ಹಗರಣದಲ್ಲೇ ಅಂತ್ಯ: ದಯಾನಂದ ರಂಗಧಾಮಪ್ಪ


ಸುಮಾರು ಅರವತ್ತು ವರ್ಷದ ವೃದ್ಧ ಟೇಬಲ್ ಮೇಲಿದ್ದ ಖಾಲಿ ಕಾಗದದ ಮೇಲೆ “ದೇವರು ಇದಾನೆ , ಇಲ್ಲ …. ದೇವರು ಇದಾನೆ , ಇಲ್ಲ ” ಎಂದು ಬರೆಯುತ್ತಿದ್ದ ತನ್ನ ಗಂಡನನ್ನು ನೋಡಿ ‘ರೀ ಏನ್ರಿ ಇದು? ರಾಮ ರಾಮ ಬರೆಯೋ ವಯಸ್ಸಲ್ಲಿ ನೀವ್ಯಾಕೆ ಈ ರೀತಿ ಬರೆತ್ತಿದ್ದೀರಾ? ಎಂದು ಗದರಿದಳು.
ನಿನ್ನ ಪ್ರಕಾರ ಇದಾನೆ ಅಂತೀಯಾ?
ಅವಳು ಮೌನಿಯಾದಳು.
ಬರೆಯೋದು ನಿಲ್ಲಿಸಿ ಮೆಲ್ಲಗೆ ನಿಟ್ಟುಸಿರು ಬಿಡುತ್ತಾ ಕುರ್ಚಿಗೆ ಹೊರಗಿ ” ಮಗ ನಮ್ಮ ಜೊತೆ ಮಾತು ಬಿಟ್ಟು 5 ವರ್ಷ ಆಯ್ತು, ಸೊಸೆಗೆ ಗರ್ಭ ನಿಲ್ಲುತ್ತಿಲ್ಲ , ನಿನ್ನ ಅರೋಗ್ಯ ತೀರಾ ಹದಗೆಟ್ಟಿದೆ. ನಮ್ಮ ಪರಿಸ್ಥಿತಿ ಈಗಿರುವಾಗ ಏನೂ ಅರಿಯದ ಕಾಗದದ ಮೇಲೆ “ರಾಮ ರಾಮ ” ಎಂದು ಗೀಚಲೇ? ಎಂದು ಪ್ರಶ್ನಿಸಿ ಮತ್ತೆ ದೇವರು ಇದಾನೆ ,ಇಲ್ಲ ಎಂಬ ದ್ವಂದ್ವ ವಾಕ್ಯಗಳನ್ನು ಬರೆಯ ತೊಡಗಿದ.

ರೀ , ಮನೇಲಿ ಒಂದು ಪೂಜೆ ಮಾಡಿಸೋಣ. ಒಂದು ಹೋಮ ಮಾಡಿಸಿದ್ರೆ ಎಲ್ಲ ಸರಿಹೋಗಬಹುದು. ಏನಂತೀರಾ?
ದೇವರು ಎಂದು ಬರೆದು ಅಲ್ಲಿಗೆ ನಿಲ್ಲಿಸಿ ಪೆನ್ನನ್ನು ಬದಿಗಿಟ್ಟು
ನಿನಗೇನೂ ತಲೆ ಕೆಟ್ಟಿದಿಯ? ಹೋಮ ಹವನಕ್ಕೆ ದುಡ್ಡೇಲ್ಲಿದೆ ನಮ್ಮ ಬಳಿ?ನನಗೆ ಬರೋ ಪಿಂಚಣಿಯಲ್ಲಿ ನಿನ್ನ ಔಷದ ಸುಧಾರಿಸೋಕೆ ಸಾಕಾಗುತ್ತಿಲ್ಲ ಎಂದ.
ಒಂದು ನಿಮಿಷ ಎಂದು ಒಳಗೆ ನೆಡೆದ ಹೆಂಡತಿ ಒಂದು ಚಿನ್ನದ ಉಂಗುರ ಗಂಡನಿಗೆ ಕೊಟ್ಟಳು.

ಗಂಡ ಉಂಗುರಾನ ನೋಡುತ್ತಾ , ಏನಿದು ? ನಾ ನಿನಗೆ 45 ವರ್ಷಗಳ ಹಿಂದೆ ಪ್ರೀತಿ ನಿವೇದನೆ ಮಾಡುವಾಗ ಕೊಟ್ಟ ಉಂಗುರ. ಇದನ್ನ ಗಿರವಿ ಅಂಗಡಿಯಲ್ಲಿ ಇಡೋದ? ಬೇಡ ಇದು ನಮ್ಮ ಪ್ರೀತಿ ಯ ಸಂಕೇತ ಎಂದ.
ನಮ್ಮ ಪ್ರೀತಿ? ನಾನೇ ನಿಮ್ಮ ಬಳಿ ಇರುವಾಗ ಈ ಉಂಗುರದ ಅವಶ್ಯಕತೆ ಏನಿದೆ ಎಂದಳು.
ಮತ್ತೊಮ್ಮೆ ಮಾತಿಲ್ಲದೆ ಮೌನಿಯಾದ.

