ಹದಿನೈದು ವರ್ಷದ ಹಳೆಯ ಗೆಳತಿಯೊಂದಿಗೆ ಒಂದು ಸಂಜೆ: ಅಮರ್ ದೀಪ್ ಪಿ. ಎಸ್.

 


ಹಿಂದಿನ ದಿನ ಆಕೆ ಒಬ್ಬ ಗೆಳತಿ ಮನೆಗೆ ಹೋಗಿದ್ದಳಂತೆ..  ಮಾತಿನ ನಡುವೆ   "ಮನೆ ಕೆಲಸ, ಮಕ್ಕಳು,  ಟಿ ವಿ. ಸಿರಿಯಲ್ಲು,   ಯಾವುದರಲ್ಲೂ ಮನಸ್ಸು ವಾಲುತ್ತಿಲ್ಲ, ಖುಷಿಯಾಗಿ ತೊಡಗಿಸಿ ಕೊಳ್ಳಲು ಆಗುತ್ತಿಲ್ಲ,  ಯಾಕೋ ಬೇಜಾರೂ, ಲೋನ್ಲಿನೆಸ್ಸ್"  ಅಂದಿದ್ದಾಳೆ.  ಗೆಳತಿ ಒಬ್ಬ ಸಾಹಿತ್ಯಾಸಕ್ತೆ.  ಒಬ್ಬ  ಲೇಖಕನ ಬಗ್ಗೆ ಹೇಳುತ್ತಾ,  ಅವರೂ  ಒಮ್ಮೆ "ಶೂನ್ಯ ಭಾವ"ಕ್ಕೆ ಒಳಗಾಗಿದ್ದ ಸಂಧರ್ಭದಲ್ಲಿ ಒಬ್ಬ ಮನೋ ವೈದ್ಯ ಅವರಿಗೆ ನಾಲ್ಕು ಚೀಟಿಗಳಲ್ಲಿ ಪ್ರಿಸ್ಕ್ರಿಪ್ಷನ್ ಬರೆದು ಬೆಳಿಗ್ಗೆ ೯ಕ್ಕೆ ಮಧ್ಯಾನ್ಹ ೧೨ಕ್ಕೆ, ೩ಕ್ಕೆ ಮತ್ತು ಸಂಜೆ ೬ ಗಂಟೆಗೆ ಒಂದೊಂದು ಚೀಟಿಯನ್ನು ತೆರೆದು ಓದಲು ಹೇಳಿ  ಲೇಖಕನ   "ಶೂನ್ಯ ಭಾವ "ಕ್ಕೆ ಪರಿಹಾರ ಒದಗಿಸಿದ ಮೇಲೆ ಲೇಖಕ  ಮತ್ತೆ  ತನ್ನ ಚಟುವಟಿಕೆಗೆ ಮರಳಿದ್ದ ಪ್ರಸಂಗ  ಹೇಳಿದ್ದಾಳೆ.  ಅದನ್ನು ಕೇಳಿದ ಈಕೆ ಇವತ್ತು ಸಂಜೆ "ನಮ್ಮ ಹಳೆಯ ದಿನಗಳಲ್ಲಿ ಕೈ ಹಿಡಿಯದೇ ಪಕ್ಕ ಪಕ್ಕ ರೈಲು ಕಂಬಿಗಳಂತೆ ನಡೆದ ಊರಿನ ಮುಖ್ಯ ರಸ್ತೆಯಿಂದ ಮರೆಯಲ್ಲಿರುವ ಡಾ. ರಾಜ್ ಕುಮಾರ್ ಪಾರ್ಕಿನಲ್ಲಿ  ಸಂಜೆ ಕಳೆಯೋಣವೆಂದು , ಇಂದು ಸಂಜೆ ಮಟ್ಟಿಗೆ ಕೊಂಚ ಬಿಡುವು ಮಾಡಿಕೊಂಡು ತಾಯಿ,  ಹೆಂಡತಿ  ಸೊಸೆ ಪಾತ್ರದಿಂದ ಹೊರತಾಗಿ ಹದಿನೈದು ವರ್ಷಗಳ ಹಿಂದಿನ ಕೇವಲ ತಾನಾಗಿ ಮಾತ್ರ ಇರುವುದಾಗಿ, ನನಗೂ ಸಹ ಹಳೆಯ ಗೆಳೆಯನಾಗಿ ಬರುವಂತೆ  ಫೋನಿನಲ್ಲಿ ತಿಳಿಸಿದ್ದಳು. ಮೊದಲು ಅಪರಿಚಿತ ಸಂಖ್ಯೆಯ ಕರೆ  ಎನಿಸಿದರೂ ಧ್ವನಿ ಹಳೆಯದಾದ್ದ ರಿಂದ ಗುರುತಿಸುವುದು ಕಷ್ಟವಾಗಲಿಲ್ಲ.  ನಾನೂ ನನ್ನ ಮದುವೆ ನಂತರ ಈ ಗೆಳತಿಯನ್ನು ಭೇಟಿಯೇ ಆಗಿದ್ದಿಲ್ಲ. ಅಪರೂಪಕ್ಕೆ ಹಳೆ ಗೆಳತಿ ಸಿಕ್ಕ ಖುಷಿಗೆ  ಮಧ್ಯಾನ್ಹದಿಂದಲೇ ನನ್ನ ಮನಸ್ಸು  ಡಾ. ರಾಜ್ ಕುಮಾರ್ ಪಾರ್ಕ್ನಲ್ಲಿ  ಅಲೆಯುತ್ತಿತ್ತು " ಇಂದು ನಿನ್ನ ನೋಡುವೆ,……   .ಕಂಡು ಮಾತಾನಾಡುವೆ .. … ನಿಜ ಹೇಳಲೇನು …ಹಾಡು ಹೇಳುತ್ತಾ. 

