ಹನುಮಂತ ಹಾಲಿಗೇರಿಯವರ ‘ಕೆಂಗುಲಾಬಿ’ ಕಾದಂಬರಿ ಪ್ರಾರಂಭ


ಪಂಜುವಿನ ನಲ್ಮೆಯ ಓದುಗರಿಗಾಗಿ ಲೇಖಕ, ಪತ್ರಕರ್ತ ಹನುಮಂತ ಹಾಲಿಗೇರಿಯವರ ಪ್ರಶಸ್ತಿ ವಿಜೇತ ಕಾದಂಬರಿ "ಕೆಂಗುಲಾಬಿ" ಈ ಸಂಚಿಕೆಯಿಂದ  ಪ್ರಾರಂಭ…


ಈ ಗರ್ಭ ಹೊತ್ತಾಗಿನ ತಳಮಳ ಹೇಳತೀರದು:

ಕೆಂಗುಲಾಬಿಯ ಆತ್ಮ  ನನ್ನ ಮಸ್ತಕದ ಗರ್ಭದಲ್ಲಿ ಮೊಳಕೆ ಮೂಡಿ ಬೆಳೆಯುತ್ತಿರುವಾಗಲೆಲ್ಲಾ ನಾನು ತಳಮಳಕ್ಕೆ ಈಡಾಗುತ್ತ ಖಿನ್ನನಾಗುತ್ತಿದ್ದೆ. ಇದನ್ನು ಬರೆಯಬೇಕಾ ಬೇಡವಾ  ಎಂದು ತಾಕಲಾಟದಲ್ಲಿಯೆ ಬಹಳಷ್ಟು ದಿನಗಳನ್ನು ದೂಡಿದೆ. ನಾನು ಬರೆಸಿಕೊಂಡೆ ತೀರುತ್ತೇನೆ ಎಂದು ಇದು ಹಟ ಹಿಡಿದಂತೆಲ್ಲಾ ನಾನು ಸೋಲುತ್ತ ಹಿಂದೆ ಸರಿಯುತ್ತಲೆ ಇದ್ದೆ.

ನನ್ನೊಡನೆ, ಶಾಲಿಗೆ ಬರುತ್ತಿದ್ದ, ರಜೆಯಲ್ಲಿ ಬಾಗಲಕೋಟೆಯ ನವನಗರ ನಿರ್ಮಾಣಕ್ಕೆ ಮಣ್ಣು ಹೊರಲು ಹಾಗೂ ಕಾಂಕ್ರೀಟ್ ಬಿಲ್ಡಿಂಗ್‌ಗಳಿಗೆ ನೀರು ಹೊಡೆಯಲು ಬರುತ್ತಿದ್ದ ದಟ್ಟಗೂದಲಿನ ನಿಳಜಡೆಯ ಯಮುನಾ ಇದ್ದಕಿದ್ದಂತೆ ಮಾಯವಾದಾಗ ನಾನು ದಿಗಿಲುಗೊಂಡು ನನ್ನೊಂದಿಗೆ ಕೆಲಸಕ್ಕೆ ಬರುತ್ತಿದ್ದ ನನ್ನ ಮಾವನನ್ನು  ಕೇಳಿದ್ದೆ. ಮಾವ ನನ್ನಂಥ ಸಣ್ಣ  ಹುಡುಗನ ಮುಂದೆ ಹೆಚ್ಚು ಹೇಳಲಿಕ್ಕೆ ಹೋಗದೆ ಅಲ್ಲಿನೂ ಇದ ದಗದ ಮಾಡಾಕ ಹೋಗ್ಯಾರ ಅಂತ ನನ್ನ ಬಾಯಿ ಮುಚ್ಚಿಸಿದ್ದ. ಮಾವನ ವಾರಿಗೆಯ  ಭರಮ್ಯಾ ವಿಚಿತ್ರವಾಗಿ ನಕ್ಕು ನನ್ನ ಕುತೂಹಲವನ್ನು ಮತ್ತಷ್ಟು ಕೆರಳುವಂತೆ ಮಾಡಿದ್ದ.

ಇಂತಿಪ್ಪ ಹುಡುಗಿ ಮುಂದೊಂದು ದಿನ ನಾಜೂಕಿನ ಮಿರ ಮಿರ ಮಿಂಚುಳ್ಳ ಬಟ್ಟೆ, ತುಟಿಗೆ ಗಾಡ ಬಣ್ಣ, ಕೆನ್ನೆಯ ಮೇಲೆ ಪುಟಿಯುವ ಮುಂಗುರುಳು ಬಿಟ್ಟುಕೊಂಡು ಹೈಹಿಲ್ಡ್ ಚಪ್ಪಲಿನೊಂದಿಗೆ ನಮ್ಮೂರ ಅಗಸಿ ಬಾಗಿಲು ಪ್ರವೇಶಿಸಿದಾಗ ನಾನು ನನ್ನ ಅದೇ ವಿಚಿತ್ರ ದಿಗಿಲಿನಲ್ಲಿ ಅವಳೆಡೆ ನೋಡುತ್ತ ನಿಂತಿದ್ದೆ. ಮುಖದಲ್ಲಿ ಮುಗುಳುನಗೆ ಹೊತ್ತಿದ್ದ ಹುಡುಗಿ ನನ್ನತ್ತ ಕುಡಿನೋಟವನ್ನು ಬೀರದೆ ಹಾಗೆ ಬಿರಬಿರನೆ ಮುಂದೆ ಹೋಗಿದ್ದಳು.