ಸರಿ ಯಾವಾಗ ಹೋಮ ಮಾಡಿಸೋಣ ಎಂದ. ಈ ವಾರಾಂತ್ಯಕ್ಕೆ ಇಬ್ಬರು ಕೇರಳ ಗೆ ಟ್ರಿಪ್ ಹೋಗ್ತಾ ಇದ್ದಾರೆ. ಅವರು ಮನೇಲಿ ಇಲ್ಲದಿದ್ದಾಗ ಮಾಡಿಸಿದರೆ ಒಳಿತು. ಸೊಸೆ ಮನೆಯಲ್ಲಿ ಇದ್ದಾರೆ ಇವೆಲ್ಲ ಮಾಡಿಸೋಕೆ ಬಿಡಲು. ನನ್ನ ಮೇಲೆ ಮಾಟ ಮಾಡಿಸುತ್ತಿದ್ದಾರೆ ಎಂದು ಒಂದು ಬಾರಿ ನಮ್ಮ ಮೇಲೆ ರೇಗಾಡಿದ್ದು ನೆನಪಿದೆಯಾ? ಎಂದಳು. ನೆನಪು ಹಾರಿ ಹೋಗುವಷ್ಟು ವಯಸ್ಸಾಗಿಲ್ಲ ಕಣೆ ನನಗೆ ಎಂದು ಉಂಗುರಾನ ತೆಗೆದು ಜೇಬಲ್ಲಿ ಇಟ್ಟುಕೊಂಡು ಬಜಾಜ್ ಚೇತಕ್ ನಲ್ಲಿ ಜಯನಗರ 4th ಬ್ಲಾಕ್ ಕಡೆ ಗಾಡಿ ಹೊರಟಿತು. ಕೊನೆಗೂ ವಾರಾಂತ್ಯ ಕೆಮ್ಮುವಷ್ಟು ಬೇಗ ಬಂದು ಬಿಟ್ಟಿತು. ಮಗ ಸೊಸೆ ಟ್ರಿಪ್ ಹೊರಟಿ ಯಾಗಿತ್ತು. ಗೊತ್ತು ಮಾಡಿದ್ದ ಪುರೋಹಿತ ವೃಂದ ಮನೆಗೆ ಬೆಳಗ್ಗಿನ ಜಾವ ಧಾವಿಸಿದರು. ಐದು ಪುರೋಹಿತರಲ್ಲಿ ಮುಖ್ಯ ಪುರೋಹಿತರು ಮನೆಯನ್ನೆಲ್ಲ ಪ್ರದಕ್ಷಣೆ ಹಾಕಿದರು. ಮೇಜಿನ ಮೇಲಿದ್ದ “ದೇವರು ಇದಾನೆ , ಇಲ್ಲ ” ಎಂಬ ಬರಹಗಳನ್ನು ನೋಡಿ ಮುಗುಳ್ನಕ್ಕರು.

ಪೂಜೆ ತುಂಬಾ ಚೆನ್ನಾಗಿ ನಡೆದಿತ್ತು. ಹೋಮದಲ್ಲಿನ ಹೊಗೆಗೋ ಅಥವಾ ಮನಸ್ಸಿನಲ್ಲಿದ್ದ ನೋವುಗಳಿಗೋ ಮಡದಿ ಅಳಲಾರಂಭಿಸಿದಳು. ಆ ಅಳುವಿನ ನಡುವೆಯೇ ಹೋಮ ನೆರೆವೇರಿಸಿದರು. ಗಂಡ ತನ್ನ ಮಡದಿಯನ್ನು ಸಮಾಧಾನ ಮಾಡುತ್ತಾ ಹೋಮದ ಕುಂಡವನ್ನೇ ದಿಟ್ಟಿಸಿ ನೋಡುತ್ತಿದ್ದ. ಅವನ ಕಣ್ಣುಗಳಲ್ಲಿನ ಕಣ್ಣೀರು ಪ್ರತಿನಿತ್ಯ ಬರಿಯುವ ಡೈರಿನಲ್ಲಿ ಹಿಂಗಿಸುತ್ತಿದ್ದ. ಇಲ್ಲಿ ಅಳಲು ಕಣ್ಣೀರು ಬರಿದಾಗಿತ್ತು. ಅದಾಗಲೇ ಸ್ವಲ್ಪ ಭಾಗದ ಡೇರಿ ಯನ್ನು ಪುರೋಹಿತರು ಓದಿಯಾಗಿತ್ತು.

