ಹನ್ನೊಂದು ದಿನಗಳ ವನವಾಸ (ಕೊನೆಯ ಭಾಗ): ಪ್ರಸಾದ್ ಕೆ.

prasad-naik

ಇಲ್ಲಿಯವರೆಗೆ

ಇವೆಲ್ಲವೂ ಕಮ್ಮಿಯೆಂಬಂತೆ ಜೂಲಿಯಾನಳ ಹೆಜ್ಜೆಹೆಜ್ಜೆಗೂ ಅಪಾಯಗಳಿದ್ದವು. ನದಿಯ ಬದಿಯಲ್ಲಿ ನಡೆಯುತ್ತಿದ್ದರೆ ಅಪಾಯಕಾರಿ ಸ್ಟಿಂಗ್ ರೇಗಳಿಂದ ಮತ್ತು ನೋಡಲು ಮೊಸಳೆಗಳಂತಿರುವ ಕಾಯ್ಮನ್ ಗಳಿಂದ ರಕ್ಷಿಸಿಕೊಂಡು ನಡೆಯಬೇಕಾಗಿತ್ತು. ಇನ್ನು ಕಾಲ್ನಡಿಗೆಯು ನಿಧಾನವಾಗುತ್ತಿದೆ ಎಂದು ಅರಿವಾದಾಗಲೆಲ್ಲಾ ಆಗಾಗ ಈಜುತ್ತಲೂ ಇದ್ದುದರಿಂದ ಜೂಲಿಯಾನಳ ಬೆನ್ನಿನ ಚರ್ಮವು ಸೂರ್ಯನ ಬಿಸಿಲಿಗೆ ಸುಟ್ಟಂತಾಗಿ ಬಿಳಿಚಿಕೊಂಡಿತ್ತು. ಕೆಂಡ ಸುರಿದಂತೆ ನೋವಿನಿಂದ ಉರಿಯುತ್ತಿದ್ದ ತನ್ನ ಬೆನ್ನನ್ನು ಮೆಲ್ಲನೆ ಮುಟ್ಟಿ ನೋಡಿದಾಗ ಅವಳ ಬೆರಳುಗಳಿಗೆ ಸೋಕಿದ್ದು ರಕ್ತ. ಇನ್ನು ಮರದ ದಿಮ್ಮಿಗಳೂ ಕೂಡ ನದಿಯಲ್ಲಿ ತೇಲುತ್ತಿದ್ದರಿಂದ ಅವುಗಳಿಗೆ ಢಿಕ್ಕಿಯಾಗದಂತೆ ನಾಜೂಕಾಗಿ ಈಜುವುದೂ ಒಂದು ದೊಡ್ಡ ಸವಾಲಾಗಿತ್ತು. ಇನ್ನು ಆ ಭಾರದ ದಿಮ್ಮಿಗಳನ್ನು ಆಧಾರವಾಗಿ ಹಿಡಿದುಕೊಂಡು ಅವುಗಳನ್ನು ಹತ್ತಿ ಇಳಿಯುವುದೂ ಕೂಡ ಅವಳಿಗೆ ಪ್ರಯಾಸದ ಕೆಲಸವಾಗಿ ಪರಿಣಮಿಸಿತ್ತು. 

ದಿನರಾತ್ರಿಗಳು ಅದರ ಪಾಡಿಗೇ ಉರುಳಿಹೋಗುತ್ತಿದ್ದವು. ದಿನ ಮತ್ತು ಸಮಯದ ಲೆಕ್ಕಾಚಾರಗಳು ಜೂಲಿಯಾನಳ ಕೈಬಿಟ್ಟಿದ್ದವು. ಚದುರಿಹೋಗಿದ್ದ ಆತ್ಮವಿಶ್ವಾಸವನ್ನು ಮತ್ತೆ ಮತ್ತೆ ಒಗ್ಗೂಡಿಸಿ ಆಕೆ ಮುನ್ನಡೆಯುತ್ತಿದ್ದರೂ ಆಯಾಸ, ನೋವು, ಹಸಿವು, ಬಾಯಾರಿಕೆಗಳು ಅವಳನ್ನು ಹಿಂಡಿ ಹಿಪ್ಪೆಮಾಡಿದ್ದವು. ಆಹಾರ ಮತ್ತು ನಿದ್ರೆಗಳಲ್ಲಿ ತೀವ್ರ ಪ್ರಮಾಣದ ವ್ಯತ್ಯಯಗಳಾದ ಪರಿಣಾಮವಾಗಿ ಕಣ್ಣುಗಳು ಮಂಜಾಗುತ್ತಿದ್ದವು. ಮರುಭೂಮಿಯಲ್ಲಿ ನಡೆಯುತ್ತಿರುವವನಿಗೆ ದೂರದಲ್ಲಿ ನೀರಿನ ಸೆಲೆಯು ಕಾಣುವಂತೆ ದೃಷ್ಟಿಸಂಬಂಧಿ ಭ್ರಮೆಗಳು ಅವಳನ್ನು ಕಂಗೆಡಿಸಿದ್ದವು. ದುಃಸ್ವಪ್ನಗಳು, ಕಲ್ಪನೆಯಲ್ಲೇ ಮೂಡುತ್ತಿದ್ದಂತಿದ್ದ ವಿಚಿತ್ರವಾದ ಶಬ್ದಗಳು ಮಾನಸಿಕ ಸಮತೋಲನವನ್ನೇ ಕಳೆದುಕೊಳ್ಳುವ ಭಯವನ್ನು ಅವಳಲ್ಲಿ ತರುತ್ತಿದ್ದವು. ಹತ್ತು ದಿನಗಳ ಸುದೀರ್ಘ ಪ್ರಯಾಣದ ನಂತರ ಪುಟ್ಟ ದೋಣಿಯೊಂದು ಕಣ್ಣಿಗೆ ಬಿದ್ದಾಗ ಜೂಲಿಯಾನಳಿಗೆ ತನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲವಂತೆ. ಬಳಿಗೆ ಹೋಗಿ ಅದನ್ನು ಎರಡರಿಂದ ಮೂರು ಬಾರಿ ಮುಟ್ಟಿ ನೋಡಿದ ನಂತರವೇ ಇದು ಭ್ರಮೆಯಲ್ಲ ಎಂದು ಅವಳಿಗೆ ಖಾತ್ರಿಯಾಗಿದ್ದು.  

