ಹಗಲು ದರೋಡೆಕೋರರು…: ಗುರುಪ್ರಸಾದ ಕುರ್ತಕೋಟಿ

ನಾನು ಮದ್ಯಾಹ್ನ ಮಲಗೋದೇ ಅಪರೂಪ. ಆದರೂ ಅವಕಾಶ ಸಿಕ್ಕಾಗ ಬಿಡೋಲ್ಲ. ನಾನು ಹಾಗೆ ಮಲಗಿದಾಗ ನನ್ನ ಫೋನಿಗೆ ನನ್ನ ಮೇಲೆ ತುಂಬಾ ಅಸೂಯೆ! ಅವತ್ತೂ ಬೊಬ್ಬೆ ಹೊಡೆದು ನನ್ನ ಬಡಿದೆಬ್ಬಿಸಿತ್ತು. ನಮ್ಮ “ಬೆಳೆಸಿರಿ”ಯಲ್ಲಿ ಕೆಲಸ ಮಾಡುತ್ತಿದ್ದವ ಮಾಡಿದ ಫೋನ ಅದು. ಕಟ್ ಮಾಡಿದರೂ ಮತ್ತೆ ಮತ್ತೆ ಮಾಡತೊಡಗಿದ. ಒಂದಿಷ್ಟು ತರಕಾರಿಗಳ ಡೆಲಿವರಿ ಮಾಡಲು ನನ್ನ ಸ್ಕೂಟರ್ ನಲ್ಲಿ ಯೆಲಹಂಕಾದ ಬಳಿಯ ಒಂದು ಅಪಾರ್ಟ್ಮೆಂಟ್ ಗೆ ಹೋಗಿದ್ದ. ಆಗ ತಾನೇ ಜೋಂಪು ಹತ್ತಿದ್ದ ಬ್ರಾಹ್ಮಣನ ನಿದ್ದೆ ಭಂಗ ಮಾಡುವುದು ದೊಡ್ಡ ಅಪರಾಧ! ಅಂಥದ್ದೇನಾಯ್ತು ಅಂತ ಫೋನ್ ಎತ್ತಿ ಕೇಳಿದೆ…

ಸರ್ ಸ್ಕೂಟರ್ accident ಆಗಿದೆ. ಸ್ಕೂಟರ್ ಕೀಲಿ ನನ್ನ ಕೈಯಿಂದ ಕಸಿದುಕೊಂಡು ಹೋಗಿದ್ದಾರೆ…

ನನ್ನ ನಿದ್ದೆ ಹಾರಿ ಹೋಗಿತ್ತು. ಮುಂದಿನ ಘಟನೆಗಳು ಕಣ್ಣ ಮುಂದೆ ಸಿನೆಮಾ ಪರದೆಯ ಮೇಲೆ ಮೂಡಿದಂತೆ ಮೂಡತೊಡಗಿದವು. ಈ ಪುಣ್ಯಾತ್ಮ ಕೀಲಿ ಕೂಡ ಅವರಿಗೆ ಕೊಟ್ಟು ಕೂತಿದ್ದ. ಹೀಗಾಗಿ ಅದನ್ನು ಅವರಿಂದ ಪಡೆಯಲು ಹರಸಾಹಸ ಮಾಡಲೇಬೇಕು ಎಂಬುದು ನನಗೆ ಖಚಿತವಾಗಿತ್ತು. ಅವರಿಗೆ ಏನಾದರೂ ಪೆಟ್ಟಾಗಿದೆಯೇ ಎಂದು ವಿಚಾರಿಸಿದೆ.. ಅವರು ಮೂರು ಜನ ಒಂದೇ ಸ್ಕೂಟರ್ ನಲ್ಲಿ ಕೂತಿದ್ದರಂತೆ. ತನ್ನ ಎದುರಿಗೆ ಎಡಗಡೆ ತಮ್ಮ ಸ್ಕೂಟರ್ ನಿಲ್ಲಿಸಿಕೊಂಡಿದ್ದವರು ಒಮ್ಮಿಂದೊಮ್ಮೆಲೆ ತಿರುಗಿಸಿಬಿಟ್ಟರು, ಇಂಡಿಕೇಟರ್ ಕೂಡ ಹಾಕಿರಲಿಲ್ಲ, ಅವರಿಗೆ ಏನೂ ಆಗಿಲ್ಲ, ಅವರ ಸ್ಕೂಟರ್ಗೆ ಕೂಡ ಅಷ್ಟೊಂದು ದೊಡ್ಡ ಪೆಟ್ಟಾಗಿಲ್ಲ, ಆದರೂ 3000 ಕೇಳುತ್ತಿದ್ದಾರೆ ಅಂದ. ದುಡ್ಡು ಕೇಳುತ್ತಿದ್ದಾರೆ ಅನ್ನುವುದನ್ನು ಈಗಾಗಲೇ ಊಹಿಸಿದ್ದೆನಾದ್ದರಿಂದ ಅದೇನು ಅಷ್ಟು ಆಶ್ಚರ್ಯ ಆಗಲಿಲ್ಲ.ಆದರೆ ಯಾರಿಗೂ ಪೆಟ್ಟಾಗಿಲ್ಲ ಅಂತ ತಿಳಿದು ಸ್ವಲ್ಪ ಸಮಾಧಾನ ಆಯ್ತು. ದಡಬಡಿಸಿ ಅಲ್ಲಿಗೆ ಹೊರಟೆ. ಮಳೆಯ ವಾತಾವರಣ ಇತ್ತಾದ್ದರಿಂದ ಕಾರ್ ನಲ್ಲೆ ಹೊರಟೆ. ಯಲಹಂಕಾದ ಮೂಲನಿವಾಸಿ ಒಬ್ಬರು ಜೊತೆಗೆ ಇದ್ದರೆ ಒಳ್ಳೆಯದು ಅಂತ ಗೆಳೆಯ ವಿನಯ್ ಗೆ ಕೂಡ ಬರ ಹೇಳಿದೆ.

ಮೊದಲೇ ಊಹಿಸಿದಂತೆ ಒಂದಿಷ್ಟು ಜನ ಅಲ್ಲಿ ಸೇರಿದ್ದರು. ಅಲ್ಲಿದ್ದ ಯಾರಿಗೂ ಮಾಡಲು ಕೆಲಸವಿಲ್ಲ ಅಂತ ಹೇಳಲು ಯಾವುದೇ ಅನುಭವಿ ಕಣ್ಣುಗಳು ಬೇಕಿರಲಿಲ್ಲ! ಅವರಲ್ಲಿ ಮುಖ್ಯ ಪಾತ್ರಧಾರಿಗಳು ಮೂವರು. ಒಬ್ಬ ಪೂರ್ತಿ ಎಣ್ಣೆ ಕುಡಿದು ಓಲಾಡುತ್ತಿದ್ದ. ಅವನದು cutting shop ಇದೆಯಂತೆ. Corona ಸಮಯವಾಗಿದ್ದರಿಂದ ಅವನ ಕತ್ತರಿಗೆ ಕೆಲಸ ಇರಲಿಲ್ಲ. ಮತ್ತೇನು ಮಾಡಬೇಕು ಅವನು? ನಮ್ಮೆದುರು ಕತ್ತಿ ಮಸಿದುಕೊಂಡು ನಿಂತಿದ್ದ!

