ಹಗಲು ರಾತ್ರಿಗಳ ಗೊಂದಲದಲ್ಲಿ…: ಗುರುಪ್ರಸಾದ ಕುರ್ತಕೋಟಿ

(ಇಲ್ಲಿಯವರೆಗೆ)
ವೆಂಕಣ್ಣ ಯಾರೋ ಒದ್ದೆಬ್ಬಿಸಿದಂತೆ ನಿದ್ದೆಯಿಂದ ಎದ್ದು ಕೂತಿದ್ದ. ಅವನ ನಿದ್ರಾ ಭಂಗಕ್ಕೆ ಕಾರಣವಾಗಿದ್ದು ಗಾಳಿಕುಳಿ ಗೆ ಸಿಕ್ಕು ನಡುಗುತ್ತಿದ್ದ ವಿಮಾನವೋ ಅಥವಾ ಅದರ ಪರಿಣಾಮ ಬಿದ್ದ ಕನಸಿನಿಂದಲೋ ಅವನಿಗೆ ಅರ್ಥವಾಗದಾಯ್ತು. ಆದರೂ ಅವನು  ಕಂಡ ಆ ಕನಸು ಭಲೆ ವಿಚಿತ್ರವಾಗಿತ್ತು. ಅದರಲ್ಲಿ, ಅ ದೊಡ್ಡ ವಿಮಾನದ ತುಂಬಾ ಇವನು ಹಾಗೂ ಜರ್ಮನ್ ವಿಮಾನ ಸಖಿ ಇಬ್ಬರೇ ಇದ್ದರು. ಇವನಿಗೆ ಖುಷಿಯಾಯ್ತಾದರೂ ಆಕಾಶದಲ್ಲಿ ಹಾರುತ್ತಿದ್ದ ವಿಮಾನದಲ್ಲಿ ತಮ್ಮಿಬ್ಬರ ಬಿಟ್ಟು ಉಳಿದವರೆಲ್ಲಿ ಎಂಬ ಆತಂಕದಲ್ಲಿ, ಎಲ್ರೂ ಎಲ್ಲಿಗೆ ಹೋದ್ರು? ಅಂತ ಕೇಳಿದ್ದಕ್ಕೆ ಆ ಸಖಿ, ಫುಟ್ ಬಾಲ್ ಆಡ್ತೀನಿ ಅಂದ್ರು ಅದಕ್ಕೆ ಎಲ್ರನ್ನೂ ಹೊರಗೆ ಕಳಿಸಿದ್ದೀನಿ, ನೀನು ಮಲಗಿದ್ದೆಯಲ್ಲಾ ಅದಕ್ಕೆ ನಿನ್ನನ್ನ ಎಬ್ಬಿಸಲಿಲ್ಲ ಅಂತ ಗಂಭೀರವಾಗಿ ಹೇಳಿ ಇವನ ಎದೆಯಲ್ಲಿ ಬಡಿತವನ್ನು ಹೆಚ್ಚು ಕಡಿಮೆ ನಿಲ್ಲಿಸಿದ್ದಳು! ಅದೃಷ್ಟ ವಶಾತ್ ಅಷ್ಟಕ್ಕೇ ಆ ಕನಸಿನಿಂದ ಎಚ್ಚರವಾಗಿತ್ತವನಿಗೆ. ವಾಸ್ತವಕ್ಕೆ ಬಂದು ದೀರ್ಘ ಉಸಿರೆಳೆದುಕೊಂಡ. ಪಕ್ಕದಲ್ಲಿ ಹೆಂಡತಿ ಇನ್ನೂ ಇದ್ದಳು ಅನ್ನುವುದೂ ಗಮನಿಸಿ ದೊಡ್ಡ ನಿಟ್ಟುಸಿರು ಬಿಟ್ಟ! ಕನಸುಗಳ ಲೋಕವೇ ಒಂದು ವಿಚಿತ್ರ. ನಾವಿರುವ ಪರಿಸರದ ಮೇಲೆ ನಮಗೆ ಬೀಳುವ ಕನಸುಗಳು ತಮ್ಮ ಸೀನುಗಳಲ್ಲಿ ಮಾರ್ಪಾಡು ಮಾಡಿಕೊಳ್ಳುತ್ತವೆ. ಬೆಂಗಳೂರಿನಲ್ಲಿ ಬೀಳುವ ಕನಸೇ ಬೇರೆ, ವಿಮಾನದಲ್ಲಿ ಕಾಣುವ ಕನಸೇ ಬೇರೆ. ಅದರೂ ಆ ಕನಸಿನ ದೆಸೆಯಿಂದ ಈಗ ನಿಜಕ್ಕೂ ಬಾಯಿ ಒಣಗಿ ನೀರಡಿಕೆ ಆಗಿತ್ತಾದರೂ, ಆ ಸಖಿಯನ್ನು ಕರಿಸಿ ನೀರು ಕೇಳಿ ಮತ್ತೆ ಹೆಂಡತಿಯ ಹತ್ತಿರ ತಿವಿಸಿಕೊಳ್ಳುವ ತೆವಲು ಅವನಿಗಿರಲಿಲ್ಲ. ಅದಕ್ಕೇನೆ ನೀರಿದ್ದ ಕಡೆಯೇ ಕುದುರೆ ಹೋಗಬೇಕು ಎಂಬಂತೆ ತಾನೇ ಎದ್ದು ಸಖಿಯನ್ನು ಹುಡುಕಿಕೊಂಡು ಹೋಗಿ ಮನಃ ಪೂರ್ತಿ ನೀರು ಕುಡಿದು ಅವಳಿಗೊಂದು ತುಂಬು ಹೃದಯದ  ಥ್ಯಾಂಕ್ಸ್ ಹೇಳಿ ವಾಪಸ್ಸು ಬಂದ. 