ಪೂಜೆ ಎಲ್ಲ ಮುಗಿದ ಮೇಲೆ ಮನೆಗೆಲ್ಲ ತೀರ್ಥ ಚಿಮುಕಿಸಿ ಬರುವಂತೆ ತನ್ನ ಕಿರಿಯ ಪುರೋಹಿತನಿಗೆ ಹೇಳಿದ. ಕಿರಿಯ ಪುರೋಹಿತ ಎಲ್ಲ ಕೋಣೆಗಳಿಗೆ ಚಿಮುಕಿಸಿ ಬಂದು ಕಣ್ಣಲ್ಲೇ ಸನ್ನೆ ಮಾಡಿ ಕೆಲಸ ಹಾಗಿದೆ ಎಂದ. ಹಿರಿಯ ಪುರೋಹಿತ ಎದ್ದು ನಿಂತರು. ದಂಪತಿಗಳು ಎದ್ದು ನಿಂತು ನಮಸ್ಕರಿಸಿದರು. ಪುರೋಹಿತರು ಹೊರಟರು.

ತುಂಬಾ ಸುಸ್ತಾಗಿದ್ದ ದಂಪತಿಗಳು ಆ ದಿನ ಬೇಗ ಮಲಗಿಕೊಂಡರು. ಮರುದಿನ ಬೆಳಿಗ್ಗೆ ಎದ್ದಾಗ ಶಾಕ್ ಕಾದಿತ್ತು. ಬೀರುವಿನಲ್ಲಿ ಇಟ್ಟಿದ್ದ ಚಿನ್ನ ಕಳವು ಆಗಿತ್ತು. ಗಾಭರಿಗೊಂಡ ದಂಪತಿಗಳು ಮಗನ ಕೊನೆಗೆ ಧಾವಿಸಿದರು. ಸೊಸೆಯ ಒಡವೆಗಳು ಕಾಣೆಯಾಗಿದ್ದವು. ವೃದ್ಧ ದಂಪತಿಗಳಿಗೆ ದಿಕ್ಕು ತೋಚದಂತಾಗಿ , ನಾಳೆ ಸೊಸೆ ಬಂದು ಒಡವೆ ಗಳು ಎಲ್ಲಿ ಎಂದರೆ ಏನೆಂದು ಹೇಳೋದು ಎಂದು ಕುಸಿದು ಬಿದ್ದರು.

ಕೂಡಲೇ ಬಜಾಜ್ ಚೇತಕ್ ಗಾಡಿ ಹೇರಿ ಪುರೋಹಿತರು ಗೊತ್ತು ಮಾಡಿ ಬಂದಿದ್ದ ದೇವಸ್ಥಾನದ ಬಳಿ ಹೊರಟ. ಆದರೆ ಆ ಜಾಗದಲ್ಲಿ ದೇವಸ್ಥಾನ ಇರಲಿಲ್ಲ. ಬರಿ ಖಾಲಿ ಜಾಗ ಇತ್ತು. ಮತ್ತೊಮ್ಮೆ ನೆನಪಿಸಿಕೊಂಡ. ಹೌದು ಇದೆ ಜಾಗ ಆದರೆ ಈಗ ಖಾಲಿ ಜಾಗ ಇದೆ ಅಷ್ಟೇ… ಅದೇ ಜಾಗದಲ್ಲಿ ಐದು ಜನ ಹುಡುಗರು ಗೋಲಿ ಆತ ಆಡುತ್ತಿದ್ದರು. ಅವರನ್ನು ವಿಚಾರಿಸಿದ ಆದರೆ ಅವರಿಂದ ನಿರೀಕ್ಷೆಯ ಮಟ್ಟದ ಉತ್ತರ ಬರಲಿಲ್ಲ.. ಹುಡುಗರ ಮುಖದ ತೇಜಸ್ಸು ಬೇರೇನೋ ವಿಷಯ ರವಾನಿಸುತಿತ್ತು.

ಕೂಡಲೇ ವೃದ್ಧ ಪೊಲೀಸ್ ಸ್ಟೇಷನ್ ಗೆ ಹೋಗಿ ದೂರು ದಾಖಲಿಸಿದ. ದೂರು ಪಡೆದ ಪೊಲೀಸರು ವಿಚಾರಣೆ ನೆಡೆಸುತ್ತೀವಿ ಎಂದರು. ವೃದ್ಧನ ಕೈ ಕಾಲು ನಡುಗುತ್ತಿದದ್ದನನ್ನು ಕಂಡ ಇನ್ಸ್ಪೆಕ್ಟರ್ ಟೀ ಕೊಟ್ಟು ಭಯ ಪಡಬೇಡಿ ಎಂದ.
ವೃದ್ಧ ಮಗ , ಸೊಸೆ ಏನಂತಾರೋ?
ಪೊಲೀಸ್ ನಕ್ಕು “ಎಲ್ಲ ಒಳ್ಳೆಯದೇ ಆಗುತ್ತೆ!” ಎಂದು ಬಿಳ್ಕೊಟ್ಟರು.