ನಾನು ಸಹ ಅವಳಂತೆ ದೂರ ದೇಶಕ್ಕೆ ಹೋಗಿ ದುಡಿಬೇಕು, ಅವಳಂಗೆ ಮಿರ ಮಿರ ಮಿಂಚುವ ಅಂಗಿ ಹಾಕ್ಕೊಂಡು ಬರಬೇಕು ಎಂದು ಚಿಂತಿಸುತ್ತಲೆ ಅವತ್ತಿನ ರಾತ್ರಿ ನಿದ್ರೆಯಿಲ್ಲದೆ ಉರುಳಾಡಿದ್ದೆ. ಬೆಳಗ್ಗೆ ನಾವು ಯಮುನಾಳಂತೆ ದುಡಿಯಲು ದೂರ ದೇಶಕ್ಕೆ ಹೋಗೋಣ ಎಂದು ಮಾವನ ಮನಗೆ ಹೋಗಿ ಹೇಳಿದರೆ, ಮಾವ ಕೆನ್ನೆಗೆ ಒಂದೆರಡು ಕೊಟ್ಟು  ಉರಿಯುವ ನೋಟ ಚೆಲ್ಲಿ ಬಿರಬಿರನೆ ಹೊರ  ಹೋಗಿದ್ದ.

ಯಮುನಾ ವರ್ಷಕ್ಕೊಂದೆರಡು ಸಲ ಬಂದು ಹೋಗುವುದು ಮಾಡುತ್ತಿದ್ದಳು. ಆಕೆಯ ಮಾನಸಿಕ ದೈಹಿಕ ಬೆಳವಣಿಗೆ ವಿಚಿತ್ರ ವೇಗದಲ್ಲಿರುವುದು ನನ್ನನ್ನು ಅಚ್ಚರಿ ಮಾಡಿತ್ತು. ನಾನಿನ್ನು ಹೈಸ್ಕೂಲಿನಲ್ಲಿರುವಾಗಲೇ ಆಕೆ ಎರಡು ಮಕ್ಕಳ ತಾಯಿಯಾಗಿದ್ದಳು. ಊರಿಗೆ ಬಂದಾಗೊಮ್ಮೆ ಮಕ್ಕಳಿಗೆ ಚಂದದ ಬಟ್ಟೆ ತಂದು, ಉಣಿಸಿ ತಿನಿಸಿ ಮಾಡಿ ಮತ್ತೆ ತಿಂಗಳೊಪ್ಪತ್ತಿನಲ್ಲಿ ಮಾಯವಾಗುತ್ತಿದ್ದಳು.

ಮುಂದಿನ ಎಳೆಂಟು ವರ್ಷದ ನಂತರ ಮೈಯ್ಯಾಗ ಹುಷಾರಿಲ್ಲವೆಂದು ಊರಿಗೆ ಬಂದ ಯಮುನಾ ಊರಲ್ಲಿಯೆ ನೆಲೆಗೊಂಡು ದಿನದಿಂದ ದಿನಕ್ಕೆ ಕೃಶಳಾಗುತ್ತ ನಡೆದಳು. ಈಗೀಗಂತೂ ಅವಳು ಇವತ್ತೋ ನಾಳೆಯೋ ಎನ್ನುವಂತೆ ಮುಗ್ಗುಲು ನಾರುವ ಕೌದಿಯಲ್ಲಿ ಮಗ್ಗಲು ಬದಲಿಸುತ್ತಿದ್ದಾಳೆ. ಅವಳ ಮನೆಯ ದುಸ್ಥಿತಿ ಹೇಳತೀರದು. ಅವಳ ಆಸೆಯನ್ನು ಬಿಟ್ಟುಬಿಟ್ಟಿರುವ ಅವಳವ್ವ ಮೊಮ್ಮಗಳು ಚಿಮುನಾ ಬಲಿಯುವುದನ್ನೆ ಕಾಯುತ್ತಿದ್ದಾಳೆ. ಮತ್ತೊಂದು ಬಲಿ ಬೀಳುವುದಂತೂ ಗ್ಯಾರಂಟಿ.

ಇಂತಿಪ್ಪ ಊರಿನಲ್ಲಿ ದುಗುಡಗೊಳ್ಳುತ್ತಲೆ ಬೆಳೆದಿರುವ ನನಗೆ ಇಂತ ಯಮುನಾ ಚಿಮುನಾರು ಎಲ್ಲಿಗೆ ಹೊಕ್ಕಾರು ಏನು ಕೆಲಸ ಮಾಡತಾರು ಎನ್ನುವುದು ಒಗಟಾಗಿ ಕಾಡುತ್ತಲೆ ಇತ್ತು. ಉತ್ತರಗಳು ಸಿಕ್ಕರೂ ಅವುಗಳ ಸಂಕೀರ್ಣತೆ ನನ್ನನ್ನು ಬೆಚ್ಚವಂತೆ ಮಾಡುತ್ತಿತ್ತು. ಇದರ ಬಗ್ಗೆ ಬರೆಯಬೇಕೋ ಬೇಡವೊ ಎಂದು ಚಿಂತಿಸುತ್ತಲೆ ಇದ್ದೆ. ಯಮುನಾ-ಚೀಮುನಾರ ಆತ್ಮಗಳು ನನ್ನೊಳಗೆ ಗಾಯವಾಗಿ ಮೂಡಿ ಹುಣ್ಣಾಗಿ ಬಲಿತು ನನ್ನನ್ನೆ ನುಂಗುವಂತೆ ಬೆಳೆಯುತ್ತಲಿದ್ದವು.ಹುಣ್ಣಿನೊಳಗಿನ ಕೀವನ್ನು ಹೊರಗೆ ಹಾಕಲೇ ಬೇಕಿತ್ತು.

