ಹನುಮನ ವಿರಾಟ ರೂಪ ತೋರಿದ ಆ ಒಂದು ಹೂವು!: ಕೆ ಟಿ ಸೋಮಶೇಖರ ಹೊಳಲ್ಕೆರೆ

ಗದಾಯುದ್ದ ಎಂದರೆ ಭೀಮ! ಭೀಮಾ ಎಂದರೆ ಮಹಾಕಾಯ, ಬಲವಂತ! ಪರ್ವದಂತಹ ದೇಹದಾರಿ! ವಜ್ರಕಾಯ! ಇವನನ್ನು ವಾಯುವಿನ ಮಂತ್ರದಿಂದ ಕುಂತಿ ಮಗನಾಗಿ ಪಡೆಯುವಳು. ಬಾಲಕನಿದ್ದಾಗ ಪಾಂಡವರು ಕೌರವರ ನೂರು ಮಂದಿ ರಾಜಕುಮಾರರು ಸೇರಿ ಮರಕೋತಿ ಆಡುವಾಗ ಮರವನ್ನೇ ಅಲುಗಾಡಿಸಿ ಮರದಲ್ಲಿನ ಹಣ್ಣುಗಳನ್ನು ಉದುರಿಸಿದಂತೆ ಅವರನ್ನು ನೆಲಕುರುಳಿಸುತ್ತಿದ್ದ ಭೂಪ, ಅರಗಿನ ಮನೆಗೆ ಬೆಂಕಿಬಿದ್ದಾಗ ಎಲ್ಲರನ್ನೂ ಗುಪ್ತ ಸುರಂಗ ಮಾರ್ಗದಲ್ಲಿ ಒಬ್ಬನೇ ಹೊತ್ತೊಯ್ದ ಬಲಶಾಲಿ, ಬಂಡಿ ಭೋಜ್ಯ ಸವಿದು ಏಕಚಕ್ರ ನಗರಿಗೆ ಕಂಟಕನಾಗಿದ್ದ ಬಕಾಸುರನನ್ನು ಸಿಗಿದು ಬಾಗಿಲಿಗೆ ತೋರಣ ಕಟ್ಟಿ ಏಕಚಕ್ರ ನಗರಿಗೆ ಬಕಾಸುರನಿಂದ ಮುಕ್ತಿ ಕೊಡಿಸಿದ ಮಹೋದರ, ವೃಕೋದರ! ಭೂಮಿಯ ಆಳಕ್ಕೆ ಬೇರು ಬಿಟ್ಟು ಭದ್ರವಾಗಿ ನೆಲೆನಿಂತ ಮರಗಳನ್ನೇ ಕಿತ್ತು ಅದರಿಂದನೆ ಒಡೆದಾಡಿ ಹಿಡಿಂಬಾಸುರನನ್ನು ಕೊಂದು ಹಿಡಿಂಬೆಯ ವರಿಸಿದ್ದ ಮಹಾಶಕ್ತಿಶಾಲಿ, ಹಿಡಿಂಬೆ ಪತಿ! ದ್ರೌಪದಿಗೆ ಅವಮಾನವಾದಾಗ ಭೀಷಣ ಪ್ರತಿಜ್ಞೆ ಮಾಡಿ ಕುರುಕ್ಷೇತ್ತ ಯುದ್ದದಲ್ಲಿ ದುಶ್ಯಾಸನನ ಮೇಲೆ ಆಕ್ರಮಣ ಮಾಡಿ ಪ್ರತಿಜ್ಞೆ ನೆರವೇರಿಸಿದ ಪ್ರತಿಜ್ಞಾ ನೆರವೇರಕ, ದ್ರೌಪದಿಗೆ ಕಿರುಕುಳ ಕೊಡುತ್ತಿದ್ದ ಕೀಚಕನ ಕೊಂದರೂ ಕೊಂದದ್ದು ಯಾರೆಂದು ತಿಳಿಯದಂತಿದ್ದು ದ್ರೌಪದಿಯ ಮತ್ತೆ ಮತ್ತೆ ಕಷ್ಟಗಳಿಂದ ಪಾರು ಮಾಡಿದ ಆಪದ್ಬಾಂಧವ ಶಕ್ತಿಶಾಲಿ ಪತಿ! ಜರಾಸಂಧನಿಗೆ ಭ್ರಹ್ಮ ದೇವರಿತ್ತ ವರವಿದ್ದರು ಅವನನ್ನು ಪರಲೋಕಕೆ ಕಳುಹಿಸಿದ ಪರಾಕ್ರಮಿ, ಗದಾಯುದ್ದ ಪ್ರವೀಣನಾದ ದುರ್ಯೋಧನನ ತೊಡೆಗೆ ಒಡೆದು  ನೆಲಕುರುಳಿಸಿದ ಗದಾ ಯುದ್ದ ಚತುರ, ಇಷ್ಟೆಲ್ಲಾ ಪರಾಕ್ರಮ ಮೆರೆದು ವಿಕ್ರಮಗಳ ಸಾಧಿಸಿದ ಬಲಶಾಲಿ ಭೀಮ ಎಂಬ ವಾಯು ಪುತ್ರನಿಗೆ ಯಕಃಚಿತ್ ಒಂದು ಕಪಿಯ ಬಾಲ ಪಕ್ಕಕ್ಕೆ ಸರಿಸುವುದು ಕಷ್ಟವಾಯಿತೆ? ಹೌದು! ನಂಬುವುದು ಕಷ್ಟತಾನೆ? ಆದರೂ ಸತ್ಯ!
ಭೀಮ ವನವಾಸದ ಸಮಯದಲ್ಲಿ ದ್ರೌಪದಿಯೊಂದಿಗೆ ವಿಹರಿಸುತ್ತಿರುತ್ತಾನೆ. ವಿಹರಿಸುತ್ತಾ ನಾರಾಯಣಾಶ್ರಮವನ್ನು ಬದರೀ ವೃಕ್ಷವನ್ನು ಕಂಡು ಅದರ ಹತ್ತಿರ ಮಂಗಳಕರವಾದ ಭಾಗೀರಥಿಯು ತಿಳಿಯಾಗಿಯೂ ತಂಪಾಗಿಯೂ ಹರಿಯುತಿರುವುದನ್ನೂ ಕಾಣುತ್ತಾನೆ. ಅಲ್ಲಿ ಒಂದು ದಿವಸ ಈಶಾನ್ಯಮಾರುತ ಒಂದು ದಿವ್ಯವಾದ ಸೌಗಂಧಿಕ ಪುಷ್ಪವನ್ನು ಇವರ ಮುಂದೆ  ಬೀಳಿಸುತ್ತದೆ. ಅದನ್ನು ಕಂಡು ಆಕರ್ಷಣೆಗೊಂಡ ದ್ರೌಪದಿ ಅಂತಹ ಅನೇಕ ಪುಷ್ಪಗಳು ಬೇಕೆಂದು ಬಯಸುತ್ತಾಳೆ. ಅವುಗಳನ್ನು ತರಲು ಗಂಧಮಾದನ ಪರ್ವತವನ್ನೇರಿ ಕಾಡೇ ನಡುಗುವಂತೆ ವೇಗವಾಗಿ ಅದರ ಪರಿಮಳ ಬಂದ ದಿಕ್ಕಿನ ಜಾಡನ್ನು ಹಿಡಿದು ಭೀಮ ಹೋಗುತ್ತಿರುತ್ತಾನೆ. ಅಲ್ಲಿದ್ದ ಸಿದ್ದರು, ಸುರರು ಸ್ವಾಗತಿಸಿದರೆ ದೈತ್ಯರು ಸಿಂಹ, ಶಾರ್ದೂಲ ರೂಪತಾಳಿ ಭೀಮನ ಮೇಲೆ ಧಾಳಿ ಮಾಡಿ ಹತರಾಗಿಹೋಗುತ್ತಾರೆ. ದಾರಿಗೆ ಅಡ್ಡಲಾಗಿದ್ದ ಗಿಡ ಮರ ಬಳ್ಳಿಗಳನ್ನು ನಿರಾಯಾಸವಾಗಿ ಕಿತ್ತೊಗೆಯುತ್ತಾ ಅಡ್ಡಲಾಗಿದ್ದ ಒಂದು ಬಾಳೆಯ ತೋಟವನ್ನು ಅನೆಯಂತೆ ನುಗ್ಗಿ ಹಾಳುಗೆಡಹಿ ನಡೆದ ಆವಾಂತರಕ್ಕೆ ಪಕ್ಷಿಗಳೆಲ್ಲಾ ಪವ್ವನೆ ಹಾರಿಹೋಗುವಂತೆ ಮಾಡುತ್ತಾನೆ. ವನಚರಗಳು ಹೆದರಿ ಓಡುತ್ತವೆ. ಅಲ್ಲಿ ಒಂದು ಸರೋವರ ಕಂಡು ಅದರಲ್ಲಿ ಸ್ವೇಚ್ಛೆಯಾಗಿ ಆನೆಯಂತೆ ವಿಹರಿಸಿ ಸ್ನಾನ ಮಾಡಿ ಒಮ್ಮೆ ಶಂಖದ್ವನಿಮಾಡಿದ್ದರಿಂದ ಆ ದ್ವನಿ ಗಿರಿ ಗುಹೆಗಳೆಲ್ಲಾ ತುಂಬಿ ಮೊಳಗುತ್ತದೆ. ಆ ಶಬ್ದಕ್ಕೆ ಸುತ್ತಮುತ್ತಲ ಜೀವ ಜಂತುಗಳು ಬಯಗೊಂಡವು. ಅಲ್ಲಿ ತೂಕಡಿಸುತ್ತಿದ್ದ ಒಂದು ಮಹಾಕಾಯದ ಮುದಿ ವಾನರನು ಎಚ್ಚೆತ್ತು ಆಕಳಿಸಿ ತನ್ನ ಬಾಲವನ್ನು ಒಂದು ಸಾರಿ ನೆಲಕ್ಕೆ ಬಡಿದನು. ಸಿಂಹನಾದವನ್ನು ಮೀರಿಸಿದ ಆ ಮಹಾ ಶಬ್ದವನ್ನು ಕೇಳಿ ಭೀಮ ರೋಮಾಂಚನಗೊಂಡನು. ಆ ಮಹಾಶಬ್ದ ಎಲ್ಲಿಂದ ಬಂತೆಂದು ಭೀಮ ಅದನ್ನು ಅರಸಿ ಬಂದು ಒಂದು ದೊಡ್ಡ ಅರೆ ಬಂಡೆಯಮೇಲೆ ಮಲಗಿದ್ದ ದೊಡ್ಡ ಮುದಿಯದಾದ ವಾನರನನ್ನು ನೋಡಿದನು. ಅದರ ಮೈ ಹೊಂಬಣ್ಣದಿಂದ ಮಿಂಚಂತೆ ಹೊಳೆಯುತಿತ್ತು. ಕೆಂಗಣ್ಣಿನಿಂದ ನಿರ್ಭಯವಾಗಿ ಇವನನ್ನೇ ನೋಡುತ್ತಿದ್ದ ವಾನರನ ಸಮೀಪಕ್ಕೆ ಹೋಗಿ ಭೀಮನು ವಾನರನ ಬಾಲದ ಶಬ್ದ ಮೀರಿಸಲೆಂಬಂತೆ ಮತ್ತೊಮ್ಮೆ ಸಿಂಹನಾದ ಮಾಡಿದನು. ಇದರಿಂದ ಸುತ್ತಲ ಜೀವಿಗಳ ನೆಮ್ಮದಿಗೆ, ವನದ ಶಾಂತ ವಾತಾವರಣಕ್ಕೆ ಭಂಗವಾಯಿತು! ಅ ಮುದಿ ವಾನರ ಅಷ್ಟಾದರೂ ನಿಧಾನವಾಗಿ ಕಣ್ಣು ತೆರೆದು ನಾನು