ಹಣ್ಣೆಲೆಯ ಹಾಡು: ಗಿರಿಜಾ ಜ್ಞಾನಸುಂದರ್

ಎಳೆ ಬಿಸಿಲು ಅಂದವಾದ ಬೆಳಕು ಬೀರುತ್ತಾ ಎಲ್ಲೆಡೆ ಹರಡುತ್ತಿದೆ. ಅಂಗಳದಲ್ಲಿ ಆರಾಮ ಖುರ್ಚಿಯಲ್ಲಿ ಬಿಸಿಲು ಕಾಯುತ್ತ ಮೈಯೊಡ್ಡಿರುವ ಕೃಷ ದೇಹದ ವೃದ್ಧ ಶ್ರೀನಿವಾಸ. ವಯಸ್ಸು ಸುಮಾರು ೮೯- ೯೦ ಆಗಿರಬಹುದು. ಸುಕ್ಕುಗಟ್ಟಿದ ಮುಖ, ಪೂರ್ತಿ ನರೆತ ಕೂದಲು. ಹಣೆಯಮೇಲೆ ಎದ್ದು ಕಾಣುವ ಗೆರೆಗಳು, ಬೊಚ್ಚು ಬಾಯಿ. ಇಷ್ಟೆಲ್ಲದರ ಮಧ್ಯೆ ಏನನ್ನೋ ಕಳೆದುಕೊಂಡು ಹುಡುಕುತ್ತಿರುವಂಥ ಕಣ್ಣುಗಳು. ತನ್ನ ಮಕ್ಕಳು ಮೊಮ್ಮಕ್ಕಳೊಂದಿಗೆ ಸುಖವಾದ ಜೀವನ ಕಾಣುತ್ತಿರುವ ಹಿರಿಯ ಜೀವ.

ದಿನವೂ ವಿಶ್ರಮಿಸುತ್ತ, ತನ್ನ ಹಿಂದಿನ ದಿನಗಳನ್ನು ನೆನೆಯುತ್ತ ಮೆಲುಕು ಹಾಕುವ ಹಿರಿಯ. ಹಳೆಯ ನೆನಪುಗಳೇ ಹೊಸಜೀವ ತುಂಬುತ್ತ ಉತ್ಸಾಹ ಕೊಡುತ್ತವೆ ಎಂದು ನಂಬಿ ತನ್ನ ಪ್ರತಿದಿನವನ್ನು ಸಾಗಿಸುತ್ತಿತ್ತು. ಮುಪ್ಪಾದ ಮೇಲೆ ಸೊಪ್ಪಂತಾಗಿರೋ ದೇಹ ಮತ್ತು ಮನಸ್ಸು. ಹಾಗೆಯೇ ತನ್ನ ಹಳೆಯದಿನಗಳಲ್ಲಿ ಇದ್ದ ಗತ್ತು ನೆನೆಸಿಕೊಂಡು ಮೆಲುಕು ಹಾಕುತ್ತಿತ್ತು.