ಈ ವೃತ್ತಿಯ ಬಗ್ಗೆ ನನ್ನೊಳಗಿದ್ದ ತಹತಹಿಕೆಯನ್ನು ’ಕತ್ತಲಗರ್ಭದ ಮಿಂಚು’ ಕಥೆಯಲ್ಲಿ ಹಿಡಿದಿಡುವ ಪ್ರಯತ್ನ ಮಾಡಿ ಆ ಕಥೆಯನ್ನು ಕರವೇ ನಲ್ನುಡಿ ಪತ್ರಿಕೆಯ ಕಥಾ ಸ್ಪರ್ಧೆಗೆ ಕಳುಹಿಸಿಕೊಟ್ಟಿದ್ದೆ. ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿ ಆ ಕಥೆ  ಪ್ರಕಟವೂ ಆಯಿತು. ಆಗ ರಾಜ್ಯಾದ್ಯಂತ ಈ ಕಥೆಯ ಬಗ್ಗೆ ಬಂದ ಪ್ರತಿಕ್ರಿಯೆಗಳು ನನ್ನನ್ನು ದಿಗ್ಮೂಡಗೊಳಿಸಿದವು. ಲೈಂಗಿಕ ವೃತ್ತಿಯಲ್ಲಿರುವ ನಾಲ್ಕಾರು ಮಹಿಳೆಯರೇ ನನ್ನೊಂದಿಗೆ ಮಾತನಾಡಿ ’ಸತ್ಯ ಬರೆದಿದ್ದೀರಿ’ ಎಂದು ಅತ್ತು ಕರೆದು ಮಾಡಿದರು.

ಇದನ್ನು ವಿಸ್ತರಿಸಿ ಕಾದಂಬರಿಯ ಚೌಕಟ್ಟನ್ನು ತೊಡಿಸಬೇಕೆನಿಸಿತು. ಬರೆದು ಐದಾರು ತಿಂಗಳು ಗತಿಸಿದ್ದರೂ ಪ್ರಕಟಿಸಬೇಕೋ, ಬೇಡವೋ ಎಂಬ ಒಂದು ಬಗೆಯ ಕೀಳರಿಮೆಯ ಸಂಕೋಚದಲ್ಲಿ ಇದ್ದೆ. ಇದನ್ನು ಓದಿದ ಮಿತ್ರರು ಧೈರ್ಯ ತುಂಬಿದ್ದರಿಂದ ಈ ಕೃತಿ ಹೊರ ಬರುತ್ತಿದೆ. ದಿನದ ಕೆಲಸದ ಒತ್ತಡದ ನಡುವೆಯೂ ಎರಡ್ಮೂರು ತಿಂಗಳುಗಳಲ್ಲಿ ಬರೆದು ಮುಗಿಸಿದೆ. ಅದಾಗಿ ಐದಾರು ತಿಂಗಳು ಬರೆದದ್ದನ್ನು ಮುಚ್ಚಿಟ್ಟು ಸುಮ್ಮನಾಗಲು ಪ್ರಯತ್ನಿಸುತ್ತಿದ್ದೆ. ಅದು ಸಾಧ್ಯವಾಗದೆ ಮೂರ್‍ನಾಲ್ಕು ಗೆಳೆಯರಿಗೆ ಸುಮ್ಮನೆ ಮೇಯ್ಲ್ ಮಾಡಿದೆ. ಅದರಲ್ಲಿ ಮರುದಿವೇ ಪ್ರತಿಕ್ರಿಯಿಸಿದ್ದ ಕಾರ್ಪೇಂಟರ್ ಈ ಕೃತಿಯನ್ನು ಈ ವರ್ಷವೇ ತಂದು ಬಿಡೋಣ ಎಂದು ಬೆನ್ನಿಗೆ ಬಿದ್ದ. ಸರಿ ಅನ್ಕೊಂಡು ಕಷ್ಟಪಟ್ಟುಕೊಂಡು ತಂದೆ ಬಿಟ್ಟೆವು.

ಅತ್ಯಂತ ಹೆಚ್ಚು ಲೈಂಗಿಕ ಕಾರ್ಯಕರ್ತರು, ದೇವದಾಸಿಯರನ್ನು  ಮತ್ತು ೧೭ ಸಾವಿರ ಎಚ್‌ಐವಿ ಮತ್ತು ಏಡ್ಸ್ ಪೀಡಿತರು (ರಾಜ್ಯ  ಮಹಿಳಾ ಮತ್ತು ಮಕ್ಕಳ ಆಯೋಗದ ಸಮೀಕ್ಷೆ ಪ್ರಕಾರ) ನಮ್ಮ ಬಾಗಲಕೋಟೆ ಜಿಲ್ಲೆಯಲ್ಲಿದ್ದಾರೆ. ಯಮುನಾಳಂತೆ ತಮ್ಮ ಹರೆಯದ ಕಾಲದಲ್ಲಿ ತಮ್ಮ ಮನೆ ಬಿಟ್ಟು ಮಾಯವಾಗುತ್ತಿದ್ದ ನನ್ನೂರು ಮತ್ತು ನೆರೆಯ ಹಳ್ಳಿಗಳ ಹುಡುಗಿಯರ ಬದುಕು ಎಲ್ಲಿ ಹೋಗಿ ದಡ ಸೇರುತ್ತಿತ್ತು ಎಂಬುದು ನನ್ನ ಬಾಲ್ಯದಲ್ಲಿ ಕಾಡಿಸುತ್ತಿದ್ದ ಬಹುಮುಖ್ಯ ಪ್ರಶ್ನೆಯಾಗಿತ್ತು. ಈ ಪ್ರಶ್ನೆಯೇ ಈ ಕಾದಂಬರಿಯುದ್ದಕ್ಕೂ ಹರಿದಾಡುತ್ತಾ ಓದುಗರಲ್ಲೂ ಬೆಳೆಯತೊಡಗುತ್ತದೆ. ಈ ಪ್ರಶ್ನೆಯ ಚುಂಗನ್ನು ಹಿಡಿದು ಎನ್‌ಜಿಓ ಸಹದ್ಯೋಗಿಗಳಿಗೆ ಅಂಗಲಾಚಿ, ಹುಬ್ಬಳ್ಳಿಯ ದಂಧೆ ಮನೆಗಳಿಗೆ, ಲೈಂಗಿಕ ಕಾರ್ಯಕರ್ತರ ಪ್ರತಿಭಟನಾ ಸ್ಥಳಗಳಿಗೆ ಅಲೆದಾಡಿದ್ದೇನೆ. ಬೆಂಗಳೂರಿನ ಸಂಗಮ ಕಚೇರಿಗೆ ಹೋಗಿ ಲೈಂಗಿಕ ಕಾರ್ಯಕರ್ತರೊಂದಿಗೆ ಸಂದರ್ಶನ ನಡಿಸಿದ್ದೇನೆ. ಹುಬ್ಬಳ್ಳಿಯ ಹಳೆ ಬಸ್ ನಿಲ್ದಾಣ ಮುಂಭಾಗದ ರಸ್ತೆ, ಬೆಂಗಳೂರಿನ ಮೆಜೆಸ್ಟಿಕ್, ಕೆ.ಆರ್.ಮಾರ್ಕೆಟ್‌ಗಳ ರಸ್ತೆಗಳಲ್ಲಿ ಸಂಕೋಚ ತೊರೆದು ಅಡ್ಡಾಡಿದ್ದೂ ಇದೆ.

