಮೆದುಳಿನ ಕದವನ್ನು ತಟ್ಟುವ ಮೊದಲೇ ಜೂಲಿಯಾನಳಿಗೆ ಪ್ರಜ್ಞೆ ತಪ್ಪಿತ್ತು. ಅಷ್ಟಕ್ಕೂ ಆಗಸದಿಂದ ಬೀಳುತ್ತಿದ್ದ ಅವಳಿಗೆ ಕೊನೆಯಲ್ಲಿ ನೆನಪಿದ್ದ ದೃಶ್ಯವೆಂದರೆ ಎತ್ತರದಿಂದ ಎಲೆಕೋಸಿನಂತೆ, ಹಸಿರು ಬ್ರಾಕೊಲಿಯಂತೆ ಕಾಣುತ್ತಿದ್ದ, ಕ್ಷಣಕ್ಷಣವೂ ಹತ್ತಿರವಾಗುತ್ತಿದ್ದ ಅಮೆಜಾನ್ ನ ದಟ್ಟ ಕಾಡು.
************
ಜೂಲಿಯಾನ್ ಗೆ ಕೊನೆಗೂ ಎಚ್ಚರವಾಗಿತ್ತು.
ಜೋರಾಗಿ ಕೆಮ್ಮುತ್ತಾ ಅತ್ತಿತ್ತ ನೋಡತೊಡಗಿದಳು ಜೂಲಿಯಾನ್. ಆಸನದ ಸಮೇತ ನೆಲಕ್ಕೆ ಬಿದ್ದಿದ್ದರೂ ವಿಮಾನದ ಆಸನದೊಂದಿಗೆ ಪ್ರಯಾಣಿಕರ ಸುರಕ್ಷತೆಗಾಗಿ ಬಿಗಿಯಲಾಗುವ ಸೊಂಟಪಟ್ಟಿಯು ಕಳಚಿಕೊಂಡಿತ್ತು. ತಾನು ಹತ್ತುಸಾವಿರ ಅಡಿಯ ಎತ್ತರದಿಂದ ಆಸನದ ಸಮೇತ ತಲೆಕೆಳಗಾಗಿ ಬಿದ್ದಾಗ ಉಸಿರುಗಟ್ಟಿಸುವಂತೆ ಬಿಗಿಯಾಗಿ ತನ್ನನ್ನು ಹಿಡಿದಿಟ್ಟುಕೊಂಡಿದ್ದ ಸೊಂಟಪಟ್ಟಿಯ ನೆನಪು ಅವಳಿಗಿತ್ತು. ಆದರೆ ನೆಲಕ್ಕೆ ಬಿದ್ದ ಮೇಲೆ ಅದನ್ನು ಕಳಚಿದ ನೆನಪಂತೂ ಇರಲಿಲ್ಲ. ಬಹುಶಃ ಮಳೆಯ ಸಮಯದಲ್ಲಿ ಸೊಂಟಪಟ್ಟಿಯನ್ನು ಕಳಚಿ ಈ ಸೀಟಿನ ಕೆಳಗೆ ಮುದುರಿಕೊಂಡು ಆಶ್ರಯವನ್ನು ಪಡೆದೆನೋ ಏನೋ ಅಂದುಕೊಂಡಳು ಜೂಲಿಯಾನ್.