ಬಜಾಜ್ ಚೇತಕ್ ಗಾಡಿಯನ್ನೇ ಕಾಯುತ್ತಿದ್ದ ಮಡದಿ ವಿಚಾರಿಸಿದಳು. ಗಂಡ ಸಪ್ಪೆ ಮುಖದಲ್ಲಿ ದೂರು ಕೊಟ್ಟಿದ್ದೇನೆ ಎಂದ. ಆ ರಾತ್ರಿ ಇಬ್ಬರಿಗೆ ಗಾಳಿಯೇ ಊಟ , ನೀರಾಗಿತ್ತು. ಇನ್ನೂ ನಿದ್ರೆ ದೂರದ ಮಾತಾಗಿತ್ತು.

ಟ್ರಿಪ್ ನಿಂದ ಬಂದ ಮಗ – ಸೊಸೆ ಬೆಳಿಗ್ಗೆ ಎದ್ದು ಆಫೀಸ್ ಗೆ ಹೊರಟರು. ಅವತ್ತು ಮಗ ಬೇಗನೆ ಮನೆಗೆ ಬಂದ. ಅಮ್ಮ ಕೊನೆಯಲ್ಲಿ ನೆಡೆದ ವಿಚಾರ ನೆನೆದು ಅಳುತ್ತಿದ್ದದ್ದು ಮಗನ ಕಿವಿಗೆ ಬಿತ್ತು. ಕೂಡಲೇ ಗಂಡ ” ಮಗ ಬಂದಿದ್ದಾನೆ , ಅಳೋದು ನಿಲ್ಲಿಸು ” ಎಂದ. ಅಳು ನಿಂತಿತು. ಮನೆಯಲ್ಲಿ ಏನೋ ಸರಿಯಿಲ್ಲ ಎಂದುಕೊಂಡ ಆದರೆ ಮಾತು ಬಿತ್ತು ಐದು ವರ್ಷ ವಾಗಿದೆ ಹೇಗೆ ಮಾತನಾಡಿಸೋದು ? ಎಂದು ಸುಮ್ಮನಾದ.

ಅಪ್ಪ ಹೆಲ್ಮೆಟ್ ಧರಿಸಿ ಬಜಾಜ್ ಚೇತಕ್ ಹೇರಿದ. ಮಡದಿ ನಾನು ಬರುತ್ತೇನೆ ನಿಮ್ಮ ಜೊತೆ ಎಂದಳು. ಅಮ್ಮನ ಕಣ್ಣುಗಳು ಅತ್ತು ಅತ್ತು ಕೆಂಪಾಗಿದದ್ದು ಮಗನ ಕಣ್ಣಿಗೆ ಗೋಚರಿಸಿತು.
ಬೇಡ ನಾನು ವಿಚಾರಿಸಿಕೊಂಡು ಬರುತ್ತೇನೆ , ಆ ಜಾಗಕ್ಕೆ ನೀನು ಬರೋದು ಯೋಗ್ಯವಲ್ಲ ಎಂದ ಗಂಡ.
ಪರವಾಗಿಲ್ಲ ಈ ಪಾಪಿ ಜನ್ಮದಲ್ಲಿ ಒಂದು ಸಾರಿ ಅಲ್ಲಿಗೆ ಹೋಗಿ ಬಂದರೆ ಏನು ಹಾಗೋದಿಲ್ಲ ಎಂದು ಗಾಡಿ ಹಿಂದೆ ಕೂತೆ ಬಿಟ್ಟಳು.ಮಗನಿಗೆ ಎಲ್ಲ ನಿಗೂಢ ವಾಗೇ ಕಂಡು ಬಂದಿತು.

ಜಯನಗರದ 4th ಬ್ಲಾಕ್ , ಮರಗಳ ನೆರಳಿನಲ್ಲಿ ಗಾಡಿ ಓಡುತ್ತಿತ್ತು.
ಪ್ರೀತಿ ಸಾರಿಗೆ , ಚಲಿಸು ಮೆಲ್ಲಗೆ
ರಸ್ತೆ ಬದಿಯಲಿ ನಿನ್ನ ಕಾಯುವೆ
ದೂರ ಪಯಣವೂ , ಸಾಗೋಣ ನಿತ್ಯವೂ
ಎಂದೂ ಜೊತೆಗಿರು ಹಿಂಬದಿಯ ಸವಾರಳೆ
ಎಂಬಾ 45 ವರುಷಗಳ ಹಿಂದೆ ಸ್ವಂ ರಚಿತ ಹಾಡು ಗಾಳಿಲಿ ಮೌನವಾಗಿ ಹಾಡಿತ್ತು.