ಅವರ ಗಾಡಿಗೆ ಹೆಚ್ಚಿನ ತೊಂದರೆ ಆಗಿರಲಿಲ್ಲ. ನಮ್ಮ ಹುಡುಗ ನಾನು ಬರುತ್ತಲೇ ಹುರುಪಿಗೆ ಬಂದು ಅವರ ಮೇಲೆಯೇ ಕಂಪ್ಲೇಂಟ್ ಮಾಡೋಕೆ ಶುರು ಮಾಡಿದ. ಅದನ್ನು ಕೇಳಿ ಕುಡಿದವನ ಎಣ್ಣೆ ನೆತ್ತಿಗೇರಿತ್ತು. ಅವನು ಇನ್ನೂ ಜೋರಾಗಿ ಕೂಗಲು ಶುರು ಮಾಡಿದ. ಅವನಿಗೆ ತನ್ನ ರಾತ್ರಿಯ ಎಣ್ಣೆಗೆ ದುಡ್ಡು ತಪ್ಪಿದರೆ ಎಂಬ ಚಿಂತೆ.. ನಮ್ಮ ಹುಡುಗ ಅವರಿಗೆ ಸ್ಕೂಟರ್ ಚಾವಿ ಕೊಟ್ಟಿದ್ದಲ್ಲದೆ ಮಾಡಿದ್ದ ಇನ್ನೊಂದು ಮೂರ್ಖತನ ಎಂದರೆ ನಾನು ಕಾರಲ್ಲಿ ಬರ್ತಿದೀನಿ ಅಂತ ಹೇಳಿದ್ದು. ನಾನು ಕಾರನ್ನು ದೂರ ಎಲ್ಲೋ ಇಟ್ಟು ಬಂದಿದ್ದೆನಾದರೂ, ಇವನು ಹೀಗೆ ಹೇಳಿದ್ದರಿಂದ ನಾನು ದುಡ್ಡಿರುವ ಅಸಾಮಿ ಅಂತ ಅವರಿಗೆ ಅನಿಸಿರಬೇಕು. ಅವರು ಜೋರು ದನಿಯಲ್ಲಿ ಒದರಾಡುತ್ತ ೩೦೦೦ ಅಂದಿದ್ದನ್ನ ಈಗ ೫೦೦೦ ಕ್ಕೆ ಹೆಚ್ಚಳ ಮಾಡಿದ್ದರು, ಕೊಡಲೇಬೇಕು ಅಂತ ಗಲಾಟೆ ಮಾಡತೊಡಗಿದರು. ಪುಣ್ಯ ನನ್ನದು ಮಾರುತಿ ಆಲ್ಟೊ ಕಾರ್. ಇನ್ನೂ ದೊಡ್ಡ ಕಾರ್ ಇದ್ದಿದ್ದರೆ ಹತ್ತು ಸಾವಿರ ಅನ್ನುತ್ತಿದ್ದರೋ ಏನೋ. lockdown ಆಗಿ ನನ್ನದೂ ಕೂಡ ಬಿಸಿನೆಸ್ ಇಲ್ಲ ಹಾಗೆ ಹೀಗೆ ಅಂತ ಅವರೆದುರು ಗೋಳಾಡಿದೆ. ಅವರು ಅದಕ್ಕೆ ಕವಡೆ ಕಾಸಿನ ಕಿಮ್ಮತ್ತೂ ಕೊಡಲಿಲ್ಲ. ಪೊಲೀಸರಿಗೆ ತಿಳಿಸಿದರೆ ಹೇಗೆ ಅನಿಸಿದರೂ ಯಾಕೋ ಮನಸ್ಸಾಗಲಿಲ್ಲ. ಅವರು ಬಂದು ಇನ್ನೂ complication ಮಾಡಿದರೆ…. ಅಥವಾ ಅವರು ಬಗೆಹರಿಸಿ ಹೋದ ಮೇಲೆ ಅಲ್ಲಿನವರೆ ಆದ ಕೆಲಸವಿಲ್ಲದ ಈ local ಹುಡುಗರು ನಮಗೆ ತೊಂದರೆ ಮಾಡಿದರೆ.. ಎಂಬಿತ್ಯಾದಿ ಹೆದರಿಕೆಗಳನ್ನು ಹೇರಿಕೊಂಡು ಆ ದರೋಡೆಕೋರರಿಂದ ತಪ್ಪಿಸಿಕೊಂಡರೆ ಸಾಕು ಅಂತ ಒಂದಿಷ್ಟು ದುಡ್ಡು ಅವರಿಗೆ ಕೊಟ್ಟು ಮನೆಗೆ ಬಂದೆ. ನೀನ್ಯಾಕೆ ಅವರಿಗೆ ದುಡ್ಡು ಕೊಟ್ಟೆ, ಪೋಲಿಸ್ ಕಂಪ್ಲೇಂಟ್ ಕೊಡಬೇಕಿತ್ತು ಅಂತ ನನ್ನ ಮಗಳು ಬೈಯುತ್ತಿದ್ದಳು. ಅವಳೆದುರು ನಾನೊಂದು ಅಸಹಾಯಕ ಪ್ರಾಣಿಯಾಗಿದ್ದೆ. ಒಂದು ಕೆಟ್ಟ ಉದಾಹರಣೆಯಾಗಿ ನಿಂತಿದ್ದೆ.