ಅಂತೂ ವಿಮಾನ ಜರ್ಮನಿಯ ಭೂ ಸ್ಪರ್ಶ ಮಾಡಿ, ಒಂದಿಷ್ಟು ಹೊತ್ತು ಅಲ್ಲಿನ ಔಪಚಾರಿಕತೆಗಳ ಮುಗಿಸಿ, ಅಮೆರಿಕಾಕ್ಕೆ ಹೋಗುವ ಮತ್ತೊಂದು ವಿಮಾನವೇರಿ ಕುಳಿತರು. ಮತ್ತದೇ ಏಕತಾನತೆ, ಬಾಯಾರಿಕೆ, ಕನಸುಗಳು ಮುಂದುವರಿದವು… ಆದರೆ ಈ ಬಾರಿ ಕನಸಿನಲ್ಲಿ ಜರ್ಮನ್ ಸುಂದರಿಯ ಬದಲು ಅಮೆರಿಕಾದ ಸ್ವಪ್ನಕೇಶಿ ಚೆಲುವೆ ಪದೆ ಪದೆ ಬಂದು ನಿದ್ದೆ ಕೆಡಿಸತೊಡಗಿದಳು!
                    —–
ಸಂಜೆಯಾದರೂ ಯಾರೊಬ್ಬರು ಕುಣಿಯುವುದ ನಿಲ್ಲಿಸುವ ಲಕ್ಷಣಗಳಿರಲಿಲ್ಲ. ಎಲ್ಲರಲ್ಲೂ ಪರಮಾತ್ಮ ಹೊಕ್ಕಿದ್ದನಲ್ಲ! ಸುಜಯ್ ನಂತೂ ಕುಡಿಯುವುದನ್ನೇ ಮರೆತು ನಿಶಾಳ ಧ್ಯಾನದಲ್ಲೇ ಮುಳುಗಿದ್ದ. ಅವಳ ನಗು ಅವನಿಗೆ ಮದ್ಯಕ್ಕಿಂತ ಜಾಸ್ತಿ ಕಿಕ್ಕು ಕೊಟ್ಟಿತ್ತು. ಅವಳು ಕುಣಿಯುತ್ತಿದ್ದುದನ್ನು ತದೇಕ ಚಿತ್ತನಾಗಿ ನೋಡುತ್ತಿದ್ದ. ಇದ್ದಕ್ಕಿದ್ದಂತೆ ಇವನ ಮನವರಿತವಳಂತೆ ಇವನ ಬಳಿಗೆ ಬಂದು 'come on lets dance!' ಅಂತ ಇವನ ಎಳೆದೊಯ್ದಳಲ್ಲ! ಇವನು ಬಿರುಗಾಳಿಗೆ ಸಿಲುಕಿ ತನ್ನ ಮೇಲಿನ ನಿಯಂತ್ರಣವನ್ನೇ ಕಳೆದುಕೊಂಡ ತರಗೆಲೆಯಂತಾಗಿ ಅವಳ ಹಿಂದೆಯೇ ನಡೆದಿದ್ದ. ಅವಳು ಕುಣಿಸಿದಂತೆ ಇವನೂ ಕುಣಿಯತೊಡಗಿದ …