 ಸಂಜೆ ಪಾರ್ಕಿಗೆ ಬಂದ  ತಕ್ಷಣ " ತುಂಬಾ ಹೊತ್ತು ಕಾದೆಯಾ?" ಕೇಳಿದೆ.  "ಇಲ್ಲಾ, ಹತ್ತು ನಿಮಿಷ ಆಯ್ತು" ಆಕೆ ಹೇಳಿದಳು . ಮೊದಲು ಇಲ್ಲಿ ಕೂಡಲು ನಾಲ್ಕು ಬೆಂಚುಗಳು ಮಾತ್ರವಿದ್ದವು.  ಅಲ್ಲಲ್ಲಿ ಒಂದಿಬ್ಬರು ನಡೆದಾಡುವುದು ಬಿಟ್ಟರೆ ನಮ್ಮ ಮಾತುಗಳು ನಮಗೇ  ಜೋರು ಧ್ವನಿಯಾಗುತ್ತಿದ್ದವು.  ಪಾರ್ಕಿನ ಗೇಟಿನವರೆಗೂ ನಡೆದು ಹೋಗಿಯೇ ನಮ್ಮ ಮಾತುಗಳ ಮಧ್ಯದ ರುಚಿಯಾಗಿ ಮೆಲ್ಲುವ ತಿನಿಸು ಕೊಳ್ಳಬೇಕಿತ್ತು.    ನಮ್ಮನ್ನು ಹುಡುಕುವ, ಪತ್ತೆ  ಮಾಡಿ ವಿಚಾರಣೆಗೊಳಪಡಿಸುವ ಕಣ್ಣುಗಳಿಂದ ತಪ್ಪಿಸಿಕೊಂಡು ಭೇಟಿ ಸಮಯದ ಸಾಮಿಪ್ಯವನ್ನು, ಮೊದ ಮೊದಲ ಸೆಳೆತದ ಪುಳಕವನ್ನು ಅನುಭವಿಸುವುದರಲ್ಲೇ ವಯಸ್ಸಿನ ಸಹಜ ಕುತೂಹಲವಾಗಿತ್ತು.  ಈಗೀಗ ಇಲ್ಲಿ ಹುಲ್ಲುಹಾಸು, ಕಾರಂಜಿ, ಜನ ಜಂಗುಳಿ. ಮಕ್ಕಳ ಆಟಿಕೆ ಯಂತ್ರಗಳು, ಇದ್ದಲ್ಲಿಗೆ ಬಂದು ನಮ್ಮ ಮೆಲು ಮಾತಿನ ಮಧ್ಯೆ ದೊಡ್ಡ ದನಿಯಲ್ಲಿ ಕೂಗುತ್ತಾ  ತಿನಿಸು ಮಾರುವವರ ಸರದಿ.  ಈಗಿನ ಗುಟ್ಟಾಗಿರದ ಭೇಟಿ, ನಿಜ,  ಧೈರ್ಯವಾಗಿಯೇ ನಾವು ಭೇಟಿಗೆಂದು ಬಂದು ಕುಳಿತದ್ದು ಎನ್ನುವಂಥ ಜೋಡಿಗಳು, ಎಲ್ಲೂ ಕಣ್ಣಿಟ್ಟು ಕಾದು ಕುಳಿತುಕೊಳ್ಳದ, ಅಚ್ಚರಿಗೊಳ್ಳದ ಪೋಷಕ ಸಮೂಹ. ಮಕ್ಕಳನ್ನೂ ಸ್ನೇಹಿತರಂತೆ ಕಾಣುವ, ಅವರ ಆಸೆ ಆಕಾಂಕ್ಷೆಗಳಿಗೂ ಒಂದು ಸ್ಪೇಸ್ ಕೊಟ್ಟು ಎದುರುನೋಡುವ ಪರಿಸ್ಥಿತಿ ನಮಗಿಲ್ಲವಾಗಿತ್ತು, ಅಥವಾ ನಾವೇ ನಮಗಿದ್ದ ಆಯ್ಕೆ ಸ್ವಾತಂತ್ರ್ಯವನ್ನೂ ಬಳಸಿಕೊಳ್ಳ ಲಿಲ್ಲವೆನೋ .. ಆಲ್ವಾ ? ನಮಗಿದ್ದ ಅರ್ಥಿಕ ಇತಿಮಿತಿಗಳು, ಕುಟುಂಬದ ಚೌಕಟ್ಟು, ನಮ್ಮ ಬುದ್ಧಿವಂತಿಕೆ, ಸಾಮರ್ಥ್ಯವನ್ನೂ ನಾವು ಅಂದಾಜಿಸಲಾಗದೇ  ಕುಬ್ಜ ಮನೋಭಾವದಿಂದ ವರ್ತಿಸುತ್ತಿದ್ದ ನಾವು ನಮ್ಮನ್ನು ಹೊರ ಜಗತ್ತಿಗೆ ಅಷ್ಟೇಕೆ ಮನೆಯಲ್ಲಿ, ಗೆಳೆಯರ ಮಧ್ಯೆ , ಶಾಲಾ, ಕಾಲೇಜ್ ನಲ್ಲೂ ತೆರೆದುಕೊಳ್ಳುವ ಪ್ರಯತ್ನವನ್ನೂ ಸಹ ಮಾಡಲಿಲ್ಲವಲ್ಲಾ? ಎಂದು ಹಳೆಯ ದಿನಗಳನ್ನು ವಾಸ್ತವದ ಅಂಚಿನಲ್ಲೇ ಅಳೆದು ನಗು  ತೇಲಿಸಿದಳು.  ಅದು ವ್ಯಂಗವೋ ಪಾಪಪ್ರಜ್ಞೆಯೋ ಗೊತ್ತೂ ಮಾಡದೇ ಹೇಳಿದಂತಿತ್ತು. ಬಹಳ ಹೊತ್ತಿನಿಂದ ಆ ಪಾರ್ಕಿನಲ್ಲಿ ಅಲೆದು ಎಲ್ಲರನ್ನೂ ಬೊಚ್ಚು ಬಾಯಲ್ಲೇ ಕೇಳಿ ಕೇಳಿ "ಗಿರಮಿಟ್ಟು" ಮಾರುತ್ತಿದ್ದ ಅಜ್ಜಿಯನ್ನು ಕರೆದು ಗಿರಮಿಟ್ಟು ಕಟ್ಟಿಸಿಕೊಂಡು ತಿನ್ನುತ್ತಾ, ಹೀಗೆ ಆಕೆ ತನ್ನ ಸಾಹಿತ್ಯಾಸಕ್ತೆ ಹಾಗೂ ಇತರೇ ಗೆಳತಿಯರ ಬಗ್ಗೆ ಒಂದಷ್ಟು ಹೇಳಿದಳು.  ನಾನು ಕಿಶೋರ್  ದಾ  ಸಾಲಿಡಿದು ಹಾಡಿದ ಆರ್ದ್ರ ತುಂಬಿದ ಮಧುರ ಗೀತೆಗಳನ್ನು  ಕೇಳಿಸಿದೆ. "ಹಮೆ ಔರ್ ಜೀನೇ ಕಿ ಚಾಹತ್  ನ  ಹೋತಿ ಅಗರ್ ತುಮ್ ನ ಹೋತೆ"  ಯಿಂದ ಶುರು ಮಾಡಿದ ಕಿಶೋರ್ ದಾ, ಏ ಶ್ಯಾಮ್ ಮಸ್ತಾನಿ … ಮಧ್ ಹೋಶ್ ಕಿಯೇ ಜಾಯ್ " ತನಕ ಒಂದೇ ಲಯಕ್ಕೆ ನಮ್ಮನ್ನು ಒಂದಷ್ಟು ಹೊತ್ತು ಹಿಡಿದಿಟ್ಟುಕೊಂಡಿದ್ದ.  ಒರಗಿದ ನಮ್ಮ ಭುಜಗಳು ಬೇರೆಯಾದವು .. ಒಂದೆರಡು ನಿಮಿಷ ಆಚೀಚೆ ನೋಡಿ "ಮನೆಯಲ್ಲಿ ಯಾರೂ ಇಲ್ಲ" ಎಂದಳು  ಆಕೆ, ದುಗುಡದೊಂದಿಗೆ. ಕಣ್ಣ ನೋಟ ನೇರವಿರಲಿಲ್ಲ… 

ಮೊದಲ ಬಾರಿಗೆ  ನಾನು ಕಾಲೇಜು ಮೆಟ್ಟಿಲು ಹತ್ತಿದ ದಿನ, ಚೆಂದನೆಯ ಇಂಗ್ಲೀಷ್ ಮಾತಾಡುವ ಹುಡುಗಿಯರ ಮಧ್ಯೆ ಸ್ವಚ್ಛ ಕನ್ನಡ ಮಾತಾಡುವ ಅಂದಿನ ಈ  ಹುಡುಗಿಯ ಕಂಡು ಅಬ್ಬಾ. ಒಬ್ಬ ರಾದರೂ ಕನ್ನಡ ಮಾತಾಡುವ ಹುಡುಗಿ ನೋಡಿದೆನಲ್ಲ । ಎಂದು ಕನ್ನಡ ಮಾಧ್ಯಮದಿಂದ ಬಂದ ನಾನು  ಸಮಾಧಾನಪಟ್ಟುಕೊಂಡಿದ್ದ ಕ್ಷಣಗಳು ಹಾದು ಹೋದವು.  ನಂತರ ಗೆಳೆತನ, ಬಹುವಚನ ದಿಂದ ಏಕವಚನಕ್ಕೆ ತಿರುಗಿದ ಸಲುಗೆ, ಅದಲು ಬದಲಾದ ಪುಸ್ತಕಗಳು, ಅದರೊಳಗೆ  ಕೊನೆ ಪೇಜಿನ ಸಣ್ಣ ಕೋರಿಕೆ ಚಿನ್ಹೆಗಳು. ಗದರಿಕೆಯಂತೆ ನೋಡುತ್ತಿದ್ದ ಉಪನ್ಯಾಸಕ ವರ್ಗ, ಎಲ್ಲಾ ನೆನಪಾದವು. ನಾನು ಇವಳನ್ನು ನೋಡಿದ್ದು, ಮಾತನಾಡಿಸಿದ್ದು ಕಡಿಮೆಯೇ.  ನಾನಿವಳಿಗೆ  ಲವ್ ಲೆಟರ್ ಬರೆಯುವ ಹೊತ್ತಿಗೆ  ಅವರ ಪೋಷಕರು ಇವಳಿಗಾಗಲೇ ಮದುವೆ ನಿಶ್ಚಯ ಮಾಡಿದ್ದರು.  ಮದುವೆ ನಿಶ್ಚಯವಾದ ಹುಡುಗಿಗೆ ಪತ್ರ ಹೇಗೆ ಬರೆಯುವುದು ? ಗೊಂದಲಕ್ಕೆ ಬಿದ್ದಿದ್ದೆ. ಬೇರೆಯವರಿಗೆ ನಾನು ಬರೆದುಕೊಟ್ಟ ಪ್ರೇಮ ಪತ್ರಗಳು ಬರೆಸಿಕೊಂಡವರ  ಮನೆಯಂಗಳದಲ್ಲೇ ನನ್ನನ್ನು ನಿಲ್ಲಿಸಿ ಕೆಕ್ಕರಿಸಿ ನೋಡುವಂತೆ ಮಾಡಿದ್ದವಾದರೂ ನಾನು ನನಗೋಸ್ಕರ, ಇಷ್ಟವಾದವಳಿಗೆ ಪತ್ರ  ಬರೆದ ಎಷ್ಟೋ ದಿನಗಳ ನಂತರ ಭರ್ತಿ ಮೂರು ಪುಟಗಳ ಮರು ಪತ್ರ ಈಕೆಯಿಂದ ಬಂದಿತ್ತು.  ಅಕೆಯ ಅಮ್ಮ ಅಪ್ಪನಿಗೆ ನನ್ನ  ಪತ್ರ ಸಿಕ್ಕಿ ಫಜೀತಿಯಾಗಿತ್ತಾ? ಗೊತ್ತಿಲ್ಲ. ಇರುವ ಮೂರು ಪುಟಗಳ ಪತ್ರದಲ್ಲಿ  ಒಂದು ಪುಟದಷ್ಟು ಹಿತವಚನ, ಎರಡರಲ್ಲಿ  ಆಗತಾನೆ ಒಲಿದ (?) ನನ್ನ ಬಗ್ಗೆ ಗೇಲಿ, ಕುಟುಕು, ಮೊಟಕು, ಮತ್ತು ಮೂರನೆ ಪುಟದಲ್ಲಿ ನಿಬಂಧನೆಗಳು. ಎಲ್ಲವನ್ನೂ ಕೆದಕಿ ಕೆದಕಿ ಹೇಳಿದರೆ, "ಆಗ, ನನಗಿದ್ದ ಗರಿಕೆ ಪ್ರೀತಿಗೆ ಹೊಳೆದಿದ್ದ ಪದಗಳು ಮತ್ತು ನನಗಿದ್ದ ನಿರೀಕ್ಷೆಗಳವು ಎಂದು ಪರ್ಸಿನಿಂದ ಒದರುತಿದ್ದ ಸೆಲ್ ಫೋನ್ ತೆಗೆದು ಮಾತಾಡತೊಡಗಿದಳು.   " ಹ್ಞಾ… ಹೌದಾ … ಸರಿ, ಎಂದು ಫೋನಿಟ್ಟಳು.  ಆ ಕಡೆಯಿಂದ ಅವಳ ಮಗ ಮಾತಾಡಿ, ಅಜ್ಜಿಯೊಂದಿಗೆ ಟ್ಯೂಶನ್ ಗೆ ಹೊರಟಿರುವುದಾಗಿ ತಿಳಿಸಿದ.  ಬರುವಾಗ ತನಗೊಂದು ದುಬಾರಿ  ಚಾಕುಲೇಟ್ ತರಲು ಬೇಡಿದನಂತೆ. 