ಭಗವಂತನೇ ತನಗಾಗಿ ಕಳಿಸಿಕೊಟ್ಟ ವರದಂತೆ ಪುಟ್ಟ ದೋಣಿಯೊಂದು ಕಂಡಿತ್ತೇ ಹೊರತು ಅಂಬಿಗನಾಗಲೀ ಅಥವಾ ಸುತ್ತಮುತ್ತ ಮತ್ಯಾವ ನಿವಾಸಿಯಾಗಲೀ ಅವಳಿಗೆ ಕಾಣಲಿಲ್ಲ. ಆದರೆ ನದಿಯ ತಟದಿಂದ ಕೊಂಚ ದೂರದಲ್ಲಿದ್ದ ಪುಟ್ಟ ಗುಡಿಸಲಿನಂತಿದ್ದ ಒಂದು ಜಾಗವು ಆ ದೋಣಿಯ ಒಡೆಯನದ್ದೇ ಇರಬಹುದು ಎಂಬ ಭರವಸೆಯನ್ನಂತೂ ಜೂಲಿಯಾನಳಲ್ಲಿ ಮೂಡಿಸಿತ್ತು. ಆದರೆ ಆ ದೋಣಿಯು ಇದ್ದ ಜಾಗದಿಂದ ಗುಡಿಸಲಿನವರೆಗೆ ನಡೆದುಕೊಂಡು ಹೋಗುವಷ್ಟು ತ್ರಾಣವೂ ಅವಳಲ್ಲಿ ಉಳಿದಿರಲಿಲ್ಲ. ಕೊನೆಗೂ ತೆವಳಿಕೊಂಡು ಆ ಗುಡಿಸಲನ್ನು ತಲುಪುವಷ್ಟರಲ್ಲಿ ಒಂದೆರಡು ತಾಸುಗಳೇ ಕಳೆದುಹೋಗಿದ್ದವು. ದೋಣಿಯನ್ನು ಮೆಲ್ಲನೆ ಕೊಂಡೊಯ್ಯಲೇ ಎಂದು ಯೋಚನೆಯು ಮನದಲ್ಲಿ ಮೂಡಿದ್ದು ಸತ್ಯವಾದರೂ ಜೂಲಿಯಾನಳಿಗೆ ಅಂತಃಸಾಕ್ಷಿಯು ಅಡ್ಡಬಂದಿತ್ತು. ರಕ್ಷಣೆಯ ಅವಶ್ಯಕತೆಯು ತುತರ್ಾಗಿ ಅವಳಿಗೆ ಬೇಕಿದ್ದೇನೋ ಸತ್ಯವೇ. ಆದರೆ ಕಳ್ಳತನವನ್ನು ಮಾಡಲು ಅವಳ ಮನಸ್ಸು ಒಪ್ಪಿರಲಿಲ್ಲ. ಆದದ್ದಾಗಲಿ ಕಾದು ನೋಡೋಣವಂತೆ ಎಂದು ನಿರ್ಧರಿಸಿದ ಜೂಲಿಯಾನ್ ಆ ಗುಡಿಸಲ ಬಳಿಯೇ ಕುಳಿತು ಯಾರಾದರೂ ಬರುವರೋ ಎಂದು ಕಾಯತೊಡಗಿದ್ದಳು.   

ಅಷ್ಟರಲ್ಲಿ ಜೂಲಿಯಾನಳ ಕಣ್ಣುಕುಕ್ಕಿದ್ದು ಗುಡಿಸಲಿನ ಹೊರಭಾಗದಲ್ಲಿ ಇಟ್ಟಿದ್ದ ಗ್ಯಾಸೋಲಿನ್ ತುಂಬಿದ ಒಂದು ಬ್ಯಾರಲ್ ಮತ್ತು ಎಲೆಕ್ಟ್ರಿಕ್ ಮೋಟಾರ್. ಅಷ್ಟಕ್ಕೂ ಆಗಿದ್ದೇನೆಂದರೆ ಅವಳ ದೇಹದಲ್ಲಾಗಿದ್ದ ತರಚಿದ ಗಾಯಗಳು ಉಲ್ಬಣಗೊಂಡು ಸೋಂಕಿಗೊಳಗಾಗುವ ಸ್ಥಿತಿಗೆ ಬಂದಿದ್ದವು. ಅದರಲ್ಲೂ ಜೂಲಿಯಾನಳ ಬಲ ತೋಳಿನಲ್ಲಿ ಆಗಿದ್ದ ಆಳವಾದ ಗಾಯವಂತೂ ಮತ್ತಷ್ಟು ದೊಡ್ಡದಾಗಿ ಚಿಕ್ಕ ಹುಳುಗಳು ತಮ್ಮ ತಲೆಯಾಡಿಸತೊಡಗಿದ್ದವು. ಶವಗಳು ಕೊಳೆಯುತ್ತಿರುವ ಹಂತದಲ್ಲಿ ಇಂಥಾ ಹುಳಗಳು ಉತ್ಪತ್ತಿಯಾಗುವುದುಂಟು. ಸಾಮಾನ್ಯವಾಗಿ ನೊಣಗಳು ಈ ಜಾಗಗಳಲ್ಲಿ ಮೊಟ್ಟೆಗಳನ್ನಿಟ್ಟು, ಈ ಮೊಟ್ಟೆಗಳು ಲಾವರ್ಾಗಳಾಗಿ, ಲಾವರ್ಾಗಳು ಹುಳುಗಳಾಗುತ್ತವೆ. ಇನ್ನು ಗಾಯಗಳಲ್ಲಿ ಉತ್ಪತ್ತಿಯಾದ ಈ ಹುಳುಗಳು ಮತ್ತಷ್ಟು ಲಾವರ್ಾಗಳನ್ನು ಹುಟ್ಟಿಸಿ ತಮ್ಮ ಸಂಖ್ಯೆಯನ್ನು ಹೆಚ್ಚಿಸುತ್ತಾ ಹೋಗುತ್ತವೆ. ಆ ಗಾಯವು ಅದೆಷ್ಟು ಆಳವಾಗಿತ್ತೆಂದರೆ ಕೈಬೆರಳನ್ನು ಹಾಕಿದರೂ, ಚಿಕ್ಕದಾದ ಕಡ್ಡಿಯೊಂದನ್ನು ಇಳಿಸಿ ಯತ್ನಿಸಿದರೂ, ಅದೇನು ತಿಪ್ಪರಲಾಗ ಹಾಕಿದರೂ ಹುಳುಗಳನ್ನು ಒಂದೂ ಬಿಡದಂತೆ ತೆಗೆಯುವುದಂತೂ ಆಗಿರಲಿಲ್ಲ. ಇದರಿಂದಾಗಿ ತನ್ನ ಬಲಗೈಯನ್ನು ಕತ್ತರಿಸಬೇಕಾಗುವುದೋ ಏನೋ ಎಂಬ ಹೊಸಭಯವೊಂದು ಈಗ ಜೂಲಿಯಾನಳನನ್ನು ಕಂಗೆಡಿಸತೊಡಗಿತ್ತು.  

ಹುಳುಗಳಿಂದ ತುಂಬಿದ್ದ ತನ್ನ ಬಲತೋಳನ್ನು ನೋಡುವುದೇ ಒಂದು ಹಿಂಸೆಯಾದರೆ ಗಾಯದ ರಾಕ್ಷಸ ನೋವಿನ ಬಾಧೆ ಇನ್ನೊಂದು ಕಡೆ. ಹಿಂದೊಮ್ಮೆ ತಮ್ಮ ಮನೆಯಲ್ಲಿದ್ದ ನಾಯಿಯೊಂದರ ಮೈಯಲ್ಲಿ ಇಂಥಾ ಹುಳುಗಳು ತುಂಬಿಕೊಂಡ ಸಮಯದಲ್ಲಿ ಗಾಯವಾದ ಜಾಗಕ್ಕೆ ಸೀಮೆಎಣ್ಣೆಯನ್ನು ಸುರಿದು ಅಪ್ಪ ಸ್ವಚ್ಛಗೊಳಿಸಿದ್ದನ್ನು ಜೂಲಿಯಾನ್ ಕಂಡಿದ್ದಳು. ಬ್ಯಾರೆಲ್ ನಲ್ಲಿ ತುಂಬಿದ್ದ ಡೀಸೆಲ್ ಅನ್ನು ನೋಡುತ್ತಲೇ ಆ ಸಂದರ್ಭವು ಅವಳಿಗೆ ನೆನಪಾಗಿತ್ತು. ಅವಸರದಲ್ಲೇ ಕೊಂಚ ಡೀಸೆಲ್ ಅನ್ನು ಹುಳುಗಳಿಂದ ತುಂಬಿದ್ದ ತನ್ನ ತೋಳಿನ ಗಾಯಕ್ಕೆ ಸುರಿಯುವ ಆಕೆ ಪ್ರಾಣಹೋಗುವಂತಿದ್ದ ಆ ಭಯಂಕರ ನೋವಿನ ಹೊರತಾಗಿಯೂ ಗಾಯವನ್ನು ಸ್ವಚ್ಛಗೊಳಿಸಲು ಮುಂದಾಗುತ್ತಾಳೆ. ಜೂಲಿಯಾನಳ ಈ ಸಮಯೋಚಿತ ನಡೆಯಿಂದಾಗಿ ಗಾಯದ ಆಳದಲ್ಲಿ ಅಡಗಿಕೊಂಡಿದ್ದ ಬಹಳಷ್ಟು ಹುಳುಗಳು ಮೇಲಕ್ಕೆ ಬಂದು ಅವುಗಳನ್ನು ಒಂದೊಂದಾಗಿ ತೆಗೆಯುವುದು ಸುಲಭವಾಯಿತು.   

ಹೀಗೆ ಒಂದೆಡೆ ಯಾರಾದರೂ ಸಹಾಯಕ್ಕೆಂದು ಬರುವರೆಂದು ಕಾಯುತ್ತಾ, ಇನ್ನೊಂದೆಡೆ ಸುಸ್ತಾಗಿ ನಿಧಾನವಾಗಿ ನೆಲಕ್ಕೊರಗುತ್ತಿರುವ ಜೀವವನ್ನು ಸಂಭಾಳಿಸುತ್ತಾ ಒದ್ದಾಡುತ್ತಿದ್ದ ಜೂಲಿಯಾನಳಿಗೆ ಹತ್ತನೇ ದಿನವೂ ನಿರಾಶೆಯೇ ಕಾದಿತ್ತು. ಕತ್ತಲಾದರೂ ಕೂಡ ಆ ಗುಡಿಸಲ ಬಳಿ ಯಾವೊಬ್ಬನೂ ಬರಲಿಲ್ಲ. ಸೂಯರ್ಾಸ್ತವಾದಂತೆ ಎಂದಿನಂತೆ ಇದ್ದಲ್ಲೇ ಸುರಕ್ಷಿತವಾದ ಜಾಗವೊಂದರಲ್ಲಿ ರಾತ್ರಿಯನ್ನು ಕಳೆಯಬೇಕಿತ್ತು. ಗುಡಿಸಲಿನ ಹತ್ತಿರವಿದ್ದ ನೆಲವು ಒರಟಾಗಿದ್ದ ಪರಿಣಾಮ ಮತ್ತೆ ನದೀ ತೀರಕ್ಕೆ ಬಂದು ಮರಳಿನ ಮೇಲೆಯೇ ತನ್ನ ದೇಹವನ್ನು ಚೆಲ್ಲುತ್ತಾಳೆ ಜೂಲಿಯಾನ್. ನೆರವಿಗೆ ಯಾರಾದರೂ ಬರುವರೆಂದು ಕಾದು ಸುಸ್ತಾಗಿದ್ದ ಅವಳಿಗೆ ನಿದ್ದೆ ಬರಲು ಹೆಚ್ಚಿನ ಸಮಯವೇನೂ ತಗುಲಲಿಲ್ಲ.