ಮೆಲ್ಲನೆ ಏನಾಗುತ್ತಿದೆಯೆಂಬುದನ್ನು ಅರಿಯಲು ಪ್ರಯತ್ನಿಸುತ್ತಿದ್ದ ಜೂಲಿಯಾನಳಿಗೆ ಎತ್ತಲೂ ಕಾಣಿಸುತ್ತಿದ್ದಿದ್ದು ಮಾತ್ರ ದಟ್ಟ ಕಾನನ. ಅವಳ ಕಣ್ಣುಗಳು ಮಂಜಾಗಿವೆ. ಅಯ್ಯೋ, ಎಡಗಣ್ಣಂತೂ ಊದಿಕೊಂಡು ಮುಚ್ಚಿಯೇ ಹೋಗಿದೆ. ಚಿಕ್ಕದೊಂದು ಸಂದಿಯಿಂದ ನೋಡುತ್ತಿರುವಂತೆ ತನ್ನ ಬಲಗಣ್ಣಿನಿಂದ ನೋಡುತ್ತಿದ್ದಾಳವಳು. ಅಸಲಿಗೆ ವಿಮಾನದ ಒಳಗೆ ಮತ್ತು ಹೊರಗೆ ಉಂಟಾಗಿದ್ದ ವಾಯುವಿನ ಒತ್ತಡದ ತೀವ್ರ ವ್ಯತ್ಯಾಸದಿಂದಾಗಿ ಜೂಲಿಯಾನಳ ಬಲಕಣ್ಣು ಕೊಂಚ ಹೊರಕ್ಕೆ ಬಂದಿತ್ತು. ನೋವೇನೂ ಇರದಿದ್ದರೂ ಕೂಡ ಕಣ್ಣಿನ ಬಿಳಿ ಭಾಗವು ರಕ್ತಗೆಂಪಿನ ಬಣ್ಣಕ್ಕೆ ತಿರುಗಿತ್ತು. ಇನ್ನು ದೇಹದಲ್ಲೆಲ್ಲಾ ತರಚಿದ ಗಾಯಗಳು. ಜೂಲಿಯಾನಳ ಕೊರಳೆಲುಬು ಮುರಿದುಹೋಗಿದೆ. ಎಡಗಾಲಿನ ಮೀನಖಂಡದಲ್ಲಿ ಇರಿದಂತಿರುವ ಆಳವಾದ ಒಂದು ಗಾಯ. ದೇಹದ ಮೂಲೆಮೂಲೆಗಳಲ್ಲೆಲ್ಲಾ ಕೊಚ್ಚಿಹಾಕುವಂಥಾ ನೋವು. ದೃಷ್ಟಿದೋಷಕ್ಕೆಂದು ಬಳಸುತ್ತಿದ್ದ ಅವಳ ಕನ್ನಡಕವು ಕಳೆದುಹೋಗಿದೆ. ಟಿಕ್-ಟಿಕ್ ಎಂದು ಸದ್ದು ಮಾಡುತ್ತಿದ್ದ ತನ್ನ ಮುರಿದ ಕೈಗಡಿಯಾರವನ್ನು ಪ್ರಯಾಸದಿಂದ ನೋಡಿದರೆ ಮುಂಜಾನೆಯ ಒಂಭತ್ತರ ಸಮಯವನ್ನು ಅದು ತೋರಿಸುತ್ತಿದೆ. ತಾನು ಯಾವತ್ತಿನಿಂದ ಇಲ್ಲಿ ಬಿದ್ದುಕೊಂಡಿದ್ದೇನೆ ಎಂಬ ಪರಿಜ್ಞಾನವೂ ಅವಳಿಗಿಲ್ಲ. ಪಕ್ಕದಲ್ಲಿ ಅಮ್ಮನೂ ಇಲ್ಲ, ವಿಮಾನವೂ ಇಲ್ಲ, ಇತರರೂ ಇಲ್ಲ. ಅದೊಂದು ಭಯಾನಕ ಏಕಾಂಗಿತನ.