"ಅಷ್ಟೊತ್ತಿಂದ ಈ  ಪಾರ್ಕಿನಲ್ಲಿ ಕೂತಿದ್ದೇವೆ, ಬೊಜ್ಜು ಕರಗಿಸಲು ತೇಕುತ್ತಾ ಓಡಾಡುವವರು, ಚಿಕ್ಕ ಮಕ್ಕಳನ್ನು ಆಟಿಕೆ ಯಂತ್ರಗಳಲ್ಲಿ ಆಡಿಸುವವರು, ಈಗಷ್ಟೆ ಪರಿಚಯವಾದ ಯುವ ಜೋಡಿ ಏಕಾಂತ ಬಯಸಿ ತಮ್ಮ ದಿನನಿತ್ಯದ ಕಾಯ್ದಿರಿಸಿದ ಜಾಗದಲ್ಲಿ ಕುಳಿತ ನಮ್ಮಿಬ್ಬರನ್ನೂ ಒಟ್ಟಿಗೆ ಕುಳಿತಿರುವುದನ್ನು  ನೋಡಿಯು  ನೋಡದಂತೆ ಬೇರೆ ಜಾಗದತ್ತ ನಡೆಯುತ್ತಿದ್ದಾರೆ. ಮೊದಲೇ ಚೆನ್ನಾಗಿತ್ತು,   ಯಾರಾದರೂ ನೋಡುತ್ತಾರೆಂಬ ಭಯ ಇದ್ದರೂ ಜೊತೆಗೆ ಇರುತ್ತಿದ್ದ ಹುಡುಗಿಯ ಸನಿಹ, ವಯಸ್ಸಿಗೆ ಬಂದ ಹರೆಯವನ್ನು ಗುರುತಿಸಿಕೊಳ್ಳುವ ಇಗೋ, ಖಾಲಿ ಸಮಯ ಎಲ್ಲವನ್ನೂ ಮರೆಸುತ್ತಿತ್ತು , ಈಗಿಷ್ಟು ದುಡಿಯುತ್ತಿದ್ದೇವೆ,  ತಿಳುವಳಿಕೆ ಇದೆ ಆದ್ರೆ ಏನ್ ಮಾಡೋದು? ಇಬ್ಬರಿಗೂ  ಮದುವೆ, ಮಕ್ಕಳು  ಆಗಿದೆ " ಸ್ವಾತಂತ್ರ್ಯ ಆಗ್ಲೂ ಇದ್ದಿಲ್ಲ  ಈಗ್ಲೂ ಇಲ್ಲಾ ಜೊತೆಗೆ ಸಮಯಾನೂ ಇಲ್ಲ". ಎಂದೆ.  ಆಕೆ ಉಸಿರೂ ಬಿಡಲಿಲ್ಲ. 