ಇಲ್ಲಿ ನಾನು ಲೈಂಗಿಕವೃತ್ತಿ ಸರಿ ಅಥವಾ ತಪ್ಪು ಎಂದು ವಾದಿಸಲು ಹೋಗಿಲ್ಲ. ಈ ಕೃತಿ ಓದಿದ ನಂತರ ನಿಮ್ಮೊಳಗಡೆ ಮೂರ್ತಗೊಳ್ಳುವ ತೀರ್ಮಾನಕ್ಕೆ ನೀವೇ ಜವಾಬ್ದಾರರು! ಲೈಂಗಿಕ ವೃತ್ತಿಯ ಜಗತ್ತಿನಲ್ಲಿ ತುತ್ತು ಅನ್ನಕ್ಕಾಗಿ ಕಾರ್ಯಕರ್ತೆಯರು ನಡೆಸುವ ನಿರಂತರ ಹೋರಾಟದ ಬದುಕನ್ನು ವಿವರಿಸುವ ಕೆಲಸವನ್ನಷ್ಟೆ ಮಾಡಿದ್ದೇನೆ. ಇದು ಗರ್ಭಗಟ್ಟುವ ಸಮಯದಲ್ಲಿ ನನಗನ್ನಿಸಿದ್ದೇನೆಂದರೆ; ಪ್ರಕೃತಿಯ ಎಲ್ಲ ಜೀವಿಗಳಿಗೆ ಊಟ-ನೀರಡಿಕೆಯಷ್ಟೇ ಮೈಥುನವು ಪ್ರಾಥಮಿಕ ಅಗತ್ಯ ಮತ್ತು ನಿಸರ್ಗ ನಿಯಮ. ಅದನ್ನು ಬಯಸಲು ಹೋದಷ್ಟು ಅಪಾಯ ಹೆಚ್ಚು. ಬಯಸಿದ್ದರ ಪ್ರತಿರೋಧವಾಗಿ, ಈ ಅಮಾಯಕ ಹುಡುಗಿಯರು ಈ ವಿಷವರ್ತುಲದಲ್ಲಿ ಸಿಲುಕುತ್ತಿದ್ದಾರೆ. ಅವರು ನಮ್ಮಂಥವರ ತಾಯಿ, ಮಗಳು, ಹೆಂಡತಿ, ಅಕ್ಕ-ತಂಗಿಯರಾಗಬಹುದಿತ್ತು. ಇದೆಲ್ಲದಕ್ಕೂ ಅವಕಾಶವಾಗದೆ ಅವರು ಬೀದಿಗಿಳಿಯಬೇಕಾಗಿ ಬಂದದ್ದು ದುರಂತ ಸತ್ಯ.

ವೇಶ್ಯಾವೃತ್ತಿಯ ಬಗ್ಗೆ ಕನ್ನಡದಲ್ಲಿ ಇದೇ ಮೊದಲ ಕೃತಿಯೇನಲ್ಲ. ಈ ಮೊದಲು ಬಸವರಾಜ ಕಟ್ಟಿಮನಿಯವರ ’ಬೀದಿಗೆ ಬಿದ್ದವಳು’, ಎಂ.ಕೆ.ಇಂದಿರಾ ಅವರ ’ಗೆಜ್ಜೆಪೂಜೆ’, ತರಾಸು ಅವರ ’ಮಸಣದ ಹೂವು’ ಸೇರಿದಂತೆ ಇನ್ನೂ ಹಲವಾರು ಕೃತಿಗಳು ಬಂದಿವೆ. ತನ್ನೊಳಗೆ ಸಾವಿರಾರು ಕಥಾ ವಸ್ತುಗಳನ್ನು ಸದಾ ಹುಟ್ಟಿಸುವ ಫಲವಂತಿಕೆಯ ಭೂಮಿ ಈ ವೇಶ್ಯಾ ಜಗತ್ತು. ಈ ಜಗತ್ತಿನ ವರ್ತಮಾನದ ತಲ್ಲಣಗಳಿಗೆ ಇಲ್ಲಿ ಕನ್ನಡಿ ಹಿಡಿಯಲಾಗಿದೆ ಅಷ್ಟೇ.