ಸುಮಾರು ೩-೪ ವರ್ಷದ ವಯಸ್ಸು. ಮನೆಯಲ್ಲಿನ ಮೊದಲನೇ ಗಂಡು ಮಗ. ದೊಡ್ಡ ಕುಟುಂಬದಲ್ಲಿನ ಮೊದಲನೇ ಮೊಮ್ಮಗ. ಕೇಳುವುದಕ್ಕೆ ಮುನ್ನವೇ ಎಲ್ಲವು ಸಿಗುತ್ತಿತ್ತು. ಅತಿಯಾದ ಪ್ರೀತಿ, ನಡೆದರೆ ಸವೆಯುತ್ತಾನೆ ಮಗು ಅನ್ನುವಂತೆ ನೋಡಿಕೊಳ್ಳುತ್ತಿದ್ದರು. ಮನೆಯಲ್ಲಿ ಎಲ್ಲರ ಪ್ರೀತಿಯ ಮಗು “ಸೀನು”. ಅವನಿಗೆ ಎಲ್ಲರಿಗಿಂತ ಮೊದಲು ಊಟ. ಎಲ್ಲ ಹಬ್ಬಕ್ಕೂ ಅವನಿಗೆ ಬಟ್ಟೆ. ಅವನ ತಂಗಿ ಶಾರದಾ ಅವನು ಹುಟ್ಟಿದ ೨ ವರ್ಷದ ನಂತರ ಹುಟ್ಟಿದ್ದಳು. ಮನೆಯ ಮಹಾಲಕ್ಷ್ಮಿ ಅನ್ನಿಸಿಕೊಂಡಿದ್ದಳು. ಅವಳು ಹುಟ್ಟಿದಮೇಲೆ ಮನೆಯಲ್ಲಿ ತುಂಬ ಉನ್ನತಿಯಾಗಿತ್ತು. ಸೀನುವಿನ ದೊಡ್ಡ ಚಿಕ್ಕಪ್ಪನ ಮಕ್ಕಳು – ಗೋಪಿ, ಮುರಳಿ ಮತ್ತು ಸರಳ. ಎರಡನೆಯ ಚಿಕ್ಕಪ್ಪನ ಮಕ್ಕಳು – ಭಾಗ್ಯ ಮತ್ತು ಶಿವ. ಮನೆ ತುಂಬ ಮಕ್ಕಳಾದರು. ಅವರ ಆಟಪಾಠ ನೋಡುವುದೇ ಒಂದು ಚಂದ. ಎಲ್ಲರು ದೊಡ್ಡಣ್ಣಯಾದ ಸೀನುವನ್ನು ತುಂಬ ಭಯ ಭಕ್ತಿಯಿಂದ ನೋಡುತ್ತಿದ್ದರು. ಅವನ ಮಾತೆಂದರೆ ಎಲ್ಲರಿಗು ಗೌರವ. ವಯಸ್ಸಿನಲ್ಲಿ ದೊಡ್ಡವನಾಗಿದ್ದ ಅವನು ತನ್ನ ಮಾತು ನಡತೆಯಲ್ಲೂ ಗಾಂಭೀರ್ಯವನ್ನು ಹೊಂದಿದ್ದ. ದೊಡ್ಡವರಲ್ಲಿ ಭಯಭಕ್ತಿ, ವಿನಯ ಎಲ್ಲವನ್ನು ಅವನ ತಮ್ಮ ತಂಗಿಯರು ಅವನನ್ನು ನೋಡಿ ಕಲಿತಿದ್ದರು. ಓದಿನಲ್ಲೂ ಮುಂದಿದ್ದ. ಹಾಗಾಗಿ ಅವನ ಮಾರ್ಗದರ್ಶನವನ್ನು ಎಲ್ಲರು ಕೇಳಿ ಪಡೆಯುತ್ತಿದ್ದರು. ಊರಿನಲ್ಲಿ ಅಷ್ಟೊಂದು ಓದಿದ್ದ ಮೊದಲ ವ್ಯಕ್ತಿಯಾಗಿದ್ದ.

