ಅನಿ ಹನಿ

ಹನಿಮೂನ್: ಅನಿತಾ ನರೇಶ್ ಮಂಚಿ


ಸಂಜೆಯ ಹೊತ್ತು.. ಹೂಗಿಡಗಳ ಮೇಲಿನಿಂದ ಬೀಸಿ ಬರುವ ಗಾಳಿ ಪಾರಿಜಾತದ ಕಂಪನ್ನು ಒಳ ಹೊತ್ತು ಬರುತ್ತಿತ್ತು.ಅಂಗಳದ ಮೂಲೆಯಲ್ಲಿ ಅರಳಿದ ಸಂಜೆ ಮಲ್ಲಿಗೆಯನ್ನು ನೇವರಿಸುತ್ತಾ ’ಜೀವ ತುಂಬಿ ಭಾವ ತುಂಬಿ ಮನದ ದೀಪ ಬೆಳಗಿ ಬಾ..’ ಎಂದು ಹಾಡುತ್ತಿರುವಾಗಲೇ  ದೀಪ ಹೊತ್ತಿಸುವ ಹೊತ್ತಾಯಿತೆಂದು ನೆನಪಾಗಿದ್ದು. ಒಳಗಡಿಯಿಟ್ಟೆ. ಮಬ್ಬುಗತ್ತಲಲ್ಲಿ ತಲೆ ತಗ್ಗಿಸಿ ಕೂತಿದ್ದ ಆಕಾರವೊಂದನ್ನು ಕಂಡು ಅಲ್ಲಿಯವರೆಗಿದ್ದ ರೋಮ್ಯಾಂಟಿಕ್ ಮೂಡ್   ಒಮ್ಮೆಲೇ ಮಾಯವಾಗಿ  ಹೃದಯ ಹಾರಿ ಬಾಯಿಗೆ ಬರುವಂತಾಯಿತು. ನನ್ನನ್ನು ಕಂಡು ಪಕ್ಕನೇ ಎದ್ದ ಆಕಾರ ಪರಿಚಯದ್ದು ಅನ್ನಿಸಿ ಕೊಂಚ ಧೈರ್ಯ ತಂದುಕೊಂಡು ನೋಡಿದೆ. 

ಅರ್ರೇ..ಇವಳು ಪಂಕಜಾ ಅಲ್ವಾ.. ಮೊನ್ನೆ ಮೊನ್ನೆ ಹಸೆಮಣೆಯೇರಿದಾಗ ಹಚ್ಚಿದ ಅರಸಿನದ ಬಣ್ಣ ಇನ್ನೂ ಮಾಸಿಲ್ಲ. ಅವಳಾಗಿ ಅವಳೇ ಇಷ್ಟಪಟ್ಟು ಮನೆಯವರ ವಿರೋಧವನ್ನೆಲ್ಲಾ ತಣಿಸಿ ಮಣಿಸಿ ಆರು ವರ್ಷ ಅವನಿಗಾಗಿ ಕಾದು ಕೈ ಹಿಡಿದವಳು.ಮದುವೆಯಂತೂ ಬಹಳ ಅದ್ದೂರಿಯಿಂದಲೇ ಆಗಿತ್ತು. ಸುಂದರ ಜೋಡಿಯನ್ನು ಜೊತೆಯಾಗಿ ಕಂಡಾಗ ಎಲ್ಲರೂ ಆನಂದದಿಂದಲೇ ಇದ್ದಂತೆ ಕಂಡಿದ್ದರು. ಆದರೀಗ ಮದುವೆಯಾಗಿ ಮೂರು ದಿನ ಆಗುವಾಗಲೇ ಹೀಗೆ ಸಪ್ಪ ಮುಖ ಹಾಕಿ ಕೂತಿದ್ದಾಳೆಂದರೆ ಎಲ್ಲೋ ಏನೋ ಎಡವಟ್ಟಾಗಿದೆ ಎಂದು ತಾನೇ ಅರ್ಥ. ನನ್ನ ಹಿರಿತನ ಕೂಡಲೇ ಬಡಿದೆದ್ದು ನಿಂತಿತು. ದೀಪ ಹಾಕುವುದನ್ನು ಮರೆತು ಅವಳೆದುರು ಕೂತು ಸಲಹೆ ನೀಡಲು  ಗಂಟಲು ಸರಿ ಮಾಡಿಕೊಂಡೆ. 