ಅಂತೂ ಔಟಿಂಗ್ ಅನ್ನುವ ಜಾತ್ರೆ ಕೊನೆಯ ಹಂತ ಮುಟ್ಟಿತ್ತು. ಒಬ್ಬಿಬ್ಬರು ಹಪಹಪಿಸಿ ತಮ್ಮ ದೇಹದ ಸಾಮರ್ಥ್ಯಕ್ಕಿಂತ ಹೆಚ್ಚೇ ಕುಡಿದು, ದಕ್ಕಿಸಿಕೊಳ್ಳಲಾಗದೆ  ಔಕ್ ಔಕ್ ಅಂತ ಅಮ್ಲೆಟ್ ಹಾಕಲು ಶುರು ಮಾಡಿದ್ದರು. ಒಬ್ಬನಂತೂ ಟೈಟ್ ಆಗಿ ಎಲ್ಲರ ಜೊತೆಗೂ ಜಗಳ ಶುರು ಹಚ್ಚಿಕೊಂಡಿದ್ದ. ಇನ್ನೊಬ್ಬ ಕುಡಿದಿರದಿದ್ದರೂ ಕುಡಿದಂತೆ ನಟಿಸಿ ತಾನೂ ಯಾರಿಗೆ ಕಡಿಮೆ ಇಲ್ಲ ಅಂತ ತೋರಿಸುವ ಪ್ರಯತ್ನದಲ್ಲಿದ್ದ. ಇನ್ನೊಂದಿಬ್ಬರು 'ಯಾರಿಗೆ ಬೇಕು ಈ ಲೋಕ … ' ಅಂತ ಅಲ್ಲೇ ಜಾಗ ಸಿಕ್ಕಲ್ಲಿ ಗಡದ್ದಾಗಿ ಗೊರಕೆ ಹೊಡೆಯುತ್ತಿದ್ದರು. ಮತ್ತೂ ಕೆಲವರು, ಕುಡಿದಾಯಿತು ಇನ್ನು ಮನೆಗೆ ಹೋಗಿ ತಂತಮ್ಮ ಹೆಂಡದಿರನ್ನು ಎದುರಿಸುವ ಬಗೆಯೆಂತು ಎನ್ನುವ ಗಹನವಾದ ಯೋಚನೆಯಲ್ಲಿ ಮುಳುಗಿದ್ದರು. 