ಮರುದಿನ ಮುಂಜಾನೆ ಎಚ್ಚರವಾದರೆ ಮತ್ತದೇ ಧಾರಾಕಾರ ಮಳೆ. ಮರಳಿ ಆಸರೆಗಾಗಿ ಗುಡಿಸಲಿಗೆ ಬಂದು ಮೂಲೆಯಲ್ಲಿದ್ದ ಟಾಪರ್ಾಲೊಂದನ್ನು ಹೊದ್ದು ಅಲ್ಲೇ ನಿದ್ದೆಗೆ ಜಾರಿದಳು ಜೂಲಿಯನ್. ಅವಳಿಗೆ ಮತ್ತೆ ಎಚ್ಚರವಾದಾಗ ಸುತ್ತಲೂ ಕಪ್ಪೆಗಳದ್ದೇ ಸದ್ದು. ಜೂಲಿಯಾನ್ ಅದೆಷ್ಟರ ಮಟ್ಟಿಗೆ ಹಸಿದಿದ್ದಳು ಅಂದರೆ ಆ ದಿನ ಕಪ್ಪೆಯೊಂದನ್ನು ಹಿಡಿದು ತಿನ್ನಲೂ ಅವಳು ತಯಾರಾಗಿದ್ದಳು. ಆದರೆ ಒಂದು ಕಪ್ಪೆಯೂ ಅವಳ ಕೈಗೆ ಸಿಗಲಿಲ್ಲ. `ತಾನೊಂದು ಬಗೆದರೆ, ದೈವವೊಂದು ಬಗೆಯಿತು' ಅನ್ನುವುದು ಇದಕ್ಕೇನೇ ಇರಬಹುದು. ಅಸಲಿಗೆ ಅವುಗಳು ಡಾಟರ್್ ಕಪ್ಪೆಗಳೆಂದು ಕರೆಯಲಾಗುವ ವಿಷಕಾರಿ ಕಪ್ಪೆಗಳಾಗಿದ್ದವು. ಜೂಲಿಯಾನ್ ಅವುಗಳನ್ನು ಹಿಡಿದು ತಿಂದಿದ್ದೇ ಆದರೆ ಬದುಕುಳಿಯುವ ಪ್ರಶ್ನೆಯೇ ಇರುತ್ತಿರಲಿಲ್ಲ. 

ಮುಂಜಾನೆ ಶುರುಹಚ್ಚಿಕೊಂಡ ಧಾರಾಕಾರ ಮಳೆಯು ನಿಂತದ್ದು ಮಧ್ಯಾಹ್ನವೇ. ಆದರೆ ನಡೆಯುವ ಸ್ಥಿತಿಯಲ್ಲಾಗಲೀ, ತೆವಳುವ ಸ್ಥಿತಿಯಲ್ಲಾಗಲೀ ಜೂಲಿಯಾನ್ ಇರಲಿಲ್ಲ. ಹಸಿವು ಅವಳನ್ನು ಕಂಗೆಡಿಸಿತ್ತು. ಕಪ್ಪೆಗಳನ್ನು ಹಿಡಿದು ತಿನ್ನಲು ಪ್ರಯತ್ನಿಸಿದರೂ ಒಂದೇ ಒಂದು ಕಪ್ಪೆಯೂ ಅವಳ ಕೈಗೆ ದಕ್ಕಿರಲಿಲ್ಲ. ಇವತ್ತೊಂದು ದಿನ ಇಲ್ಲೇ ವಿಶ್ರಾಂತಿ ತೆಗೆದುಕೊಂಡು ನಾಳೆ ಹೊರಡುವೆ ಎಂದು ತನ್ನನ್ನೇ ಸಂತೈಸಿಕೊಂಡಿದ್ದಳು ಜೂಲಿಯಾನ್. ಜೊತೆಗೇ ಮನದಾಳದಲ್ಲಿ ಈ ಗುಡಿಸಲಿನ ಮಾಲೀಕನೋ, ಇನ್ಯಾರೋ ಬಂದು ತನ್ನನ್ನು ರಕ್ಷಿಸಬಹುದು ಎಂಬ ಕ್ಷೀಣವಾದ ಆಸೆಯೂ ಕೂಡ. 

ಹೀಗೆ ಹಸಿವು ಮತ್ತು ಆಯಾಸದಿಂದ ಕಂಗೆಟ್ಟು ಮತ್ತೆ ನಿದ್ದೆಗೆ ಜಾರಿದ ಜೂಲಿಯಾನ್ ಗೆ ನಂತರ ಎಚ್ಚರವಾದಾಗ ಕೆಲ ಪುರುಷರ ದನಿಗಳು ಕೇಳುತ್ತಿದ್ದವು. ಮಲಗಿದ್ದಲ್ಲಿಂದಲೇ ಮೆಲ್ಲನೆ ಕಣ್ಣುಗಳನ್ನುಜ್ಜಿ ನೋಡಿದರೆ ಮೂವರು ಗಂಡಸರು ತನ್ನನ್ನೇ ನೋಡುತ್ತಾ ಏನನ್ನೋ ಚಚರ್ಿಸುತ್ತಿರುವಂತೆ ಕಾಣುತ್ತಿದೆ. ತಾನೇನು ಕನಸು ಕಾಣುತ್ತಿದ್ದೇನೋ ಅಥವಾ ಈ ಮೂರು ಪುರುಷಾಕೃತಿಗಳು ನಿಜಕ್ಕೂ ತನ್ನೆದುರಿಗಿವೆಯೇ ಎಂಬುದು ತಿಳಿಯದೆ ಗೊಂದಲಕ್ಕೀಡಾಗಿದ್ದಳು ಜೂಲಿಯಾನ್. ಆದರೆ ಅದೃಷ್ಟವು ಈ ಬಾರಿ ಜೂಲಿಯಾನ್ ಳ ಕಡೆಗಿತ್ತು. ಕ್ಷೀಣವಾಗಿ ಕೇಳುತ್ತಿದ್ದ ಆ ದನಿಗಳು ತನ್ನತ್ತ ಬಂದು ತನ್ನನ್ನು ಮಾತನಾಡಿಸುತ್ತಿರುವಂತೆ ಜೂಲಿಯಾನಳಿಗೆ ಭಾಸವಾಯಿತು. “ವಿಮಾನ ಅವಘಡದಲ್ಲಿ ಸಿಕ್ಕಿಹಾಕಿಕೊಂಡ ಹುಡುಗಿ ನಾನು. ನನ್ನ ಹೆಸರು ಜೂಲಿಯಾನ್'', ಎಂದು ಕ್ಷೀಣವಾದ ದನಿಯಲ್ಲಿ ಸ್ಪ್ಯಾನಿಷ್ ಭಾಷೆಯಲ್ಲಿ ಉಸುರಿದಳು ಜೂಲಿಯಾನ್. 
ಹನ್ನೊಂದು ಯುಗಗಳಂತೆ ಭಾಸವಾಗಿದ್ದ ಹನ್ನೊಂದು ದಿನಗಳ ನಂತರ ಕೊನೆಗೂ ಸಹಾಯದ ಅಭಯಹಸ್ತವು ಜೂಲಿಯಾನಳ ಕೈಹಿಡಿದಿತ್ತು. 