ಅವಳೇ ’ ಅಕ್ಕಾ ದೀಪ ಹಾಕಿ.. ಹಾಗೇ ಒಂದು ಗ್ಲಾಸ್ ಬಿಸಿ ಬಿಸಿ ಚಹಾ ಕೂಡಾ ಬೇಕು.. ತಲೆಯೆಲ್ಲಾ ಚಿಟ್ಟು ಹಿಡಿದು ಹೋಗಿದೆ.’ ಅಂದಳು. 
ಹುಡುಗಿಯ ಮನದ ಮಾತುಗಳು ಹೊರ ಬರಲು ಹೊಟ್ಟೆಗೆ ಚಹಾ ಬೀಳುವುದು ಅನಿವಾರ್ಯವಾದ ಕಾರಣ  ಬೇಗನೇ ಒಳ ಹೋಗಿ ಚಹಾದ ಜೊತೆ ಕರಿದ ಖಾರದ ಅವಲಕ್ಕಿಯನ್ನು ತಟ್ಟೆಗೆ ತುಂಬಿ ತಂದೆ. 
ತಟ್ಟೆ ಖಾಲಿ ಮಾಡುವವರೆಗೆ  ಮಾತನಾಡದ ಹುಡುಗಿ ನಂತರ ಕೈ ಬಾಯಿ ಒರೆಸಿಕೊಳ್ಳುತ್ತಾ ನಿಧಾನಕ್ಕೆ ಬಾಯ್ತೆರೆದಳು. ’ಅಕ್ಕಾ ಈಗ ನೀವೇ ನಂಗೆ ಹೆಲ್ಪ್ ಮಾಡ್ಬೇಕು.. ಬೇರೆ ಯಾರಿಗೂ ಇದು ಸಾಧ್ಯ ಇಲ್ಲ’ ಅಂದಳು. 
ಆಹಾ ಪಕ್ಕದ ಮನೆ ಹುಡುಗಿ ನನ್ನ ಮೇಲಿಟ್ಟ ನಂಬುಗೆಗೆ ಎದೆ ತುಂಬಿ ಬಂತು. ’ ಏನು ಬೇಕು ಹೇಳಮ್ಮ’ ಅಂದೆ ರಕ್ಕಸರಿಗೆ ಬೇಡಿದ ವರವನ್ನು ಕೊಡುವ ಬ್ರಹ್ಮನ ಸ್ಟೈಲಿನಲ್ಲಿ. 
’ಏನೂ ಇಲ್ಲ ಅಕ್ಕ .. ನಿಮ್ಗೆ ಗೊತ್ತಲ್ಲ ನಮ್ಮ ಮದುವೆ ಮೊದಲು ಪ್ರೀತಿ ಮಾಡುತ್ತಿದ್ದರೂ  ಎಷ್ಟೆಲ್ಲಾ ಸಮಯ ಒಬ್ಬರಿಗೊಬ್ಬರು ನೋಡದೇ ದೂರ ದೂರವೇ ಇದ್ದೆವು ಅಂತ..’
 
ಹೌದಾ.. ಪ್ರತಿದಿನ ಇವರಿಬ್ಬರನ್ನು ಲೈಬ್ರರಿ ಮೂಲೆಯಲ್ಲಿ ಪಿಸಿಪಿಸಿ ಮಾಡುತ್ತಾ ನೋಡುತ್ತಿದ್ದವಳು ನಾನು ಮಾತ್ರ. ನಮ್ಮೂರ ಲೈಬ್ರರಿಗೆ ಬೇರೆ ಯಾರೂ ಹೋಗುವ ಸಾಹಸವೇ ಮಾಡದ ಕಾರಣ ಇದು ಇವರಿಬ್ಬರ ಪಿಸುನುಡಿಗೆ ಸರಿಯಾದ ಜಾಗವಾಗಿತ್ತು. ಆದರೂ ಈಗ ಅದನ್ನು ನೆನಪಿಸಿ ಹುಡುಗಿಯ ಮನಸ್ಸನ್ನು ಯಾಕೆ ಬೇಸರಗೊಳಿಸುವುದು ಎಂದುಕೊಂಡು ’ಹೌದೌದು.. ಈಗೇನಾಯ್ತು’ ಎಂದೆ.
’ಏನೂ ಇಲ್ಲ ಅಕ್ಕ.. ನಾಳೆ ನಾವಿಬ್ರೂ ಹನಿಮೂನ್ ಹೋಗ್ಬೇಕು ಅಂತ ಇದ್ದೀವಿ ಅಂದ್ಲು..’ 
ಅರ್ರೇ ಇದನ್ನು ಇಷ್ಟು ದುಃಖರಸದಲ್ಲಿ ಹೇಳ್ತಾ ಇದ್ದಾಳೆ ಅಂದ್ರೆ ಸಮಸ್ಯೆ ಯಾಕೋ ಬಹು ದೊಡ್ಡದೇ ಇರಬಹುದೆನಿಸಿತು. 
ಕುತೂಹಲದಿಂದ ಅವಳ ಸಣ್ಣ ಸ್ವರ ಸರಿಯಾಗಿ ಕೇಳುವಂತೆ ಇನ್ನಷ್ಟು ಅವಳ ಹತ್ತಿರಕ್ಕೆ ಸರಿದು ಕೂತೆ. 
ಅವಳೀಗ ಇನ್ನೂ ತಗ್ಗಿದ ಸ್ವರದಲ್ಲಿ ’ನಾವಿಬ್ರೂ ಹನಿಮೂನ್ ಗೆ ಹೋಗ್ತೀವಿ ಅಂತ ನಿನ್ನೆ ಇಲ್ಲಿ ಅಮ್ಮನ ಮನೆಗೆ ಬಂದು ಹೇಳಿದೆ ಅಕ್ಕಾ ..ಅಲ್ಲಿಂದ್ಲೇ ನೋಡಿ ತಲೆ ಬಿಸಿ ಶುರು ಆಗಿದ್ದು..’ 
’ನೋಡೇ ಹುಡುಗಿ ಹೇಳಬೇಕಾದ್ದನ್ನು ನೇರವಾಗಿಯೇ ಹೇಳು.. ಸಮಸ್ಯೆ ಗೊತ್ತಾಗದೇ ಪರಿಹಾರ ಹುಡುಕೋದು ಹೇಗೆ.. ಸಮಯ ಹೆಚ್ಚು ಬೇಕಾಗೋದು ಪರಿಹಾರ ಕಂಡುಕೊಳ್ಳಲೇ ಅಲ್ವಾ..’ ಅಂದೆ. 
’ಹೂಂ ಅಕ್ಕ.. ನೀವು ಹೇಳೋದು ಸರಿ.. ಆದ್ರೆ ಹೇಗೆ ಶುರು ಮಾಡೋದು ಅಂತಾನೇ ಗೊತ್ತಾಗ್ತಿಲ್ಲ. ಆದ್ರೂ ಹೇಳ್ತೀನಿ.. ನಮ್ಮಜ್ಜಿ ಗೊತ್ತಲ್ಲ ನಿಮ್ಗೆ ಅಂದಳು..’