ಸುಜಯ್ ಮಾತ್ರ ಹೊಸ ಗೆಳತಿಯೊಬ್ಬಳು ದೊರಕಿದ ಸಂಭ್ರಮದಲ್ಲಿದ್ದ! ಎಲ್ಲರಿಗೂ ಬೀಳ್ಕೊಟ್ಟು ಶಾಂತನನ್ನು ತನ್ನ ಕಾರಿನಲ್ಲಿ  ಅವನ ಮನೆಗೆ ಬಿಟ್ಟು ತನ್ನ ಗೂಡಿಗೆ ಮರಳಿದವನು ರಾತ್ರಿ ಎಷ್ಟೋ ಹೊತ್ತಿನವರೆಗೆ ಮತ್ತೆ ನಿದ್ರಾಹೀನನಾಗಿ ಹೊರಳಾಡಿದ. ಅವನನ್ನು ನಿಶಾ ಸಂಪೂರ್ಣವಾಗಿ ಆವರಿಸಿದ್ದಳು! 
                    ——
ಕಡೆಗೂ ಮೂರು ವಿಮಾನಗಳ ಬದಲಿಸಿ, ಹಗಲು ರಾತ್ರಿಗಳ ಲೆಕ್ಕ ಹಾಕುತ್ತಲೇ, ವೆಂಕಣ್ಣ ಕುಟುಂಬ ಸಮೇತನಾಗಿ ಸ್ಯಾಂಡಿಗೆ ಬಂದಿಳಿದಾಗ ಅಲ್ಲಿನ ಕಾಲಮಾನದ ಪ್ರಕಾರ ಗಂಟೆ ಎಂಟಾಗಿತ್ತು. ಮೂವತ್ತು ಗಂಟೆಗಳ ಪ್ರಯಾಣದಲ್ಲಿ ಜಾನು ಮತ್ತು ಖುಷಿ ಬಳಲಿದ್ದರು ಆದರೂ ಅಮೇರಿಕಾ ಖಂಡದ ದರ್ಶನ ಮಾಡಿದ ಸಂಭ್ರಮ ಅವರ ಮುಖದಲ್ಲಿತ್ತು. ಟ್ಯಾಕ್ಸಿ ಯಲ್ಲಿ ಕಂಪನಿಯ ಫ್ಲಾಟ್ ಗೆ ತೆರಳಿ ಗ್ರಹಪ್ರವೇಶ ಮಾಡಿ ಮಲಗಲು ಹವಣಿಸಿದವರಿಗೆ ನಿದ್ರೆ ಬರುತ್ತಿಲ್ಲ. ಕಾರಣವಿಷ್ಟೇ, ಪಾತಾಳದಲ್ಲಿ ರಾತ್ರಿಯಾದರೂ ಈಗ ಭಾರತದಲ್ಲಿ ಬೆಳಗಿನ ಸಮಯ! ಅಮೆರಿಕಾದ ಹಗಲು ರಾತ್ರಿಗಳಿಗೆ ಇವರ ದೇಹ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಿತ್ತು. ಆದರೆ ಮರುದಿನ ಬೆಳಿಗ್ಗೆ ಎದ್ದು ಇವನು ಅಮೆರಿಕಾದ ತನ್ನ ಆಫೀಸಿಗೆ ಹೋಗಲೇಬೇಕಿತ್ತು. ತನ್ನ ಕ್ಲೈಂಟ್ ಜೇಮ್ಸ್ ಗೆ ಮುಖ ತೋರಿಸಬೇಕಿತ್ತು … ಎಷ್ಟೇ ಹೊರಳಾಡಿದರೂ ನಿದ್ದೆ ಮಾತ್ರ ಹತ್ತಿರಕ್ಕೂ ಸುಳಿಯದಾಗಿತ್ತು….              

(ಮುಂದುವರಿಯುವುದು…)     

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

5 Comments
Oldest
Newest Most Voted
Inline Feedbacks
View all comments
ಮೂರ್ತಿ
ಮೂರ್ತಿ
9 years ago

ಸೊಗಸಾಗಿದೆ. 'ಗಾಳಿಕುಳಿ'ಯಂತ ಶಬ್ದ ಪ್ರಯೋಗಗಳ ಮುಂದರಿಕೆ ಲೇಖನಕ್ಕೆ ಭೂಷಣ. ಕನಸಿನ ಪರಿಕಲ್ಪನೆ ಹಾಗೂ ಪೂರಕವಾಗಿ ಅನುರಣಿಸುವ ಪ್ರಶ್ನೆ, ಯಾನದಲ್ಲಿ ಭೈರಪ್ಪನವರು ಕೇಳುವ ಪ್ರಶ್ನೆಯನ್ನು ಅಯಾಚಿತವಾಗಿ ನೆನಪಿಸಿತು ! ತಮ್ಮ ಬರವಣಿಗೆಯ ಯಾನ ಹೀಗೇ ಮುಂದುವರಿಯಲಿ…

ಗುರುಪ್ರಸಾದ ಕುರ್ತಕೋಟಿ

ಮೂರ್ತಿ, ಈ ಕಂತು ನಿಮಗೆ ಇಷ್ಟವಾಗಿದ್ದು ಕೇಳಿ ಖುಷಿಯಾಯ್ತು. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು!

anant minajagi
anant minajagi
9 years ago

ಪ್ರಸಾದ ಆ ಹಳೆ ಜೋಕ ಬಿಟ್ರ ಲೇಖನ ಬಂಪರ ಐತಿ.ಆದ್ರ ನಗಬ್ಯಾಡ ಒಂದು ಸಣ್ಣ ಸಂದೇಹ,ಸ್ವಪ್ನಕೇಶಿ ಅಂದ್ರ ಏನು?