ರಾತ್ರಿ ಅನಿಸುತ್ತಿತ್ತು… ನಾವು ಕಷ್ಟ ಪಟ್ಟು ಗಳಿಸಿದ ದುಡ್ಡು ಇಂತಹ ಬಡ್ಡಿ ಮಕ್ಕಳಿಗೆ ಸಲೀಸಾಗಿ ಕೊಟ್ಟು ಬಿಟ್ಟೆನಲ್ಲ ಅಂತ. ಕೋರೋನಾ ಅವರಿಗೆ ಕೆಲಸವಿಲ್ಲದ ಹಾಗೆ ಮಾಡಿದೆ ಹೀಗಾಗಿ ಇದೆ ಇವರ ಕೆಲಸ. ಅವರಿಗೆ ನಾನು ದುಡ್ಡು ಕೊಡೋದಿಲ್ಲ ಹೋಗು ಅಂದಿದ್ದರೂ ಅವರಿಗೆ ಏನೂ ಮಾಡಲು ಆಗುತ್ತಿರಲಿಲ್ಲ, ಆದರೆ ಅವರ ಜೊತೆಗೆ ಗುದ್ದಾಡಲು ನನ್ನ ಬಳಿ ಸಮಯ ಇತ್ತೇ? ಹಾಗೂ ಹೀಗೂ ಗುದ್ದಾಡಿದ್ದರು ನನ್ನ ಸ್ಕೂಟರ್ ಅವರು ತಮ್ಮ ಬಳಿಯೇ ಇಟ್ಟುಕೊಂಡು ಬಿಟ್ಟಿದ್ದರೆ ಏನು ಮಾಡಬೇಕಿತ್ತು… ಹಾಗೆ ಹೀಗೆ ಅನ್ನುವ ಪ್ರಶ್ನೆಗಳು ಬಂದು ಹೋದವು. ಅಂತೂ ಯಾವಾಗಲೋ ನಿದ್ದೆಗೆ ಜಾರಿದ್ದೆ ಗೊತ್ತಾಗಲಿಲ್ಲ.