ನಿದ್ರಿಸುತ್ತಿದ್ದೆ ನೀನು ಏಕೆ ನಿದ್ರೆಗೆ ಭಂಗ ಮಾಡಿದೆ? ನೀನು ಮಾನವನಾಗಿ, ತಿಳಿದವನಾಗಿ ಮೃಗಗಳ ಮೇಲೆ ದಯೆ ತೋರಬೇಕು ಅದು ಬಿಟ್ಟು ಕಾಡಿನ ಜೀವಿಗಳಿಗೆಲ್ಲಾ ತೊಂದರೆ ಕೊಡುತ್ತಿರುವೆಯಲ್ಲಾ, ಕಾಡಿನ ಶಾಂತಿಭಂಗ ಮಾಡುತ್ತಿರುವೆಯಲ್ಲಾ ನೀನು ಯಾರು? ಮನುಷ್ಯ ಮಾತ್ರರು ಸಂಚಾರವಿಲ್ಲದ ಇಲ್ಲಿ ಸಿದ್ದಗತಿ ಇಲ್ಲದವರು ಮುಂದಕ್ಕೆ ಹೋಗಲಾಗದು! ಇಲ್ಲಿರುವ ರುಚಿಯಾದ ಹಣ್ಣುಹಂಪಲನ್ನು ಯಥೇಚ್ಛವಾಗಿ ಸವಿದು ಹಿಂದಿರುಗಿ ಹೋಗು. ನಾನು ನಿನ್ನ ಒಳಿತಿಗೇ ಹೇಳುತ್ತಿದ್ದೇನೆ ಎಂದನು. ” ನಾನು ಚಂದ್ರವಂಶದಲ್ಲಿ ಹುಟ್ಟಿದ ವಾಯುಪುತ್ರ ಪಾಂಡವರಲ್ಲಿ ಒಬ್ಬ. ಭೀಮ ಎಂದು ನನ್ನ ನಾಮದೇಯ. ನೀನು ವಾನರ ವೇಷದಲ್ಲಿ‌ ಏಕಿರುವೆ? ನೀನು ಯಾರು? ದಾರಿಬಿಡು ” ಎಂದನು ಭೀಮ.
     ” ನಾನು ವಾನರ! ದಾರಿ ಬಿಡುವುದಿಲ್ಲ! ಸುಮ್ಮನೆ ಹಿಂದಿರುಗಿ ಹೋಗು ಕಷ್ಟಕ್ಕೆ ಒಳಗಾಗಬೇಡ ” ಎಂದ ವಾನರ.
      ” ಕಷ್ಟವೋ ಸುಖವೋ? ಏಳು, ದಾರಿಬಿಡು ” ಎಂದ ಭೀಮ.
   ” ನನಗೆ ವಯಸ್ಸಾಗಿದೆ ಶಕ್ತಿಯಿಲ್ಲ. ನನ್ನ ಬಾಲವನ್ನು ಸಹ ಎತ್ತಿಡಲಾರೆ, ನೀನು ಹೋಗಬೇಕೆಂದಿದ್ದರೆ ನನ್ನ ಬಾಲವನ್ನು ದಾಟಿಕೊಂಡು ಹೋಗು ” ಎಂದ ವಾನರ.
     ” ನಿನ್ನನ್ನು ದಾಟಿ ನಿನ್ನಲ್ಲಿರುವ ಪರಮಾತ್ಮನಿಗೆ ಅವಮಾನ ಮಾಡಲು ಇಷ್ಟವಿಲ್ಲ. ಇಲ್ಲವಾದರೆ ಹನುಮಂತ ಸಾಗರ ದಾಟಿದಂತೆ ನಿನ್ನನ್ನು ಈ ಪರ್ವತವನ್ನು ದಾಟಿಕೊಂಡು ಹೋಗುತ್ತಿದ್ದೆ ಎಂದ ಭೀಮ.