ತರುಣಿಯೊಬ್ಬಳನ್ನು ಈ ಸ್ಥಿತಿಯಲ್ಲಿ ನೋಡಿದ ಆ ಆಗಂತುಕರಿಗೂ ಒಂದು ಕ್ಷಣ ದಿಗಿಲಾಗಿದ್ದಂತೂ ಹೌದು. (ಜೂಲಿಯಾನಳನ್ನು ಆ ಸ್ಥಿತಿಯಲ್ಲಿ ನೋಡಿದ ಆ ಆಗಂತುಕರು ಮೊದಲಿಗೆ ಅವಳನ್ನು “ಯೆಮೆಂಜಾ'' ಎಂಬ ಹೆಸರಿನಲ್ಲಿ ಕರೆಯಲಾಗುವ ನೀರಿನಲ್ಲಿರುವ ಭೂತ ಎಂದು ತಿಳಿದುಕೊಂಡು ಒಂದು ಕ್ಷಣ ಬೆಚ್ಚಿಬಿದ್ದರಂತೆ. ನಮ್ಮಲ್ಲಿರುವ ಜಲಕನ್ಯೆಯ ಕಲ್ಪನೆಯಂತೆ ನೀರಿನಲ್ಲಿ ವಾಸಿಸುತ್ತಾಳೆ ಎಂದು ಹೇಳಲಾಗುವ ಒಂದು ಹೆಣ್ಣುಭೂತವೇ ಈ ಯೆಮೆಂಜಾ). ಏಕೆಂದರೆ ಹನ್ನೊಂದಿನ ದಿನದಂದು ಜೂಲಿಯಾನ್ ನಿಜಕ್ಕೂ ಶೋಚನೀಯ ಸ್ಥಿತಿಯಲ್ಲಿದ್ದಳು. ಮೈಯೆಲ್ಲೆಲ್ಲಾ ಗಾಯಗಳು ಇದ್ದಿದ್ದಲ್ಲದೆ ಅವಳ ಕಣ್ಣುಗಳು ರಕ್ತಗೆಂಪುಬಣ್ಣಕ್ಕೆ ತಿರುಗಿದ್ದವು. ಆದರೆ ಆಕಾಶವಾಣಿಯಲ್ಲಿ ಪ್ರಸಾರವಾದ ಸುದ್ದಿಯಲ್ಲಿ ವಿಮಾನದ ಅವಘಡದ ಅಧಿಕೃತ ಸುದ್ದಿಯನ್ನು ಕೇಳಿ ತಿಳಿದಿದ್ದರಿಂದ ಈ ತರುಣಿಯು ಸತ್ಯವನ್ನೇ ಹೇಳುತ್ತಿದ್ದಾಳೆ ಎಂದು ಅವರು ಲೆಕ್ಕಹಾಕಿರಬಹುದು. ಕೂಡಲೇ ಸ್ಥಳದಲ್ಲೇ ಆ ಆಗಂತುಕರು ಅವಳಿಗೆ ಆಹಾರವನ್ನೂ, ಪ್ರಥಮ ಚಿಕಿತ್ಸೆಯನ್ನೂ ಕೊಡುತ್ತಾರೆ.

ಆ ರಾತ್ರಿ ಆ ಗುಡಿಸಲಿನಲ್ಲೇ ವಿಶ್ರಾಂತಿಯನ್ನು ಪಡೆದ ನಂತರ ಮರುದಿನ ಜೂಲಿಯಾನಳನ್ನು ಪುಟ್ಟ ದೋಣಿಯಲ್ಲಿ ಕರೆದುಕೊಂಡು ಹೋಗುವ ಆ ಸಹೃದಯರು ಏಳು ಘಂಟೆಗಳ ಪ್ರಯಾಣದ ನಂತರ ಹಳ್ಳಿಯೊಂದನ್ನು ತಲುಪಿ ಶುಶ್ರೂಷೆಗೆಂದು ಅವಳನ್ನು ಸುರಕ್ಷಿತವಾಗಿ ಆಸ್ಪತ್ರೆಯೊಂದಕ್ಕೆ ಸೇರಿಸುತ್ತಾರೆ. ಪ್ರಾಥಮಿಕ ಚಿಕಿತ್ಸೆಗಳು ಮುಗಿದ ನಂತರ ಮಿಷನರಿಗಳ ತಂಡದಲ್ಲಿದ್ದ ಮಹಿಳಾ ಪೈಲಟ್ ಒಬ್ಬಳು ಜೂಲಿಯಾನಳನ್ನು ತನ್ನ ಪುಟ್ಟ ವಿಮಾನದಲ್ಲಿ ಪುಕಾಲ್ಪಾದವರೆಗೆ ತಲುಪಿಸುತ್ತಾಳೆ. ಹದಿನೈದು ನಿಮಿಷಗಳ ಪುಟ್ಟ ವೈಮಾನಿಕ ಪ್ರಯಾಣದ ನಂತರ ಆ ಮಹಿಳಾ ಪೈಲಟ್ ಜೂಲಿಯಾನಳನ್ನು ಕರೆದುಕೊಂಡು ಬಂದಿದ್ದು ಒಂದು ಮಿಷನರಿಗಳ ಮನೆಗೆ. ಜೂಲಿಯಾನ್ ಸಂಪೂರ್ಣವಾಗಿ ಚೇತರಿಸುವವರೆಗೂ ಅವಳನ್ನು ಜತನದಿಂದ ಕಾಪಾಡುತ್ತಾರೆ ಈ ಗುಂಪಿನಲ್ಲಿದ್ದ ಮಿಷನರಿಗಳು.   