ಮಗ ಕೂಡಲೇ ಅಪ್ಪನ ಕೋಣೆಗೆ ಹೋಗಿ ಹುಡುಕಾಡಿದ. ಒಂದು ರಶೀದಿ ಬಿಟ್ಟರೆ ಬೇರೇನೂ ಸಿಗಲಿಲ್ಲ. ಆ ರಶೀದಿ ಗಿರವಿ ಅಂಗಡಿಯ ರಶೀದಿ ಯಾಗಿತ್ತು. ೧೮೦೦೦.೦೦/- ರೂ ಗೆ ಗಿರವಿ ಇಟ್ಟಿದ್ದ ಉಂಗುರದ ರಶೀದಿ ಅದು. ಮಗ ಕೂಡಲೇ ರಶೀದಿ ಎತ್ತುಕೊಂಡು ಸೇಠು ಅಂಗಡಿ ಬಳಿ ಹೊರಟ.

ಸೇಠು ಬಳಿ ರಶೀದಿ ಕೊಟ್ಟು ವಿಚಾರಿಸಿದ.
“ಓ ಇಷ್ಟು ಬೇಗ ಬಿಡಿಸಿಕೊಳ್ಳುತ್ತಿದ್ದೀರಾ? ಮೊನ್ನೆ ತಾನೇ ನಿಮ್ಮ ತಂದೆ ಗಿರವಿ ಇಟ್ಟಿದ್ರು.” ಎಂದೂ ಸೇಠು ಬುಕ್ ರೆಕಾರ್ಡ್ ತೆಗೆದು ನೋಡಿದ.
೧೮೦೦೦ + ೭೦೦ ಬಡ್ಡಿ ಕೊಟ್ಟು ಮಗ ಆ ಉಂಗುರಾನ ಬಿಡಿಸಿಕೊಂಡ.

ಮಗನಿಗೆ ಆ ಉಂಗುರದ ಬೆಲೆ ಗೊತ್ತಿತ್ತು. ಅವನು ಚಿಕ್ಕವನಿದ್ದಾಗ ಅಮ್ಮ ಆ ಉಂಗುರಾದ ಪ್ರೀತಿ ಮಹತ್ವ ವನ್ನು ಮಗನಿಗೆ ಅನೇಕ ಬಾರಿ ಹೇಳಿದ್ದಳು. ಅವನ ಕಣ್ಣಲ್ಲಿ ನೀರು ಮನೆ ಮಾಡಿತ್ತು.

ಉಂಗುರಾನ ತನ್ನ ಎದೆ ಭಾಗದ ಜೇಬಿನಲ್ಲಿ ಇಟ್ಟುಕೊಂಡು ಗಾಡಿಯ ಕಡೆ ನೆಡೆಯುವಾಗ ಸೇಠು ‘ಮಿಸ್ಟರ್ ಒಂದು ನಿಮಿಷ ಬನ್ನಿ ಎಂದು ಕರೆದ’. ಮಗ ಮತ್ತೆ ಅಂಗಡಿ ಕಡೆಗೆ ನಡೆದ.

ಅದೇ ದಿನ ಸಾಯಂಕಾಲ ಬೇರೆ ಚಿನ್ನಗಳನ್ನು ಕೂಡ ಅಡವಿಟ್ಟಿದೀರಿ ಬಹುಶ್ಯ ನನ್ನ ಮಗ ನಿದ್ದ ಅನ್ನಿಸತ್ತೆ ಆ ಸಮಯದಲ್ಲಿ. ನಿಮ್ಮ ಅಡ್ರೆಸ್ ಇದೆ ನೋಡಿ ಎಂದು ಬುಕ್ ರೆಕಾರ್ಡ್ ತೋರಿಸಿದ.

ಮಗನಿಗೆ ಆಶ್ಚರ್ಯ ತನ್ನ ಹೆಂಡತಿ ಹಾಗು ಅಮ್ಮ ನ ಒಡವೆಗಳೇ ಅವು. ನಾನು ಈ ಒಡವೆಗಳ ರಶೀದಿ ತಂದಿಲ್ಲ ಎಂದ.
ಪರವಾಗಿಲ್ಲ ಸಾರ್ , ಒಂದು ಅಡ್ರೆಸ್ ಪ್ರೂಫ್ ಕೊಟ್ಟು ದುಡ್ಡಿದ್ರೆ ಬಿಡಿಸ್ಕೊಂಡು ಹೋಗಿ ಎಂದ ಸೇಠು.
ತನ್ನ ಕ್ರೆಡಿಟ್ ಕಾರ್ಡ್ ನಿಂದ ಹಣ ಡ್ರಾ ಮಾಡಿ ಒಡವೆ ಗಳು ತೆಗೆದುಕೊಂಡು ಮನೆಗೆ ಹೊರಟ.