ಜೂಲಿಯಾನ್ ಮೆಲ್ಲನೆ ತೆವಳುತ್ತಾ ಇದ್ದ ಶಕ್ತಿಯನ್ನೆಲ್ಲಾ ಒಟ್ಟುಗೂಡಿಸಿಕೊಂಡು ನಿಲ್ಲಲು ಪ್ರಯತ್ನಿಸುತ್ತಿದ್ದಾಳೆ. ಆದರೆ ರಾಕ್ಷಸೀ ಆಯಾಸವು ಅವಳನ್ನು ಮತ್ತೆ ಮತ್ತೆ ನೆಲಕ್ಕೆ ಬೀಳಿಸುತ್ತಿದೆ. ಅಂತೂ ಮೊದಲು ಮೊಣಕಾಲ ಮೇಲೆ ನಿಂತುಕೊಂಡು, ನಂತರ ತನ್ನ ಕಾಲಮೇಲೆ ನಿಲ್ಲುವಷ್ಟರಲ್ಲಿ ಜೂಲಿಯಾನಳ ಅರ್ಧದಿನವೇ ಕಳೆದುಹೋಗಿತ್ತು. ತಾನು ಯಾವ ಸ್ಥಿತಿಯಲ್ಲಿದ್ದೇನೆ ಎಂಬುದರ ಸಂಪೂರ್ಣ ಅರಿವಾದೊಡನೆಯೇ ಜೂಲಿಯಾನ್ ಮಾಡಿದ್ದ ಮೊದಲ ಕೆಲಸವೆಂದರೆ ತನ್ನ ತಾಯಿಯನ್ನು ಹುಡುಕಲಾರಂಭಿಸಿದ್ದು. ಆದರೆ ತಾಯಿಯಾಗಲೀ, ವಿಮಾನದ ಅವಶೇಷಗಳಾಗಲೀ, ಇತರ ಪ್ರಯಾಣಿಕರ ಶವಗಳಾಗಲೀ ಜೂಲಿಯಾನಳಿಗೆ ಕಾಣಸಿಗಲಿಲ್ಲ. ಅಮ್ಮಾ ಎಂಬ ಅವಳ ಆರ್ತನಾದಕ್ಕೆ ಉತ್ತರಿಸುತ್ತಿದ್ದಿದ್ದು ಅರಣ್ಯದ ಭಯಾನಕ ಮೌನಗಳೇ. ಕಾಡುಗಳ ಅದರಲ್ಲೂ ಅಮೆಜಾನ್ ಕಾಡಿನಂಥಾ ದಟ್ಟ ಅರಣ್ಯಗಳ ಗರ್ಭದಲ್ಲಿರುವ ಶಬ್ದಗಳೇ ವಿಚಿತ್ರವಾದವು. ಬಳುಕುವ ಹವೆ, ಎಲೆಗಳ ಮಂದ ಚಲನೆ, ಮಳೆಯಿಂದ ತೊಟ್ಟಿಕ್ಕುವ ನೀರಹನಿಗಳು, ಸೊಳ್ಳೆಗಳು, ದುಂಬಿಗಳ ಗುಂಯ್ ಗುಡುವಿಕೆ, ಹುಳುಹುಪ್ಪಟೆಗಳ ಗುಟುರು… ಅದನ್ನು ಅನುಭವಿಸಿದವರೇ ಬಲ್ಲರು.
ದಟ್ಟ ಕಾನನದ ಗರ್ಭದಲ್ಲಿ ದಿಕ್ಕಿಲ್ಲದಂತೆ ಬಿದ್ದಿದ್ದ ಜೂಲಿಯಾನ್ ದಿನವಿಡೀ ಹುಡುಕಿದರೂ ತನ್ನ ತಾಯಿಯನ್ನು ಪತ್ತೆಹಚ್ಚಲು ಸೋತಿದ್ದಳು. ಈ ಯತ್ನದಲ್ಲಿ ಅವಳಿಗೆ ಸಿಕ್ಕಿದ್ದು ಬಿದ್ದಿದ್ದ ಸಿಹಿತಿನಿಸುಗಳ ಒಂದು ಚಿಕ್ಕ ಪೊಟ್ಟಣ ಮಾತ್ರ. ತಕ್ಷಣವೇ ಹಸಿವು ಬಾಯಾರಿಕೆಗಳು ನೆನಪಾಗಿ ಹದಿನೇಳರ ಯುವತಿಯನ್ನು ಇದೇ ಮೊದಲ ಬಾರಿಗೆ ಕಂಗೆಡಿಸತೊಡಗಿದ್ದವು. ಒಣಗಿದ್ದ ಗಂಟಲಿನ ಸಮಾಧಾನಕ್ಕಾಗಿ ಧಾರಾಕಾರವಾಗಿ ಸುರಿದಿದ್ದ ಮಳೆಯಿಂದ ತೊಯ್ದುಹೋದ ಎಲೆಗಳಿಗೆ ತನ್ನ ತುಟಿಗಳನ್ನು ಕೊಟ್ಟಳು ಜೂಲಿಯಾನ್. ಜೊತೆಗೇ ಆ ಪೊಟ್ಟಣವನ್ನು ತೆಗೆದು ಸ್ವಲ್ಪವೇ ತಿನಿಸನ್ನು ಬಾಯಿಗಿಟ್ಟುಕೊಂಡಳು. ಇದ್ದ ಒಂದು ಆಹಾರವೆಂದರೆ ಅದೊಂದೇ. ಹಾಗಾಗಿ ಅದನ್ನು ಜಾಗರೂಕತೆಯಿಂದ ಬಳಸಬೇಕೆಂಬ ಸಾಮಾನ್ಯಜ್ಞಾನವಂತೂ ಜೂಲಿಯಾನಳಿಗಿತ್ತು.