ಬ್ಯಾರಿಸ್ಟರ್ ಪರೀಕ್ಷೆ ಮುಗಿಸಿ ಲಾಯರ್ ವೃತ್ತಿ ಶುರುಮಾಡಿದ್ದ ಸೀನು. ಅವನ ಮಾತಿನ ತೀಕ್ಷ್ಣತೆಗೆ ಎಲ್ಲರು ಮಾರು ಹೋಗಿದ್ದರು. ಒಳ್ಳೆಯ ಹೆಸರನ್ನು ಪಡೆದ ಲಾಯರ್ ಎನ್ನಿಸಿಕೊಂಡಿದ್ದ. ಮನೆಯ ಹಿರಿ ಮಗ ಆಗಿದ್ದರಿಂದ ಎಲ್ಲರು ಅವನ ಹಿರಿಮೆಯನ್ನು ಕೊಂಡಾಡುತ್ತಿದ್ದರು. ತಂಗಿಯ ಮದುವೆಗೆಂದು ಮನೆಯಲ್ಲಿ ಹುಡುಕುತ್ತಿದ್ದಾಗ ತನ್ನ ಸಹೋದ್ಯೋಗಿ ಪರಶುರಾಮ್ ಒಳ್ಳೆಯ ವರನೆಂದೂ, ಅವನ ಬಗ್ಗೆ ತಿಳಿಸಿದ್ದ. ಅವರೆಲ್ಲರಿಗೂ ಒಪ್ಪಿಗೆಯಾದಮೇಲೆ ಅವನ ಬಳಿ ಶಾರದಾ ಬಗ್ಗೆ ವಿಷಯ ತಿಳಿಸಿ ಅವರ ಮನೆಯಲ್ಲಿ ಮಾತನಾಡಲು ತಿಳಿಸಿದ್ದ. ಒಳ್ಳೆಯ ಕುಟುಂಬವಾದ್ದರಿಂದ ಎಲ್ಲರಿಗು ಒಪ್ಪಿಗೆಯಾಗಿತ್ತು. ಶಾರದಾ ಸಹ ಅಣ್ಣನ ಮಾತಿಗೆ ಇಲ್ಲವೆನ್ನಲಿಲ್ಲ. ಅದ್ಧೂರಿಯಾಗಿ ಮದುವೆ ಮಾಡಿದ್ದರು. ಅವಳ ಮದುವೆಯಲ್ಲಿಯೇ ಸೀನುವಿಗೂ ಒಂದು ಸಂಬಂಧ ಬಂದಿತ್ತು. ವಾಣಿ ಸೀನುವಿನ ದೂರದ ಸಂಬಂಧಿಕರ ಮಗಳು. ವರಸೆಯಲ್ಲಿ ಆಗಿಬರುವುದೆಂದು ಅವಳ ಹಿರಿಯರು ನಿಶ್ಚಯಿಸಿ ತೀರ್ಮಾನಿಸಿದ್ದರು. ಶಾರದೆಯ ಮದುವೆಯಾದ ಇನ್ನೊಂದು ವರ್ಷದಲ್ಲಿ ಸೀನು ಮತ್ತು ವಾಣಿಯ ಮದುವೆ ಮುಗಿಯಿತು.

ಹೊಸ ಜೀವನ, ಹೊಸ ಪಯಣ ಸಂಗಾತಿಯೊಡನೆ ಬಹಳ ಸೊಗಸಾಗಿ ನಡೆದಿತ್ತು. ವಾಣಿ ಅನ್ನಪೂರ್ಣೇಶ್ವರಿಯ ಸ್ವರೂಪವಾಗಿದ್ದಳು. ಮನೆಗೆ ಯಾರೇ ಬಂದರು ಸೊಗಸಾಗಿ ಅಡುಗೆ ಮಾಡಿ ಅವರಿಗೆ ಬಡಿಸಿ ಆತಿಥ್ಯ ಮಾಡುತ್ತಿದ್ದಳು. ಅವರಿಬ್ಬರ ಜೋಡಿ ಆದರ್ಶವಾಗಿತ್ತು. ಶಾರದಾ ತವರು ಮನೆಗೆ ಬಂದಾಗ ತನ್ನ ಅತ್ತಿಗೆಯನ್ನು ನೋಡಿ ಬಹಳಷ್ಟು ಕಲಿತಿದ್ದಳು. ಸಹನೆ, ಪ್ರೀತಿ, ಉದಾತ್ತತೆ ಎಲ್ಲದರಲ್ಲೂ ವೀಣಾ ಎಲ್ಲರನ್ನು ಮೀರಿಸುವಂತಿದ್ದಳು. ಅವಳ ಪ್ರೀತಿಯಿಂದ ಕೂಡಿದ ಮಾತುಗಳು ಇಂಥವರನ್ನು ಮೋಡಿಮಾಡಿತ್ತಿದ್ದವು. ಮನೆಯ ಹಿರಿಯರಿಗೆಲ್ಲ ಅವಳ ಸೇವೆ ಸಂತೃಪ್ತಿ ಕೊಟ್ಟಿತ್ತು. ಹಿರಿಸೊಸೆಯಾಗಿ ಆದರ್ಶಪ್ರಾಯವಾಗಿದ್ದಳು. ಗೋಪಿ, ಸರಳ, ಮುರಳಿ, ಭಾಗ್ಯ ಮತ್ತು ಶಿವ ಎಲ್ಲರಿಗು ಸೀನು ಮತ್ತು ವೀಣಾ ತಮ್ಮ ಪ್ರೀತಿ ಹಾಗು ಮಾರ್ಗದರ್ಶನ ನೀಡುತ್ತಿದ್ದರು.

