“ಆಗ್ಲಿಲ್ವಾ ತಾಯೀ ನಿನ್ನ ಅಲಂಕಾರ? ಅದೇನು ಕಾಲೇಜಿಗೆ ಹೋಗ್ತಿಯೋ ಇಲ್ಲಾ ಫ್ಯಾಷನ್ ಪೆರೇಡಿಗೋ.. ಯಾವ ಹುಡುಗನನ್ನು ಕೊಲ್ಲಲು ಇಷ್ಟೊಂದು ಭಿನ್ನಾಣ? ಇದೇ ಹೊತ್ತಲ್ಲಿ ಪುಸ್ತಕ ಬಿಡ್ಸಿದ್ರೆ ನೀನು ರ್ಯಾಂಕ್ ಬರ್ತಿದ್ದೆ ಬಿಡು” ಎಂದ ಅತ್ರಿ.
“ಹೋಗೋ.. ನೀನು ಮೇಕಪ್ಪು ಮಾಡದವನು ಬಾರೀ ಓದಿ ಕಡಿದು ಕಟ್ಟೆ ಹಾಕಿದ್ದೀಯಲ್ಲಾ.. ಸಾಕು..” ಎಂದು ಕಿಚಾಯಿಸಿದಳು ಗಾನ.
“ಯಾಕೇ? ನಂಗೇನಾಗಿದೆ ..? ಓದ್ಲಿಲ್ಲ ಅನ್ನೋದು ಬಿಟ್ರೆ ಏನು ಕಮ್ಮಿ ಇದೆ ಹೇಳು.. ಹೊಲದಲ್ಲಿ ಚೆನ್ನಾಗಿ ದುಡೀತೀನಿ .. ಚೆನ್ನಾಗಿ ತಿಂತೀನಿ.. ಆರಾಮದಲ್ಲಿರ್ತೀನಿ ರಾಜನ ಹಾಗೆ ..”
“ಕಮ್ಮಿ ಏನೂ ಇಲ್ಲಪ್ಪ.. ಎಲ್ಲಾ ಜಾಸ್ತಿನೇ ಇದೆ.. ಅಲ್ಲಿ ಹೊಸ ವೆಯಿಂಗ್ ಮೆಷೀನ್ ಮೊನ್ನೆಯಷ್ಟೇ ತರ್ಸಿದ್ದೆಯಲ್ಲಾ.. ಒಳ್ಳೇ ಮೆಣಸು ತೂಗೋಕೇ ಅಂತ.. ಅದ್ರಲ್ಲಿ ಒಮ್ಮೆ ತೂಕ ನೋಡ್ಕೋ.. ಆವಾಗ ಗೊತ್ತಾಗುತ್ತೆ ಎಷ್ಟು ಚೆನ್ನಾಗಿ ತಿಂತೀಯ ಅಂತ..”
“ಅಮ್ಮಾ ತಾಯೀ.. ಏಳು ಮಲ್ಲಿಗೆ ತೂಕದ ಸುಕುಮಾರಿ.. ತಾವು ನನ್ನ ಬೈಕಿನ ಹಿಂದಿನ ಸೀಟನ್ನೇರಿ ನನ್ನ ಜನ್ಮ ಪಾವನ ಮಾಡಿ. ಇಲ್ಲದಿದ್ದರೆ ಇವತ್ತಿನ ಕಾಲೇಜಿನ ಮೊದಲನೆ ಪಿರಿಯೆಡ್ ಮಿಸ್ ಆಗುತ್ತೆ.. ಆಮೇಲೆ ಲೇಟ್ ಆಯ್ತು ಬೇಗ ಗಾಡಿ ಓಡ್ಸು ಅಂತ ನನ್ನ ತಲೆ ತಿನ್ಬೇಡ. ನನ್ನ ಗಾಡಿಯ ವೇಗದ ಮಿತಿ ನಲ್ವತ್ತು ಕಿ ಮೀ ಅಷ್ಟೇ.. ಗೊತ್ತಾಯ್ತಾ..”