ಆದರೆ ಸಾಮಾನ್ಯ ಜ್ಞಾನಕ್ಕಿಂತ ಹೆಚ್ಚಿನ ಸಮಯಪ್ರಜ್ಞೆಯೂ ಜೂಲಿಯಾನಳಿಗಿತ್ತು ಎಂಬುದನ್ನು ಹೇಳಲೇಬೇಕು. ಪ್ರಾಣಿ ಮತ್ತು ಪಕ್ಷಿಶಾಸ್ತ್ರದ ವಿಜ್ಞಾನಿಗಳಾಗಿದ್ದ ತನ್ನ ಹೆತ್ತವರ ತಿರುಗಾಟಗಳಲ್ಲಿ ಅವಳ ಬಾಲ್ಯವೂ ಸೇರಿಕೊಂಡಿತ್ತು. ಅಪ್ಪ ಹೇಳುತ್ತಿದ್ದ ಕಾಡಿನ ಕೌತುಕ ಕಥೆಗಳು ಜೂಲಿಯಾನಳಿಗೆ ವರವಾಗಿ ಪರಿಣಮಿಸಿದ್ದವು. ತಾನು ಜೀವಂತವಾಗಿರಬೇಕಾದರೆ ಕಾಡಿನ ಎಲ್ಲಾ ಅಪಾಯಗಳನ್ನೂ ಜಾಗೃತಳಾಗಿ ಎದುರಿಸಬೇಕೆಂಬ ಸತ್ಯವು ಅವಳಿಗೆ ಮನದಟ್ಟಾಗಿತ್ತು. ಕಾಡಿನಲ್ಲಿ ಸಿಕ್ಕಿಹಾಕಿಕೊಂಡಿದ್ದೇ ಆದರೆ ನೀರಿನ ಸೆಲೆಯನ್ನು ಹುಡುಕಿಕೊಂಡು ಹೋಗಬೇಕು ಎಂದು ಅವಳಿಗೆ ಅಪ್ಪ ಹೇಳಿದ ನೆನಪು. ಏಕೆಂದರೆ ನೀರಿನ ಸೆಲೆಯಿದ್ದ ಕಡೆಯಲ್ಲೆಲ್ಲಾ ಮನುಷ್ಯನ ವಾಸವಿರುತ್ತದಂತೆ. ನದಿಯಂತೆಯೋ, ಪುಟ್ಟ ಝರಿಯಂತೆಯೇ ಇದ್ದರೆ ಅದು ಹರಿಯುವ ದಿಕ್ಕಿನಲ್ಲೇ ನಡೆದುಕೊಂಡೋ, ಈಜಿಕೊಂಡೋ ಹೋಗುವುದು ಬುದ್ಧಿವಂತಿಕೆ. ನೀರಿನ ಈ ಮೂಲಗಳು ಬಾಯಾರಿಕೆಯನ್ನು ತಣಿಸಲೂ ಬಲು ಉಪಯೋಗಿ ಮತ್ತು ಸುರಕ್ಷಿತ ಅಂಶಗಳು. ಅಂತೂ ಜಲಮೂಲವೊಂದು ಸಿಕ್ಕಿದರೆ ಸಾಕಪ್ಪಾ ಎಂಬ ನಿರೀಕ್ಷೆಯಲ್ಲೇ ಹುಡುಕುತ್ತಾ ಹೊರಟಿದ್ದಳು ಜೂಲಿಯಾನ್.