೨ನೆ ಮುದ್ರಣಕ್ಕೆ ಮುನ್ನ:

‘ಕೆಂಗುಲಾಬಿ’ ಬಿಡುಗಡೆಯಾದ ಮೂರ್‍ನಾಲ್ಕು ತಿಂಗಳುಗಳಲ್ಲಿಯೇ ಮೊದಲ ಮುದ್ರಣದ ಪ್ರತಿಗಳು ಖರ್ಚಾದುದರಿಂದ ಆಗಲೇ ಎರಡನೆ ಮುದ್ರಣವನ್ನು ತರಬೇಕಿತ್ತು. ಆದರೆ, ಮೊದಲ ಮುದ್ರಣದ ‘ಕೆಂಗುಲಾಬಿ’ ಹಲವೆಡೆ ಇನ್ನಿಲ್ಲದ ಚಲುವಿನಿಂದ, ಮತ್ತೇರಿದ ರಕ್ತಗೆಂಪಿನಿಂದ ಕಂಗೊಳಿಸಿದರೆ, ಕೆಲವೆಡೆ ಪತ್ರಿಕಾ ವರದಿಯಂತೆ ಸೊರಗಿರುವುದು ನನ್ನ ಕೃತಿಯ ಬಗ್ಗೆ ನಾನು ಒಪ್ಪಿಕೊಳ್ಳಲೇಬೇಕಾದ ಸತ್ಯ. ಪತ್ರಕರ್ತನಾಗಿ ದಿನದ ಒತ್ತಡದಲ್ಲಿ ಪ್ರತಿದಿನ ಸಿಗುವ ಒಂದೆರಡು ಗಂಟೆಯಲ್ಲಿ ‘ಕೆಂಗುಲಾಬಿ’ ರಚಿಸಿದ್ದರಿಂದ ಅದರ ಇತಿಮಿತಿಗಳು ನನಗೆ ಮೊದಲೇ ಮನವರಿಕೆಯಾಗಿದ್ದವು. ಆ ಇತಿಮಿತಿಗಳ ಮಧ್ಯೆಯೂ ನಾಡಿನಾಧ್ಯಂತ ಕನ್ನಡದ ಓದುಗರು ಕೆಂಗುಲಾಬಿಯ ಪರಿಮಳವನ್ನು ಇಷ್ಟಪಟ್ಟಿದ್ದು ದೊಡ್ಡ ಸಂಭ್ರಮ.

ಶಿವಮೊಗ್ಗದ ಕರ್ನಾಟಕ ಸಂಘವು ಈ ಕೃತಿಗೆ ನನ್ನ ನೆಚ್ಚಿನ ಸಾಹಿತ್ಯ ಕುವೆಂಪು ಹೆಸರಿನಲ್ಲಿ ಕಾದಂಬರಿ ಪ್ರಶಸ್ತಿ, ಬಾಗಲಕೋಟೆಯ ಜಿಲ್ಲಾ ಕಸಾಪ ಸಮೀರವಾಡಿ ದತ್ತಿ ಪ್ರಶಸ್ತಿ ಮತ್ತು ದಲಿತ ಸಾಹಿತ್ಯ ಪರಿಷತ್ತಿನ ಪ್ರಶಸ್ತಿಗಳು ಈ ಗುಲಾಬಿ ಪರಿಮಳದ ಕಂಪನ್ನು ಮತ್ತಷ್ಟು ಹೆಚ್ಚುವಂತೆ ಮಾಡಿವೆ.

ಬೆಂಗಳೂರಿನಲ್ಲಿ ಬಿಡುಗಡೆಯ ದಿನವೇ ಇನ್ನೂರಕ್ಕೂ ಹೆಚ್ಚು ಪ್ರತಿಗಳು ಮಾರಾಟವಾದವು. ನಮ್ಮ ಹಿರಿಯ ಮಿತ್ರ ಲಕ್ಷ್ಮಿ ನಾರಾಯಣ ನಾಗವಾರ್ ಅವರು ನನ್ನ ತವರು ಜಿಲ್ಲೆ ಬಗಾಲಕೋಟೆಯ ಬೀಳಗಿಯಲ್ಲಿ ಡಿಎಸ್‌ಎಸ್‌ನ ಕಾರ್ಯಾಗಾರದಲ್ಲಿ ಗದುಗಿನ ತೋಂಟದ ಶ್ರೀ ಗಳಿಂದ ಬಿಡುಗಡೆ ಮಾಡಿಸಿ ನೂರಕ್ಕೂ ಹೆಚ್ಚು ಪ್ರತಿಗಳು ಖರ್ಚು ಮಾಡಿಸಿದರು.