ಸೀನು ಕೆಲಸದ ಮೇಲೆ ನಗರಕ್ಕೆ ಬರಬೇಕಾಯಿತು. ಜೊತೆಯಲ್ಲಿ ವೀಣಾ ಸಹ ಬಂದಳು. ಅವರು ನಗರಕ್ಕೆ ಬಂದಮೇಲೆ ಅವರ ಪರಿವಾರದವರು ಇವರಬ್ಬರ ಪ್ರೀತಿಯನ್ನು ಬಹಳ ನೆನೆಸಿಕೊಳ್ಳುತ್ತಿದರು. ವೀಣಾ ತುಂಬು ಪರಿವಾರದಿಂದ ಹೊರಬಂದು ಒಂಟಿ ಎನಿಸುತ್ತಿತ್ತು. ಸ್ವಲ್ಪ ದಿನಗಳಲ್ಲಿ ಅವಳು ತಾಯಿ ಆದಳು. ಅವಳಿ ಮಕ್ಕಳು ಅವಳ ಗರ್ಭದಲ್ಲಿ ಬೆಳೆಯುತ್ತಿದ್ದಂತೆ ಅವಳ ಅರೋಗ್ಯ ಯಾಕೋ ಹದಗೆಡುತ್ತಿತ್ತು. ಸೀನು ಅವಳನ್ನು ಬಹಳ ಆರೈಕೆ ಮಾಡಿದರೂ ದಿನಗಳು ತುಂಬಿದಂತೆ ವೀಣಾ ದುರ್ಬಲವಾಗುತ್ತಿದ್ದಳು. ಪ್ರಸವ ವೇದನೆ ಶುರುವಾಗಿತ್ತು. ಸೀನು ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ೨೮ ಗಂಟೆಗಳಾಗಿದ್ದವು. ತುಂಬ ತೊಡಕಾಗಿದ್ದ ಕಾರಣ ವೈದ್ಯರೆಲ್ಲ ಚರ್ಚೆ ಮಾಡುತ್ತಿದ್ದರು. ಅವಳ ಜೀವಕ್ಕೆ ತೊಂದರೆ ಆಗಿತ್ತು. ಮಕ್ಕಳು ಆರೋಗ್ಯವಾಗಿದ್ದರು. ಆದರೆ ವೀಣಾ ಕೊನೆಯುಸಿರೆಳೆದಳು. ಸೀನುವಿಗೆ ದಿಕ್ಕುತೋಚದಂತಾಗಿತ್ತು. ಅವಳಿ ಗಂಡು ಮಕ್ಕಳು, ವೀಣಾ ಇಲ್ಲದ ಜೀವನ. ಏನು ಮಾಡಲು ಮನಸ್ಸಿಲ್ಲ. ಬದುಕೇ ಬೇಡವೆನಿಸಿತ್ತು. ಆದರೆ ಅವನನ್ನೇ ನಂಬಿರುವ ಎರಡು ಹಸುಗೂಸುಗಳು. ತುಂಬ ಕಷ್ಟಪಡುತ್ತಿದ್ದ ಅವನಿಗೆ ಹೆಣ್ಣುಕೊಡಲು ಬಹಳಷ್ಟು ಜನ ಮುಂದೆ ಬಂದರು. ಆದರೆ ಅವನಿಗೆ ತನ್ನ ವೀಣಾನಂತಹ ಹೆಣ್ಣು ಇನ್ನೊಂದಿರಲು ಸಾಧ್ಯವಿಲ್ಲ ಅನ್ನುವ ಗಾಢ ನಂಬಿಕೆ. ಹಾಗೆಂದು ಮಕ್ಕಳನ್ನು ಅವನೊಬ್ಬನೇ ನೋಡಿಕೊಳ್ಳಲು ಅಸಾಧ್ಯ. ಮನೆಯವರೆಲ್ಲ ಒಪ್ಪಿಗೆಯಂತೆ ಮೈತ್ರಿ ಅವನ ಎರಡನೇ ಸಂಗಾತಿಯಾದಳು. ಅಷ್ಟೊಂದು ಅನುಕೂಲಸ್ಥರಾಗಿರಲಿಲ್ಲವಾದ್ದರಿಂದ ಅವಳು ಹೊಂದಿಕೊಂಡು ಬದುಕುವುದನ್ನು ಚೆನ್ನಾಗಿ ಕಲಿತಿದ್ದಳು. ಈಗಾಗಲೇ ಎರಡು ಮಕ್ಕಳಿರುವ ಮನೆ. ಆದರೂ ಅವಳು ಆ ಮಕ್ಕಳನ್ನು ತುಂಬ ಚೆನ್ನಾಗಿ ನೋಡಿಕೊಂಡು ಸಂಸಾರ ತೂಗಿಸಿದ್ದಳು. ವೀಣಾನಷ್ಟಲ್ಲದಿದ್ದರು, ಮನೆಯಲ್ಲಿ ಏನೂ ಕೊರತೆ ಇಲ್ಲದಂತೆ ನಡೆಯುತ್ತಿತ್ತು. ಮೈತ್ರಿ ಎರಡು ಮಕ್ಕಳನ್ನು ಹಡೆದು ಒಳ್ಳೆಯ ಗೃಹಿಣಿ ಎನಿಸಿಕೊಂಡಿದ್ದಳು. ಸೀನುವಿಗೆ ಮಕ್ಕಳ ಆಟಪಾಠ, ಜವಾಬ್ದಾರಿ ಎಲ್ಲದರಲ್ಲೂ ಒಳ್ಳೆಯ ಸಂಗಾತಿಯಾಗಿದ್ದಳು.