ನಗರದ ಜೀವನದಲ್ಲಿ ಬೆಚ್ಚಗಿದ್ದವರಿಗೆ ಕಾಡೆಂದರೆ ಬೇರೆಯೇ ಒಂದು ಲೋಕವಿದ್ದಂತೆ. ಆದರೆ ಅದೃಷ್ಟವಶಾತ್ ಕಾಡಿನ ಕಿಂಚಿತ್ತು ಪರಿಚಯವಾದರೂ ಜೂಲಿಯಾನಳಿಗಿತ್ತು. ಎಷ್ಟೇ ಹಸಿವಾದರೂ ಸಿಕ್ಕ ಸಿಕ್ಕ ಹಣ್ಣುಗಳನ್ನೆಲ್ಲಾ ತಿನ್ನಬಾರದು ಎಂಬ ಜ್ಞಾನವೂ ಅವಳಿಗಿತ್ತು. ಏಕೆಂದರೆ ಬಹುತೇಕ ಹಣ್ಣುಗಳು ವಿಷಕಾರಿಯಾಗಿರುತ್ತವೆ. ಇನ್ನು ಸೂರ್ಯಕಿರಣಗಳೇ ನೆಟ್ಟಗೆ ನೆಲಕ್ಕೆ ತಲುಪದ ಅರಣ್ಯಗಳಲ್ಲಿ, ದಿನರಾತ್ರಿಯೂ ಎಡೆಬಿಡದೆ ಮಳೆಯಾಗುವ ಈ ಕಾಡುಗಳಲ್ಲಿ ಪ್ರಾಣಿಗಳಿಗಿಂತಲೂ ಅಪಾಯವಾದ ಜೀವಜಂತುಗಳೆಂದರೆ ತರಹೇವಾರಿ ಕ್ರಿಮಿಗಳು, ಹುಳುಹುಪ್ಪಟೆಗಳು ಮತ್ತು ಸರ್ಪಗಳು. ಹಾವುಗಳಿಂದ ರಕ್ಷಿಸಿಕೊಳ್ಳಲಂತೂ ಪ್ರತೀ ಹೆಜ್ಜೆಯನ್ನೂ ಪರೀಕ್ಷಿಸಿಯೇ ಇಡಬೇಕಾದ ಅನಿವಾರ್ಯತೆಯು ಅವಳಿಗೆ ಬಂದೊದಗಿತ್ತು.
ಒಮ್ಮೆಯಂತೂ ತನ್ನ ಹುಡುಕಾಟದ ಮಧ್ಯದಲ್ಲೇ ಆಗಸದಲ್ಲಿ ಹಾರಾಡುತ್ತಿರುವ ವಿಮಾನವೊಂದರ ಸದ್ದು ಅವಳಿಗೆ ಕೇಳಿತ್ತು. ಆದರೆ ಅದರ ಗಮನವನ್ನು ಜೂಲಿಯಾನ್ ತನ್ನೆಡೆಗೆ ಹೇಗೆ ತಾನೇ ತಂದಾಳು? ದೇವರೇ ತನ್ನ ಸಹಾಯಕ್ಕೆಂದು ಕಳಿಸಿದಂತೆ ಬಂದಿದ್ದ ಆ ವಿಮಾನದ ಸದ್ದಡಗುತ್ತಿದ್ದಂತೆಯೇ ಹತಾಶೆಯಿಂದ ಕುಸಿದಿದ್ದಳು ಜೂಲಿಯಾನ್. ತನ್ನನ್ನು ಇನ್ಯಾರೂ ಪಾರುಮಾಡಲಾರರೆಂಬ ಕಟುಸತ್ಯವು ಅವಳಿಗೆ ಈ ಬಾರಿ ಎದುರಾಗಿತ್ತು. ಏಕಾಂಗಿತನ, ಜೀವಭಯ, ಆತಂಕ, ನಿರೀಕ್ಷೆ, ಬದುಕುವ ಆಸೆ… ಇವೆಲ್ಲವುಗಳೂ ಕಣ್ಣೀರಾಗಿ ಮಡುಗಟ್ಟಿ ಜೂಲಿಯಾನಳ ಕೆನ್ನೆಯನ್ನು ತೋಯಿಸಿದ್ದವು. ಅದೊಂದು ಕೆಟ್ಟ ಏಕಾಂಗಿತನದ್ದಷ್ಟೇ ಅಲ್ಲ, ಅಸಹಾಯಕತೆಯ ಕ್ಷಣವೂ ಕೂಡ. ಆ ಭಾವವನ್ನು ಶಬ್ದಗಳಲ್ಲಿ ಹಿಡಿದಿಡುವುದು ಕಷ್ಟ.