 ಬೇಡವೆಂದರೂ ಈ ಸಂಜೆಯಲ್ಲಿ ಕೇವಲ ತಾನಾಗಿ ಒಂದೆರಡು  ಗಂಟೆ ಸಮಯವನ್ನು ತನ್ನಿಚ್ಚೆಯಂತೆ ಕಳೆದು ಹೋಗಲು ಬಂದ ಆಕೆಗೆ  ಕುಟುಂಬದಿಂದ, ದಿನದ ಸಂಸಾರ ಸಂತೆ ವಹಿವಾಟಿನಿಂದ ಹೊರಬರಲಾಗಲಿಲ್ಲ. ನನಗೂ ದಿನವೂ ಸಂಜೆ ವಾರ್ನಿಂಗ್ ಬೆಲ್ ನಂತೆ ಬರುತ್ತಿದ್ದ ನನ್ನ ಹೆಂಡತಿಯ ಮಿಸ್ಸ್ದ್ ಕಾಲ್ಸ್ ನೆನಪಾದವು .  ಆಕೆ, ತನ್ನ ಗಂಡನ ಬಿಂದಾಸ್ ಖರ್ಚುಗಳ ಪಟ್ಟಿ ಇಟ್ಟಳು. ಇನ್ನು ಏನೋ ಹೇಳುವವಳಿದ್ದಳು, ಭಾರತೀಯ ನಾರಿಯರ ಸರ್ವಕಾಲಿಕ ಹಕ್ಕು ಮತ್ತು ಅಭಿರುಚಿಯಂತೆ ಎಲ್ಲಾ ವಿಷಯದ ರಹಸ್ಯ ಬಯಲುಗೊಳಿಸಿದರೂ " ಅವರಿವರ ವಿಷ್ಯ ನಮಗ್ಯಾಕೆ ಬಿಡಿ" ಎನ್ನಲಿಲ್ಲವಾದರೂ  ಮಾತಿನ ಮಧ್ಯೆ ವಿಷಯ ಮೊಟಕುಗೊಳಿಸಿ, "ಅವರ  ವಿಷ್ಯ  ಹೆಚ್ಚು ಬೇಡ"  ಅಂದಳು.  ನಾನು ನನ್ನ ಹೆಂಡತಿಯ  ಡಬ್ಬಿ ಉಳಿತಾಯ, ಆ ಉಳಿತಾಯದಲ್ಲೇ ಅಷ್ಟಿಷ್ಟು ಕೂಡಿಟ್ಟುಕೊಂಡ ಬಗ್ಗೆ,  ತಿಂಗಳ ಕೊನೆಯಲ್ಲಿನ ಅಮದನಿಗೂ ಖರ್ಚಿಗೂ ತಾಳೆಯಾಗದ ಪಟ್ಟಿ  ತೋರಿಸಿ "ನಿಂದ್ಯಾವಾಗ್ಲು ಕಾಯಕವೇ ಕೈಸಾಲ " ಎಂಬಂತೆ ನನ್ನ ಹೆಂಡತಿ ದುರುಗುಟ್ಟುವ ಪರಿಯನ್ನು ವಿವರಿಸಿದೆ. "ಆಕೆ ಮನೆಯಲ್ಲಿ ಯಾರೂ ಇಲ್ಲ" ಎಂದದ್ದು ನೆನಪಾಯಿತು… ನಿಮ್ಮ ಮನೆಗೆ ಹೋಗೋಣವೇ? ಎಂದೆ.  ಮೆಲ್ಲನೆ ಪಾರ್ಕಿನ ಗೇಟಿನಲ್ಲಿ ಕಾಯುತ್ತಿದ್ದ, ಕೀಯನ್ನು ಗಾಡಿಯಲ್ಲೇ ಇಟ್ಟು ಹೋದರೂ ಯಾರೂ ಕದಿಯದ, ಕದ್ದು ಮಾರಿದರೆ ಗುಜರಿಯವರಿಂದಲೂ ಎರಡು ಸಾವಿರವೂ ಹುಟ್ಟದ ನನ್ನ ೧೯೯೬ರ ಮಾಡೆಲ್ ಸ್ಕೂಟರ್ ಮೇಲೆ ಹೊರೆಟೆವು.  ನನಗೆ ದಾರಿಯಲ್ಲಿ ಪರಿಚಯಸ್ಥ ಮುಖಗಳು ಕಂಡರೂ ಮಾತಾಡಿಸದ ಬೇಜಾರು.  ಆಕೆಗೆ "ಮನೆಯಲ್ಲಿ ಯಾರೂ ಇಲ್ಲ" ದ ಲಕ್ಷ್ಯ.  