ಅವಳ ಅಜ್ಜಿ ನನಗೆ ಮಾತ್ರವೇನು ನಮ್ಮೂರಿನ ಎಲ್ಲರಿಗೂ ಪರಿಚಿತರೇ.. ’ಸಲಹಾಂತಕಿ’ ಎಂದೇ ಎಲ್ಲರೂ ಅವರನ್ನು ಕರೆಯುವಷ್ಟು ಫೇಮಸ್ ಅವರು. ಅವರು ಸಲಹೆ ಕೊಡಲಾರದ ವಿಷಯ ಎಂಬುದು ಪ್ರಪಂಚದಲ್ಲಿ ಇಲ್ಲವೇ ಇಲ್ಲ. ನಿಮಗೆ ಒಂದು ಉದಾಹರಣೆ  ಹೇಳ್ತೀನಿ ಕೇಳಿ. ಆಮೇಲಾದರೂ ಅರ್ಥವಾಗಬಹುದು. ಒಮ್ಮೆ ಇದ್ದಕ್ಕಿದ್ದಂತೆ ಎಲ್ಲರ ಮನೆಯಲ್ಲಿ ವಿದ್ಯುದ್ದೀಪ ಉರಿಯುತ್ತಿದ್ದರೂ ಇವರ ಮನೆಯಲ್ಲಿ ಕತ್ತಲಾವರಿಸಿತು. ಸರಿ..  ಲೈನ್ ಮ್ಯಾನ್ ಗೆ ಫೋನ್ ಮಾಡಿದರು. ಬೆಳಗ್ಗೆ ಬರ್ತೀನಿ ಎಂದವನು ಸಂಜೆಯಾದಾಗ ಬಂದ. ಬೇಸಿಗೆ ಕಾಲ ಬೇರೆ ಫ್ಯಾನ್ ಇಲ್ಲದೆ ಮೈಯೆಲ್ಲ ಬಿಸಿಯೇರಿತ್ತು. ಲೈನ್ ಮ್ಯಾನಿಗೆ ಕಾದು ಕಾದು ತಲೆಯೂ ಬಿಸಿಯೇರಿತ್ತು. ಅಂತೂ ಬಂದ ಅಲ್ವಾ ಅಂತ ಎಲ್ಲರೂ ಅವನ ಹಿಂದೆ ಮುಂದೆ ನಿಂತು ಎಲ್ಲಿ ಫಾಲ್ಟ್ .. ಈಗಲೇ ರಿಪೇರಿಯಾಗುತ್ತೆ ತಾನೇ ಎಂದೆಲ್ಲಾ ಪ್ರಶ್ನೆ ಕೇಳತೊಡಗಿದರು. ಅಜ್ಜಿಯೂ ಬಂದರು. ಬಂದವರೇ ಇನ್ನೇನು ಹತ್ತಿರದ ಕರೆಂಟ್ ಕಂಬ ಹತ್ತಲು ಸಿದ್ಧನಾಗಿ ನಿಂತಿದ್ದವವನನ್ನು ನೋಡಿ ’ ಏನೋ ಇದು ಯಮಗಂಡ ಕಾಲ ಇದು.. ಇಷ್ಟೊತ್ತಿನಲ್ಲಿ ಕಂಬ ಹತ್ತುತ್ತೀಯ .. ನಿನಗೇನಾದ್ರು ಬುದ್ಧಿ ಗಿದ್ದಿ ಇದೆಯಾ’ ಎಂದರು. ಹೇಳಿದ್ದು ಹಿರಿ ಜೀವ, ಜೊತೆಗೆ ಯಮನ ಹೆಸರೂ ತೆಗೆದಿದ್ದರಿಂದ ಭಯವಾಗಿ ಆ ಲೈನ್ ಮ್ಯಾನ್ ’ನಾಳೆ ಬೆಳಿಗ್ಗೆ ಬರ್ತೀನಿ ಸರ್’ ಎಂದು ಹೋಗಿಯೇ ಬಿಟ್ಟಿದ್ದ.  ಅದಾಗಿ ಮೂರ್ನಾಲ್ಕು ಬೆಳಗು ಸಂಜೆಗಳು ಕಳೆದರೂ ಅವನ ಪತ್ತೆಯೇ ಇಲ್ಲ. ಕತ್ತಲಲ್ಲಿ ಕುಳಿತು ಇವರಿಗೂ ರೋಸಿ ಹೋಗಿತ್ತು. ಕೊನೆಗೆ ಮನೆ ಯಜಮಾನರೇ ಏಣಿ ಹತ್ತಿ ತಪ್ಪಿದ್ದ ವೈರ್ ಒಂದನ್ನು  ಹಿಡಿದು ಸ್ವಸ್ಥಾನಕ್ಕೆ ಸೇರಿಸಿ ಮನೆಯೊಳಗೆ ಬೆಳಕು ಮೂಡಿಸಿದ್ದರು. 
 ದಾರಿಯಲ್ಲಿ ಹೋಗುವ ದಾಸಯ್ಯನನ್ನು ಹಿಡಿದೆಳೆದು ತಂದು ಅವನಿಗೂ ಬುದ್ಧಿವಾದ ಹೇಳಿ ಕಳಿಸುವ ಇವಳಜ್ಜಿಯ ಬಾಯಿಗೆ ಸಿಲುಕದವರು ಯಾರೂ ಇರಲಿಲ್ಲ. ಅಂತ ಅಜ್ಜಿಯನ್ನು ಗೊತ್ತಲ್ಲ ಅಂತ ಕೇಳ್ತಾಳಲ್ಲ ಈ ಹುಡುಗಿ ..ಇರಲಿ ವಿಷಯಕ್ಕೆ ಬರಲಿ ಎಂದು ಸುಮ್ಮನುಳಿದೆ.