ಹೀಗೆ ಹತಾಶೆಯಿಂದ ಮೆಲ್ಲಗೆ ನಡೆಯುತ್ತಲೇ ಇದ್ದ ಜೂಲಿಯಾನಳಿಗೆ ಮೊದಲ ಭರವಸೆಯ ಕಿರಣವು ಸಿಕ್ಕಿದ್ದು ಪುಟ್ಟ ಝರಿಯೊಂದು ಎದುರಾದಾಗ. ಅಪ್ಪ ಹೇಳುತ್ತಿದ್ದ ಜಲಮೂಲ, ಮಾನವನ ವಾಸ, ನಾಗರೀಕತೆ ಇತ್ಯಾದಿಗಳೆಲ್ಲವೂ ಥಟ್ಟನೆ ನೆನಪಾದವು ಅವಳಿಗೆ. ಆದರೆ ಅಂದುಕೊಂಡಂತೆ ಮಾನವನ ಇರುವಿಕೆಯ ಕುರುಹೇನೂ ಜೂಲಿಯಾನಳಿಗೆ ಕಾಣಸಿಗಲಿಲ್ಲ. ಆ ಶುದ್ಧನೀರನ್ನು ಬೊಗಸೆಯಲ್ಲಿ ತುಂಬಿ ಮನಸ್ಸು ತೃಪ್ತಿಯಾಗುವಷ್ಟು ಕುಡಿದುಬಿಟ್ಟಳು ಜೂಲಿಯಾನ್. ಇದೇ ಮೊದಲ ಬಾರಿಗೆ ಸುಸ್ತಾದ ದೇಹವು ಕೊಂಚ ಚೇತರಿಸಿದಂತಾಗಿತ್ತು. ಆದದ್ದಾಗಲಿ ಎಂದು ಝರಿಯ ಹರಿವಿನ ದಿಕ್ಕಿನಲ್ಲೇ ಮೆಲ್ಲಗೆ ನಡೆಯಲು ಪ್ರಾರಂಭಿಸಿದ ಅವಳಿಗೆ ಝರಿಯು ತೊರೆಯಾಗಿ ಹರಿಯುತ್ತಾ ಮುಂದೆ ಪುಟ್ಟ ನದಿಯಂತೆ ಆದ ದೃಶ್ಯವು ಎದುರಾಗಿತ್ತು. ನದಿಯು ಕೊಂಚ ಬತ್ತಿದಂತಿದ್ದು ನಡೆಯಲು ಸುಲಭವಾಯಿತೇ ಹೊರತು ಎಲ್ಲೂ ಒಬ್ಬ ನರಪ್ರಾಣಿಯೂ ಅವಳ ಕಣ್ಣಿಗೆ ಬೀಳಲಿಲ್ಲ. ಆದರೆ ನಡೆಯುವುದನ್ನು ನಿಲ್ಲಿಸುವಂತೆಯೂ ಇರಲಿಲ್ಲ. ಸಹಾಯವು ಬೇಕೆಂದಿದ್ದರೆ ಹೇಗಾದರೂ ಮಾಡಿ ಈ ನಿರ್ಜನಪ್ರದೇಶವನ್ನು ದಾಟಿಹೋಗಬೇಕಿತ್ತೇ ಹೊರತು ಇನ್ಯಾವ ಆಯ್ಕೆಗಳೂ ಜೂಲಿಯಾನಳಿಗಿರಲಿಲ್ಲ.