“ಓಹೋ .. ನನ್ನತ್ರ ಬಿಡ್ಬೇಡ ಇದೆಲ್ಲಾ ಸುಳ್ಳು.. ಮೊನ್ನೆ ನೀನೇ ಮನೆಗೆ ಲೇಟ್ ಮಾಡಿ ಬಂದ್ಯಲ್ಲಾ ಆಗ ಮೀಟರ್ ಎಷ್ಟ್ರಲ್ಲಿತ್ತು ನೋಡಿದ್ಯಾ?”
“ನೋಡೇ.. ನಿನ್ ಜೊತೆ ಜಗಳ ಆಡೋ ಮೂಡಲ್ಲಿಲ್ಲಮ್ಮಾ ನಾನೀಗ.. ಗಾಡಿ ಇನ್ನೂ ಸ್ಟಾರ್ಟಲ್ಲೇ ಇದೆ..ಕಾಣ್ಸಲ್ವಾ.. ಹತ್ತು ಬೇಗ..”
“ಓಹೋ.. ನಾನೆಲ್ಲಿ ಹೇಳಿದೆ ಈಗ ನಿನ್ನ ಗಾಡಿಯಲ್ಲಿ ಬರ್ತೀನಿ ಅಂತ.. ವಿಕಾಸ್ ಹೊಸಾ ಕಾರ್ ತೆಗೊಂಡಿದ್ದಾನೆ. ಇವತ್ತು ಅವನೇ ಬರ್ತಾನೆ ಕರ್ಕೊಂಡು ಹೋಗೋಕೆ.. ತಾವು ತಮ್ಮ ಪಾಡಿಗೆ ಕೆಲ್ಸ ನೋಡ್ಕೋಬಹುದು.. ಅದೂ ಅಲ್ಲದೇ ಇವತ್ತಿನ ಆಗಸ ನೋಡಿದರೆ ಮಳೆ ಬರೋ ತರ ಇದೆ.. ಈ ಬೈಕಲ್ಲಿ ಒದ್ದೆಮುದ್ದೆಯಾಗಿ ಕಾಲೇಜಿಗೆ ಹೋಗೋ ಗ್ರಾಚಾರ ನಂಗ್ಯಾಕೆ..”
“ಹೋ.. ಇದು ಬೇರೆ.. ಈ ವಿಷಯ ಮೊದಲೇ ಹೇಳಿದ್ರೆ ಇಲ್ಲಿವರೆಗೆ ಬರೋ ತೊಂದರೆ ತೆಗೊಳ್ತಿರಲಿಲ್ಲ.. ಏನೋ ಆಂಟಿ ಬೇಜಾರು ಮಾಡ್ಕೊಳ್ತಾರೆ ಅಂತ ದಿನಾ ನಿನ್ನನ್ನು ಕರ್ಕೊಂಡು ಹೋಗೋಕೆ ಬರ್ತೀನಿ ಅಷ್ಟೇ.. ಇಲ್ಲಾಂದ್ರೆ ಬೆಳ್ ಬೆಳಗ್ಗೆ ನಿನ್ನಂತಹ ಕೂಗು ಮಾರಿಯ ಮುಖ ನೋಡೋ ಹಣೇಬರಹ ನಂಗ್ಯಾಕೆ ಹೇಳು..”
“ಏನಂದೆ … ನಾನು ಕೂಗುಮಾರಿನಾ? ಹಾಗಿದ್ರೆ ನೀನು ಬ್ರಹ್ಮ ರಾಕ್ಷಸ..”
“ಬಿಡು.. ನಿನ್ನ ಸಂತಾನಿಗಳ ಹೆಸರನ್ನು ನಂಗಿಡೋದು ಬಿಟ್ರೆ ನಿನ್ನಿಂದ ಹೆಚ್ಚಿದನೇನನ್ನು ಬಯಸಬಹುದು ಹೇಳು..”