’ಅವ್ರಿಗೆ ನಾವು ಹನಿಮೂನ್ ಗೆ ಹೋಗ್ತಾ ಇರೊ ವಿಷಯ ಹೇಳಿದೆ.’ ಅಂದಳು. 
ಈಗ ನನಗೆಲ್ಲಾ  ಅರ್ಥವಾಯಿತು. ಎಲ್ಲೋ ಅವರು ತಮ್ಮ ಪಂಚಾಂಗ ಬಿಚ್ಚಿ ರಾಹುಕಾಲ ಗುಳಿಗಕಾಲ ಅಂತೆಲ್ಲಾ ಹೆದರಿಸಿರಬೇಕು. ಅದಕ್ಕೀಗ ಮನೆಯವರ್ಯಾರೋ ಬೇಡ ಅಂದಿರಬೇಕು ಪಾಪ ಹುಡುಗಿಗೆ ಇದರಿಂದ ನಿರಾಸೆಯಾಗಿರಬೇಕು ಅಂದುಕೊಂಡು ಅದನ್ನೇ ಅವಳೆದುರು ಹೇಳಿದೆ.
’ಹಾಗೇನಿಲ್ಲ ಅಕ್ಕಾ.. ನಾಳೆ ಯಾವ ಕೆಲಸ ಮಾಡೋದಾದ್ರು ಶುಭ ದಿನ ಅಂತೆ. ಅದ್ರಲ್ಲೇನೂ ತೊಂದ್ರೆ ಇಲ್ಲಾ ಆದ್ರೆ ಅಜ್ಜಿ ..’ ಅಂದಳು
’ಮತ್ತೇನೇ ನಿನ್ನ ಅಜ್ಜಿಯ ರಾಗ’ ಅಂದೆ ರೋಸಿ ಹೋಗಿ..