ಜೀವವನ್ನು ಹಿಡಿದುಕೊಂಡು ಆ ದಟ್ಟ ಅರಣ್ಯದಲ್ಲಿ ಜೂಲಿಯಾನ್ ಏಕಾಂಗಿಯಾಗಿ ಸಾಗುತ್ತಿದ್ದಳೇನೋ ಹೌದು. ಆದರೆ ಅವಳ ಪ್ರಯಾಣವು ಮುಗಿಯುವಂತೆಯೇ ಕಾಣುತ್ತಿರಲಿಲ್ಲ. ರಾತ್ರಿಯ ನಿದ್ರೆಗಳು ಮತ್ತಷ್ಟು ಭಯಾನಕವಾಗಿದ್ದವು. ಸುರಿಯುತ್ತಲೇ ಇರುತ್ತಿದ್ದ ಕುಂಭದ್ರೋಣ ಮಳೆಗೆ ಬೇಸಿಗೆಯ ಉಡುಪಾದ ಅವಳ ತೆಳುವಾದ ತೋಳಿಲ್ಲದ ಮೇಲಂಗಿಯು ಅವಳ ದೇಹವನ್ನು ಅಂಟಿ ಹಿಡಿದಿರುತ್ತಿತ್ತು. ಇನ್ನು ರಾತ್ರಿಯ ಥಂಡಿ ಹವೆಯಂತೂ ಅವಳನ್ನು ಕೊರಡಾಗಿಸುವಷ್ಟರ ಮಟ್ಟಿಗೆ ಚಳಿಯನ್ನು ತರುತ್ತಿದ್ದವು. ಸೊಳ್ಳೆ, ದುಂಬಿ, ಹೆಸರಿಲ್ಲದ ಕ್ರಿಮಿಕೀಟಗಳ ಕಾಟ ಬೇರೆ. ಸುಮ್ಮನೆ ಮುದುಡಿ ಮಲಗಿದರೆ ಮೂಗಿನೊಳಗೆ, ಕಿವಿಯೊಳಗೆಲ್ಲಾ ಸೇರಿ ತೊಂದರೆ ಮಾಡುತ್ತಿದ್ದ ಕ್ರಿಮಿಕೀಟಗಳು. ಜೊತೆಗೇ ಭಯವನ್ನು ಹುಟ್ಟಿಸುತ್ತಿದ್ದ ಕಾಡಿನದ್ದೇ ಒಂದು ವಿಲಕ್ಷಣ ಮೌನ ಮತ್ತು ಆ ಮೌನದ ನಡುವಿನಿಂದ ಹೊರಬರುತ್ತಿದ್ದ ಮಂದ, ವಿಚಿತ್ರ ಸದ್ದುಗಳು. ದಿನಗಳು ಕಳೆದಂತೆ ಜೂಲಿಯಾನಳ ಆತ್ಮವಿಶ್ವಾಸವು ಕುಸಿಯುತ್ತಿತ್ತೇ ಹೊರತು ಹೊಸ ಭರವಸೆಯ ದಾರಿಗಳೇನೂ ಅವಳಿಗೆ ಸಿಕ್ಕಿರಲಿಲ್ಲ. ಬಹುಷಃ ವಿಧಿಯು ಅವಳಿಗಾಗಿ ಇನ್ನೇನನ್ನೋ ಬಗೆದಿತ್ತು.
ಸುಮಾರು ಮೂರು ದಿನಗಳು ಕಳೆದ ನಂತರ ಆಗಸದಲ್ಲಿ ಹಾರಾಡುತ್ತಿದ್ದ ರಣಹದ್ದುಗಳು ಜೂಲಿಯಾನಳಿಗೆ ಹೊಸ ಸುಳಿವನ್ನು ದೊರಕಿಸಿಕೊಟ್ಟಿದ್ದವು. ಈ ಜಾಡನ್ನೇ ಹುಡುಕಿ ಹೊರಟವಳಿಗೆ ಇದೇ ಮೊದಲ ಬಾರಿಗೆ ಛಿದ್ರವಾದ ತನ್ನ ವಿಮಾನದ ಅವಶೇಷವೊಂದು ಕಾಣಸಿಕ್ಕಿತ್ತು. ಜೊತೆಗೇ ಸುಟ್ಟು ಕರಕಲಾದ ಮೂವರು ಪ್ರಯಾಣಿಕರ ಶವಗಳೂ ಕೂಡ. ಮೂರು ಆಸನಗಳನ್ನು