” ಹನುಮಂತ ಎಂದೆಯಲ್ಲಾ ಅವನು ಯಾರು?” ಎಂದ ವಾನರ. ” ನನಗೆ ಅಣ್ಣ, ಗುಣವಂತ, ಬುದ್ದಿವಂತ, ಶಕ್ತಿವಂತ. ವಾನರಶ್ರೇಷ್ಠ. ಸೀತೆಯನ್ನು ಹುಡುಕಿಕೊಂಡುಬರಲು ಲಂಕೆಗೆ ಹೋಗಲು ಮಹಾಸಾಗರವನ್ನು ಒಂದೇ ನೆಗೆತಕ್ಕೆ ಹಾರಿದ ಸಾಹಸಿ. ಲಂಕೆಯ ಸುಟ್ಟ ವೀರ, ಸೀತೆಯನ್ನು ರಾಮನಿಗೆ ಮರಳಿ ಸಿಗುವಂತಾಗಲು ಸಹಕರಿಸಿದ ಧೀಮಂತ! ದಾರಿ ಬಿಡು. ಇಲ್ಲವೇ ನನ್ನ ಪರಾಕ್ರಮ ಎದುರಿಸು ” ಎಂದ ಭೀಮ.
ಮನಸ್ಸಿನಲ್ಲೇ ನಕ್ಕು ” ಅಯ್ಯಾ ಪ್ರಸನ್ನನಾಗು, ನಾನು ಮುದುಕ, ಏಳಲಾರೆ, ಕನಿಕರತೋರಿ ನೀನೇ ಈ ಬಾಲವನ್ನು ಅತ್ತ ಪಕ್ಕಕ್ಕೆ ಇಟ್ಟು ಹೋಗು ಎಂದ ವಾನರ “.
ಹೀಗೆ ಹನುಮಂತ ಭೀಮನ ಬಲ ಪರೀಕ್ಷೆಗೆ, ಅಹಂಕಾರ ನಿರಸನಕ್ಕೆ ನಾಂದಿ ಹಾಡಿದ! ಯಕಃಶ್ಚಿತ್ ಕೋತಿಯ  ಬಾಲ ಪಕ್ಕಕ್ಕಿಡುವುದೇ? ಅದೇನು ಮಹಾ! ಎಂದು ತಿರಸ್ಕಾರ ಭಾವದಿಂದ ಬಾಲವನ್ನು ಸುಲಭವಾಗಿ ಸರಿಸಬಹುದೆಂದು ಬಾಲವನ್ನು ಎತ್ತಲು ವಲ್ಲದ ಮನಸ್ಸಿನಿಂದ ಮುಂದಾದ. ಬಾಗಿ ಒಂದು ಕೈಯಲ್ಲಿ ಸರಿಸಲು ಪ್ರಯತ್ನಿಸಿದ ಅಲ್ಲಾಡಿಸುವುದಕ್ಕೆ ಆಗಲಿಲ್ಲ! ಭದ್ರವಾಗಿ ಕುಳಿತು ಎರಡೂ ಕೈಗಳಿಂದ ಎತ್ತಿದ. ಅಲುಗಲಿಲ್ಲ. ಹಲ್ಲುಗಳ ಮಿಡಿಗಚ್ಚಿ, ಕಣ್ಣರಳಿಸಿ, ಹುಬ್ಬೆತ್ತಿ ಎತ್ತಲು ಪ್ರಯತ್ನಿಸಿದ. ಅಲ್ಲಾಡಿಸಲಾಗಲಿಲ್ಲ! ಗದೆಯಿಂದ ಎತ್ತಲು ಹೋದ, ತಿಣುಕಿದ, ಮಿಸುಕಾಡಲಿಲ್ಲ! ಮೈಯೆಲ್ಲಾ ಬೆವರಿಹೋಯಿತು ಹೊರತು ವಾನರನ ಬಾಲವನ್ನು ಮಿಸುಕಾಡಿಸಲಾಗಲಿಲ್ಲ! ಒಂದು ಕಡೆ ಕೋಪ, ಮತ್ತೊಂದು ಕಡೆ ಅಹಂ ನಿರಸನ! ಭೀಮನೆಂಬ ನಾಮಾಂಕಿತಕ್ಕೆ ಬಲವಾದ ಪೆಟ್ಟು! ನನ್ನ ಬಲ ಎಷ್ಟು ಅಲ್ಪ ಎಂಬ ಅರಿವಾಗಿ ಅಹಂಕಾರ ಬಿಸಿಲಿಗೆ ಸಿಕ್ಕ ಮಂಜುಗಡ್ಡೆಯಂತೆ ಕರಗಿರಬೇಕು! ಒಂದು ಕಪಿಯ ಬಾಲ ಮಿಸುಕಾಡಿಸಲಾಗದುದು ಭೀಮನಿಗೆ ಅವಮಾನ! ಅದು ಭೀಮನಿಗೆ ತನ್ನ ಅಲ್ಪತೆಯ ಅರಿವಾದ ಕ್ಷಣ! ಇದನ್ನು ಎರಡು ಶಬ್ದ ಸಂಕೇತಗಳು ಪುಷ್ಟೀಕರಿಸುವುದನ್ನು ನೋಡಬಹುದು. ಮೊದಲನೆಯದು ಬಾಳೆಯ ತೋಟದಲ್ಲಿ ಆನೆಯಂತೆ ನುಗ್ಗಿ ಸರೋವರವನ್ನೂ ಅಲ್ಲೋಲ ಕಲ್ಲೋಲ ಮಾಡಿ ಸಿಂಹನಾದ ಮಾಡಿ ಸಕಲಚರಾಚರ ವಸ್ತುಗಳ, ಜೀವರಾಶಿಗಳ ಶಾಂತಿಗೆ ಭಂಗ ಉಂಟುಮಾಡಿದುದು ಅಹಂಕಾರದ ಸಂಕೇತವಾದರೆ, ಹನುಮನ ಬಾಲದ ಸದ್ದು ಆ ಸಿಂಹನಾದವನ್ನು ಮೀರಿಸಿ ಭೀಮನನ್ನೇ ರೋಮಾಂಚನಗೊಳಿಸಿದ ಅದು ಭೀಮನ ಅಹಂಕಾರವನ್ನು ಮಂಜಿನಂತೆ ಮಾಯ ಮಾಡಿದ ದ್ವನಿ ಸಂಕೇತ! ಅಶಾಂತಿ ಉಂಟು ಮಾಡಿದ ಜೀವಿಗೆ ಎಚ್ವರಿಕೆಯ ಸಂಕೇತ! ಇಲ್ಲಿ ಭೀಮನ ಸಿಂಹನಾದ ಅಹಂಕಾರದಿಂದ ನಿರುಪದ್ರವಿಗಳ ಶಾಂತಿಗೆ ಭಂಗ ತರುವುದಾದರೆ ಹನುಮಂತನದು ಭಂಗ ತಂದವರಿಗೆ ಎಚ್ಚರಿಸುವುದು! ನಿರುವದ್ರವಿಗಳಿಗೆ ಶಾಂತಿಯ ಅಭಯ ನೀಡುವುದು‌! ಒಂದು ಸಾಮಾನ್ಯ ಕೋತಿಯ ಬಾಲ ಎತ್ತಲಾಗದ ಭೀಮನಿಗೆ ತನ್ನ ಅಲ್ಪತೆಯ ಅರಿವಾಗಿ, ಅಹಂಕಾರ ಕರಗಿ ಕಪಿಯ ಬಳಿ ಹೋಗಿ ನಾಚಿಕೆಯಿಂದ ತಲೆ ತಗ್ಗಿಸಿ ಕೈಮುಗಿದು ” ಕಪಿಶ್ರೇಷ್ಠ! ಪ್ರಸನ್ನನಾಗು! ನಾನು ಆಡಿದ ದುರ್ಭಾಷೆಯನ್ನು ಕ್ಷಮಿಸು. ಸಿದ್ದನೋ, ಯಕ್ಷನೋ, ಗಂಧರ್ವನೋ, ದೇವತೆಯೋ ಈ ವಾನರ ರೂಪಿನಲ್ಲಿರುವ ನೀನು ಯಾರು? ಎಂದನು. ಅದೇ ನೀನು ಹೇಳಿದೆಯಲ್ಲಾ ಹನುಮಂತನು ಸಾಗರವನ್ನು ದಾಟಿದಹಾಗೆ ನಿನ್ನನ್ನು