“ನಿನ್ ಜೊತೆ ಮಾತಾಡ್ತೀನಲ್ಲಾ.. ನಂಗೆ ಬುದ್ಧಿ ಇಲ್ಲ .. ಈ ಕರ್ಮದ ವಿಕಾಸ್ ಯಾಕೆ ಇನ್ನೂ ಬಂದಿಲ್ಲಾ..”
“ಅಬ್ಬಾ ಈಗ್ಲಾದ್ರು ಸತ್ಯ ಗೊತ್ತಾಯ್ತಲ್ಲ … ನಿಂಗೆ ಬುದ್ಧಿ ಇಲ್ಲ ಅಂತ … ನಾನು ಹೇಳಿದ್ರೆ ಬಯ್ತಾ ಇದ್ದೆ. ಈಗ ನೀನಾಗಿ ನೀನೆ ಒಪೆÇ್ಕಂಡಿದ್ದೀಯಾ.. ಕಂಗ್ರಾಟ್ಸ್ ..”
“ನಂಗೆ ಬರೋ ಕೋಪದಲ್ಲಿ ನಿನ್ನ ಏನ್ ಮಾಡ್ತೀನಿ ಗೊತ್ತಾ.. ಸುಮ್ನಿದ್ರೆ ಸರಿ.. ಇಲ್ಲಾಂದ್ರೆ ಅಪ್ಪನ್ನ ಕರೀತೀನಿ..”
“ಬೇಡಮ್ಮಾ ತಾಯೀ.. ಮೊದ್ಲೇ ಖಾಲಿ ಹೊಟ್ಟೇಲಿ ನಿನ್ ಜೊತೆ ಮಾತಾಡಿ ಸುಸ್ತಾಗಿದ್ದೀನಿ.. ಇನ್ನು ಅವ್ರ ಉಪದೇಶಾಮೃತಗಳಿಂದ ಹೊಟ್ಟೆ ತುಂಬಿಸಿಕೊಳ್ಳೋದಂತೂ ನನ್ನಿಂದ ಸಾಧ್ಯ ಇಲ್ಲಾ.. ಹೇಗೋ ಮಳೆ ಬರೋ ತರ ಇದೆ ಅಂತೀಯಾ.. ನಾನಂತೂ ಮನೆಗೆ ಹೋಗ್ಬಿಡ್ತೀನಿ.. ಅತ್ತೂ ಕರೆದು ಯಾಕೆ ನಿನ್ನತ್ರ ಔತಣ ಹಾಕಿಸಿಕೊಳ್ಳಲಿ”
“ಅಯ್ಯೋ.. ಖಾಲಿ ಹೊಟ್ಟೇನಾ..? ಯಾಕೋ ತಿಂಡಿ ತಿಂದಿಲ್ಲ??..”
“ತಿಂದಿಲ್ಲ ಅಷ್ಟೇ..”
“ಅದನ್ನೇ ಯಾಕೆ ಅಂತ ಕನ್ನಡದಲ್ಲಿ ಕೇಳ್ತಾ ಇರೋದು..”
“ಕನ್ನಡದಲ್ಲಿ ಕೇಳಿದ್ರೂ ಇಂಗ್ಲೀಷಿನಲ್ಲಿ ಕೇಳಿದ್ರೂ ಉತ್ತರ ಒಂದೇ.. ಹಸಿವಿಲ್ಲ..”
“ಯಾಕೋ ಅತ್ರಿ.. ಏನಾಯ್ತು.. ನೋಡು ಎಷ್ಟೊಂದು ಇಳ್ದೋಗಿದ್ದೀಯಾ ನೀನು ಇತ್ತೀಚೆಗೆ.. ನಿಜಕ್ಕೂ ಏನಾಯ್ತೋ..”
“ಹೌದಾ .. ಆವಾಗ ತಾನೇ ತೂಕ ನೋಡ್ಕೋ ಅಂದ್ಯಲ್ಲಾ..”