’ಏನೂ ಇಲ್ಲ ಅಕ್ಕ.. ಅಜ್ಜಿ ನಮ್ಮಿಬ್ಬರ ಮದುವೆಗೆ ಮೊದಲಿಂದಲೂ ಸಪೋರ್ಟ್ ಮಾಡ್ತಾ ಇದ್ದಳು. ಒಂದು ರೀತಿಯಲ್ಲಿ ಮನೆಯವರೆಲ್ಲಾ ಒಪ್ಪಲು ಕೂಡಾ ಅಜ್ಜಿಯೇ ಕಾರಣ ಅಂತ ಹೇಳಿದ್ರೆ ತಪ್ಪಿಲ್ಲ ಅನ್ಸುತ್ತೆ. ಹಾಗಾಗಿ ಅವ್ರಿಗೆ ಬೇಸರ ಮಾಡ್ಲಿಕ್ಕೆ ನಮ್ಗೆ ಮನಸ್ಸಿಲ್ಲ. ಅಜ್ಜಿ ನಮ್ಮ ಮದುವೆ ಸಾಂಗವಾಗಿ ನಡೆದ್ರೆ ಹನುಮಂತನ ಗುಡಿಗೆ ಬಂದು ಸೇವೆ ಮಾಡ್ತೀನಿ ಅಂತ ಹರಕೆ ಹೊತ್ತಿದ್ರಂತೆ. ಈಗ ನಾವು ’ಹನಿಮೂನ್’ ಗೆ ಹೋಗ್ತೀವಿ ಅಂದಾಗ  ಅಜ್ಜಿ ಅದನ್ನು ’ಹನುಮಾನ್’ ಅಂತ ತಿಳ್ಕೊಂಡು ನಾನು ಬರ್ತೀನಿ ಅಂತ ಹಠ ಹಿಡಿದಿದ್ದಾರೆ.ಅದನ್ನು ಅಜ್ಜಿಗೆ ಬಿಡಿಸಿ ಹೇಳೋದು ಹೇಗೆ ಅಂತ ನಂಗೆ ಗೊತ್ತಿಲ್ಲ..  ನೀವೇ ಈಗ ಅಜ್ಜಿಗೆ ಹೇಳ್ಬೇಕು.. ನಿಮ್ಮ ಮಾತು ಕೇಳ್ತಾರೆ’ ಅಂದಳು.

ನಗು ಬಂದರೂ ತೋರಿಸಿಕೊಳ್ಳದೇ ಅವಳ ಮನೆಗೆ ಹೆಜ್ಜೆ ಹಾಕಿದೆ. ನನ್ನನ್ನು ನೋಡಿದ ಕೂಡಲೇ ಇಷ್ಟಗಲ ಬಾಯಿ ತೆರೆದು ’ ನೋಡಮ್ಮ ನಾನು ಹನುಮಾನ್ ಗುಡಿಗೆ ಹೋಗ್ತಾ ಇದ್ದೀನಿ.. ನೀನು ಅವತ್ತೊಮ್ಮೆ ಹಳೇ ಕಾಲದ ಗುಡಿ ಗಿಡಿ ಇದ್ರೆ ನೋಡೋದಿಕ್ಕೆ ನಾನು ಬರ್ತೀನಿ ಅಂದಿದ್ದೆಯಲ್ಲ.. ಬರೋದಾದ್ರೆ ಬಾ.. ನಂಗೂ ನೀನು ಜೊತೆಗಿದ್ರೆ ಒಳ್ಳೇದು.. ನಡೆಯೋದು ಮೆಟ್ಟಿಲು ಇಳಿದು ಹತ್ತೋದು ಎಲ್ಲಾ ಒಬ್ಬಳೇ ಮಾಡಲು ಸ್ವಲ್ಪ ಕಷ್ಟ. ಕಣ್ಣು ಬೇರೆ ಸ್ವಲ್ಪ ಮಯ ಮಯ ಅಂತಿದೆ. ಆದ್ರೂ ಹರಕೆ ತೀರಿಸೋದು ಮುಖ್ಯ ನೋಡು.. ಹಾಗೇ ಹೊರಟಿದ್ದೀನಿ ’ ಅಂದರು. ಹುಡುಗಿ ಈಗ ನನ್ನ ಕಡೆ ನೋಡಿದಳು. ಒಬ್ಬಳನ್ನು ನಿವಾರಿಸಿಕೊಳ್ಳಲು ಹೋಗಿ ಎರಡೆರಡು ಆತಂಕಗಳನ್ನು ಎಳೆದುಕೊಂಡು ಬಿಟ್ಟೆನೇನೋ ಎಂಬಂತಿದ್ದ ಅವಳನ್ನು ಕಂಡು ಪಾಪ ಅನ್ನಿಸಿತು ನನಗೆ. ಅಜ್ಜಿಯ ಕಡೆಗೆ ತಿರುಗಿ ’ಅಯ್ಯೋ ಅಜ್ಜಿ ಅದಕ್ಯಾಕೆ ಅಷ್ಟೊಂದು ದೂರ ಹೋಗ್ಬೇಕು ನೀವು?   ಇನ್ನೊಂದೆರಡು ದಿನಗಳಲ್ಲಿ ನಾನು  ರಾಮ ಗುಡಿಗೆ ಹೋಗ್ತಾ ಇದ್ದೀನಿ.. ನೀವೂ ನನ್ನ ಜೊತೆ ಬನ್ನಿ.. ಆರಾಮದಲ್ಲಿ ಒಂದೇ ಹಣ್ಣು ಕಾಯಿ ಒಡೆದು ಎರಡೆರಡು ಹರಕೆ ಪೂರೈಸಬಹುದು.  ರಾಮನಿಗೆ ಸೇವೆ  ನಮಸ್ಕಾರ ಮಾಡಿದ್ರೆ ಭಕ್ತಾರಾಧೀನನಾದ  ರಾಮನ ಒಳಗಿರೋ ಹನುಮನಿಗೆ ಅಲ್ವಾ  ತಲುಪೋದು’ ಅಂತ ಲಾ ಪಾಯಿಂಟ್ ಎಸೆದೆ. ಆರೋಗ್ಯ ಸಮಸ್ಯೆಯೇ ದೊಡ್ಡದಾಗಿರುವ ಕಾರಣ ಅಜ್ಜಿಗೂ ಈ ಡಬ್ಬಲ್ ಧಮಾಕಾ ಆಫರ್ ಕುಷಿಯಾಗಿ ಮೊಮ್ಮಗಳ ಹನಿಮೂನ್ ಬಾಲ ಬಿಟ್ಟು ನನ್ನ ಬಳಿ ಯಾವಾಗ ಹೋಗೋಣ ಅಂತ ರಾಗ ಶುರು ಮಾಡಿದರು. 
*****