ಸೀನು ತನ್ನ ಹುದ್ದೆಯಲ್ಲಿ ಬಡ್ತಿ ಪಡೆದು ಉನ್ನತ ಮಟ್ಟಕ್ಕೆ ತಲುಪಿದ್ದ. ತನ್ನೆಲ್ಲ ಉನ್ನತಿಗೆ ವೀಣಾಳ ಪ್ರೀತಿಯೇ ಹಾಗು ಮೈತ್ರಿಯ ಸಹಾಯವೇ ಕಾರಣ ಎಂದು ಅವನು ನಂಬಿದ್ದ. ಅವನಿಗೆ ವೀಣಾಳ ನೆನಪು ಆಗಾಗ ಕಾಡುತ್ತಿತ್ತು. ಅವಳ ತುಂಬು ಹೃದಯದ ಪ್ರೀತಿ, ಸೇವಾ ಮನೋಭಾವ ಎಲ್ಲವು ಅವಳನ್ನು ಮರೆಯಲಾಗದ ವ್ಯಕ್ತಿಯನ್ನಾಗಿಸಿದ್ದವು. ಮೈತ್ರಿ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಂಡು ಅವರನ್ನು ವಿದ್ಯಾವಂತರನ್ನಾಗಿಸಿದ್ದಳು. ಸೀನುವಿನ ಅಣ್ಣ ತಮ್ಮಂದಿರ ಮಕ್ಕಳಿಗಿಂತ ಸೀನುವಿನ ೩ ಗಂಡು ಮಕ್ಕಳು ತುಂಬ ಉನ್ನತ ಮಟ್ಟದಲ್ಲಿ ಓದಿ ತಮ್ಮ ತಂಗಿಯನ್ನು ಓದಿಸುತ್ತಿದ್ದರು.