“ಹೇ ಹೋಗೋ.. ತಮಾಷೆಗೆ ಅಂದಿದ್ದು.. ಅದ್ಸರಿ ನಿಂಗ್ಯಾಕೆ ಹಸಿವಿಲ್ಲ ಅದನ್ನು ಹೇಳಿ ಮೊದ್ಲು..”
“ಅದೇ.. ಮೊನ್ನೆ ಜ್ವರ ಬಂದಿತ್ತಲ್ಲಾ.. ಅದಾದ ನಂತ್ರ ಯಾಕೋ ಹಸಿವೇ ಇಲ್ಲ ಕಣೆ”
“ಥೂ ಹೋಗೋ ನೀನು ..ನಿಂಗೆ ನಾನಂದ್ರೆ ಸ್ವಲ್ಪನೂ ಇಷ್ಟ ಇಲ್ಲ..” (ಕಣ್ಣಲ್ಲಾಗಲೇ ಜಿನುಗಹೊರಟ ಹನಿಯೊಂದು ಮುಂದಿನ ಮಾತಿಗಾಗಿ ಕಾಯುತ್ತಿತ್ತು)
“ಅರ್ರೇ.. ನಂಗೆ ಜ್ವರ ಬರೋಕೂ ನಿನ್ನ ಇಷ್ಟ ಆಗ್ದೇ ಇರೋಕೂ ಏನೇ ಸಂಬಂಧ..”
(ಪಳಕ್ಕೆಂದು ಹೊರ ಜಾರಿದ ಕಣ್ಣಹನಿಯನ್ನು ತಡೆಯುವ ಗೋಜಿಗೆ ಹೋಗದೇ)“ಮತ್ತೇ.. ನಿಂಗೆ ಜ್ವರ ಬಂದಿದೆ ಅಂತ ಹೇಳ್ಳೇ ಇಲ್ಲ ನೀನು..ನಾನು ಅಷ್ಟು ದೂರದವಳಾದೆನಾ ನಿಂಗೆ”
( ಅವಳ ನವಿರಾದ ಕೆನ್ನೆಯ ಮೇಲೆ ನಿಧಾನಕ್ಕೆ ಜಾರುತ್ತಿರುವ ಕಣ್ಣ ಹನಿಯನ್ನು ತನಗೆ ಬೇಕಾದಂತೆ ಒರೆಸುವ ಅದೃಷ್ಟವನ್ನು ಕಳೆದುಕೊಳ್ಳದೇ..) “ಮೊನ್ನೆನೇ ಹೇಳಿದ್ದೆ ಅಲ್ವಾ ಚಿನ್ನೂ .. ಬೈಕಲ್ಲಿ ಬರ್ತಾ ನೀನು ನನ್ನ ಸೊಂಟ ಹಿಡ್ಕೊಂಡು ಕುಳಿತಿರುವಾಗ..”
“ಹೌದಾ.. ಯಾವಾಗ್ಲೋ ಅದು..? ಛೇ..ನಾನೆಂತಾ ಮಂಕು ನೋಡು … ಗೊತ್ತೇ ಆಗ್ಲಿಲ್ಲ ಕಣೋ.. ಏನಂದಿದ್ದೆ ಹೇಳಿ ನೀನು?”
“ಯಾಕೋ ಮೈಯೆಲ್ಲಾ ಬಿಸಿ ಬಿಸಿ ಆಗ್ತಾ ಇದೆ ಅಂದೆ.. ಅದ್ಕೇ ನೀನು ಹೋಗೋ.. ಈ ತರ ಪೋಲಿ ಮಾತೆಲ್ಲ ಆಡೋ ಹಾಗಿದ್ರೆ ನಿನ್ ಬೈಕಲ್ಲೇ ಬರಲ್ಲ ಅಂದೆ.. ಅವತ್ತು ನಂಗೆ ಜೋರಾಗಿ ಜ್ವರ ಬರ್ತಾ ಇತ್ತು..”
“ಅಯ್ಯೋ.. ಹೌದೇನೋ.. ನಾನೇನೋ ಬೇರೆನೇ ಅಂದ್ಕೊಂಡಿದ್ದೆ..”