ತಲೆಯ ತುಂಬೆಲ್ಲ ಪ್ರಶ್ನಾರ್ಥಕ ಚಿಹ್ನೆಗಳು , ಅಪ್ಪ ಅಮ್ಮ ಯಾಕೆ ಎಲ್ಲ ಒಡವೆಗಳನ್ನು ಗಿರವಿ ಇಟ್ಟಿದ್ದಾರೆ? ದುಡ್ಡಿನ ಅವಶ್ಯಕತೆ ಇತ್ತೇನು? ಎಂದು.
ಆ ದಿನ ರಾತ್ರಿ ತಡವಾಗಿ ಬಂದ ವೃದ್ಧ ದಂಪತಿಗಳು ಮಲಗಿಕೊಂಡರು. ಮಗ ತನ್ನ ಮಡದಿಯ ಒಡವೆಗಳನ್ನು ಬೀರುವಿನಲ್ಲಿ ಭದ್ರವಾಗಿ ಇಟ್ಟು , ತನ್ನ ತಾಯಿಯ ಒಡವೆಗಳನ್ನು ಮತ್ತು ಆ ಉಂಗುರವನ್ನು ತನ್ನಲ್ಲೇ ಇಟ್ಟುಕೊಂಡನು.

ಮಾರನೇ ದಿನ ಸೊಸೆ ಕೆಲ್ಸಕ್ಕೆ ಹೊರಟಳು , ಮಗ ಬೇಕು ಅಂತಲೇ ರಜೆ ಮಾಡಿದ್ದ. ಅಪ್ಪ ಬಜಾಜ್ ಚೇತಕ್ ಸ್ಟಾರ್ಟ್ ಮಾಡಿ ಜಯನಗರ ರಸ್ತೆಯಲ್ಲಿ ಹೊರಟಿತ್ತು. ಮಗ ಅಪ್ಪನನ್ನು ಹಿಂಬಾಲಿಸಿ ಹೊರಟಿದ್ದ. ಚೇತಕ್ ಬಜಾಜ್ ಪೊಲೀಸ್ ಸ್ಟೇಷನ್ ಮುಂದೆ ನಿಂತಿತು. ಮಗ ಅಲ್ಲೇ ಬಚ್ಚಿಟ್ಟುಕೊಂಡ. ಸುಮಾರು ಒಂದು ಘಂಟೆ ನಂತರ ಅಪ್ಪ ಸ್ಟೇಷನ್ ನಿಂದ ಆಚೆ ಬಂದು ಗಾಡಿ ಸ್ಟಾರ್ಟ್ ಮಾಡಿ ಮನೆ ಕಡೆ ನೆಡೆದಿದ್ದ.

ಮಗ ಅಪ್ಪ ಹೊರಟ ಮೇಲೆ ಸ್ಟೇಷನ್ ನಲ್ಲಿ ವಿಚಾರಿಸಿದ. ಇನ್ಸ್ಪೆಕ್ಟರ್ ದೂರಿನ ಎಲ್ಲ ವಿವರಗಳನ್ನು ಕೊಟ್ಟು ‘ನಿನ್ನಪ್ಪ , ನಿನ್ನಮ್ಮ ಭಾರಿ ಭಯ ಭೀತರಾಗಿದ್ದರೆ ಎಂದ’. ಮಗನಿಗೆ ಮಾತುಗಳು ಹೊರಡಲಿಲ್ಲ. ಕೂಡಲೇ ಮನೆಗೆ ಬಂದ ಮಗ ಎಲ್ಲ ಚಿನ್ನ ಒಡವೆಗಳನ್ನು ತೆಗೆದುಕೊಂಡು ಸ್ಟೇಷನ್ ಗೆ ಹೋಗಿ ಕೊಟ್ಟು ಚಿನ್ನ ಸಿಕ್ಕ ಘಟನೆಯನ್ನು ವಿವರಿಸಿದ.

ಇನ್ಸ್ಪೆಕ್ಟರ್ ಗೆ ಈ ಕೇಸ್ ನಲ್ಲಿ ಆರೋಪಿ ಯಾರೆಂದು ? ಸ್ವಲ್ಪ ತಲೆ ನೋವಾದರೂ , ಕೊಂಚ ಆರಾಮಾಯಿತು. ಕೂಡಲೇ ವೃದ್ಧ ದಂಪತಿಗಳಿಗೆ ಫೋನ್ ಮಾಡಿ ಒಡವೆ ಚಿನ್ನ ಸಿಕ್ಕಿವೆ ಬಂದು ತೆಗೆದು ಕೊಂಡು ಹೋಗಿ ಎಂದರು. ಜಯನಗರದ ರಸ್ತೆಯಲ್ಲಿ ಬಜಾಜ್ ಚೇತಕ್ ನ ವೇಗ KTM ಗಾಡಿಗಳನ್ನು ಹಿಂದಿಕ್ಕಿತ್ತು. ಒಡವೆ ಸ್ವೀಕರಿಸಿದ ದಂಪತಿಗಳು ಇನ್ಸ್ಪೆಕ್ಟರ್ ಗೆ ನಮಸ್ಕರಿಸಿದರು. ಇನ್ಸ್ಪೆಕ್ಟರ್ ಆ ದಂಪತಿಗಳಿಂದ ಆರ್ಶಿರ್ವಾದ ಪಡೆದುಕೊಂಡರು. ದಂಪತಿಗಳ ಕಣ್ಣುಗಳಲ್ಲಿ ಪುನರ್ ಜನ್ಮ ಸಿಕ್ಕಿದಷ್ಟು ಖುಷಿ ಕಾಣುತ್ತಿತ್ತು. ಮಗ ಜೈಲಿನ ಸೆಲ್ ನಲ್ಲಿ ಕದ್ದು ಕೂತು ತನ್ನ ತಂದೆ ತಾಯಿಯ ಖುಷಿಯನ್ನು ಸ್ವೀಕರಿಸುತ್ತಿದ್ದ.