ಪರ್ವತವನ್ನು ದಾಟಿಕೊಂಡು ಹೋಗುತ್ತಿದ್ದೆ ಎಂದು ಯಾರ ಬಗ್ಗೆ ಹೆಮ್ಮೆಯಿಂದ ಹೇಳಿದಯೋ ಆ ಹನುಮಂತನೆ ನಾನು! ರಾಮಬಂಟ! ವಾಯು ಕೇಸರಿಯರ ಪುತ್ರ! ಇಲ್ಲಿ ಗಂದರ್ವರು, ಅಪ್ಸರೆಯರು ಸದಾ ರಾಮನ ಕತೆಯ ಗಾನ ಮಾಡುತ್ತಿರುತ್ತಾರೆ ಅದನ್ನು ಕೇಳುತ್ತಾ ಕೇಳುತ್ತಾ ನಾನು ಸುಖಿಸುತ್ತಿದ್ದೇನೆ! ಈ ದಾರಿಯಲ್ಲಿ ಮನುಷ್ಯರು ಹೋಗಲು ಅಸಾಧ್ಯ! ಯಾರಾದರೂ ಅಡ್ಡಿಪಡಿಸಿಯಾರು ಎಂದು ನಿನ್ನನ್ನು ತಡೆದೆ. ನೀನು ಹುಡುಕಿಕೊಂಡುಬಂದ ಸರೋವರ ಇಲ್ಲಿಯೇ ಹತ್ತಿರದಲ್ಲಿದೆ ಎಂದ ಹನುಮಂತ.  ಅಣ್ಣನಾದ, ಸಪ್ತ ಚಿರಂಜೀವಿಗಳಲ್ಲಿ ಒಬ್ಬನಾದ ಹನುಮಂತನಿಗೆ ನಮಸ್ಕರಿಸಿ ನಿನ್ನ ದರ್ಶನ ಭಾಗ್ಯದಿಂದ ಧನ್ಯನಾದೆ! ನೀನು ಸಾಗರವನ್ನು ದಾಟಿದಾಗಿನ ರೂಪವನ್ನು ನೋಡುವ ಆಸೆ. ತೋರಿಸು ಎಂದ. ಕಲಿಯುಗ ಬರುವುದರಲ್ಲಿದೆ ಅದನ್ನು ನೋಡುವುದು ಕಷ್ಟವೆಂದರೂ ಬಿಡದೆ ಭೀಮ ಪ್ರಾರ್ಥಿಸಿದುದರಿಂದ ಅ ವಿರಾಡ್ ರೂಪ ತೋರುವನು!
ಆ ತೇಜೋಮಯವಾದ ಅದ್ಬುತಾಕಾರವನ್ನು ಕಂಡು ಭೀಮ ಬೆರಗಾದನು. ಹನುಮಂತ ಮೊದಲ ರೂಪತಾಳಿ ಭೀಮನನ್ನು ಆಲಂಗಿಸಿ ದೇಹದ ನೋವನ್ನು ನೀಗಿಸಿ ಪುಷ್ಪ ಸಿಗುವ ಮಾರ್ಗ ತೋರಿದ! ಹೀಗೆ ಒಂದು ಹೂವು ಭೀಮನ ಗರ್ವಭಂಗ ಮಾಡಿಸಿ ಹನುಮಾನುಗ್ರಹವಾಗುವಂತೆ ಮಾಡಿ ಸಾಗರೋಲ್ಲಂಘನ ಸಂದರ್ಭದಲ್ಲಿ ತಾಳಿದ ವಿರಾಡ್ ರೂಪವನ್ನು ತೋರಿಸಿದುದು ಸತ್ಯ! ಇದಕ್ಕೆ ಸೌಗಂಧಿಕಾ ಎಂಬ ಆ ಒಂದು ಪುಷ್ಪ ಕಾರಣವಾದುದು ಅಚ್ಚರಿ!
ಕೆ ಟಿ ಸೋಮಶೇಖರ ಹೊಳಲ್ಕೆರೆ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x