ಕನ್ನಡದ ಬರಹಗಳನ್ನು ಹಂಚಿ ಹರಡಿ

7 thoughts on “ಹನಿಮೂನ್: ಅನಿತಾ ನರೇಶ್ ಮಂಚಿ

 1. ಅನಿ,

  ಲಾ ಪಾಯಿಂಟ್ ಸರಿಯಾಗಿದೆ 🙂 ಅಜ್ಜಿನ ರಾಮನ ಗುಡಿಗೆ ಕರೆದುಕೊ೦ಡ ಹೋದ್ರ?
  ಎ೦ದಿನ೦ತೆ ಸು೦ದರ ಸುಲಲಿತ ಬರವಣಿಗೆ 🙂
   

 2. ಹಹಹ ಅಜ್ಜಿ ನಿಮಗೆ ಗಂಟುಬಿದ್ರಾ ಈಗ… ಚೆನ್ನಾಗಿದೆ ಹಾಸ್ಯ ಕಥೆ

 3. ಸಖತ್ ಮಜಾ ಇದೆ.   ಅಜ್ಜಿ ಜೊತೆ ಯಾವಾಗ್ ಹೊಂಟ್ರಿ ಹನುಮಾನ್ ದರ್ಶನಕ್ಕೆ….. ?

 4. ಹ ಹ ಹ ಚೆನ್ನಾಗಿದೆ ಹನುಮಂತ ದೇವ್ರ ಮುಖ ಮಾತ್ರ ಕೆಂಪಾಗಿರಬಹುದು…

   

 5. ಹನುಮನು ರಾಮನೊಳಗೋ ರಾಮನು ಹನುಮನೊಳಗೋ ?????!!!!!!!!!!!!! 🙂

Leave a Reply

Your email address will not be published. Required fields are marked *