ಸೂಕ್ಷ್ಮ ಸಂವೇದನೆಯ ಕಥೆಗಾರ ಗೆಳೆಯ ಬಿ.ಶ್ರೀನಿವಾಸ್ ಅಲ್ಲಿನ ಜಿಲ್ಲಾ ಕಸಾಪ ಮತ್ತು ಓದುಗರ ವೇದಿಕೆಯ ಆಶ್ರಯದಲ್ಲಿ ಹಾವೇರಿಯಲ್ಲಿ ಕೆಂಗುಲಾಬಿ ಕುರಿತು ದೊಡ್ಡಮಟ್ಟದ ವಿಚಾರಸಂಕಿರಣ ಹಮ್ಮಿಕೊಂಡರು. ಕರ್ನಾಟಕ ಜನಶಕ್ತಿಯ ಪುಸ್ತಕ ಮನೆಯ ಗೆಳೆಯರಾದ ಮಲ್ಲಿಗೆ, ಡಾ.ವಾಸು, ನಾಗಮಂಗಲ ಕೃಷ್ಣಮೂರ್ತಿ ಮುಂತಾದವರು ಮಂಡ್ಯ ಜಿಲ್ಲೆಯಲ್ಲಿ ಮತ್ತು ಹಿರಿಯ ಕವಿ ರಾಮಲಿಂಗಪ್ಪ ಟಿ.ಬೇಗೂರು ಅವರ ನೇತೃತ್ವದಲ್ಲಿ ಕ್ರೀಯಾಶೀಲವಾಗಿರುವ ಪರಸ್ಪರ ಬಳಗವು ಬೆಂಗಳೂರಿನಲ್ಲಿ ಮಹಾರಾಣಿ ಕಾಲೇಜಿನಲ್ಲಿ ಅರ್ಥಪೂರ್ಣ ಸಂವಾದ ಕಾರ್ಯಕ್ರಮ ನಡೆಸುವ ಮೂಲಕ ಕೆಂಗುಲಾಬಿ ಪರಿಮಳ ಪಸರಿಸುವುದಕ್ಕೆ ನೆರವಾದರು.

ಹಿರಿಯರಾದ ಪ್ರೊ.ಶಿವರಾಮಯ್ಯ ರಚಿಸಿರುವ ವೇಶ್ಯಯರು ಮತ್ತು ಲೈಂಗಿಕ ಅಲ್ಪಸಂಖ್ಯಾತರು ನಡೆದ ಬಂದ ದಾರಿ’ ಕೃತಿ ಕನ್ನಡದಲ್ಲಿಯೇ ವಿಭಿನ್ನ ನೆಲೆಯ ಸಂಗ್ರಹಯೋಗ್ಯ ಕೃತಿ. ಆ ಕೃತಿಯಲ್ಲಿ ‘ಕೆಂಗುಲಾಬಿ’ಯನ್ನೂ ವಿಶ್ಲೇಷಿಸಿ ಒಂದು ಅಧ್ಯಾಯ ಸೇರಿಸಿದ್ದಾರೆ. ಇನ್ನುಳಿದಂತೆ, ಉದಯವಾಣಿ, ವಿಜಯವಾಣಿ, ವಿಜಯ ಕರ್ನಾಟಕ, ಬೆಂಗಳೂರು ಮಿರರ್, ವಾರ್ತಾಭರತಿ, ಗೌರಿ ಲಂಕೇಶ್, ಅಗ್ನಿ, ಸಂವಾದ, ಹೊಸತು ಪತ್ರಿಕೆಗಳಲ್ಲಿ, ಅವಧಿ, ಕೆಂಡಸಂಪಿಗೆಯ ವೆಬ್ ಮ್ಯಾಗಜಿನ್‌ಗಳಲ್ಲಿ ಕೃತಿಯ ಪರಿಚಯಾತ್ಮಕ ಲೇಖನ ಹಾಗೂ ಕೃತಿಯ ಆಯ್ದ ಭಗ ಲೇಖನಗಳು ಪ್ರಕಟಗೊಂಡು ಓದುಗರಿಗೆ ತಲಪಿಸುವ ಜವಾಬ್ದಾರಿ ನಿರ್ವಹಿಸಿವೆ.

ಚಂದನ ವಾಹಿನಿಯ ‘ಥಟ್ ಅಂತ ಹೇಳಿ’ ಕಾರ್ಯಕ್ರಮದ ಪಾಲು ದೊಡ್ಡದು. ಆ ಕಾರ್ಯಕ್ರಮದವು ಕೆಂಗುಲಾಬಿ ಕೃತಿಯನ್ನು ಪರಿಚಯಿಸಿದ್ದಲ್ಲದೆ ನನ್ನನ್ನೆ ಕರೆಸಿ ಕೃತಿ ಬಗ್ಗೆ ಮಾತಾಡಲು ಅವಕಾಶ ಮಾಡಿಕೊಟ್ಟಿದ್ದಾರೆ.

ಪ್ರಥಮ ನಿರೂಪಣೆಯ ಅವಾಂತರ: ಕೃತಿಗೆ ಕಾದಂಬರಿ ಎಂದು ಹೆಸರಿಟ್ಟಿದ್ದರೂ ಕೂಡ ಅದು ನನ್ನದೆ ಆತ್ಮಕಥೆಯೆಂದೂ ತಪ್ಪಾಗಿ ಭಾವಿಸಿ ಕೆಲವು ಕರೆಗಳು ಬಂದವು ಒಂದು ವೇಳೆ ಇದು ಆತ್ಮಕಥೆಯಾಗಿದ್ರೆ ಈ ಕೃತಿಗೆ ಇನ್ನಷ್ಟು ತೂಕ, ಮತ್ತಷ್ಟು ಪ್ರಚಾರ ಸಿಗುತ್ತಿತ್ತು. ನಾನು ಮೊದಲನೆ ಕೃತಿಯಲ್ಲಿಯೇ ಹೇಳಿಕೊಂಡಂತೆ ನಮ್ಮ ಭಾಗದ ಎಳೆಯ ಹುಡುಗರು ಪತ್ತೆಯೇ ಇಲ್ಲದಂತೆ ಮಾಯವಾಗುತ್ತಿದ್ದುದರ ಹಿಂದಿನ ತಳಮಳ, ಎನ್‌ಜಿಓಗಳಲ್ಲಿ ಕೆಲಸ ಮಾಡುವಾಗಿನ ಜೀವಂತ ಶಾರಿಯರ ಅನುಭವಗಥೆಗಳು ಮತ್ತು ಓದುವುದರಿಂದ ದಕ್ಕಿದ ಒಳಸುಳಿಗಳನ್ನು ‘ಶಾರಿ’ ಎಂಬ ಒಂದೆ ಪಾತ್ರಕ್ಕೆ ಅಳವಡಿಸಿ ಈ ಕೃತಿ ರಚಿಸಿದ್ದೇನೆ.

ಚಂದನ ವಾಹಿನಿಯಲ್ಲಿ ಕೃತಿ ಪರಿಚಯ ಪ್ರಸಾರವಾದ ಮರುದಿನವಂತೂ ನೀವು ನಿಜವಾಗಲೂ ದೇವದಾಸಿ ಕುಟುಂಬದವರೇ ಎಂದು ಪ್ರಶ್ನಿಸುವ ಕರೆಗಳು ಬಂದವು. ನಾನು ಅವರಿಗೆ ಸ್ಪಷ್ಟನೆ ನೀಡಿ ಸಾಕಾಯಿತು. ಒಬ್ಬನಂತೂ ನಿಮ್ಮನ್ನು ದೇವದಾಸಿ ಮಗನೆಂದೂ ಪರಿಚಯಿಸಿದವರ ವಿರುದ್ಧ ಮಾನನಷ್ಟ ಮೊಖದ್ದಮೆ ಹೂಡಿ ಎಂದು ತನ್ನ ಅತಿ ಬುದ್ಧಿವಂತಿಕೆಯನ್ನು ತೋರಿಸಿದ. ನಾನು ನನ್ನ ಇರಿಸುಮುರಿಸುನ್ನು ಪ್ರಕಟಿಸುತ್ತಲೇ ನಾನು ಹಾಗೇನಾದರೂ ಮಾಡಿದರೆ ದೇವದಾಸಿಯ ಮಗನು ನ್ಯಾಯಯುತ ಬದುಕುವ ಹಕ್ಕಿಗೆ ಅವಮಾನ ಮಾಡಿದಂತಾಗುತ್ತದೆ. ಅದು ಗೊತ್ತಾಗದೆ ಘಟಿಸಿರುವಂಥದ್ದು ಎಂದು ಸ್ಪಷ್ಟಪಡಿಸಿದ ನಂತರ ಆತ ತೆಪ್ಪಗಾದ.

ನಾನು ಲಂಕೇಶ್ ಅವರ ಅಕ್ಕ, ಶಿವರಾಮ ಕಾರಂತರ ಮೈ ಮನಗಳ ಸುಳಿಯಲಿ ಬರುವ ಪಾತ್ರಗಳ ಪ್ರಥಮ ನಿರೂಪಣೆಯಿಂದ ಪ್ರೇರಿತನಾಗಿ ಬರೆದಿರುವಂಥದ್ದು. ಕಥೆಯ ಪಾತ್ರವೇ ನಾನಾಗಿ ಹೇಳಿದರೆ, ಗೆಳೆಯನೊಬ್ಬ ಪಕ್ಕದಲ್ಲಿ ಕುಳಿತು ತನ್ನ ಕಷ್ಟಸುಖಗಳನ್ನು ಹೇಳಿಕೊಳ್ಳುವಾಗಿನ ಆಪ್ತತೆ ಇರುತ್ತದೆ ಎಂದು ನಾನು ಈ ತಂತ್ರವನ್ನು ಅನುಸರಿಸಿದ್ದೇನೆ ಅಷ್ಟೆ. ಇಲ್ಲಿನ ಕೇಂದ್ರ ಪಾತ್ರಗಳೆಲ್ಲವೂ ತಮ್ಮ ಗತಿಸಿದ ಕಥೆ ತಾವೇ ಹೇಳುತ್ತಲೇ, ಹಳೆಯ ನೆನಪುಗಳನ್ನು ಕೆದಕುತ್ತಲೇ ಕಥೆಯನ್ನು ಬೆಳೆಸುತ್ತವೆ.

ಹನುಮಂತ ಹಾಲಿಗೇರಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

5 Comments
Oldest
Newest Most Voted
Inline Feedbacks
View all comments
ಕೆ.ಎಂ.ವಿಶ್ವನಾಥ

P { margin-bottom: 0.21cm; }A:link { }

 
ಮಾನ್ಯರೆ,
ಈ ಬರವಣಿಗೆಯ ಭಾವನೆಯೆ ಹಾಗೆ , ಯಾವಾಗ ನಮ್ಮ ಭಾವನೆ ಮೂಡುತ್ತೊ ಆಗ ಬರೆಯಬೇಕು ಎನ್ನುವ ಆಸೆ ಹುಟ್ಟುತ್ತದೆ . ನಮಗೆ ಯಾವ ಕ್ಷೇತ್ರ ಆಸಕ್ತಿ ಎಂದು ಅನಿಸುತ್ತದೆಯೊ ಅಲ್ಲಿ ನೆಲೆಯೂರುತ್ತದೆ.. ಕೆಲವೊಮ್ಮೆ ಸರಿತಪ್ಪುಗಳ ತಾಳ ಹಾಕುತ್ತದೆ . ಕೆಲವೊಮ್ಮೆ ಇದರಿಂದ ಯಾರಿಗಾದರು ಧಕ್ಕೆಯಾಗುವುದೆ ಎನ್ನುವ ದುಗುಡ ಮೂಡುತ್ತದೆ . ನಿಮ್ಮ ಈ ಕೆಂಗುಲಾಬಿ ಕುತುಹಲ ಮೂಡಿಸಿದೆ ಹೆಗೋ ಪಂಜುವಿನಲ್ಲಿ ಪ್ರಕಟವಾಗಲಿದೆಯಲ್ಲ ಕಾದು ಓದಿ ನೋಡುವೆ
 