ಗಂಡ ಹೆಂಡ್ತಿಗೆ ನಾನ್ ಹೇಳ್ತ ಇರ್ಲಿಲ್ವಾ , ನಾವ್ ಯಾರಿಗೂ ಮೋಸ ಮಾಡಿಲ್ಲ ಸಿಕ್ಕೇ ಸಿಗುತ್ತೆ ಅಂತ ಎಂದ….
ಅದಕ್ಕೆ ಹೆಂಡ್ತಿ ಮಗ ನಮಗೆ ಸಿಕ್ತಾನಾ ಅಂದ್ಲು….
ಗಂಡ ಮೌನಿಯಾದ….

ಒಡವೆ ಕೈಗೆ ಸ್ವೀಕರಿಸಿದ ದಂಪತಿಗಳು ಆ ಕಳ್ಳ ಯಾರು ಎಂದರು.
ಅದಕ್ಕೆ ಇನ್ಸ್ಪೆಕ್ಟರ್ ಮೇಲೊಬ್ಬ ಇದಾನೆ ಅಂತಾರಲ್ಲ ನಂಬುತ್ತಿರಾ? ಎಂದ.
ನಾನ್ ನಂಬತೀನಿ ಎಂದಳು ಮಡದಿ
ಮುದುಕ ನಾನ್ ನಂಬೋಲ್ಲ ಎಂದ…

ಸರಿ ಕಳ್ಳರ ವಿಚಾರ ನಮಗೆ ಬಿಡಿ , ನೀವಿನ್ನು ಖುಷಿಯಾಗಿ ಹೊರಡಿ ಎಂದ.
ಬಜಾಜ್ ಚೇತಕ್ ಹತ್ತ ವೃದ್ಧ ದಂಪತಿಗಳು ಮತ್ತೆ ktm ಗಾಡಿಗಳನ್ನು ಹಿಂದಿಕ್ಕಿ , ಒಂದು ಮಸಾಲೆ ಪುರಿ , ಬೈಟು ಟೀ ಕುಡಿದು , ಎರಡು ಮೊಳ ಮಲ್ಲಿಗೆ ಹೂ ಖರೀದಿಸಿ ಮನೆಗೆ ಬಂದರು . ಮಗ ಮನೆಯಲ್ಲಿ ಇಲ್ಲ ದಿರುವುದನ್ನು ಖಾತ್ರಿಮಾಡಿ ಸೊಸೆಯ ಒಡವೆಗಳನ್ನು ಇದ್ದ ಜಾಗದಲ್ಲಿ ಇಟ್ಟು, ಎರಡು ದಿನಗಳಿಂದ ಕಳೆದು ಕೊಂಡ ನಿದ್ರೆಯನ್ನು ಸಂಪಾದಿಸಿಕೊಂಡರು.

ಮಗ ಸಾಯಂಕಾಲ ಮನೆಗೆ ಬಂದ. ಹೆಂಡತಿ ಕೂಡ ಆಫೀಸ್ ನಿಂದ ಬಂದಳು. ಆ ರಾತ್ರಿ ಮಗನ ಮೊಗದಲ್ಲಿ ನೆಮ್ಮದಿ ಮೂಡಿತ್ತು.

ಬೆಳಿಗ್ಗೆ ಎಂದಿನಂತೆ ಎದ್ದ ಅಪ್ಪ ಪೇಪರ್ ಓದಲು ಟೇಬಲ್ ಮುಂದೆ ಕೂತ… ಅವತ್ತು (ಮೂರು ದಿನಗಳ ಹಿಂದೆ ) ಅರ್ಧಕ್ಕೆ ಬರೆದು ನಿಲ್ಲಿಸಿದ್ದ “ದೇವರು” ಎಂದ ಸಾಲನ್ನು “ಇದ್ದಾನೆ ಹಾಗು ಅದು ನನ್ನ ಪಾಲಿಗೆ ನೀವೇ ಅಪ್ಪ ಅಮ್ಮ” ಎಂದು ಬರೆದು ಕೊನೆಯಲ್ಲಿ Happy Anniversary ಅಪ್ಪ ಅಮ್ಮ ಎಂದು ಬರೆದಿದ್ದ….