ಹೊಂದಿದ್ದ ವಿಮಾನದ ಸೀಟುಗಳ ಒಂದು ಸಾಲೇ ಕಿತ್ತುಬಂದು ಆ ನೆಲದಲ್ಲಿ ಬರೋಬ್ಬರಿ ಮೂರು ಅಡಿ ಆಳದಷ್ಟು ಹೂತುಹೋಗಿತ್ತು. ಈ ಸಾಲಿಗೆ ಅಂಟಿಕೊಂಡಿದ್ದ ಶವಗಳು ಸುಟ್ಟು ಕರಕಲಾಗಿದ್ದವು. ಕಾಲಬೆರಳುಗಳು ಮೇಲ್ಮುಖವಾಗಿದ್ದ ಪರಿಣಾಮವಾಗಿ ಅವುಗಳು ಸುಟ್ಟ ಶವಗಳ ಕಾಲುಗಳಾಗಿರಬಹುದು ಎಂದು ಲೆಕ್ಕ ಹಾಕಿದ್ದಳು ಜೂಲಿಯಾನ್. ಕೆಟ್ಟ ವಾಸನೆಯೇನೂ ಇರದಿದ್ದರೂ ಆ ಸುಟ್ಟ ಅವಶೇಷಗಳನ್ನು ಸ್ಪಶರ್ಿಸಲು ಧೈರ್ಯಬಾರದ ಪರಿಣಾಮವಾಗಿ ಕೋಲೊಂದರಿಂದ ಮೆಲ್ಲನೆ ಕುಟ್ಟಿ ನೋಡಿದ್ದಳು ಆಕೆ. ಆ ದೃಶ್ಯವನ್ನು ನೋಡಿ ಅವಳಿಗಾದ ಆಘಾತ ಅಷ್ಟಿಷ್ಟಲ್ಲ. ಆದ ಆಘಾತವನ್ನು ಅರಗಿಸಿಕೊಳ್ಳುತ್ತಾ ಮುಂದೆ ನಡೆದರೂ ಕೂಡ ಆ ದೃಶ್ಯಗಳು ಕಣ್ಣಮುಂದೆ ಬಂದಾಗಲೆಲ್ಲಾ ದುಃಖವು ಉಮ್ಮಳಿಸಿ ಬರುವಂತಾಗುತ್ತಿತ್ತು ಜೂಲಿಯಾನಳಿಗೆ.
ತನ್ನ ಅಜ್ಜಿಯು ಉಡುಗೊರೆಯಾಗಿ ಕೊಟ್ಟಿದ್ದ ಸುಂದರವಾದ ಕೈಗಡಿಯಾರವು ಈ ಭಯಾನಕ ಅಪಘಾತದಿಂದ ಮುರಿದುಹೋಗಿತ್ತೇನೋ ಹೌದು. ಆದರೆ ಒಂದೆರಡು ದಿನಗಳ ನಂತರವಂತೂ ಅದು ಸಂಪೂರ್ಣವಾಗಿ ನಿಂತುಹೋಗುವುದರೊಂದಿಗೇ ಸಮಯ ಮತ್ತು ದಿನಗಳ ಲೆಕ್ಕಾಚಾರಗಳು ಜೂಲಿಯಾನಳಿಗೆ ತಪ್ಪಿಹೋಗಿದ್ದವು. ಇನ್ನು ಹೊಟ್ಟೆ ತುಂಬಾ ನದಿಯ ನೀರನ್ನೇ ಕುಡಿಯುತ್ತಿದ್ದಳೇ ಹೊರತು ನೆಟ್ಟಗಿನ ಆಹಾರವನ್ನು ಸೇವಿಸುವ ನಸೀಬು ಅವಳಿಗಿರಲಿಲ್ಲ. ಸಹಜವಾಗಿಯೇ ಇದರಿಂದಾಗಿ ಆಯಾಸವು ಹೆಚ್ಚಾಗಿ ಜೂಲಿಯಾನಳ ಮುಗಿಯದ ಶೋಧವು ಮತ್ತಷ್ಟು ನಿಧಾನಗೊಂಡಿತ್ತು. ಕಣ್ಣುಗಳು ಮಂಜಾಗಿ ತಲೆಸುತ್ತುಗಳು, ಭ್ರಮೆಗಳು ಮೂಡುವುದು ಸಾಮಾನ್ಯವಾಯಿತು.
(ಮುಂದುವರೆಯುವುದು)
*********