ಗುರುಪ್ರಸಾದ ಕುರ್ತಕೋಟಿ
Reply to  anant minajagi

ಅನಂತ, ಓದಿ ಮೆಚ್ಚಿಕೊಂಡಿದ್ದಕ್ಕ ಖುಷಿ ಆತು ನೋಡಪಾ! ಅಂಧಂಗ ಆ ಹಳೆ ಜೋಕು ಯಾರಿಗೂ ಗೊತ್ತಿರ್ಲಿಕ್ಕಿಲ್ಲ ಅನ್ನೊ ಭ್ರಮೆಯೊಳಗ ನಾ ಇದ್ದೆ.. 'ಸ್ವರ್ಣ'ಕೇಶಿ ಅಂತ ತಲ್ಯಾಗ ಇಟಕೊಂಡು 'ಸ್ವಪ್ನ'ಕೇಶಿ ಅಂತ ಬರದ ಬಿಟ್ಟೆನಿ! ಆ ತಪ್ಪನ್ನ ತಿದ್ದಿದ್ದಕ್ಕ ನಿನಗ ನಾ ಋಣಿ 🙂

trackback

[…] (ಇಲ್ಲಿಯವರೆಗೆ) ಅಂತೂ ಅಮೆರಿಕಾದಲ್ಲಿ ಬೆಳಗಾಗಿತ್ತು! ಜಾನು ಆ ಸುಸಜ್ಜಿತವಾದ ಫ್ಲಾಟ್ ನ ಒಂದು ಸುತ್ತು ತಿರುಗಿ ಎಲ್ಲವನ್ನೂ  ಪರೀಕ್ಷಿಸುತ್ತಿದ್ದಳು. ಬಟ್ಟೆ ಒಗೆದು, ಒಣಗಿಸುವ ಯಂತ್ರವಿದ್ದದ್ದು  ಅಷ್ಟು ವಿಶೇಷವೆನಿಸದಿದ್ದರೂ  ಪಾತ್ರೆ ತೊಳೆಯುವ ಯಂತ್ರ ಗಮನ ಸೆಳೆಯಿತು. ಸಧ್ಯ ಕೆಲಸದವಳನ್ನು ಕಾಯುವ, ಓಲೈಸುವ ಚಿಂತೆಯಿಲ್ಲವೆನ್ನುವ ಸಮಾಧಾನ ಅವಳಿಗೆ. ಅಡಿಗೆ ಮನೆಯಲ್ಲಿ ಓವನ್, ಹೀಟರ್, ಇಂಡಕ್ಶನ್ ಓಲೆಗಳ ಜೊತೆಗೆ ಸೌಟು, ಪಾತ್ರೆ ಪಗಡಗಳೆಲ್ಲವೂ  ಇದ್ದದ್ದು ಖುಷಿಯಾಯ್ತಾದರೂ ಅಲ್ಲೆಲ್ಲೂ ಲಟ್ಟಣಿಗೆ ಕಾಣದೇ ಅವಳು ಚಿಂತೆಗೊಳಗಾದಳು. ಆಗಲೇ ಸ್ನಾನ ಮುಗಿಸಿ ಬಂದಿದ್ದ ವೆಂಕಣ್ಣ ಇವಳ ಮುಖಭಾವವನ್ನು ಗಮನಿಸಿ, ಲಟ್ಟಣಿಗೆಯ ಸುದ್ದಿ ಕೇಳಿ ಬಿದ್ದು ಬಿದ್ದು ನಕ್ಕ.  […]

5
0
Would love your thoughts, please comment.x
()
x