ಕಾಲ ಓಡುತ್ತಿತ್ತು. ಮಕ್ಕಳು ಬೆಳೆದು ದೊಡ್ಡವರಾಗಿದ್ದರು. ಅವರ ಮದುವೆಯು ಆಯಿತು ತನ್ನ ಮೊಮ್ಮಕ್ಕಳನ್ನು ಎತ್ತಿ ಆಡಿಸಿ ಮೈತ್ರಿ ತನ್ನ ಪ್ರಾಣ ಬಿಟ್ಟಿದ್ದಳು. ಜೀವನ ಒಂದು ದಡಕ್ಕೆ ಬಂದಿತ್ತು. ಈಗ ಸೀನು ಪೂರ್ಣ ಒಂಟಿ ಆಗಿದ್ದ. ಆದರೆ ಪಕ್ವತೆ ಅವನಲ್ಲಿ ಮೂಡಿತ್ತು. ಹೆಗಲಿನ ಭಾರ ಇಳಿದಿತ್ತು. ಅವನ ಆರೈಕೆಗೆ ಮಕ್ಕಳು ಇದ್ದರು. ತುಂಬ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು.

ಎಷ್ಟೆಲ್ಲಾ ಇದ್ದರೂ ವಾಣಿ ಹಾಗು ಮೈತ್ರಿ ಅವರ ಛಾಪನ್ನು ಸೀನುವಿನ ಜೀವನದಲ್ಲಿ ಮೂಡಿಸಿದ್ದರು. ಜೀವನದ ಕೊನೆಯ ದಿನಗಳು ಒಂಟಿಯಾಗಿರುವುದು ವಿಚಿತ್ರವೆನಿಸುತ್ತಿತ್ತು. ಎಲ್ಲರ ಮಧ್ಯದಲ್ಲೂ ಒಂಟಿತನ. ಪ್ರೀತಿಯ ಮಕ್ಕಳು, ಮೊಮ್ಮಕ್ಕಳು ಆದರೂ ಏನೋ ಕೊರತೆ. ಮೈಯೆಲ್ಲಾ ಶಕ್ತಿ ಕಳೆದುಕೊಂಡು ಮುಪ್ಪು ಕಾಡುತ್ತಿದೆ. ವಾಣಿಯ ನೆನಪೇ ಚೈತನ್ಯ. ಮೈತ್ರಿಯ ಕಾಳಜಿಯೇ ಶಕ್ತಿ.

ಪ್ರತಿದಿನ ಅದೇ ಬಿಸಿಲು, ಅದೇ ಖುರ್ಚಿಯಲ್ಲಿ ಕುಳಿತ ಮುದುಕ ಸೀನು. ಅವನ ನೆನಪುಗಳನ್ನು ಮೆಲುಕು ಹಾಕುತ್ತ ದಿನಗಳನ್ನು ಸವೆಸುತ್ತಿದ್ದ. ಪೂರ್ಣ ಆಯಸ್ಸನ್ನು ದೇವರು ಸೀನುವಿಗೆ ಕೊಟ್ಟಿದ್ದ. ಭಗವಂತನ ಧ್ಯಾನ ಮಾಡುತ್ತ ಮಕ್ಕಳ ಪ್ರೀತಿಯ ಆರೈಕೆಯನ್ನು ಪಡೆದುಕೊಂಡು ದಿನ ಸವೆಸುತ್ತಿದ್ದ.

-ಗಿರಿಜಾ ಜ್ಞಾನಸುಂದರ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x