“ಈ ಹುಡ್ಗೀರ ತಲೇಲಿ ಇರೋದೇ ಇಂತಾ ಆಲೋಚನೆಗಳು.. ಸುಮ್ ಸುಮ್ನೆ ಹುಡುಗ್ರು ಕೆಟ್ಟೋರು ಅಂತೀರಾ..”
“ನೋಡು .. ನನ್ನ ರೇಗಿಸ್ಬೇಡ.. ಈಗೇನೂ ತಿಂಡಿ ತಿಂತೀಯಾ..ಇಲ್ಲಾ ಹೀಗೆ ತಲೆ ಹರಟೆ ಮಾಡ್ಕೊಂಡು ಕೂತಿರ್ತೀಯಾ?”
“ತಿಂಡಿ ಬೇಡಾ..”
“ಸಾಕು ಸ್ಟೈಲು ಎದ್ದು ನಡಿ ಒಳಗೆ.. ಅಮ್ಮ ಇವತ್ತು ಅಕ್ಕಿ ರೊಟ್ಟಿ ಚೀನೀಕಾಯಿ ಪಲ್ಯ ಮಾಡಿದ್ದಾರೆ. ಎಷ್ಟು ರುಚಿ ಇದೆ ಗೊತ್ತಾ.. ಬಾ.. ಹಾಕ್ಕೊಡ್ತೀನಿ..”
“ಬೇಡಾ.. ನೀನು ವಿಕಾಸ್ ಜೊತೆ ಕಾಲೇಜಿಗೆ ಹೋಗು.. ನಂಗ್ಯಾಕೋ ಸುಸ್ತು ಅನ್ನಿಸ್ತಿದೆ. ಮನೇಗೆ ಹೋಗಿ ರೆಸ್ಟ್ ಮಾಡ್ತೀನಿ..”
“ನೋಡು ನೀನೀಗ ಒಳಗೆ ಬಂದು ತಟ್ಟೆ ಎದುರು ಕೂರ್ತೀಯಾ ಇಲ್ವಾ.. ನೋಡಿಲ್ಲಿ ನನ್ನ ಕೈಯಲ್ಲಿ ತಿಂಡಿಯ ಘಮ ಇನ್ನೂ ಹೋಗಿಲ್ಲ..”
“ಅಯ್ಯೋ.. ಹೌದಲ್ವಾ.. ಎಲ್ಲಿ ನೋಡ್ತೀನಿರು.. ಆಹಾ.. ಎಷ್ಟು ಮೆತ್ತಗಿದೆ ಕೈ.. ಮತ್ತೇ ನಿಂಗೆ ಕಾಲೇಜಿಗೆ ಲೇಟ್ ಆಗಲ್ವಾ.. ವಿಕಾಸ್ ನಿನ್ನನ್ನಿಲ್ಲಿ ಕಾಣದೇ ಹಾಗೇ ಹೋಗ್ಬಿಟ್ರೆ..”
“ಯಾವ ವಿಕಾಸ್ ಬರಲ್ಲ.. ಸುಮ್ನೆ ನಿನ್ನ ರೇಗ್ಸಕ್ಕೆ ಹೇಳ್ದೆ ಅಷ್ಟೇ.. ಇವತ್ತು ಫಸ್ಟ್ ಅವರ್ ಕ್ಲಾಸ್ ಇಲ್ಲ ನಂಗೆ.. ಅಷ್ಟೇ ಯಾಕೆ ಇವತ್ತಿಡೀ ಕಾಲೇಜಿಗೆ ಹೋಗದಿದ್ರೂ ನಡಿಯುತ್ತೆ..”
“ಹೌದಾ.. ಹಾಗಿದ್ರೆ ಒಂದು ಲಾಂಗ್ ಡ್ರೈವ್ ಹೋಗಿ ಬರೋಣ ಬಾ ಬೈಕಲ್ಲಿ..”