ಘಟನೆ ಎರಡು: ಇದು ತುಂಬಾ ಹಿಂದೆ ನಡೆದದ್ದು. ನನ್ನ ಮಗಳು ಮೂರು ವರ್ಷದವಳು ಆಗ. ನಮ್ಮ ಅಪಾರ್ಟ್ ಮೆಂಟ್ ನ ಪಾರ್ಕ್ ನಲ್ಲಿ ಆಡುವಾಗ ಮಣ್ಣಿನಲ್ಲಿ ಇದ್ದ ಕೆಂಪು ಇರುವೆಗಳು ಅವಳ ಕಾಲಿಗೆ ಕಚ್ಚಿ ಆ ಭಾಗವೆಲ್ಲ ಕೆಂಪಾಗಿ ಬಾವು ಬಂತು. ನಾವೂ ಸಹಜವಾಗಿ ಹೆದರಿದೆವು. ರವಿವಾರ ಆಗಿದ್ದರಿಂದ ಯಾವ ವೈದ್ಯರೂ ಸಿಗಲಿಲ್ಲ ಹೀಗಾಗಿ ಹತ್ತಿರದಲ್ಲೇ ಇದ್ದ ದೊಡ್ಡ ಆಸ್ಪತ್ರೆಗೆ ಹೋದೆವು. ಅಲ್ಲಿ registration ಎಲ್ಲಾ ಮುಗಿದ ಕೂಡಲೇ ಒಬ್ಬ ಡಾಕ್ಟರ್ ಬಂದು ಮಗಳ ಕಾಲು ಪರೀಕ್ಷೆ ಮಾಡಿದರು. ಕೂಡಲೇ ಇನ್ನೂ ಎರಡು ಮೂರು ಡಾಕ್ಟರ್ ಒಟ್ಟಿಗೆ ಸೇರಿದರು. ತಮ್ಮ ತಮ್ಮಲ್ಲೇ ಗಹನ ಚರ್ಚೆ ನಡೆಸಿದರು. ಒಬ್ಬರು ನನ್ನನ್ನು ಉದ್ದೇಶಿಸಿ ಹೇಳಿದರು. ಇದು ತುಂಬಾ ಕೆಟ್ಟ ಇನ್ಫೆಕ್ಷನ್. ಹಾಗೆ ಬಿಟ್ಟರೆ ಇಡೀ ದೇಹವನ್ನೇ ಆವರಿಸಿ ಬಿಡುತ್ತದೆ. ಉಸಿರಾಟಕ್ಕೂ ತೊಂದರೆ ಆಗುತ್ತೆ, ಕೂಡಲೇ ಅಡ್ಮಿಟ್ ಮಾಡಬೇಕು ಅಂದರು. ನಮಗೆ ಯಾಕೋ ಇದೊಂದು ಮಸಲತ್ತು ಅನಿಸಿ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಮನೆಗೆ ಬಂದೆವು. ಅವಳ ಕಾಲಿಗೆ ಕೊಬ್ಬರಿ ಎಣ್ಣೆ ಸವರಿ ಮಲಗಿದೆವು. ಮಗಳು ಅರಾಮಾದಳು!

ಘಟನೆ ಮೂರು: ಹೋದ ವರ್ಷ ಅಪ್ಪನಿಗೆ ಒಮ್ಮಿಂದೊಮ್ಮೆಲೆ ಉಸಿರಾಟದ ತೊಂದರೆ ಶುರುವಾಗಿತ್ತು. ಹತ್ತಿರದಲ್ಲೇ ಇರುವ ಪ್ರತಿಷ್ಟಿತ ಆಸ್ಪತ್ರೆ ಒಂದಕ್ಕೆ ಹೋದೆವು. ಹೋದ ಕೂಡಲೇ ಅಪ್ಪನಿಗೆ ಆಕ್ಸಿಜನ್ ಮಾಸ್ಕ ಹಾಕಿ ಮಲಗಿಸಿಯೇ ಬಿಟ್ಟರು. ಏನೇನೋ ಒಂದಿಷ್ಟು ಟೆಸ್ಟ್ ಗಳು ನಡೆಸಿ, ಒಂದು ಬದಿಯ ಹಾರ್ಟ್ ಫೈಲ್ ಆಗಿದೆ ಬ್ಲಾಕ್ ಕೂಡ ಇರಬಹುದು. ಇದರಿಂದಾಗಿ ಪುಪ್ಪಸದಲ್ಲಿ ನೀರು ತುಂಬಿದೆ ಎಂದರು. ನನ್ನನ್ನು ಹಾಗೂ ನನ್ನ ತಮ್ಮನನ್ನು ಕರೆದು ಒಂದು ರೂಮಿನಲ್ಲಿ ಕೂಡಿಸಿ ಹೋದರು. ಎಷ್ಟೋ ಹೊತ್ತು ಯಾರೂ ಬರಲೇ ಇಲ್ಲ. ಆಮೇಲೆ ಸಿನೆಮಾದಲ್ಲಿ ತೋರಿಸುವಂತೆ ಒಂದಿಷ್ಟು ಡಾಕ್ಟರಗಳು ಹಾಗೂ ಇನ್ನೂ ಯಾರೋ ಗಂಭೀರ ಮುಖ ಮಾಡಿಕೊಂಡು ಬಂದು ತಂಬಾ ಸೀರಿಯಸ್ ಮ್ಯಾಟರ್ ಅನ್ನೋ ತರಹ ಹೇಳಿದರು. ಸೀರಿಯಸ್ ಕಂಡೀಶನ್ ಇತ್ತು, ಇಲ್ಲವೆಂದಲ್ಲ. ಉಸಿರಾಟದ ತೊಂದರೆ ಇದ್ದುದರಿಂದ ನಾವು ಮನೆಗೆ ಕರೆದುಕೊಂಡು ಹೋಗುವ ಪರಿಸ್ಥಿತಿಯೂ ಇರಲಿಲ್ಲ. ICU ನಲ್ಲಿ ಹಾಕಲೇಬೇಕು ಅಂತ ಅಡ್ಮಿಟ್ ಮಾಡಿದರು. ಆಗ ICU ನಲ್ಲಿ ಎಲ್ಲ ಬೆಡ್ ಗಳು ಖಾಲಿ ಇದ್ದವು. ಪಾಪ ಅಲ್ಲಿದ್ದವರಿಗೆ ನೊಣ ಹೊಡೆಯಲು ಕೂಡ ಸಾಧ್ಯ ಇರಲಿಲ್ಲ. ಯಾಕೆಂದರೆ ಅಲ್ಲಿ ನೊಣಗಳನ್ನು ಹೇಗೆ ತಾನೇ ಒಳಗೆ ಬಿಟ್ಟಾರು. ಅವುಗಳಿಂದ ಫೀಸ್ ವಸೂಲಿ ಮಾಡಲಾದೀತೇ!?

ಅಪ್ಪನಿಗೆ ಎಷ್ಟೋ ದಿನಗಳು ICU ನಲ್ಲೆ ಇಟ್ಟರು. ಪುಪ್ಪಸದಲ್ಲಿ ತುಂಬಿಕೊಂಡಿದ್ದ ನೀರನ್ನು ತೆಗೆದುಬಿಟ್ಟರೆ ಅಷ್ಟೇ ರಿಲೀಫ್ ಸಿಗುತ್ತೆ ಅಂತ ಪುಪ್ಪಸದ ಡಾಕ್ಟರ ಹೇಳಿದರೆ, ಹೃದಯದ ವಿಶೇಷಜ್ಞ ಡಾಕ್ಟರು ಅದು ಹೇಗೆ ಸಾಧ್ಯ, ಔಷಧಿ ಸೇವನೆಯಿಂದಲೇ ಆ ನೀರು ಖಾಲಿಯಾಗಬೇಕು ಅಂದರು. ೮೦ ವರ್ಷದ ಅಪ್ಪನ ಪುಪ್ಪಸದಲ್ಲಿ ಕನಿಷ್ಠ ಎರಡು ಲೀಟರ್ ದ್ರವ ತುಂಬಿಕೊಂಡಿತ್ತು. ಅದು ಹೇಗೆ ಬರಿ ಔಷಧಿಯಿಂದ ಕಡಿಮೆಯಾದೀತು? ಅಲ್ಲಿದ್ದ ಒಬ್ಬೊಬ್ಬ ಡಾಕ್ಟರ ಗಳೂ ಒಂದೊಂದು ದಿಕ್ಕು. ಇಂಜೆಕ್ಟ್ ಮಾಡಿ ಪುಪ್ಪಸದಲ್ಲಿನ ನೀರನ್ನು ತೆಗೆಯಿರಿ ಆಮೇಲೆ ಮುಂದಿನದು ನೋಡಿಕೊಳ್ಳೋಣ ಅಂತ ನಾವು ಒತ್ತಾಯಿಸಿ ನೀರು ತೆಗೆಸಿದೆವು. ಕಟ್ಟು ಬಿದ್ದು ಇನ್ಫ್ಲುಯೆನ್ಸ್ ಮಾಡಿಸಿದರೂ ICU ನಿಂದ ಜನರಲ್ ವಾರ್ಡ್ ಗೆ ಹಾಕಲು ಮತ್ತೆ ಒಂದಿಷ್ಟು ದಿನ ತೆಗೆದುಕೊಂಡರು. ಹಾಗೆ ಶಿಫ್ಟ್ ಮಾಡುವ ಸಮಯದಲ್ಲಿ ICU ಬೆಡ್ ಗಳು ಭರ್ತಿ ಆಗಿದ್ದವು. ನನ್ನ ಅಪ್ಪನ ಬೋಣಿ ಚೆನ್ನಾಗಿತ್ತು ಅನಿಸುತ್ತೆ! ಪುಪ್ಪಸದ ನೀರು ತೆಗೆದ ಕೂಡಲೇ ಅಪ್ಪ ಚೇತರಿಸಿಕೊಂಡರು. ಅಪ್ಪನನ್ನು ಮನೆಗೆ ಕರೆದುಕೊಂಡು ಹೋಗೋಣ ಎಂಬ ನಿರ್ಧಾರ ನಾವು ಮಾಡಿದೆವು. ಹೃದಯ(ವಿಲ್ಲದ!)ದ ಡಾಕ್ಟರ ಮತ್ತೆ ಹೆದರಿಸಿದರು. ನೀವು ತಪ್ಪು ಮಾಡುತ್ತಿದ್ದೀರಿ, ಮನೆಗೆ ಹೋದ ಕೂಡಲೇ ಅವರು ಕೊಲ್ಯಾಪ್ಸ್ ಆಗಬಹುದು, ಹೃದಯ ನಿಲ್ಲಬಹುದು ಹಾಗೆ ಹೀಗೆ ಅಂತ ಏನೇನೋ ಹೇಳಿದರು. ಹೃದಯದಲ್ಲಿ ಎಷ್ಟು ಬ್ಲಾಕ್ ಇವೆ ನೋಡೋಣ ಅಂದರು. ನಾವು ನಿರ್ಧಾರ ಮಾಡಿಯಾಗಿತ್ತು. ಗುದ್ದಾಡಿ ಬಡಿದಾಡಿ ಅಲ್ಲಿಂದ ಮನೆಗೆ ಕರೆದುಕೊಂಡು ಬಂದೆವು. ಅಲ್ಲಿದ್ದಿದ್ದರೆ ದಿನಕ್ಕೆ ೪೦ ಸಾವಿರ ಬಿಲ್ ಏರುತ್ತಲೇ ಇತ್ತು. ಅದೂ ಅಲ್ಲದೆ ಅವರು ಮಾಡುತ್ತಿದ್ದುದು ಏನೂ ಇರಲಿಲ್ಲ. ಸುಮ್ಮನೆ ದಿನಕ್ಕೆರಡು XRay, ಪ್ರತಿಯೊಂದು ಅಂಗಕ್ಕೂ ಒಂದಿಬ್ಬರು ಡಾಕ್ಟರ ಗಳು ಬಂದು ಹೋಗೋರು. ಅವರ ಫೀಸ್ ಒಬ್ಬೊಬ್ಬರಿಗೆ ೮೦೦ ರಿಂದ ಸಾವಿರ ದಿನಕ್ಕೆ! ಶುಗರ್ ಟೆಸ್ಟ್ ಮಾಡೋರು, ಆಕ್ಸಿಜನ್ ಸಪ್ಲೈ ಗೆ ಅಂತ ದುಡ್ಡು… ಇದೆಲ್ಲವನ್ನೂ ಮನೆಯಲ್ಲಿಯೇ ವ್ಯವಸ್ಥೆ ಮಾಡಿ ಅಪ್ಪನನ್ನು ಅಲ್ಲಿ ನೋಡಿಕೊಳ್ಳೋದೇ ವಾಸಿ ಅಂತ ಕರೆದುಕೊಂಡು ಬರುವಷ್ಟರಲ್ಲಿ ಸುಸ್ತಾಗಿ ಹೋಗಿದ್ದೆವು!