ಮಧ್ಯೆ ಆಕೆಯ ಮಗನಿಗೆ ಟೇಸ್ಟಿ ಚಾಕುಲೇಟ್ ಕೊಡಿಸಿದೆ. ಆಕೆಯ ಮನೆಯ ದಾರಿ  "ಹಿಂದಿ"ನಿಂದ ಪರಿಚಯ ವಾದ್ದರಿಂದ  ಸ್ಕೂಟರ್ ತನ್ನಷ್ಟಕ್ಕೆ ತಾನೇ ತಿರುವುಗಳಲ್ಲಿ ವಾಲುತಿತ್ತು.  ಸಂಜೆಗೆ  ಮಬ್ಬುಗತ್ತಲು ಆವರಿಸಿದರೆ, ನನಗೆ ಒಳಗೊಳಗೇ ಮುಂದಿನ "ನಡೆ"ಗಳ ಬಗ್ಗೆ ಸಹಜ ಕಾಳಜಿ.  ಆಕೆಯ ಮನೆಯ ಮುಂದೆ ಗಾಡಿ ನಿಲ್ಲಿಸಿ ಅಕ್ಕಪಕ್ಕದ ಮನೆಯವರನ್ನು ಒಮ್ಮೆ ನೋಡಿದೆ.  ಅದಾಗಲೇ ಸಂಜೆ ಅಂಗಳಕ್ಕೆ ನೀರು ಹಾಕಿ, ಒಳಗೆ ದೇವರ ಮುಂದೆ ದೀಪ ಹಚ್ಚಿಟ್ಟು ಬಂದು ನೈಟಿಗಳ ಮೇಲೆ ಇರಲೋ ಬೇಡವೋ ಎಂಬಂತೆ ಒಂದೆಳೆಯ ವೇಲ್ ಸುತ್ತಿಕೊಂಡು ನಿನ್ನೆ ಹಿಂದಿನ  ಕ್ರಾಸಿನ ಯಾವುದೋ ಮನೆಯಲ್ಲಿ ನಡೆದ ಕಳ್ಳತನದ ಬಗ್ಗೆ ಆಶ್ಚರ್ಯದಿಂದ ಸೊಂಟಕ್ಕೊಂದು ಗಲ್ಲಕ್ಕೊಂದು ಕೈ ಇಟ್ಟು ಕೆಲವರು ತಲೆಯಾಡಿಸು ತ್ತಿದ್ದರು.  "ಸ್ವಲ್ಪ ಹೊತ್ತು ಕೂತು ಮಾತಾಡೋಣೂ, ಬರ್ರಿ ಅಕ್ಕೊರಾ" ಅಂತ ಒಬ್ಬಾಕೆ, ಇಲ್ಲಾರಿ ತುಂಬಾನೇ ಕೆಲಸ ಇದೆ, ನಾನಿನ್ನು ಅಡಿಗೇನೇ ಮಾಡಿಲ್ಲ" ಅಂತ ಇನ್ನೊಬ್ಬಾಕೆ.  ಅದೆಷ್ಟೊತ್ತಿಂದ ಹೀಗೆ ನಿಂತು ಮಾತಾಡ್ತಾ ಇದ್ದರೋ ಗೊತ್ತಾಗಲಿಲ್ಲ.  ಮಬ್ಬುಗತ್ತಲು ರಾತ್ರಿಗೆ ತಿರುಗುತ್ತಿತ್ತು.   ಆಕೆ ಅತ್ತಿತ್ತ ನೋಡದೇ, ಮಾತು ಆಡದೇ ಸರಸರನೇ ಒಳನಡೆದು ಒಳಗಿನಿಂದಲೇ ಆಚೀಚೆ ನೋಡದೇ ಒಳ ಹೆಜ್ಜೆ ಹಾಕಲು ಸನ್ನೆ ಮಾಡಿದಳು.  ಅಕ್ಕಪಕ್ಕದ ಹೆಣ್ಣುಮಕ್ಕಳ ಕಣ್ಣು ಸಾಕಷ್ಟು ಸೂಕ್ಷ್ಮ, ಯಾರೂ ಯಾರ ಮನೆಗೆ ಬಂದರು, ಬಂದವರು ಹೊಸಬರ, ಹಳಬರ ಎಲ್ಲ ಕುಂತಲ್ಲೇ ಲೆಕ್ಕ ಹಿಡಿದು ಮುಂದಿನ ಜಡೆ ಮೇಳದಲ್ಲಿ ಡಿಸ್ಕಶನ್ ಅಜೆಂಡಾ ಮಾಡಿಕೊಳ್ಳುವ ಇವರನ್ನು ನೋಡಿ ನೋಡದಂತೆ ನಾನು  ಒಳ ಹೊಕ್ಕಿದ್ದಾಗಿತ್ತು. 