“ಬೇಡ ಕಣೋ.. ನಿಂಗಿನ್ನು ಜ್ವರ ಬಂದಿದ್ದು ಕಡಿಮೆ ಆಗಿಲ್ಲ ಅಂತೀಯಾ.. ಹೀಗೆಲ್ಲಾ ಗಾಳೀಲಿ ಓಡಾಡಿದ್ರೆ ಜ್ವರ ಇನ್ನೂ ಹೆಚ್ಚಾಗುತ್ತೆ ಗೊತ್ತಾ.. ನಡೀ ಒಳಗೆ..”
“ನಿಂಗೆ ನನ್ನ ಕಂಡ್ರೆ ಎಷ್ಟು ಇಷ್ಟ ಅಲ್ವಾ ಚಿನ್ನೂ..”
“ಹೂಂ..”
“ಹಾಗಿದ್ರೆ ಒಂದು ಮಾತು ಹೇಳಲಾ..”
“ಹೂಂ.. ಹೇಳೋ.. ಅದಕ್ಕೇನು ಕಣಿ ಕೇಳ್ಬೇಕಾ..”
“ಮತ್ತೇ.. ಮತ್ತೇ.. ನಂಗೆ ಮೊನ್ನೆ ಮೈ ಬಿಸಿಯೇರಿದ್ದು ಜ್ವರದಿಂದ ಅಲ್ಲ ಕಣೇ..”
“ಏನಂದೇ ಪಾಪಿ.. ಹೀಗೇ ನೀನು ಸುಳ್ಳು ಹೇಳ್ತಾ ಇರು .. ಒಂದು ದಿನ ನನ್ನ ಕೈಯಲ್ಲಿ ಮರ್ಡರ್ ಆಗೋಗ್ತೀಯಾ..”
“ಈ ಕೋಮಲ ಕೈಗಳು ಏನಿದ್ರೂ ಹೊಡೆಯಲಿಕ್ಕೆ ಇರೋದಲ್ಲಾ ಚಿನ್ನು..”
“ಬಿಡು ನನ್ನ ಕೈ..”
“ಇಲ್ಲಿ ನೋಡು ನನ್ನ ಕೈ ಕೂಡಾ ಘಮ್ ಅಂತಿದೆ..”
“ಅಂದ್ರೇನು ಈಗ.. ನಂಗೇನೂ ನಿನ್ನ ಕೈ ಹಿಡ್ಕೋಳ್ಬೇಕಿಲ್ಲ ಈಗ”
“ಏನೂ ಇಲ್ಲಾ.. ನಮ್ಮ ಮನೇಲೂ ಇವತ್ತು ಅಕ್ಕಿ ರೊಟ್ಟಿ ಚೀನೀಕಾಯಿ ಪಲ್ಯ.. ಸಕತ್ತಾಗಿ ಬಾರ್ಸಿದ್ದೆ.. ತಿಂದಿದ್ದು ಹೆಚ್ಚಾಗೇ ಸುಸ್ತಾಗ್ತಿರೋದು..”
“ನಿನ್ನಾ.. ಏನ್ ಮಾಡ್ತೀನಿ ನೋಡು.. ಕೋತಿ ವಂಶದ್ದು..”
(ಕಥೆ ಮುಗಿದರೂ ಜಗಳ ಮುಂದುವರಿಯುತ್ತದೆ … ಪ್ರೇಮಿಗಳಿರುವವರೆಗೂ .. ಪ್ರೇಮ ಇರುವವರೆಗೂ..)
–ಅನಿತಾ ನರೇಶ್ ಮಂಚಿ
*****
ಈ ರೀತಿ ಬರೆಯೋರಿರೋವರ್ಗೂ ನನ್ನಂತೆ ಓದುಗರೂ ಇರೋವರ್ಗೂ…….. ಮುಂದುವರೆಯುತ್ತೆ….
ಪಕ್ಕಾ ಸಿನೆಮಾ ಮಾಡ್ ಬೌದು!!
tnq 🙂