ಮುದುಕ ಜೋರಾಗಿ ತನ್ನ ಮಡದಿಯನ್ನು ಕೂಗಿ ಕರೆದ, ಏನ್ರಿ ನಿಮ್ಮದು ಬೆಳಿಗ್ಗೆ ಬೆಳಿಗ್ಗೆನೇ ? ಎಂದಳು.
Happy Anniversary ಕಣೆ ಎಂದ .
ಥಾಂಕ್ ಯು ಅಂಡ್ ವಿಶ್ ಯು ದಿ ಸೇಮ್ ಎಂದು ನಾಚಿದಳು.

ಮಗ ಸರಿ ಹೋದ ಕಣೆ ಅಂದ
ಅದಕ್ಕೆ ಅಮ್ಮ ನನ್ನ ಮಗ ರೀ… ದೇವ್ರು ಇದಾನೆ ಎಂದು ಜೋರಾಗಿ ಅತ್ತಳು…

ಮಗ ಸೊಸೆ ವಿಶ್ ಮಾಡಿ ಆರ್ಶಿರ್ವಾದ ಪಡೆದುಕೊಂಡರು.

ಅವತ್ತು ಎಲ್ಲ ಸೇರಿ ದೇವಸ್ಥಾಕ್ಕೆ ಹೊರಟರು… ಮುದುಕ ತನ್ನ ಹೆಂಡತಿಗೆ ‘ಹರೇ ಇದೆ ದೇವಸ್ಥಾನ ದಿಂದ ಪುರೋಹಿತರು ತಂದದ್ದು ನನ್ನ ಆಮೇಲೆ ಮೊನ್ನೆ ಬಂದಾಗ ಖಾಲಿ ಜಾಗ ಇಟ್ಟು ಆದರೆ ಈಗ? ಹೇಗೆ ಎಂದ.

ಆ ಐದು ಜನ ಹುಡುಗರು ಇಲ್ಲ .. ಬರಿ ನಾಲ್ಕು ಜನ ಮಾತ್ರ ಇದಾರೆ. ಮುದುಕನಿಗೆ ತಲೆ ಕೆಟ್ಟಿತು.

ಹಾಗೆ ದೇವಸ್ಥಾನದ ಒಳಗೆ ನೆಡೆದ . ಮೊನ್ನೆ ಮನೆಗೆ ಬಂದು ಹೋಮ ಪೂಜೆ ಮಾಡಿದ್ದ ಮುಖ್ಯ ಪುರೋಹಿತರು ನೋಡಿ ನಗುತ್ತಿದ್ದಾರೆ ದೇವರ ಗರ್ಭ ಗುಡಿಯಿಂದ ಪೂಜೆ ಮಾಡುತ್ತಾ.

ಮುದುಕನ ಹತ್ತಿರ ಬಂದು ಎಲ್ಲ ಸರಿ ಹೋಯ್ತಾ ಎಂದು ಕೇಳಿದರು ಪುರೋಹಿತರು ?
ಹ ಗುರುಗಳೇ ಎಲ್ಲ ಸರಿಹೋಯ್ತು ಎಂದ.

ಮೊನ್ನೆ ಬಂದಾಗ ದೇವಸ್ಥಾನ ಇರ್ಲಿಲ್ಲ ಗುರುಗಳೇ ಎಂದ…
ಅದಕ್ಕೆ ಗುರುಗಳು ನಾಸ್ತಿಕ ನಾಗಿ ಕಣ್ಣಲ್ಲಿ ದೇವಸ್ಥಾನ ಕೂಡ ಖಾಲಿ
ಆಸ್ತಿಕ ಕಣ್ಣಲ್ಲಿ ಖಾಲಿ ಕೂಡ ದೇವಸ್ಥಾನ ಎಂದರು …

ಮಡದಿ ತನ್ನ ಗಂಡನ ಪರಿಸ್ಥಿತಿ ಕಂಡು ನಕ್ಕಳು…

ಮುದುಕ ಆಚೆ ಬರುವಾಗ ಹುಡುಗರು ಗೋಲಿಗಳ ಆಟದಲ್ಲಿ ಬಾರಿ ಸದ್ದು ಮಾಡುತ್ತಿದ್ದರು….
ಮುದುಕ : ಯಾರ್ರೋ ನೀವೆಲ್ಲ ಎಂದ.
ಎಲ್ಲಾ ಸರಿಹೋಯ್ತ ಅಲ್ವಾ ಸಾರ್… ದೇವಸ್ಥಾನದ ಆಗಾಗ ಕಡೆ ಬರ್ತಾ ಇರಿ. ದೇವರು ಇದಾನೆ ಅಂತ ಅಲ್ಲ ದೈವತ್ವ ಇದೆ ಅಂತ.

-ದಯಾನಂದ ರಂಗಧಾಮಪ್ಪ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x