ಈ ಕಾದಂಬರಿ ಆಯ್ಕೆ ಮಾಡಿರುವ ಕ್ಷೇತ್ರ ತುಂಬಾ ಉತ್ತಮ ಹಾಗೂ ಅದರ ಒಂದು ತುಣುಕು ನೀಡಿ ಓದಬೇಕು ಎನ್ನುವ ಆಸೆ ಹುಟ್ಟಿಸಿದೆ ………..
" ನಿಮ್ಮ ಈ ಬರವಣಿಗೆ ನೋಡಿ ನನ್ನ ಅಪ್ರಕಟಿತ ಪುಸ್ತಕ " ಪೇಪರ್ ಪಾರು " ನೆನಪಾಯಿತು . ಸದ್ಯಕ್ಕೆ ನಾನು ಮಾತ್ರ ಓದಿ ಸಂತೋಷ ಪಡುತ್ತೇನೆ. ಪ್ರಕಟಿಸಲು ಭಯವಾಗುತ್ತಿದೆ…………..

Jayaprakash Abbigeri
Jayaprakash Abbigeri
11 years ago

ಸ್ನೇಹಿತ ಹನುಮಂತ ಹಾಲಗೇರಿಯವರ 'ಕೆಂಗುಲಾಬಿ' ಕೇವಲ ಪುಸ್ತಕರೂಪದಲ್ಲಿ  ಬಂದು ತನ್ನ ಸುವಾಸನೆಯನ್ನು ಬೀರುತ್ತಾ, ಕನ್ನಡ ನಾಡಿನವರಿಗೆ ಮಾತ್ರ ಸೀಮಿತಗೊಂಡಿದ್ದನ್ನು ಹೆಮ್ಮೆಯ 'ಪಂಜು' ಪತ್ರಿಕೆಯು ಸರಣಿ ರೂಪದಲ್ಲಿ ಪ್ರಕಟಿಸುತ್ತಿರುವುದು ನನಗಂತೂ ಖುಷಿಯ ಸಂಗತಿ. ಪತ್ರಿಕೆಯ ಪುಟಗಳಲ್ಲಿ ಮುಂದಿನ ದಿನಗಳಲ್ಲಿ 'ಕೆಂಗುಲಾಬಿ'ಯನ್ನು ಓದಿದ ನಂತರವೇ ಉಳಿದ ಕಡೆಗೆ mouseನ್ನು click ಮಾಡಲೇಬೇಕಾಗುತ್ತದೆ. ಅಂತಹ ಮಹತ್ವದ ಕಾದಂಬರಿಯನ್ನು ಸಮಕಾಲೀನ ಸಂದರ್ಭದಲ್ಲಿ ಪ್ರಕಟಿಸುತ್ತಿರುವುದು ಸಂಭ್ರಮದ ವಿಷಯವೇ ಸರಿ. ಕೃತಿಯ ಕರ್ತೃ ಮತ್ತು ಪಂಜು ಬಳಗದ ಗೆಳೆಯರಿಗೆ ಅಭಿನಂಧನೆಗಳು ಮತ್ತು ಧನ್ಯವಾದಗಳು !

Rukmini Nagannavar
Rukmini Nagannavar
11 years ago

ondu hosa kadambariyannu parichayisi kottiruva panju balaga mattu kadambariya kartru ellarigoo dhanyavadagalu …
nimma ankagaligaagi naanu kataralu

ಹಿಪ್ಪರಗಿ ಸಿದ್ದರಾಮ್
ಹಿಪ್ಪರಗಿ ಸಿದ್ದರಾಮ್
11 years ago

ಆತ್ಮೀಯರೇ, ಕೆಂಗುಲಾಬಿಯ ಕಂಪು ಕೇವಲ ಕರುನಾಡಿಗೆ (ಪುಸ್ತಕ ರೂಪದಲ್ಲಿ) ಮಾತ್ರ ಸೀಮಿತವಾಗಿರುವುದನ್ನು ಮನಗಂಡು, ವಿಶ್ವದಾದ್ಯಂತ ಚದುರಿ ಹೋಗಿರುವ ಕನ್ನಡ ಕಾದಂಬರಿ ಪ್ರೀಯರಿಗೆ ತಲುಪಿಸುವ ಸ್ತುತಾರ್ಹ ಕೆಲಸಕ್ಕೆ ಮುಂದಾಗಿರುವ ಹಮ್ಮೆಯ ಪತ್ರಿಕೆ 'ಪಂಜು'ವಿನ ನಲ್ಮೆಯ ಗೆಳೆಯರ ಬಳಗಕ್ಕೆ ಹೃತ್ಪೂರ್ವಕ ಧನ್ಯವಾದಗಳು.

ಇಂತಹ ಪ್ರಕಟಣೆಗೆ ಸಮ್ಮತಿ ನೀಡಿದ ಕಾದಂಬರಿಕಾರ, ಸ್ನೇಹಿತರಾದ ಹನುಮಂತಣ್ಣ ಹಾಲಗೇರಿಯವರ ಹೃದಯ ವೈಶಾಲ್ಯತೆಗೆ ಅಭಿನಂಧನೆಗಳು…

ಕೆಂಗುಲಾಬಿಯ ಕಂಪು ವಿಶ್ವದಾದ್ಯಂತ ಬೀರಲಿ…ಶುಭಾಶಯಗಳು!

ಹನುಮಂತ ಹಾಲಿಗೇರಿ
ಹನುಮಂತ ಹಾಲಿಗೇರಿ
11 years ago

ಆತ್ಮೀಯ ಸಿದ್ದರಾಮಣ್ಣ, ನಿಮ್ಮ ಪ್ರೀತಿ ದೊಡ್ಡದು.

5
0
Would love your thoughts, please comment.x
()
x