ಈ ಎಲ್ಲ ಘಟನೆಗಳಲ್ಲೂ ಹಲವು ಸಾಮ್ಯತೆಗಳು. ಎಲ್ಲವನ್ನೂ ಒಟ್ಟಾಗಿ ನೋಡಿದಾಗ ಒಂದು ಮಹಾನಾಟಕದ ಒಂದೊಂದು ದೃಶ್ಯಗಳು ಅನಿಸುತ್ತದೆ. ಇಲ್ಲಿ ಎಲ್ಲರೂ ಶಾಮೀಲು. ಆಕ್ಸಿಡೆಂಟ್ ಘಟನೆಯಲ್ಲಿ ನಮ್ಮ ಹುಡುಗ ಕೂಡ ಅವರ ಜೊತೆಗೆ ಸೇರಿ ನನ್ನನ್ನು ಬಕರಾ ಮಾಡುತ್ತಿದ್ದಾನೆಯೇ ಅಂತ ಎಷ್ಟೋ ಸಲ ಅನ್ನಿಸಿತ್ತು! ಎಲ್ಲ ಘಟನೆಗಳಲ್ಲಿಯೂ ನಡೆದದ್ದು ಹಗಲು ದರೋಡೆಯೇ. ಅವರೆಲ್ಲ ನಮ್ಮೆದುರು ನಿಂತಿದ್ದು ಗುಂಪಿನಲ್ಲೇ! ಹೆದರಿಸಿ ಹಣ ಕಿತ್ತುವುದೇ ಅವರೆಲ್ಲರ ಕೆಲಸ. ಎಲ್ಲ ಕಡೆಯೂ ಹೆದರಿದವರು ನಾವೇ. ನೈತಿಕತೆ ಎಲ್ಲೂ ಇಲ್ಲ, ದುಡ್ಡೇ ದೊಡ್ಡಪ್ಪ. ಆದರೆ ಒಂದೇ ಒಂದು ವ್ಯತ್ಯಾಸ ಇತ್ತು…. ಆಕ್ಸಿಡೆಂಟ್ ಘಟನೆ ಒಂದು ಬಿಟ್ಟು ಹಿಂದೆ ನಡೆದ ಎರಡೂ ಘಟನೆಗಳ ಸಮಯದಲ್ಲಿ ಕೊರೋನಾ ಇರಲಿಲ್ಲ. ಹೀಗಾಗಿ ಪಾಪ ಕೋರೋನಾಕ್ಕೆ ಎಲ್ಲಾ ದೋಷಾರೋಪಣೆ ಸಲ್ಲದು ಅಲ್ಲವೇ!?
ಗುರುಪ್ರಸಾದ ಕುರ್ತಕೋಟಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Gerald Carlo
Gerald Carlo
4 years ago

ಇದು Before Corona ಆದ್ದರಿಂದ ಒಳ್ಳೆದಾಯ್ತು. After Corona ಅಗಿದ್ದಿದ್ದರೆ ನಿಮ್ಮ ಪಾಡು ಊಹಿಸಲಿಕ್ಕಾಗುತ್ತಿರಲಿಲ್ಲ.

ಗುರುಪ್ರಸಾದ ಕುರ್ತಕೋಟಿ
ಗುರುಪ್ರಸಾದ ಕುರ್ತಕೋಟಿ
9 months ago
Reply to  Gerald Carlo

ನಿಜ ಸರ್. ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು .. ತಡವಾಗಿ ಉತ್ತಾರಿಸಿದ್ದಕ್ಕೆ ಕ್ಷಮೆ ಇರಲಿ 😊🙏

2
0
Would love your thoughts, please comment.x
()
x