 ಈಕೆ ಏನೋ ಮರೆತವಳಂತೆ ಸರಕ್ಕನೇ ಅಡುಗೆ ಮನೆ ತಡಕಾಡಿ ಬಂದಳು. ಒಂದಿಷ್ಟು ದಡ ಬಡ ಸದ್ದಾಯಿತು. ನಾನು, ನನ್ನ ಹೆಂಡತಿಯ ಮಿಸ್ಸ್ದ್ ಕಾಲ್ ಬರದೇ ಇದ್ದುದು ನೆನಪಾಗಿ "ಬೇಗ" ಅಂದೆ.  ಸಮಯ ಎಂಟಾಗುತ್ತಿತ್ತು. ಆಕೆಯ ಮನೆ ಮುಂದೆ  ಆಟೋ ಬಂದು ನಿಂತ ಸದ್ದು. ಹಿಂದೆಯೇ ಕಾಲಿಂಗ್  ಬೆಲ್ ಬಾರಿಸಿದ ಆಕೆಯ ಮಗ ಅಜ್ಜಿಯೊಂದಿಗೆ ಬಾಗಿಲಲ್ಲಿ  ನಿಂತಿದ್ದ.ನಾನು ಒಳ ಹೋಗಲಾ? ಬಾಗಿಲು ತೆಗೆಯಲಾ ? ಯೋಚಿಸುತ್ತಿದ್ದೆ.  ಆಕೆಯೇ ಖುದ್ದು ಬಾಗಿಲು ತೆರೆದಳು.   ಈಗೇನು ಮಾಡುವುದೆಂದು ಯೋಚಿಸುತ್ತಾ ಕಣ್ಣು ಮುಚ್ಚಿದೆ.  
 