ಆ ಸಂಕಷ್ಟದ ಅವಧಿಯಲ್ಲಿ ಎಲ್ಲಾ ಆರೈಕೆಗಳನ್ನು ಮಾಡಿದ್ದಷ್ಟೇ ಅಲ್ಲದೆ ಪುಕಾಲ್ಪಾದಲ್ಲಿದ್ದ ತಂದೆಯವರೆಗೆ ತಲುಪುವುದರಲ್ಲೂ ಈ ಮಿಷನರಿಗಳು ಜೂಲಿಯಾನಳಿಗೆ ನೀಡಿದ ಸಹಕಾರವು ಶ್ಲಾಘನೀಯ. ಅಂತೂ ಆ ಅಮೃತಘಳಿಗೆಯು ಒದಗಿಬಂದಾಗ ಬದುಕುವ ನಿರೀಕ್ಷೆಯನ್ನೇ ಕಳೆದುಕೊಂಡಿದ್ದ ಜೂಲಿಯಾನಳ ಕಣ್ಣಲ್ಲೂ, ಮಗಳನ್ನು ಶಾಶ್ವತವಾಗಿ ಕಳೆದುಕೊಂಡೇ ಬಿಟ್ಟೆ ಎಂಬ ದುಃಖದಲ್ಲಿದ್ದ ತಂದೆ ಹಾನ್ಸ್ ರ ಕಂಗಳಲ್ಲೂ ಆನಂದಬಾಷ್ಪ. ಆದರೆ ಆ ಘಳಿಗೆಯು ಸಂಪೂರ್ಣವಾಗಿ ಸಂತಸದ್ದೂ ಆಗಿರಲಿಲ್ಲ. ಅಮ್ಮ ಮರಿಯಾ ಏನಾದಳು ಎಂಬ ಬಗ್ಗೆ ಯಾವ ಮಾಹಿತಿಯೂ ಜೂಲಿಯಾನಳಿಗೆ ಇರಲಿಲ್ಲ. ಆದರೆ ಆದ ಅವಘಡದಲ್ಲಿ ತನ್ನನ್ನು ಬಿಟ್ಟು ಇನ್ಯಾರೂ ಕೂಡ ಜೀವಂತವಾಗಿ ಉಳಿದಿಲ್ಲ ಎಂಬ ಸತ್ಯವು ನಂತರ ಜೂಲಿಯಾನಳಿಗೆ ತಿಳಿದುಬಂತು.  

ಜೂಲಿಯಾನಳ ಮಾತುಗಳಲ್ಲೇ ಹೇಳುವುದಾದರೆ ಪೋಲೀಸ್ ಇಲಾಖೆ ಮತ್ತು ವೈಮಾನಿಕ ದಳದ ಅಧಿಕಾರಿಗಳು ನನ್ನನ್ನು ಸಂದಶರ್ಿಸುವುದರಲ್ಲೇ ವ್ಯಸ್ತರಾಗಿದ್ದರು. ವಿಮಾನ ಅವಘಡದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ನಾನು ಎಂಬ ಸುದ್ದಿಯು ಹರಡುತ್ತಿದ್ದಂತೆಯೇ ಮಾಧ್ಯಮಗಳು ನೆಟ್ಟಗಾಗಿದ್ದವು. ಮುಂಬರುವ ಬ್ರೇಕಿಂಗ್ ನ್ಯೂಸ್ ನ ಮೌಲ್ಯವನ್ನು ಮೊದಲೇ ಲೆಕ್ಕಹಾಕಿದ್ದ ಅಪ್ಪ ಜರ್ಮನ್ ಪತ್ರಿಕೆ “ಸ್ಟೆನರ್್'' ಜೊತೆಗೆ ನನ್ನ ವಿಶೇಷ ಸಂದರ್ಶನವನ್ನು ನಿಗದಿಪಡಿಸಿದ್ದ. ವಿಶ್ವದ ಮೂಲೆಮೂಲೆಗಳಿಂದಲೂ ಮಾಧ್ಯಮಗಳು ನನ್ನದೊಂದು ಚಿತ್ರಕ್ಕಾಗಿ, ನನ್ನ ಹೇಳಿಕೆಗಳಿಗಾಗಿ ಬೆನ್ನುಬಿದ್ದಿದ್ದವು. ನನ್ನನ್ನುದ್ದೇಶಿಸಿ ಬರೆದ ಪತ್ರಗಳು ರಾಶಿಯಾಗಿ ಬರಲಾರಂಭಿಸಿದ್ದವು. ರಾತ್ರೋರಾತ್ರಿ ಜೂಲಿಯಾನ್ ಕೆಪ್ಕೆ ಎಂಬ ಹದಿನೇಳರ ತರುಣಿಯ ಮುಖವೊಂದು ವಿಶ್ವದೆಲ್ಲೆಡೆ ಚಿರಪರಿಚಿತವಾಗಿ ಹೋಗಿತ್ತು.   

ಮುಂದೆ ಜೂಲಿಯಾನಳ ನೆರವಿನಿಂದ ತಜ್ಞರ ತಂಡವೊಂದು ಆ ಜಾಗವನ್ನು ತಲುಪಿ ವಿಮಾನದ ಅವಶೇಷಗಳನ್ನು ಪತ್ತೆಹಚ್ಚಿತು. ದುರ್ಗಮವಾದ ಕಾಡು, ದಟ್ಟವಾಗಿ ಬೆಳೆದಿದ್ದ ಹುಲ್ಲುಗಳು, ಇಲ್ಲದ ದಾರಿಗಳು ಇತ್ಯಾದಿಗಳಿಂದ ಅಧಿಕಾರಿಗಳು ಮತ್ತು ತಜ್ಞರು ಪಟ್ಟ ಕಷ್ಟಗಳು ಅಷ್ಟಿಷ್ಟಲ್ಲ. ಹೆಲಿಕಾಪ್ಟರ್ ನ ಲ್ಯಾಂಡಿಂಗ್ ಗೆಂದೇ ಚಿಕ್ಕದೊಂದು ಸ್ಥಳವನ್ನು ಸಿದ್ಧಪಡಿಸಿದ್ದಲ್ಲದೆ, ಚದುರಿಹೋಗಿದ್ದ ವಿಮಾನದ ಅವಶೇಷಗಳು ಬಿದ್ದ ಜಾಗದಲ್ಲೇ ಇದ್ದರೂ ಅವುಗಳನ್ನು ತಲುಪುವುದಕ್ಕಾಗಿಯೇ ತಾತ್ಕಾಲಿಕವಾದ ದಾರಿಗಳನ್ನು ಮಾಡಿಕೊಳ್ಳಬೇಕಾಯಿತು. ಜನವರಿ 12 ನೇ ತಾರೀಕಿನಂದು ಜೂಲಿಯಾನಳ ತಾಯಿ ಮರಿಯಾಳ ಮೃತದೇಹವನ್ನು ಪತ್ತೆಹಚ್ಚಲಾಯಿತು. ವಿಚಿತ್ರವೆಂದರೆ ಸುಮಾರು ಹತ್ತುಸಾವಿರ ಅಡಿಗಳ ಎತ್ತರದಿಂದ ಬಿದ್ದಿದ್ದರೂ ಬಿದ್ದ ರಭಸಕ್ಕೆ ಮರಿಯಾಳ ಪ್ರಾಣ ಹೋಗಿರಲಿಲ್ಲ. ಆದರೆ ಮಗಳ ಪಾಲಿಗಿದ್ದ ಅದೃಷ್ಟವು ತಾಯಿಗಿರಲಿಲ್ಲ. ಮರಿಯಾರಿಗಾಗಿದ್ದ ತೀವ್ರ ಗಾಯಗಳೇ ಅವರಿಗೆ ಮುಳುವಾಗಿತ್ತು. ಆಗಸದಿಂದ ಬಿದ್ದು ಕೆಲದಿನಗಳ ನಂತರವೇ ಅವರು ಕೊನೆಯುಸಿರೆಳೆದರು ಎಂದು ಹೇಳಲಾಗುತ್ತದೆ. 