ಮುಂದೆ?.. 
 

ಮುಂದೇನು …. ಆಕೆ ಸಣ್ಣ ಚೀಟಿಯೊಂದನ್ನು  ಕೈಗಿತ್ತಳು.. " ಗ್ಯಾಸ್ ಸಿಲಿಂಡರ್ ಖಾಲಿ ಆಗಿದೆ, ಭಾಗ್ರೀಚಾ ಹೋಟಲ್ಲಿಂದ ಎಲ್ರೀಗೂ ಎನ್. ಐ. ಡಿ. ಪಾರ್ಸೆಲ್ ಕಟ್ಟಿಸ್ಕೊಂಡು ಬನ್ನಿ" ಎಂದು ಬರೆದಿದ್ದಳು… ಎಂದಿನಂತೆ ಹೆಂಡತಿಯಾಗಿ.  ನಾನು ಹಳೆಯ ಗಂಡನಾದೆ. ಅವ್ವ, ಮೊಮ್ಮಗನಿಗೆ ದೇವರ ಹಾಡು ಹಚ್ಚಲು ಹೇಳಿದಳು..  ನನ್ನ ಮಗ ಮೊಬೈಲ್ ಆನ್ ಮಾಡಿಟ್ಟು ಕುಳಿತ. ನಾನು ನನ್ನ ಹಳೆಯ ಸ್ಕೂಟರ್ ಏರಿ ಊಟ ತರಲು ಹೊರಟೆ.. " ಭಜನೆ ಮಾಡೋ ನಿರಂತರ .. ಹರಿ ಭಜನೆ ಮಾಡೋ ನಿರಂತರ  ಹಾಡು ಮನೆಯೊಳಗೆ…… 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

5 Comments
Oldest
Newest Most Voted
Inline Feedbacks
View all comments
nagalakshmi kadur
nagalakshmi kadur
10 years ago

ಎಷ್ಟೇ ವಯಸ್ಸಾದರೂ ಭೇಟಿಯೆಂದಕೂಡಲೇ ಮನಸಿನಲ್ಲೇನೋ ತವಕ.. ಪ್ರಿಯರನ್ನು ಕಾಣುವ ಕಾತರ ಎಲ್ಲವೂ ನೈಜವಾಗಿದೆ..ಪ್ರೀತಿಯ ಸೆಳೆತವೇ ಹಾಗೆ..ಒಂದು ಕ್ಷಣದ ಪ್ರೀತಿಗೂ ಪುಟಗಟ್ಟಲೆ ಬರೆಸಿಕೊಳ್ಳುವಷ್ಟು ಚೈತನ್ಯವಿದೆ.. ಕಾಲವೆಷ್ಟೇ ಮುಂದುವರೆದರೂ ನೆನಪುಗಳು ಹಿಂದಕ್ಕೇ ಎಳೆಯುತಿರುತ್ತವೆ ಅನ್ನುವುದಂತೂ ಸತ್ಯ.. ಚೆನ್ನಾದ ಬರಹ .

Santhoshkumar LM
10 years ago

🙂 hahahaha. super.

Dr Vani Sundeep
Dr Vani Sundeep
10 years ago

baraha chennagi moodibandide. The flow of the story is very natural.events described in the story should remain in the story only and not spill over to the real life.

Dr. Kotraswamy M
Dr. Kotraswamy M
10 years ago

Avalu kevala kanasina gelathiyaagiddarinda idannella bareyalu neevinnoo ulidukondiddeeri Amar! Ishtavaayithu. Aadaroo, nija jeevanadalli inthaha paristhithi odagidare paathragalu enu maadutthiddavu embudannu kanasina sahaayavilladeyoo neevu heliddare, obba lekhakanaagi sambandhagala sankeernathegalannu thaavu nibhaayisuva reethi matthu baadhyathegalannu artha maadikollabahudaagitthu annisithu.

Habeeb
Habeeb
10 years ago

Excellent Putty…..

5
0
Would love your thoughts, please comment.x
()
x