ಅಷ್ಟಕ್ಕೂ ಆ ಕರಾಳ ದಿನದಂದು ಆಗಿದ್ದೇನೆಂದರೆ ಕಿವಿಗಡಚಿಕ್ಕುವಂತೆ ಎರಗಿದ್ದ ಆ ಬರಸಿಡಿಲು ವಿಮಾನದ ರೆಕ್ಕೆಗೆ ಅಳವಡಿಸಲಾಗಿದ್ದ ಮೋಟಾರಿನಂತಹ ಯಂತ್ರವೊಂದಕ್ಕೆ ಬಡಿದಿತ್ತು. ಟಬರ್ೈನು, ಪ್ರೊಪೆಲ್ಲರುಗಳನ್ನೊಳಗೊಂಡಿದ್ದ ದೊಡ್ಡ ಗಾತ್ರದ ಯಂತ್ರವದು. ಅಸಲಿಗೆ ಲಾನ್ಸ್ ಎಲೆಕ್ಟ್ರಾ ವಿಮಾನವು ಅಂಥಾ ಹವಾಮಾನ ವೈಪರೀತ್ಯಗಳ ಸಂದರ್ಭಗಳಿಗೆಂದು ವಿನ್ಯಾಸಗೊಳಿಸಲಾಗಿದ್ದ ವಿಮಾನವೇ ಆಗಿರಲಿಲ್ಲ. ಜೂಲಿಯಾನ್ ನಂತರ ಖುದ್ದಾಗಿ ದಾಖಲಿಸಿರುವಂತೆ ಆ ಯಂತ್ರವು ಸ್ಫೋಟಿಸಿರಲಿಲ್ಲ. ಆದರೆ ಸಿಡಿಲಿನ ಆ ರಭಸವು ವಿಮಾನದ ರೆಕ್ಕೆಯನ್ನು ತೀವ್ರವಾಗಿ ಜಖಂಗೊಳಿಸಿದ್ದಲ್ಲದೆ ಇಡೀ ವಿಮಾನವನ್ನು ಎಗ್ಗಿಲ್ಲದೆ ಹರಿದುಹಾಕಿದ್ದಂತೂ ಹೌದು. 

ಇವೆಲ್ಲದರ ಜೊತೆಗೇ ಜೂಲಿಯಾನ್ ಮೃತ್ಯುವಿನ ದವಡೆಯಿಂದ ಹೇಗೆ ಪಾರಾದಳು ಎಂಬುದೇ ಒಂದು ಬಿಡಿಸಲಾಗದ ಒಗಟಂತೆ ಉಳಿದುಹೋಗಿತ್ತು. ಆಗಸದಿಂದ ಅವಳು ಬೀಳುತ್ತಿದ್ದ ಅವಧಿಯಲ್ಲಿ ಜೂಲಿಯಾನಳ ಮೂರು ಆಸನಗಳಿದ್ದ ಸಾಲಿನ ಬೆಂಚ್ ಕೂಡ ಸಂಪೂರ್ಣವಾಗಿ ಕಿತ್ತು ಬಂದಿದ್ದರ ಪರಿಣಾಮವಾಗಿ ಅದು ಪ್ಯಾರಾಚೂಟ್ ನಂತೆ ವತರ್ಿಸಿ ಅವಳ ಬೀಳುವಿಕೆಯ ವೇಗವನ್ನು ಕೊಂಚ ತಗ್ಗಿಸಿರಬಹುದು ಎಂಬ ವಾದವಿದೆ. ಇನ್ನು ಆ ಸಂದರ್ಭದಲ್ಲಿ ಮೇಲ್ಮುಖವಾಗಿ ಸಾಗುತ್ತಿದ್ದ ಹವೆಯ ಒತ್ತಡವೂ ಕೂಡ ಬೀಳುವಿಕೆಯ ವೇಗವನ್ನು ತಗ್ಗಿಸಿರಬಹುದು ಎಂಬುದು ಮತ್ತೊಂದು ವಾದ. ಸೊಂಟಪಟ್ಟಿಯಿಂದಾಗಿ ಅವಳನ್ನು ಬಿಗಿಯಾಗಿ ಹಿಡಿದಿಟ್ಟುಕೊಂಡಿದ್ದ ದಪ್ಪನೆಯ ಆಸನವೂ ಕೂಡ ಬಿದ್ದ ರಭಸದಿಂದ ಆಗಬಹುದಾಗಿದ್ದ ದೊಡ್ಡ ಮಟ್ಟಿನ ಪೆಟ್ಟಿನಿಂದ ಜೂಲಿಯಾನಳನ್ನು ರಕ್ಷಿಸಿತ್ತು. ಜೂಲಿಯಾನ್ ಬಿದ್ದ ಜಾಗದಲ್ಲಿ ಜಮೆಯಾಗಿದ್ದ ಎಲೆಗಳ ಹೊದಿಕೆಯಂತಿದ್ದ ಜಾಗವೂ ಕೂಡ ಅವಳಿಗೆ ವರವಾಗಿ ಪರಿಣಮಿಸಿದ ಇನ್ನೊಂದು ಅಂಶ. 

ತನ್ನ ತಾಯಿಯ ಮರಣವು ಜೂಲಿಯಾನಳನ್ನು ಇನ್ನಿಲ್ಲದಂತೆ ಕಾಡಿದ್ದಂತೂ ಹೌದು. ಮರಿಯಾ ತನ್ನ ಮಗಳಿನೊಂದಿಗೆ ಉತ್ತಮ ಗೆಳತಿಯಂತೆ ಸಂಬಂಧವನ್ನು ಕಾಯ್ದುಕೊಂಡಿದ್ದರು. ಒಟ್ಟಾರೆಯಾಗಿ ಈ ಕಾಡಿನ ಅನುಭವವೂ ಹಲವು ವರ್ಷಗಳ ಕಾಲ ಅವರನ್ನು ಕಾಡಿತ್ತು. “ಈ ಆಘಾತವು ಹಲವು ದಿನಗಳಲ್ಲ, ಹಲವು ವರ್ಷಗಳ ಕಾಲ ಭಯಾನಕ ದುಃಸ್ವಪ್ನದಂತೆ ನನ್ನನ್ನು ಕಾಡಿದೆ. ಅಮ್ಮನ ಮರಣದಷ್ಟೇ ತೀವ್ರವಾಗಿ ಇತರ ಸಹಪ್ರಯಾಣಿಕರ ಸಾವೂ ನನ್ನನ್ನು ಕಂಗೆಡಿಸಿದೆ. `ನಾನೊಬ್ಬಳೇ ಯಾಕೆ ಬದುಕಿರಬೇಕಿತ್ತು?' ಎಂಬ ಉತ್ತರವೇ ಇಲ್ಲದ ಪ್ರಶ್ನೆಯನ್ನು ಅದೆಷ್ಟು ಬಾರಿ ನನಗೆ ನಾನೇ ಕೇಳಿದ್ದುಂಟು. ಬಹುಷಃ ಈ ಪ್ರಶ್ನೆಯು ನನ್ನನ್ನು ನ್ನ ಜೀವಿತಾವಧಿಯ ಕೊನೆಯವರೆಗೂ ಕಾಡಲಿದೆ'', ಎಂದಿದ್ದರು ಜೂಲಿಯಾನ್ ಕೆಪ್ಕೆ.  

ಕೆಪ್ಕೆ ಕುಟುಂಬದ ಒಂದು ಭಾಗವಾಗಿದ್ದ ಜೀವವಿಜ್ಞಾನದ ಪ್ರೀತಿಯು ಜೂಲಿಯಾನಳಲ್ಲೂ ಬಾಲ್ಯದಿಂದಲೇ ಹರಿದು ಬಂದಿತ್ತು. ಮುಂದೆ ಜೂಲಿಯಾನ್ ಡಿಲ್ಲರ್ ಆದ ಜೂಲಿಯಾನ್ ಕೆಪ್ಕೆ ಪ್ರಾಣಿಶಾಸ್ತ್ರ ವಿಭಾಗದಲ್ಲೇ ತನ್ನ ಅಧ್ಯಯನವನ್ನು ಮುಂದುವರಿಸಿ, ಜರ್ಮನಿಯ ಪ್ರತಿಷ್ಠಿತ ಲುಡ್ವಿನ್-ಮ್ಯಾಕ್ಸಿಮಿಲಿಯನ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನೂ ಪಡೆದರು. ತದನಂತರ ಪೆರುವಿಗೆ ಮರಳಿ ಬಂದ ಜೂಲಿಯಾನ್ ಸಸ್ತನಿಗಳ ವಿಭಾಗದಲ್ಲಿ ಅದರಲ್ಲೂ ನಿದರ್ಿಷ್ಟವಾಗಿ ಬಾವಲಿಗಳ ಅಧ್ಯಯನಕ್ಕಾಗಿ ತಮ್ಮ ಸಮಯವನ್ನು ಮೀಸಲಿಟ್ಟರು. ಪ್ರಸ್ತುತ ಮ್ಯೂನಿಚ್ ನ ಬವೇರಿಯನ್ ಸ್ಟೇಟ್ ಪ್ರಾಣಿಶಾಸ್ತ್ರ ಸಂಗ್ರಹದ ಗ್ರಂಥಾಲಯದಲ್ಲಿ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿರುವ ಜೂಲಿಯಾನ್ ಡಿಲ್ಲರ್ 2011 ರಲ್ಲಿ “ವೆನ್ ಐ ಫೆಲ್ ಫ್ರಮ್ ದ ಸ್ಕೈ'' ಎಂಬ ಹೆಸರಿನಲ್ಲಿ ತಮ್ಮ ಆತ್ಮಕಥನವನ್ನೂ ಬರೆದರು. ಮುಂದೆ ಈ ಕೃತಿಗೆ ಕೊರೀನ್ ಲಿಟರೇಚರ್ ಪರಸ್ಕಾರವೂ ಸಂದಿತು.        

ಲಾನ್ಸ್ ಎಲೆಕ್ಟ್ರಾ ವಿಮಾನವು ಧರೆಗುರುಳಿ ನಲವತ್ತೈದು ವರ್ಷಗಳೇ ಕಳೆದಿವೆ. ಜೂಲಿಯಾನ್ ಡಿಲ್ಲರ್ ಗೀಗ ಅರವತ್ತೆರಡರ ಹರೆಯ. ಜೀವಶಾಸ್ತ್ರದ ಜೊತೆಗಿನ ಅವರ ನಂಟು ಇಂದಿಗೂ ಮುಂದುವರಿದಿದೆ. ಹಲವು ಸಂಶೋಧನಾ ವಿದ್ಯಾಥರ್ಿಗಳಿಗೆ ಡಿಲ್ಲರ್ ಮಾರ್ಗದರ್ಶಕಿಯೂ ಹೌದು. ಈಗಂತೂ ಕಾಡು, ಪಕ್ಷಿ, ಪ್ರಾಣಿ, ಕೀಟಗಳು, ಸಂಶೋಧನೆ, ಭಾಷಣ, ಬರವಣಿಗೆ ಇತ್ಯಾದಿಗಳಲ್ಲೇ ಅವರು ತೃಪ್ತರು.   

*********

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x